Thursday 17 July 2014

ಮಿಲೇನಿಯಮ್ ಫೂಟ್ ಬ್ರಿಜ್

Published in Vijayanext on 13th June 2014

ಲಂಡನ್ ಎಂದ ತಕ್ಷಣ ನೆನಪಿಗೆ ಬರುವುದು ಟವರ್ ಬ್ರಿಜ್.ಲಂಡನ್ ನಲ್ಲಿ  ಪ್ರಸಿದ್ಧಿ ಪಡೆದ ಸಾಕಷ್ಟು ಸುಂದರ ಸೇತುವೆಗಳಿವೆ.ಲಂಡನ್ ಗೆ ಬಂದವರು ಈ ಬ್ರಿಜ್ ಗಳನ್ನು ನೋಡದೇ ಹೋಗಲಾಗುವುದೇ ಇಲ್ಲ.ಅದರಲ್ಲೂ ಮುಖ್ಯವಾಗಿ ಲಂಡನ್ ನ ಇತರ ಆಕರ್ಷಕ ಪ್ರಕಾಸಿ ಸ್ಥಳಗಳು ಈ ಸೇತುವೆಗಳ ಆಸುಪಾಸಿನಲ್ಲೇ ಬರುತ್ತವೆ.ಸೇತುವೆಗಳ ಅಕ್ಕ ಪಕ್ಕದಲ್ಲಿರುವ ಲಂಡನ್ ಐ,ಸೀ ಲೈಫ್,ಥೇಮ್ಸ್ ನದಿ ದಂಡೆ , ಬಿಗ್ ಬೆನ್ ,ಬಕ್ಕಿಂಗ್ ಹ್ಯಾಮ್ ಅರಮನೆ ಇವುಗಳನ್ನೆಲ್ಲಾ ನೋಡಿಯಾದ ಮೇಲೆ ಲಂಡನ್ ಸೇತುವೆಗಳನ್ನು ರಾತ್ರಿ ಹೊತ್ತಿನಲ್ಲಿ ನೋಡಬೇಕು.ಬೆಳಗಿನ ಸೇತುವೆಗೂ ರಾತ್ರಿ ದೀಪಗಳಿಂದ ಅಲಂಕೃತವಾದ ಸೇತುವೆಗಳಿಗೂ ಸಾಕಷ್ಟು ವ್ಯತ್ಯಾಸಗಳಿವೆ.ಇಲ್ಲಿ ಟವರ್ ಬ್ರಿಜ್ , ಲಂಡನ್ ಬ್ರಿಜ್ , ವಾಟರ್ ಲೂ ಬ್ರಿಜ್ ,ಮಿಲೇನಿಯಂ ಬ್ರಿಜ್ ಹೀಗೆ ಸಾಲಾಗಿ ಆಕರ್ಷಕ ಮತ್ತು ವಿಶೇಷವಾಗಿ ಕಟ್ಟಲಾದ ಸೇತುವೆಗಳಿವೆ. 
ಲಂಡನ್ ಪ್ರವಾಸಕ್ಕೆಂದು ಭಾರತದಿಂದ ಬರುವವರು ಈ ಸೇತುವೆಗಳನ್ನು ರಾತ್ರಿ ಹೊತ್ತು ನೋಡಲು ಮರೆಯದಿರಿ.ಲಂಡನ್ ನ ಟವರ್ ಬ್ರಿಜ್ ಬಗ್ಗೆ ಪ್ರತಿಯೊಬ್ಬರಿಗೂ ಗೊತ್ತೇ ಇದೆ.ಬಹುಶಃ ಲಂಡನ್ ನ ಟವರ್ ಬ್ರಿಜ್ ನೋಡಬೇಕು ಎಂಬುದು ಲಂಡನ್ ಗೆ ಬರಬೇಕೆಂದುಕೊಂಡವರ ಮೊದಲ ಪಟ್ಟಿಯಲ್ಲಿ ಬರುವ ಹೆಸರು.ಆದರೆ ನಾನು ಈಗ ಹೇಳ ಹೊರಟಿರುವುದು ಇದರಿಂದ ಒಂದು ಮೂರು ಯಾರ್ಡ್ ಆಷ್ಟು ಅಂತರದಲ್ಲಿರುವ ಮಿಲೇನಿಯಮ್ ಬ್ರಿಜ್ ಬಗ್ಗೆ. 

ಮಿಲೇನಿಯಂ ಬ್ರಿಜ್ :- ಮಿಲೇನಿಯಮ್ ಫೂಟ್ ಬ್ರಿಜ್ ಎಂದು ಇದಕ್ಕಿರುವ ನಿಜವಾದ ಹೆಸರು.ಅಂದರೆ ನಡೆಯಲು ಇರುವ ಸೇತುವೆ (ಪಾದಸಂಚಾರ ಸೇತುವೆ).ಇದನ್ನು ಬಹುಶಃ ಪ್ರೇಮಿಗಳ ಸೇತುವೆ ಎಂದುಬಿಡಬಹುದೇನೋ. ಹೆಚ್ಚಾಗಿ ಪ್ರೇಮಿಗಳು ಕೈ ಕೈ ಹಿಡಿದು ನಡೆಯಲು ಇರುವ ಸುಂದರ ತೂಗು ಸೇತುವೆ ಈ ಮಿಲೇನಿಯಮ್ ಪಾದಚಾರಿ ಸೇತುವೆ. ಇದನ್ನು ಥೇಮ್ಸ್ ನದಿಯನ್ನು ಕಾಲ್ನಡಿಗೆಯಲ್ಲಿ ದಾಟಲು ೧೯೯೬ ರಲ್ಲಿ ಕಟ್ಟಲು ಪ್ರಾರಂಭಿಸಿದರು. ೨೦೦೦ ದಲ್ಲಿ ಇದು ಅಧಿಕೃತವಾಗಿ ಉದ್ಘಾಟನೆಯಾಯಿತು.ಆದರೆ ಆ ಸಮಯದಲ್ಲಿ ಇದು ಪಾದಾಚಾರಿಗಳು ನಡೆದಾಗ ನಡುಗಲು ಪ್ರಾರಂಭಿಸಿದ್ದರಿಂದ ನಡುಗುವ ಸೇತುವೆ ಎಂಬ ಹೆಸರನ್ನು ಪಡೆದುಕೊಂಡಿತ್ತು . ಇದನ್ನು ಸರಿಮಾಡಲು ಮತ್ತೆರಡು ವರ್ಷಗಳನ್ನು ತೆಗೆದುಕೊಂಡರು ಎಂದು ಹೇಳಲಾಗುತ್ತದೆ. ಉಕ್ಕಿನಿಂದ ಕಟ್ಟಿದ ಈ ತೂಗು ಸೇತುವೆ ನೋಡಲು ಅದ್ಬುತವಾಗಿದ್ದು , ರಾತ್ರಿ ಸಮಯದಲ್ಲಿ ದೀಪದಿಂದ ಕಂಗೊಳಿಸುತ್ತಿರುತ್ತದೆ.ಎದುರಿನಲ್ಲಿರುವ ಗುಮ್ಮಟಾಕಾರದ ಸೆಂಟ್ ಪೌಲ್ ಕೆಥೆದ್ರಾಲ್ ಇದರ ಆಕರ್ಷಣೆಯನ್ನು ಇನ್ನಷ್ಟು ಹೆಚ್ಚಿಸುತ್ತದೆ. 

ಥೇಮ್ಸ್ ನದಿಯ ಮೇಲೆ ಈ ಸೇತುವೆಯನ್ನು ಕಟ್ಟಿರುವುದರಿಂದ ಸುತ್ತಲೂ ದೀಪದಿಂದ ಕಂಗೊಳಿಸುವ ಅದ್ಬುತವಾದ ಲಂಡನ್ ಅನ್ನು ರಾತ್ರಿ ಸಮಯದಲ್ಲಿ ನೋಡಬಹುದು. ಹೊಸದಾಗಿ ಕಟ್ಟಿರುವ ಎತ್ತರದ ಶಾರ್ಡ್ ಕಟ್ಟಡ ,ಥೇಮ್ಸ್ ನದಿಯಲ್ಲಿ ಓಡಾಡುವ ಕ್ರೂಸ್ ನ ಬೆಳಕು ಇವುಗಳು ಮಿಲೇನಿಯಂ ತೂಗು ಸೇತುವೆಯಲ್ಲಿ ನಿಂತು ನೋಡಿದಾಗ ಇನ್ನಷ್ಟು ಆಕರ್ಷಕವಾಗಿ ಕಾಣುತ್ತವೆ. ಈ ತೂಗು ಸೇತುವೆ ನಾಲ್ಕು ಮೀಟರ್ ಅಗಲವಿದ್ದು , ೧೭೦ ಮೀಟರ್ ಉದ್ದವಾಗಿ ಉಕ್ಕಿನಿಂದ ಕಟ್ಟಿದ ಬ್ರಿಜ್ ಆಗಿದೆ. ಆಧುನಿಕ ವಿನ್ಯಾಸವನ್ನು ಹೊಂದಿರುವ ಈ ಸೇತುವೆ ಇಡೀ ಲಂಡನ್ ನ ಸೊಬಗನ್ನು ಹೆಚ್ಚುಸುತ್ತದೆ ಎಂದರೆ ಅತಿಶಯೋಕ್ತಿಯಾಗಲಿಕ್ಕಿಲ್ಲ. ಈ ಸೇತುವೆಯಲ್ಲಿ ನಿಂತು ಸುತ್ತಲಿನ ಜಗಮಗಿಸುವ ದೃಶ್ಯವನ್ನು ನೋಡುತ್ತಿದ್ದರೆ ಸಮಯ ಕಳೆಯುತ್ತಿರುವುದೇ ಅರಿವಾಗುವುದಿಲ್ಲ. ಲಂಡನ್ ಪ್ರವಾಸಕ್ಕೆ ಬಂದವರು ಕೇವಲ ಟವರ್ ಬ್ರಿಜ್ ಮಾತ್ರ ನೋಡಿ ಹೋಗಬೇಡಿ. ಈ ಮಿಲೇನಿಯಂ ಬ್ರಿಜ್ ನೋಡಿ ಕಣ್ ತುಂಬಿಕೊಳ್ಳಲು ಮರೆಯದಿರಿ. 

ಅರ್ಪಿತಾ ಹರ್ಷ 
ಲಂಡನ್