Tuesday 20 December 2011

ನಿವೇದನೆ


ಪ್ರೀತಿಯ ಅಮ್ಮ
ಹೇಳಲಾಗದ ಎಷ್ಟೋ ವಿಷಯಗಳನ್ನು ಹೇಳಲು ಅವಕಾಶ ಮಾಡಿಕೊಟ್ಟ ಗೆಳತಿ ನೀನು . ಜೀವನದ ಪ್ರತಿ ಹಂತದ ಮಹತ್ವ ಕಲಿತಿದ್ದು ನಿನ್ನಿಂದಲೇ . ನಡೆಯಲು ಕಲಿತಾಗ ಎಡವಿ ಬೀಳದಂತೆ ತಡೆದೆ.ಮಗುವಾದಾಗ ಕೈ ತುತ್ತು ನೀಡಿ ಸಲಹಿದೆ . ಹಂಚಿಕೊಂಡು ಬೆಳೆಯುವುದನ್ನು ಕಲಿಸಿದೆ .ಎಡವಿ ಬಿದ್ದು ಅತ್ತಾಗ ಎತ್ತಿ ಕೈ ಹಿಡಿದು ನಡೆಸಿದೆ.ಬದುಕಿನ ಭರವಸೆ ಗಳ ಭಾವ ಮೂಡಿಸಿದೆ.ಸದಾ ಹೊಸತನ್ನು ಕಲಿಯಲು ತುಡಿಯುತ್ತಿದ್ದ ಮನಸ್ಸಿಗೆ ಸಾಥ್ ನೀಡಿದೆ.
ನಕ್ಕಾಗ ನೋಡಿ ಸಂತೋಷಪಟ್ಟೆ .ಅತ್ತಾಗ ಸಾಂತ್ವನ ನೀಡಿದೆ. ಮುಂಬರುವ ದಿನಗಳ ಗೆಲುವಿನ ಮೆಟ್ಟಿಲನ್ನು ಹತ್ತಲು ಬೇಕಾಗುವ ಎಲ್ಲ ಧೈರ್ಯವನ್ನು ಜೊತೆ ನಿಂತು ತುಂಬಿದೆ. ಕಣ್ಣ ಹನಿ ಕೆಳಗೆ ಬೀಳದಂತೆ ಕಾಪಾಡಿದೆ. ದ್ವೇಷದ ಹಗೆ ಬದಲು ಪ್ರೀತಿ ಯಿಂದ ಜನಮನ ಗೆಲ್ಲಲು ಸ್ಪೂರ್ತಿ ನೀಡಿದೆ.ಕಣ್ಣಲ್ಲಿ ಕಣ್ಣಿಟ್ಟು ಕಾಪಾಡಿದೆ.ಪ್ರತಿ ಕ್ಷಣ ಒಳ್ಳೆಯದನ್ನೇ ಬಯಸಿದೆ.ಜೀವನ ನಡೆಸಲು ಬೇಕಾಗುವ ಎಲ್ಲ ಪಾಠ ಗಳನ್ನೂ ಮನೆಯಲ್ಲಿಯೇ ಕಲಿಸಿದೆ. ಹೊಂದಾಣಿಕೆಯೇ ಬದುಕಿನ ಮೊದಲ ಯಶಸ್ಸು ಎಂಬುದನ್ನು ತಿಳಿಸಿಕೊಟ್ಟೆ.
ಕೆಲವೊಮ್ಮೆ ಬರುವ ಕಠಿಣ ಪರಿಸ್ಥಿತಿಗೆ ಗಟ್ಟಿ ನಿಂತು ಎದುರಿಸುವ ದೈರ್ಯ ಕಲ್ಪಿಸಿ ಕೊಟ್ಟವಳು ನೀನು.ನಿನ್ನಲ್ಲಿ ಎಷ್ಟೇ ನೋವುಗಳಿದ್ದರು ತೋರಿಸದೆ ನಗು ನಗುತ್ತ ಅದೇ ನಗುವನ್ನು ಕಲಿಸಿ ಕೊಟ್ಟವಳು ನೀನು .ನಿನ್ನ ಸಹನೆ ಧೈರ್ಯ ಮಮತೆ ಇವುಗಳೆಲ್ಲ ಎಷ್ಟೋ ಭಾರಿ ನನ್ನನ್ನು ಅಚ್ಚರಿ ಗೊಳಿಸಿದ್ದಿದೆ.ಜೀವನದಲ್ಲಿ ನಿನ್ನಷ್ಟು ತಿಳಿದವಳು ನಾನಲ್ಲ ಇನ್ನು ತಿಳಿಯುವುದು ಕಲಿಯುವುದು ಬಹಳಷ್ಟಿದೆ.ಅದಕ್ಕೆಲ್ಲ್ಲ ನಿನ್ನ ಸಹಕಾರ ಹೀಗೆ ಇರಲಿ ಎಂಬ ಬೇಡಿಕೆಯೊಂದಿಗೆ ....
ಇಂತಿ ನಿನ್ನ ಪ್ರೀತಿಯ
ಮಗಳು

Friday 16 December 2011

ಬದಲಾವಣೆ

ಪರಿವರ್ತನೆ ಪ್ರಕೃತಿ ಯ ನಿಯಮ . ಋತುಗಳು ಬದಲಾದಂತೆಲ್ಲ ಪ್ರಕೃತಿಯಲ್ಲಿಯು ಬದಲಾವಣೆ ಸಹಜ.
ಲಂಡನ್ ಗೆ ಬಂದು ಅದಾಗಲೇ ಸಾಕಷ್ಟು ತಿಂಗಳು ಗಳು ಕಳೆಯಿತು.ದಿನಗಳು ಕಳೆಯುತ್ತಲೇ ಇದೆ. ನೋಡನೋಡುತ್ತಿದ್ದಂತೆ ಋತುಗಳು ಬದಲಾಗಿಬಿಡುತ್ತಿದೆ. ಆರಂಭದ ದಿನಗಳಲ್ಲಿ ಎಲ್ಲವೂ ಹಸಿರು ತುಂಬಿ ಕಂಗೊಳಿಸುತ್ತಿತ್ತು. ರಾತ್ರಿ ಹತ್ತು ಗಂಟೆ ಯಾದರು ಸೂರ್ಯ ಮುಳುಗಿರುತ್ತಿರಲಿಲ್ಲ.ಬೆಳಕು ಕಣ್ಣು ಕುಕ್ಕುವಂತೆ ಇರುತ್ತಿತ್ತು.ಬೆಳಗಿನ ಜಾವ ೪ ಗಂಟೆಗೆಲ್ಲ ಹತ್ತು ಗಂಟೆಯೇನೋ ಎಂಬಷ್ಟು ಬೆಳಕಿರುತ್ತಿತ್ತು.
ಇಲ್ಲಿ ಇರುವುದು ಎರಡೆ ಕಾಲ ಬೇಸಿಗೆ ಮತ್ತು ಚಳಿಗಾಲ . ಇಲ್ಲಿ ಮಳೆಗಾಲ ಎಂಬುದಿಲ್ಲ ಆದರೆ ವಾರದಲ್ಲಿ ೨ ದಿನವಾದರೂ ಮಳೆ ಬರುತ್ತಿರುತ್ತದೆ.ಇದು ಡಿಸೆಂಬರ್ .ಈಗ ಇಲ್ಲಿ ಚಳಿಗಾಲ ಪ್ರಾರಂಭ ಆಗಿದೆ. ಹಸಿರು ದಾಟಿ ಕೆಂಪು ಬಣ್ಣ ತಾಳಿದ್ದ ಮರದ ಎಲೆಗಳೆಲ್ಲ ಉದುರಿ ಬೋಳಾಗಿ ನಿಂತುಬಿಟ್ಟಿದೆ. ಹೂವು ಗಳೆಲ್ಲ ಉದುರಿ ಮನೆಯ ಮುಂದೆ ಖಾಲಿ ಖಾಲಿ ಎನಿಸುತ್ತಿದೆ.ಪ್ರತಿ ದಿನ ಮೋಡ ತುಂಬಿದ ವಾತಾವರಣ. ಮಧ್ಯಾನ ನಾಲ್ಕು ಗಂಟೆಗೆಲ್ಲ ಕಗ್ಗತ್ತಲೆ. ಬೆಳಗಿನ ಏಳು ಗಂಟೆಗೆ ಕೂಡ ಮಧ್ಯ ರಾತ್ರಿ ಎಂಬಂತ ಕತ್ತಲು.ಹೊರಹೊರಟರೆ ಕೊರೆಯುವ ಚಳಿ,ಮನೆಯ ಒಳಗೆ ಬೆಚ್ಚಗೆ ಕುಳಿತುಕೊಂಡು ಬಿಟ್ಟರೆ ಹೊರಗೆ ಕಾಲಿಡಲು ಮನಸ್ಸಾಗದು. ಮಂಜು ಬೀಳುವುದನ್ನು ದೂರದಿಂದ ನೋಡಿದರೆ ಹತ್ತಿಯ ಹೂವಿನಿಂದ ಅದೀಗ ತಾನೇ ಹೊರಬಂದ ಹತ್ತಿ ಉದುರಿ ಬೀಳುತ್ತಿದೆ ಎನಿಸುತ್ತದೆ.ಎಲ್ಲಿ ನೋಡಿದರು ಕ್ರಿಸ್ಮಸ್ ಗಾಗಿ ಅಲಂಕಾರಗೊಂಡ ಅಂಗಡಿಗಳು ದೀಪಗಳಿಂದ ಕಂಗೊಳಿಸುತ್ತಿದೆ.ಮೊದಲೆಲ್ಲ ರಾತ್ರಿ ಒಂಬತ್ತಾದರೂ ಕಾಣದ ಬೀದಿ ದೀಪಗಳು ಮೂರುಗಂಟೆ ಆಗುತ್ತಿದ್ದಂತೆ ಜಗಮಗಿಸಲು ಆರಂಭವಾಗಿದೆ.ಮನೆಯನ್ನೆಲ್ಲ ಬೆಚ್ಚಗಿಡುವ ಹೀಟರ್ ಉಪಯೋಗಿಸದಿದ್ದರೆ ಮನೆಯ ಒಳಗೂ ಕೂಡ ಚಳಿ ತಡೆಯಲಸಾಧ್ಯ.
ಇವೆಲ್ಲ ಪ್ರಕೃತಿಯ ಹೊಸತನವನ್ನು ಅನುಭವಿಸುವುದೇ ಒಂದು ಖುಷಿ .

Thursday 15 December 2011

ಬೋಳು ಮರ


ಬದಲಾದ ಋತುವಿಗೆ
ಉದುರಿವೆ ಎಲೆಗಳು
ಬದುಕಿನ ಜೊತೆ ಆಟ
ಇದು ಯಾವ ಹೋರಾಟ
ಹತ್ತಿರ ಸುಳಿಯದ
ಹಕ್ಕಿಗಳು ,ಖಾಲಿಯಾದ
ಗೂಡು ,ಕೇಳದ ಚಿಲಿಪಿಲಿಗಳು
ನಡುಗುತಿಹುದು ಜೀವ
ಒಂಟಿ ಒಂಟಿ ಎನಿಸಿ
ಮನದಲೇನೋ ಬೇಸರ
ನೋಡಿ ಆ ಬೋಳು ಮರ

ಕಿತ್ತಳೆಯ ಉಪಯೋಗಗಳು

ಕಿತ್ತಳೆ ಹಣ್ಣು ಸಾಮಾನ್ಯವಾಗಿ ಎಲ್ಲರಿಗೂ ಪ್ರಿಯವಾದದ್ದು. ಮತ್ತು ಸುಲಭವಾಗಿ ಕಡಿಮೆ ದರದಲ್ಲಿ ಸಿಗುವಂತದ್ದು. ಕಿತ್ತಳೆ ಹಣ್ಣು ದೇಹಕ್ಕೆ ಒಳ್ಳೆಯದು. ಚಳಿಗಾಲದಲ್ಲಿ ಕಿತ್ತಳೆ ಹಣ್ಣು ತಿನ್ನುವುದರಿಂದ ಹೆಚ್ಚು ಆರೋಗ್ಯವಾಗಿರಬಹುದು . ಇದರ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.
ಕಿತ್ತಳೆ ಹಣ್ಣಿನಲ್ಲಿ ವಿಟಮಿನ್ ನ ಪ್ರಮಾಣ ಹೆಚ್ಚಿದೆ ಅದರಲ್ಲೂ ವಿಟಮಿನ್ ಸಿ ಯನ್ನು ಹೆಚ್ಚು ಹೊಂದಿದೆ.ಕಿತ್ತಳೆ ಹಣ್ಣು ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುವಲ್ಲಿ ಮೊದಲ ಪಾತ್ರ ಹೊಂದಿದೆ.


ಜೊತೆಗೆ ಅಸ್ತಮಾ, ಸಕ್ಕರೆ ಕಾಯಿಲೆ ತಡೆಹಿಡಿಯುವುದರಲ್ಲು ಇದು ಸಹಾಯಕ.ಬಿ ಪಿ ಹೆಚ್ಚಿರುವವರು ಕಿತ್ತಳೆ ಹಣ್ಣು ತಿನ್ನುವುದರಿಂದ ಇದು ಸಮಪ್ರಮನಕ್ಕೆ ಬರುತ್ತದೆ.ಇದರ ಜೊತೆಗೆ ಕಿಡ್ನಿ ಯಲ್ಲಿ ಕಲ್ಲು ಆಗುವುದನ್ನು ಕಿತ್ತಳೆ ಯ ಸೇವನೆಯಿಂದ ತಡೆಯಬಹುದು. ಇನ್ನು ಕುಡಿತಕ್ಕೆ ಅಂಟಿ ಕೊಂಡವರಿಗೆ ಪ್ರತಿದಿನ ೨-೩ ಭಾರಿ ಕಿತ್ತಳೆ ಹಣ್ಣಿನ ಜೂಸ್ ಮಾಡಿ ಕುಡಿಸುವುದರಿಂದ ಕುಡಿತದ ಚಟವನ್ನು ಬಿಡಿಸಬಹುದು .ಕಿತ್ತಳೆ ಹಣ್ಣಿನಲ್ಲಿರುವ ಕ್ಯಾಲ್ಸಿಯುಂ ಅಂಶ ನಮ್ಮ ದೇಹದ ಮೂಳೆ ಮತ್ತು ಹಲ್ಲುಗಳನ್ನು ಗಟ್ಟಿಯಾಗಿಸುತ್ತದೆ.ಮತ್ತು ಇದರಲ್ಲಿರುವ ಫಾಲಿಕ್ ಆಸಿಡ್ ಮೆದುಳು ಬೆಳೆಯಲು ಸಹಾಯ ಮಾಡುತ್ತದೆ.ಇದರಲ್ಲಿರುವ ವಿಟಮಿನ್ B6 ಹಿಮೊಗ್ಲೋಬಿನ್ ಹೆಚ್ಚಿಸುವಲ್ಲಿ ಸಹಾಯಕ. ಕಿತ್ತಳೆಯ ಜೂಸ್ ಮಾಡಿ ಕುಡಿಯುವುದರಿಂದ ಅತಿಯಾದ ಬೊಜ್ಜನ್ನು ಕರಗಿಸಬಹುದು. ಇದರಲ್ಲಿರುವ ವಿಟಮಿನ್ ಸಿ ಚಳಿಗಾಲದಲ್ಲಿ ಬರುವ ನೆಗಡಿ , ಜ್ವರ, ದೇಹದ ನೋವುಗಳನ್ನು ತಡೆಯುತ್ತದೆ.ಮತ್ತು ಪ್ರತಿದಿನ ಒಂದು ಲೋಟ ಕಿತ್ತಳೆ ಜೂಸ್ ಕುಡಿಯುವುದರಿಂದ ದಿನವಿಡೀ ತಾಜ ಆಗಿರಬಹುದು.ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.ದಿನ ನಿತ್ಯ ಕಿತ್ತಳೆ ಯನ್ನು ತಿನ್ನುವುದರಿಂದ ಹೃದಯ ರೋಗ ಗಳನ್ನೂ ತಡೆಯಬಹುದು.ದೇಹಕ್ಕೆ ಉತ್ಸಾಹ ನೀಡುವಲ್ಲಿ ಕಿತ್ತಳೆ ಹಣ್ಣು ಸಹಕಾರಿ.
ಆದರೆ ಕಿತ್ತಳೆ ಹಣ್ಣನ್ನು ಹಾಲು ಕುಡಿದ ತಕ್ಷಣ ತಿನ್ನಬಾರದು ಇದರಿಂದ ದೇಹದಲ್ಲಿ ವಾಯು ತುಂಬಿಕೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ.ಆದ್ದರಿಂದ ಕನಿಷ್ಠ ಅರ್ಧ ಗಂಟೆಯ ನಂತರ ತಿನ್ನಬಹುದು.

ಅಮೃತವೀ ಜೇನು


ಚಿಕ್ಕಂದಿನಿಂದ ಜೇನುಹುಳಗಳನ್ನು ಹತ್ತಿರದಿಂದ ನೋಡಿದ್ದೆ. ನನ್ನ ಅಪ್ಪನಿಗೆ ಜೇನು ಹಿಡಿದು ಪೆಟ್ಟಿಗೆ ತುಂಬಿ ಇಡುವುದು ಅದರಿಂದ ತುಪ್ಪವನ್ನು ತೆಗೆದು ತಾಜಾ ತುಪ್ಪ ತಿನ್ನುವುದೆಂದರೆ ಎಲ್ಲಿಲ್ಲದ ಸಂತೋಷ.ನಾನು
ಎಷ್ಟೋ ಭಾರಿ ಜೆನಿನಿಂದ ಕಚ್ಚಿಸಿಕೊಂಡು ಅದಕ್ಕೆ ಶಾಪ ಹಾಕಿದ್ದಿದೆ . ಆದರೆ ಅದರಿಂದಾಗುವ ಉಪಯೋಗ ಬಹಳ .ಜೇನಿನ ಬಗ್ಗೆ ತಿಳಿಸುವ ಸಣ್ಣ ಪ್ರಯತ್ನ ಇಲ್ಲಿ.
೧)ಒಂದು ಜೇನುಹುಳು ಸುಮಾರು ೧೫೦ ಮಿಲಿಯನ್ ವರ್ಷಗಳ ವರೆಗೆ ಜೇನುತುಪ್ಪವನ್ನು ನೀಡುವ ಶಕ್ತಿಯನ್ನು ಹೊಂದಿರುತ್ತದೆ ಎಂದರೆ ನಿಜಕ್ಕೂ ಅಚ್ಚರಿಯ ವಿಷಯವೇ ಸರಿ.
೨) ಜೇನುಹುಳುಗಳು ಎಂದಿಗೂ ನಿದ್ದೆ ಮಾಡುವುದಿಲ್ಲ .
೩)ಒಂದು ಜೇನುಹುಳು ಒಂದು ಗಂಟೆಗೆ ಸುಮಾರು ೧೫ ಮೈಲಿನಷ್ಟು ದೂರ ಹಾರಬಲ್ಲದು.
೪)ಪ್ರಪಂಚದಲ್ಲೇ ಮಾನವನಿಗಾಗಿ ಆಹಾರ ತಯಾರಿಸಬಲ್ಲ ಏಕೈಕ ಹುಳವೆಂದರೆ ಜೇನುಹುಳ.
೫)ಜೇನು ಹುಳಗಳಿಗೆ ಒಟ್ಟು ೫ ಕಣ್ಣು ಗಳಿರುತ್ತವೆ .
೬)ಜೇನು ಹುಳಗಳು ಸಾಮಾನ್ಯವಾಗಿ ಚಳಿಗಾಲದಲ್ಲಿ ಜೇನುತುಪ್ಪ ನೀಡುತ್ತದೆ ಏಕೆಂದರೆ ಈ ಸಮಯದಲ್ಲಿ ಅವುಗಳಿಗೆ ಹೂವುಗಳು ಸಿಗುವುದು ವಿರಳ.
೭)ಜೇನು ಹುಳುಗಳಲ್ಲಿ ರಾಣಿ ಜೇನಿಗೆ ಹೆಚ್ಚು ಪ್ರಾಮುಖ್ಯತೆ.
೮)ಒಂದು ರಾಣಿ ಜೇನು ಒಮ್ಮೆ ೨೦೦೦ ಮೊಟ್ಟೆಗಳನ್ನಿಡುತ್ತದೆ.
೯) ಒಂದು ಜೇನು ಗೂಡಿನಿಂದ ಒಂದು ವರ್ಷದಲ್ಲಿ ೪೦೦ ಪೌಂಡ್ ನಷ್ಟು ಜೇನುತುಪ್ಪ ತೆಗೆಯಬಹುದು.
ಇದು ಜೇನು ಹುಳುವಿನ ಬಗ್ಗೆಯಾದರೆ ಇನ್ನು ಜೇನಿನಿಂದ ನಮಗೆ ದೊರೆಯುವ ಉಪಯೋಗಗಳು ಅನೇಕ.


ನೈಸರ್ಗಿಕವಾಗಿ ದೊರೆಯುವ ಜೇನು ತುಪ್ಪವನ್ನು ದಿನವು ಸೇವಿಸುವುದರಿಂದ ಅನೇಕ ಕಾಯಿಲೆಗಳು ಹತ್ತಿರ ಸುಳಿಯುವುದಿಲ್ಲ.ಪ್ರತಿದಿನ ಬೆಳಿಗ್ಗೆ ಮುಂಜಾನೆ ಎದ್ದೊಡನೆ ಬಿಸಿ ನೀರಿನೊಂದಿಗೆ ಒಂದು ಚಮಚ ಜೇನು ತುಪ್ಪ ಹಾಕಿ ಕುಡಿಯುವುದರಿಂದ ಕೊಬ್ಬಿನ ಅಂಶ ಕಡಿಮೆಯಾಗಿ ಕೊಲೆಸ್ಟ್ರಾಲ್ ಅನ್ನು ನಿಯಂತ್ರಣ ದಲ್ಲಿಡುವಲ್ಲಿ ಸಹಾಯ ಮಾಡುತ್ತದೆ.
ನೆಗಡಿಯಿಂದ ಬಳಲುತ್ತಿರುವವರು ೩ ದಿನಗಳ ಕಾಲ ಒಂದೊಂದು ಚಮಚ ಜೇನುತುಪ್ಪ ಜೊತೆಗೆ ದಾಲ್ಚಿನ್ನಿ ಪುಡಿ ಬೆರೆಸಿ ತಿನ್ನುವುದರಿಂದ ನೆಗಡಿಯನ್ನು ದೂರ ಗೊಳಿಸಬಹುದು .
ಇನ್ನು ಹೊಟ್ಟೆಗೆ ಸಂಬಂಧ ಪಟ್ಟ ಹೊತ್ತೆಹುಳು , ಹೊಟ್ಟೆ ಹುಣ್ಣು ಇವುಗಳ ಶಮನಕ್ಕು ಕೂಡ ಜೇನುತುಪ್ಪ ಸಹಕಾರಿ.
ಸುಟ್ಟ ಗಾಯಗಳಾದಲ್ಲಿ ತಕ್ಷಣ ಜೇನುತುಪ್ಪ ಸವರುವುದರಿಂದ ನೋವು ಕಡಿಮೆಯಾಗುವುದರೊಂದಿಗೆ ಬಾವು ಬರುವುದಿಲ್ಲ.ಯಾವುದೇ ರೀತಿಯ ಗಾಯಗಳ ಮೇಲೆ ಜೇನುತುಪ್ಪ ಹಚ್ಚುವುದರಿಂದ ಬೇಗ ಗುಣವಾಗಬಹುದು.
ಜೇನು ತುಪ್ಪವನ್ನು ಹಾಲಿನೊಂದಿಗೆ ಬೆರೆಸಿ ಮುಖಕ್ಕೆ ಹಚ್ಚುವುದರಿಂದ ಮುಖದ ಕಾಂತಿ ಹೆಚ್ಚುತ್ತದೆ .ಜೊತೆಗೆ ತ್ವಚೆ ಹೊಳಪಿನಿಂದ ಕೂಡಿರುತ್ತದೆ.ಮುಖದಲ್ಲಿ ನೆರಿಗೆಗಳಾಗದಂತೆ ತಡೆಯುವಲ್ಲಿ ಕೂಡ ಇದರ ಪಾತ್ರವಿದೆ.ಜೇನುತುಪ್ಪದಲ್ಲಿ ವಿಟಮಿನ್ B1,B2.C.B6 ಗಳಿರುತ್ತದೆ.ನಿದ್ರಾ ರೋಗದಿಂದ ಬಳಲುತ್ತಿದ್ದರೆ ಒಂದು ಚಮಚ ಜೇನುತುಪ್ಪ ತಿನ್ನುವುದರಿಂದ ಪ್ರತಿದಿನ ಚೆನ್ನಾಗಿ ನಿದ್ದೆ ಮಾಡಬಹುದು .
ಅತಿಯಾದ ಬೊಜ್ಜಿನಿಂದ ಬಳಲುತ್ತಿರುವವರಿಗೆ ಜೇನು ತುಪ್ಪ ಒಳ್ಳೆಯ ಔಷಧ .ಜೇನುತುಪ್ಪ ದೇಹಕ್ಕೆ ಹೆಚ್ಚು ಶಕ್ತಿ ನೀಡುತ್ತದೆ .ಪ್ರತಿದಿನ ಒಂದು ಚಮಚ ಜೇನುತುಪ್ಪ ತಿನ್ನುವುದರಿಂದ ದೇಹಕ್ಕೆ ಬೇಕಾಗುವ ಶಕ್ತಿ ದೊರೆಯುತ್ತದೆ.ಜೇನುಹುಳ ಕಚ್ಚಿಸಿಕೊಂಡರೆ ಭಯಪಡಬೇಕಿಲ್ಲ ಜೇನಿಗೆ ನಮ್ಮ ದೇಹ ದಲ್ಲಿರುವ ನಂಜಿನ ಅಂಶವನ್ನು ತೆಗೆದು ಹಾಕುವ ಶಕ್ತಿ ಇದೆ.
ಅಡುಗೆ ಮಾಡುವಾಗ ಸಕ್ಕರೆಯ ಬದಲು ಜೇನುತುಪ್ಪ ವನ್ನು ಬಳಸುವುದರಿಂದ ಆರೋಗ್ಯ ವೃದ್ಧಿಸಿಕೊಳ್ಳ ಬಹುದು.ಹೀಗೆ ಜೇನು ಅಮೃತ ವಿದ್ದಂತೆ

Wednesday 7 December 2011

ಮಳೆ


ಗೆಳತಿ
ಹೊರಗೆ ಜೋರಾಗಿ ಸುರಿಯುತ್ತಿರುವ ಮಳೆ ,ಭಯಂಕರ ಗಾಳಿ , ಕೈಯಲ್ಲಿ ಒಂದು ಕಪ್ ಕಾಫಿ ಹಿಡಿದು ಕಿಟಕಿಯ ಬಳಿ ನೋಡುತ್ತಿದ್ದರೆ ಹಳೆಯ ನೆನಪುಗಳು ಕಣ್ಣೆದುರು ಸುಳಿದು ಹೋದಂತಿದೆ.
ಇವಳೇನು ಕಾಫಿ ಕುಡಿಯುವುದು ಕಲಿತಳ ಎಂದು ಯೋಚಿಸುತ್ತಿದ್ದರೆ ಇಲ್ಲಿ ಕೇಳು ಬದುಕಿನಲ್ಲಿ ಹೊಸ ಅನುಭವ ಇರಬೇಕು ಎಂದು ಎಲ್ಲೊ ಕೇಳಿದ ನೆನಪು . ಹಾಗಾಗಿ ಅದನ್ನು ಕಲಿತದ್ದಾಗಿದೆ.ಹೊಸತನ್ನು ಕಲಿಯುವುದರಲ್ಲಿ ಏನೋ ಒಂದು ರೀತಿಯ ಹುಮ್ಮಸ್ಸು.ಹಳೆಯದಾದಂತೆ ಅದು ಕೇವಲ ನೆನಪು ಅಷ್ಟೇ.ಮೊನ್ನೆ ನೀ ಕೇಳಿದೆಯಲ್ಲ ನೆನಪಿದೆಯ ಮಳೆಯಲ್ಲಿ ನೆನೆದ ಆ ದಿನಗಳು ಎಂದು ಅದಕ್ಕೆ ಈ ಪೀಠಿಕೆ . ಈ ಮಳೆಗೆ ಅದ್ಭುತವಾದ ಶಕ್ತಿ ಇದೆ. ಬಿತ್ತಿದ ಬೀಜಕ್ಕೆ ಮೊಳಕೆಯೊಡೆದು ತೆನೆತರಿಸುವ ಶಕ್ತಿ ಇದೆ.ಬರಡುನೆಲಕ್ಕೆ ತಂಪನೀವ ಶಕ್ತಿ ಇದೆ .ಬೋಳು ಮರದಲ್ಲಿ ಹಸಿರು ಚಿಗುರಿಸುವ ಶಕ್ತಿ ಇದೆ. ಹತ್ತಿ ಉರಿಯುತ್ತಿರುವ ಬೆಂಕಿಯನ್ನು ಆರಿಸುವ ಶಕ್ತಿ ಇದೆ. ಭರವಸೆ ಕಳೆದು ನಿಂತ ಬದುಕಿನಲ್ಲೊಂದು ಹೊಸ ಚೈತನ್ಯ ತುಂಬುವ ಶಕ್ತಿ ಇದೆ.ಮನದ ನೋವ ಮರೆಸಿ ಹೊಸತನವ ತುಂಬುವ ಶಕ್ತಿ ಇದೆ . ಹಳೆಯ ನೆನಪುಗಳನ್ನು ಕಣ್ಣೆದುರು ತರುವ ಶಕ್ತಿ ಇದೆ.
ಬೋರ್ಗರೆದು ಸುರಿಯುವ ಮಳೆಯನ್ನೂ ನೋಡುತ್ತಾ ಕುಳಿತರೆ ಅಂದು ಮಳೆಯಲ್ಲಿ ನೆನೆದ ಆ ದಿನಗಳು ಕಣ್ಣೆದುರು. ಮಳೆ ಬರುವುದನ್ನೇ ಕಾದ ಆ ದಿನಗಳು ಸುಂದರ ಸುಂದರ.ಇಂದು ಅದು ಕೇವಲ ನೆನಪು,
ಮರೆಯಲಾಗದ ನೆನಪು.ಇಂದು ಕಣ್ಣೆದುರು ಧೋ ಎಂದು ಮಳೆ ಸುರಿಯುತ್ತಿದ್ದರೆ ಮನಸ್ಸು ಬೇರೆಲ್ಲೋ ಸುಳಿದಾಡುತ್ತಿರುತ್ತದೆ.ಕಿಟಕಿಯ ಬಳಿ ನಿಂತು ನೋಡುವುದರಲ್ಲೇ ಸಂತೋಷ ಎಂದೆನಿಸುತ್ತದೆ.ಆದರೆ ಆ ನೆನಪುಗಳು ಮಾತ್ರ ಎಂದಿಗೂ ಹಚ್ಚ ಹಸಿರು.ಹಳೆಯ ದಿನಗಳನ್ನು ನೆನಪಿಸುವ ಮಳೆಗೆ ಎಷ್ಟು ಧನ್ಯವಾದ ಹೇಳಿದರು ಕಡಿಮೆಯೇ !!