Wednesday 9 April 2014

ಆಕಸ್ಮಿಕ (ಕಥೆ)

Got published in Sakhi magazine may 1st 2014 edition



ಆಕೆಯ ಹೆಸರೇ ಹಾಗೆ ಹೆಸರಿಗೆ ತಕ್ಕ ಹಾಗೆ ಆಕೆ ಹುಟ್ಟಿದ್ದು ಆಕಸ್ಮಿಕವಾಗಿ ಎಂದು ಅಪ್ಪ ಸದಾಶಿವ ಯಾವಾಗಲೂ ತಮಾಷೆ ಮಾಡುತ್ತಿರುತ್ತಾರೆ.ಕಾಲೇಜು ಮುಗಿಸಿ ಮುಂದಿನ  ಮೆಟ್ಟಿಲು ಹತ್ತಿತ್ತುರುವ ಮಗಳನ್ನು ದೂರದ ಊರಿನಲ್ಲಿ ಎಂ ಎಸ್ಸಿ ಮಾಡಲು,ಹಾಸ್ಟೆಲ್ ಸೇರಿಸಿ ಮನೆಗೆ ಹೋರಾಟ ಅಪ್ಪ ಮಗಳೇ ಬದುಕಿನಲ್ಲಿ ಕೆಲವೊಂದು ಘಟನೆಗಳು ನಮಗೇ ತಿಳಿಯದೇ ನಡೆದು ಹೋಗುತ್ತದೆ ಹಾಗೆ ತಿಳಿಯದೇ ನಡೆದು ಹೋಯಿತು ಎಂಬ ಕೆಲಸವನ್ನು ಮಾಡಿಕೊಳ್ಳಬೇಡ ಎಂದು ಎಚ್ಚರಿಕೆ ನೀಡಿ ಕಣ್ಣ ತುಂಬಾ ನೀರು ತುಂಬಿಕೊಂಡು ಮಗಳನ್ನು ಬಿಟ್ಟು ಮನೆಗೆ ತೆರಳಿದರು.

ಆಕಸ್ಮಿಕಳ ತಾಯಿ ಅಹಲ್ಯಾಳಿಗೆ ಮಗಳನ್ನು ದೂರದ ಊರಿನಲ್ಲಿ ಕಾಲೇಜಿಗೆ ಸೇರಿಸುವುದು ಸ್ವಲ್ಪವೂ ಇಷ್ಟವಿರಲಿಲ್ಲ ಎಷ್ಟಾದರೂ ಇನ್ನು ೨ ವರ್ಷದ ನಂತರ ಮದುವೆ ಮಾಡಲೇಬೇಕು.ಅಣ್ಣನ ಮಗ ಪ್ರತ್ಯೂಶನೇ ತನ್ನ ಅಳಿಯನಾಗುವುದು ಎಂಬುದು ಆಗಲೇ ಸಿದ್ಧವಾಗಿದೆ.ಅದಕ್ಕೆ ಎಲ್ಲರ ಒಪ್ಪಿಗೆಯೂ ಇದೆ.ಆಕಸ್ಮಿಕಳನ್ನು ಇದರ ಬಗ್ಗೆ ಕೇಳುವ ಅಗತ್ಯವೇ ಇಲ್ಲ ಏಕೆಂದರೆ ಅವರಿಬ್ಬರೂ ಒಟ್ಟಿಗೆ ಬೆಳೆದವರು ಒಪ್ಪಿಯೇ ಒಪ್ಪುತ್ತಾಳೆ ಎಂಬುದು ಅಹಲ್ಯಾಳ ಅಂಬೋಣ.
ಪತಿ ಮನೆಗೆ ಬರುವುದನ್ನೇ ಕಾಯುತ್ತಿದ್ದ ಅಹಲ್ಯ ಸಿಟ್ಟಿನಿಂದ ಆತನ ಮೇಲೆ ಹರಿಹಾಯ್ದಳು ' ಅಷ್ಟಕ್ಕೆಲ್ಲಾ ಯಾಕೆ ಚಿಂತೆ? ಒಳ್ಳೆ ಮಾರ್ಕ್ಸ್ ತೆಗೆದಿದ್ದಾಳೆ ಓದಲಿ ಬಿಡು.ನಾಳೆ ಮಕ್ಕಳಿಗೆ ನಾಲ್ಕು ಅಕ್ಷರ ಹೇಳಿ ಕೊಡಲು  ಬೇಡವಾ?' ಮಕ್ಕಳಿಗೆ ನಾಲ್ಕು ಅಕ್ಷರ ಹೇಳಿಕೊಡಲಿಕ್ಕೆ ಡಿಗ್ರೀ ಸಾಲದಾ?ಎಂಬುದು ಅಹಲ್ಯಾಳ ಪ್ರತಿಪ್ರಶ್ನೆ!
ಅವಳೇ ಒಳ್ಳೆ ಮಾರ್ಕ್ಸ್ ತೆಗೆದು ಸ್ಕಾಲರ್ ಶಿಪ್ ಸಿಕ್ಕಿರುವಾಗ ಕಲಿಸದೆ ಇರಲಿಕ್ಕಾಗುವುದೇ  ಎಂಬುದು ಸದಾಶಿವ ಹೇಳಿದ ಉತ್ತರ ರೀತಿಯ ಪ್ರಶ್ನೆ!

ಇತ್ತ ಆಕಸ್ಮಿಕಾಳಿಗೆ ಓದಿನ ಬಗ್ಗೆ ಆಸಕ್ತಿ ಮೊದಲಿಗಿಂತ ಹೆಚ್ಚಾಗಿತ್ತು, ಮೊದಲು ಕೇವಲ ಹೆಚ್ಚು ಮಾರ್ಕ್ಸ್ ತೆಗೆಯಬೇಕು ಎಂದಿದ್ದವಳಿಗೆ ಈಗ ಇಡೀ ರಾಜ್ಯಕ್ಕೆ ಹೆಸರು ಮಾಡಬೇಕೆಂಬ ಆಸೆ ಕನಸು.

ರೂಪವತಿಯಾದ ಆಕಸ್ಮಿಕಳಿಗೆ ಪ್ರೀತಿಯಲ್ಲಿ ಬೀಳಲು ಹೆಚ್ಚು ಸಮಯ ಹಿಡಿಯಲಿಲ್ಲ.ಅದೇ ಸಮಯದಲ್ಲಿ ಅಮ್ಮನಿಂದ ಒಂದು ಕಾಗದ ಬಂತು.
'ಪ್ರೀತಿಯ ಮಗಳೇ ಓದಿ ನೀನು ಸಾಧನೆ ಮಾಡಿದರೆ ನನಗಿಂತ ಕುಶಿ ಪಡುವವಳು ಬೇರೆ ಇಲ್ಲ. ಆದರೆ ಗಮನ ಓದಿನ ಕಡೆ ಹೆಚ್ಚಿರಲಿ.ಉಜ್ವಲ ಭವಿಷ್ಯ ನಿನ್ನದಾಗಲಿ'.ಓದಿದ ನಂತರ ಆಕೆಗೆ ಅನ್ನಿಸಿತು ತನ್ನ ಭವಿಷ್ಯ ಆಯುಶ್ ನಲ್ಲಿದೆ.ಆತ ತನ್ನ ಕೈಹಿಡಿದಾಗ ಭವಿಷ್ಯ ಉಜ್ವಲವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.

ಆಕಸ್ಮಿಕಳಿಗೆ ಎರಡು ವರ್ಷ ಹೇಗೆ ಕಳೆಯಿತೋ ತಿಳಿಯಲಿಲ್ಲ , ಆಗೀಗ ಮನೆಗೆ ಹೋದಾಗ ತಾಯಿ ಆಕಸ್ಮಿಕ ಸದಾ ಕನಸಿನ ಲೋಕದಲ್ಲಿ ವಿಹರಿಸುತ್ತಿರುವುದನ್ನು ಗಮನಿಸಿದ್ದಳು.ಇನ್ನು ಹೆಚ್ಚು ತಡ ಮಾಡಬಾರದು ಎಂದು ಪತಿಯಲ್ಲಿ ಹೇಳಿ ತನ್ನ ಅಣ್ಣನನ್ನು ಬರಹೇಳಿ ಮಾದುವೆ ಮಾತುಕತೆ ಮುಗಿಸಬೇಕು ಎಂದು ಹಠ ಹಿಡಿದರು.

ಸದಾಶಿವರಿಗೆ ಇದು ಸರಿಯಾದ ಸಮಯ ಎಂದೆನಿಸಿದ್ದರಿಂದ ಮಗಳು ಮನೆಗೆ ಬಂದ ನಂತರ ಒಂದು ಸರಿಯಾದ ದಿನವನ್ನು ನೋಡಿ ಅಹಲ್ಯಾಳ ಅಣ್ಣ ಮತ್ತು ಅವರ ಕುಟುಂಬಕ್ಕೆ ಕರೆ ಕೊಟ್ಟರು. ಇಷ್ಟೆಲ್ಲಾ ನಡೆಯುತ್ತಿದ್ದ ವಿಷಯ ಅರಿತ ಆಕಸ್ಮಿಕ ತಂದೆ ತಾಯಿಗೆ ಕಡಾ ಖಂಡಿತವಾಗಿ ತಾನು ಪ್ರದ್ಯುಮ್ನ್ನನ್ನು ಮದುವೆ ಆಗುವುದು ಸಾಧ್ಯವೇ ಇಲ್ಲ.ಇಷ್ಟು ಓದಿ ಹಳ್ಳಿ ಮನೆಯಲ್ಲಿ ಮುಸುರೆ ತಿಕ್ಕುವುದೆಂದರೆ ನನ್ನ ಓದಿಗೇ ಕುತ್ತು ಎಂದು ಒಂದೇ ಸಮನೆ ಹಾರಾಡಿದಳು.ಶಾಂತ ಸ್ವಭಾವದವರಾದ ಸದಾಶಿವ ತನ್ನ ಮಗಳಿಗೆ ಬುದ್ದಿ ಹೇಳಲು ಪ್ರಯತ್ನಿಸಿದರು. ' ಪ್ರದ್ಯುಮ್ನನೇನು ಓದದೇ ಇರುವ ದಡ್ಡನಲ್ಲ ಆತನದೂ ಕೃಷಿಯಲ್ಲಿ ಸ್ನಾತಕೋತ್ತರ ಪದವಿಯಾಗಿದೆ.ಅವನ ಅಭಿರುಚಿ ಕೃಷಿಯ ಮೇಲಿರುವುದರಿಂದ ಆತ ಇಲ್ಲಿ ಬಂದು ಮನೆಯ ಕೃಷಿಯನ್ನು ನಡೆಸಿಕೊಂಡು ಹೋಗುತ್ತಿದ್ದಾನೆ.ನೀನು ಆತನನ್ನು ಮದುವೆಯಾದರೆ ಸಂತೋಷವಾಗಿರಬಲ್ಲೆ ಎಂಬ ನಂಬಿಕೆ ನನಗಿದೆ ಎಂದು ಎಷ್ಟು ಬುದ್ದಿ ಹೇಳಿದರೂ ಆಕಸ್ಮಿಕ ತಡಮಾಡದೇ ತನ್ನ ಗೆಳೆಯ ಆಯುಶ್ ಜೊತೆ ತಾನು ಮದುವೆಯಾಗುವುದಾಗಿ ಹಠ ಹಿಡಿದು ಮನೆ ಬಿಟ್ಟು ಹೊರಟುಬಿಟ್ಟಳು.

ಇತ್ತ ವಿಷಯ ತಿಳಿದ ಪ್ರದ್ಯುಮ್ನ ನ ಮನೆಯವರು ಅವಳಿಗೇ ಇಷ್ಟವಿಲ್ಲದ ಮದುವೆ ಮಾಡಿ ಯಾವ ಪ್ರಯೋಜನ? ನೀವು ಪರಿಸ್ಥಿತಿಯನ್ನು ಹದಗೆದಿಸಬೇಡಿ ಎಂದು ತಂಗಿಗೆ ಬುದ್ದಿ ಹೇಳಿ ಪ್ರದ್ಯುಮ್ನನಿಗೆ ಆದಷ್ಟು ಬೇಗ ಬೇರೆ ಹುಡುಗಿ ಹುಡುಕಿ ಮದುವೆ ಮಾಡುವುದಾಗಿ ಹೇಳಿ ಹೋದರು.ಇತ್ತ ಪ್ರದ್ಯುಮ್ನನ ಮದುವೆ ಎಲ್ಲರ ಶುಭಾಹಾರೈಕೆಯೊಂದಿಗೆ ಆತನನ್ನು ಮೆಚ್ಚಿದ ಸೌಮ್ಯಳೊಂದಿಗೆ ಆದರೆ ಅತ್ತ ಆಕಸ್ಮಿಕ ಆಯುಶ್ ಜೊತೆ ಮದುವೆಯಾಗುವ ಕನಸು ಕಾಣತೊಡಗಿದ್ದಳು.

ಆಯುಶ್ ಗೆ ಫೋನ್ ಮಾಡಿ ನಡೆದ ಘಟನೆಯನ್ನು ತಿಳಿಸಿದಾಗ ಆತ ಯಾವುದೇ ಪ್ರತಿಕ್ರಿಯೆ ನೀಡದೇ ಸುಮ್ಮನಾದ.ಮೊದಲೇ ಸ್ವಲ್ಪ ಮಾತು ಕಡಿಮೆ ಹಾಗೆಂದು ಕೊಂಡು ಆಕಸ್ಮಿಕ ಆತನನ್ನು ಭೇಟಿಯಾಗುವ ಸಮಯಕ್ಕಾಗಿ ಕಾಯತೊಡಗಿದಳು.ಫೋನ್ ಮಾಡಿದಾಗಲೆಲ್ಲ ಕೆಲಸದಲ್ಲಿ ಬ್ಯುಸಿ ಎಂದು ಹೇಳುತ್ತಿದ್ದಾಗ ಈಕೆಗೆ ಅನುಮಾನದ ಹೊಗೆ ಪ್ರಾರಂಭವಾಯಿತು.ಕೊನೆಗೆ ಒಂದು ದಿನ ಆಯುಶ್ ನಿಂದ ಬಂದ ಮೇಲ್ ನೋಡಿ ಸಂತೋಷಗೊಂಡಳು.

ಪ್ರಿಯ ಆಕಸ್ಮಿಕ ,
ಇದೇ ತಿಂಗಳು ೨೮ ರಂದು ನನ್ನ ಮದುವೆ ನನ್ನ ಬಾಲ್ಯದ ಗೆಳತಿ ಮಾವನ ಮಗಳು ಅನುಷಾಳೊಂದಿಗೆ ನಡೆಯುತ್ತಿದೆ.ತಡವಾಗಿ ತಿಳಿಸುತ್ತಿರುವುದಕ್ಕೆ ಕ್ಷಮೆಯಿರಲಿ.ನೀನು ಸಿಗುವ ಮೊದಲಿನಿಂದಲೂ ನನಗೆ ಅನುಶಾಳಿಗೆ ಮನೆಯಲ್ಲಿ ಮದುವೆ ನಿಶ್ಚಯಿಸಿದ್ದರು.ಕೇವಲ ಎರಡು ವರ್ಷದ ಹಿಂದೆ ಸಿಕ್ಕ ನಿನಗೋಸ್ಕರ ಹುಟ್ಟಿದಾಗಿನಿಂದ ಜೊತೆಗಿರುವ ಅನುಶಾಳನ್ನು ದೂರ ಮಾಡಿದರೆ ದ್ರೋಹವಾಗುತ್ತದೆ ಎಂದೆನಿಸಿತು.ಯಾವುದೋ ಸಣ್ಣ ಆಮಿಷಗಳಿಗೆ ಪ್ರೀತಿ ಎಂಬ ಬಣ್ಣ ಕೊಟ್ಟ ನಮ್ಮಿಬ್ಬರ ಸ್ನೇಹವನ್ನು ಸ್ನೇಹಕ್ಕೇ ಸೀಮಿತಗೊಳಿಸುವುದು ಸೂಕ್ತ ಎಂದು ನನಗನಿಸಿತು.ನಮ್ಮಿಬ್ಬರ ಸ್ನೇಹ ಚಿರವಾಗಿರಲಿ.ಹ್ಞಾ ಇನ್ನೊಂದು ಮಾತು ಇದು ಆತುರದಿಂದ ತೆಗೆದುಕೊಂಡ ನಿರ್ಧಾರವಲ್ಲ,ಸಾಕಷ್ಟು ಯೋಚಿಸಿದ ನಂತರವಷ್ಟೇ ಈ ನಿರ್ಧಾರ ಸರಿ ಎಂದೆನಿಸಿತು.ನಿಮ್ಮ ಜೀವನ ಸಂತೋಷವಾಗಿರಲಿ.

ಇಂತಿ ,
ಆಯುಶ್

ಓದಿದವಳ ಕಣ್ಣಲ್ಲಿ ನೀರು ಹನಿಯುತ್ತಿತ್ತು.ತಾನು ಮಾಡಿದ ತಪ್ಪು ತನಗೇ ತಿರುಗಿ ಬಂದುದ್ದರ ಅರಿವಾಗಿ ಮನೆಗೆ ಹೋಗಿ ಪ್ರದ್ಯುಮ್ನನನ್ನು ಮದುವೆಯಾಗಲು ತನ್ನ ಒಪ್ಪಿಗೆ ಎನ್ನಬೇಕು ಎಂದುಕೊಂಡು ಮನೆಗೆ ಫೋನ್ ಮಾಡಿದಳು. ಅತ್ತ ಅಪ್ಪ

ಮಗಳೇ ನಿನ್ನ ತಪ್ಪನ್ನು ಕ್ಷಮಿಸಿದ್ದೇವೆ ಮನೆಗೆ ಬಾ, ಪ್ರದ್ಯುಮ್ನ ಈಗ ಮದೆವೆಯಾಗಿ ಆನಂದದಿಂದಿದ್ದಾನೆ ಆತನೀಗ ಅಪ್ಪನಾಗುವ ಹಂತದಲ್ಲಿದ್ದಾನೆ ಎಂದಾಗ ತನ್ನ ಜೀವನ ತಾನೇ ಹಾಳು  ಮಾಡಿಕೊಂಡಿದ್ದರ ಅರಿವು ಆಕಸ್ಮಿಕಳಿಗಾಯಿತು.

No comments:

Post a Comment