Friday 29 August 2014

ಮಾಯಾಗಾರ ಸ್ಟೋನ್ ಹೆಂಜ್!

 ಡೆಸ್ಕ್ಟಾಪ್ ನಲ್ಲಿನ  ಸ್ಕ್ರೀನ್ ಅನ್ನು ನಿಜವಾಗಿ ನೋಡಿದರೆ ಎಷ್ಟು ಆನಂದವೆನಿಸಬಹುದು?  ಹೌದು ಆ ಆನಂದ ನಮಗೆ ಸಿಕ್ಕಿದ್ದು
ಸ್ಟೋನ್ ಹೆಂಜ್ ನೋಡಿದಾಗ. ಕಲ್ಲುಗಳಿಂದ ಸುತ್ತುವರೆದ ಸ್ಟೋನ್ ಹೆಂಜ್ ನ ಚಿತ್ರಣವನ್ನು ನೀವೂ ಸಾಮಾನ್ಯವಾಗಿ ಡೆಸ್ಕ್ಟಾಪ್ ನ ಸ್ಕ್ರೀನ್ ಆಗಿ ಸೇವ್ ಮಾಡಿಟ್ಟಿರುವುದನ್ನು ನೋಡಿರಬಹುದು. ಈ ಜಗತ್ಪ್ರಸಿದ್ದ ಸ್ಟೋನ್  ಹೆಂಜ್ ಇರುವುದು ಇಂಗ್ಲೆಂಡ್ ನಲ್ಲಿ. ಲಂಡನ್ ನಿಂದ ಸುಮಾರು ಎರಡೂವರೆ ತಾಸಿನ ಪ್ರಯಾಣದ ಸ್ಟೋನ್ ಹೆಂಜ್ ಇರುವುದು ಸ್ಯಾಲಿಸ್ಬರಿ ಸಮೀಪದ ವಿಲ್ಟ್ಶೈರ್ ನಲ್ಲಿ.

ಇದೊಂದು ಇತಿಹಾಸಪೂರ್ವ ಸ್ಮಾರಕವಾಗಿದ್ದು ಇಂಗ್ಲೆಂಡ್ ಗೆ ಬಂದವರು ಇದನ್ನು ನೋಡಲೇಬೇಕು. ನವಶಿಲಾಯುಗದ ಜನರು ಇದನ್ನು ತಮ್ಮದೇ ಆದ ತಾಂತ್ರಿಕವಿಧಾನದಿಂದ ಕಟ್ಟಿದರು ಎನ್ನಲಾಗುತ್ತದೆ. ಕ್ರಿ ಪೂ ೩೦೦೦ ವರ್ಷಗಳ ಹಿಂದೆ ವೃತ್ತಾಕಾರದ ಮಾದರಿಯಲ್ಲಿ ಈ ಸ್ಟೋನ್ ಹೆಂಜ್ ಅನ್ನು ಕಟ್ಟಲಾಯಿತು. ನೂರಾರು ವರ್ಷಗಳ ಹಿಂದೆ ಈ ಜಾಗವನ್ನು ಸ್ಮಶಾನವಾಗಿ ಬಳಸಲಾಗುತ್ತಿತ್ತು ಎಂದು ಕೂಡ ಹೇಳಲಾಗುತ್ತದೆ. ಕಲ್ಲಿನಿಂದ ಸುತ್ತುವರೆದ ಈ ಸ್ಥಳವನ್ನು ಕಟ್ಟಲು ಸಾಕಷ್ಟು ಸಮಯ ತೆಗೆದುಕೊಂಡಿತು ಎನ್ನಲಾಗುತ್ತದೆ.

ಎಡ್ವರ್ಡ್ ಸಾಯ್ಮೊರ್ ಈ ಸ್ಟೋನ್ ಹೆಂಜ್ ಎಂಬ ಪೂರ್ವ ಇತಿಹಾಸ ಸ್ಥಳದ ಒಡೆಯ. ಸ್ಟೋನ್ ಹೆಂಜ್ ಅನ್ನು ವೃತ್ತಾಕಾರವಾಗಿ ಕಟ್ಟಿದ್ದು ಇದು ಪ್ರತಿಯೊಂದು ಕಲ್ಲು ಕೂಡ ತನ್ನದೇ ಆದ ವಿಶೇಷತೆಯನ್ನು ಹೊಂದಿದೆ. ಸುತ್ತಲೂ ಹಸಿರನ್ನು ಹೊತ್ತು ಹಸಿರು ಹುಲ್ಲಿನ ಮಧ್ಯ ನಿಂತಂತಿರುವ ಈ ಸ್ಟೋನ್ ಹೆಂಜ್ ಅನ್ನು ನೋಡಲು ದೇಶ ವಿದೇಶಗಳಿಂದ ಪ್ರವಾಸ ಕೈಗೊಳ್ಳುತ್ತಾರೆ. ಒಂದು ಕಾಲದಲ್ಲಿ ಬ್ರಿಟೀಷರು ಸಮಯವನ್ನು ನಿರ್ಧರಿಸಲು ಈ ಕಲ್ಲಿನ ಮೇಲೆ ಬೀಳುತ್ತಿದ್ದ ಸೂರ್ಯನ ಕಿರಣಗಳನ್ನು ಆಧಾರವಾಗಿ ಬಳಸುತ್ತಿದ್ದರು ಎಂಬುದು ವಿಶೇಷವೇ ಸರಿ. ಈಗಲೂ ಕೂಡ ಸಂಜೆ ಸಮಯದಲ್ಲಿ ಸೂರ್ಯಾಸ್ತದಲ್ಲಿ ಈ ಕಲ್ಲಿನ ಮೇಲೆ ಬೀಳುವ ಕಿರಣಗಳು ಅದ್ಬುತವಾದ ಅನುಭವವನ್ನು ನೀಡುತ್ತದೆ. ಪ್ರವಾಸಕ್ಕೆ ಬರುವ ಸಾಕಷ್ಟು ಜನರು ಇಲ್ಲಿ ಸೂರ್ಯಾಸ್ತ ನೋಡವುದಕ್ಕಾಗಿಯೇ ಬರುತ್ತಾರೆ.

ಈ ಸ್ಟೋನ್ ಹೆಂಜ್ ಅನ್ನು ಮೂರು ಹಂತಗಳಲ್ಲಿ ಕತ್ತಲಾಯಿತು ಮತ್ತು ಇದನ್ನು ಕಟ್ಟಲು ಮೂವತ್ತು ಸಾವಿರ ಗಂಟೆಯಷ್ಟು ಕೂಲಿಯನ್ನು ತೆಗೆದುಕೊಂಡಿತು ಎಂಬುದು  ನಮಗೆ ಇಲ್ಲಿ ಸಿಕ್ಕ ಮಾಹಿತಿ . ಮೊದಲ ಹಂತವನ್ನು ಕ್ರಿ ಪೂ ೩೦೦೦ ವರ್ಷಗಳ ಹಿಂದೆ ಪ್ರಾರಭಿಸಿದ್ದು ಅದನ್ನು ಕಟ್ಟಲು ೨೮೪ ಅಡಿಯಷ್ಟು ವೃತ್ತಾಕಾರದಲ್ಲಿ ಕೊರೆಯಲಾಯಿತು ಎನ್ನಲಾಗುತ್ತದೆ. ಈ ಹಂತದಲ್ಲಿ ಮಾನವ ಮೂಳೆಗಳ ದಹನ ಕೂಡ ಇಲ್ಲಿ ಕಂಡು ಬಂದಿದ್ದು ಇದನ್ನು ಸಮಾಧಿಗಾಗಿ ಅಲ್ಲದೆ ಕೇವಲ ಧಾರ್ಮಿಕ ಸಮಾರಂಭದ ಭಾಗವಾಗಿ ಮಾಡಿರಬಹುದು ಎಂದು ಕೂಡ ಹೇಳಲಾಗುತ್ತದೆ.

 ನಂತರ ಸುಮಾರು ಸಾವಿರ ವರ್ಷಗಳು ಇದು ಹಾಗೆಯೇ ಇದ್ದು ಎರಡನೆಯ ಹಂತವನ್ನು ಕ್ರಿ ಪೂ ೨೧೫೦ ರಲ್ಲಿ ಪ್ರಾರಂಭಿಸಲಾಯಿತು ಎನ್ನಲಾಗುತ್ತದೆ. ಈ ಅವಧಿಯಲ್ಲಿ ವೃತ್ತಾಕಾರದ ಮೂಲವನ್ನು ಇನ್ನಷ್ಟು ವಿಸ್ತರಿಸಿ ಜೋಡಿ ಕಲ್ಲುಗಳನ್ನು ಕೂಡ ನಿರ್ಮಿಸಲಾಯಿತು. ಮೂರನೆ ಹಂತ ಪ್ರಾರಂಭವಾಗಿದ್ದು ಕ್ರಿ ಪೂ ೨೦೦೦ ದಲ್ಲಿ ಎಂದು ನಂಬಲಾಗಿದ್ದು ಈ ಸಮಯದಲ್ಲಿ ಈ ವೃತ್ತಾಕಾರದ ಕಲ್ಲುಗಳ ನಿರ್ಮಾಣದ ಮೇಲೆ ಎರಡು ಕಲ್ಲುಗಳ ಮೇಲೆ ಬೆಂಬಲವಾಗಿ ಇನ್ನೊಂದು ಕಲ್ಲನ್ನು ,ಅದೇ ರೀತಿ ಐದು ಕಲ್ಲನ್ನು  ಇಡಲಾಯಿತು. ಇದನ್ನು ಇಂದಿಗೂ ಕೂಡ ನೋಡಬಹುದು.

ಮೊದಲು ಇದನ್ನು ಕಟ್ಟುವಾಗ ಅರವತ್ತು ಕಲ್ಲುಗಳಿತ್ತು ಈಗ ಇವುಗಳು ಅವಶೇಷವಾಗಿವೆ ಮತ್ತು ಕೆಲವು ನೆಲಮಟ್ಟದಲ್ಲಿ ಕಾಣಬರುತ್ತವೆ ಎಂಬುದು ಇಲ್ಲಿನ ಮಾಹಿತಿ. ಒಟ್ಟಾರೆಯಾಗಿ ಇಂಗ್ಲೆಂಡ್ ಗೆ ಭೇಟಿ ನೀಡುವವರು ಸ್ಟೋನ್ ಹೆಂಜ್ ಅನ್ನು ಮಿಸ್ ಮಾಡುವಂತಿಲ್ಲ. ನೋಡಿದಷ್ಟು ನೋಡುವಂತಹ  ,ತಿಳಿದು ಕೊಂಡಷ್ಟು ಮುಗಿಯದ, ಕುತೂಹಲ ಕೆರಳಿಸುವ,ಮತ್ತೊಮ್ಮೆ ಬರಬೇಕು ಎಂಬ ಭಾವನೆಯನ್ನು ನಮ್ಮಲ್ಲಿ ಮೂಡಿಸುವ ಮಾಯಾಗಾರ ಸ್ಥಳ ಈ ಸ್ಟೋನ್ ಹೆಂಜ್.