Monday 25 April 2016

ನೆನಪುಗಳು ಮಧುರ

My this article published on 22 April 2016 vijayanext newspaper .
ಅದೊಂದು ಗುರುವಾರ , ಮಧ್ಯಾನ್ಹ ೨ ಗಂಟೆಯ ಸಮಯ . ಊಟ ಮಾಡಿ ಆಗಷ್ಟೇ ಮುಗಿಸಿದ್ದೆ . ಏಪ್ರಿಲ್ ತಿಂಗಳಾದ್ದರಿಂದ ಲಂಡನ್ ನಲ್ಲಿ ಅತ್ತ ಕೊರೆಯುವ ಚಳಿಯೂ ಅಲ್ಲ ಇತ್ತ ತಡೆಯಲಾರದ ಬಿಸಿಲೂ ಇಲ್ಲ ಎಂಬಂತ ಸ್ಥಿತಿ. ಮನೆಯೊಳಗೆ ಒಳ್ಳೆಯ ಹವಾಮಾನ ,ಹಾಗಂತ ಹೊರಗೆ ಹೋಗುವಂತೆಯೂ ಇಲ್ಲ , ಮೋಡ ಕವಿದಿದೆ. ಇಲ್ಲಿ ಹಾಗೆಯೇ ಅದೇನೋ ಇದ್ದಕ್ಕಿದ್ದಂತೆ ಜಿನುಗು ಮಳೆ ಬಂದು ಬಿಡುತ್ತದೆ. ನಮ್ಮ ಮಲೆನಾಡಿನಂತೆ ಮೋಡ ಕಪ್ಪುಗಟ್ಟುವುದಿಲ್ಲ , ಗುಡುಗು ಮಿಂಚಿನ ಆರ್ಭಟವಿಲ್ಲ. ಬೋರ್ಗರೆಯುವ ಧಾರಾಕಾರ ಮಳೆಯಂತೂ ಇಲ್ಲಿ ಬರುವುದೇ ಇಲ್ಲ. ಬಂದರೆ ಆಗೊಂದು ಈಗೊಂದು ಅನ್ನುವಂತೆ ಸಣ್ಣ ಗಿಟಿಗಿಟಿ ಹನಿ. ಸಪ್ಪೆ ವಾತಾವರಣ. 

ಕಿಟಕಿಯಿಂದ ಹೊರಗೆ ನೋಡುತ್ತಿದ್ದೆ ,ಬಿಕೋ ಎನ್ನುವ ರಸ್ತೆ ,ಒಂದು ನರಪಿಳ್ಳೆಯೂ ಕಾಣುತ್ತಿಲ್ಲ. ಅದೇನೋ ಇದ್ದಕ್ಕಿದ್ದಂತೆ ಹೊಟ್ಟೆಯಲ್ಲಿ ಚುಳ್ ಎಂಬ ಸೆಳೆತ. ಸ್ವಲ್ಪ ನೀರು ಕುಡಿದೆ. ಇನ್ನೂ ಜಾಸ್ತಿ ಜುಂ ,ಜುಂ  ನೋವು ,ತಡೆಯಲಾರೆ ಅನ್ನಿಸಿಬಿಟ್ಟಿತ್ತು ಹೇಗೋ ಸುಧಾರಿಸಿಕೊಂಡೆ. ಹಾಸಿಗೆಯ ಮೇಲೆ ಹಾಗೆಯೇ ಮಲಗಿದೆ ,ನಿದ್ದೆ ಸುಳಿಯಲಿಲ್ಲ ಈಗ  ಪ್ರತೀ ೫ ನಿಮಿಷಕ್ಕೊಮ್ಮೆ ಜುಂ ಜುಂ ವೈಬ್ರೇಟ್ ಆಗುವಂತಹ ಅನುಭವ. ಒಂದು ವಾರದ ಹಿಂದೆಯಷ್ಟೇ ಭಾರತದಿಂದ ಬಂದಿದ್ದ ಅಮ್ಮನಿಗೆ ಲಂಡನ್ ನ ಸಮಯದ ವ್ಯತ್ಯಾಸದಿಂದಾಗಿ ಮಂಪರು . ರಾತ್ರಿ ನಿದ್ದೆ ಬಾರದು ,ಮದ್ಯಾನ್ಹ ಮಲಗದಿದ್ದರೆ ಪಾಪ ಆಯಾಸ . ಸಂಜೆ ಹೊರಗೆ ಕರೆದುಕೊಂಡು ಹೋಗುವುದಾಗಿ ಹೇಳಿದ್ದೆ ಅವಳಿಗೆ ಇಲ್ಲಿನ ಸ್ಪ್ರಿಂಗ್ ನಲ್ಲೆ ಕೆಟ್ಟ ಚಳಿ 'ಇನ್ನು ಚಳಿಗಾಲದಲ್ಲಿ ಬಂದಿದ್ದರೆ ಬಹಳ ಕಷ್ಟವಾಗಿಬಿಡುತ್ತಿತ್ತು' ಹಾಗಂತ ಆಕೆಯೇ ನನಗೆ ಆಗಾಗ ಹೇಳುತ್ತಿದ್ದಳು.  

ಸ್ವಲ್ಪ ಹೊತ್ತಿನಲ್ಲಿ ೫ ನಿಮಿಷಕ್ಕೆ ಬರುತ್ತಿದ್ದ ನೋವು ೨ ನಿಮಿಷಕ್ಕೊಮ್ಮೆ ಈ ಬಾರಿ ಇನ್ನೂ ಸ್ವಲ್ಪ ಜಾಸ್ತಿ ಜೂಮ್ ಜೂಮ್  , ತಡೆಯಲಾಗಲಿಲ್ಲ . ಭಯ ಒಂದು ಕಡೆ ಎದ್ದು ಹೋಗಿ ಅಮ್ಮಾ ಹೊಟ್ಟೆ ನೋವು ಅಂದದ್ದಷ್ಟೇ , ದಡಾರ್ ಎಂದು ಎದ್ದು ಹೌದಾ ನೋವು ಶುರುವಾಗೇ ಬಿಡ್ತಾ ? ನಾ ಅಂದುಕೊಂಡಿದ್ದೆ ಬೆಳಿಗ್ಗೆಯಿಂದ ನಿನ್ನ ನೋಡಿದಾಗಲೇ ನನಗೆ ಗೊತ್ತಿತ್ತು !! ಫೋನ್ ಮಾಡು ಬೇಗ ಬೇಗ . 

ಸರಿ ಆಫೀಸಿನಿಂದ ಪತಿ ಬಂದಿದ್ದೂ ಆಯಿತು , ಆಸ್ಪತ್ರೆಗೆ ಫೋನ್ ಮಾಡಿದೆ ,ಆ ಕಡೆಯಿಂದ ನರ್ಸ್ ಇದು ಮೊದಲನೆಯದಾ ? ನೋವಿನಲ್ಲೇ ಉತ್ಸಾಹದಿಂದ ಹೇಳಿದೆ 'ಹೌದು' . ಅದಕ್ಕೆ ಇಷ್ಟು ಭಯ ನಿಮಗೆ . ನೋವು ಕೊನೇ  ಸ್ಟೇಜ್ ಗೆ ಹೋದಮೇಲೆ ಬನ್ನಿ . ಈಗಿನ್ನೂ ಪ್ರಾರಂಭವಷ್ಟೇ !!

ಈಗಿನ್ನೂ ಪ್ರಾರಂಭ ? ಅವಾಕ್ಕಾದೆ . ಇನ್ನು ಹೇಗೆ ನೋವು ಸಹಿಸಿಕೊಳ್ಳುವುದು ? ಗಂಟೆ ಸರಿಯುತ್ತಿತ್ತು,ಆದರೆ ಅವತ್ತೇಕೋ ಬಹಳ ನಿಧಾನಗತಿಯಲ್ಲಿ. ಆಗಾಗ ಸಮಯ ನೋಡಿದೆ ೭, ೯ ಹೀಗೆ ಸಮಯ ನಿಧಾನವಾಗಿ ಹೋಗುತ್ತಿತ್ತು. ಅಮ್ಮ ಒತ್ತಾಯ ಮಾಡಿ ಊಟ ಕೊಟ್ಟಳು . ಗಂಟಲಲ್ಲಿ ಇಳಿಯಲಿಲ್ಲ . ಈ ನೋವೊಂದು ಮುಗಿದರೆ ಸಾಕು. ರಾತ್ರಿ ಮಲಗುವ ಮೊದಲು ಮತ್ತೆ ಆಸ್ಪತ್ರೆಗೆ ಫೋನ್ ಮಾಡು ಅಮ್ಮನ ಒತ್ತಾಯ. 

'ಎಷ್ಟು ನಿಮಿಷಕ್ಕೊಮ್ಮೆ ನೋವಿದೆ ?'  ೧ ನಿಮಿಷ ಎಂದೆ , 'ಇನ್ನೂ ಸಮಯವಿದೆ ,ಈಗ ಬರುವುದು ಬೇಡ'.  ಮರು ಮಾತನಾಡುವ ಅವಕಾಶವನ್ನೂ ಕೊಡದೆ ಅತ್ತಕಡೆ ಫೋನ್ ಕುಕ್ಕಿಯಾಗಿತ್ತು. ಮಲಗಿದೆ . ನಿದ್ದೆ ಬರುವುದಾದರೂ ಹೇಗೆ ? ಅದೇನೋ ಒಂದು ಮಂಪರು ಅಷ್ಟರಲ್ಲಿ ಯಮಯಾತನೆ ನೋವು ತಡೆಯಲಾಗುತ್ತಿಲ್ಲ. ಎದ್ದು ಕುಳಿತೆ,ಅಳಬೇಕೆನಿಸಿತು ಆಗಲಿಲ್ಲ !! ರೂಂ ನಿಂದ ಹೊರಬಂದೆ . ಅಮ್ಮ ದಡಾರ್ ಎಂದು ಎದ್ದು ಕುಳಿತಳು ,ಏನಾಯ್ತು ? ಆಕೆಗೆ ಗಲಿಬಿಲಿ ಏನಿಲ್ಲ ನೋವು ,ನನ್ನದು ಅದೇ ಸಪ್ಪೆ ಮುಖ. ಸ್ವಲ್ಪ ಹೊತ್ತು ಕುಳಿತೆ ,ಓಡಾಡಿದೆ , ಇಲ್ಲ ಕಡಿಮೆ ಇಲ್ಲ ಹೆಚ್ಚಾಗುತ್ತಲೇ ಇದೆ. ಸಮಯ ಬೆಳಗಿನ ಜಾವ ೫ . ಈ ಭಾರಿ ಆಸ್ಪತ್ರೆಗೆ ಪತಿ ಫೋನ್ ಮಾಡಿದರು . ಆ ಕಡೆಯಿಂದ ಬಹಳ ಸೌಮ್ಯವಾಗಿ ಎಲ್ಲಾ ಮಾಹಿತಿಯನ್ನೂ ಪಡೆದಾಕೆ 'ಕರೆದುಕೊಂಡು ಬನ್ನಿ' ಎಂದಳು. ಅಬ್ಬಾ ಕೊನೆಗೂ ನೋವು ಇನ್ನೇನು ಮಾಯವಾಗಿಬಿಡುತ್ತದೆ ! ಒಂದು ನಿಟ್ಟುಸಿರು . 

ಗುರುವಾರ ಪ್ರಾರಂಭವಾದ ನೋವು ಶನಿವಾರವಾದರೂ ಅದೇ ಪ್ರಮಾಣದಲ್ಲಿತ್ತು , ಇಡೀ  ಅಸ್ಪತ್ರೆಯಲ್ಲೆಲ್ಲಾ ನನ್ನದೇ ಓಡಾಟ.  ಎಷ್ಟು ನಡೆದಾಡಿದರೂ ಏನೂ ಪ್ರಯೋಜನವಾಗಲಿಲ್ಲ. ಅಮ್ಮ ಒಂದು ಕಡೆ ದೇವರ ಧ್ಯಾನ ಮಾಡುತ್ತಿದ್ದಳು. ಪತಿ ನಿದ್ದೆಯಿರದೆ ಕಣ್ಣು ತೇಲುತ್ತಿತ್ತು. ಈ ಕಾಯುವುದರ ಕಷ್ಟ ಅಷ್ಟಿಷ್ಟಲ್ಲ ಎಂಬುದು ಅವರ ನೋವು. ಈ ನೋವು ಇನ್ನೂ ಎಷ್ಟು ಸಹಿಸಿಕೊಂಡಿರಬೇಕು ಎಂಬುದು ನನ್ನ ವ್ಯಥೆ. 

ಅಂತೂ ಭಾನುವಾರ ಮಧ್ಯಾನ್ಹ ೩ ಗಂಟೆಯ ಸಮಯ , ಡಾಕ್ಟರ್ ಬಂದರು . ಭಾರತದ ಬಹುಶಃ ಗುಜರಾತಿನ ಕಡೆಯವರಿರಬಹುದಾದ ಲೇಡಿ ಡಾಕ್ಟರ್ . ಇನ್ನು ಕಾಯಲಾಗುವುದಿಲ್ಲ ಆಪರೇಷನ್ ಮಾಡುತ್ತೇವೆ ಇಲ್ಲಿ ಸಹಿ ಹಾಕಿ . ಪಾಪರ್ ಸಮೇತ ಬಂದಿದ್ದರು. ನನಗೆ ಒಳಗೊಳಗೇ ಕುಶಿ ಆದರೂ ಇದನ್ನು ೩ ದಿನದ ಮೊದಲೇ ಮಾಡಬಹುದಿತ್ತಲ್ಲ ಎಂಬ ಸಿಟ್ಟು ಬೇರೆ. ಅಮ್ಮ ಅಲ್ಲೇ ಗೊಣಗಿದಳು ' ನೋವು ತಿಂದಿದ್ದೂ ತಪ್ಪಿಲ್ಲ ಆಪರೇಶನ್ ಮಾಡಿಸಿಕೊಳ್ಳುವುದೂ ತಪ್ಪಿಲ್ಲ,ನಮ್ಮ ಭಾರತದಲ್ಲಗಿದ್ದರೆ ಇಷ್ಟು ಕಷ್ಟ ಪಡಬೆಕಾಗಿರಲಿಲ್ಲ'. ನನಗೆ ಮಾತು ಹೊರಡಲಿಲ್ಲ. ಹೌದು ಎನಿಸಿತ್ತು ಅಮ್ಮನ ಮಾತು. 

ಅದಾಗಿ ಸ್ವಲ್ಪ ಹೊತ್ತಿಗೆ ಅಂದರೆ ೩-೪ ಗಂಟೆಯ ನಂತರ ಆಪರೇಶನ್ ತಿಯೇಟರ್ ಒಳಗೆ ಕರೆದುಕೊಂಡು ಹೋದರು. ಅನಸ್ತೇಶಿಯ ಕೊತ್ತಿದ್ದಷ್ಟೇ ಗೊತ್ತು. ಮತ್ತೆ ಮಗುವಿನ ಅಳು. ನನ್ನ ಕಂದ ಹುಟ್ಟಿದ್ದ . ಅದಾಗಿ ಈಗ ಒಂದು ವರ್ಷವಾಗಿಬಿಟ್ಟಿದೆ. ಆಗ ಬರೀ ಅಳುತ್ತಿದ್ದ ಮಗ ಈಗ ಮನೆಯೆಲ್ಲಾ ಓಡಾಡುತ್ತಾ ನಗುತ್ತಾ ತುಂಟಾಟ ಮಾಡುತ್ತಾನೆ. ಮೊದಲ ಹುಟ್ಟು ಹಬ್ಬದ ಶುಭಾಶಯಗಳು ಮಗನಿಗೆ  :)

Arpitha Harsha

No comments:

Post a Comment