Friday 10 November 2017

ಹಾಗೇ ಸುಮ್ಮನೆ

ಈ ದಿನ ಉಳಿದೆಲ್ಲ ದಿನಗಳಿಗಿಂತ ಭಿನ್ನ , ಈಗಿನ್ನೂ ಇಲ್ಲಿ ಬೆಳಗಿನ ಮುಂಜಾವು. ಹಾಸಿಗೆ ಹೊದ್ದು ನನ್ನ ಪುಟ್ಟ ಕಂದನ ಜೊತೆ ಬೆಚ್ಚಗೆ ಮಲಗಬೇಕಾದ ನಾನು ಅದೇನೋ ಎಂದಿಲ್ಲದ ಉತ್ಸಾಹದಿಂದ ಎದ್ದು ಕುಳಿತುಬಿಟ್ಟಿದ್ದೇನೆ. ಹೌದು ಅದಕ್ಕೊಂದು ಕಾರಣವಿದೆ. ಇಲ್ಲೀಗ ಧಾರಾಕಾರ ಮಳೆ. ಕಳೆದ ಐದಾರು ವರ್ಷಗಳಲ್ಲಿ ಎಂದೂ ಕಾಣದಂತಹ ಮಳೆ. ಈ ಲಂಡನ್ ನಲ್ಲಿ ಮಳೆ ಬಂದರೆ ಜಿಟಿಜಿಟಿ ಎರಡು ಹನಿ ಹಾಕಿ ಹೋಗಿ ಬಿಡುತ್ತದೆ. ಇದೊಂದು ಮಳೆ ಎಂದು ಅನಿಸುವುದೇ ಇಲ್ಲ. ಹಾಗಿರುವಾಗ ಹೀಗೆ ಥೇಟ್ ನಮ್ಮ ಮಲೆನಾಡಿನಂತೆ ಬೋರ್ ಗರೆದು ಮಳೆ ಬರುವುದೆಂದರೆ ? ಹೌದು ಎಷ್ಟು ಉಲ್ಲಾಸ , ಮನಸ್ಸು ಗರಿಬಿಚ್ಚಿ ಕುಣಿಯುವುದು ಎಂದರೆ ಇದೇ ಇರಬೇಕು , ಇಂದು ಎಲ್ಲಿಲ್ಲದ ಉತ್ಸಾಹ ಬಂದು ಬಿಟ್ಟಿದೆ. 

ಮುಂಜಾನೆಯೇ ಎದ್ದು ಈ ಬೋರ್ಗರೆಯುವ ಮಳೆಯನ್ನು ಕಿಟಕಿಯಿಂದ ನೋಡುತ್ತಾ ಕುಳಿತುಬಿಟ್ಟಿದ್ದೇನೆ. ಅದರ ಜೊತೆಗೆ ಬಾಲ್ಯ , ನಮ್ಮ ಅಪ್ಪಟ ಹಸಿರು ತುಂಬಿದ ,ಮಳೆಗಾಲದಲ್ಲಿ ಕೆಸರು ತುಂಬಿದ ಮಣ್ಣಿನ ಸುಗಂಧ ಬೀರುವ ಮಲೆನಾಡು ಕಾಡುತ್ತಿದೆ. ನಮ್ಮ ಮಲೆನಾಡಿನ ಮಳೆ ಅದೆಷ್ಟು ಸುಂದರ. ಅದು ಮಾಡುವ ಮೋಡಿಯೇ ಹಾಗೆ , ಒಂದೇ ಸಮನೆ ಸುರಿಯುವ ಆ ಮಳೆಗೆ ಇರುವ ಆಕರ್ಷಣೆ ಬೇರಾವುದಕ್ಕೂ ಇಲ್ಲ. 

ನಾವು ಚಿಕ್ಕವರಿರುವಾಗ ಬೇಸಿಗೆ ಮುಗಿಯುತ್ತಿದ್ದಂತೆ ಒಮ್ಮೆ ವಿಪರೀತ ಶೆಕೆ ಎಂದು ಕುಳಿತಾಗ ಬೀಳುವ ಆ ಮಳೆ ಇಳೆಗೂ ಮನಸ್ಸಿಗೂ ಎಷ್ಟು ತಂಪು ನೀದುತ್ತಿತ್ತಲ್ಲ ಅದನ್ನು ಈಗ ನೆನಪಿಸಿಕೊಂಡರೆ ಆಹ್ಲಾದವೆನಿಸುತ್ತದೆ. ಉರಿಬಿಸಿಲಿನಲ್ಲಿ ಹೇಗೆ ಆಡುತ್ತಿದೆವೋ ಹಾಗೆಯೇ ಘೋರವಾಗಿ ಸುರಿಯುವ ಮಳೆಯಲ್ಲಿಯೂ ಮೈ ನೆನೆಸಿಕೊಂಡು ಆನಂದಿಸುತ್ತಿದ್ದ ಬಗೆ ಇನ್ನೂ ಮನದಲ್ಲಿ ಹಚ್ಚಹಸಿರು. ಅದು ಹೇಗೋ ಮಳೆ ಎಂದರೆ ಏನೋ ಒಂದು ವಿಶೇಷ ಆಕರ್ಷಣೆ. ಹಸಿರು ತುಂಬಿದ ಮನೆಯ ಹಿಂಬಾಗ ಬೆಟ್ಟ ಗುಡ್ಡಗಳಲ್ಲಿ ಉಂಬಳ ಕಾಲಿಗೆ ಕಚ್ಚಿ ರಕ್ತ ಹೀರುತ್ತಿದ್ದರೂ ಲೆಕ್ಕಿಸದೆ ಅಡ್ಡಾಡುತ್ತಿದ್ದ ಪರಿ ಎಷ್ಟು ಸೊಗಸು. ಜೊತೆಗೆ ಅಲ್ಲಿ ಸಿಗುವ ಕೌಳಿ,ಪರಿಗೆ , ಮುಳ್ಳನ್ನು , ಸಂಪಿಗೆ ಹಣ್ಣು , ಹಲಗೆ ಹಣ್ಣು ಹೀಗೆ ಲೆಕ್ಕವಿಲ್ಲದಷ್ಟು ಹಣ್ಣುಗಳನ್ನು ತಿನ್ನುತ್ತಿದ್ದುದು ನೆನಪಿಗೆ ಬರುತ್ತಿದೆ. ಈಗ ಅವೆಲ್ಲ ಕೇವಲ ನೆನಪುಗಳಷ್ಟೇ. ಈಗ ಈ ಹಣ್ಣುಗಳು ಸಿಕ್ಕರೂ ಅದನ್ನು ಕೊಯ್ದು ತಿನ್ನಲು ನಾವಲ್ಲಿ ಇಲ್ಲ ಎಂಬುದೇ ಬೇಸರ. ಅದಕ್ಕೆಂದೇ ತೀರ್ಮಾನಿಸಿದ್ದೇನೆ. ಈ ಭಾರಿ ಮಳೆಗಾಲದಲ್ಲೇ ಭಾರತಕ್ಕೆ ಹೋಗಬೇಕು. ನಮ್ಮ ಮಲೆನಾಡಿನ ಬೆಟ್ಟ ಗುಡ್ಡಗಳಲ್ಲಿ ಸುತ್ತಾಡಿ ಬರಬೇಕು. ಬೋರ್ ಗರೆಯುವ ಮಳೆಯನ್ನೂ ನೋಡಿ ಆನಂದಿಸಬೇಕು. ಸಾಕೆನಿಸುವಷ್ಟು ಮಳೆಯಲ್ಲಿ ಕುಣಿದು ಕುಪ್ಪಳಿಸಿ ಬರಬೇಕು. 

Arpitha Harsha 
London

ಕಲಸಿ ಒಂದು ಐತಿಹಾಸಿಕ ಸ್ಥಳ

Published in vijayakarnataka 15/10/2017


ಮಲೆನಾಡಿನ ಯಾವುದೇ ಪ್ರದೇಶಗಳಿಗೆ ಹೋದರೆ ಸುತ್ತಲೂ ಹಸಿರು , ತೆನೆ ತುಂಬಿದ ಗದ್ದೆ , ಅಡಿಕೆ ಮರಗಳು ಹಾಗೆಯೇ ಅಲ್ಲಲ್ಲಿ ರಸ್ತೆ ಬದಿಗಳಲ್ಲಿ ಮಾರಾಟಕ್ಕೆ ಇಟ್ಟ  ಅನಾನಸ್ ಮತ್ತು ಪೇರಳೆ ಹಣ್ಣುಗಳ ಪುಟ್ಟ ಅಂಗಡಿ , ಸಂಜೆ ಆಗುತ್ತಿದ್ದಂತೆ ಈರುಳ್ಳಿ ಬಜ್ಜಿ , ಮಸಾಲೆ ಪೂರಿ ಅಂಗಡಿಗಳು ಕಾಣುವುದು ಸಾಮಾನ್ಯ. ಅದರಲ್ಲು ನೀವು ಮಳೆಗಾಲದಲ್ಲಿ ಹೋದರೆ ಧೋ ಎಂದು ಸುರಿಯುವ ಮಳೆ ಜೊತೆಗೆ ಮಲೆನಾಡಿನ ಫಿಲ್ಟರ್ ಕಾಫಿ  ಎಂದೂ ಮರೆಯಲಾರಿರಿ. ಸುರಿಯುತ್ತಿರುವ ಮಳೆಯಲ್ಲಿ ಗದ್ದೆ ಕೆಲಸ ಮುಗಿಸಿ ಕಂಬಳಿ ಕೊಪ್ಪೆ ಹಾಕಿಕೊಂಡು ಮನೆ ಕಡೆ ಹೊರಡುತ್ತಿರುವವರು ರಸ್ತೆ  ಬದಿಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ದೃಶ್ಯ. ಹಾಗೆಯೇ ಇಲ್ಲಿ ನೋಡಲೂ ಕೂಡ ಸಾಕಷ್ಟು ಪ್ರವಾಸಿ ಸ್ಥಳಗಳು ಇರುವುದು ಕೂಡ ಅಷ್ಟೇ ಆಕರ್ಷಣೀಯ. 
ನಾವು ಲಂಡನ್ ನಿಂದ ಪ್ರತಿ ಭಾರಿ ಊರಿಗೆ ಹೋದಾಗಲೂ ಎಲ್ಲಾದರೂ ಒಂದೆರಡು ಕಡೆ ಪ್ರವಾಸಕ್ಕೆಂದು ಹೋಗುವುದು ರೂಡಿ . ಹಾಗೆಯೇ ಈ ಭಾರಿ ನಮ್ಮ ಪ್ರಯಾಣ ಹೋಗಿದ್ದು ಸಾಗರದಿಂದ ೧೦ ಕಿ ಮೀ ಅಂತರದಲ್ಲಿರುವ ಕಲಸಿ. ಕಲಸಿ ಊರನ್ನು ನಾಡ ಕಲಸಿ ಎಂದು ಕೂಡ ಕರೆಯುತ್ತಾರೆ.

 ಸಾಗರ ಮತ್ತು ಸೊರಬ (ಉಳವಿ) ಮಾರ್ಗವಾಗಿ ಹೋಗುವ ರಸ್ತೆಯಲ್ಲಿ ಸಿಗುವ ಕಲಸಿ  ಬೋರ್ಡ್  ಇರುವ ರಸ್ತೆಯಲ್ಲಿ ಒಂದೆರಡು ಕಿ ಮೀ ಒಳಹೋದರೆ ಸಿಗುವುದೇ ಕಲಸಿ ಗ್ರಾಮ. ಇಲ್ಲಿನ  ವಿಶೇಷತೆ ಎಂದರೆ ಇಲ್ಲಿ ಎರಡು ಕಲ್ಲಿನ ದೇವಾಲಯಗಳು ಒಂದೇ ಭಾಗದಲ್ಲಿ ಕಟ್ಟಲಾಗಿದೆ. ಒಂದು ದೊಡ್ಡ ಕಾಂಪೌಂಡ್ ನಲ್ಲಿ ಪುರಾತನ ಕಾಲದ ಕಲ್ಲಿನ ಎರಡು ದೇವಾಲಯಗಳಿವೆ. ಇದೊಂದು ಐಸಿಹಾಸಿಕ ದೇವಾಲಯವಾಗಿದ್ದು ಈಗಲೂ ಪ್ರತಿದಿನ ಪೂಜೆ ನಡೆಯುತ್ತಿದೆ. 

ಈ ದೇವಾಲಯವು ಹನ್ನೆರಡನೇ ಶತಮಾನದಲ್ಲಿ ನಿರ್ಮಾಣವಾಗಿದ್ದು ಇದನ್ನು ಹೊಯ್ಸಳರ ಕಾಲದಲ್ಲಿ ಕಟ್ಟಲಾದ ದೇವಾಲಯ ಎನ್ನಲಾಗುತ್ತದೆ. ಇಲ್ಲಿ ಹೊಯ್ಸಳರ ಶಿಲ್ಪಕಲೆಯಲ್ಲಿ ದೇವಾಲಯದ ಸುತ್ತಲೂ ಸಾಕಷ್ಟು ಕಲಾಕೃತಿಗಳನ್ನು ಕಾಣಬಹುದಾಗಿದೆ. ೧೨ ನೇ ಶತಮಾನದಲ್ಲಿ ಜಕ್ಕಣ  ಮತ್ತು ಢಕ್ಕಣ ಎಂಬುವವರು ಈ ದೇವಾಲಯವನ್ನು ಕಟ್ಟಿದರು ಎಂಬ 
ಮಾಹಿತಿಯನ್ನು ಇಲ್ಲಿನ ಕಲ್ಲಿನಲ್ಲಿ ಕೆತ್ತಲಾಗಿದೆ. ಇಲ್ಲಿ ಗಾರ್ಡ್ ಕೂಡ ಇರುವುದರಿಂದ ನೀವು ಹೋದಾಗ ಈ ಸ್ಥಳದ ಇತಿಹಾಸದ ಮಾಹಿತಿಯನ್ನು ಕೂಡ ಪಡೆಯಬಹುದು. 

ಇಲ್ಲಿರುವ ಎರಡು ದೇವಾಲಯಗಳು ಮಲ್ಲಿಕಾರ್ಜುನ ಮತ್ತು ನೀಲಕಂಠೇಶ್ವರ ದೇವಾಲಯವಾಗಿದ್ದು ,ಸಂಪೂರ್ಣ ಕಲ್ಲಿನಿಂದ ಕೆತ್ತಲಾದ ಈ ದೇವಾಲಯದ ಶಿಲೆಯನ್ನು ಸೋಮನಾಥ ಶಿಲೆ ಎಂದೇ ಕರೆಯಲಾಗುತ್ತದೆ ಎಂಬುದು ಇಲ್ಲಿ ಸಿಗುವ ಮಾಹಿತಿ.  ದೇವಾಲಯದ ನೆಲದಲ್ಲಿ ಈಗಲೂ ಕಾಣಸಿಗುವ ಪಗಡೆ ಆಟದ ಚಿನ್ಹೆ ,ಆನೆ,ಸಿಂಹ  ಮತ್ತಿತರ ಪ್ರಾಣಿಗಳ ನೀಲನಕ್ಷೆ ಇವುಗಳು ಯಾವುದೋ ಕಾಲದಲ್ಲಿ ಇಲ್ಲಿ ರಾಜರು ವಾಸಿಸುತ್ತಿದ್ದರು ಮತ್ತು ಇದನ್ನೆಲ್ಲಾ ಆಡಲು ಬಳಸುತ್ತಿದ್ದರು ಎಂಬುದನ್ನು ತೋರಿಸುತ್ತದೆ. ದೇವಾಲಯದ ಹೊರಭಾಗದಲ್ಲೂ ಕೂಡ ಆನೆ ಮತ್ತು ಸಿಂಹದ ಕೆತ್ತನೆಗಳನ್ನು ಕಾಣಬಹುದು. ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ  ಈ ಜಾಗವನ್ನು ಕೆಳದಿ ಅರಸ ಚೌಡಪ್ಪ ನಾಯಕನಿಗೆ ನೀಡಲಾಯಿತು ಎಂಬುದನ್ನು ಕೂಡ ಹೇಳಲಾಗುತ್ತದೆ.  
ಸಂಪೂರ್ಣ ಸೋಮನಾಥ ಶಿಲೆಯಲ್ಲಿರುವ ಈ ದೇವಾಲಯವನ್ನು ಕೆಳದಿ , ಇಕ್ಕೇರಿ ದೇವಾಲಯವನ್ನು ನೋಡಲು ಹೋಗುವಾಗ ನೋಡಲು ಮರೆಯದಿರಿ. ಹತ್ತಿರದಲ್ಲೇ ಜಗತ್ಪ್ರಸಿದ್ಧ ಜೋಗ ಜಲಪಾತ ಇರುವುದರಿಂದ ಮಳೆಗಾಲದಲ್ಲಿ ಈ ಸ್ಥಳಕ್ಕೆ ಹೋದವರು ಕಲಸಿ ದೇವಾಲಯವನ್ನು ಅಲ್ಲಿನ ಸುತ್ತಲಿನ ಹಸಿರಿನ ಸೊಬಗನ್ನು ನೋಡಿ ಆನಂದಿಸಿ ಬರಬಹುದು. ಒಟ್ಟಾರೆಯಾಗಿ ಪಟ್ಟಣದ ನೂಕು ನುಗ್ಗಲಿಕೆ ಬೇಸತ್ತ ಜನರಿಗೆ ಮಲೆನಾಡಿನ ಹಳ್ಳಿ , ತಂಪುಗಾಳಿ , ಅಲ್ಲಿನ ಸುಂದರ ವಾತಾವರಣ ಮುದ ಕೊಡುವುದು ಖಂಡಿತ .

ತಲುಪುವ ಮಾರ್ಗ :- ಬೆಂಗಳೂರಿನಿಂದ ಸಾಗರಕ್ಕೆ ಪ್ರತಿದಿನ ಬೆಳಿಗ್ಗೆ ಮತ್ತು ರಾತ್ರಿ ರೈಲು ಮಾರ್ಗವಾಗಿ ತಲುಪಿ ಸಾಗರದಿಂದ ದೊರೆಯುವ ಬಾಡಿಗೆ ಕಾರಿನಲ್ಲಿ ಕೂಡ ತಲುಪಬಹುದು. 
ಸ್ವಂತ ಕಾರಿನಲ್ಲಿ ಬೆಂಗಳೂರಿನಿಂದ ಬರುವವರಿಗೆ ಇದು ಸುಮಾರು ೩೬೦ ಕಿ ಮೀ ಅಂತರವಾಗುತ್ತದೆ. 
ಬೆಂಗಳೂರಿನಿಂದ ಸಾಕಷ್ಟು ರಾತ್ರಿ ಮತ್ತು ಹಗಲು ಬಸ್ಸುಗಳು ನೇರವಾಗಿ ಸಾಗರಕ್ಕೆ ಇದೆ. 

ಹತ್ತಿರದ ಪ್ರವಾಸಿ ಸ್ಥಳಗಳು : ಜೋಗ ಜಲಪಾತ , ಕೆಳದಿ , ಇಕ್ಕೇರಿ 

Arpitha Harsha 

ಅಪ್ಪನಿಗೊಂದು ಪತ್ರ

ಪ್ರೀತಿಯ ಅಪ್ಪ 
ನಿನಗೊಂದು  ಪತ್ರ ಬರೆಯಬೇಕು ಎಂಬುದು ಬಹಳ ದಿನಗಳ ಆಸೆ. ಮೊದಲೆಲ್ಲಾ  ಹಾಸ್ಟೆಲ್ ನಲ್ಲಿದ್ದುಕೊಂಡು ಕಾಲೇಜ್ ಓದುತ್ತಿದ್ದಾಗ ಆಗಾಗ ಮನೆಗೆ ಪತ್ರ ಬರೆಯುತ್ತಿದ್ದೆ. ಫೋನ್ ಇದ್ದರೂ ಆ ಪತ್ರ ಬರೆಯುವುದರಲ್ಲೇ ಏನೋ ಸಂತೋಷ ಸಿಗುತ್ತಿತ್ತು. ಈಗ ದೇಶ ಬಿಟ್ಟು ವಿದೇಶದಲ್ಲಿದ್ದಾಗಿದೆ  ಪತ್ರ ಬರೆಯುವ ಅವಕಾಶವೇ ಇಲ್ಲ. ಆಗಾಗ ಒಂದು ಫೋನ್ ಮಾಡಿ ಕುಶಲೋಪರಿ ವಿಚಾರಿಸಿ ಬಿಟ್ಟರೆ ಆಯಿತು. ಅದೆಷ್ಟೋ ಹೇಳಬೇಕು ಎಂದುಕೊಂಡ ಮಾತುಗಳು ಕೇವಲ ನಿಟ್ಟುಸಿರಲ್ಲೇ ನಿಂತು ಹೋಗುತ್ತದೆ. ಈ ಪತ್ರದಲ್ಲಾದರೆ  ಹಾಗಲ್ಲ ಏನು ಬರೆಯಬೇಕು ಎಂದುಕೊಂಡಿದ್ದೆವೋ ಅದನ್ನು ಮನಸ್ಸಿನಲ್ಲಿದ್ದಂತೆಯೇ ಬರೆದು ಮುಗಿಸಿಬಿಡಬಹುದು. ಮನಸ್ಸಿಗೂ ನಿರಾಳ.  ಏನೋ ಒಂದು ರೀತಿ ನೆಮ್ಮದಿ.  ಆಡಿದ ಮಾತುಗಳು ಮರೆಯಬಹುದು ಆದರೆ ಬರೆದ ಅಕ್ಷರಗಳು ಅಷ್ಟು ಸುಲಭವಾಗಿ ಮಾಸಲಾರದು.  ನೀನೂ ಹಾಗೆಯೆ ಮತ್ತೆ ಮತ್ತೆ ಮಗಳು ಬರೆದ ಪತ್ರ ತೆಗೆದು ಓದಬಹುದು . 

ನನ್ನ ಬಾಲ್ಯದಲ್ಲಿ ನಾನೆಂದೂ ನಿನ್ನ ಬಿಟ್ಟು ಎಲ್ಲೂ ಹೋಗುತ್ತಿರಲಿಲ್ಲ. ಅಪ್ಪನ ಮುದ್ದಿನ ಮಗಳು ನಾನು.  ಈಗಲೂ ಊರಿಗೆ ಹೋದಾಗ ಹೊರಡುವಾಗ ಅಪ್ಪನನ್ನು ಬಿಟ್ಟು ಬರುವುದು ಎಂದರೆ ಅದೇನೋ ಸಂಕಟ. ಅದೇನೋ ಕಸಿವಿಸಿ.  ಮನಸ್ಸಿನ ತುಂಬಾ ನೋವು.  ತವರು ಎಂದರೆ ಹಾಗೆಯೇ ತಾನೇ ? ಪ್ರತಿಯೊಬ್ಬ ಹೆಣ್ಣು ಅನುಭವಿಸುವ ವೇದನೆ ಇದು . ಅದೇನೇ ಇರಲಿ  ನೀ ನನಗೆ ನೀಡಿದ ಅದ್ಬುತ ಬಾಲ್ಯವನ್ನು ನಾನೆಂದಿಗೂ ಮರೆಯಲಾರೆ. ಬಾಲ್ಯದಲ್ಲಿ  ಆ ಸಂಪಿಗೆ , ಕವಳಿ , ಪರಿಗೆ , ಮುಳ್ಳನ್ನು,ಗುಡ್ಡೆ ಗೇರು , ಹಲಗೆ ಹಣ್ಣು , ನೇರಳೆ ಹಣ್ಣು  ಹೀಗೆ ಮಲೆನಾಡಿನ ತರಾವರಿ ಹಣ್ಣುಗಳನ್ನು ನನಗಾಗಿ ನೀನು ತಂದು ಕೊಡುತ್ತಿದ್ದುದ್ದು ಇಂದಿಗೂ ಹಸಿರಾಗಿದೆ.  ಅವುಗಳೆಲ್ಲ ಇಂದು ಕೇವಲ ನೆನಪು ಮಾತ್ರ. ಈ ಬಾರಿ ಊರಿಗೆ ಬಂದಾಗ ನನ್ನ ಪುಟ್ಟ ಮಗನನ್ನು ಕರೆದುಕೊಂಡು ನಮ್ಮೂರಿನ ಬೆಟ್ಟ ಅಲೆದು ಅವನಿಗೂ ಅದರ ಸವಿಯನ್ನು ನೀಡಬೇಕು. 

ಅದೇನೋ ನನ್ನ ಮಗನನ್ನು ನೋಡಿದಾಗಲೆಲ್ಲಾ ನನ್ನ ಬಾಲ್ಯ ಬಹಳ ಕಾಡುತ್ತದೆ. ನಿನ್ನೆ ತಾನೇ ಹುಟ್ಟಿದಂತಿದ್ದ ಮಗ ಆಗಲೇ ಒಂದು ವರ್ಷ ಪೂರೈಸಿಬಿಟ್ಟ. ಅವನ ನಗು ತುಂಟತನ , ಬೀಳದಂತೆ ಜಾಗರೂಕನಾಗಿ ಇಡುವ ಆ ಪುಟ್ಟ ಹೆಜ್ಜೆ, ಹಾಡು ಎಂದರೆ ಆಆ ಎನ್ನುವ ಪರಿ,ಅದರ ಜೊತೆಗೆ ನೀಡುವ ಮುಗ್ಧ ನಗು , ಟಿವಿ ಯಲ್ಲಿ ಬರುವ ಹಾಡಿಗೆ ಆತ ಕುಣಿಯುವ ಪರಿ ,ಅವನ ತೊದಲು ನುಡಿ ಇವೆಲ್ಲವುಗಳನ್ನು ನೋಡುತ್ತಿದ್ದರೆ ಅದೆಷ್ಟು ಆನಂದ. ನನಗೆ ಕಾಡುವುದು ಒಂದೇ ಮಕ್ಕಳು ಬೇಗ ಬೆಳೆದು ದೊಡ್ಡವರಾಗಿ ಬಿಡುತ್ತಾರೆ , ನಮ್ಮನ್ನು ಬಿಟ್ಟು ದೂರವೂ ಹೋಗಿ ಬಿಡುತ್ತಾರೆ , ಅದೇ ನಾನು ನಿಮ್ಮನ್ನು ಬಿಟ್ಟು ಬಂದಂತೆಯೇ!. ಎಲ್ಲಾ ಇದ್ದು ಇಲ್ಲದಿದ್ದಂತೆ ಎಲ್ಲೋ ಕಾಣದ ದೇಶಕ್ಕೆ, ವಿದೇಶಕ್ಕೆ. ಮಕ್ಕಳಿಗಿಂತ ಮೊಮ್ಮಕ್ಕಳು ಹೆಚ್ಚು ಎಂಬ ಮಾತು ಅಮ್ಮ ಯಾವಾಗಲೂ ಹೇಳುತ್ತಿರುತ್ತಾಳೆ ಆದರೆ ಆ ಆನಂದವನ್ನು ಕೇವಲ ವರ್ಷಕ್ಕೊಮ್ಮೆ ಸವಿಸಲು ಸಿಗುವಂತಾಗಿರುವುದು  ವಿಷಾದವೇನೋ ಎಂದು ಒಮ್ಮೊಮ್ಮೆ ಎನ್ನಿಸಿಬಿಡುತ್ತದೆ.  ಅದೇನೇ ಇರಲಿ ಬಂದುದನ್ನು ಬಂದಂತೆ ಅನುಭವಿಸಿಕೊಂಡು ಹೋಗುವುದೇ ಜೀವನ. ಅವನ ಫೋಟೋ ನೋಡಿಕೊಂಡು , ಅಥವಾ ಫೋನ್ ನಲ್ಲಿ ಅವನ ಧ್ವನಿ ಕೇಳಿ ಸಂತೋಷಪಡುವಷ್ಟಾದರೂ ಅವಕಾಶ ಇರುವುದಕ್ಕೆ ಧನ್ಯವಾದ ಹೇಳಿ ಸಮಾಧಾನ ಮಾಡಿಕೊಳ್ಳಬೇಕಷ್ಟೆ. 

 ಇದೇ ಜೂನ್ ೧೯ ರಂದು ಅಪ್ಪಂದಿರ ದಿನವಂತೆ ಅದಕ್ಕೆ ನಿನಗೆ ಮುಂಚಿತವಾಗಿ ಶುಭಾಷಯ ಕೋರಿಬಿಡುತ್ತೇನೆ.  ನಾ ಎಲ್ಲಿದ್ದರೂ ಸುಖವಾಗಿರಲೆಂಬ ನಿನ್ನ ಆಶೀರ್ವಾದ ಸದಾ ಹೀಗೇ  ಇರಲಿ ಮತ್ತು ಮಕ್ಕಳ ಸಂತೋಷದಲ್ಲೇ  ನೆಮ್ಮದಿ ಕಾಣುವ ನೀನು ಮತ್ತು ಅಮ್ಮ ಯಾವಾಗಲೂ ನಗುನಗುತ್ತಿರುವಂತಾಗಲಿ . 

ಇಂತಿ ನಿನ್ನ ಪ್ರೀತಿಯ ಮಗಳು