Monday 9 January 2012

ಮಂಜಿನ ಹನಿ (ಲಲಿತ ಪ್ರಬಂಧ )

ನನ್ನ ಈ ಲೇಖನವು ಈಕನಸು ವಿನಲ್ಲಿ ಪ್ರಕಟಗೊಂಡಿದೆ http://www.ekanasu.com/2012/01/blog-post_09.html

ಮಂಜಿನ ಹನಿಗಳೆಂದರೆ ಯಾರಿಗೆ ಇಷ್ಟವಿಲ್ಲ ಹೇಳಿ ಹಾಗೆ ನನಗೆ ಬಹಳ ವರ್ಷಗಳಿಂದ ಮಂಜಿನ ಮಳೆ ಬೀಳುವುದನ್ನು ನೋಡಬೇಕು ಅದರಲ್ಲಿ ಆಟ ಆಡಬೇಕು ಎಂಬ ಆಸೆ ಇತ್ತು . ಅಂತು ಇಂತೂ ನನ್ನ ಆಸೆ ಈಡೇರಿಸುವ ಆಸೆ ಭಗವಂತನಿಗೂ ಆಯಿತೋ ಎಂಬಂತೆ ಲಂಡನ್ ಗೆ ಬಂದಾಗ ಈ ವರ್ಷ ಭಾರಿ ಮಂಜಿನ ಮಳೆ ಆಗುವ ವಾತಾವರಣ ವಿದೆ ಎಂದು ಓದಿ ಆ ದಿನ ಬರಲು ಹೆಚ್ಚು ದಿನವಿಲ್ಲ ಎಂದು ಸಂತೋಷಗೊಂಡು ಹರ್ಷವನ್ನು ಎಲ್ಲರಲ್ಲಿ ಹಂಚಿಕೊಂಡಿದ್ದು ಆಯಿತು. ಇನ್ನೇನು ನವೆಂಬರ್ ಪ್ರಾರಂಭ ಆದಂತೆ ಎಲ್ಲಿಲ್ಲದ ಚಳಿ . ಡಿಸೆಂಬರ್ ತಿಂಗಳಿನಲ್ಲಿ ಆಗುವ ಮಂಜಿನ ಉದುರುವಿಕೆಯನ್ನು ಸವಿಯುವ ದಿನಕ್ಕಾಗಿ ಎಡಬಿಡದೆ ಕಾಯುತ್ತಿರುವುದು ನೋಡಿ ಆ ಡಿಸೆಂಬರ್ ಬಂದೆ ಬಿಟ್ಟಿತು. ಪ್ರತಿದಿನ ಚಳಿ ಯ ಪ್ರಮಾಣ ಎಷ್ಟಿದೆ ಎಂದು ನೋಡಿ ಸಂತೋಷ ಪಡುತ್ತಾ ಇಂದು ಸಂಜೆ ಸ್ನೋ ಫಾಲ್ ಆಗಬಹುದು ಎಂಬ ನಿರೀಕ್ಷೆಯಲ್ಲಿ ದಿನ ಕಳೆಯ ತೊಡಗಿದೆ. ಪ್ರತಿ ದಿನವು ಹೀಗೆ ನಿರೀಕ್ಷೆಯಲ್ಲಿದ್ದಂತೆ ಒಂದು ದಿನ ಬೆಳಗಿನ ಮುಂಜಾನೆಯಲ್ಲಿ ಕಿಟಕಿಯ ಬಳಿ ನಿಂತು ನೋಡಿದರೆ ಹತ್ತಿಯ ಹೂವು ಗಳು ಆಕಾಶದಿಂದ ಹಾರಿ ಭೂಮಿ ತಲುಪುತ್ತಿದೆಯೇನೋ ಎಂಬಂತೆ ಕಾಣುತ್ತಿತ್ತು. ಆ ಮಂಜಿನ ಉಂಡೆಗಳು ಕೆಳ ಬೀಳುವುದನ್ನು ನೋಡುವ ಸಂತೋಷವೇ ವರ್ಣಿಸಲಸಾಧ್ಯ . ಇದು ಇನ್ನು ಪ್ರಾರಂಭ ರಸ್ತೆಯೆಲ್ಲ ಮಂಜಿನಿಂದ ಮುಚ್ಚಿ ಕೊಂಡಿರುವುದನ್ನು ನೋಡಲು ಇನ್ನು ಸೊಗಸು ಆ ಸಂತೋಷವನ್ನು ಅನುಭವಿಸಬೇಕು ಎಂದು ಎಂದಿಗಿಂತ ತುಸು ಹುಮ್ಮಸ್ಸಿನಿಂದ ಕೆಲಸಗಳನ್ನು ಬೇಗ ಮುಗಿಸಿ ಕ್ಯಾಮೆರಾ ದಲ್ಲಿ ಸೆರೆಹಿಡಿಯುವ ಬಯಕೆಯೊಂದಿಗೆ ಕಿಟಕಿಯ ಬಳಿ ಬಂದು ನಿಂತೆ.ಅಷ್ಟರಲ್ಲಾಗಲೇ ನನ್ನಸೆಗೆ ನೀರೆರಚುವಂತೆ ಹತ್ತಿಯ ಹೂವಿನಂತೆ ಬೀಳುತ್ತಿದ್ದ ಮಂಜು ಮಾಯವಾಗಿತ್ತು .ನನ್ನಾಸೆಗೆ ಪ್ರೋತ್ಸಾಹ ಕೊಡಲೆಂಬಂತೆ ನನ್ನವರು ಡಿಸೆಂಬರ್ ಮುಗಿಯುವುದರೊಳಗೆ ಮತ್ತೆ ಮಂಜು ಬೀಳುತ್ತದೆ ಎಂಬ ಸಣ್ಣ ಭರವಸೆ ನೀಡಿದರು . ಅಷ್ಟೇ ಸಾಕು ಎಂಬಂತೆ ಪ್ರತಿದಿನ ಬೀಳಬಹುದಾದ ಮಂಜಿಗೆ ಬೆಳಗಿನ ಜಾವ ಕಿಟಕಿಯಿಂದ ಇಣುಕಿ ನೋಡುತ್ತಾ ಡಿಸೆಂಬರ್ ಕಳೆದು ಹೋದಾಗ ಮನದಲ್ಲೊಂದು ನಿರಾಶೆ . ಅಂದಿನಿಂದ ಕಾಯುತ್ತಿದ್ದ ಡಿಸೆಂಬರ್ ನ ಮಂಜಿನ ಮಳೆ ಬೀಳದುದ್ದರ ಬಗ್ಗೆ ಯಾರಲ್ಲಿ ಕೋಪ ತೋರಬೇಕೆಂಬುದು ತಿಳಿಯದೆ ಮತ್ತೆ ಸಣ್ಣದೊಂದು ಆಸೆಯೊಂದಿಗೆ ಹೊಸವರ್ಷದಲ್ಲಿ ಮಂಜು ಬಿಳಬಹುದೋ ಎಂಬ ಆಸೆಯೊಂದಿಗೆ ಕಾಯುತ್ತಿರುವುದಾಗಿದೆ. ಈಗ ಬೆಳಗ್ಗೆ ಎಂದಿನಂತೆ ಕಿಟಕಿಯ ಹೊರ ನೋಡದೆ ವಾತಾವರಣದ ಬಗ್ಗೆ ಮಾಹಿತಿ ಇರುವ ವೆಬ್ ಸೈಟ್ ನೋಡುತ್ತಿದ್ದೇನೆ



Friday 6 January 2012

ಭ್ರಮೆ

'ಅವಳು ಮೊದಲಿನಿಂದ ಹಾಗೆ ಸ್ವಲ್ಪ ಮಾತು ಕಡಿಮೇನೆ ' ಅಮ್ಮ ಮನೆಗೆ ನೋಡಲು ಬಂದ ಹುಡುಗನ ಕಡೆಯವರಿಗೆ ವರದಿ ನೀಡಿದ್ದಳು. ಹುಡುಗನ ಕಡೆಯವರು ಬೇರೆನಾದರು ಅಂದರೆ ಇವಳು ಎಲ್ಲಿ ತಪ್ಪಿ ಹೋಗುತ್ತಾಳೋ ಎಂಬ ಆತಂಕದಿಂದ ನಮಗೂ ಅಂತವರೇ ಬೇಕು ನೋಡಿ ಈಗಿನ ಕಾಲದ ಹುಡುಗೀರು ಎಲ್ಲಿ ಈ ತರದವರು ಸಿಗುತ್ತಾರೆ ಭಯಂಕರ ಜೋರಿರುತ್ತಾರೆ ಮಾತೆತ್ತಿದರೆ ಉತ್ತರ ರೆಡಿ ಇಂತವರನ್ನೇ ನಾವು ಹುಡುಕುತ್ತಿದ್ವಿ ನಮ್ಮ ಕಡೆಯಿಂದೆನು ತೊಂದರೆ ಇಲ್ಲ ನಿಮ್ಮ ಉತ್ತರ ಆದಷ್ಟು ಬೇಗ ತಿಳಿಸಿಬಿಡಿ ಎಂದು ತಟ್ಟೆ ತುಂಬಾ ಕೊಟ್ಟ ಸಿಹಿ ತಿಂದು ಜಾಗ ಕಾಲಿಮಾಡಿದ್ದರು. ಅವರು ಅತ್ತ ಹೋಗುತ್ತಿದಂತೆ ಇತ್ತ ಸುಮಾ ಅಪ್ಪ ಅಮ್ಮ ಇಬ್ಬರನ್ನು ತರಾಟೆಗೆ ತೆಗೆದುಕೊಂಡಳು ' ಹಳ್ಳಿ ಮನೆಯಲ್ಲಿ ಹೋಗಿ ಕುಳಿತು ಮಾಡುವುದೆಂತ ' ನನಗೆ ಈ ಹುಡುಗ ಬೇಡ ಅಂದ್ರೆ ಬೇಡ ಅಷ್ಟೇ , ಇದರ ಮೇಲೆ ನೀವು ಒತ್ತಾಯ ಮಾಡಿದರೆ ನಾನು ಕೆರೇನೋ ಬಾವಿನೋ ನೋಡಿಕೊಳ್ತೀನಿ . ಅಪ್ಪ ಅಮ್ಮ ನಿಗೂ ಮಗಳು ಒಳ್ಳೆ ಮನೆ ಸೇರಲಿ ಎಂಬ ಆಸೆ ಪೇಟೆ ಹುಡುಗರಿಗೆ ಕೊಟ್ಟರೆ ಹೇಗೆ ನೋಡಿಕೊಳ್ಳುತ್ತಾರೋ ಎಂಬ ಆತಂಕ ಕಮಲಮ್ಮನಿಗೆ ಒಳಗೊಳಗೇ ಮಗಳು ಕೈತಪ್ಪಿ ಹೋದರೆ ಎಂಬ ಆತಂಕ ಸುಮಾ ಇಲ್ಲದ ಸಮಯ ನೋಡಿ 'ಅವಳ ಇಷ್ಟದಂತೆ ಮಾಡಿಬಿಡೋಣ ಬಿಡಿ ಇನ್ನು ಹಳ್ಳಿ ಇರೋ ಹುಡುಗರ ಜಾತಕ ತಗೋಬೇಡಿ ನಗರದ ಕಡೆ ಒಳ್ಳೆ ಕೆಲಸದಲ್ಲಿರೋ ಸಾಫ್ಟ್ವೇರ್ ಇಂಜಿನಿಯರ್ ಆದ್ರೆ ಅವ್ಳು ಒಪ್ತಾಳೆ ಅಂತವರಿಗೆ ಜಾತಕ ಕೊಟ್ಟು ನೋಡಿ ' ಎಂದು ಶ್ರೀನಿವಾಸ ರಾಯರಲ್ಲಿ ಹೇಳಿದಳು . ನೀ ಹೇಳೋದು ಸರಿನೆ ಇದೆ ನೋಡು ನಾನು ನಾಲ್ಕು ಕಡೆ ವಿಚಾರಿಸಿ ನೋಡ್ತೀನಿ ಅಂದು ಹೊರಹೊರಟರು .
ಸುಮಾರು ಒಂದು ತಿಂಗಳ ಹುಡುಕಾಟದಲ್ಲಿ ಐದಾರು ಕಡೆಯಿಂದ ಜಾತಕ ಹೊಂದಾಣಿಕೆ ಆಗುವ ಉತ್ತರ ಬಂದಿತ್ತು .ಎಲ್ಲರಿಗಿಂತ ಉತ್ತಮ ಎನಿಸುನ ಒಂದು ಹುಡುಗನನ್ನು ಆರಿಸಿ ಮನೆಗೆ ಬಂದು ಹುಡುಗಿ ನೋಡಿ ಹೋಗುವಂತೆ ತಿಳಿಸಿದ್ದು ಆಯಿತು . ಸುಮಳಿಗೂ ಒಳಗೊಳಗೇ ಸಂತೋಷ ಅಂತು ತಾನಂದುಕೊಂಡಂತೆ ತಾನು ಪೇಟೆ ಸೇರುವ ದಿನ ದೂರವಿರಲಿಕ್ಕಿಲ್ಲ್ಲ ಎಂದು .ಸುಮಾ ನೋಡಲು ಸುಂದರ ವಾಗ್ಗಿಯೇ ಇದ್ದದ್ದರಿಂದ ಹುಡುಗ ಶ್ರೀಧರ ಒಪ್ಪಿಗೆ ನೀಡಿಯೂ ಆಯಿತು . ಇನ್ನೊಂದು ತಿಂಗಳಲ್ಲಿ ಮದುವೆ ಅದ್ಧೂರಿಯಿಂದ ಮುಗಿದು ಕಮಲಮ್ಮ ಮತ್ತು ಶ್ರೀನಿವಾಸರಾಯ ರಿಗೆ ಮನಸ್ಸಿಗೆ ನೆಮ್ಮದಿ ಅಂತು ಸುಮಳನ್ನು ಅವಳಿಚ್ಚೆಯಂತೆ ಪೇಟೆ ಹುಡುಗನಿಗೆ ಕೊಟ್ಟು ಮದುವೆ ಮಾಡಿದ್ದಾಯಿತು ಎಂದು .
ಹೊಸ ಮನೆ ಹೊಸ ಜಾಗ ನಗರದ ಜೀವನ ಕನಸಿನಂತೆ ಸುಂದರ ಸುಮಾ ಮನಸ್ಸಿನಲ್ಲೇ ಸಂಭ್ರಮಿಸಿದ್ದಳು . ಶ್ರೀಧರ ಮನೆ ಸೇರುತ್ತಿದ್ದಂತೆ ಫ್ರೆಂಡ್ಸ್ ಆಫೀಸ್ ಎಂದು ಹೊರಹೊರಟ. ಸುಮಾಳಿಗೆ ಏನು ಅನಿಸಲಿಲ್ಲ . ದಿನಕಳೆದಂತೆ ಶ್ರೀಧರನ ದಿನಚರಿ ಇದೆ ಎಂಬುದು ಆಕೆಗೂ ತಿಳಿಯಿತು ಕೇಳಿದರೆ 'ಸಿಗರೆಟ್ ಕುಡಿತ ಇವೆಲ್ಲ ಇಲ್ಲಿ ಎಲ್ಲರೂ ಮಾಡುತ್ತಾರೆ ನೀನು ಹಳ್ಳಿ ಹುಡುಗಿ ನಿನಗಿದೆಲ್ಲ ತಿಳಿಯಲ್ಲ ಇದು ಈಗಿನ ಟ್ರೆಂಡ್'ಎಂದ . ದಿನಕಳೆದಂತೆ ಶ್ರೀಧರ ೨-೩ ದಿನಗಳವರೆಗೆ ಮನೆಗೆ ಬರುವುದೇ ಖಾಯಂ ಆಯಿತು.ನಗರದ ಜೀವನ ಸುಂದರ ಪೇಟೆ ಹುಡುಗನೇ ಬೇಕು ಎಂದು ತಾನೇ ಆರಿಸಿಕೊಂಡು ತನ್ನ ಜೀವನ ತಾನೇ ಹಾಳು ಮಾಡಿಕೊಂಡ ಸುಮಾಳಿಗೆ ತನ್ನ ನೋವನ್ನು ಯಾರೊಂದಿಗೂ ಹಂಚಿಕೊಳ್ಳುವ ಅವಕಾಶವು ಇಲ್ಲದಂತಾಗಿತ್ತು .ಪೇಟೆ ಜೀವನ ಅದ್ಭುತ ಎಂಬ ಭ್ರಮೆ ಸುಳ್ಳಾಗಿತ್ತು

ಈ ಕಥೆ ಈಕನಸುವಿನಲ್ಲಿ ಪ್ರಕಟ ಗೊಂಡಿದೆ http://www.ekanasu.com/2012/01/blog-post_07.html

Wednesday 4 January 2012

ಅಜ್ಜನ ನೆನಪು

ಈ ನೆನಪುಗಳು ಅನ್ನೋದು ಏನೆಲ್ಲ ನೆನಪಿಸಿಬಿಡುತ್ತೆ ಅಲ್ವಾ ಹೀಗೆ ಕುಳಿತು ಸುಮ್ಮನೆ ಬದುಕಿನ ಹಳೆಯ ಪುಟಗಳನ್ನು ತೆಗೆದು ನೋಡುತ್ತಿದ್ದೆ . ಚಿಕ್ಕವರಿದ್ದಾಗ ಎಷ್ಟು ಚನ್ನಾಗಿತ್ತು ಎಂದು ಮನಸ್ಸಿನಲ್ಲಿ ಮೂಡಿಬಂತು . ನನ್ನ ಚಿಕ್ಕಂದಿನ ನೆನಪುಗಳೆಂದರೆ ಅಲ್ಲಿ ಅಜ್ಜನದೊಂದು ದೊಡ್ಡ ಪಾತ್ರ ನಾನು ೨-೩ ನೆ ಕ್ಲಾಸಿನಲ್ಲಿರುವಾಗಲೇ ಅಜ್ಜ ಇಹಲೋಕ ತ್ಯಜಿಸಿದರೂ ಅಜ್ಜನೊಂದಿಗಿನ ನೆನಪುಗಳು ಇನ್ನು ಹಸಿರು. ಆ ದಿನಗಳಲ್ಲಿ ಮನೆ ತುಂಬಾ ಜನರಿರುತ್ತಿದ್ದರು . ನಮ್ಮದು ಒಟ್ಟು ಕುಟುಂಬ ಮನೆಮಂದಿಯೆಲ್ಲ ಒಟ್ಟಿಗೆ ಕುಳಿತು ಊಟ ಮಾಡುವ ಪದ್ಧತಿ ಮೊದಲಿನಿಂದಲೂ ನಡೆದುಕೊಂಡು ಬಂದಿತ್ತು . ನಾನು ಚಿಕ್ಕ ವಳಾದರು ಸಾಲಿನಲ್ಲಿ ಮೊದಲು ನಾನೇ ಕುಳಿತುಕೊಳ್ಳಬೇಕೆಂಬ ಆಸೆ ನನ್ನದಾಗಿತ್ತು ಅದು ನನ್ನ ಪೆರ್ಮನೆಂಟ್ ಜಾಗ ಕೂಡ ಆಗಿತ್ತು ಹಾಗೆ ಅಜ್ಜನದೊಂದು ಜಾಗವಿತ್ತು ಅವರಿಗೆ ಕಣ್ಣು ಕಾಣುತ್ತಿರಲಿಲ್ಲ ಒಂದು ಕೋಲು ಹಿಡಿದು ನಡೆದುಕೊಂಡು ಬರುತ್ತಿದ್ದರು ನನಗೆ ಆ ಕೋಲನ್ನು ನೋಡಿದರೆ ಭಯ ಆದಷ್ಟು ಆ ಕೋಲಿಗೆ ಸಿಗದಿರುವಷ್ಟು ದೂರ ಕೂರುವ ಪ್ರಯತ್ನ ಮಾಡುತ್ತಿದ್ದೆ .ಪ್ರತಿದಿನ ಅಜ್ಜ ಬಂದು ನಿಂತು ಎಡಕ್ಕ ಬಲಕ್ಕ (ಕುಳಿತುಕೊಳ್ಳುವುದು ) ಕೇಳಿಕೊಂಡು ಅದೇ ಜಾಗದಲ್ಲಿ ಕುಳಿತುಕೊಳ್ಳುತ್ತಿದ್ದ .ಎಷ್ಟೋ ಭಾರಿ ಅಜ್ಜ ನನ್ನ ಹತ್ತಿರ ಕರೆದದ್ದಿದೆ ಕುಳಿತುಕೊಳ್ಳಲು ನಾನು ಅಜ್ಜನ ಕೋಲಿಗೆ ಹೆದರಿ ಹೋಗುತ್ತಲೇ ಇರಲಿಲ್ಲ . ಅವರು ಕಣ್ಣು ಕಾಣದಿದ್ದರೂ ಸರಿಯಾಗಿ ಊಟ ಮಾಡುವುದನ್ನು ನೋಡಿ ನಾನು ಹಾಗೆ ಮಾಡುವ ಪ್ರಯತ್ನ ಮಾಡುತ್ತಿದ್ದೆ ತಟ್ಟೆಯಿಂದ ಸ್ವಲ್ಪವು ಹೊರ ಚೆಲ್ಲದೇ ಹಾಕಿರುವುದನ್ನು ವೇಸ್ಟ್ ಮಾಡದೆ ಮಾಡಿರುವ ಎಲ್ಲ ಪದಾರ್ಥ ಗಳನ್ನ ಹಾಕಿಸಿ ಕೊಂಡು ತಿನ್ನುವುದು ಕಲಿತೆ ಎಲ್ಲರೂ ನಾನು ಚೆನ್ನಾಗಿ ಊಟ ಮಾಡುವುದು ಕಲಿತಿದ್ದೇನೆ ಎಂದರು ಅದರ ಕ್ರೆಡಿಟ್ ಅಜ್ಜನಿಗೆ ಸಲ್ಲಬೇಕು ಎಂಬುದು ನನಗೆ ಮಾತ್ರ ಗೊತ್ತಿರುವ ವಿಷಯ . ಇನ್ನು ಅಜ್ಜನಿಗೆ ಊಟಮುಗಿದ ನಂತರ ಒಂದು ದೊಡ್ಡ ಲೋಟದಲ್ಲಿ ಹಾಲು ಕೊಡುತ್ತಿದ್ದರು ಅದನ್ನು ನೋಡಿ ನಾನು ದೊಡ್ಡ ಲೋಟದಲ್ಲಿ ಹಾಲು ಕುಡಿಯಲು ಪ್ರಾರಂಭಿಸಿದೆ ಈಗಲೂ ಮನೆಗೆ ಹೋದರೆ ದೊಡ್ದಲೋಟದಲ್ಲೇ ಹಾಲುಕುಡಿಯುವ ಪರಂಪರೆಯನ್ನು ಉಳಿಸಿಕೊಂಡು ಬಂದಿದ್ದೇನೆ .ಅಜ್ಜ ಪ್ರತಿದಿನ ಆರು ಗಂಟೆ ಆಗುತ್ತಿದ್ದಂತೆ ಮನೆಯ ಹೆಬ್ಬಾಗಿಲನ್ನು ಹಾಕಲು ಹೇಳುತ್ತಿದ್ದ ಅದನ್ನು ಮಾತ್ರ ಮುಂದುವರೆಸಿಕೊಂಡು ಹೋಗಲಾಗಲಿಲ್ಲ ಏಕೆಂದರೆ ಇಂದಿನ ದಿನಗಳಲ್ಲಿ ಯಾರಾದರು ಬಂದರೆ ಮಾತ್ರ ಮನೆಯ ಬಾಗಿಲು ತೆಗೆಯುವ ಅಭ್ಯಾಸವಾಗಿಬಿಟ್ಟಿದೆ .ಕಟ್ಟುಮಸ್ತಾಗಿ ಶಿಸ್ತುಬದ್ದ ಜೀವನ ನಡೆಸಿಕೊಂಡು ಹೋಗುತ್ತಿದ್ದ ಅಜ್ಜನನ್ನು ನೋಡಿ ಕಲಿತ ಅದೆಷ್ಟೋ ಸಂಗತಿಗಳು ನನಗಿನ್ನೂ ನೆನಪಿವೆ ಅದನ್ನು ಇಂದಿಗೂ ಮುಂದುವರೆಸಿಕೊಂಡು ಹೋಗುವ ಪ್ರಯತ್ನ ಮಾಡಿದ್ದಾಗಿದೆ . ಅಜ್ಜನಿಗೆ ಕಣ್ಣು ಕಾಣದಿರುವುದನ್ನೇ ನೆಪವಾಗಿಸಿಕೊಂಡು ಆತನಿಗೆ ಕಾಟ ಕೊಟ್ಟದ್ದಿದೆ ನಾವು ೫-೬ ಜನ ಮಕ್ಕಳೆಲ್ಲ ಸೇರಿ ಅಜ್ಜನಿಗೆ ಕತೆ ಹೇಳುವಂತೆ ಕೇಳಿಕೊಳ್ಳುತ್ತಿದ್ದೆವು ಅವರು ಕತೆ ಹೇಳುತ್ತಿದ್ದಂತೆ ನಾವು ಒಬ್ಬೊಬ್ಬರೇ ಎದ್ದು ಹೋಗಿ ಬಿಡುತ್ತಿದ್ದೆವು ಅಜ್ಜ ಒಬ್ಬರೇ ಕತೆ ಹೇಳುವುದನ್ನು ದೂರದಿಂದ ನೋಡಿ ನಗುತ್ತಿದ್ದೆವು ಆ ದಿನಗಳೆಲ್ಲ ಈಗ ಬರಿ ನೆನಪು .