Thursday 28 February 2013

ಮರೆಯಾಗದಿರು ನೆನಪೇ !

ಇಂದೇಕೋ ನಮ್ಮ ಮಲೆನಾಡು ಬಹಳ ನೆನಪಾಯಿತು ಹಾಗೆ ಆಗುತ್ತಲೇ ಇರುತ್ತದೆ . ಹಳೆಯ ನೆನಪುಗಳು ಹಸಿರಾಗಿ ಆಗಾಗ ಬಂದು ನಮ್ಮನ್ನು ಹಸಿ ಮಾಡಿ ಹೋಗುತ್ತದೆ ನಮ್ಮನ್ನು ಆ ದಿನಗಳಿಗೊಮ್ಮೆ ಕರೆದುಕೊಂಡು ಹೋಗಿಬಿಡುತ್ತದೆ. ನಮ್ಮೂರು ನೆನಪಾಗುವುದು ಮಳೆ ಹನಿ ಹಾಕಿದಾಗ ನಮ್ಮ ಮಲೆನಾಡಿನ ಆ ಬೋರ್ಗರೆವ ಮಳೆಯೆಲ್ಲಿ? ಈ ಸೂರ್ಯ ಮುಳುಗದ ನಾಡಿನ ತೊಟ್ಟಿಕ್ಕುವ ಮಳೆಯೆಲ್ಲಿ ? ಎತ್ತನಿಂದ ಎತ್ತಣ ಸಂಬಂದ . ಹೇಗೆ ನೋಡಿದರೂ  ಅಲ್ಲಿಗೂ ಇಲ್ಲಿಗೂ ಯಾವ ಹೋಲಿಕೆಯೂ  ಇರಲಾರದು .
 ಆದರೆ ಇಂದು ನೆನಪಾಗಲು ಬೇರೆಯದೇ ಕಾರಣವಿದೆ .  ಮೊದಲೆಲ್ಲ ದಿನಕ್ಕೊಮ್ಮೆ ಮನೆಗೆ ಫೋನ್ ಮಾಡಿ ಲಂಡನ್ ನ ವಾರ್ತೆ ತಿಳಿಸುತ್ತಿದ್ದೆ ಅಮ್ಮನಿಗೆ . ಈಗ ೧೫ ದಿನಗಳಿಂದ ಬೇರೆಯ ಕಾರ್ಯಗಳಲ್ಲಿ ಬ್ಯುಸಿ ಅಗಿಹೊಗಿದ್ದರಿಂದ ಫೋನ್ ಮಾಡುವ ಸಮಯವೇ ಸಿಕ್ಕಿರಲಿಲ್ಲ ಅದರಲ್ಲೂ ಭಾರತದ ಮತ್ತು ಈ ಲಂಡನ್ ನ ನಡುವೆ ೫.೩೦ ತಾಸಿನಷ್ಟು ವ್ಯತ್ಯಾಸವಿರುವುದರಿಂದ ನಾವಿಲ್ಲಿ ಬಿಡುವಾಗುವಷ್ಟರಲ್ಲಿ  ಅಲ್ಲಿ ಮದ್ಯ ರಾತ್ರಿ ಆಗಿಬಿತ್ತಿರುತ್ತದೆ . ಇಂದು ಅಮ್ಮ ಫೋನ್ ಮಾಡಿಲ್ಲದಕ್ಕೆ  ಬಹಳ ಬೇಸರಗೊಂಡಿದ್ದಳು . ಮಕ್ಕಳು ದೊಡ್ದವರಾಗುತ್ತಿದ್ದಂತೆ ತಮ್ಮ ಬದುಕಿನಲ್ಲಿ ನಮ್ಮ ನೆನಪೇ ಇರಲಾರದು ಎಂದಳು . ಎಷ್ಟು ಸತ್ಯವಾದ ಮಾತು . ಇಪ್ಪತ್ತು   ವರ್ಷ ಏನು ಕೆಲಸ ಮಾಡುವಾಗಲೂ  ಅಪ್ಪ ಅಮ್ಮ ನನ್ನು ಕೇಳುತ್ತಿದ್ದವಳು ಕೇವಲ ಮೂರು  ವರ್ಷದ ಹಿಂದೆ ಜೀವನಕ್ಕೆ ಕಾಲಿರಿಸಿದ ಗೆಳೆಯ ಹೆಚ್ಚಾಗಿ ಕಾಣಿಸುತ್ತಾನೆ . ಅಪ್ಪ ಅಮ್ಮ ನನ್ನು ಬಿಟ್ಟು ವರುಷ ೨ ವರ್ಷ ಇರಬಲ್ಲೆ ಆದರೆ ಗಂಡನನ್ನು ಬಿಟ್ಟು ೨ ತಿಂಗಳಿರುವುದು  ಬಹಳ ಕಷ್ಟದ ಕೆಲಸ . ಜೀವನದಲ್ಲಿ ಎಷ್ಟೊಂದು ಬದಲಾವಣೆ .  ಅಂದು ಹಾಸ್ಟೆಲ್ ಗೆ ಹೋಗುವಾಗ ಅಳುತ್ತಾ ಹೋಗುತ್ತಿದ್ದವಳು ಇಂದು ವರ್ಷಗಟ್ಟಲೆ ಸಾವಿರಾರು ಮೈಲಿ ದೂರ ಇರಬೇಕಾಗಿ ಬಂದಾಗ ಕುಣಿಯುತ್ತ ಹೊರೆಟು  ಬಿಡುತ್ತೇನೆ . 
ಬದುಕು ಬಹಳಷ್ಟು ಬದಲಾವಣೆ ತರಬಹುದು . ಆದರೆ ನೆನಪಿನಂಗಳದಲ್ಲಿ ನಮ್ಮೂರು, ನಮ್ಮವರು , ನಮ್ಮ ದೇಶ ನಮ್ಮ ಸಂಸ್ಕೃತಿ ಇವುಗಳೆಲ್ಲ ಇದ್ದೆ ಇರುತ್ತದೆ ಮರೆಯಲು ಸಾಧ್ಯವೇ ಇಲ್ಲ . ಸ್ವಲ್ಪ ದಿನಗಳು ಮರೆತಂತೆ ಇದ್ದರೂ  ಬಿಡುವಿನ ದಿನಗಳಲ್ಲಿ ಅವುಗಳ ನೆನಪುಗಳು ಬೆಂಬಿಡದೆ ಕಾಡುತ್ತವೆ. 
ಇದೆಲ್ಲವನ್ನು ಅಮ್ಮನಿಗೆ ಆಗಲೇ ಹೇಳಬೇಕೆಂದುಕೊಂಡೆ ಆದರೆ ಆಗಲಿಲ್ಲ . ಕೆಲವೊಂದು ಭಾವನೆಗಳು ಮನಸ್ಸಲ್ಲ್ಲಿ ಇದ್ದರೂ ಹೊರಹಾಕುವುದು ಬಹಳ ಕಷ್ಟದ ಕೆಲಸ ಅಲ್ಲವೇ ? ಅದಕ್ಕೆ ಈ ಬರಹ ಅಮ್ಮ ಓದಿ ಸಮಾದಾನಗೊಂಡಾಳು  ಎಂಬ ಆಶಯದೊಂದಿಗೆ  .

ಅರ್ಪಿತ ಹರ್ಷ 
ಲಂಡನ್ 

ಒಗ್ಗರಣೆ ಅವಾಂತರ


ಮಾರ್ಚ್ ೧,2013   ವಿಜಯನೆಕ್ಸ್ಟ್ ನಲ್ಲಿ ಪ್ರಕಟಗೊಂಡಿದೆ .



ನನಗೆ ಅಡುಗೆ ಮಾಡುವುದು ಎಂದರೆ ಇಷ್ಟ . ಅದೊಂದು ಹವ್ಯಾಸ ಎನ್ನುವ ರೀತಿ ಮಾಡುತ್ತೇನೆ . ಈಗಂತೂ ಇಂಟರ್ನೆಟ್  ನೋಡಿದರೆ ಯಾವುದು ಬೇಕು ಅದು ಮಾಡಬಹುದು ಹಾಗೆ ಮದುವೆಯಾದ ಹೊಸದರಲ್ಲೂ ನನಗೆ ಅಡುಗೆ ಮಾಡುವುದು ಕಷ್ಟ ಎನಿಸಲೇ ಇಲ್ಲ ಇಷ್ಟಪಟ್ಟು ಅಡುಗೆ ಮಾಡುತ್ತಿದ್ದೆ ತಿನ್ನುತ್ತಿದ್ದೆ . 
ಆದರೆ ಒಬ್ಬಬ್ಬರು ಮಾಡುವ ಅಡುಗೆ ಒಂದೊಂದು ರೀತಿಯಲ್ಲಿರುತ್ತದೆ . ಕೆಲವರ ಕೈ ರುಚಿಯೇ ಬೇರೆ . ನನ್ನ ಪತಿಯ ಚಿಕ್ಕಮ್ಮ ಪಲಾವ್ ಚೆನ್ನಾಗಿ ಮಾಡುತ್ತಾರೆ . ಈ ಭಾರಿ ಊರಿಗೆ ಹೋದಾಗ ನಮ್ಮ ಚಿಕ್ಕ ಅತ್ತೆ ಕೈಯಲ್ಲಿ ಪಲಾವ್ ಮಾಡುವುದು ಹೇಳಿಸಿ ಕೊಳ್ಳಬೇಕು  ಎಂಬ ಆಸೆ ಇತ್ತು .
ನಾನು ಅವರ ಮನೆಗೆ ಹೋಗಿದ್ದೆ . ಒಂದು ದಿನ ಹೇಗೆ ಪಲಾವ್ ಮಾಡುವುದು ಎಂದು ಹೇಳಿಕೊಟ್ಟರು ಹಸಿರು ಪಲಾವ್ . ರುಬ್ಬಿ ಮಾಡುವ ಪಲಾವ್ ಆದ್ದರಿಂದ ಅದು ತುಂಬಾ ಟೇಸ್ಟ್ ಕೊಡುತ್ತದೆ ಮತ್ತು ಅದು ತುಂಬಾ ಚನ್ನಾಗಿತ್ತು .
ಮತ್ತೊಂದು ದಿನ ಮನೆಗೆ ತುಂಬಾ ಜನ ನೆಂಟರು ಬರುವವರಿದ್ದರು . ಒಬ್ಬೊಬ್ಬರು ಒಂದೊಂದು ಅಡುಗೆ ಮಾಡಿದರೆ ಬೇಗ ಆಗುತ್ತದೆ ಎಂದು ತೀರ್ಮಾನಿಸಿದೆವು. ನನಗೆ ನಾನು ಕಲಿತ ಪಲಾವ್ ಅನ್ನು ಮತ್ತೊಮ್ಮೆ ಮಾಡಬೇಕು ಎಂಬ ಆಸೆ ಇತ್ತು . ನಾನು ಪಲಾವ್ ಮಾಡುವುದಾಗಿ ಹೇಳಿದೆ . ಅವರು ಕುಶಿಯಿಂದ ಒಪ್ಪಿದರು ನಾನು ಅವ್ರು ಹೇಳಿಕೊಟ್ಟಂತ ರೀತಿಯಲ್ಲೇ ಪಲಾವ್ ಮಾಡಿದೆ .
 ನಾನು ಮಾಡಿದ ಪಲಾವ್ ಎಲ್ಲ ರೆಡಿ ಆಗಿತ್ತು ಅನ್ನ  ಹಾಕಿ ಕಲೆಸಿಯೂ ಆಗಿತ್ತು . ಅವರು ಒಲೆಯಮೇಲೆ ಒಗ್ಗರಣೆಗೆ ಇಟ್ಟಿದ್ದರು ನಾನು ಯೋಚಿಸಿದೆ ಮೊನ್ನೆ ಹೇಳಿಕೊಟ್ಟ ಪಲಾವ್ ನಲ್ಲಿ ಒಗ್ಗರಣೆ ಇರಲಿಲ್ಲವಲ್ಲ ಎಂದು .ಅದು ಬೆಂದ ಕಾರಣ ನಾನು ಕೇಳಿದೆ ಹಾಕಲಾ ಎಂದು ಅವರು ಹಾಕು ಹಾಕಿದರೆ ಇನ್ನೂ  ಟೇಸ್ಟ್ ಬರುತ್ತದೆ ಎಂದರು ನಾನು ಒಗ್ಗರಣೆ ತೆಗೆದು ಪಲಾವ್ ಗೆ ಸುರಿದುಬಿಟ್ಟೆ  . ಆದರೆ ಅವರು  ಒಗ್ಗರಣೆ ಮಾಡಲು ಹೇಳಿದ್ದು ರಾಯತಕ್ಕಾಗಿತ್ತು .ನಾನು ಕೇಳದೆಯೇ ಪಲಾವ್ ಗೆ ಹಾಕಿಬಿಟ್ಟಿದ್ದೆ .
 ಪಲಾವ್ ಏನು ಹಾಳಾಗಲಿಲ್ಲ ಆದರೆ ನಾನು ಮಾಡಿದ ಎಡವಟ್ಟು ಕೆಲಸದಿಂದ ಎಲ್ಲರೂ  ಜೋರಾಗಿ ನಕ್ಕೆವು .

ಅರ್ಪಿತಾ ಹರ್ಷ 
ಲಂಡನ್ 

ಮಿಸ್ಸಲ್ ಪಾವ್

ಈ ನನ್ನ ಲೇಖನವು ೧೫/೦೩/೨೦೧೩ ವಿಜಯನೆಕ್ಸ್ಟ್ ನಲ್ಲಿ ಪ್ರಕಟಗೊಂಡಿದೆ 



ಮಿಸ್ಸಲ್ ಪಾವ್  ಎಂಬುದೊಂದು ಮಹಾರಾಷ್ಟ್ರದ ಚಾಟ್ . ಇದು ಬಹಳ ಪ್ರಖ್ಯಾತಿ ಹೊಂದಿದ ಚಾಟ್ . ಇದನ್ನು ಮುಂಬೈ ಮತ್ತು ಪುಣೆಯಲ್ಲಿ ಚಾಟ್ ರೀತಿಯಲ್ಲೂ ಸೇವಿಸುತ್ತಾರೆ ಮತ್ತು ಕೆಲವೊಮ್ಮೆ ಊಟದ ಜೊತೆಯೂ ಇದು ಹೊಂದುತ್ತದೆ . 

ಮಿಸ್ಸಲ್ ಪಾವ್ ಮಾಡಲು ಬೇಕಾದ ಸಾಮಗ್ರಿಗಳು :

೧ . ಮೊಳಕೆ ಬರಿಸಿದ ಹೆಸರು ಕಾಳು ಅರ್ಧ ಕಪ್ 
೨. ಶೇವಿಗೆ / ಕಾರದ ಕಾಳು  ಅರ್ಧ ಕಪ್ 
೩. ಪಾವ್ ಅಥವಾ ಬ್ರೆಡ್ ೫ 
೪. ಹಸಿ ಮೆಣಸಿನ ಕಾಯಿ ೨ 
೫. ಈರುಳ್ಳಿ ಅರ್ಧ  ಕಪ್ ಹೆಚ್ಚಿದ್ದು 
೬. ಟೊಮೇಟೊ ಅರ್ಧ  ಕಪ್ ಹೆಚ್ಚಿದ್ದು 
೭. ತುರಿದ ಕಾಯಿ ಅರ್ಧ ಕಪ್ 
೮.ಚಕ್ಕೆ -೧
೯.ಲವಂಗ ೨
 ೧೦.  ಮೆಣಸಿನ ಪುಡಿ ಅರ್ಧ ಚಮಚ 
೧೧.  ಕೊತ್ತುಂಬರಿ ಪುಡಿ ಅರ್ಧ ಚಮಚ 
೧೨. ಜೀರಿಗೆ ಅರ್ಧ ಚಮಚ 
೧೩ ಬೆಳ್ಳುಳ್ಳಿ  ೧ 
೧೪.  ರುಚಿಗೆ ತಕ್ಕಷ್ಟು ಉಪ್ಪು 
೧೫. ಹುಣಸೆ ಹಣ್ಣಿನ ರಸ ಸ್ವಲ್ಪ 


ಮಾಡುವ ವಿಧಾನ :

೧.ಮೊದಲು ಮೊಳಕೆಬರಿಸಿದ ಹೆಸರು ಕಾಳನ್ನು ಕುಕ್ಕರ್ ನಲ್ಲಿಟ್ಟು  ಬೇಯಿಸಿಕೊಳ್ಳಬೇಕು . ನಂತರ ಅದಕ್ಕೆ ಕಾರದ ಪುಡಿ ,ಉಪ್ಪು , ನಿಂಬೆ ಹುಳಿ  ಹಾಕಿ ಕೊಸಂಬರಿಯ ರೀತಿ ತಯಾರಿಸಿಟ್ಟುಕೊಳ್ಳಬೇಕು . 
೨.ಪಾವ್ ಅಥವಾ ಬ್ರೆಡ್ ಅನ್ನು ಕಾವಲಿಯ ಮೇಲಿತ್ತು ಸ್ವಲ್ಪ ಬಿಸಿ ಮಾಡಿಡಬೇಕು .
೩. ತುರಿದಿಟ್ಟ ಕಾಯಿಗೆ  ಮೆಣಸಿನ ಪುಡಿ , ಕೊತ್ತುಂಬರಿ ಪುಡಿ, ಜೀರಿಗೆ, ಬೆಳ್ಳುಳ್ಳಿ , ಹುಣಸೆಹಣ್ಣಿನ  ರಸ ಹಾಕಿ ರುಬ್ಬಿಕೊಳ್ಳಬೇಕು .
೪. ಬಾಣಲೆಯಲ್ಲಿ ಎಣ್ಣೆ ಹಾಕಿ ಅದಕ್ಕೆ ಸಾಸಿವೆ ಉದ್ದಿನಬೇಳೆ ಹಾಕಿ ಬೆಂದ ನಂತರ ರುಬ್ಬಿದ ಮಸಾಲವನ್ನು ಅದಕ್ಕೆ ಹಾಕಿ ೫ ನಿಮಿಷ ಚೆನ್ನಾಗಿ ತಿರುಗಿಸಬೇಕು .
೫. ಈಗ ಪ್ಲೇಟ್ ಗೆ ಮಾಡಿಟ್ಟ ಹೆಸರುಕಾಳು ಮಸಾಲ ಮೊದಲು ಹಾಕಿ ನಂತರ ರುಪ್ಪಿದ ಬಿಸಿ ಮಸಾಲವನ್ನು ಅದರ ಮೇಲೆ ಹಾಕಿ ನಂತರ ಹೆಚ್ಚಿತ್ತ ಈರುಳ್ಳಿ ಮತ್ತು ಟೊಮೇಟೊ ಹಾಕಿ ಅದರ ಮೇಲೆ ಶಾವಿಗೆ ಕಾಳು ಹಾಕಿ ಮೇಲೆ ಕೊತ್ತುಂಬರಿ ಸೊಪ್ಪು ಉದುರಿಸಿ ಪಕ್ಕದಲ್ಲಿ ಪಾವ್ ಅಥವಾ ಬ್ರೆಡ್ ಇಟ್ಟು  ತಿನ್ನಲು ಕೊಡಿ . ೨ ಬ್ರೆಡ್ ನೊಂದಿಗೆ ತಿಂದರೆ ಹೊಟ್ಟೆ ತುಂಬುತ್ತದೆ   . ಮಕ್ಕಳು ಕೂಡ ಇಷ್ಟಪಡುವ ಚಾಟ್ ಇದು .

Arpitha Harsha 

Monday 11 February 2013

ಲಂಡನ್ ನ ಟಾಪ್ 10 ಪ್ರವಾಸಿತಾಣಗಳು




ಲಂಡನ್ ನಲ್ಲಿ ನೋಡಲು ಸಾಕಷ್ಟು ಸ್ಥಳಗಳಿವೆ ಹಾಗೆಯೇ ಲಂಡನ್ ನ ಸುತ್ತಮುತ್ತ ಕೂಡ ಪ್ರವಾಸಿಗರನ್ನು ಕೈಬೀಸಿ ಕರೆಯುವ ಹಲವಾರು ಪ್ರವಾಸಿ ತಾಣಗಳು ಇವೆ . ಹೊರದೇಶಗಳಿಂದ ಕೂಡ ಲಂಡನ್ ಅನ್ನು ನೋಡಲು ಸಾಕಷ್ಟು ಜನ ಬರುತ್ತಾರೆ . ಆದರೆ ಯಾವ ಪ್ರವಾಸಿ ತಾಣವನ್ನು ನೋಡಬೇಕು ಎಂಬುದು ಗೊಂದಲದ ವಿಷಯವಾಗಬಹುದು .ಕೆಲವೊಮ್ಮೆ ಸಮಯದ ಅಭಾವವು ಇರಬಹುದಾದ ಕಾರಣಗಳಿಂದ ಎಲ್ಲವನ್ನು ನೋಡಲು ಆಗದಿದ್ದರೂ ಕೂಡ ಲಂಡನ್ ನಲ್ಲಿ ತಪ್ಪದೆ ನೋಡಬೇಕಾದ ಟಾಪ್ ಹತ್ತು ಪ್ರವಾಸಿತಾನಗಳ ಬಗ್ಗೆ ಸಣ್ಣ ಮಾಹಿತಿ :

1. ಟವರ್ ಬ್ರಿಡ್ಜ್ : ಇದನ್ನು ಲಂಡನ್ ಬ್ರಿಡ್ಜ್ ಎಂದು ಕೂಡ ಕರೆಯುತ್ತಾರೆ . ಇದು ಲಂಡನ್ ನ ಮೊದಲ ಆಕರ್ಷಣೆ. ಲಂಡನ್ ಎಂದ ಕೂಡಲೇ ಜನ ನೆನಪಿಸಿಕೊಳ್ಳುವುದು ಲಂಡನ್ ಬ್ರಿಡ್ಜ್ (ಟವರ್ ಬ್ರಿಡ್ಜ್ ) ಇದು ಜಗತ್ಪ್ರಸಿದ್ದಿ ಹೊಂದಿದೆ .ಇದನ್ನು ಥೇಮ್ಸ್ ನದಿಗೆ ಕಟ್ಟಲಾಗಿದೆ .ಇದರ ಉದ್ದ 244 ಮೀಟರ್ ಇದರ ಮೇಲೆ ಎಲ್ಲ ವಾಹನಗಳು ಓಡಾಡುವುದು ಇದರ ವಿಶೇಷ ಜೊತೆಗೆ ಇಲ್ಲಿ ನಡೆದುಕೊಂಡು ಹೋಗಲು ಕೂಡ ಅವಕಾಶವಿದೆ (ವಾಕಿಂಗ್ ಪಾತ್ ಇದೆ ) . ಇದು ಥೇಮ್ಸ್ ನದಿಯಿಂದ ಹಡಗುಗಳು ಬಂದಾಗ 2 ಭಾಗವಾಗಿ ವಿಭಾಗ ಹೊಂದುವುದು ಇದರ ವಿಶೇಷ .

2. ಲಂಡನ್ ಐ : ಹೆಸರೇ ಹೇಳುವಂತೆ ಇದು ನೋಡಲು ಕಣ್ಣಿನ ಆಕಾರದಲ್ಲಿದೆ . ಇದನ್ನು 2000 ಇಸವಿಯಲ್ಲಿ ಪ್ರಾರಂಭಿಸಲಾಯಿತು .ಇದು ಕೂಡ ಥೇಮ್ಸ್ ನದಿಯ ದಡದಲ್ಲಿದೆ. 135 ಅಡಿ ಎತ್ತರದಲ್ಲಿದೆ . ಇದರಲ್ಲಿ 25 ಕಣ್ಣಿನ ಆಕಾರದ ಬುಟ್ಟಿಗಳಿವೆ . ಬಹಳ ನಿಧಾನವಾಗಿ ಚಲಿಸುವ ಇದು ಹತ್ತಿರದ ಎಲ್ಲ ಆಕರ್ಷಣೀಯ ಸ್ಥಳಗಳನ್ನು ಎತ್ತರದಿಂದ ನೋಡುವ ಅವಕಾಶ ನೀಡುತ್ತದೆ .

3. ಮೇಡಂ ತುಸ್ಸಾಡ್ಸ್  : ಇದು ಮೇಣ ದಿಂದ  ಮಾಡಿದ ದೊಡ್ಡ ವ್ಯಕ್ತಿಗಳ ವಸ್ತುಸಂಗ್ರಹಾಲಯ . ಜಗತ್ತಿನ ಖ್ಯಾತ ವ್ಯಕ್ತಿಗಳ ಮತ್ತು ಸೆಲೆಬ್ರಿಟಿ ಗಳ ವ್ಯಾಕ್ಸ್ ಕೆತ್ತನೆ ಇಲ್ಲಿವೆ ಇದರಲ್ಲಿ ನಮ್ಮ ದೇಶದ ಮಹಾತ್ಮಾ ಗಾಂಧೀ, ಇಂದಿರಾ ಗಾಂಧಿ, ಸಚಿನ್ ತೆಂಡೂಲ್ಕರ್, ಶಾರುಖ್ ಖಾನ್, ಅಮಿತಾಬ್ ಬಚ್ಚನ್, ಹೃತಿಕ್ ರೋಶನ್, ಐಶ್ವರ್ಯ ರೈ , ಸಲ್ಮಾನ್ ಖಾನ್, ಮತ್ತು ಇತ್ತೀಚಿಗೆ ಕರೀನಾ ಕಪೂರ್ ಮತ್ತು ಮದುರಿ ದೀಕ್ಷಿತ್ ವ್ಯಾಕ್ಸ್ ಆಕೃತಿಗಳನ್ನು ಕೂಡ ಕೆತ್ತಲಾಗಿದೆ . ಇದನ್ನು ತುಸ್ಸಾದ್ ಎಂಬುವವರು ಪ್ರಾರಂಭಿಸಿದ್ದರಿಂದ ಮೇಡಂ ತುಸ್ಸಾದ್ ಎಂಬ ಹೆಸರನ್ನು ಇಡಲಾಗಿದೆ . ಸುಮಾರು 2 ಗಂಟೆಗಳ ಕಾಲ ನೋಡಬಹುದಾದ ಅತಿ ದೊಡ್ಡ ಸಂಗ್ರಹಾಲಯ ಇದಾಗಿದ್ದು ಮನಸ್ಸಿಗೆ ಮುದ ನೀಡುವುದು ಖಂಡಿತ .

4. ಗ್ರೀನ್ ವಿಚ್ ಮೆರಿಡಿಯನ್ : ಇಲ್ಲಿ ಹೋಗುವಾಗ ಕ್ರೂಸ್ ನಲ್ಲಿ ಹೋಗಬಹುದು ಆಗ ಕೂಡ ಸಾಕಷ್ಟು ಪ್ರವಾಸಿ ತಾಣಗಳ ಬಗ್ಗೆ ತೋರಿಸಿಕೊಂಡು ಹೋಗಲಾಗುತ್ತದೆ . ಇದು ರಿವರ್ ಥೇಮ್ಸ್ ನಲ್ಲಿ ಒಂದು ಸುತ್ತಿ ಸುತ್ತಿಸಿ ಅಲ್ಲೇ ಥೇಮ್ಸ್ ನದಿಗೆ ಕಟ್ಟಲಾದ ಬ್ಯಾರಿಯರ್ ನ ಬಗ್ಗೆ ಕೂಡ ಮಾಹಿತಿಯನ್ನು ನೀಡಿ ನಂತರ ಗ್ರೀನ್ ವಿಚ್ ತಲುಪಿಸುತ್ತದೆ . ಜಗತ್ತಿನ ಸಮಯ ಪ್ರಾರಂಭವಾಗುವುದೇ ಈ ಗ್ರೀನ್ವಿಚ್ ನ ಮೆರಿಡಿಯನ್ ನಿಂದ ಇಲ್ಲಿ ಅಕ್ಷಾಂಶ ಮತ್ತು ರೆಖಾಂಕ್ಷ ಗಳಾಗಿ ವಿಭಾಗ ಹೊಂದಿದ  ಗೆರೆಗಳು ಕೂಡ ನೋಡಬಹುದು . 


5. ಬ್ರಿಟಿಷ್ ಮ್ಯೂಸಿಯಂ : ಇದು ಅತಿ ದೊಡ್ಡ ವಸ್ತು ಸಂಗ್ರಹಾಲಯ ಇಲ್ಲಿ ಪ್ರಪಂಚದ ಎಲ್ಲ ದೇಶಗಳಿಂದ ತಂದ ಬೆಲೆಬಾಳುವ ವಸ್ತುಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ .  ಬ್ರಿಟೀಷರು ಬೇರೆ ಬೇರೆ ದೇಶಗಳಿಗೆ ಹೋದಾಗ ಸಿಕ್ಕ ಎಲ್ಲ ಸಂಗ್ರಹ ಗಳನ್ನೂ ಇಲ್ಲಿ ಕಾಣಬಹುದು ಇದನ್ನು ಸಂಪೂರ್ಣವಾಗಿ ನೋಡಲು 3 ದಿನವಾದರೂ ಬೇಕು .1759 ರಿಂದ ಇದನ್ನು ಪ್ರವಾಸಿಗರಿಗೋಸ್ಕರ ತೆರೆಯಲಾಯಿತು .ಅವರು ನೀಡುವ ಮಾಹಿತಿ ಪ್ರಕಾರ ಇಲ್ಲಿ ಹೆಚ್ಚು ಕಡಿಮೆ 800 ಮಿಲಿಯನ್ ನಷ್ಟು ವಸ್ತುಗಳ ಸಂಗ್ರಹವಿದೆ .ಪ್ರತಿದಿನ ಬೆಳಿಗ್ಗೆ 10 ಗಂಟೆಯಿಂದ ಸಂಜೆ 5.30 ವರೆಗೆ ತೆರೆದಿರುವುದರ ಜೊತೆಗೆ ಇದು ಫ್ರೀ ಯಾಗಿ ನೋಡಿ ಬರಬಹುದಾದ ವಸ್ತುಸಂಗ್ರಹಾಲಯ .

6. ಸೆಂಟ್ ಪೌಲ್ ಕ್ಯಾಥೆಡ್ರಾಲ್ : ಇದು ಒಂದು ಅತ್ಯಂತ ಪುರಾತನ ಚರ್ಚ್ . ಇದರ ಎತ್ತರ ೩೬೫ ಅಡಿ  ನಷ್ಟು . ಇದನ್ನು ಹತ್ತಿ ಮೇಲೆ ನಿಂತು ಲಂಡನ್ ಅನ್ನು ನೋಡುವ ಸೊಗಸೇ ಬೇರೆ ಅದನ್ನು ನೋಡಿಯೇ ಆನಂದಿಸಬೇಕು . ಆದ್ದರಿಂದಲೇ ಇದು ಲಂಡನ್ ನ ಅತಿ ಮುಖ್ಯ ಆಕರ್ಷನೀಯತೆ ಗಳಲ್ಲಿ .ಒಂದಾಗಿದೆ .

7.ಬಿಗ್ ಬೆನ್   :ಲಂಡನ್ ಎಂದ ತಕ್ಷಣ ಮೊದಲು ನೆನಪಿಗೆ ಬರುವುದು ಲಂಡನ್ ಬ್ರಿದ್ಜ್  ಆದರೆ ನಂತರ ನೆನಪಿಗೆ ಬರುವುದು ಬಿಗ್ ಬೆನ್. ಇದು ಒಂದು ಕ್ಲಾಕ್ ಟವರ್ . ಇದನ್ನು ಎಲಿಜಬೆತ್ ಟವರ್ ಎಂದು ಕೂಡ ಕರೆಯುತ್ತಾರೆ . ಇದನ್ನು ೧೮೫೮ ರಲ್ಲಿ ಕತ್ತಲಾಯಿತು. ಇಂದು ಇದು ಲಂಡನ್ ಮತ್ತು ಇಡೀ ಇಂಗ್ಲೆಂಡಿನ ಆಕರ್ಷಣೆ ಆಗಿದೆ .ಪ್ರತಿ ಅರ್ಧ ಗಂಟೆಗೊಮ್ಮೆ ಇದು ಬೆಲ್ ಹೊಡೆದುಕೊಳ್ಳುತ್ತದೆ . ಲಂಡನ್ ನಲ್ಲಿ ಪ್ರತಿ ಹೊಸ ವರ್ಷದ ದಿನ ಅಂದರೆ ಡಿಸೆಂಬರ್ ೩೧ ರ ಮಧ್ಯರಾತ್ರಿ ೧೨ ಗಂಟೆಗೆ ಪಟಾಕಿಗಳ ಉತ್ಸವವೇ ನಡೆಯುತ್ತದೆ . ಆ ೧೨ ಗಂಟೆ ಈ ಬಿಗ್  ಬೆನ್ ನಲ್ಲಿ ಅಲ್ಲಿ ನೆರೆದಿರುವ ಲಕ್ಷಗಟ್ಟಲೆ ಜನರಿಗೆ ಕೇಳಿಸುವಷ್ಟು ಜೋರಾಗಿ ಹೊಡೆದುಕೊಳ್ಳುತ್ತದೆ  ಇದೇ  ಆ ಗಡಿಯಾರದ ವಿಶೇಷ .  

8.ಬಕ್ಕಿಂಗ್ ಹ್ಯಾಮ್ ಅರಮನೆ /ಬಕ್ಕಿಂಗ್ ಹ್ಯಾಮ್ ಪ್ಯಾಲೇಸ್ : ಇದು ರಾಯಲ್ ಕುಟುಂಬದವರು ಇರುವ ಸ್ಥಳ .೧೭೦೫ ರಲ್ಲಿ ಇದನ್ನು ಕಟ್ಟಲಾಯಿತು .ಇದನ್ನು ವರ್ಷದ ಕೆಲವಷ್ಟು ದಿನಗಳಲ್ಲಿ ಮಾತ್ರ ನೋಡುಗರಿಗೆ ಒಳಭಾಗವನ್ನು ನೋಡುವ ಅವಕಾಶ ಒದಗಿಸಿ ಕೊಡಲಾಗುತ್ತದೆ.ಈ ಅರಮನೆ ೮೩೦.೦೦ ಸ್ಕ್ವಯರ್ ಫೀಟ್ ನಷ್ಟು ಜಾಗವನ್ನು ಹೊಂದಿದೆ ಎನ್ನಲಾಗಿದೆ . ಅಲ್ಲಿನ ವೈಭವವನ್ನು ಹೋಗಿಯೇ ನೋಡಬೇಕು . ಒಳಭಾಗದಲ್ಲಿ ಫೋಟೋ ತೆಗೆಯುವುದನ್ನು ನಿಷೇಧಿಸಲಾಗಿದೆ . 

9.ನ್ಯಾಚುರಲ್ ಹಿಸ್ಟರಿ ಮ್ಯೂಸಿಯಂ. ಸೈನ್ಸ್ ಮ್ಯೂಸಿಯಂ : ಇವೆರಡು ಇರುವುದು ಲಂಡನ್ ನ ಕೆನ್ಸಿಂಗ್ ಟನ್ ನಲ್ಲಿ .   ಇದು ಪ್ರವಾಸಿಗರನ್ನು ಹೆಚ್ಚು ಆಕರ್ಷಿಸುವ ಮ್ಯೂಸಿಯಮ್ ಗಳಾಗಿದೆ . ಸೈನ್ಸ್ ಮ್ಯೂಸಿಯಂ ಸೈನ್ಸ್ ಬಗ್ಗೆ  ಮಾಹಿತಿ ನೀಡುವ ಜೊತೆಗೆ ಚಿಕ್ಕ ಮಕ್ಕಳು ಕೂಡ ಆಟದ ಮೂಲಕ ತಿಲಿದುಕೊಲ್ಲಬಹುದಾದ ಸಂಗ್ರಹಾಲಯ . ನ್ಯಾಚುರಲ್ ಹಿಸ್ಟರಿ ಮ್ಯೂಸಿಯಂ ನಲ್ಲಿ ಎಲ್ಲ ರೀತಿಯ ಅಂದರೆ ಸಸ್ಯಶಾಸ್ತ್ರ, ಕೀಟಶಾಸ್ತ್ರ,ಖನಿಜಗಳ ಬಗ್ಗೆ,ಪ್ರಾಗ್ಜೀವ ಶಾಸ್ತ್ರಗಳ ಸಂಗ್ರಹಾಲಯವನ್ನು ಇರಿಸಲಾಗಿದ್ದು ಒಂದು ದಿನ ಪೂರ್ತಿ ಇದನ್ನು ನೋಡಲು ಬೇಕಾಗುತ್ತದೆ .

10.ವಿಂಡ್ಸರ್ ಕ್ಯಾಸೆಲ್ : ಇದು ಲಂಡನ್ ನಿಂದ ಸ್ವಲ್ಪ ಹೊರಭಾಗದಲ್ಲಿದೆ. ಅತಿ ದೊಡ್ಡ ಕ್ಯಾಸೆಲ್ ಎಂಬ ಹೆಸರುಪಡೆದಿದೆ . ಇದನ್ನು ನೋಡುವುದಕ್ಕೊಸ್ಕರವೇ ಸುತ್ತಲಿನ ದೇಶಗಳಿಂದ ಬರುವವರ ಸಂಖ್ಯೆ ದೊಡ್ಡದಿದೆ. ಪ್ರತಿದಿನ ಅತಿ ಹೆಚ್ಚಿನ ಪ್ರವಾಸಿಗರನ್ನು ಸೆಳೆಯುವ ಕೋಟೆ ಇದು . ಇದನ್ನು ನೋಡಲು ಒಂದು ದಿನ ಪೂರ್ತಿ ಮೀಸಲಿಡಬೇಕು . 

ಇವಿಷ್ಟು ಲಂಡನ್ ಗೆ ಬಂದವರು ಅಥವಾ ಬರುವ ಯೋಜನೆಯಿರುವವರು ಮೊದಲೇ ಪ್ಲಾನ್ ಮಾಡಿತ್ತು ಕೊಳ್ಳಬೇಕಾದ ಮತ್ತು  ನೋಡಲೇ ಬೇಕಾದ ಸ್ಥಳಗಳು .

ಅರ್ಪಿತಾ ಹರ್ಷ 
ಲಂಡನ್ 

ನಮ್ಮೂರಿನಲ್ಲಿ ಕಳೆದ ಬಾಲ್ಯ ಮತ್ತು ಈ ಲಂಡನ್ ಬ್ರಿಡ್ಜ್

ಮಾರ್ಚ್ ೨೦೧೩ ಸಖಿಯಲ್ಲಿ ಪ್ರಕಟವಾಗಿದೆ 


ಅದೊಂದು ಕಾಲವಿತ್ತು ವಾರಾಂತ್ಯ ಬಂದರೆ ಮನೆ ಕ್ಲೀನ್ ಮಾಡುವುದು . ಇಂದಿಗೂ ಕೂಡ ಬೆಂಗಳೂರಿನ ಬ್ಯುಸಿ ಲೈಫ್ ನಲ್ಲಿ ಕಳೆದುಹೊಗಿರುವವರು ಭಾನುವಾರವನ್ನು ಮನೆ ಕ್ಲೀನ್ ಮಾಡುವುದು ಇಲ್ಲ ಮನೆಗೆ ಬೇಕಾದ ಸಾಮಾನು ತರುವುದು ಬಿಲ್ ಕಟ್ಟಿ ಬರುವುದು ಹೇರ್ ಕಟ್ ಇಲ್ಲವೇ ಬ್ಯೂಟಿ ಪಾರ್ಲರ್ ಗಳಿಗೆ ಹೋಗುವುದು ಹೀಗೆ ಮೀಸಲಿಡುತ್ತಾರೆ . ಆದರೆ ಈ ಲಂಡನ್  ನಲ್ಲಿ ಹಾಗಲ್ಲ . ವಾರಾಂತ್ಯ ಬಂದರೆ ಹೊಸ ಜಾಗ ನೋಡಲು ಹೋಗುವುದು . ನನಗೆ ಮೊದಲಿನಿಂದಲೂ ಸುತ್ತುವುದೆಂದರೆ ಬಹಳ ಇಷ್ಟ ಅದಕ್ಕೆ ಸರಿಯಾಗಿ ನನ್ನ ಪತಿಗೂ ಶನಿವಾರ ಬಾನುವಾರ ಎಂದರೆ ಹೊರಗೆ ಹೋಗಬೇಕು ಹೊಸಜಾಗ ನೋಡಬೇಕು ೨ ವರ್ಷಗಳಿಂದ ಲಂಡನ್ ಸುತ್ತಿ ಈಗ ಎಲ್ಲ ಹತ್ತಿರದ ಜಾಗಗಳು ಪ್ರವಾಸಿ ಸ್ಥಳಗಳು ಚರಪರಿಚಿತವಾಗಿ ಹೋಗಿವೆ. 
ಹಾಗೆ ಹತ್ತಿರದ ಎಲ್ಲ ಸ್ಥಳಗಳನ್ನು ಭೇಟಿ ನೀಡಿ ಆದದ್ದರಿಂದ ಈಗ ಪಾರ್ಕ್ ಗಳು , ಸಿನೇಮ ಗಳಿಗೆ ಹೋಗುವುದು ಪ್ರಾರಮ್ಭಿಸಿಯಾಗಿದೆ . ಆದರೂ  ನಮ್ಮದೊಂದು ಫೆವರೆಟ್ ಸ್ಥಳವೆಂದರೆ ಟವರ್ ಬ್ರಿಡ್ಜ್ .  ಲಂಡನ್ ನ ಟವರ್  ಬ್ರಿಡ್ಜ್ ಯಾರಿಗೆ ತಾನೇ ಇಷ್ಟವಿಲ್ಲ ಇಲ್ಲಿ ಬಂದ  ಎಲ್ಲರಿಗು ಲಂಡನ್ ಬ್ರಿಡ್ಜ್ (ಟವರ್ ಬ್ರಿಡ್ಜ್) ನೋಡುವುದೇ ಒಂದು ಸಂತೋಷ . ಎಷ್ಟು ಭಾರಿ ನೋಡಿದರೂ  ಮನ ತಣಿಯದು ಮತ್ತೆ ಮತ್ತೆ ನೋಡಲೇ ಬೇಕು ಎಂದೆನಿಸುವ ಸ್ಥಳವದು.  ಹಾಗೆ ನಮ್ಮಿಬ್ಬರಿಗೂ ಈ ಸ್ಥಳ ಬಹಳ ಇಷ್ಟ . 
ಅದು ಬಹಳ ಇಷ್ಟವಾಗಲು ಕಾರಣಗಳೂ ಇವೆ.  ನಮ್ಮವರನ್ನೆಲ್ಲ ಬಿಟ್ಟು ಬಹು ದೂರ ಬಂದಾಗ ಹಳೆಯ ನೆನಪುಗಳು ಬಹಳ ಕಾಡುತ್ತದೆ. ಆ ಬಾಲ್ಯ , ಅಪ್ಪ ಅಮ್ಮನೊಂದಿಗೆ ಮಾಡಿದ ಹಠ, ಅವರ ಜೊತೆ ಕಳೆದ ನೆನಪುಗಳು , ಹಾಗೆ ನಮ್ಮ ಊರು , ಅಲ್ಲಿಯ ಬೋರ್ಗರೆಯುವ ಮಳೆ, ಮಳೆಯಲ್ಲಿ ಅಲೆದ ದಿನಗಳು , ಹೀಗೆ ಸಾಕಷ್ಟು . ಅದರಲ್ಲೂ ನಾನು ನನ್ನ ಪತಿ ಇಬ್ಬರೂ ಒಂದೆಕಡೆಯವರಾಗಿದ್ದರಿಂದ  (ಮಲೆನಾಡಿನವರಾಗಿದ್ದರಿಂದ) ನಮಗೆ ಆ ನೆನಪುಗಳು ಆ ಹಸಿರು , ಮಳೆ , ಅಲ್ಲಿ ಕಳೆದ ಬಾಲ್ಯದ ದಿನಗಳು ಬಹಳ ಕಾಡುತ್ತದೆ .  ಅದು ನಮಗೆ ಕಾಡುವುದು ಮತ್ತು ನಾವು ಅದನ್ನು ಕುಳಿತು ನೆನಪಿಸಿಕೊಂಡು ಒಬ್ಬರಿಗೊಬ್ಬರು ಹಂಚಿಕೊಳ್ಳುವುದು ಲಂಡನ್ ಬ್ರಿಡ್ಜ್ ನ ಪಕ್ಕದಲ್ಲಿ  ಇರುವ ಕಲ್ಲಿನ ಹಾಸಿನ ಮೇಲೆ ಕುಳಿತುಕೊಂಡಾಗ. ಹಾಗೆ ಮಾತನಾಡುತ್ತ ಕುಳಿತುಕೊಂಡರೆ ನಮಗೆ ಲಂಡನ್ ಬ್ರಿಡ್ಜ್ ನ ದೀಪಗಳು  ಜಗಮಗಿಸಹತ್ತಿದಾಗ ಎಚ್ಚರವಾಗುತ್ತದೆ ಒಹ್ ಎಷ್ಟು ಕತ್ತಲಾಗಿಬಿಟ್ಟಿತು ಮಾತನಾಡುತ್ತ ಸಮಯ ಕಳೆದದ್ದೇ ತಿಳಿಯಲಿಲ್ಲ ಎಂಬುದು.  
ಹಾಗೆ ನಾವಿಬ್ಬರೂ  ಒಟ್ಟು ಕುಳಿತು ಮಾತನಾಡಿ ಬಂದರೆ ನಮಗೆ ವೀಕೆಂಡ್ ಚನ್ನಾಗಿ ಕಳೆದೆವು ಸಾರ್ಥಕ ಎಂಬ ಭಾವ ಕೂಡ .  ಮಧುರ ನೆನಪುಗಳು ಬೇಕು ಸವಿಯಲು ಈ ಬದುಕು ಎಂದು ಹೀಗೆ ಜೊತೆ ಕುಳಿತು ಹರಟಿದಾಗೆಲ್ಲ  ಅನ್ನಿಸುತ್ತದೆ . ನಮ್ಮಲ್ಲಿ ನಾವು ಕಳೆದು ಹೋಗುವಂತೆ  ಮಾಡುವ ಆ ಬಾಲ್ಯ ಜೊತೆಗೆ ಈ ಲಂಡನ್ ನ ಟವರ್ ಬ್ರಿಡ್ಜ್  ನಮ್ಮಿಬ್ಬರಿಗೂ ಬಹಳ ಇಷ್ಟ .

Sunday 3 February 2013

ಚಾಕಲೇಟ್ ಕವರ್ ನ ತೋರಣ

ಈ ನನ್ನ ಲೇಖನವು ವಿಜಯ ನೆಕ್ಸ್ಟ್ ನಲ್ಲಿ ಪ್ರಕಟಗೊಂಡಿದೆ ೦೫/೦೪/೧೩ 





ಮನೆಯಲ್ಲಿ ಮಕ್ಕಳಿರಲಿ ಇಲ್ಲದಿರಲಿ ಈಗಂತೂ ಚಾಕಲೇಟ್ ಕವರ್ ಗಳು ಎಲ್ಲರ ಮನೆಯಲ್ಲೂ ಇದ್ದೇ  ಇರುತ್ತದೆ .ಚಾಕೊಲೆಟ್ ತಿನ್ನುವುದು ಎಲ್ಲರಿಗು ಇಷ್ಟ . ಹಾಗೆಯೇ ಚಾಕೊಲೆಟ್ ತಂದರೂ  ಬಾಕ್ಸ್ ನಲ್ಲೆ ಸಿಗುತ್ತದೆ ಈಗ .  ಹಾಗೆ 

ತಿಂದ ಚಾಕ್ಲೆಟ್ ನಿಂದ ಬೇಕಾದಷ್ಟು ಕವರ್ ಗಳು ಸಿಗುತ್ತವೆ . ಅದನ್ನು ಸುಮ್ಮನೆ ಎಸೆಯುವ ಬದಲು ಅದರಿಂದ ಚೆಂದದ ಒಂದು ತೋರಣ ಸಿದ್ಧ ಪಡಿಸಬಹುದು . 

ಬೇಕಾಗುವ ಸಾಮಗ್ರಿಗಳು : ಚಾಕಲೇಟ್ ಕವರ್ ಗಳು , ಯಾವುದೇ ಬಣ್ಣದ ದಾರ .

ವಿಧಾನ : 1. ಚಾಕಲೇಟ್ ಕವರ್ ಗಳನ್ನು ಎಸೆಯದೆ ಒಟ್ಟು ಹಾಕಿ ಇಟ್ಟುಕೊಳ್ಳಿ , ಕವರ್ ಗಳು ಜಾಸ್ತಿ ಇದ್ದಷ್ಟು ಜಾಸ್ತಿ ಉದ್ದ ತೋರಣ ತಯಾರಿಸಬಹುದು . ಕಡಿಮೆ ಕವರ್ ಗಳು ಇದ್ದಾರೆ ಅದನ್ನು ಹೆಣೆದು ನೇತು ಹಾಕಿದರೆ ನೋಡಲು ಸುಂದರವಾಗಿರುತ್ತದೆ.

2. ಎಲ್ಲಕವರ್ ಗಳನ್ನೂ ವೃತ್ತಾಕಾರದಲ್ಲಿ ಸುತ್ತಿ .

3.  ಸುತ್ತಿದ ಚಾಕಲೇಟ್ ಕವರ್ ನ ಮಧ್ಯ ಭಾಗದಲ್ಲಿ  ದಾರದಿಂದ ಹೂವನ್ನು ಕಟ್ಟಿದಂತೆ ಕಟ್ಟುತ್ತ ಹೋದರೆ ಉದ್ದನೆಯ ಚಾಕಲೇಟ್ ತೋರಣ ಅಥವಾ ಗೋಡೆಗೆ ನೇತು ಹಾಕಬಹುದಾದ ಅಲಂಕಾರಿಕ ವಸ್ತು ಖರ್ಚಿಲ್ಲದೆ ರೆಡಿ .


ಅರ್ಪಿತಾ ಹರ್ಷ 
ಲಂಡನ್