Tuesday 6 August 2013

ಡರ್ಡಲ್ ಡೋರ್ ಮತ್ತು ಲಲ್ವರ್ತ್ ಕೋವ್

Published on 13/09/2013 vijayanext



ಪ್ರಕೃತಿಯ ಸೌಂದರ್ಯದ ಎದುರು ಎಲ್ಲವೂ ಗೌಣ! .ಎಷ್ಟು ನಿಜವಾದ ಮಾತು.ಆ ತಾಣಕ್ಕೆ ಹೋದಾಗ ನನಗೆ ಮೊದಲು ಮನಸ್ಸಿಗೆ ಬಂದ ಸಾಲುಗಳಿವು.ಎಷ್ಟು ಅದ್ಭುತವಾದ ನಿಸರ್ಗ ದೃಶ್ಯವೆಂದರೆ ಅದನ್ನು ಮಾತಿನಲ್ಲಿ ವರ್ಣಿಸಲು ಸಾಧ್ಯವಾಗದು.ಕಣ್ಣಿನಲ್ಲೇ ತುಂಬಿಕೊಳ್ಳಬೇಕು.ಹೌದು ನಾನು ಈಗ ಹೇಳಹೊರಟಿರುವುದು ಇಂಗ್ಲೆಂಡ್ ನಲ್ಲಿರುವ ಡರ್ಡಲ್ ಡೋರ್ ಮತ್ತು ಲಲ್ವರ್ತ್ ಕೋವ್ ಬಗ್ಗೆ.

ಡರ್ಡಲ್ ಡೋರ್:
ಇದು ಜುರಾಸಿಕ್ ಕರಾವಳಿಯ ಡೋರ್ ಸೆಟ್ ಹಳ್ಳಿಯಲ್ಲಿರುವ ಸುಣ್ಣದ ಕಮಾನುಗಳನ್ನು ಹೊಂದಿರುವ ಅದ್ಬುತ ನಿಸರ್ಗ ಡರ್ಡಲ್ ಎಂದರೆ ಹಳೆಯ ಇಂಗ್ಲಿಷ್ ನ ಪ್ರಕಾರ ಥಿರ್ಲ್ ಅಂದರೆ ಅದರ ಅರ್ಥ ಡ್ರಿಲ್ ಅಥವಾ ಬೋರ್ ಎಂದಾಗಿದೆ.ಹೆಸರೇ ಹೇಳುವಂತೆ ಇಲ್ಲಿ ಸುಣ್ಣದ ಕಲ್ಲನ್ನು ಕೊರೆದು ಇಟ್ಟಂತಹ ಕಲ್ಲಿನ ಕ್ಲಿಫ್ಸ್ ಇರುವುದರಿಂದ ಇದಕ್ಕೆ ಡರ್ಡಲ್ ಡೋರ್ ಎಂದು ಹೆಸರಿಡಲಾಗಿದೆ.ಕರಾವಳಿ ಕಿನಾರೆಯಲ್ಲಿ ಸುಣ್ಣದ ಕಲ್ಲಿನ ಕಮಾನುಗಳನ್ನು ಹೊಂದಿ ಸುತ್ತಲೂ ಹಸಿರನ್ನು ಹೊಂದಿದ ಜೊತೆಗೆ ತಿಳಿ ನೀಲಿ ಬಣ್ಣದ ನೀರನ್ನು ಹೊಂದಿದ ಬೀಚ್ ಕೂಡ ಇಲ್ಲಿದೆ.
ತಾಣ.ಇಲ್ಲಿ ನೈಸರ್ಗಿಕ ಸುಣ್ಣದ ಬಂಡೆಗಳನ್ನು (ಕ್ಲಿಫ್ಸ್) ಕಾಣಬಹುದು.ಇದು ವೆಲ್ದ್ಸ್ ಎಂಬುವವರ ಖಾಸಗಿ ಒಡೆತನದಲ್ಲಿದೆ.ಅದ್ಬುತ ಸೌಂದರ್ಯವನ್ನು ಒಳಗೊಂದು ಪ್ರವಾಸಿಗರನ್ನು ಅತಿ ಹೆಚ್ಚು ಆಕರ್ಷಿಸುತ್ತಿರುವುದರಿಂದ ಈ ಕುಟುಂಬದವರು ಇದನ್ನು ಪ್ರವಾಸಿ ತಾಣವನ್ನಾಗಿ ಮಾಡಿದ್ದಾರೆ.ಡೋರ್ ಸೆಟ್ ಹಳ್ಳಿಯಲ್ಲಿ 12000 ಎಕರೆ ಭೂಮಿಯನ್ನು ವೆಲ್ದ್ಸ್ ಕುಟುಂಬ ಹೊಂದಿದೆ ಅದೇ ಡರ್ಡಲ್ ಡೋರ್.ಇಡೀ ತಾಣವನ್ನು ಲಲ್ವರ್ತ್ ಎಸ್ಟೇಟ್ ಎಂದು ಕರೆಯುತ್ತಾರೆ.

ಇಲ್ಲಿ ತಲುಪಲು ಸುಮಾರು ಹದಿನೈದು ನಿಮಿಷ ಬೆಟ್ಟವನ್ನು ಇಳಿದು ನಂತರ  150 ಮೆಟ್ಟಿಲುಗಳಿದ್ದು ಮೆಟ್ಟಿಲನ್ನು ಇಳಿದು ಕೆಳಗೆ ಹೋದರೆ ಕಮಾನಿನ ರೂಪವನ್ನು ಹೊಂದಿದ ಕಲ್ಲಿನ ಬಂಡೆ ಸುತ್ತಲೂ ನೀಲಿ ನೀರನ್ನು ಕಾಣಬಹುದು.ಸದಾ ಜನರಿಂದ ತುಂಬಿ ತುಳುಕುತ್ತಿರುವ ಈ ಸ್ಥಳ ನೀರಿನ ಅಲೆಗಳೊಂದಿಗೆ ಪ್ರವಾಸಿಗರನ್ನು ಇನ್ನಷ್ಟು ಹತ್ತಿರ ಕರೆಯುತ್ತದೆ.ಇಲ್ಲಿ ಸ್ವಂತ ಬೋಟ್ ಗಳಿದ್ದರೆ ಸ್ವಲ್ಪ ದೂರದ ವರೆಗೆ ಹೋಗಲೂ ಬಹುದು. 

ಮ್ಯಾನ್ ಆಫ್ ವಾರ್ ಬೀಚ್ :
ಡರ್ಡಲ್ ಡೋರ್ ನ ಇನ್ನೊಂದು ಪಕ್ಕದಲ್ಲಿ ಮ್ಯಾನ್ ಆಫ್ ವಾರ್ ಎಂಬ ಬೀಚ್ ಇದೆ.ಈ ಬೀಚ್ ಸನ್ ಬಾತ್ ಮಾಡುವವರಿಗೆ ಹೆಚ್ಚು ಸುಕ್ತವಾಗಿದ್ದು.ಇಲ್ಲಿ ಈಜಾಟವಾಡಬಹುದು.ಸಮುದ್ರದ ಮಧ್ಯದಲ್ಲಿ ಅಲ್ಲಲ್ಲಿ ದೊಡ್ಡ ಕಲ್ಲಿನ ಬಂಡೆಗಳಿದ್ದು ದಡದಲ್ಲಿ ಕುಳಿತು
ನೋಡುವವರಿಗೆ ಮತ್ತು ಛಾಯಾಚಿತ್ರದಲ್ಲಿ ಹೆಚ್ಚು ಆಸಕ್ತಿ ಇರುವವರಿಗೆ ಒಳ್ಳೆಯ ಚಿತ್ರ ತೆಗೆಯಲು ಸೂಕ್ತ ಸ್ಥಳ ಎನ್ನಬಹುದು.ಈ ಬೀಚ್ ಸದಾ ಜನರಿಂದ ತುಂಬಿರುತ್ತದೆ.

ಲಲ್ವರ್ತ್ ಕೋವ್ :
ಡರ್ಡಲ್ ಡೋರ್ ನ  ಇನ್ನೊಂದು ಬದಿಯಲ್ಲಿ ಲಲ್ವರ್ತ್ ಕೋವ್ ಇದೆ.ಸುಮಾರು 1 ವರೆ ಕಿ ಮೀ ಬೆಟ್ಟವನ್ನು ಹತ್ತಿ ಇಳಿದರೆ ಲಲ್ವರ್ತ್ ಕೋವ್ ಸಿಗುತ್ತದೆ .ಈ ಬೆಟ್ಟವನ್ನು ಹತ್ತಲು ಕಲ್ಲು ಹಾಸಿನ ದಾರಿಯನ್ನು ಕೂಡ ಮಾಡಲಾಗಿದೆ.ಇದೊಂದು ರೀತಿ ಟ್ರಕ್ಕಿಂಗ್ ನಂತೆ ಇರುತ್ತದೆ.ಸುತ್ತಲೂ ದಟ್ಟ ಹಸಿರಿನಿಂದ ಕೂಡಿರುವುದರಿಂದ ತಂಪು ಗಾಳಿ ಸೋಕುತ್ತಿರುತ್ತದೆ.ಎತ್ತರದ ಬೆಟ್ಟ ಹತ್ತಿದಾಗ ಇಡೀ ಲಲ್ವರ್ತ್ ಕೋವ್ ಮತ್ತು ಡರ್ಡಲ್ ಡೋರ್ ಅನ್ನು ಮೇಲಿನಿಂದ ನೋಡಬಹುದು.

ಲಲ್ವರ್ತ್ ಕೋವ್ ನಲ್ಲಿ ಬೋಟ್ ರೈಡಿಂಗ್ ನ ವ್ಯವಸ್ಥೆ ಇದೆ. ಸುಮಾರು ಅರ್ಧ ಗಂಟೆ ಸಮುದ್ರದ ಮಧ್ಯ ಭಾಗದ ವರೆಗೆ ಹೋಗಿ ನಂತರ ಡರ್ಡಲ್ ಡೋರ್ ನ ಹತ್ತಿರ ಹೋಗಿ ಅಲ್ಲಿನ ಕಮಾನನ್ನು ಹತ್ತಿರದಿಂದ ತೋರಿಸಿ ಪುನಃ ಹಿಂತಿರುಗಿ ಕರೆತರುತ್ತಾರೆ. ಅಲ್ಲಿಯೇ ಪಕ್ಕದಲ್ಲಿ ದ್ವೀಪದ ರೀತಿಯಿದ್ದು ಸುತ್ತಲೂ ನೀರಿನಿಂದ ಕೂಡಿ ಮಧ್ಯೆ ಎತ್ತರ ಕಲ್ಲು ಬಂಡೆಗಳಿವೆ.ರಾಕ್ ಕ್ಲೈಂಬಿಂಗ್ ಇಷ್ಟ ಪಡುವವರು ಇದನ್ನು ಹತ್ತಬಹುದು.ಹತ್ತಿ ಅಲ್ಲಿಂದ ಇಡೀ ಲಲ್ವರ್ತ್ ನ ನೋಟವನ್ನು ಆಸ್ವಾದಿಸಬಹುದು. ಇಷ್ಟೆಲ್ಲಾ ಮಾಡಲು ಒಂದು ವೀಕೆಂಡ್ ಇದಕ್ಕೆಂದೇ ಮೀಸಲಿಡಬೇಕು. 

ಭೇಟಿ ನೀಡಲು ಉತ್ತಮ ಕಾಲ :

ವರ್ಷದ 6 - 7 ತಿಂಗಳು ಇಂಗ್ಲೆಂಡಿನಲ್ಲಿ ಚಳಿಗಾಲ ಇರುವುದರಿಂದ ಮೇ ನಿಂದ ಅಗಸ್ಟ್ ನ ಬೇಸಿಗೆಯಲ್ಲಿ ಇಲ್ಲಿಗೆ ಹೋಗುವುದು ಸೂಕ್ತ.ಸುತ್ತಲೂ ಪ್ರಕೃತಿ ಯ ಹಸಿರು ಇರುವುದರಿಂದ ಗಾಳಿ ಅಧಿಕವಾಗಿರುತ್ತದೆ.

ಟ್ರಕ್ಕಿಂಗ್ ಮಾಡಲು ಬೇಕಾಗುವ ಶೂ ಹಾಕಿಕೊಂಡು ಹೋಗುವುದು ಒಳ್ಳೆಯದು.ಅದೊಂದು ಹಳ್ಳಿ ಆಗಿರುವುದರಿಂದ ತಿನ್ನಲು ಏನಾದರೂ ಕೊಂಡು ಹೋಗುವುದು ಸೂಕ್ತ. 

ತಲುಪುವ ಮಾರ್ಗ 

ಲಂಡನ್ ನಿಂದ ವೂಲ್ ಗೆ ರೈಲಿನ ಮೂಲಕ ತಲುಪಬಹುದು ಅಲ್ಲಿಂದ ಟ್ಯಾಕ್ಸಿ ಮಾಡಿಸಿಕೊಂಡು ಹೋಗಬೇಕು. ಲಂಡನ್ ನಿಂದ ಇಂಗ್ಲೆಂಡ್ ನ ವೂಲ್ ಗೆ 3 ತಾಸಿನ ಪ್ರಯಾಣ. 

ಡರ್ಡಲ್ ಡೋರ್ ನಿಂದ ಲಲ್ವರ್ತ್ ಕೋವ್ ಗೆ ಬೆಟ್ಟ ಹತ್ತಿ ಹೋಗಲಾಗದವರು ರಸ್ತೆ ಮೂಲಕ ಟ್ಯಾಕ್ಸಿ ಮಾಡಿಸಿಕೊಂಡು ಹೋಗಬಹುದು ಆದರೆ ಈ ಪ್ರಕೃತಿ ಸೌಂದರ್ಯ ಸಿಗುವುದಿಲ್ಲ.