Friday 29 April 2016

ಲಹರಿ

ಅಪ್ಪನಿಗೆ ಫೋನ್ ಮಾಡಿದ್ದೆ. ಅದೇಕೋ  ಮಗ ಹುಟ್ಟಿದ ಮೇಲೆ ಅಪ್ಪನನ್ನು ಸ್ವಲ್ಪ ಹೆಚ್ಚೇ ಮಿಸ್ ಮಾಡಿಕೊಳ್ಳುತ್ತಿದ್ದೀನಿ. ದಿನಕ್ಕೆ ಒಮ್ಮೆಯಾದರೂ ಫೋನ್ ಮಾಡಿ  ಮಾತನಾಡದಿದ್ದರೆ  ಮನಸ್ಸಿಗೆ ಸಮಾಧಾನವೇ ಇರುವುದಿಲ್ಲ. ನನ್ನ ಎಂಟು ತಿಂಗಳ ಮಗ ಅಂಬೆ ಹರಿದು , ತಾನಾಗೆ ನಿಂತುಕೊಳ್ಳಲು ಪ್ರಾರಂಭಿಸಿದಂತೆ ಎಷ್ಟು ಬೇಗ ಸಮಯ ಕಳೆದು ಹೋಗುತ್ತಿದೆ ಎನಿಸುತ್ತಿದೆ. ನೋಡ ನೋಡುತ್ತಿದ್ದಂತೆ ಮಗನೂ ಬೆಳೆದು ದೊಡ್ಡವನಾಗಿ ಬಿಡುತ್ತಾನೆ ಎಂಬ ಸತ್ಯ ಅರಿವಾಗುತ್ತಿದೆ. ಆಗೆಲ್ಲ ನನಗೆ ನೆನಪಾಗುವುದು ಅಪ್ಪ. ಬಾಲ್ಯದ ಸುಂದರ ದಿನಗಳ ಮೆಲುಕು ಹಾಕ ಹೊರಟರೆ ದುತ್ತನೆ ಕಣ್ಣೆದುರು ಬರುವುದು ಅಪ್ಪನ ಆರೈಕೆ. ಎಷ್ಟು ಸುಂದರ ದಿನಗಳವು. ಅಪ್ಪ ಅದೆಷ್ಟು ಪ್ರೀತಿಯಿಂದ ನನ್ನ ಸಾಕಿದ್ದ ಮತ್ತು ಆ ಪ್ರೀತಿ ದಿನೇ ದಿನೇ ಹೆಚ್ಚುತ್ತಲೇ ಇದೆ. ಲಂಡನ್ ನಿಂದ  ವರ್ಷಕ್ಕೆ ಒಮ್ಮೆ ಅಪ್ಪನ ಮನೆಗೆ ಹೋಗಿ ಹಿಂತಿರುಗಿ ಬರುವಾಗ ಅಪ್ಪನ ಕಣ್ಣೀರು ಮರೆಯಬೇಕೆಂದರೂ ಮರೆಯಲಾರದು. ಅಪ್ಪ ಅದೇಕೆ ಅಷ್ಟು ಭಾವನಾತ್ಮಕ ಎಂದು ಕೆಲವೊಮ್ಮೆ ಗೊಂದಲವಾಗುತ್ತದೆ. ಮತ್ತು ಎಲ್ಲರೂ ಏಕೆ ಅಪ್ಪನಂತೆ ಇರಬಾರದು. ನಿಷ್ಕಲ್ಮಶ ಪ್ರೀತಿ,ನಿಸ್ವಾರ್ಥ ಕಾಳಜಿ , ಆತ ನನ್ನ ಅಮ್ಮನನ್ನು ಮತ್ತು ಮಕ್ಕಳನ್ನು ನೋಡಿಕೊಳ್ಳುವ ರೀತಿ ,ಇವೆಲ್ಲ ಅಪ್ಪನಿಗೊಬ್ಬನಿಗೆ ಸಾಧ್ಯ ಎಂದು ಯಾವಾಗಲೂ ನನಗನಿಸುತ್ತದೆ. 

ಹ್ನಾ  ಈ ಭಾರಿ ಊರಿಗೆ ಹೋದಾಗ ಅಪ್ಪ ಒಂದು ದಿನ ಬಾಳೆಕಾಯಿ ಅತಿರಸ ಮಾಡಿದ್ದ ನನಗೋಸ್ಕರ. ಚನ್ನಾಗಾಗಿತ್ತು ಆದರೆ ನನಗೆ ಅಕ್ಕಿಬೆಲ್ಲದ ಅತಿರಸ ಬಹಳ ಇಷ್ಟ . ಆದ್ದರಿಂದ  ಬಾಳೆಕಾಯಿ ಅತಿರಸ ಅದೇನೋ ನನಗೆ ಅಷ್ಟು ಇಷ್ಟವಾಗಲಿಲ್ಲವಾದರೂ ಅಪ್ಪ ಮಾಡುವ ಕುಟ್ಟವಲಕ್ಕಿ ಬೇರಾರು ಮಾಡಿದರು ಅಷ್ಟು ರುಚಿಯಾಗಿ ಇರುವುದಿಲ್ಲ ಎಂಬುದು ಮಾತ್ರ ಕಟು ಸತ್ಯ. ಹಾಗೇ ಅಡುಗೆ ಮಾಡುವಾಗಲೆಲ್ಲ ಅಪ್ಪ ಮಾಡುವ ಕುಟ್ಟವಲಕ್ಕಿ ಅಪ್ಪನಷ್ಟೇ ಕಾಡುತ್ತದೆ. ಹಾಗೆ ಫೋನ್ ಮಾಡಿದಾಗ ಅಪ್ಪನಲ್ಲಿ ಕೇಳಿಯೇ ಬಿಟ್ಟೆ. ಅಪ್ಪ ನೀ ಮಾಡುವ ಕುಟ್ಟವಲಕ್ಕಿ ರೆಸಿಪಿ ಕೊಡು ನಾನೂ ಹಾಗೇ  ಮಾಡಿ ನೋಡುತ್ತೇನೆ. ಯಾಕೋ ಕುಟ್ಟವಲಕ್ಕಿ ತಿನ್ನುವ ಮನಸ್ಸಾಗುತ್ತಿದೆ ಎಂದು ಅಪ್ಪನಿಗಾದ ಸಂತೋಷ ನೋಡದಿದ್ದರೂ ನಾ ಅರಿತಿದ್ದೆ. ಅವನಿಗೆ ಅದೇನೋ ಸಂತೋಷ ಮಗಳು ನನ್ನ ಕುಟ್ಟವಲಕ್ಕಿ ಅಷ್ಟು ಇಷ್ಟ ಪಡುತ್ತಾಳೆ  ಎಂದು.  ಅದು ಸುಲಭದ ರೆಸಿಪಿ ಹಾಗೆ ತಿನ್ನಲು ಬಹಳ ರುಚಿ.  

ಇಲ್ಲಿದೆ ನೋಡಿ ರೆಸಿಪಿ  - ದಪ್ಪ ಅವಲಕ್ಕಿ , ಬೇಕಾದಷ್ಟು ಹಸಿಮೆಣಸು , ಕೊತ್ತುಂಬರಿ ಸೊಪ್ಪು ಅಥವಾ ಕೊತ್ತುಂಬರಿ ಕಾಳು (ಸ್ವಲ್ಪ ಜಾಸ್ತಿಯೇ ಹಾಕಿದರೆ ಸುವಾಸನೆ ಭರಿತವಾಗಿರುತ್ತದೆ),ಒಂದು ನಾಲ್ಕು ಎಸಳು ಬೆಳ್ಳುಳ್ಳಿ ,ಸ್ವಲ್ಪ ಬೆಲ್ಲ ,ಹುಳಿಗೆ ವಾಟೆ ಪುಡಿ (ಅಥವಾ ನಿಂಬೆ ರಸ ) ಇವನ್ನು ಹಾಕಿ ತರಿತರಿಯಾಗುವಂತೆ ರುಬ್ಬಿ . ಇದಕ್ಕೆ ಬೇಕಾದಷ್ಟು ಉಪ್ಪು ಬೆರೆಸಿ, ಸಾಸಿವೆಕಾಳು ,ಜೀರಿಗೆ ,ಉದ್ದು ಮತ್ತು ಅರಿಶಿನ ಪುಡಿ ,ಶೇಂಗಾ ಹಾಕಿ  , ಕೊಬ್ಬರಿ ಎಣ್ಣೆಯಲ್ಲಿ ಒಗ್ಗರಣೆ ಮಾಡಿದರೆ ರುಚಿ ರುಚಿಯಾದ ಕುಟ್ಟವಲಕ್ಕಿ ಸವಿಯಲು ಸಿದ್ಧ. 

ಅಪ್ಪ ಹೇಳಿದ ರೀತಿಯಲ್ಲೇ ಕುಟ್ಟವಲಕ್ಕಿ ಮಾಡಿ ರುಚಿಯಾದ ಕುಟ್ಟವಲಕ್ಕಿ ಸವಿಯುವಾಗ ಬಾಲ್ಯದಲ್ಲಿ ಇದರ ಜೊತೆಗೆ ಕಬ್ಬಿನ ಹಾಲು ಸವಿಯುತ್ತಿದ್ದುದು ಬಹಳ ನೆನಪಾಗಿ ಅದೊಂದಿದ್ದಿದ್ದರೆ ಎನಿಸಿದ್ದು ಸುಳ್ಳಲ್ಲ. 

ಜೆರ್ಮನಿ ಪ್ರವಾಸ

My this article published in Sudha magazine


ನಾವಿರುವುದು ಲಂಡನ್ ನಲ್ಲಿ. ಈಗ ೩ ವರ್ಷಗಳ ಹಿಂದೆ ಜೆರ್ಮನಿಗೆ ಹೋಗಿದ್ದೆವು . ಅಲ್ಲಿ ಏನೇನು ನೋಡಬೇಕು ಎಂದೆಲ್ಲ ಮೊದಲೇ ಪ್ಲಾನ್ ಮಾಡಿಕೊಳ್ಳುವುದು ಸುಲಭದ ಸಂಗತಿಯಲ್ಲ ಆದ್ದರಿಂದ ಇಲ್ಲಿರುವ ಟೂರ್ ಪ್ಯಾಕೇಜ್ ನಲ್ಲಿ ಹೋಗಿಬಿಟ್ಟರೆ ಅವರೇ ಮುಖ್ಯ ಸ್ಥಳಗಳನ್ನು ತೋರಿಸುತ್ತಾರೆ  ಎಂದು ಸ್ಟಾರ್ ಟೂರ್ ನ ಮೂಲಕ ಪ್ಯಾರಿಸ್ ,ಜೆರ್ಮನಿ ಹೋಗಲು ಬುಕ್ ಮಾಡಿದೆವು. 

ಅಂತೂ ಪ್ರವಾಸ ಹೊರಟೆವು. ಅದು ಮೂರು ದಿನದ ಪ್ರವಾಸವಾದದ್ದರಿಂದ ಪ್ಯಾರಿಸ್ ಮೊದಲು ನೋಡಿಕೊಂಡು ನಂತರ ನಮ್ಮ ಪ್ರಯಾಣ ಜೆರ್ಮನಿಗೆ ಹೊರಟಿತು. ಪ್ಯಾರಿಸ್ ನಲ್ಲಿ  ಊಟದ ಸಮಸ್ಯೆ ಇರಲಿಲ್ಲ. 

ಜೆರ್ಮನಿ ನೋಡಿಕೊಂಡು ಹಿಂತಿರುಗಿ ಲಂಡನ್ ಗೆ ಹೋಗುವ ಸಮಯ. ದಾರಿಯಲ್ಲಿ ಮಧ್ಯ ಒಂದು ಸಣ್ಣ  ರೆಸ್ಟೋರೆಂಟ್  ಬಳಿ ನಿಲ್ಲಿಸಿ ಇವತ್ತು ಮಧ್ಯಾನ್ಹದ ಊಟ ನೀವೇ ಮಾಡಬೇಕು ಎಂದು ತಿಳಿಸಿದರು.ಅದು ಸಣ್ಣ ರೆಸ್ಟೋರೆಂಟ್. ನಮ್ಮೂರ ಬದಿಯಲ್ಲಿ ಡಾಬ  ಇದ್ದಂತೆ .ನಾನು ಅಲ್ಲಿ ನಿಂತಿದ್ದವಳ ಹತ್ತಿರ ಹೋಗಿ 'ವೆಜಿಟೇರಿಯನ್ ಏನಿದೆ' ಕೇಳಿದೆ. ಅವಳು ಮುಖ ಮುಖ ನೋಡಿ, ಒಂದು ರೀತಿ ಸಂಸ್ಕೃತವನ್ನು ಹೋಲುವ ಜೆರ್ಮನ್ ಭಾಷೆಯಲ್ಲಿ ಏನೋ ತೊದಲಿದಳು. ನಮಗದು ಸ್ವಲ್ಪವೂ ಅರ್ಥವಾಗಲಿಲ್ಲ. ನಾವು ಕೇಳಿದ್ದು ಆಕೆಗೆ ತಿಳಿಯಲಿಲ್ಲ. ವೆಜಿಟೇರಿಯನ್ ಎಂದರೆ ಎಗ್ ತೋರಿಸಿದಳು. ನಾನು ಅಲ್ಲೇ ಕುಸಿದು ಬೀಳುವುದೊಂದು ಬಾಕಿ. ನಾವು ಪಕ್ಕಾ ಸಸ್ಯಾಹಾರಿಗಳು. ಇದೊಳ್ಳೆ ಕಥೆಯಾಯಿತಲ್ಲ ಎಂದು ಅಲ್ಲಿದ್ದ ಇನ್ನೊಬ್ಬನನ್ನು ಸಲಾಡ್ ತೋರಿಸಿ ನೋ ಮೀಟ್, ನೋ ಎಗ್ ಎಂದರೆ ಆತ ಅದೇನೋ ಜೆರ್ಮನ್ ಭಾಷೆಯಲ್ಲಿ ಉತ್ತರಿಸಿ ಹಲ್ಲು ಕಿರಿದ. 

ಬೆಳಿಗ್ಗೆ ಒಂದು ಬ್ರೆಡ್ ಟೋಸ್ಟ್ ತಿಂದು ಒಂದು ಲೋಟ ಡಿಕಾಕ್ಷನ್ ನಂತಿದ್ದ ಕಾಫಿ ಕುಡಿದು ಹೊರಟ ನಮಗೆ ಹೊಟ್ಟೆಯಲ್ಲಿ ಚುರ್ ಎನ್ನುತ್ತಿತ್ತು. ಆದರೆ ಏನು ತಿನ್ನಲೂ ಭಯ. ಫ್ರೆಂಚ್ ಫ್ರೈಸ್ ಅನ್ನಾದರೂ ತೆಗೆದುಕೊಳ್ಳೋಣ ಎಂದರೆ ಇಲ್ಲಿ ಚಿಪ್ಸ್ ಗಳಲ್ಲೂ ಪ್ರ್ವಾನ್ ಚಿಪ್ಸ್ ಇನ್ನಿತರ ಫ್ಲೇವರ್ ಇರುತ್ತದೆ. ಇದರ ಸಹವಾಸವೇ ಬೇಡ ಎಂದು ಅಲ್ಲಿಂದ ಹೊರಗೆ ಬಂದು ಅಲ್ಲೇ ಪಕ್ಕದಲ್ಲಿದ್ದ ಸಣ್ಣ ಸೂಪರ್ ಮಾರ್ಕೆಟ್ ನಲ್ಲಿ ಬಾಳೆಹಣ್ಣು ,ತೆಗೆದುಕೊಂಡು ಅದರಲ್ಲೇ ಹೊಟ್ಟೆ ತುಂಬಿಸಿಕೊಂಡು ಮನೆ ತಲುಪಿದೆವು. 


ಅರ್ಪಿತಾ ರಾವ್ 
ಲಂಡನ್ 

Monday 25 April 2016

ನೆನಪುಗಳು ಮಧುರ

My this article published on 22 April 2016 vijayanext newspaper .
ಅದೊಂದು ಗುರುವಾರ , ಮಧ್ಯಾನ್ಹ ೨ ಗಂಟೆಯ ಸಮಯ . ಊಟ ಮಾಡಿ ಆಗಷ್ಟೇ ಮುಗಿಸಿದ್ದೆ . ಏಪ್ರಿಲ್ ತಿಂಗಳಾದ್ದರಿಂದ ಲಂಡನ್ ನಲ್ಲಿ ಅತ್ತ ಕೊರೆಯುವ ಚಳಿಯೂ ಅಲ್ಲ ಇತ್ತ ತಡೆಯಲಾರದ ಬಿಸಿಲೂ ಇಲ್ಲ ಎಂಬಂತ ಸ್ಥಿತಿ. ಮನೆಯೊಳಗೆ ಒಳ್ಳೆಯ ಹವಾಮಾನ ,ಹಾಗಂತ ಹೊರಗೆ ಹೋಗುವಂತೆಯೂ ಇಲ್ಲ , ಮೋಡ ಕವಿದಿದೆ. ಇಲ್ಲಿ ಹಾಗೆಯೇ ಅದೇನೋ ಇದ್ದಕ್ಕಿದ್ದಂತೆ ಜಿನುಗು ಮಳೆ ಬಂದು ಬಿಡುತ್ತದೆ. ನಮ್ಮ ಮಲೆನಾಡಿನಂತೆ ಮೋಡ ಕಪ್ಪುಗಟ್ಟುವುದಿಲ್ಲ , ಗುಡುಗು ಮಿಂಚಿನ ಆರ್ಭಟವಿಲ್ಲ. ಬೋರ್ಗರೆಯುವ ಧಾರಾಕಾರ ಮಳೆಯಂತೂ ಇಲ್ಲಿ ಬರುವುದೇ ಇಲ್ಲ. ಬಂದರೆ ಆಗೊಂದು ಈಗೊಂದು ಅನ್ನುವಂತೆ ಸಣ್ಣ ಗಿಟಿಗಿಟಿ ಹನಿ. ಸಪ್ಪೆ ವಾತಾವರಣ. 

ಕಿಟಕಿಯಿಂದ ಹೊರಗೆ ನೋಡುತ್ತಿದ್ದೆ ,ಬಿಕೋ ಎನ್ನುವ ರಸ್ತೆ ,ಒಂದು ನರಪಿಳ್ಳೆಯೂ ಕಾಣುತ್ತಿಲ್ಲ. ಅದೇನೋ ಇದ್ದಕ್ಕಿದ್ದಂತೆ ಹೊಟ್ಟೆಯಲ್ಲಿ ಚುಳ್ ಎಂಬ ಸೆಳೆತ. ಸ್ವಲ್ಪ ನೀರು ಕುಡಿದೆ. ಇನ್ನೂ ಜಾಸ್ತಿ ಜುಂ ,ಜುಂ  ನೋವು ,ತಡೆಯಲಾರೆ ಅನ್ನಿಸಿಬಿಟ್ಟಿತ್ತು ಹೇಗೋ ಸುಧಾರಿಸಿಕೊಂಡೆ. ಹಾಸಿಗೆಯ ಮೇಲೆ ಹಾಗೆಯೇ ಮಲಗಿದೆ ,ನಿದ್ದೆ ಸುಳಿಯಲಿಲ್ಲ ಈಗ  ಪ್ರತೀ ೫ ನಿಮಿಷಕ್ಕೊಮ್ಮೆ ಜುಂ ಜುಂ ವೈಬ್ರೇಟ್ ಆಗುವಂತಹ ಅನುಭವ. ಒಂದು ವಾರದ ಹಿಂದೆಯಷ್ಟೇ ಭಾರತದಿಂದ ಬಂದಿದ್ದ ಅಮ್ಮನಿಗೆ ಲಂಡನ್ ನ ಸಮಯದ ವ್ಯತ್ಯಾಸದಿಂದಾಗಿ ಮಂಪರು . ರಾತ್ರಿ ನಿದ್ದೆ ಬಾರದು ,ಮದ್ಯಾನ್ಹ ಮಲಗದಿದ್ದರೆ ಪಾಪ ಆಯಾಸ . ಸಂಜೆ ಹೊರಗೆ ಕರೆದುಕೊಂಡು ಹೋಗುವುದಾಗಿ ಹೇಳಿದ್ದೆ ಅವಳಿಗೆ ಇಲ್ಲಿನ ಸ್ಪ್ರಿಂಗ್ ನಲ್ಲೆ ಕೆಟ್ಟ ಚಳಿ 'ಇನ್ನು ಚಳಿಗಾಲದಲ್ಲಿ ಬಂದಿದ್ದರೆ ಬಹಳ ಕಷ್ಟವಾಗಿಬಿಡುತ್ತಿತ್ತು' ಹಾಗಂತ ಆಕೆಯೇ ನನಗೆ ಆಗಾಗ ಹೇಳುತ್ತಿದ್ದಳು.  

ಸ್ವಲ್ಪ ಹೊತ್ತಿನಲ್ಲಿ ೫ ನಿಮಿಷಕ್ಕೆ ಬರುತ್ತಿದ್ದ ನೋವು ೨ ನಿಮಿಷಕ್ಕೊಮ್ಮೆ ಈ ಬಾರಿ ಇನ್ನೂ ಸ್ವಲ್ಪ ಜಾಸ್ತಿ ಜೂಮ್ ಜೂಮ್  , ತಡೆಯಲಾಗಲಿಲ್ಲ . ಭಯ ಒಂದು ಕಡೆ ಎದ್ದು ಹೋಗಿ ಅಮ್ಮಾ ಹೊಟ್ಟೆ ನೋವು ಅಂದದ್ದಷ್ಟೇ , ದಡಾರ್ ಎಂದು ಎದ್ದು ಹೌದಾ ನೋವು ಶುರುವಾಗೇ ಬಿಡ್ತಾ ? ನಾ ಅಂದುಕೊಂಡಿದ್ದೆ ಬೆಳಿಗ್ಗೆಯಿಂದ ನಿನ್ನ ನೋಡಿದಾಗಲೇ ನನಗೆ ಗೊತ್ತಿತ್ತು !! ಫೋನ್ ಮಾಡು ಬೇಗ ಬೇಗ . 

ಸರಿ ಆಫೀಸಿನಿಂದ ಪತಿ ಬಂದಿದ್ದೂ ಆಯಿತು , ಆಸ್ಪತ್ರೆಗೆ ಫೋನ್ ಮಾಡಿದೆ ,ಆ ಕಡೆಯಿಂದ ನರ್ಸ್ ಇದು ಮೊದಲನೆಯದಾ ? ನೋವಿನಲ್ಲೇ ಉತ್ಸಾಹದಿಂದ ಹೇಳಿದೆ 'ಹೌದು' . ಅದಕ್ಕೆ ಇಷ್ಟು ಭಯ ನಿಮಗೆ . ನೋವು ಕೊನೇ  ಸ್ಟೇಜ್ ಗೆ ಹೋದಮೇಲೆ ಬನ್ನಿ . ಈಗಿನ್ನೂ ಪ್ರಾರಂಭವಷ್ಟೇ !!

ಈಗಿನ್ನೂ ಪ್ರಾರಂಭ ? ಅವಾಕ್ಕಾದೆ . ಇನ್ನು ಹೇಗೆ ನೋವು ಸಹಿಸಿಕೊಳ್ಳುವುದು ? ಗಂಟೆ ಸರಿಯುತ್ತಿತ್ತು,ಆದರೆ ಅವತ್ತೇಕೋ ಬಹಳ ನಿಧಾನಗತಿಯಲ್ಲಿ. ಆಗಾಗ ಸಮಯ ನೋಡಿದೆ ೭, ೯ ಹೀಗೆ ಸಮಯ ನಿಧಾನವಾಗಿ ಹೋಗುತ್ತಿತ್ತು. ಅಮ್ಮ ಒತ್ತಾಯ ಮಾಡಿ ಊಟ ಕೊಟ್ಟಳು . ಗಂಟಲಲ್ಲಿ ಇಳಿಯಲಿಲ್ಲ . ಈ ನೋವೊಂದು ಮುಗಿದರೆ ಸಾಕು. ರಾತ್ರಿ ಮಲಗುವ ಮೊದಲು ಮತ್ತೆ ಆಸ್ಪತ್ರೆಗೆ ಫೋನ್ ಮಾಡು ಅಮ್ಮನ ಒತ್ತಾಯ. 

'ಎಷ್ಟು ನಿಮಿಷಕ್ಕೊಮ್ಮೆ ನೋವಿದೆ ?'  ೧ ನಿಮಿಷ ಎಂದೆ , 'ಇನ್ನೂ ಸಮಯವಿದೆ ,ಈಗ ಬರುವುದು ಬೇಡ'.  ಮರು ಮಾತನಾಡುವ ಅವಕಾಶವನ್ನೂ ಕೊಡದೆ ಅತ್ತಕಡೆ ಫೋನ್ ಕುಕ್ಕಿಯಾಗಿತ್ತು. ಮಲಗಿದೆ . ನಿದ್ದೆ ಬರುವುದಾದರೂ ಹೇಗೆ ? ಅದೇನೋ ಒಂದು ಮಂಪರು ಅಷ್ಟರಲ್ಲಿ ಯಮಯಾತನೆ ನೋವು ತಡೆಯಲಾಗುತ್ತಿಲ್ಲ. ಎದ್ದು ಕುಳಿತೆ,ಅಳಬೇಕೆನಿಸಿತು ಆಗಲಿಲ್ಲ !! ರೂಂ ನಿಂದ ಹೊರಬಂದೆ . ಅಮ್ಮ ದಡಾರ್ ಎಂದು ಎದ್ದು ಕುಳಿತಳು ,ಏನಾಯ್ತು ? ಆಕೆಗೆ ಗಲಿಬಿಲಿ ಏನಿಲ್ಲ ನೋವು ,ನನ್ನದು ಅದೇ ಸಪ್ಪೆ ಮುಖ. ಸ್ವಲ್ಪ ಹೊತ್ತು ಕುಳಿತೆ ,ಓಡಾಡಿದೆ , ಇಲ್ಲ ಕಡಿಮೆ ಇಲ್ಲ ಹೆಚ್ಚಾಗುತ್ತಲೇ ಇದೆ. ಸಮಯ ಬೆಳಗಿನ ಜಾವ ೫ . ಈ ಭಾರಿ ಆಸ್ಪತ್ರೆಗೆ ಪತಿ ಫೋನ್ ಮಾಡಿದರು . ಆ ಕಡೆಯಿಂದ ಬಹಳ ಸೌಮ್ಯವಾಗಿ ಎಲ್ಲಾ ಮಾಹಿತಿಯನ್ನೂ ಪಡೆದಾಕೆ 'ಕರೆದುಕೊಂಡು ಬನ್ನಿ' ಎಂದಳು. ಅಬ್ಬಾ ಕೊನೆಗೂ ನೋವು ಇನ್ನೇನು ಮಾಯವಾಗಿಬಿಡುತ್ತದೆ ! ಒಂದು ನಿಟ್ಟುಸಿರು . 

ಗುರುವಾರ ಪ್ರಾರಂಭವಾದ ನೋವು ಶನಿವಾರವಾದರೂ ಅದೇ ಪ್ರಮಾಣದಲ್ಲಿತ್ತು , ಇಡೀ  ಅಸ್ಪತ್ರೆಯಲ್ಲೆಲ್ಲಾ ನನ್ನದೇ ಓಡಾಟ.  ಎಷ್ಟು ನಡೆದಾಡಿದರೂ ಏನೂ ಪ್ರಯೋಜನವಾಗಲಿಲ್ಲ. ಅಮ್ಮ ಒಂದು ಕಡೆ ದೇವರ ಧ್ಯಾನ ಮಾಡುತ್ತಿದ್ದಳು. ಪತಿ ನಿದ್ದೆಯಿರದೆ ಕಣ್ಣು ತೇಲುತ್ತಿತ್ತು. ಈ ಕಾಯುವುದರ ಕಷ್ಟ ಅಷ್ಟಿಷ್ಟಲ್ಲ ಎಂಬುದು ಅವರ ನೋವು. ಈ ನೋವು ಇನ್ನೂ ಎಷ್ಟು ಸಹಿಸಿಕೊಂಡಿರಬೇಕು ಎಂಬುದು ನನ್ನ ವ್ಯಥೆ. 

ಅಂತೂ ಭಾನುವಾರ ಮಧ್ಯಾನ್ಹ ೩ ಗಂಟೆಯ ಸಮಯ , ಡಾಕ್ಟರ್ ಬಂದರು . ಭಾರತದ ಬಹುಶಃ ಗುಜರಾತಿನ ಕಡೆಯವರಿರಬಹುದಾದ ಲೇಡಿ ಡಾಕ್ಟರ್ . ಇನ್ನು ಕಾಯಲಾಗುವುದಿಲ್ಲ ಆಪರೇಷನ್ ಮಾಡುತ್ತೇವೆ ಇಲ್ಲಿ ಸಹಿ ಹಾಕಿ . ಪಾಪರ್ ಸಮೇತ ಬಂದಿದ್ದರು. ನನಗೆ ಒಳಗೊಳಗೇ ಕುಶಿ ಆದರೂ ಇದನ್ನು ೩ ದಿನದ ಮೊದಲೇ ಮಾಡಬಹುದಿತ್ತಲ್ಲ ಎಂಬ ಸಿಟ್ಟು ಬೇರೆ. ಅಮ್ಮ ಅಲ್ಲೇ ಗೊಣಗಿದಳು ' ನೋವು ತಿಂದಿದ್ದೂ ತಪ್ಪಿಲ್ಲ ಆಪರೇಶನ್ ಮಾಡಿಸಿಕೊಳ್ಳುವುದೂ ತಪ್ಪಿಲ್ಲ,ನಮ್ಮ ಭಾರತದಲ್ಲಗಿದ್ದರೆ ಇಷ್ಟು ಕಷ್ಟ ಪಡಬೆಕಾಗಿರಲಿಲ್ಲ'. ನನಗೆ ಮಾತು ಹೊರಡಲಿಲ್ಲ. ಹೌದು ಎನಿಸಿತ್ತು ಅಮ್ಮನ ಮಾತು. 

ಅದಾಗಿ ಸ್ವಲ್ಪ ಹೊತ್ತಿಗೆ ಅಂದರೆ ೩-೪ ಗಂಟೆಯ ನಂತರ ಆಪರೇಶನ್ ತಿಯೇಟರ್ ಒಳಗೆ ಕರೆದುಕೊಂಡು ಹೋದರು. ಅನಸ್ತೇಶಿಯ ಕೊತ್ತಿದ್ದಷ್ಟೇ ಗೊತ್ತು. ಮತ್ತೆ ಮಗುವಿನ ಅಳು. ನನ್ನ ಕಂದ ಹುಟ್ಟಿದ್ದ . ಅದಾಗಿ ಈಗ ಒಂದು ವರ್ಷವಾಗಿಬಿಟ್ಟಿದೆ. ಆಗ ಬರೀ ಅಳುತ್ತಿದ್ದ ಮಗ ಈಗ ಮನೆಯೆಲ್ಲಾ ಓಡಾಡುತ್ತಾ ನಗುತ್ತಾ ತುಂಟಾಟ ಮಾಡುತ್ತಾನೆ. ಮೊದಲ ಹುಟ್ಟು ಹಬ್ಬದ ಶುಭಾಶಯಗಳು ಮಗನಿಗೆ  :)

Arpitha Harsha