Saturday 29 December 2012

ಸೀರೆ ಮ್ಯಾಟ್ (ಡೋರ್ ಮ್ಯಾಟ್ )

ಈ ನನ್ನ ಲೇಖನವು ವಿಜಯ ನೆಕ್ಸ್ಟ್ ನಲ್ಲಿ ಪ್ರಕಟಗೊಂಡಿದೆ <a>http://www.vijayanextepaper.com/Details.aspx?id=661&boxid=191642218</a>







ಅಂಗಡಿಗಳಲ್ಲಿ ನಾನಾ ವಿಧದ ಮ್ಯಾಟ್ ಗಳು ಸಿಗುತ್ತವೆ ಹಾಗೆಯೇ ಅದಕ್ಕೆ 200-300 ರುಪಾಯಿ ಕೊಡಬೇಕಾಗುತ್ತದೆ. ಅಷ್ಟೇ ಸುಂದರವಾದ ಮ್ಯಾಟ್ಗಳನ್ನು ಮನೆಯಲ್ಲಿಯೇ ತಯಾರಿಸಬಹುದು . ಇದು ನೋಡಲು ಕೂಡ ಸೊಗಸಾಗಿರುತ್ತದೆ ಮತ್ತು ಸುಲಭ ಕೂಡ ಹೌದು . ಇದು ಕಸದಿಂದ ರಸ . ಮನೆಯಲ್ಲಿ ಇರುವ ಹಳೆ ಸೀರೆಗಳನ್ನು ಉಪಯೋಗಿಸಿ ಈ ಮ್ಯಾಟ್ ತಯಾರಿಸಬಹುದು. ಕ್ರೋಶ ಕಡ್ಡಿಯನ್ನು ಬಳಸಲು ಗೊತ್ತಿರುವವರು ಇದನ್ನು ಸುಲಭವಾಗಿ ಮಾಡಬಹುದು . ಬೇಕಾಗುವ ಸಾಮಗ್ರಿಗಳು : ಕತ್ತರಿ , ಹಳೆಯ ಸೀರೆ , ಕ್ರೋಶ ಕಡ್ಡಿ ( ಫ್ಯಾನ್ಸಿ ಸ್ಟೋರ್ ಗಳಲ್ಲಿ ಸಿಗುತ್ತದೆ) .

  ಮಾಡುವ ವಿಧಾನ : ಮೊದಲು ಹಳೆಯ ಸೀರೆಯನ್ನು ಕತ್ತರಿಯಿಂದ ಒಂದು ತುದಿ ಸ್ವಲ್ಪ ಕತ್ತರಿಸಿ ಉದ್ದಕ್ಕೆ ಸಿಗಿದು ಕೊಳ್ಳಬೇಕು . ( ಕತ್ತರಿಯಿಂದ ಉದ್ದ ಕಟ್ ಮಾಡುತ್ತಾ ಕುಳಿತರೆ ಸಮಯ ವ್ಯರ್ಥ ಹಳೆಯ ಸೀರೆಯಾಗಿರುವುದರಿಂದ ಸ್ವಲ್ಪ ಕತ್ತರಿಸಿದ ನಂತರ ತಾನಾಗೆ ಸಿಗಿಯಲು ಬರುತ್ತದೆ ) .

 ಇಡೀ ಸೀರೆಯನ್ನು ಹೀಗೆ ಉದ್ದವಾಗಿ (ಅಡ್ಡಕತ್ತರಿಸಬಾರದು ಸೀರೆಯು ಉದ್ದ ಇರುವ ಕಡೆ ನೋಡಿ ಕತ್ತರಿಸಬೇಕು) ಕತ್ತರಿಸಿದ ನಂತರ ಅದನ್ನು ಒಂದು ಉಂಡೆಯನ್ನಾಗಿ ಇಟ್ಟುಕೊಳ್ಳಬೇಕು ಇದರಿಂದ ಸಿಕ್ಕು ಕಟ್ಟುವುದಿಲ್ಲ 2 ಬೇರೆಬೇರೆ ರೀತಿಯ ಸೀರೆಯನ್ನು ಸಿಗಿದು ಉಂಡೆ ಮಾಡಿಟ್ಟುಕೊಂಡು ಸೇರಿಸುತ್ತಾ ಮ್ಯಾಟ್ ಮಾಡುವುದರಿಂದ ನೋಡಲು ಸುಂದರವಾಗಿ ಕಾಣುತ್ತದೆ. ನಂತರ ಕ್ರೋಶಕಡ್ದಿಯಿಂದ ಚೈನ್ ಸ್ಟಿಚ್ ಅನ್ನು ಹಾಕುತ್ತ ಸುತ್ತರಿಸುತ್ತ ಹೋದಾಗ ಇದು ವೃತ್ತಾಕಾರದ ರೂಪದಲ್ಲಿ ಬರುತ್ತದೆ. ಚೈನ್ ಸ್ಟಿಚ್ ಬಹಳ ಸುಲಭದ ಸ್ಟಿಚ್ ಆಗಿದೆ .

 ಇದು ಮೊದಲು ಗಂಟು ಕಟ್ಟುವುದರಿಂದ ಪ್ರಾರಂಭಿಸಿ ನಂತರ ಕ್ರೋಶ ಕಡ್ಡಿಯ ಒಳಗೆ 3 ಭಾರಿ ಸುತ್ತಬೇಕು . ಕ್ರೋಶ ಕಡ್ಡಿ ಬಳಸಲು ಗೊತ್ತಿರುವವರಿಗೆ ಇದು ಬಹಳ ಸುಲಭ .


 ಅರ್ಪಿತಾ ಹರ್ಷ ಲಂಡನ್

Wednesday 26 December 2012

ಉಕ್ಕಿನ ಮಹಿಳೆ

ಈ ನನ್ನ ಲೇಖನವು 30/01/2013ರ  ಉದಯವಾಣಿಯಲ್ಲಿ ಪ್ರಕಟಗೊಂಡಿದೆ <a>"http://epaper.udayavani.com/Display.aspx?Pg=H&Edn=BN&DispDate=1/30/2013"</a>


ಆಕೆ ಒಬ್ಬ ವ್ಯಾಪಾರಿಯ ಮಗಳು . ಹುಟ್ಟಿನಿಂದಲೇ ಛಲ ಎಂಬುದು ಅವಳಲ್ಲಿ ಬಲವಾಗಿ ಬೇರೂರಿತ್ತು.  ಬೆಳೆದು ದೊಡ್ದವಳಾಗುತ್ತಿದ್ದಂತೆ  ಮುಂದೊಮ್ಮೆ ದೇಶವನ್ನೇ ಆಳುವ ನಾಯಕಿ ಆಗಬಲ್ಲಳು ಎಂದು ಯಾರು ಕನಸು ಕಂಡಿರಲಿಲ್ಲ ಅದೊಂದು ದಿನ ಆಕೆ ಪ್ರಥಮ ಮಹಿಳಾ ಪ್ರಧಾನಿ ಯಾಗಿ ಆಯ್ಕೆ ಯಾದಳು ಅಷ್ಟೇ ಅಲ್ಲ ಅದೊಂದು ದೊಡ್ಡ ಸವಾಲಾಗಿ ಸ್ವೀಕರಿಸಿ ಯಶಸ್ವಿಯಾಗಿ ಮುಗಿಸಿ ಜಗತ್ ಪ್ರಸಿದ್ಧಿ ಪಡೆದವರು ಅವರು . ಮಾರ್ಗರೆಟ್ ಥ್ಯಾಚರ್ ಯಾರಿಗೆ ತಾನೇ ಗೊತ್ತಿಲ್ಲ? ಇಂದು ಜಗತ್ಪ್ರಸಿದ್ಧಿ ಹೊಂದಿದ ಈ ದಿಟ್ಟ ಮಹಿಳೆ ಒಬ್ಬ ವ್ಯಾಪಾರಿಯ ಮಗಳು . ರಾಜಕೀಯ ಜೀವನದಲ್ಲಿ ಹಲವಾರು ಏಳು ಬೀಳುಗಳನ್ನು ಅನುಭವಿಸಿದರೂ  ತನ್ನಲ್ಲಿರುವ ನಾಯಕತ್ವದ ಗುಣದಿಂದ ಯಾವುದಕ್ಕೂ ಎದೆಗುಂದದೆ ಕೊನೆಗೂ ಯಶಸ್ಸಿನ ಮೆಟ್ಟಿಲನ್ನು ಹತ್ತಿ ಹತ್ತಿ ಮುನ್ನುಗಿದವರು ಮಾರ್ಗರೆಟ್ ಥ್ಯಾಚರ್

ನಾನು ಲಂಡನ್ ಗೆ ಬಂದ  ಕೆಲವೇ ದಿನಗಳಲ್ಲಿ ಲಂಡನ್ ಬಗ್ಗೆ ತಿಳಿದುಕೊಳ್ಳುವ ಬಗ್ಗೆ ಬಹಳ ಆಸಕ್ತಿ ಇತ್ತು ಆ ಸಮಯದಲ್ಲಿ ನಾನು ಸಾಕಷ್ಟು ಇಂಗ್ಲಿಷ್ ಪುಸ್ತಕ ಓದುವುದು ಮತ್ತು  ಇಂಗ್ಲಿಷ್  ಫಿಲಂ ಗಳನ್ನೂ ನೋಡಲು ಪ್ರಾರಂಭಿಸಿದೆ .ಆಗ  ನನ್ನ ಕುತೂಹಲವನ್ನು ಸೆಳೆದಿದ್ದು ಎಂದರೆ ಬ್ರಿಟನ್ನಿನ ಮಾಜಿ ಮಹಿಳಾ ಪ್ರಧಾನ ಮಂತ್ರಿ ಮಾರ್ಗರೆಟ್ ಥ್ಯಾಚರ್ . ಇವರ ಬಗ್ಗೆ ಆಸಕ್ತಿ ಹೆಚ್ಚಾದಂತೆ ನಾನು ಮಾರ್ಗರೆಟ್ ಥ್ಯಾಚರ್ ಬಗ್ಗೆ ಅವರ ಚಲನಚಿತ್ರ  ನೋಡಲು ಪ್ರಾರಂಭಿಸಿದೆ . 'ದಿ ಐರನ್ ಲೇಡಿ ' ಇದೊಂದು ಡಾಕ್ಯುಮೆಂಟರಿ ಫಿಲಂ . ಮೊದಲಿನಿಂದ ನಾಯಕತ್ವದ ಗುಣಗಳನ್ನು ತಂದೆಯಿಂದ ಬೆಳೆಸಿಕೊಂಡ ಥ್ಯಾಚರ್ ಪ್ರತಿಯೊಂದು ಹಂತದಲ್ಲೂ ಗೆಲುವನ್ನು ಸಾಧಿಸುತ್ತಾ ಹೋಗುತಾರೆ .
ಇವರ ಯಶಸ್ಸಿಗೆ ಇವರಿಗೆ ಸಿಕ್ಕ ಬಿರುದು 'ಉಕ್ಕಿನ ಮಹಿಳೆ '. ಇವರ ವೃತ್ತಿ ಬದುಕಿನಲ್ಲಿ ಇವರು ಹತ್ತದ ಮೆಟ್ಟಿಲಿಲ್ಲ  ಸಾಧಿಸದ ಸಾಧನೆಗಲಳಿಲ್ಲ . ಆಕ್ಸ್ಫಾರ್ಡ್ ಯೂನಿವರ್ಸಿಟಿ ಯಲ್ಲಿ ಪ್ರೆಸಿಡೆಂಟ್ ಆಗುವ ಮೂಲಕ ಕಾಲಿಟ್ಟ ಆಕೆ  ಮುಂದೊಂದು ದಿನ ಮಹಿಳಾ ಪ್ರಧಾನ ಮಂತ್ರಿಯಾಗಿ ಆಯ್ಕೆ ಯಾಗಿ ದೇಶವನ್ನು  ಅಭಿವೃದ್ದಿ ಪಡಿಸುವುದರಲ್ಲಿ ಯಶಸ್ವಿಯಾಗುತ್ತಾರೆ. ಒಬ್ಬ ಮಹಿಳೆ ಏನನ್ನು ಬೇಕಾದರೂ ಸಾಧಿಸಬಳ್ಳಲು ಎನ್ನುವುದನ್ನು ತೊರಿಸಿದವರು ಥ್ಯಾಚರ್ .

 ಇವರ ಎಲ್ಲ ಯಶಸ್ವೀ ಕಾರ್ಯಗಳು ಮನಸ್ಸಿದ್ದರೆ ಏನನ್ನಾದರೂ ಸಾಧಿಸಬಹುದು ಎಂಬುದನ್ನು ದಿ ಐರನ್ ಲೇಡಿ ಮೂವಿ ತೋರಿಸಿಕೊಡುತ್ತದೆ .ಸುಮಾರು ಒಂದು ವರೆ ತಾಸಿನ ಈ ಡಾಕ್ಯುಮೆಂಟರಿ ಥ್ಯಾಚರ್ ನ ಬದುಕಿನ ಯಶಸ್ಸಿನ ಕಥೆಯನ್ನು ಹೇಳುತ್ತದೆ .ಈಗ ಮಾರ್ಗರೆಟ್ ಥ್ಯಾಚರ್ ಅವರಿಗೆ 87 ವರ್ಷ . ಇನ್ನೂ ಕೂಡ ಆಕೆ ಚಟುವಟಿಕೆಯಿಂದಿದ್ದಾರೆ . ಪ್ರತಿಯೊಬ್ಬರು ನೋಡಲೇಬೇಕಾದ ಮತ್ತು ನೋಡುಗರಲ್ಲಿ ನಾವು ಏನನ್ನಾದರೂ ಸಾಧಿಸಬೇಕು ಎನ್ನುವ ಛಲ ಹುಟ್ಟಿಸುವ  ದಿ ಐರನ್ ಲೇಡಿ ಚಿತ್ರ  ಮತ್ತು ಆಕೆ  ನನಗೆ ಬಹಳ ಇಷ್ಟವಾಯಿತು .


ಅರ್ಪಿತಾ ಹರ್ಷ 
ಲಂಡನ್ 

Thursday 20 December 2012

ಲಂಡನ್ ನ ಭಾರತೀಯ ದೇವಸ್ಥಾನಗಳು

ಭಾರತದಲ್ಲಿ ದೇವಸ್ಥಾನಗಳ ಸಂಖ್ಯೆ ಬಹಳಷ್ಟು. ಹೇಳಿಕೇಳಿ ಲಂಡನ್ ಒಂದು ಕ್ರಿಶ್ಚಿಯನ್ ದೇಶ ಇಲ್ಲಿ ಎಲ್ಲಿ ನೋಡಿದರು ಚರ್ಚು ಗಳು ಇದ್ದೆ ಇರುತ್ತದೆ ಜೊತೆಗೆ ಡಿಸೆಂಬರ್ ತಿಂಗಳು ಬಂತೆಂದರೆ ಎಲ್ಲೆಡೆಗಳಲ್ಲಿ ಜಗಜಗಿಸುವ ದೀಪಗಳು ಪಟಾಕಿಯ ಸಿಡಿಮದ್ದು ಜೊತೆಗೊಂದಿಷ್ಟು ಇಂಗ್ಲಿಷ್ ಹಾಡುಗಳು ಇದು ಲಂಡನ್ ನ ಬಗ್ಗೆ ಎಲ್ಲರಿಗೂ ಗೊತ್ತಿರುವ ಸಂಗತಿ . ಇಲ್ಲೂ ಕೂಡ ದೇವಸ್ಥಾನಗಳಿವೆ ಎಂದರೆ ಸಾಕಷ್ಟು ಜನರು ಆಶ್ಚರ್ಯ ಪಡಬಹುದು ಜೊತೆಗೊಂದಿಷ್ಟು ಕುತೂಹಲ ಕೂಡ ಮೂಡಬಹುದು . 
ಹೌದು ಎಲ್ಲ ದೇಶಗಳಲ್ಲಿರುವಂತೆ ಲಂಡನ್ ನಲ್ಲೂ ಕೂಡ ಚರ್ಚ್ ಗಳಿವೆ ಮಸೀದಿಗಳಿವೆ ಜೊತೆಗೆ ಸಾಕಷ್ಟು ದೇವಸ್ಥಾನಗಳು ಕೂಡ ಇವೆ. ಕೆಲವೊಂದು ಜಾಗಗಳಲ್ಲಿ ಭಾರತೀಯರ ಸಂಖ್ಯೆ ಬಹಳಷ್ಟಿದೆ ಅಲ್ಲೆಲ್ಲ ಮಹಾಲಕ್ಷ್ಮಿ , ಮುರುಗನ್, ಗಣಪತಿ ಹೀಗೆ ಬೇರೆಬೇರೆ ದೇವಸ್ಥಾನಗಳು ಇವೆ. ಹಾಗೆಯೇ ಇಲ್ಲಿ ಭಕ್ತಾದಿಗಳ ಸಂಖ್ಯೆಯು ಕೂಡ ಪ್ರತಿ ದಿನ ಇದ್ದೆ ಇರುತ್ತದೆ.  ಪ್ರತಿ ದಿನ ಆರತಿ ಪೂಜೆ ಪ್ರಸಾದ ಹಂಚಿಕೆ ಜೊತೆಗೆ ಕೆಲವೊಂದು ದೇವಸ್ಥಾನಗಳಲ್ಲಿ ಪ್ರತಿದಿನ ಅನ್ನಸಂತರ್ಪಣೆ ಕೂಡ ನಡೆಯುತ್ತದೆ .  
ಪ್ರತಿಯೊಂದು ಏರಿಯಾ ಗಳಲ್ಲೂ ಸಾಮಾನ್ಯವಾಗಿ ದೇವಸ್ಥಾನಗಳು ಇದ್ದೇ ಇದೆ ಅದರಲ್ಲೂ ಭಾರತೀಯರು ಇರುವಂತಹ ಜಾಗಗಳಾದ ಕ್ರೊಯ್ದನ್ , ಟ್ರೋನ್ತನ್ ಹೀಥ್ , ಗುಡ್ ಮೇಸ್ , ಇಲ್ ಫೋರ್ಡ್ ಈಸ್ಟ್ ಹ್ಯಾಮ್ , ಸೌತ್ ಹಾಲ್ ಗಳಲ್ಲಿ  ದೇವಸ್ಥಾನಗಳನ್ನು  ಕಾಣಬಹುದು. ಭಾರತದ ಬಹಳಷ್ಟು  ದೇವಸ್ಥಾನಗಳಲ್ಲಿರುವಂತೆ ಇಲ್ಲೂ ಕೂಡ ದೇವಸ್ಥಾನದ ಒಳ ಭಾಗಗಳಲ್ಲಿ ಫೋಟೋ ತೆಗೆಯುವುದನ್ನು ನಿಷೇದಿಸಲಾಗಿದೆ.ಕೆಲವೊಂದು 
ಈಸ್ಟ್ ಹ್ಯಾಮ್ ನ ಮಹಾಲಕ್ಷ್ಮಿ ದೇವಸ್ಥಾನ :
ಈಸ್ಟ್ ಹ್ಯಾಮ್ ನಲ್ಲಿ ಮಹಾಲಕ್ಷ್ಮಿ ದೇವಸ್ಥಾನ ಇದೆ ಇದನ್ನು 1989 ರಲ್ಲಿ ಕಟ್ಟಲು ಪ್ರಾರಂಭಿಸಿದರು ಇದನ್ನು ಅಧಿಕೃತವಾಗಿ ಪ್ರಾರಂಭವಾಗಿದ್ದು 1990 ರಲ್ಲಿ . ಅಂದಿನಿಂದ ಇಂದಿಗೂ ಕೂಡ ಸದಾ ಭಕ್ತಾದಿಗಳಿಂದ ತುಂಬಿರುವ ದೇವಸ್ಥಾನವಿದು. ಈ ದೇವಸ್ಥಾನದ ಒಳಗೆ ರುದ್ರ , ಶನೀಶ್ವರ, ಅಂಜನೇಯ , ಗಣೇಶ , ಗಾಯತ್ರಿ ಹಾಗು ಲಕ್ಷ್ಮಿ ನಾರಾಯಣ ವಿಗ್ರಹಗಳು ಇವೆ.ಹಾಗೆಯೇ ಬೇರೆ ಬೇರೆ ರೀತಿಯ ಪೂಜೆಗಳನ್ನು ಕೂಡ ಇಲ್ಲಿ ಮಾಡಿಸುವ ಅವಕಾಶವಿದೆ .
ಇಲ್ ಫೋರ್ಡ್ ನ ಮುರುಗನ್ ದೇವಸ್ಥಾನ :
ಇಲ್ ಫೋರ್ಡ್ ನಲ್ಲಿ ಮುರುಗನ್ ದೇವಸ್ಥಾನವನ್ನು ಇದು ಈಸ್ಟ್ ಹ್ಯಾಮ್ ಗೆ ಹತ್ತಿರವಿರುವುದರಿಂದ ಇದನ್ನು ಈಸ್ಟ್ ಹ್ಯಾಮ್ ಮುರುಗನ್ ಟೆಂಪಲ್ ಎಂದು ಕೂಡ ಕರೆಯುತಾರೆ.ಇಲ್ಲಿ ನವಗ್ರಹ ವಿಗ್ರಹಗಳು ಮತ್ತು ದಕ್ಷಿಣ ಮೂರ್ತಿ ಮತ್ತು ದುರ್ಗಾ ದೇವಿ ವಿಗ್ರಹಗಳನ್ನು ಕಾಣಬಹುದು ಈ ದೇವಸ್ಥಾನ ವಿಶಾಲವಾಗಿದ್ದು ಭಕ್ತಿ ಮೂಡಿ  ಬರುವಂತ ದೇವಸ್ಥಾನ ಜೊತೆಗೆ ಪ್ರತಿದಿನ ಇಲ್ಲಿ ಪ್ರಸಾದ ರೂಪದಲ್ಲಿ ಅಣ್ಣ ಸಂತರ್ಪಣೆ ಯನ್ನು ನಡೆಸಲಾಗುತ್ತದೆ.ಬೆಳಗ್ಗೆ 8 ರಿಂದ ಸಂಜೆ 8 ರವರೆಗೆ ತೆರೆದಿರುತ್ತದೆ. ಮತ್ತು ಮಹಾಮಂಗಳಾರತಿ ಕೂಡ ಪ್ರತಿದಿನ ನಡೆಯುತ್ತದೆ.

ವೆಂಬ್ಲಿಯ  ಸನಾತನ ದೇವಸ್ಥಾನ :
ಇತ್ತೀಚಿಗೆ ಪ್ರಾರಂಭವಾದ ದೇವಸ್ಥಾನ ವೆಂಬ್ಲಿ  ಯ  ಸನಾತನ ದೇವಸ್ಥಾನ . ಇದು 2010 ರಲ್ಲಿ ಪ್ರಾರಂಭವಾಯಿತು ಇದನ್ನು ಕಟ್ಟಲು 14 ವರ್ಷಗಳು ಬೇಕಾದವು ಎಂಬುದು ಅಲ್ಲಿಯ ಮಾಹಿತಿದಾರರಿಂದ ತಿಳಿದುಬಂದ ವಿಷಯ . ಸುಮಾರು 2.4 ಎಕರೆಯಷ್ಟು ಜಾಗದಲ್ಲಿ ಈ ದೇವಸ್ಥಾನವನ್ನು ಕಟ್ಟಲಾಗಿದೆ.ಇದು ಗುಜರಾತಿ ಮಾದರಿಯ ದೇವಸ್ಥಾನವಾಗಿದೆ .ಹೆಸರೇ ಹೇಳುವಂತೆ ಇದು ಹಳೆಯ ದೇವಸ್ಥಾನದಂತೆ ತೋರುತ್ತದೆ. ದೇವಸ್ಥಾನದ ಶಿಖರವು 66 ಅಡಿ ಉದ್ದ ಹೊಂದಿದ್ದು ಪ್ರಸಿದ್ಧಿ ಪಡೆದಿದೆ.
ನೀಸ್ಡನ್  ನ ಸ್ವಾಮಿನಾರಾಯಣ ದೇವಸ್ಥಾನ :


ಇದು ಕೂಡ ಗುಜರಾತಿ ದೇವಸ್ಥಾನ ಇದು ಲಂಡನ್ ನಲ್ಲಿರುವ ಎಲ್ಲ ದೇವಸ್ಥಾನಗಳಲ್ಲಿ ಅತಿ ವಿಶಾಲವಾದ ಜಾಗವನ್ನು ಹೊಂದಿರುವ ದೇವಸ್ಥಾನ . ಇದನ್ನು ಆಗಸ್ಟ್ 20, 1995 ರಲ್ಲಿ ಪ್ರಾರಂಭಿಸಲಾಯಿತು .ಇದನ್ನು ನೀಸ್ಡನ್  ದೇವಸ್ಥಾನ ಎಂದು ಕರೆಯುತ್ತಾರೆ. ಈ ದೇವಸ್ಥಾನದ ಎದುರಿಗೆ ಇವರದೇ ಸಂಸ್ಥೆಯ ಶಾಲೆಯನ್ನು ಕೂಡ  ಕಟ್ಟಲಾಗಿದೆ . ಜೊತೆಗೆ ಇವರದೇ ಆದ ಚಾರಿಟಿ ಗಳು ಕೂಡ ಇವೆ.ಇದನ್ನು ಪ್ರಾಚೀನ ವೈದಿಕ ದರ್ಮದ ಪ್ರಕಾರವಾಗಿ ಮತ್ತು ಭಾರತೀಯ ವಸ್ತು ಶಾಸ್ತ್ರದ ಪ್ರಕಾರ  ಕಟ್ಟಲಾಗಿದೆ ಎನ್ನಲಾಗುತ್ತದೆ.  ಜೊತೆಗೆ ಈ ದೇವಸ್ಥಾನ ಸಂಪೂರ್ಣವಾಗಿ ಬಲ್ಗೇರಿಯನ್ ಲೈಮ್ ಸ್ಟೋನ್ ಮತ್ತು ಇಟಾಲಿಯನ್ ಮಾರ್ಬಲ್ ಮತ್ತು ಭಾರತದ ಅಂಬಾಜಿ ಕಲ್ಲಿನಿಂದ  2 ವರೆ ವರ್ಷಗಳೊಳಗೆ ಕಟ್ಟಲಾಗಿದೆ. ಇಲ್ಲಿ ಶ್ರೀಕೃಷ್ಣ , ಸ್ವಾಮಿನಾರಾಯಣ ನ ಮೂರ್ತಿಗಳಿವೆ. ದೇವಸ್ಥಾನದ ಹೊರಗೂ ಕೂಡ ವಿಶಾಲವಾದ ಸ್ಥಳವಿದ್ದು ಅಲ್ಲಿ ಸಣ್ಣದೊಂದು ಉದ್ಯಾನವನವನ್ನು ಕೂಡ ನಿರ್ಮಿಸಲಾಗಿದೆ .ಇದಲ್ಲದೆ  ಭಾರತದಿಂದ ಬಂದ  ಎಲ್ಲ ರಾಷ್ಟ್ರಪತಿ ಪ್ರಧಾನಮಂತ್ರಿಗಳು ಗಣ್ಯ ವ್ಯಕ್ತಿಗಳು ಭೇಟಿನೀಡುವ ದೇವಸ್ಥಾನ ಇದಾಗಿದೆ.

ಇದಿಷ್ಟೇ ಅಲ್ಲ ಲಂಡನ್ ನಿಂದ ಹೊರಗೆ ಅಂದರೆ ಸುಮಾರು ಒಂದು ಗಂಟೆ ಪ್ರಯಾಣದಲ್ಲಿ ಸಿಗುವ ಬರ್ಮಿಂಗ್ ಹ್ಯಾಮ್ ನ ದೇವಸ್ಥಾನ ಕೂಡ ಇಲ್ಲಿ ಪ್ರಸಿದ್ಧಿ . ಹೀಗೆ ಸಾಕಷ್ಟು ದೇವಾಲಯಗಳು ಪ್ರತಿದಿನವೂ ಭಾರತೀಯ ಪೂಜೆ ಪುನಸ್ಕಾರಗಳಲ್ಲಿ ನಡೆಯುತ್ತಿದೆ .



Tuesday 18 December 2012

ಬೇಸ್ತು ಬಿದ್ದದ್ದು


ಈ ನನ್ನ ಲೇಖನವು ಹೊಸದಿಗಂತ ಮಂದಾರ ಸಿರಿ ಪುರವಣಿಯಲ್ಲಿ ಪ್ರಕಟಗೊಂಡಿದೆ http://www.hosadigantha.in/news_img/01-02-2013-14.pdf



ಹೌದು ನೆನಪುಗಳೇ ಹಾಗೆ ಗರಿಬಿಚ್ಚಿ ಕುಣಿಯುವ ನವಿಲ ಹಾಗೆ ಇದ್ದಕ್ಕಿದ್ದಂತೆ ದೋ ಎಂದು ಸುರಿಯುವ ಮಲೆನಾಡ ಮಳೆಯ ಹಾಗೆ ಒಮ್ಮೆ ಸುರಿಯಲು ಪ್ರಾರಂಭಿಸಿದರೆ 2 ತಾಸುಗಳು ಸುರಿಯುತ್ತಲೇ ಇರುತ್ತದೆ ಆ ಮಲೆನಾಡ ಪರಿಸರದಲ್ಲಿ ಬೆಳೆದ ನನಗೆ ಅಂತಹ  ಮಳೆಯ ನೆನಪೇ ಒಂದು ಸಂಭ್ರಮ .ಲಂಡನ್ ನಲ್ಲಿ ಗಿಟಿ ಗಿಟಿ  ಎಂದು ಹನಿ ಹಾಕಿ ಇಡೀ  ದಿನದ ಮೂಡನ್ನೆಲ್ಲ  ಹಾಳು  ಮಾಡುವ ಈ ಮಳೆಯನ್ನೂ ನೋಡಿದರೆ ಅಯ್ಯೋ ಎಂದೆನಿಸುತ್ತದೆ. ಹಾಗೆ ಮಳೆಗಾಲದ ಜೊತೆ ನನಗೆ ಮೊದಲಿನಿಂದಲೂ ಬಹಳ ನಂಟು ಈಗಲೂ ಹಾಗೊಂದು ಮಳೆ ಏನಾದರು ಇಲ್ಲಿ ಸುರಿದುಬಿಟ್ಟರೆ ಹೋಗಿ ನಿಂತು ನೆನೆದು ನೆನೆದು ಸಂತೋಷಪಡಬೇಕು ಎಂಬುದು ನನ್ನ ಬಹಳ ದಿನದ ಆಸೆ. 
 ನಮ್ಮದು ಮಕ್ಕಳ ಸೈನ್ಯವೆಲ್ಲ ಕೆಲವೊಮ್ಮೆ ಮಳೆಗಾಲದಲ್ಲಿ ಮಾವನ ಮನೆಯಲ್ಲಿ ಒಟ್ಟು ಸೇರುವ ಪರಿಪಾಟವಿತ್ತು . ಹೀಗೆ ಒಮ್ಮೆ ಎಲ್ಲರು ಒಟ್ಟು ಸೇರಿದ್ದಾಗ ಬೆಟ್ಟ ಸುತ್ತಲು ಹೊರಟೆವು ಹೋರಾಟ ಸ್ವಲ್ಪ ಹೊತ್ತಿನಲ್ಲೆಯೇ ಮಳೆ ಎಲ್ಲಿಲ್ಲದಂತೆ ಸುರಿಯಲು ಪ್ರಾರಂಭಿಸಿತು ನಮಗೆ ಮಳೆಯಲು ನೆನೆಯಲು ಸಿಕ್ಕಿದ್ದು ಇದೇ ಅವಕಾಶ ಎಂಬ ಕುಶಿ ಒಂದು ಕಡೆಯಾದರೆ ಮನೆಯಲ್ಲಿ ಬಾಯಿಗೆಬಂದಂತೆ ಬಯ್ಯುತ್ತಾರೆ ಎಂಬ ಹೆದರಿಕೆ ಇನ್ನೊಂದು ಕಡೆ . ಅಂತು 4-5 ಜನರಿಗೆ ಇರುವ 2 ಕೊಡೆಯಲ್ಲಿ ಹೇಗೋ ಹೊಂದಾಣಿಕೆ ಮಾಡಿಕೊಂಡು ನೆನೆದುಕೊಂಡು ಮನೆಗೆ ಬಂದೆವು . ಬಂದು ಚಪ್ಪಲಿ ಬಿಚ್ಚಿ ಮನೆಯೊಳಗೇ ಓಡಿ  ನಾವೆಲ್ಲು ಹೋಗಿಲ್ಲ ಎಂಬಂತೆ ಮತ್ತು ಹೋಗಿಲ್ಲ ಎಂದು ಎಲ್ಲರನ್ನು ಯಾಮಾರಿಸಿದ ಕುಶಿಯಲ್ಲಿ ಎಲ್ಲರು ಮುಸಿಮುಸಿ ನಕ್ಕು ಸಂತೋಷಪಡುತ್ತಿದ್ದೆವು . ಅಷ್ಟರಲ್ಲಿ ಹೊರಗಿನಿಂದ ಬಂಡ ಅಜ್ಜ ಇದೇನಿದು ಮನೆಯ ತುಂಬೆಲ್ಲ ರಕ್ತ ಎನ್ನುತ್ತಾ ಒಳಗೆ ಬಂದರು ನಾವೆಲ್ಲಾ ಏನಾಯಿತು ಎಂದು ಕುತೂಹಲದಿಂದ ಕಣ್ಣರಳಿಸಿ ನೋಡುತ್ತಿದ್ದೆವು ಅಜ್ಜ ಯಾರು ಹೊರಗೆ ಹೋಗಿದ್ದಿರಿ ಹೇಳಿ ಎಂದು ಕೇಳಿದರು ನಾವೆಲ್ಲಾ  ನಾವ್ಯಾರು ಹೋಗಿಲ್ಲ ಎಂದು ಉತ್ತರ ಕೊಟ್ಟೆವು . ಹಾಗಾದರೆ ಉಂಬಳ  ಕಚ್ಚಿದ್ದು ಯಾರಿಗೆ ? ಅದು ಕಚ್ಚಿದರೆ ಗೊತ್ತೇ ಆಗುವುದಿಲ್ಲ ಎಂದೆಲ್ಲ ಬಣ್ಣಿಸಲು ಪ್ರಾರಂಭಿಸಿದರು ಅದನ್ನು ಕೇಳಿ ನಮಗೆ ಎಲ್ಲಿಲ್ಲದ ಭಯ ಹುಟ್ಟಿ ಎಲ್ಲರು ನಾ ಮುಂದು ತಾ ಮುಂದು ಎನ್ನುತ್ತಾ ಅಜ್ಜ ನಾನು ಹೋಗಿದ್ದೆ ನೋಡು ಉಂಬಳ  ನನಗೆ ಕಚ್ಚಿದೆಯ ಎಂದು ಕೇಳುತ್ತ ಮುಂದೆ ಹೋದೆವು .ನಮ್ಮ ಮಲೆನಾಡಿನ ಕೆಲವು  ಭಾಗಗಳಲ್ಲಿ ಮಳೆಗಾಲದಲ್ಲಿ ಉಂಬಳ  ದ ಹಾವಳಿ ಬಹಳ .ಎಲ್ಲಿ ಕಾಲಿಟ್ಟರು ಕಾಲಿಗೊಂದು ಕಚ್ಚಿಹಿಡಿದುಕೊಂಡು ಬಿಡುತ್ತದೆ. ಆ ನಂತರ ಸುಣ್ಣ ಹಾಕಿ ಕಾಲಿನಿಂದ ಬರುತ್ತಿರುವ ರಕ್ತವನ್ನು ನಿಲ್ಲಿಸಬೇಕು . ಆದರೆ ಆ ದಿನ ಯಾರಿಗೂ ಉಂಬಳ  ಕಚ್ಚಿರಲಿಲ್ಲ ನಮ್ಮ ಗುಟ್ಟನ್ನು ರಟ್ಟು ಮಾಡುವ ಉದ್ದೇಶದಿಂದ ಅಜ್ಜ ಹಾಗೆ ಕೇಳಿದ್ದ ನಾವೆಲ್ಲಾ ಬೆಸ್ತುಬಿದ್ದಿದ್ದೆವು .




ಅರ್ಪಿತಾ ರಾವ್ 
ಲಂಡನ್ 

Tuesday 11 December 2012

ಬದುಕು

ಈ ನನ್ನ ಕವನವು ಈ ಕನಸು ವಿನಲ್ಲಿ ಪ್ರಕಟಗೊಂಡಿದೆ <a>"http://www.ekanasu.com/2012/12/blog-post_27.html" <a/>

ಸೂರ್ಯ ಮುಳುಗುವ ಹೊತ್ತು 
ಹಕ್ಕಿಗಳು ಹೊರಟಿವೆ ಮನೆಯ ಕಡೆಗೆ 
ಸಂಜೆ ಬಾನಲಿ ಸೂರ್ಯ 
ಅಣಕಿಸುತಿರುವ  ನನ್ನ ನೋಡಿ 
ನಿನ್ನದೇನಿದು  ಬದುಕು ಬರೀ ರಾಡಿ !

ಹಾರಾಡುವ ಹಕ್ಕಿಗಳಿಗೋ 
ಸ್ವಚ್ಚಂದದ  ಬದುಕು 
ಮಾನವ ನ ಬದುಕೋ 
ಬರೀ ಒಡಕು ಒಡಕು !

ಹಾರಾಡ ಬೇಕಿದೆ ಹಕ್ಕಿಯಂತೆ 
ಇಲ್ಲದಿರೆ ಮನದ  ತುಂಬಾ ಬರೀ ಬೇಡದಾ  ಚಿಂತೆ 
ಕಲಿಯಬೇಕಿದೆ ಹಕ್ಕಿಗಳ ನೋಡಿ 
ಬದುಕೆಂಬುದು ಒಂದು ಮೋಡಿ !

ಮುಳುಗುತಿರುವನೇ  ಸೂರ್ಯ 
ಮುಪ್ಪಿನ ಸುಳಿವು ನೀಡಿ ?
ಮುಗಿದುಹೋಯಿತೇ ಬದುಕು 
ನಾಲ್ಕು ದಿನಗಳು  ಕೂಡಿ ?






ಅರ್ಪಿತಾ ರಾವ್ 



Monday 10 December 2012

ಬದಲಾಗದಿರು

ಈ ನನ್ನ ಕವನವು ಈ ಕನಸುವಿನಲ್ಲಿ ಪ್ರಕಟಗೊಂಡಿದೆ  http://www.ekanasu.com/2012/12/blog-post_26.html

ಕಳೆಯಬೇಕಿದೆ ಬದುಕಿನ ಬಹಳಷ್ಟು ದಿನಗಳನ್ನು 
ಕಲಿಯಬೇಕಿದೆ ಬದುಕು ಹಸನಾಗಿಸುವುದನ್ನು 

ನೆನ್ನೆಯ ನಿನ್ನೆಗಳು ಇಂದು 
ದಿನಗಳಾಗಿ ಉಳಿದಿಲ್ಲ 
ಅದು ಬರಿ ನೆನಪಾಗಿಹೊಯಿತಲ್ಲ !

ಬದುಕಿನ ಪ್ರತಿ ಕ್ಷಣಗಳಲ್ಲಿ 
ಜೊತೆಯಾಗಿರುವೆ ಎಂದು ಬಂದೆ 
ದಿನಕಳೆದಂತೆ ನಿನ್ನಲ್ಲೇ ನೀ ಕಳೆದುಹೋದೆ 

ನಗು ತುಂಬಿ ಹರಟುತ್ತಿರುವ 
ಆ ದಿನಗಳು ಇಂದು ಬರೀ ನೆನಪು 
ಉಸಿರಾಟದ ಶಬ್ದ ಕಿವಿಗೆ ರಾಚುತ್ತಿರುವ 
ಈ ಕರಾಳ ದಿನಗಳೇ ಇಂದಿನ ಬದುಕು !!

ಕಳೆಯಬೇಕಿದೆ ಇನ್ನೂ  ಸಾಕಷ್ಟು 
ದಿನಗಳು ಜೊತೆಯಲ್ಲಿ 
ಸುಂದರ ದಿನಗಳು ಮರೆಯಾಗಲು 
ನಾ ತಪ್ಪು ಮಾಡಿದ್ದೆಲ್ಲಿ ?

ಬರಬಹುದು ಬದುಕಿನಲ್ಲಿ ಸಾಕಷ್ಟು ಗೊಂದಲಗಳು 
ನೀ ಕೊಟ್ಟಿದ್ದೆ ಮಾತು ಆಗೆಲ್ಲ 
ನಾ ನಿನ್ನೊಂದಿಗಿರುವೆ ಹಗಲು ಇರುಳು 

ಬೆಳಗು ಕತ್ತಲು  ಎಂಬುದು ಪ್ರಕೃತಿ ನಿಯಮ 
ಹಾಗೆಯೇ ಬದುಕೆಂಬುದು 
ನೋವು ನಲಿವುಗಳ ಸಂಗಮ 

ನಾ ಬಲ್ಲೆ ಪರಿವರ್ತನೆ ಜಗದ ನಿಯಮ 
ಆದರೂ  ನಾ ಕೆಳುವುದೊಂದೇ 
ಬದಲಾಗದಿರು ನೀ ಕಳೆದುಕೊಂಡು ಸಂಯಮ !!



ಅರ್ಪಿತಾ ರಾವ್ 
ಲಂಡನ್