Monday 29 April 2013

ಆರತಿ ತಟ್ಟೆ


ಮನೆಯಲ್ಲಿ ಏನಾದರೂ ಪೂಜೆಗಳು ನಡೆಯುತ್ತಿರುತ್ತವೆ. ಆಗೆಲ್ಲ ಹೊಸ ರೀತಿಯ ಆರತಿ ತಟ್ಟೆ ತಯಾರಿಸಿ ಅದನ್ನು ದೇವರ ಆರತಿಗೆ ಬಳಸಲಾಗುತ್ತದೆ . ಇದು ನೋಡಲು ಕೂಡ ಆಕರ್ಷಕವಾಗಿರುತ್ತದೆ ಎಂದು ಮಲೆನಾಡು ಪ್ರದೇಶಗಳಲ್ಲಿ ಹಿಂದಿನಿಂದಲೂ ನಡೆಸಿಕೊಂಡು ಬರುತ್ತಿರುವ ಪದ್ಧತಿಗಳಲ್ಲಿ ಆರತಿ ತಟ್ಟೆ ಸಿಂಗರಿಸುವುದು ಕೂಡ ಒಂದು ಪದ್ಧತಿ ಎಂಬಂತೆಯೇ ನಡೆದುಕೊಂಡು ಬರುತ್ತಿದೆ . ಆರತಿ ತಟ್ಟೆಯನ್ನು ವಿವಿಧ ರೀತಿಯಲ್ಲಿ ತಯಾರಿಸಬಹುದು . ಆರತಿ ತಟ್ಟೆಗೆ ದೀಪದ ಎಣ್ಣೆ ಸವರಿ ಅದರ ಮೇಲೆ ಕುಂಕುಮವನ್ನು ಅಥವಾ ಅರಿಸಿನವನ್ನು ಉದುರಿಸಿ ನನತರ ಬೆಂಕಿ ಕಡ್ಡಿಯ ತುದಿಯಿಂದ ಬೇಕಾದ ರೀತಿಯ ದೇವರ  ಚಿತ್ರವನ್ನು ಅಥವ ರಂಗೋಲಿಯನ್ನು ಬರೆದರೆ ಆಕರ್ಷನೀಯವಾಗಿರುತ್ತದೆ .  ಆದರೆ ನವರಾತ್ರಿಗಳಲ್ಲಿ ೯ ದಿನಗಳೂ  ಕೂಡ ಆರತಿ ಮಾಡಬೇಕಾದಾಗ ಪ್ರತಿ ದಿನ ತಯಾರು ಮಾಡುವುದು ಸ್ವಲ್ಪ ಕಷ್ಟವೇ . ಅಂತಹ ಸಂಧರ್ಭ ಗಳಲ್ಲಿ ಉಪಯೋಗಕ್ಕೆ ಬರುವಂತೆ ಹೀಗೆ ಮಾಡಿ ನೋಡಿ . ಎಲ್ಲರ ಮನ ಗೆಲ್ಲಿ . 

ಬೇಕಾಗುವ ಸಾಮಗ್ರಿಗಳು :
೧ ಸ್ಟೀಲ್ ತಟ್ಟೆ ( ಬೇಕಾದ ಸೈಜ್ ದು .. )
ಕೆಂಪು ಮತ್ತು ಹಳದಿ ಬಣ್ಣ (ಪೈಂಟ್ ಮಾಡಲು ಬಳಸುವ ಬಣ್ಣದ ಡಬ್ಬಿ)
ಪೈಂಟ್ ಬ್ರಷ್ (ಸಣ್ಣ ಎಳೆ ಬರುವನ್ತದ್ದು ) 

೧. ಮೊದಲು ಸ್ಟೀಲ್ ತಟ್ಟೆಯನ್ನು ಚೆನ್ನಾಗಿ ತೊಳೆದು ಒಣಗಿಸಿ ಒರೆಸಿ ಇಟ್ಟುಕೊಳ್ಳಿ . 
೨. ನಂತರ ಹಳದಿ ಬಣ್ಣವನ್ನು ಪ್ಲೇಟ್ ನ ಪೂರ್ಣ ಭಾಗಕ್ಕೆ ಒಂದು ಕೋಟ್ ಹಚ್ಚಿ ಬಿಸಿಲಿನಲ್ಲಿ ಇಡಿ . 
೩. ಸಂಪೂರ್ಣವಾಗಿ ಒಣಗಿದ ನಂತರ ಬೇಕಾದಲ್ಲಿ ಇನ್ನೊಂದು ಕೊಟ್ ಹಚ್ಚಿ ಒಣಗಿಸಿ  . 
೪. ನಂತರ ಕೆಂಪು ಬಣ್ಣದಿಂದ ಬೇಕಾದ ರೀತಿಯ ಚಿತ್ರ ಅಥವಾ ರಂಗೋಲಿಯನ್ನು ಹೊಸ ರೀತಿಯ ಡಿಸೈನ್ ಅನ್ನು ಪೇಂಟಿಂಗ್ ಬ್ರಷ್ ನಿಂದ  ಬಿಡಿಸಿ ಪುನಃ ಬಿಸಿಲಲ್ಲಿ ಇಟ್ಟು  ಒಣಗಿಸಿ . 
ನೋಡಲು ಕೂಡ ಸುಂದರವಾಗಿ ಕಾಣುವ ಇದು ವರ್ಷಗಳ ವರೆಗೆ ಬಣ್ಣ ಮಾಸುವುದಿಲ್ಲ ಮನೆಯಲ್ಲಿ ಏನಾದರೂ  ಪುಜೆಗಳಿರುವ ದಿನಗಳಲ್ಲಿ ಬಳಸಬಹುದು . ಜೊತೆಗೆ ಸುಲಭವೂ ಹೌದು . 


ಅರ್ಪಿತಾ ಹರ್ಷ 
ಲಂಡನ್

Wednesday 24 April 2013

ಆ ಬಾಲ್ಯ

ಈ ನನ್ನ ಲೇಖನವು ಉದಯವಾಣಿಯಲ್ಲಿ ಪ್ರಕಟವಾಗಿದೆ 24/04/13



ಮನಸ್ಸಿಗೆ ಬೇಸರವಾದರೆ ಕೆಲವೊಮ್ಮೆ ಹಾಡು ಕೇಳಿದರೆ ಏನೋ ಒಂದು ರೀತಿಯ ನೆಮ್ಮದಿ ದೊರಕುವುದುಂಟು . ಅಂತಹ ಹಾಡುಗಳಲ್ಲಿ ನನಗೆ ಬಹಳ ಹತ್ತಿರವೆನಿಸುವ  ಹಾಡೆಂದರೆ ಜಗಜಿತ್ ಸಿಂಗ್ ರ 

ಏ ದೌಲತ್ ಬಿ ಲೇಲೋ ಶರಾರಥ್ ಬಿ ಲೇಲೋ
 ಭಲೇ ಛೀನ್  ಲೇ ಮುಜ್ ಸೆ ಮೇರಿ ಜವಾನಿ 
ಮಗರ್ ಲೌಟ್  ದೋ ಮುಜ್ಕೋ ಬಚ್ಪನ್ ಕಾ  ಸಾವನ್ 
ವೋ ಕಾಗಜ್ ಕಿ ಕಷ್ತಿ ವೋ ಭಾರೀಶ್ ಕಾ ಪಾನಿ .


ಈ ಸಂಪತ್ತು ಈ ಯೌವನ ಏನನ್ನು ಬೇಕಾದರೂ ನನ್ನಿಂದ ಕಿತ್ತುಕೊ ಆದರೆ ನನಗೆ ನನ್ನ ಬಾಲ್ಯವನ್ನು ಮತ್ತು ಬಾಲ್ಯದಲ್ಲಿ ಆ ಮಳೆಯ ನೀರಿನಲ್ಲಿ  ಕಾಗದದ ದೋಣಿಯಲ್ಲಿ ಆಡುತ್ತಿದ್ದ ಆ ದಿನಗಳನ್ನು ಪುನಃ ಹಿಂತಿರುಗಿಸು ಎಂಬ ಸಾಲುಗಳು ಬಾಲ್ಯದ ನೂರಾರು ನೆನಪುಗಳನ್ನು ಕಣ್ಣೆದುರು ತಂದು ನಿಲ್ಲಿಸುತ್ತದೆ .

 ಈ ಹಾಡು ನನ್ನನ್ನು ಬಹಳ ಹಳೆಯ ಕಾಲಕ್ಕೆ ಕರೆದೊಯ್ಯುತ್ತದೆ . ಆ ಕಾರಣಕ್ಕಾಗಿ ನನಗೆ ಈ ಹಾಡು ಬಹಳ ಇಷ್ಟ ಕೂಡ . ಈ ಹಾಡಿನ ಪ್ರತಿ ಪದಗಳು ಬಹಳ ಸೊಗಸಾಗಿದೆ . ಮತ್ತು ಅರ್ಥವತ್ತಾಗಿದೆ .  ಎಲ್ಲರೂ  ತಮ್ಮ ಬಾಲ್ಯವನ್ನು ಇಷ್ಟಪಡುತ್ತಾರೆ ಆದರೆ ಅದು ಮರಳಿ ಬಾರದ ದಿನಗಳು.  ಆದರೂ ಕಳೆದುಹೋದ ಆ ಬಾಲ್ಯದ ನೆನಪು ಯಾವಾಗಲೂ ಬಹಳ ಸೊಗಸು . ಆದ ಕಾರಣಕ್ಕೆ ನನಗೆ ಈ ಹಾಡು ಏನೋ ಒಂದು ರೀತಿ ಮನಸ್ಸಿಗೆ ತಟ್ಟುತ್ತದೆ . 

ಮಗುವಿನಲ್ಲಿರುವ ಆ ಮುಗ್ದತೆ , ಸ್ವಚ್ಚಂದ ಮನಸ್ಸು, ಎಲ್ಲರೊಡನೆ ಬೆರೆಯುವ ಪರಿ , ಕ್ಷಣ ಕ್ಷಣದಲ್ಲೂ ಕಾಣುವ ಆ ಕುಶಿ , ಬೇರೆಯವರ ಏಳಿಗೆಯನ್ನು ಕರುಬದೆ ಬೆಳೆಯುವ ಆ ದಿನಗಳು  ಇವುಗಳೆಲ್ಲ ಬೆಳೆದು ದೊಡ್ಡವರಾದಂತೆ ನಾವೆಲ್ಲೋ ಕಳೆದುಕೊಳ್ಳುತ್ತಿದ್ದೇವೆ ಎಂದೆನಿಸುತ್ತದೆ .  

 ಇದು ಕೇಳಿದಷ್ಟು ಮತ್ತೆ ಮತ್ತೆ ಕೇಳಬೇಕೆನಿಸುವ ಹಾಡು . ಬಾಲ್ಯದ ದಿನಗಳನ್ನು ಮತ್ತಷ್ಟು ಕೆದಕುತ್ತದೆ. ಕೆಲವೊಮ್ಮೆ ನೋವಿನಲ್ಲೂ ಸುಖವಿರುತ್ತದೆ ಹಾಗೆಯೇ ಕಳೆದು ಹೋದ ಬಾಲ್ಯ ಹಿಂತಿರುಗಿ ಬರಲಾದಕ್ಕೆ ಬೇಸರವಿದ್ದರೂ ಅದನ್ನು ನೆನಪಿಸುವ ಈ ಹಾಡಿನಲ್ಲಿ ಸಂತೋಷವಿದೆ . ಜೊತೆಗೆ ಕೇಳಿದಷ್ಟು ಬೇಸರ ಬರದ ಮನಸ್ಸಿಗೆ ನಾಟುವ ಪದ ವರ್ಣನೆ .  ಬೇಸರವಾದ ಕ್ಷಣಗಳಲ್ಲಿ ಈ ಹಾಡುಗಳನ್ನು ಕೇಳಿ ನನ್ನ ಮನಸ್ಸನ್ನು ಸಹಜ ಸ್ಥಿತಿ ಗೆ ತರಿಸುವ ಈ ಹಾಡು ನನಗೆ ಒಂದು ರೀತಿಯ ಸ್ಪೂರ್ತಿ . 


ಅರ್ಪಿತಾ ಹರ್ಷ 
ಲಂಡನ್ 

Tuesday 16 April 2013

ಬಸ್ ಪ್ರಯಾಣದ ಮೋಜು

Pulished in Sakhi agust 1st Sakhi magazine 


ಮೊದಲೆಲ್ಲ ನನಗೆ ದೂರದ ಪ್ರಯಾಣ ಎಂದರೆ ಇಷ್ಟ,  ಒಬ್ಬಳೇ ಹೋಗಬೇಕು ಎಂದರೆ ಸ್ವಲ್ಪ ಹೆಚ್ಚೇ ಇಷ್ಟ . ಕಿಟಕಿಯ ಪಕ್ಕದಲ್ಲಿ ಕುಳಿತು ಇಷ್ಟವಾದ ಹಾಡುಗಳನ್ನು ಒಂದಾದ ಮೇಲೊಂದರಂತೆ ಗುನುಗಿಕೊಳ್ಳುತ್ತಾ ಹೋಗುವುದೆಂದರೆ ಬಹಳ ಕುಶಿ.  ಹಾಗೆ ಹೋಗುವಾಗಲೆಲ್ಲ ನನ್ನ ಕನಸಿಗೆ ಯೋಚನಾ ಲಹರಿಗೆ ಯಾರೂ  ಅಡ್ಡಿ ಬರುವುದಿಲ್ಲವಾದ್ದರಿಂದ (ಬಂದರೂ ನನಗೆ ಅದರ ಬಗ್ಗೆ ಗಮನವಿಲ್ಲದಿರುವುದರಿಂದ) ನನಗೆ ಒಬ್ಬಳೇ ಕುಳಿತು ದೂರ ಹೋಗುವುದೆಂದರೆ ಇಷ್ಟವಾಗುತ್ತಿತ್ತು ಜೊತೆಗೆ ಕಾಲೇಜು ದಿನಗಳಲ್ಲಿ ಒಬ್ಬಳೇ ಹೋಗುವ ಅನಿವಾರ್ಯತೆ ಕೂಡ ಬರುತ್ತಿತ್ತು .  ಈಗ ಹೋಗಬೇಕೆಂದರು ಅವಕಾಶ ಸಿಗದಿದುದಕ್ಕೆ ಸ್ವಲ್ಪ ಬೇಸರವೂ  ಇದೆ .  ಹಾಗೆ ಹೋಗುವಾಗಲೆಲ್ಲ ಏನಾದರೊಂದು ನೆನಪಿನಲ್ಲಿ ಉಳಿಯುವಂತಹದ್ದು ಆಗುತ್ತಿತ್ತು . ಇಲ್ಲದಿದ್ದರೆ ಹೊಸ ಫ್ರೆಂಡ್ಸ್ ಸಿಗುತ್ತಿದ್ದರು . 

ಈಗ ನಾಲ್ಕು ವರ್ಷದ ಹಿಂದೆ ನಡೆದ ಘಟನೆ . ಹಾಗೆ ಒಮ್ಮೆ ಬೇಸಿಗೆ ರಜೆ ಬಂದಾಗ ಮನೆಗೆ ಹೋಗಲು ಉಜಿರೆಯಿಂದ ಸಾಗರದ ಬಸ್ ಹತ್ತ ಬೇಕಾಗಿತ್ತು . ಶಾಂತಿಸಾಗರ ಎಂಬ ಒಂದೇ ಬಸ್ ಬೆಳ್ತಂಗಡಿ ಇಂದ ಡೈರೆಕ್ಟ್ ಸಾಗರಕ್ಕೆ ಹೋಗುತ್ತಿತ್ತು . ಹಾಗಾಗಿ ಬೆಳಗ್ಗೆ ಮುಂಜಾನೆ ಉಜಿರೆಯಿಂದ ಬೆಳತಂಗಡಿಗೆ ಒಂದು ಬಸ್ ಹಿಡಿದು ಹೊರಟೆ . ರಜೆಗೆಂದು ಹೊರಟಿದ್ದರಿಂದ ಕೈಯಲ್ಲಿ ಎರಡು ಬ್ಯಾಗ್ ನಷ್ಟು ಲಗೇಜ್ ಇತ್ತು . ಬಸ್ ಹತ್ತಿದ್ದೆ ಪಕ್ಕದಲ್ಲಿ ಒಬ್ಬರು ಬಂದು ಕುಳಿತರು . ಜೊತೆಗೆ ಆ ಗಂಡಸು ನನ್ನೇ ನೋಡುತ್ತಿದ್ದ ನನಗೆ ಕೆಟ್ಟ ಕೋಪ ಬಂದಿತ್ತು . ಆತ ನನ್ನನ್ನು ನೋಡುತ್ತಿದ್ದನೋ ಅಥವಾ ಅದು ನನ್ನ ಭ್ರಮೆಯೋ ಎಂಬುದು ಬಗೆಹರಿಯದ ವಿಷಯ .      ಹದಿನೈದು ನಿಮಿಷದಲ್ಲಿ ನನ್ನ ಸ್ಟಾಪ್ ಬಂದಿದ್ದು ನನಗೆ ಬಹಳ ಸಂತೋಷವಾಯಿತು . ಅವನನ್ನು ಕೆಕ್ಕರಿಸಿ ನೋಡಿ ಇಳಿದುಬಂದೆ . 
ಇಳಿಯುವಷ್ಟರಲ್ಲಿ ಶಾಂತಿಸಾಗರ ಹೊರಡುತ್ತಿತ್ತು ಓಡಿ  ಹೋಗಿ ಹತ್ತಿಕೊಂಡೆ . ಆತನೂ ಬಸ್ ಹತ್ತಿದ ಮತ್ತೆ ನನ್ನ ನೋಡಿದ ನನಗೆ ಇನ್ನೂ ಕೋಪ ಬಂತು ಸ್ವಲ್ಪ ಹೊತ್ತಿನಲ್ಲಿ  ಟಿಕೆಟ್ ಕೇಳಲು ಕಂಡಕ್ಟರ್ ಬಂದು ಕೇಳಿದ್ದಕ್ಕೆ ಇಲ್ಲ ನಾ ಈ ಬ್ಯಾಗ್ ಅನ್ನು ತಲುಪಿಸಲು ಬಂದೆ ಎಂದರು ... 
ನೋಡುತ್ತೇನೆ ನನ್ನದೇ ಬ್ಯಾಗ್ ಇಳಿಯುವ ಭರದಲ್ಲಿ ಒಂದು ಬ್ಯಾಗ್ ಬಿಟ್ಟು ಬಂದುಬಿಟ್ಟಿದ್ದೆ ಪಾಪ ಆತ  ಅದನ್ನು ಗಮನಿಸಿ ನನಗೆ ಹಿಂತಿರುಗಿಸಲು ಬಂದರೆ ನಾನು ಕೆಕ್ಕರಿಸಿ ನೋಡಿಬಿಟ್ಟಿದ್ದೆ .  ಅವರು ನನಗೆ ಬ್ಯಾಗ್ ಹಿಂತಿರುಗಿಸಿದರು ನಾನು ಥ್ಯಾಂಕ್ಸ್ ಹೇಳಿದೆ ಆತ ಏನೂ  ಹೇಳದೆ ಹಿಂತಿರುಗಿ ಹೋದ  ಬಸ್ ಜೋರಾಗಿ ಹೊರಟಿತು . 
ಒಮ್ಮೊಮ್ಮೆ ಅಪಾರ್ಥ ದಿಂದಾಗಿ ಒಳ್ಳೆಯವರನ್ನು ಕೆಟ್ಟವರು ಎಂದುಕೊಳ್ಳುವ ಪರಿಸ್ಥಿತಿ ಬಂದುಬಿಡುತ್ತದೆ . ಅವರು ಸಹಾಯಕ್ಕೆ ಬಂದರೆ ನಾನು ತಪ್ಪು ತಿಳಿದುಕೊಂಡು ಬಿಟ್ಟಿದ್ದೆ . ಮನೆಗೆ ಬಂದು ಹೀಗಾಯಿತು ಎಂದು ಕತೆ ಹೇಳಿದರೆ ಎಲ್ಲರೂ  ಗೊಳ್ ಎಂದು ನಕ್ಕು ಆ ನಂತರ ಆತನನ್ನು ಹೊಗಳಿದರು ನನ್ನನ್ನು ತೆಗಳಿದರು . 

ಅರ್ಪಿತಾ ಹರ್ಷ 
ಲಂಡನ್ .

ಬರ್ಮಿಂಗ್ ಹ್ಯಾಮ್ ಬಾಲಾಜಿ ಟೆಂಪಲ್

ಭಾರತದಲ್ಲಿ ತಿರುಪತಿ ಎಂದರೆ ಎಲ್ಲರೂ  ಒಮ್ಮೆ ಹೆಮ್ಮೆ ಪಡುತ್ತಾರೆ. ಒಮ್ಮೆಯಾದರೂ  ವೆಂಕಟರಮಣನ ಸನ್ನಿಧಿಗೆ ಹೋಗಿ ದರ್ಶನ ಪಡೆದು ಪುನೀತರಾಗಬೇಕು ಎಂದು ಬಯಸುತ್ತಾರೆ. ಹಾಗೆಯೇ ಈ ಇಂಗ್ಲೆಂಡ್ ಗೆ ಬರ್ಮಿಂಗ್ ಹ್ಯಾಮ್ ಎಂಬಲ್ಲಿರುವ

ಬಾಲಾಜಿ ಟೆಂಪಲ್ ಪ್ರಸಿದ್ದಿ ಪಡೆದಿದೆ. ಇಂಗ್ಲೆಂಡ್ ನಲ್ಲಿರುವ ಭಾರತೀಯರಿಗೆ ಬರ್ಮಿಂಗ್ ಹ್ಯಾಮ್  ನ ವೆಂಕಟರಮಣ ದೇವಸ್ಥಾನವೇ  ತಿರುಪತಿ ಟೆಂಪಲ್ ಎಂದರೆ ತಪ್ಪಲ್ಲ. ಹಾಗೆ ನಮಗೂ ಲಂಡನ್ ನಿಂದ ಬರ್ಮಿಂಗ್ ಹ್ಯಾಮ್  ಗೆ ಹೋಗಬೇಕೆನ್ನುವುದು ಬಹಳ ದಿನಗಳ ಆಸೆಯಾಗಿತ್ತು . ಹಾಗೆ ಫ್ರೆಂಡ್ಸ್ ಎಲ್ಲ ಸೇರಿ ಕಳೆದ ಈಸ್ಟರ್ ನಲ್ಲಿ ೪ ದಿನಗಳ ರಜೆ ಇರುವುದರಿಂದ ಇದೇ  ಸೂಕ್ತ ಸಮಯ ಎಂದು ಹೊರಟುಬಿಟ್ಟೆವು . 
ಲಂಡನ್ ನಿಂದ ಸುಮಾರು ೩ ತಾಸುಗಳ ಪ್ರಯಾಣ . ಲಂಡನ್ ನಿಂದ ಟ್ರೈನ್ ನಲ್ಲಿ ಹೊರತು ಬಿರ್ಮಿಂಗ್ ಹ್ಯಾಮ್  ನಲ್ಲಿ ಇಳಿದು ನಂತರ ಅಲ್ಲಿಂದ ಬಸ್ ನಲ್ಲಿ ಹೋಗಬೇಕು .ಟೆಂಪಲ್ ಪ್ರತಿ ದಿನ ಬೆಳಿಗ್ಗೆ ೭ ಗಂಟೆ ಇಂದ ಮದ್ಯಾನ್ಹ ೨ ಗಂಟೆಯವರೆಗೆ ಮತ್ತು ಮದ್ಯಾನ್ಹ ೪ ಗಂಟೆಯಿಂದ ಸಂಜೆ ೮ ಗಂಟೆಯವರೆಗೆ ತೆರೆದಿರುತ್ತದೆ. ಸರಿಯಾಗಿ ೧೨ ಗಂಟೆಗೆ ಮಹಾ ಮಂಗಳಾರತಿ , ಪೂಜೆಗಳು ನೆರವೇರುತ್ತದೆ. ನಂತರ ಸಂಜೆ ೪ ಗಂಟೆಯಿಂದ ಅರ್ಚನೆ ಆರಂಭವಾಗುತ್ತದೆ.  
ನಾವು ಬೆಳಗ್ಗೆ ಸರಿಯಾಗಿ ೭.೩೦ ಕ್ಕೆ ಮನೆಯಿಂದ ಹೊರಟೆವು ನಾವಿರುವ ಸ್ಥಳದಿಂದ ಲಂಡನ್ ಯುಸ್ಟನ್  ಎಂಬಲ್ಲಿಗೆ ಹೋಗಿ ಅಲ್ಲಿಂದ ಡೈರೆಕ್ಟ್ ಟ್ರೈನ್ ಹೋಗುವುದಾಗಿ ಮೊದಲೇ ನಿರ್ಧರಿಸಿಕೊಂಡಿದ್ದೆವು. ಬಿರ್ಮಿಂಗ್ ಹ್ಯಾಮ್  ರೈಲು ನಿಲ್ಧಾಣಕ್ಕೆ  ಹೋಗಿ ತಲುಪುವಾಗ ೧೨.೩೦ ಆಗಿತ್ತು . ನಮಗೆ ಇರುವುದು ಒಂದೇ ದಾರಿ ೨ ಗಂಟೆಯೊಳಗೆ ಬಿರ್ಮಿಂಗ್ ಹ್ಯಾಮ್ ಟೆಂಪಲ್ ತಲುಪಬೇಕು ಇಲ್ಲದಿದ್ದರೆ ಸಂಜೆ ೪ ಗಂಟೆಯವರೆಗೆ ಬೇರೆಡೆ ಹೋಗಿ ನಂತರ ಟೆಂಪಲ್ ಗೆ ಹೋಗಬೇಕು . ಬರ್ಮಿಂಗ್ ಹ್ಯಾಮ್  ಸ್ಟೇಷನ್ ನಿಂದ ಟೆಂಪಲ್ ಗೆ ೪೫ ನಿಮಿಷದ ಪ್ರಯಾಣವಾಗಿತ್ತು ಅಂತು ಎಲ್ಲರ ಒಪ್ಪಿಗೆ ಮೇರೆಗೆ ಟೆಂಪಲ್ ಗೆ ಮೊದಲು ಹೋದೆವು . ಅಷ್ಟರಲ್ಲಾಗಲೇ ನಮ್ಮ ಹೊಟ್ಟೆ ತಾಳ ಹಾಕುತ್ತಿತ್ತು . ಅಲ್ಲಿ ಊಟದ ವ್ಯವಸ್ಥೆ ಇರುವುದರಿಂದ ಪ್ರಸಾದ ಊಟ ಸೇವಿಸಿ ನಂತರ ಹೊರಗೆ ಹೋಳಿಯ ಓಕುಳಿ ಆಟ ಆಡುವ ವ್ಯವಸ್ಥೆ ಕಲ್ಪಿಸಲಾಗಿತ್ತು ನಾವು ಆಟವಾಡಿ ಒಳ ಹೋಗುವಷ್ಟರಲ್ಲಿ ಸರಿಯಾಗಿ ೩.೩೦ ಆದದ್ದರಿಂದ ಒಂದರ್ದ ಗಂಟೆ ದೇವಸ್ಥಾನದಲ್ಲಿ ಕುಳಿತು ನಂತರ ಅರ್ಚನೆ ಮಾಡಿಸಿಕೊಂಡು ಲಡ್ಡು ತೆಗೆದುಕೊಂಡು ಮನೆಕಡೆ ಹೊರಟೆವು .

Friday 5 April 2013

ಹುಚ್ಚಿ ! (ಕಥೆ)


ಮನೆ ಕ್ಲೀನ್ ಮಾಡುತ್ತಾ ಸುಸ್ತಾದ ಅಂಬಿಕ ಗಂಡನೊಡನೆ ಕೂಗುತ್ತಿದ್ದಳು 'ಇಷ್ಟೆಲ್ಲಾ ಮಾಡೋದು ಎಷ್ಟು ಕಷ್ಟ ಗೊತ್ತ ಒಬ್ಬಳೇ ಮಾಡ್ಬೇಕು ಯಾರು ಹೆಲ್ಪ್ ಗೆ ಬರಲ್ಲ ಹೋಗಿ ಹೋಗಿ ಈ ದೊಡ್ಡ ಮನೆಗೆ ಬಂದು ಕುಳಿತಿದ್ದೀರ ಆ ಮನೆಯಿಂದ ಈ ಮನೆಗೆ ಸೇರಿಸೋ ಅಷ್ಟರಲ್ಲಿ ನಾ ಹಾಸ್ಪಿಟಲ್ ಸೇರೋದು ಖಂಡಿತ ' .  ಅದಕ್ಕೆ ಗಣಪತಿ 'ಅಯ್ಯೋ ನೀ ಮೊದಲೇ ಹೇಳಿದ್ರೆ ಬರ್ತಾ ಆ ಪುಷ್ಪ ಳನ್ನಾದ್ರು ಕರ್ಕೊಂಡು ಬರ್ತಿದ್ದೆ'  . ಅಂಬಿಕ ಳ  ಸುಸ್ತೆಲ್ಲ ಒಮ್ಮೆಲೇ ಮಾಯಾವಾಗಿ ಮುಖದಲ್ಲಿ ಚಿಲ್ಲನೆ ಒಂದು ನಗು ಬಂತು . ಅಲ್ಲೇ ಕುಳಿತಿದ್ದ ಸರಳಳಿಗೆ   ಇವರ ಸರಳ ಭಾಷೆ ಒಗಟಂತೆ  ಕಾಣುತ್ತಿತ್ತು . 'ಅತ್ತೆ ಅದು ಯಾರು ಪುಷ್ಪ ಎಂದರೆ?' ಕೇಳಿಯೇ ಬಿಟ್ಟಳು  .' ಅಯ್ಯೋ ಸರಳಾ ನೀ ನೋಡ್ಲಿಲ್ವಾ ಅದೇ ಆ ಹುಚ್ಚಿ ,ಇರು ತೋರಿಸ್ತೀನಿ ಇವತ್ತು ಸಂಜೆ ಪೇಟೆ ಕಡೆ ಹೋದಾಗ' ಎಂದರು ಅತ್ತೆ  . ಸರಳ ಈಗ ಸಂಜೆ ಆಗುವುದನ್ನೇ ಕಾಯುತ್ತಿದ್ದಳು .


ಸಂಜೆ ಎಂದಿನಂತೆ ಪೇಟೆಯ ಕಡೆಗೆ ಹೊರಟಾಗ ಅದೇ ನೋಡು ಅಲ್ಲಿ ಮಾರಮ್ಮನ ಗುಡಿ ಮುಂದೆ ಕುಂತವಳೇ ಆ ಹುಚ್ಚಿ ಪುಷ್ಪ ಎಂದು ಬೇಗ ಬೇಗ ಮುಂದೆ ಹೋಗುತ್ತಿದ್ದರೆ ಸರಳ ಳ   ಕಣ್ಣು ಆ ಪುಷ್ಪಳನ್ನೇ ನೋಡುತ್ತಿತ್ತು . ಹಿಂದೆ ತಿರುಗಿ ತಿರುಗಿ ನೋಡುತ್ತಾ ಹೋದವಳಿಗೆ ಆ ದಿನವೆಲ್ಲ ಅವಳೇ ಕಣ್ಣೆದುರು.  

ಪುಷ್ಪ ಹೆಸರೆಷ್ಟು ಚಂದವಿದೆ .ಹೆತ್ತವರು ಮಗಳ ಬಗ್ಗೆ ಎಷ್ಟು ಕನಸು ಕಂಡಿರಬಹುದು ಆ ಹೆಸರಿಡುವಾಗ ! ಆಕೆ ನೋಡಲೇನು ಹುಚ್ಚಿ ಎನಿಸುವುದಿಲ್ಲ . ಬಣ್ಣ ಸ್ವಲ್ಪ ಕಂದು , ಒಂದು ಪ್ಯಾಂಟ್ ಮತ್ತು ಶರ್ಟ್ ಹಾಕಿಕೊಂಡಿರುತ್ತಾಳೆ ಜೊತೆಗೆ ಬಾಯ್ ಕಟ್ ಬಹುಷಃ ಯಾರೋ ಕನಿಕರದಿಂದ ಅವಳ ಕೂದಲನ್ನು ಕಟ್ ಮಾಡಿ ಸ್ವಲ್ಪ ಸ್ವಚ್ಚವಾಗಿರುವಂತೆ ನೋಡಿಕೊಂಡಿರಬೇಕು . ಆಕೆಯದು ಕರ್ಲಿ ಹೇರ್ ಅಂತಾರಲ್ಲ ಹಾಗೆ . 

ದೇವಸ್ಥಾನದ ಮುಂದೆ ಅವಳ ವಾಸ . ಹಾಗಂತ ರಾತ್ರಿ ೭ ಗಂಟೆಯ ಮೇಲೆ ಆಕೆ ಅಲ್ಲಿ ಕಾಣುವುದೇ ಇಲ್ಲ ಎಲ್ಲಿ ಹೋಗುತ್ತಾಳೆ ಎಂಬುದು ಯಾರಿಗೂ ತಿಳಿಯದ ವಿಷಯ . ಬೆಳಿಗ್ಗೆ ೯ ಗಂಟೆಗೆ ಸರಿಯಾಗಿ ಮಾರಮ್ಮನ ದೇವಸ್ಥಾನದ ಬಾಗಿಲು ತೆಗೆದ ತಕ್ಷಣ ಆಕೆ ಅಲ್ಲಿ ಹಾಜರ್ ಮತ್ತೆ ಸಂಜೆ ೭ ಗಂಟೆಗೆ ಗುಡಿ ಮುಚ್ಚಿದ ಮೇಲೆ ಅಲ್ಲಿಂದ ಆಕೆ ಕದಲುವುದು . ಬಿರುಬಿಸಿಲಿಗೂ ಅಂಜದೆ ಕುಳಿತ ಆಕೆಯನ್ನು ಆ ಮಾರಮ್ಮ ಒಂದು ದಾರಿ ತೋರಿಸಬಾರದೆ?ಎಂದೆನಿಸದೆ ಇರಲಿಲ್ಲ ಸರಳಳಿಗೆ .

ಮೂರು ನಾಲ್ಕು ದಿನಗಳು ಹೀಗೆ ಪೇಟೆ ಗೆ ಹೋಗುವಾಗಲೆಲ್ಲ ಆಕೆಯನ್ನು ನೋಡಿ ಬಂದಾದ ಮೇಲೆ ಮತ್ತೆ ಕೇಳಿದಳು ಅಂಬಿಕಳನ್ನು 'ಅತ್ತೆ  ಆ ಪುಷ್ಪ ಯಾಕೆ ಹಾಗಾಗಿದ್ದು? ಪಾಪ ಅಲ್ವಾ?'

ಹ್ಮ ನನಗೂ  ಸರಿಯಾಗಿ ಗೊತ್ತಿಲ್ಲ ಯಾಕೆ ಎಂದು ಅವರಿವರು ಹೇಳಿದ್ದು ಹೇಳಬಹುದು ಅವಳದೊಂದು ಪ್ರೀತಿಯಲ್ಲಿ ಬಿದ್ದ ಕಥೆ ಒಂದು ಹುಡುಗನನ್ನು ಬಹಳ ಇಷ್ಟ ಪಡುತ್ತಿದ್ದಳಂತೆ ಅವನೂ  ಹಾಗೂ  ಹೀಗೂ ಇವಳನ್ನು ಅವನಿಷ್ಟದಂತೆ ಕುಣಿಸಿ ಕೊನೆಗೆ ಅದ್ಯಾವುದೋ ಒಂದು ಪ್ಯಾಂಟು ಶರ್ಟು ಹಾಕಿರೋ ಹುಡುಗಿ ನಿನಗಿಂತ ಚನ್ನಾಗಿದ್ದಾಳೆ  ಅಂತ ಇವಳನ್ನು ಬಿಟ್ಟು ಅವಳೊಡನೆ ಓಡಿ ಹೋಗಿ ಬಿಟ್ಟನಂತೆ.

 ಅಂದಿನಿಂದ ಈಕೆ  ಮಾರಮ್ಮನ ಗುಡಿಯಲ್ಲಿ ಕೈಮುಗಿದು ಕುಳಿತುಕೊಂಡು ಆತನ ಬರುವಿಕೆ ಗೆ ಕಾಯುತ್ತಿದ್ದಳಂತೆ ದಿನ ಕಳೆದಂತೆ ಅನ್ನ  ನೀರು ಬಿಟ್ಟು ಕುಳಿತ  ಈಕೆಯನ್ನು ಜನ ಹುಚ್ಚಿ ಎನ್ನಲು  ಪ್ರಾರಂಭಿಸಿದರು . ಕೊನೆಗೆ ಅದ್ಯಾರೋ ಅವಳ ಹರಿದ ಬಟ್ಟೆ ನೋಡಲಾಗದೆ ಅವಳಿಗೆ ಹಳೆಯದೊಂದು ಪ್ಯಾಂಟು ಶರ್ಟು ಕೊಟ್ಟರು ಕಾಣುತ್ತೆ ಅವಳು ಅದನ್ನು ಹಾಕಿ ಮಾರಮ್ಮ ಕೊನೆಗೂ ದಯೆ ತೋರಿದಳು ಪ್ಯಾಂಟು ಶರ್ಟು ಹಾಕಿಕೊಂಡೆ ಇನ್ನು ಆ ಹುಡುಗ ಬಂದರೆ ತನ್ನ ಇಷ್ಟಪಡುತ್ತಾನೆ ಎಂದು ಅಲ್ಲೇ ಕಾಯುತ್ತಾ ಕುಳಿತು ಕೊಂಡಿರುತ್ತಾಳೆ  .ಪಾಪ ಆ ಹುಡುಗ ತಿರುಗಿ ಬಂದಿಲ್ಲ ಬಂದರೂ  ಈಕೆಯನ್ನ ಗುರುತಿಸಲಾರ. ಗುರುತಿಸಿದರೂ  ಹುಚ್ಚಿ ಯನ್ನು ಯಾರಾದರೂ  ಕಟ್ಟಿಕೊಳ್ಳಲು ಸಾಧ್ಯವೇ? 

ಸರಳ ಮನಸ್ಸಲ್ಲೇ ಅಂದುಕೊಂಡಳು ಆಕೆ ನೋಡಲು ಹುಚ್ಚಿಯಂತೆ ಕಾಣುವುದಿಲ್ಲ ,ಅವಳಿಗೆ ಹುಚ್ಚು ಹಿಡಿದಿರುವುದು ಪ್ಯಾಂಟು ಶರ್ಟಿ ನದು. ಜನ ಆಕೆಯನ್ನೇ ಹುಚ್ಚಿ ಮಾಡಿಬಿಟ್ಟಿದ್ದಾರೆ!!. ಪ್ರೀತಿ ಏನೆಲ್ಲಾ ಮಾಡಿಬಿಡುತ್ತದೆ. ಕಣ್ಣಲ್ಲಿ ನೀರು ತುಂಬಿಕೊಂಡ ಸರಳ ಯೋಚಿಸುತ್ತಿದ್ದಳು .

ಅರ್ಪಿತಾ ಹರ್ಷ 
ಲಂಡನ್