Friday 16 December 2011

ಬದಲಾವಣೆ

ಪರಿವರ್ತನೆ ಪ್ರಕೃತಿ ಯ ನಿಯಮ . ಋತುಗಳು ಬದಲಾದಂತೆಲ್ಲ ಪ್ರಕೃತಿಯಲ್ಲಿಯು ಬದಲಾವಣೆ ಸಹಜ.
ಲಂಡನ್ ಗೆ ಬಂದು ಅದಾಗಲೇ ಸಾಕಷ್ಟು ತಿಂಗಳು ಗಳು ಕಳೆಯಿತು.ದಿನಗಳು ಕಳೆಯುತ್ತಲೇ ಇದೆ. ನೋಡನೋಡುತ್ತಿದ್ದಂತೆ ಋತುಗಳು ಬದಲಾಗಿಬಿಡುತ್ತಿದೆ. ಆರಂಭದ ದಿನಗಳಲ್ಲಿ ಎಲ್ಲವೂ ಹಸಿರು ತುಂಬಿ ಕಂಗೊಳಿಸುತ್ತಿತ್ತು. ರಾತ್ರಿ ಹತ್ತು ಗಂಟೆ ಯಾದರು ಸೂರ್ಯ ಮುಳುಗಿರುತ್ತಿರಲಿಲ್ಲ.ಬೆಳಕು ಕಣ್ಣು ಕುಕ್ಕುವಂತೆ ಇರುತ್ತಿತ್ತು.ಬೆಳಗಿನ ಜಾವ ೪ ಗಂಟೆಗೆಲ್ಲ ಹತ್ತು ಗಂಟೆಯೇನೋ ಎಂಬಷ್ಟು ಬೆಳಕಿರುತ್ತಿತ್ತು.
ಇಲ್ಲಿ ಇರುವುದು ಎರಡೆ ಕಾಲ ಬೇಸಿಗೆ ಮತ್ತು ಚಳಿಗಾಲ . ಇಲ್ಲಿ ಮಳೆಗಾಲ ಎಂಬುದಿಲ್ಲ ಆದರೆ ವಾರದಲ್ಲಿ ೨ ದಿನವಾದರೂ ಮಳೆ ಬರುತ್ತಿರುತ್ತದೆ.ಇದು ಡಿಸೆಂಬರ್ .ಈಗ ಇಲ್ಲಿ ಚಳಿಗಾಲ ಪ್ರಾರಂಭ ಆಗಿದೆ. ಹಸಿರು ದಾಟಿ ಕೆಂಪು ಬಣ್ಣ ತಾಳಿದ್ದ ಮರದ ಎಲೆಗಳೆಲ್ಲ ಉದುರಿ ಬೋಳಾಗಿ ನಿಂತುಬಿಟ್ಟಿದೆ. ಹೂವು ಗಳೆಲ್ಲ ಉದುರಿ ಮನೆಯ ಮುಂದೆ ಖಾಲಿ ಖಾಲಿ ಎನಿಸುತ್ತಿದೆ.ಪ್ರತಿ ದಿನ ಮೋಡ ತುಂಬಿದ ವಾತಾವರಣ. ಮಧ್ಯಾನ ನಾಲ್ಕು ಗಂಟೆಗೆಲ್ಲ ಕಗ್ಗತ್ತಲೆ. ಬೆಳಗಿನ ಏಳು ಗಂಟೆಗೆ ಕೂಡ ಮಧ್ಯ ರಾತ್ರಿ ಎಂಬಂತ ಕತ್ತಲು.ಹೊರಹೊರಟರೆ ಕೊರೆಯುವ ಚಳಿ,ಮನೆಯ ಒಳಗೆ ಬೆಚ್ಚಗೆ ಕುಳಿತುಕೊಂಡು ಬಿಟ್ಟರೆ ಹೊರಗೆ ಕಾಲಿಡಲು ಮನಸ್ಸಾಗದು. ಮಂಜು ಬೀಳುವುದನ್ನು ದೂರದಿಂದ ನೋಡಿದರೆ ಹತ್ತಿಯ ಹೂವಿನಿಂದ ಅದೀಗ ತಾನೇ ಹೊರಬಂದ ಹತ್ತಿ ಉದುರಿ ಬೀಳುತ್ತಿದೆ ಎನಿಸುತ್ತದೆ.ಎಲ್ಲಿ ನೋಡಿದರು ಕ್ರಿಸ್ಮಸ್ ಗಾಗಿ ಅಲಂಕಾರಗೊಂಡ ಅಂಗಡಿಗಳು ದೀಪಗಳಿಂದ ಕಂಗೊಳಿಸುತ್ತಿದೆ.ಮೊದಲೆಲ್ಲ ರಾತ್ರಿ ಒಂಬತ್ತಾದರೂ ಕಾಣದ ಬೀದಿ ದೀಪಗಳು ಮೂರುಗಂಟೆ ಆಗುತ್ತಿದ್ದಂತೆ ಜಗಮಗಿಸಲು ಆರಂಭವಾಗಿದೆ.ಮನೆಯನ್ನೆಲ್ಲ ಬೆಚ್ಚಗಿಡುವ ಹೀಟರ್ ಉಪಯೋಗಿಸದಿದ್ದರೆ ಮನೆಯ ಒಳಗೂ ಕೂಡ ಚಳಿ ತಡೆಯಲಸಾಧ್ಯ.
ಇವೆಲ್ಲ ಪ್ರಕೃತಿಯ ಹೊಸತನವನ್ನು ಅನುಭವಿಸುವುದೇ ಒಂದು ಖುಷಿ .

No comments:

Post a Comment