Wednesday 5 November 2014

ನಿದ್ರೆ ಭಂಗ

ಈ ಭಾರಿ ಭಾರತಕ್ಕೆ ಒಂದು ತಿಂಗಳ ರಜಾ ಮಜಕ್ಕೆಂದು ಹೋಗಿದ್ದೆ. ಹೋದಾಗ ಹೀಗೆ ಮಾತನಾಡುತ್ತಾ ನಮ್ಮೂರ ಅಡಿಕೆ ಸುಲಿಯುವ ಹೆಂಗಸರ ಹತ್ತಿರ ಮಾಡಲು ಬೇರೆ ಕೆಲಸವಿಲ್ಲದೆ ರಾಜಸ್ಥಾನದ ಉದಯಪುರದಲ್ಲಿ ಒಂದು ದೇವಸ್ಥಾನವಿದೆ ಅಲ್ಲಿ ಇಲ್ಲಿಗಳನ್ನು ಪೂಜಿಸಲಾಗುತ್ತದೆಯಂತೆ ಎಂದು ಹೇಳಿಕೊಂಡು ಗೇಲಿ ಮಾಡಿದ್ದೆ. ಆ ವಿಷಯ ಅಲ್ಲೇಕೆ ಹೇಳಿದೆ ಎಂಬುದಕ್ಕೆ ಉತ್ತರ ಇನ್ನೂ ಸಿಗಲಿಲ್ಲ. ಆದ್ದರಿಂದ ಇಲಿಯನ್ನು ದೇವರು ಎಂದು ಪೂಜಿಸಬೇಕು ಇಲಿ ಬಂದರೆ ಹೊಡೆದು ಕೊಲ್ಲಬಾರದು ಎಂದು ಹೇಳಿ ಅವರೊಂದಿಗೆ ' ನಿಂಗೆಂತ ಗೊತ್ತಿದ್ದೇ ನಂಗ್ಳ ಕಷ್ಟ, ಇಲಿ ಕಾಟ ತಡೆಯಲಾಗ್ತಾ ನನ್ಗಕ್ಕೆ ,ನೀನೇನೋ ಲಂಡನ್ ಅಲ್ಲಿದ್ಕಂಡು ಇಲಿ ಹೊಡಿಯಡಿ ಹೇಳ್ತೆ ,ಹೋಗ್ತ ಒಂದೆರಡು ತಗಂಡು ಹೋಗು' ಅಂತ ಬೈದಿದ್ದನ್ನು ಕೇಳಿ ಕುಶಿಯಿಂದ ನಕ್ಕಿದ್ದೂ ಆಗಿತ್ತು. ಅಂತು ಇಂತೂ ಒಂದು ತಿಂಗಳು ಊರೂರು ಅಲೆದು ಹಿಂತಿರುಗಿ ಬಂದಾಗ ಒಂದು ಅಚ್ಚರಿ ಕಾದಿತ್ತು.

ಬರುತ್ತಿದ್ದಂತೆ ಕಾಯುತ್ತಿದ್ದ ಪತಿದೇವರು ನಿನ್ನ ಸ್ನೇಹಿತರೊಬ್ಬರು ಮನೆಗೆ ಬಂದಿದಾರೆ ಅಂದಾಗ ಅರೆ ಇದ್ಯಾರಪ್ಪ ಎಂಬ ಪ್ರಶ್ನೆ ಮೂಡಿತ್ತು. ನಾನೆಲ್ಲೋ ಇರುವೆಯೋ,ನೊಣವೋ ಇರಬಹುದು ಎಂಬ ಅನುಮಾನದಲ್ಲಿದ್ದೆ,ಆದರೆ ಆ ದಿನ ರಾತ್ರೋ ರಾತ್ರಿ ಪಾತ್ರೆಗಳೆಲ್ಲ ಸದ್ದಾದಾಗ ಸ್ವಲ್ಪ ಅನುಮಾನವಾಯಿತು. ಮರುದಿನ ಬೆಳಕ್ಕೆ ಅಕ್ಕಿ ಚೀಲದಿಂದ ಅಕ್ಕಿ ಇದ್ದಕ್ಕಿದ್ದಂತೆ ಹೊರಬರುತ್ತಿರುವುದು ನೋಡಿದಾಗ ಅರೆ ಇದು ಯಾರ ಕೆಲಸ ಎಂಬ ಯಕ್ಷ ಪ್ರಶ್ನೆ.

ಒಂದು ದಿನ ರಾತ್ರಿ ಅಡುಗೆ ಮನೆಯ ಸಪ್ಪಳ ನಿಂತು ರೂಮಿನ ಸಪ್ಪಳ ಪ್ರಾರಂಭವಾದಾಗ ನಿದ್ದೆ ಎಲ್ಲಿಂದ ಬರಬೇಕು? ಒಂದು ಸಣ್ಣ ಜಿರಳೆ ಬಂದರೂ ಕೂಡ ರಾತ್ರಿ ಇಡೀ ತಲೆ ಕೆಡಿಸಿಕೊಳ್ಳುವ ನಾನು ಇದೇನಪ್ಪ ಎಂದು ಲೈಟ್ ಹಾಕಿ ನೋಡಿದರೆ ಎದ್ದೆನೋ ಬಿದ್ದೆನೋ ಎಂದು ಇಲಿಯೊಂದು ಹಿಂತಿರುಗಿ ನೋಡದೇ ನನ್ನ ಕಣ್ಣೆದುರೇ ಓಡಿ ಹೋಗಿ ಮಂಚದ ಕೆಳಗೆ ಸೇರಿಕೊಂಡಿತು. ರಾತ್ರಿ ಇಡೀ ನಾನು ನಿದ್ದೆ ಮಾಡದೇ ನನ್ನ ಪತಿಯನ್ನೂ ನಿದ್ದೆ ಮಾಡಗೊಡದ ನಾನು ಇಲಿಯನ್ನು ರೂಮಿನಿಂದ ಹೊರಹಾಕಿದ ನಂತರವಷ್ಟೇ ಸ್ವಲ್ಪ ಮಟ್ಟಿನ ಅನಿವಾರ್ಯದ ನಿದ್ರೆ ಮಾಡಿದೆ.

ಮರುದಿನ ನನಗೆ ದಿನವಿಡೀ ಮನೆ ಶೋಧಿಸುವುದೇ ಕೆಲಸವಾದರೂ ಎಲ್ಲೂ ಇಲಿ ಸಿಗಲಿಲ್ಲ. ಮನೆಗೆ ಬಂದ ಯಜಮಾನರು ಅದು ಬರುವುದು ರಾತ್ರಿ ಮಾತ್ರ ಎಂದಾಗ ಹೇಗಾದರೂ ಮಾಡಿ ಓಡಿಸಲೇ ಬೇಕು ಇಲ್ಲದಿದ್ದರೆ ನಾನು ನಿದ್ರೆ ಮಾಡುವುದಿಲ್ಲ ,ನಿಮ್ಮನ್ನೂ ನಿದ್ರೆ ಮಾಡಲು ಬಿಡುವುದಿಲ್ಲ ಎಂದಾಗ ಅವರಿಗೆ ದಿಗಿಲಾಗಿ ಅದಕ್ಕೊಂದು ಟ್ರ್ಯಾಪ್ ತಂದಿಡುವುದಾಗಿ ಮತ್ತು ಅದನ್ನು ಕೊಲ್ಲುವುದಾಗಿ ಭರವಸೆ ನೀಡಿದರು.

ಆ ದಿನ ರಾತ್ರಿ ಟ್ರ್ಯಾಪ್ ಇಟ್ಟಿದ್ದೂ ಆಯಿತು. ಆದರೆ ಮಾರನೆಯ ದಿನ ಇಲಿ ಸತ್ತು ಬಿದ್ದಿರಲಿಲ್ಲ. ಆ ನಂತರ ಎರಡು ದಿನ ಇಲಿಯ ಸದ್ದೇ ಇರಲಿಲ್ಲ. ಅರೆ ಬರಿ ಟ್ರ್ಯಾಪ್ ಇಟ್ಟ ಮಾತ್ರಕ್ಕೆ ಇಲ್ಲಿ ಮಾಯವಾಗಿ ಬಿಟ್ಟಿತೇ ಎಂಬ ಗೊಂದಲ ಇಬ್ಬರಿಗೂ ಹುಟ್ಟಿಕೊಂಡಿತ್ತು. ಆ ನಂತರ ಇಲಿಯನ್ನು ಮರೆತಾಯಿತು. ಎಲ್ಲೋ ಹೇಗೋ ಹೊರ ಹೋಗಿರಬೇಕು ಎಂಬ ಸಮಾಧಾನದಲ್ಲೇ ಇಲಿ ಮನಸ್ಸಿನಿಂದ ಹೊರ ಹೋಗಿಬಿಟ್ಟಿತ್ತು.

ಹಾಗೆ ಎರಡು ದಿನವಾಗಿರಬೇಕಷ್ಟೇ , ಆಫೀಸಿನಿಂದ ಬಂದ ಪತಿ ನಿನಗೊಂದು ಅಶ್ಚರ್ಯ ಕಾದಿದೆ ಎಂದಾಗ ಏನಾಗಿರಬಹುದು ಎಂದು ಕಣ್ಣು ಕಣ್ಣು ಬಿಟ್ಟು ನೂರು ತರದ ಗೆಸ್ ಮಾಡಲು ಪ್ರಾರಂಭಿಸಿಬಿಟ್ಟೆ. ಇಲ್ಲ ನಿನಗೆ ನಾನೇನೂ ತಂದಿಲ್ಲ ಮತ್ತು ಸಧ್ಯಕ್ಕೆ ಏನು ತರುವುದೂ ಇಲ್ಲ ಆದರೆ ನಿನಗೊಂದು ಸರ್ಪ್ರೈಸ್ ಇರುವುದು ಖಂಡಿತ ಎಂದಾಗ ಮತ್ತೆ ಆಶ್ಚರ್ಯ. ಅಡುಗೆ ಮನೆಗೆ ಕರೆದುಕೊಂಡು ಹೋಗಿ ಬಗ್ಗಿ ನೋಡು ಎಂದಾಗ ಅಲ್ಲಿ ಸಿಕ್ಕಿ ಹಾಕಿಕೊಂಡಿತ್ತು ಸತ್ತ ಇಲಿ. ಎರಡು ದಿನದಿಂದ ನೋಡಿದರೂ ಸಿಗದ ಇಲಿ ,ಸತ್ತಿರದ ಇಲಿ ಅಂದು ಸತ್ತು ಹೋಗಿದ್ದು ಒಂದು ರೀತಿ ಕುಶಿ ಸಿಕ್ಕಿತು. ಈಗ ನಮ್ಮ ಮನೆಯಲ್ಲಿ ಇಲಿ ಇಲ್ಲ.ನನ್ನ ನಿದ್ರೆಗೀಗ ಭಂಗವಿಲ್ಲ!

Friday 29 August 2014

ಮಾಯಾಗಾರ ಸ್ಟೋನ್ ಹೆಂಜ್!

 ಡೆಸ್ಕ್ಟಾಪ್ ನಲ್ಲಿನ  ಸ್ಕ್ರೀನ್ ಅನ್ನು ನಿಜವಾಗಿ ನೋಡಿದರೆ ಎಷ್ಟು ಆನಂದವೆನಿಸಬಹುದು?  ಹೌದು ಆ ಆನಂದ ನಮಗೆ ಸಿಕ್ಕಿದ್ದು
ಸ್ಟೋನ್ ಹೆಂಜ್ ನೋಡಿದಾಗ. ಕಲ್ಲುಗಳಿಂದ ಸುತ್ತುವರೆದ ಸ್ಟೋನ್ ಹೆಂಜ್ ನ ಚಿತ್ರಣವನ್ನು ನೀವೂ ಸಾಮಾನ್ಯವಾಗಿ ಡೆಸ್ಕ್ಟಾಪ್ ನ ಸ್ಕ್ರೀನ್ ಆಗಿ ಸೇವ್ ಮಾಡಿಟ್ಟಿರುವುದನ್ನು ನೋಡಿರಬಹುದು. ಈ ಜಗತ್ಪ್ರಸಿದ್ದ ಸ್ಟೋನ್  ಹೆಂಜ್ ಇರುವುದು ಇಂಗ್ಲೆಂಡ್ ನಲ್ಲಿ. ಲಂಡನ್ ನಿಂದ ಸುಮಾರು ಎರಡೂವರೆ ತಾಸಿನ ಪ್ರಯಾಣದ ಸ್ಟೋನ್ ಹೆಂಜ್ ಇರುವುದು ಸ್ಯಾಲಿಸ್ಬರಿ ಸಮೀಪದ ವಿಲ್ಟ್ಶೈರ್ ನಲ್ಲಿ.

ಇದೊಂದು ಇತಿಹಾಸಪೂರ್ವ ಸ್ಮಾರಕವಾಗಿದ್ದು ಇಂಗ್ಲೆಂಡ್ ಗೆ ಬಂದವರು ಇದನ್ನು ನೋಡಲೇಬೇಕು. ನವಶಿಲಾಯುಗದ ಜನರು ಇದನ್ನು ತಮ್ಮದೇ ಆದ ತಾಂತ್ರಿಕವಿಧಾನದಿಂದ ಕಟ್ಟಿದರು ಎನ್ನಲಾಗುತ್ತದೆ. ಕ್ರಿ ಪೂ ೩೦೦೦ ವರ್ಷಗಳ ಹಿಂದೆ ವೃತ್ತಾಕಾರದ ಮಾದರಿಯಲ್ಲಿ ಈ ಸ್ಟೋನ್ ಹೆಂಜ್ ಅನ್ನು ಕಟ್ಟಲಾಯಿತು. ನೂರಾರು ವರ್ಷಗಳ ಹಿಂದೆ ಈ ಜಾಗವನ್ನು ಸ್ಮಶಾನವಾಗಿ ಬಳಸಲಾಗುತ್ತಿತ್ತು ಎಂದು ಕೂಡ ಹೇಳಲಾಗುತ್ತದೆ. ಕಲ್ಲಿನಿಂದ ಸುತ್ತುವರೆದ ಈ ಸ್ಥಳವನ್ನು ಕಟ್ಟಲು ಸಾಕಷ್ಟು ಸಮಯ ತೆಗೆದುಕೊಂಡಿತು ಎನ್ನಲಾಗುತ್ತದೆ.

ಎಡ್ವರ್ಡ್ ಸಾಯ್ಮೊರ್ ಈ ಸ್ಟೋನ್ ಹೆಂಜ್ ಎಂಬ ಪೂರ್ವ ಇತಿಹಾಸ ಸ್ಥಳದ ಒಡೆಯ. ಸ್ಟೋನ್ ಹೆಂಜ್ ಅನ್ನು ವೃತ್ತಾಕಾರವಾಗಿ ಕಟ್ಟಿದ್ದು ಇದು ಪ್ರತಿಯೊಂದು ಕಲ್ಲು ಕೂಡ ತನ್ನದೇ ಆದ ವಿಶೇಷತೆಯನ್ನು ಹೊಂದಿದೆ. ಸುತ್ತಲೂ ಹಸಿರನ್ನು ಹೊತ್ತು ಹಸಿರು ಹುಲ್ಲಿನ ಮಧ್ಯ ನಿಂತಂತಿರುವ ಈ ಸ್ಟೋನ್ ಹೆಂಜ್ ಅನ್ನು ನೋಡಲು ದೇಶ ವಿದೇಶಗಳಿಂದ ಪ್ರವಾಸ ಕೈಗೊಳ್ಳುತ್ತಾರೆ. ಒಂದು ಕಾಲದಲ್ಲಿ ಬ್ರಿಟೀಷರು ಸಮಯವನ್ನು ನಿರ್ಧರಿಸಲು ಈ ಕಲ್ಲಿನ ಮೇಲೆ ಬೀಳುತ್ತಿದ್ದ ಸೂರ್ಯನ ಕಿರಣಗಳನ್ನು ಆಧಾರವಾಗಿ ಬಳಸುತ್ತಿದ್ದರು ಎಂಬುದು ವಿಶೇಷವೇ ಸರಿ. ಈಗಲೂ ಕೂಡ ಸಂಜೆ ಸಮಯದಲ್ಲಿ ಸೂರ್ಯಾಸ್ತದಲ್ಲಿ ಈ ಕಲ್ಲಿನ ಮೇಲೆ ಬೀಳುವ ಕಿರಣಗಳು ಅದ್ಬುತವಾದ ಅನುಭವವನ್ನು ನೀಡುತ್ತದೆ. ಪ್ರವಾಸಕ್ಕೆ ಬರುವ ಸಾಕಷ್ಟು ಜನರು ಇಲ್ಲಿ ಸೂರ್ಯಾಸ್ತ ನೋಡವುದಕ್ಕಾಗಿಯೇ ಬರುತ್ತಾರೆ.

ಈ ಸ್ಟೋನ್ ಹೆಂಜ್ ಅನ್ನು ಮೂರು ಹಂತಗಳಲ್ಲಿ ಕತ್ತಲಾಯಿತು ಮತ್ತು ಇದನ್ನು ಕಟ್ಟಲು ಮೂವತ್ತು ಸಾವಿರ ಗಂಟೆಯಷ್ಟು ಕೂಲಿಯನ್ನು ತೆಗೆದುಕೊಂಡಿತು ಎಂಬುದು  ನಮಗೆ ಇಲ್ಲಿ ಸಿಕ್ಕ ಮಾಹಿತಿ . ಮೊದಲ ಹಂತವನ್ನು ಕ್ರಿ ಪೂ ೩೦೦೦ ವರ್ಷಗಳ ಹಿಂದೆ ಪ್ರಾರಭಿಸಿದ್ದು ಅದನ್ನು ಕಟ್ಟಲು ೨೮೪ ಅಡಿಯಷ್ಟು ವೃತ್ತಾಕಾರದಲ್ಲಿ ಕೊರೆಯಲಾಯಿತು ಎನ್ನಲಾಗುತ್ತದೆ. ಈ ಹಂತದಲ್ಲಿ ಮಾನವ ಮೂಳೆಗಳ ದಹನ ಕೂಡ ಇಲ್ಲಿ ಕಂಡು ಬಂದಿದ್ದು ಇದನ್ನು ಸಮಾಧಿಗಾಗಿ ಅಲ್ಲದೆ ಕೇವಲ ಧಾರ್ಮಿಕ ಸಮಾರಂಭದ ಭಾಗವಾಗಿ ಮಾಡಿರಬಹುದು ಎಂದು ಕೂಡ ಹೇಳಲಾಗುತ್ತದೆ.

 ನಂತರ ಸುಮಾರು ಸಾವಿರ ವರ್ಷಗಳು ಇದು ಹಾಗೆಯೇ ಇದ್ದು ಎರಡನೆಯ ಹಂತವನ್ನು ಕ್ರಿ ಪೂ ೨೧೫೦ ರಲ್ಲಿ ಪ್ರಾರಂಭಿಸಲಾಯಿತು ಎನ್ನಲಾಗುತ್ತದೆ. ಈ ಅವಧಿಯಲ್ಲಿ ವೃತ್ತಾಕಾರದ ಮೂಲವನ್ನು ಇನ್ನಷ್ಟು ವಿಸ್ತರಿಸಿ ಜೋಡಿ ಕಲ್ಲುಗಳನ್ನು ಕೂಡ ನಿರ್ಮಿಸಲಾಯಿತು. ಮೂರನೆ ಹಂತ ಪ್ರಾರಂಭವಾಗಿದ್ದು ಕ್ರಿ ಪೂ ೨೦೦೦ ದಲ್ಲಿ ಎಂದು ನಂಬಲಾಗಿದ್ದು ಈ ಸಮಯದಲ್ಲಿ ಈ ವೃತ್ತಾಕಾರದ ಕಲ್ಲುಗಳ ನಿರ್ಮಾಣದ ಮೇಲೆ ಎರಡು ಕಲ್ಲುಗಳ ಮೇಲೆ ಬೆಂಬಲವಾಗಿ ಇನ್ನೊಂದು ಕಲ್ಲನ್ನು ,ಅದೇ ರೀತಿ ಐದು ಕಲ್ಲನ್ನು  ಇಡಲಾಯಿತು. ಇದನ್ನು ಇಂದಿಗೂ ಕೂಡ ನೋಡಬಹುದು.

ಮೊದಲು ಇದನ್ನು ಕಟ್ಟುವಾಗ ಅರವತ್ತು ಕಲ್ಲುಗಳಿತ್ತು ಈಗ ಇವುಗಳು ಅವಶೇಷವಾಗಿವೆ ಮತ್ತು ಕೆಲವು ನೆಲಮಟ್ಟದಲ್ಲಿ ಕಾಣಬರುತ್ತವೆ ಎಂಬುದು ಇಲ್ಲಿನ ಮಾಹಿತಿ. ಒಟ್ಟಾರೆಯಾಗಿ ಇಂಗ್ಲೆಂಡ್ ಗೆ ಭೇಟಿ ನೀಡುವವರು ಸ್ಟೋನ್ ಹೆಂಜ್ ಅನ್ನು ಮಿಸ್ ಮಾಡುವಂತಿಲ್ಲ. ನೋಡಿದಷ್ಟು ನೋಡುವಂತಹ  ,ತಿಳಿದು ಕೊಂಡಷ್ಟು ಮುಗಿಯದ, ಕುತೂಹಲ ಕೆರಳಿಸುವ,ಮತ್ತೊಮ್ಮೆ ಬರಬೇಕು ಎಂಬ ಭಾವನೆಯನ್ನು ನಮ್ಮಲ್ಲಿ ಮೂಡಿಸುವ ಮಾಯಾಗಾರ ಸ್ಥಳ ಈ ಸ್ಟೋನ್ ಹೆಂಜ್.




Thursday 17 July 2014

ಮಿಲೇನಿಯಮ್ ಫೂಟ್ ಬ್ರಿಜ್

Published in Vijayanext on 13th June 2014

ಲಂಡನ್ ಎಂದ ತಕ್ಷಣ ನೆನಪಿಗೆ ಬರುವುದು ಟವರ್ ಬ್ರಿಜ್.ಲಂಡನ್ ನಲ್ಲಿ  ಪ್ರಸಿದ್ಧಿ ಪಡೆದ ಸಾಕಷ್ಟು ಸುಂದರ ಸೇತುವೆಗಳಿವೆ.ಲಂಡನ್ ಗೆ ಬಂದವರು ಈ ಬ್ರಿಜ್ ಗಳನ್ನು ನೋಡದೇ ಹೋಗಲಾಗುವುದೇ ಇಲ್ಲ.ಅದರಲ್ಲೂ ಮುಖ್ಯವಾಗಿ ಲಂಡನ್ ನ ಇತರ ಆಕರ್ಷಕ ಪ್ರಕಾಸಿ ಸ್ಥಳಗಳು ಈ ಸೇತುವೆಗಳ ಆಸುಪಾಸಿನಲ್ಲೇ ಬರುತ್ತವೆ.ಸೇತುವೆಗಳ ಅಕ್ಕ ಪಕ್ಕದಲ್ಲಿರುವ ಲಂಡನ್ ಐ,ಸೀ ಲೈಫ್,ಥೇಮ್ಸ್ ನದಿ ದಂಡೆ , ಬಿಗ್ ಬೆನ್ ,ಬಕ್ಕಿಂಗ್ ಹ್ಯಾಮ್ ಅರಮನೆ ಇವುಗಳನ್ನೆಲ್ಲಾ ನೋಡಿಯಾದ ಮೇಲೆ ಲಂಡನ್ ಸೇತುವೆಗಳನ್ನು ರಾತ್ರಿ ಹೊತ್ತಿನಲ್ಲಿ ನೋಡಬೇಕು.ಬೆಳಗಿನ ಸೇತುವೆಗೂ ರಾತ್ರಿ ದೀಪಗಳಿಂದ ಅಲಂಕೃತವಾದ ಸೇತುವೆಗಳಿಗೂ ಸಾಕಷ್ಟು ವ್ಯತ್ಯಾಸಗಳಿವೆ.ಇಲ್ಲಿ ಟವರ್ ಬ್ರಿಜ್ , ಲಂಡನ್ ಬ್ರಿಜ್ , ವಾಟರ್ ಲೂ ಬ್ರಿಜ್ ,ಮಿಲೇನಿಯಂ ಬ್ರಿಜ್ ಹೀಗೆ ಸಾಲಾಗಿ ಆಕರ್ಷಕ ಮತ್ತು ವಿಶೇಷವಾಗಿ ಕಟ್ಟಲಾದ ಸೇತುವೆಗಳಿವೆ. 
ಲಂಡನ್ ಪ್ರವಾಸಕ್ಕೆಂದು ಭಾರತದಿಂದ ಬರುವವರು ಈ ಸೇತುವೆಗಳನ್ನು ರಾತ್ರಿ ಹೊತ್ತು ನೋಡಲು ಮರೆಯದಿರಿ.ಲಂಡನ್ ನ ಟವರ್ ಬ್ರಿಜ್ ಬಗ್ಗೆ ಪ್ರತಿಯೊಬ್ಬರಿಗೂ ಗೊತ್ತೇ ಇದೆ.ಬಹುಶಃ ಲಂಡನ್ ನ ಟವರ್ ಬ್ರಿಜ್ ನೋಡಬೇಕು ಎಂಬುದು ಲಂಡನ್ ಗೆ ಬರಬೇಕೆಂದುಕೊಂಡವರ ಮೊದಲ ಪಟ್ಟಿಯಲ್ಲಿ ಬರುವ ಹೆಸರು.ಆದರೆ ನಾನು ಈಗ ಹೇಳ ಹೊರಟಿರುವುದು ಇದರಿಂದ ಒಂದು ಮೂರು ಯಾರ್ಡ್ ಆಷ್ಟು ಅಂತರದಲ್ಲಿರುವ ಮಿಲೇನಿಯಮ್ ಬ್ರಿಜ್ ಬಗ್ಗೆ. 

ಮಿಲೇನಿಯಂ ಬ್ರಿಜ್ :- ಮಿಲೇನಿಯಮ್ ಫೂಟ್ ಬ್ರಿಜ್ ಎಂದು ಇದಕ್ಕಿರುವ ನಿಜವಾದ ಹೆಸರು.ಅಂದರೆ ನಡೆಯಲು ಇರುವ ಸೇತುವೆ (ಪಾದಸಂಚಾರ ಸೇತುವೆ).ಇದನ್ನು ಬಹುಶಃ ಪ್ರೇಮಿಗಳ ಸೇತುವೆ ಎಂದುಬಿಡಬಹುದೇನೋ. ಹೆಚ್ಚಾಗಿ ಪ್ರೇಮಿಗಳು ಕೈ ಕೈ ಹಿಡಿದು ನಡೆಯಲು ಇರುವ ಸುಂದರ ತೂಗು ಸೇತುವೆ ಈ ಮಿಲೇನಿಯಮ್ ಪಾದಚಾರಿ ಸೇತುವೆ. ಇದನ್ನು ಥೇಮ್ಸ್ ನದಿಯನ್ನು ಕಾಲ್ನಡಿಗೆಯಲ್ಲಿ ದಾಟಲು ೧೯೯೬ ರಲ್ಲಿ ಕಟ್ಟಲು ಪ್ರಾರಂಭಿಸಿದರು. ೨೦೦೦ ದಲ್ಲಿ ಇದು ಅಧಿಕೃತವಾಗಿ ಉದ್ಘಾಟನೆಯಾಯಿತು.ಆದರೆ ಆ ಸಮಯದಲ್ಲಿ ಇದು ಪಾದಾಚಾರಿಗಳು ನಡೆದಾಗ ನಡುಗಲು ಪ್ರಾರಂಭಿಸಿದ್ದರಿಂದ ನಡುಗುವ ಸೇತುವೆ ಎಂಬ ಹೆಸರನ್ನು ಪಡೆದುಕೊಂಡಿತ್ತು . ಇದನ್ನು ಸರಿಮಾಡಲು ಮತ್ತೆರಡು ವರ್ಷಗಳನ್ನು ತೆಗೆದುಕೊಂಡರು ಎಂದು ಹೇಳಲಾಗುತ್ತದೆ. ಉಕ್ಕಿನಿಂದ ಕಟ್ಟಿದ ಈ ತೂಗು ಸೇತುವೆ ನೋಡಲು ಅದ್ಬುತವಾಗಿದ್ದು , ರಾತ್ರಿ ಸಮಯದಲ್ಲಿ ದೀಪದಿಂದ ಕಂಗೊಳಿಸುತ್ತಿರುತ್ತದೆ.ಎದುರಿನಲ್ಲಿರುವ ಗುಮ್ಮಟಾಕಾರದ ಸೆಂಟ್ ಪೌಲ್ ಕೆಥೆದ್ರಾಲ್ ಇದರ ಆಕರ್ಷಣೆಯನ್ನು ಇನ್ನಷ್ಟು ಹೆಚ್ಚಿಸುತ್ತದೆ. 

ಥೇಮ್ಸ್ ನದಿಯ ಮೇಲೆ ಈ ಸೇತುವೆಯನ್ನು ಕಟ್ಟಿರುವುದರಿಂದ ಸುತ್ತಲೂ ದೀಪದಿಂದ ಕಂಗೊಳಿಸುವ ಅದ್ಬುತವಾದ ಲಂಡನ್ ಅನ್ನು ರಾತ್ರಿ ಸಮಯದಲ್ಲಿ ನೋಡಬಹುದು. ಹೊಸದಾಗಿ ಕಟ್ಟಿರುವ ಎತ್ತರದ ಶಾರ್ಡ್ ಕಟ್ಟಡ ,ಥೇಮ್ಸ್ ನದಿಯಲ್ಲಿ ಓಡಾಡುವ ಕ್ರೂಸ್ ನ ಬೆಳಕು ಇವುಗಳು ಮಿಲೇನಿಯಂ ತೂಗು ಸೇತುವೆಯಲ್ಲಿ ನಿಂತು ನೋಡಿದಾಗ ಇನ್ನಷ್ಟು ಆಕರ್ಷಕವಾಗಿ ಕಾಣುತ್ತವೆ. ಈ ತೂಗು ಸೇತುವೆ ನಾಲ್ಕು ಮೀಟರ್ ಅಗಲವಿದ್ದು , ೧೭೦ ಮೀಟರ್ ಉದ್ದವಾಗಿ ಉಕ್ಕಿನಿಂದ ಕಟ್ಟಿದ ಬ್ರಿಜ್ ಆಗಿದೆ. ಆಧುನಿಕ ವಿನ್ಯಾಸವನ್ನು ಹೊಂದಿರುವ ಈ ಸೇತುವೆ ಇಡೀ ಲಂಡನ್ ನ ಸೊಬಗನ್ನು ಹೆಚ್ಚುಸುತ್ತದೆ ಎಂದರೆ ಅತಿಶಯೋಕ್ತಿಯಾಗಲಿಕ್ಕಿಲ್ಲ. ಈ ಸೇತುವೆಯಲ್ಲಿ ನಿಂತು ಸುತ್ತಲಿನ ಜಗಮಗಿಸುವ ದೃಶ್ಯವನ್ನು ನೋಡುತ್ತಿದ್ದರೆ ಸಮಯ ಕಳೆಯುತ್ತಿರುವುದೇ ಅರಿವಾಗುವುದಿಲ್ಲ. ಲಂಡನ್ ಪ್ರವಾಸಕ್ಕೆ ಬಂದವರು ಕೇವಲ ಟವರ್ ಬ್ರಿಜ್ ಮಾತ್ರ ನೋಡಿ ಹೋಗಬೇಡಿ. ಈ ಮಿಲೇನಿಯಂ ಬ್ರಿಜ್ ನೋಡಿ ಕಣ್ ತುಂಬಿಕೊಳ್ಳಲು ಮರೆಯದಿರಿ. 

ಅರ್ಪಿತಾ ಹರ್ಷ 
ಲಂಡನ್ 

Friday 9 May 2014

ಕಲ್ಲು ಬರ್ಫಿ !

Got Published in Vijayanext 09/05/2014



ಈ ಅಡುಗೆ ಮಾಡುವುದು ಒಂದು ಕಲೆ.ಇದರಲ್ಲಿ ಆಸಕ್ತಿ ಬೆಳೆದುಬಿಟ್ಟಿತು ಎಂದರೆ ಹೊರಬರುವುದು ಅಷ್ಟೇ ಕಷ್ಟ. ಹಾಗೆ ನನಗೂ ಕೂಡ ಅಡುಗೆ ಮಾಡುವುದು ಮತ್ತು ತಿನ್ನುವುದು ಎಂದರೆ ಏನೋ ಒಂದು ರೀತಿಯ ಸಂಭ್ರಮ.ಪ್ರತಿ ಭಾರಿ ಏನಾದರು ಹೊಸದಾಗಿ ಮಾಡಬೇಕು ಎನಿಸಿದಾಗ ಯೂ ಟ್ಯೂಬ್ ನಲ್ಲಿ ತರ್ಲಾ ದಲಾಲ್ ಅದಿಲ್ಲದಿದ್ದರೆ ಭಾವನಾ,ವಾಹ್ ಚೆಫ್ ಹೀಗೆ ಇವರುಗಳ ರೆಸಿಪಿಗಳನ್ನೆಲ್ಲ ನೋಡಿ ನಂತರ ಗಂಡನ ಮೇಲೆ ಪ್ರಯೋಗ ಮಾಡುವುದು ಅಭ್ಯಾಸವಾಗಿ ಹೋಗಿದೆ.ಆದರೆ ಇತ್ತೀಚಿಗೆ ಒಮ್ಮೆ ಒಗ್ಗರಣೆ ಡಬ್ಬಿ ಕಣ್ಣಿಗೆ ಬಿತ್ತು.ಇದು ಜೀ ಕನ್ನಡದಲ್ಲಿ ಬರುವ ಕಾರ್ಯಕ್ರಮ ಎಂಬುದು ಎಲ್ಲರಿಗೂ ತಿಳಿದ ವಿಷಯವೇ.ಯೂ ಟ್ಯೂಬ್ ನಲ್ಲಿ ನೋಡುವುದರಿಂದ ನಾನ್ ವೆಜ್ ರೆಸಿಪಿ ಬಂದಾಗ ಸುಲಭವಾಗಿ ಮುಂದೆ ಹಾಕಿಕೊಂಡು ಕೇವಲ ವೆಜ್ ರೆಸಿಪಿ ನೋಡುತ್ತೇನೆ.ಸಾಕಷ್ಟು ರೆಸಿಪಿ ಪ್ರಯತ್ನಿಸಿದ್ದೇನೆ. ತುಂಬಾ  ಸೊಗಸಾಗಿತ್ತು ಕೂಡ. ಹಾಗೆ ಯುಗಾದಿ ಸ್ಪೆಷಲ್ ಅಂತ ಗೋಡಂಬಿ ರೋಲ್ ಮಾಡಿದ್ದರು ನನಗೋ ಸ್ವೀಟ್ ಎಂದರೆ ತಕ್ಷಣ ಮಾಡಿ ತಿಂದುಬಿಡೋಣ ಅನ್ನುವಷ್ಟು ಅತಿ ಆಸೆ.ಬರಿ ಗೋಡಂಬಿ ಏಕೆ ಸ್ವಲ್ಪ ಒಣ ದ್ರಾಕ್ಷಿ ಸೇರಿಸಿದರೆ ಎನೂ ಆಗಲಿಕ್ಕಿಲ್ಲ ಎಂದು ಹಾಕಿ ಮಾಡಲು ಪ್ರಾರಂಭಿಸಿದೆ.
 ಒಣ ದ್ರಾಕ್ಷಿ ಹಾಕಿ ರುಬ್ಬಿದ್ದರಿಂದ ಬಣ್ಣ ಕಂದು ಬಂದಿತ್ತು.ಕಂದು ಬಣ್ಣವಾದರೇನು ರುಚಿ ಮಾತ್ರ ಸೂಪರ್ ಇರಬಹುದು ಎಂದು ತೊಳೆಸಲು ಪ್ರಾರಂಭಿಸಿದೆ.ಅವರು ಗೋಡಂಬಿ ರೋಲ್ ಮಾಡುವುದು ತೋರಿಸಿದ್ದರು ನಾನು ರೋಲ್ ಯಾಕೆ ಮಾಡುವುದು ಬರ್ಫಿ ತಾರಾ ಸ್ವಲ್ಪ ಚೌಕಾಕಾರ ಕತ್ತರಿಸಿದರೆ ಚನ್ನಾಗಿರುತ್ತದೆ ಎಂದು ಇನ್ನೂ ಸ್ವಲ್ಪ ಗಟ್ಟಿ ಆಗಲಿ ಎಂದು ಕೈ ನೋವು ಬರುವವರೆಗೆ ತೊಳೆಸುತ್ತಲೇ ಇದ್ದೆ.ಸ್ವಲ್ಪ ಹೊತ್ತಿನ ನಂತರ ಗಟ್ಟಿ ಸಾಕೆನಿಸಿ ಪ್ಲೇಟ್ ಗೆ ಹಾಕಿದೆ.ಬಿಸಿ ಇದ್ದಾಗಲೇ ಚೌಕಾಕಾರವಾಗಿ ಕತ್ತರಿಸಿಬಿಟ್ಟೆ.ತುಂಬಾ ಗಮಗಮ ಸುವಾಸನೆ ಬರುತ್ತಿತ್ತು.ಅವರು ಅದರಲ್ಲಿ ತುಪ್ಪ ಹಾಕಿರಲಿಲ್ಲ ಆದರೆ ನಾನು ಇರಲಿ ಅಂತ ತುಪ್ಪ ಕೂಡ ಸೇರಿಸಿದ್ದೆನಲ್ಲ ಅದು ಇನ್ನಷ್ಟು ಘಮ ಕೊಟ್ಟಿತ್ತು.ನನ್ನ ಪತಿ ಕೂಡ ಒಂತರಾ ಬೇಕರಿ ಸುವಾಸನೆ ಬರುತ್ತಿದೆ ಎಂದು ತಿನ್ನಲು ಕಾಯುತ್ತಾ ಕುಳಿತಿದ್ದರು. ಒಂದು ಹತ್ತು ನಿಮಿಷವಾಗಿರಬೇಕಷ್ಟೇ.ಈಗ ತಣಿದಿರುತ್ತದೆ ಎಂದು ತಿನ್ನಲು ಹೋದೆವು,ನೋಡಿದರೆ ಕಲ್ಲಿನಷ್ಟು ಗಟ್ಟಿ ಆಗಿ ಬಿಟ್ಟಿದೆ! ಸರಿ ಎಸೆಯಲು ಮನಸ್ಸುಬರುತ್ತದಾ? ಬಾಯಿಗೆ ಹಾಕಿಕೊಂಡು ನೋಡಿದರೆ ಗಟ್ಟಿ ಚಾಕೊಲೇಟ್ ತರಹ ಆಗಿತ್ತು.ತಿನ್ನಲು ರುಚಿಯಾಗಿಯೇ ಇತ್ತು.ಒಂದು ಪೀಸ್ ಬಾಯಿಗೆ ಹಾಕಿಕೊಂಡರೆ ಕಾಲುಗಂಟೆ ತಿನ್ನಲು ಬೇಕಾಗುತ್ತಿತ್ತು ! ಒಲೆಯ ಮೇಲೆ ಅಷ್ಟೊತ್ತು ಇಟ್ಟು ಕೇವಲ ಕೈ ಮಾತ್ರವಲ್ಲ , ತಿನ್ನುವಾಗ ಬಾಯಿ ಕೂಡ ನೋವಾಯಿತು !!

ಅರ್ಪಿತಾ ಹರ್ಷ 
ಲಂಡನ್ 

Wednesday 9 April 2014

ಆಕಸ್ಮಿಕ (ಕಥೆ)

Got published in Sakhi magazine may 1st 2014 edition



ಆಕೆಯ ಹೆಸರೇ ಹಾಗೆ ಹೆಸರಿಗೆ ತಕ್ಕ ಹಾಗೆ ಆಕೆ ಹುಟ್ಟಿದ್ದು ಆಕಸ್ಮಿಕವಾಗಿ ಎಂದು ಅಪ್ಪ ಸದಾಶಿವ ಯಾವಾಗಲೂ ತಮಾಷೆ ಮಾಡುತ್ತಿರುತ್ತಾರೆ.ಕಾಲೇಜು ಮುಗಿಸಿ ಮುಂದಿನ  ಮೆಟ್ಟಿಲು ಹತ್ತಿತ್ತುರುವ ಮಗಳನ್ನು ದೂರದ ಊರಿನಲ್ಲಿ ಎಂ ಎಸ್ಸಿ ಮಾಡಲು,ಹಾಸ್ಟೆಲ್ ಸೇರಿಸಿ ಮನೆಗೆ ಹೋರಾಟ ಅಪ್ಪ ಮಗಳೇ ಬದುಕಿನಲ್ಲಿ ಕೆಲವೊಂದು ಘಟನೆಗಳು ನಮಗೇ ತಿಳಿಯದೇ ನಡೆದು ಹೋಗುತ್ತದೆ ಹಾಗೆ ತಿಳಿಯದೇ ನಡೆದು ಹೋಯಿತು ಎಂಬ ಕೆಲಸವನ್ನು ಮಾಡಿಕೊಳ್ಳಬೇಡ ಎಂದು ಎಚ್ಚರಿಕೆ ನೀಡಿ ಕಣ್ಣ ತುಂಬಾ ನೀರು ತುಂಬಿಕೊಂಡು ಮಗಳನ್ನು ಬಿಟ್ಟು ಮನೆಗೆ ತೆರಳಿದರು.

ಆಕಸ್ಮಿಕಳ ತಾಯಿ ಅಹಲ್ಯಾಳಿಗೆ ಮಗಳನ್ನು ದೂರದ ಊರಿನಲ್ಲಿ ಕಾಲೇಜಿಗೆ ಸೇರಿಸುವುದು ಸ್ವಲ್ಪವೂ ಇಷ್ಟವಿರಲಿಲ್ಲ ಎಷ್ಟಾದರೂ ಇನ್ನು ೨ ವರ್ಷದ ನಂತರ ಮದುವೆ ಮಾಡಲೇಬೇಕು.ಅಣ್ಣನ ಮಗ ಪ್ರತ್ಯೂಶನೇ ತನ್ನ ಅಳಿಯನಾಗುವುದು ಎಂಬುದು ಆಗಲೇ ಸಿದ್ಧವಾಗಿದೆ.ಅದಕ್ಕೆ ಎಲ್ಲರ ಒಪ್ಪಿಗೆಯೂ ಇದೆ.ಆಕಸ್ಮಿಕಳನ್ನು ಇದರ ಬಗ್ಗೆ ಕೇಳುವ ಅಗತ್ಯವೇ ಇಲ್ಲ ಏಕೆಂದರೆ ಅವರಿಬ್ಬರೂ ಒಟ್ಟಿಗೆ ಬೆಳೆದವರು ಒಪ್ಪಿಯೇ ಒಪ್ಪುತ್ತಾಳೆ ಎಂಬುದು ಅಹಲ್ಯಾಳ ಅಂಬೋಣ.
ಪತಿ ಮನೆಗೆ ಬರುವುದನ್ನೇ ಕಾಯುತ್ತಿದ್ದ ಅಹಲ್ಯ ಸಿಟ್ಟಿನಿಂದ ಆತನ ಮೇಲೆ ಹರಿಹಾಯ್ದಳು ' ಅಷ್ಟಕ್ಕೆಲ್ಲಾ ಯಾಕೆ ಚಿಂತೆ? ಒಳ್ಳೆ ಮಾರ್ಕ್ಸ್ ತೆಗೆದಿದ್ದಾಳೆ ಓದಲಿ ಬಿಡು.ನಾಳೆ ಮಕ್ಕಳಿಗೆ ನಾಲ್ಕು ಅಕ್ಷರ ಹೇಳಿ ಕೊಡಲು  ಬೇಡವಾ?' ಮಕ್ಕಳಿಗೆ ನಾಲ್ಕು ಅಕ್ಷರ ಹೇಳಿಕೊಡಲಿಕ್ಕೆ ಡಿಗ್ರೀ ಸಾಲದಾ?ಎಂಬುದು ಅಹಲ್ಯಾಳ ಪ್ರತಿಪ್ರಶ್ನೆ!
ಅವಳೇ ಒಳ್ಳೆ ಮಾರ್ಕ್ಸ್ ತೆಗೆದು ಸ್ಕಾಲರ್ ಶಿಪ್ ಸಿಕ್ಕಿರುವಾಗ ಕಲಿಸದೆ ಇರಲಿಕ್ಕಾಗುವುದೇ  ಎಂಬುದು ಸದಾಶಿವ ಹೇಳಿದ ಉತ್ತರ ರೀತಿಯ ಪ್ರಶ್ನೆ!

ಇತ್ತ ಆಕಸ್ಮಿಕಾಳಿಗೆ ಓದಿನ ಬಗ್ಗೆ ಆಸಕ್ತಿ ಮೊದಲಿಗಿಂತ ಹೆಚ್ಚಾಗಿತ್ತು, ಮೊದಲು ಕೇವಲ ಹೆಚ್ಚು ಮಾರ್ಕ್ಸ್ ತೆಗೆಯಬೇಕು ಎಂದಿದ್ದವಳಿಗೆ ಈಗ ಇಡೀ ರಾಜ್ಯಕ್ಕೆ ಹೆಸರು ಮಾಡಬೇಕೆಂಬ ಆಸೆ ಕನಸು.

ರೂಪವತಿಯಾದ ಆಕಸ್ಮಿಕಳಿಗೆ ಪ್ರೀತಿಯಲ್ಲಿ ಬೀಳಲು ಹೆಚ್ಚು ಸಮಯ ಹಿಡಿಯಲಿಲ್ಲ.ಅದೇ ಸಮಯದಲ್ಲಿ ಅಮ್ಮನಿಂದ ಒಂದು ಕಾಗದ ಬಂತು.
'ಪ್ರೀತಿಯ ಮಗಳೇ ಓದಿ ನೀನು ಸಾಧನೆ ಮಾಡಿದರೆ ನನಗಿಂತ ಕುಶಿ ಪಡುವವಳು ಬೇರೆ ಇಲ್ಲ. ಆದರೆ ಗಮನ ಓದಿನ ಕಡೆ ಹೆಚ್ಚಿರಲಿ.ಉಜ್ವಲ ಭವಿಷ್ಯ ನಿನ್ನದಾಗಲಿ'.ಓದಿದ ನಂತರ ಆಕೆಗೆ ಅನ್ನಿಸಿತು ತನ್ನ ಭವಿಷ್ಯ ಆಯುಶ್ ನಲ್ಲಿದೆ.ಆತ ತನ್ನ ಕೈಹಿಡಿದಾಗ ಭವಿಷ್ಯ ಉಜ್ವಲವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.

ಆಕಸ್ಮಿಕಳಿಗೆ ಎರಡು ವರ್ಷ ಹೇಗೆ ಕಳೆಯಿತೋ ತಿಳಿಯಲಿಲ್ಲ , ಆಗೀಗ ಮನೆಗೆ ಹೋದಾಗ ತಾಯಿ ಆಕಸ್ಮಿಕ ಸದಾ ಕನಸಿನ ಲೋಕದಲ್ಲಿ ವಿಹರಿಸುತ್ತಿರುವುದನ್ನು ಗಮನಿಸಿದ್ದಳು.ಇನ್ನು ಹೆಚ್ಚು ತಡ ಮಾಡಬಾರದು ಎಂದು ಪತಿಯಲ್ಲಿ ಹೇಳಿ ತನ್ನ ಅಣ್ಣನನ್ನು ಬರಹೇಳಿ ಮಾದುವೆ ಮಾತುಕತೆ ಮುಗಿಸಬೇಕು ಎಂದು ಹಠ ಹಿಡಿದರು.

ಸದಾಶಿವರಿಗೆ ಇದು ಸರಿಯಾದ ಸಮಯ ಎಂದೆನಿಸಿದ್ದರಿಂದ ಮಗಳು ಮನೆಗೆ ಬಂದ ನಂತರ ಒಂದು ಸರಿಯಾದ ದಿನವನ್ನು ನೋಡಿ ಅಹಲ್ಯಾಳ ಅಣ್ಣ ಮತ್ತು ಅವರ ಕುಟುಂಬಕ್ಕೆ ಕರೆ ಕೊಟ್ಟರು. ಇಷ್ಟೆಲ್ಲಾ ನಡೆಯುತ್ತಿದ್ದ ವಿಷಯ ಅರಿತ ಆಕಸ್ಮಿಕ ತಂದೆ ತಾಯಿಗೆ ಕಡಾ ಖಂಡಿತವಾಗಿ ತಾನು ಪ್ರದ್ಯುಮ್ನ್ನನ್ನು ಮದುವೆ ಆಗುವುದು ಸಾಧ್ಯವೇ ಇಲ್ಲ.ಇಷ್ಟು ಓದಿ ಹಳ್ಳಿ ಮನೆಯಲ್ಲಿ ಮುಸುರೆ ತಿಕ್ಕುವುದೆಂದರೆ ನನ್ನ ಓದಿಗೇ ಕುತ್ತು ಎಂದು ಒಂದೇ ಸಮನೆ ಹಾರಾಡಿದಳು.ಶಾಂತ ಸ್ವಭಾವದವರಾದ ಸದಾಶಿವ ತನ್ನ ಮಗಳಿಗೆ ಬುದ್ದಿ ಹೇಳಲು ಪ್ರಯತ್ನಿಸಿದರು. ' ಪ್ರದ್ಯುಮ್ನನೇನು ಓದದೇ ಇರುವ ದಡ್ಡನಲ್ಲ ಆತನದೂ ಕೃಷಿಯಲ್ಲಿ ಸ್ನಾತಕೋತ್ತರ ಪದವಿಯಾಗಿದೆ.ಅವನ ಅಭಿರುಚಿ ಕೃಷಿಯ ಮೇಲಿರುವುದರಿಂದ ಆತ ಇಲ್ಲಿ ಬಂದು ಮನೆಯ ಕೃಷಿಯನ್ನು ನಡೆಸಿಕೊಂಡು ಹೋಗುತ್ತಿದ್ದಾನೆ.ನೀನು ಆತನನ್ನು ಮದುವೆಯಾದರೆ ಸಂತೋಷವಾಗಿರಬಲ್ಲೆ ಎಂಬ ನಂಬಿಕೆ ನನಗಿದೆ ಎಂದು ಎಷ್ಟು ಬುದ್ದಿ ಹೇಳಿದರೂ ಆಕಸ್ಮಿಕ ತಡಮಾಡದೇ ತನ್ನ ಗೆಳೆಯ ಆಯುಶ್ ಜೊತೆ ತಾನು ಮದುವೆಯಾಗುವುದಾಗಿ ಹಠ ಹಿಡಿದು ಮನೆ ಬಿಟ್ಟು ಹೊರಟುಬಿಟ್ಟಳು.

ಇತ್ತ ವಿಷಯ ತಿಳಿದ ಪ್ರದ್ಯುಮ್ನ ನ ಮನೆಯವರು ಅವಳಿಗೇ ಇಷ್ಟವಿಲ್ಲದ ಮದುವೆ ಮಾಡಿ ಯಾವ ಪ್ರಯೋಜನ? ನೀವು ಪರಿಸ್ಥಿತಿಯನ್ನು ಹದಗೆದಿಸಬೇಡಿ ಎಂದು ತಂಗಿಗೆ ಬುದ್ದಿ ಹೇಳಿ ಪ್ರದ್ಯುಮ್ನನಿಗೆ ಆದಷ್ಟು ಬೇಗ ಬೇರೆ ಹುಡುಗಿ ಹುಡುಕಿ ಮದುವೆ ಮಾಡುವುದಾಗಿ ಹೇಳಿ ಹೋದರು.ಇತ್ತ ಪ್ರದ್ಯುಮ್ನನ ಮದುವೆ ಎಲ್ಲರ ಶುಭಾಹಾರೈಕೆಯೊಂದಿಗೆ ಆತನನ್ನು ಮೆಚ್ಚಿದ ಸೌಮ್ಯಳೊಂದಿಗೆ ಆದರೆ ಅತ್ತ ಆಕಸ್ಮಿಕ ಆಯುಶ್ ಜೊತೆ ಮದುವೆಯಾಗುವ ಕನಸು ಕಾಣತೊಡಗಿದ್ದಳು.

ಆಯುಶ್ ಗೆ ಫೋನ್ ಮಾಡಿ ನಡೆದ ಘಟನೆಯನ್ನು ತಿಳಿಸಿದಾಗ ಆತ ಯಾವುದೇ ಪ್ರತಿಕ್ರಿಯೆ ನೀಡದೇ ಸುಮ್ಮನಾದ.ಮೊದಲೇ ಸ್ವಲ್ಪ ಮಾತು ಕಡಿಮೆ ಹಾಗೆಂದು ಕೊಂಡು ಆಕಸ್ಮಿಕ ಆತನನ್ನು ಭೇಟಿಯಾಗುವ ಸಮಯಕ್ಕಾಗಿ ಕಾಯತೊಡಗಿದಳು.ಫೋನ್ ಮಾಡಿದಾಗಲೆಲ್ಲ ಕೆಲಸದಲ್ಲಿ ಬ್ಯುಸಿ ಎಂದು ಹೇಳುತ್ತಿದ್ದಾಗ ಈಕೆಗೆ ಅನುಮಾನದ ಹೊಗೆ ಪ್ರಾರಂಭವಾಯಿತು.ಕೊನೆಗೆ ಒಂದು ದಿನ ಆಯುಶ್ ನಿಂದ ಬಂದ ಮೇಲ್ ನೋಡಿ ಸಂತೋಷಗೊಂಡಳು.

ಪ್ರಿಯ ಆಕಸ್ಮಿಕ ,
ಇದೇ ತಿಂಗಳು ೨೮ ರಂದು ನನ್ನ ಮದುವೆ ನನ್ನ ಬಾಲ್ಯದ ಗೆಳತಿ ಮಾವನ ಮಗಳು ಅನುಷಾಳೊಂದಿಗೆ ನಡೆಯುತ್ತಿದೆ.ತಡವಾಗಿ ತಿಳಿಸುತ್ತಿರುವುದಕ್ಕೆ ಕ್ಷಮೆಯಿರಲಿ.ನೀನು ಸಿಗುವ ಮೊದಲಿನಿಂದಲೂ ನನಗೆ ಅನುಶಾಳಿಗೆ ಮನೆಯಲ್ಲಿ ಮದುವೆ ನಿಶ್ಚಯಿಸಿದ್ದರು.ಕೇವಲ ಎರಡು ವರ್ಷದ ಹಿಂದೆ ಸಿಕ್ಕ ನಿನಗೋಸ್ಕರ ಹುಟ್ಟಿದಾಗಿನಿಂದ ಜೊತೆಗಿರುವ ಅನುಶಾಳನ್ನು ದೂರ ಮಾಡಿದರೆ ದ್ರೋಹವಾಗುತ್ತದೆ ಎಂದೆನಿಸಿತು.ಯಾವುದೋ ಸಣ್ಣ ಆಮಿಷಗಳಿಗೆ ಪ್ರೀತಿ ಎಂಬ ಬಣ್ಣ ಕೊಟ್ಟ ನಮ್ಮಿಬ್ಬರ ಸ್ನೇಹವನ್ನು ಸ್ನೇಹಕ್ಕೇ ಸೀಮಿತಗೊಳಿಸುವುದು ಸೂಕ್ತ ಎಂದು ನನಗನಿಸಿತು.ನಮ್ಮಿಬ್ಬರ ಸ್ನೇಹ ಚಿರವಾಗಿರಲಿ.ಹ್ಞಾ ಇನ್ನೊಂದು ಮಾತು ಇದು ಆತುರದಿಂದ ತೆಗೆದುಕೊಂಡ ನಿರ್ಧಾರವಲ್ಲ,ಸಾಕಷ್ಟು ಯೋಚಿಸಿದ ನಂತರವಷ್ಟೇ ಈ ನಿರ್ಧಾರ ಸರಿ ಎಂದೆನಿಸಿತು.ನಿಮ್ಮ ಜೀವನ ಸಂತೋಷವಾಗಿರಲಿ.

ಇಂತಿ ,
ಆಯುಶ್

ಓದಿದವಳ ಕಣ್ಣಲ್ಲಿ ನೀರು ಹನಿಯುತ್ತಿತ್ತು.ತಾನು ಮಾಡಿದ ತಪ್ಪು ತನಗೇ ತಿರುಗಿ ಬಂದುದ್ದರ ಅರಿವಾಗಿ ಮನೆಗೆ ಹೋಗಿ ಪ್ರದ್ಯುಮ್ನನನ್ನು ಮದುವೆಯಾಗಲು ತನ್ನ ಒಪ್ಪಿಗೆ ಎನ್ನಬೇಕು ಎಂದುಕೊಂಡು ಮನೆಗೆ ಫೋನ್ ಮಾಡಿದಳು. ಅತ್ತ ಅಪ್ಪ

ಮಗಳೇ ನಿನ್ನ ತಪ್ಪನ್ನು ಕ್ಷಮಿಸಿದ್ದೇವೆ ಮನೆಗೆ ಬಾ, ಪ್ರದ್ಯುಮ್ನ ಈಗ ಮದೆವೆಯಾಗಿ ಆನಂದದಿಂದಿದ್ದಾನೆ ಆತನೀಗ ಅಪ್ಪನಾಗುವ ಹಂತದಲ್ಲಿದ್ದಾನೆ ಎಂದಾಗ ತನ್ನ ಜೀವನ ತಾನೇ ಹಾಳು  ಮಾಡಿಕೊಂಡಿದ್ದರ ಅರಿವು ಆಕಸ್ಮಿಕಳಿಗಾಯಿತು.

Tuesday 8 April 2014

ಲಂಡನ್ ಜಾತ್ರೆ

ಹೊರದೇಶಗಳಲ್ಲಿ ನೆಲೆಸಿದವರಿಗೆ ಆಗಾಗ ನಮ್ಮ ದೇಶಕ್ಕೆ ಬರುವುದು ಸಾಧ್ಯವಾಗುವುದಿಲ್ಲ. ಅದರಲ್ಲೂ ಹೋಗಿ ೩- ೪ ವರ್ಷವಾದ ನಂತರ ನಮಗೆ ಅನುಭವ ಆಗುವುದು ಬಂದು ಇಷ್ಟು ವರ್ಷವಾಗಿಬಿಟ್ಟಿತು ಎಂಬುದು ಆಗ ನಮ್ಮ ದೇಶದ ಪ್ರೇಮ ಹೆಚ್ಚುವುದು!! ಸಣ್ಣ ಪುಟ್ಟ ಹಬ್ಬಗಳನ್ನು ಮಿಸ್ ಮಾಡಿಕೊಳ್ಳುವುದು.ಹಾಗೆ ಮಿಸ್ ಮಾಡಿಕೊಂಡ ಹಬ್ಬಗಳನ್ನು ಅನುಭವಿಸಲು ಇನ್ನೊಂದಿಷ್ಟು ಸ್ಥಳಗಳನ್ನು ಹುಡುಕಲು ಪ್ರಾರಂಭಿಸಿಬಿಡುತ್ತೇವೆ ಜೊತೆಗೆ ಇಲ್ಲಿನ ವಾತಾವರಣದಲ್ಲೇ ನಮ್ಮ ಸಂಸ್ಕೃತಿಯನ್ನು ಸೃಷ್ಟಿಸಲು ಇಲ್ಲದ ಸಂಭಂದವನ್ನು ತಾಳೆ ಹಾಕಿ ಇದೇ ರೀತಿ ಇರುತ್ತದೆ ಎಂದು ಸಮಾಧಾನ ಮಾಡಿಕೊಳ್ಳುವುದು ಅಭ್ಯಾಸವಾಗಿ ಬಿಡುತ್ತದೆ.

ಇಷ್ಟೆಲ್ಲಾ ಹೇಳುತ್ತಿರುವುದು ಏಕೆಂದರೆ ಮೊನ್ನೆ ಅಮ್ಮನಿಗೆ ಫೋನ್ ಮಾಡಿದಾಗ ಸಾಗರ,ಶಿರಸಿಯಲ್ಲಿ ಈ ವರ್ಷ ಜಾತ್ರೆ ಎಂಬುದು ಏನೋ ಒಂದು ರೀತಿ ಊರಿನ ನೆನಪನ್ನು ಇನ್ನಷ್ಟು ಹೆಚ್ಚಿಸಿತ್ತು.ಸರಿ ಎಂದು ಅತ್ತೆಗೆ ಫೋನ್ ಮಾಡಿದರೆ ತೀರ್ಥಹಳ್ಳಿಯಲ್ಲಿ ತೆಪ್ಪೋತ್ಸವ ಜಾತ್ರೆ ನಡೀತಾ ಇದೆ ಎಂದು ಹೇಳಿದಾಗ ಇನ್ನಷ್ಟು ಆಸೆ ಹೆಚ್ಚಿತ್ತು.ಏನಾದರೂ ಜಾತ್ರೆ ಇಲ್ಲವೇ ಇಲ್ಲ.ಪ್ರತಿ ಭಾರಿ ಜಾತ್ರೆ ಬಂದಾಗಲೂ ಇದೇ ಆಯಿತು ಮುಂದಿನ ಜಾತ್ರೆಗೆ ಹೋಗಬೇಕು ಎಂದು ಆದರೆ ಹೋಗಲಾಗುವುದಿಲ್ಲ  ಎಂಬ ಕೊರಗು.ಸರಿ ಅಲ್ಲಿ ಹೋಗಲಾಗುವುದಿಲ್ಲ ಇನ್ನೇನು ಮಾಡುವುದು ಎಂದು ಲಂಡನ್  ನ ವಿಂಟರ್ ವಂಡರ್ ಲ್ಯಾಂಡ್ ಗೆ ಹೋಗಿ ಬಂದಾಗಿನಿಂದ ಒಂದು ರೀತಿಯ ಸಮಾಧಾನ.ನಮ್ಮ ಮಲೆನಾಡುಗಳಲ್ಲಿ ಅದ್ಧೂರಿಯಾಗಿ ನಡೆಯುವ ಜಾತ್ರೆಗಳು ಹತ್ತಿರ ಬಂತು ಎಂದರೆ ಮನಸ್ಸು ಇಲ್ಲಿ ನಿಲ್ಲುವುದೇ ಇಲ್ಲ.ಅಲ್ಲಿನ ಜಾತ್ರೆಯ ಸೊಬಗು.ದೀಪಗಳಿಂದ ಜನಜಂಗುಳಿಯಿಂದ ಜಗಮಗಿಸುವ ಆ ಸುಂದರ ದೃಶ್ಯಗಳು ಕಣ್ಣ ಮುಂದೆ ಹಾಗೇ ತೇಲಿ ಬರುತ್ತವೆ.

ಲಂಡನ್ ನಲ್ಲಿ ಪ್ರತಿ ಭಾರಿ ಚಳಿಗಾಲ ಪ್ರಾರಂಭವಾಯಿತು ಎಂದರೆ ವಿಂಟರ್ ವಂಡರ್ ಲ್ಯಾಂಡ್ ಆರಂಭವಾಗುತ್ತದೆ.ಡಿಸೆಂಬರ್ ೨ನೇ ವಾರದಲ್ಲಿ ಪ್ರಾರಂಭವಾಗುವ ಈ ವಂಡರ್ ಲ್ಯಾಂಡ್ ಸುಮಾರು ೪ ವಾರಗಳವರೆಗೆ ನಡೆಯುತ್ತದೆ.ಈ ಸಮಯದಲ್ಲಿ ಇಡೀ ಹೈಡ್ ಪಾರ್ಕ್ ಬೇರೆಬೇರೆ ರೀತಿಯ ಆಟಗಳಿಂದ ತುಂಬಿಕೊಂಡಿರುತ್ತದೆ.ರೈಡ್ಸ್ ಇಷ್ಟಪಡುವವರಿಗೆ ಇದೊಂದು ದೊಡ್ಡ ಹಬ್ಬ ಎಂದೇ ಹೇಳಬಹುದು. ನೂರಾರು ರೀತಿಯ ಮಕ್ಕಳು ಮತ್ತು ದೊಡ್ಡವರು ಎಲ್ಲರೂ ಆಡಿ ಆನಂದಪಡಬಹುದಾದ ಈ ವಿಂಟರ್ ವಂಡರ್  ಲ್ಯಾಂಡ್  ಗೆ ಬೆಳಗ್ಗೆ ಹೋದರೆ ನಮ್ಮ ಬೆಂಗಳೂರಿನ ವಂಡರ್ ಲಾ ನೆನಪಿಸುತ್ತದೆ.ರಾತ್ರಿ ಹೋದರೆ ಜಗಮಗಿಸುವ ದೀಪಗಳಿಂದ ಜಾತ್ರೆಗಳಂತೆ ಕಾಣುತ್ತದೆ.ಒಟ್ಟಾರೆಯಾಗಿ ಇಡೀ ವಂಡರ್ ಲ್ಯಾಂಡ್ ಸುತ್ತಲು ಕನಿಷ್ಠ ೪ ತಾಸು ಬೇಕು. ಎಲ್ಲಾ ಸುತ್ತಿದ ನಂತರ ಅಲ್ಲಲ್ಲಿ ಇರುವ ಅಂಗಡಿ ಸ್ಟಾಲ್ ಗಳು ಜೊತೆಗೆ ಬಿಬಿಸಿ ಪಿಜ್ಜಾ ಬರ್ಗರ್ ಇವುಗಳನ್ನೆಲ್ಲಾ ನೋಡಿದಾಗ ಒಂದಿಷ್ಟು ಮಸಾಲಪುರಿ,ಪಾನಿಪುರಿ ಅಂಗಡಿಗಳು ಇದ್ದಿದ್ದರೆ ಎಷ್ಟು ಚನಾಗಿರುತ್ತಿತ್ತು ಎಂದೆನಿಸದೇ ಇರುವುದಿಲ್ಲ.

ಒಟ್ಟಾರೆಯಾಗಿ ಜಾತ್ರೆಗೆ ಹೋಗಲಾಗದಿದ್ದರೂ ಇಲ್ಲಿನ ವಿಂಟರ್ ವಂಡರ್ ಲ್ಯಾಂಡ್ ನೋಡಿ ನಮ್ಮೂರ ಜಾತ್ರೆಯಂತೆಯೇ ಎಂದು ಸಮಾಧಾನ ಮಾಡಿಕೊಳ್ಳುವುದು ಒಂದು ರೀತಿಯಲ್ಲಿ ಸಂತೋಷ.

ಅರ್ಪಿತಾ ಹರ್ಷ 
ಲಂಡನ್ 

ಮಸಾಲಾ ಬೋಂಡ

Published on 18/04/2014 Vijayanext


ಚುಮುಚುಮು ಚಳಿಗೆ ಆಗಾಗ ಬಿಸಿಬಿಸಿ ಬೋಂಡ,ಬಜ್ಜಿ ಮಾಡಿ ತಿನ್ನುವುದು ಎಂದರೆ ತಿಂಡಿಪೋತರಿಗೆ ಸ್ವರ್ಗ ಕೈಗೆ ಸಿಕ್ಕಂತೆ.ಆದರೆ ಬ್ಯಾಚುಲರ್ ಜೀವನ ಮಾಡುತ್ತಿರುವವರಿಗೆ ಪ್ರತಿದಿನ ಹೊರಗೆ ತಿಂದರೆ ಕರಿದ ಎನ್ನೆಯಲ್ಲೇ ಮತ್ತೆ ಕರಿದಿರುತ್ತಾರೆ ದೇಹ ಹದಗೆಡುತ್ತದೆ.ಬಜ್ಜಿ ಮಾಡುವುದು ಸುಲಭದ ವಿಧಾನ.ನೀವೇ ಮನೆಯಲ್ಲಿ ಸ್ವಲ್ಪ ಸಮಯ ನೀಡಿದರೆ ವಾರಾಂತ್ಯದ ಸಂಜೆಗಳಲ್ಲಿ ಕಾಫಿ ಜೊತೆಗೆ ಬಿಸಿ ಬೋಂಡ ಸವಿಯಬಹುದು.ಬೋಂಡ ಮಾಡುವುದರಲ್ಲಿ ಬೇಕಾದಷ್ಟು ವಿಧಾನಗಳಿವೆ.ಅವುಗಳಲ್ಲಿ ಕೆಲವು ಸುಲಭ ಮತ್ತು ಅತಿ ಹೆಚ್ಚು ರುಚಿ ನೀಡುವ ಬೋಂಡ ಮಾಡಿನೋಡಿ.ತಿಂದು ಹೇಳಿ!

ಮಿರ್ಚಿ ಮಸಾಲಾ ಬೋಂಡ

ಬೇಕಾಗುವ ಸಾಮಗ್ರಿಗಳು:
ಮಿರ್ಚಿ (ಬೋಂಡ ಮೆಣಸು) - ೪ 
ಕಡಲೆಹಿಟ್ಟು - ಅರ್ಧ ಕಪ್ 
ಉಪ್ಪು - ರುಚಿಗೆ 
ಎಣ್ಣೆ - ಕರಿಯಲು 

ಮಸಾಲ ಮಾಡಲು :
ತುರಿದ ಕ್ಯಾರೆಟ್ - ಸ್ವಲ್ಪ 
ಟೊಮೇಟೊ -ಅರ್ಧ ಕಪ್ 
ನಿಂಬೆ ರಸ - ೨ ಹನಿ 
ಚಾಟ್ ಮಸಾಲಾ - ಚಿಟಕಿ 

ಕಡಲೆ ಹಿಟ್ಟಿಗೆ ಉಪ್ಪು ಹಾಕಿ ನೀರು ಬೆರೆಸಿ ಬೋಂಡ ಹದಕ್ಕೆ (ದಪ್ಪ ದೋಸೆ ಹಿಟ್ಟಿನ ಹದ) ಬರುವಂತೆ ಕಲಸಿಕೊಂಡು ಅದಕ್ಕೆ ಬೋಂಡ ಮೆಣಸನ್ನು ಸೀಳಿ ಅದರ ಬೀಜವನ್ನು ತೆಗೆದು ಹಿಟ್ಟಿಗೆ ಹಾಕಿ ಕದಡಿ .ಎಣ್ಣೆಯನ್ನು ಕಾಯಿಸಿ ಬೋಂಡ ಕರಿಯಿರಿ.ನಂತರ ಅದಕ್ಕೆ ಬಿಸಿಬಿಸಿ ಇರುವಾಗಲೇ ಮಸಾಲ ಪದಾರ್ಥಕ್ಕೆ ಮೇಲೆ ತಿಳಿಸಿದ ಎಲ್ಲವನ್ನು ಹಾಕಿ ತಿನ್ನಿ.ಹೆಚ್ಚು ಖಾರವೂ ಇರುವುದಿಲ್ಲ.ತರಕಾರಿಗಳ ಜೊತೆಗೆ ಬೋಂಡ ಬಾಯಲ್ಲಿ ಇನ್ನಷ್ಟು ನೀರು ತರಿಸುತ್ತದೆ. 

ಅಲೂ ಬೋಂಡ 

ಅಲೂ ಬೋಂಡವನ್ನು ವಿವಿಧ ರೀತಿಯಲ್ಲಿ ಮಾಡಬಹುದು.ಅದರಲ್ಲಿ ಸುಲಭ ವಿಧಾನ:

ಅಲೂ ವನ್ನು ಸ್ಲೈಸ್ ಮಾಡಿಕೊಳ್ಳಿ. ಕಡಲೆಹಿಟ್ಟು,ಉಪ್ಪು,ಜೊತೆಗೆ ಅರ್ಧ ಚಮಚ ಓಂ ಕಾಳು,ಅರ್ಧ ಚಮಚ ಮೆಣಸಿನ ಪುಡಿಯನ್ನು ಹಾಕಿ ಹಿಟ್ಟನ್ನು ಕಲೆಸಿಟ್ಟುಕೊಂಡು ಅದಕ್ಕೆ ಈ ಅಲೂ ಸ್ಲೈಸ್ ಹಾಕಿ ಕಾದ ಎಣ್ಣೆಯಲ್ಲಿ ಕೆಂಪು ಬಣ್ಣ ಬರುವವರೆಗೆ ಕರಿಯಿರಿ.ರುಚಿಯಾದ ಹದವಾದ ಆಲೂ ಬೋಂಡ ಟೀ ಅಥವಾ ಕಾಫಿಯೊಂದಿಗೆ ತಿನ್ನಲು ಚನ್ನಾಗಿರುತ್ತದೆ. 

ಇನ್ನೊಂದು ವಿಧಾನ 

ಅಲೂ ಪಲ್ಯ ಮಾಡಿಟ್ಟುಕೊಳ್ಳಿ 
ನಂತರ ಅದನ್ನು ಉಂಡೆಯಂತೆ ಕಟ್ಟಿ ಅದನ್ನು ಹಿಟ್ಟಿನಲ್ಲಿ ಅದ್ದಿ ಎಣ್ಣೆಯಲ್ಲಿ ಕರಿಯಿರಿ. 

ಅಲೂ ಪಲ್ಯ ಮಾಡುವ ವಿಧಾನ:
ಆಲೂಗಡ್ಡೆ ಬೇಯಿಸಿ ಸಿಪ್ಪೆ ಸುಲಿದಿಟ್ಟುಕೊಳ್ಳಿ.ಬಾಣಲೆಗೆ ಒಂದು ಚಮಚ ಎಣ್ಣೆ ಸ್ವಲ್ಪ ಸಾಸಿವೆ,ಜೀರಿಗೆ,ಉದ್ದು ಹಾಕಿ ಒಗ್ಗರಣೆ ಬೆಂದ ನಂತರ ಅದಕ್ಕೆ ಸಣ್ಣಗೆ ಹೆಚ್ಚಿದ ಈರುಳ್ಳಿ ಹಾಕಿ ನಂತರ ಬೇಯಿಸಿಟ್ಟ ಆಲೂಗಡ್ಡೆಯನ್ನು ನುರಿದು ಹಾಕಿ.ರುಚಿಗೆ ತಕ್ಕಷ್ಟು ಉಪ್ಪು,ನಿಂಬು ರಸ,ಸಣ್ಣಗೆ ಹೆಚ್ಚಿದ ಒಂದು ಹಸಿ ಮೆಣಸಿನ ಕಾಯಿ  ಹಾಕಿ ಮೇಲಿನಿಂದ ಸಣ್ಣಗೆ ಹೆಚ್ಚಿದ ಕೊತ್ತುಂಬರಿ ಸೊಪ್ಪನ್ನು ಹಾಕಿ.

ನಂತರ ಮಾಡಿಟ್ಟುಕೊಂಡ ಬೋಂಡ ಹಿಟ್ಟಿಗೆ ಉಂಡೆ ಮಾಡಿಟ್ಟ ಅಲೂ ಪಲ್ಯವನ್ನು ಅದ್ದಿ ಎಣ್ಣೆಯಲ್ಲಿ ಕರಿಯಿರಿ. ರುಚಿರುಚಿಯಾದ ಮೈಸೂರು ಬೋಂಡ ಸವಿಯಿರಿ. 

ಈರುಳ್ಳಿ ಮಸಾಲಾ ಬೋಂಡ :
ಬೇಕಾಗುವ ಸಾಮಗ್ರಿಗಳು :
ಈರುಳ್ಳಿ ಸ್ಲೈಸ್ - ಒಂದು ಬೌಲ್ 
ಕಡಲೆ ಹಿಟ್ಟು - ಅರ್ಧ ಕಪ್ 
ಉಪ್ಪು- ರುಚಿಗೆ ತಕ್ಕಷ್ಟು 
ಮೆಣಸಿನ ಪುಡಿ - ೧ ಚಮಚ 
ಓಮಿನ ಕಾಲು - ಅರ್ಧ ಚಮಚ 

ಮಸಾಲ ಮಾಡಲು :
ತುರಿದ ಕ್ಯಾರೆಟ್ - ಸ್ವಲ್ಪ 
ಟೊಮೇಟೊ -ಅರ್ಧ ಕಪ್ 
ನಿಂಬೆ ರಸ - ೨ ಹನಿ 
ಚಾಟ್ ಮಸಾಲಾ - ಚಿಟಕಿ 

ಮೊದಲು ಬೋಂಡ ಮಾಡಲು ಬೇಕಾಗುವ ಕಡಲೆಹಿಟ್ಟು,ಉಪ್ಪು,ಕೆಂಪುಮೆಣಸಿನ ಪುಡಿ,ಓಮಿನ ಕಾಳು ಇವುಗಳೆಲ್ಲವನ್ನು ಸೇರಿಸಿಕೊಳ್ಳಿ ನಂತರ ಅದಕ್ಕೆ ಸ್ಲೈಸ್ (ಗೋಲಾಕಾರದಲ್ಲಿ)ಮಾಡಿಟ್ಟುಕೊಂಡ ಈರುಳ್ಳಿಯನ್ನು ಒಂದೊಂದೇ ಅದ್ದಿ ಎಣ್ಣೆಯಲ್ಲಿ ಕರಿಯಿರಿ.ನಂತರ ಮೇಲಿನಿಂದ ಮಸಾಲ ಮಾಡಲು ತಿಳಿಸಿರುವ ಎಲ್ಲವನ್ನು ಮಿಶ್ರ ಮಾಡಿ ಅದರ ಮೇಲೆ ಉದುರಿಸಿದರೆ ರುಚಿ ಮತ್ತು ಬಿಸಿಯಾದ ಈರುಳ್ಳಿ ಬಜ್ಜಿ ರೆಡಿ. 

Friday 24 January 2014

ಪಿಜ್ಜಾ ಪ್ರಕರಣ

Published in Vijayanext 24/01/2014



ಪಿಜ್ಜಾವನ್ನು ಆಗಾಗ ತಂದು ತಿನ್ನುವುದು ನನಗೆ ಬಹಳ ಇಷ್ಟದ ಸಂಗತಿ.ಅಡುಗೆ ಮಾಡಲು ಬೇಸರವಾದಾಗ ಲಂಡನ್ ನಲ್ಲಿ ನಮ್ಮ ಮನೆಯ ಹತ್ತಿರ ಒಳ್ಳೆಯ  ಇಂಡಿಯನ್ ಹೋಟೆಲ್ ಇರದಿರುವ ಕಾರಣ ಪಿಜ್ಜಾ ದ ಮೊರೆ ಹೋಗುವುದು ಅನಿವಾರ್ಯವಾಗಿದೆ.ಹೀಗೆ ಪಿಜ್ಜಾ ಪ್ರತಿ ಭಾರಿ ತರಿಸುವಾಗಲೆಲ್ಲ ಯೋಚಿಸುತ್ತಿದ್ದೆ ನಾವ್ಯಾಕೆ ಇಷ್ಟು ದುಡ್ಡು ಕೊಟ್ಟು ತರಿಸಬೇಕು ಮನೆಯಲ್ಲಿಯೇ ಮಾಡಿದರೆ ಹೇಗೆ ಎಂದು.ಯೋಚನೆ ತಲೆಗೆ ಬಂದ ತಕ್ಷಣ ಒಂದು ನಿಮಿಶವೂ ತಡ ಮಾಡದೆ ನೆಟ್ ನಲ್ಲಿ ಹುಡುಕಿ ಕೊನೆಗೆ ಒಂದು ಸುಲಭ ವಿಧಾನ ನೋಡಿ ಹಾಗೆಯೇ ಮಾಡುವುದು ಎಂದು ತೀರ್ಮಾನಿಸಿದೆ.ಆರ್ಡರ್ ಮಾಡಬೇಕಾದ ಪಿಜ್ಜಾವನ್ನು ತಕ್ಷಣ ಕ್ಯಾನ್ಸಲ್ ಮಾಡಿ ಅಡುಗೆ ಮನೆಗೆ ಹೊರಟೆ. 

ಅದಕ್ಕಾಗಿ ಬೇಕಾದ ಟೊಮೇಟೊ,ಈರುಳ್ಳಿ,ಕ್ಯಾಪ್ಸಿಕಂ ಎಲ್ಲವನ್ನು ಸ್ಲೈಸ್ ಮಾಡಿಟ್ಟುಕೊಂಡು,ಮೈದಾ ಹಿಟ್ಟನ್ನು ಚಪಾತಿ ಹದಕ್ಕೆ ಅಡುಗೆ ಸೋಡಾ ಬೆರೆಸಿ ಕಲೆಸಿದೆ.ನಂತರ ಅದನ್ನು ಪಿಜ್ಜಾ ಎಷ್ಟು ದೊಡ್ಡ ಬೇಕು ಆ ಆಕಾರ ಬರುವಂತೆ ತಟ್ಟಿ ಅದರ ಮೇಲೆ ಹೆಚ್ಚಿಟ್ಟುಕೊಂಡ ತರಕಾರಿಗಳನ್ನು ಉದುರಿಸಿದೆ.

ನಂತರ ಓವನ್ ನಲ್ಲಿ ಇದನ್ನು ಸರಿಯಾಗಿ ಇಟ್ಟು ಅವರು ತಿಳಿಸಿದಂತೆಯೇ ಸರಿಯಾಗಿ ಬೇಯಲು ಇಟ್ಟೆ.ಎಲ್ಲ ಸರಿಯಾಗಿಯೇ ಇತ್ತು ಚೀಸ್ ಒಂದು ಹಾಕಬೇಕಿತ್ತು.ಆದರೆ ಚೀಸ್ ಮನೆಯಲ್ಲಿ ಇರಲಿಲ್ಲ.ದಿಡೀರ್ ನಿರ್ಧಾರವಾದ್ದರಿಂದ ಹೋಗಿ ತರುವಷ್ಟು ತಾಳ್ಮೆ ಇರಲಿಲ್ಲ.ಸ್ವಲ್ಪ ಹೊತ್ತಿನ ನಂತರ ಬಿಸಿಬಿಸಿ ಹೊಗೆಯಾಡುವ ಪಿಜ್ಜಾ ತಯಾರಾಗಿತ್ತು.ಚೀಸ್ ಇಲ್ಲದ ಪಿಜ್ಜಾ! . 

ನೋಡಿದ ತಕ್ಷಣ ನನಗೆ ಏನೋ ಮಿಸ್ ಆಗಿದೆ ಎನಿಸಿದರೂ ಸಮಾಧಾನ ಮಾಡಿಕೊಂಡು ಪತಿಯ ಮುಂದೆ ತೆಗೆದುಕೊಂಡು ಹೋಗಿ ಇಟ್ಟೊಡನೆ ಒಮ್ಮೆ ಗಾಬರಿಯಾದರು.ಅದಾರೂ ನೋಡೇ ಬಿಡೋಣ ಎಂದೆನಿಸಿ ಇಬ್ಬರೂ ತಿನ್ನಲು ಪ್ರಾರಂಭಿಸಿದೆವು.ಎಲ್ಲವೂ ಸರಿ ಇತ್ತು ಆದರೆ ಚೀಸ್ ಮಾತ್ರ ಇರಲಿಲ್ಲ.ಅಷ್ಟು ರುಚಿಕರವಾದ ಪಿಜ್ಜಾ ಸಿಗುವಾಗ ಈ ರೀತಿ ಕಷ್ಟ ಪಟ್ಟು ತಿನ್ನಲು ಕಷ್ಟಪಡಬೇಕಾದ ಪಿಜ್ಜಾ ಮಾಡುವ ಅವಶ್ಯಕತೆ ಇತ್ತಾ ಎಂದು ನನಗೆ ಅನ್ನಿಸಿತು.ತಕ್ಷಣ ಆನ್ಲೈನ್ ನಲ್ಲಿ ೨ ಪಿಜ್ಜಾ ಆರ್ಡರ್ ಮಾಡಿಬಿಟ್ಟೆವು. ನನ್ನ ನಂಬಿ ಮತ್ತೆಂದೂ ನಾನು ಪಿಜ್ಜಾ ಮಾಡುವ ಪ್ರಯತ್ನ ಮಾಡಲಿಲ್ಲ.ಮಾಡುವುದೂ ಇಲ್ಲ!!


ಅರ್ಪಿತಾ ಹರ್ಷ 
ಲಂಡನ್ 

Sunday 5 January 2014

ನಿಸರ್ಗದ ಮಡಿಲು ಸೆವೆನ್ ಸಿಸ್ಟರ್ಸ್ ಮತ್ತು ಬ್ರೈಟನ್

Published in Panju Magazine

http://www.panjumagazine.com/?p=5854

ಲಂಡನ್ ಎಂದ ತಕ್ಷಣ ಎಲ್ಲರ ಕಣ್ಣಿಗೆ ಕಾಣುವುದು ದೊಡ್ಡ ದೊಡ್ಡ ಬಿಲ್ಡಿಂಗ್,ಒಂದಿಷ್ಟು ಸಣ್ಣ ಪುಟ್ಟ ನದಿ, ಎಲೆಕ್ಟ್ರೋನಿಕ್ ಟ್ರೈನ್,ಸುಂದರ  ಮತ್ತು ಸುಸಜ್ಜಿತವಾದ ಪಾರ್ಕ್ ಮತ್ತು ಹಳೇ ವಿಕ್ಟೋರಿಯನ್ ಕಾಲದ ಮನೆಗಳು.ಕರ್ನಾಟಕದಂತ ಹಸಿರು,ಗದ್ದೆ,ಕೆರೆ,ತೋಟಗಳನ್ನು ನೋಡಿ ಬೆಳೆದವರಿಗೆ ಈ ರೀತಿಯ ಹೈ ಟೆಕ್ ಜೊತೆಗೆ ಹಳೇ ಮನೆಗಳ ನಡುವೆ ಇರುವಾಗ ನಮ್ಮ ಊರಿನ ನೆನಪು ಸದಾ ಕಾಡುತ್ತದೆ.ಆ ಹಸಿರನ್ನು ನೋಡಬೇಕು ಅಲ್ಲಿ ಕುಳಿತು ಊಟ ಮಾಡಬೇಕು,ನಮ್ಮ ನೆಚ್ಚಿನವರೊಂದಿಗೆ ಕುಳಿತು ಒಂದಿಷ್ಟು ಹರಟೆ ಹೊಡೆಯಬೇಕು,ಪ್ರಕೃತಿಯ ಸೊಬಗನ್ನು ಸವಿಯಬೇಕು,ನಿಸರ್ಗದ ಮಡಿಲಲ್ಲಿ ಕುಳಿತು ಒಂದಿಷ್ಟು ಹೊತ್ತು ಪ್ರಪಂಚವನ್ನೇ ಮರೆತುಬಿಡಬೇಕು ಹೀಗೆ ಸಾಕಷ್ಟು ಆಸೆಗಳು ಆಗಾಗ ಗರಿಗೆದರುತ್ತವೆ.ನಮ್ಮವರೆಲ್ಲರಿಂದ ದೂರ ಇರುವವರಿಗಂತೂ ಇವುಗಳೆಲ್ಲ ಇನ್ನೂ ಹೆಚ್ಚು ಅನಿಸುತ್ತದೆ. ಹಾಗೆ ಅನ್ನಿಸಿದಾಗಲೇ ನಾವು ಹುಡುಕಲು ಪ್ರಾರಂಭ ಮಾಡಿದ್ದು ಒಂದು ದಿನದ ಪ್ರವಾಸ ಕೈಗೊಳ್ಳಲು ಸೂಕ್ತವಿರುವ ಇಂಗ್ಲೆಂಡ್ ನ ಸೆವೆನ್ ಸಿಸ್ಟರ್ಸ್ ಮತ್ತು ಬ್ರೈಟನ್.

ಬ್ರೈಟನ್ ಮತ್ತು ಸೆವೆನ್ ಸಿಸ್ಟರ್ಸ್ ಒಂದಕ್ಕೊಂದು ಹತ್ತಿರದಲ್ಲೇ ಇವೆ.ಬ್ರೈಟನ್ ನಿಂದ ಸೆವೆನ್ ಸಿಸ್ಟರ್ಸ್ ಗೆ ಬಸ್ ನಲ್ಲಿ ಪ್ರಯಾಣಿಸಿದರೆ ಕೇವಲ ಅರ್ಧ ಗಂಟೆ.ನಿಸರ್ಗ ಸೌಂದರ್ಯವನ್ನು ಸವಿಯಲು ಹಾತೊರೆಯುವವರಿಗೆ ಇದು ಸರಿಯಾದ ತಾಣ.ಲಂಡನ್ ನಿಂದ ಟ್ರೈನ್ ನಲ್ಲಿ ಕೇವಲ ಒಂದು ಗಂಟೆಯ ಪ್ರಯಾಣವಾಗಿದ್ದು ಬ್ರೈಟನ್ ಗೆ ನೇರ ಟ್ರೈಲಿನ ಸಂಪರ್ಕವಿದೆ.

ಸೆವೆನ್ ಸಿಸ್ಟರ್ಸ್ :
ಸೆವೆನ್ ಸಿಸ್ಟರ್ಸ್ ಎಂಬುದು ದಕ್ಷಿಣ ಇಂಗ್ಲೆಂಡ್ ನ ಸೀಫೋರ್ಡ್ ಮತ್ತು ಈಸ್ಟ್ ಬೋರ್ನ್ ಸಿಟಿ ನಡುವೆ ಇರುವ ಸುಂದರ ಸ್ಥಳ.ಸುಮಾರು 280 ಎಕರೆಗಳಷ್ಟು ವಿಸ್ತಾರವಾಗಿ ಹರಡಿರುವ ಹಸಿರು ಬೆಟ್ಟದ ತುದಿಯನ್ನು ಹತ್ತಿದರೆ ಅಲ್ಲಿ ಸಿಗುವುದು 7 ಕಣಿವೆಗಳು. ಇಂಗ್ಲಿಷ್ ನದಿಯ ರಬಸಕ್ಕೆ ಕೊರೆದು ಸೀಮೆ ಸುಣ್ಣದ 7 ಕಣಿವೆಗಳು ನೈಸರ್ಗಿಕವಾಗಿ ನಿರ್ಮಾಣವಾಗಿವೆ.ಇವುಗಳಿಂದಲೇ ಈ ಸ್ಥಳಕ್ಕೆ ಸೆವೆನ್ ಸಿಸ್ಟರ್ಸ್ ಎಂಬ ಹೆಸರು ಬಂತು ಎನ್ನಲಾಗುತ್ತದೆ.ಈ 7 ಕಣಿವೆಯನ್ನು ನೋಡಲು ಸುಮಾರು 3 ಮೈಲಿಗಳಷ್ಟು ನಡೆದು ಬೆಟ್ಟ ಹತ್ತಿ ತಲುಪಬೇಕಾಗುತ್ತದೆ. ಈ 7 ಸುಣ್ಣದ ಬಿಳಿಯ ಕಣಿವೆಗಳಿಗೆ 7 ಬೇರೆಬೇರೆ ಹೆಸರುಗಳಿವೆ ಎಂದು ಕೂಡ ಹೇಳಲಾಗುತ್ತದೆ.ಇವುಗಳಲ್ಲಿ ಅತಿ ಎತ್ತರದ ಕಣಿವೆ 253 ಅಡಿ ಇದೆ.ಟ್ರೆಕಿಂಗ್ ನಲ್ಲಿ ಆಸಕ್ತಿ ಇರುವವರಿಗೆ ಇದು ಅತಿ ಸಂತೋಷವನ್ನು ನೀಡಬಲ್ಲದು.ಸುಮಾರು 2 ಗಂಟೆಗಳ ಕಾಲ ನಡೆದರೂ ಕೂಡ ಸುತ್ತಲಿನ ಆ ಕಂಗೊಳಿಸುವ ಹಸಿರು,ಅಲ್ಲಲ್ಲಿ ಕಾಡುವ ಹಸುಗಳ ಹಿಂಡು ಮತ್ತು ಸಣ್ಣಪುಟ್ಟ ನೀರಿನ ಹರಿವು ಇವುಗಳೆಲ್ಲ ನಮ್ಮ ಮಲೆನಾಡಿನ ನೆನಪನ್ನು ಹಸಿರಾಗಿಸುತ್ತದೆ.
ಕೊನೆ ತಲುಪಿದ ಮೇಲೆ ಕಾಡುವ ಸಮುದ್ರದ ಅಪ್ಪಳಿಕೆ ಮಾತ್ತು ಸುಂದರ ಕಣಿವೆಗಳ ದೃಶ್ಯಗಳು ಪದಗಳಲ್ಲಿ ನಿಲುಕುವುದಿಲ್ಲ.

ಬೆಟ್ಟವನ್ನು ಏರದೇ ನೇರವಾಗಿ ಪಕ್ಕದಲ್ಲಿ ಸಮತಟ್ಟಾದ ನೆಲದಲ್ಲಿ ನಡೆದುಕೊಂಡು ಹೋದರೆ ಸಮುದ್ರದ ದಡಕ್ಕೆ ಹೋಗಿ ತಲುಪುತ್ತದೆ.ಸಾಕಷ್ಟು ಶೂಟಿಂಗ್ ಗಳನ್ನೂ ಕೂಡ ಈ ಸ್ಥಳದಲ್ಲಿ ಮಾಡಲಾಗುತ್ತದೆ ಎನ್ನಲಾಗುತ್ತದೆ.ಇಲ್ಲಿ ಹೋಗುವ ದಾರಿಯಲ್ಲಿ ಹರಿಯುವ ಸಣ್ಣ ಕೆರೆಯಲ್ಲಿ ಬೋಟಿಂಗ್ ಕೂಡ ಮಾಡಬಹುದು,ಜೊತೆಗೆ ಸೈಕ್ಲಿಂಗ್,ಕ್ಯಾನೋಯಿಂಗ್ ಮತ್ತು ನಿಸರ್ಗದ ಮಡಿಲಲ್ಲಿ ಇರುವುದರಿಂದ ವಿವಿಧ ಜಾತಿಯ ಹಕ್ಕಿಗಳಿದ್ದು ಪಕ್ಷಿ ವೀಕ್ಷಕರಿಗೆ ಕೂಡ ಇದು ಸೊಗಸಾದ ತಾಣ.ಮೀನು ಹಿಡಿಯಲು ಆಸಕ್ತಿ ಇದ್ದರೆ ಅದಕ್ಕೂ ಅವಕಾಶವಿದೆ.

ಸೆವೆನ್ ಸಿಸ್ಟರ್ಸ್ ಬಸ್ ಸ್ಟಾಪ್ ನಲ್ಲಿ ಇಳಿದುಕೊಂದರೆ ಅಲ್ಲೊಂದು ವಿಸಿಟರ್ ಸೆಂಟರ್ ಕೂಡ ಇದೆ.ಇಲ್ಲಿ ಕಣಿವೆಗಳ ಬಳಿ ಹೇಗೆ ಹೋಗಬೇಕು ಮತ್ತು ಅಲ್ಲಿ ಏನೆಲ್ಲಾ ನೋಡಬಹುದು ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು  ಲ್ಯಾಂಡ್ ಮಾರ್ಕ್ ಅನ್ನು ಕೂಡ ನೀಡುತ್ತಾರೆ.ಅದನ್ನು ಪಡೆದು ಹೋದರೆ ಎಲ್ಲಿ ಹೋಗಬೇಕು ಎಂಬುದು ಸರಿಯಾಗಿ ತಿಳಿಯಬಹುದು. ಜೊತೆಗೆ ಇಲ್ಲೊಂದು ಸಣ್ಣ ಕಾಟೇಜ್ ಮನೆಯಿದ್ದು ಸಾಂಪ್ರದಾಯಿಕ ಆಹಾರಗಳು ದೊರೆಯುತ್ತವೆ.ಜೊತೆಗೆ ಸುಂದರವಾದ ಹೂವುಗಳಿಂದ ಕೂಡಿದ ಗಾರ್ಡನ್ ಕೂಡ ನೋಡುಗಳ ಮನ ತಣಿಸುತ್ತದೆ.

ಬ್ರೈಟನ್ :

ಬ್ರೈಟನ್ ಒಂದು ಬೀಚ್.  ಬ್ರೈಟನ್ ಕಲ್ಲಿನ ಬೀಚ್ ಇಲ್ಲಿನ ಜನರ ಆಕರ್ಷಣೆಗಳಲ್ಲಿ ಒಂದು.ವರ್ಷದ ಹೆಚ್ಚು ಕಾಲ ಇಲ್ಲಿ ಅತಿ ಹೆಚ್ಚು ಚಳಿ ಇರುವುದರಿಂದ ಬೇಸಿಗೆ ಬಂತೆಂದರೆ ಜನ ಮನೆಯಿಂದ ಹೊರಹೊರಟು ಬೀಚ್ ನಲ್ಲಿ ಸನ್ ಬಾತ್ ಮಾಡಲು ಇಷ್ಟಪಡುತ್ತಾರೆ.ಜೊತೆಗೆ ಇಲ್ಲಿ ಸಾಕಷ್ಟು ಮನೋರಂಜನಾ ರೈಡ್ಸ್ ಗಳು ಇರುವುದರಿಂದ ಸಂಜೆಯ ಸಮಯವನ್ನು ಕಳೆಯಲು ಇದು ಸೂಕ್ತ ಸ್ಥಳ. ಬೀಚ್ ಪ್ರಿಯರಿಗೆ ಬ್ರೈಟನ್ ಪೆಬಲ್ ಬೀಚ್ ಸುಂದರ ಸಂಜೆ ನೀಡುವುದು ಖಂಡಿತ. ಸೆವೆನ್ ಸಿಸ್ಟರ್ಸ್ ನಿಂದ ಲಂಡನ್ ತಲುಪಲು ಇದೇ ಮಾರ್ಗವಾಗಿ ಬರಬೇಕಾದ್ದರಿಂದ ಇದು ಕೂಡ ಭೇಟಿ ನೀಡಲೇಬೇಕಾದ ಸ್ಥಳ.

ತಲುಪುವ ಮಾರ್ಗ :
ಲಂಡನ್ ನಿಂದ ಕೇವಲ ಒಂದೂವರೆ ಗಂಟೆಯ ಪ್ರಯಾಣವಾದ್ದರಿಂದ ನೇರ ರೈಲಿನಲ್ಲಿ ಬ್ರೈಟನ್ ತಲುಪಬಹುದು.ಅಲ್ಲಿಂದ ಸೆವೆನ್ ಸಿಸ್ಟರ್ಸ್ ಗೆ ಸಾಕಷ್ಟು ಬಸ್ಸುಗಳ ಸಂಪರ್ಕ ಸೌಲಭ್ಯವಿದ್ದು ಅರ್ಧ ಗಂಟೆಯಲ್ಲಿ ಸೆವೆನ್ ಸಿಸ್ಟರ್ಸ್ ಬಸ್ಸು ನಿಲ್ದಾಣ ತಲುಪಬಹುದು.ಅಲ್ಲಿಂದ ಟ್ರಕ್ಕಿಂಗ್ ಅಥವಾ ನಡುಗೆ ಮೂಲಕ ಕಣಿವೆಯ ತುದಿ ತಲುಪಲು  ಸುಮಾರು 3  ಗಂಟೆಯ ಕಾಲ ಬೇಕಾಗುವುದು. ಜೊತೆಗೆ ಟ್ರೆಕಿಂಗ್ ಗೆ ಬೇಕಾಗುವ ಶೂ ಮತ್ತು ಗಾಳಿ ಅತಿ ಹೆಚ್ಚು ಇರುವುದರಿಂದ ಜಾಕೆಟ್ ಕೊಂಡೊಯ್ಯುವುದು ಅನಿವಾರ್ಯ.