Monday 15 February 2021

ಬಾಲ್ಯ

ಸುಮಾರು ಇಪ್ಪತ್ತು ವರ್ಷಗಳ ಹಿಂದಿನ ಕಾಲವದು.  ಹಳ್ಳಿಗಳಲ್ಲಿ ಫ್ರಿಡ್ಜ್ , ವಾಷಿಂಗ್ ಮಷಿನ್ ಗಳ ಹಾವಳಿಯಿಲ್ಲದ ದಿನಗಳು. ನಮ್ಮ ಬಾಲ್ಯದ ದಿನಗಳವು. ಅಷ್ಟೇ ಏಕೆ ಕೆಲವೊಮ್ಮೆ ಸರಿಯಾಗಿ ಎಲೆಟ್ರಿಸಿಟಿ ಕೂಡ ಇಲ್ಲದೆ ಸಣ್ಣ ದೀಪದಲ್ಲಿ ರಾತ್ರಿ ಕಳೆಯುವುದೋ ಅಥವಾ ಹೋಂ ವರ್ಕ್ ಮುಗಿಸುವುದೋ ಮಾಡಿದಂತ ಕಾಲ ಅದಾಗಿತ್ತು. ರಾತ್ರಿ ಸರಿಯಾಗಿ ಊಟದ ಸಮಯಕ್ಕೆ ಮಾಡುತ್ತಿದ್ದ ಪವರ್ ಕಟ್. ಅದಕ್ಕಾಗಿ ಅಮ್ಮ ಬೈಯುತ್ತಾ ಹೊರ ತೆಗೆಯುತ್ತಿದ್ದ ಲಾಟೀನು. ಆಗ ಅದೇ ನಮಗೆ ಕ್ಯಾಂಡಲ್ ಲೈಟ್ ಡಿನ್ನರ್. ನಗು ಹರಟೆ ಅದೆಲ್ಲ ಈಗ ಒಂದು ನೆನಪು ಮಾತ್ರ. ಈಗ ಪ್ರತಿ ಮನೆಯಲ್ಲೂ ಇಂವೋರ್ಟರ್ ಬಂದು ಸದಾ ಕಾಲ ಟಿವಿ . ಹಾಗೆಯೇ ಬೆಳಕಿನ ಜಗಮಗ.

ಅದು ತೊಂಬತ್ತರ ದಶಕ . ಆಗೆಲ್ಲ ಹಳ್ಳಿ ಮನೆಗಳಲ್ಲಿ ಒಟ್ಟು ಕುಟುಂಬ . ಮನೆಯಲ್ಲಿ ಕನಿಷ್ಠ ಹದಿನೈದು ಇಪ್ಪತ್ತು ಜನರಿರುತ್ತಿದ್ದರು. ನಾವು ಚಿಕ್ಕವರಿರುವಾಗ ಹಳ್ಳಿಗಳಲ್ಲಿನ್ನೂ ಫ್ರಿಡ್ಜ್ ಬಂದಿರಲಿಲ್ಲ. ಮನೆಯಿಂದ ಪ್ರತಿದಿನ ತರಕಾರಿ ತರಲು ದೂರದ ಪೇಟೆಗೆ ಹೋಗುವುದೂ ಬಹಳ ಅಪರೂಪವಾಗಿತ್ತು. ಹಾಗೊಮ್ಮೆ ಪೇಟೆಗೆ ಹೋದಾಗ ತರುವ ತರಕಾರಿ ಹದಿನೈದು ಇಪ್ಪತ್ತು ಮಂದಿ ಇರುವ ಮನೆಯಲ್ಲಿ ಒಮ್ಮೆ ಸಾಂಬಾರು ಮಾಡಿದರೆ ಖಾಲಿ ಆಗಿಬಿಡುತ್ತಿತ್ತು. ಅದಕ್ಕಾಗಿಯೇ ಮನೆಯ ಹಿತ್ತಲಲ್ಲೇ ಸಾಕಷ್ಟು ತರಕಾರಿಗಳು ಆ ಕಾಲಮಾನಕ್ಕೆ ಸರಿಯಾಗಿ ಬೆಳೆಯಲಾಗುತ್ತಿತ್ತು.ಮಳೆಗಾಲ ಮುಗಿಯುತ್ತಿದ್ದಂತೇ ಚಪ್ಪರದವರೆ, ಸೌತೆಕಾಯಿ , ಹಾಗಲಕಾಯಿ , ಬೆಂಡೆ ಕಾಯಿ , ಚೀನೀ ಕಾಯಿ ಹೀಗೆ ಚಪ್ಪರ ಹಾಕಿ ಎಲ್ಲ ಬಳ್ಳಿ ಹಬ್ಬಿಸಿ ಕಾಯಿ ಬೆಳೆಸಿ ಅದನ್ನೇ ಬಳಸಿ ಪ್ರತಿದಿನ ರುಚಿರುಚಿಯಾದ ಖಾದ್ಯ ತಯಾರಾಗುತ್ತಿತ್ತು. ಇನ್ನು ಏನೂ ಇಲ್ಲದಿದ್ದರೂ ಸದಾಕಾಲ ತೋಟದ ತೆಂಗಿನ ಮರದಲ್ಲಿ ಮನೆಗೆ ಸಾಕಾಗುವಷ್ಟು ತೆಂಗಿನ ಕಾಯಿ ಹಾಗೆಯೇ  ಮನೆಯ ಎದುರು ಹರಿವೆ ಸೊಪ್ಪು , ಎಲವರಿಗೆ ಸೊಪ್ಪು , ಕಾಕಿ ಸೊಪ್ಪು , ಚಕ್ರಮುನಿ ಸೊಪ್ಪು , ದಂಟಿನಸೊಪ್ಪು ,ಒಂದೆಲಗ (ಬ್ರಾಹ್ಮೀ ) ಉತ್ತರಣೆ ಹೀಗೆ ಸಾಕು ಬೇಕೆನ್ನುವಷ್ಟು ಸೊಪ್ಪುಗಳಂತೂ ದಿನಕ್ಕೊಂದು ಇರುತ್ತಿತ್ತು. ಯಾವುದೇ ರೀತಿಯ ಔಷಧಿ ಸಿಂಪಡಿಸದ ಸಾವಯುವ ಸೊಪ್ಪು ತರಕಾರಿಗಳನ್ನು ತಿನ್ನುತ್ತಿದ್ದ ನಾವೇ ಅದೃಷ್ಟವಂತರು ಎಂಬುದು ಈಗ ತಿಳಿಯುತ್ತಿದೆ. 
ಹಾಗೆ ಕೆಲವೊಮ್ಮೆ ಎಲ್ಲಾ ತರಕಾರಿಗಳು ಒಂದೇ ಬಾರಿ ಬೆಳೆದಾಗ ಬೇಗ ಹಾಳಾಗುವ ಅಂದರೆ ಹೆಚ್ಚು ದಿನ ಇಡಲಾಗದ ತರಕಾರಿಗಳನ್ನು ಮೊದಲು ಅಡುಗೆಗೆ ಉಪಯೋಗಿಸಿ ಇಳಿದವನ್ನೆಲ್ಲ ಶೇಖರಿಸಿಡುತ್ತಿದ್ದರು.ಬೀಟ್ರೂಟ್ ಮತ್ತು ಆಲೂಗಡ್ಡೆಯನ್ನು ಮರಳಿನಲ್ಲಿ ಹುದುಗಿಸಿ ಇಡಲಾಗುತ್ತಿತ್ತು ಹಾಗೆ ಮರಳಿನ ಅಡಿಯಲ್ಲಿಟ್ಟ ಗಡ್ಡೆಗಳು ತಿಂಗಳು ಕಳೆದರೂ ಹಾಳಾಗದೇ ಇರುತ್ತಿದ್ದವು ಮತ್ತು ಬೇಕಾದಾಗ ಬೇಕಾದಷ್ಟನ್ನೇ ಹುಡುಕಿ ತಂದು ಅಡುಗೆ ಮಾಡಬಹುದಿತ್ತು . ಗಡ್ಡೆಗಳನ್ನು ಕೊಳೆಯದಂತೆ ಫ್ರಿಡ್ಜ್ ನಂತೆಯೇ ಅದು ಕಾಪಾಡುತ್ತಿತ್ತು. ಜೊತೆಗೆ ಮನೆಯಲ್ಲಿಯೇ ಬೆಳೆದ ಎಲೆ ಅಡಿಕೆಗೆ ಬಳಸುವ ಎಲೆ ಮತ್ತು ನಿಂಬೆಹಣ್ಣುಗಳನ್ನು ಬಟ್ಟೆಯಲ್ಲಿ ಕಟ್ಟಿ ಬಾವಿಯಲ್ಲಿ ನೇತು ಹಾಕುತ್ತಿದ್ದರು. ಅದು ಕೂಡ ತಣ್ಣಗೆ ಫ್ರಿಡ್ಜ್ ನಂತೆಯೇ ಇರುತ್ತಿದ್ದ ನೀರಿರುವ ಬಾವಿಯಲ್ಲಿ ತಿಂಗಳುಗಳವರೆಗೆ ಕೆಡದೇ ಉಳಿಯುತ್ತಿತ್ತು ಮತ್ತು ತಾಜಾವಾಗಿಯೂ ಇರುತ್ತಿತ್ತು.
ಈಗ ಹಳ್ಳಿ ಮನೆಗಳಲ್ಲಿಯೂ ಫ್ರಿಡ್ಜ್ , ಟಿವಿ , ಇಂವೊರ್ಟರ್ , ಫ್ಯಾನ್ , ಕಾರು  ಅದಿಲ್ಲದಿದ್ದರೆ ಬೈಕ್ ಪ್ರತಿಯೊಬ್ಬರ ಮನೆಯಲ್ಲಿಯೂ ಇದೆ ಮತ್ತು ತರಕಾರಿಗಳನ್ನು ಪೇಟೆಗೆ ಹೋಗಿ ತಂದು ವಾರಗಟ್ಟಲೆ ಫ್ರಿಡ್ಜ್ ನಲ್ಲಿರಿಸಿ ಬಳಸುತ್ತಿದ್ದಾರೆ.  ಕಾಲ ಬದಲಾದಂತೆ ಅವಕಾಶಗಳು ಹೆಚ್ಚಿದಂತೆ ಅನುಕೂಲಗಳೂ ಬದಲಾಗುತ್ತಾ ಬರುತ್ತಿದೆ .
Arpitha RaoBanbury

Thursday 11 February 2021

ಮಗುವಿಗೊಂದು ಪುಸ್ತಕ



Published in Kannadapress 11/2/21  https://www.kannadapress.com/2021/02/11/how-to-attract-children-towards-book-reading/


ನನ್ನ ಎರಡು ವರ್ಷದ ಪುಟ್ಟ ಮಗ ಕೈಯಲ್ಲೊಂದು ಪುಸ್ತಕ ಹಿಡಿದು ಎಲ್ಲೋ ಪರೀಕ್ಷೆ ಹತ್ತಿರ ಬರುತ್ತಿರುವ ಮಕ್ಕಳು ಓದುತ್ತಿರುವಂತೆ ನಟಿಸುವುದನ್ನು ನೋಡುವುದೇ ಒಂದು ಖುಷಿ.  ಸಮಯ ಸಿಕ್ಕಾಗೆಲ್ಲ ಪುಸ್ತಕ ತಿರುವಿ ಹಾಕುವ ಇಲ್ಲವೇ ತನಗೆ ಬರುವ ಪದ್ಯಗಳನ್ನು ಪುಟ್ಟ ಪುಟ್ಟ ಹೆಜ್ಜೆ ಇಟ್ಟು ಮಾಡಿ , ಹಾಡಿ ತೋರಿಸುವ ಪರಿ ಮನಸ್ಸಿಗೆ ಮುದ ಕೊಡುತ್ತದೆ.ಇಂದಿನ ಮಕ್ಕಳು ದಿನವಿಡೀ ಗೆಜೆಟ್ ಕೊಟ್ಟರೂ ಹಿಡಿದು ಕುಳಿತುಬಿಡುವುದನ್ನು ನೋಡಿದರೆ ಎಂತಹ  ಪೋಷಕರಿಗೂ ಖೇದ ಎನಿಸದಿರದು.

ನಮ್ಮ ಮಕ್ಕಳೂ ಕಥೆ ಓದಬೇಕು , ಸಾಹಿತ್ಯ  ತಿಳಿಯಬೇಕು ನಮ್ಮಂತೆಯೇ ಗಿಡಮರ ಮಣ್ಣುಗಳ  ಮಧ್ಯೆ ಬೆಳೆಯಬೇಕು ಎಂಬುದು ಎಲ್ಲರ ಆಕಾಂಕ್ಷೆ.  ಮಲೆನಾಡಿನ ಹಳ್ಳಿಯ ಹಸಿರುಗಾಡಿನ ಮಧ್ಯೆ ಹುಟ್ಟಿ ಬೆಳೆದ ನನಗೆ ನನ್ನ ಮಗ ಲಂಡನ್ ನ ಸಿಟಿಯಲ್ಲಿ ಬೆಳೆದರೆ ಏನೋ ಕಳೆದುಕೊಳ್ಳುವನೇನೋ ಎಂಬ ಆತಂಕ ಸದಾ  ಕಾಡುತ್ತಿತ್ತು.  ಆದರೆ ಹಾಗಾಗಲಿಲ್ಲ. ಅದಕ್ಕೆ ಕಾರಣವೆಂದರೆ ಇಲ್ಲಿನ ಚಿಲ್ಡ್ರನ್ ಸೆಂಟರ್ ಗಳು . 

ಇಲ್ಲಿನ ಪೋಷಕರಿಗೆ ಹಿರಿಯರ ನೆರವಿರುವುದಿಲ್ಲ ನಿಜ  , ಏನಾದರೂ ಆದರೆ ಮನೆಮದ್ದು ಮಾಡಲು, ಮಕ್ಕಳನ್ನು ಸಂತೈಸಲು  ಕೂಡ ಗೊತ್ತಿರದ ಯುವ ಪೋಷಕರ ಆತಂಕವನ್ನು ಕಡಿಮೆ ಮಾಡಲೆಂದೇ ಇಲ್ಲಿನ ಚಿಲ್ಡ್ರನ್ ಸೆಂಟರ್ ಗಳು ವಿಶೇಷ ಕಾಳಜಿ ತೆಗೆದುಕೊಂಡು ,  ವಿವಿದ ರೀತಿಯ ತರಗತಿಗಳನ್ನು ಪ್ರತಿದಿನ ಇಟ್ಟಿರುತ್ತಾರೆ. 
ಪ್ರತಿಯೊಬ್ಬ ಪೋಷಕರಿಗೂ ತಮ್ಮ ಮಕ್ಕಳನ್ನು ಬುದ್ದಿವಂತರನ್ನಾಗಿ  ಮಾಡಬೇಕು ಎಂಬ ಆಸೆ ಇರುತ್ತದೆ. ಮಕ್ಕಳಲ್ಲಿ ಓದುವ ಗೀಳನ್ನು ಹಚ್ಚಬೇಕು ಹಾಗೆ ಮಾಡಿದಲ್ಲಿ ಅವರಿಗೆ ತರಗತಿಯಲ್ಲಿ ಕೂಡ ಏಕಾಗ್ರತೆ ಹೆಚ್ಚಲು ಮತ್ತು ಆಸಕ್ತಿ ಹೊಂದಲು ಸಹಕಾರಿಯಾಗುತ್ತದೆ ಎಂಬುದು ಇಲ್ಲಿನ ಮಕ್ಕಳ ತಜ್ಞರ ಅಂಬೋಣ . ಮಕ್ಕಳು ಗೆಜೆಟ್ ಗಳನ್ನು ಹೆಚ್ಚು ಹೆಚ್ಚು ಬಳಸಿದಂತೆಲ್ಲ ಅವರ ಅರೋಗ್ಯ ಕೂಡ ಹದಗೆಡುತ್ತದೆ , ಕಣ್ಣಿನ ತೊಂದರೆ ಬರುತ್ತದೆ ,ಕುಳಿತಲ್ಲಿಂದ ಏಳದೆ ಬೊಜ್ಜು ಕೂಡ ಬರಬಹುದು. ಹಾಗೆಯೇ ಇಡೀ ದಿನ ಮಕ್ಕಳ ಮನಸ್ಸಿನಲ್ಲಿ ಗೇಮ್ಸ್ ತಲೆಯಲ್ಲಿ ಓದುವುದರಿಂದ ಓದಿನ ಬಗ್ಗೆ ಶಾಲೆಯೆಲ್ಲಿ ಮಾಡುವ ಪಾಠದ ಬಗ್ಗೆ ಯಾವುದೇ ರೀತಿಯ ಇಚ್ಛೆ ತೋರಿಸಲಾರರು . 

ಅಷ್ಟೇ ಅಲ್ಲ ಮಕ್ಕಳು ಮನೆ ಬಿಟ್ಟು ಹೊರಹೋಗಲು ಕೂಡ ಚಿಂತಿಸುತ್ತಾರೆ . ಹಿಂದೆ ಮಕ್ಕಳು ಹೊರಹೋಗಲು ಕಾದು ಕುಳಿತಿರುತ್ತಿದ್ದರು , ಪರಿಚಯವಿಲ್ಲದ ಕಡೆಗಳಿಗೆ ಹೋದರೂ ಅಲ್ಲಿ ಸಿಕ್ಕ ಇತರ ಮಕ್ಕಳೊಂದಿಗೆ ಗೆಳೆತನ ಮಾಡಿಕೊಳ್ಳುತ್ತಿದ್ದರು . ಈ ರೀತಿಯಾಗಿ ಸಾಮಾಜಿಕವಾಗಿ ಬೆರೆಯುತ್ತಿದ್ದರು . ಆದರೆ ಈಗಿನ ಮಕ್ಕಳಿಗೆ  ನೆಂಟರಿಶ್ಟರ ಮದುವೆ , ಮುಂಜಿಗಳಿಗೆ ಹೋದರೆ ಅಲ್ಲಿ ಆಟವಾಡಲು ಮೊಬೈಲ್ ಬೇಕು , ಹೆಚ್ಚಿನ ಮಕ್ಕಳು ಹೊರಗೆ ಕರೆದುಕೊಂಡು ಹೋದರೆ ಮಂಕಾಗಿ ಕುಳಿತುಕೊಳ್ಳುವುದು ಕಂಡುಬರುತ್ತದೆ.    ಮಕ್ಕಳು ಗೆಜೆಟ್ ಗಳ  ಮೊರೆ ಹೋಗಿ ದಿನವಿಡೀ ಅದರೊಂದಿಗೆ ಕಳೆಯುವುದನ್ನು ನೋಡಿದರೆ ಖೇದವೆನಿಸುತ್ತದೆ.

ನಮ್ಮ ಕಾಲದಲ್ಲಿ ಗೆಜೆಟ್ ಇಲ್ಲದೇ ನಾವೆಲ್ಲಾ ಮಣ್ಣು , ಗಿಡಮರಗಳ ನಡುವೆ ಆಡುತ್ತಾ ಬೆಳೆದಿರುವುದು ಅದೃಷ್ಟ ಎನ್ನಬಹುದು. ಹಾಗಾದರೆ ಈಗಿನ ಮಕ್ಕಳು ಹೀಗೆ ಗೆಜೆಟ್ ಹಿಡಿದು ಕೂರುವುದನ್ನು ತಡೆಯಲು ಸಾಧ್ಯವಿಲ್ಲವೇ ? ಖಂಡಿತ ಸಾಧ್ಯ.  ಇದನ್ನು ಪೋಷಕರಾದ ನಾವೇ ಮನೆಯಿಂದಲೇ  ಪ್ರಾರಂಭಿಸಬೇಕು.  ಇದಕ್ಕಾಗಿ ಮಕ್ಕಳ ಜೊತೆ ಕಳೆಯಲು ಸಮಯ ನಿಗದಿ ಪಡಿಸಿಕೊಳ್ಳುವುದು ಅಷ್ಟೇ ಅವಶ್ಯಕ. ಲಂಡನ್ ನ ಪ್ರತಿ ಚಿಲ್ಡ್ರನ್ ಸೆಂಟರ್ ಗಳು ಇದಕ್ಕಾಗಿ ವಿವಿಧ ತರಗತಿಗಳನ್ನು ಮಾಡುತ್ತಿವೆ. ಮಗು ಮೂರು ತಿಂಗಳು ಇರುವಾಗಲೇ ಅವಕ್ಕೆ ಪುಸ್ತಕವನ್ನು ತೋರಿಸಲು ಪ್ರಾರಂಭಿಸಿದರೆ ಅವಕ್ಕೆ ಪುಸ್ತಕ ಪ್ರೀತಿ ಹುಟ್ಟುತ್ತದೆ ಎಂಬುದು ಸಂಶೋಧಕರು ಕಂಡುಕೊಂಡ ಸತ್ಯ. ಮೊದಮೊದಲು ಪುಸ್ತಕವನ್ನು ಬಾಯಿಗೆ ಇಡಬಹದು, ಕಾಲ ಕಳೆದಂತೆ ಅದರ ಪುಟವನ್ನು ತಿರುಗಿಸಿ ಅದರೊಂದಿಗೆ ಆಡಲು ಪ್ರಾರಂಭಿಸುವ ಮಗು ಕ್ರಮೇಣ ಪುಸ್ತಕದಲ್ಲಿರುವ ಚಿತ್ರಗಳ ಮೇಲೆ ತನ್ನ ಗಮನವನ್ನು ಹರಿಸುತ್ತದೆ. ಒಂದೇ ಪುಸ್ತಕವನ್ನು ಮತ್ತೆ ಮತ್ತೆ ತೋರಿಸಿ ಅದರಲ್ಲಿರುವ ಕಥೆ ಓದಲು ಪ್ರಾರಂಭಿಸಿದರೆ ಅಥವಾ ಅದರಲ್ಲಿರುವ ಬಣ್ಣ ಬಣ್ಣದ ಚಿತ್ರಗಳನ್ನು ತೋರಿಸಿದರೆ  ಮಗು ಅದರಲ್ಲಿ ಕುತೂಹಲ ಹೊಂದುವುದು ಮಾತ್ರವಲ್ಲ ಅದರ ಶಬ್ದಕೋಶ ಕೂಡ ಬೆಳೆಯುತ್ತಾ ಹೋಗುತ್ತದೆ. ದಿನದಲ್ಲಿ ಕೇವಲ ಅರ್ಧ ತಾಸಿನಷ್ಟು ಕಥೆ ಓದುವ ದಿನಚರಿ ಇಟ್ಟುಕೊಂಡರೆ ಮಗು ಒಂದು ವರ್ಷವಾಗುವಷ್ಟರಲ್ಲಿ ಸಾಕಷ್ಟು ವಸ್ತುಗಳನ್ನು ಗುರುತಿಸುತ್ತದೆ . ತೊದಲು ನುಡಿ ನುಡಿಯಲು ಕಲಿಯುತ್ತದೆ. ರೈಮ್ಸ್ ಗಳನ್ನು ಅಥವಾ ಕಥೆಗಳನ್ನು ದಿನನಿತ್ಯದ ಅಭ್ಯಾಸವಾಗಿಸಿಕೊಂಡ ಮಗು ಇತರ ಮಕ್ಕಳಿಗಿಂದ ಬೇಗ ಮಾತನಾಡುವುದನ್ನು ಕಲಿಯುವುದನ್ನು ಗಮನಿಸಬಹುದು. 

ಮಕ್ಕಳ ಬುದ್ದಿ ವಿಕಾಸಕ್ಕೆ ಅವರು ಮಾಡುವ ಕೆಲಸದಲ್ಲಿ ಅಥವಾ ಆಟದಲ್ಲೇ ಇರಲಿ ಏಕಾಗ್ರತೆ ಹೆಚ್ಚಿಸಲು ಮಗುವಾಗಿರುವಾಗಲೇ ಕಥೆ ಓದುವುದು , ರೈಮ್ಸ್ ಹೇಳುವುದು ಈ ರೀತಿ ದಿನದಲ್ಲಿ ಸ್ವಲ್ಪ ಸಮಯವನ್ನು ಮೀಸಲಿಟ್ಟಲ್ಲಿ ಬಹಳಷ್ಟು ಉಪಯೋಗವಾಗುತ್ತದೆ ಎಂದು ತಜ್ಞರು ಕೂಡ ಹೇಳುತ್ತಾರೆ.

ಒಟ್ಟಾರೆಯಾಗಿ ಕಲಿಕೆಯಲ್ಲಿ ಒಂದು ಮಗು ಮುಂದುವರೆಯಬೇಕು ಎಂದಲ್ಲಿ ಪುಸ್ತಕ ಪ್ರೀತಿ ಒರೆ ಹಚ್ಚುವುದು ಅಷ್ಟೇ ಅವಶ್ಯಕ. ಇಲ್ಲಿನ ಚಿಲ್ಡ್ರನ್ ಸೆಂಟರ್ ಗಳಲ್ಲಿ ಹೇಳುವ ಪ್ರಕಾರ ಮಕ್ಕಳಿಗೆ ಊಟ ತಿಂಡಿ ಮಾಡುವಾಗ ಟಿವಿ ಹಾಕಿಯೋ ಅಥವಾ ಮೊಬೈಲ್ ನಲ್ಲಿ ಸಾಕಷ್ಟು ಹಾಡುಗಳನ್ನು ಹಾಕಿಯೋ ತಿನಿಸುವುದು ಪೋಷಕರು ಮಾಡುತ್ ದೊಡ್ಡ ತಪ್ಪು , ಹಿಂದೆ ಈ ರೀತಿ ಮಾಡದೆ ಚಂದಮಾಮ ತೋರಿಸಿ ಅಥವಾ ಮರಗಿಡ ಇತರ ಪ್ರಾಣಿಗಳನ್ನು ತೋರಿಸಿ ಅಥವಾ ಕಟ್ಟು ಕಥೆ ಹೇಳಿ ಮಕ್ಕಳಿಗೆ ಊಟ ಮಾಡಿಸುತ್ತಿದ್ದರು ಇದರಿಂದ ಮಕ್ಕಳ ಯೋಚನಾ ಶಕ್ತಿ ಹೆಚ್ಚಿ ಮಕ್ಕಳು ಹೆಚ್ಚು ಕ್ರಿಯಾಶೀಲರಾಗುವಂತೆ ಮಾಡುತ್ತದೆ. 

ಹೌದು ಪೋಷಕರೇ ನಮ್ಮ ಮಕ್ಕಳು ಕಲಿಕೆಯಲ್ಲಿ ಮುಂದಿರಬೇಕು , ಬುದ್ದಿವಂತರಾಗಬೇಕು ಎಂದಿದ್ದಲ್ಲಿ  ಮಗುವಾಗಿರುವಾಗಿನಿಂದಲೇ ಎಚ್ಚೆತ್ತುಕೊಳ್ಳಕೊಳ್ಳೋಣ . ಅವರೊಡನೆ ಬೆರೆತು ಮಕ್ಕಳೊಡನೆ ಕುಳಿತು , ಟಿವಿ , ಮೊಬೈಲ್ , ಟ್ಯಾಬ್ಲೆಟ್ ಗಳನ್ನು ದೂರವಿಟ್ಟು ಮಗುವಿನಿನೊಡನೆ ಮಗುವಾಗಿ ಬೆರೆತುಬಿಡೋಣ. ಮಕ್ಕಳೊಡನೆ ಕಳೆಯುವ ಸಮಯ ನಮ್ಮ ಆರೋಗ್ಯವನ್ನು ಉಲ್ಲಸಿತವಾಗಿಡುವುದರಲ್ಲಿ ಅನುಮಾನವಿಲ್ಲ. ಇಂದೇ ಹೋಗಿ ನಿಮ್ಮ ಮಗುವಿಗೆ ಪುಸ್ತಕ ತಂದು ಕೊಡಿ , ಒಂದು ಪುಸ್ತಕ ನಿಮ್ಮ ಮಗುವಿನ ಬದುಕನ್ನೇ ಬದಲಿಸಬಹುದು. 

ಅರ್ಪಿತಾ ರಾವ್


Tuesday 2 February 2021

ಆಪದ್ಭಾಂದವ

 Published in kannada press

 https://www.kannadapress.com/2021/02/02/travel-memories-by-arpita-rao/

ಕೆಲವೊಮ್ಮೆ ದೇವರು ಬಂದಂತೆ ಬಂದು ಕಾಪಾಡಿದ ಎಂಬ ಮಾತಿದೆಯಲ್ಲ . ಅಂತಹ ಅನುಭವ ನಿಮಗಾಗಿದೆಯೇ ? ಅದೂ ಹೆಸರು ಹೇಳಲೂ ಬರದಂತ ದೇಶದಲ್ಲಿ ಹೋಗಿ ಸಿಕ್ಕಿಕೊಂಡಾಗ ಇಂತಹದೊಂದು ಅನುಭವ ಎಂದರೆ ನಿಜಕ್ಕೂ ಅದ್ಬುತ ಅನುಭವವೇ ಸರಿ .

 

ಈಗ ಮೂರು  ವರ್ಷದ ಹಿಂದಿನ ಕಾಲ . ಆಗ ಹೀಗೆಲ್ಲ ಕರೋನ ಎಂಬ ಭಯವಿರಲಿಲ್ಲ . ಸಿಕ್ಕ ಸಿಕ್ಕವರನ್ನೆಲ್ಲ ಮಾತನಾಡಿಸಬಹುದಿತ್ತು . ಅದಲ್ಲದಿದ್ದರೆ ಕೊನೆಪಕ್ಷ ಒಂದು ನಗು ಆದರೂ ಕಾಣಿಸುತಿತ್ತು . ಈಗ ಹಾಗಿಲ್ಲ ಹೊರಗೆ ಹೋಗುವಂತಿಲ್ಲ . ಹೋದರೂ ಯಾರನೂ ಮಾತನಾಡಿಸುವಂತಿಲ್ಲ . ಟ್ರಿಪ್ ಹೋಗಬೇಕೆಂದರೆ ಮಾಸ್ಕ ನಿಂದ ಹಿಡಿದು ಎಲ್ಲವನ್ನೂ ಹಾಕಿಕೊಂಡು ಹೋಗಬೇಕು .

 

ಹೀಗೆ ಮೂರು  ವರ್ಷದ ಹಿಂದೆ ಕೆನರಿ ಐಲ್ಯಾನ್ಡ್ ಎಂಬಲ್ಲಿಗೆ ಪ್ರವಾಸ ಹೋಗಿದ್ದೆವು . ಹೊಸ ಪ್ರದೇಶಕ್ಕೆ ಪ್ರವಾಸಕ್ಕೆ ಹೋದಾಗ ಪ್ರವಾಸದ ಮಜಾದ ಜೊತೆಗೆ ಕೆಲವೊಮ್ಮೆ ಪಜೀತಿ ಆಗುವುದೂ ಕೂಡ ಉಂಟು . ಹಾಗೆ ಸುತ್ತಲು ಹೋದಾಗ ಕೈಯಲ್ಲಿದ್ದ ಮಗನಿಗಿನ್ನೂ ಎರಡು ವರ್ಷವಾಗಿತ್ತು . ಬೆಳಗ್ಗೆ ಸುಮಾರು ಹತ್ತುಗಂಟೆಗೆಲ್ಲ ನಾವಿದ್ದ ಕಾಟೇಜ್ ನಿಂದ ಹೊರಟು ಸುತ್ತಲಿನ ಪ್ರವಾಸಿ ತಾಣಗಳನ್ನು ನೋಡಲು ಹೊರಟೆವು . ನಾವಿದ್ದ ಕಾಟೇಜಿನಿಂದ ಸುಮಾರು ನಾಲ್ಕು ತಾಸು ಪ್ರಯಾಣ ಮಾಡಿ ಅಲ್ಲಿನ ಬೀಚ್ ಮತ್ತಿತರ ತಾಣಗಳನ್ನು ನೋಡಿ ಬಸ್ ನಲ್ಲಿ ಹಿಂತಿರುಗುತ್ತಿದ್ದೆವು. ಇನ್ನೂ ಸಂಜೆಯ ನಾಲ್ಕು ಗಂಟೆಯಾಗಿದ್ದರಿಂದ ಅಲ್ಲೇ ಇರುವ ಪಾಪಾಸು ಕಳ್ಳಿಯ ಗಾರ್ಡನ್ ನೋಡಿಕೊಂಡು ಹೋಗಬಹುದು ಎಂದು ಒಂದು ಹೆಸರು ಗೊತ್ತಿಲ್ಲದ ಕಡೆ ಇಳಿದುಕೊಂಡು ಹೋಗಿ ನೋಡಿದರೆ ಗಾರ್ಡನ್ ಕ್ಲೋಸ್ ಆಗಿತ್ತು . ಅಲ್ಲೇ ಸುತ್ತಲೂ ತಿರುಗಿ ಹೇಗೆ ಒಂದು ಗಂಟೆ ಕಳೆದವು . ನಂತರ ಬಸ್ಸನ್ನು ಹತ್ತಿ ಮತ್ತೆ ನಾವಿರುವಲ್ಲಿಗೆ ಹೋಗೋಣ ಎಂದು ಬಸ್ ಗಾಗಿ ಕಾಯುತ್ತಾ ನಿಂತೆವು . ಹಾಗೆ ನಾವು ನಿಂತು ಸುಮಾರು ಒಂದು ತಾಸಾಯಿತು ಕತ್ತಲೂ ಆವರಿಸುತ್ತಲೇ ಇತ್ತು . ಕತ್ತಲಾಗುತ್ತಿದ್ದಂತೆ ತಣ್ಣಗೆ ಕೊರೆಯುವ ಚಳಿ . ತಡೆಯಲಾಗದಂತೆ ನಡುಗುತ್ತ ಬಸ್ಸಿಗಾಗಿ ಕಾಯುತ್ತಾ ಬೇಸತ್ತಿದ್ದೆವು . ಹತ್ತಿರದಲ್ಲೆಲ್ಲಾದರೂ ಕ್ಯಾಬ್ ಸಿಗಬಹುದೇನೋ ಎಂದು ಕೇಳೋಣವೆಂದರೆ ಯಾರಿಗೂ ಇಂಗ್ಲಿಷ್ ಬರುತ್ತಿರಲಿಲ್ಲ . ಸ್ಪ್ಯಾನಿಷ್ ಭಾಷೆಯ ಒಂದೆರಡು ಶಬ್ದ ಬಿಟ್ಟರೆ ನಮಗೆ ಬೇರೆ ಸಂವಹನೆ ಗೊತ್ತಿರಲಿಲ್ಲ .  ಹಾಗೆ ಬೀಸುತ್ತಿದ್ದ ತಣ್ಣನೆಯ ಕೊರೆಯುವ ಚಳಿಗೆ ಮಗನಿಗೆ ಮೈ ಸುಡಲು ಪ್ರಾರಂಭವಾಗಿತ್ತು . ಒಂದೇ ಸಮನೆ ಅಳಲು ಪ್ರಾರಂಭಿಸಿದ್ದ . ನಮ್ಮ ಹತ್ತಿರ ಕೈಯಲ್ಲಿ ಹೊಚ್ಚಲು ಒಂದು ಹೊದಿಕೆ ಅಥವಾ ಸ್ವೇಟರ್ ಏನೂ ಇಲ್ಲದ ಪರಿಸ್ಥಿತಿ .

 

ಹಾಗೆ ಕ್ಯಾಬ್ ಕೂಡ ಇಲ್ಲದೆ ಕಾಯುತ್ತಾ ಕುಳಿತುಕೊಳ್ಳಲು ಸ್ಥಳವೂ ಇಲ್ಲದ ಪರಿಸ್ಥಿತಿಯಲ್ಲಿದ್ದಾಗ ಇದ್ದಕ್ಕಿದ್ದಂತೆ ಅಲ್ಲಿಗೊಂದು ಅಜ್ಜಿ ಬಂದರು . ಆಕೆಗೆ ಏನಿಲ್ಲವೆಂದರೂ ಎಪ್ಪತ್ತರ ಮೇಲೆ ವಯಸಾಗಿತ್ತು. ನಮ್ಮಂತೆ ಇನ್ನೂ ಎರೆಡು ಮೂರೂ  ಜನ ಅಲ್ಲಿ ಬಸ್ಸಿಗಾಗಿ ಕಾಯುತ್ತಿದ್ದರು . ಆ ಅಜ್ಜಿ ಅಲ್ಲಿ ಬಂದವರೇ ನಮ್ಮ ಪರದಾಟ ನೋಡಿ ತಮ್ಮ ಕೈಯಲ್ಲಿದ್ದ ಶಾಲ್ ಒಂದನ್ನು ತೆಗೆದು ಬೇಡವೆಂದರೂ ಕೇಳದೆ ಮಗನಿಗೆ ಹೊಚ್ಚಿಸಿಕೊಳ್ಳಲು ಕೊಟ್ಟರು . ಹಾಗೆಯೇ ಬಸ್ ನಿಲ್ದಾಣದ ಹಿಂದೆಯೇ ಇದ್ದ ಪಾಪಾಸು ಕಳ್ಳಿಗಳ ಗಿಡಗಳ ನಡುವೆ ನಿಲ್ಲುವಂತೆಯೂ ಹಾಗೆ ನಿಂತಲ್ಲಿ ಸ್ವಲ್ಪ ಬೆಚ್ಚಗಾಗುತ್ತದೆ ಎಂದು ತಮ್ಮ ಸ್ಪ್ಯಾನಿಷ್ ಭಾಷೆಯಲ್ಲಿ ಹೇಳಿ, ನಿಂತು ಹೀಗೆ ಇಲ್ಲಿ ಬನ್ನಿ ಎಂದು ತೋರಿಸಿದರು . ಅವರು ಹೇಳಿದಂತೆ ಹೋಗಿ ನಿಂತಾಗ ಕೊರೆಯುವ ಚಳಿ ಮೈಗೆ ಅಟ್ಟುವುದು ತಪ್ಪಿತು . ಹೀಗೆ ಆಪದ್ಭಾಂದವರಂತೆ ಆ ದಿನ ಬಂದು ನಮಗೆ ಸಹಾಯ ಮಾಡಿದ ಆ ಅಜ್ಜಿ ಭಾಷೆಯ ಕೊರತೆಯ ನಡುವೆಯೂ ನಮಗೆ ದೇವರಂತೆ ಕಂಡಿದ್ದು ನಿಜ . ಹಾಗೆ ಕಾಯುತ್ತಾ ಸುಮಾರು ನಾಲ್ಕು ತಾಸಿನ ನಂತರ ಬಸ್ ಬಂತು . ನಾವು ಕಾಟೇಜ್ ಸೇರಿದೆವು ಎಂಬುದನ್ನು ಮರೆಯಲೂ ಸಾಧ್ಯವಿಲ್ಲ . ನಾವು ಬಂದ ಬಸ್ಸಿಗೆ ನಮ್ಮೊಡನೆ ಬಂದ ಅಜ್ಜಿ ಹಸನ್ಮುಖಿಯಾಗಿ ನಮ್ಮ ಮುಂದಿನ ಪ್ರಯಾಣ ಶುಭಕರವಾಗಿರಲೆಂದು ಕೈ ಮಾಡಿ ಹೇಳಿದರು . ಭಾಷೆ ಗೊತ್ತಿಲ್ಲದಿದ್ದರೂ ಅವರು ಹೇಳಿದ ರೀತಿಯಿಂದ ಅವರ ಹಾರೈಕೆಯ ಅರಿವಾಗಿತ್ತು . ಗುರುತು ಪರಿಚಯವೇ ಇಲ್ಲದ ಇಂತಹ ಸಂದರ್ಭದಲ್ಲಿ ನಮ್ಮ ನೆರೆವಿಗೆ ಬಂದ  ಅಜ್ಜಿ ಪ್ರತಿದಿನ ನೆನಪಿನಲ್ಲಿರುತ್ತಾರೆ.


Arpitha Rao

Banbury

England