Friday 9 May 2014

ಕಲ್ಲು ಬರ್ಫಿ !

Got Published in Vijayanext 09/05/2014



ಈ ಅಡುಗೆ ಮಾಡುವುದು ಒಂದು ಕಲೆ.ಇದರಲ್ಲಿ ಆಸಕ್ತಿ ಬೆಳೆದುಬಿಟ್ಟಿತು ಎಂದರೆ ಹೊರಬರುವುದು ಅಷ್ಟೇ ಕಷ್ಟ. ಹಾಗೆ ನನಗೂ ಕೂಡ ಅಡುಗೆ ಮಾಡುವುದು ಮತ್ತು ತಿನ್ನುವುದು ಎಂದರೆ ಏನೋ ಒಂದು ರೀತಿಯ ಸಂಭ್ರಮ.ಪ್ರತಿ ಭಾರಿ ಏನಾದರು ಹೊಸದಾಗಿ ಮಾಡಬೇಕು ಎನಿಸಿದಾಗ ಯೂ ಟ್ಯೂಬ್ ನಲ್ಲಿ ತರ್ಲಾ ದಲಾಲ್ ಅದಿಲ್ಲದಿದ್ದರೆ ಭಾವನಾ,ವಾಹ್ ಚೆಫ್ ಹೀಗೆ ಇವರುಗಳ ರೆಸಿಪಿಗಳನ್ನೆಲ್ಲ ನೋಡಿ ನಂತರ ಗಂಡನ ಮೇಲೆ ಪ್ರಯೋಗ ಮಾಡುವುದು ಅಭ್ಯಾಸವಾಗಿ ಹೋಗಿದೆ.ಆದರೆ ಇತ್ತೀಚಿಗೆ ಒಮ್ಮೆ ಒಗ್ಗರಣೆ ಡಬ್ಬಿ ಕಣ್ಣಿಗೆ ಬಿತ್ತು.ಇದು ಜೀ ಕನ್ನಡದಲ್ಲಿ ಬರುವ ಕಾರ್ಯಕ್ರಮ ಎಂಬುದು ಎಲ್ಲರಿಗೂ ತಿಳಿದ ವಿಷಯವೇ.ಯೂ ಟ್ಯೂಬ್ ನಲ್ಲಿ ನೋಡುವುದರಿಂದ ನಾನ್ ವೆಜ್ ರೆಸಿಪಿ ಬಂದಾಗ ಸುಲಭವಾಗಿ ಮುಂದೆ ಹಾಕಿಕೊಂಡು ಕೇವಲ ವೆಜ್ ರೆಸಿಪಿ ನೋಡುತ್ತೇನೆ.ಸಾಕಷ್ಟು ರೆಸಿಪಿ ಪ್ರಯತ್ನಿಸಿದ್ದೇನೆ. ತುಂಬಾ  ಸೊಗಸಾಗಿತ್ತು ಕೂಡ. ಹಾಗೆ ಯುಗಾದಿ ಸ್ಪೆಷಲ್ ಅಂತ ಗೋಡಂಬಿ ರೋಲ್ ಮಾಡಿದ್ದರು ನನಗೋ ಸ್ವೀಟ್ ಎಂದರೆ ತಕ್ಷಣ ಮಾಡಿ ತಿಂದುಬಿಡೋಣ ಅನ್ನುವಷ್ಟು ಅತಿ ಆಸೆ.ಬರಿ ಗೋಡಂಬಿ ಏಕೆ ಸ್ವಲ್ಪ ಒಣ ದ್ರಾಕ್ಷಿ ಸೇರಿಸಿದರೆ ಎನೂ ಆಗಲಿಕ್ಕಿಲ್ಲ ಎಂದು ಹಾಕಿ ಮಾಡಲು ಪ್ರಾರಂಭಿಸಿದೆ.
 ಒಣ ದ್ರಾಕ್ಷಿ ಹಾಕಿ ರುಬ್ಬಿದ್ದರಿಂದ ಬಣ್ಣ ಕಂದು ಬಂದಿತ್ತು.ಕಂದು ಬಣ್ಣವಾದರೇನು ರುಚಿ ಮಾತ್ರ ಸೂಪರ್ ಇರಬಹುದು ಎಂದು ತೊಳೆಸಲು ಪ್ರಾರಂಭಿಸಿದೆ.ಅವರು ಗೋಡಂಬಿ ರೋಲ್ ಮಾಡುವುದು ತೋರಿಸಿದ್ದರು ನಾನು ರೋಲ್ ಯಾಕೆ ಮಾಡುವುದು ಬರ್ಫಿ ತಾರಾ ಸ್ವಲ್ಪ ಚೌಕಾಕಾರ ಕತ್ತರಿಸಿದರೆ ಚನ್ನಾಗಿರುತ್ತದೆ ಎಂದು ಇನ್ನೂ ಸ್ವಲ್ಪ ಗಟ್ಟಿ ಆಗಲಿ ಎಂದು ಕೈ ನೋವು ಬರುವವರೆಗೆ ತೊಳೆಸುತ್ತಲೇ ಇದ್ದೆ.ಸ್ವಲ್ಪ ಹೊತ್ತಿನ ನಂತರ ಗಟ್ಟಿ ಸಾಕೆನಿಸಿ ಪ್ಲೇಟ್ ಗೆ ಹಾಕಿದೆ.ಬಿಸಿ ಇದ್ದಾಗಲೇ ಚೌಕಾಕಾರವಾಗಿ ಕತ್ತರಿಸಿಬಿಟ್ಟೆ.ತುಂಬಾ ಗಮಗಮ ಸುವಾಸನೆ ಬರುತ್ತಿತ್ತು.ಅವರು ಅದರಲ್ಲಿ ತುಪ್ಪ ಹಾಕಿರಲಿಲ್ಲ ಆದರೆ ನಾನು ಇರಲಿ ಅಂತ ತುಪ್ಪ ಕೂಡ ಸೇರಿಸಿದ್ದೆನಲ್ಲ ಅದು ಇನ್ನಷ್ಟು ಘಮ ಕೊಟ್ಟಿತ್ತು.ನನ್ನ ಪತಿ ಕೂಡ ಒಂತರಾ ಬೇಕರಿ ಸುವಾಸನೆ ಬರುತ್ತಿದೆ ಎಂದು ತಿನ್ನಲು ಕಾಯುತ್ತಾ ಕುಳಿತಿದ್ದರು. ಒಂದು ಹತ್ತು ನಿಮಿಷವಾಗಿರಬೇಕಷ್ಟೇ.ಈಗ ತಣಿದಿರುತ್ತದೆ ಎಂದು ತಿನ್ನಲು ಹೋದೆವು,ನೋಡಿದರೆ ಕಲ್ಲಿನಷ್ಟು ಗಟ್ಟಿ ಆಗಿ ಬಿಟ್ಟಿದೆ! ಸರಿ ಎಸೆಯಲು ಮನಸ್ಸುಬರುತ್ತದಾ? ಬಾಯಿಗೆ ಹಾಕಿಕೊಂಡು ನೋಡಿದರೆ ಗಟ್ಟಿ ಚಾಕೊಲೇಟ್ ತರಹ ಆಗಿತ್ತು.ತಿನ್ನಲು ರುಚಿಯಾಗಿಯೇ ಇತ್ತು.ಒಂದು ಪೀಸ್ ಬಾಯಿಗೆ ಹಾಕಿಕೊಂಡರೆ ಕಾಲುಗಂಟೆ ತಿನ್ನಲು ಬೇಕಾಗುತ್ತಿತ್ತು ! ಒಲೆಯ ಮೇಲೆ ಅಷ್ಟೊತ್ತು ಇಟ್ಟು ಕೇವಲ ಕೈ ಮಾತ್ರವಲ್ಲ , ತಿನ್ನುವಾಗ ಬಾಯಿ ಕೂಡ ನೋವಾಯಿತು !!

ಅರ್ಪಿತಾ ಹರ್ಷ 
ಲಂಡನ್