Wednesday 5 November 2014

ನಿದ್ರೆ ಭಂಗ

ಈ ಭಾರಿ ಭಾರತಕ್ಕೆ ಒಂದು ತಿಂಗಳ ರಜಾ ಮಜಕ್ಕೆಂದು ಹೋಗಿದ್ದೆ. ಹೋದಾಗ ಹೀಗೆ ಮಾತನಾಡುತ್ತಾ ನಮ್ಮೂರ ಅಡಿಕೆ ಸುಲಿಯುವ ಹೆಂಗಸರ ಹತ್ತಿರ ಮಾಡಲು ಬೇರೆ ಕೆಲಸವಿಲ್ಲದೆ ರಾಜಸ್ಥಾನದ ಉದಯಪುರದಲ್ಲಿ ಒಂದು ದೇವಸ್ಥಾನವಿದೆ ಅಲ್ಲಿ ಇಲ್ಲಿಗಳನ್ನು ಪೂಜಿಸಲಾಗುತ್ತದೆಯಂತೆ ಎಂದು ಹೇಳಿಕೊಂಡು ಗೇಲಿ ಮಾಡಿದ್ದೆ. ಆ ವಿಷಯ ಅಲ್ಲೇಕೆ ಹೇಳಿದೆ ಎಂಬುದಕ್ಕೆ ಉತ್ತರ ಇನ್ನೂ ಸಿಗಲಿಲ್ಲ. ಆದ್ದರಿಂದ ಇಲಿಯನ್ನು ದೇವರು ಎಂದು ಪೂಜಿಸಬೇಕು ಇಲಿ ಬಂದರೆ ಹೊಡೆದು ಕೊಲ್ಲಬಾರದು ಎಂದು ಹೇಳಿ ಅವರೊಂದಿಗೆ ' ನಿಂಗೆಂತ ಗೊತ್ತಿದ್ದೇ ನಂಗ್ಳ ಕಷ್ಟ, ಇಲಿ ಕಾಟ ತಡೆಯಲಾಗ್ತಾ ನನ್ಗಕ್ಕೆ ,ನೀನೇನೋ ಲಂಡನ್ ಅಲ್ಲಿದ್ಕಂಡು ಇಲಿ ಹೊಡಿಯಡಿ ಹೇಳ್ತೆ ,ಹೋಗ್ತ ಒಂದೆರಡು ತಗಂಡು ಹೋಗು' ಅಂತ ಬೈದಿದ್ದನ್ನು ಕೇಳಿ ಕುಶಿಯಿಂದ ನಕ್ಕಿದ್ದೂ ಆಗಿತ್ತು. ಅಂತು ಇಂತೂ ಒಂದು ತಿಂಗಳು ಊರೂರು ಅಲೆದು ಹಿಂತಿರುಗಿ ಬಂದಾಗ ಒಂದು ಅಚ್ಚರಿ ಕಾದಿತ್ತು.

ಬರುತ್ತಿದ್ದಂತೆ ಕಾಯುತ್ತಿದ್ದ ಪತಿದೇವರು ನಿನ್ನ ಸ್ನೇಹಿತರೊಬ್ಬರು ಮನೆಗೆ ಬಂದಿದಾರೆ ಅಂದಾಗ ಅರೆ ಇದ್ಯಾರಪ್ಪ ಎಂಬ ಪ್ರಶ್ನೆ ಮೂಡಿತ್ತು. ನಾನೆಲ್ಲೋ ಇರುವೆಯೋ,ನೊಣವೋ ಇರಬಹುದು ಎಂಬ ಅನುಮಾನದಲ್ಲಿದ್ದೆ,ಆದರೆ ಆ ದಿನ ರಾತ್ರೋ ರಾತ್ರಿ ಪಾತ್ರೆಗಳೆಲ್ಲ ಸದ್ದಾದಾಗ ಸ್ವಲ್ಪ ಅನುಮಾನವಾಯಿತು. ಮರುದಿನ ಬೆಳಕ್ಕೆ ಅಕ್ಕಿ ಚೀಲದಿಂದ ಅಕ್ಕಿ ಇದ್ದಕ್ಕಿದ್ದಂತೆ ಹೊರಬರುತ್ತಿರುವುದು ನೋಡಿದಾಗ ಅರೆ ಇದು ಯಾರ ಕೆಲಸ ಎಂಬ ಯಕ್ಷ ಪ್ರಶ್ನೆ.

ಒಂದು ದಿನ ರಾತ್ರಿ ಅಡುಗೆ ಮನೆಯ ಸಪ್ಪಳ ನಿಂತು ರೂಮಿನ ಸಪ್ಪಳ ಪ್ರಾರಂಭವಾದಾಗ ನಿದ್ದೆ ಎಲ್ಲಿಂದ ಬರಬೇಕು? ಒಂದು ಸಣ್ಣ ಜಿರಳೆ ಬಂದರೂ ಕೂಡ ರಾತ್ರಿ ಇಡೀ ತಲೆ ಕೆಡಿಸಿಕೊಳ್ಳುವ ನಾನು ಇದೇನಪ್ಪ ಎಂದು ಲೈಟ್ ಹಾಕಿ ನೋಡಿದರೆ ಎದ್ದೆನೋ ಬಿದ್ದೆನೋ ಎಂದು ಇಲಿಯೊಂದು ಹಿಂತಿರುಗಿ ನೋಡದೇ ನನ್ನ ಕಣ್ಣೆದುರೇ ಓಡಿ ಹೋಗಿ ಮಂಚದ ಕೆಳಗೆ ಸೇರಿಕೊಂಡಿತು. ರಾತ್ರಿ ಇಡೀ ನಾನು ನಿದ್ದೆ ಮಾಡದೇ ನನ್ನ ಪತಿಯನ್ನೂ ನಿದ್ದೆ ಮಾಡಗೊಡದ ನಾನು ಇಲಿಯನ್ನು ರೂಮಿನಿಂದ ಹೊರಹಾಕಿದ ನಂತರವಷ್ಟೇ ಸ್ವಲ್ಪ ಮಟ್ಟಿನ ಅನಿವಾರ್ಯದ ನಿದ್ರೆ ಮಾಡಿದೆ.

ಮರುದಿನ ನನಗೆ ದಿನವಿಡೀ ಮನೆ ಶೋಧಿಸುವುದೇ ಕೆಲಸವಾದರೂ ಎಲ್ಲೂ ಇಲಿ ಸಿಗಲಿಲ್ಲ. ಮನೆಗೆ ಬಂದ ಯಜಮಾನರು ಅದು ಬರುವುದು ರಾತ್ರಿ ಮಾತ್ರ ಎಂದಾಗ ಹೇಗಾದರೂ ಮಾಡಿ ಓಡಿಸಲೇ ಬೇಕು ಇಲ್ಲದಿದ್ದರೆ ನಾನು ನಿದ್ರೆ ಮಾಡುವುದಿಲ್ಲ ,ನಿಮ್ಮನ್ನೂ ನಿದ್ರೆ ಮಾಡಲು ಬಿಡುವುದಿಲ್ಲ ಎಂದಾಗ ಅವರಿಗೆ ದಿಗಿಲಾಗಿ ಅದಕ್ಕೊಂದು ಟ್ರ್ಯಾಪ್ ತಂದಿಡುವುದಾಗಿ ಮತ್ತು ಅದನ್ನು ಕೊಲ್ಲುವುದಾಗಿ ಭರವಸೆ ನೀಡಿದರು.

ಆ ದಿನ ರಾತ್ರಿ ಟ್ರ್ಯಾಪ್ ಇಟ್ಟಿದ್ದೂ ಆಯಿತು. ಆದರೆ ಮಾರನೆಯ ದಿನ ಇಲಿ ಸತ್ತು ಬಿದ್ದಿರಲಿಲ್ಲ. ಆ ನಂತರ ಎರಡು ದಿನ ಇಲಿಯ ಸದ್ದೇ ಇರಲಿಲ್ಲ. ಅರೆ ಬರಿ ಟ್ರ್ಯಾಪ್ ಇಟ್ಟ ಮಾತ್ರಕ್ಕೆ ಇಲ್ಲಿ ಮಾಯವಾಗಿ ಬಿಟ್ಟಿತೇ ಎಂಬ ಗೊಂದಲ ಇಬ್ಬರಿಗೂ ಹುಟ್ಟಿಕೊಂಡಿತ್ತು. ಆ ನಂತರ ಇಲಿಯನ್ನು ಮರೆತಾಯಿತು. ಎಲ್ಲೋ ಹೇಗೋ ಹೊರ ಹೋಗಿರಬೇಕು ಎಂಬ ಸಮಾಧಾನದಲ್ಲೇ ಇಲಿ ಮನಸ್ಸಿನಿಂದ ಹೊರ ಹೋಗಿಬಿಟ್ಟಿತ್ತು.

ಹಾಗೆ ಎರಡು ದಿನವಾಗಿರಬೇಕಷ್ಟೇ , ಆಫೀಸಿನಿಂದ ಬಂದ ಪತಿ ನಿನಗೊಂದು ಅಶ್ಚರ್ಯ ಕಾದಿದೆ ಎಂದಾಗ ಏನಾಗಿರಬಹುದು ಎಂದು ಕಣ್ಣು ಕಣ್ಣು ಬಿಟ್ಟು ನೂರು ತರದ ಗೆಸ್ ಮಾಡಲು ಪ್ರಾರಂಭಿಸಿಬಿಟ್ಟೆ. ಇಲ್ಲ ನಿನಗೆ ನಾನೇನೂ ತಂದಿಲ್ಲ ಮತ್ತು ಸಧ್ಯಕ್ಕೆ ಏನು ತರುವುದೂ ಇಲ್ಲ ಆದರೆ ನಿನಗೊಂದು ಸರ್ಪ್ರೈಸ್ ಇರುವುದು ಖಂಡಿತ ಎಂದಾಗ ಮತ್ತೆ ಆಶ್ಚರ್ಯ. ಅಡುಗೆ ಮನೆಗೆ ಕರೆದುಕೊಂಡು ಹೋಗಿ ಬಗ್ಗಿ ನೋಡು ಎಂದಾಗ ಅಲ್ಲಿ ಸಿಕ್ಕಿ ಹಾಕಿಕೊಂಡಿತ್ತು ಸತ್ತ ಇಲಿ. ಎರಡು ದಿನದಿಂದ ನೋಡಿದರೂ ಸಿಗದ ಇಲಿ ,ಸತ್ತಿರದ ಇಲಿ ಅಂದು ಸತ್ತು ಹೋಗಿದ್ದು ಒಂದು ರೀತಿ ಕುಶಿ ಸಿಕ್ಕಿತು. ಈಗ ನಮ್ಮ ಮನೆಯಲ್ಲಿ ಇಲಿ ಇಲ್ಲ.ನನ್ನ ನಿದ್ರೆಗೀಗ ಭಂಗವಿಲ್ಲ!