Wednesday 9 April 2014

ಆಕಸ್ಮಿಕ (ಕಥೆ)

Got published in Sakhi magazine may 1st 2014 edition



ಆಕೆಯ ಹೆಸರೇ ಹಾಗೆ ಹೆಸರಿಗೆ ತಕ್ಕ ಹಾಗೆ ಆಕೆ ಹುಟ್ಟಿದ್ದು ಆಕಸ್ಮಿಕವಾಗಿ ಎಂದು ಅಪ್ಪ ಸದಾಶಿವ ಯಾವಾಗಲೂ ತಮಾಷೆ ಮಾಡುತ್ತಿರುತ್ತಾರೆ.ಕಾಲೇಜು ಮುಗಿಸಿ ಮುಂದಿನ  ಮೆಟ್ಟಿಲು ಹತ್ತಿತ್ತುರುವ ಮಗಳನ್ನು ದೂರದ ಊರಿನಲ್ಲಿ ಎಂ ಎಸ್ಸಿ ಮಾಡಲು,ಹಾಸ್ಟೆಲ್ ಸೇರಿಸಿ ಮನೆಗೆ ಹೋರಾಟ ಅಪ್ಪ ಮಗಳೇ ಬದುಕಿನಲ್ಲಿ ಕೆಲವೊಂದು ಘಟನೆಗಳು ನಮಗೇ ತಿಳಿಯದೇ ನಡೆದು ಹೋಗುತ್ತದೆ ಹಾಗೆ ತಿಳಿಯದೇ ನಡೆದು ಹೋಯಿತು ಎಂಬ ಕೆಲಸವನ್ನು ಮಾಡಿಕೊಳ್ಳಬೇಡ ಎಂದು ಎಚ್ಚರಿಕೆ ನೀಡಿ ಕಣ್ಣ ತುಂಬಾ ನೀರು ತುಂಬಿಕೊಂಡು ಮಗಳನ್ನು ಬಿಟ್ಟು ಮನೆಗೆ ತೆರಳಿದರು.

ಆಕಸ್ಮಿಕಳ ತಾಯಿ ಅಹಲ್ಯಾಳಿಗೆ ಮಗಳನ್ನು ದೂರದ ಊರಿನಲ್ಲಿ ಕಾಲೇಜಿಗೆ ಸೇರಿಸುವುದು ಸ್ವಲ್ಪವೂ ಇಷ್ಟವಿರಲಿಲ್ಲ ಎಷ್ಟಾದರೂ ಇನ್ನು ೨ ವರ್ಷದ ನಂತರ ಮದುವೆ ಮಾಡಲೇಬೇಕು.ಅಣ್ಣನ ಮಗ ಪ್ರತ್ಯೂಶನೇ ತನ್ನ ಅಳಿಯನಾಗುವುದು ಎಂಬುದು ಆಗಲೇ ಸಿದ್ಧವಾಗಿದೆ.ಅದಕ್ಕೆ ಎಲ್ಲರ ಒಪ್ಪಿಗೆಯೂ ಇದೆ.ಆಕಸ್ಮಿಕಳನ್ನು ಇದರ ಬಗ್ಗೆ ಕೇಳುವ ಅಗತ್ಯವೇ ಇಲ್ಲ ಏಕೆಂದರೆ ಅವರಿಬ್ಬರೂ ಒಟ್ಟಿಗೆ ಬೆಳೆದವರು ಒಪ್ಪಿಯೇ ಒಪ್ಪುತ್ತಾಳೆ ಎಂಬುದು ಅಹಲ್ಯಾಳ ಅಂಬೋಣ.
ಪತಿ ಮನೆಗೆ ಬರುವುದನ್ನೇ ಕಾಯುತ್ತಿದ್ದ ಅಹಲ್ಯ ಸಿಟ್ಟಿನಿಂದ ಆತನ ಮೇಲೆ ಹರಿಹಾಯ್ದಳು ' ಅಷ್ಟಕ್ಕೆಲ್ಲಾ ಯಾಕೆ ಚಿಂತೆ? ಒಳ್ಳೆ ಮಾರ್ಕ್ಸ್ ತೆಗೆದಿದ್ದಾಳೆ ಓದಲಿ ಬಿಡು.ನಾಳೆ ಮಕ್ಕಳಿಗೆ ನಾಲ್ಕು ಅಕ್ಷರ ಹೇಳಿ ಕೊಡಲು  ಬೇಡವಾ?' ಮಕ್ಕಳಿಗೆ ನಾಲ್ಕು ಅಕ್ಷರ ಹೇಳಿಕೊಡಲಿಕ್ಕೆ ಡಿಗ್ರೀ ಸಾಲದಾ?ಎಂಬುದು ಅಹಲ್ಯಾಳ ಪ್ರತಿಪ್ರಶ್ನೆ!
ಅವಳೇ ಒಳ್ಳೆ ಮಾರ್ಕ್ಸ್ ತೆಗೆದು ಸ್ಕಾಲರ್ ಶಿಪ್ ಸಿಕ್ಕಿರುವಾಗ ಕಲಿಸದೆ ಇರಲಿಕ್ಕಾಗುವುದೇ  ಎಂಬುದು ಸದಾಶಿವ ಹೇಳಿದ ಉತ್ತರ ರೀತಿಯ ಪ್ರಶ್ನೆ!

ಇತ್ತ ಆಕಸ್ಮಿಕಾಳಿಗೆ ಓದಿನ ಬಗ್ಗೆ ಆಸಕ್ತಿ ಮೊದಲಿಗಿಂತ ಹೆಚ್ಚಾಗಿತ್ತು, ಮೊದಲು ಕೇವಲ ಹೆಚ್ಚು ಮಾರ್ಕ್ಸ್ ತೆಗೆಯಬೇಕು ಎಂದಿದ್ದವಳಿಗೆ ಈಗ ಇಡೀ ರಾಜ್ಯಕ್ಕೆ ಹೆಸರು ಮಾಡಬೇಕೆಂಬ ಆಸೆ ಕನಸು.

ರೂಪವತಿಯಾದ ಆಕಸ್ಮಿಕಳಿಗೆ ಪ್ರೀತಿಯಲ್ಲಿ ಬೀಳಲು ಹೆಚ್ಚು ಸಮಯ ಹಿಡಿಯಲಿಲ್ಲ.ಅದೇ ಸಮಯದಲ್ಲಿ ಅಮ್ಮನಿಂದ ಒಂದು ಕಾಗದ ಬಂತು.
'ಪ್ರೀತಿಯ ಮಗಳೇ ಓದಿ ನೀನು ಸಾಧನೆ ಮಾಡಿದರೆ ನನಗಿಂತ ಕುಶಿ ಪಡುವವಳು ಬೇರೆ ಇಲ್ಲ. ಆದರೆ ಗಮನ ಓದಿನ ಕಡೆ ಹೆಚ್ಚಿರಲಿ.ಉಜ್ವಲ ಭವಿಷ್ಯ ನಿನ್ನದಾಗಲಿ'.ಓದಿದ ನಂತರ ಆಕೆಗೆ ಅನ್ನಿಸಿತು ತನ್ನ ಭವಿಷ್ಯ ಆಯುಶ್ ನಲ್ಲಿದೆ.ಆತ ತನ್ನ ಕೈಹಿಡಿದಾಗ ಭವಿಷ್ಯ ಉಜ್ವಲವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.

ಆಕಸ್ಮಿಕಳಿಗೆ ಎರಡು ವರ್ಷ ಹೇಗೆ ಕಳೆಯಿತೋ ತಿಳಿಯಲಿಲ್ಲ , ಆಗೀಗ ಮನೆಗೆ ಹೋದಾಗ ತಾಯಿ ಆಕಸ್ಮಿಕ ಸದಾ ಕನಸಿನ ಲೋಕದಲ್ಲಿ ವಿಹರಿಸುತ್ತಿರುವುದನ್ನು ಗಮನಿಸಿದ್ದಳು.ಇನ್ನು ಹೆಚ್ಚು ತಡ ಮಾಡಬಾರದು ಎಂದು ಪತಿಯಲ್ಲಿ ಹೇಳಿ ತನ್ನ ಅಣ್ಣನನ್ನು ಬರಹೇಳಿ ಮಾದುವೆ ಮಾತುಕತೆ ಮುಗಿಸಬೇಕು ಎಂದು ಹಠ ಹಿಡಿದರು.

ಸದಾಶಿವರಿಗೆ ಇದು ಸರಿಯಾದ ಸಮಯ ಎಂದೆನಿಸಿದ್ದರಿಂದ ಮಗಳು ಮನೆಗೆ ಬಂದ ನಂತರ ಒಂದು ಸರಿಯಾದ ದಿನವನ್ನು ನೋಡಿ ಅಹಲ್ಯಾಳ ಅಣ್ಣ ಮತ್ತು ಅವರ ಕುಟುಂಬಕ್ಕೆ ಕರೆ ಕೊಟ್ಟರು. ಇಷ್ಟೆಲ್ಲಾ ನಡೆಯುತ್ತಿದ್ದ ವಿಷಯ ಅರಿತ ಆಕಸ್ಮಿಕ ತಂದೆ ತಾಯಿಗೆ ಕಡಾ ಖಂಡಿತವಾಗಿ ತಾನು ಪ್ರದ್ಯುಮ್ನ್ನನ್ನು ಮದುವೆ ಆಗುವುದು ಸಾಧ್ಯವೇ ಇಲ್ಲ.ಇಷ್ಟು ಓದಿ ಹಳ್ಳಿ ಮನೆಯಲ್ಲಿ ಮುಸುರೆ ತಿಕ್ಕುವುದೆಂದರೆ ನನ್ನ ಓದಿಗೇ ಕುತ್ತು ಎಂದು ಒಂದೇ ಸಮನೆ ಹಾರಾಡಿದಳು.ಶಾಂತ ಸ್ವಭಾವದವರಾದ ಸದಾಶಿವ ತನ್ನ ಮಗಳಿಗೆ ಬುದ್ದಿ ಹೇಳಲು ಪ್ರಯತ್ನಿಸಿದರು. ' ಪ್ರದ್ಯುಮ್ನನೇನು ಓದದೇ ಇರುವ ದಡ್ಡನಲ್ಲ ಆತನದೂ ಕೃಷಿಯಲ್ಲಿ ಸ್ನಾತಕೋತ್ತರ ಪದವಿಯಾಗಿದೆ.ಅವನ ಅಭಿರುಚಿ ಕೃಷಿಯ ಮೇಲಿರುವುದರಿಂದ ಆತ ಇಲ್ಲಿ ಬಂದು ಮನೆಯ ಕೃಷಿಯನ್ನು ನಡೆಸಿಕೊಂಡು ಹೋಗುತ್ತಿದ್ದಾನೆ.ನೀನು ಆತನನ್ನು ಮದುವೆಯಾದರೆ ಸಂತೋಷವಾಗಿರಬಲ್ಲೆ ಎಂಬ ನಂಬಿಕೆ ನನಗಿದೆ ಎಂದು ಎಷ್ಟು ಬುದ್ದಿ ಹೇಳಿದರೂ ಆಕಸ್ಮಿಕ ತಡಮಾಡದೇ ತನ್ನ ಗೆಳೆಯ ಆಯುಶ್ ಜೊತೆ ತಾನು ಮದುವೆಯಾಗುವುದಾಗಿ ಹಠ ಹಿಡಿದು ಮನೆ ಬಿಟ್ಟು ಹೊರಟುಬಿಟ್ಟಳು.

ಇತ್ತ ವಿಷಯ ತಿಳಿದ ಪ್ರದ್ಯುಮ್ನ ನ ಮನೆಯವರು ಅವಳಿಗೇ ಇಷ್ಟವಿಲ್ಲದ ಮದುವೆ ಮಾಡಿ ಯಾವ ಪ್ರಯೋಜನ? ನೀವು ಪರಿಸ್ಥಿತಿಯನ್ನು ಹದಗೆದಿಸಬೇಡಿ ಎಂದು ತಂಗಿಗೆ ಬುದ್ದಿ ಹೇಳಿ ಪ್ರದ್ಯುಮ್ನನಿಗೆ ಆದಷ್ಟು ಬೇಗ ಬೇರೆ ಹುಡುಗಿ ಹುಡುಕಿ ಮದುವೆ ಮಾಡುವುದಾಗಿ ಹೇಳಿ ಹೋದರು.ಇತ್ತ ಪ್ರದ್ಯುಮ್ನನ ಮದುವೆ ಎಲ್ಲರ ಶುಭಾಹಾರೈಕೆಯೊಂದಿಗೆ ಆತನನ್ನು ಮೆಚ್ಚಿದ ಸೌಮ್ಯಳೊಂದಿಗೆ ಆದರೆ ಅತ್ತ ಆಕಸ್ಮಿಕ ಆಯುಶ್ ಜೊತೆ ಮದುವೆಯಾಗುವ ಕನಸು ಕಾಣತೊಡಗಿದ್ದಳು.

ಆಯುಶ್ ಗೆ ಫೋನ್ ಮಾಡಿ ನಡೆದ ಘಟನೆಯನ್ನು ತಿಳಿಸಿದಾಗ ಆತ ಯಾವುದೇ ಪ್ರತಿಕ್ರಿಯೆ ನೀಡದೇ ಸುಮ್ಮನಾದ.ಮೊದಲೇ ಸ್ವಲ್ಪ ಮಾತು ಕಡಿಮೆ ಹಾಗೆಂದು ಕೊಂಡು ಆಕಸ್ಮಿಕ ಆತನನ್ನು ಭೇಟಿಯಾಗುವ ಸಮಯಕ್ಕಾಗಿ ಕಾಯತೊಡಗಿದಳು.ಫೋನ್ ಮಾಡಿದಾಗಲೆಲ್ಲ ಕೆಲಸದಲ್ಲಿ ಬ್ಯುಸಿ ಎಂದು ಹೇಳುತ್ತಿದ್ದಾಗ ಈಕೆಗೆ ಅನುಮಾನದ ಹೊಗೆ ಪ್ರಾರಂಭವಾಯಿತು.ಕೊನೆಗೆ ಒಂದು ದಿನ ಆಯುಶ್ ನಿಂದ ಬಂದ ಮೇಲ್ ನೋಡಿ ಸಂತೋಷಗೊಂಡಳು.

ಪ್ರಿಯ ಆಕಸ್ಮಿಕ ,
ಇದೇ ತಿಂಗಳು ೨೮ ರಂದು ನನ್ನ ಮದುವೆ ನನ್ನ ಬಾಲ್ಯದ ಗೆಳತಿ ಮಾವನ ಮಗಳು ಅನುಷಾಳೊಂದಿಗೆ ನಡೆಯುತ್ತಿದೆ.ತಡವಾಗಿ ತಿಳಿಸುತ್ತಿರುವುದಕ್ಕೆ ಕ್ಷಮೆಯಿರಲಿ.ನೀನು ಸಿಗುವ ಮೊದಲಿನಿಂದಲೂ ನನಗೆ ಅನುಶಾಳಿಗೆ ಮನೆಯಲ್ಲಿ ಮದುವೆ ನಿಶ್ಚಯಿಸಿದ್ದರು.ಕೇವಲ ಎರಡು ವರ್ಷದ ಹಿಂದೆ ಸಿಕ್ಕ ನಿನಗೋಸ್ಕರ ಹುಟ್ಟಿದಾಗಿನಿಂದ ಜೊತೆಗಿರುವ ಅನುಶಾಳನ್ನು ದೂರ ಮಾಡಿದರೆ ದ್ರೋಹವಾಗುತ್ತದೆ ಎಂದೆನಿಸಿತು.ಯಾವುದೋ ಸಣ್ಣ ಆಮಿಷಗಳಿಗೆ ಪ್ರೀತಿ ಎಂಬ ಬಣ್ಣ ಕೊಟ್ಟ ನಮ್ಮಿಬ್ಬರ ಸ್ನೇಹವನ್ನು ಸ್ನೇಹಕ್ಕೇ ಸೀಮಿತಗೊಳಿಸುವುದು ಸೂಕ್ತ ಎಂದು ನನಗನಿಸಿತು.ನಮ್ಮಿಬ್ಬರ ಸ್ನೇಹ ಚಿರವಾಗಿರಲಿ.ಹ್ಞಾ ಇನ್ನೊಂದು ಮಾತು ಇದು ಆತುರದಿಂದ ತೆಗೆದುಕೊಂಡ ನಿರ್ಧಾರವಲ್ಲ,ಸಾಕಷ್ಟು ಯೋಚಿಸಿದ ನಂತರವಷ್ಟೇ ಈ ನಿರ್ಧಾರ ಸರಿ ಎಂದೆನಿಸಿತು.ನಿಮ್ಮ ಜೀವನ ಸಂತೋಷವಾಗಿರಲಿ.

ಇಂತಿ ,
ಆಯುಶ್

ಓದಿದವಳ ಕಣ್ಣಲ್ಲಿ ನೀರು ಹನಿಯುತ್ತಿತ್ತು.ತಾನು ಮಾಡಿದ ತಪ್ಪು ತನಗೇ ತಿರುಗಿ ಬಂದುದ್ದರ ಅರಿವಾಗಿ ಮನೆಗೆ ಹೋಗಿ ಪ್ರದ್ಯುಮ್ನನನ್ನು ಮದುವೆಯಾಗಲು ತನ್ನ ಒಪ್ಪಿಗೆ ಎನ್ನಬೇಕು ಎಂದುಕೊಂಡು ಮನೆಗೆ ಫೋನ್ ಮಾಡಿದಳು. ಅತ್ತ ಅಪ್ಪ

ಮಗಳೇ ನಿನ್ನ ತಪ್ಪನ್ನು ಕ್ಷಮಿಸಿದ್ದೇವೆ ಮನೆಗೆ ಬಾ, ಪ್ರದ್ಯುಮ್ನ ಈಗ ಮದೆವೆಯಾಗಿ ಆನಂದದಿಂದಿದ್ದಾನೆ ಆತನೀಗ ಅಪ್ಪನಾಗುವ ಹಂತದಲ್ಲಿದ್ದಾನೆ ಎಂದಾಗ ತನ್ನ ಜೀವನ ತಾನೇ ಹಾಳು  ಮಾಡಿಕೊಂಡಿದ್ದರ ಅರಿವು ಆಕಸ್ಮಿಕಳಿಗಾಯಿತು.

Tuesday 8 April 2014

ಲಂಡನ್ ಜಾತ್ರೆ

ಹೊರದೇಶಗಳಲ್ಲಿ ನೆಲೆಸಿದವರಿಗೆ ಆಗಾಗ ನಮ್ಮ ದೇಶಕ್ಕೆ ಬರುವುದು ಸಾಧ್ಯವಾಗುವುದಿಲ್ಲ. ಅದರಲ್ಲೂ ಹೋಗಿ ೩- ೪ ವರ್ಷವಾದ ನಂತರ ನಮಗೆ ಅನುಭವ ಆಗುವುದು ಬಂದು ಇಷ್ಟು ವರ್ಷವಾಗಿಬಿಟ್ಟಿತು ಎಂಬುದು ಆಗ ನಮ್ಮ ದೇಶದ ಪ್ರೇಮ ಹೆಚ್ಚುವುದು!! ಸಣ್ಣ ಪುಟ್ಟ ಹಬ್ಬಗಳನ್ನು ಮಿಸ್ ಮಾಡಿಕೊಳ್ಳುವುದು.ಹಾಗೆ ಮಿಸ್ ಮಾಡಿಕೊಂಡ ಹಬ್ಬಗಳನ್ನು ಅನುಭವಿಸಲು ಇನ್ನೊಂದಿಷ್ಟು ಸ್ಥಳಗಳನ್ನು ಹುಡುಕಲು ಪ್ರಾರಂಭಿಸಿಬಿಡುತ್ತೇವೆ ಜೊತೆಗೆ ಇಲ್ಲಿನ ವಾತಾವರಣದಲ್ಲೇ ನಮ್ಮ ಸಂಸ್ಕೃತಿಯನ್ನು ಸೃಷ್ಟಿಸಲು ಇಲ್ಲದ ಸಂಭಂದವನ್ನು ತಾಳೆ ಹಾಕಿ ಇದೇ ರೀತಿ ಇರುತ್ತದೆ ಎಂದು ಸಮಾಧಾನ ಮಾಡಿಕೊಳ್ಳುವುದು ಅಭ್ಯಾಸವಾಗಿ ಬಿಡುತ್ತದೆ.

ಇಷ್ಟೆಲ್ಲಾ ಹೇಳುತ್ತಿರುವುದು ಏಕೆಂದರೆ ಮೊನ್ನೆ ಅಮ್ಮನಿಗೆ ಫೋನ್ ಮಾಡಿದಾಗ ಸಾಗರ,ಶಿರಸಿಯಲ್ಲಿ ಈ ವರ್ಷ ಜಾತ್ರೆ ಎಂಬುದು ಏನೋ ಒಂದು ರೀತಿ ಊರಿನ ನೆನಪನ್ನು ಇನ್ನಷ್ಟು ಹೆಚ್ಚಿಸಿತ್ತು.ಸರಿ ಎಂದು ಅತ್ತೆಗೆ ಫೋನ್ ಮಾಡಿದರೆ ತೀರ್ಥಹಳ್ಳಿಯಲ್ಲಿ ತೆಪ್ಪೋತ್ಸವ ಜಾತ್ರೆ ನಡೀತಾ ಇದೆ ಎಂದು ಹೇಳಿದಾಗ ಇನ್ನಷ್ಟು ಆಸೆ ಹೆಚ್ಚಿತ್ತು.ಏನಾದರೂ ಜಾತ್ರೆ ಇಲ್ಲವೇ ಇಲ್ಲ.ಪ್ರತಿ ಭಾರಿ ಜಾತ್ರೆ ಬಂದಾಗಲೂ ಇದೇ ಆಯಿತು ಮುಂದಿನ ಜಾತ್ರೆಗೆ ಹೋಗಬೇಕು ಎಂದು ಆದರೆ ಹೋಗಲಾಗುವುದಿಲ್ಲ  ಎಂಬ ಕೊರಗು.ಸರಿ ಅಲ್ಲಿ ಹೋಗಲಾಗುವುದಿಲ್ಲ ಇನ್ನೇನು ಮಾಡುವುದು ಎಂದು ಲಂಡನ್  ನ ವಿಂಟರ್ ವಂಡರ್ ಲ್ಯಾಂಡ್ ಗೆ ಹೋಗಿ ಬಂದಾಗಿನಿಂದ ಒಂದು ರೀತಿಯ ಸಮಾಧಾನ.ನಮ್ಮ ಮಲೆನಾಡುಗಳಲ್ಲಿ ಅದ್ಧೂರಿಯಾಗಿ ನಡೆಯುವ ಜಾತ್ರೆಗಳು ಹತ್ತಿರ ಬಂತು ಎಂದರೆ ಮನಸ್ಸು ಇಲ್ಲಿ ನಿಲ್ಲುವುದೇ ಇಲ್ಲ.ಅಲ್ಲಿನ ಜಾತ್ರೆಯ ಸೊಬಗು.ದೀಪಗಳಿಂದ ಜನಜಂಗುಳಿಯಿಂದ ಜಗಮಗಿಸುವ ಆ ಸುಂದರ ದೃಶ್ಯಗಳು ಕಣ್ಣ ಮುಂದೆ ಹಾಗೇ ತೇಲಿ ಬರುತ್ತವೆ.

ಲಂಡನ್ ನಲ್ಲಿ ಪ್ರತಿ ಭಾರಿ ಚಳಿಗಾಲ ಪ್ರಾರಂಭವಾಯಿತು ಎಂದರೆ ವಿಂಟರ್ ವಂಡರ್ ಲ್ಯಾಂಡ್ ಆರಂಭವಾಗುತ್ತದೆ.ಡಿಸೆಂಬರ್ ೨ನೇ ವಾರದಲ್ಲಿ ಪ್ರಾರಂಭವಾಗುವ ಈ ವಂಡರ್ ಲ್ಯಾಂಡ್ ಸುಮಾರು ೪ ವಾರಗಳವರೆಗೆ ನಡೆಯುತ್ತದೆ.ಈ ಸಮಯದಲ್ಲಿ ಇಡೀ ಹೈಡ್ ಪಾರ್ಕ್ ಬೇರೆಬೇರೆ ರೀತಿಯ ಆಟಗಳಿಂದ ತುಂಬಿಕೊಂಡಿರುತ್ತದೆ.ರೈಡ್ಸ್ ಇಷ್ಟಪಡುವವರಿಗೆ ಇದೊಂದು ದೊಡ್ಡ ಹಬ್ಬ ಎಂದೇ ಹೇಳಬಹುದು. ನೂರಾರು ರೀತಿಯ ಮಕ್ಕಳು ಮತ್ತು ದೊಡ್ಡವರು ಎಲ್ಲರೂ ಆಡಿ ಆನಂದಪಡಬಹುದಾದ ಈ ವಿಂಟರ್ ವಂಡರ್  ಲ್ಯಾಂಡ್  ಗೆ ಬೆಳಗ್ಗೆ ಹೋದರೆ ನಮ್ಮ ಬೆಂಗಳೂರಿನ ವಂಡರ್ ಲಾ ನೆನಪಿಸುತ್ತದೆ.ರಾತ್ರಿ ಹೋದರೆ ಜಗಮಗಿಸುವ ದೀಪಗಳಿಂದ ಜಾತ್ರೆಗಳಂತೆ ಕಾಣುತ್ತದೆ.ಒಟ್ಟಾರೆಯಾಗಿ ಇಡೀ ವಂಡರ್ ಲ್ಯಾಂಡ್ ಸುತ್ತಲು ಕನಿಷ್ಠ ೪ ತಾಸು ಬೇಕು. ಎಲ್ಲಾ ಸುತ್ತಿದ ನಂತರ ಅಲ್ಲಲ್ಲಿ ಇರುವ ಅಂಗಡಿ ಸ್ಟಾಲ್ ಗಳು ಜೊತೆಗೆ ಬಿಬಿಸಿ ಪಿಜ್ಜಾ ಬರ್ಗರ್ ಇವುಗಳನ್ನೆಲ್ಲಾ ನೋಡಿದಾಗ ಒಂದಿಷ್ಟು ಮಸಾಲಪುರಿ,ಪಾನಿಪುರಿ ಅಂಗಡಿಗಳು ಇದ್ದಿದ್ದರೆ ಎಷ್ಟು ಚನಾಗಿರುತ್ತಿತ್ತು ಎಂದೆನಿಸದೇ ಇರುವುದಿಲ್ಲ.

ಒಟ್ಟಾರೆಯಾಗಿ ಜಾತ್ರೆಗೆ ಹೋಗಲಾಗದಿದ್ದರೂ ಇಲ್ಲಿನ ವಿಂಟರ್ ವಂಡರ್ ಲ್ಯಾಂಡ್ ನೋಡಿ ನಮ್ಮೂರ ಜಾತ್ರೆಯಂತೆಯೇ ಎಂದು ಸಮಾಧಾನ ಮಾಡಿಕೊಳ್ಳುವುದು ಒಂದು ರೀತಿಯಲ್ಲಿ ಸಂತೋಷ.

ಅರ್ಪಿತಾ ಹರ್ಷ 
ಲಂಡನ್ 

ಮಸಾಲಾ ಬೋಂಡ

Published on 18/04/2014 Vijayanext


ಚುಮುಚುಮು ಚಳಿಗೆ ಆಗಾಗ ಬಿಸಿಬಿಸಿ ಬೋಂಡ,ಬಜ್ಜಿ ಮಾಡಿ ತಿನ್ನುವುದು ಎಂದರೆ ತಿಂಡಿಪೋತರಿಗೆ ಸ್ವರ್ಗ ಕೈಗೆ ಸಿಕ್ಕಂತೆ.ಆದರೆ ಬ್ಯಾಚುಲರ್ ಜೀವನ ಮಾಡುತ್ತಿರುವವರಿಗೆ ಪ್ರತಿದಿನ ಹೊರಗೆ ತಿಂದರೆ ಕರಿದ ಎನ್ನೆಯಲ್ಲೇ ಮತ್ತೆ ಕರಿದಿರುತ್ತಾರೆ ದೇಹ ಹದಗೆಡುತ್ತದೆ.ಬಜ್ಜಿ ಮಾಡುವುದು ಸುಲಭದ ವಿಧಾನ.ನೀವೇ ಮನೆಯಲ್ಲಿ ಸ್ವಲ್ಪ ಸಮಯ ನೀಡಿದರೆ ವಾರಾಂತ್ಯದ ಸಂಜೆಗಳಲ್ಲಿ ಕಾಫಿ ಜೊತೆಗೆ ಬಿಸಿ ಬೋಂಡ ಸವಿಯಬಹುದು.ಬೋಂಡ ಮಾಡುವುದರಲ್ಲಿ ಬೇಕಾದಷ್ಟು ವಿಧಾನಗಳಿವೆ.ಅವುಗಳಲ್ಲಿ ಕೆಲವು ಸುಲಭ ಮತ್ತು ಅತಿ ಹೆಚ್ಚು ರುಚಿ ನೀಡುವ ಬೋಂಡ ಮಾಡಿನೋಡಿ.ತಿಂದು ಹೇಳಿ!

ಮಿರ್ಚಿ ಮಸಾಲಾ ಬೋಂಡ

ಬೇಕಾಗುವ ಸಾಮಗ್ರಿಗಳು:
ಮಿರ್ಚಿ (ಬೋಂಡ ಮೆಣಸು) - ೪ 
ಕಡಲೆಹಿಟ್ಟು - ಅರ್ಧ ಕಪ್ 
ಉಪ್ಪು - ರುಚಿಗೆ 
ಎಣ್ಣೆ - ಕರಿಯಲು 

ಮಸಾಲ ಮಾಡಲು :
ತುರಿದ ಕ್ಯಾರೆಟ್ - ಸ್ವಲ್ಪ 
ಟೊಮೇಟೊ -ಅರ್ಧ ಕಪ್ 
ನಿಂಬೆ ರಸ - ೨ ಹನಿ 
ಚಾಟ್ ಮಸಾಲಾ - ಚಿಟಕಿ 

ಕಡಲೆ ಹಿಟ್ಟಿಗೆ ಉಪ್ಪು ಹಾಕಿ ನೀರು ಬೆರೆಸಿ ಬೋಂಡ ಹದಕ್ಕೆ (ದಪ್ಪ ದೋಸೆ ಹಿಟ್ಟಿನ ಹದ) ಬರುವಂತೆ ಕಲಸಿಕೊಂಡು ಅದಕ್ಕೆ ಬೋಂಡ ಮೆಣಸನ್ನು ಸೀಳಿ ಅದರ ಬೀಜವನ್ನು ತೆಗೆದು ಹಿಟ್ಟಿಗೆ ಹಾಕಿ ಕದಡಿ .ಎಣ್ಣೆಯನ್ನು ಕಾಯಿಸಿ ಬೋಂಡ ಕರಿಯಿರಿ.ನಂತರ ಅದಕ್ಕೆ ಬಿಸಿಬಿಸಿ ಇರುವಾಗಲೇ ಮಸಾಲ ಪದಾರ್ಥಕ್ಕೆ ಮೇಲೆ ತಿಳಿಸಿದ ಎಲ್ಲವನ್ನು ಹಾಕಿ ತಿನ್ನಿ.ಹೆಚ್ಚು ಖಾರವೂ ಇರುವುದಿಲ್ಲ.ತರಕಾರಿಗಳ ಜೊತೆಗೆ ಬೋಂಡ ಬಾಯಲ್ಲಿ ಇನ್ನಷ್ಟು ನೀರು ತರಿಸುತ್ತದೆ. 

ಅಲೂ ಬೋಂಡ 

ಅಲೂ ಬೋಂಡವನ್ನು ವಿವಿಧ ರೀತಿಯಲ್ಲಿ ಮಾಡಬಹುದು.ಅದರಲ್ಲಿ ಸುಲಭ ವಿಧಾನ:

ಅಲೂ ವನ್ನು ಸ್ಲೈಸ್ ಮಾಡಿಕೊಳ್ಳಿ. ಕಡಲೆಹಿಟ್ಟು,ಉಪ್ಪು,ಜೊತೆಗೆ ಅರ್ಧ ಚಮಚ ಓಂ ಕಾಳು,ಅರ್ಧ ಚಮಚ ಮೆಣಸಿನ ಪುಡಿಯನ್ನು ಹಾಕಿ ಹಿಟ್ಟನ್ನು ಕಲೆಸಿಟ್ಟುಕೊಂಡು ಅದಕ್ಕೆ ಈ ಅಲೂ ಸ್ಲೈಸ್ ಹಾಕಿ ಕಾದ ಎಣ್ಣೆಯಲ್ಲಿ ಕೆಂಪು ಬಣ್ಣ ಬರುವವರೆಗೆ ಕರಿಯಿರಿ.ರುಚಿಯಾದ ಹದವಾದ ಆಲೂ ಬೋಂಡ ಟೀ ಅಥವಾ ಕಾಫಿಯೊಂದಿಗೆ ತಿನ್ನಲು ಚನ್ನಾಗಿರುತ್ತದೆ. 

ಇನ್ನೊಂದು ವಿಧಾನ 

ಅಲೂ ಪಲ್ಯ ಮಾಡಿಟ್ಟುಕೊಳ್ಳಿ 
ನಂತರ ಅದನ್ನು ಉಂಡೆಯಂತೆ ಕಟ್ಟಿ ಅದನ್ನು ಹಿಟ್ಟಿನಲ್ಲಿ ಅದ್ದಿ ಎಣ್ಣೆಯಲ್ಲಿ ಕರಿಯಿರಿ. 

ಅಲೂ ಪಲ್ಯ ಮಾಡುವ ವಿಧಾನ:
ಆಲೂಗಡ್ಡೆ ಬೇಯಿಸಿ ಸಿಪ್ಪೆ ಸುಲಿದಿಟ್ಟುಕೊಳ್ಳಿ.ಬಾಣಲೆಗೆ ಒಂದು ಚಮಚ ಎಣ್ಣೆ ಸ್ವಲ್ಪ ಸಾಸಿವೆ,ಜೀರಿಗೆ,ಉದ್ದು ಹಾಕಿ ಒಗ್ಗರಣೆ ಬೆಂದ ನಂತರ ಅದಕ್ಕೆ ಸಣ್ಣಗೆ ಹೆಚ್ಚಿದ ಈರುಳ್ಳಿ ಹಾಕಿ ನಂತರ ಬೇಯಿಸಿಟ್ಟ ಆಲೂಗಡ್ಡೆಯನ್ನು ನುರಿದು ಹಾಕಿ.ರುಚಿಗೆ ತಕ್ಕಷ್ಟು ಉಪ್ಪು,ನಿಂಬು ರಸ,ಸಣ್ಣಗೆ ಹೆಚ್ಚಿದ ಒಂದು ಹಸಿ ಮೆಣಸಿನ ಕಾಯಿ  ಹಾಕಿ ಮೇಲಿನಿಂದ ಸಣ್ಣಗೆ ಹೆಚ್ಚಿದ ಕೊತ್ತುಂಬರಿ ಸೊಪ್ಪನ್ನು ಹಾಕಿ.

ನಂತರ ಮಾಡಿಟ್ಟುಕೊಂಡ ಬೋಂಡ ಹಿಟ್ಟಿಗೆ ಉಂಡೆ ಮಾಡಿಟ್ಟ ಅಲೂ ಪಲ್ಯವನ್ನು ಅದ್ದಿ ಎಣ್ಣೆಯಲ್ಲಿ ಕರಿಯಿರಿ. ರುಚಿರುಚಿಯಾದ ಮೈಸೂರು ಬೋಂಡ ಸವಿಯಿರಿ. 

ಈರುಳ್ಳಿ ಮಸಾಲಾ ಬೋಂಡ :
ಬೇಕಾಗುವ ಸಾಮಗ್ರಿಗಳು :
ಈರುಳ್ಳಿ ಸ್ಲೈಸ್ - ಒಂದು ಬೌಲ್ 
ಕಡಲೆ ಹಿಟ್ಟು - ಅರ್ಧ ಕಪ್ 
ಉಪ್ಪು- ರುಚಿಗೆ ತಕ್ಕಷ್ಟು 
ಮೆಣಸಿನ ಪುಡಿ - ೧ ಚಮಚ 
ಓಮಿನ ಕಾಲು - ಅರ್ಧ ಚಮಚ 

ಮಸಾಲ ಮಾಡಲು :
ತುರಿದ ಕ್ಯಾರೆಟ್ - ಸ್ವಲ್ಪ 
ಟೊಮೇಟೊ -ಅರ್ಧ ಕಪ್ 
ನಿಂಬೆ ರಸ - ೨ ಹನಿ 
ಚಾಟ್ ಮಸಾಲಾ - ಚಿಟಕಿ 

ಮೊದಲು ಬೋಂಡ ಮಾಡಲು ಬೇಕಾಗುವ ಕಡಲೆಹಿಟ್ಟು,ಉಪ್ಪು,ಕೆಂಪುಮೆಣಸಿನ ಪುಡಿ,ಓಮಿನ ಕಾಳು ಇವುಗಳೆಲ್ಲವನ್ನು ಸೇರಿಸಿಕೊಳ್ಳಿ ನಂತರ ಅದಕ್ಕೆ ಸ್ಲೈಸ್ (ಗೋಲಾಕಾರದಲ್ಲಿ)ಮಾಡಿಟ್ಟುಕೊಂಡ ಈರುಳ್ಳಿಯನ್ನು ಒಂದೊಂದೇ ಅದ್ದಿ ಎಣ್ಣೆಯಲ್ಲಿ ಕರಿಯಿರಿ.ನಂತರ ಮೇಲಿನಿಂದ ಮಸಾಲ ಮಾಡಲು ತಿಳಿಸಿರುವ ಎಲ್ಲವನ್ನು ಮಿಶ್ರ ಮಾಡಿ ಅದರ ಮೇಲೆ ಉದುರಿಸಿದರೆ ರುಚಿ ಮತ್ತು ಬಿಸಿಯಾದ ಈರುಳ್ಳಿ ಬಜ್ಜಿ ರೆಡಿ.