Saturday 16 November 2013

ಉತ್ತರ ವೇಲ್ಸ್ - ಸ್ನೋಡೋನಿಯಾ

My this article has Published in Vijayanext on 15/11/2013


ನಿಸರ್ಗ ಎಂದರೆ ಎಲ್ಲರಿಗೂ ಪ್ರಿಯ.ನಿಸರ್ಗದ ಮಡಿಲಲ್ಲಿ ಕಳೆಯುವುದೆಂದರೆ ಅದರ ಸೊಬಗೇ ಬೇರೆ.ದಿನನಿತ್ಯದ  ಜಂಜಾಟ,ಗಿಜಿ ಗಿಜಿಗುಡುವ ಜನಸಂದಣಿಯಿಂದ ದೂರವಿರಲು,ಮನಸ್ಸಿನ ಉಲ್ಲಾಸ ಹೆಚ್ಚಿಸಲು ಪ್ರಕೃತಿಯ ಮೊರೆ ಹೋಗುವುದು ಉತ್ತಮ ಎನ್ನಬಹುದು.ಸುಂದರ ಪ್ರಕೃತಿಯ ನಡುವೆ ಒಂದೆರಡು ದಿನಗಳನ್ನು ಕಳೆದರೆ ಹೊಸ ಉತ್ಸಾಹ ಬರುವುದು ಖಂಡಿತ.ಅಂತಹ ಪ್ರವಾಸಿ ಪ್ರಿಯರನ್ನು ಕೈಬೀಸಿ ಕರೆಯುವ ತಾಣ ಇಂಗ್ಲೆಂಡ್ ನ ಗಡಿ ಭಾಗದಲ್ಲಿರುವ ವೇಲ್ಸ್.ಅದರಲ್ಲೂ ಉತ್ತರ ವೇಲ್ಸ್ ಹೆಚ್ಚು ಪ್ರವಾಸಿ ತಾಣಗಳನ್ನು ಹೊಂದಿದೆ.ಇಲ್ಲಿನ ಎಲ್ಲಾ ಸ್ಥಳಗಳು ಅದ್ಬುತವಾಗಿದ್ದು ಅದನ್ನು ಸವಿಯಲು ಕನಿಷ್ಠ 4 ದಿನವಾದರೂ ಇಲ್ಲಿ ಇರಲೇಬೇಕು.ಆಗಸ್ಟ್ ತಿಂಗಳೆಂದರೆ ಇಂಗ್ಲೆಂಡ್ ನಲ್ಲಿ ಬೇಸಿಗೆ ಮುಗಿಯುವ ಕಾಲ.ಮುಂದಿನ ಬೇಸಿಗೆಯವರೆಗೆ ಕೊರೆಯುವ ಚಳಿಯಲ್ಲಿ ಪ್ರವಾಸ ಕೈಗೊಳ್ಳಲಾಗದು ಎಂಬ ಕಾರಣಕ್ಕೆ ಆಗಸ್ಟ್ ಮತ್ತು ಸೆಪ್ಟೆಂಬರ್ ನಲ್ಲಿ ಇಲ್ಲಿನ ಜನರು ವಾರದವರೆಗೆ ಪ್ರವಾಸ ಹೋಗುತ್ತಾರೆ.ಹಾಗೆಯೇ ನಮ್ಮ ಪ್ರಯಾಣ  ನಾರ್ತ್ ವೇಲ್ಸ್ ಗೆ. 

ಸ್ನೋಡೋನಿಯಾ :
ವೇಲ್ಸ್ ಯುನೈಟೆಡ್ ಕಿಂಗ್ ಡಂ ನ ಒಂದು ಅದ್ಬುತ ಸ್ಥಳ.ಇದು ಪೂರ್ವದಲ್ಲಿ ಅಟ್ಲಾಂಟಿಕ್ ಸರೋವರ ಮತ್ತು ಪಶ್ಚಿಮದಲ್ಲಿ ಐರಿಶ್ ಸರೋವರವನ್ನು ಹೊಂದಿದ್ದು ಇಂಗ್ಲೆಂಡ್ ನ ಗಡಿ ಭಾಗದಲ್ಲಿದೆ.ಈ ವೇಲ್ಸ್ ನಲ್ಲಿರುವ  ಅತಿ ಪ್ರಸಿದ್ಧ ಸ್ಥಳವೇ ಸ್ನೋಡೋನಿಯ.ಸ್ನೋಡೋನಿಯ ಇರುವುದು ಉತ್ತರ ವೇಲ್ಸ್ ನಲ್ಲಿ. ಲಂಡನ್ ನಿಂದ ರೈಲಿನಲ್ಲಿ 5  ತಾಸಿನ ಪ್ರಯಾಣ.ಸ್ನೋಡೋನಿಯವನ್ನು ವೇಲ್ಸ್ ನ ರಾಷ್ಟ್ರೀಯ ಉದ್ಯಾನವನ ಎಂದೇ ಕರೆಯಲಾಗುತ್ತದೆ ಮತ್ತು ಇದು ಸುಮಾರು 823 ಎಕರೆ ಜಾಗವನ್ನು ಹೊಂದಿದೆ.ಈ ಸ್ಥಳದ ಹೆಸರು ಸ್ನೋಡೌನ್ ಎಂಬ ಇಂಗ್ಲಿಷ್ ಹೆಸರಿನಿಂದ ಬಂದಿದೆ ಎನ್ನಲಾಗಿದೆ.ಈ ರಾಷ್ಟ್ರೀಯ ಉದ್ಯಾನವನವು 1951 ರಲ್ಲಿ ಇಂಗ್ಲೆಂಡ್ ನ ಮೂರನೇ ಹೆಸರುವಾಸಿ ಉದ್ಯಾನವನವಾಗಿ ಪ್ರಾರಂಭವಾಯಿತು.ವೇಲ್ಸ್ ನ ಸ್ಥಳೀಯ ಭಾಷೆ ವೆಲ್ಶ್ .

ಸ್ನೋಡೋನಿಯವನ್ನು ನೆರಳು,ಬಿಸಿಲು ಮತ್ತು ಇಬ್ಬನಿಗಳ ಸಮಾಗಮ ಎಂದೇ ಹೇಳಬಹುದು.ಸುತ್ತಲೂ ಹಸುರಿನಿಂದ ಕೂಡಿದ್ದು,ದಟ್ಟ ಪರ್ವತಗಳ ನಡುವೆ ಜಲಪಾತ ಮತ್ತು ನದಿಗಳನ್ನು ಕೂಡ ಕಾಣಬಹುದು.ಬೇಸಿಗೆಯಲ್ಲಿ ಹಚ್ಚ ಹಸುರಿನಿಂದ ಕಂಗೊಳಿಸುವ ಈ ಸ್ಥಳ ಚಳಿಗಾಲದಲ್ಲಿ ಹಿಮದ ರಾಶಿಯಿಂದ ಕಣ್ಣು ಬಿಡಲಾರದಷ್ಟು ಬಿಳುಪಿನಿಂದ ಕೂಡಿರುತ್ತದೆ ಮತ್ತು ನದಿ,ಜಲಪಾತಗಳು ಕೂಡ ಹಿಮದಂತೆ ಗಟ್ಟಿಯಾಗಿಬಿಟ್ಟಿರುತ್ತದೆ.ಸ್ನೋಡೋನಿಯ ನ್ಯಾಷನಲ್ ಪಾರ್ಕ್ ನ ಪರ್ವತವು 3,560 ಅಡಿ ಎತ್ತರದಲ್ಲಿದ್ದು ಅಲ್ಲಿಯವರೆಗೆ ರೈಲ್ವೇ ಹಳಿಯನ್ನು ಮಾಡಿ ಪ್ರತಿದಿನ ಪ್ರವಾಸಿ ರೈಲನ್ನು ಅಲ್ಲಿ ಹತ್ತಿಸುತ್ತಾರೆ. ಸಾಹಸಪ್ರಿಯರು ಈ ಪರ್ವತವನ್ನು ಸುಮಾರು 5 ತಾಸು ನಡೆದು ಮೇಲೆ ತಲುಪುವವರೂ ಇದ್ದಾರೆ.ತುತ್ತತುದಿ ತಲುಪಿದಾಗ ಬಿರು ಬೇಸಿಗೆಯಲ್ಲೂ ಕೂಡ ಮಂಜು ಮುಸುಕಿರುವುದನ್ನು ಕಾಣಬಹುದು.ಅಲ್ಲಿಂದ ನಿಂತು ಕೆಳಗೆ ಕಾಣುವ ಹಸುರಿನ ಸೊಬಗನ್ನು ಎಷ್ಟು ಕಣ್ಣು ತುಂಬಿಸಿಕೊಂಡರು ಸಾಲದು ಎಂಬಂತಿದೆ.ಇದು ಇಂಗ್ಲೆಂಡ್ ನ ಪ್ರಸಿದ್ಧ ಪ್ರವಾಸಿ ಸ್ಥಳವಾಗಿದ್ದು ಈ ರೈಲಿನಲ್ಲಿ ತುತ್ತ ತುದಿಯನ್ನು ಏರಲು ಮತ್ತು ಸುತ್ತಮುತ್ತಲಿನ ಪ್ರಕೃತಿಯ ಸೊಬಗನ್ನು ಸವಿಯಲು ವರ್ಷದಲ್ಲಿ ಸುಮಾರು 6 ಮಿಲಿಯನ್ ಪ್ರವಾಸಿಗರು ಇಲ್ಲಿ ಭೇಟಿ ನೀಡುತ್ತಾರೆ ಎಂದು ಅಲ್ಲಿನ ಮಾಹಿತಿದಾರರು ಅಭಿಪ್ರಾಯ ತಿಳಿಸುತ್ತಾರೆ.

ವನ್ಯಜೀವಿಗಳು :
ಈ ಉದ್ಯಾನವನದಲ್ಲಿ ಅಪರೂಪದ ಸಸ್ತನಿಗಳಿದ್ದು ಮುಖ್ಯವಾಗಿ ಅತಿ ಹೆಚ್ಚು ತುಪ್ಪಟವನ್ನು ಹೊಂದಿದ ಕುರಿಗಳನ್ನು ಇಲ್ಲಿ ಕಾಣಬಹುದು.ಇದರ ಜೊತೆಗೆ  ಅಪರೂಪದ ರಾವೆನ್,ಮರ್ಲಿನ್ ಇನ್ನೂ ಮುಂತಾದ ಪಕ್ಷಿಗಳನ್ನು ಕೂಡ ಇಲ್ಲಿ ಕಾಣಬಹುದು.

ಒಮ್ಮೆ ಇಲ್ಲಿ ಭೇಟಿ ನೀಡಿದರೆ ಅಲ್ಲಿನ ಪ್ರಕೃತಿಯ ಸೊಬಗು ಮನಸ್ಸಿನಲ್ಲಿ ಅಚ್ಚಳಿಯದೇ ಉಳಿಯುವುದು ಖಂಡಿತ.ಮತ್ತೆ ಮತ್ತೆ ನೋಡಬೇಕು ಅಲ್ಲೇ ಇದ್ದು ಬಿಡಬೇಕು ಎಂಬಷ್ಟು ಸುಂದರ ಈ ನಾರ್ತ್ ವೇಲ್ಸ್.

ಕಾನ್ವೆ :
ಕಾನ್ವೆ ಎಂಬುದು ಉತ್ತರ ವೇಲ್ಸ್ ನಲ್ಲೇ ಬರುವ ಪುಟ್ಟ ಹಳ್ಳಿ.ಕಾನ್ವೆ ಮೌಂಟೈನ್ ಮತ್ತು ಕಾನ್ವೆ ಕೋಟೆ ಪ್ರವಾಸಿಗರನ್ನು ಆಕರ್ಷಿಸುವ ಸುಂದರ ಸ್ಥಳ.ಕಾನ್ವೆ ಕೋಟೆಯನ್ನು 1283 ರ ಸಮಯದಲ್ಲಿ ಕಟ್ಟಲಾಯಿತು ಎನ್ನಲಾಗುತ್ತದೆ.ಕಾನ್ವೆ ಕ್ಯಾಸೆಲ್ ನಲ್ಲಿ ನಿಂತರೆ ಸುತ್ತಲೂ ಕಾಣುವ ಕಾನ್ವೆ ತೂಗು ಸೇತುವೆ ಮತ್ತು ಸುತ್ತಲ ಹಳ್ಳಿಗಳು ಮನಸೂರೆಗೊಳ್ಳುವುದು ಖಂಡಿತ.ಹತ್ತಿರದಲ್ಲೆ ಬೀಚ್ ಗಳು ಕೂಡ ಇದ್ದು ಬೇಸಿಗೆಯಲ್ಲಿ ಜನರನ್ನು ಹೆಚ್ಚು ಆಕರ್ಷಿಸುತ್ತದೆ.

ಗ್ರೇಟ್ ಒರ್ಮ್ ಕಣಿವೆ ಮತ್ತು ಲ್ಯಾಂಡುಡ್ನೋ:

ಲ್ಯಾಂಡುಡ್ನೋ ಸಮುದ್ರ ಪಕ್ಕದ ಸುಂದರ ನಗರವಾಗಿದ್ದು ಸಮುದ್ರದ ಜೊತೆಗೆ ನಗರವೂ ಕೂಡ ಸಾಕಷ್ಟು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತದೆ.ಇಲ್ಲಿನ ಸಮುದ್ರದಲ್ಲಿ ಸಾಹಸ ಪ್ರಿಯರಿಗಾಗಿ ಸ್ಪೀಡ್ ಬೋಟ್ ಮುಂತಾದವುಗಳಿವೆ.ಗ್ರೇಟ್ ಒರ್ಮ್ ವ್ಯಾಲಿ ಒಂದು ದ್ವೀಪದಂತಿದ್ದು ಹಸಿರು ಬೆಟ್ಟಗಳು ಮತ್ತು ಕಲ್ಲು ಬಂಡೆಗಳ ನಡುವೆ ಸಣ್ಣ ಸಣ್ಣ ನದಿಗಳನ್ನು ಕೂಡ
ಕಾಣಬಹುದು.ಜೊತೆಗೆ ಇಲ್ಲಿ ಗ್ರೇಟ್ ಒರ್ಮ್ ಜಲಪಾತ ಕೂಡ ಇದೆ.

ಭೇಟಿ ನೀಡಲು ಉತ್ತಮ ಕಾಲ:
ವೇಲ್ಸ್ ಯುನೈಟೆಡ್ ಕಿಂಗ್ಡಮ್ ನಲ್ಲಿ ಅತಿ ಹೆಚ್ಚು ಮಳೆ ಬೀಳುವ ಪ್ರದೇಶ.ಚಳಿಗಾಲದಲ್ಲಿ ಅತಿ ಹೆಚ್ಚು ಚಳಿ ಇದ್ದರೂ ಕೂಡ ಹಿಮವನ್ನು ಹೆಚ್ಚು ಇಷ್ಟ ಪಡುವವರು ಈ ಸಮಯದಲ್ಲಿ ಭೇಟಿ ನೀಡಬಹುದು.ಆದರೆ ಬೇಸಿಗೆ ಅತಿ ಹೆಚ್ಚು ಸೂಕ್ತವಾಗಿದ್ದು ಹಸುರಿನ ಸೊಬಗನ್ನು ಕಣ್ಣು ತುಂಬಿಸಿಕೊಳ್ಳಬಹುದು.ಜೂನ್ ನಿಂದ ಸೆಪ್ಟೆಂಬರ್ ಸ್ನೋಡೋನಿಯಕ್ಕೆ ಭೇಟಿ ನೀಡಲು ಉತ್ತಮ ಕಾಲ.ಜೊತೆಗೆ ಪರ್ವತಗಳನ್ನು ಹತ್ತಲು ಸರಿಯಾದ ಶೂವನ್ನು ಬಳಸುವುದು ಉತ್ತಮ.ಚಳಿಗಾಲದಲ್ಲಾದರೆ ದಪ್ಪಉಣ್ಣೆ ಬಟ್ಟೆ ಬೇಕೇಬೇಕು.

ತಲುಪುವ ಮಾರ್ಗ;
ಲಂಡನ್ ನಿಂದ ರೈಲಿನ ಮೂಲಕ ಸುಮಾರು ೫ ತಾಸಿನ ಪ್ರಯಾಣ.ಆದರೆ ಇಲ್ಲಿನ ಸ್ಥಳಗಳನ್ನು ನೋಡಿ ಆನಂದಿಸಲು ಕಾರಿನಲ್ಲಿ ಹೋಗುವುದು ಸೂಕ್ತ.ಅಥವಾ ಲಂಡನ್ ನಿಂದ ಬ್ಯಾಂಗೊರ್ ಎಂಬಲ್ಲಿಗೆ ರೈಲಿನಲ್ಲಿ ಹೋಗಿ ಅಲ್ಲಿಂದ ಕಾರು ಬಾಡಿಗೆಗೆ ಪಡೆದುಕೊಂಡು ಹೋಗಬಹುದು.ಉತ್ತರ ವೇಲ್ಸ್ ನ ಎಲ್ಲಾ ಸ್ಥಳಗಳೂ ಪ್ರವಾಸಿ ಯೋಗ್ಯವಾಗಿದ್ದು ಕಾರಿನಲ್ಲಿ ಹೋದರೆ ಎಲ್ಲಾ ಸ್ಥಳಗಳಿಗೂ ಭೇಟಿ ನೀಡಬಹುದು.