Tuesday 8 April 2014

ಲಂಡನ್ ಜಾತ್ರೆ

ಹೊರದೇಶಗಳಲ್ಲಿ ನೆಲೆಸಿದವರಿಗೆ ಆಗಾಗ ನಮ್ಮ ದೇಶಕ್ಕೆ ಬರುವುದು ಸಾಧ್ಯವಾಗುವುದಿಲ್ಲ. ಅದರಲ್ಲೂ ಹೋಗಿ ೩- ೪ ವರ್ಷವಾದ ನಂತರ ನಮಗೆ ಅನುಭವ ಆಗುವುದು ಬಂದು ಇಷ್ಟು ವರ್ಷವಾಗಿಬಿಟ್ಟಿತು ಎಂಬುದು ಆಗ ನಮ್ಮ ದೇಶದ ಪ್ರೇಮ ಹೆಚ್ಚುವುದು!! ಸಣ್ಣ ಪುಟ್ಟ ಹಬ್ಬಗಳನ್ನು ಮಿಸ್ ಮಾಡಿಕೊಳ್ಳುವುದು.ಹಾಗೆ ಮಿಸ್ ಮಾಡಿಕೊಂಡ ಹಬ್ಬಗಳನ್ನು ಅನುಭವಿಸಲು ಇನ್ನೊಂದಿಷ್ಟು ಸ್ಥಳಗಳನ್ನು ಹುಡುಕಲು ಪ್ರಾರಂಭಿಸಿಬಿಡುತ್ತೇವೆ ಜೊತೆಗೆ ಇಲ್ಲಿನ ವಾತಾವರಣದಲ್ಲೇ ನಮ್ಮ ಸಂಸ್ಕೃತಿಯನ್ನು ಸೃಷ್ಟಿಸಲು ಇಲ್ಲದ ಸಂಭಂದವನ್ನು ತಾಳೆ ಹಾಕಿ ಇದೇ ರೀತಿ ಇರುತ್ತದೆ ಎಂದು ಸಮಾಧಾನ ಮಾಡಿಕೊಳ್ಳುವುದು ಅಭ್ಯಾಸವಾಗಿ ಬಿಡುತ್ತದೆ.

ಇಷ್ಟೆಲ್ಲಾ ಹೇಳುತ್ತಿರುವುದು ಏಕೆಂದರೆ ಮೊನ್ನೆ ಅಮ್ಮನಿಗೆ ಫೋನ್ ಮಾಡಿದಾಗ ಸಾಗರ,ಶಿರಸಿಯಲ್ಲಿ ಈ ವರ್ಷ ಜಾತ್ರೆ ಎಂಬುದು ಏನೋ ಒಂದು ರೀತಿ ಊರಿನ ನೆನಪನ್ನು ಇನ್ನಷ್ಟು ಹೆಚ್ಚಿಸಿತ್ತು.ಸರಿ ಎಂದು ಅತ್ತೆಗೆ ಫೋನ್ ಮಾಡಿದರೆ ತೀರ್ಥಹಳ್ಳಿಯಲ್ಲಿ ತೆಪ್ಪೋತ್ಸವ ಜಾತ್ರೆ ನಡೀತಾ ಇದೆ ಎಂದು ಹೇಳಿದಾಗ ಇನ್ನಷ್ಟು ಆಸೆ ಹೆಚ್ಚಿತ್ತು.ಏನಾದರೂ ಜಾತ್ರೆ ಇಲ್ಲವೇ ಇಲ್ಲ.ಪ್ರತಿ ಭಾರಿ ಜಾತ್ರೆ ಬಂದಾಗಲೂ ಇದೇ ಆಯಿತು ಮುಂದಿನ ಜಾತ್ರೆಗೆ ಹೋಗಬೇಕು ಎಂದು ಆದರೆ ಹೋಗಲಾಗುವುದಿಲ್ಲ  ಎಂಬ ಕೊರಗು.ಸರಿ ಅಲ್ಲಿ ಹೋಗಲಾಗುವುದಿಲ್ಲ ಇನ್ನೇನು ಮಾಡುವುದು ಎಂದು ಲಂಡನ್  ನ ವಿಂಟರ್ ವಂಡರ್ ಲ್ಯಾಂಡ್ ಗೆ ಹೋಗಿ ಬಂದಾಗಿನಿಂದ ಒಂದು ರೀತಿಯ ಸಮಾಧಾನ.ನಮ್ಮ ಮಲೆನಾಡುಗಳಲ್ಲಿ ಅದ್ಧೂರಿಯಾಗಿ ನಡೆಯುವ ಜಾತ್ರೆಗಳು ಹತ್ತಿರ ಬಂತು ಎಂದರೆ ಮನಸ್ಸು ಇಲ್ಲಿ ನಿಲ್ಲುವುದೇ ಇಲ್ಲ.ಅಲ್ಲಿನ ಜಾತ್ರೆಯ ಸೊಬಗು.ದೀಪಗಳಿಂದ ಜನಜಂಗುಳಿಯಿಂದ ಜಗಮಗಿಸುವ ಆ ಸುಂದರ ದೃಶ್ಯಗಳು ಕಣ್ಣ ಮುಂದೆ ಹಾಗೇ ತೇಲಿ ಬರುತ್ತವೆ.

ಲಂಡನ್ ನಲ್ಲಿ ಪ್ರತಿ ಭಾರಿ ಚಳಿಗಾಲ ಪ್ರಾರಂಭವಾಯಿತು ಎಂದರೆ ವಿಂಟರ್ ವಂಡರ್ ಲ್ಯಾಂಡ್ ಆರಂಭವಾಗುತ್ತದೆ.ಡಿಸೆಂಬರ್ ೨ನೇ ವಾರದಲ್ಲಿ ಪ್ರಾರಂಭವಾಗುವ ಈ ವಂಡರ್ ಲ್ಯಾಂಡ್ ಸುಮಾರು ೪ ವಾರಗಳವರೆಗೆ ನಡೆಯುತ್ತದೆ.ಈ ಸಮಯದಲ್ಲಿ ಇಡೀ ಹೈಡ್ ಪಾರ್ಕ್ ಬೇರೆಬೇರೆ ರೀತಿಯ ಆಟಗಳಿಂದ ತುಂಬಿಕೊಂಡಿರುತ್ತದೆ.ರೈಡ್ಸ್ ಇಷ್ಟಪಡುವವರಿಗೆ ಇದೊಂದು ದೊಡ್ಡ ಹಬ್ಬ ಎಂದೇ ಹೇಳಬಹುದು. ನೂರಾರು ರೀತಿಯ ಮಕ್ಕಳು ಮತ್ತು ದೊಡ್ಡವರು ಎಲ್ಲರೂ ಆಡಿ ಆನಂದಪಡಬಹುದಾದ ಈ ವಿಂಟರ್ ವಂಡರ್  ಲ್ಯಾಂಡ್  ಗೆ ಬೆಳಗ್ಗೆ ಹೋದರೆ ನಮ್ಮ ಬೆಂಗಳೂರಿನ ವಂಡರ್ ಲಾ ನೆನಪಿಸುತ್ತದೆ.ರಾತ್ರಿ ಹೋದರೆ ಜಗಮಗಿಸುವ ದೀಪಗಳಿಂದ ಜಾತ್ರೆಗಳಂತೆ ಕಾಣುತ್ತದೆ.ಒಟ್ಟಾರೆಯಾಗಿ ಇಡೀ ವಂಡರ್ ಲ್ಯಾಂಡ್ ಸುತ್ತಲು ಕನಿಷ್ಠ ೪ ತಾಸು ಬೇಕು. ಎಲ್ಲಾ ಸುತ್ತಿದ ನಂತರ ಅಲ್ಲಲ್ಲಿ ಇರುವ ಅಂಗಡಿ ಸ್ಟಾಲ್ ಗಳು ಜೊತೆಗೆ ಬಿಬಿಸಿ ಪಿಜ್ಜಾ ಬರ್ಗರ್ ಇವುಗಳನ್ನೆಲ್ಲಾ ನೋಡಿದಾಗ ಒಂದಿಷ್ಟು ಮಸಾಲಪುರಿ,ಪಾನಿಪುರಿ ಅಂಗಡಿಗಳು ಇದ್ದಿದ್ದರೆ ಎಷ್ಟು ಚನಾಗಿರುತ್ತಿತ್ತು ಎಂದೆನಿಸದೇ ಇರುವುದಿಲ್ಲ.

ಒಟ್ಟಾರೆಯಾಗಿ ಜಾತ್ರೆಗೆ ಹೋಗಲಾಗದಿದ್ದರೂ ಇಲ್ಲಿನ ವಿಂಟರ್ ವಂಡರ್ ಲ್ಯಾಂಡ್ ನೋಡಿ ನಮ್ಮೂರ ಜಾತ್ರೆಯಂತೆಯೇ ಎಂದು ಸಮಾಧಾನ ಮಾಡಿಕೊಳ್ಳುವುದು ಒಂದು ರೀತಿಯಲ್ಲಿ ಸಂತೋಷ.

ಅರ್ಪಿತಾ ಹರ್ಷ 
ಲಂಡನ್ 

No comments:

Post a Comment