Friday 21 October 2011

ಶುಭಾಶಯ


ದೀಪಾವಳಿ ದೀಪಗಳ ಹಬ್ಬ . ನಮ್ಮ ಮಲೆನಾಡಿನಲ್ಲಿ ಅಳಿಯನ ಹಬ್ಬ ಎಂದೇ ಕರೆಯುತ್ತಾರೆ . ನಮ್ಮಲ್ಲಿ ಒಂದು ಸಂಪ್ರದಾಯವಿದೆ.ಹೊಸದಾಗಿ ಮದುವೆಯಾದ ಮಗಳು ಅಳಿಯ ಅಂದು ತವರುಮನೆಗೆ ಹೋಗಿ ಹಬ್ಬ ಆಚರಿಸಬೇಕು.ಅದು ಮದುಮಕ್ಕಳಿಗೆ ಹೊಸಹಬ್ಬ .ಮಗಳು ಅಳಿಯ ಬರುತ್ತಾರೆ ಎಂದು ತಂದೆತಾಯಿಗೆ ಎಲ್ಲಿಲ್ಲದ ಹರ್ಷ.ಮನೆಯಬಾಗಿಲು ಗಳಿಗೆ ಹಸಿರು ತೋರಣ ಕಟ್ಟಿ ಸಂತೋಷದಿಂದ ಪ್ರಾರಂಭಿಸುತ್ತಾರೆ.ಮನೆಯ ಮುಂದೆ ರಂಗೋಲಿ ಇಟ್ಟು ಶುಭಾಶಯ ಕೋರುತ್ತಾರೆ ಆ ದಿನ ಬೆಳಿಗ್ಗೆ ಮಗಳು ಅಳಿಯನಿಗೆ ಎಣ್ಣೆ ಅರಿಶಿನ ಹಾಕಿ ಅಭ್ಯಂಜನ ಮಾಡಿಸುತ್ತಾರೆ.ಹಬ್ಬಕ್ಕೆ ಉಡುಗೊರೆಯಾಗಿ ಹೊಸ ವಸ್ತ್ರವನ್ನು ನೀಡಿ ಸಂಭ್ರಮಿಸುತ್ತಾರೆ.

ದೇವರ ಕೋಣೆಯಲ್ಲಿ ದೀಪಗಳನ್ನು ಹಚ್ಚುವುದರಿಂದ ಪ್ರಾರಂಭಿಸಿ ಮನೆಯ ಹೊರಗಿನ ಮೆಟ್ಟಿಲು ಗಳವರೆಗೆ ದೀಪಗಳ ಸಾಲು ಅಲಂಕಾರಮಾಡಲಾಗುತ್ತದೆ.ಅಳಿಯ ಬಂದಿರುವ ಸಂತಸದಲ್ಲಿ ಹೋಳಿಗೆ ,ಕಡುಬು,ಕೋಸಂಬರಿ,ಚಿತ್ರಾನ್ನ,ಪಾಯಸ,ಚಕ್ಕುಲಿ ಹೀಗೆ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ.ಗೋವುಗಳಿಗೆ ನವ ಮದುಮಕ್ಕಳಿಂದ ಆರತಿ ಎತ್ತಿಸುತ್ತಾರೆ.ಸಂಜೆಯಾಯಿತೆಂದರೆ ಸಾಕು ಬಾಸಿಂಗ ಕಟ್ಟಿಕೊಂಡ ಜೋಡಿ ಎತ್ತುಗಳನ್ನು ಓಡಿಸಿಕೊಂಡು ಎಲ್ಲರ ಮನೆಗೆ ಹೋಗುವುದು ಅಲ್ಲಿ ಅವುಗಳಿಗೆ ನೀಡಲಾದ ತಿಂಡಿ ತೆಗೆದುಕೊಳ್ಳುವುದು , ಅದಾದ ನಂತರ ದೀಪ ಹಚ್ಚಿಕೊಂಡು ಎಲ್ಲರ ಊರಿನವರೆಲ್ಲ ಒಟ್ಟು ಸೇರಿ ಊರಲ್ಲಿರುವ ಬೂತಪ್ಪ ಚೌಡಪ್ಪ ಗಳಿಗೆ ದೀಪ ಇಟ್ಟು ಬರುವುದು ಇದೆಲ್ಲ ಸುಂದರವಾಗಿರುತ್ತದೆ.ಇನ್ನು ಚಿಕ್ಕಮಕ್ಕಳಿದ್ದರಂತು ಹೊಸಬಟ್ಟೆ ಧರಿಸಿ ಎಲ್ಲರಿಗೂ ತೋರಿಸುವುದೆಂದರೆ ಎಲ್ಲಿಲ್ಲದ ಹಿಗ್ಗು . ಜೊತೆಗೆ ಪಟಾಕಿಗಳ ಭರಾಟೆ.

ರಾತ್ರಿ ಪಟಾಕಿಗಳ ಸುರಿಮಳೆ ಆ ಸಮಯಕ್ಕೆ ಸರಿಯಾಗಿ ಎಲ್ಲರ ಮನೆಯವರೂ ಹೊರಬಂದು ನೋಡುವ ಸಂಭ್ರಮವೇ ಚಂದ .ಆ ದಿನ ನೆಂಟರಿಷ್ಟರಿಂದ ಚಿಕ್ಕ ಮಕ್ಕಳ ಗದ್ದಲ ಗಳಿಂದ ತುಂಬಿರುವ ಎಲ್ಲರ ಮನೆಗಳಲ್ಲಿ ಸಂಭ್ರಮವೋ ಸಂಭ್ರಮ.ಹೀಗೆ ದೀಪಾವಳಿ ಹಬ್ಬವೆಂದರೆ ಹೊಸಹರುಷ , ಸಂತಸ, ಸಂಭ್ರಮದಿಂದ ಕೂಡಿರುತ್ತದೆ.
ಇನ್ನೇನು ದೀಪಾವಳಿ ಹತ್ತಿರ ಬರುತ್ತಿದೆ.ದೂರದಲ್ಲಿರುವುದರಿಂದ ಮೊದಲ ಹೊಸಹಬ್ಬಕ್ಕೆ ತವರೂರಿಗೆ ಹೋಗಲಾಗುತ್ತಿಲ್ಲ.ನನ್ನ ತವರೂರಿಗೆ ಬಂಧುಗಳಿಗೆ,ಸ್ನೇಹಿತರಿಗೆ ಶುಭಾಶಯಗಳು .ದೀಪಾವಳಿ ಎಲ್ಲರ ಬಾಳಲ್ಲಿ ಬೆಳಕನ್ನು ತರಲಿ.
ನನ್ನ ಈ ಲೇಖನ ಈ ಕನಸು ವಿನಲ್ಲಿ ಪ್ರಕಟವಾಗಿದೆ http://www.ekanasu.com/2011/10/blog-post_25.html

No comments:

Post a Comment