Tuesday 20 December 2011

ನಿವೇದನೆ


ಪ್ರೀತಿಯ ಅಮ್ಮ
ಹೇಳಲಾಗದ ಎಷ್ಟೋ ವಿಷಯಗಳನ್ನು ಹೇಳಲು ಅವಕಾಶ ಮಾಡಿಕೊಟ್ಟ ಗೆಳತಿ ನೀನು . ಜೀವನದ ಪ್ರತಿ ಹಂತದ ಮಹತ್ವ ಕಲಿತಿದ್ದು ನಿನ್ನಿಂದಲೇ . ನಡೆಯಲು ಕಲಿತಾಗ ಎಡವಿ ಬೀಳದಂತೆ ತಡೆದೆ.ಮಗುವಾದಾಗ ಕೈ ತುತ್ತು ನೀಡಿ ಸಲಹಿದೆ . ಹಂಚಿಕೊಂಡು ಬೆಳೆಯುವುದನ್ನು ಕಲಿಸಿದೆ .ಎಡವಿ ಬಿದ್ದು ಅತ್ತಾಗ ಎತ್ತಿ ಕೈ ಹಿಡಿದು ನಡೆಸಿದೆ.ಬದುಕಿನ ಭರವಸೆ ಗಳ ಭಾವ ಮೂಡಿಸಿದೆ.ಸದಾ ಹೊಸತನ್ನು ಕಲಿಯಲು ತುಡಿಯುತ್ತಿದ್ದ ಮನಸ್ಸಿಗೆ ಸಾಥ್ ನೀಡಿದೆ.
ನಕ್ಕಾಗ ನೋಡಿ ಸಂತೋಷಪಟ್ಟೆ .ಅತ್ತಾಗ ಸಾಂತ್ವನ ನೀಡಿದೆ. ಮುಂಬರುವ ದಿನಗಳ ಗೆಲುವಿನ ಮೆಟ್ಟಿಲನ್ನು ಹತ್ತಲು ಬೇಕಾಗುವ ಎಲ್ಲ ಧೈರ್ಯವನ್ನು ಜೊತೆ ನಿಂತು ತುಂಬಿದೆ. ಕಣ್ಣ ಹನಿ ಕೆಳಗೆ ಬೀಳದಂತೆ ಕಾಪಾಡಿದೆ. ದ್ವೇಷದ ಹಗೆ ಬದಲು ಪ್ರೀತಿ ಯಿಂದ ಜನಮನ ಗೆಲ್ಲಲು ಸ್ಪೂರ್ತಿ ನೀಡಿದೆ.ಕಣ್ಣಲ್ಲಿ ಕಣ್ಣಿಟ್ಟು ಕಾಪಾಡಿದೆ.ಪ್ರತಿ ಕ್ಷಣ ಒಳ್ಳೆಯದನ್ನೇ ಬಯಸಿದೆ.ಜೀವನ ನಡೆಸಲು ಬೇಕಾಗುವ ಎಲ್ಲ ಪಾಠ ಗಳನ್ನೂ ಮನೆಯಲ್ಲಿಯೇ ಕಲಿಸಿದೆ. ಹೊಂದಾಣಿಕೆಯೇ ಬದುಕಿನ ಮೊದಲ ಯಶಸ್ಸು ಎಂಬುದನ್ನು ತಿಳಿಸಿಕೊಟ್ಟೆ.
ಕೆಲವೊಮ್ಮೆ ಬರುವ ಕಠಿಣ ಪರಿಸ್ಥಿತಿಗೆ ಗಟ್ಟಿ ನಿಂತು ಎದುರಿಸುವ ದೈರ್ಯ ಕಲ್ಪಿಸಿ ಕೊಟ್ಟವಳು ನೀನು.ನಿನ್ನಲ್ಲಿ ಎಷ್ಟೇ ನೋವುಗಳಿದ್ದರು ತೋರಿಸದೆ ನಗು ನಗುತ್ತ ಅದೇ ನಗುವನ್ನು ಕಲಿಸಿ ಕೊಟ್ಟವಳು ನೀನು .ನಿನ್ನ ಸಹನೆ ಧೈರ್ಯ ಮಮತೆ ಇವುಗಳೆಲ್ಲ ಎಷ್ಟೋ ಭಾರಿ ನನ್ನನ್ನು ಅಚ್ಚರಿ ಗೊಳಿಸಿದ್ದಿದೆ.ಜೀವನದಲ್ಲಿ ನಿನ್ನಷ್ಟು ತಿಳಿದವಳು ನಾನಲ್ಲ ಇನ್ನು ತಿಳಿಯುವುದು ಕಲಿಯುವುದು ಬಹಳಷ್ಟಿದೆ.ಅದಕ್ಕೆಲ್ಲ್ಲ ನಿನ್ನ ಸಹಕಾರ ಹೀಗೆ ಇರಲಿ ಎಂಬ ಬೇಡಿಕೆಯೊಂದಿಗೆ ....
ಇಂತಿ ನಿನ್ನ ಪ್ರೀತಿಯ
ಮಗಳು

Friday 16 December 2011

ಬದಲಾವಣೆ

ಪರಿವರ್ತನೆ ಪ್ರಕೃತಿ ಯ ನಿಯಮ . ಋತುಗಳು ಬದಲಾದಂತೆಲ್ಲ ಪ್ರಕೃತಿಯಲ್ಲಿಯು ಬದಲಾವಣೆ ಸಹಜ.
ಲಂಡನ್ ಗೆ ಬಂದು ಅದಾಗಲೇ ಸಾಕಷ್ಟು ತಿಂಗಳು ಗಳು ಕಳೆಯಿತು.ದಿನಗಳು ಕಳೆಯುತ್ತಲೇ ಇದೆ. ನೋಡನೋಡುತ್ತಿದ್ದಂತೆ ಋತುಗಳು ಬದಲಾಗಿಬಿಡುತ್ತಿದೆ. ಆರಂಭದ ದಿನಗಳಲ್ಲಿ ಎಲ್ಲವೂ ಹಸಿರು ತುಂಬಿ ಕಂಗೊಳಿಸುತ್ತಿತ್ತು. ರಾತ್ರಿ ಹತ್ತು ಗಂಟೆ ಯಾದರು ಸೂರ್ಯ ಮುಳುಗಿರುತ್ತಿರಲಿಲ್ಲ.ಬೆಳಕು ಕಣ್ಣು ಕುಕ್ಕುವಂತೆ ಇರುತ್ತಿತ್ತು.ಬೆಳಗಿನ ಜಾವ ೪ ಗಂಟೆಗೆಲ್ಲ ಹತ್ತು ಗಂಟೆಯೇನೋ ಎಂಬಷ್ಟು ಬೆಳಕಿರುತ್ತಿತ್ತು.
ಇಲ್ಲಿ ಇರುವುದು ಎರಡೆ ಕಾಲ ಬೇಸಿಗೆ ಮತ್ತು ಚಳಿಗಾಲ . ಇಲ್ಲಿ ಮಳೆಗಾಲ ಎಂಬುದಿಲ್ಲ ಆದರೆ ವಾರದಲ್ಲಿ ೨ ದಿನವಾದರೂ ಮಳೆ ಬರುತ್ತಿರುತ್ತದೆ.ಇದು ಡಿಸೆಂಬರ್ .ಈಗ ಇಲ್ಲಿ ಚಳಿಗಾಲ ಪ್ರಾರಂಭ ಆಗಿದೆ. ಹಸಿರು ದಾಟಿ ಕೆಂಪು ಬಣ್ಣ ತಾಳಿದ್ದ ಮರದ ಎಲೆಗಳೆಲ್ಲ ಉದುರಿ ಬೋಳಾಗಿ ನಿಂತುಬಿಟ್ಟಿದೆ. ಹೂವು ಗಳೆಲ್ಲ ಉದುರಿ ಮನೆಯ ಮುಂದೆ ಖಾಲಿ ಖಾಲಿ ಎನಿಸುತ್ತಿದೆ.ಪ್ರತಿ ದಿನ ಮೋಡ ತುಂಬಿದ ವಾತಾವರಣ. ಮಧ್ಯಾನ ನಾಲ್ಕು ಗಂಟೆಗೆಲ್ಲ ಕಗ್ಗತ್ತಲೆ. ಬೆಳಗಿನ ಏಳು ಗಂಟೆಗೆ ಕೂಡ ಮಧ್ಯ ರಾತ್ರಿ ಎಂಬಂತ ಕತ್ತಲು.ಹೊರಹೊರಟರೆ ಕೊರೆಯುವ ಚಳಿ,ಮನೆಯ ಒಳಗೆ ಬೆಚ್ಚಗೆ ಕುಳಿತುಕೊಂಡು ಬಿಟ್ಟರೆ ಹೊರಗೆ ಕಾಲಿಡಲು ಮನಸ್ಸಾಗದು. ಮಂಜು ಬೀಳುವುದನ್ನು ದೂರದಿಂದ ನೋಡಿದರೆ ಹತ್ತಿಯ ಹೂವಿನಿಂದ ಅದೀಗ ತಾನೇ ಹೊರಬಂದ ಹತ್ತಿ ಉದುರಿ ಬೀಳುತ್ತಿದೆ ಎನಿಸುತ್ತದೆ.ಎಲ್ಲಿ ನೋಡಿದರು ಕ್ರಿಸ್ಮಸ್ ಗಾಗಿ ಅಲಂಕಾರಗೊಂಡ ಅಂಗಡಿಗಳು ದೀಪಗಳಿಂದ ಕಂಗೊಳಿಸುತ್ತಿದೆ.ಮೊದಲೆಲ್ಲ ರಾತ್ರಿ ಒಂಬತ್ತಾದರೂ ಕಾಣದ ಬೀದಿ ದೀಪಗಳು ಮೂರುಗಂಟೆ ಆಗುತ್ತಿದ್ದಂತೆ ಜಗಮಗಿಸಲು ಆರಂಭವಾಗಿದೆ.ಮನೆಯನ್ನೆಲ್ಲ ಬೆಚ್ಚಗಿಡುವ ಹೀಟರ್ ಉಪಯೋಗಿಸದಿದ್ದರೆ ಮನೆಯ ಒಳಗೂ ಕೂಡ ಚಳಿ ತಡೆಯಲಸಾಧ್ಯ.
ಇವೆಲ್ಲ ಪ್ರಕೃತಿಯ ಹೊಸತನವನ್ನು ಅನುಭವಿಸುವುದೇ ಒಂದು ಖುಷಿ .

Thursday 15 December 2011

ಬೋಳು ಮರ


ಬದಲಾದ ಋತುವಿಗೆ
ಉದುರಿವೆ ಎಲೆಗಳು
ಬದುಕಿನ ಜೊತೆ ಆಟ
ಇದು ಯಾವ ಹೋರಾಟ
ಹತ್ತಿರ ಸುಳಿಯದ
ಹಕ್ಕಿಗಳು ,ಖಾಲಿಯಾದ
ಗೂಡು ,ಕೇಳದ ಚಿಲಿಪಿಲಿಗಳು
ನಡುಗುತಿಹುದು ಜೀವ
ಒಂಟಿ ಒಂಟಿ ಎನಿಸಿ
ಮನದಲೇನೋ ಬೇಸರ
ನೋಡಿ ಆ ಬೋಳು ಮರ

ಕಿತ್ತಳೆಯ ಉಪಯೋಗಗಳು

ಕಿತ್ತಳೆ ಹಣ್ಣು ಸಾಮಾನ್ಯವಾಗಿ ಎಲ್ಲರಿಗೂ ಪ್ರಿಯವಾದದ್ದು. ಮತ್ತು ಸುಲಭವಾಗಿ ಕಡಿಮೆ ದರದಲ್ಲಿ ಸಿಗುವಂತದ್ದು. ಕಿತ್ತಳೆ ಹಣ್ಣು ದೇಹಕ್ಕೆ ಒಳ್ಳೆಯದು. ಚಳಿಗಾಲದಲ್ಲಿ ಕಿತ್ತಳೆ ಹಣ್ಣು ತಿನ್ನುವುದರಿಂದ ಹೆಚ್ಚು ಆರೋಗ್ಯವಾಗಿರಬಹುದು . ಇದರ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.
ಕಿತ್ತಳೆ ಹಣ್ಣಿನಲ್ಲಿ ವಿಟಮಿನ್ ನ ಪ್ರಮಾಣ ಹೆಚ್ಚಿದೆ ಅದರಲ್ಲೂ ವಿಟಮಿನ್ ಸಿ ಯನ್ನು ಹೆಚ್ಚು ಹೊಂದಿದೆ.ಕಿತ್ತಳೆ ಹಣ್ಣು ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುವಲ್ಲಿ ಮೊದಲ ಪಾತ್ರ ಹೊಂದಿದೆ.


ಜೊತೆಗೆ ಅಸ್ತಮಾ, ಸಕ್ಕರೆ ಕಾಯಿಲೆ ತಡೆಹಿಡಿಯುವುದರಲ್ಲು ಇದು ಸಹಾಯಕ.ಬಿ ಪಿ ಹೆಚ್ಚಿರುವವರು ಕಿತ್ತಳೆ ಹಣ್ಣು ತಿನ್ನುವುದರಿಂದ ಇದು ಸಮಪ್ರಮನಕ್ಕೆ ಬರುತ್ತದೆ.ಇದರ ಜೊತೆಗೆ ಕಿಡ್ನಿ ಯಲ್ಲಿ ಕಲ್ಲು ಆಗುವುದನ್ನು ಕಿತ್ತಳೆ ಯ ಸೇವನೆಯಿಂದ ತಡೆಯಬಹುದು. ಇನ್ನು ಕುಡಿತಕ್ಕೆ ಅಂಟಿ ಕೊಂಡವರಿಗೆ ಪ್ರತಿದಿನ ೨-೩ ಭಾರಿ ಕಿತ್ತಳೆ ಹಣ್ಣಿನ ಜೂಸ್ ಮಾಡಿ ಕುಡಿಸುವುದರಿಂದ ಕುಡಿತದ ಚಟವನ್ನು ಬಿಡಿಸಬಹುದು .ಕಿತ್ತಳೆ ಹಣ್ಣಿನಲ್ಲಿರುವ ಕ್ಯಾಲ್ಸಿಯುಂ ಅಂಶ ನಮ್ಮ ದೇಹದ ಮೂಳೆ ಮತ್ತು ಹಲ್ಲುಗಳನ್ನು ಗಟ್ಟಿಯಾಗಿಸುತ್ತದೆ.ಮತ್ತು ಇದರಲ್ಲಿರುವ ಫಾಲಿಕ್ ಆಸಿಡ್ ಮೆದುಳು ಬೆಳೆಯಲು ಸಹಾಯ ಮಾಡುತ್ತದೆ.ಇದರಲ್ಲಿರುವ ವಿಟಮಿನ್ B6 ಹಿಮೊಗ್ಲೋಬಿನ್ ಹೆಚ್ಚಿಸುವಲ್ಲಿ ಸಹಾಯಕ. ಕಿತ್ತಳೆಯ ಜೂಸ್ ಮಾಡಿ ಕುಡಿಯುವುದರಿಂದ ಅತಿಯಾದ ಬೊಜ್ಜನ್ನು ಕರಗಿಸಬಹುದು. ಇದರಲ್ಲಿರುವ ವಿಟಮಿನ್ ಸಿ ಚಳಿಗಾಲದಲ್ಲಿ ಬರುವ ನೆಗಡಿ , ಜ್ವರ, ದೇಹದ ನೋವುಗಳನ್ನು ತಡೆಯುತ್ತದೆ.ಮತ್ತು ಪ್ರತಿದಿನ ಒಂದು ಲೋಟ ಕಿತ್ತಳೆ ಜೂಸ್ ಕುಡಿಯುವುದರಿಂದ ದಿನವಿಡೀ ತಾಜ ಆಗಿರಬಹುದು.ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.ದಿನ ನಿತ್ಯ ಕಿತ್ತಳೆ ಯನ್ನು ತಿನ್ನುವುದರಿಂದ ಹೃದಯ ರೋಗ ಗಳನ್ನೂ ತಡೆಯಬಹುದು.ದೇಹಕ್ಕೆ ಉತ್ಸಾಹ ನೀಡುವಲ್ಲಿ ಕಿತ್ತಳೆ ಹಣ್ಣು ಸಹಕಾರಿ.
ಆದರೆ ಕಿತ್ತಳೆ ಹಣ್ಣನ್ನು ಹಾಲು ಕುಡಿದ ತಕ್ಷಣ ತಿನ್ನಬಾರದು ಇದರಿಂದ ದೇಹದಲ್ಲಿ ವಾಯು ತುಂಬಿಕೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ.ಆದ್ದರಿಂದ ಕನಿಷ್ಠ ಅರ್ಧ ಗಂಟೆಯ ನಂತರ ತಿನ್ನಬಹುದು.

ಅಮೃತವೀ ಜೇನು


ಚಿಕ್ಕಂದಿನಿಂದ ಜೇನುಹುಳಗಳನ್ನು ಹತ್ತಿರದಿಂದ ನೋಡಿದ್ದೆ. ನನ್ನ ಅಪ್ಪನಿಗೆ ಜೇನು ಹಿಡಿದು ಪೆಟ್ಟಿಗೆ ತುಂಬಿ ಇಡುವುದು ಅದರಿಂದ ತುಪ್ಪವನ್ನು ತೆಗೆದು ತಾಜಾ ತುಪ್ಪ ತಿನ್ನುವುದೆಂದರೆ ಎಲ್ಲಿಲ್ಲದ ಸಂತೋಷ.ನಾನು
ಎಷ್ಟೋ ಭಾರಿ ಜೆನಿನಿಂದ ಕಚ್ಚಿಸಿಕೊಂಡು ಅದಕ್ಕೆ ಶಾಪ ಹಾಕಿದ್ದಿದೆ . ಆದರೆ ಅದರಿಂದಾಗುವ ಉಪಯೋಗ ಬಹಳ .ಜೇನಿನ ಬಗ್ಗೆ ತಿಳಿಸುವ ಸಣ್ಣ ಪ್ರಯತ್ನ ಇಲ್ಲಿ.
೧)ಒಂದು ಜೇನುಹುಳು ಸುಮಾರು ೧೫೦ ಮಿಲಿಯನ್ ವರ್ಷಗಳ ವರೆಗೆ ಜೇನುತುಪ್ಪವನ್ನು ನೀಡುವ ಶಕ್ತಿಯನ್ನು ಹೊಂದಿರುತ್ತದೆ ಎಂದರೆ ನಿಜಕ್ಕೂ ಅಚ್ಚರಿಯ ವಿಷಯವೇ ಸರಿ.
೨) ಜೇನುಹುಳುಗಳು ಎಂದಿಗೂ ನಿದ್ದೆ ಮಾಡುವುದಿಲ್ಲ .
೩)ಒಂದು ಜೇನುಹುಳು ಒಂದು ಗಂಟೆಗೆ ಸುಮಾರು ೧೫ ಮೈಲಿನಷ್ಟು ದೂರ ಹಾರಬಲ್ಲದು.
೪)ಪ್ರಪಂಚದಲ್ಲೇ ಮಾನವನಿಗಾಗಿ ಆಹಾರ ತಯಾರಿಸಬಲ್ಲ ಏಕೈಕ ಹುಳವೆಂದರೆ ಜೇನುಹುಳ.
೫)ಜೇನು ಹುಳಗಳಿಗೆ ಒಟ್ಟು ೫ ಕಣ್ಣು ಗಳಿರುತ್ತವೆ .
೬)ಜೇನು ಹುಳಗಳು ಸಾಮಾನ್ಯವಾಗಿ ಚಳಿಗಾಲದಲ್ಲಿ ಜೇನುತುಪ್ಪ ನೀಡುತ್ತದೆ ಏಕೆಂದರೆ ಈ ಸಮಯದಲ್ಲಿ ಅವುಗಳಿಗೆ ಹೂವುಗಳು ಸಿಗುವುದು ವಿರಳ.
೭)ಜೇನು ಹುಳುಗಳಲ್ಲಿ ರಾಣಿ ಜೇನಿಗೆ ಹೆಚ್ಚು ಪ್ರಾಮುಖ್ಯತೆ.
೮)ಒಂದು ರಾಣಿ ಜೇನು ಒಮ್ಮೆ ೨೦೦೦ ಮೊಟ್ಟೆಗಳನ್ನಿಡುತ್ತದೆ.
೯) ಒಂದು ಜೇನು ಗೂಡಿನಿಂದ ಒಂದು ವರ್ಷದಲ್ಲಿ ೪೦೦ ಪೌಂಡ್ ನಷ್ಟು ಜೇನುತುಪ್ಪ ತೆಗೆಯಬಹುದು.
ಇದು ಜೇನು ಹುಳುವಿನ ಬಗ್ಗೆಯಾದರೆ ಇನ್ನು ಜೇನಿನಿಂದ ನಮಗೆ ದೊರೆಯುವ ಉಪಯೋಗಗಳು ಅನೇಕ.


ನೈಸರ್ಗಿಕವಾಗಿ ದೊರೆಯುವ ಜೇನು ತುಪ್ಪವನ್ನು ದಿನವು ಸೇವಿಸುವುದರಿಂದ ಅನೇಕ ಕಾಯಿಲೆಗಳು ಹತ್ತಿರ ಸುಳಿಯುವುದಿಲ್ಲ.ಪ್ರತಿದಿನ ಬೆಳಿಗ್ಗೆ ಮುಂಜಾನೆ ಎದ್ದೊಡನೆ ಬಿಸಿ ನೀರಿನೊಂದಿಗೆ ಒಂದು ಚಮಚ ಜೇನು ತುಪ್ಪ ಹಾಕಿ ಕುಡಿಯುವುದರಿಂದ ಕೊಬ್ಬಿನ ಅಂಶ ಕಡಿಮೆಯಾಗಿ ಕೊಲೆಸ್ಟ್ರಾಲ್ ಅನ್ನು ನಿಯಂತ್ರಣ ದಲ್ಲಿಡುವಲ್ಲಿ ಸಹಾಯ ಮಾಡುತ್ತದೆ.
ನೆಗಡಿಯಿಂದ ಬಳಲುತ್ತಿರುವವರು ೩ ದಿನಗಳ ಕಾಲ ಒಂದೊಂದು ಚಮಚ ಜೇನುತುಪ್ಪ ಜೊತೆಗೆ ದಾಲ್ಚಿನ್ನಿ ಪುಡಿ ಬೆರೆಸಿ ತಿನ್ನುವುದರಿಂದ ನೆಗಡಿಯನ್ನು ದೂರ ಗೊಳಿಸಬಹುದು .
ಇನ್ನು ಹೊಟ್ಟೆಗೆ ಸಂಬಂಧ ಪಟ್ಟ ಹೊತ್ತೆಹುಳು , ಹೊಟ್ಟೆ ಹುಣ್ಣು ಇವುಗಳ ಶಮನಕ್ಕು ಕೂಡ ಜೇನುತುಪ್ಪ ಸಹಕಾರಿ.
ಸುಟ್ಟ ಗಾಯಗಳಾದಲ್ಲಿ ತಕ್ಷಣ ಜೇನುತುಪ್ಪ ಸವರುವುದರಿಂದ ನೋವು ಕಡಿಮೆಯಾಗುವುದರೊಂದಿಗೆ ಬಾವು ಬರುವುದಿಲ್ಲ.ಯಾವುದೇ ರೀತಿಯ ಗಾಯಗಳ ಮೇಲೆ ಜೇನುತುಪ್ಪ ಹಚ್ಚುವುದರಿಂದ ಬೇಗ ಗುಣವಾಗಬಹುದು.
ಜೇನು ತುಪ್ಪವನ್ನು ಹಾಲಿನೊಂದಿಗೆ ಬೆರೆಸಿ ಮುಖಕ್ಕೆ ಹಚ್ಚುವುದರಿಂದ ಮುಖದ ಕಾಂತಿ ಹೆಚ್ಚುತ್ತದೆ .ಜೊತೆಗೆ ತ್ವಚೆ ಹೊಳಪಿನಿಂದ ಕೂಡಿರುತ್ತದೆ.ಮುಖದಲ್ಲಿ ನೆರಿಗೆಗಳಾಗದಂತೆ ತಡೆಯುವಲ್ಲಿ ಕೂಡ ಇದರ ಪಾತ್ರವಿದೆ.ಜೇನುತುಪ್ಪದಲ್ಲಿ ವಿಟಮಿನ್ B1,B2.C.B6 ಗಳಿರುತ್ತದೆ.ನಿದ್ರಾ ರೋಗದಿಂದ ಬಳಲುತ್ತಿದ್ದರೆ ಒಂದು ಚಮಚ ಜೇನುತುಪ್ಪ ತಿನ್ನುವುದರಿಂದ ಪ್ರತಿದಿನ ಚೆನ್ನಾಗಿ ನಿದ್ದೆ ಮಾಡಬಹುದು .
ಅತಿಯಾದ ಬೊಜ್ಜಿನಿಂದ ಬಳಲುತ್ತಿರುವವರಿಗೆ ಜೇನು ತುಪ್ಪ ಒಳ್ಳೆಯ ಔಷಧ .ಜೇನುತುಪ್ಪ ದೇಹಕ್ಕೆ ಹೆಚ್ಚು ಶಕ್ತಿ ನೀಡುತ್ತದೆ .ಪ್ರತಿದಿನ ಒಂದು ಚಮಚ ಜೇನುತುಪ್ಪ ತಿನ್ನುವುದರಿಂದ ದೇಹಕ್ಕೆ ಬೇಕಾಗುವ ಶಕ್ತಿ ದೊರೆಯುತ್ತದೆ.ಜೇನುಹುಳ ಕಚ್ಚಿಸಿಕೊಂಡರೆ ಭಯಪಡಬೇಕಿಲ್ಲ ಜೇನಿಗೆ ನಮ್ಮ ದೇಹ ದಲ್ಲಿರುವ ನಂಜಿನ ಅಂಶವನ್ನು ತೆಗೆದು ಹಾಕುವ ಶಕ್ತಿ ಇದೆ.
ಅಡುಗೆ ಮಾಡುವಾಗ ಸಕ್ಕರೆಯ ಬದಲು ಜೇನುತುಪ್ಪ ವನ್ನು ಬಳಸುವುದರಿಂದ ಆರೋಗ್ಯ ವೃದ್ಧಿಸಿಕೊಳ್ಳ ಬಹುದು.ಹೀಗೆ ಜೇನು ಅಮೃತ ವಿದ್ದಂತೆ

Wednesday 7 December 2011

ಮಳೆ


ಗೆಳತಿ
ಹೊರಗೆ ಜೋರಾಗಿ ಸುರಿಯುತ್ತಿರುವ ಮಳೆ ,ಭಯಂಕರ ಗಾಳಿ , ಕೈಯಲ್ಲಿ ಒಂದು ಕಪ್ ಕಾಫಿ ಹಿಡಿದು ಕಿಟಕಿಯ ಬಳಿ ನೋಡುತ್ತಿದ್ದರೆ ಹಳೆಯ ನೆನಪುಗಳು ಕಣ್ಣೆದುರು ಸುಳಿದು ಹೋದಂತಿದೆ.
ಇವಳೇನು ಕಾಫಿ ಕುಡಿಯುವುದು ಕಲಿತಳ ಎಂದು ಯೋಚಿಸುತ್ತಿದ್ದರೆ ಇಲ್ಲಿ ಕೇಳು ಬದುಕಿನಲ್ಲಿ ಹೊಸ ಅನುಭವ ಇರಬೇಕು ಎಂದು ಎಲ್ಲೊ ಕೇಳಿದ ನೆನಪು . ಹಾಗಾಗಿ ಅದನ್ನು ಕಲಿತದ್ದಾಗಿದೆ.ಹೊಸತನ್ನು ಕಲಿಯುವುದರಲ್ಲಿ ಏನೋ ಒಂದು ರೀತಿಯ ಹುಮ್ಮಸ್ಸು.ಹಳೆಯದಾದಂತೆ ಅದು ಕೇವಲ ನೆನಪು ಅಷ್ಟೇ.ಮೊನ್ನೆ ನೀ ಕೇಳಿದೆಯಲ್ಲ ನೆನಪಿದೆಯ ಮಳೆಯಲ್ಲಿ ನೆನೆದ ಆ ದಿನಗಳು ಎಂದು ಅದಕ್ಕೆ ಈ ಪೀಠಿಕೆ . ಈ ಮಳೆಗೆ ಅದ್ಭುತವಾದ ಶಕ್ತಿ ಇದೆ. ಬಿತ್ತಿದ ಬೀಜಕ್ಕೆ ಮೊಳಕೆಯೊಡೆದು ತೆನೆತರಿಸುವ ಶಕ್ತಿ ಇದೆ.ಬರಡುನೆಲಕ್ಕೆ ತಂಪನೀವ ಶಕ್ತಿ ಇದೆ .ಬೋಳು ಮರದಲ್ಲಿ ಹಸಿರು ಚಿಗುರಿಸುವ ಶಕ್ತಿ ಇದೆ. ಹತ್ತಿ ಉರಿಯುತ್ತಿರುವ ಬೆಂಕಿಯನ್ನು ಆರಿಸುವ ಶಕ್ತಿ ಇದೆ. ಭರವಸೆ ಕಳೆದು ನಿಂತ ಬದುಕಿನಲ್ಲೊಂದು ಹೊಸ ಚೈತನ್ಯ ತುಂಬುವ ಶಕ್ತಿ ಇದೆ.ಮನದ ನೋವ ಮರೆಸಿ ಹೊಸತನವ ತುಂಬುವ ಶಕ್ತಿ ಇದೆ . ಹಳೆಯ ನೆನಪುಗಳನ್ನು ಕಣ್ಣೆದುರು ತರುವ ಶಕ್ತಿ ಇದೆ.
ಬೋರ್ಗರೆದು ಸುರಿಯುವ ಮಳೆಯನ್ನೂ ನೋಡುತ್ತಾ ಕುಳಿತರೆ ಅಂದು ಮಳೆಯಲ್ಲಿ ನೆನೆದ ಆ ದಿನಗಳು ಕಣ್ಣೆದುರು. ಮಳೆ ಬರುವುದನ್ನೇ ಕಾದ ಆ ದಿನಗಳು ಸುಂದರ ಸುಂದರ.ಇಂದು ಅದು ಕೇವಲ ನೆನಪು,
ಮರೆಯಲಾಗದ ನೆನಪು.ಇಂದು ಕಣ್ಣೆದುರು ಧೋ ಎಂದು ಮಳೆ ಸುರಿಯುತ್ತಿದ್ದರೆ ಮನಸ್ಸು ಬೇರೆಲ್ಲೋ ಸುಳಿದಾಡುತ್ತಿರುತ್ತದೆ.ಕಿಟಕಿಯ ಬಳಿ ನಿಂತು ನೋಡುವುದರಲ್ಲೇ ಸಂತೋಷ ಎಂದೆನಿಸುತ್ತದೆ.ಆದರೆ ಆ ನೆನಪುಗಳು ಮಾತ್ರ ಎಂದಿಗೂ ಹಚ್ಚ ಹಸಿರು.ಹಳೆಯ ದಿನಗಳನ್ನು ನೆನಪಿಸುವ ಮಳೆಗೆ ಎಷ್ಟು ಧನ್ಯವಾದ ಹೇಳಿದರು ಕಡಿಮೆಯೇ !!

Friday 11 November 2011

ಶಂಕರನಾಗ್ ಕನಸು ನನಸಾಗಿದೆ


ಹೊನ್ನಾವರದ ನಾಗರಕಟ್ಟೆ ಎಂಬಲ್ಲಿ ಹುಟ್ಟಿ ಬೆಳೆದ ಶಂಕರನಾಗ್ , ತಮ್ಮ ಗಡಸು ಧ್ವನಿ , ಸೂಕ್ಷ್ಮ ಕಣ್ಣು , ಗಡ್ಡ ಬೆಳೆದ ಮುಖ ಇದರಿಂದಲೇ ಜನರ ಮನ ಸೆಳೆದ ವ್ಯಕ್ತಿ. ಬದುಕಿದ್ದ ಕೇವಲ ಮೂವತ್ತಾರು ವರ್ಷಗಳಲ್ಲಿ ಸಾಧನೆಯ ಶಿಖರವನ್ನೇರಿದವರು. ಕೇವಲ ನಟ ಮಾತ್ರವಲ್ಲದೆ ನಿರ್ದೇಶಕರು ಆಗಿ ಜನ ಮೆಚ್ಚುಗೆ ಗಳಿಸಿದವರು.ಹುಟ್ಟುಭಾಷೆ ಕೊಂಕಣಿಯಾದರು ಕನ್ನಡವನ್ನು ಬಹುಬೇಗ ರೂಡಿಸಿಕೊಂಡವರು. ಕರಾಟೆ ಕಿಂಗ್ ಆಟೋ ರಾಜ ಎಂದು ಜನಪ್ರಿಯ ಗೊಂಡವರು.ನಾಟಕದಲ್ಲಿ ತಮ್ಮನ್ನು ತೊಡಗಿಸಿಕೊಂಡ ಇವರನ್ನು ಬೆಳಕಿಗೆ ತರುವಲ್ಲಿ ಗಿರೀಶ್ ಕಾರ್ನಾಡ್ ರ ಪಾತ್ರವಿದೆ.ಗಿರೀಶ್ ಕಾರ್ನಾಡ ನಿರ್ದೇಶನದ "ಒಂದಾನೊಂದು ಕಾಲದಲ್ಲಿ" ಶಂಕರ ರ ಮೊದಲ ಚಲನಚಿತ್ರ.ಈ ಚಿತ್ರಕ್ಕೆ ಪ್ರಶಸ್ತಿ ಕೂಡ ಲಭಿಸಿತ್ತು. ಅಲ್ಲಿಂದ ಪ್ರಾರಂಭ ಇವರ ಸಾಧನೆ."ಮಿಂಚಿನ ಓಟ" "ನೋಡಿಸ್ವಾಮಿ ನಾವಿರೋದೆ ಹೀಗೆ","ಗೀತ""ಒಂದು ಮುತ್ತಿನ ಕತೆ" ಇವೆಲ್ಲ ಇವರದೇ ನಿರ್ದೇಶನದ ಚಲನಚಿತ್ರ .ಮೊದಲ ಭಾರಿಗೆ ಇವರದೇ ನಿರ್ದೇಶನದ "ಮಿಂಚಿನ ಓಟ" ಕೂಡ ಪ್ರಶಸ್ತಿ ಗಿಟ್ಟಿಸಿಕೊಂಡಿತು.ಶಂಕರನಾಗ್ ಎಂಬತ್ತರ ದಶಕದಲ್ಲೇ ಕಂಡ ಕನಸುಗಳು ಬಹಳ.ಇಂದು ಬೆಂಗಳೂರಿನಲ್ಲಿ ಹೆಸರುವಾಸಿಯಾಗಿರುವ ಕಂಟ್ರಿ ಕ್ಲಬ್ ಇವರೇ ಪ್ರಾರಂಭಿಸಿದ್ದು.ಒಮ್ಮೆ ಲಂಡನ್ ಗೆ ಭೇಟಿ ನೀಡಿದ್ದ ಶಂಕರನಾಗ್ ರವರಿಗೆ ಬೆಂಗಳುರಿನಲ್ಲು ಮೆಟ್ರೋ ಪ್ರಾರಂಭಿಸಬೇಕು ಎಂಬ ಯೋಜನೆಯೊಂದು ಆ ದಿನಗಳಲ್ಲೇ ಇತ್ತು .ಆದರೆ ಅಪಘಾತದಿಂದ ೧೯೯೦ ರಲ್ಲಿ ನಿಧನರಾದರು.ಇಂದು ಬೆಂಗಳೂರಿನಲ್ಲಿ ಮೆಟ್ರೋ ಪ್ರಾರಂಭವಾಗಿದೆ . ಜನರೆಲ್ಲಾ ಸಂತೋಷದಿಂದ ಮೆಟ್ರೋ ಪ್ರಯಾಣ ಮಾಡುತ್ತಿದ್ದಾರೆ.ಸಾಕಷ್ಟು ಸಮಯ ಉಳಿತಾಯವಾಗುತ್ತಿದೆ.ಟ್ರಾಫಿಕ್ ಸಮಸ್ಯೆ ಕಡಿಮೆ ಆಗಬಹುದೆಂಬ ನಂಬಿಕೆಯಿದೆ.ಎಷ್ಟೋ ವರ್ಷಗಳ ಹಿಂದೆ ಶಂಕರನಾಗ್ ಕಂಡ ಕನಸು ನನಸಾಗಿದೆ.ಆದರೆ ಅವರೇ ನಮ್ಮೊಂದಿಗಿಲ್ಲದಿರುವುದು ವಿಷಾದನೀಯ.

Thursday 27 October 2011

ಅಂಟಿಗೆ-ಪಿಂಟಿಗೆ


ಅಂಟಿಗೆ ಪಿಂಟಿಗೆ ಎಂಬುದು ಮಲೆನಾಡಿನ ಕೆಡೆಗಳಲ್ಲಿ ಪ್ರಸಿದ್ಧಿ .ಮಲೆನಾಡಿನಲ್ಲಿ ಒಂದು ಸಂಪ್ರದಾಯವಿದೆ . ದೀಪಾವಳಿಯ ಪಾಡ್ಯದ ದಿನದಂದು ರಾತ್ರಿ ಊರಿನ ಕೆಲವು ಮಂದಿ ಒಟ್ಟು ಗೂಡಿ ಮನೆಮನೆಗೂ ಹಾಡುಹೇಳುತ್ತಾ ಹೋಗುವುದು ಇದನ್ನೇ ಅಂಟಿಗೆ ಪಿಂಟಿಗೆ ಎಂದು ಕರೆಯುತ್ತಾರೆ. ರಾತ್ರಿ ಸುಮಾರು ಹತ್ತು ಗಂಟೆಯಿಂದ ಪ್ರಾರಂಭಿಸಿದರೆ ಬೆಳಗಿನ ಜಾವ ಐದು ಗಂಟೆಯವರೆಗೆ ಹಾಡುಹೇಳುತ್ತಾ ಶುಭ ಕೋರುತ್ತಾರೆ .
ಮಲೆನಾಡಿನ ಹಳ್ಳಿಗಳು ಸಾಲುಕೇರಿ. ಒಂದು ಊರಿನಲ್ಲಿ ಕನಿಷ್ಠ ಐವತ್ತು ಮನೆಗಳಿರುತ್ತದೆ.ಊರಿನ ಕೆಲವು ಜನರು ಸೇರಿ ಈ ಅಂಟಿಗೆ ಪಿಂಟಿಗೆ ಗೊಸ್ಕರವೇ ಒಂದು ತಿಂಗಳಿನಿಂದ ಹಾಡು ಹೇಳುವ ಅಭ್ಯಾಸ ಪ್ರಾರಂಭಿಸುತ್ತಾರೆ.ಇದಕ್ಕೆ ದೊಡ್ಡವರು ಚಿಕ್ಕವರು ಎಂಬ ಭೇದವಿಲ್ಲ .ಹಿರಿಯರಿಂದ ಈಗಿನ ಯುವಪೀಳಿಗೆಯವರು ಆಸಕ್ತಿ ಇರುವವರು ಸೇರಿಕೊಂಡು ಹಾಡುಕಲಿಯುತ್ತಾರೆ.
ಪಾಡ್ಯದ ದಿನ ರಾತ್ರಿ ಕೋಲಿಗೆ ಬೆಂಕಿ ಹಚ್ಚಿಕೊಂಡು ಹಣತೆ ಹಿಡಿದು ಪ್ರಾರಂಭಿಸುವ ಈ ಹಾಡಿನ ತಂಡ ಮೊದಲು ಊರಿನ ದೇವರಗುಡಿ ಗೆ ಪೂಜೆ ಸಲ್ಲಿಸಿ ಪ್ರಾರಂಭಿಸುತ್ತಾರೆ.ಪ್ರತಿಯೊಬ್ಬರ ಮನೆಯಲ್ಲೂ ಅಂಟಿಗೆ ಪಿಂಟಿಗೆ ಯವರು ತಂಡ ಹಣತೆಗೆ ಎಣ್ಣೆ ಹಾಕಲಾಗುತ್ತದೆ.ಆ ದೀಪ ಬೆಳಗಿನವರೆಗೆ ಆರದಂತೆ ನೋಡಿಕೊಳ್ಳಲಾಗುತ್ತದೆ.ಹಾಡುತ್ತಾ ಬಂದವರಿಗೆ ಅಕ್ಕಿ ,ಅಡಿಕೆ , ಕಾಣಿಕೆ, ಹೋಳಿಗೆ ಇವನ್ನೆಲ್ಲ ಕೊಡುವುದು ಇಲ್ಲಿಯ ಪದ್ಧತಿ.
ಹೀಗೆ ಒಂದು ಮನೆ ನಂತರ ಇನ್ನೊಂದು ಮನೆಗಳಿಗೆ ಹೋಗಿ ದೇವರ ನಾಮಗಳನ್ನು ಹಾಡುತ್ತ ಹೋಗುವುದು ಅಲ್ಲಿಯ ಜನರಿಗೆ ಸಂಭ್ರಮ .ಇದು ಮಲೆನಾಡಿನ ಹಳ್ಳಿಗಳಲ್ಲಿ ಹಿಂದಿನಿಂದಲೂ ನಡೆಸಿಕೊಂಡು ಬಂದ ಸಂಪ್ರದಾಯ . ಅದನ್ನು ಈಗಲೂ ಜನ ಮುಂದುವರೆಸಿಕೊಂಡು ಹೊಗುತ್ತಿದ್ದಾರೆ.ಮನೆಮನೆಗೆ ಹೋಗಿ ಕತ್ತಲೆ ದೊರವಾಗಿ ಬೆಳಕು ಮೂಡಲಿ ಎಂದು ಶುಭ ಹಾರೈಸುವುದು ಇದರ ಸಂಕೇತ .

ನನ್ನ ಈ ಲೇಖನ ಈಕನಸುವಿನಲ್ಲಿ ಪ್ರಕಟವಾಗಿದೆ http://www.ekanasu.com/2011/11/blog-post_02.html

ನಾನು ನನ್ನ ಕನಸು


ಸಿನೆಮಾ ನೋಡುವುದೆಂದರೆ ಮಕ್ಕಳಿಂದ ಹಿಡಿದು ವಯಸ್ಕರಿಗೂ ಕೂಡ ಒಂದು ರೀತಿಯ ಮೋಜು. ಹಾಗೆ ಟೈಮ್ ಪಾಸ್ ಗೆ ನಾನು ಇತ್ತೀಚಿಗೆ ನೋಡಿದ ಚಲನಚಿತ್ರವೆಂದರೆ "ನಾನು ಮತ್ತು ನನ್ನ ಕನಸು"
ನನಗೆ ತುಂಬಾ ಇಷ್ಟವಾದ ಫಿಲಂ ಇದು.ಮನೆಮಂದಿಯೆಲ್ಲ ಒಟ್ಟಿಗೆ ಕುಳಿತು ನೋಡಬಹುದಾದ ಫಿಲಂ ಇದು. ಪ್ರಕಾಶ್ ರೈ ಅವರ ಅಭಿನಯದ ಅವರದೇ ಅಭಿನಯದ ಚಿತ್ರವಿದು.ಎಂದಿನಂತೆ ಪ್ರಕಾಶ ರೈ ಅವರ ಅಭಿನಯ ಪ್ರೇಕ್ಷಕರನ್ನು ತನ್ನತ್ತ ಸೆಳೆಯುವುದರಲ್ಲಿ ಯಶಸ್ವಿಯಾಗಿದೆ.
ಇದು ಅಪ್ಪ-ಮಗಳ ನಡುವಿನ ವಾಸ್ತವಕ್ಕೆ ಹತ್ತಿರವಾದ ಚಿತ್ರ.ಒಂದು ಮಗುವಿಗೆ ಅಪ್ಪ ಹೇಗೆ ಬೇಡಿಕೆಗಳನ್ನೆಲ್ಲ ಪೂರೈಸುತ್ತಾನೆ. ಮಗುವಿನ ಮುಗ್ಧ ಮನಸ್ಸು ಹೇಗೆ ಪಾಲಕರನ್ನು ತನ್ನತ್ತ ಸೆಳೆಯುತ್ತದೆ ಎಂಬುದನ್ನು ತೋರಿಸಿಕೊಟ್ಟಿದ್ದಾರೆ.ಪ್ರತಿಯೊಬ್ಬ ಪೋಷಕರು ನೋಡಲೇಬೇಕಾದ ಫಿಲಂ ಇದು.
ಒಂದು ಹೆಣ್ಣು ಮಗು ತನ್ನ ಅಪ್ಪನನ್ನು ಚಿಕ್ಕವಳಿದ್ದಾಗ ಹೇಗೆ ಅವಲಂಬಿಸಿರುತ್ತದೆ ಅದೇ ದೊಡ್ದವರಾಗುತ್ತಿದ್ದಂತೆ ತನ್ನ ಇಷ್ಟ, ಬೇಡಿಕೆಗಳನ್ನು ತಂದೆಯನ್ನು ಕೇಳದೆ ನಿರ್ಧಾರವನ್ನು ತೆಗೆದುಕೊಳ್ಳುತ್ತದೆ ಮತ್ತು ಆ ನಿರ್ಧಾರಕ್ಕೆ ಒಪ್ಪಲೇಬೇಕಾದ ಅನಿವಾರ್ಯತೆ ತಂದೆ ತಾಯಿಗೆ ಬರುತ್ತದೆ ಎಂಬುದು ವಾಸ್ತವಕ್ಕೆ ಹತ್ತಿರವಾಗಿದೆ.
ಹಂಸಲೇಖ ಅವರ ಸಂಗೀತ ಫಿಲಂ ಗೆ ಸಾಥ್ ನೀಡುವಲ್ಲಿ ಯಶಸ್ವಿ ಆಗಿದೆ.ಒಟ್ಟಾರೆಯಾಗಿ ಮೊದಲಿನಿಂದ ಕೊನೆಯವರೆಗೆ ಪ್ರೇಕ್ಷಕನ ಮನ ಸೆರೆಹಿಡಿಯುವಲ್ಲಿ ಈ ಚಲನಚಿತ್ರ ಯಶಸ್ವಿ ಆಗಿದೆ.

Tuesday 25 October 2011

ಸಂಜೆ

ನಮ್ಮ ಮನೆಯ ಕಿಟಕಿಯಿಂದ ಒಂದು ಸಂಜೆ ನಾ ತೆಗೆದ ಚಿತ್ರ ಅದನ್ನು ನೋಡುತ್ತಾ ನನ್ನ ಮನದಲ್ಲಿ ಮೂಡಿದ ಕವಿತೆ ಇದು


ಬೆಳಕ ಸರಿಸಿ
ಮುಸುಕು ಕವಿದು
ಆವರಿಸುತಿದೆ ಕತ್ತಲು
ಬಾಳ ಸವೆಸಿ
ಮುಗಿದ ಬದುಕು
ಸಾಗುತಿದೆ ಎತ್ತಲೋ ?
ಮುಗಿದ ದಿನದ
ಸೂಚನೆಯೋ ಕೂಗುತಿಹುದು
ಹಕ್ಕಿಗಳು
ಬಾನ ದಾಟಿ ಗೂಡು
ಸೇರಹೊರಟಿಹುದು
ಬಯಕೆಗಳು

Friday 21 October 2011

ಶುಭಾಶಯ


ದೀಪಾವಳಿ ದೀಪಗಳ ಹಬ್ಬ . ನಮ್ಮ ಮಲೆನಾಡಿನಲ್ಲಿ ಅಳಿಯನ ಹಬ್ಬ ಎಂದೇ ಕರೆಯುತ್ತಾರೆ . ನಮ್ಮಲ್ಲಿ ಒಂದು ಸಂಪ್ರದಾಯವಿದೆ.ಹೊಸದಾಗಿ ಮದುವೆಯಾದ ಮಗಳು ಅಳಿಯ ಅಂದು ತವರುಮನೆಗೆ ಹೋಗಿ ಹಬ್ಬ ಆಚರಿಸಬೇಕು.ಅದು ಮದುಮಕ್ಕಳಿಗೆ ಹೊಸಹಬ್ಬ .ಮಗಳು ಅಳಿಯ ಬರುತ್ತಾರೆ ಎಂದು ತಂದೆತಾಯಿಗೆ ಎಲ್ಲಿಲ್ಲದ ಹರ್ಷ.ಮನೆಯಬಾಗಿಲು ಗಳಿಗೆ ಹಸಿರು ತೋರಣ ಕಟ್ಟಿ ಸಂತೋಷದಿಂದ ಪ್ರಾರಂಭಿಸುತ್ತಾರೆ.ಮನೆಯ ಮುಂದೆ ರಂಗೋಲಿ ಇಟ್ಟು ಶುಭಾಶಯ ಕೋರುತ್ತಾರೆ ಆ ದಿನ ಬೆಳಿಗ್ಗೆ ಮಗಳು ಅಳಿಯನಿಗೆ ಎಣ್ಣೆ ಅರಿಶಿನ ಹಾಕಿ ಅಭ್ಯಂಜನ ಮಾಡಿಸುತ್ತಾರೆ.ಹಬ್ಬಕ್ಕೆ ಉಡುಗೊರೆಯಾಗಿ ಹೊಸ ವಸ್ತ್ರವನ್ನು ನೀಡಿ ಸಂಭ್ರಮಿಸುತ್ತಾರೆ.

ದೇವರ ಕೋಣೆಯಲ್ಲಿ ದೀಪಗಳನ್ನು ಹಚ್ಚುವುದರಿಂದ ಪ್ರಾರಂಭಿಸಿ ಮನೆಯ ಹೊರಗಿನ ಮೆಟ್ಟಿಲು ಗಳವರೆಗೆ ದೀಪಗಳ ಸಾಲು ಅಲಂಕಾರಮಾಡಲಾಗುತ್ತದೆ.ಅಳಿಯ ಬಂದಿರುವ ಸಂತಸದಲ್ಲಿ ಹೋಳಿಗೆ ,ಕಡುಬು,ಕೋಸಂಬರಿ,ಚಿತ್ರಾನ್ನ,ಪಾಯಸ,ಚಕ್ಕುಲಿ ಹೀಗೆ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ.ಗೋವುಗಳಿಗೆ ನವ ಮದುಮಕ್ಕಳಿಂದ ಆರತಿ ಎತ್ತಿಸುತ್ತಾರೆ.ಸಂಜೆಯಾಯಿತೆಂದರೆ ಸಾಕು ಬಾಸಿಂಗ ಕಟ್ಟಿಕೊಂಡ ಜೋಡಿ ಎತ್ತುಗಳನ್ನು ಓಡಿಸಿಕೊಂಡು ಎಲ್ಲರ ಮನೆಗೆ ಹೋಗುವುದು ಅಲ್ಲಿ ಅವುಗಳಿಗೆ ನೀಡಲಾದ ತಿಂಡಿ ತೆಗೆದುಕೊಳ್ಳುವುದು , ಅದಾದ ನಂತರ ದೀಪ ಹಚ್ಚಿಕೊಂಡು ಎಲ್ಲರ ಊರಿನವರೆಲ್ಲ ಒಟ್ಟು ಸೇರಿ ಊರಲ್ಲಿರುವ ಬೂತಪ್ಪ ಚೌಡಪ್ಪ ಗಳಿಗೆ ದೀಪ ಇಟ್ಟು ಬರುವುದು ಇದೆಲ್ಲ ಸುಂದರವಾಗಿರುತ್ತದೆ.ಇನ್ನು ಚಿಕ್ಕಮಕ್ಕಳಿದ್ದರಂತು ಹೊಸಬಟ್ಟೆ ಧರಿಸಿ ಎಲ್ಲರಿಗೂ ತೋರಿಸುವುದೆಂದರೆ ಎಲ್ಲಿಲ್ಲದ ಹಿಗ್ಗು . ಜೊತೆಗೆ ಪಟಾಕಿಗಳ ಭರಾಟೆ.

ರಾತ್ರಿ ಪಟಾಕಿಗಳ ಸುರಿಮಳೆ ಆ ಸಮಯಕ್ಕೆ ಸರಿಯಾಗಿ ಎಲ್ಲರ ಮನೆಯವರೂ ಹೊರಬಂದು ನೋಡುವ ಸಂಭ್ರಮವೇ ಚಂದ .ಆ ದಿನ ನೆಂಟರಿಷ್ಟರಿಂದ ಚಿಕ್ಕ ಮಕ್ಕಳ ಗದ್ದಲ ಗಳಿಂದ ತುಂಬಿರುವ ಎಲ್ಲರ ಮನೆಗಳಲ್ಲಿ ಸಂಭ್ರಮವೋ ಸಂಭ್ರಮ.ಹೀಗೆ ದೀಪಾವಳಿ ಹಬ್ಬವೆಂದರೆ ಹೊಸಹರುಷ , ಸಂತಸ, ಸಂಭ್ರಮದಿಂದ ಕೂಡಿರುತ್ತದೆ.
ಇನ್ನೇನು ದೀಪಾವಳಿ ಹತ್ತಿರ ಬರುತ್ತಿದೆ.ದೂರದಲ್ಲಿರುವುದರಿಂದ ಮೊದಲ ಹೊಸಹಬ್ಬಕ್ಕೆ ತವರೂರಿಗೆ ಹೋಗಲಾಗುತ್ತಿಲ್ಲ.ನನ್ನ ತವರೂರಿಗೆ ಬಂಧುಗಳಿಗೆ,ಸ್ನೇಹಿತರಿಗೆ ಶುಭಾಶಯಗಳು .ದೀಪಾವಳಿ ಎಲ್ಲರ ಬಾಳಲ್ಲಿ ಬೆಳಕನ್ನು ತರಲಿ.
ನನ್ನ ಈ ಲೇಖನ ಈ ಕನಸು ವಿನಲ್ಲಿ ಪ್ರಕಟವಾಗಿದೆ http://www.ekanasu.com/2011/10/blog-post_25.html

ಹಾಗೆ ಸುಮ್ಮನೆ

ಪ್ರೀತಿಯ ಹುಡುಗ

ನನ್ನ ಯಾಕೆ ಹೀಗೆ ಕಾಡ್ತಾ ಇದ್ದೀಯ ? ಬೆಳಿಗ್ಗೆ ಎದ್ದು ದೇವರಿಗೆ ಕೈ ಮುಗಿಯಲು ನಿಂತರೆ ನೀನೆ ಕಣ್ಣೆದುರು ಬರ್ತೀಯ .ಚಳಿಯಲ್ಲಿ ನಡುಗುತ್ತ ಕಾಫಿ ಕುಡಿಯುತ್ತಿದ್ರೆ ನೀ ಎದುರು ಕುಳಿತು ನಗ್ತಿರ್ತೀಯ.ಮುಂಜಾನೆಯ ಇಬ್ಬನಿಯ ಸವಿ ಅನುಭವಿಸುತ್ತಿದ್ದರೆ ನೀ ಎಲ್ಲೊ ದೂರದಲ್ಲಿ ಅಡಗಿ ನಿಂತು ನನ್ನನ್ನೇ ನೋಡುತ್ತಿದಿಯ ಅನ್ನಿಸಿಬಿಡುತ್ತದೆ.ಮಧ್ಯಾನ್ಹ ಬಿಸಿ ಅಡುಗೆ ಮಾಡಿ ತಿನ್ನುತ್ತ ಕುತಾಗ ನೀನು ಬಂದು ನಂಗೆ ಇಲ್ವಾ ಕೇಳಿದ ಹಾಗೆ ಆಗುತ್ತೆ ನಿನಗಾಗಿ ಸ್ವಲ್ಪ ಹಾಗೆ ಉಳಿಸಿ ಕಾಯುತ್ತಾ ಕುಳಿತುಕೊಂಡು ಬಿಡೋಣ ಅನ್ನಿಸುತ್ತೆ.

ಕನ್ನಡಿಯ ಎದುರು ನಿಂತು ನನ್ನನ್ನೇ ನಾ ನೋಡುತ್ತಿದ್ದರೆ ನೀ ಬಂದು ಹಿಂದಿನಿಂದ ತಬ್ಬಿದ ಹಾಗಾಗುತ್ತೆ.ಕಣ್ಣುಮುಚ್ಚಿ ಸ್ವಲ್ಪ ಹೊತ್ತು ಮಲಗಿದರೆ ನೀ ಬಂದು ಕಚಕುಳಿ ಇಟ್ಟಂತಾಗುತ್ತದೆ.ಮೊಬೈಲ್ ನಲ್ಲಿ ನಿನ್ನ sms ಗಾಗಿ ಆಗಾಗ ತಡಕಾಡುತ್ತಿರುತ್ತೇನೆ. ನಿನ್ನ ಫೋನ್ ಗಾಗಿ ಕಾಯುತ್ತಾ ಕುಳಿತಲ್ಲೇ ಕುಳಿತಿರುತ್ತೇನೆ.ನೀ ಇಲ್ಲದೆ ಒಬ್ಬಳೇ ಹೊರಗೆ ಹೊರಟರೆ ಒಂಟಿ ಅನ್ನಿಸಿಬಿಡುತ್ತದೆ.ಒಬ್ಬಳೇ ಹಾಡು ಹಾಡುತ್ತಿದ್ದರೆ ನಿನ್ನ ಸಾತ್ ಬೇಕು ಅನ್ನಿಸಿಬಿಡುತ್ತದೆ.ಕಿಟಕಿಯಿಂದ ಹೊರನೋಡುತ್ತಿದ್ದರೆ ಈ ಸೂರ್ಯ ಈಗಲೇ ಮುಳುಗಿ ಬಿಡಬಾರದಾ ಬೇಗ ಸಂಜೆ ಆಗಬಾರದಾ?? ಎಂದೆನಿಸುತ್ತದೆ.ಪ್ರತಿ ಕ್ಷಣ ನಿನ್ನನ್ನೇ ಕಾಯುತ್ತಿರುತ್ತೇನೆ . ಬೆಳಿಗ್ಗೆ ಇಂದ ಸಂಜೆವರೆಗೆ ನಿನ್ನ ತುಂಬಾ ಮಿಸ್ ಮಾಡಿಕೊಳ್ತೀನಿ ಕಣೋ. ಬೇಗ ಬಂದುಬಿಡು .

ಮುಂಜಾನೆಯ ಚಿತ್ರ

ಇಂದು ಮುಂಜಾನೆ ಮನೆಯಿಂದ ಹೊರಗೆ ಇಣುಕಿ ನೋಡಿದಾಗ ಮೊದಲು ಕಂಡ ದೃಶ್ಯವಿದು

ಒಂದು ಇಳಿಸಂಜೆ ಯಲ್ಲಿ ಲಂಡನ್ ನ ಪಾರ್ಕ್ ಒಂದರಲ್ಲಿ ನನ್ನವರು ಸೆರೆಹಿಡಿದ ಚಿತ್ರವಿದು

Thursday 20 October 2011

ಪ್ರವಾಸಿ ಕಥನ -3

ಲಂಡನ್ ಗೆ ಬಂದು ತುಂಬಾ ದಿನಗಳಾಗಿದ್ದರಿಂದ ದೇವಸ್ಥಾನಕ್ಕೆ ಹೋಗಬೇಕೆಂಬ ಆಸೆ ಇತ್ತು.ಆ ದಿನ ಗಣಪತಿ ಹಬ್ಬವಾಗಿತ್ತು .ವಿಳಾಸ ತೆಗೆದುಕೊಂಡು ಮೊದಲೇ ಪ್ಲಾನ್ ಮಾಡಿ ದೇವಸ್ಥಾನಕ್ಕೆ ಹೊರಟೆವು. ನಾವು ಮೊದಲು ಹೋಗಿದ್ದು ಉತ್ತರ ಲಂಡನ್ ಅಲ್ಲಿರುವ ವೆಂ ಬ್ಲಿ ಎಂಬ ಸ್ಥಳದಲ್ಲಿರುವ ಸ್ವಾಮಿನಾರಾಯಣ ದೇವಸ್ಥಾನಕ್ಕೆ .

ಈ ಸ್ಥಳ ನೀಸ್ದೆನ್ ಎಂಬಲ್ಲಿರುವುದರಿಂದ ಇದನ್ನು ನೀಸ್ದೆನ್ ದೇವಾಲಯ ಎಂದೂ ಕರೆಯುತ್ತಾರೆ.ಈ ದೇವಾಲಯ ನಮ್ಮ ಬೆಂಗಳೂರಿನ ಇಸ್ಕಾನ್ ದೇವಸ್ಥಾನ ವನ್ನು ನೆನಪಿಸುತ್ತದೆ.ಇದು ಬಿಳಿಕಲ್ಲಿನಿಂದ ಮಾಡಲಾಗಿದೆ.ದೇವಸ್ಥಾನದ ಎದುರಿನಲ್ಲಿ ವಿಶಾಲವಾದ ಜಾಗವಿದೆ ಮತ್ತು ಸುಂದರ ಉದ್ಯಾನವನವೂ ಇದೆ.ಇಲ್ಲಿ ಒಳಗೆ ಛಾಯಾಚಿತ್ರ ತೆಗೆಯುವ ಅವಕಾಶವಿಲ್ಲದ್ದರಿಂದ ಹೊರನೋಟದ ಚಿತ್ರಣ ಇಲ್ಲಿದೆ.
ಇದು ಭಗವಾನ್ ಸ್ವಾಮಿನಾರಾಯಣ ದೇವಸ್ಥಾನ.ಇಲ್ಲಿ ಕೃಷ್ಣನ ಪೂಜೆ ವಿಶೇಷ ವಾಗಿ ಮಾಡಲಾಗುತ್ತದೆ.ಹೆಚ್ಚಿನ ಜನ ಗುಜರಾತಿನವರನ್ನು ಕಾಣಬಹುದು.ಪ್ರತಿದಿನ ಸಂಜೆ ಮತ್ತು ಬೆಳಿಗ್ಗೆ ವಿಶೇಷ ಪೂಜೆ ನಡೆಯುತ್ತದೆ.ಈ ಪೂಜೆಗೆ ಲಂಡನ್ ನಲ್ಲೆ ವಾಸವಾಗಿರುವ ಹೆಚ್ಚಿನ ಜನ ತಪ್ಪದೇ ಪಾಲ್ಗೊಳ್ಳುವುದು ವಿಶೇಷವೆ ಸರಿ.ಪೂಜೆಯ ನಂತರ ಭಜನೆಯನ್ನು ಮಾಡಲಾಗುತ್ತದೆ. ಇದು ಲಂಡನ್ ಅಲ್ಲೇ ಅತಿ ದೊಡ್ಡ ದೇವಸ್ಥಾನ ಆದದ್ದರಿಂದ ಈ ದೇವಸ್ಥಾನಕ್ಕೆ ಸಾಕಷ್ಟು ಪ್ರಶಸ್ತಿಗಳು ಬಂದಿವೆ.ಲಂಡನ್ ಗೆ ಹೋದವರು ಖಂಡಿತವಾಗಿ ಇಲ್ಲೊಮ್ಮೆ ಭೇಟಿ ನೀಡಲೇ ಬೇಕು.ಅಷ್ಟೊಂದು ಸುಂದರವಾಗಿದೆ.

ಇದರ ನಂತರ ನಾವು ಭೇಟಿ ನೀಡಿದ ಸ್ಥಳ ಈಸ್ಟ್ ಹ್ಯಾಮ್ .ಇಲ್ಲಿ ಹೆಚ್ಚಿನ ಜನರು ಭಾರತೀಯರು.ಕೆಲಸದ ಮೂಲಕ ಹೋದವರು ಒಂದಿಷ್ಟು ಜನರಾದರೆ ಅಲ್ಲೇ ಮೊದಲಿನಿಂದಲೂ ಹುಟ್ಟಿ ಬೆಳೆದವರೂ ಇದ್ದಾರೆ.ಆದರೆ ಭಾರತೀಯ ಸಂಸ್ಕೃತಿಯನ್ನು ಮಾತ್ರ ಬಿಟ್ಟುಕೊಟ್ಟಿಲ್ಲ.ಈ ಈಸ್ಟ್ ಹ್ಯಾಮ್ ಅಲ್ಲಿರುವ ದೇವಸ್ಥಾನವೇ ಮಹಾಲಕ್ಷ್ಮಿ ದೇವಾಲಯ .ಚಿಕ್ಕ ದೇವಾಲಯ ,ಆದರೂ ಸಾಕಷ್ಟು ದೇವರುಗಳಿವೆ .ಬೆಳಿಗ್ಗೆ ಮತ್ತು ಸಂಜೆ ಪೂಜೆ ನಡೆಯುತ್ತದೆ.ಪ್ರತಿದಿನ ಪೂಜೆಯ ಸಮಯಕ್ಕೆ ನೂರಾರು ಜನ ಸೇರುತ್ತಾರೆ.ಇಲ್ಲಿ ಫೋಟೋ ತೆಗೆಯುವುದನ್ನು ನಿಷೇದಿಸಲಾಗಿದೆ.
ಈಸ್ಟ್ ಹ್ಯಾಮ್ ಗೆ ಸ್ವಲ್ಪ ಹತ್ತಿರದಲ್ಲಿ ಇಲ್ ಫೋರ್ಡ್ ಎಂಬ ಸ್ಥಳ ವಿದೆ .ಇದು ಈಸ್ಟ್ ಹ್ಯಾಮ್ ನಿಂದ ಕೇವಲ ೧೦ ನಿಮಿಷ .ಇಲ್ಲಿರುವುದು ಮುರುಗನ್ ದೇವಾಲಯ.ಇದು ವಿಶಾಲ ಜಾಗ ಹೊಂದಿದೆ.
ಇಲ್ಲಿ ನವರಾತ್ರಿ ಗಳಲ್ಲಿ ವಿಶೇಷ ಪೂಜೆ ಮಾಡಲಾಗುತ್ತದೆ. ಮತ್ತು ಪ್ರತಿದಿನ ಪೂಜೆ ನಡೆಯುತ್ತದೆ.ಭಕ್ತಾದಿಗಳು ವಿಶೇಷ ಪೂಜೆಯನ್ನು ಮಾಡಿಸಬಹುದು.ಜೊತೆಗೆ ಪ್ರತಿದಿನ ಬಂದ ಭಕ್ತಾದಿಗಳಿಗೆ ಪಾಯಸ ಮತ್ತು ಅವಲಕ್ಕಿ ಮಾಡಿ ಪ್ರಸಾದ ಹಂಚಲಾಗುತ್ತದೆ.ಹೀಗೆ ಲಂಡನ್ ಅಲ್ಲೂ ಕೂಡ ಭಾರತೀಯರು ತಮ್ಮ ಸಂಸ್ಕೃತಿ ಸಂಪ್ರದಾಯಗಳನ್ನು ಇಂದಿಗೂ ನಡೆಸಿಕೊಂಡು ಬರುತ್ತಿದ್ದಾರೆ.

Tuesday 18 October 2011

ಆಸೆ

ಬಿರುಗಾಳಿಯಲ್ಲೊಮ್ಮೆ ಗಟ್ಟಿಯಾಗಿ ನಿನ್ನ ತಬ್ಬಿ
ತಿರುಗುವಾಸೆ
ಮಳೆಯ ಆರ್ಭಟದಲ್ಲಿ ಕೊಡೆಯಿಲ್ಲದೆ
ನಿನ್ನ ಕೈ ಹಿಡಿದು ನಡೆಯುವಾಸೆ
ದಟ್ಟಕಾನನದ ನಡುವೆ ನಿನ್ನ ಜೊತೆಗೂಡಿ
ಹೆಜ್ಜಇಡುವಾಸೆ
ಕತ್ತಲಲ್ಲಿ ಕುಳಿತು ನಿನ್ನ
ಪಿಸುಮಾತ ಕೇಳುವಾಸೆ

Thursday 13 October 2011

ಧರ್ಮಸ್ಥಳ ಮಂಜುನಾಥ ವಿದ್ಯಾಲಯ


ಆಗಷ್ಟೇ ಪಿ ಯು ಸಿ ಮುಗಿಸಿದ್ದೆ. ಮುಂದೇನು ಮಾಡಬೇಕು ಎಂಬ ಪ್ರಶ್ನೆ ಕಾಡುತ್ತಿತ್ತು.ಯಾವುದಾದರು ಒಳ್ಳೆಯ ಕಾಲೇಜ್ ನಲ್ಲಿ ಓದಬೇಕೆಂಬ ಹಂಬಲವಿತ್ತು.ಅದಕ್ಕಾಗಿ ನಾಲ್ಕಾರು ಕಡೆ ಹುಡುಕಿದಾಗ ಸಿಕ್ಕ ಉತ್ತರವೇ SDM ಕಾಲೇಜ್ ಉಜಿರೆ.ಹೌದು ನಾನೀಗ ಬರೆಯಹೊರಟಿರುವುದು ಮೂರು ವರ್ಷ ನಾನು ಕಳೆದ ಉಜಿರೆಯ ಕಾಲೇಜಿನ ಬಗ್ಗೆ. "ಪ್ರಜ್ವಾಲಿತೋ ಜ್ಞಾನಮಯಃ ಪ್ರದೀಪಃ " ಉಜಿರೆಯ SDM ಕಾಲೇಜ್ ಗೆ ಮೊಟ್ಟಮೊದಲು ಕಾಲಿಟ್ಟಾಗ ಎದುರುಗೊಂಡ ಅರ್ಥಪೂರ್ಣ ಸಾಲುಗಳಿವು.ಜೊತೆಗೆ ಸುಂದರ ಪರಿಸರ ಪಕ್ಕ ತಿರುಗಿದರೆ ಕಾಣುವ ಗಡಯಿಕಲ್ಲು,ಎದುರು ನೋಡಿದರೆ ಸುಂದರ ಉದ್ಯಾನವನ, ಅದರೊಳಗೆ ದೈತ್ಯ ಕಟ್ಟಡ. ಮೂರು ವರ್ಷಗಳಲ್ಲಿ ಅಲ್ಲಿ ಕಲಿತದ್ದು ಬಹಳ ಜೀವನದಲ್ಲಿ ಅಳವಡಿಸಿಕೊಂಡದ್ದು ಬಹಳ. ಶ್ರೀ ಕ್ಷೇತ್ರ ಧರ್ಮಸ್ಥಳ ಕ್ಕೆ ಐದು km ಹಿಂದೆ ಈ ಉಜಿರೆ ಕಾಲೇಜ್ ಸಿಗುತ್ತದೆ.ವೀರೇಂದ್ರ ಹೆಗ್ಗಡೆ ಯವರೇ ಈ ಕಾಲೇಜ್ ಅನ್ನು ಈ ಮಟ್ಟಕ್ಕೆ ಬೆಳೆಸಿದವರು. ಉಜಿರೆ ಕಾಲೇಜ್ NAAC ನಲ್ಲಿ A++ ಗ್ರೇಡ್ ಪಡೆದಿದೆ.ಇಲ್ಲಿ ಕೇವಲ ಓದಿಗೆ ಮಾತ್ರವಲ್ಲ ಉಳಿದ ಚಟುವಟಿಕೆಗಳಲ್ಲೂ ಪ್ರೋತ್ಸಾಹವಿದೆ.ಸಂಗೀತ .ಯಕ್ಷಗಾನ.ನಾಟಕ.ಬರವಣಿಗೆ.ಆಟೋಟ .ನೃತ್ಯ .ಕಸೂತಿ . ಹೀಗೆ ನಮ್ಮ ಆಸಕ್ತಿಯನ್ನು ನಾವೇ ಆಯ್ದುಕೊಳ್ಳುವ ಅವಕಾಶವಿದೆ.ಪ್ರತಿಭೆಯನ್ನು ಬೆಳೆಸುವ ಶಕ್ತಿಯಿದೆ ಎಂದರೆ ತಪ್ಪಾಗಲಾರದು.ಪ್ರತಿಯೊಬ್ಬರಲ್ಲೂ ಒಂದೊಂದು ಪ್ರತಿಭೆ ಇರುತ್ತದೆ.ಅದರ ಬೆಳವಣಿಗೆಗೆ ಸರಿಯಾದ ವೇದಿಕೆ ಸಿಕ್ಕಾಗ ಅದು ಪ್ರಜ್ವಲಿಸಲು ಸಾದ್ಯ ಅಂತಹ ಒಂದು ವೇದಿಕೆಯನ್ನು ಇಲ್ಲಿ ಒದಗಿಸಿ ಕೊಡಲಾಗುತ್ತದೆ.ಪ್ರತಿಯೊಬ್ಬರಲ್ಲೂ ಆಸಕ್ತಿ ಹುಟ್ಟಿಸುತ್ತದೆ.ಈ ಕಾಲೇಜಿನಲ್ಲಿ ಶಿಸ್ತಿದೆ.ಬದುಕಿಗೆ ಯಾವುದೂ ಕೊರತೆಯಾಗದಂತೆ ಕಾಲೇಜ್ ಕ್ಯಾಂಪಸ್ ನಲ್ಲಿ ವಿಜಯಬ್ಯಾಂಕ್ ಇದೆ.ಪಕ್ಕದಲ್ಲೇ ATM ಇದೆ .ಮನೆಯನೆನಪಾದರೆ ಬರೆದುಹಾಕಲು ಪೋಸ್ಟ್ ಆಫೀಸ್ ಇದೆ.ಹಸಿವಾದರೆ ತಿನ್ನಲು ಕ್ಯಾಂಟೀನ್ ಇದೆ.ಸ್ವಲ್ಪ ನಡೆದು ಹೋದರೆ ಗುರುಕುಲವನ್ನು ನೆನಪಿಸಲು ಸಿದ್ದವನ ಎಂಬ ಬಾಯ್ಸ್ ಹಾಸ್ಟೆಲ್ ಇದೆ.ಹುಡುಗಿಯರಿಗಾಗಿಯೇ ಮೈತ್ರೀಯಿ ಎಂಬ ವಿದ್ಯಾರ್ಥಿನಿ ನಿಲಯವಿದೆ.ಜೊತೆಗೆ ತಪ್ಪುಮಾಡಿದಲ್ಲಿ ತಿದ್ದುವ ಎಡವದಂತೆ ನೋಡಿಕೊಳ್ಳುವ ಶ್ರದ್ಧೆ ಇಟ್ಟು ಕಲಿಸುವ ಶಿಕ್ಷಕರಿದ್ದಾರೆ.ಎಲ್ಲಕ್ಕಿಂತ ಹೆಚ್ಚಾಗಿ ಧರ್ಮಸ್ಥಳ ಮಂಜುನಾಥನ ದಯೆ ಇದೆ.ಹೀಗೆ ಬರೆದಷ್ಟು ಮುಗಿಯದ ದಾಖಲೆಗಳಿವೆ ಈ ಕಾಲೇಜ್ ನಲ್ಲಿ.ಎಷ್ಟೋ ಬಾರಿ ಸುಮ್ಮನೆ ಕುಳಿತಾಗ ನಾನು ಅಲ್ಲಿ ಓದುತ್ತಿರುವಾಗ ಹೇಳುತ್ತಿದ್ದ ಆಲಯ ಆಲಯ ನಮ್ಮ ಆಲಯ ಧರ್ಮಸ್ಥಳ ಮಂಜುನಾಥ ವಿದ್ಯಾಲಯ ಹಾಡು ನೆನಪಿಗೆಬರುತ್ತದೆ.ಸಾದ್ಯವಾದರೆ ನೀವು ಒಮ್ಮೆ ಭೇಟಿ ಕೊಡಿ ಹಿಂದಿರುಗುವಾಗ ನಿಮ್ಮಲ್ಲೂ ಹೊಸ ಚೈತನ್ಯ ತುಂಬುತ್ತದೆ.

Wednesday 12 October 2011

ಪ್ರವಾಸಿ ಕಥನ -2

ಲಂಡನ್ ನ ಆಕರ್ಷಣೆಗಳಲ್ಲಿ ಒಂದಾದ ಲಂಡನ್ ಐ ಬಗ್ಗೆ ನಿಮಗೆ ತಿಳಿಸಲೇ ಬೇಕು ಅನಿಸಿದ್ದರಿಂದ ಈ ಲೇಖನ ..ಲಂಡನ್ ಅಲ್ಲಿ ಲಂಡನ್ ಐ ಪ್ರಖ್ಯಾತಿ ಸ್ಥಳ .ಪ್ರತಿದಿನ ಸಾವಿರಾರು ಜನರಿಂದ ಗಿಜಿಗಿಜಿ ಎನ್ನುತ್ತಿರುತ್ತದೆ . ಲಂಡನ್ ಐ ನೋಡಲು ಕಣ್ಣಿನ ಆಕಾರ ಹೊಂದಿದೆ .ಬಹುಷಃ ಅದಕ್ಕಾಗಿಯೇ ಲಂಡನ್ ಐ ಎಂಬ ಹೆಸರಿಟ್ಟಿರಬಹುದು.ದೂರದಿಂದ ನೋಡಿದರೆ ನಮ್ಮೂರಿನ ಜಾತ್ರೆಗಳಲ್ಲಿರುವ ಜಾಯಿಂಟ್ ವೀಲ್ ನಂತೆ ಕಾಣುತ್ತದೆ.ಆದರೆ ಇದು ಸುಂದರವಾಗಿದೆ.ದೊಡ್ಡದಾಗಿದೆ.ಒಂದೊಂದು ಐ ನಲ್ಲಿ ಕನಿಷ್ಠ ಹದಿನೈದು ಜನ ಕುಳಿತುಕೊಂಡು ಹೋಗಬಹುದು.ಒಟ್ಟು ಇಪ್ಪತ್ತೈದು ಕಣ್ಣಿನಾಕಾರದ ಬುಟ್ಟಿಗಳಿವೆ . ಇದು ಒಂದು ಸುತ್ತು ತಿರುಗಲು ತೆಗೆದುಕೊಳ್ಳುವ ಅವಧಿ ನಲವತ್ತು ನಿಮಿಷಗಳು.ಚಲಿಸುತ್ತಿದೆ ಎಂಬ ಅನುಭವವೇ ಆಗದಂತೆ ತಿರುಗುತ್ತದೆ.ನಾವು ಸುಮಾರು ರಾತ್ರಿ ಏಳು ಮೂವತೈದಕ್ಕೆ ಲಂಡನ್ ಐ ಯನ್ನು ಹತ್ತಿದ್ದೆವು.ಆ ನಲವತ್ತು ನಿಮಿಷಗಳು ಅದ್ಭುತವಾದ ಪ್ರಪಂಚದರ್ಶನ ಆದಂತಿತ್ತು.ಇದರಲ್ಲಿ ಕುಳಿತು ಹೊರಗಿನ ದೃಶ್ಯಗಳನ್ನು ನೋಡುತ್ತಿದ್ದರೆ ಜಗತ್ತು ಇಷ್ಟೊಂದು ಸುಂದರವಾಗಿದೆಯಲ್ಲವೇ ಎಂದೆನ್ನಿಸುತ್ತದೆ.ದೀಪಗಳಿಂದ ಕಂಗೊಳಿಸುವ ಆ ಲೋಕವನ್ನು ಮತ್ತೆ ಮತ್ತೆ ನೋಡಬೇಕೆನಿಸುತ್ತದೆ .ಲಂಡನ್ ಐ ಯಲ್ಲಿ ಕುಳಿತು ತೆಗೆದಿರುವ ಕೆಲವು ಫೋಟೋ ಗಳು ಇಲ್ಲಿವೆ.

Sunday 9 October 2011

ಹಂಬಲಿಸಿದೆ ಮನ

"ಕಾಣದ ಕಡಲಿಗೇ ಹಂಬಲಿಸಿದೆ ಮನ ಕಾಣಬಲ್ಲೆನೆ ಒಂದು ದಿನ " ?? ಒಬ್ಬಳೇ ಕುಳಿತಾಗ ಎಷ್ಟೋ ಬಾರಿ ನಾನು ಕೇಳುವ ಹಾಡಿನ ಸಾಲುಗಳಿವು.
ಎಷ್ಟು ಅರ್ಥಪೂರ್ಣ ವಾಗಿವೆ .ಎಷ್ಟೊಂದು ಭಾವನೆಗಳನ್ನು ಒಳಗೊಂಡಿವೆ .ಹೌದು ಪ್ರತಿಯೊಬ್ಬರ ಮನಸ್ಸು ಕೂಡ ಒಂದಲ್ಲ ಒಂದು ಬಾರಿ ಕಾಣದುದ್ದನ್ನು ಕಾಣಬೇಕೆಂದು ಬಯಸಿರುತ್ತದೆ.ಏನೋ ಒಂದು ಹೊಸತನ್ನು ಸಾಧಿಸಬೇಕೆಂದು ಬಯಸಿರುತ್ತದೆ.ಮುಂದೊಂದು ದಿನ ಕಾಣಬೇಕೆಂಬ ಹಂಬಲ ಇರುತ್ತದೆ.ಕನಸು ನನಸಾಗುವುದೇ ಎಂಬ ಪ್ರಶ್ನೆಯೊಂದು ಬಂದು ಹೋಗುತ್ತಿರುತ್ತದೆ.ಈ ಬದುಕೇ ಹೀಗೆ ಇರದುದ್ದರ ಬಗ್ಗೆ ಆಸಕ್ತಿ ಹೆಚ್ಚು.ಹೊಸತನ್ನು ಹುಡುಕುವುದರಲ್ಲಿ ಸಂತೋಷ ಹೆಚ್ಚು.ನವೀನವಾದುದನ್ನು ಸಾಧಿಸುವುದರಲ್ಲಿ ತೃಪ್ತಿ ಕಂಡುಕೊಳ್ಳುತ್ತದೆ.ಕನಸು ನನಸಾಗಿಸುವ ಬಯಕೆ ಇದ್ದೆ ಇರುತ್ತದೆಇಂತಹದ್ದೊಂದರ ಬಗ್ಗೆ ಸೊಗಸಾಗಿ ಮೂಡಿಬಂದಿರುವ ಈ ಕವಿತೆಯ ಪ್ರತಿ ಸಾಲಿನಲ್ಲೂ ಸಾಕಷ್ಟು ಅರ್ಥ ಅಡಗಿದೆ.ಶಿವರುದ್ರಪ್ಪನವರು ಅದ್ಭುತ ವಾಗಿ ಪದಗಳ ಜೋಡಣೆ ಮಾಡಿದ್ದಾರೆ.ಜೊತೆಗೆ ಅರ್ಥಗರ್ಭಿತವಾಗಿಯು ಇದೆ.ಪ್ರತಿಯೊಬ್ಬರೂ ಒಮ್ಮೆ ಕೇಳಲೇ ಬೇಕಾದ ಭಾವಗೀತೆ ಇದು. ಸುಂದರ ಭಾವವನ್ನೊಳಗೊಂಡಿದೆ.ಕೇಳುತ್ತಿದ್ದರೆ ನಾವೇ ಕಳೆದುಹೋಗುವಂತ ಅನುಭವ ಖಂಡಿತ.

Friday 7 October 2011

ಮರೆತೇನೆಂದರೆ ಮರೆಯಲಿ ಹ್ಯಾಂಗ??

ಹೀಗೆ ಹಳೆಯ ಪುಸ್ತಕಗಳನ್ನೆಲ್ಲ ಎತ್ತಿಡುತ್ತಿದ್ದೆ.ಆಗ ಆಟೋಗ್ರಾಫ್ ಕೈಗೆ ಸಿಕ್ಕಿತು.ಆಟೋಗ್ರಾಫ್ ನ ಒಂದೊಂದು ಪುಟಗಳು ಕಾಲೇಜ್ ಲೈಫಿನಲ್ಲಿ ಕಳೆದುಹೋದ ಒಂದೊಂದು ದಿನವನ್ನು ನೆನಪಿಸುವಂತಿತ್ತು.ಆ ದಿನಗಳು ಮತ್ತೆ ಬರಲಾರದು ನಿಜ.ಆದರೆ ಆ ನೆನಪುಗಳೇ ಮಧುರ.ಮೂರು ವರ್ಷದ ಆ ದಿನಗಳು ಅಮೂಲ್ಯವಾಗಿದ್ದವು.ಎಲ್ಲೆಲ್ಲಿಂದಲೋ ಬಂದು ಒಂದೆಡೆ ಸೇರಿದ್ದ ಬಿನ್ನ ರೀತಿಯ ಸ್ನೇಹಿತರು.ಆದರೆ ಅದೆಷ್ಟು ಬೇಗ ಒಬ್ಬರನ್ನೊಬ್ಬರು ಬಿಟ್ಟಿರಲಾರದಷ್ಟು ಹತ್ತಿರವಾಗಿ ಬಿಟ್ಟಿದ್ದೆವು . ಇನ್ನು ಆ ದಿನಗಳು ಕಣ್ಣೆದುರು ಕಳೆದಂತಿದೆ.ಅಲ್ಲಿ ಕಳೆದ ದಿನಗಳು ಸಾಕಷ್ಟು ನೆನಪುಗಳು, ನಗು,ಒಂದು ರೀತಿಯ ಬಿಡಿಸಲಾಗದ ಬಂದನ ಇವನ್ನೆಲ್ಲ ಜೊತೆಯಲ್ಲಿ ಕಟ್ಟಿಕೊಟ್ಟಿದೆ.ಸುಮ್ಮನೆ ಕೊನೆಯ ಬೆಂಚಿನಲ್ಲಿ ಕುಳಿತು ಹರಟುತ್ತಿದ್ದ ಆ ಕ್ಷಣಗಳು ಸುಂದರ ಸುಂದರ.ಹಾಸ್ಟೆಲ್ ನಲ್ಲಿ ನಾವು ಕಲಿತ ಶಿಸ್ತು .ಬೆಳಗ್ಗೆ ೫ ಗಂಟೆಗೆ ಎದ್ದು ಮಾಡುತ್ತಿದ್ದ ಪ್ರಾರ್ಥನೆ ತಪ್ಪದೆ ಓದುತ್ತಿದ್ದ ದಿನಪತ್ರಿಕೆ.ಸಮಯಕ್ಕೆ ಸರಿಯಾಗಿ ಊಟ ,ತಿಂಡಿ .ಎಲ್ಲೇ ಇದ್ದರು ಸರಿಯಾಗಿ ೮.೩೦ ಕ್ಕೆ ಬಂದು ನೋಡುತ್ತಿದ್ದ ಈ ಟಿವಿ ವಾರ್ತೆ.ಇವುಗಳೆಲ್ಲ ಬದುಕಿಗೊಂದು ಸುಂದರ ಅರ್ಥ ಕಲ್ಪಿಸಿತ್ತು.ಬದುಕು ರೂಪಿಸಿ ಕೊಳ್ಳಲು ಅವಕಾಶ ಕಲ್ಪಿಸಿಕೊಟ್ಟಿತ್ತು.ಎಲ್ಲಕ್ಕಿಂತ ಹೆಚ್ಚಾಗಿ ಒಳ್ಳೆಯ ಸ್ನೇಹಿತರನ್ನು ಕೈಗಿತ್ತಿತ್ತು.ಸ್ನೇಹ ಬೆಳೆಸುವುದನ್ನು ಉಳಿಸಿಕೊಳ್ಳುವುದನ್ನು ಕಲಿಸಿಕೊಟ್ಟಿತ್ತು.ಆ ದಿನಗಳಲ್ಲಿ ಕೇವಲ ಓದು ಮಾತ್ರವಲ್ಲ ಜೊತೆಗೆ ಆ ಎನ್ ಎಸ್ ಎಸ್ ಶಿಬಿರಗಳು,ಎಲ್ಲೇ ಇದ್ದರು ಬಿಡದ ಆ ಕನ್ನಡ ಕೂಟಗಳು, ನುಡಿಸಿರಿ.ವರ್ಕ್ಶಾಪ್ ಗಳು,ಕುಪ್ಪಳ್ಳಿಗೆ ಹೋಗಿದ್ದ ಆ ಶೈಕ್ಷಣಿಕ ಟ್ರಿಪ್,ಪ್ರತಿ ಭಾರಿ ಹೋಗುತ್ತಿದ್ದ ಇಂಟರ್ನ್ಶಿಪ್ ಇವುಗಳೆಲ್ಲವೂ ಮರೆಯಲಾರದಂತ ದಿನಗಳು.ಕಾಲೇಜಿನ ಜೀವನ ಮುಗಿಸಿ ಹೊರಟಾಗ ಜೊತೆಗಿದ್ದಿದ್ದು ಒಂದಷ್ಟು ಸುಂದರ ಕನಸು, ಮರೆಯಲಾಗದ ದಿನಗಳು, ಅಳಿಸಲಾಗದ ಸ್ನೇಹ, ಏನೋ ಸಾದಿಸಿದ ಖುಷಿ ,ಸಾದಿಸಲೆಬೇಕೆಂಬ ಹಟ,ಅಗಲುವಿಕೆಯ ನೋವು .ಬದುಕಿಗೊಂದು ಶಿಸ್ತು.ಇವೆಲ್ಲ ಜೊತೆಗಿತ್ತು. .ಆಟೋಗ್ರಾಫ್ ನ ಒಂದೊಂದು ಪುಟಗಳನ್ನೂ ತಿರುವುತ್ತಿದ್ದರೆ ನೆನಪಿನಿಂದ ಕಣ್ಣು ತೋಯುತ್ತದೆ.ಇನ್ನೆಲ್ಲಿ ಆ ದಿನಗಳು?? ಮರೆತೇನೆಂದರೆ ಮರೆಯಲಿ ಹ್ಯಾಂಗ ಬದುಕಿಗೊಂದು ರೂಪ ಕೊಟ್ಟ ಆ ದಿನಗಳನ್ನ??

Thursday 6 October 2011

ಲಂಡನ್ ಪ್ರವಾಸಿ ಕಥನ -1


ನಾನು ಲಂಡನ್ ಗೆ ಬಂದು ಸರಿಯಾಗಿ ೧ ವಾರವಾಗಿತ್ತು.ಶನಿವಾರದಂದು ಲಂಡನ್ ಸುತ್ತುವ ಮೊದಲ ಪ್ರಯಾಣವನ್ನು ನಾನು ನನ್ನ ಪತಿ ಹರ್ಷ ಪ್ರಾರಂಭಿಸಿದೆವು.ಲಂಡನ್ ಬಗ್ಗೆ ಕೇಳಿದ್ದೆ ಆದರೆ ಇಲ್ಲಿಯ ಸೊಬಗನ್ನು ನೋಡ ಹೊರಟಿರುವುದು ಇದೆ ಮೊದಲಬಾರಿ.
ಮೊದಲೇ ಹೋಗಬೇಕಾದ ಸ್ಥಳಗಳನ್ನು ಪ್ಲಾನ್ ಮಾಡಿದ್ದರಿಂದ ನಮಗೆ ತುಂಬಾ ಅನುಕೂಲವಾಯಿತು.ಆ ದಿನ ನಾನು ನೋಡಿದ ಸ್ಥಳಗಳಲ್ಲಿ ನನ್ನನ್ನು ಆಕರ್ಷಿಸಿದ್ದು ಟವರ್ ಬ್ರಿಡ್ಜ್.
ಇದು ಇಲ್ಲಿಯ ಆಕರ್ಷಣೆಗಳಲ್ಲಿ ಮೊದಲನೆಯದು.ಅದರ ಹತ್ತಿರ ಹೋಗುತ್ತಿದ್ದಂತೆ ನನಗೆ ಆದ ಸಂತೋಷ ವರ್ಣಿಸಲಸಾದ್ಯ.ಅದ್ಭುತವಾಗಿತ್ತು.ಇದನ್ನು ನೋಡಿದ ನನಗೆ ಇದರ ಬಗ್ಗೆ ಮಾಹಿತಿ ತಿಳಿದುಕೊಳ್ಳಲೇ ಬೇಕೆನಿಸದಿರಲಿಲ್ಲ.ಇದನ್ನು ನಿಮ್ಮೊಂದಿಗೆ ಹಂಚಿಕೊಳ್ಳಬೇಕೆನಿಸಿತು.ಆದ್ದರಿಂದ ಈ ಲೇಖನ ನಿಮ್ಮ ಮುಂದಿಡುತ್ತಿದ್ದೇನೆ.ಟವರ್ ಬ್ರಿಡ್ಜ್ ಅನ್ನು ಥೇಮ್ಸ್ ನದಿಗೆ ಕಟ್ಟಲಾಗಿದೆ.ಇದನ್ನು ನೋಡಿದರೆ ೨ ಟವರ್ ಗಳು ಒಂದು ಕೂಡಿದಂತೆ ಕಾಣುತ್ತದೆ.ಇದನ್ನು ಕಟ್ಟಲು ಪ್ರಾರಂಭಿಸಿದ್ದು ೧೮೮೬ರಲ್ಲಿ ಇದು ಸಂಪುರ್ಣಗೊಳ್ಳಲು ತೆಗೆದುಕೊಂಡ ಅವಧಿ ೮ ವರ್ಷ. ಇದನ್ನು ಕಟ್ಟಲು ತೆಗೆದುಕೊಂಡ ಒಟ್ಟು ವೆಚ್ಚ ೧೦೦ ಮಿಲಿಯನ್ ಪೌಂಡ್ .ಇದರ ಇನ್ನೊಂದು ವಿಶೇಷತೆ ಎಂದರೆ ಈ ಸೇತುವೆ ಕೆಳಭಾಗದಲ್ಲಿ ಎತ್ತರವಾಗಿರುವ ಹಡಗುಗಳು ಬಂದಾಗ ಸೇತುವೆಯ ಮಧ್ಯ ಭಾಗ ತೆರೆದುಕೊಳ್ಳುತ್ತದೆ.ಅಂದರೆ ಸಮಾನವಾಗಿ ಎರಡು ಭಾಗವಾದಂತೆ ಕಾಣುತ್ತದೆ.

ಇದರ ಸೊಗಸನ್ನು ಸವಿಯಲು ಸಂಜೆಯ ಸಮಯ ಹೋಗಬೇಕು.ದೀಪಗಳ ಅಲಂಕಾರದಿಂದ ಕಣ್ಣು ಕೊರೈಸುವಂತಿರುತ್ತದೆ.ಅದರ ಅಕ್ಕಪಕ್ಕಗಳಲ್ಲಿ ಕುಳಿತುಕೊಳ್ಳಲು ಸುಂದರ ಸ್ಥಳ ಕಲ್ಪಿಸಿದ್ದಾರೆ.ಅಲ್ಲಿ ಕುಳಿತು ಆ ನಯನ ಮನೋಹರ ದೃಶ್ಯವನ್ನು ನೋಡುತ್ತಿದ್ದರೆ ಸಮಯ ಸರಿದಿದ್ದೇ ತಿಳಿಯದು.ಆ ಕಂಗೊಳಿಸುವ ದೀಪದ ಅಲಂಕಾರವೊಂದೆ ಸಾಕು ನಮ್ಮ ನೋವುಗಳನ್ನೆಲ್ಲಾ ಮರೆಸಲು.ಆ ದಿನ ನಾನು ಅದ್ಭುತ ಲೋಕವೊಂದಕ್ಕೆ ಹೋಗಿ ಬಂದ ಅನುಭವವಾಗಿತ್ತು.

Monday 3 October 2011

ಅಪ್ಪನಿಗೊಂದು ಪತ್ರ


ಪ್ರೀತಿಯ ಅಪ್ಪ,
" ಮನಸ್ಸಿನ ಭಾವನೆಗಳನ್ನು ಹೊರಹಾಕಲು ಬರವಣಿಗೆ ಸರಿಯಾದ ವೇದಿಕೆ" ನೀವೇ ಹೇಳುತ್ತಿದ್ದ ಮಾತಿದು. ಎಷ್ಟೋ ದಿನಗಳಿಂದ ಭಾವನೆಗಳನ್ನು ಹೊರಹಾಕಬೇಕೆಂದಿದ್ದೆ.ಆಗಿರಲಿಲ್ಲ.ಇಂದು ಅಂತಹದ್ದೊಂದು ಸಾಕಸಕ್ಕೆ ಕೈ ಹಾಕುತ್ತಿದ್ದೇನೆ.ನನ್ನೆಲ್ಲ ಭಾವನೆಗಳನ್ನು ನೋಡುತ್ತಿದ್ದಂತೆ ಅರ್ಥ ಮಾಡಿಕೊಳ್ಳುತ್ತಿದ್ದವರು ನೀವು.ಇಂದು ನಿಮ್ಮಿಂದ ಎಷ್ಟೋ ದೂರದಲ್ಲಿದ್ದೇನೆ.ನಿಮ್ಮೊಂದಿಗೆ ಕಳೆದ ಆ ಸುಂದರ ದಿನಗಳ ಮೆಲುಕು ಹಾಕುತ್ತಿರುತ್ತೇನೆ.ನಿಮ್ಮ ಜೊತೆ ನಾನು ಮಾಡುತ್ತಿದ್ದ ಚೇಷ್ಟೆ ಗಳು ,ನಿಮಗೆ ಕೊಡುತ್ತಿದ್ದ ಕಾಟ ಇವೆಲ್ಲ ಕಣ್ಣ ಮುಂದೆ ಹಾಗೆ ನಡೆದಂತಿದೆ .ನನಗೆ ಗೊತ್ತು ನೀವು ಇದನ್ನೆಲ್ಲಾ ನಿಮ್ಮ ನೆನಪಿನ ಪೆಟ್ಟಿಗೆಯಲ್ಲಿ ಬೆಚ್ಚಗೆ ಬಚ್ಚಿತ್ತಿದ್ದೀರಿ ಎಂದು.ನನಗೆ ಗೊತ್ತಿರುವಂತೆ ಪಿಯುಸಿ ಮುಗಿಯುವವರೆಗೆ ನಾನು ನಿಮ್ಮ ಬಿಟ್ಟು ಎಲ್ಲೂ ಹೋದವಳಲ್ಲ.ಅದೇನೋ ಇದ್ದಕ್ಕಿದ್ದಂತೆ ನಾನು ಹೊರಗೆ ಹೋಗಿ ಓದಬೇಕು ಎಂಬ ಆಸೆ ತುಂಬಾ ಇತ್ತು.ನಿಮ್ಮ ಅಭಿಪ್ರಾಯ ಕೇಳಿದಾಗ ಮನೆಯಿಂದಲೇ ಓದಬಹುದಲ್ಲ ಎಂದಿದ್ದಿರಿ. ಮೊದಲ ಭಾರಿಗೆ ನಿಮ್ಮ ಮಾತನ್ನು ತಳ್ಳಿಹಾಕಿದ್ದೆ.ನನಗೆ ಗೊತ್ತು ನನ್ನ ಒಂದು ಕಣ್ಣಿನ ಬಿಂದು ಸಾಕು ನಿಮ್ಮ ಮನ ಒಲಿಸಲು ಎಂದು ಅದರ ಪ್ರಯೋಗದಿಂದ ಸಫಲಳಾಗಿದ್ದೆ ಕೂಡ .ಆ ದಿನ ನಿಮ್ಮನ್ನು ಬಿಟ್ಟು ಹೊರಟಾಗ ನಿಮ್ಮ ಕಣ್ಣಲ್ಲಿ ಕಣ್ಣೀರು.ನಿಮಗನಿಸಿರಬಹುದು ಮಗಳು ಕೈ ತಪ್ಪಿ ಹೋಗುತ್ತಿರಬಹುದ ಎಂದು . ನನಗಾಗೆಲ್ಲ ಆಶ್ಚರ್ಯವಾಗುತ್ತಿತ್ತು.ನನಗೇಕೆ ಈ ಅಳು ಬರುವುದಿಲ್ಲ ಎಂದು . ನಕ್ಕುಬಿಟ್ಟಿದ್ದೆ.ನನಗಾಗ ಅನಿವಾರ್ಯವಾಗಿತ್ತು.ಕೆಲವೊಮ್ಮೆ ನಿಮ್ಮ ಅತಿಯಾದ ಕಾಳಜಿಯಿಂದ ನಿಮ್ಮ ಮೇಲೆ ಕೋಪ ಮಾಡಿಕೊಂಡದ್ದು ಇದೆ.ಆದರೆ ಈಗ ನಿಮ್ಮ ಕಾಳಜಿಯ ಬೆಲೆ ತಿಳಿಯುತ್ತಿದೆ. ನಿಮ್ಮನ್ನು ಬಿಟ್ಟು ನನ್ನವನೊಂದಿಗೆ ಹೊರಟಾಗ ಆ ಎಲ್ಲ ದಿನಗಳು ನೆನಪಾಗಿತ್ತು .ನಿಮ್ಮ ಕಣ್ಣೀರ ಧಾರೆಗೆ ನಕ್ಕುಬಿಡುವೆ ಎಂದುಕೊಂಡಿದ್ದೆ.ಆದರೆ ಆ ದಿನ ನೀವು ಸಂತೋಷದಿಂದ ನನ್ನ ತಲೆಸವರಿ "ಅಪ್ಪನ ಹಾರೈಕೆಗಳು ನಿನ್ನೊಂದಿಗಿದೆ ಮಗಳೇ" ಎಂದಾಗ ಆ ಸಾಂತ್ವನದಿಂದ ದೂರಾಗುತ್ತಿದ್ದೇನಲ್ಲ ಎಂದು ಕಣ್ಣೀರ ತಡೆಯಲಾಗಲೇ ಇಲ್ಲ.ನಿಮ್ಮ ಆ ಕಾಳಜಿಯನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ .




ಪ್ರೀತಿಯಿಂದ ,

ನಿಮ್ಮ ಮಗಳು .