Wednesday 5 August 2020

ಕೊರೋನಾದಿಂದ ಮನೆಯೊಳಗಿರುವ ಮಕ್ಕಳ ಪಾಲನೆ ಹೀಗಿರಲಿ




ಕೋವಿಡ್ ನಿಂದ ಉಳಿದ ದೇಶಗಳೆಲ್ಲ ಸ್ವಲ್ಪ ಸ್ವಲ್ಪವೇ ಚೇತರಿಸಿಕೊಳ್ಳುತ್ತಾ ಮೊದಲಿನಂತೆಯೇ ನಡೆಯುವ ಹಂತಕ್ಕೆ ನಿಧಾನವಾಗಿ ಬರುತ್ತಿದೆ.ಆದರೆ ಭಾರತದಲ್ಲಿ ಕೊರೋನ ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದರಿಂದ ಮನೆಯಲ್ಲಿಯೇ ಇದ್ದು ಪರಿಸ್ಥಿತಿಯನ್ನು ಸುಧಾರಿಸುವುದು ಪ್ರತಿಯೊಬ್ಬರ ಕರ್ತವ್ಯ. ಹೀಗಿದ್ದರೂ ಐದು ತಿಂಗಳಿನಿಂದ ಆಟವಾಡಲು ಕೂಡ ಮನೆಯಿಂದ ಹೊರಹೋಗದ ಸ್ಥಿತಿ ಇರುವ ಮಕ್ಕಳ ಬಗ್ಗೆ ಸ್ವಲ್ಪ ಯೋಚಿಸಿ. ಬೆಳೆಯುವ ಮಕ್ಕಳು ದಿನವಿಡೀ ನಾಲ್ಕು ಗೋಡೆಯ ಮಧ್ಯೆ ಇರಬೇಕು ಎಂದರೆ ಮಕ್ಕಳ ಮಾನಸಿಕ ತೊಳಲಾಟ ಏನಿರಬಹುದು ?. 


ಕರೋನದಿಂದಾಗಿ ಮಕ್ಕಳೆಲ್ಲ ಮನೆಯಲ್ಲಿಯೇ ಕುಳಿತು ಕನಿಷ್ಠ ಐದು ತಿಂಗಳುಗಳಾಗಿವೆ ಎಂದರೆ ಖೇದವೆನಿಸುತ್ತದೆ. ಹಾಗೆಯೇ ಅವರನ್ನು ಇಡೀ ದಿನ ಸಂಬಾಳಿಸಲು ಪೋಷಕರು ಕೂಡ ಸಾಕಷ್ಟು ಪ್ರಯತ್ನಪಡುತ್ತಿರುತ್ತಾರೆ ಎಂಬುದರಲ್ಲಿ ಆಶ್ಚರ್ಯವಿಲ್ಲ. ಮಕ್ಕಳು ಹಳ್ಳಿಗಳಲ್ಲಿದ್ದರೆ ತೋಟ ,ಕಾಡುಮೇಡು ಸುತ್ತಬಹುದು ,ಅಜ್ಜ ಅಜ್ಜಿಯ ಜೊತೆ ಸಮಯ ಕಳೆಯಬಹುದು ಪ್ರತಿ ಬೇಸಿಗೆ ರಜೆಯನ್ನು ಕಳೆಯುವಂತೆ ಈ ಬಾರಿ ಇನ್ನಷ್ಟು ಮಜವಾಗಿ ಕಳೆಯಬಹುದು. ಆದರೆ ನಗರಗಳ ಅಪಾರ್ಟ್ಮೆಂಟ್ ಗಳಲ್ಲಿ, ಸಣ್ಣ ಸಣ್ಣ ಮನೆಗಳಲ್ಲಿ ಮನೆಯ ಒಳಗೇ ಕುಳಿತು ದಿನವಿಡೀ ಕಳೆಯಬೇಕು ಎಂದಾದಲ್ಲಿ ಮಕ್ಕಳ ಮಾನಸಿಕ ಸ್ಥಿತಿಯ ಬಗ್ಗೆ ಯೋಚಿಸಿ. ಇದು ಒಂದು ಎರಡು ದಿನವಲ್ಲ ಕಳೆದ ಐದು ತಿಂಗಳಿಂದ ಎಲ್ಲೂ ಹೊರಹೋಗದೇ ಮೆನೆಯೊಳಗೇ ಇರುವ ಮಕ್ಕಳ ಪರಿಸ್ಥಿತಿ ನಿಜಕ್ಕೂ ಭಯ ತರಿಸುವಂತದ್ದು. ಇದು ಕೇವಲ ಮಕ್ಕಳಿಗೆ ಮಾತ್ರವಲ್ಲ ಪೋಷಕರಿಗೂ  ಸಹನೆ ಪರೀಕ್ಷಿಸುವ ಸಂದರ್ಭವಾಗಿರಬಹುದು. ಅದರಲ್ಲೂ ತಂದೆತಾಯಿ ಇಬ್ಬರೂ ಕೆಲಸ ಮಾಡುತ್ತಿದ್ದಲ್ಲಿ ಅವರ ಪರಿಸ್ಥಿತಿ ಇನ್ನೂ ಕಷ್ಟ. ಹಾಗಾದರೆ ನಮ್ಮ ಮಕ್ಕಳನ್ನು ಹೇಗೆ ದಿನವಿಡೀ ಉಲ್ಲಾಸಿತವಾಗಿ ಇಡಬಹುದು? 

ಒಂದು ವರ್ಷಅಥವಾ ಎರಡು ವರ್ಷದೊಳಗಿನ ಮಗುವಾಗಿದ್ದಲ್ಲಿ ಈ ಲಾಕ್ಡೌನ್ ಅನುಕೂಲವೇ ಆಗಿರುತ್ತದೆ .ಆದರೆ ಮೂರರಿಂದ ಆರು ವರ್ಷದ ಮಕ್ಕಳಿಗೆ ಮನೆಯಲ್ಲಿಯೇ ಇರುವುದು ಕಷ್ಟದ ಕೆಲಸ. ಆರರ ನಂತರದ ಮಕ್ಕಳಿಗೆ ಶಾಲೆಯಿಂದಲೇ ಆನ್ಲೈನ್ ತರಗತಿಗಳು ನಡೆಯುವುದರಿಂದ ಸ್ವಲ್ಪ ಸಮಯ ಹೋಂ ವರ್ಕ್ ,ತರಗತಿಗಳಿಗೆ ತಯಾರಿ ಹೀಗೆ ಸಮಯ ಸರಿಹೊಂದಬಹುದು.  ಹಾಗಿದ್ದರೆ ನಿಮ್ಮ ಮಗು ಮೂರರಿಂದ ಆರು ವರ್ಷದವರಾದರೆ ಹೀಗೆ ಕೆಲವು ಟಿಪ್ಸ್ ಪಾಲಿಸಿ ನೋಡಿ. 

ಟೈಮ್ ಟೇಬಲ್ ನಿರ್ಮಿಸಿಕೊಳ್ಳಿ :
ಮಕ್ಕಳನ್ನು ದಿನವಿಡೀ ಬ್ಯುಸಿಯಾಗಿ ಇಡಲು ಒಂದರ ನಂತರ ಒಂದು ಎಂದು ಮೊದಲೇ ಟೈಂಟೇಬಲ್ ಮಾಡಿಕೊಂಡರೆ ಇಬ್ಬರೂ ಕೆಲಸ ಮಾಡುವ ಪೋಷಕರಿಗೆ ಬಹಳ ಅನುಕೂಲವಾಗುತ್ತದೆ. ಪ್ರತಿದಿನ ಈ ಟೈಮ್ ಟೇಬಲ್ ಜೊತೆ ಇರುವುದರಿಂದ ಮಕ್ಕಳಿಗೂ ಒಂದಲ್ಲ ಒಂದು ಟಾಸ್ಕ್ ಆಯ್ಕೆ ಮಾಡಿಕೊಂಡು ತಮ್ಮಷ್ಟಕ್ಕೆ ತಾವೇ ಸ್ವಲ್ಪ ಸಮಯ ಕಳೆಯಲು ಪ್ರಾರಂಭಿಸುತ್ತಾರೆ.
ಮನೆ ಕೆಲಸದಲ್ಲಿ ತೊಡಗಿಸಿ:
ಎಲ್ಲರೂ ಮನೆಯಲ್ಲಿಯೇ ಇದ್ದು ಕೆಲಸಕ್ಕೂ ಯಾರನ್ನೂ ಕರೆಯುವಂತಿಲ್ಲ ಎನ್ನುವ ಇಂತಹ ಸಂದರ್ಭದಲ್ಲಿ  ಮನೆಯ ಕೆಲಸ ಎಂದಿಗಿಂತ ದುಪ್ಪಟ್ಟು . ಮಕ್ಕಳು ಮನೆಯಲ್ಲಿಯೇ ಇರುವುದರಿಂದ ಸಾಕಷ್ಟು ಸಮಯವಿರುತ್ತದೆ , ಮನೆಯಲ್ಲಿ ಮಕ್ಕಳು ಮಾಡಬಹುದಾದ ಸಣ್ಣ ಪುಟ್ಟ ಕೆಲಸಗಳನ್ನು ಮಾಡಿಸಿ.ಉದಾಹರಣೆಗೆ ಬೆಳಗ್ಗೆ ಎದ್ದ ತಕ್ಷಣ ಹಾಸಿಗೆಯನ್ನು ಸರಿಯಾಗಿ ಹಾಸಿಡುವುದು.ವಾಷಿಂಗ್ ಮಷಿನ್ ಗೆ ಕೊಳೆಯಾದ ಬಟ್ಟೆಗಳನ್ನು ತೊಳೆಯಲು ಹಾಕುವುದು, ಬೆಳಗಿನ ತಿಂಡಿ ಊಟಗಳಾದ ತಕ್ಷಣ ಎಲ್ಲಾ ತಟ್ಟೆಗಳನ್ನು ತೆಗೆದುಕೊಂಡು ಹೋಗಿ ಸಿಂಕ್ ಗೆ ಹಾಕುವುದು,ಊಟಕ್ಕೆ ಮೊದಲು ತಟ್ಟೆ , ಲೋಟ ಗಳನ್ನು ತಂದು ತಯಾರುಮಾಡಿಡುವುದು . ಮನೆಯಿಂದಲೇ ಕೆಲಸ ಮಾಡುವ ಅಪ್ಪನಿಗೆ ಅಮ್ಮ ಮಾಡಿಕೊಟ್ಟ ಕಾಫಿ,ಟೀ ಅಥವಾ ಸ್ನಾಕ್ಸ್ ತೆಗೆದುಕೊಂಡು ಹೋಗಿ ನೀಡುವುದು.ಇನ್ನೂ ಆಸಕ್ತಿ ಇದ್ದರೆ ಕಿಟಕಿ ಬಾಗಿಲುಗಳನ್ನು ಒದ್ದೆ ಬಟ್ಟೆಯಲ್ಲಿ ಒರೆಸುವುದು ಹೀಗೆ ಸ್ವಲ್ಪ ಸಮಯವನ್ನು ಮನೆ ಕೆಲಸದಲ್ಲಿ ಕಳೆಯುವಂತೆ ಮಾಡಿ.ಮಕ್ಕಳಿಗೆ ಅಡುಗೆಯಲ್ಲಿ ಆಸಕ್ತಿಯನ್ನು ಕೂಡ ಬೆಳೆಸಬಹುದು ಸರಳವಾದ ಒಲೆಯನ್ನು,ಚಾಕುವನ್ನು ಬಹಳಸದ ಸುಲಭ ವಿಧಾನದ ,ಚಪಾತಿ ಉಂಡೆಗಳನ್ನು ಮಾಡುವುದು ಇನ್ನಿತರ ಕೆಲಸಗಳಿಗೆ ಕೆಲವು ಸಹಾಯವನ್ನು ಮಕ್ಕಳಿಂದ ಮಾಡಿಸಿಕೊಳ್ಳಿ.ತಾವು ಆಟವಾಡಿದ ಅಥವಾ ತಮ್ಮ ರೂಂ ಅನ್ನು ತಾವೇ ಸೇರಿಸಿ ಇಟ್ಟುಕೊಳ್ಳುವುದು. ಎಲ್ಲವನ್ನೂ ಒಂದೇ ದಿನವಲ್ಲದಿದ್ದರೂ ಒಂದೊಂದು ದಿನ ಒಂದೊಂದು ಟಾಸ್ಕ್ ಕೊಟ್ಟು ಸಮಯವನ್ನು ಸದುಪಯೋಗಪಡಿಸಿಕೊಳ್ಳುವಂತೆ ಮಾಡಬಹುದು.ಹೀಗೆ ಅವರು ಹೇಳಿದ್ದನ್ನೆಲ್ಲ ಮಾಡಿದಾಗ ಪ್ರಶಂಸಿಸಿ ಪ್ರೋತ್ಸಾಹಿಸಲು ಮರೆಯಬೇಡಿ.
ಆಟವಾಡಲು ಬಿಡಿ :
ಮಕ್ಕಳನ್ನು ಸ್ವಲ್ಪ ಹೊತ್ತು ಮನೆಯೊಗಳೇ ಅವರಿಷ್ಟದ ಆಟವಾಡಲು ಬಿಡಿ. ಉದಾಹರಣೆಗೆ ಮೂರರಿಂದ ಆರುವರ್ಷದ ಮಕ್ಕಳಿಗೆ ಪಝಲ್ ಗಳನ್ನು ಮಾಡುವುದರಲ್ಲಿ ಅಥವಾ ಲೆಗೋ ಗಳಲ್ಲಿ ವಿವಿಧ ರೀತಿಯ ಮನೆ ಕಟ್ಟುವುದು,ಮನೆಯಲ್ಲಿಯೇ ಪ್ಲೇ ಡೋವ್ ಮಾಡಿ ಅದರಿಂದ ವಿವಿಧ ರೀತಿಯ ತಮಗಿಷ್ಟವಾದ ಪ್ರಾಣಿ, ಅಥವಾ ಶೇಪ್ ಗಳನ್ನು ಮಾಡುವುದು,ಈ ರೀತಿಯ ಆಟಗಳು ಆಸಕ್ತಿಕರವಾಗಿರುತ್ತವೆ. ಅವರಷ್ಟಕ್ಕೆ ಅವರು ಸುಮಾರು ಅರ್ಧ ಮುಕ್ಕಾಲು ಗಂಟೆ ಸಮಯ ಕಳೆಯಲು ಇದು ಸಹಾಯಮಾಡುತ್ತದೆ. ಹೀಗೆ ಮಾಡುವುದರಿಂದ ಮಕ್ಕಳ ಯೋಚನಾಶಕ್ತಿ ಹೆಚ್ಚುತ್ತದೆ ಮತ್ತು ಕ್ರಿಯಾಶೀಲರಾಗಲು ಕೂಡ ಇದು ಸಹಕರಿಸುತ್ತದೆ.ಸಂಜೆಯ ಸಮಯ ಮನೆಯವರೆಲ್ಲರೂ ಕುಳಿತು ಬೋರ್ಡ್ ಗೇಮ್ ಗಳನ್ನಾಡಬಹುದು.ಇದರಿಂದ ಮಕ್ಕಳಿಗೆ ಪೋಷಕರು ತಮ್ಮ ಜೊತೆ ಸಮಯ ಕಳೆಯುತ್ತಿದ್ದಾರೆ ಎಂಬುದು ಸಂತೋಷ ನೀಡುತ್ತದೆ. ಬಹುಶಃ ಈ ರೀತಿ ಪೋಷಕರ ಜೊತೆ ಕಳೆದ ಸಮಯ ಅವರ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿಯಬಹುದು.  
ಅಪಾರ್ಟ್ಮೆಂಟ್ ಗಳಲ್ಲಿ ಏನಿಲ್ಲವೆಂದರೂ ಬಾಲ್ಕನಿ ಅಥವಾ ಯುಟಿಲಿಟಿ ಜಾಗ ಇದ್ದೇ ಇರುತ್ತದೆ. ಮಕ್ಕಳನ್ನು ಬೆಳಗಿನ ಎಳೆ ಬಿಸಿಲಿನಲ್ಲಿ ಅಥವಾ ಸಂಜೆಯ ತಂಗಾಳಿ ಬೀಸುವ ಸೂರ್ಯಾಸ್ತದ ಸಮಯದಲ್ಲಿ ಸ್ವಲ್ಪ ಹೊತ್ತು ಅಲ್ಲಿ ಬಿಡಿ. ಹಾಗೆಯೇ ಕೈಗೊಂದು ಪೆನ್ಸಿಲ್ ಪೇಪರ್ ಕೊಟ್ಟು ತಾವು ಹೊರಗೆ ಏನೆಲ್ಲಾ ನೋಡುತ್ತಿದ್ದಾರೆ ಮತ್ತು ಅದು ಯಾವ ಬಣ್ಣದಲ್ಲಿದೆ ಹೀಗೆ ಎಲ್ಲವನ್ನು ಬರೆಯಲು ಹೇಳಿ.ಹಾಗೆ ಬರೆಯಲು ಇನ್ನೂ ಪ್ರಾರಂಭಿಸಿರದ ಮಕ್ಕಳಿಗೆ ಚಿತ್ರ ಬಿಡಿಸುವ ಪ್ರಯತ್ನ ಮಾಡಲು ಹೇಳಬಹುದು. ಇದರಿಂದ ಮಕ್ಕಳು ಏಕಾಗ್ರತೆ,ಪ್ರಕೃತಿಯ ಬಗ್ಗೆ ಆಸಕ್ತಿ ಮತ್ತು ಕ್ರಿಯಾಶೀಲರಾಗಿ ಯೋಚಿಸುವುದನ್ನು (ಕ್ರಿಯೇಟಿವ್ ಥಿಂಕಿಂಗ್ ) ಬೆಳೆಸಿಕೊಳ್ಳುತ್ತಾರೆ.ಹೊರಗೆ ತಾವು ನೋಡಿದ ಸುಂದರ ದೃಶ್ಯಗಳ ಬಗ್ಗೆ ತಾವೇ ಕಥೆ ಕಟ್ಟಿ ಹೇಳುವಂತೆ ಪ್ರೋತ್ಸಾಹಿಸಿ. ಅಥವಾ ಬೈನಾಕ್ಯೂಲರ್ ಕೊಟ್ಟು ದೂರದ ಪ್ರಕೃತಿ, ಆಕಾಶ, ಹಕ್ಕಿ ಹೀಗೆ ಎಲ್ಲವನ್ನು ನೋಡುತ್ತಾ ಸಮಯ ಕಳೆಯಲು ಸಹಕರಿಸಿ. ರಾತ್ರಿಗಳಲ್ಲಿ ಆಕಾಶ ,ನಕ್ಷತ್ರ ,ಚಂದ್ರ , ಸಪ್ತರ್ಷಿ ಮಂಡಲಗಳನ್ನು ತೋರಿಸಿ ಅಂತರಿಕ್ಷದ  ಬಗ್ಗೆ ತಿಳಿಯುವ ತಿಳಿಯುವ ಕುತೂಹಲ ಹೆಚ್ಚಿಸಿ. ಇದು ಮಗುವಿನ ವಿಕಸನಕ್ಕೂ ಅನುಕೂಲವಾಗುತ್ತದೆ.
  ಚಿತ್ರಕಲೆ  :
ಮಕ್ಕಳಿಗೆ ಬಣ್ಣ ಮತ್ತು ಚಿತ್ರಕಲೆಯಲ್ಲಿ ಆಸಕ್ತಿ ಬೆಳೆಸಿ: ದಿನಕ್ಕೊಂದು ಚಿತ್ರ ಬಿಡಿಸುವುದನ್ನು ಹೇಳಿಕೊಡಿ, ಸರಳವಾಗಿ ತಮಗೆ ಸಾಧ್ಯವಾದ ರೀತಿಯಲ್ಲಿ ಹೇಳಿಕೊಟ್ಟ ಚಿತ್ರ ಬಿಡಿಸಿ ಅದಕ್ಕೆ ಬಣ್ಣ ತುಂಬುವಂತೆ ಮಾಡಿ ಇದರಿಂದ ಮಕ್ಕಳಿಗೆ ಬಣ್ಣಗಳ ಬಗ್ಗೆ ಮಾಹಿತಿ ಮತ್ತು ಆಸಕ್ತಿ ಬೆಳೆಯುತ್ತದೆ. ಸಣ್ಣ ಮಕ್ಕಳಿಗೆ ಸ್ಕ್ರಬ್ ಮಾಡುವುದರಿಂದ ಬೆರಳು ಮತ್ತು ಕೈಯ ಮೇಲೆ ಹಿಡಿತ ಸಿಗುತ್ತದೆ ಇದು ಮುಂದೆ ಅವರ ಅಕ್ಷರ ಸುಂದರವಾಗಲು ಅನುಕೂಲವಾಗುತ್ತದೆ. ಮಕ್ಕಳಲ್ಲಿ ಆತ್ಮವಿಶ್ವಾಸ ಹೆಚ್ಚಲು, ಏಕಾಗ್ರತೆಯನ್ನು ಹೆಚ್ಚಿಸಲು ಅಷ್ಟೇ ಅಲ್ಲ ಮಕ್ಕಳ ಮನಸ್ಸಿನಲ್ಲಿ ಏನಾಗುತ್ತಿದೆ ಎಂಬುದನ್ನು ತಿಳಿದುಕೊಳ್ಳಲು  ಕೂಡ ಡ್ರಾಯಿಂಗ್ ಮತ್ತು ಕಲರಿಂಗ್ ಸಹಕರಿಸುತ್ತದೆ. 
ವಿಶ್ರಾಂತಿಯೂ ಅಷ್ಟೇ ಮುಖ್ಯ :
ಮಧ್ಯಾಹ್ನದ ಸಮಯದಲ್ಲಿ ಮಕ್ಕಳಿಗೆ ವಿಶ್ರಾಂತಿಸಿಗಲಿ ,ಊಟದ ನಂತರ ಸ್ವಲ್ಪ ಹೊತ್ತು ಮಲಗುವಂತೆ ಪ್ರೋತ್ಸಾಹಿಸಿ ಬೆಳೆಯುವ ಮಕ್ಕಳಿಗೆ ಆಟ ಪಾಠದ ಜೊತೆಗೆ ವಿಶ್ರಾಂತಿ ಕೂಡ ಅಷ್ಟೇ ಅವಶ್ಯಕ. ಮಧ್ಯಾನ್ಹ ಒಂದೆರಡು ಗಂಟೆ ಮಲಗಿದರೆ ಮನಸ್ಸು ಉಲ್ಲಾಸಗೊಂಡು ಉತ್ಸಾಹ ಹೆಚ್ಚುತ್ತದೆ. 
ಮಕ್ಕಳ ಮಾನಸಿಕ ಬೆಳವಣಿಗೆಯ ಜೊತೆಗೆ ದೈಹಿಕ ಬೆಳವಣಿಗೆ ಕೂಡ ಮುಖ್ಯವಾಗುತ್ತದೆ ಸಮಯಕ್ಕೆ ಸರಿಯಾಗಿ ಊಟ,ನಿದ್ದೆ ಇವುಗಳ ಜೊತೆಗೆ ದೈಹಿಕ ಶ್ರಮ ಕೂಡ ಬೇಕು. ಸಂಜೆಯ ಸಮಯವನ್ನು ಕುಟುಂಬ ಸಮೇತ ವ್ಯಾಯಾಮ, ಯೋಗ ಇವುಗಳನ್ನು ಮಾಡಿ ಸಮಯ ಕಳೆಯಿರಿ. ದೈಹಿಕ ವ್ಯಾಯಾಮಗಳು ಮಕ್ಕಳ ರಾತ್ರಿ ನಿದ್ದೆಗೆ ಅನುಕೂಲಮಾಡಿಕೊಡುತ್ತದೆ. 
ಹಾಗೆಯೆ ಸಂಜೆಯ ಸಮಯದಲ್ಲಿ ಮಕ್ಕಳಿಗೆ ನೀತಿ ಕಥೆಗಳು , ರಾಮಾಯಣ ಮಹಾಭಾರತ ಕಥೆಗಳು ಇವುಗಳನ್ನು ಹೇಳುವುದನ್ನು ರೂಢಿಸಿಕೊಂಡರೆ ಮಕ್ಕಳಲ್ಲಿ ಸಂಸ್ಕೃತಿಯ ತಿಳಿವು ಹೆಚ್ಚುತ್ತದೆ. ಒಂದು ಅಧ್ಯಯನದ ಪ್ರಕಾರ ಮಕ್ಕಳಿಗೆ ಪ್ರತಿದಿನ ಮಲಗುವ ಮೊದಲು ಹೇಳುವ ಕಥೆ ಅವರ ಮನಸ್ಸಿಗೆ ಪರಿಣಾಮವನ್ನು ಬೀರುತ್ತದೆ ಇದು ಅವರ ಬದುಕನ್ನೇ ಬದಲಿಸಬಹುದು. ಹಾಗೆಯೇ ಪ್ರತಿದಿನ ಒತ್ತಡವನ್ನು ಕಡಿಮೆ ಮಾಡಲು,ಶಾಲೆಗೇ ಹೋಗದ ಮಕ್ಕಳಿಗೆ ಶೈಕ್ಷಣಿಕ ಆಸಕ್ತಿ ಉಳಿಸಲು  ದಿನದ  ಅರ್ಧ ಗಂಟೆ ಕಥೆ ಓದುವುದು,ಹೇಳುವುದು ಮಾಡಿದಲ್ಲಿ ಅವರಲ್ಲಿ ಯೋಚನಾಶಕ್ತಿ,ತಿಳಿವಳಿಕೆ ಹೆಚ್ಚುತ್ತದೆ.ಅಥವಾ ನಿಮ್ಮ ಮಗುವಿಗೆ ಅಕ್ಷರಗಳನ್ನು ಕೂಡಿಸಿ ಓದಲು ಹುರಿದುಂಬಿಸಿ. ಇವೆಲ್ಲವುಗಳನ್ನು ಒಟ್ಟಿಗೆ ಮಾಡಲು ಮಕ್ಕಳಲ್ಲಿ ಒತ್ತಡಹೇರಬೇಕಾಗಿಲ್ಲ. ಮಕ್ಕಳಿಗೆ ಆಯ್ಕೆಯನ್ನು ಕೊಡಿ. ಉದಾಹರಣೆಗೆ ಚಿತ್ರ ಬಿಡಿಸುತ್ತೀಯಾ ಅಥವಾ ನಿನ್ನ ರೂಮ್ ಅನ್ನು ಸೇರಿಸಿ ಇಟ್ಟುಕೊಳ್ಳುತ್ತೀಯ ? ಹೀಗೆ ಅವರಿಗಿಷ್ಟವಾದುದನ್ನು ಆಯ್ದುಕೊಳ್ಳಲು ಬಿಡಿ.
ಈ ಕೊರೋನಾ ಬಂದನಂತರ ಎಲ್ಲವೂ ಆನ್ಲೈನ್ ನಲ್ಲೇ ಆಗಿರುವುದರಿಂದ ಈಗ ಸಂಗೀತ,ಡ್ರಾಯಿಂಗ್, ಮ್ಯೂಸಿಕಲ್ ಇನ್ಸ್ಟ್ರುಮೆಂಟ್ ಇವೆಲ್ಲವುಗಳನ್ನು ಆನ್ಲೈನ್ ನಲ್ಲಿಯೇ ಮನೆಯಲ್ಲಿಯೇ ಕುಳಿತು ಕಲಿಯುವ ಅವಕಾಶವಿದೆ.ಮಕ್ಕಳ ಆಸಕ್ತಿಯನ್ನು ಗಮನಿಸಿ ಅವರಿಷ್ಟದ ಯಾವುದಾದರೂ ಒಂದು ತರಗತಿಯನ್ನು ವಾರದಲ್ಲೆರಡು ದಿನ ಕಲಿಯಲು ಅವಕಾಶ ಒದಗಿಸಿಕೊಟ್ಟಲ್ಲಿ ಮಕ್ಕಳು ಶಾಲೆಗೆ ಹಿಂತಿರುಗುವಷ್ಟರಲ್ಲಿ ಸಾಕಷ್ಟು ಶಿಕ್ಷಿತರಾಗುವುದರಲ್ಲಿ ಅನುಮಾನವಿಲ್ಲ.ಇವೆಲ್ಲದರ ಜೊತೆಗೆ ಮಕ್ಕಳ ಕುತೂಹಲಕ್ಕೆ ಸಣ್ಣಪುಟ್ಟ ಪ್ರಶ್ನೆಗಳಿಗೆ ಸಹನೆ ಕಳೆದುಕೊಳ್ಳದೆ ತಾಳ್ಮೆಯಿಂದ ಉತ್ತರಿಸುವುದು ಕೂಡ ಅಷ್ಟೇ ಮುಖ್ಯ.ನಾಲ್ಕು ಗೋಡೆಯ ಒಳಗೆ ಕುಳಿತಿರುವ ಮಕ್ಕಳ ಮನಸ್ಥಿತಿಯನ್ನು ಅರ್ಥ ಮಾಡಿಕೊಂಡು ಅವರಿಗೆ ಈ ಸಮಯದಲ್ಲಿ ಪ್ರೋತ್ಸಾಹ ,ಉತ್ತೇಜನ ಎಲ್ಲವನ್ನು ಪೋಷಕರೇ ನೀಡಬೇಕಾದ ಅನಿವಾರ್ಯತೆ ಇದೆ ಅಲ್ಲವೇ ?

Arpitha Rao 
Banbury 
United kingdom 

Monday 3 August 2020

ರಕ್ಷಾಬಂಧನದಿಂದ ಬಾಂಧವ್ಯ ಹೆಚ್ಚಲಿ




ಹೆಣ್ಣಿನ ಜನುಮಕ್ಕೆ ಅಣ್ಣ ತಮ್ಮರು ಬೇಕು ಬೆನ್ನು ತಟ್ಟುವರು ಸಭೆಯೊಳಗೆ ' ಹೀಗೊಂದು ಜಾನಪದ ಗೀತೆ ಹಿಂದೆ ಮನೆಮನೆಯ ಹೆಣ್ಣು ಮಕ್ಕಳು ಹಾಡುತ್ತಿದ್ದರು . ಬಹುತೇಕ ಕನ್ನಡಿಗರರಿಗೆ ಇದರ ಬಗ್ಗೆ ಅರಿವಿರದೇ ಇಲ್ಲ. ಹಾಗೆ ಪ್ರತಿಯೊಬ್ಬ ಹೆಣ್ಣು ಮಗಳು ಕೂಡ ತನ್ನ ರಕ್ಷೆಗೆ ಸಹೋದರನಿದ್ದಾನೆ ಎಂದು ಹೆಮ್ಮೆ ಪಡುತ್ತಾಳೆ. ಹಾಗೆಯೆ ಗಂಡಿಗೆ ಛೇಡಿಸಲು ,ಜೊತೆಗೆ ಬೆಳೆಯಲು ಪ್ರೀತಿಯ ತಂಗಿ ತಾಯಿಯಂತಹ ಅಕ್ಕನ ಅವಶ್ಯಕತೆ ಇದೆ. ಇಂತಹ ಒಂದು ಅದ್ಬುತ ಸಂಬಂಧವನ್ನು ಬಿಂಬಿಸುವ ಅದಕ್ಕಾಗಿ ಕೃತಜ್ಞತೆ ತೋರಿಸುವ ಹಬ್ಬವೇ ರಾಖಿ ಹಬ್ಬ ಅಥವಾ ರಕ್ಷಾಬಂಧನ ಎಂದೇ ಕರೆಸಿಕೊಳ್ಳುವ ಸಹೋದರ ಸಹೋದರಿಯರ ಬಾಂಧವ್ಯ ಬೆಸೆಯುವ ಹಬ್ಬ. ರಕ್ಷಾ ಬಂಧನವನ್ನು ರಾಖಿ ಹಬ್ಬ , ರಾಖಿ ಪೂರ್ಣಿಮಾ ಎಂದು ಕೂಡ ಕರೆಯಲಾಗುತ್ತದೆ .

  ಶ್ರಾವಣ ಮಾಸದ ಮೊದಲ ಹುಣ್ಣಿಮೆಯ  ದಿನ ಹಿಂದೂಗಳು ಆಚರಿಸುವ ಈ ಹಬ್ಬ ಭಾರತ ಮತ್ತು ನೇಪಾಳಗಳಲ್ಲಿ ಆಚರಿಸಲಾಗುತ್ತದೆ. ಕೊಲ್ಕತ್ತಾದಲ್ಲಿ ಇದನ್ನು ಹಿಂದೂ ಮುಸ್ಲಿಂಗಳು ಒಬ್ಬರಿಗೊಬ್ಬರು ರಾಖಿ ಕಟ್ಟುವುದರ ಮೂಲಕ ಹಿಂದೂ ಮುಸ್ಲಿಂ ಭಾಯಿ ಭಾಯಿ ಎಂದು ಆಚರಿಸುತ್ತಾರೆ. ಇಂತಹದ್ದೊಂದು ಆಚರಣೆಯನ್ನು ರವೀಂದ್ರನಾಥ್ ಟ್ಯಾಗೋರ್ ಅವರು 1905 ರಲ್ಲಿ ಕೋಲ್ಕತ್ತಾದಲ್ಲಿ ಪ್ರಾರಂಭಿಸಿದರು ಎಂಬುದು ಈಗ ಇತಿಹಾಸ. ರಾಖಿ ಕೇವಲ ಒಡಹುಟ್ಟಿದ ಅಣ್ಣ ತಂಗಿಯ ಮಧ್ಯೆ ಮಾತ್ರವಲ್ಲದೇ ಸಾಕಷ್ಟು ಜನರು ಮನೆಯ ಹೊರಗೆ ಕೂಡ ಸಾಕಷ್ಟು ಅಣ್ಣ ತಮ್ಮಂದಿರನ್ನು ಹುಡುಕಿಕೊಂಡು ರಾಖಿ ಕಟ್ಟಿ ರಕ್ಷಣೆಯ ಭರವಸೆಯನ್ನು ಕಂಡು ಕೊಂಡಿದ್ದಾರೆ.

  ರಕ್ಷಾಬಂಧನದ ದಿನ ಸಹೋದರಿಯರು ತಮ್ಮ ಸಹೋದರಿಗೆ ರಾಖಿಯನ್ನು ಕಟ್ಟಿ ಸಿಹಿ ತಿನಿಸಿ ಸಂಭ್ರಮಿಸಿದರೆ ಸಹೋದರರು ರಾಖಿ ಕಟ್ಟಿದ ತಂಗಿ ಅಥವಾ ಅಕ್ಕಂದಿರಿಗೆ ತಮ್ಮ ಕೈಲಾದ ಉಡುಗೊರೆಯನ್ನು ನೀಡುವುದು ಸಾಮನ್ಯವಾಗಿ ಮೊದಲಿನಿಂದ ನಡೆದುಕೊಂಡು ಬಂದಿರುವ ಹಬ್ಬದ ಪದ್ಧತಿಯಾಗಿದೆ.    
  ಈ ರಾಖಿ ಹಬ್ಬ ಈಗಿನದಲ್ಲ ಪುರಾಣದಿಂದಲೂ ನಡೆದುಕೊಂಡು ಬಂದಿದೆ ಎಂಬುದಕ್ಕೆ ದ್ರೌಪದಿ ಮತ್ತು ಕೃಷ್ಣ ರ ಅಣ್ಣ ತಂಗಿಯ ದ್ರೌಪದಿ ವಸ್ತ್ರಾಪಹರಣವೇ ಸಾಕ್ಷಿ  ಎಂಬುದನ್ನು ತಿಳಿಯದವರಿಲ್ಲ. ದ್ರೌಪದಿಯ ವಸ್ತ್ರಾಪಹರಣ ಮಾಡುವ ಸಂದರ್ಭದಲ್ಲಿ ಆಕೆ ಕೃಷ್ಣನನ್ನು ತನ್ನ ರಕ್ಷಿಸುವಂತೆ ಮೊರೆ ಹೋಗುವುದು ಮತ್ತು ಶ್ರೀ ಕೃಷ್ಣ ಆಕೆಯನ್ನು ರಕ್ಷಿಸುವುದನ್ನು ಕೂಡ ರಕ್ಷಾ ಬಂಧನದ ಸಂಕೇತವಾಗಿ ಪರಿಗಣಿಸಲಾಗಿದೆ.
ಹಾಗೆಯೇ ಇನ್ನೊಂದು ಸಂದರ್ಭದಲ್ಲಿ ಶಿಶುಪಾಲನನ್ನು ಕೊಳ್ಳಲು ಕೃಷ್ಣನು ಸುದರ್ಶನ ಚಕ್ರವನ್ನು ಬೀಸುತ್ತಾನೆ ಆಗ ಕೃಷ್ಣನ ಕೈಬೆರಳಿಗೆ ಸ್ವಲ್ಪ ತಾಗಿ ರಕ್ತ ಸುರಿಯಲಾರಂಭಿಸುತ್ತದೆ ಈ ಸಂದರ್ಭದಲ್ಲಿ ದ್ರೌಪದಿಯು ತನ್ನ ಸೀರೆಯ ಅಂಚನ್ನು ಹರಿದು ಕೃಷ್ಣ ಕೈಬೆರಳಿಗೆ ಸುತ್ತಿ ರಕ್ತ ಸುರಿಯುವುದನ್ನು ನಿಲ್ಲಿಸುತ್ತಾಳೆ. ಹೀಗೆ ರಕ್ಷಾ ಬಂಧನ ಎಂದರೆ ಕೇವಲ ಅಣ್ಣ ತಂಗಿಯನ್ನು ರಕ್ಷಿಸುವುದು ಮಾತ್ರವಲ್ಲ ಸಮಯ ಬಂದಲ್ಲಿ ಸಹೋದರಿಯರು ಕೂಡ ಸಹೋದರರ ಜೊತೆಗೂಡಬೇಕು ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿ ನಿಲ್ಲುತ್ತದೆ.

ಪುರಾಣಗಳಲ್ಲಿ ಮಾತ್ರವಲ್ಲ ಇತಿಹಾಸದಲ್ಲೂ ರಕ್ಷಾಬಂಧನವನ್ನು ಉಪಯೋಗಿಸಿಕೊಂಡ ಉದಾಹರಣೆಗಳು ಉಲ್ಲೇಖವಾಗಿವೆ . ವಿಧವೆಯಾದ ಚಿತ್ತೂರಿನ ರಾಣಿ ಕರ್ಣಾವತಿಯು ತನ್ನ ರಾಜ್ಯವನ್ನು ರಕ್ಷಿಸಿಕೊಳ್ಳಲು ಮೊಘಲರ ರಾಜ ಹುಮಾಯೂನ್ ನಿಗೆ ರಾಖಿಯನ್ನು ಕಳಿಸಿ ರಕ್ಷಣೆಯ ಮೊರೆಹೋಗುತ್ತಾಳೆ ಮತ್ತು ಇದಕ್ಕೆ ಒಪ್ಪಿದ ಹುಮಾಯುನ್ ರಾಣಿ ಕರ್ಣಾವತಿಯ ಬೆಂಬಲಕ್ಕೆ ಬರುತ್ತಾನೆ ಎಂಬುದು ಇತಿಹಾಸದಲ್ಲೂ ದಾಖಲಿಸಲಾಗಿದೆ.   
ಭಾರತದಾದ್ಯಂತ ಸಂಭ್ರಮದಿಂದ ಆಚರಿಸುವ ಈ ಹಬ್ಬ ಹೊರ ದೇಶಗಳಲ್ಲಿ ಕೂಡ ಭಾರತೀಯರು ತಪ್ಪದೆ ಆಚರಿಸುತ್ತಾರೆ. ಇತ್ತೀಚಿನ ದಿನಗಳಲ್ಲಿ ರಾಖಿಯನ್ನು ಆನ್ಲೈನ್ ಮೂಲಕ ಸ್ವಂತ ಅಣ್ಣ ತಮ್ಮಂದಿರಿಗೆ ಮನೆಗೇ ಕಳಿಸುವ ಅವಕಾಶವಿದೆ. ಅಷ್ಟೇ ಅಲ್ಲದೆ ರಾಖಿಯನ್ನು ಚಿಕ್ಕ ಮಕ್ಕಳು ಕೂಡ ಆಚರಿಸಿ ನಮ್ಮ ಸಂಪ್ರದಾಯವನ್ನು ಮುಂದುವರಿಸುತ್ತಿದ್ದಾರೆ. 

ಈಗಂತೂ ರಾಖಿ ಹಲವಾರು ಬಗೆಗಳಲ್ಲಿ ಲಭ್ಯ. ಚಿಕ್ಕ ಮಕ್ಕಳು ಒಬ್ಬರಿಗೊಬ್ಬರು ರಾಖಿ ಕಟ್ಟಿ ಸಂತೋಷ ಪಡಲು ಕಾರ್ಟೂನ್ ಗಳನ್ನು ಒಳಗೊಂಡ ರಾಖಿಗಳು , ಹಾಗೆಯೇ  ಪರಿಸರಕ್ಕೆ ಹೊರೆಯಾಗದಂತ ಭೂಮಿಯಲ್ಲಿ ಕರಗುವ ಪರಿಸರಸ್ನೇಹಿ ರಾಖಿಗಳು , ಪೊಂ ಪೊಂ ರಾಖಿ , ವುಲ್ಲನ್ ನಲ್ಲಿ , ಬಟ್ಟೆಯಲ್ಲಿ ಮಾಡಿದ ರಾಖಿಗಳು , ಇನ್ನು ಫೋಟೋ ರಾಖಿಗಳು , ಸಂಗೀತ ಹೊಮ್ಮಿಸುವ ರಾಖಿಗಳು . ಅಷ್ಟೇ ಏಕೆ ಬ್ರೇಸ್ ಲೈಟ್ ನಂತಹ ಬಂಗಾರ ಬೆಳ್ಳಿಗಳ್ಲಲೂ ಕೂಡ ರಾಖಿ ಮಾಡಿಸಿ ಕೊಡಬಹುದು.

ಹೀಗೆ ರಾಖಿ ಪೂರ್ಣಿಮೆಗೆ ತನ್ನದೇ ಆದ ವಿಶೇಷತೆ ಇದೆ . ಇದೇ ಆಗಸ್ಟ್ ಮೂರರಂದು ರಾಖಿ ಹಬ್ಬ . ಕರೋನದಿಂದಾಗಿ ತವರೂರಿಗೆ ಹೋಗಲಾರದಿದ್ದರೇನಂತೆ ಈಗಂತೂ ಆನ್ಲೈನ್ ವ್ಯಯಸ್ಥೆ ಇದೆ . ಇನ್ನೇಕೆ  ತಡ ಈಗಲೇ ನಿಮ್ಮ ಸಹೋದರರಿಗೆ ರಾಖಿ ಕಳಿಸಿ ಸಂಭ್ರಮ ಆಚರಿಸಿ. 


Arpitha Rao 
Banbury 

United kingdom 

Tuesday 28 July 2020

ಕರ್ನಾಟಕದಲ್ಲಿ ನಾಗರಪಂಚಮಿ

Published in Omanase Magazine http://www.omanase.com/nagara-panchami-festival/



ಕೋವಿಡ್ ನಿಂದಾಗಿ ಇಂದು ಎಲ್ಲವೂ ಡಿಜಿಟಲ್ ಮಾಯವಾಗಿದೆ.ಮನೆಯಿಂದ ಹೊರಗೆ ಹೋಗುವಂತಿಲ್ಲ ಇನ್ನು ವಿದೇಶದಲ್ಲಿರುವವರು ಕೇವಲ ಫೋನ್ ಮೂಲಕ ವಿಚಾರ ವಿನಿಮಯ ಮಾಡಿಕೊಳ್ಳುವುದು ಮೊದಲಿನಿಂದಲೂ ಅನಿವಾರ್ಯವಾದರೆ ಈಗ ಭಾರತದ ಎಲ್ಲೆಡೆಗಳಲ್ಲಿ ಕೇವಲ ಫೋನ್ ಅನಿವಾರ್ಯವಾಗಿದೆ .ಹಾಗೆ ಅಮ್ಮನಿಗೆ ಫೋನ್ ಮಾಡಿದಾಗ ಶನಿವಾರ ನಾಗಪಂಚಮಿ ಹಬ್ಬ ಎನ್ನುವುದು ತಿಳಿಯಿತು .ನಾಗರಪಂಚಮಿ ಎಂದರೆ ಹಬ್ಬದ ಹಳೆಯ ನೆನಪುಗಳು. ಚಿಕ್ಕವರಿರುವಾಗ ಹಬ್ಬಗಳೆಂದರೆ ಮನೆಯಲ್ಲಿ ಸಡಗರ ಸಂಭ್ರಮ. ವಿದೇಶಗಳಲ್ಲಿ ದೀಪಾವಳಿ ಇನ್ನಿತರ ಹಬ್ಬವನ್ನು ಆಚರಿಸಿದರೂ ನಾಗರ ಪಂಚಮಿ ಆಚರಿಸುವುದು ಕನಸೇ ಸರಿ.

ಕರ್ನಾಟಕದಲ್ಲಿ ನಾಗರಪಂಚಮಿ ಎಂದರೆ ವಿಶೇಷ .ಅದರಲ್ಲೂ  ಹೆಣ್ಣು ಮಕ್ಕಳೆಲ್ಲ ಸೇರಿ ಹೊಸ ಬಟ್ಟೆ ಹಾಕಿ,ಹೂವು ಮುಡಿದು,ಅಲಂಕಾರ ಮಾಡಿಕೊಂಡು ತಟ್ಟೆಯಲ್ಲಿ ಹಾಲು, ನೀರು ,ಅರಿಶಿನ ಎಲ್ಲವನ್ನು ಹಿಡಿದುಕೊಂಡು ನಾಗಪ್ಪನಿಗೆ ತಣಿ ಎರೆಯಲು ನಾಗರಕಲ್ಲಿಗೆ ಹೋಗುವುದು ಸಾಮಾನ್ಯವಾಗಿ  ಮಲೆನಾಡಿನ ಭಾಗಗಳಲ್ಲಿ ನಾಗಪಂಚಮಿ ದಿನಗಳಲ್ಲಿ ಕಾಣುವ  ದೃಶ್ಯ.
ಮಲೆನಾಡು ಭಾಗಗಳಲ್ಲಿ ನಾಗರಪಂಚಮಿಯನ್ನು ಹೆಣ್ಣು ಮಕ್ಕಳ ಹಬ್ಬ ಎಂದೇ ಪರಿಗಣಿಸುತ್ತಾರೆ.ಹೆಣ್ಣು ಮಕ್ಕಳು ಅಲಂಕಾರ ಮಾಡಿಕೊಂಡು ನಾಗರ ಕಲ್ಲಿಗೆ ತಣಿ ಹಾಲು ಎರೆದು  ಪೂಜಿಸುವುದು ಇದರ ವಿಶೇಷತೆ.ನಾಗರ ಪಂಚಮಿ ಹಬ್ಬದಂದು ನಾಗಪ್ಪ ಅಥವಾ ನಾಗರ ಕಲ್ಲುಗಳನ್ನು ಹೆಚ್ಚಾಗಿ ಅರಿಶಿನ ಬಳಿದು, ಹಾಲು ಎರೆದು, ಹೂವಿನ ಹಾರ ಏರಿಸಿ ಪೂಜಿಸುವುದು ರೂಡಿ .ಕೆಲ ಭಾಗಗಳಲ್ಲಿ ಪ್ರತಿ ಹಳ್ಳಿಗೆ ಒಂದು ಅಥವಾ ಕೆಲವೊಮ್ಮೆ ಮನೆಯ ಹಿಂಬಾಗಗಳಲ್ಲಿ,ತೋಟಗಳಲ್ಲಿ ಹೀಗೆ ನಾಗರ ಕಲ್ಲು ಅಥವಾ ಹುತ್ತಗಳು ಸಾಮಾನ್ಯವಾಗಿ ಇರುವುದು ವಿಶೇಷ .ಇನ್ನು ಹಬ್ಬ ಎಂದರೆ ಪೂಜೆಯ ಸಂಭ್ರಮದ ಜೊತೆಗೆ ವಿವಿಧ ಅಡುಗೆಗಳನ್ನು ತಯಾರಿಸುವುದು,ಸಿಹಿ ಖಾದ್ಯಗಳನ್ನು ಮಾಡುವುದು ಭಾರತದ ಎಲ್ಲೆಡೆಗಳಲ್ಲಿ ವಿಶೇಷವಾಗಿ ನಡೆಯುವುದು ಸರ್ವೇ  ಸಾಮಾನ್ಯ .ನಾಗರ ಪಂಚಮಿ ಎಂದರೆ ನಾಗಪ್ಪನಿಗೆ ಪ್ರಿಯವಾದ ಚಪ್ಪೆ ದೋಸೆ ಮತ್ತು ಎಳ್ಳು,ಅರಳು,ಶೇಂಗಾ ಹೀಗೆ ವಿವಿಧ ರೀತಿಯ ಉಂಡೆಗಳನ್ನು ಮಾಡಲಾಗುತ್ತದೆ.ಮಲೆನಾಡಿನ ಇನ್ನು ಕೆಲವು ಭಾಗಗಳಲ್ಲಿ ನಾಗರ ಪಂಚಮಿ ಹಬ್ಬದ ದಿನದಂದು ಅರಿಶಿನದ ಎಲೆಗಳಲ್ಲಿ ಸುತ್ತಿ ಕಡುಬು ಮಾಡಲಾಗುತ್ತದೆ.


ಅದರ ಜೊತೆಗೆ ನಾಗರ ಪಂಚಮಿ ಹಬ್ಬಕ್ಕೆ ಹೆಣ್ಣು ಮಕ್ಕಳು ತಮ್ಮ ತವರಿಗೆ ಹೋಗುವ ಪದ್ಧತಿ ಮೊದಲಿನಿಂದ ನಡೆದುಕೊಂಡು ಬಂದಿದೆ. ನಾಗರ ಪಂಚಮಿ ಹಬ್ಬ ಹತ್ತಿರ ಬರುತ್ತಿದ್ದಂತೆ ಅಣ್ಣ ಅಥವಾ ತಮ್ಮಂದಿರು ಹೋಗಿ ತಮ್ಮ ಸಹೋದರಿಯನ್ನು ಮನೆಗೆ ಬರಲು ಆಹ್ವಾನಿಸುವುದು ಮೊದಲಿನಿಂದ ನಡೆದುಕೊಂಡು ಬಂದಿದೆ. ಆದ್ದರಿಂದಲೇ ಇದನ್ನು ಹೆಣ್ಣು ಮಕ್ಕಳ ಹಬ್ಬ ಎನ್ನಲಾಗುತ್ತದೆ .


ಈ ಬಾರಿ ಕೋವಿಡ್ ನಿಂದಾಗಿ ಎಲ್ಲೆಡೆಗಳಲ್ಲಿ ಹಬ್ಬವನ್ನು ಸರಳವಾಗಿ ಆಚರಿಸಲಾಗುತ್ತದೆ.  ಆದಷ್ಟು ಬೇಗ ಕರೋನ ಹಾವಳಿ ಕಡಿಮೆಯಾದಲ್ಲಿ ಮುಂಬರುವ ಹಬ್ಬವನ್ನು ಮೊದಲಿನಂತೆ ಆಚರಿಸಬಹುದು ಎಂಬುದೊಂದೇ ಆಶಯ. 

Arpitha Rao
Banbury
United kingdom 

Sunday 12 July 2020

ಕೊರೋನಾ ಲೊಕ್ಡೌನ್ ನಂತರದ ಇಂಗ್ಲೆಂಡ್

Published in OManase Magazine http://www.omanase.com/?p=4052





ನೆಗಡಿ ,ವಿಪರೀತ ಸುಸ್ತು , ಜ್ವರ, ಏದುಸಿರು ತುಂಬಿದ ಸತತ ಕೆಮ್ಮು ಹೀಗೊಂದಿಷ್ಟು ಲಕ್ಷಣಗಳೊಂದಿಗೆ ಕೊರೊನ ಎಂಬ ಹೊಸದಾದ ವೈರಸ್ ಬಂದು ಅರ್ಧದಷ್ಟು ಜನರ ಜೀವವನ್ನೇ ತೆಗೆಯುತ್ತದೆ ಎಂದು ಪ್ರಪಂಚಕ್ಕೆ ತಿಳಿಯುವಷ್ಟರಲ್ಲಿ ಅದೆಷ್ಟೋ ಜನ ಆಗಲೇ ಸತ್ತಾಗಿತ್ತು . ಸ್ವಲ್ಪ ತಡವಾಗಿ ಇದು ಯು , ಕೆ ಗೆ ಬಂದರೂ ಕೂಡ ಇಂಗ್ಲೆಂಡ್ ಜನರಿಗೆ ತಿಳಿದು  ಇದಾಗಲೇ ನಾಲ್ಕು  ತಿಂಗಳುಗಳೇ ಕಳೆದುಹೋಯಿತು . ಫೆಬ್ರವರಿಯ ಕೊನೆಯಲ್ಲಿ ವ್ಯಾಪಕವಾಗಿ ಹರಡಲು ಪ್ರಾರಂಭವಾದ ಈ ವೈರಸ್ ವುಹಾನ್ ಎಂಬಲ್ಲಿ ಸೃಷ್ಟಿಯಾಗಿ ಅದಾಗಲೇ ೩ ತಿಂಗಳ ಮೇಲಾಗಿತ್ತು .ತಕ್ಷಣಕ್ಕೆ ಏನು ನಿರ್ಧಾರ ತೆಗೆದುಕೊಳ್ಳುವ ಸ್ಥಿತಿಯಲ್ಲಿಲ್ಲದ ಸರ್ಕಾರ ಕೊನೆಗೆ ಲಾಕ್ ಡೌನ್ ಮಾಡುವ ವೇಳೆಗಾಗಲೇ ವೈರಸ್ ಹರಡುವಿಕೆ ವ್ಯಾಪಕವಾಗಿ ಯುಕೆ ಯಲ್ಲಿ ಇದರ ಸಂಖ್ಯೆ ಐವತ್ತು ಸಾವಿರವಾಗಿತ್ತು. ಲಕ್ಷವನ್ನು ದಾಟಿ ಸರಿಸುಮಾರು ಮೂರೂವರೆ  ಲಕ್ಷ ಜನರಿಗೆ ಕೊರೋನಾ ಪಾಸಿಟಿವ್ ಬಂದು ಆಸ್ಪತ್ರೆ ಸೇರಿದರೆ ಅದೆಷ್ಟೋ ಮಂದಿ  ಮನೆಮದ್ದಿನಲ್ಲಿಯೇ ಕಡಿಮೆ ಮಾಡಿಕೊಂಡವರೂ ಇದ್ದಾರೆ.ಅಂತವರ ಸಂಖ್ಯೆ ಯಾರಿಗೂ ಲೆಕ್ಕಕ್ಕೇ ಸಿಗಲಿಲ್ಲ .ಇಂತದ್ದೊಂದು ವೈರಸ್ ಬಂದು ಅತಿವೇಗವಾಗಿ ನಡೆಯುತ್ತಿದ್ದ ಪ್ರಪಂಚವನ್ನು ನಿಲ್ಲಿಸಿ ವ್ಯಾಪಕವಾಗಿ ಹರಡಿ ಸುಮಾರು ಆರು ತಿಂಗಳಲ್ಲಿ ಐದು ಲಕ್ಷದಷ್ಟು ಜನರನ್ನು ಸಾಯಿಸಿದೆ ಮತ್ತು ಇನ್ನೂ ಹರಡುತ್ತಲೇ ,ಸಾವಿನ ಸಂಖ್ಯೆ ಕೂಡ ದಿನದಿಂದ ದಿನಕ್ಕೆ ಏರುತ್ತಲೇ ಇದೆ ಎಂಬುದು ನಿಜಕ್ಕೂ ಭಯ ಹುಟ್ಟಿಸುವಂತದ್ದು . ಇದಕ್ಕೆ ಎಂದು ಕೊನೆ ಎಂಬುದಕ್ಕೆ ಬಹುಶಃ ಯಾರಲ್ಲೂ ಇನ್ನೂ ಉತ್ತರವಿಲ್ಲ . ಯುಕೆ ಯಲ್ಲಿ ಆರಂಭದಲ್ಲಿ ಸಣ್ಣ ಪ್ರಮಾಣದ ಕೋವಿಡ್ ಲಕ್ಷಣಗಳಿದ್ದಲ್ಲಿ ಮನೆಯಲ್ಲಿಯೇ ಇರಬೇಕು ಮತ್ತು ಯಾವುದೇ ಕಾರಣಕ್ಕೂ ಮನೆ ಬಿಟ್ಟು ಹೊರ ಬರಕೂಡದು ಎಂಬುದನ್ನು ಸರ್ಕಾರವೇ ನಿರ್ಧರಿಸಿ ಜನರಿಗೆ ತಿಳಿಹೇಳಿತ್ತು. ಹಾಗಾಗಿಯೇ ಸಾಕಷ್ಟು ಜನರಿಗೆ ಕಾಣಿಸಿಕೊಂಡ ಸಣ್ಣ ಪ್ರಮಾಣದ ಕೊರೋನಾವನ್ನು ಮನೆಯಲ್ಲಿಯೇ ಐಸೋಲೇಷನ್ ಮಾಡುವುದರ ಮೂಲಕ ಕೆಲವು ಮಂದಿ ಗುಣಮುಖರಾಗಿದ್ದಾರೆ.ನಂತರದ ದಿನಗಳಲ್ಲಿ ಟೆಸ್ಟ್ ಮಾಡುವ ಸಂಖ್ಯೆ ಮತ್ತು ವೆಂಟಿಲೇಟರ್ ಎಲ್ಲವುಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಒದಗಿಸುವ ಪ್ರಯತ್ನವನ್ನು ಸರ್ಕಾರ ಮತ್ತು ಇಲ್ಲಿ ನ್ಯಾಷನಲ್ ಹೆಲ್ತ್ ಸರ್ವಿಸ್ ಗಳು ಮಾಡಿವೆ. ಎಂಟು ವಾರಗಳವರೆಗೆ ಲಾಕ್ ಡೌನ್ ಜಾರಿಗೆ ತಂದು ಅಗತ್ಯವಿದ್ದರೆ ಮಾತ್ರ ಹೊರಬರಬೇಕು ಎಂದು ಸರ್ಕಾರ ಜಾರಿ ತಂದ ವಿಷಯ ಈಗ ಹಳೆಯದು.

ಈಗಾಗಲೇ ಇಂಗ್ಲೆಂಡ್ ನಲ್ಲಿ ಪ್ರಾಥಮಿಕ ಶಾಲೆಗಳನ್ನು  ಅಂದರೆ ನರ್ಸರಿ , ರೆಸೆಪ್ ಷನ್ ಮತ್ತು ಒಂದು ,ಆರನೇ ತರಗತಿಯನ್ನು ತೆರೆದಿದ್ದು  ಮಕ್ಕಳು ಆಗಲೇ ಆರನೇ ವಾರವನ್ನು ಯಾವುದೇ ತೊಂದರೆಯಿಲ್ಲದೆ ಯಶಸ್ವಿಯಾಗಿ ಮುಗಿಸುತ್ತಿದ್ದಾರೆ .ಆದರೆ ಎಲ್ಲಾ ಮಕ್ಕಳು ಶಾಲೆಗೆ ಹಾಜರಾಗಬೇಕು ಎಂಬುದನ್ನು ಕಡ್ಡಾಯಗೊಳಿಸದೆ ಪೋಷಕರ ಆಯ್ಕೆಗೆ ಬಿಟ್ಟಿದ್ದಾರೆ . ಇನ್ನೊಂದು ವಾರವನ್ನು ಮುಗಿಸಿದರೆ ಜುಲೈ ಇಪ್ಪತ್ತರಿಂದ  ಆಗಸ್ಟ್ ಕೊನೆಯವರೆಗೆ ಬೇಸಿಗೆ ರಜೆ ಇರುವುದರಿಂದ ಮಕ್ಕಳಿಗೆ ಮಧ್ಯದಲ್ಲಿ ಬಿಡುವು ಕೂಡ ಸಿಗುತ್ತದೆ. ಈ ಸಮಯದಲ್ಲಿ ಶಾಲೆಗಳನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಿ ಹೊಸದಾಗಿ ತಯಾರಿ ನಡೆಸಿ  ಸೆಪ್ಟೆಂಬರ್ ನಿಂದ ಎಲ್ಲಾ ತರಗತಿಗಳನ್ನು ತೆರೆದು ಮೊದಲಿನಂತೆ ಶಾಲೆಗಳನ್ನು ನಡೆಸುವ ಎಲ್ಲಾ ಪ್ರಯತ್ನ ನಡೆಯುತ್ತಿದೆ ಮತ್ತು ಶಾಲೆಗೆ  ಪ್ರತಿಯೊಬ್ಬ ವಿದ್ಯಾರ್ಥಿ ಹಾಜರಿರುವುದು ಖಡ್ಡಾಯ ಒಂದು ವೇಳೆ ಹಾಜರಾಗದಿದ್ದರೆ ಅದಕ್ಕೆ ಸೂಕ್ತ ಕಾರಣ ನೀಡಲೇಬೇಕು ಎಂದು ಸರ್ಕಾರ ನಿರ್ಧರಿಸಿದೆ. 

ಇನ್ನು ಕೋವಿಡ್ ಪಾಸಿಟಿವ್ ಸಂಖ್ಯೆ ಸಾಕಷ್ಟು ಕಡಿಮೆಯಾಗಿದ್ದು ದಿನಕ್ಕೆ ಸಾವಿರದ ಆಸುಪಾಸು ಮತ್ತು ಸಾವಿನ ಸಂಖ್ಯೆ ಕೂಡ  ಹೆಚ್ಚು ಕಡಿಮೆ ನೂರರ ಸಂಖ್ಯೆಯಲ್ಲಿ ಕಾಣಿಸಿಕೊಳ್ಳುತ್ತಿರುವುದು ಇನ್ನೂ ದಿನದಿಂದ ದಿನಕ್ಕೆ ಸುಧಾರಿಸುತ್ತಿರುವುದು ಜೊತೆಗೆ ಆಕ್ಸ್ಫರ್ಡ್ ವಿಶ್ವವಿಧ್ಯಾಲಯ ವ್ಯಾಕ್ಸಿನೇಷನ್ ಪ್ರಯೋಗ ಪ್ರಾರಂಭಿಸುವ ಯೋಜನೆಯಲ್ಲಿರುವುದು ಒಂದು ರೀತಿ ಜನರಲ್ಲಿ ಭರವಸೆಯನ್ನು ತಂದಿದೆ.

ಮನೆಯಿಂದ ಕೆಲಸ ಮಾಡಲು ಅವಕಾಶವಿಲ್ಲದ ಎಲ್ಲಾ ಕಂಪನಿಗಳು ಕೂಡ ಮೊದಲಿನಂತೆ ಕೆಲಸಕ್ಕೆ ಸಜ್ಜಾಗಿವೆ . ಅಗತ್ಯ ಕ್ರಮಗಳನ್ನು ಕೈಗೊಂಡಿದೆ. ಸಾಕಷ್ಟು ಜನರು ಕೆಲಸಕ್ಕೆ ಹಿಂದಿರುಗಿದ್ದಾರೆ. ಹಾಗೆಯೇ ಜುಲೈ ನಾಲ್ಕರಿಂದ ಪಬ್ , ಮಾಲ್ ಮತ್ತು ಹೇರ್ ಸಲೂನ್ ,ಬ್ಯೂಟಿ ಪಾರ್ಲರ್ ಮತ್ತು ಥೀಮ್ ಪಾರ್ಕ್,ರೆಸ್ಟೋರೆಂಟ್  ಗಳನ್ನೂ ಯುನೈಟೆಡ್ ಕಿಂಗ್ಡಮ್ ನ ಎಲ್ಲೆಡೆಗಳಲ್ಲಿ ತೆರೆಯಲಾಗಿದೆ. ಪಬ್ ಗಳಲ್ಲಿ ಮೊದಲಿನಂತೆ ಜನ ದಟ್ಟಣೆ ಇಲ್ಲದಿದ್ದರೂ ಕೂಡ ಸಾಕಷ್ಟು ಜನರು ಈಗಾಗಲೇ ಮೊದಲಿನಂತೆ ಪಬ್ ಗಳಿಗೆ ಪುನರಾರಂಭಿಸಿದ್ದಾರೆ. ಅಲ್ಲಿಯೂ ಕೂಡ ಕ್ಯೂನಲ್ಲಿ ನಿಂತು ತೆಗೆದುಕೊಳ್ಳುವುದು ಮತ್ತು ಹ್ಯಾಂಡ್ ಸ್ಯಾನಿಟೈಸರ್ ಒದಗಿಸುವುದು ಜೊತೆಗೆ ಗ್ರಾಹಕರ ಸಂಪೂರ್ಣ ವಿಳಾಸವನ್ನು ಕೂಡ ತೆಗೆದುಕೊಳ್ಳಲಾಗುತ್ತಿದೆ. ಅವಶ್ಯಕತೆ ಬಂದರೆ ಅಂದರೆ ಯಾವುದಾದರೂ  ಪಾಸಿಟಿವ್  ಕೇಸ್ ಬಂದಲ್ಲಿ ಟ್ರೇಸ್ ಮಾಡಲು ಅನುಕೂಲವಾಗಲು ಈ ವಿಧಾನವನ್ನು ಕಡ್ಡಾಯ ಮಾಡಲಾಗಿದೆ. ಇನ್ನು ಥೀಮ್ ಪಾರ್ಕ್ ಗಳಲ್ಲಿ ಪ್ರತಿ ರೈಡ್ ನಲ್ಲಿ ಕೇವಲ ಒಂದು ಕುಟುಂಬದವರು ಅಥವಾ ಒಂದು ಎರಡು ಜನರನ್ನು ಮಾತ್ರ ಕೂರಿಸಲಾಗುತ್ತಿದೆ . ಪ್ರತಿಭಾರಿ ರೈಡ್ ಮುಗಿಯುತ್ತಿದ್ದಂತೆ ಅಗತ್ಯಕ್ಕೆ ತಕ್ಕಂತೆ ಸೀಟ್ ಗಳನ್ನೂ ಸಂಪೂರ್ಣವಾಗಿ ಸ್ವಚ್ಛಗೊಳಿಸಿಯೇ ಮುಂದಿನ ಆಟ , ಜೊತೆಗೆ ಪ್ರತಿಯೊಬ್ಬರೂ ಮಾಸ್ಕ ಧರಿಸುವುದು ಕಡ್ಡಾಯ ಮಾಡಲಾಗಿದೆ .ಸಾರ್ವಜನಿಕ ಬಸ್ ಮತ್ತು ರೈಲಿನಲ್ಲಿ ಪ್ರಯಾಣಿಸುವವರು ಕೂಡ ಮಾಸ್ಕ ಧರಿಸುವುದು ಮತ್ತು ತಮ್ಮ ಕಾಳಜಿಯಲ್ಲಿ ತಾವಿರುವುದು ಕಡ್ಡಾಯ . ಹೀಗೆ ಸಾಕಷ್ಟು ಎಚ್ಚರಿಕೆಯನ್ನು ತೆಗೆದುಕೊಂಡ ನಂತರ ಜನಜೀವನ ಸಂಪೂರ್ಣ ಅಲ್ಲದಿದ್ದರೂ ಕೂಡ ಶೇಖಡಾ 8೦ ರಷ್ಟು ಮೊದಲಿನಂತೆಯೇ ನಡೆಯುತ್ತಿದೆ.ಸಾವಿನ ಸಂಖ್ಯೆ ಮತ್ತು ಪಾಸಿಟಿವ್ ನ ಸಂಖ್ಯೆ ಬಹಳಷ್ಟು ಇಳಿಮುಖವಾಗಿರುವುದರಿಂದ ಜನರೂ ಕೂಡ ನಾಲ್ಕು ತಿಂಗಳ ನಂತರ ಹೊರಹೊರಟಿದ್ದಾರೆ. ಹಾಗಾಗಿ ಪಾರ್ಕ್ ಗಳಲ್ಲಿ , ಸಲೂನ್ , ಸೂಪರ್ ಮಾರ್ಕೆಟ್ ಹೀಗೆ ಎಲ್ಲೆಡೆ ಜನರನ್ನು ಕಾಣಬಹುದು .ಹೊರಗೆ ಹೋಗುವ ಅನಿವಾರ್ಯತೆ ಇಲ್ಲದವರು ಆದಷ್ಟು ಮನೆಯಲ್ಲಿಯೇ ಇರಬೇಕಾಗಿ ಕೂಡ ಕೇಳಿಕೊಳ್ಳಲಾಗಿದೆ.

ಅರ್ಪಿತಾ ರಾವ್
ಬ್ಯಾನ್ಬರಿ
ಯುನೈಟೆಡ್ ಕಿಂಗ್ಡಮ್ 

Monday 22 June 2020

ಅಪ್ಪನಿಗೊಂದು ಪತ್ರ

Published in Omanase 22/06/2020 http://www.omanase.com/?p=3848


ಇನ್ನೇನು ಭಾನುವಾರ ಅಪ್ಪಂದಿರ ದಿನ ಬಂದೆ ಬಿಟ್ಟಿತು. ಅಪ್ಪಂದಿರ ದಿನ ಮಾತ್ರವಲ್ಲ ಅಪ್ಪ ಪ್ರತಿದಿನ ಸಾಕಷ್ಟು ಕಾರಣಗಳಿಗೆ ನೆನಪಾಗುತ್ತಾನೆ. ಅಪ್ಪ ಎಂದರೆ ಸಮುದ್ರದಷ್ಟು ವಿಸ್ತಾರ .ಕೇವಲ ಪದಗಳಲ್ಲಿ ಬರೆದು  ಮುಗಿಸಬಹುದಾದ ಬಾಂಧವ್ಯವಲ್ಲ .ಅಪ್ಪನ ಬಗ್ಗೆ ಬರೆದಷ್ಟೂ ಮುಗಿಯದಷ್ಟು, ನೆನಪಿಸಿದಷ್ಟೂ ವಿಸ್ತಾರವಾಗುವ ಸಾಕಷ್ಟು ವಿಷಯಗಳಿವೆ. ಹೀಗೆ ಅಪ್ಪನ ಬಗ್ಗೆ ಬರೆಯಬೇಕು ಎಂದಾಗಲೆಲ್ಲಾ ಸೋತಿದ್ದೇನೆ ,ಪದಗಳು ಸಿಗದೇ ಅಥವಾ ಸಿಕ್ಕ ಪದಗಳು ಸರಿಯಾಗಿ ಹೊಂದದೇ ಹೀಗೆ ಅದೆಷ್ಟೋ ಭಾರಿ ಬರೆಯ ಹೊರಟದ್ದೊಂದು ಆಗಿದ್ದು ಇನ್ನೊಂದು .  
ಆದರೂ ಈ ಅಪ್ಪಂದಿರ ದಿನಕ್ಕೆ ಅಪ್ಪನಿಗೊಂದು ಶುಭಾಶಯವನ್ನು ದೂರದಲ್ಲಿ ಕೂತು ಹೀಗೆ ತಲುಪಿಸುವ ಆಕಾಂಕ್ಷೆ ನನ್ನದು.
ಚಿಕ್ಕ ಮಕ್ಕಳಿಗೆ ತನ್ನ  ಜೊತೆಗೆ ಕಳೆದ ದಿನಗಳು ನೆನಪಿನಲ್ಲಿ ಬಹಳಷ್ಟು ಉಳಿಯುತ್ತವೆ ಮತ್ತು ಹಾಗೆ ಜೊತೆಗೆ ಕಳೆದವರ ಅನುಕರಣೆ ಬೆಳೆಯುತ್ತಾ ಮನಸ್ಸಿನಲ್ಲಿ ಉಳಿದು ಅವರಂತೆಯೇ ಆಗುವ ಪ್ರಯತ್ನ ಮಕ್ಕಳಲ್ಲಿ ಬೆಳೆಯುತ್ತದೆ. ಹಾಗೆ ಅಪ್ಪ ತಾನೇ ಉದಾಹರಣೆಯಾಗಿ ನಿಂತು ತಿದ್ದಿ ತೀಡಿದ್ದು ನನಗೊಂದು ಮಗುವಾಗುವವರೆಗೆ  ಅರಿವಿಗೇ ಬಂದಿರಲಿಲ್ಲ. ಇಂದು ಕುಳಿತು ಹಿಂತಿರುಗಿ ನೋಡಿದರೆ ಅಪ್ಪನಂತೆ ಬದುಕಬೇಕು ಎಂಬಷ್ಟು ಅಪ್ಪ ನನ್ನನ್ನು ಆವರಿಸಿಕೊಂಡಿದ್ದಾನೆ .ಹಾಗೆ ಮಗಳನ್ನು ಮಾತ್ರವಲ್ಲ ಅಳಿಯ ,ಮೊಮ್ಮಗನು ಕೂಡ ದಿನಕ್ಕೆರಡು ಬಾರಿ ನೆನಪಿಸಿಕೊಳ್ಳುವಂತೆ ಬದುಕುತ್ತಿರುವ ಅಪ್ಪ ಒಂದು ಮಾದರಿ ಎಂದೇ ಹೇಳಬಹುದು.
ಚಿಕ್ಕಂದಿನಿಂದ ನನ್ನ ಓದು ಮುಗಿಸಿ ಮದುವೆಯಾಗುವವರೆಗೆ ಅಪ್ಪನೊಂದಿಗೇ ದಿನದ ಬಹುಪಾಲು ಕಳೆದ ನನಗೆ ಇಂದಿಗೂ ಕಾಡುವುದು ಅಪ್ಪನ ತಾಳ್ಮೆ . ಅದೆಷ್ಟು ತಾಳ್ಮೆ ಎಂದರೆ ಬಹುಶಃ ಅಪ್ಪ ತನ್ನ ಸಹನೆಯನ್ನು ಕಳೆದುಕೊಂಡ ದಿನವನ್ನು ನಾನೆಂದೂ ನೋಡಿಯೇ ಇಲ್ಲ ,ಅಪ್ಪ ಎಂದ ತಕ್ಷಣ ನೆನಪಿಗೆ ಬರುವುದು ಆತನ ಸಹನೆ ಮತ್ತು ಭರಪೂರ ಕಾಳಜಿ ತುಂಬಿದ ಮಾದರಿ ಬದುಕು.
ತನಗಿಲ್ಲದಿದ್ದರೂ ಮಕ್ಕಳಿಗೋಸ್ಕರ ಏನನ್ನಾದರೂ ತಂದು ಕೊಟ್ಟು ಸಾಕಿ ಸಲಹಿದ ಅಪ್ಪನಲ್ಲಿರುವ ತಾಳ್ಮೆ ಈಗಲೂ ನನ್ನನ್ನು ಚಕಿತಗೊಳಿಸುತ್ತದೆ . ತನ್ನ ಜೀವಮಾನದಲ್ಲೆಂದೂ ತಾಳ್ಮೆ ಕಳೆದುಕೊಂಡು ಯಾರಿಗಾದರೂ ರೇಗಿದ್ದನ್ನು ಇಂದಿನವರೆಗೂ ನಾನು ಕಂಡದ್ದಿಲ್ಲ. ಚಿಕ್ಕಂದಿನಿಂದಲೂ ಕಣ್ಣಲ್ಲಿ ಕಣ್ಣಿಟ್ಟು ಸಾಕಿದ್ದ ಅಪ್ಪನಿಂದ ಬಹುದೂರದ ದೇಶಕ್ಕೆ ಬಂದು ಆಗಲೇ ಹತ್ತು ವರ್ಷಗಳಾಗುತ್ತಾ ಬಂತು .ಇಂದಿಗೂ ವರ್ಷಕ್ಕೊಮ್ಮೆ ಊರಿಗೆ ಹೋಗಿ ಹಿಂದಿರುಗುವಾಗ ಅಪ್ಪ ಕೈ ಹಿಡಿದು ಹಾಕುವ ಕಣ್ಣೀರು ಮನಸ್ಸಿಗೆ ಸಂಕಟ ತರುತ್ತದೆ .ರಾಜಕೀಯ ,ಬ್ಯಾಂಕ್ ,ಬರವಣಿಗೆ ಹೀಗೆ ಸಾಕಷ್ಟು ವಿಷಯಗಳ ಬಗ್ಗೆ ನನ್ನೊಂದಿಗೆ ಪ್ರತಿಭಾರಿ ಚರ್ಚಿಸುವ ಅಪ್ಪ ಸಂಬಂಧಗಳ ಬಗ್ಗೆ ಮತ್ತು ಅದನ್ನು ಅಷ್ಟೇ ನಾಜೂಕಾಗಿ ನಿಭಾಯಿಸುವ ಬಗ್ಗೆ ಸಣ್ಣದೊಂದು ಸುಳಿವು ,ಭರವಸೆ ನೀಡಿ ಸಂತೈಸುವ ಬಗೆ ಕೂಡ ಸಾಕಷ್ಟು ಭಾರಿ ಸಂತಸ ನೀಡಿದೆ. ಎಷ್ಟೋ ಬಾರಿ ಯೋಚಿಸಿದಾಗ ಅನ್ನಿಸುವುದು  ಅಪ್ಪನೇ ಒಂದು ತವರು . ಅಪ್ಪನಿಗೆ ಅಪ್ಪಂದಿರ ದಿನದ ಶುಭಾಶಯಗಳು ದೂರದೂರಿಂದ !!

ಅರ್ಪಿತಾ ರಾವ್
ಬ್ಯಾನ್ಬರಿ
ಯುನೈಟೆಡ್ ಕಿಂಗ್ಡಮ್ 

Saturday 6 June 2020

ಶಾಲೆ ಶುರು ಮಾಡಿದ್ರೆ ಸುರಕ್ಷಿತ ಕ್ರಮಗಳೇನಿರಬೇಕು?

Published in OMANASE 6/6/2020    http://www.omanase.com/?p=3710


ವಿಶ್ವದಾದ್ಯಂತ ಕರೋನ ವೈರಸ್ ಹರಡಿ ಕೆಲವೊಂದಿಷ್ಟು ಜನರನ್ನು ನರಳಿಸಿ ಇನ್ನು ಕೆಲವರನ್ನು ತನ್ನೊಂದಿಗೆ ಕರೆದುಕೊಂಡು ಹೋಗುತ್ತಿರುವುದು ಎಲ್ಲರಿಗೂ ಗೊತ್ತೇ ಇದೆ. ಹಾಗೆಯೇ ಯುನೈಟೆಡ್ ಕಿಂಗ್ಡಮ್ ನಲ್ಲಿ ಕರೋನ ವೈರಸ್ ನಿಂದಾಗಿ ಕೆಲವೊಂದಿಷ್ಟು ಜನ ಸಣ್ಣ ಪ್ರಮಾಣದಲ್ಲಾದ್ದರಿಂದ  ಮನೆಯಲ್ಲಿಯೇ ಅನುಭವಿಸಿ, ಸುಮಾರು ಎರಡು ಲಕ್ಷಕ್ಕೂ ಹೆಚ್ಚು ಜನ ಆಸ್ಪತ್ರೆ ಸೇರಿ, ಇನ್ನು  ಸಾವಿನ ಸಂಖ್ಯೆ ಐವತ್ತು ಸಾವಿರವನ್ನೂ ದಾಟಿರುವುದು ಖೇದವೇ ಸರಿ.  ಹೀಗಿರುವಾಗ ಇಲ್ಲಿನ ಸರ್ಕಾರ ಶಾಲೆಗಳನ್ನು ತೆರೆಯುವ ಯೋಚನೆ ಮಾಡಿದಾಗ ಜನಸಾಮಾನ್ಯರು ಆತಂಕಕ್ಕೆ ಒಳಗಾಗದಿರಲು ಸಾಧ್ಯವೇ ? ವೇಲ್ಸ್ ಮತ್ತು ಸ್ಕಾಟ್ಲೆಂಡ್ ನಲ್ಲಿ ಹಲವೆಡೆ ಸೆಪ್ಟೆಂಬರ್ ನಲ್ಲಿ ಎಂದಿನಂತೆ ಪ್ರಾರಂಭವಾಗುತ್ತದೆ ಎನ್ನಲಾಗಿದೆ . ಇನ್ನು ಕೆಲವು ಭಾಗಗಳಲ್ಲಿ ಕರೋನ ಸಂಖ್ಯೆ ಅಧಿಕವಿರುವುದರಿಂದ ಆ ಪ್ರಾಂತ್ಯದ ಶಾಲೆಯನ್ನು ತೆರೆದಿರುವುದಿಲ್ಲ .ಆದರೆ ಇಂತಹ ಸಮಯದಲ್ಲೂ ಕೂಡ ಇಲ್ಲಿನ ಶಾಲೆಗಳು ಪ್ರಾರಂಭವಾಗಿದೆ ಮತ್ತು ಯಶಸ್ವಿಯಾಗಿ ನಡೆದುಕೊಂಡು ಬರುತ್ತಿವೆ .ಹೌದು ಇಂಗ್ಲೆಂಡ್ ನಲ್ಲಿ ಸಾಕಷ್ಟು ಶಾಲೆಗಳನ್ನು ಜೂನ್ ಒಂದರಿಂದ ತೆರೆಯಲಾಗಿದೆ .ಇಂಗ್ಲೆಂಡ್ ನಲ್ಲಿ ಆರು ವಾರಗಳ ಕಾಲ ಶಾಲಾಕಾಲೇಜುಗಳನ್ನು ಸಂಪೂರ್ಣವಾಗಿ ಮುಚ್ಚಲಾಗಿತ್ತು .ಹಾಗೆ ಶಾಲೆಗಳು ಪ್ರಾರಂಭವಾಗುತ್ತವೆ ಎಂಬುದು ತಿಳಿಯುತ್ತಿದಂತೆ ಅನೇಕ ಪೋಷಕರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ ಕೂಡ. ಸಾಕಷ್ಟು ಜನರು ತಮ್ಮ ಮಕ್ಕಳನ್ನು ಮನೆಯಲ್ಲಿಯೇ ಇಟ್ಟುಕೊಂಡಿದ್ದಾರೆ. ಲಂಡನ್ ನಂತ ಸಿಟಿಯಲ್ಲಿರುವವರಿಗೆ ಅಲ್ಲಿನ ಕರೋನ ಆರ್ಭಟ ನೋಡಿ ಇತ್ತ ಮನೆಯಲ್ಲಿ ಎಷ್ಟು ದಿನ ಆನ್ಲೈನ್ ಪಾಠ ಮಾಡುವುದು ಎಂಬುದರ ಬಗ್ಗೆ ಗೊಂದಲ ಅತ್ತ ಶಾಲೆಗೆ ಕಳಿಸಲೂ ಭಯ . ಹೀಗಿರುವ ಪರಿಸ್ಥಿತಿಯಲ್ಲಿಯೇ ಇಲ್ಲಿನ ಸರ್ಕಾರ ಪ್ರಿ ಸ್ಕೂಲ್, ರಿಸೆಪ್ಶನ್ (೪-೫ ವರ್ಷದ ಮಕ್ಕಳು ), ಒಂದನೇ ತರಗತಿ ಮತ್ತು ಆರನೇ ತರಗತಿ ಮಕ್ಕಳಿಗೆ ಶಾಲೆಯನ್ನು ಪುನರಾರಂಭಿಸಿದೆ.ಆದರೆ ಪ್ರತಿ ಶಾಲೆಯನ್ನು ತೆರೆಯುವ ಮುನ್ನ ಕರೋನ ಮಕ್ಕಳ ಹತ್ತಿರ ಕೂಡ ಬಾರದಿರಲು ಎಷ್ಟು ಬೇಕೋ ಅಷ್ಟು  ಕಾಳಜಿಯನ್ನು ತೆಗೆದುಕೊಂಡಿದ್ದಾರೆ ಎಂಬುದನ್ನು ನಿಜಕ್ಕೂ ಮೆಚ್ಚಲೇಬೇಕು. ಇದಕ್ಕೂ ಮೀರಿ ಕರೋನ ಶಾಲೆಯ ಒಳಗೆ ಬರುವ ಸಾಧ್ಯತೆ ಬಹಳ ಕಡಿಮೆ ಎಂಬುದು ಕೂಲಂಕುಷವಾಗಿ ನೋಡಿದ ನನ್ನ ಅಭಿಪ್ರಾಯ.  ಹಾಗಾದರೆ ಕರೋನ ಹರಡದಂತೆ ಶಾಲೆ ತೆಗೆದುಕೊಂಡಿರುವ ವ್ಯಯಸ್ಥೆ ಏನು ಎಂಬುದನ್ನು ನೋಡೋಣ .

ಶಾಲೆ ಪ್ರಾರಂಭವಾಗುವ ಮೊದಲೇ ಪ್ರತಿ ಪೋಷಕರಿಗೆ ಮಕ್ಕಳನ್ನು ಸರಿಯಾದ ರೀತಿಯಲ್ಲಿ ತಯಾರು ಮಾಡುವಂತೆ ತಿಳಿಸಲಾಗಿದೆ. ಶಾಲೆಗೆ ಬರುವಾಗ ಕೇವಲ ಅಗತ್ಯವಿರುವ ಬಟ್ಟೆ ಧರಿಸಬೇಕು , ಅಂದರೆ ಟೈ , ಕೋಟ್ ಇವುಗಳ ಅಗತ್ಯವಿಲ್ಲ .ಬುಕ್ ಬ್ಯಾಗ್ ತರುವ ಅವಶ್ಯಕತೆ ಇಲ್ಲ,ಮಕ್ಕಳಿಗೆ ಕಲಿಸಬೇಕಾದ ಮಾಥ್ಸ್ ,ಇಂಗ್ಲಿಷ್ ,ಫೌಂಡೇಶನ್ , ಕ್ರಾಫ್ಟ್ಸ್ ಇವುಗಳಿಗೆ ಅಗತ್ಯ ಸಾಮಗ್ರಿಗಳನ್ನು ಅಲ್ಲಿಯೇ ನೀಡಲಾಗುತ್ತದೆ ಮತ್ತು ಇವುಗಳನ್ನು ಪ್ರಿಂಟೌಟ್ ಮೂಲಕ ಮನೆಗೆ ಕಳಿಸಲಾಗುತ್ತದೆ, ಮತ್ತು ಮಕ್ಕಳಿಗೆ ಒಬ್ಬರನ್ನೊಬ್ಬರು ಮುಟ್ಟದಿರುವಂತೆ , ಅಪ್ಪಿಕೊಳ್ಳದಿರುವಂತೆ ಸಲಹೆಗಳನ್ನು ಆಗಾಗ ಕೈ ತೊಳೆದುಕೊಳ್ಳಬೇಕು ಎಂಬುದರ ಬಗ್ಗೆ ಪೋಷಕರೇ ಮೊದಲು ಮನೆಯಲ್ಲಿಯೇ ಸಾಕಷ್ಟು ಬಾರಿ ತಿಳಿ ಹೇಳಿರಬೇಕು. ಶಾಲೆಗೆ ಹೋಗಲು ಪ್ರತಿ ಮಗುವಿಗೆ ಪ್ರತ್ಯೇಕ ಸಮಯ ಮತ್ತು ಸಂಜೆ ಕರೆದುಕೊಂಡು ಬರಲು ಕೂಡ ಪ್ರತ್ಯೇಕ ಸಮಯ . ಪ್ರತಿಯೊಬ್ಬ ಪೋಷಕರೂ ತಮಗೆ  ನಿಗದಿಪಡಿಸಿದ ಆ ಐದು ನಿಮಿಷದ ಸಮಯದಲ್ಲೇ ಮಗುವನ್ನು ಶಾಲೆಯ ಗೇಟ್ ಒಳಗೆ ಬಿಡಬೇಕು ಮತ್ತು ಪ್ರತಿದಿನ ತಮಗೆ ನೀಡಲಾದ ಪ್ರತ್ಯೇಕ ಸಮಯದಲ್ಲೇ  ಕರೆದುಕೊಂಡು ಬರಬೇಕು.ಶಾಲೆಯ ಪ್ರವೇಶಕ್ಕೆ ಒಂದು ಗೇಟ್ ನಿಗದಿಪಡಿಸಲಾಗಿದೆ ಮತ್ತು ಹೊರಬರಲು ಇನ್ನೊಂದು ಗೇಟ್ .ಹೀಗೆ ಮಾಡಿರುವುದರಿಂದ ಪೋಷಕರು ಕೂಡ ಬೇರೆಯ ಪೋಷಕರನ್ನು ಭೇಟಿಯಾಗುವ ಸಂದರ್ಭವಿಲ್ಲ ಮತ್ತು ಸಾಮಾಜಿಕ ಅಂತರಕ್ಕೆ ತೊಂದರಿಯಾಗುತ್ತಿಲ್ಲ.
ಪ್ರತಿದಿನ ಶಾಲೆಗೆ  ಪ್ರವೇಶಿಸುತ್ತಿದ್ದಂತೆ ಮಗುವಿನ ಟೆಂಪರೇಚರ್ ನೋಡಲಾಗುತ್ತದೆ.ನಂತರ ಕೈಯನ್ನು ಸ್ನಾನಿಟೈಸರ್ ಬಳಸಿ ತೊಳೆದುಕೊಂಡು ಒಳ ಹೋಗಬೇಕು . ಉಳಿದಂತೆ ಮಕ್ಕಳನ್ನು ಸ್ವಾಗತಿಸಲು ಎಂದಿನಂತೆ ಶಿಕ್ಷಕರೊಬ್ಬರು ಹೊರಗೆ ನಿಂತು ಮಕ್ಕಳನ್ನು ಆಹ್ವಾನಿಸಲಾಗುತ್ತದೆ .
ಇನ್ನು ಶಾಲೆಯ ಒಳಭಾಗದ ಬಗ್ಗೆ ಹೇಳುವುದಾದರೆ ಆರು ಅಡಿ ಅಂತರದಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಗೂ ಒಂದೊಂದು ಡೆಸ್ಕ್ ನೀಡಲಾಗಿದೆ . ಅವರಿಗೆ ಬೇಕಾದ ಕ್ರಾಫ್ಟ್ ಸಲಕರಣೆಗಳನ್ನು , ಪೆನ್ಸಿಲ್ , ನೋಟ್ ಬುಕ್ ಗಳನ್ನೂ ಪ್ರತ್ಯೇಕವಾಗಿ ಆ ಡೆಸ್ಕ್ ನಲ್ಲೇ ಇರಿಸಲಾಗುತ್ತದೆ .ಇಲ್ಲಿ ಈಗ ಬೇಸಿಗೆಯಾದ್ದರಿಂದ ಮಕ್ಕಳನ್ನು ಹೆಚ್ಚಿನ ಸಮಯ ಹೊರಗೆ ಹದವಾದ ಬಿಸಿಲಿನಲ್ಲಿ ಬೇರೆಬೇರೆ ರೀತಿಯ ದೈಹಿಕ ವ್ಯಾಯಾಮ , ಆಟಗಳನ್ನು ಆಡಿಸಲಾಗುತ್ತದೆ . ಹೀಗೆ ಮಾಡುವುದರಿಂದ ಮಕ್ಕಳು ಒಬ್ಬರನ್ನೊಬ್ಬರು ಮುಟ್ಟುವುದಿಲ್ಲ ಮತ್ತು ಒಂದೇ ವಸ್ತುವನ್ನು ಹಂಚಿಕೊಳ್ಳುವ ಅವಶ್ಯಕತೆ ಇರುವುದಿಲ್ಲ . ಮತ್ತು ಶಾಲೆಯ ಸಾಕಷ್ಟು ಕಡೆಗಳಲ್ಲಿ ಮಕ್ಕಳಿಗೆ ಕೈ ತೊಳೆಯಲು ನೆನಪಿಸುವಂತೆ ಆಕರ್ಷಕ ಚಿತ್ರಗಳನ್ನು ಕೂಡ ಹಾಕಿದ್ದಾರೆ . ಹಾಗೆಯೇ ಪ್ರತಿಯೊಬ್ಬರಿಗೂ  ಹ್ಯಾಂಡ್ ವಾಶ್ ಬಳಸಿ ಕೈಯನ್ನು ಹೇಗೆ ಸ್ವಚ್ಚಗೊಳಿಸಬೇಕು ಎಂಬುದನ್ನು ತಿಳಿಸಲಾಗಿದೆ.

ಪ್ರತಿಯೊಂದು ತರಗತಿಯಲ್ಲಿ ಕೇವಲ ಹದಿನೈದು ಮಕ್ಕಳು ಮಾತ್ರ ಮತ್ತು ಯಾವುದೇ ರೀತಿಯ ತಂಡಿ ,ಕೆಮ್ಮು,ಜ್ವರ,ಸುಸ್ತು ಇವುಗಳು ಕಾಣಿಸಿಕೊಂಡರೆ ತಕ್ಷಣ ಶಾಲೆಗೆ ಕಳಿಸುವುದನ್ನು ನಿಲ್ಲಿಸಬೇಕು. ಕೇವಲ ಮಕ್ಕಳಿಗೆ ಮಾತ್ರವಲ್ಲ ಮನೆಯಲ್ಲಿ ಇತರರಿಗೆ ಈ ಲಕ್ಷಣಗಳಿದ್ದಲ್ಲಿ ಮಕ್ಕಳನ್ನು ಶಾಲೆಗೆ ಕಳಿಸುವಂತಿಲ್ಲ .
ಇಷ್ಟೆಲ್ಲದರ ನಂತರ ಪೋಷಕರೂ ಕೂಡ ಮನೆಗೆ ಕರೆದುಕೊಂಡು ಬಂದ ತಕ್ಷಣ ಮಕ್ಕಳು ಹಾಕಿಕೊಂಡ ಬಟ್ಟೆ ತೊಳೆಯಲು ಹಾಕಬೇಕು ಮತ್ತು ತಕ್ಷಣ ಸ್ನಾನ ಮಾಡಿಸಿಯೇ ಮನೆ ಒಳಗೆ ಕರೆದುಕೊಂಡು ಬರಬೇಕು .ಇಷ್ಟು ಕಾಳಜಿಯನ್ನು ತೆಗೆದುಕೊಂಡಲ್ಲಿ ಕರೋನ ಬರುವ ಸಾಧ್ಯತೆ ಖಂಡಿತ ಶೇಖಡಾ ೯೦ ರಷ್ಟು ಕಡಿಮೆ ಇರುತ್ತದೆ .
ಇಂತಹದೊಂದು ಸಂಪೂರ್ಣ ಯೋಜನೆಯನ್ನು ಹಾಕಿಕೊಂಡ ನಂತರವೇ ಶಾಲೆಯನ್ನು ತೆರೆಯುವ ನಿರ್ಧಾರವನ್ನು ಮಾಡಿದ ಸರ್ಕಾರ ಮತ್ತು ಅದಕ್ಕೆ ತಕ್ಕದಾಗಿ ಪ್ರತಿ ಶಿಕ್ಷಕರು ಮಕ್ಕಳನ್ನು ಕಾಳಜಿ ತೆಗೆದುಕೊಳ್ಳುವ  ಶ್ರಮ ನೋಡಿದರೆ ನಿಜಕ್ಕೂ ಶ್ಲಾಘನೀಯ . 

Arpitha Rao 
Banbury 

United KIngdom 

ದೇವರ ನಾಡು ಪ್ರಕೃತಿಯ ಬೀಡು

ಕಳೆದ ಬಾರಿ ಯುನೈಟೆಡ್ ಕಿಂಗಡಮ್  ಇಂದ ಭಾರತಕ್ಕೆ ಭೇಟಿ ನೀಡಿದಾಗ ಹೊರದೇಶಗಳನ್ನೆಲ್ಲಾ ಆಗಾಗ ಸುತ್ತುವ ನಾವು ನಮ್ಮ ದೇಶದ ಅಲ್ಲೇ ಹತ್ತಿರದಲ್ಲೇ ಇರುವ ವಿದೇಶಿಗರೆಲ್ಲ ವರ್ಷಪೂರ್ತಿ ಬಂದು ನೋಡುವ ಮತ್ತು ಕೊಂಡಾಡುವ ಕೇರಳಕ್ಕೆ ಹೋಗಬೇಕು ಎಂದು ನಿರ್ಧರಿಸಿ ಅದರಂತೆ ಒಂದು ವಾರದ ಮಟ್ಟಿಗೆ ನಮ್ಮ ಕುಟುಂಬ ಕೇರಳಕ್ಕೆ ಪ್ರಯಾಣ ಬೆಳೆಸಿದ್ದೆವು. ಅದರ ಬಗ್ಗೆ ಹಂಚಿಕೊಳ್ಳದಿದ್ದಲ್ಲಿ ಏನೋ ಒಂದು ರೀತಿಯ ವಿಷಾದತೆ ಕೊನೆಯವರೆಗೂ ಉಳಿದುಬಿಡಬಹುದು ಎಂದು ಇಲ್ಲಿ ನಮ್ಮ ಕೇರಳದ ಪ್ರವಾಸದ ಬಗ್ಗೆ ಹಚ್ಚಿಕೊಳ್ಳಲು ಈ ಬರಹ.  ನಮ್ಮ ಪ್ರವಾಸ ಒಂದು ವಾರದ ಮಟ್ಟಿಗಾದ್ದರಿಂದ ಆದಷ್ಟು ಕೇರಳದ ಉತ್ತರ ಭಾಗದ ಪ್ರಸಿದ್ಧ ಸ್ಥಳಗಳನ್ನು ನೋಡಿ ಬರಬೇಕು ಎಂದು ಮೊದಲೇ ತಯಾರಿ ನಡೆಸಿದ್ದೆವು.
ಅದಕ್ಕಾಗಿ ಏನೆಲ್ಲಾ ಅವಶ್ಯಕತೆ ಇದೆ ಮತ್ತು ಜೊತೆಗೆ ಮೂರು ವರ್ಷದ ಮಗನೂ  ಇರುವುದರಿಂದ ಅವನ ಸಂತೋಷಕ್ಕಾಗಿ ಕೂಡ ಏನೆಲ್ಲಾ ಮಾಡಬಹದು ಎಲ್ಲೆಲ್ಲಾ ಸುತ್ತಬಹುದು ಹೀಗೆ ಎಲ್ಲಾ ರೀತಿಯ ಪಟ್ಟಿ ಬೆಳೆಯುತ್ತಲೇ ಹೋಗಿತ್ತು.








ಹಾಗೆ ನಾವು ಒಂದು ವಾರದಲ್ಲಿ ನೋಡಲು ನಿರ್ಧರಿಸಿದ್ದು ಕೊಚ್ಚಿ , ಎರ್ನಾಕುಲಂ ತಾಲೂಕಿನಲ್ಲಿರುವ ಅಲ್ಲೆಪ್ಪಿ , ಅಂಬಾಲಾಪುರ , ಕುಮಾರಕೋಮ್ ಜೊತೆಗೆ ಹಿಂತಿರುಗಿ  ಬರುವಾಗ ಮುನ್ನಾರ್ ಮೂಲಕ ಸೇಲಂ ತಲುಪಿ ಬೆಂಗಳೂರು ಸೇರಿಕೊಳ್ಳುವುದು. 
ಮೊದಲು ನಾವು ಹೊರಟಿದ್ದು ಬೆಂಗಳೂರಿನಿಂದ ಪಾಲಕ್ಕಾಡ್ ಹಾದು ಕೊಚ್ಚಿಯನ್ನು ತಲುಪುವುದು.  ಕಾರಿನಲ್ಲಿ ಸುಮಾರು ಏಳು ತಾಸಿನ ಪ್ರಯಾಣವಾದ್ದರಿಂದ ಬೆಳಗಿನ ಜಾವ ಐದು ಗಂಟೆಗೆಲ್ಲ ಮನೆಯಿಂದ ಹೊರಬಿದ್ದಿದ್ದೆವು.  ಹಾಗೆ ದಾರಿಯಲ್ಲಿ ಹೋಗುವಾಗ ಸಿಗುವ ಶಿವಳ್ಳಿಯಲ್ಲಿ ಬೆಳಗಿನ ರುಚಿಕರವಾದ ತಿಂಡಿಯನ್ನು ಸವಿದು ಪಾಲಕ್ಕಾಡ್ ಕೋಟೆ ತಲುಪುವಷ್ಟರಲ್ಲಿ ಮಟಮಟ ಮಧ್ಯಾನ್ಹ ಒಂದು ಗಂಟೆ . 
  ಪಾಲಕ್ಕಾಡ್ ಕೋಟೆ  
ಡಿಸೆಂಬರ್ ತಿಂಗಳಾದರೂ ಕೂಡ ಕೇರಳದಲ್ಲಿ ಸುಮಾರು ಮೂವತ್ತು ಡಿಗ್ರಿ ಸೆಲ್ಸಿಯಸ್ ನಷ್ಟು ಬಿಸಿ ಧಗೆ. ಆದರೆ ಅಲ್ಲಿ ಹೋಗಿ ನೋಡಿದರೆ ಕೋಟೆಯ ಸುತ್ತಲೂ ನೀರು ಒಳಗೆ ಹಸಿರು ಜೊತೆಗೆ ಅಲ್ಲಲ್ಲಿ ಕುಳಿತುಕೊಳ್ಳಲು ನೆರಳು ನೀಡುವ ದೊಡ್ಡ ಆಲದ ಮರಗಳು ಪ್ರಯಾಣದ ಆಯಾಸವನ್ನೇ ಮರೆಸಿ ಹೊಸ ಸ್ಥಳವನ್ನು ನೋಡಬೇಕೆಂಬ ಹುಮ್ಮಸ್ಸನ್ನು ಇನ್ನಷ್ಟು ಹೆಚ್ಚಿಸಿತ್ತು. 
ಸುತ್ತಲೂ ನೀರಿನ ಕೊಳ  ಒಳಗೆ ಹೋದರೆ ಎಲ್ಲೆಡೆ ಹಸಿರು ಜೊತೆಗೆ ಈ ಕೋಟೆಯ ಪ್ರವೇಶ ದ್ವಾರದಲ್ಲಿ ಹನುಮಂತನ ದೇವಾಲಯ ಕೂಡ ಇರುವುದು ವಿಶೇಷ. ಪುರಾತನ ಕಾಲದಿಂದಲೂ ಇದ್ದ ಈ ಕೋಟೆ ಹೈದರಾಲಿಯ ಕಾಲದಲ್ಲಿ ಪುನರ್ನಿರ್ಮಾಣ ಪಡೆಯಿತು ಎನ್ನಲಾಗಿದೆ. ಈ ಕೋಟೆಯ ಒಳಭಾಗದಲ್ಲೇ ಮಕ್ಕಳ ಆಡುವ ಸ್ಥಳ ಮತ್ತು ಪಾರ್ಕ್  , ಕ್ರಿಕೆಟ್ ಮೈದಾನ ಮತ್ತು ರಪ್ಪಾಡಿ ಎಂದು ಕರೆಯಲ್ಪಡುವ ಆಡಿಟೋರಿಯಂ ಕೂಡ ಕಂಡುಬರುತ್ತದೆ. 

ಸುಮಾರು ಒಂದು ಗಂಟೆ ಸಮಯದಲ್ಲಿ ಕೋಟೆಯನ್ನು ನೋಡಿ ಅಲ್ಲಿಂದ ನಮ್ಮ ಪ್ರಯಾಣ ನಾವು ಉಳಿದುಕೊಳ್ಳಲು ಮುಂಗಡವಾಗಿ ಕಾಯ್ದಿರಿಸಿದ್ದ ಹೋಮ್ ಸ್ಟೇ ಗೆ.  ಕೇರಳದ ಹೋಮ್ ಸ್ಟೇ ಒಂದು ವಿಶೇಷ ಅನುಭವ ಅಲ್ಲಿನ ರುಚಿರುಚಿಯಾದ ಖಾದ್ಯಗಳನ್ನು ತಿನ್ನಬೇಕೆಂದರೆ ಹೋಟೆಲ್ ಕ್ಕಿಂತ ಹೋಂ ಸ್ಟೇ ಒಳ್ಳೆಯದು ಜೊತೆಗೆ ಪ್ರಕೃತಿಯ ಮಡಿಲಲ್ಲೇ ಸಮಯ ಕಳೆಯಬಹುದಾದ್ದರಿಂದ ಮನಸ್ಸಿಗೂ ನೆಮ್ಮದಿ ನೀಡುತ್ತದೆ. ನಾವು ಎನ್ರಾಕುಲಂ ತಾಲೂಕಿನ ಕೊಚ್ಚಿ ಯಿಂದ ಸುಮಾರು ಅರ್ಧ ಗಂಟೆ ಪ್ರಯಾಣದಲ್ಲಿರುವ ಕಿತೋ ಸ್ ಹೋಂ ಸ್ಟೇ ನಲ್ಲಿ ಉಳಿದುಕೊಂಡಿದ್ದೆವು, ಒಂದು ಸಣ್ಣ ಕುಟುಂಬ ಉಳಿದುಕೊಳ್ಳಲು ಬೇಕಾಗುವ ಎಲ್ಲಾ ವ್ಯಯಸ್ಥೆಯನ್ನು ಒಂದೇ ಪ್ರತ್ಯೇಕ ಮನೆಯ ರೀತಿಯಲ್ಲಿ ಮಾಡಿಟ್ಟು ಇರುವಷ್ಟು ದಿನವೂ ಬೆಳಗಿನ ಉಪಹಾರ ಮತ್ತು ಊಟದ ವ್ಯವಸ್ಥೆ  ಮಾಡಲಾಗಿತ್ತು. ಆ ದಿನ ರಾತ್ರಿ ಕೇರಳ ಶೈಲಿಯ ಶುದ್ಧ ಸಸ್ಯಾಹಾರಿ ಊಟ ಸವಿದು ಮಲಗಿ ಬೆಳಗ್ಗೆ ಆರು ಗಂಟೆಗೆಲ್ಲ ಏಳುವಾಗ ಪ್ರಯಾಣದ ಸುಸ್ತು ಸ್ವಲ್ಪವೂ ಕಾಣಿಸಿಕೊಳ್ಳದಂತೆ ಮಾಯವಾಗಿತ್ತು. ಬೆಳಗ್ಗಿನ ತಿಂಡಿಗೆ ಕೇರಳದ ಶೈಲಿಯ ಕ್ಯಾರೆಟ್ ಪುಟ್ಟು , ಅದರ ರುಚಿಯನ್ನು ಪದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ ಅಪ್ಪಟ ಮಲೆಯಾಳಿ ಮನೆಯಲ್ಲಿಯೇ ತಿಂದು ನೋಡಬೇಕು ಅಷ್ಟು ಅದ್ಬುತವಾದ ತಿಂಡಿ ಅದು .  ಅದೊಂದೇ ಅಲ್ಲ ಇದ್ದ ಒಂದು ವಾರವೆಲ್ಲ ತಾರಾನುವಾರಿ ಅಡುಗೆ ಕೊಡುತ್ತಿದ್ದರು ಅದರ ಬಗ್ಗೆ ಪ್ರತ್ಯೇಕವಾಗಿ ಒಂದು ಸರಣಿಯನ್ನೇ ಬರೆದುಬಿಡಬಹುದು ಅಷ್ಟು ಅದ್ಬುತ .
ನಂತರ ನಾವು ನಮ್ಮ ಪ್ರಯಾಣವನ್ನು ಆ ದಿನ  ತಯಾರಾಗಿ ಕುಮಾರಕೋಮ್ ನೋಡಲು ಹೊರಟೆವು.

 ಕುಮಾರಕೊಂ :
ಕೇರಳದ ಪ್ರವಾಸ ಕೈಗೊಳ್ಳುವವರಾರೂ ಕುಮಾರಕೋಮ್ ಅನ್ನು ತಪ್ಪಿಸುವುದೇ ಇಲ್ಲ.  ಅಷ್ಟು ಜಗತ್ಪ್ರಸಿದ್ದಿ ಪಡೆದ ಸ್ಥಳವಿದು. ಕೊಚ್ಚಿ ಯಿಂದ ಎರ್ನಾಕುಲಂ ತಲುಪುತ್ತಿದ್ದಂತೆ ಕೇರಳದ ಹಳ್ಳಿಯ ಸೊಗಡನ್ನು ನೋಡಲು ಪ್ರಾರಂಭಿಸಿದ್ದೆವಾದರೂ ಕುಮಾರಕೋಮ್ ಹೋಗಿ ತಲುಪಿದಾಗಲೇ ನಮಗೆ ಹಳ್ಳಿಯ ನಿಜವಾದ ಅಂದ ಗೋಚರಿಸಿದ್ದು,  ದಾರಿಯಲ್ಲಿ ಸಿಗುವ ಎಳನೀರು ಮತ್ತು ಕಬ್ಬಿನ ಹಾಲನ್ನು ಅಲ್ಲಲ್ಲಿ ಸವಿದು ಹೊರೆಟೆವಾದರೂ ಇನ್ನಷ್ಟು ತಂಪಿನ ಅವಶ್ಯಕತೆ ಇತ್ತು /ಡಿಸೆಂಬರ್ ತಿಂಗಳಾದರೂ ಕೂಡ ಕೇರಳದಲ್ಲಿ ಸುಮಾರು ಮೂವತ್ತು ಡಿಗ್ರಿ ಸೆಲ್ಸಿಯಸ್ ಅಷ್ಟು ಉಷ್ಣಾಂಶವಿತ್ತು, ಆದರೆ ಕುಮಾರ ಕೋಮ್ ಹಳ್ಳಿಯಲ್ಲಿರುವ ವೆಂಬನಾಡ್ ಲೇಕ್ ಗೆ ಪ್ರವೇಶಿಸುತ್ತಿದ್ದಂತೆ ತಂಪು ತಂಗಾಳಿ. 
ಇಲ್ಲಿನ ಸೂರ್ಯಾಸ್ತ ಮತ್ತು ಸೂರ್ಯೋದಯವನ್ನು ನೋಡಿ ಆನಂದಿಸಲು ವಿದೇಶಿಗರೂ ಕೂಡ ಹಾತೊರೆಯುತ್ತಾರೆ.  ನಾವು ಹೋದ ಸಮಯದಲ್ಲಿ ಅಲ್ಲಿ ಕಂಡವರಲ್ಲಿ ಹೆಚ್ಚಿನವರೆಲ್ಲ ವಿದೇಶಿಗರೇ ಆಗಿದ್ದರು, ಸೆಪ್ಟೆಂಬರ್ ತಿಂಗಳಿನಲ್ಲಿ ಬಂದ ನೆರೆಯ ಹಾವಳಿಯಿಂದ  ಈಗಷ್ಟೇ ಚೇತರಿಸಿಕೊಳ್ಳುತ್ತಿರುವುದಾಗಿಯೂ ಪ್ರತಿ ವರ್ಷ ಡಿಸೆಂಬರ್ ಕ್ರಿಸ್ಮಸ್ ರಜಾ ದಿನಗಳಲ್ಲಿ ವಿದೇಶಿಗರು ದಂಡೆದ್ದು ಬಂದು ಹದಿನೈದು ದಿನ ಬೋಟ್ ಹೌಸಿಂಗ್ ನಲ್ಲಿ ಬೀಡು ಬಿಟ್ಟು ಎಂಜಾಯ್ ಮಾಡಿ ಹೋಗುತ್ತಿದ್ದರು ಆದರೆ ಈ ವರ್ಷ ಪ್ರತಿಭಾರಿಯಂತೆ ಪ್ರವಾಸಿಗರು ಇಲ್ಲದಿರುವುದು ಆರ್ಥಿಕವಾಗಿ ಸಾಕಷ್ಟು ಪೆಟ್ಟು ಎಂದು  ನಮ್ಮನ್ನು ಬೋಟಿಂಗ್ ಗೆ ಕರೆದುಕೊಂಡು ಹೋದ ಕೇರಳದ ನಾವಿಕ ಅವಲತ್ತುಕೊಂಡ . ಬೆಳಗಿನ ಸಮಯವಾದ್ದರಿಂದ ಸೂರ್ಯನ ಎಳೆ ಬಿಸಿಲು ಮೈಮೇಲೆ ಬೀಳುತ್ತಿತ್ತು , ಸುತ್ತಾಲೂ ಮೀನುಗಾರರ ಮನೆಗಳು , ಅದರಾಚೆಗೆ ಹಸಿರು ತುಂಬಿ ಕಂಗೊಳುಸವ ಗದ್ದೆ ಅಲ್ಲೇ ಸಾಕಷ್ಟು ತೆಂಗಿನ ಮರಗಳು , ದೋಣಿ ಮುಂದೆ ಮುಂದೆ ಸಾಗುತ್ತಿದ್ದಂತೆ ಇಂತಹ ವಿಸ್ಮಯ ಈ ಪ್ರಕೃತಿ ಎಂಬ ಅಚ್ಚರಿ ನಮ್ಮೆಲ್ಲರ ಕಣ್ಣಲ್ಲಿ. ನನ್ನ ಮೂರು ವರ್ಷದ ಮಗನಂತು ನಾವೆಲ್ಲಿ ಬಂದು ಬಿಟ್ಟಿದೇವೆ ಎಂದು ಕಣ್ಣು ಮುಚ್ಚದೇ ಎಡಬಿಡದೇ ನೋಡುತ್ತಿದ್ದ ಆಗಾಗ ಬರುವ ಬಾತುಕೋಳಿಗಳು ಮತ್ತು ಮೀನುಗಳು ಅವನಿಗೆ ಇನ್ನಷ್ಟು ಸಂತೋಷ ನೀಡುತ್ತಿತ್ತು. ಅವುಗಳನ್ನು ಎಣಿಸುವ ಪ್ರಯತ್ನ ಮಾಡಿ ಮಾಡಿ ಸೋಲುತ್ತಿದ್ದ. ಅವನ ಸಂತೋಷ ನೋಡಿ ನಮಗೂ ಭಾರತದಲ್ಲೇ ಇರುವ ಇಂತಹ ವಿಸ್ಮಯ ಲೋಕವನ್ನು ನೋಡಿದ್ದು ಸಾರ್ಥಕ ಎನಿಸುತ್ತಿತ್ತು. ವೆಂಬನಾಡ್ ಲೇಕ್ ನಲ್ಲಿ ಒಂದು ಸುತ್ತು ಹಾಕಿಕೊಂಡು ಮೊದಲಿರುವ ಸ್ಥಳಕ್ಕೆ ಬರಲು ನಾಲ್ಕು ಗಂಟೆ ಬೇಕಾಯಿತು ಮತ್ತು ಆ ನಾಲ್ಕು ಗಂಟೆ ಎಷ್ಟು ಅದ್ಬುತವಾಗಿತ್ತೆಂದರೆ ಪ್ರಕೃತಿಯ ಮಡಿಲಲ್ಲೇ ಇರುವ ಅಲ್ಲಿನ ಜನರು ಎಷ್ಟು ಅದೃಷ್ಟವಂತರು ಎಂದೆನಿಸಿತು. 
  ವೆಂಬನಾಡ್ ಬ್ಯಾಕ್ ವಾಟರ್ ನ ತಪ್ಪಲಿನಲ್ಲಿ ಪಕ್ಷಿಧಾಮವೂ ಇದ್ದು ಇಲ್ಲಿ ಬೇರೆಬೇರೆ ರೀತಿಯ ಹಕ್ಕಿಗಳು ಬರುತ್ತವೆ ಎನ್ನಲಾಗುತ್ತದೆ ಮತ್ತು ಇದು ಪಕ್ಷಿ ಪ್ರೇಮಿಗಳಿಗೊಂದು ಸದವಕಾಶ ಕೂಡ. ಕೊಟ್ಟಾಯಂ ಜಿಲ್ಲೆಗೆ ಸೇರಿರುವ ಈ ಪಕ್ಷಿಧಾಮದಲ್ಲಿ ಪ್ರತಿವರ್ಷ ಸಾವಿರಾರು ಹಕ್ಕಿಗಳು ವಲಸೆ ಬರುತ್ತವೆ ಎನ್ನಲಾಗುತ್ತದೆ.  

ಫೋರ್ಟ್ ಕೊಚ್ಚಿ :
ಅದಾಗಲೇ ಮೂರನೇ ದಿನವಾದ್ದರಿಂದ ಸ್ವಲ್ಪ ತಡವಾಗಿ ತಯಾರಾಗಿ ನಾವು ಹೊರಟಿದ್ದು ಕೊಚ್ಚಿ ಫೋರ್ಟ್ ಭಾಗಕ್ಕೆ.  ಇದು ಒಂದು ನಗರ ಹಿಂದಿನ ದಿನ ನೋಡಿದ ಸಂಪೂರ್ಣ ಪ್ರಕೃತಿಯ ಮಡಿಲಿನಲ್ಲಿರುವ ಹಳ್ಳಿಗಿಂತ ಇದು ಭಿನ್ನವಾಗಿದೆ.  ಅಲ್ಲೇ ಇರುವ ಮಟನ್ ಚರಿ ವಸ್ತು ಸಂಗ್ರಹಾಲಯ ಮತ್ತಿತರ ಸುತ್ತಮುತ್ತಲಿನ ಪ್ರವಾಸಿ ಕೇಂದ್ರಗಳಿಗೆ ಭೇಟಿ ನೀಡಿ ಸುಂದರವಾದ ಹೋಟೆಲ್ ಒಂದರಲ್ಲಿ ಊಟ ಮಾಡಿ ದಿನವಿಡೀ ಅರಬ್ಬೀ ಸಮುದ್ರದ ಸೊಬಗನ್ನು ನೋಡಿದೆವು, ಹದಿನಾಲ್ಕನೇ ಶತಮಾನದಲ್ಲಿ ಚೀನಿಗರು ಇಲ್ಲಿ ಬಂದಾಗ ಇದು ಚೀನಾ ದೇಶದಂತೆ ಕಂಡು ಬಂದದ್ದರಿಂದ ಆ ಪ್ರದೇಶಕ್ಕೆ ಕೋ ಚಿನ್ ಎಂಬ ಹೆಸರನ್ನು ಇಡಲಾಗಿದೆ ಎಂದು ಇಲ್ಲಿನ ವಸ್ತು ಸಂಗ್ರಹಾಲಯದ ಹೊರಭಾಗದಲ್ಲಿ ತಿಳಿಸಲಾಗಿದೆ. ಹಾಗೆಯೇ ಈ ಬಂದರು ಪ್ರದೇಶದಲ್ಲಿ ಮೀನುಗಾರಿಕೆ ಹೆಸರುವಾಸಿಯಾಗಿದ್ದು ಚೈನೀಸ್ ಫಿಶಿಂಗ್ ನೆಟ್ ಇಲ್ಲಿನ ಪ್ರವಾಸಿ ಪ್ರಸಿದ್ಧಿಗೆ ಕಾರಣವಾಗಿದೆ. 
ಫೋರ್ಟ್ ಕೊಚಿನ್ ಬ್ರಿಟೀಷ್ , ಡಚ್ ಮತ್ತು ಪೋರ್ಚುಗೀಸರು ಬಂದು ನೆಲೆಸಿದ್ದ ಪ್ರದೇಶವಾಗಿದ್ದರಿಂದ ಇಲ್ಲಿ ಇವರ ಶೈಲಿಯ ವಾಸ್ತುಶಿಲ್ಪವನ್ನು ಕಾಣಬಹುದು. ಅದಲ್ಲದೆ ಶಾಪಿಂಗ್ ಮಾಡಲು ಇದು ಉತ್ತಮ ಸ್ಥಳವಾದ್ದರಿಂದ ಪ್ರವಾಸಿಗರು ಸಾಮಾನ್ಯವಾಗಿ ಇಲ್ಲಿ ಕೇರಳ ಶೈಲಿಯ ಬಟ್ಟೆಗಳು ಮತ್ತಿತರ ನೆನಪಿನಲ್ಲಿಟ್ಟುಕೊಳ್ಳಬಹುದಾದ ವಸ್ತುಗಳನ್ನು ಕೊಳ್ಳುತ್ತಾರೆ. 

ಇಲ್ಲಿನ ಸುತ್ತಾಟ ಮತ್ತು ಶಾಪಿಂಗ್ ಮುಗಿಸಿ ನಾವು ಹೋಂ ಸ್ಟೇ ಕಡೆಗೆ ತೆರಳುವಾಗ ರಾತ್ರಿಯಾಗಿತ್ತು. ಅದು ಕ್ರಿಸ್ಮಸ್ ಸಮಯವಾದ್ದರಿಂದ ರಸ್ತೆ ಇಕ್ಕೆಲಗಳಲ್ಲಿ ಸಾಲಾಗಿ ಎಲ್ಲೆಡೆ ವಿವಿಧ ರೀತಿಯ ದೀಪಗಳಿಂದ ಅಲಂಕರಿಸಿದ್ದರು.  ಅದನ್ನು ಕಣ್ಣು ತುಂಬಿಸಿಕೊಳ್ಳುವದೇ ಒಂದು ಸಂತೋಷ. ಹಾಗೆಯೇ ಅಲ್ಲಲ್ಲಿ ಮಕ್ಕಳು ಸಂತಾ ಕ್ಲಾಸನಂತೆ ವೇಷ ಧರಿಸಿ ಮನೆ ಮನೆಗಳಿಗೆ ಹೋಗಿ ನೃತ್ಯ ಮಾಡಿ ಬರುವುದನ್ನು ನೋಡಿದೆವು.  ಇಡೀ ಕೊಚಿನ್ ನಗರ ಕ್ರಿಸ್ಮಸ್ ಸಮಯದಲ್ಲಿ ದೀಪಗಳಿಂದ ಜಗಮಗಿಸುತ್ತಿತ್ತು.  ಆ ಸಮಯದಲ್ಲೇ ಕೇರಳಕ್ಕೆ ಹೋದದ್ದು ನಮ್ಮ ಪ್ರವಾಸದ ಮೆರಗನ್ನು ಇನ್ನಷ್ಟು ಹೆಚ್ಚಿಸಿತು. 

  ಫೋಕ್ಲೋರ್ ಮ್ಯೂಸಿಯಂ  :
ನಮ್ಮ ನಾಲ್ಕನೆಯ ದಿನ ಮೊದಲು ನಾವು ಕೇರಳದ ಫೋಕ್ಲೋರ್ ಮ್ಯೂಸಿಯಂ (ಕೇರಳ ಜಾನಪದ ವಸ್ತುಸಂಗ್ರಹಾಲಯ) ಕ್ಕೆ ಹೋದೆವು.  ಸುಮಾರು ಒಂದು ಗಂಟೆ ಕಳೆಯಬಹುದಾದ ಸ್ಥಳ. ಕೇರಳದ ಜಾನಪದ ಮತ್ತು ಸಂಸ್ಕೃತಿಗೆ ಭಾರತದಲ್ಲೇ ಏಕೆ ಪ್ರಪಂಚದಾದ್ಯಂತ ಹೆಸರಿದೆ. ಕೇರಳದ ಸಂಸ್ಕೃತಿಯನ್ನು ವಿಸದೇಶಿಗರು ಕೂಡ ಮೆಚ್ಚಿ ಹೊಗಳುತ್ತಾರೆ. ಎರ್ನಾಕುಲಂ ನಿಂದ ಸ್ವಲ್ಪ ಹೊರಭಾಗದಲ್ಲಿ ಕೊಚ್ಚಿ ಗೆ ತಾಗಿಕೊಂಡಂತೆ ಇರುವ ಈ ವಸ್ತು ಸಂಗ್ರಹಾಲಯದಲ್ಲಿ ಸಾವಿರ ವರ್ಷಗಳ ಹಿಂದಿನಿಂದ ಬಳಸಲಾದ ಕೇರಳ ಮತ್ತು ಕರ್ನಾಟಕದ ಇಂದು ಮರೆಯಾಲಾಗುತ್ತಿರುವ ಕೆಲವು ವಿಶೇಷ ವಸ್ತುಗಳನ್ನು ಇಲ್ಲಿ ಸಂಗ್ರಹಿಸಿ ಇಡಲಾಗಿದೆ. 

ಕೇರಳದ ವಾಸ್ತುಶಿಲ್ಪಗಳು ಕಲ್ಲು ಮತ್ತು ಮರದ ಕಲಾಕೃತಿಗಳು, ನಶಿಸಿ ಹೋಗುತ್ತಿರುವ ಕೆಲವು ಸಂಸ್ಕೃತಿಯನ್ನು ಬಿಂಬಿಸುವ ವಸ್ತುಗಳು, ಕಲಾಚಿತ್ರಗಳು, ಆಭರಣ ಮತ್ತು ಮರದ ಪಾತ್ರೆಗಳು ಹೀಗೆ ವಿಭಿನ್ನ ರೀತಿಯ ವಸ್ತುಗಳನ್ನು ಒಂದೇ ಸೂರಿನಡಿಯಲ್ಲಿ ಸಂಗ್ರಹಿಸಿ ಇಟ್ಟಿರುವುದು ವಿಶೇಷ.  ಸಂಶೋಧಕರು , ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಮತ್ತು ಸಾಹಿತ್ಯ ಸಂಸ್ಕೃತಿಯ ಬಗ್ಗೆ ಒಲವಿರುವ ಪ್ರವಾಸಿಗರು ಖಂಡಿತ ಇಲ್ಲಿ ಭೇಟಿ ನೀಡಲೇ ಬೇಕು. 

ಮ್ಯೂಸಿಯಂ ಅನ್ನು ಮುಗಿಸಿ ಅಲ್ಲೇ ಹತ್ತಿರದಲ್ಲಿರುವ ಸಂಪ್ರದಾಯ ಶೈಲಿಯ ಹೋಟೆಲ್ ಒಂದರಲ್ಲಿ ಬಾಳೆ ಎಲೆಯ ಊಟ ಮಾಡಿ ನಂತರ ನಾವು ಬೀಚ್  ಕಡೆಗೆ ಹೊರಟೆವು. ಸಮುದ್ರದ ತಟದಲ್ಲೇ ಇರುವ ಕೇರಳಕ್ಕೆ ಹೋಗಿ ಬೀಚಿಗೆ ಹೋಗದಿದ್ದರೆ ಆದೀತೆ ? ಇಡೀ ಎರನಾಕುಲಮ್ ತಾಲೂಕಿನಲ್ಲಿ ಸಾಕಷ್ಟು ಬೀಚುಗಳಿವೆ ಆದರೆ ಸ್ವಲ್ಪ ಜನಸಂದಣಿ ಇಲ್ಲದ ಬೀಚ್ ಗೆ ಭೇಟಿ ನೀಡಿದರೆ ಸ್ವಚ್ಛವಾಗಿಯೂ ಇರುತ್ತದೆ ಮತ್ತು ಮನಬಂದಂತೆ ಸಮಯ ಕಳೆಯಬಹುದು , ಹಾಗಾಗಿಯೇ ನಾವು ನಮ್ಮ ಹೋಮ್ ಸ್ಟೇ ಗೆ ಸಮೀಪವಿದ್ದ ಕುಂಬಲಂಗಿ ಬೀಚ್ ಗೆ ಹೋದೆವು. ನಮ್ಮ ಮೂರು ವರ್ಷದ ಮಗನಿಗೆ ಅದೇ ಮೊದಲ ಬಾರಿ ಬೀಚ್ ನೋಡಿದ್ದರಿಂದ ಅಲ್ಲಿನ ಸೂರ್ಯಾಸ್ತವನ್ನು ನೋಡಿ ಸಂತೋಷಕ್ಕೆ ಎಲ್ಲೆ ಇಲ್ಲದಂತೆ ಆಡುತ್ತಿದ್ದ. ನಮ್ಮ ಜೀವನದ ಮರೆಯಲಾರದ ದಿನಕ್ಕೆ ಮತ್ತೊಂದು ಪುಟ ಸೇರಿಕೊಂಡಿತ್ತು. 
ಅಲೆಪ್ಪಿ ಅಥವಾ ಅಲಪುರ  :
ಕೇರಳ ಪ್ರವಾಸಿಗರ ಪ್ರಾಮುಖ ಸ್ಥಳ ಅಲೆಪ್ಪಿ, ಪ್ರವಾಸಿಗರ ದಂಡು ಯಾವಾಗಲೂ ನೆರೆಯುವ ಬ್ಯುಸಿ ಸ್ಥಳವಿದು. ಅಲ್ಲೆಪ್ಪಿ ಬ್ಯಾಕ್ ವಾಟರ್ ಮತ್ತು ಬೋಟ್ ಸ್ಟೇ ಗೆ ಹೆಸರುವಾಸಿ. ಬೇಕಿದ್ದಲ್ಲಿ ಇಡೀ ರಾತ್ರಿ ಬೋಟ್ ನಲ್ಲೇ ಉಳಿದುಕೊಂಡು ಪ್ರಕೃತಿಯ ಸೊಗಡನ್ನು ಅನುಭವಿಸುವ ಅವಕಾಶವಿಲ್ಲಿದೆ.  ಅದಲ್ಲದೆ ಗಂಟೆ ಗೆ ನಿಗಧಿಪಡಿಸಿದ ದರ ಪಾವತಿಸಿ ಕೂಡ ಬೋಟ್ ನಲ್ಲಿ ಸಮಯ ಕಳೆಯಬಹುದು,  ಇಲ್ಲಿ ಶಿಖಾರ ಬೋಟ್ ಬಹಳ ಬೇಡಿಕೆಯಲ್ಲಿರುತ್ತದೆ.  ನಾವು ಸುಮಾರು ನಾಲ್ಕು ಗಂಟೆಗಳ ಕಾಲ ಶಿಖಾರ ಬೋಟ್ ನಲ್ಲಿ ಪ್ರಯಾಣ ಮಾಡಿ ಹಸಿರು , ಹಕ್ಕಿಗಳ ಚಿಲಿಪಿಲಿ, ತೆಂಗಿನ ಮರಗಳ ಸಾಲು , ಕಣ್ಣು ಕೋರೈಸುವ ಗದ್ದೆ , ಇವುಗಳ ಮಧ್ಯದಲ್ಲೇ ಇರುವ ಮೀನುಗಾರರ ಮನೆ ಅಲ್ಲಲ್ಲಿ ಎದುರಲ್ಲೇ ಮೀನು ಬೇಯಿಸಿಕೊಡುವ ವರ್ತಕರು, ಸೂರ್ಯನ ಹಳದಿ , ಕೆಂಪು ಕಿರಣಗಳು , ಬಾತು ಕೋಳಿ ಗಳು ಮತ್ತು ಆಗಾಗ ಬಂದು ಹೋಗುವ ಮೀನುಗಳು , ವಿದೇಶಿ ಪ್ರವಾಸಿಗರು , ಮಗನ ಮುಗಿಯದ ಪ್ರಶ್ನೆಗಳು ಹೇಗೆ ನಾಲ್ಕು ಗಂಟೆಯಲ್ಲಿ ಮರೆಯಲಾಗದ ಅನುಭವ ಪಡೆದೆವು. 
ಅಲಪ್ಪಿಯ ಸಮೀಪದಲ್ಲಿರುವ ಪುನ್ನಮಾಡ ಕೆರೆಯಲ್ಲಿ ವರ್ಷಕ್ಕೊಮ್ಮೆ ನಡೆಯುವ ಬೋಟ್ ರೇಸ್ ಪ್ರಸಿದ್ಧಿ ಪಡೆದಿದೆ. 

ಕೇರಳದ ಸಂಸ್ಕೃತಿಯನ್ನು ನೋಡಬೇಕೆಂದರೆ ಇಲ್ಲಿನ ದೇವಸ್ಥಾನಕ್ಕೆ ಭೇಟಿ ನೀಡಲೇ ಬೇಕು ಆದ್ದರಿಂದ ನಾವು ಅಲೆಪ್ಪಿಯಿಂದ ಅಂಬಲಾಪುರದ ಶ್ರೀ ಕೃಷ್ಣ ದೇವಾಲಯಕ್ಕೆ ಹೋದೆವು , ಇಲ್ಲಿನ ಕೃಷ್ಣ ಮಠದ ಹಾಲು ಪಾಯಸ ಜನ ಮೆಚ್ಚುಗೆ ಪಡೆದಿದ್ದು ಇದನ್ನು ಪಡೆಯಲು ನೂರಾರು ಜನರು ಸರತಿಯಲ್ಲಿ ನಿಂತು ಕಾಯುತ್ತಾರೆ. ದೇವಸ್ಥಾನದ ಹೊರಭಾಗದಲ್ಲಿ ಆನೆ ಕೂಡ ಇದೆ ಜೊತೆಗೆ ಕೊಳ. ಉಡುಪಿಯ ಶ್ರೀ ಕೃಷ್ಣ ಮಠ ಕ್ಕೆ ಸ್ವಲ್ಪ ಹೋಲಿಕೆಯಲ್ಲಿರುವ ಹಂಚಿನ ಮನೆ ಮತ್ತು ಮರದಿಂದ ಮಾಡಿದ ಕೇರಳ ಮಾದರಿಯ ದೇವಸ್ಥಾನ ಇದಾಗಿದ್ದು ಸಾವಿರಾರು ಭಕ್ತರು ಪ್ರತಿದಿನ ಇಲ್ಲಿ ಬಂದು ಭಕ್ತಿ ಸಲ್ಲಿಸಿ ಹೋಗುತ್ತಾರೆ. 
ಸಂಜೆ ನಾವು ನಮ್ಮ ಹೋಂ ಸ್ಟೇ ಗೆ ಹಿಂತಿರುಗುವಾಗ ರಸ್ತೆಯ ಬದಿಯಲ್ಲಿಯೇ ಇರುವ ಮುಳ್ಳಕ್ಕಲ್ ರಾಜರಾಜೇಶ್ವರಿ ದೇವಾಲಯಕ್ಕೆ ಭೇಟಿ ನೀಡಿದೆವು. ನಗಾರಿ , ಚಂಡೆ ಗಳ ವಾಧ್ಯಗಳಿಂದ ಜೊತೆಗೆ ಹೆಂಗಳೆಯರ ಭಜನೆಗಳಿಂದ ದೇವಸ್ಥಾನದ ಪೂಜೆಗೊಂದು ವಿಶೇಷ ಕಳೆ ಬಂದಿತ್ತು. ಕೇರಳದ ದೇವಸ್ಥಾನದಲ್ಲಿ ನಡೆಯುವ ಪೂಜೆಯನ್ನು ನೋಡಿದರೆ ಮೈ ರೋಮಾಂಚಗೊಳ್ಳುತ್ತದೆ. ಇಡೀ ದೇವಸ್ಥಾನವನ್ನು ಹೂವು ಮತ್ತು ಹಣತೆಯಲ್ಲಿ ಹಚ್ಚಿದ ಎಣ್ಣೆಯ ದೀಪದಿಂದ ಕೇರಳ ಶೈಲಿಯಲ್ಲಿ ಅಲಂಕರಿಸಿದ್ದರು.  ಸುಮಾರು ಒಂದು ಗಂಟೆ ನಡೆದ ಪೂಜೆಗೆ ನೂರಾರು ಜನರು ಆಗಮಿಸಿದ್ದರು. ಕೇರಳದ ಕ್ರಿಸ್ಮಸ್ ಅಲಂಕಾರವನ್ನು ನೋಡಿದ ನಮಗೆ ಹಿಂದೂಗಳ ದೇವಾಲಯದ ಅಲಂಕಾರ ಮತ್ತು ಪೂಜೆ ಕೂಡ ನೋಡುವ ಅವಕಾಶ ಸಿಕ್ಕಿದ್ದು ಸಂತೋಷವನ್ನು ನೀಡಿತ್ತು.  ಕೇರಳಕ್ಕೆ ಹೋದ ಪ್ರತಿಯೊಬ್ಬ ಪ್ರವಾಸಿಗನೂ ಕೂಡ ಇಲ್ಲಿಯ ದೇವಾಲಯಗಳಲ್ಲಿ ನಡೆಯುವ ಸಂಸ್ಕೃತಿಯ ಶೀಮಂತಿಕೆಯನ್ನು ಎತ್ತಿ ಸಾರುವ ಪೂಜೆಯನ್ನು, ಅಲಂಕಾರವನ್ನು ನೋಡಲೇಬೇಕು. 

ಎಡಪಳ್ಳಿ ಚರ್ಚ್ :

ಸೈನ್ಟ್ ಜಾರ್ಜ್ ಚರ್ಚ್ ಏಷ್ಯಾದ ಮೊದಲ ಸ್ಥಾನದಲ್ಲಿರುವ ಅತಿ ದೊಡ್ಡ ಚರ್ಚ್ ಆಗಿದ್ದು ಇದು ಎಡಪಳ್ಳಿ  ಚರ್ಚ್ ಎಂದೇ ಪ್ರಸಿದ್ಧವಾಗಿದೆ. ಈ ಚರ್ಚಿಗೆ ಹದಿನಾಲ್ಕನೇ ಶತಮಾನದ ಇತಿಹಾಸವಿದ್ದು ಇಂದು ಇದು ಅತಿ ಹೆಚ್ಚು ಪ್ರವಾಸಿಗರನ್ನು ಹೊಂದಿದ ಕ್ರೈಸ್ತ ಯಾತ್ರಾ ಸ್ಥಳವಾಗಿದೆ.  ಎಡಪಲ್ಲಿಯಲ್ಲಿ  ಎರಡು ವಿಶೇಷವಾದ ಪ್ರವಾಸಿಗರನ್ನು ಆಕರ್ಷಿಸುವ ಸ್ಥಳಗಳಿವೆ ಅದರಲ್ಲಿ ಎಡಪಳ್ಳಿ  ಚರ್ಚ್ ಒಂದಾದರೆ ಇನ್ನೊಂದು ಲುಲು ಇಂಟರ್ನ್ಯಾಷನಲ್ ಮಾಲ್ .  ಲುಲು ಮಾಲ್ ಭಾರತದ ಅತಿ ದೊಡ್ಡ ಮಾಲ್ ಗಳಲ್ಲಿ ಮೊದಲ ಸ್ಥಾನದಲ್ಲಿದೆ.  ಇಲ್ಲಿ ಬರುವ ಪ್ರವಾಸಿಗರು ಈ ಮಾಲ್ ನಲ್ಲಿ ಶಾಪಿಂಗ್ ಮಾಡದೆ ಹಿಂತಿರುಗುವುದೇ ಇಲ್ಲ.  ಕೇರಳಕ್ಕೆ ಹೋದವರು ಈ ಚರ್ಚ್ ಮತ್ತು ಮಾಲ್ ಇವೆರಡನ್ನೂ ಭೇಟಿ ನೀಡಲೇಬೇಕು. ಲುಲು ಮಾಲ್ ನಿಂದ ಈ ಚರ್ಚ್  ಕಾರಿನಲ್ಲಿ ಕೇವಲ ಐದು ನಿಮಿಷ.  ನಾವು ಬೆಳಗ್ಗಿನಿಂದ ಶಾಪಿಂಗ್ , ಊಟ ಎಲ್ಲವನ್ನೂ ಮುಗಿಸಿ ಎಡಪಳ್ಳಿ ಚರ್ಚ್ ಗೆ ಹೋದಾಗ ಮುಸ್ಸಂಜೆ ಹೊತ್ತು. ಆ ದಿನ ಡಿಸೆಂಬರ್ ೨೪ , ಮಾರನೆಯ ದಿನವೇ ಕ್ರಿಸ್ಮಸ್ . ಸಂಜೆಯಾಗುತ್ತಿದ್ದಂತೆ ಜಗ ಬೆಳಗುವಷ್ಟು ಡೀಪದ ಅಲಂಕಾರ ಒಮ್ಮೆಲೇ ಹೊತ್ತಿಕೊಂಡಿತು. ಅದನ್ನು ನೋಡಲು ಕಣ್ಣುಗಳೆರಡೂ ಸಾಲದು , ನಿಮಿಷಕ್ಕೊಂದು ಬಣ್ಣಕ್ಕೆ ಬದ ಲಾಗುತ್ತಿದ್ದ  ಲೈಟಿಂಗ್ಸ್ ನ ಅಲಂಕಾರವನ್ನು ಇಂಗ್ಲೆಂಡ್ ನಲ್ಲಿ  ಕಳೆದ ಏಳು ವರ್ಷವಿದ್ದರೂ ಎಲ್ಲೂ ಕಂಡಿರಲಿಲ್ಲ. ಸಾವಿರಾರು ಜನರು ಆ ದಿನ ಚರ್ಚಿನಲ್ಲಿ ಬಂದು ಪೂಜೆ ನಡೆಸಿಕೊಂಡು ಹೋಗುತ್ತಿದ್ದರು.  ಪ್ರತಿ ವರ್ಷ ಇಲ್ಲಿ ಕ್ರಿಸ್ಮಸ್ ದಿನಂದ ಹಿಂದಿನ ದಿನ ಪಾದ್ರಿಗಳ ಪ್ರವಚನವಿರುತ್ತದೆ.  ಆ ಪ್ರವಚನದ ಸರಿಯಾದ ಸಮಯಕ್ಕೆ ನಾವು ಚರ್ಚ್ ನ ಒಳಭಾಗಕ್ಕೆ ಹೋದೆವು . ಪ್ರವಚನ ಮಲೆಯಾಳಿ ಭಾಷೆಯಾದ್ದರಿಂದ ಏನೂ ಅರ್ಥವಾಗದಿದ್ದರೂ ಚರ್ಚಿನಲ್ಲೊಂದು ಗಾಂಭೀರ್ಯತೆ, ಭಕ್ತಿ, ಶಾಂತ ವಾತಾವರಣವಿತ್ತು. ಅಲ್ಲಿ ಕುಳಿತಷ್ಟು ಸಮಯ ಮನಸ್ಸಿಗೆ ನೆಮ್ಮದಿ ಇಲ್ಲಿ ಬಂದದ್ದು ಸಾರ್ಥಕ ಎನ್ನಿಸುವಷ್ಟು ಆನಂದವಾಗಿತ್ತು. ಅದೆಲ್ಲಕ್ಕಿಂತ ಡಿಸೆಂಬರ್ ನ ಕ್ರಿಸ್ಮಸ್ ಸಮಯದಲ್ಲಿ ಕೇರಳಕ್ಕೆ ಬರುವ ನಮ್ಮ ಯೋಜನೆ ಸರಿಯಾಗಿತ್ತು ಇಲ್ಲದಿದ್ದಲ್ಲಿ ಇವೆಲ್ಲವನ್ನೂ ನೋಡಲಾಗುತ್ತಿರಲಿಲ್ಲ ಎನಿಸಿತು. 
ಆ ದಿನ ಹೋಂ ಸ್ಟೇ ಯಲ್ಲಿ ಕೊನೆಯ ದಿನ ಮರುದಿನ ನಾವು ಮುನ್ನಾರ್ ಮಾರ್ಗವಾಗಿ ಬೆಂಗಳೂರಿಗೆ ತೆರಳುವವರಿದ್ದೆವು ಆದ್ದರಿಂದ ಬೇಗ ತಲುಪಿ ವಿಶ್ರಮಿಸಿದೆವು. ಮರುದಿನ ಬೆಳಗ್ಗೆ ನಾಲ್ಕು ಗಂಟೆಗೆಲ್ಲ ಮುನ್ನಾರ್ ಗೆ ಹೋರಾಟ ನಮಗೆ ಕಣ್ಣಮಾಳಿ ಸುತ್ತಮುತ್ತಲಿರುವ ಬೆಳಗಿನ ಚುಮುಚುಮು ಚಳಿಯಲ್ಲಿಯ ಪ್ರಕೃತಿಯ ಅದ್ಭುತವನ್ನು ನೋಡುವ ಅವಕಾಶ ಸಿಕ್ಕಿತ್ತು. ಕೇರಳದ ಬಹುತೇಕ ಭಾಗಗಳಲ್ಲಿ ರಸ್ತೆಯ ಅಕ್ಕ ಪಕ್ಕ ಸಂಪೂರ್ಣ ನೀರಿನಿಂದ ತುಂಬಿದ್ದು ಮಧ್ಯ ರಸ್ತೆ ಇದೆ. ಇಕ್ಕೆಲಗಳಲ್ಲಿ ರಸ್ತೆಯ ಮಟ್ಟಕ್ಕೆ ಬರುವ ನೀರು ಜೊತೆಗೆ ತೆಂಗಿನ ಮರಗಳು , ಮೀನುಗಾರರು ಹಾಸಿರುವ ಮೀನಿನ ಬಲೆ . 

ಬೆಳಗಿನ  ಎಲೆ ಬಿಸಿಲು , ಸೂರ್ಯನ ಕಿರಣಗಳು , ಹಕ್ಕಿರಗಳ ಕಲರವ ಬಹಳ ಪ್ರಶಾಂತವಾತಾವರಣ ಅದಾಗಿತ್ತು. ಕೊಚ್ಚಿಯಿಂದ ಮುನ್ನಾರ್ ಅನ್ನು ತಲುಪಲು ಕನಿಷ್ಠ ನಾಲ್ಕರಿಂದ ಐದು ಗಂಟೆಗಳು ಬೇಕು. ದಾರಿ ಮಧ್ಯದಲ್ಲಿ ಅತಿರಪಲ್ಲಿ ವಾಟರ್ ಫಾಲ್ಸ್ , ಚೀಯಪ್ಪರ ಜಲಪಾತ , ವಾಲಾರ ಜಲಪಾತವನ್ನು ನೋಡಿದೆವು , ಇವೆಲ್ಲ ರಸ್ತೆ ಬದಿಯ ಜಲಪಾತಗಳಾದ್ದರಿಂದ ಎಲ್ಲ ಕಡೆಗಳಲ್ಲಿಯೂ ಕಾರಿನಿಂದ ಇಳಿಯಲೇ ಬೇಕು ಎನ್ನುವುದಿರಲಿಲ್ಲ ಕುಳಿತಲ್ಲಿಯೇ ನೋಡಬಹುದಾದ ಜಲಪಾತಗಳು.  ಸುಮಾರು ಹನ್ನೆರಡು ಗಂಟೆಗೆಲ್ಲ ಮುನ್ನಾರ್ ತಲುಪಿ ಹೋಟೆಲ್ ಒಂದರಲ್ಲಿ ಮದ್ಯಾನ್ಹದ ಊಟ ಮಾಡಿ ಎರವಿಕುಲಂ ನ್ಯಾಷನಲ್ ಪಾರ್ಕ್  ತಲುಪಿದೆವು ಸಂಪೂರ್ಣ ಹಚ್ಚ ಹಸಿರು ಬಣ್ಣದ ಟೀ ಪ್ಲಾಂಟೇಷನ್ ಗಳು ಕಣ್ಣು ಕೋರೈಸುತ್ತಿತ್ತು . ಸುಂದರವಾದ ಭಾವಚಿತ್ರ ತೆಗೆಸಿಕೊಳ್ಳಲು  ಇದು ಸರಿಯಾದ ಸ್ಥಳ. ಸ್ವಲ್ಪ ಚಳಿ ಇರುತ್ತದಾದ್ದರಿಂದ ಸ್ವೇಟರ್ ಅಥವಾ ಬೆಚ್ಚಗಿನ ಶಾಲನ್ನು  ಹೋಗುವುದು ಉತ್ತಮ. ಮುನ್ನಾರ್ ಟೀ ಪ್ಲಾಂಟೇಷನ್ ಆದ್ದರಿಂದ ಕಾರಿನಲ್ಲಿ ಪ್ರಯಾಣಿಸುವಾಗ ಮುನ್ನಾರಿನಿಂದ ಬಂಡೀಪುರ  ಅಲ್ಲಿಂದ ಅಣ್ಣ ಮುಡಿ  ಮಾರ್ಗವಾಗಿ ಮರುದಿನ ಬೆಳಗ್ಗಿನ ಜಾವ ಐದು ಗಂಟೆಗೆ ಬೆಂಗಳೂರನ್ನು ತಲುಪಿದೆವು. 

ಒಂದು ವಾರದ ಪ್ರವಾಸ ಮುಗಿಸಿ ಮನೆ ತಲುಪಿದಾಗ ಕೇರಳವನ್ನು ದೇವರ ನಾಡು ಎಂದು ಕರೆಯುವುದರಲ್ಲಿ ಅತಿಶಯೋಕ್ತಿ ಇಲ್ಲ ಎಂಬ ಭಾವನೆ. ಅದೆಷ್ಟು ಸುಂದರ ಮತ್ತು ವಿಸ್ಮಯವಾದ ಪ್ರಕೃತಿ ನಮ್ಮ ದೇಶದಲ್ಲಿ ಹೇರಳವಾಗಿದೆ ಎಂಬುದಕ್ಕೆ ಹೆಮ್ಮೆ. ಇಂಗ್ಲೆಂಡ್ ಗೆ ಹಿಂತಿರುಗಿದ ನಂತರವೂ ಆಫೀಸಿನಲ್ಲಿ ವಿದೇಶಿಗರಿಗೆ ಭಾರತದ ಕೇರಳಕ್ಕೆ ಒಮ್ಮೆ ಭೇಟಿ ನೀಡಿ ಎಂದು ಹೆಮ್ಮೆಯಿಂದ ಸಲಹೆ ಕೊಡುತ್ತಿರುತ್ತೇನೆ.
Arpitha Rao
Banbury 
United kingdom 
x

Tuesday 28 January 2020

ಸ್ಮಾರ್ಟ್ ಮೊಬೈಲ್ ಮೋಜು

ಈಗಿನ ಕಾಲದಲ್ಲಿ ಮೊಬೈಲ್ ಉಪಯೋಗಿಸಕ್ಕೆ ಬರದಿಲ್ಲದವರು ಯಾರಿದ್ದಾರ್ ನೀವೇ ಹೇಳ್ರಿ . ನಾಲ್ಕು ವರ್ಷದ ಮಕ್ಕಳಿಂದ ಹಿಡಿದು ವಯಸ್ಸಾದವರಗೂ ಕೂಡ ಮೊಬೈಲ್ ಬೇಕೇ ಬೇಕು.ಹಂಗೇ ನಮ್ಮಪ್ಪ ಸಣ್ಣ ಊರಲ್ಲಿದ್ರೂ ಅಲ್ಲಿಂದಾನೆ ಕಥೆ ಲೇಖನ ಹಿಂಗೇ ಆಗಾಗ ಬರದೂ ಅಂಚೆಲಿ ಕಳ್ಸಿದ್ರೆ ವಾರಾದ್ರೂ ಮುಟ್ಟಂಗಿಲ್ಲ ಅಂತಂದು ಪೇಟೆಗೆ ಹೋಗಿ ಅಲ್ಲಿ ಕಂಪ್ಯೂಟರಿದಾಗ ಯಾರತರಾದ್ರು ಹೇಳಿ ಕುಟ್ಟಿಸಿ ಕಳಿಸ್ತಿದ್ದ .ಹೀಂಗಿದ್ದಾಗ ನಂಗೂ ಪಾಪ ಅನಿಸಿ ಕಳೆದ ವರ್ಷದ ಕ್ರಿಸ್ಮಸ್ ಟೈಮಾಗ ಒಂದು ಸ್ಮಾರ್ಟ್ ಫೋನ್ ಕೊಡ್ಸ್ಲಿಕ್ಕೆ ಬೇಕು ಎಂತ ನಿರ್ಧಾರ ಮಾಡಿದ್ದೆ .ಇದನ್ನ ಕೇಳಿದ ಅಮ್ಮ ಮನೇಲಿ ಮಾಡಕ್ಕೆ ಇರ ಕೆಲ್ಸನೆ ಆಗುವಲ್ದು ಇನ್ನು ಸ್ಮಾರ್ಟ್ ಫೋನ್ ಬೇರೆ ಕೊಡುಸ್ತೀಯೇನು ಅಂತ ಸ್ವಲ್ಪ ಹೊತ್ತು ಕೂಗಾಡಿದ್ಲು . ಆದ್ರೆ ಆಕಿ ಕೂಗಾಟ ಯಾರು ಕೇಳುವಲ್ರು ಅಂತ ಆಕಿಗೂ ಗೊತ್ತಿತ್ತು. ಹಾಂಗೆ ಸ್ಮಾರ್ಟ್ ಫೋನ್ ಕೊಡಿಸಿ ಒಂದು ವರ್ಷ ಆದ ಸಲುವಾಗಿ ಹೀಗೊಂದು ಅಪ್ಪನ ಅವಾಂತರನ ನಿಮ್ಮತ್ರ ಹಂಚಿಕೊಳ್ಳೋಣ ಅನಿಸ್ತು ನೋಡ್ರಿ ಅದಕ್ಕಾ ಈ ಲೇಖನ.

ಸ್ಮಾರ್ಟ್ ಫೋನ್ ಕೈಗೆ ಬಂದ ಹೊಸತರಲ್ಲಿ ಅಪ್ಪ ಬರೀ ಫೋನ್ ರಿಸೀವ್ ಮಾಡೋದು ಕಲಿತಿದ್ದ ಅದಾಗ್ತಿದ್ದಂಗೆ ಮತ್ತೆ ಈ ವಾಟ್ಸಾಪ್ ಮೆಸೇಜ್ ಬಾಳ ಬರಾಕ್ಕತ್ತಿದ್ವು ಅದಕ್ಕೆಲ್ಲ ಹೆಂಗೆ ಮೆಸೇಜಲ್ಲೇ ಉತ್ತರಿಸಬೇಕು ಅನ್ನೋದು ಅಪ್ಪಂಗೆ ಬಾಳ ತಲೆಬಿಸಿ ಆಗ್ತಿತ್ತು. ತಾನು ಯಾಕೆ ಹಿಂಗೇ ಮೆಸೇಜ್ ಟೈಪ್ ಮಾಡೋದು ಕಲಿಬಾರ್ದು ಅಂತ ತೀರ್ಮಾನಿಸಿ ದಿನ ಇಡೀ ಸಿಕ್ಕಿದವರೆಲ್ಲರ ತಲೆ ತಿಂದು ಕೊನೆಗೂ ಮೆಸೇಜ್ ಟೈಪ್ ಮಾಡೋದು ಕಲ್ತೆ ಬಿಟ್ಟಿದ್ದ .ಅತ್ತ ಅಮ್ಮನಿಗಂತೂ ಒಂದೇ ಚಿಂತೆ .ಹಿಂಗೇ ಒಬ್ಬೊಬ್ಬನೇ ಕುಂತು ತಲೀ ಕೆಳಗ ಹಾಕ್ಕೊಂಡು ತಾಸುಗಟ್ಟಲೆ ಮೆಸೇಜ್ ಕುಟ್ಟಿ ಕೊನೆಗೆ ಕಳ್ಸೋದು ಮಾತ್ರ ಒಂದೇ ಲೈನ್ ಅಂದ್ರೆ ಇರಾಬರಾ ಕೆಲಸ ಜೊತೆಗೆ ಸಮಯಾನು ಎಷ್ಟು ವ್ಯರ್ಥ ಅಂತ ಕೂಗ್ತಾ ಅವ್ಳು ಕೂತಿರ್ತಿದ್ಲು . ಕೊನೆಕೊನೆಗೆ ಅಕೀಗೂ ಖುಷಿ ಆಗಿ ಅಲ್ಲ ಇಷ್ಟ ವರ್ಷ ಆದ್ಮೇಲೂ ಮೆಸೇಜ್ ಟೈಪ್ ಮಾಡಕ್ಕೆ ಕಲ್ತದ್ದು ಅದೂ ಈ ಹಳ್ಳಿ ಮನೆಯಾಗೆ ಇದ್ಕಂಡು ನೆಟ್ ವರ್ಕ್ ಇಲ್ಲದ ಜಾಗದಿಂದ ಫೋನ್ ಮಾಡಿದಾದ ತಾಗದಿದ್ರೆ ಮೆಸೇಜ್ ಆದ್ರೂ ಕಳುಸ್ತಾರಲ್ಲ ಅದು ಅವ್ರಿಗೆ ಹೋಗಿ ತಲುಪದೇ ಮುಖ್ಯ ಅಂತಂದು ಆಕೀನೂ ಅಪ್ಪಂಗೆ ಸಾಥ್ ಕೊಡಕ್ಕೆ ಸ್ಟಾರ್ಟ್ ಮಾಡಿದ್ಲು . ಬೇಕಾದವರಿಗೆ ಏನಾದ್ರು ತಿಳಿಸಬೇಕಂದ್ರೆ ಒಂದು ಮೆಸೇಜ್ ಹಾಕ್ರಿ ಅವ್ರೆ ಕಾಲ್ ಮಾಡ್ತಾರಾ ಅಂತಂದು ಅಪ್ಪಂಗೆ ಇನ್ನಷ್ಟು ಸಾಥ್ ಕೊಡ್ತಿದ್ಲು .

ಹಾಗೂ ಹೀಗೂ ಒಂದ್ ವರ್ಷ ಆಗ್ತಾ ಬಂತು ಅಪ್ಪನ ಕೈಲಿ ಸ್ಮಾರ್ಟ್ ಫೋನ್ ಬಂದು ಆಗಾಗ ಮೊಮ್ಮಗನೊಟ್ಟಿಗೆ ಮಾತಾಡ್ಲಿಕ್ಕೆ ವಿಡಿಯೋ ಕಾಲ್ ಕೂಡ ಮಾಡೋ ಅಷ್ಟು ಅಪ್ಪ ಮೊಬೈಲ್ ಗೆ ಅಂಟಿಕೊಂಡಿದ್ದಾಗಿತ್ತು. ಹಾಗೆ ಮೊನ್ನೆ ನಮ್ಮನೆವ್ರಿಗೆ ಇನ್ಸೂರೆನ್ಸ್ ಒಬ್ಬರ ಫೋನ್ ನಲ್ಲಿ ಮಾತಾಡಬೇಕಿತ್ತು ಬಹಳ ಅರ್ಜೆಂಟ್ ಇತ್ತು . ಈ ದಿನ ಸಂಜೆ ಭಾರತದ ಸಮಯ  ಐದುಗಂಟೆ ಒಳಗೆ ಈ ನಂಬರ್ ಗೆ ಫೋನ್ ಮಾಡ್ಬೇಕಂತ ಅಪ್ಪ ಆಕಡೆಯಿಂದ ಮೆಸೇಜ್ ಟೈಪ್ ಮಾಡಿ ನೆಟವರ್ಕ್ ಹುಡುಕಿ ಅದು ಬಂದು ನಮ್ಮನೆವರ ಮೊಬೈಲ್ ತಲುಪುದ್ರೊಳಗೆ ಇಂಡಿಯಾದಲ್ಲಿ ಗಂಟೆ ಸಂಜೆ ಏಳಾಗಿತ್ತು . ಆದ್ರೂ ಏನು ಸ್ವಂತ ಮೊಬೈಲ್ ಅಂತಂದ್ರೆ ಎಷ್ಟ್ ಹೊತ್ತಿನಾಗ ಮಾಡಿದ್ರೂ ರಿಸೀವ್ ಮಾಡೇ ಮಾಡ್ತಾರಲ್ಲೇನು ಅಂತ ನಾನು ನಮ್ಮನೆವ್ರಿಗೆ ಹೇಳಿ ಫೋನ್ ಮಾಡ್ಸಿದೆ .ನಮ್ಮನೆವರು ಫೋನ್ ಮಾಡ್ತಿದ್ದಂತೆ ಆಕಡೆವರು ರಾಂಗ್ ನಂಬರ್ ಅಂತಂದು ಫೋನ್ ಕಟ್ ಮಾಡ್ಬಿಟ್ರು .ಇದೇನು ಫೋನ್ ಕಟ್ಟೇ ಮಾಡ್ಬಿಟ್ರಲ್ಲ ಅಂತಂದು ಮತ್ತೆ ಅದೇ ನಂಬರಿಗೆ ಫೋನ್ ಮಾಡಿ ನಾನು ಕಾರಿನ  ಇನ್ಸೂರೆನ್ಸ್ ಸಲುವಾಗಿ ಮಾತಾಡ್ಬೇಕಿತ್ತು ಅಂತಿದ್ದಂಗೆ ಅತ್ಲಾಗಿನ ಹೆಂಗಸು ರಾತ್ರಿ ಎಷ್ಟೊತ್ತಾಗೆ ನಿಮ್ಮದೇನ್ರಿ ಇನ್ಸೂರೆನ್ಸ್ ಇಡ್ರಿ ಫೋನ್ ಅಂತ ಬೈದು ಫೋನ್ ಇಟ್ಟಳು .ಅಷ್ಟ್ರಲ್ಲಿ ಟಡಾಣ್ ಅಂತ ಇನ್ನೊಂದು ಮೆಸೇಜ್ ಬಂತು ಏನಪ್ಪಾ ಅಂತ ನೋಡಿದ್ರೆ ನಮ್ಮಪ್ಪ ಆಕಡಿಯಿಂದ ಸಾರಿ ನನ್ನ ಕಡೆಯಿಂದ ಒಂದು ಸಣ್ಣ ತಪ್ಪಾಗಿದೆ ನಂಬರ್ 42 ಅಲ್ಲ 43 ಆಗಬೇಕಿತ್ತ ಈ ನಂಬರಿಗೆ ಕಾಲ್ ಮಾಡ್ರಿ ಅಂತ ಕಳ್ಸಿದ್ದ .ಸರಿ ಅಂತ ಸರಿಯಾಗಿ ಕಳಿಸಿದ ಹೊಸ ನಂಬರ್ ಗೆ ಫೋನ್ ಮಾಡು ಮೊದಲು ಅವರ ಹೆಸರು ಏನು ಹೇಳ್ರಿ ಅಂತ ನಾವೂ ಒಂದು ಮೆಸೇಜ್ ಕಳ್ಸಿದ್ವಿ .
ಅತ್ತ ಕಡೆಯಿಂದ ಅಪ್ಪ ಅವರ ಹೆಸರು ಪರಿವಿಧಿ ಅಂತಂದು ಟೈಪ್ ಮಾಡಿ ಬರೋಬ್ಬರಿ ಹತ್ತು ನಿಮಿಷದ ನಂತರ ಕಳ್ಸಿದ. ಇದೇನಪ್ಪ ಚಂದ ಹೆಸರು ಅಂತಂದು ಫೋನ್ ಹಚ್ಚಿ ನಾನು ಇಂತವರ ಅಳಿಯ ನೀವು ಪರಿವಿಧಿ ಅವರಾ ಅಂತಂದ್ರೆ ಆಕಡೆಯವ್ರು ಓ ನಿಮ್ಮ ಮಾವ ಹೇಳಿದ್ರು ನೀವು ಫೋನ್ ಮಾಡ್ತೀರಂತ  ನನ್ನ ಹೆಸರು ಪರಿವಿಧಿ ಅಲ್ಲ ಪೃಥ್ವಿ ಅಂದ್ರು . ನಾನು ಅಲ್ಲೇ ಮೂರ್ಛೆ ಹೋಗೋದೊಂದು ಬಾಕಿ ಇತ್ತು . ಅಂತೂ ಈ ಮೆಸೇಜ್ ಟೈಪ್ ಮಾಡೋದು ಕಲೀಲಿಕ್ಕೆ ಹೋಗಿ ಪೃಥ್ವಿ ಅಂತ ಟೈಪ್ ಮಾಡೋದು ಕಷ್ಟ ಆಗಿ ಅದು ಪರಿವಿಧಿ ಅಂತಾಗಿ ನಮ್ಮನ್ನ ತಲುಪಿತ್ತು. ಹೀಂಗಿತ್ತು ನೋಡ್ರಿ ಅಪ್ಪನ ಸ್ಮಾರ್ಟ್ ಮೊಬೈಲ್ ಮೋಜು .

Arpitha Rao

ಪೀಕ್ ಡಿಸ್ಟ್ರಿಕ್ಟ್

ಇಂಗ್ಲೆಂಡಿನ ಬಹುತೇಕ ಭಾಗಗಳು ವರ್ಷದ ಬೇರೆಬೇರೆ ಕಾಲಮಾನಗಳಲ್ಲಿ ವಿಭಿನ್ನ ರೀತಿಯಲ್ಲಿ ಕಾಣುತ್ತವೆ ಮತ್ತು ಅದಕ್ಕೆ ತನ್ನದೇ ಆದ ವೈಶಿಷ್ಟತೆಯನ್ನು ಕೂಡ ಹೊಂದಿರುವುದು ಕಂಡುಬರುತ್ತದೆ. ಉದಾಹರಣೆಗೆ ಬೇಸಿಗೆಯಲ್ಲಿ ಒಂದುರೀತಿಯ ಹಸಿರಾದರೆ ಚಳಿಗಾಲದಲ್ಲಿ ಬೋಳು ಮರಗಳು ಕೆಲವೊಮ್ಮೆ ಹಿಮ ತುಂಬಿದ ಶ್ವೇತವರ್ಣವನ್ನು ಮೈತುಂಬಿಸಿಕೊಂಡಿರುವ ಪ್ರಕೃತಿಯ ಅಂದವನ್ನು ನೋಡುವುದೇ ಇನ್ನೊಂದು ಸೊಬಗು. ಹಾಗೆಯೇ ಶಿಶಿರ ಋತುವಿನಲ್ಲಿ ಹೂವಿನಿಂದ ಹಾಸಿ ಹೊದ್ದಿರುವ ಪ್ರಕೃತಿಯನ್ನು ಕಣ್ಣು ತುಂಬಿಸಿಕೊಳ್ಳುವುದು ಎಲ್ಲಕ್ಕಿಂತ ಚೆಂದ.

ಹಾಗೆಯೇ ಇನ್ನೇನು ಇಲ್ಲಿನ ವಸಂತ ಕಾಲ ಮುಗಿದು ಚಳಿಗಾಲ ಪ್ರಾರಂಭವಾಗಬೇಕು ಎನ್ನುವಾಗ  ನಾವು ಈ ಭಾರಿ ಹೋಗಿದ್ದು ಪೀಕ್ ಡಿಸ್ಟ್ರಿಕ್ಟ್ . ಹೆಸರಿಗೆ ತಕ್ಕ ಹಾಗೆ ಇಲ್ಲಿ ಎಲ್ಲಿ ನೋಡಿದರೂ ಹಸಿರು ಬೆಟ್ಟಗಳು. ಮಲೆನಾಡಿನಲ್ಲಿ ಬೆಳೆದ ನನಗೆ ಹಸಿರು ಬೆಟ್ಟಗುಡ್ಡಗಳು ಹೊಸದಲ್ಲ ಅವುಗಳ ತಪ್ಪಲಿನಲ್ಲೇ ಬೆಳೆದು ಬಂದಿದ್ದರಿಂದ ಅದೊಂದು ರೀತಿಯಲ್ಲಿ ಎಷ್ಟು ಸೋಜಿಗವೋ ಅಷ್ಟೇ ರೂಢಿ ಕೂಡ ಎನ್ನಬಹುದು. ಆದರೆ ಇಂಗ್ಲೆಂಡ್ ನ ಬೆಟ್ಟಗಳ ಸೊಗಸೇ ಬೇರೆ. ಎತ್ತರದ ದಟ್ಟ ಅರಣ್ಯಗಳ ನಡುವಿನ ಬೆಟ್ಟಗಾಡುಗಳು ಇದಲ್ಲ. ಮನುಷ್ಯ ತನ್ನ ಅನುಕೂಲಕ್ಕೆ ತಕ್ಕಂತೆ ತಾನೇ ಮಾಡಿಕೊಂಡಿದ್ದಾನೇನೋ ಎಂಬಂತಿರುತ್ತದೆ ಇಲ್ಲಿನ ಬೆಟ್ಟಗಳು.ಪೀಕ್ ಡಿಸ್ಟ್ರಿಕ್ಟ್ ನ ಯಾವುದೇ ಭಾಗಗಳಿಗೆ ಹೋದರೂ ಕೂಡ ಸಾಕಷ್ಟು ನಡೆಯುವುದು ಅಥವಾ ಬೆಟ್ಟ ಹತ್ತುವುದು ಇದ್ದೇ ಇರುತ್ತದೆ ಆದ್ದರಿಂದ ರಣ ಬಿಸಿಲಿನಲ್ಲಿ ಹೋದರೆ ಬೆಟ್ಟ ಹತ್ತುವುದು ಕಷ್ಟವಾಗಬಹುದು ಆದ್ದರಿಂದ ಇಂಗ್ಲೆಂಡ್ ನ ಸ್ಪ್ರಿಂಗ್ ಕಾಲದಲ್ಲಿ ಹೋದರೆ ಇಲ್ಲಿನ ಪ್ರವಾಸಿ ಸ್ಥಳಗಳನ್ನು ಸಾಕಷ್ಟು ಮಜಾ  ಮಾಡಬಹುದು .

ಹಾಗೆ ಈ ಬಾರಿ ನಾವು ನೋಡಹೋಗಿದ್ದು ಪೀಕ್ ಡಿಸ್ಟ್ರಿಕ್ಟ್ ನ ಡೋವ್ ಡೇಲ್ 

ಡೋವ್ ಡೇಲ್ :

ಡರ್ಬಿಶೇರ್ ನಲ್ಲಿರುವ ಡೋವ್ ಡೇಲ್ ಗೆ ವರ್ಷಪೂರ್ತಿ ಸಾವಿರಾರು ಪ್ರವಾಸಿಗರು ಬರುತ್ತಾರೆ. ನಾವು ಹೋಗಿದ್ದು ಸೆಪ್ಟೆಂಬರ್ ನ ಮಧ್ಯ ಭಾಗವಾದ್ದರಿಂದ ಹದವಾದ ಚಳಿ ಜೊತೆಗೆ ಸೂರ್ಯನ ಎಳೆ ಬಿಸಿಲು ಎರಡೂ ಬೆರೆತು ಮನಸ್ಸಿಗೆ ಮುದ ನೀಡುವ ವಾತಾವರಣವಾಗಿತ್ತು . ಡೋವ್ ಡೇಲ್ ಸ್ಟೆಪ್ಪಿಂಗ್ ಸ್ಟೋನ್ ಎಂದೇ ಕರೆಯಲಾಗುವ ಈ ಪ್ರವಾಸಿ ಸ್ಥಳವನ್ನು ಡೋವ್ ಡೇಲ್ ವಾಕ್ ಎಂದು ಕೂಡ ಹೇಳುತ್ತಾರೆ.  ಇದಕ್ಕೆ ಕಾರಣ ಇಲ್ಲಿ ಹರಿಯುತ್ತಿರುವ ನದಿಯ ಮದ್ಯೆ ಕಲ್ಲನ್ನು ಇಡಲಾಗಿದ್ದು ಇಲ್ಲಿನ ಬೆಟ್ಟವನ್ನು ಹತ್ತಲು ಒಂದೊಂದೇ ಕಲ್ಲುಗಳನ್ನು ದಾಟಿ ಹೋಗಬೇಕು.
ಇಲ್ಲಿ ಹದಿನೆಂಟನೇ ಶತಮಾನದಲ್ಲಿ  ಪ್ರಾರಂಭವಾದ  ಪ್ರವಾಸೋದ್ಯಮ ಇಂದು ಯುನೈಟೆಡ್ ಕಿಂಗ್ಡಮ್  ನ ಅತ್ಯಂತ  ಜನಪ್ರಿಯ ಪ್ರವಾಸಿ ತಾಣವಾಗಿ ಮಾರ್ಪಟ್ಟಿದೆ. ಇಲಾಮ್ ಎಂಬ ಹಳ್ಳಿಯಲ್ಲಿ ಸುಮಾರು ೪೫ ಮೈಲಿಯವರೆಗೆ ಹರಿಯುವ ಡೋವ್ ಎಂಬ ನದಿಯ ತಟದಲ್ಲಿ ಸುಣ್ಣದ ಕಲ್ಲಿನ ಕೊರೆತಗಳಿಂದ ನಿರ್ಮಾಣವಾದ ಬೆಟ್ಟವನ್ನು ಡೋವ್ ಡೆಲ್ ವ್ಯಾಲಿ ಎಂದೇ ಕರೆಯುತ್ತಾರೆ. 

ಅದೆಲ್ಲಕ್ಕಿಂತ ಇಲ್ಲಿ ಮನಸೂರೆಗೊಳ್ಳುವುದು ಡೋವ್ ನದಿಯ ಜುಳುಜುಳು ನಾದದ ಮಧ್ಯೆ  ಸ್ಟೆಪ್ಪಿಂಗ್ ಸ್ಟೋನ್ ಗಳಲ್ಲಿ ಅತ್ತ  ದಾಟಿ ಹೋದರೆ ಸುತ್ತಲೂ ಹಸಿರು ಹಾಸಿದ ಬೆಟ್ಟಗಳು ಮತ್ತು ಅದನ್ನು ನೋಡಲೆಂದೇ ಪ್ರವಾಸಿಗರೊಂದಿಗೆ ಬಂದಂತಿರುವ ಚಿನ್ನದ ಗೆರೆ ಎಳೆದಂತೆ ಕಾಣುವ ಸೂರ್ಯನ ಹದವಾದ ಕಿರಣಗಳು . ಬೆಟ್ಟದ ತುದಿಯನ್ನು ಹತ್ತಿ ನೋಡಿದರೆ ಅಲ್ಲಿನ ಚಿತ್ರಣ ಮನಸ್ಸನ್ನು ಮುದಗೊಳಿಸುವುದು ಖಂಡಿತ.

ಡರ್ವೆಂಟ್ :

ಡೋವ್ ಡೇಲ್ ನಿಂದ ಸುಮಾರು ಒಂದು ತಾಸು ಕಾರಿನ ಪ್ರಾಯಾಣ ಡರ್ವೆಂಟ್ ಗೆ.  ಡರ್ವೆಂಟ್ ಕೂಡ ಪೀಕ್ ಡಿಸ್ಟ್ರಿಕ್ಟ್ ನ ಒಂದು ಮುಖ್ಯ ಪ್ರವಾಸಿ ತಾಣಗಲ್ಲಿ ಒಂದು . ಡೋವ್ ಡೇಲ್ ನಿಂದ ಡರ್ವೆಂಟ್ ಪ್ರಯಾಣವೇ ಸುಂದರ. ಇಕ್ಕೆಲಗಳಲ್ಲಿ ಇರುವ ಬೆಟ್ಟಗಳ ನಡುವೆ ಕಾರಿನಲ್ಲಿ ಹೋಗುವ ಅನುಭವ ಒಂದುರೀತಿಯ ಮುದ ನೀಡುತ್ತದೆ. ಹಸಿರು ಮತ್ತು ಹಳದಿ ಬಣ್ಣಗಳಿಂದ ಕುಡಿದ ಬೆಟ್ಟಗಳು ಮತ್ತು ಅಲ್ಲಲ್ಲಿ ಕುದುರೆ , ಮೇಕೆ , ಕುರಿಗಳು  ಮೇಯುತ್ತಿರುವುದನ್ನು  ಕಾಣಬಹುದು.  ಕೆಲವು ಭಾಗಗಳಲ್ಲಿ ಇಲ್ಲಿನ ಟ್ರೆಕಿಂಗ್ ಎಂದೇ ಬರುವ ಜನರು ನಡೆದು ಹೋಗುವುದು ಅಥವಾ ಸೈಕ್ಲಿಂಗ್ ಮಾಡಿಕೊಂಡು ಪ್ರವಾಸಿ ಸ್ಥಳಕ್ಕೆ ಹೋಗುತ್ತಿರುವುದು ಕಂಡುಬರುತ್ತದೆ. 
ಡೋವ್ ಡೇಲ್ ಗೆ ಹೋಲಿಸಿದರೆ ಡರ್ವೆಂಟ್ ಸಂಪೂರ್ಣ ವಿಭಿನ್ನ ಎನಿಸುತ್ತದೆ. ಇದೊಂದು ನಿಸರ್ಗಧಾಮ . ಡಾರ್ವೆಂಟ್ ನಲ್ಲಿ ಹಸಿರು ಹಾಸಿ ಹೊದ್ದಂತಿರುವ ಸ್ಥಳದಲ್ಲಿ ಪ್ರವಾಸಿಗರಿಗೋಸ್ಕರವೇ ಕುಳಿತುಕೊಳ್ಳಲು ಅಲ್ಲಲ್ಲಿ ಕಲ್ಲಿನ ಬೆಂಚು. ಅಲ್ಲಿ ಕುಳಿತು ಎದುರುಗಿರುವ ಪ್ರಕೃತಿಯನ್ನು ನೋಡುತ್ತಿದ್ದರೆ ಸುತ್ತಲಿನ ಪ್ರಪಂಚವೇ ಮರೆತಂತ ಅನುಭವ.  ಇಲ್ಲಿ ಡರ್ವೆಂಟ್ ನದಿಗೆ  ಬ್ರಿಜ್ ಕಟ್ಟಲಾಗಿದೆ . ಜೊತೆಗೆ ಇದನ್ನು ಡರ್ಬಿಶೈರ್ ನ ಲೇಕ್ ಡಿಸ್ಟ್ರಿಕ್ಟ್ ಎಂದು ಕರೆಯಲಾಗುತ್ತದೆ. ಜೊತೆಗೆ ಇಲ್ಲಿ ಕಾಡುಗಳ ಮಧ್ಯೆ ನಡೆದುಕೊಂಡು ಹೋಗಿ ಪ್ರವಾಸಿ ಸ್ಥಳವನ್ನು ತಲುಪಬೇಕಾಗಿದ್ದು ಇದು ದಿನನಿತ್ಯದ ಜೀವನ ಜಂಜಾಟದಲ್ಲಿರುವವರಿಗೆ ಒಂದು ರೀತಿಯ ಪ್ರಶಾಂತ ವಾತಾವರಣವನ್ನು ನೀಡುತ್ತದೆ.

ಇಷ್ಟೇ ಅಲ್ಲದೆ ಪೀಕ್ ಡಿಸ್ಟ್ರಿಕ್ಟ್ ಗೆ ಹೋಗುವಾಗ ಆಗಾಗ ಬರುವ ಮಳೆ ಎದುರಿಸಲು ರೈನ್ ಕೋಟ್ ಅಥವಾ ಕೊಡೆ ಮತ್ತು ಬೆಟ್ಟವನ್ನು ಹತ್ತಲು ಟ್ರೆಕಿಂಗ್ ಗೆ ಸೂಕ್ತವಾದ ಶೂ  ಅನಿವಾರ್ಯ.


Arpitha Rao
Banbury
Oxford

ಗಂಟು ಮೂಟೆ



ಆ ಚಿತ್ರ ಪ್ರಾರಂಭವಾಗುವುದೇ ಹಾಗೆ ಚಲನಚಿತ್ರದ ಮೇಲೆ ಅತೀವ ಹುಚ್ಚನ್ನು ಹಚ್ಚಿಕೊಂಡಿರುವ ಹೆಣ್ಣು ಮಗಳು ಒಂಟಿಯಾಗಿ ಮೂವಿ ನೋಡಲು ಹೋದಾಗ ಅನಿವಾರ್ಯವಾಗಿ ಶೋಷಣೆಗೆ  ಒಳಗಾಗಿ ತತ್ತರಿಸಬೇಕಾಗುತ್ತದೆ . ಹಾಗಂತ ಇದು ಹೆಣ್ಣಿನ ಶೋಷಣೆಗೆ ಸಂಬಂಧ ಪಟ್ಟ  ಕಥೆಯಲ್ಲ. ಜೀವನದ ಪಯಣದಲ್ಲಿ ಪ್ರತಿಯೊಬ್ಬರೂ ಒಂದಲ್ಲ ಒಂದು ರೀತಿಯ ಗಂಟು ಮೂಟೆ ಕಟ್ಟಿಕೊಂಡು ಓಡಾಡುತ್ತಿರುವವರೇ . ನಾವು ಇರುವಷ್ಟು ದಿನ ನಮ್ಮ ಜೊತೆ ಕೆಲವು ಮರೆಯಲಾರದ ನೆನಪುಗಳನ್ನು ಹೊತ್ತು ಸಾಗುವುದು ಅನಿವಾರ್ಯ ಕೂಡ.  ಅಂತಹ ಒಂದು ಪ್ರಯಾಣವನ್ನು ತಿಳಿಸುವ ಚಿತ್ರವೇ ರೂಪ ರಾವ್ ನಿರ್ದೇಶನದ ಗಂಟು ಮೂಟೆ . ಒಂದು ಮುಗ್ದ ವಯಸ್ಸಿನ ಹೆಣ್ಣು ಮಗಳು  ವಯಸ್ಸಿಗೆ ಮೀರಿ ಪ್ರೀತಿಯಲ್ಲಿ ಮುಳುಗಿ ತನ್ನ ಬದುಕನ್ನೇ ಹೇಗೆ ತಿರುಗಿಸಿಕೊಳ್ಳಬಲ್ಲಳು ಎಂಬುದನ್ನು ಈ ಚಿತ್ರ ಮನದಟ್ಟು ಮಾಡುತ್ತದೆ. ಹದಿಹರೆಯದಲ್ಲಿ ಕಾಡುವ ಪ್ರೀತಿ ಹೇಗೆ ಜೀವನ ಪರ್ಯಂತ ಮರೆಯಲಾರದೆ ಬೆನ್ನತ್ತ್ತಿ ಬಂದುಬಿಡಬಹುದು ಎಂಬುದನ್ನು ತೋರಿಸುವ ಪ್ರಯತ್ನ ಈ ಚಿತ್ರದಲ್ಲಿದೆ .ಚಿತ್ರದಲ್ಲಿ ಕಂಡು ಬರುವ ಕೆಲವು ಘಟನೆಗಳು ಬಹುತೇಕ ಜನರು ಶಾಲಾ ಕಾಲೇಜುಗಳಲ್ಲಿ ಒಂದಿಲ್ಲೊಂದು ರೀತಿಯಲ್ಲಿ ಅನುಭವಿಸಿರುವುದು ನಿಜವಾದ್ದರಿಂದ ನೋಡುಗರನ್ನು ನೆನಪಿನ ಲೋಕಕ್ಕೆ ಕರೆದುಕೊಂಡು ಹೋಗಬಹುದಾದ ಚಿತ್ರವಿದು.

ಚಲನಚಿತ್ರ ನೋಡಿ , ಪ್ರೀತಿಯ ಬರಹಗಳನ್ನು ಬರೆದು , ಚಲನಚಿತ್ರದ ಹೀರೋ ಗಳ ಮೇಲೆ ಬೆಳೆಯುವ ಪ್ರೀತಿ ಕೊನೆಗೆ ತನಗೂ ಅಂತಹದೇ ಒಂದು  ಹುಡುಗನನ್ನು ಹುಡುಕುವಲ್ಲಿ ತಲ್ಲಣಿಸುತ್ತದೆ ಎಂದು ಕೂಡ ಈ ಚಿತ್ರದಲ್ಲಿ ತೋರಿಸಲಾಗಿದೆ. ಪ್ರಬುದ್ಧವಾಗಿ ಬೆಳೆಯುವ ಮೊದಲೇ ಇಂತಹ ಆಸೆಗಳಿಗೆ ಒಳಗಾಗುವ ಹೆಣ್ಣು ಮುಂದೇನಿಲ್ಲ ಅನುಭವಿಸಬೇಕಾಗಬಹುದು ಎಂಬುದನ್ನು ತೋರಿಸುವ ಪ್ರಯತ್ನ ರೂಪ ರಾವ್ ಮಾಡಿದ್ದಾರೆ .   ಚಲನ ಚಿತ್ರ ಸಂಪೂರ್ಣವಾಗಿ ೯೦ ರ ದಶಕದಲ್ಲಿ ನಡೆದಿರಬಹುದಾದ ಘಟನೆಗಳಂತೆ ಪತ್ರ ಮತ್ತು ಲ್ಯಾಂಡ್ಲೈನ್ ಫೋನ್ ಇಂತವನ್ನೆಲ್ಲ ತೋರಿಸಿದರೂ ಕೂಡ ಹೆಚ್ಚಿನ ಕಡೆ ಇದು ಇಂದಿಗೂ ಕೂಡ ಅನ್ವಯಿಸುತ್ತದೆ ಎಂದು ನನ್ನ ಅಭಿಪ್ರಾಯ. ಇಂದು ಕೂಡ ಶಾಲಾ ಕಾಲೇಜುಗಳಿಗೆ ಹೋಗುವ ಮಕ್ಕಳಲ್ಲಿ ಇಂತಹ ಆಸೆ ಆಕಾಂಕ್ಷೆಗಳು ಸಹಜ ಮತ್ತು ಅದು ಕೂಡ ಇಂತಹದೇ ಪರಿಣಾಮವನ್ನು ಬೀರಿದ ಉದಾಹರಣೆಗಳನ್ನು ನಮ್ಮ ಸುತ್ತಮುತ್ತಲೇ ಕಾಣಬಹುದು. ಈಗಿನ ಹೈಸ್ಕೂಲ್ ಮತ್ತು ಕಾಲೇಜಿನ ಮಕ್ಕಳು ಈ ಚಿತ್ರವನ್ನು ನೋಡಿ ತಾವೂ ಹೀಗಾಗಬಾರದು ಎಂಬುದನ್ನು ಮನಗೊಳ್ಳಬೇಕು ಎಂಬ ಸಂದೇಶವನ್ನು ಸಾರ ಹೊರಟಿರುವ ಚಿತ್ರವಿದು . ಆದರೆ ಅಲ್ಲಲ್ಲಿ ಕಂಡು ಬರುವ ಅಗತ್ಯಕ್ಕಿಂತ ಹೆಚ್ಚೆನಿಸುವ ಪ್ರೇಮಕ್ಕಿಂತ ಆ ಸಮಯದಲ್ಲಿ ಕಂಡುಬರುವ ಬಯಕೆಯನ್ನು ತೋರಿಸುವ ಕಿಸ್ಸಿಂಗ್ ಸೀನ್ ಗಳು ಮುಜುಗರ ಉಂಟು ಮಾಡುವಂತೆಯೂ ಅದರ ಅವಶ್ಯಕತೆ ಇರಲಿಲ್ಲ ಎಂದು ಕೂಡ ಅನ್ನಿಸುತ್ತದೆ.  ಹದಿಹರೆಯದ ಪ್ರೀತಿ ಹೇಗೆ ಮಕ್ಕಳ ಜೀವನವನ್ನೇ ಹಾಳುಮಾಡಿಬಿಡಬಲ್ಲದು ಎಂಬುದನ್ನು ಇಲ್ಲಿ ತೋರಿಸಲಾಗಿದೆ.  ಹದಿಹರೆಯದ ಸಮಯದಲ್ಲಿ ಹುಟ್ಟುವ ಮೊದಲ ಪ್ರೀತಿ ಕೊನೆಯವರೆಗೂ ಇರುತ್ತದೆಯೋ ಇಲ್ಲವೋ ಆದರೆ ಅದರ ನೆನಪು ಮಾತ್ರ ಕಾಡುವುದು ಖಂಡಿತ ಎಂಬುದು ಈ ಚಲನಚಿತ್ರದ ಪೂರ್ಣ ಸಂದೇಶ. ಅಂತಹ ವಯಸ್ಸಿನಲ್ಲಿ ತೆಗೆದುಕೊಳ್ಳುವ ನಿರ್ಧಾರ ಇಡೀ ಇಬ್ಬರ ಜೀವನವನ್ನೇ ಹಾಳುಮಾಡಿಬಿಡಬಹುದು ಅಥವಾ ಒಂದು ವ್ಯಕ್ತಿತ್ವವನ್ನು ರೂಪಿಸಲು ಬುನಾದಿ ಆಗಿಬಿಡಬಹುದು ಎಂಬುದನ್ನು ತೋರಿಸಿರುವ ಚಿತ್ರವಿದು. ಕಥಾನಾಯಕಿಯನ್ನೇ ಮುಖ್ಯವಾಗಿ ಇಟ್ಟುಕೊಂಡು ಮಾಡಿರುವ ಈ ಚಿತ್ರದಲ್ಲಿ ತೇಜು ಬೆಳವಾಡಿಯವರ ಪಾತ್ರ ಸಹಜ ಸುಂದರವಾಗಿ ಮೂಡಿ ಬಂದಿದೆ.
ಚಿತ್ರದಲ್ಲಿ ಬರುವ ಹಾಡುಗಳು ಒಳ್ಳೆಯ ಸಾಹಿತ್ಯವನ್ನು ಹೊಂದಿದ್ದು , ಕಾಲೇಜಿನ ಮಕ್ಕಳ ಮನಸ್ಥಿತಿ ಸಾರುತ್ತದೆ. ಕಥೆಗೆ ತಕ್ಕ ಪಾತ್ರವನ್ನು ಮಾಡುವಲ್ಲಿ ನಿಶ್ಚಿತ್ ಮತ್ತು ತೇಜು ಬೆಳವಾಡಿ ಇಬ್ಬರೂ ಯಶಸ್ವಿಯಾಗಿದ್ದಾರೆ. ಕಥಾ ನಾಯಕನಾದ ನಿಶ್ಚಿತ್ ಕೂಡ ಚಲನಚಿತ್ರ ಮುಗಿದ ನಂತರವೂ ಮನಸ್ಸಿನಲ್ಲಿ ಉಳಿಯುತ್ತಾರೆ . ನೀವೂ ಒಮ್ಮೆ ಈ ಚಲನಚಿತ್ರ ವೀಕ್ಷಿಸಿ ಮತ್ತು ಹಳೆಯ ದಿನಗಳ ಮೆಲುಕುಹಾಕಿ.

Arpitha Rao
Banbury