Saturday 6 August 2016

ಕಾಟ್ಸ್ ವೊಲ್ಡ್

Published in Vijayakarnataka June 25th 2016


ಬ್ರಿಟನ್ ನಲ್ಲೀಗ ಬೇಸಿಗೆ. ಇಲ್ಲಿಯ ಬೇಸಿಗೆ ಎಂದರೆ ಆಗಾಗ ತುಂತುರು ಮಳೆ ಕೂಡ ಬರುತ್ತಿರುತ್ತದೆ. ಅದಿಲ್ಲದಿದ್ದರೆ ಬಿಸಿಲಿಗೆ ಕಣ್ಣು ಬಿಡಲೂ ಸಾಧ್ಯವಿಲ್ಲ ಎಂಬಷ್ಟು ಸೂರ್ಯನ ಕಿರಣ.  ಸ್ವಲ್ಪ ಹೊತ್ತು ಹೊರ ಹೋದರೂ ಸಾಕು ಸುಸ್ತು ಎನ್ನಿಸಿಬಿಡುತ್ತದೆ. ಇಂತಹ ಸಮಯದಲ್ಲೇ ಇಂಗ್ಲೆಂಡ್ ನ ಹಳ್ಳಿಗಳಿಗೆ ಹೋಗಬೇಕು. ಸುಂದರವಾದ ಸ್ವಚ್ಚವಾದ , ತಂಪಾಗಿಯೂ ಇರುವ ಈ ಹಳ್ಳಿಗಳು ನೋಡಲು ಬಹಳ ಸುಂದರವಾಗಿರುತ್ತದೆ. ಹಾಗೆಂದೇ ನಾವು ಈ ಭಾರಿ ಲಂಡನ್ ನಿಂದ ಹೋದದ್ದು ಕಾಟ್ಸ್ ವೊಲ್ಡ್ ಎಂಬ ಇಂಗ್ಲಿಷ್ ವಿಲೇಜ್ ಗೆ. 

ಬ್ರಿಟನ್ ನ ಬೀದಿಬೀದಿಗಳಲ್ಲಿ ಜಗಜಗಿಸುವ ದೀಪಗಳ ಸಾಲು ಹೇಗೆ ಜನರನ್ನು ಆಕರ್ಷಿಸುತ್ತದೆಯೋ ಹಾಗೆಯೇ ಇಲ್ಲಿನ ಹಳ್ಳಿಗಳೂ ಕೂಡ ಅಷ್ಟೇ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತದೆ ಎಂದರೆ ತಪ್ಪಾಗಲಾರದು. ವರ್ಷದಲ್ಲಿ ಕೇವಲ ೪ ತಿಂಗಳು ಬಂದು ಹೋಗುವ ಬೇಸಿಗೆ ಪ್ರಾರಂಭವಾಯಿತೆಂದರೆ ಜನರು ವೀಕೆಂಡ್ ಗಳನ್ನು  ಪ್ರವಾಸಕ್ಕೋಸ್ಕರ ಮೀಸಲಿಟ್ಟುಬಿಡುತ್ತಾರೆ.  ಇಲ್ಲಿನ ಹಳ್ಳಿಗಳಲ್ಲಿ ಕೆಲವು ಹಳ್ಳಿಗಳು ಟುರಿಸ್ಟ್ ಹಳ್ಳಿಗಳಾಗಿಬಿಟ್ಟಿವೆ. ಅಂತಹ ಒಂದು ಸುಂದರ ಟುರಿಸ್ಟ್ ಸ್ಥಳವೆಂದರೆ ಕಾಟ್ಸ್ ವೊಲ್ಡ್ . 

ಕಾಟ್ಸ್ ವೊಲ್ಡ್ ಇರುವುದು ಇಂಗ್ಲೆಂಡ್ ನ ದಕ್ಷಿಣ ಮಧ್ಯ ಭಾಗಗದಲ್ಲಿ ,ಈ ಭಾಗವು ಸುಮಾರು ಆರು ಕೌಂಟಿ ಗಳನ್ನೂ ತನ್ನ ಭಾಗವಾಗಿ ಸೇರಿಸಿಕೊಂಡಿದೆ. ಇದು ಒಂದು ಸುಂದರ ಮತ್ತು ಸ್ವಚ್ಚವಾದ ಹಳ್ಳಿ. ಈ ಹಳ್ಳಿ ಹೇಗಿದೆಯೆಂದರೆ ಸುಮಾರು ೧೦೦ ವರ್ಷಗಳಿಂದಲೂ ಕೂಡ ಹೀಗೆಯೇ ಇದೆ ಎಂದರೆ ನಿಜಕ್ಕೂ ಆಶ್ಚರ್ಯವೆನಿಸುತ್ತದೆ. ಈ ಹಳ್ಳಿಯಲ್ಲಿ ಮನೆಗಳನ್ನು ಕಲ್ಲುಗಳಿಂದ ಕಟ್ಟಲಾಗಿದ್ದು ಯಾವುದೇ ರೀತಿಯ ಬಣ್ಣಗಳನ್ನು ಬಳಿಯದೆ ಅದೇ ಕಲ್ಲಿನ ಸೊಬಗನ್ನು ಹಾಗೆಯೇ ಉಳಿಸಿಕೊಂಡು ಬಂದಿರುವುದು ಇದರ ವಿಶೇಷ.  ಈ ಕಲ್ಲುಗಳನ್ನು ಕಾಟ್ಸ್ ವೊಲ್ಡ್ ಸ್ಟೋನ್ ಎಂದೇ ಕರೆಯಲಾಗುತ್ತದೆ. ಇದೇನು ಬಹಳ ದೊಡ್ಡ ಹಳ್ಳಿಯಲ್ಲದಿದ್ದರೂ ಸುಮಾರು 145 ಕಿ ಮೀ ನಷ್ಟು ವಿಸ್ತಾರ ಹೊಂದಿದೆ. 

ಇಡೀ  ಹಳ್ಳಿಯನ್ನು ಸುಮಾರು ನೂರಾರು ವರ್ಷಗಳ ಹಿಂದೆ ಕಾಟ್ಸ್ ವೊಲ್ಡ್ ಕಲ್ಲಿನಿಂದಲೇ ನಿರ್ಮಿಸಿದ್ದು ಅಲ್ಲಲ್ಲಿ ಕೊಳಗಳು , ಸುಂದರ ಹಸಿರು ತುಂಬಿದ ಗದ್ದೆಗಳು, ನೀರು ಹರಿದು ಕೊಗಳು ಟನಾಲ್ ಗಳು , ಹಾಗೆಯೇ ಪ್ರವಾಸಿಗರಿಗೆ ಅನುಕೂಲವಾಗುವಂತೆ ಸಣ್ಣ ಪುಟ್ಟ ಟೀ ಸ್ಟಾಲ್  ಇಂತಹವನ್ನು ಇಲ್ಲಿ ಮಾಡಲಾಗಿದೆ. ಹಾಗೆಯೇ ಸಾಕಷ್ಟು ಪ್ರವಾಸಿಗರನ್ನು ಆಕರ್ಷಿಸಲು ಮಾಡೆಲ್ ವಿಲೇಜ್ , ಮ್ಯೂಸಿಯಂ, ಪಕ್ಷಿ ವೀಕ್ಷಣಾಲಯಗಳನ್ನೂ ಇಲ್ಲಿ ತೆರೆದಿದ್ದಾರೆ. 

ಕಾಟ್ಸ್ ವೊಲ್ಡ್  ಸಾಕಷ್ಟು ಸಣ್ಣ ಪ್ರಾಂತ್ಯಗಳಿಂದ ಕೂಡಿದ್ದರೂ ಕೂಡ ಮುಖ್ಯವಾಗಿ ೩ ಹಳ್ಳಿಗಳ ಒಂದು ಸಂಗಮ ಎನ್ನಬಹುದು. ನೋಡಲು ಒಂದಕ್ಕಿಂತ ಒಂದು ಭಿನ್ನವಾಗಿದೆ. ಇವೆಲ್ಲಾ ಹಳ್ಳಿಗಳ ನಿರ್ಮಾಣದಲ್ಲೂ  ಕಾಟ್ಸ್ ವೊಲ್ಡ್  ಸ್ಟೋನ್ ಬಹಳ ಪ್ರಮುಖ ಪಾತ್ರವಹಿಸುತ್ತದೆ. 

ಬೀಬರಿ :- ಬೀಬರಿ ಎಂಬುದು ಕಾಟ್ಸ್ ವೊಲ್ಡ್ ನ ಒಂದು ಪುಟ್ಟ ಹಳ್ಳಿ ಈ ಹಳ್ಳಿಯಲ್ಲಿ ಕೇವಲ ೪೦ ಮನೆಗಳಿವೆ ಎಂಬುದೇ ಇಲ್ಲಿನ ವಿಶೇಷ. ಇದೊಂದು ಅಪ್ಪಟ ಹಳ್ಳಿ , ಹಾಗಂತ ಇಲ್ಲಿ ಇಂಟರ್ನೆಟ್ ,ವಿದ್ಯುತ್,ನೀರು  ಇವುಗಳಿಗೆ ಖಡಿತವಿಲ್ಲ. ಇವೆಲ್ಲವುಗಳೂ ಯಾವುದೇ ಪಟ್ಟಣಕ್ಕೆ ಕಡಿಮೆ ಇಲ್ಲದಂತೆ ದೊರೆಯುವುದು ಯುನೈಟೆಡ್ ಕಿಂಗ್ಡಾಮ್ ಅಥವಾ ಯಾವುದೇ ಒಂದು ಅಭಿವೃದ್ಧಿ ಹೊಂದಿದ ಖಂಡಗಳ ವಿಶೇಷ. ಈ ಹಳ್ಳಿಯ ವಿಶೇಷವೆಂದರೆ ಇಡೀ ಹಳ್ಳಿ ಕಲ್ಲಿನಿಂದ ಕಟ್ಟಲಾಗಿದ್ದು ಹಳ್ಳಿಯ ಅಂದವನ್ನು ಹೆಚ್ಚಿಸಲು ಟನಾಲ್ ಗಳನ್ನು ಅಲ್ಲಲ್ಲಿ ಕಟ್ಟಲಾಗಿದೆ. ಜೊತೆಗೆ ಸುಂದರವಾದ ಗಾರ್ಡನ್ ಮತ್ತು ಹರಿಯುವ ಸಣ್ಣ ಜಲಪಾತವನ್ನೂ ಇಲ್ಲಿ ನೋಡಬಹುದಾಗಿದೆ. ಅಲ್ಲಲ್ಲಿ ಹೂವಿನಿಂದ ಕೂಡಿದ ಸುಂದರ ಪಾರ್ಕ್ ಗಳು ಹಳ್ಳಿಯ ಸೊಬಗನ್ನು ಇನ್ನಷ್ಟು ಹೆಚ್ಚಿಸಿವೆ. ಅದಲ್ಲದೆ ಇಲ್ಲಿ ಒಂದು ೧೫ ನೇ ಶತಮಾನದ ಚರ್ಚ್ ಮತ್ತು ಒಂದು ಸ್ಕೂಲ್ ಕೂಡ ಇದ್ದು ಈ ಶಾಲೆಯಲ್ಲಿ ಕೇವಲ ನಲವತ್ತು ಮಕ್ಕಳು ಇರುವುದು ಇಲ್ಲಿ ವಿಶೇಷ ಎಂದೇ ಪರಿಗಣಿಸಲಾಗುತ್ತದೆ. 

ಬರ್ಟನ್ ಆನ್ ದಿ ವಾಟರ್ :-  ಹೇಳುವಂತೆ  ಹಳ್ಳಗಳ ತಪ್ಪಲುಗಳಲ್ಲಿ ಮನೆಗಳನ್ನು ಹೊಂದಿದ್ದು , ಪ್ರವಾಸೋದ್ಯಮವೇ ಇಲ್ಲಿನ ಪ್ರಮುಖ ಆದಾಯವಾಗಿದೆ. ಇದು ಸಂಪೂರ್ಣ ಹಳ್ಳಿಯಲ್ಲ.  ಪ್ರವಾಸಿಗರಿಗಾಗಿ ಸಾಕಷ್ಟು ಟೀ ಸ್ಟಾಲ್ , ಐಸ್ ಕ್ರೀಂ ಸ್ಟಾಲ್ , ಮಾಡೆಲ್ ವಿಲೇಜ್ , ಮೋಟಾರ್ ಮ್ಯೂಸಿಯಂ , ಪಕ್ಷಿಧಾಮ ಇವೆಲ್ಲವುಗಳನ್ನು ಹೊಂದಿರುವ ಇದನ್ನು ಕಾಟ್ಸ್ ವೋಲ್ದ್ ನ ಸಣ್ಣ ಪಟ್ಟಣ ಎನ್ನಬಹುದು. ಹಳ್ಳಗಳು ಮತ್ತು ಅವುಗಳ ಅಕ್ಕಪಕ್ಕ ವಿರಮಿಸಲು ಹಸಿರು ಹಾಸು , ಸಣ್ಣ ಬ್ರಿಡ್ಜ್ ಇವುಗಳಿಂದ ಈ ಪಟ್ಟಣದ ಅಂದ ಇನ್ನಷ್ಟು ಹೆಚ್ಚಿದೆ. 
ಇಲ್ಲಿನ ವಿಶೇಷತೆ ಎಂದರೆ ಕಾಟ್ಸ್ ವೊಲ್ಡ್ ನ ಸಾಂಪ್ರದಾಯಿಕ ಟೀ  ಮತ್ತು ಕೇಕ್ ಅನ್ನು ಇಲ್ಲಿ ಸವಿಯಬಹುದು. ತಣ್ಣನೆಯ ಗಾಳಿಯನ್ನು ಹೊಂದಿದ ಇಂಗ್ಲೆಂಡ್ ನ ವಾತಾವರಣಕ್ಕೆ ಇಲ್ಲಿಯ ಹಬೆಯಾಡುವ ಟೀ  ಮತ್ತು ಅದರ ಜೊತೆಗೆ ಕಾಟ್ಸ್ ವೊಲ್ಡ್ ಕೇಕ್ ಮುದ ಕೊಡುತ್ತದೆ. 

ಬರ್ಫಾಡ್ : ಇದು ಕಾಟ್ಸ್ ವೊಲ್ಡ್ ಹಳ್ಳಿಯನ್ನು ಸಂಪೂರ್ಣಗೊಳಿಸುವ ಇನ್ನೊಂದು ಭಾಗ. ಇಲ್ಲಿನ ಬಿಶಪ್ ಚರ್ಚ್ ಕೇವಲ ಕ್ರಿಶ್ಚಿಯನ್ ಜನರನ್ನು ಮಾತ್ರವಲ್ಲ ಜಗತ್ತಿನ ಇತರ ಎಲ್ಲಾ ಭಾಗಗಳ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಇಲ್ಲಿನ ಹೆಚ್ಚಿನ ಭಾಗಗಳು ಹಸಿರು ತುಂಬಿದ ಗದ್ದೆ ಮತ್ತು ಅಲ್ಲಲ್ಲಿ ಹೂವಿನ ಗದ್ದೆಗಳಿದ್ದು ಇದೊಂದು ಪಟ್ಟಣವಾಗಿದೆ. ಉಳಿದೆರಡು ಭಾಗಗಳಿಗೆ ಹೋಲಿಸಿದರೆ ಕಾಟ್ಸ್ ವೊಲ್ಡ್ ನ ಈ ಭಾಗದಲ್ಲಿ ಜನದಟ್ಟಣೆ  ಹೆಚ್ಚಿದ್ದು , ಕಾರಿನ ಸಂಚಾರವೂ ಕೂಡ ಅಧಿಕವಾಗಿದೆ. 

ಒಟ್ಟಾರೆಯಾಗಿ ಇಂಗ್ಲೆಂಡ್ ಈ ಹಳ್ಳಿಯು ಪ್ರತಿವರ್ಷ ಲಕ್ಷಕ್ಕೂ ಹೆಚ್ಚು ಪ್ರವಾಸಿಗರ ಮನ ತಣಿಸುತ್ತಿದೆ. ಇಲ್ಲಿಗೆ ಹತ್ತಿರವಾಗಿ ಆಕ್ಸ್ಫಾರ್ಡ್ , ಶೇಕ್ಸ್ ಪಿಯರ್ ನ ಜನ್ಮಸ್ಥಳವಾದ ಸ್ಟ್ರಾಟ್ ಫೋರ್ಡ್ ಅಪಾನ್ ಅವನ್ ಇರುವುದರಿಂದ ಅಲ್ಲಿ ಕೂಡ ಪ್ರವಾಸ ಕೈಗೊಳ್ಳಬಹುದು. 

ಇಲ್ಲಿನ ಹಸಿರನ್ನು ನೋಡಲು ಬೇಸಿಗೆ ಇಲ್ಲಿ ಪ್ರವಾಸಕ್ಕೆ ಯೋಗ್ಯ ಸಮಯವಾದರೂ ಕೂಡ ಡಿಸೆಂಬರ್  ತಿಂಗಳ ಘೋರ ಚಳಿಗಾಲದಲ್ಲಿ ಹಿಮ ಬಿದ್ದಾಗ ಇಲ್ಲಿ ಟ್ರಿಪ್ ಹೋದಲ್ಲಿ ಸಂಪೂರ್ಣ ಹಿಮದ ಹಾಸಿನಿಂದ ಕೂಡ ಈ ಹಳ್ಳಿ ಮತ್ತು ಟನಲ್ ಗಳು ಸುಂದರವಾಗಿ ಕಾಣಿಸುತ್ತದೆ.

ನಗರ ಕೋಟೆ

Published in Vijayakarnataka July 2016



ಮಾರ್ಚ್ ತಿಂಗಳು ಬಂತೆಂದರೆ ವಿಪರೀತ ಬೇಸಿಗೆ. ಬಿಸಿಲಿನ ಬೇಗೆಯನ್ನು ತಡೆಯುವುದು ಅಸಾಧ್ಯ ಎನಿಸುವುದು ನಿಜ. ಇಂತಹ ಸಮಯದಲ್ಲಿ ಹಸಿರಿನಿಂದ ಕೂಡಿರುವ ತಂಪಾದ ಪ್ರದೇಶಗಳಿಗೆ ಒಂದು ಟ್ರಿಪ್ ಹೋಗಿ ಬಂದರೆ ಅದರ ಮಜವೇ ಬೇರೆ. ಬಿರುಬೇಸಿಗೆಯಲ್ಲಿಯೂ ತಂಗಾಳಿಯನ್ನು ನೀಡುವ ಮನಸ್ಸಿಗೆ ಮುದ ನೀಡುವ ಬೀಚ್ , ಜಲಪಾತ ಇಂತಹ ಪ್ರದೇಶಗಳು ಈ ಸಮಯದಲ್ಲಿ ಆಕರ್ಷಿಸುವುದು ಸಾಮಾನ್ಯ. ಹಾಗೆಯೇ ಮಲೆನಾಡು ಪ್ರದೇಶಗಳಿಗೆ ಹೋದರೆ ಸಾಕಷ್ಟು ಪ್ರವಾಸಿ ಸ್ಥಳಗಳು ಕೈಬೀಸಿ ಕರೆಯುತ್ತವೆ. ಇನ್ನು ಕೋಟೆ , ಕೊಳಗಳನ್ನು ಹೊಂದಿರುವ ಕೆಲವು ಪ್ರವಾಸಿ ಸ್ಥಳಗಳು ನೋಡಲು ಆಕರ್ಷಕವಾಗಿರುವುದಲ್ಲದೇ , ತಣ್ಣನೆಯ ಗಾಳಿ ಬೀಸುವುದರಿಂದ ಎಂಜಾಯ್ ಮಾಡಲು ಬಿಸಿಲು ಅಡ್ಡಬರಲಾರದು. ಅದರಲ್ಲೂ ಅಲ್ಲೇ ಹತ್ತಿರದಲ್ಲಿ ಸಿಗುವ ಸಾಕಷ್ಟು ಹೋಂ ಸ್ಟೇಗಳಲ್ಲಿ ಉಯ್ಯಾಲೆಯಲ್ಲಿ ಕೂತು ಸುತ್ತಲಿನ ಹಸಿರನ್ನು ಸವಿಯುವುದೆಂದರೆ ಪೇಟೆಯ ಜೀವನಕ್ಕೆ ಬೇಸತ್ತ ಜೀವಕ್ಕೊಂದು ಹೊಸ ಹುಮ್ಮಸ್ಸು ಸಿಕ್ಕಂತೆಯೇ ಸರಿ. 
 ಮಲೆನಾಡಿನ ಕಡೆ ಹೋದರೆ ಸ್ವಲ್ಪ ತಂಪು ಎನಿಸುವುದರ ಜೊತೆಗೆ ಅಲ್ಲಿನ ಎಳನೀರು,ಬೆರೆಸಿದ ಮಜ್ಜಿಗೆ ದೇಹಕ್ಕೂ ಮತ್ತು ಸುತ್ತಲಿನ ಹಸಿರು ಕಣ್ಣಿಗೂ ತಂಪು ನೀಡಬಹುದು.

ಪ್ರವಾಸಿ ಸ್ಥಳಗಳಲ್ಲಿ ಕೋಟೆಗಳ ಸೊಬಗು ಕೂಡ ಒಂದು ರೀತಿಯಲ್ಲಿ ಆಕರ್ಷಣೀಯವಾಗಿರುತ್ತದೆ. ಕರ್ನಾಟಕದಲ್ಲಿ ಸಾಕಷ್ಟು ಹೆಸರು ವಾಸಿಯಾಗಿರುವ ಕೋಟೆಗಳಿವೆ. ಕೆಲವು ಕೋಟೆಗಳನ್ನು ಬೆಟ್ಟದ ಮೇಲೆ ಕಟ್ಟಲಾಗಿದ್ದರೆ ಇನ್ನು ಕೆಲವನ್ನು ನದಿ, ಬೀಚ್ ಗಳು ಆವರಿಸಿಕೊಂಡಿವೆ. ಆದರೆ ಇದೆಲ್ಲಕ್ಕಿಂತ ಭಿನ್ನವಾಗಿಯೂ ರಸ್ತೆಯ ಪಕ್ಕದಲ್ಲೇ ಹೆಚ್ಚು ಎತ್ತರವಲ್ಲದ ಪ್ರದೇಶದಲ್ಲಿ ಕೋಟೆ ನೋಡಬೇಕೆಂದರೆ ಅದು ಕಾಣಸಿಗುವುದು ನಗರ ಕೋಟೆ ಎಂದೇ ಹೆಸರುವಾಗಿಯಾಗಿರುವ ಶಿವಪ್ಪನಾಯಕನ ಕೋಟೆ.  ರಸ್ತೆ ಬದಿಯಲ್ಲಿ ಕಾರು ನಿಲ್ಲಿಸಿ ಅಲ್ಲೇ ಒಂದು ಸ್ವಲ್ಪ ದೂರ ಮಣ್ಣಿನ ರಸ್ತೆಯಲ್ಲಿ ನಡೆದು ಹೋದರೆ  ಈ ಕೋಟೆ ಆರಂಭ.  ಹಸಿರು ಮೈತುಂಬಿಕೊಂಡಿರುವ ಈ ಕೋಟೆಯನ್ನು ಅಲ್ಲಿ ಹೋಗಿಯೇ ಸವಿಯಬೇಕು. 
 ಅಂತಹ ಕೆಲವು ಸುಂದರ ಪ್ರವಾಸಿ ತಾಣಗಳಲ್ಲಿ ನಗರದ ಕೋಟೆಯೂ ಕೂಡ ಒಂದು. ಕೆಳದಿಯ ಶಿವಪ್ಪ ನಾಯಕನ ಹೆಸರು ಕೇಳದವರಿಲ್ಲ. ಶಿಸ್ತಿನ ಶಿವಪ್ಪ ನಾಯಕ ಎಂದೇ ಹೆಸರು ಪಡೆದಿದ್ದ ಈತ ಸಾಕಷ್ಟು ಪ್ರಸಿದ್ಧ ಕೋಟೆಗಳನ್ನು ಕಟ್ಟಿದ್ದಾನೆ. ಅವುಗಳಲ್ಲಿ ಬೇಕಲ್ ಕೋಟೆ ,ಚಂದ್ರಗಿರಿ ಕೋಟೆ ,ಜೊತೆಗೆ ಬಿದನೂರು ಕೋಟೆ ಎಂದು ಕರೆಯಲ್ಪಡುತ್ತಿದ್ದ ಈಗಿನ ನಗರ ಕೋಟೆಯೂ ಒಂದು. 

ಶಿವಮೊಗ್ಗ ಜಿಲ್ಲೆಯಲ್ಲಿ ಇರುವ ಈ ಕೋಟೆ ಹೊಸನಗರ ತಾಲೂಕಿನಿಂದ ಸುಮಾರು ೧೭ ಕಿ ಮೀ ಅಂತರದಲ್ಲಿದೆ. ೧೬ ನೇ ಶತಮಾನದಲ್ಲಿ ಮಲೆನಾಡು ಮತ್ತು ಬಯಲುಸೀಮೆ ಜೊತೆಗೆ ಕರಾವಳಿ ಭಾಗಗಳನ್ನು ಆಳಿದ ಶಿವಪ್ಪ ನಾಯಕನ ಕೊನೆಯ ಕೋಟೆ ಈ ನಗರ ಕೋಟೆ ಎನ್ನಲಾಗುತ್ತದೆ.ಕೆಳದಿಯ ಶಿವಪ್ಪನಾಯಕನ ಕಾಲದ ಈ ಕೋಟೆ ನೋಡಲೂ ಕೂಡ ಅಷ್ಟೇ ಸೊಗಸಾಗಿದೆ. ಶಿಸ್ತಿನ ಶಿವಪ್ಪನಾಯಕ ಎಂದೇ ಪ್ರಸಿದ್ಧಿಪಡೆದಿದ್ದ ಶಿವಪ್ಪನಾಯಕ ಈ ಕೋಟೆಯ ಸೊಬಗನ್ನು  ಒಳ ಹೊಕ್ಕು ನೋಡಿದಲ್ಲಿ ತಿಳಿಯುತ್ತದೆ. 

 ಶಿವಮೊಗ್ಗದಿಂದ ೮೪ ಕಿ ಮೀ ಅಂತರದಲ್ಲಿರುವ ಈ ನಗರ ಕೋಟೆ ಉಳಿದ ಕೋಟೆಗಳಂತೆ ಬೆಟ್ಟದ ಮೇಲಿಲ್ಲ , ರಸ್ತೆಯ ಪಕ್ಕದಲ್ಲೇ ಇರುವ ಈ ಕೋಟೆ ದೂರದಿಂದಲೇ ನೋಡುಗರನ್ನು ಆಕರ್ಷಿಸುತ್ತದೆ. ಕೋಟೆಯನ್ನು ಸ್ವಲ್ಪ ಎತ್ತರದಲ್ಲಿ ಕಟ್ಟಲಾಗಿದೆಯಾದ್ದರಿಂದ ಇದನ್ನು ಏರಿ ನೋಡಿದರೆ  ಸುತ್ತಲೂ ಉಸಿರು ಬಿಗಿ ಹಿಡಿದು ನೋಡಬಹುದಾದಂತಹ ಸುಂದರ ಹಸಿರು ವನಸಿರಿ ಕಣ್ಣಿಗೆ ರಾಚುತ್ತದೆ. ಉರಿಬಿಸಿಲಿನಲ್ಲೂ ಕೂಡ ತಂಪು ಗಾಳಿಯನ್ನು ಸೂಸುವ ಈ ನಗರ ಕೋಟೆ ನೋಡುವುದೇ ಒಂದು ಸಂತೋಷ ಎನ್ನಬಹುದು. 

ಈ ಕೋಟೆಯನ್ನು ಶಿವಪ್ಪ ನಾಯಕನು ೧೬ನೇ ಶತಮಾನದಲ್ಲಿ ಕಟ್ಟಿದ್ದು ಇದನ್ನು ಬಿದನೂರು ಕೋಟೆ , ಶಿವಪ್ಪನಾಯಕನ ಕೋಟೆ ಎಂದು ಕರೆಯುತ್ತಿದ್ದರಲ್ಲದೇ ಈ ನಗರ ಪ್ರದೇಶವು ಕೆಳದಿಯ ಶಿವಪ್ಪನಾಯಕನ ಆಡಳಿತದ ಕೊನೆಯ ರಾಜಧಾನಿಯಾಗಿತ್ತು ಎನ್ನಲಾಗಿದೆ. ಕೋಟೆಯ ಕೆಲವು ಭಾಗಗಳು ಅಲ್ಲಲ್ಲಿ ನಾಶವಾಗಿದ್ದರೂ ಕೂಡ  ಹಸಿರಿನಿಂದ ಕಂಗೊಳಿಸುತ್ತದೆ. ಕೋಟೆಯ ಒಳಗೆ ಶಿವಪ್ಪನಾಯಕನ ದರ್ಬಾರ್ ಹಾಲ್  ಮತ್ತು ಎರಡು ಕೊಳಗಳನ್ನು ಕೂಡ ಕಾಣಬಹುದು. ಶಿವಪ್ಪನಾಯಕನ ಕಾಲದಲ್ಲಿ ಹೈದರಾಲಿಯು ಈ
ನಗರ ಭಾಗವನ್ನು ವಶಪಡಿಸಿಕೊಂಡುಈ ಪ್ರದೇಶ  ಹೈದರನಗರ ಎಂದು ಕೂಡ ಕರೆಯಲ್ಪಟ್ಟಿತ್ತು. ಈಗ ಈ  ಕೋಟೆ ನಗರ ಕೋಟೆ ಎಂದೇ ಪ್ರಸಿದ್ಧಿಯಾಗಿದ್ದು ಈ ಭಾಗವನ್ನು ನಗರ ಎಂದು ಕರೆಯುತ್ತಾರೆ. 

ಅಲ್ಲಿಂದ ಸುಮಾರು ೬ ಕಿ ಮೀ ಅಂತರದಲ್ಲಿ ದೇವಗಂಗಾ ಎಂಬ ಕೊಳವಿದ್ದು ಇದರ ಸುತ್ತಲೂ ಹಸಿರು ಜೊತೆಗೆ ಇಲ್ಲೊಂದು ದೇವಸ್ಥಾನವೂ ಕೂಡ ಇದೆ. ಈ ಕೊಳವು ದೇವಗಂಗಾ ಕೊಳ ಎಂದೇ ಪ್ರಸಿದ್ಧಿ ಪಡೆದಿದ್ದು, ಕಮಲದ ಹೂವಿನ ಆಕಾರದಲ್ಲಿ ಈ ಕೊಳವನ್ನು ಕಟ್ಟಲಾಗಿದೆ. ಶಿವಪ್ಪನಾಯಕನ ರಾಣಿಯರು ಈ ಕೊಳದಲ್ಲಿ ಸ್ನಾನ ಮಾಡುತ್ತಿದ್ದರು ಅದಕ್ಕಾಗಿ ಈ ದೇವಗಂಗೆ ಕೊಳವು ಇಷ್ಟು ಸುಂದರವಾಗಿ ಕಟ್ಟಲ್ಪಟ್ಟಿದೆ ಎನ್ನಲಾಗುತ್ತದೆ. ಸದಾ ನೀರಿನಿಂದ ಮತ್ತು ಸಣ್ಣ ಮೀನುಗಳಿಂದ  ತುಂಬಿರುವ ಈ ಕೊಳವನ್ನು ನಗರ ಕೋಟೆ ನೋಡಿದ ಪ್ರವಾಸಿಗರು ನೋಡಲೇಬೇಕು. 

ಪ್ರವಾಸಕ್ಕೆ ಸರಿಯಾದ ಸಮಯ : ವರ್ಷದ ಯಾವ ಸಮಯದಲ್ಲಾದರೂ ಮಲೆನಾಡಿನ ಪ್ರದೇಶಗಳಲ್ಲಿ ಪ್ರವಾಸ ಹೋಗಬಹುದಾದರೂ ಡಿಸೆಂಬರ್ ನಿಂದ ಮೇ ಸಮಯದಲ್ಲಿ ಈ ಪ್ರದೇಶ ಹೆಚ್ಚು ತಂಪಾಗಿ ಸೊಗಸಾಗಿರುತ್ತದೆ.  ಜೂನ್ ತಿಂಗಳಿನಿಂದ ಧಾರಾಕಾರವಾಗಿ ಬೋರ್ಗರೆಯುವ ಮಳೆ ಪ್ರವಾಸಕ್ಕೆ ಅಡ್ಡಿ ಉಂಟುಮಾಡಬಹುದು.ಮಳೆಗಾಲದಲ್ಲಿ ಉಂಬಳಗಳು ಈ ಮಲೆನಾಡು ಪ್ರದೇಶಗಳಲ್ಲಿ ಅತಿಯಾಗಿ ಇರುವುದರಿಂದ ಶೂ ಬಳಸುವುದರ ಜೊತೆಗೆ ರೈನ್ ಕೋಟ್  ಕೂಡ ಅತ್ಯಗತ್ಯ.  

ಹತ್ತಿರದ ಪ್ರವಾಸಿ ಸ್ಥಳಗಳು :- ಕೊಡಚಾದ್ರಿ ಮತ್ತು ಕೊಲ್ಲೂರು, ಕೆಳದಿ , ಇಕ್ಕೇರಿ  ಇವುಗಳು ಇಲ್ಲಿಗೆ ಹತ್ತಿರದ ಪ್ರವಾಸಿ ಸ್ಥಳಗಳು. 

ಮಾರ್ಗ : ಬೆಂಗಳೂರಿನಿಂದ ಸುಮಾರು ೩೦೦ ಕಿ ಮೀ ಅಂತರವಿರುವ ನಗರಕ್ಕೆ ಬಸ್ಸು , ಕಾರು , ಮತ್ತು ಟ್ರೈನ್ ಮೂಲಕವೂ ತಲುಪಬಹುದು. ಸುಮಾರು ೮ ಗಂಟೆ ಪ್ರಯಾಣವಿರುವ ಈ ಪ್ರದೇಶಕ್ಕೆ ಬೆಂಗಳೂರಿನಿಂದ ಶಿವಮೊಗ್ಗ ಅಥವಾ ಸಾಗರಕ್ಕೆ ನೇರ ಬಸ್ಸಿನ ಸೌಲಭ್ಯವಿದೆ. ಬೆಂಗಳೂರು - ಸಾಗರ ಟ್ರೈನ್ ಮೂಲಕವೂ ಪ್ರಯಾಣಿಸಬಹುದು.