Thursday 21 March 2013

ಮುಹೂರ್ತ !

ಬೆಳಿಗ್ಗೆ ಮುಂಚೆ ಹತ್ತು ಗಂಟೆಗೆಲ್ಲ ಮುಹೂರ್ತ ತಾವು ತಪ್ಪದೆ ಬರಬೇಕು . ಇರುವ ಒಬ್ಬಳೇ ಮಗಳನ್ನು ಶ್ರೀಮಂತರ ಮನೆಗೆ ಕೊಡ್ತಿದ್ದೇನೆ . ಜೊತೆಗೆ ಹುಡುಗ ಬಹಳ ಒಳ್ಳೆಯವ ನನ್ನ ಮಗಳಿಗೆ ಅಂತಾನೆ ಕಳಿಸಿದ್ದಾನೆ ದೇವರು. ಸಾಫ್ಟ್ವೇರ್ ಇಂಜಿನಿಯರ್ ಒಳ್ಳೆ ಸಂಬಳ . ನಂದು ಬಡ ಕುಟುಂಬ ಆದರು ನನ್  ಮಗಳು ಅದೃಷ್ಟ ಮಾಡಿಕೊಂಡಿದಾಳೆ ನೋಡಿ ಎಂದು ನಗುತ್ತ ಹೇಳುತ್ತಿದ್ದ ಶಾಮ ಭಟ್ಟರ ಮಗಳ ಮಾಡುವೆ ಪತ್ರಿಕೆ ತೆಗೆದುಕೊಂಡ ಕಮಲಮ್ಮ ಒಮ್ಮೆ ನೊಂದು ಕೊಂದರು . ಹುಡುಗ ಅದೇ ಪ್ರದೀಪ . ಒಳ್ಳೆ ಹುಡುಗ .ಹುಡುಗಿ ಅದೃಷ್ಟ ಮಾಡಿರಬೇಕು . ಅಷ್ಟು ಹೇಳಿ ಹೊರಟುಹೋದರು ಶಾಮ ಭಟ್ಟರು . ಊಟಕ್ಕೆ ಇರಿ ಎಂದು ಹೇಳುವಷ್ಟು ಆಸಕ್ತಿ ಇರಲಿಲ್ಲ ಕಮಲಮ್ಮನಿಗೆ. ಆ ಕರಾಳ ನೆನಪಿನ ದಿನಗಳಿಗೆ ಮೊರೆಹೊಕ್ಕರು.
                                        ---------------------------------
ಎಷ್ಟು ಚಂದವಿತ್ತು ಆ ದಿನಗಳು . ಮಗಳು ಪ್ರತಿಮಾ ಮನೆಲಿದ್ದ ದಿನಗಳವು .ಅಪ್ಪ ಅಮ್ಮನ ಮುದ್ದಿನ ಮಗಳು ಮನೆಯಲ್ಲಿ ಯಾವುದಕ್ಕೂ ಕೊರತೆ ಇರಲಿಲ್ಲ. ಪ್ರೀತಿಗೂ ಕೂಡ. ಅಪ್ಪ ನ ಪ್ರೀತಿ , ಅಣ್ಣ ನ ಕೀಟಲೆ ಚೇಷ್ಟೆ ಎಲ್ಲದಕ್ಕೂ ಕೇಳಿಕೊಂಡು ಬಂದಿರಬೇಕು ಎಂದು ನೋಡಿದವರು ಕಣ್ಣು ಹಾಕುವರೆನೋ ಎಂಬಷ್ಟು ನಗು ಆ ಮನೆಯಲ್ಲಿತ್ತು .

ಮೊದಮೊದಲು ಅಪ್ಪ ಕಾಲೇಜಿಗೆ ಹೋಗುತ್ತಿದ್ದ ಮಗಳಿಗೆ ವಿಪರೀತ ಸಲುಗೆ ಕೊಟ್ಟಿದ್ದ. ಅಂದಿನ ಕಾಲದಲ್ಲಿ ಯಾರ ಹತ್ತಿರವೂ ಮೊಬೈಲ್ ಇರಲಿಲ್ಲ .ಇಡೀ  ಕಾಲೇಜಿನಲ್ಲಿ ಇವಳದೊಂದೇ ಮೊಬೈಲ್ ಎಲ್ಲರ ಕಣ್ಣು ಈಕೆಯ ಮೇಲೆಯೇ. ನೋಡಲು ಬೆಳ್ಳಗೆ ತೆಳ್ಳಗೆ ತಿದ್ದಿ ತೀಡಿದಂತಿದ್ದ ಪ್ರತಿಮಾ ಪಡ್ಡೆ ಹುಡುಗರ ಕನಸಿನಲ್ಲಿ ಹೋಗಲು ಕಾಲೇಜು ಪ್ರಾರಂಭವಾಗಿ ಬಹಳದಿನ ತೆಗೆದುಕೊಳ್ಳಲಿಲ್ಲ. ಸ್ವಲ್ಪ ಚಲ್ಲು ಚಲ್ಲಾಗಿ ಆಡುತ್ತಿದ್ದ ಪ್ರತಿಮಾ ಳಿಗೂ ಇದೊಂದು ಹಬ್ಬದಂತೆ ಅನಿಸುತ್ತಿತ್ತು .  ಕಾಲೇಜಿನ ಹೆಸರಿನಲ್ಲಿ ಪ್ರತಿ ದಿನ ಹೀಗೇ ಕಳೆದುಹೋಗುತ್ತಿತ್ತು.ಓದುವುದರ ಬಗ್ಗೆ ಮೊದಲಿನಿಂದಲೂ ಸ್ವಲ್ಪ ಹಿಂದಿದ್ದ ಪ್ರತಿಮಾ ಳಿಗೆ ಈಗ ಓದಿನ ಕಡೆ ಸ್ವಲ್ಪವೂ  ಗಮನವಿರಲಿಲ್ಲ.

ದಿನನಿತ್ಯ ಕಾಲೇಜಿಗೆ ಬಂದು ಹೋಗುವುದು ತಡವಾಗುತ್ತಿತ್ತು. ಬೆಳಗ್ಗೆ ಮನೆಯಿಂದ ೭ ಗಂಟೆಗೆಲ್ಲ ಹೊರಟರೆ ಸಂಜೆ ಮನೆ ಸೇರುತ್ತಿದ್ದುದು ಸಂಜೆ ೮ ಗಂಟೆಗೆ . ಅಪ್ಪ ತೋಟದ ಕೆಲಸ , ಗೆಳೆಯರು , ನೆಂಟರ ಮನೆ ಹೀಗೆ ಬ್ಯುಸಿ ಆಗಿ ಹೋಗುತ್ತಿದ್ದುದರಿಂದ ಅಷ್ಟೊಂದು ತಲೆಗೆ ಹಚ್ಚಿಕೊಳ್ಳಲಿಲ್ಲ. ಆದರೆ ಅಮ್ಮನಿಗೆ ಹಾಗಾದೀತೇ? ಎಷ್ಟಾದರೂ ಮಗಳು , ಹೆಣ್ಣು ಮಕ್ಕಳು ಸಂಜೆ ೬ ರ ಒಳಗೆ ಮನೆ ಸೇರಬೇಕು ಎಂದು ಮೊದಲಿನಿಂದಲೂ ಕೇಳಿಕೊಂಡು ,ಪಾಲಿಸಿಕೊಂಡು , ಹೇಳಿಕೊಂಡು ಬಂದವರು .

ಒಂದು ದಿನ ಕಮಲಮ್ಮ ,ಗಂಡ ಸುಬ್ರಾಯರು ಮನೆಗೆ ಬರುವುದನ್ನೇ ಕಾಯುತ್ತ ಕುಳಿತಿದ್ದರು . ಮಗಳು ಮನೆಗೆ ಬರುವುದಕ್ಕೂ ಗಂಡ ಮನೆಗೆ ಬರುವುದಕ್ಕೂ ಸರಿ ಹೋಯಿತು . ಹೇಳಬೇಕೆಂದಿರುವ ಮಾತು ಮನಸಲ್ಲೇ ಬಚ್ಚಿಟ್ಟು ಕೊಳ್ಳಬೇಕಾಯಿತು . ಇಷ್ಟಕ್ಕೂ ತನ್ನ ಸ್ವಂತ ಮಗಳನ್ನು ಅನುಮಾನಿಸಲಾದೀತೇ? ಆದರೂ ಮುನ್ನೆಚ್ಚರಿಕೆ ಒಳ್ಳೆಯದು ಎಂಬುದು ಮನಸಿನ ಒಂದು ಮೂಲೆಯಲ್ಲಿ ಹಾಡು ಹೋಯಿತು .

ಇತ್ತ ಸುಬ್ರಾಯರು ಊಟಕ್ಕೆ ಕುಳಿತಾಗ ಮಗಳಿಗೆ ಕೇಳಿದರು ' ಏನು ಹೇಗೆ ನಡೀತಿದೆ ನಿನ್ನ ಕಾಲೇಜು ? ಪರೀಕ್ಷೆ ಹತ್ತಿರಬೇರೆ ಬಂತು ಇನ್ನೇನು ಸೆಕೆಂಡ್ ಪಿಯುಸಿ ಗೆ ಹೋಗಿಬಿಡುತ್ತಿ.ಕಾಲೇಜು ಸ್ವಲ್ಪ ದೂರ ನಿಂಗೆ ಹತ್ತಿರದ್ದು ಬೇಕಾದರೆ ಹೇಳು ಇಲ್ಲೇ ಸೀಟು  ಕೊಡಿಸುವ ವ್ಯವಸ್ಥೆ ಮಾಡಿಸುವ'ಎಂದರು.

' ಹೌದು ಅಪ್ಪ ಕಾಲೇಜು ತುಂಬಾ ಚೆಂದ , ನನಗೆ ಈ ಕಾಲೇಜು ಬಿಟ್ಟು ಬೇರೆಡೆಗೆ ಹೋಗೋಕೆ ಇಷ್ಟ ಇಲ್ಲ ದೂರವಾದರೂ  ನಾ ಅಲ್ಲೇ ಹೋಗೋದು 'ಎಂದಳು . ಸರಿ ಹಾಗಿದ್ದರೆ ಎಂದ ಸುಬ್ರಾಯರಿಗೆ ಎಲ್ಲಿಲ್ಲದ ಸಂತೋಷ ಮಗಳಿಗೆ ಓದಿನಲ್ಲಿ ಏನು ಆಸಕ್ತಿ ಎಂದು . ಆದರೆ ಕಮಲಮ್ಮ ಮಗಳ ಮುಖದಲ್ಲಿ ವ್ಯಕ್ತವಾದ ಅದ್ಯಾವುದೋ ಅವ್ಯಕ್ತ ಭಾವವೊಂದಿದೆ ಎಂದರಿತರು . ಬೆಳಿಗ್ಗೆ ಹೋದವಳು ಸಂಜೆ ಬರುತ್ತಾಳೆ . ಮೊನ್ನೆ ಪಕ್ಕದೂರಿನ ಪದ್ಮ ಹೇಳಿದಳು ತನ್ನ ಮಗಳು ಅದೇ ಕಾಲೇಜು ೫ ಗಂಟೆಗೆಲ್ಲ ಮನೆಯಲ್ಲಿರ್ತಾಳೆ ನಿನ್ ಮಗಳೇನು ಸಂಗೀತ ಕಲಿತಾಳ?  ಇಲ್ಲ ಅವಳಿಗೆ ಕ್ಲಾಸ್ ಮುಗಿಯೊದೆ ಅಷ್ಟೊತ್ತಿಗಂತೆ ಆಮೇಲೆ ಬಸ್ ಸಿಗಲ್ವಂತೆ ಎಂದ ಕಮಲಮ್ಮಳಿಗೆ  ಪದ್ಮ ಅದೆಂತ ಇವಳಿಗೊಂದು ಸ್ಪೆಷಲ್ ಕ್ಲಾಸ್ ತಗೊಬಿಡ್ತಾರಂತ? ಕೇಳಿದಾಗ ಕಮಲಮ್ಮಳಲ್ಲಿ ತಿರುಗಿ ಉತ್ತರವಿರಲಿಲ್ಲ. ಯೋಚನೆಗೆ ಬಿದ್ದಳು . ಹೌದಲ್ಲವಾ ಆದರೂ  ಎಂದು ಏನೂ  ಮುಚ್ಚಿಡದ ಮಗಳ ಬಗ್ಗೆ ಅನುಮಾನಿಸುವುದು ಸರಿಯಲ್ಲ .

 ಹೀಗೆ ದಿನ ಕಳೆಯುತ್ತಿತ್ತು . ಯಾವುದಕ್ಕೂ ಇನ್ನು ತಡ ಮಾಡುವುದಲ್ಲ ಮಗಳು ೨ ಪಿಯುಸಿ ಮುಗಿತಿದ್ದಂತೆ ಒಂದು ಒಳ್ಳೆ ಹುಡುಗನನ್ನ ನೋಡಿ ಮದುವೆ ಮಾಡಿಬಿಟ್ಟರೆ ಒಂದು ನಿಶ್ಚಿಂತೆ. ಹಾಗೆ ಗಂಡನಲ್ಲಿ ಹೇಳಿದ್ದಕ್ಕೆ ' ಏನಂತ ತಿಳಿದಿ ನೀನು ನನ್ನ ಮಗಳು ಇನ್ನು ಕೂಸು  ಆಕೆಗೆ ಮದುವೇನ ? ಇನ್ನು ನಾಲ್ಕು ವರ್ಷ ಅದರ ಬಗ್ಗೆ ಮಾತಾಡ ಕೂಡದು ' ಎಂದ ಗಂಡನನ್ನು ಕುಳ್ಳಿರಿಸಿ ಇವತ್ತಲ್ಲ ನಾಳೆ ಮದುವೆ ಮಾಡಲೇ ಬೇಕು ಈಗ ಕಾಲ ಬದಲಾಗಿದೆ . ದೊಡ್ಡವರ ಮನೆ ಹುಡುಗಿ ಅಂದ್ರೆ ಜನ ದುಂಬಾಲು ಬೀಳ್ತಾರೆ. ಕಾಲೇಜಿಂದ ಬೇರೆ ಬೇಗ ಬರ್ತಿಲ್ಲ ಅವಳು ನಾಳೆ ದಿನ ಏನಾದ್ರೂ ಆದ್ರೆ ನಮ್ಮ ಮಾನ ಮರ್ಯಾದೆ ಏನಾಗಬೇಡ? ನೀವೇ ಹೇಳಿ .
ಯೋಚನೆಗೆ ಬಿದ್ದರು ಸುಬ್ರಾಯರು . ಕಮಲಾ ಯಾವತ್ತು ಹೀಗಂದವಳಲ್ಲ ಅವಳ ಮಾತಲ್ಲಿ ಹುರುಳಿ ರುತ್ತೆ ಬೆಂಕಿ ಹೋಗೆ ಆದರೆ ಹೀಗೆ ಮಾತಾಡುವವಳಲ್ಲ .

 ಹೀಗೆ ಯೋಚಿಸಿದವರಿಗೆ ಮೊನ್ನೆ ತಾನೇ ಬಸ್ ನಲ್ಲಿ ಸಿಕ್ಕಿ ಹೇಳಿದ ಗೆಳೆಯನ ನೆನಪಾಯಿತು . ಒಂದು ಫೋನ್ ಮಾಡಿಬಿಟ್ಟರು .ಯಾವತ್ತಿದ್ರೂ ಮದುವೆ ಮಾಡಿ ಕೊಡೋದೇ ನಿನ್ನ ಮಗನಿಗೆ ಕೊಟ್ಟರೆ ನೀನೆ ಮುಂದೆ ಓದುಸ್ತಿ ಅಂತ ಬೇರೆ ಹೇಳಿದ್ದಿ ಹಾಗಾಗಿ ಈ ಯೋಚನೆ ಬಂತು ಯಾವುದಕ್ಕೂ ಮನೆಯಲ್ಲಿ ಒಮ್ಮೆ ವಿಚಾರಿಸಿ ಮುಂದುವರೆಯುವ. ಅಷ್ಟೇ ಉಳಿದಿದ್ದೆಲ್ಲ ನೋಡ ನೋಡುತ್ತಿದ್ದಂತೆ ಮುಂದುವರೆದು ಆಯಿತು . ಎಲ್ಲಿ ನೋಡಿದರು ಪ್ರತಿಮಾಳ  ಮದುವೆಯಂತೆ ಅನ್ನುವುದೊಂದು ದೊಡ್ಡ ಸುದ್ದಿ . ಮಗಳಿಗಾಗಿ ಬಂಗಾರದ ಹೊರೆಯನ್ನೇ ಮಾಡಿಸಿದರು ಸುಬ್ರಾಯರು. ಪ್ರತಿಮಾ ಎಲ್ಲವೂ  ಮಾಮುಲಿನಂತೆಯೇ ಇದೆ ಎಂಬಂತಿದ್ದಳು . ಮದುವೆಯ ದಿನವೂ ನಿಶ್ಚಯಿಸಿ ಆಯಿತು. ಇನ್ನು ೩ ತಿಂಗಳಿದೆ ಅಷ್ಟರಲ್ಲಿ  ಕಾಲೇಜು ಕೂಡ ಮುಗಿಯುತ್ತದೆ .ಮುಂದಿನದೆಲ್ಲವು ಅವಳಿಷ್ಟದಂತೆ . ಇಶತವಿದ್ದರೆ ಓದಬಹುದು ಇಲ್ಲದಿದ್ದರೆ ಸಂಸಾರವಿದೆ.

ಒಂದು ದಿನ ಮದ್ಯಾನ್ಹ ಮನೆಗೆ ಬಂದ  ಮಗ ಅಮ್ಮ ಏನಾಗೋಯ್ತು ಎಂದು ದುಃಖ ತಪ್ತ ನಾಗಿ ಕುಸಿದು ಬಿದ್ದ . ಅಯ್ಯೋ ಏನಾಯ್ತೋ ಎಂದು ನೀರು ಹಾಕಿ ಏಳಿಸಿದವರಿಗೆ ಆಘಾತ ಕಾದಿತ್ತು . ಮಗಳು ಮನೆ ಬಿಟ್ಟು ಓಡಿ  ಹೋಗಿದ್ದಾಳೆ .  ಕಾಲೆಜಿನದೆ ಹುಡುಗ . ತಂದೆ ತಾಯಿ ಕೂಲಿ ಕೆಲಸ ಮಾಡಿ ಮಗನನ್ನು ಓದಿಸುತ್ತಿದ್ದರೆ. ವಿಷಯ ತಿಳಿದ ಸುಬ್ರಾಯರು ಮನುಷ್ಯರಾಗಿರಲಿಲ್ಲ. ಅವಳು ಸಿಗಲಿ ಕೊಚ್ಚಿ ಹಾಕುತ್ತೇನೆ ಎಂದರು ಅಸಹಾಯಕರಾಗಿ ಅತ್ತರು.ಗೋಗರೆದರು.

ಊರಿನವರು ನೆಂಟರಿಷ್ಟರು ಎಲ್ಲರೂ ಬಂದರು ಒಬ್ಬೊಬ್ಬರು ಒಂದೊಂದು ಹೇಳಿದರು ನೀವು ಕೊಟ್ಟ ಸಲುಗೆ ಬಹಳವಾಗಿಯು ಎಂದು ಕೆಲವರೆಂದರೆ , ಆಕೆ ಮೊದಲಿನಿಂದಲೂ ಸ್ವಲ್ಪ ಚಲ್ಚಲ್ ಆಗಿ ಆಡುತ್ತಿದ್ದಳು ನಮಗೆ ಗೊತ್ತಿತ್ತು ಇದು ಹೀಗೆ ಆಗುವುದು ಎಂದು ಕೆಲವರಂದರು. ಹತ್ತಿರದ ನೆಂಟರು ಅವಳ ಜಾತಕವೇ ಸರಿ ಇರಲಿಲ್ಲ ಎಂದರು . ನೂರು ಜನ ನೂರು ರೀತಿಯಲ್ಲಿ ಮಾತನಾಡಿದರು . ಸಮಾಧಾನದ ನೆಪದಲ್ಲಿ ಬಂದು ಮನಸ್ಸಿಗೆ ಇನ್ನಷ್ಟು ಇರಿದರು . ಹೋದ ಮಗಳು ತಿರುಗಿ ಬರಲಿಲ್ಲ .ಅಂದಿನಿಂದ  ಕಮಲಮ್ಮ ಸುಬ್ರಾಯರು ಮನೆ ಹೊಸಿಲು ದಾಟಿ ಹೊರಹೊಗಲಿಲ್ಲ .ಇದೆಲ್ಲ ಆಗಿ ಆಗಲೇ ೨-೩ ವರ್ಷವಾಗಿತ್ತು . ಆಗೀಗ ಯಾರಿಂದನೋ ಬಂಡ ಸುದ್ದಿಯಿಂದ ತಿಳಿದಿದ್ದು ಪ್ರತಿಮ ಈಗ ಮುದ್ದಾದ ಗಂಡು ಮಗುವೊಂದರ ತಾಯಿ . ಗಂಡನ ಜೊತೆಗೆ ತಾನು ಕೂಲಿ ಕೆಲಸದಲ್ಲಿ ತೊಡಗಿಕೊಂಡಿದ್ದಾಳೆ. ಅಪ್ಪ ಅಮ್ಮ ತೋರಿದ ಆ ಪ್ರೀತಿಗಿಂತ ಕಷ್ಟಪಟ್ಟು ದುಡಿಯುವ ಈ ಪ್ರೀತಿಯೇ ಮೇಲೆನಿಸಿರಬೇಕು !!.ಕಮಲಮ್ಮ ನಿಟ್ಟುಸಿರುಬಿಟ್ಟರು ಎಲ್ಲ ಸರಿಯಿದ್ದರೆ ಪ್ರದೀಪ ಇಂದು ತಮ್ಮ ಅಳಿಯ ಆಗುತ್ತಿದ್ದ . ಮೊಮ್ಮಗು ರಾಜಕುಮಾರನಾಗುತ್ತಿದ್ದ.

                         -----------------------------------------------------------------------

ಮಗು ರಚ್ಚೆ ಹಿಡಿದು ಅಳುತ್ತಿತ್ತು . ಏನು ಮಾಡಿದರೂ  ಸುಮ್ಮನಿರಲಿಲ್ಲ. ಕೊನೆಗೆ ಇದ್ದ ಸಣ್ಣ ರೂಮಿನಲ್ಲಿ ಒಂದು ತೊಟ್ಟಿಲು ತಂದು ಕಟ್ಟಬೇಕು . ಹೇಗಾದರು ಮಾಡಿ ಈ ತಿಂಗಳು ಕೆಲಸ ಮಾಡಿದ ದುಡ್ಡು ಗಂಡನಿಗೆ ಸಿಗದಂತೆ ಉಳಿಸಿಕೊಳ್ಳಬೇಕು ಎಂದು ಯೋಚಿಸುತ್ತಿದ್ದ ಪ್ರತಿಮಳಿಗೆ  ಸುದೀರ ಹೇಳಿದ 'ಇವತ್ತು ಮೂರು ಜನ ಗೆಳೆಯರನ್ನ ಕರ್ಕೊಂಡು ಬರ್ತೀನಿ ಮದ್ಯಾನಕ್ಕೆ ಒಳ್ಳೆ ಅಡಿಗಿ ಮಾಡ್ ಹಾಕು . ಬಾಡುಟ ಅಂದ್ರ ನನ್ ಗೆಳೆಯರಿಗೆ ಬಾಳ್ ಚೊಲೊ ಹಿಡುಸ್ತದ'  , ಎನ್ನುತ್ತಾ ಹೊರಹೋದ ಗಂಡನನ್ನ ಮರೆಯಾಗುವವರೆಗೂ ಕಿಟಕಿಯ ಸಂದಿಯಿಂದ ನೋಡುತ್ತಿದ್ದ ಪ್ರತಿಮಳ ನೆನಪು ಅಮ್ಮ ಹೊಟ್ಟೆ ತುಂಬಾ ಮಾಡಿ ಹಾಕುತ್ತಿದ್ದ ಸೊಪ್ಪಿನ ಸಾರನ್ನು ನೆನೆಸಿ ಕಣ್ಣೀರು ಸುರಿಸಿದವು !!!.

ಅರ್ಪಿತಾ ಹರ್ಷ 
ಲಂಡನ್ 

ಒಮ್ಮೊಮ್ಮೆ ಹೀಗೂ ಆಗುವುದು

ಈ ನನ್ನ ಲೇಖನವು ೨೬/೦೩/೧೩ ಉದಯವಾಣಿಯಲ್ಲಿ ಪ್ರಕಟಗೊಂಡಿದೆ 


ಈಗ ಸುಮಾರು ವರ್ಷಗಳ ಹಿಂದಿನ ಕಥೆ ಇದು . ಕಥೆ ಎಂದರೆ ಕಥೆಯಲ್ಲ ನಿಜವಾಗಿ ನಡೆದ ಘಟನೆ .ಆಗ ನಾನು ೭ ನೆ ಕ್ಲಾಸ್ ನಲ್ಲಿದ್ದೆ .ನಮ್ಮದು ಮಲೆನಾಡಿನ ಹಳ್ಳಿ . ಮಳೆಗಾಲದ ಒಂದು ದಿನ ವಾಗಿತ್ತು. ಮಳೆಗಾಲದ ದಿನಗಳಲ್ಲಿ ಅಲ್ಲಿ ಸುರಿಯುವ ಮಳೆ ನೋಡಿಯೇ ಆನಂದಿಸಬೇಕು. ಹೀಗಿರುವಾಗ ಒಂದು ದಿನ ಮಳೆ ಸುರಿಯುತ್ತಿತ್ತು ನಾವೆಲ್ಲಾ ಊಟ ಮಾಡಿ ಬೇಗ ಮಲಗಿದ್ದೆವು . ಅಣ್ಣ ಮಾತ್ರ ಪ್ರತಿ ಬುದವಾರ ಟಿವಿಯಲ್ಲಿ ಬರುವ ಒಂದು ಸಿ ಐ ಡಿ ಷೋ ಒಂದನ್ನು ನೋಡಿಯೇ ಮಲಗುವುದಾಗಿತ್ತು . ಹಾಗೆ ಒಂದು ಬುದವಾರ ಸಿ ಐ ಡಿ  ಷೋ ನೋಡುತ್ತಿದ್ದ ಅದರಲ್ಲಿ ತೋರಿಸುತ್ತಿದ್ದ ಕೊಲೆ ಆತನಿಗೆ ಬಹಳ ಭಯ ಹುಟ್ಟಿಸಿತ್ತು .ಆಗಿನ್ನೂ ಆತ  ೮ನೆ ತರಗತಿ . ಅದೇ ಸಮಯಕ್ಕೆ ಕರೆಂಟ್ ಹೋಗಿಬಿಟ್ಟಿತ್ತು . ಮಳೆಗಾಲದಲ್ಲಿ ಆಗಾಗ ಕರೆಂಟ್ ತೆಗೆಯುತ್ತಿರುತ್ತಾರೆ. 

ಆತ  ಹೆದರುತ್ತಲೇ ಮಲಗಲು ನಿಧಾನವಾಗಿ ನಡೆದು ಬರುತ್ತಿದ್ದ . ಆಗೆಲ್ಲ ನಮ್ಮ ಮನೆಯಲ್ಲಿ ಎಲ್ಲರು ಸಾಲಾಗಿ ಮಲಗಿರುತ್ತಿದ್ದೆವು .ಅಣ್ಣ  ಒಬ್ಬೊಬ್ಬರನ್ನೇ ದಾಟಿ ಮುಂದೆ ಹೋಗಿ ತನ್ನ ಜಾಗದಲ್ಲಿ ಮಲಗಿಕೊಳ್ಳಬೇಕು. ಹಾಗೆಯೇ ಬರುತ್ತಿದ್ದ ಅಷ್ಟರಲ್ಲಿ ಅಪ್ಪ - ಅಣ್ಣನ ಕೈ ಹಿಡಿದು ಜೋರಾಗಿ ಕೂಗಿಕೊಂಡರು  ಅಣ್ಣ ಅಪ್ಪನಿಗಿಂತ ಜೋರಾಗಿ ಕೂಗಿಕೊಂಡ. ಎಲ್ಲರೂ  ಏನಾಯಿತು ಎಂದು ಎದ್ದು ಗಾಬರಿಗೊಂಡೆವು .  ಅಷ್ಟರಲ್ಲಿ ಹೋದ ಕರೆಂಟ್ ಪುನಃ ಬಂದಿತ್ತು .
ಇತ್ತ ನಿದ್ದೆಗೆ ಜಾರುತ್ತಿದ್ದ ಅಪ್ಪನಿಗೆ ಕನಸೊಂದು ಬೀಳುತ್ತಿತ್ತು . ಕನಸಿನಲ್ಲಿ ಮನೆಯಲ್ಲಿರುವ ಅಡಕೆಯನ್ನು ಕದಿಯಲು ಕಳ್ಳರು ಮನೆಗೆ ನುಗ್ಗಿದ್ದರು . ಅಪ್ಪ ಅದನ್ನು ನೋಡುತ್ತಿದ್ದಾರೆ ದೂರದಲ್ಲೆಲ್ಲೋ ಅಡಿಕೆಯನ್ನು ಸುರಿಯುವ ಶಬ್ದ ಕೂಡ ಕೇಳುತ್ತಿದೆ . ಆದರೆ ಕಣ್ಣು ಬಿಟ್ಟು ಹಿಡಿಯಲು ಆಗುತ್ತಿಲ್ಲ. 
ಕಣ್ಣು ಬಿಡಲು ಆಗದಂತೆ ಏನೋ ಮಾಡಿದ್ದರೆ ಹೀಗೆ ಕನಸು ಮುಂದುವರೆಯುತ್ತಿರುವಾಗ ಅಣ್ಣ ಅಪ್ಪನನ್ನು ದಾಟಿಕೊಂಡು ಮುಂದೆ ಹೋಗುತ್ತಿದ್ದ ಅಪ್ಪ ಕಳ್ಳ ಎಂದುಕೊಂಡು ಹಿಡಿದುಕೊಂದುಬಿಟ್ಟರು . 
ಇನ್ನೇನು ಹೊಡೆಯಬೇಕು ಅನ್ನುವಷ್ಟರಲ್ಲಿ ಅಣ್ಣ ನು ಕೂಗಿಕೊಂಡ ಅಪ್ಪನು ಕೂಗಿಕೊಂಡರು. 

ಮಳೆಗಾಲ ವಾದದ್ದರಿಂದ ಮನೆಯ ಹಿಂದೆ ಕಟ್ಟಿದ್ದ ತಗಡಿನ ಮೇಲೆ ನೀರು ರಭಸವಾಗಿ ಬೀಳುತ್ತಿತ್ತು . ಆ ನೀರು ಬೀಳುವ ಶಬ್ದ ಅಡಿಕೆಯನ್ನು ಸುರಿದರೆ ಬೀಳುವ ಶಬ್ದದಂತೆಯೇ ಇತ್ತು ಅದು ಅಪ್ಪನಿಗೆ ದೂರದಲ್ಲಿ ಕೇಳುತ್ತಿದುದ್ದರಿಂದ ಅಡಿಕೆ ಕಡಿಯುತ್ತಿದ್ದಾರೆ ಎಂದು ಕೊಂಡಿದ್ದರು. ಆಗಷ್ಟೇ ದಾರವಾಹಿನೋಡಿ ಬರುತ್ತಿದ್ದ ಅಣ್ಣನಿಗೆ ಹಿಂದಿನಿಂದ ಯಾರೋ ಹಿಂಬಾಲಿಸುತ್ತಿದ್ದಾರೆ ಎನ್ನಿಸುತ್ತಿತ್ತು .  ಹಾಗಾಗಿ ಅವನಿಗೆ ಅಪ್ಪ ಕೈಹಿಡಿದ ತಕ್ಷಣ ಭಯವಾಗಿ ಕೂಗಿಕೊಂಡಿದ್ದ .
ಅದೇ ಸಮಯಕ್ಕೆ ಹೋಗಿದ್ದ ಕರೆಂಟ್ ಪುನಃ ಬಂದಿತ್ತು . ಇಲ್ಲದಿದ್ದರೆ ಅನಾಹುತವಾಗುತ್ತಿತ್ತು . 

ಅರ್ಪಿತಾ ಹರ್ಷ 
ಲಂಡನ್ 

Wednesday 13 March 2013

ಸಸ್ಯ ಶಾಮಲ

ಅದೊಂದು ಸುಂದರ ಮನೆ . ದೂರದಿಂದ ನೋಡಿದರೆ ದೊಡ್ಡದೊಂದು ಮನೆಯ ಸುತ್ತಲು ಹಚ್ಚ ಹಸುರಿನಿಂದ ಕಂಗೊಳಿಸುವ ತೋಟ . ಬಿಸಿಲಿನಿಂದ ಸೂರ್ಯ ಕಣ್ಣು ಕುಕ್ಕಿ ಬೆವರಿಳಿಸುತ್ತಿದ್ದರೆ ಆ ಮನೆಗೆ ಹೊಕ್ಕು ಹಸುರಿನ ಜೊತೆಗೆ ಗಾಳಿಯಿಂದ ಮನಸ್ಸಿಗೆ ಸ್ವಲ್ಪ ಹಾಯೇನಿಸಿಕೊಳ್ಳೋಣ ಎಂದೆನಿಸದೆ ಇರದು . ಅಂತಹದೊಂದು ವಾತಾವರಣ  ಇರುವುದು ಕುಮಟ ದ ಶಾಮಲ ಜಗನಾಥ್ ಮನೆಯಲ್ಲಿ, ಮನೆಯ ಸುತ್ತಲಿರುವ ತೋಟದಲ್ಲಿ ,

ಕರಾವಳಿಯ ತೀರದ ಕುಮಟದ ಹತ್ತಿರದಲ್ಲಿ ದೊಡ್ಡದೊಂದು ಮನೆ ಕಟ್ಟಿಸಿ ಕೊಂಡಾಗ  ಸುತ್ತಲು ಬರೀ ಬಯಲು ಬೇಸಿಗೆಯ ಬಿಸಿ ಬೇಗೆಯನ್ನು ನೀಗಲು ಮಲೆನಾಡಿನಿಂದ ಬಂದ ಎಂತವರಿಗೂ  ಕೂಡ ಬಹಳ ಕಷ್ಟವೆನಿಸುತ್ತಿತ್ತು ಅಂತಹ ದಿನಗಳಲ್ಲಿ ಕೃಷಿಯ ಬಗ್ಗೆ ಮೊದಲಿನಿಂದಲೂ ಆಸಕ್ತಿ ಇದ್ದ ಶಾಮಲರವರು ಪುಟ್ಟದೊಂದು ಗಾರ್ಡನ್ ತಯಾರಿಸುವ ಯೋಜನೆ ಹಾಕಿಕೊಂಡರು . ದಾಸವಾಳ, ಗುಲಾಬಿ, ತುಂಬೆ, ಸೇವಂತಿಗೆ ಹೀಗೆ ಹೂವುಗಳಿಂದ ಪ್ರಾರಂಭಿಸಿದ ಗಾರ್ಡನ್ ಬರಬರುತ್ತ ದೊಡ್ಡದೊಂದು ತೋಟವಾಯಿತು ಎಂಬುದು ನಿಜಕ್ಕೂ ಆಶ್ಚರ್ಯವೇ ಸರಿ . ಶಾಮಲ ಅವರಿಗಿದ್ದ ಆಸಕ್ತಿ ಕೇವಲ ಹುವುಗಳೇ ಏಕೆ ತರಕಾರಿಗಳನ್ನು ಬೆಳೆಯಬಹುದು ಎಂದು ಪ್ರಾರಂಭಿಸುವಲ್ಲಿ ಉತ್ಸಾಹ ಹೆಚ್ಚಿಸಿತು . 
ಈಗ ಅವರ ತೋಟದಲ್ಲಿ ಬೆಳೆಯದ ತರಕಾರಿಗಲಿಲ್ಲ. ಇದರ ನಡುವೆ ಬೋನ್ಸಾಯ್ ಬಗ್ಗೆ ಹೆಚ್ಚು ಆಸಕ್ತಿ ಹುಟ್ಟಿಸಿಕೊಂಡ ಶಾಮಲ ರವರು ಪತಿಯ ಸಹಕಾರದೊಂದಿಗೆ ಅದನ್ನು ಪ್ರಾರಂಭಿಸಿದರು . ಶಾಮಲ ಅವರ ಮನೆಗೆ ಹೋದರೆ ಬಾಗಿಲಲ್ಲೇ ಪುಟ್ಟ ಪುಟ್ಟ ಗಿಡಗಳಲ್ಲಿ ನಿಂಬು , ಮಾವು, ಎಲ್ಲವು ನಮ್ಮನ್ನು ಸ್ವಾಗತಿಸುತ್ತವೆ. ೫೦ ಕ್ಕೂ ಹೆಚ್ಚು ಬೇರೆಬೇರೆ ರೀತಿಯ ಬೋನ್ಸಾಯ್ ಗಿಡಗಳಿವೆ .ಇವರ ವಿವಿದ ರೀತಿಯ ಬೋನ್ಸಾಯ್ ಗಿಡಗಳನ್ನು ಮದುವೆ  ಇನ್ನಿತರ ಕಾರ್ಯಕ್ರಮಗಳಿಗೆ ಅಲಂಕಾರಕ್ಕಾಗಿ ತೆಗೆದುಕೊಂಡು ಹೋಗುವವರು ಉಂಟು . ತೋಟದ ನಡುವೆಯೇ ಸಣ್ಣ ಪುಟ್ಟ ಕೊಳಗಳ ರೀತಿಯ ಟ್ಯಾಂಕ್ ನಿರ್ಮಿಸಿ ಗಾರ್ಡನ್ ಅಂದವನ್ನು ಇನ್ನಷ್ಟು ಹೆಚ್ಚಿಸಿದ್ದಾರೆ.

ತೋಟಕ್ಕೆ ಬೇಕಾದ ಗೊಬ್ಬರಗಳನ್ನು ನೀಡುತ್ತಿದ್ದುದ್ದು  ದನಕರುಗಳು ಅದರ  ಬಗ್ಗೆಯೂ ಯೋಚಿಸಿದ ಶಾಮಲ ರವರು ಮನೆಯ ಮುಂದೊಂದು ದೊಡ್ಡ ಟ್ಯಾಂಕ್ ಕಟ್ಟಿಸಿ  ಬಿಸಿಲಿನ ಬೇಗೆ ನೀಗಿಸಿಕೊಳ್ಳಲು ದನಕರುಗಳಿಗೆ ನೀರಿನ ವ್ಯವಸ್ಥೆ ಕೂಡ ಮಾಡಿದ್ದಾರೆ.  ಬಾಳೆ , ತೆಂಗು , ತರಕಾರಿಗಳಾದ ಬೀನ್ಸ್, ಬದನೇಕಾಯಿ, ಟೊಮೇಟೊ , ಮೆಣಸಿನ ಕಾಯಿ ಇವುಗಳಿಗೆ ಕೊರತೆಇಲ್ಲ. ಇವೆಲ್ಲಕ್ಕೂ ಸಾಕಷ್ಟು ಶ್ರಮ ಬೇಕು .  ಮನೆಯ ಅಡುಗೆ , ಇಬ್ಬರು ಮಕ್ಕಳ ವಿದ್ಯಾಭ್ಯಾಸ ದ ಜೊತೆಗೆ ದೊಡ್ಡ ಮಟ್ಟದಲ್ಲಿ ಗಾರ್ಡನಿಂಗ್ ಮಾಡಿ ಯಶಸ್ವಿಯಾಗುವುದರಲ್ಲಿ ಶಾಮಲರವರ ಶ್ರಮ ಅಪಾರ. ಅದಕ್ಕೆ ಸರಿಯಾಗಿ ಸಾಥ್ ನೀಡುವುದರಲ್ಲಿ ಪತಿ ಮತ್ತು ಮಕ್ಕಳು ಕೂಡ ಜೊತೆಯಾಗಿದ್ದಾರೆ ಎಂದು ಸಂತೋಷದಿಂದ ಹಂಚಿಕೊಳ್ಳುತ್ತಾರೆ ಶಾಮಲರವರು .
ಇದಿಷ್ಟೇ ಅಲ್ಲ ಶಾಮಲರವರ ಹವ್ಯಾಸಗಳು ಹಲವು ಸುಧಾ ತರಂಗಗಳಲ್ಲಿ ಬರುವ ಧಾರಾವಾಹಿಗಳನ್ನು ಒಟ್ಟುಗೂಡಿಸಿ ಕಾದಮ್ಬರಿಯಾಗಿ ಜೋಡಿಸಿಟ್ಟಿದ್ದಾರೆ.  ಹೌಸ್ ಡೆಕೊರೇಶನ್ ಕೂಡ ಇವರ ಇಷ್ಟದ ಹವ್ಯಾಸ . ಗ್ಲಾಸ್ ಪೇಂಟಿಂಗ್ , ಹೂವಿನ ಕುಂಡಗಳು , ವಿವಿದ ರೀತಿಯ ಹೂವುಗಳು, ಹೀಗೆ ಇವರ ಮನೆಯ ಗೋಡೆ ಮತ್ತು ಶೋಕೇಸ್ ಗಳು ತುಂಬಿಹೋಗಿವೆ . ಮನೆಗೆ ಬಂದವರ ಗಮನ ಸೆಳೆದಿವೆ. 

ಲಂಡನ್ ಲೈಫ್ ಸ್ಟೈಲ್

 Published in Sakhi Magazine ...May 1st 2013


ತಾಯ್ತನ ಎನ್ನುವುದು ಒಂದು ಸುಂದರ ಅನುಭವ . ಅದಕ್ಕಾಗಿ ಕಾಯುವವರು ಬಹಳ ಹಾಗೆ ಅದರ ಸಿದ್ದತೆ ಮತ್ತು ಮಗು ಹುಟ್ಟಿದ ನಂತರ ನಡೆಸುವ ಬಾಳಂತನ  ಇವು ಕೂಡ ಸಾಕಷ್ಟು . ನಮ್ಮ ದೇಶದಲ್ಲಿ ತಾಯಿಯಾಗುತ್ತಿದ್ದಂತೆ ಪ್ರಾರಂಭವಾಗುತ್ತದೆ ಮುನ್ನೆಚ್ಚರಿಕೆ ಅದರಲ್ಲೂ ದಿನ ತುಂಬಿದ ಬಸುರಿಗಂತೂ ಕುಳಿತಲ್ಲೇ ಸೇವೆ ಎನ್ನುವಷ್ಟು . ಹಾಗೆಯೇ ಮಗು ಹುಟ್ಟಿದ ೩ ತಿಂಗಳು ಮನೆಯಿಂದ ಎಲ್ಲೂ ಹೊರ ಹೊರಡುವುದಿಲ್ಲ ಅದರಲ್ಲೂ ಮೊದಲ ಮಗುವಾದರಂತೂ  ಸರಿಯಾಗಿ ೩ ತಿಂಗಳು ಬಾಳಂತನ  ಮಾಡಿ ಕೊಂಡರೆಯೇ  ಗಟ್ಟಿ ಎಂಬುದು ಮೊದಲಿನಿಂದಲೂ ಬೆಳೆದು ಬಂದ ಪದ್ಧತಿ  ಮತ್ತು ಅದು ಈಗಲೂ ಬೆಳೆದುಕೊಂಡು  ಎಲ್ಲರೂ  ನಡೆಸಿಕೊಂಡು ಕೂಡ ಬರುತ್ತಿದ್ದಾರೆ.  ಇಂಜಿನಿಯರ್ ಗೆಳತಿಯೊಬ್ಬಳು ಹೇಳಿದ್ದಳು ಅವಳು ಹೆರಿಗೆಯ ದಿನಗಳು ಹತ್ತಿರಬರುತ್ತಿದ್ದಂತೆ ರಜೆ ತೆಗೆದುಕೊಂಡರೆ ಆನ್ ಸೈಟ್ ನ ಕ್ಲೈಂಟ್ ಗಳು ಇನ್ನೊಂದು ವಾರದಲ್ಲಿ ಬರುತ್ತೀರಾ ಕೇಳಿದರು ಎಂದು . ಆಶ್ಚರ್ಯವಾಗಿತ್ತು ಆಗ. ಆದರೆ ಈ ಲಂಡನ್ ಗೆ ಬಂದ  ಮೇಲೆ ಅದರ ಬಗ್ಗೆ ಪೂರ್ಣ ಮಾಹಿತಿ ದೊರೆಯಿತು . 

ಇಲ್ಲಿ ಹೆಣ್ಣು ಮಕ್ಕಳು ೧೫ ವರ್ಷದಿಂದಲೇ ತಾಯಿಯಾಗಿರುವ ಸಾಕಷ್ಟು ಉದಾಹರಣೆಗಳಿವೆ . ಅದು ತಪ್ಪು ಎಂದು ಇಲ್ಲಿಯ ಜನ ಹೇಳುವುದಿಲ್ಲ. ಹಾಗೆಯೇ ೪೦ ವರ್ಷದವರು ಕೂಡ ತಾಯಿಯಾಗುತ್ತಾರೆ. ಆದರೆ ನಮ್ಮ ಭಾರತಕ್ಕೂ ಈ ಇಂಗ್ಲೆಂಡ್ ಗು ಬಹಳಷ್ಟು ವ್ಯತ್ಯಾಸವಿದೆ. ಇಲ್ಲಿ ತುಂಬು ಬಸುರಿ ಒಂಬತ್ತು ತಿಂಗಳು ನಾಳೆಗೆ ಡ್ಯು ಡೇಟ್ ಅಂದರೂ  ಕೂಡ ನಿರಾಳವಾಗಿ ಯಾವುದೇ ತೊಂದರೆ ಇಲ್ಲದಂತೆ ಆಫೀಸ್ ಗೆ ಹೋಗುತ್ತಾಳೆ . ಡಾಕ್ಟರ್ ಕೊಟ್ಟ ಡೇಟ್ ನಂತರ ಇನ್ನೇನು ಲೇಬರ್ ಪೈನ್ ತುಂಬಾ ಕಾಣುತ್ತಿದೆ ಎಂದಾಗ ಮಾತ್ರ ಆಫೀಸ್ ಗೆ ರಜೆ ಹಾಕಿ ಆಸ್ಪತ್ರೆ ಗೆ ಅಡ್ಮಿಟ್ ಆಗುತ್ತಾರೆ. ಜೊತೆಗೆ ಇಲ್ಲಿ ಯಾವುದೇ ಕಾರಣಕ್ಕೂ ಸಿಸೇರಿಯನ್ ಮಾಡುವುದಿಲ್ಲ ಈ ಕಾರಣದಿಂದ ಸಾಕಷ್ಟು ಹೆಂಗಳೆಯರು ಪ್ರಾಣ ಕಳೆದುಕೊಂಡಿರುವ  ಉದಾಹರಣೆಗಳು  ಕೂಡ ಇವೆ . ಆದರೆ ನಾರ್ಮಲ್ ಡೆಲಿವರಿ ಆಗಬೇಕು ಎಂಬುದು ಡಾಕ್ಟರ ಕೊಡುವ ಅಭಿಪ್ರಾಯ.  ಆದರೂ  ನಾರ್ಮಲ್ ಡೆಲಿವರಿ ಆಗುವುದರ ಮೂಲಕ ಮತ್ತಷ್ಟು ಬಲಿಷ್ಟರಾಗುತ್ತಾರೆ ಎಂಬುದು ಸತ್ಯ .

ಒಮ್ಮೆ ಪ್ರಸಿದ್ಧ ಮೇಡಂ ತುಸ್ಸಾದ್ ನನ್ನು ನೋಡಲು ಹೋಗಿದ್ದೆವು ಅಲ್ಲಿ ದೊಡ್ಡ ಕ್ಯು ಇದ್ದ ಕಾರಣ ಒಬ್ಬರ ಹಿಂದೆ ಒಬ್ಬರು ಟಿಕೆಟ್ ಪಡೆಯಲೋಸುಗ ನಿಂತಿದ್ದೆವು . ನನ್ನ ಮುಂದೇ ನಿಂತಿರುವ ಹೆಣ್ಣುಮಗಳಿಗೆ ಸುಮಾರು ೩೦ ರ ಅಸುಪಾಸಿರಬಹುದು ಕೈಯಲ್ಲೊಂದು ಪುಟ್ಟ ಮಗುವಿತ್ತು . ಅದೆಷ್ಟು ಪುಟ್ಟ ಮಗುವಾಗಿತ್ತೆಂದರೆ ಕಣ್ಣು ಕೂಡ ಆಗಷ್ಟೇ ಬಿಟ್ಟಂತೆ  ಇತ್ತು . ನನಗೆ  ಕುತೂಹಲ ತಡೆಯಲಾಗಲಿಲ್ಲ ಕೇಳಿದೆ ಎಷ್ಟು ತಿಂಗಳ ಮಗುವಿದು ಅಂತ ಅವರೆಂದರು ೪ ದಿನದ ಹಿಂದೆ ಹುಟ್ಟಿದ್ದು ಎಂದು , ಆಕೆ ಆ ಮಗುವನ್ನು ಎತ್ತಿಕೊಂಡು ಕ್ಯೂನಲ್ಲಿ ಸುಮಾರು ೨ ತಾಸುಗಟ್ಟಲೆ ನಿಂತಿದ್ದಳು ಮತ್ತು ನಂತರ ೨ ತಾಸು ಸಂಗ್ರಹಾಲಯ ಸುತ್ತಿ ಹೋದಳು . ನಿಜಕ್ಕೂ ಆಶ್ಚರ್ಯವೆನಿಸುತ್ತದೆ .  ಇಂಗ್ಲೆಂಡ್ ನಲ್ಲಿ ಬಾಳಂತನ  ಎಂದು ಯಾವುದೇ ರೀತಿಯಲ್ಲಿ ಆರೈಕೆ ಮಾಡಿಕೊಳ್ಳುವುದಿಲ್ಲ ಉಳಿದ ದಿನಗಳಂತೆಯೇ  ಇರುತ್ತಾರೆ ಎಂಬುದು ವಿಶೇಷವೆ ಸರಿ . 

ಹಾಗೆಯೇ ಇಲ್ಲಿಯ ಜನ ಮಗುವನ್ನು ಕಾರ್ ನಲ್ಲಿ ಕರೆದುಕೊಂಡು ಹೋಗುವಾಗ ಹಿಂಬದಿಯಲ್ಲಿ ಒಂಟಿಯಾಗಿ ಕೂರಿಸಿರುತ್ತಾರೆ. ಮಗುವಿನ ಸುತ್ತಲೊಂದು ಬೆಲ್ಟ್ ಹಾಕಿ ಹಿಂದಿನ ಸೀಟಿನಲ್ಲಿ ಒಂಟಿಯಾಗಿ ಮಗು ಕುಳಿತಿರುತ್ತದೆ. ಇದರಿಂದ ಮಗು ಸ್ವತಂತ್ರವಾಗಿ ಬೆಳೆಯಲಿ ಎಂಬ ಉದ್ದೇಶದಿಂದ ಈ ರೀತಿಯಾಗಿ ಬೆಳೆಸುತ್ತಾರೆ . ಮಗುವಿಗೆ ಒಂದು ಆರು ತಿನ್ಗಲಾಗುತ್ತಿದ್ದಂತೆ ಪ್ರತ್ಯೇಕವಾದ ರೂಂ ನಲ್ಲಿ ಮಲಗಿಸುತ್ತಾರೆ. ಇದರಿಂದ ಮಗು ಬೇರೆಯವರ ಮೇಲೇ ಅವಲಂಬಿತವಾಗಿರುವುದಿಲ್ಲ . ಮುಂದೆ ತನ್ನ ಕಾಲ ಮೇಲೆ ತಾನು ನಿಲ್ಲುವಷ್ಟು ಸಾಮರ್ಥ್ಯವನ್ನು ಹೊಂದುತ್ತದೆ ಎಂಬುದು ಅವರು ನೀಡುವ ಅಭಿಪ್ರಾಯ .

ಇಲ್ಲಿ ಚಳಿಗಾಲದಲ್ಲಿ -೪ ವರೆಗೂ ಚಳಿ ಇರುತ್ತದೆ . ಕೆಲವೊಮ್ಮೆ ಹಿಮ ಕೂಡ ಬೀಳುತ್ತಿರುತ್ತದೆ. ಆದರೆ ಇಲ್ಲಿ ಹುಟ್ಟಿದ ಪುಟ್ಟ ಮಗುವು ಕೂಡ ಈ ವಾತಾವರಣವಕ್ಕೆ ಬಹುಬೇಗ ಹೊಂದಿಕೊಂದುಬಿದುತ್ತವೆ. ಗೆಳತಿಯೊಬ್ಬಳಿಗೆ ಲಂಡನ್ ನಲ್ಲಿಯೇ ಮಗುವಾಗಿತ್ತು ಆ ಮಗು ಎಷ್ಟೊಂದು ಭಿನ್ನವಾಗಿತ್ತೆಂದರೆ ಮಗುವಿಗೆ ಅಮ್ಮ ಸದಾ ಜೊತೆಗಿರಬೇಕು ಎಂದೆನಿಸುತ್ತಲೇ ಇರಲಿಲ್ಲ . ಅದರಷ್ಟಕ್ಕೆ ಅದು ಆಡಿಕೊಂಡು ಇದ್ದುಬಿಡುತ್ತಿತ್ತು . ಹಾಗೆಯೇ ಇಂತಹ ಮಕ್ಕಳು ಬೆಳೆದು ದೊಡ್ದವರಾಗುತ್ತಿದ್ದಂತೆ ಸಂಬಂಧ ಗಳಿಗೆ ಬೆಲೆ ಕೊಡುವುದಿಲ್ಲ .ಯಾರು ಇಲ್ಲದೆಯೇ ಕೂಡ ಬದುಕಿಬಿಡಬಲ್ಲವು  ಎಂಬುದು ಕೂಡ ವಿಷಾದನೀಯ . ಆದರೆ ಇಲ್ಲಿಯ ಪೋಷಕರು ಮಕ್ಕಳಿಗೆ ಬಹಳ ಪ್ರಾಮುಖ್ಯತೆ ಕೊಡುತ್ತಾರೆ. ಮಕ್ಕಳಿಗೆ ಹೊಡೆಯುವುದಿಲ್ಲ ಬಹಳ ಪ್ರೀತಿಯಿಂದ ತಿದ್ದುತ್ತಾರೆ. ಇಲ್ಲಿಯ ಸರ್ಕಾರಿ ಕಟ್ಟುಪಾಡುಗಳು ಹಾಗೆ ಇವೆ ಇಲ್ಲಿ ಮಕ್ಕಳನ್ನು ಹೊಡೆಯುವಂತಿಲ್ಲ ಪ್ರೀತಿಯಿಂದ ಮನ ಗೆಲ್ಲಬೇಕು ಎನ್ನುತ್ತಾರೆ. ಶಾಲೆಗಳಿಗೆ ಸೇರಿದ ಮಗುವಿಗೆ ಸುಮಾರು ೫ ವರ್ಷಗಳವರೆಗೆ ಕೇವಲ ಆಟಕ್ಕೆ ಪ್ರಾಮುಖ್ಯತೆ ನೀಡಲಾಗುತ್ತದೆ. ನಂತರ ನಿಧಾನವಾಗಿ ಪಾಠ ಪ್ರಾರಂಭಿಸುತ್ತಾರೆ. ಇದು ಲಂಡನ್ ನ ಲೈಫ್ ಸ್ಟೈಲ್ . 

ಪುಟ್ಟ ದ್ವೀಪ ಈ ಹೊನ್ನೇಮರುಡು


ಈ ನನ್ನ ಲೇಖನವು ಮಾರ್ಚ್(15/2013)  ಸಖಿ ಪಾಕ್ಷಿಕದಲ್ಲಿ  ಪ್ರಕಟಗೊಂಡಿದೆ
http://www.kannadaprabha.com/travel-automobile/trip-to-honnemarudu/246313.html




ಹುಟ್ಟಿ ಬೆಳೆದದ್ದೆಲ್ಲ ಮಲೆನಾಡು ಆದ್ದರಿಂದ ನೀರೆಂದರೆ ಬಹಳ ಇಷ್ಟ ಜೊತೆಗೆ ಟ್ರಕ್ಕಿಂಗ್ ಕೂಡ. ನೀರು ಮತ್ತು ಟ್ರಕ್ಕಿಂಗ್ ಸಾಮಾನ್ಯವಾಗಿ ಎಲ್ಲಾರಿಗೂ  ಇಷ್ಟವಾಗುತ್ತದೆ. ವೀಕೆಂಡ್ ನ ೨ ದಿನಗಳಲ್ಲಿ ಒಮ್ಮೆ ಪ್ರಕೃತಿಯ ಮಡಿಲಲ್ಲಿ ಸುತ್ತಿಬಂದರೆ ಮನಸ್ಸಿಗೆ ಹೊಸ ಹುರುಪು ಬರುವುದು ಖಂಡಿತ . ಅಂತಹದೇ ಒಂದು ಉದ್ದೇಶವನ್ನು ಇಟ್ಟುಕೊಂಡು ನಾವು ಹಾಗೆ ನಮ್ಮ ಇಷ್ಟದಂತೆ ಒಮ್ಮೆ ನಮ್ಮ ಮಾವನ ಮನೆಯಿಂದ ಎಲ್ಲರೂ  ಸೇರಿ ಸುಮಾರು ೧೦ ಜನ ಸೇರಿ ಹೋದ ಸ್ಥಳವೇ  ಹೊನ್ನೇ ಮರುಡು . 


ಹೊನ್ನೇ ಮರುಡು ಎನ್ನುವುದು ಒಂದು ಪ್ರವಾಸಿ ತಾಣ ಇದು ಶಿವಮೊಗ್ಗ ಜಿಲ್ಲೆಯ ಸಾಗರದಿಂದ ಸುಮಾರು ೨೦ ಕಿ, ಮೀ ನಲ್ಲಿದೆ . ಸಾಮಾನ್ಯವಾಗಿ ಜಗತ್ಪ್ರಸಿದ್ದ ಜೋಗ್ ಫಾಲ್ಸ್ ಗೆ ಹೋಗುವವರೆಲ್ಲರೂ ಹೋಗಲೇಬೇಕಾದ ಸ್ಥಳವಿದು .  ಶರಾವತಿ ಬ್ಯಾಕ್ ವಾಟರ್ ನಿಂದ ತುಂಬಿದ ಸ್ಥಳ .ಫೈರ್ ಕ್ಯಾಂಪ್ ಮಾಡಲು ಯೋಗ್ಯ ಸ್ಥಳವೆನ್ನಬಹುದು ಜೊತೆಗೆ  ಇದೊಂದು ಟ್ರಕ್ಕಿಂಗ್ ಗೆ ಸೂಕ್ತ ಜಾಗ ಜೊತೆಗೆ ನೀರನ್ನು ಇಷ್ಟಪಡುವವರು ಬೋಟಿಂಗ್  ಎಂಜಾಯ್ ಮಾಡುವವರು ನೋಡಲೇಬೇಕಾದ ಸ್ಥಳ. ಇಲ್ಲಿ ಉಳಿಯಲು ಕೂಡ ವ್ಯವಸ್ಥೆಇದೆ ಆದರೆ ಯಾವುದೇ ಕಾರಣಕ್ಕೂ ಆಡಂಬರವಾದ ಹೋಟೆಲ್ ಅನ್ನು ನಿರೀಕ್ಷಿಸಿ ಹೋಗಬೇಡಿ. ಇಲ್ಲಿ ತಂಗಬೇಕಾದಲ್ಲಿ ಟೆಂಟ್ ಕಟ್ಟಿಕೊಂಡು ಅಲ್ಲಿ ಮಲಗುವ ವ್ಯವಸ್ಥೆ ಮಾಡಿಕೊಡಲಾಗುತ್ತದೆ. ಜೊತೆಗೆ ಬೆಳಗಿನಿಂದ ಸಂಜೆಯವರೆಗೆ ನೀರಿನಲ್ಲಿ ಆಟವಾಡಬಹುದು ಜೊತೆಗೆ ತೆಪ್ಪದಲ್ಲಿ ಬೋಟಿಂಗ್ ವ್ಯವಸ್ಥೆ ಇದೆ . ಮಳೆಗಾಲ ಇದಕ್ಕೆ ಸೂಕ್ತ ಕಾಲವಾದರೂ ಚಳಿ ಕಾಲದಲ್ಲೂ  ಹೋಗಬಹುದು . ಇಲ್ಲಿ ಹೋಗಲು ಈಗ ಬೆಂಗಳೂರಿನಿಂದ ತಾಳಗುಪ್ಪ ಅಥವಾ ಸಾಗರದ ವರೆಗೆ ರೈಲಿನಲ್ಲಿ ಹೋಗಬಹುದು . ತಾಳಗುಪ್ಪದಿಂದ ಆಟೋ ಅಥವಾ ಓಮಿನಿ ಕೂಡ ದೊರೆಯುತ್ತದೆ. ನಡೆಯಲು ಇಷ್ಟಪಡುವವರಾದರೆ ತಾಳಗುಪ್ಪದಿಂದ ಹಿರೇಮನೆ ಎಂಬಲ್ಲಿ ಇಳಿದು ಅಲ್ಲಿಂದ ಸುಮಾರು ೫ ಕಿ,ಮಿ ಅಷ್ಟು ನಡೆದು ಹೋಗಬೇಕಾಗುತ್ತದೆ. ಸ್ವಂತ ವಾಹನದಲ್ಲಾದರೆ ಸ್ವಲ್ಪ ಜಾಗ್ರತೆ ರಸ್ತೆ ಸ್ವಲ್ಪ ಒರಟಾಗಿದೆ.


ಮಳೆಗಾಲದಲ್ಲಿ ಇಲ್ಲಿ ಉಮ್ಬಳ ಗಳ ಹಾವಳಿ ಬಹಳ . ಟ್ರಕ್ಕಿಂಗ್ ಹೋಗಬೇಕಾದರೆ ಬಹಳ ಮುಂಜಾಗರುಕರಾಗಿ ಅದಕ್ಕೆ ಬೇಕಾದ ಶೂ ಗಳನ್ನೂ ಹಾಕಿಕೊಂಡು ಹೋಗುವುದು ಉತ್ತಮ. ಜೊತೆಗೆ ರೈನ್ ಕೋಟ್ ಮತ್ತು ರಾತ್ರಿ ಸಮಯದಲ್ಲಿ ಬೇಕಾಗುವ ಬ್ಯಾಟರಿಯನ್ನು ಕೊಂಡೊಯ್ಯಬೇಕು . ಮೊದಲೇ ಬುಕ್ ಮಾಡಿಟ್ಟರೆ ಊಟ ತಿಂಡಿಯ ವ್ಯವಸ್ಥೆ ಮಾಡಲಾಗುತ್ತದೆ . ಆದರೂ  ಬಿಸ್ಕೆಟ್ , ಚಿಪ್ಸ್ ಇಂತವುಗಳನ್ನೆಲ್ಲ ಮೊದಲೇ ಪ್ಯಾಕ್ ಮಾಡಿಟ್ಟುಕೊಳ್ಳಿ ಏಕೆಂದರೆ ಅಲ್ಲಿ ಹತ್ತಿರದಲ್ಲೆಲ್ಲೂ ಅಂಗಡಿಗಳಿಲ್ಲ . ತಾಳಗುಪ್ಪಕ್ಕೆ ಬರಬೇಕಾಗುತ್ತದೆ. ಎಂತವರೂ  ಹೋಗಿ ಬರಬಹುದಾದ ಸ್ಥಳವಿದು . ಟ್ರೈನ್ ನಲ್ಲಿ ಹೋಗಿ ಬಂದರೆ ಒಬ್ಬರಿಗೆ ೫೦೦ ರು ಬರಬಹುದು .ಒಂದು ದಿನ ನೀರು ಜೊತೆಗೆ ಟ್ರಕ್ಕಿಂಗ್ ಮುಗಿಸಿ ಮರುದಿನ ಅಲ್ಲಿಂದ ಮುಂದೆ ಜೋಗ ಫಾಲ್ಸ್ ಗೆ ಹೋಗಿ ಜಗತ್ಪ್ರಸಿದ್ಧ ಜೋಗ್ಫಾಲ್ಸ್ ನೋಡಿ ಹಿಂದಿರುಗಬಹುದು .

ಬೆಂಗಳೂರಿನ ಬ್ಯುಸಿ ಲೈಫ್ ನಲ್ಲಿ ಕಳೆದುಹೊಗಿರುವವರಿಗೆ ಈ ಪ್ರಕೃತಿಯ ಮಡಿಲು ಇಷ್ಟವಾಗುವುದರಲ್ಲಿ ಖಂಡಿತ ಅನುಮಾನವಿಲ್ಲ. ಪುಟ್ಟದೊಂದು ದ್ವೀಪದಂತೆ ಇರುವ ಈ ಹೊನ್ನೇ ಮರುಡಿನ ಸೊಬಗನ್ನು ಹೋಗಿಯೇ ಆನಂದಿಸಬೇಕು ಬಣ್ಣಿಸಲು ಬಹಳ ಕಷ್ಟ .ಒಂದು ದಿನ ಆ ಹಸಿರು ನಿಸರ್ಗದ ಮಡಿಲಲ್ಲಿ ಟೆಂಟ್ ನಲ್ಲಿ ಕಳೆದರೆ ಆ ನೆನಪು ಹಚ್ಚಹಸಿರಾಗಿರುವುದು ಖಂಡಿತ .

ಅರ್ಪಿತಾ ಹರ್ಷ .

Friday 8 March 2013

ದೇಶದ ಅಭಿವೃದ್ದಿಯ ಸಂಕೇತ




ವಿಜಯ ನೆಕ್ಸ್ಟ್ನಲ್ಲಿ ಮಹಿಳಾ ದಿನಾಚರಣೆಯ ಲೇಖನಕ್ಕೆ ನನ್ನದೂ ಒಂದು ಸಣ್ಣ ಅಭಿಪ್ರಾಯ . ೦೮/೦೩/೧೩ ರಂದು ಪ್ರಕಟಗೊಂಡಿದೆ .


ಹಳ್ಳಿ ಮತ್ತು ಪಟ್ಟಣ ಎರಡೂ ಕಡೆಗಳಲ್ಲಿ ಕಾಲಕ್ಕೆ ತಕ್ಕಂತೆ ಹೆಣ್ಣು ಮಕ್ಕಳ ಆಕಾಂಕ್ಷೆಗಳು ಕೂಡ ಬದಲಾಗುತ್ತಿದೆ .  ಇಂದಿನ ಹೆಂಗಳೆಯರು ಹೊರಹೋಗಿ ದುಡಿದು ಯಾವುದೇ ಗಂಡಸರಿಗೂ ಕಡಿಮೆ ಇಲ್ಲ ಎಂದು ತೋರಿಸುತ್ತಿದ್ದಾರೆ.  ಬೇರೆಬೇರೆ ಫೀಲ್ಡ್ ಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ . ಮನೆಯ ಹೊರಗೆ ಮತ್ತು ಒಳಗೆ ದುಡಿಯುವಲ್ಲಿ ಸಫಲಳಾಗಿದ್ದಾಳೆ .
ಐ ಟಿ , ಸಿನೆಮಾ , ಪತ್ರಿಕೋದ್ಯಮ,ಮಾದ್ಯಮ , ಖಾಸಗಿ ಕಂಪನಿ, ರಾಜಕೀಯಗಳಲ್ಲಿ ಸೈ  ಎನಿಸಿಕೊಳ್ಳುತ್ತಿದ್ದಾರೆ . ಹಳ್ಳಿಗಳಲ್ಲಿರುವ ಹೆಣ್ಣುಮಕ್ಕಳು ಕೂಡ ಸ್ವಂತ ಉದ್ಯೋಗ , ಶಿಕ್ಷಣಗಳ ಬಗ್ಗೆ ಹೆಚ್ಚು ಗಮನ ಹರಿಸುತ್ತಿದ್ದಾರೆ. ಇದು ದೇಶದ ಅಭಿವೃದ್ಧಿಗೆ ಇನ್ನಷ್ಟು ಸಹಾಯಕವಾಗುವುದು ಎನ್ನುವುದು ನನ್ನ ಅಭಿಪ್ರಾಯ.
ದಿನಲ್ಲೂ ಕೂಡ ಹೆಣ್ಣು ಮಕ್ಕಳೇ ಮುಂದಿದ್ದಾರೆ .   ಇದು ದೇಶದ ಅಭಿವೃದ್ದಿಯ ಸಂಕೇತ. ಇದರಿಂದ ಬೇರೆ ದೇಶಗಳಲ್ಲಿರುವಂತೆ ನಮ್ಮ ದೇಶದಲ್ಲೂ ಯಾವುದೇ ರೀತಿಯ ತಾರತಮ್ಯತೆ ಇಲ್ಲದೆ ,ಸಮಾನತೆ ದೊರೆಯುತ್ತಿದೆ ಮತ್ತು ಸಂಪೂರ್ಣವಾಗಿ ದೊರೆಯುತ್ತದೆ ಎಂಬುದರಲ್ಲಿ ಸಂಶಯವಿಲ್ಲ ಎಂದೆನಿಸುತ್ತದೆ.

Arpitha Harsha 
London