Wednesday 25 March 2015

ಆಕ್ಸ್ಫರ್ಡ್

Published in vijayanext


ಆಕ್ಸ್ಫರ್ಡ್  ಹೆಸರು ಕೇಳದವರಿಲ್ಲ. ಇಡೀ ಜಗತ್ತಿನಾದ್ಯಂತ ಹೆಸರುವಾಸಿಯಾಗಿರುವ ಮತ್ತು ಸಾಕಷ್ಟು ವಿದ್ಯಾರ್ಥಿಗಳು ಓದಲು ಬಯಸುವ,ಕನಸು ಕಾಣುವ ಸ್ಥಳ ಆಕ್ಸ್ಫರ್ಡ್. ಇದು ದಕ್ಷಿಣ ಇಂಗ್ಲೆಂಡ್ ನಲ್ಲಿದೆ. ಲಂಡನ್ ನಿಂದ ಸುಮಾರು ೫೩ ಮೈಲಿ ಅಂತರವಿರುವ ಆಕ್ಸ್ಫರ್ಡ್ ಪ್ರವಾಸಿಗರನ್ನು ಕೈಬೀಸಿ ಕರೆಯುವ ಒಂದು ಮುಖ್ಯ ತಾಣ. ಲಂಡನ್ ಗೆ ಬಂದವರೆಲ್ಲ ಆಕ್ಸ್ಫರ್ಡ್ ನೋಡದೆ ಹಿಂತಿರುಗುವುದಿಲ್ಲ. ಹಚ್ಚ ಹಸುರಿನಿಂದ ಕಂಗೊಳಿಸುವ ಈ ಸಿಟಿ ಸಾಕಷ್ಟು ಪಾರ್ಕ್ ಮತ್ತು ನಿಸರ್ಗದತ್ತ ನೋಟವನ್ನು ಕೂಡ ಒಳಗೊಂಡಿದೆ. ಅಷ್ಟೇ ಅಲ್ಲ ಅಗಲವಾದ ರಸ್ತೆಗಳನ್ನು ಹೊಂದಿರುವ ಸುತ್ತಲೂ ವಿಶ್ವವಿದ್ಯಾಲಯಗಳನ್ನು ಹೊಂದಿ ಪ್ರವಾಸಿಗರನ್ನು ಆಕರ್ಷಿಸುತ್ತಿರುವ ತಾಣ ಆಕ್ಸ್ಫರ್ಡ್. ಸಾಕಷ್ಟು ಮ್ಯೂಸಿಯಂ ,ಲೈಬ್ರರಿಗಳನ್ನು ಹೊಂದಿರುವ ಈ ಆಕ್ಸ್ಫರ್ಡ್ ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳಿಗೆ ಹೆಚ್ಚು  ಹೆಸರುವಾಸಿ.

ಆಕ್ಸ್ಫರ್ಡ್ ವಿಶ್ವವಿದ್ಯಾಲಯ:

ಆಕ್ಸ್ಫರ್ಡ್ ವಿಶ್ವವಿದ್ಯಾಲಯ ಎಂದೇ ಜಗತ್ಪ್ರಸಿದ್ಧಿ ಪಡೆದ ಈ ಸ್ಥಳ ಪ್ರಪಂಚದಲ್ಲೇ ಇಂಗ್ಲಿಷ್ ಮಾತನಾಡಲು ಪ್ರಾರಂಭಿಸಿದ ಮೊದಲ ಮತ್ತು ಅತ್ಯಂತ ಹಳೆಯ ವಿಶ್ವವಿದ್ಯಾಲಯ ಎಂದು ಹೇಳಲಾಗುತ್ತದೆ. ಅತಿ ಹಳೆಯ ವಿಶ್ವವಿದ್ಯಾಲಯಗಳು ಇಂದಿಗೂ ಕೂಡ ಇರುವುದು ಆಶ್ಚರ್ಯವೇ ಸರಿ ಎನ್ನಬಹುದು. ಆಕ್ಸ್ಫರ್ಡ್ ಶೈರ್ ನ ತಪ್ಪಲಿನಲ್ಲಿರುವ ಈ ಆಕ್ಸ್ಫರ್ಡ್ ಎಂಬ ಸ್ಥಳವನ್ನು  ಎಂಟನೇ ಶತಮಾನದಲ್ಲಿ ಮೊದಲು ಕಟ್ಟಲಾಯಿತು. ಕನಸಿನ ಗೋಪುರಗಳ ನಗರಿ ಎಂದೇ ವರ್ಣಿಸಲಾಗುವ ಈ ನಗರದಲ್ಲಿ ಕ್ರಿಶ್ಚಿಯನ್ ಮಾದರಿಯ ಕೆಥೆಡ್ರಾಲ್ ಮತ್ತು ಗೋಪುರಗಳು ಇಂದಿಗೂ ಜನರನ್ನು ಆಕರ್ಷಿಸುತ್ತಿವೆ.

ಶಿಕ್ಷಣವೇ ಇಲ್ಲಿನ ಅರ್ಥಿಕ ಅಭಿವೃದ್ಧಿಗೆ ಕಾರಣವಾಗಿರುವುದರ ಜೊತೆಗೆ ಕೈಗಾರಿಕೆ,ಮುದ್ರಣ ಪ್ರಕಾಶನ ಕೂಡ ಪ್ರಮುಖ ಪಾತ್ರ ವಹಿಸಿದೆ ಎನ್ನಲಾಗುತ್ತದೆ.ವಿಶ್ವವಿದ್ಯಾಲಯ ಜಗತ್ಪ್ರಸಿದ್ಧಿ ಹೊಂದಿರುವುದರಿಂದ ಪ್ರಪಂಚದಾದ್ಯಂತ ಬೇರೆಬೇರೆ ಸ್ಥಳಗಳಿಂದ ವಿವಿಧ ಜನಾಂಗದ,ತಮ್ಮದೇ ಆದ ವಸ್ತ್ರ ವಿನ್ಯಾಸವನ್ನು ಬಳಸುವ ವೈವಿದ್ಯತೆ ಹೊಂದಿರುವ ಜನರನ್ನು,ವಿದ್ಯಾರ್ಥಿಗಳನ್ನು  ಇಲ್ಲಿ ಕಾಣಬಹುದು.

ಲಂಡನ್ ನಿಂದ ಆಕ್ಸ್ಫರ್ಡ್ ಗೆ ರೈಲ್ವೇ ಮಾರ್ಗವಾಗಿ ಹೋದರೆ ಸುಮಾರು ಒಂದರಿಂದ ಒಂದೂವರೆ ಗಂಟೆ ಪ್ರಯಾಣ.ಲಂಡನ್ ನ ರೆಡಿಂಗ್ ನಿಂದ ಸುಮಾರು ೨೫ ಕಿ ಮೀ ಅಂತರದಲ್ಲಿದ್ದು ಕಾರಿನಲ್ಲಿ ತೆರಳಿದರೆ ಅರ್ಧ ಗಂಟೆಯಲ್ಲಿ ತಲುಪಬಹುದು. ಟ್ರೈನ್,ಬಸ್ಸುಗಳ ಸಾಕಷ್ಟು ವ್ಯಯಸ್ಥೆಯ ಜೊತೆಗೆ ಇಲ್ಲಿನ ಜನ ಸೈಕ್ಲಿಂಗ್ ಗೆ ಕೂಡ ಅಷ್ಟೇ ಪ್ರಾಮುಖ್ಯತೆ ನೀಡುತ್ತಾರೆ. ಅಗಲವಾದ ರಸ್ತೆಯಲ್ಲಿ ಸೈಕ್ಲಿಂಗ್ ಮಾಡುತ್ತಾ ಹೊರಟರೆ ಪ್ರಕೃತಿಯ ಮತ್ತು ನಗರದ ಸೊಬಗನ್ನು ಇನ್ನಷ್ಟು ಸವಿಯಬಹುದು.