Wednesday 7 December 2011

ಮಳೆ


ಗೆಳತಿ
ಹೊರಗೆ ಜೋರಾಗಿ ಸುರಿಯುತ್ತಿರುವ ಮಳೆ ,ಭಯಂಕರ ಗಾಳಿ , ಕೈಯಲ್ಲಿ ಒಂದು ಕಪ್ ಕಾಫಿ ಹಿಡಿದು ಕಿಟಕಿಯ ಬಳಿ ನೋಡುತ್ತಿದ್ದರೆ ಹಳೆಯ ನೆನಪುಗಳು ಕಣ್ಣೆದುರು ಸುಳಿದು ಹೋದಂತಿದೆ.
ಇವಳೇನು ಕಾಫಿ ಕುಡಿಯುವುದು ಕಲಿತಳ ಎಂದು ಯೋಚಿಸುತ್ತಿದ್ದರೆ ಇಲ್ಲಿ ಕೇಳು ಬದುಕಿನಲ್ಲಿ ಹೊಸ ಅನುಭವ ಇರಬೇಕು ಎಂದು ಎಲ್ಲೊ ಕೇಳಿದ ನೆನಪು . ಹಾಗಾಗಿ ಅದನ್ನು ಕಲಿತದ್ದಾಗಿದೆ.ಹೊಸತನ್ನು ಕಲಿಯುವುದರಲ್ಲಿ ಏನೋ ಒಂದು ರೀತಿಯ ಹುಮ್ಮಸ್ಸು.ಹಳೆಯದಾದಂತೆ ಅದು ಕೇವಲ ನೆನಪು ಅಷ್ಟೇ.ಮೊನ್ನೆ ನೀ ಕೇಳಿದೆಯಲ್ಲ ನೆನಪಿದೆಯ ಮಳೆಯಲ್ಲಿ ನೆನೆದ ಆ ದಿನಗಳು ಎಂದು ಅದಕ್ಕೆ ಈ ಪೀಠಿಕೆ . ಈ ಮಳೆಗೆ ಅದ್ಭುತವಾದ ಶಕ್ತಿ ಇದೆ. ಬಿತ್ತಿದ ಬೀಜಕ್ಕೆ ಮೊಳಕೆಯೊಡೆದು ತೆನೆತರಿಸುವ ಶಕ್ತಿ ಇದೆ.ಬರಡುನೆಲಕ್ಕೆ ತಂಪನೀವ ಶಕ್ತಿ ಇದೆ .ಬೋಳು ಮರದಲ್ಲಿ ಹಸಿರು ಚಿಗುರಿಸುವ ಶಕ್ತಿ ಇದೆ. ಹತ್ತಿ ಉರಿಯುತ್ತಿರುವ ಬೆಂಕಿಯನ್ನು ಆರಿಸುವ ಶಕ್ತಿ ಇದೆ. ಭರವಸೆ ಕಳೆದು ನಿಂತ ಬದುಕಿನಲ್ಲೊಂದು ಹೊಸ ಚೈತನ್ಯ ತುಂಬುವ ಶಕ್ತಿ ಇದೆ.ಮನದ ನೋವ ಮರೆಸಿ ಹೊಸತನವ ತುಂಬುವ ಶಕ್ತಿ ಇದೆ . ಹಳೆಯ ನೆನಪುಗಳನ್ನು ಕಣ್ಣೆದುರು ತರುವ ಶಕ್ತಿ ಇದೆ.
ಬೋರ್ಗರೆದು ಸುರಿಯುವ ಮಳೆಯನ್ನೂ ನೋಡುತ್ತಾ ಕುಳಿತರೆ ಅಂದು ಮಳೆಯಲ್ಲಿ ನೆನೆದ ಆ ದಿನಗಳು ಕಣ್ಣೆದುರು. ಮಳೆ ಬರುವುದನ್ನೇ ಕಾದ ಆ ದಿನಗಳು ಸುಂದರ ಸುಂದರ.ಇಂದು ಅದು ಕೇವಲ ನೆನಪು,
ಮರೆಯಲಾಗದ ನೆನಪು.ಇಂದು ಕಣ್ಣೆದುರು ಧೋ ಎಂದು ಮಳೆ ಸುರಿಯುತ್ತಿದ್ದರೆ ಮನಸ್ಸು ಬೇರೆಲ್ಲೋ ಸುಳಿದಾಡುತ್ತಿರುತ್ತದೆ.ಕಿಟಕಿಯ ಬಳಿ ನಿಂತು ನೋಡುವುದರಲ್ಲೇ ಸಂತೋಷ ಎಂದೆನಿಸುತ್ತದೆ.ಆದರೆ ಆ ನೆನಪುಗಳು ಮಾತ್ರ ಎಂದಿಗೂ ಹಚ್ಚ ಹಸಿರು.ಹಳೆಯ ದಿನಗಳನ್ನು ನೆನಪಿಸುವ ಮಳೆಗೆ ಎಷ್ಟು ಧನ್ಯವಾದ ಹೇಳಿದರು ಕಡಿಮೆಯೇ !!

No comments:

Post a Comment