Tuesday 29 January 2013

ನೆನಪಿನಂಗಳದಿಂದ ನಮ್ಮೂರ ಆಲೆಮನೆ


ಈ ನನ್ನ ಲೇಖನವು 29/01/13 ರ ಅವಧಿಯಲ್ಲಿ ಪ್ರಕಟಗೊಂಡಿದೆ http://avadhimag.com/?p=76066



ಅಮ್ಮನಿಗೊಂದು ಫೋನ್ ಮಾಡಿದ್ದೆ. ಫೋನ್ ಮಾಡುವುದು ಮಾಮೂಲಿ ದೂರದಲ್ಲಿದ್ದರೆ ಇರುವುದು ಅದೊಂದೇ ದಾರಿ ,ಫೋನ್ ನಲ್ಲೆ ನಗು, ಅಳು, ಸಿಟ್ಟು ಎಲ್ಲವನ್ನು ತೋರಿಸಿ ನಾನಿನ್ನು ನಿನ್ನ ಮಗಳಮ್ಮ  ಎಂದು ತೋರಿಸಿಕೊಡುವುದು .ಈ ಭಾರಿ ಫೋನ್ ಮಾಡಿ ದಾಗ ಅಮ್ಮ ಅಂದರು ನೀನಿಲ್ಲಿರಬೇಕಿತ್ತು ಕಣೆ ಅದಾಗದಿದ್ದರೂ  ಈ ಟೈಮ್ ನಲ್ಲೆ ನೀನು ಒಮ್ಮೆ ಭಾರತಕ್ಕೆ ಬರುವ ಪ್ಲಾನ್ ಹಾಕಬೇಕಿತ್ತು ಎಂದು . ನಾನು ಮನಸ್ಸಿನಲ್ಲೇ ಅಂದುಕೊಂಡೆ ಬೇಕು ಅಂದಾಗ ಬರುವಹಾಗಿದ್ದಿದ್ದರೆ ಚೆನ್ನಾಗಿರುತ್ತಿತ್ತು ಈ ಹಾಳಾದ್ದು ವಿದೇಶ ಅನ್ನೋದು ಒಮ್ಮೆ ಅಂಟಿಕೊಂಡು ಬಿಟ್ಟರೆ ಮತ್ತೆ ತಿರುಗಿ ಹೋಗುವುದು ಬಹಳ ಕಷ್ಟ . ಆದರೂ  ಹತ್ತಿರದವರ ಮದುವೆ , ಮುಂಜಿ  ಹೀಗೆ ಎಲ್ಲ ಬಿಟ್ಟು ಇಲ್ಲಿದ್ದಾಗ ಅನಿಸುತ್ತದೆ ಛೆ ಮಿಸ್ ಮಾಡಿಕೊಂಡೆ ಎಂದು . ಅದರಲ್ಲೂ ಈ ಲಂಡನ್ ನಲ್ಲಿ ಬರುವ ಕಿಟಿಕಿಟಿ  ಮಳೆ ನೋಡಿದಾಗಂತೂ ನಮ್ಮ ಮಲೆನಾಡ ಆ ಬೋರ್ಗರೆಯುವ ಮಳೆ ನೆನಪಾಗಿ ಮೈಯೆಲ್ಲಾ ಪರಚಿಕೊಳ್ಳುವಷ್ಟು ಸಿಟ್ಟು ಬರುತ್ತದೆ .  ನನ್ನನ್ನು ಲಹರಿಯಿಂದ ಎಚ್ಚರಿಸಿದ ಅಮ್ಮ ಫೆಬ್ರವರಿ ಬಂತು ಅಂದ್ರೆ ಸಾಕು ನಮ್ಮೂರಲ್ಲಿ ಆಲೆಮನೆ ಪ್ರಾರಂಭ ಆಗೋಗುತ್ತೆ ನೀ ಇದ್ದಿದ್ದರೆ ದಿನ ಒಂದೊಂದು ಆಲೆ ಮನೆಗೆ ಹೋಗಿ ಬಿಸಿಬೆಲ್ಲ , ಮತ್ತು ಬೇಕಾದಷ್ಟು ಕಬ್ಬಿನಹಾಲು ಕುಡಿದು ಬರಬಹುದಿತ್ತು ಅಂದಳು . ಅಷ್ಟೇ ನಾನು ಕಳೆದುಹೋದೆ .
ನಮ್ಮೂರು ಮಲೆನಾಡಿನ ಒಂದು ಹಳ್ಳಿ . ಪುಟ್ಟ ಹಳ್ಳಿಯೇನಲ್ಲ  ಊರಿನಲ್ಲಿ ಸುಮಾರು 100 ಮನೆಗಳಿವೆ ಅದರಲ್ಲಿ 80 ಮನೆಗಳು ಬೇಸಾಯ ಮಾಡುವವರು ಅಂದರೆ ಭತ್ತ  ಮುಖ್ಯ ಬೆಳೆ  ಜೊತೆಗೆ ಶುಂಟಿ , ಹತ್ತಿ, ಶೇಂಗ, ಜೋಳ ,ಕಬ್ಬು ಇವುದಗೆಲ್ಲ ಉಪಬೆಳೆಗಳು . ಹಾಗೆ ಇವುಗಳನ್ನೆಲ್ಲ ಬೆಳೆದಾಗ ಕೆಲವರು ಮನೆಗೆ ತಂದು ಕೊಡುವುದೂ  ಉಂಟು .  ಈ ಫೆಬ್ರವರಿ ತಿಂಗಳಿನಲ್ಲಿ ಆಲೆಮನೆಯ ಭರಾಟೆ ಬಹಳ ಜೋರು . ಎಲ್ಲೆಲ್ಲಿಂದಲೋ ಬಂದು ಕಬ್ಬಿನ  ಹಾಲು ಕುಡಿದು ಹೋಗುವವರು ಬಹಳ .  ನನಗೆ ತುಂಬಾ ಚಿಕ್ಕವಳು ಇದ್ದಾಗಿ ನಿಂದಲೂ  ಅಪ್ಪ ಆಲೆ ಮನೆಗೆ ಕರೆದುಕೊಂಡು ಹೋಗುತ್ತಿದ್ದ ಅಲ್ಲಿ ಬೇಕಾದಷ್ಟು ಹಾಲು ಕುಡಿದು ಬಿಸಿ ಬೆಲ್ಲ ತಿಂದು ಮನೆಗೆ ಬರುವಾಗ ಒಂದು ಕ್ಯಾನ್ ನಲ್ಲಿ ಫ್ರೆಶ್ ಕಬ್ಬಿನ ಹಾಲು ತುಂಬಿಸಿಕೊಂಡು ಬರುತ್ತಿದ್ದೆವು . 
ಸಂಜೆ ನಮ್ಮದು ಕಂಬಳ ಪ್ರಾರಂಭ . ಊರಿನ ಅಕ್ಕಪಕ್ಕದ ಮನೆಯ ಅಣ್ಣಂದಿರು , ಚಿಕ್ಕಪ್ಪ ದೊಡ್ದಪ್ಪಂದಿರು ಜೊತೆಗೆ ನನ್ನ ವಾರಿಗೆಯವರು 4-5 ಮಕ್ಕಳು ಹೀಗೆ ಸೇರಿ ಕುಳಿತು ಹರಟೆ ಹೊಡೆದು ಕಬ್ಬಿನ  ಹಾಲು ಕುಡಿಯುವುದು . ಅಲ್ಲಿ ಹೆಂಗಸರಿಗೆ ಪ್ರವೆಶವಿರುತ್ತಿರಲಿಲ್ಲ ಕೇವಲ ಮಕ್ಕಳು ಮತ್ತು ಉಳಿದ ಗಂಡಸರು . ಹಾಗಾಗಿ ಕಬ್ಬಿನ ಹಾಲಿನ ಜೊತೆ ತಿನ್ನಲು ಏನಾದರೂ  ಬೇಕಾದರೆ ಗಂಡಸರೇ ಮಾಡಿಕೊಳ್ಳಬೇಕಿತ್ತು . ನನ್ನ ಅಪ್ಪನಿಗೆ ನಮ್ಮಕಡೆ ಕುಟ್ಟವಲಕ್ಕಿ ಎಂದು ಮಾಡುತ್ತಾರೆ ಅದೆಂದರೆ ಬಹಳ ಇಷ್ಟ ಅದು ಕಬ್ಬಿನಹಾಲಿನ ಜೊತೆ ಒಳ್ಳೆ ಕಾಮ್ಬಿನೆಶನ್  ಕೂಡ ಹೌದು ಜೊತೆಗೆ ಉಪ್ಪುಕಾರ ಚೆನ್ನಾಗಿ ಇರುವ ಮಾವಿನಮಿಡಿ ಉಪ್ಪಿನಕಾಯಿ . ಹಾಗಾಗಿ ಕುಟ್ಟವಲಕ್ಕಿಯನ್ನು  ಅಪ್ಪ ಬಹಳ ಇಷ್ಟಪಟ್ಟು ಬಹಳ ಸೊಗಸಾಗಿ ಮಾಡುತ್ತಿದ್ದರು . ಅಬ್ಬ ಅದರ ಖಾರವೆಂದರೆ ಖಾರ . ಅದು ಕಬ್ಬಿನ ಹಾಲಿನೊಂದಿಗೆ ಬಹಳ ಚಂದ ಮ್ಯಾಚ್ ಆಗುತ್ತಿತ್ತು .  ಅದರ ಜೊತೆಗೆ ಒಂದಿಷ್ಟು ಜೋಕ್ಸ್  , ಹರಟೆ ಹೀಗೆ ಗಂಟೆಗಳು ಸರಿದಿದ್ದೇ ಗೊತ್ತಾಗುತ್ತಿರಲಿಲ್ಲ . ನಮ್ಮ ಕಂಬಳ ಪ್ರಾರಂಭ ಆಗುತ್ತಿದುದೆ ರಾತ್ರಿ ಹತ್ತರ ನಂತರ  ಮುಗಿಯುತ್ತಿದುದು 1 ಗಂಟೆಯ ನಂತರ . ಅವರ ಜೋಕ್ಸ್ ಗಳು ಆ ಮಾತುಗಳು ಅರ್ಥವಾಗದಿದ್ದರೂ ಏನೋ ಒಂದು ಖುಷಿ ಇರುತ್ತಿತ್ತು ಆ ಕಂಬಳದಲ್ಲಿ.ಮತ್ತು ಆಲೆಮನೆ ಎಷ್ಟೇ ದೂರವಾದರೂ  ಪಾಪ ಅಪ್ಪ ನನಗೋಸ್ಕರ ಹೋಗಿ ತಂದುಕೊಡುತ್ತಿದ್ದರು . ಒಮ್ಮೊಮ್ಮೆ ನನ್ನ ಎತ್ತಿಕೊಂಡು ಹೋಗುತ್ತಿದ್ದುದು ನನಗೆ ನೆನಪಿದೆ ..!! 
ಒಮ್ಮೆ ನಾನು ಕಬ್ಬಿನ  ಹಾಲು ಬೇಕು ಎಂದು ಅಪ್ಪನ ಹತ್ತಿರ ಕೇಳಿದ್ದೆ ಸಂಜೆ ಕರೆದುಕೊಂಡು  ಹೋಗುವುದಾಗಿ ಮಾತು ಕೊಟ್ಟಿದ್ದರು . ಅಷ್ಟರಲ್ಲಿ ನಮ್ಮ ಮನೆ ಹಸು ಕರು ಹಾಕಲು ಒದ್ದಾಡುತ್ತಿತ್ತು ಡಾಕ್ಟರ ಬಂದು ಕರು ಹೊರಬರುವಷ್ಟರಲ್ಲಿ ರಾತ್ರಿ 10 ಗಂಟೆಯಾಗಿತ್ತು ಆದರೂ ಅಪ್ಪ ನನಗೋಸ್ಕರ 2 ಕಿಲೋಮೀಟರ್ ನಡೆದುಕೊಂಡು ಹೋಗಿ ಕ್ಯಾನ್ ತುಂಬಾ ಕಬ್ಬಿನ ಹಾಲು ತುಂಬಿಸಿಕೊಂಡು ಕೊಟ್ಟಿದ್ದರು . ಆ ದಿನ ನನಗಾದ ಖುಷಿ ಅಪ್ಪನ ಮುಖದಲ್ಲಿ ರಿಫ್ಲೆಕ್ಟ್ ಆಗಿತ್ತು . ಹೀಗೆ ಆಲೆಮನೆ ಎಂದರೆ ಇದೆಲ್ಲ ನೆನಪಿನಂಗಳದಿಂದ ಜಾರುತ್ತದೆ .
ಕ್ರಮೇಣ ಕಾಲ ಬದಲಾಯಿತು ಜನ ಕೂಡ ಚೇಂಜ್ ಕೇಳ್ತಾರಲ್ವಾ  ನಡೆದುಕೊಂಡು ಆ ಗದ್ದೆಯಲ್ಲಿ ಯಾರು ಹೋಗ್ತಾರೆ ಬೈಕ್ ನಲ್ಲಿ ಹೋಗಿ ತಂದು ಬಿಡ್ತೀವಿ ನೀವೆಲ್ಲ ಮನೇಲೆ ಇರಿ ಎನ್ನುವ ಕಾಲ ಬಂತು . ಆದರು ಆ ಕಂಬಳ ಮಾತ್ರ ನಡೆಯುತ್ತಲೇ ಇತ್ತು . ಸ್ವಲ್ಪ ವರ್ಷ ಕಳೆದ ನಂತರ ಮನೆಗೆ ಬಂದು "ಭಟ್ರೇ ಇವತ್ತು ನಮ್ಮನೆ ಆಲೇಮನೆ ಬರ್ರಿ "ಅನ್ನುತ್ತಿದ್ದವರು ಕಡಿಮೆಯಾದರು  . ಆದರು ನಾನು ನಮ್ಮನೆಗೆ ಯಾವಾಗಲು ಬರುವವರ ಮನೆಯ ಆಲೆಮನೆ ಯಾವಾಗ ಎಂದು ಮೊದಲೇ ಕೆಳುತ್ತಿದ್ದುದರಿಂದ ಕರೆಯುತ್ತಿದ್ದರು . ಈಗಲೂ ಮನೆಗೆ ಬಂದು ಕರೆಯುವವರಿದ್ದಾರೆ. ಜೊತೆಗೆ ಫೋನ್ ಮಾಡಿ ಬನ್ನಿ ಎಂದು ಕರೆಯುವವರು ಇದ್ದಾರೆ . ಅಪ್ಪ ಹೋಗಿ ಕ್ಯಾನ್ ತುಂಬಿಸಿಕೊಂಡು ಬರುವುದು ನಡೆಯುತ್ತಿದೆ . ಆದರೆ ನಾನು ಮಾತ್ರ ಮಿಸ್ಸಿಂಗ್ . 
ಈ ಲಂಡನ್ ನಲ್ಲಿ ಎಲ್ಲಿ ಹುಡುಕಿದರೂ  ಕಬ್ಬಿನ  ಹಾಲು ಸಿಗುವುದಿಲ್ಲ ಬೇರೆಲ್ಲ ಬಾಟಲ್ ಗಳು ಬೇಕಾದಷ್ಟು ಸಿಗುತ್ತದೆ . ಇಂತ ಸಮಯದಲ್ಲೇ ನಮ್ಮ ದೇಶ ನಮ್ಮ ಹಳ್ಳಿ ನಮ್ಮ ಮನೆ ಎಲ್ಲ ಬಹಳ ಕಾಡೋದು. ಬಹಳ ಮಿಸ್ ಮಾಡಿಕೊಳ್ಳೋದು  :(...:) ಅದಕ್ಕಾಗಿ ನಾನು ಈಗಲೇ ತೀರ್ಮಾನಿಸಿ ಬಿಟ್ಟಿದ್ದೇನೆ ಮುಂದಿನ ವರ್ಷದ ಆಲೆಮನೆಗೆ ಎಷ್ಟೇ ಕಷ್ಟ ಆದರೂ ನಮ್ಮುರಿನಲ್ಲಿರಬೇಕು ಎಂದು ..



Arpihta Harsha 
London 

Friday 25 January 2013

ವಿಮಾನದ ಅವಾಂತರ

ಈ ನನ್ನ ಲೇಖನವು 25/01/13 ರ ಅವಧಿಯಲ್ಲಿ ಪ್ರಕಟಗೊಂಡಿದೆ <a> "http://avadhimag.com/?p=75431"</a>


ಆ ದಿನ ಬೆಳಗಿನಿಂದ ಒಂದಲ್ಲ ಒಂದು ವಿಘ್ನ  ಅದರ ಮದ್ಯೆ ನನ್ನ ಪತಿ ಬೇರೆ ಎಡಗಣ್ಣು  ಏಕೋ ಹಾರುತ್ತಿದೆ ಎಂದು ಪದೇ ಪದೇ  ಹೇಳುತ್ತಿದ್ದರು ನಾನು  ಆಗುವುದೆಲ್ಲ ಒಳ್ಳೆಯದಕ್ಕೆ ಅನ್ನುವ ಜಾತಿ . ಎಡ ಕಣ್ಣು ಹಾರಿದರೆ ಒಳ್ಳೆಯದಂತೆ ಎಂದು ಸಮಾದಾನ ಮಾಡ ತೊಡಗಿದ್ದೆ . ಅದಕ್ಕೆ ಸರಿಯಾಗಿ ಬೆಂಗಳೂರಿನ ಬಿಸಿಲಿಗೆ ನನಗೆ ವಿಪರೀತ ಜ್ವರ ಬಂದುಬಿಟ್ಟಿತು . ಆದರೆ ಎಲ್ಲ ಬುಕ್ ಆಗಿತ್ತು ಕೇವಲ 15 ದಿನದ ರಜೆ ಗೋಸ್ಕರ  ಬರುವುದು ಮೊದಲೇ ತೀರ್ಮಾನವಾಗಿದ್ದರಿಂದ ರಿಟರ್ನ್ ಟಿಕೆಟ್ ಕೂಡ ಬುಕ್ ಆಗಿತ್ತು ಸರಿಯಾಗಿ 9 ಗಂಟೆಗೆ .
ನಾನು ಹೇಳಹೊರಟಿರುವುದು ರಜೆಗೆಂದು ಲಂಡನ್ ನಿಂದ ಇಂಡಿಯಾಕ್ಕೆ ಹೋಗಿ ಹಿಂದಿರುಗಿ ಬರುವ ದಿನ ಆದ ಘಟನೆ . ಕೊನೆ ಗಳಿಗೆಯಲ್ಲಿ ಎಲ್ಲ ಗಲಿಬಿಲಿ ಜೊತೆಗೆ ಗಡಿಬಿಡಿ . ಲಂಡನ್ ನಲ್ಲಿ ಔಷದಿಗಳು ಸಿಗುವುದಿಲ್ಲ ಅಪ್ಪಿತಪ್ಪಿ ಏನಾದರು ಹುಷಾರು  ತಪ್ಪಿದರೆ 15 ದಿನ ಬಿಟ್ಟು ಅಪಾಯಿಂಟ್ಮೆಂಟ್ ಸಿಕ್ಕುತ್ತದೆ ಅಷ್ಟರಲ್ಲಿ ಬಂದಿರುವ ಕಾಯಿಲೆ ಕಡಿಮೆ ಆಗಬೇಕು ಇಲ್ಲದಿದ್ದರೆ ಮನುಷ್ಯ ಮಾಯವಾಗಬೇಕು ಅಷ್ಟೇ . ಅದಕ್ಕೋಸ್ಕರ ಎಮರ್ಜೆನ್ಸಿ ಎಂದು ಜ್ವರ ತಲೆನೋವು ಕೆಮ್ಮು ತಂದಿ ಇಂತವುಗಳಿಗೆಲ್ಲ ಬೇಕಾದ ಕೆಲವೊಂದು ಮಾತ್ರೆ ಸಿರಪ್ ಗಳನ್ನೂ ಭಾರತದಿಂದ ಬರುವಾಗ ಸಾಮಾನ್ಯವಾಗಿ ಇಲ್ಲಿ ಬರುವವರೆಲ್ಲ ತಂದುಕೊಳ್ಳುತ್ತಾರೆ . 15 ದಿನ ಊರಿನಲ್ಲಿ ತಿರುಗಿ ಹಿಂದಿನ ದಿನ ಬೆಂಗಳೂರು ತಲುಪುವಾಗ ಸಂಜೆಯಾಗಿದ್ದರಿಂದ ಹೊರಡುವ ದಿನ ಬೆಳಿಗ್ಗೆ ಮುಖ್ಯವಾದವನ್ನೆಲ್ಲ ತೆಗೆದುಕೊಳ್ಳುವ ಸಲುವಾಗಿ ಅಂಗಡಿ ಸುತ್ತ ತೊಡಗಿದೆವು ಅದಕ್ಕೆ ಸರಿಯಾಗಿ ನನ್ನ ವಿಪರೀತ ಜ್ವರ ಇನ್ನಷ್ಟು ಹೆದರಿಸಿತ್ತು ಗಂಟೆಗಟ್ಟಲೆ ಡಾಕ್ಟರ ಹತ್ತಿರ ಕ್ಯು ನಿಂತು ಕೊನೆಗೂ ಅಲ್ಲಿಂದ ಹೊರಬಂದೆವು . ಅಂತು ಸಂಜೆ 5 ಗಂಟೆಗೆ ಮನೆಯಿಂದ ಹೊರಟದ್ದಾಯಿತು ಕ್ಯಾಬ್ ಹತ್ತಿ ಇನ್ನೇನು ಜಯನಗರ ದಾಟುತ್ತಿದ್ದಂತೆ ಶುರುವಾಯಿತು ನಮ್ಮ ಮಾಮೂಲಿ ಟ್ರಾಫಿಕ್ ಜಾಮ್ ಮುಂದೆ ನೋಡಿದರೆ ಸಾವಿರಗಟ್ಟಲೆ ವಾಹನಗಳು . ಸುಮಾರು ಒಂದು ತಾಸು ನಿಂತಲ್ಲೇ ನಿಲ್ಲುವ ಪರಿಸ್ಥಿತಿ ನಮ್ಮದೊಂದೇ ಅಲ್ಲ ಎಲ್ಲರದ್ದೂ .  ಸರಿ ಮತ್ತೆ ಹೇಗೋ ಅಲ್ಲಿಂದ ಬಿಡುಗಡೆ ಸಿಕ್ಕಿತು ಎನ್ನುವಷ್ಟರಲ್ಲಿ ಮತ್ತೊಂದು ಸಿಗ್ನಲ್ ಹೀಗೆ ಬೆಂಗಳೂರಿನ ವಿಮಾನ ಯಾನದ ಹತ್ತಿರ ಬರುವಷ್ಟರಲ್ಲಿ 8.30.  ಕ್ಯಾಬ್ ಡ್ರೈವರ್ ಗೆ ಒಂದು ಸಲಾಮ್ ಹೊಡೆಯಲೇಬೇಕು ನಮ್ಮ ಗೋಳು ನೋಡಿ ಸಾಧ್ಯ ವಾದ ಕಡೆಗಳಲ್ಲೆಲ್ಲ ನುಸುಳಿಸಿದ . 
ಇನ್ನೇನು ಏರ್ಪೋರ್ಟ್ ಸೇರಿ ಆಯಿತು ಇನ್ನೇನು ಸಮಸ್ಯೆ ಇರಲಿಕ್ಕಿಲ್ಲ ಎಂದು ನೋಡಿದರೆ ಅಲ್ಲೂ ಉದ್ದನೆಯ ಕ್ಯೂ  . ಹೇಳಿಕೇಳಿ ಏರ್ಪೋರ್ಟ್ ತಳ್ಳಿಕೊಂಡು ನುಸುಳ ಲಾದೀತೇ? ಕೊನೆಗೆ ಅವರೇ ಅನೌನ್ಸ್ ಮಾಡಿದರು ಬೆಂಗಳೂರಿನಿಂದ ಮುಂಬೈ -ಲಂಡನ್ ಹೋಗುವವರು ತಕ್ಷಣ ಮುಂದೆ ಬನ್ನಿ ಫ್ಲೈಟ್ ಬೋರ್ಡಿಂಗ್ ಆಗಿದೆ ಎಂದು . ಬ್ಯಾಗ್ ಚೆಕ್ ಇನ್ ಆಗುತ್ತಿದ್ದಂತೆ ಓಡಿದೆವು  . ಅಂತು ಫ್ಲೈಟ್ ಸಿಕ್ಕಿತು ಎಂಬ ಕುಶಿ . ನನಗು ಟ್ರಾವೆಲ್ ಗು ಬಹಳ ದುಷ್ಮನಿ ಅನ್ನಿಸುತ್ತೆ ಯಾವಾಗ್ ಎಲ್ಲಿ ಹೊರಟರೂ  ಏನಾದರೊಂದು ಆಗೇ ಆಗುತ್ತದೆ . ಬಸ್ ಆದರೆ ಪಂಚರ್ ಆಗುವುದು ಬಹಳ :)

'ಅಬ್ಬ ಅಂತು ಸೇಫ್ ಆಗಿ ಸೇರಿದೆವು ಇನ್ನು ಏನು ಸಮಸ್ಯೆ ಇಲ್ಲ 'ಎಂದರು ನನ್ನವರು . ನಾನು 'ಏನು ಸೇಫ್ ಇನ್ನು ಇದೆ ಮುಂಬೈ ಗೆ ಹೋಗಿ ಅಲ್ಲಿ ಫ್ಲೈಟ್ ಚೇಂಜ್ ಮಾಡುವುದು ಒಟ್ಟಾರೆ ನಾವು ಲಂಡನ್ ಹೋಗಿ ಸೇರಿದ ಮೇಲೇನೆ ಸೇಫ್ ಆದೆವು ಅಂದುಕೊಬೇಕು 'ಅಂತ ಯಾವಾಗಿನ ಹಾಗೆ ಮತ್ತೆ ಕೊರೆತ ಪ್ರಾರಂಭಿಸಿದೆ . ಹ್ಮ್ಮ್ ಈಗ ಸುಮ್ಮನಿರು ಫ್ಲೈಟ್ ಹೊರಟಿತು ಅಂದರು . ನಾನು ಹೊರಗೆ ಕಾಣುತ್ತಿದ್ದ ನಮ್ಮ ಬೆಂಗಳೂರನ್ನು ಬಿಟ್ಟು ಹೋಗಬೇಕಾದ ನೋವಿನಲ್ಲಿ ಕಣ್ಣಲ್ಲಿ ನೀವು ತುಂಬಿಕೊಂಡು ಹೊರ ನೋಡುತ್ತಿದ್ದೆ ಅದಕ್ಕೋಸ್ಕರವೇ ನಾನು ಯಾವಾಗಲು ವಿಂಡೋ ಸೀಟ್ ಅರಿಸಿಕೊಳ್ಳೋದು  . ಊರು ಸೇರುವಾಗ ಆಗುವ ಕುಶಿ ಮತ್ತು ಹೊರಡುವಾಗ ಆಗುವ ಆ ನೋವು ಎರಡನ್ನು ನಾನು ಅನುಭವಿಸಬೇಕು ಎಂದು ಯಾವಾಗಲು ಇಷ್ಟಪಡುವವಳು . ಜೊತೆಗೆ ಮೇಲೆ ಹೋಗುತ್ತಿದ್ದಂತೆ ಬೆಳಗಿನ ಜಾವದಲ್ಲಿ ಆ ಸೂರ್ಯನ ಕೆಂಪು ಎಷ್ಟು ಚಂದವೆಂದರೆ 2 ಕಣ್ಣು ಸಾಲದು ನಾನು ಒಬ್ಬಳೇ ಹೋಗುವಾಗಲೂ  ವಿಂಡೋ ಸರಿಸಿ ಸರಿಸಿ ಪಕ್ಕದವರು ನೋಡಲಿ ಎಂದು ವಾಹ್ ಎಂಬ ಭಾವ ನೀಡುತ್ತೇನೆ 5-6 ಭಾರಿ ಪ್ರಯಾಣಿಸಿದರು ಪಕ್ಕ ಕುಳಿತವರು ಹೊಸಬರಾಗಿರುತ್ತರಲ್ಲ ನೋಡಲಿ ಎಂಬ ಉದ್ದೇಶ ನನ್ನದು .ಅವರು ಪಾಪ ಇವಳು ಇದೇ  ಮೊದಲು ವಿಮಾನ ಹತ್ತಿರಬೇಕು ಎನ್ನುವ ದೃಷ್ಟಿ ಬೀರುತಾರೆ .ಹಾಗೆ ನಮ್ಮ ಬೆಂಗಳೂರು ದೀಪಗಳಿಂದ ಜಗಜಗಿಸುತ್ತಿದ್ದನ್ನು ನೋಡುತ್ತಾ ಕುಳಿತಿದ್ದೆ .ಇನ್ನೇನು ವಿಮಾನ ಹೊರಟೇ  ಬಿಟ್ಟಿತು ನಮ್ಮ ಬೆಂಗಳೂರು ಕ್ಷಣಮಾತ್ರ ದಲ್ಲಿ ಮಾಯ ಎಂಬ ನಿರೀಕ್ಷೆಯಲ್ಲಿ ಮೊದಲೇ ಇದ್ದ ದೊಡ್ಡ ಕಣ್ಣನ್ನು ಇನ್ನಷ್ಟು ಅಗಲಿಸಿ ನೋಡುತ್ತಿದ್ದೆ ಅಷ್ಟರಲ್ಲಿ ಡಗ್....  ಡಗ್ ... ಡಗ್  ಎಂದು ಇಡಿ  ಫ್ಲೈಟ್ ಅಲ್ಲಾಡುತ್ತಿದೆ ಒಳಗಿರುವವರೆಲ್ಲ ಗಲಿಬಿಲಿಗೊಂಡರು . ನಾನು ದೊಡ್ಡದಾಗಿ ಬಿಟ್ಟಿದ್ದ ಕಣ್ಣನ್ನು ಒಂದೇ ಕ್ಷಣಕ್ಕೆ ಮುಚ್ಚಿಬಿಟ್ಟೆ . ಇನ್ನು ಕಣ್ಣು ತೆರೆಯಲಾರೆ ಅಂತ ಕೂಡ ಒಂದು ಕ್ಷಣದಲ್ಲಿ ಅನ್ನಿಸಿಬಿಟ್ಟಿತು .  
ಆಗಿದ್ದಿಷ್ಟೆ ಪೈಲೆಟ್ ಹೊಸಬ ಇರಬೇಕು ಸ್ವಲ್ಪ ಆಯತಪ್ಪಿದೆ ಇನ್ನೇನು ಮೇಲೆ ಹಾರಬೇಕೆನ್ನುವಷ್ಟರಲ್ಲಿ ಅದು ಮತ್ತೆ ನೆಲಕ್ಕೆ ತಾಗಿಬಿಟ್ಟಿದೆ. ಇದೇ ವಿಮಾನದಲ್ಲಿ ಎಲ್ಲರೂ  ಜೋರಾಗಿ ಮಾತನಾಡಲು ಪ್ರಾರಂಭಿಸಿದರು ಕೆಲವರು ಮನೆಗೂ ಫೋನ್ ಮಾಡಿದರು ಹೀಗಾಯ್ತು ಆದರೂ  ನಮಗೇನು ಆಗಲಿಲ್ಲ ಎಂದು . ನಾನು ಫೋನ್ ಮಾಡೋಣ ಎಂದುಕೊಂಡೆ  ಆದರೆ ಯಾರಿಗೆ ಅಂತ ಮಾಡಲಿ ಬೇಕಾದವರು ಜೊತೆಗೇ  ಇದ್ದಾರೆ  ಅಂತು ಟೆಕ್ನಿಕಲ್ ಪ್ರಾಬ್ಲಮ್ ಇನ್ನು ಕೆಲವೇ ನಿಮಿಷಗಳಲ್ಲಿ ಹೊರಡುತ್ತದೆ ಎಂದರು . ಒಂದು ಗಂಟೆಯ ನಂತರ ಹೊರಟಿತು . ನಮಗೆ ಅಲ್ಲಿಂದ ಮುಂಬೈ ಸೇರಲು 1 ಗಂಟೆ ತಡವಾಯಿತು ಆದರೂ  ಏನೂ  ತೊಂದರೆ ಆಗದೆ ಲಂಡನ್ ಸೇಫ್ ಆಗಿ ಸೇರಿದೆವು . 



Arpitha Harsha 
london

Monday 21 January 2013

ಬೆಳ್ಳಿ ಮಂಜು


Published in ekanasu ":http://www.ekanasu.com/2013/01/blog-post_3259.html

ಸುತ್ತ ಮುತ್ತ ಎಲ್ಲಿ ನೋಡೇ 
ಬರೀ ಮಂಜು ಮಂಜು 
ಬಿಳಿಯರ ನಾಡಿನಲ್ಲಿ 
ಎಲ್ಲೆಡೆ ಹರಡಿಹುದು ಬಿಳಿ ಬೆಳ್ಳಿ ಮಂಜು 

ಹಸಿರು ಗಿಡವು ಹೊತ್ತಂತಿಹುದು 
ಬಿಳಿ ಮಂಜು ಹೂವ !
ನೋಡಲೆಂದು  ಹತ್ತಿರ ಹೋಗೆ ಬೀಳುವುದು 
ಮೈಯ ಮೇಲೆ ಮಂಜಿನ ಕಲರವ 

ಸುಂದರವೆಂದು ಕೈಯಲ್ಲಿ ಹಿಡಿಯೆ 
ಬರೀ ಕೆಲವೇ ನಿಮಿಷಗಳು 
ನೋಡನೋಡುತ್ತಿದ್ದ ಹಾಗೆ ಕರಗಿಬಿಡು ವುದು ಈ ಬೆಳ್ಳಿ ಮಂಜು 

ಬೆರಗಾಗಲೇ ಬೇಕು ಸೃಷ್ಟಿಕರ್ತನ  
ಈ ಸೊಬಗನೋಡಿ 
ಇದಕೆ ಇಹುದೆ ಸಾಟಿ ಬೇರೆ ಈ ಜಗತ್ತಿನಲ್ಲಿ !!







ಅರ್ಪಿತಾ ಹರ್ಷ 
ಲಂಡನ್ 

Friday 4 January 2013

ಪ್ರಾಮಾಣಿಕತೆಗೆ ಒಂದು ಸಲಾಂ


ಈ ನನ್ನ ಲೇಖನವು 11/1/13 ವಿಜಯ ನೆಕ್ಸ್ಟ್ ನಲ್ಲಿ ಪ್ರಕಟಗೊಂಡಿದೆ <a> http://www.vijayanextepaper.com/Details.aspx?id=643&boxid=1961916<a/>




ಈಗ 3 ತಿಂಗಳ ಹಿಂದೊಮ್ಮೆ  ಲಂಡನ್ ನಿಂದ ಭಾರತಕ್ಕೆ ಹೋಗಿದ್ದೆವು . ನಾನು ಸ್ವಲ್ಪ ಮುಂಚಿತವಾಗಿ ಭಾರತ ಸೇರಿದ್ದೆ . ನನ್ನ ಪತಿ ಗೆ ಕೇವಲ 15 ದಿನ ರಜಾ ಸಿಕ್ಕಿದ್ದರಿಂದ ಸ್ವಲ್ಪ ತಡವಾಗಿ ಬಂದರು . ಬೆಂಗಳೂರಿಗೆ ಬಂದು ಇಳಿಯುವಾಗ ಸುಮಾರು 4 ಗಂಟೆ ಆಗಿತ್ತು .ಏರ್ಪೋರ್ಟ್ ನಲ್ಲಿ ಸಿಗುವ ಕ್ಯಾಬ್ ನಲ್ಲಿ ಮನೆಗೆ ಬರಲು ನಿರ್ಧರಿಸಿದ್ದರಿಂದ ಕ್ಯಾಬ್ ಡ್ರೈವರ್ ಹತ್ತಿರ ಇರುವ ಫೋನ್ ನಿಂದ ನನಗೆ ಕಾಲ್ ಮಾಡಿ ಕ್ಯಾಬ್ ಸಿಕ್ಕಿರುವ ಬಗ್ಗೆ ತಿಳಿಸಿದ್ದರು . ಇದಾದ ಸುಮಾರು 2 ತಾಸಿನ ನಂತರ ಮನೆ ತಲುಪಿದರು . ತಲುಪುದ್ದಿದ್ದಂತೆ ಅಲ್ಲಿ ಕಾಯುತ್ತಿದ್ದ ಎಲ್ಲರನ್ನು ನೋಡಿದ ಕುಶಿಯಲ್ಲಿ ( 1 ವರೆ ವರ್ಷದ ನಂತರ ಭಾರತಕ್ಕೆ ಬಂದಿದ್ದ ಕುಶಿಯಲ್ಲಿ ) ಒಳ ಬಂದರು . ಕಾರಿನ ಹಿಂದೆ ಡಿಕ್ಕಿಯಲ್ಲಿ ಇದ್ದ 2 ಬ್ಯಾಗ್ ಅನ್ನು ಡ್ರೈವರ್ ಇಳಿಸಿ ಕೊಟ್ಟು ಹೋದ. ನಂತರ ಸುಮಾರು 2 ತಾಸು ಮಾತನಾಡುತ್ತ ಕುಳಿತಿದ್ದೆವು. 
ಆಗ ನನ್ನ ಮೊಬೈಲ್ ಗೆ ಒಂದು ಫೋನ್ ಬಂತು ಮೊದಲು ಈ ನಂಬರ್ ನಿಂದಲೇ ನನ್ನ ಪತಿ ನನಗೆ ಫೋನ್ ಮಾಡಿದ್ದರಿಂದ ಇದು ಡ್ರೈವರ್ ನಂಬರ್ ಎಂದು ತಿಳಿಯಿತು .ಫೋನ್ ರಿಸೀವ್ ಮಾಡುತ್ತಿದ್ದಂತೆ ಆತ  ಮೇಡಂ ಈಗ ಲಂಡನ್ ನಿಂದ ನನ್ನ ಕ್ಯಾಬ್ ನಲ್ಲಿ ಬಂದರಲ್ಲ ಅವರದ್ದೊಂದು ಬ್ಯಾಗ್ ನನ್ನ ಕಾರ್ ನಲ್ಲಿಯೇ ಇದೆ ಎಂದರು. ಆಗ ನೆನಪಿಗೆ ಬಂದದ್ದು ಲ್ಯಾಪ್ ಟಾಪ್, ಕ್ಯಾಮರ ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ವೀಸಾ ಪಾಸ್ಪೋರ್ಟ್. 
ಎಲ್ಲ ಆ ಬ್ಯಾಗ್ ನಲ್ಲಿಯೇ ಇತ್ತು ಅದು ಈಗ ಕಾರ್ ನಲ್ಲೆ ಉಳಿದುಹೋಗಿದೆ . ಆಗಲೇ ಸಮಯ 7 ಗಂಟೆ ಆಗಿದ್ದರಿಂದ ಮತ್ತೆ ಏರ್ಪೋರ್ಟ್ ಗೆ ಹೋಗಿ ತರುವುದು ಕಷ್ಟದ ಕೆಲಸ ಬೇರೆ. ಕ್ಯಾಬ್ ಡ್ರೈವರ್ ಹತ್ತಿರ ದಯವಿಟ್ಟು ನೀವೇ ತಂದುಕೊಡಿ ಎಂದು ಕೇಳಿಕೊಂಡೆವು ಆತ  ತಂದುಕೊಡಲು ಒಪ್ಪಿಕೊಂಡ ಸುಮಾರು 2 ತಾಸಿನ ನಂತರ ನಮಗೆ ಆ ಬ್ಯಾಗ್ ಸಿಕ್ಕಿತು . 
ಆ ಡ್ರೈವರ್ ಬ್ಯಾಗ್ ನಲ್ಲಿ ಏನಿದೆ ಎಂದು ಕೂಡ ತೆಗೆದು ನೋಡಿರಲಿಲ್ಲ . ಇಂದಿನ ಕಾಲದಲ್ಲೂ ಪ್ರಾಮಾಣಿಕರು ಇರುವುದನ್ನು ನೋಡಿ ಕುಶಿಯಾಯಿತು. ಅದಲ್ಲದೆ ಇನ್ನು 15 ದಿನದಲ್ಲಿ ವಾಪಾಸ್ ಹೋಗಲು ರಿಟರ್ನ್ ಟಿಕೆಟ್ ಬುಕ್ ಆಗಿತ್ತು ಜೊತೆಗೆ ವೀಸಾ ಮಾಡಿಸುವುದು ಬಹಳ ಕಷ್ಟದ ಕೆಲಸ 15 ದಿನದಲ್ಲಿ ಹೊಸದಾಗಿ ಪಾಸ್ಪೋರ್ಟ್ ಮತ್ತು ವೀಸಾ ಮಾಡಿಸುವುದು ಸಾಧ್ಯವೇ ಆಗುತ್ತಿರಲ್ಲಿಲ್ಲ . ಜೊತೆಗೆ ಆತ ಫೋನ್ ಮಾಡದೆ ಇರುತ್ತಿದ್ದರೆ ಅಥವಾ ನಮ್ಮ ಫೋನ್ ರಿಸೀವ್ ಮಾಡದೆ ಇರುತ್ತಿದ್ದರೆ ನಮಗೆ ನಮ್ಮ ಲ್ಯಾಪ್ ಟಾಪ್ , ಕ್ಯಾಮರ, ಮತ್ತು ವೀಸಾ ಪಾಸ್ಪೋರ್ಟ್ ಯಾವುದೂ  ಸಿಗುತ್ತಲೇ ಇರುತ್ತಿರಲಿಲ್ಲ.  
ಆತನ ಪ್ರಾಮಾಣಿಕತೆಗೆ ನನ್ನ ಕಡೆಯಿಂದೊಂದು ಸಲಾಂ .


ಅರ್ಪಿತಾ ಹರ್ಷ 
ಲಂಡನ್ 

Wednesday 2 January 2013

ಮೊದಲ ವಿಮಾನ ಯಾನ



ಈಗ ಎರಡು ವರ್ಷದ ಹಿಂದಿನ ಕಥೆ . ನಮ್ಮ ಪ್ರಯಾಣ ಹೊರಟಿದ್ದು ಲಂಡನ್ ನ ಕಡೆಗೆ . ಮದುವೆಯಾಗಿ ಒಂದು ವಾರದ ನಂತರ ನನ್ನ ಪತಿ ಲಂಡನ್ ಗೆ ಹೊರಟಿದ್ದರು ನನಗೆ ವೀಸಾ ಬರುವುದು ವಿಳಂಬವಾದ ಕಾರಣ ಇನ್ನೊಂದು ವಾರ ತಡವಾಗಿ ಹೊರಡಬೇಕಾಯಿತು. ಮೊದಲ ಭಾರಿ ವಿಮಾನ ಪ್ರಯಾಣ, ಜೊತೆಗೆ ಒಬ್ಬಳೇ ಬೇರೆ, ಅದೂ ವಿದೇಶಕ್ಕೆ , ನನ್ನ ಅಳುಕಿಗೆ ಇಷ್ಟೆಲ್ಲಾ ಕಾರಣಗಳು ಸಾಥ್ ನೀಡುತ್ತಿತ್ತು . ನನ್ನ ಕಳುಹಿಸಲು ಬೆಂಗಳೂರಿನ ನಮ್ಮ ಮನೆಗೆ ಬಂದ ಅಪ್ಪ ಅಮ್ಮ ಕಣ್ಣೀರು ಹಾಕಿದರೂ ನನಗೆ ಹೆದರಿಕೆಯಿಂದ ಭಯವೊಂದನ್ನು ಬಿಟ್ಟು ಮತ್ತಾವ ಭಾವನೆಯು ಕೂಡ ಬರಲಿಲ್ಲ . 9 ಗಂಟೆಗೆ ಫ್ಲೈಟ್ ಇದ್ದದ್ದರಿಂದ 6 ಗಂಟೆಗೆಲ್ಲ ಮನೆಯಿಂದ ಹೊರಟೆವು . ಬೆಂಗಳೂರಿನ ಟ್ರಾಫಿಕ್ ಅನ್ನು ದಾಟಿ ಏರ್ಪೋರ್ಟ್ ಗೆ ಬಂದು ತಲುಪುವಷ್ಟರಲ್ಲಿ 8 ಗಂಟೆಯಾಗಿತ್ತು ಕಾರಿನಲ್ಲಿ ಕುಳಿತ ನಂತರ ಮೊದಲ ಭಾರಿ ಹೋಗುತ್ತಿದ್ದೇನೆ ಎಂಬ ಟೆನ್ಶನ್ ಗಿಂತ ಫ್ಲೈಟ್ ಬರುವ ಮೊದಲು ಹೋಗಲು ಸಾಧ್ಯವಾ ಎಂಬುದೇ ದೊಡ್ಡ ಚಿಂತೆಯಾಗಿತ್ತು . 
ಅಂತು ಏರ್ಪೋರ್ಟ್  ತಲುಪುವಾಗ 8 ಗಂಟೆಯಾಗಿತ್ತು ನನ್ನನ್ನು ಕಲಿಸಲು ಬಂದಿದ್ದ ಅಣ್ಣ ಲೇಟ್ ಆಯಿತು ಎಂದು ನನಗಿಂತ ಜಾಸ್ತಿ ಗಡಿಬಿಡಿ ಮಾಡಿ ಟ್ರಾಲಿ ತಂದು ನನ್ನ ಬ್ಯಾಗ್ ಅದರ ಮೇಲಿತ್ತು ಜೊತೆಗೆ ನನ್ನನ್ನು ಒಳಗೆ ಕಳುಹಿಸಿಬಿಟ್ಟ . ಒಮ್ಮೆಯೇ ಒಳಹೊಗುತ್ತಿದ್ದಂತೆ ಕಕ್ಕಾಬಿಕ್ಕಿಯಾದರು ತೋರಿಸಿಕೊಲ್ಲದೇ ಹೋಗಿ ಚೆಕ್ ಇನ್ ಮಾಡಿ ಆಯಿತು ನಂತರ ಸೆಕ್ಯುರಿಟಿ ಚೆಕ್ ಕೂಡ ಆದಾಗ ಮನಸ್ಸಿಗೆ ನಿರಾಳವೆನಿಸಿತು ಒಳಗೆ ಹೋಗುವಷ್ಟರಲ್ಲಿ ನಾನು ಹೋಗಬೇಕಾಗಿದ್ದ ಜೆಟ್ ಏರ್ವೇಸ್ ಫ್ಲೈಟ್ ಬಂದಿತ್ತು ಅನೌನ್ಸ್ ಮಾಡಿದರು ಒಳಗೆ ಹೋಗಿ ನನ್ನ ಸೀಟ್ ನಲ್ಲಿ ಕುಳಿತನಂತರ ಸ್ವಲ್ಪ ಕುಶಿಯಾಯಿತು ಅಬ್ಬ ಅಂತು ಸೇಫ್ ಆಗಿ ವಿಮಾನ ಸೇರಿದೆ ಎಂಬ ಕುಶಿ. ಸ್ವಲ್ಪ ಹೊತ್ತಿನಲ್ಲೇ ಮುಂಬೈ ಬಂದಿತ್ತು ಅಲ್ಲಿ ಇಳಿಯುವಾಗ ಗಂಟೆ 12.30 ನನಗೆ ಸರಿಯಾಗಿ 1.30 ಕ್ಕೆ ಇನ್ನೊಂದು ಫ್ಲೈಟ್ ಇತ್ತು ಸರಿ ಇನ್ನು 1 ಗಂಟೆ ಸಮಯ ಇದೆಯಲ್ಲ ಎಂದು ನಿಧಾನವಾಗೆ ಸ್ವಲ್ಪ ಆಕಡೆ ಈಕಡೆ ನೋಡಿ ಹೊರಟೆ ಆಗ ಗೊತ್ತಾಯಿತು ನಾನು ಬಸ್ ನ ಮೂಲಕ ಇನ್ನೊಂದು ಟರ್ಮಿನಲ್ ಗೆ ಹೋಗಿ ಅಲ್ಲಿ ಸೆಕ್ಯುರಿಟಿ ಚೆಕ್ ಮುಗಿಸಿ ಇನ್ನೊಂದು ಫ್ಲೈಟ್ ಒಳಗೆ ಹೋಗಬೇಕೆಂದು .
ಏರ್ಪೋರ್ಟ್ ನ ಒಳಗೆ ಒಂದು ಟರ್ಮಿನಲ್ ನಿಂದ ಇನ್ನೊಂದು ಟರ್ಮಿನಲ್ ಗೆ ಹೋಗಲು ಬಸ್ ವ್ಯವಸ್ಥೆ ಇರುತ್ತದೆ ಅದನ್ನು ಹತ್ತಿ ಅಲ್ಲಿ ಸೇರುವಷ್ಟರಲ್ಲಿ ಅರ್ಧಗಂಟೆ ಹಿಡಿಯಿತು ಅಲ್ಲಿ ಹೋಗಿ ನೋಡಿದರೆ ರೈಲ್ವೆ ಸ್ಟೇಷನ್ ನಲ್ಲಿ ಇರುವಂತೆ ಜನ ಮುಗಿಬಿದ್ದಿದ್ದಾರೆ . ನನಗೆ ಎಲ್ಲಿ ಹೋಗಬೇಕು ಏನು ಮಾಡಬೇಕು ಒಂದು ಗೊತ್ತಾಗಲಿಲ್ಲ ಅಲ್ಲಿದ್ದ ಒಬ್ಬರನ್ನು ಕೇಳಿದೆ ಅವರು ಲಂಡನ್ ಗೆ ಹೋಗುವವರು ಹೀಗೆ ಹೋಗಬೇಕು ಎಂದರು ನಾನು ಕ್ಯೂ ನಲ್ಲಿ ಎಲ್ಲರನ್ನು ಕೇಳುತ್ತ ಮುಂದೆ ಮುಂದೆ ಹೋದೆ ಅಷ್ಟರಲ್ಲಿ ನನ್ನ ತಿಕೆತ್ನಲ್ಲಿದ್ದ ಗೇಟ್ ನಂಬರ್ ನೋಡಿಕೊಂಡೆ ತಕ್ಷಣ ಓದಬಹುದು ತಡವಾಗಲಿಕ್ಕಿಲ್ಲ ಎಂದು ಅದರಲ್ಲಿ ಗೇಟ್ ನಂಬರ್ 14 ಎಂದಿತ್ತು ನಾನು ಸೆಕ್ಯುರಿಟಿ ಚೆಕ್ ಮುಗಿಸಿ ಗೇಟ್ ನಂಬರ್ 14 ಕ್ಕೆ ಅಂದರೆ 1 ರಿಂದ 13 ರ ಗೇಟ್ ದಾಟಿ ಹೋಗಬೇಕು ಓಡಿ ಹೋದೆ 14 ಕ್ಕೆ ಹೋಗಿ ಕೇಳಿದರೆ ಸಾರೀ ಗೇಟ್ ನಂಬರ್ ಚೇಂಜ್ ಮಾಡಲಾಗಿದೆ ಅದು 8 ರಲ್ಲಿ ಬಂದಿದೆ ಅಲ್ಲಿ ಹೋಗಿ ಇನ್ನು 5 ನಿಮಿಶ್ ಮಾತ್ರವಿದೆ ಎಂದರು ಮತ್ತೆ ವಾಪಾಸ್ ಓಡಿ  ಬರುವಷ್ಟರಲ್ಲಿ ಸಾಕಾಗಿ ಹೋಗಿತ್ತು . ಕೊನೆಯಲ್ಲಿ ಅಂತು ಬಂದು ತಲುಪಿದೆ ಕುಳಿತ ತಕ್ಷಣ ಅಂದರೆ ಒಂದು 5 ನಿಮಿಷದಲ್ಲೇ ಫ್ಲೈಟ್ ಹೊರಡುತ್ತದೆ ಎಂದು ಅನೌನ್ಸ್ ಮಾಡಿದರು ಅಬ್ಬ ಇನ್ನು ತೊಂದರೆ ಇಲ್ಲ 7-8 ತಾಸು ಆರಾಮವಾಗಿ ಕುಳಿತುಕೊಳ್ಳಬಹುದು ಎಂದು ಕುಳಿತೆ. 
ಕುಳಿತ ತಕ್ಷಣ ಅಷ್ಟೊತ್ತು ಆಗಿರುವುದನ್ನೆಲ್ಲ ಮೆಲುಕು ಹಾಕಲು ಪ್ರಾರಂಭಿಸಿದೆ ಆಗ ನೆನಪಾಯಿತು ನಾನು ಬೆಂಗಳೂರಿನಲ್ಲಿ ಕಾರ್ ಡ್ರೈವರ್ ಗೆ ದುಡ್ಡು ಕೊಡದೆ ಬಂದುಬಿಟ್ಟೆ ಎಂಬುದು . ಮನೆಯಿಂದ ಹೊರಡುವಾಗ ಚಿಲ್ಲರೆ ಸಮೇತ ಎಷ್ಟು ಕೊಡಬೇಕು ಎಂದು ಅದಿಷ್ಟನ್ನೇ ಎದುರಿಗೆ ಸಿಗುವಂತೆ ಪರ್ಸ್ ನಲ್ಲಿ ಇಟ್ಟುಕೊಂಡು ಹೊರಟಿದ್ದೆ ಆದರೆ ಆ ಗಡಿಬಿಡಿಯಲ್ಲಿ ಕೊಡುವುದೇ ಮರೆತುಬಿಟ್ಟಿದ್ದೆ.   ಲಂಡನ್ ತಲುಪಿದ ನಂತರ ಕಾಯಿತ್ತಿದ್ದ ನನ್ನ ಪತಿಯೊಂದಿಗೆ ಮೊದಲು ಹೇಳಿದ್ದೇ ನಾನು ಡ್ರೈವರ್ ಗೆ ದುಡ್ಡು ಕೊಟ್ಟೆ ಬಂದಿಲ್ಲ ಎಂದು ಅಷ್ಟರಲ್ಲಾಗಲೇ ಅದು ಅವರಿಗೂ ಗೊತ್ತಾಗಿತ್ತು ಅಣ್ಣನ ಹತ್ತಿರ ಅಷ್ಟು ದುಡ್ಡು ಇರಲಿಲ್ಲವಾದ್ದರಿಂದ ಮತ್ತೆ ನಮ್ಮ ಮನೆಗೆ ಹೋಗಿ ಕೊಡಬೇಕಾಗಿ ಬಂತು ಎಂದು ಹೇಳಿದರು .ಕೇಳಿ ನಗು ಬಂತು ಹೇಗಿತ್ತು ನನ್ನ ಮೊದಲ ವಿಮಾನ ಯಾನ .

ಅರ್ಪಿತಾ ಹರ್ಷ 
ಲಂಡನ್ 

ನ್ಯೂ ಇಯರ್ ರೆಸಲ್ಯೂಶನ್

ಈ ನನ್ನ ಅಭಿಪ್ರಾಯವು ಉದಯವಾಣಿಯಲ್ಲಿ ಪ್ರಕಟಗೊಂಡಿದೆ (ಉದಯವಾಣಿಯ ಹೊಸವರ್ಷದ ರೆಸಲ್ಯೂಶನ್ ಬಗ್ಗೆ ಅಭಿಪ್ರಾಯದಲ್ಲಿ   

ಪ್ರಕಟ )



ಹೊಸ ವರ್ಷ ಹೊಸತನವನ್ನು ನೀಡಲು ಒಂದಿಷ್ಟು ರೆಸಲ್ಯುಶನ್ಗಳನ್ನು ಸಿದ್ಧ ಮಾಡಿಕೊಂದಾಗಿದೆ.  ಅವುಗಳಲ್ಲಿ ಮೊತ್ತ 

ಮೊದಲಿಗೆ ಮಾಡಬೇಕು ಎಂದುಕೊಂಡಿರುವುದು ಇಂದು ಮಾಡುವ ಕೆಲಸ ನಾಳೆ ಮಾಡಿದರಾಯ್ತು ಎಂದುಕೊಂಡು 

ಮುಂದೂಡದೆ ಇರಲು ಒಂದು ಟೈಮ್ ಟೇಬಲ್ ತಯಾರಿಸಿಕೊಂಡು ಪ್ರತಿದಿನ ಇಂದಿನ ಸಮಯ ವ್ಯರ್ಥವಾಗಲಿಲ್ಲ 

ಎಂದೆನಿಸುವ ಮಟ್ಟಿಗೆ  ಒಂದಾದರೂ  ಒಳ್ಳೆಯ ಕೆಲಸಗಳನ್ನು ಮಾಡಬೇಕು ಜೊತೆಗೆ ಸದಾ ಚಟುವಟಿಕೆಯಿಂದ 

ಇರಬೇಕು ಎಂದು ತೀರ್ಮಾನಿಸಿದ್ದೇನೆ .




ಅರ್ಪಿತಾ ಹರ್ಷ