Tuesday 28 January 2020

ಸ್ಮಾರ್ಟ್ ಮೊಬೈಲ್ ಮೋಜು

ಈಗಿನ ಕಾಲದಲ್ಲಿ ಮೊಬೈಲ್ ಉಪಯೋಗಿಸಕ್ಕೆ ಬರದಿಲ್ಲದವರು ಯಾರಿದ್ದಾರ್ ನೀವೇ ಹೇಳ್ರಿ . ನಾಲ್ಕು ವರ್ಷದ ಮಕ್ಕಳಿಂದ ಹಿಡಿದು ವಯಸ್ಸಾದವರಗೂ ಕೂಡ ಮೊಬೈಲ್ ಬೇಕೇ ಬೇಕು.ಹಂಗೇ ನಮ್ಮಪ್ಪ ಸಣ್ಣ ಊರಲ್ಲಿದ್ರೂ ಅಲ್ಲಿಂದಾನೆ ಕಥೆ ಲೇಖನ ಹಿಂಗೇ ಆಗಾಗ ಬರದೂ ಅಂಚೆಲಿ ಕಳ್ಸಿದ್ರೆ ವಾರಾದ್ರೂ ಮುಟ್ಟಂಗಿಲ್ಲ ಅಂತಂದು ಪೇಟೆಗೆ ಹೋಗಿ ಅಲ್ಲಿ ಕಂಪ್ಯೂಟರಿದಾಗ ಯಾರತರಾದ್ರು ಹೇಳಿ ಕುಟ್ಟಿಸಿ ಕಳಿಸ್ತಿದ್ದ .ಹೀಂಗಿದ್ದಾಗ ನಂಗೂ ಪಾಪ ಅನಿಸಿ ಕಳೆದ ವರ್ಷದ ಕ್ರಿಸ್ಮಸ್ ಟೈಮಾಗ ಒಂದು ಸ್ಮಾರ್ಟ್ ಫೋನ್ ಕೊಡ್ಸ್ಲಿಕ್ಕೆ ಬೇಕು ಎಂತ ನಿರ್ಧಾರ ಮಾಡಿದ್ದೆ .ಇದನ್ನ ಕೇಳಿದ ಅಮ್ಮ ಮನೇಲಿ ಮಾಡಕ್ಕೆ ಇರ ಕೆಲ್ಸನೆ ಆಗುವಲ್ದು ಇನ್ನು ಸ್ಮಾರ್ಟ್ ಫೋನ್ ಬೇರೆ ಕೊಡುಸ್ತೀಯೇನು ಅಂತ ಸ್ವಲ್ಪ ಹೊತ್ತು ಕೂಗಾಡಿದ್ಲು . ಆದ್ರೆ ಆಕಿ ಕೂಗಾಟ ಯಾರು ಕೇಳುವಲ್ರು ಅಂತ ಆಕಿಗೂ ಗೊತ್ತಿತ್ತು. ಹಾಂಗೆ ಸ್ಮಾರ್ಟ್ ಫೋನ್ ಕೊಡಿಸಿ ಒಂದು ವರ್ಷ ಆದ ಸಲುವಾಗಿ ಹೀಗೊಂದು ಅಪ್ಪನ ಅವಾಂತರನ ನಿಮ್ಮತ್ರ ಹಂಚಿಕೊಳ್ಳೋಣ ಅನಿಸ್ತು ನೋಡ್ರಿ ಅದಕ್ಕಾ ಈ ಲೇಖನ.

ಸ್ಮಾರ್ಟ್ ಫೋನ್ ಕೈಗೆ ಬಂದ ಹೊಸತರಲ್ಲಿ ಅಪ್ಪ ಬರೀ ಫೋನ್ ರಿಸೀವ್ ಮಾಡೋದು ಕಲಿತಿದ್ದ ಅದಾಗ್ತಿದ್ದಂಗೆ ಮತ್ತೆ ಈ ವಾಟ್ಸಾಪ್ ಮೆಸೇಜ್ ಬಾಳ ಬರಾಕ್ಕತ್ತಿದ್ವು ಅದಕ್ಕೆಲ್ಲ ಹೆಂಗೆ ಮೆಸೇಜಲ್ಲೇ ಉತ್ತರಿಸಬೇಕು ಅನ್ನೋದು ಅಪ್ಪಂಗೆ ಬಾಳ ತಲೆಬಿಸಿ ಆಗ್ತಿತ್ತು. ತಾನು ಯಾಕೆ ಹಿಂಗೇ ಮೆಸೇಜ್ ಟೈಪ್ ಮಾಡೋದು ಕಲಿಬಾರ್ದು ಅಂತ ತೀರ್ಮಾನಿಸಿ ದಿನ ಇಡೀ ಸಿಕ್ಕಿದವರೆಲ್ಲರ ತಲೆ ತಿಂದು ಕೊನೆಗೂ ಮೆಸೇಜ್ ಟೈಪ್ ಮಾಡೋದು ಕಲ್ತೆ ಬಿಟ್ಟಿದ್ದ .ಅತ್ತ ಅಮ್ಮನಿಗಂತೂ ಒಂದೇ ಚಿಂತೆ .ಹಿಂಗೇ ಒಬ್ಬೊಬ್ಬನೇ ಕುಂತು ತಲೀ ಕೆಳಗ ಹಾಕ್ಕೊಂಡು ತಾಸುಗಟ್ಟಲೆ ಮೆಸೇಜ್ ಕುಟ್ಟಿ ಕೊನೆಗೆ ಕಳ್ಸೋದು ಮಾತ್ರ ಒಂದೇ ಲೈನ್ ಅಂದ್ರೆ ಇರಾಬರಾ ಕೆಲಸ ಜೊತೆಗೆ ಸಮಯಾನು ಎಷ್ಟು ವ್ಯರ್ಥ ಅಂತ ಕೂಗ್ತಾ ಅವ್ಳು ಕೂತಿರ್ತಿದ್ಲು . ಕೊನೆಕೊನೆಗೆ ಅಕೀಗೂ ಖುಷಿ ಆಗಿ ಅಲ್ಲ ಇಷ್ಟ ವರ್ಷ ಆದ್ಮೇಲೂ ಮೆಸೇಜ್ ಟೈಪ್ ಮಾಡಕ್ಕೆ ಕಲ್ತದ್ದು ಅದೂ ಈ ಹಳ್ಳಿ ಮನೆಯಾಗೆ ಇದ್ಕಂಡು ನೆಟ್ ವರ್ಕ್ ಇಲ್ಲದ ಜಾಗದಿಂದ ಫೋನ್ ಮಾಡಿದಾದ ತಾಗದಿದ್ರೆ ಮೆಸೇಜ್ ಆದ್ರೂ ಕಳುಸ್ತಾರಲ್ಲ ಅದು ಅವ್ರಿಗೆ ಹೋಗಿ ತಲುಪದೇ ಮುಖ್ಯ ಅಂತಂದು ಆಕೀನೂ ಅಪ್ಪಂಗೆ ಸಾಥ್ ಕೊಡಕ್ಕೆ ಸ್ಟಾರ್ಟ್ ಮಾಡಿದ್ಲು . ಬೇಕಾದವರಿಗೆ ಏನಾದ್ರು ತಿಳಿಸಬೇಕಂದ್ರೆ ಒಂದು ಮೆಸೇಜ್ ಹಾಕ್ರಿ ಅವ್ರೆ ಕಾಲ್ ಮಾಡ್ತಾರಾ ಅಂತಂದು ಅಪ್ಪಂಗೆ ಇನ್ನಷ್ಟು ಸಾಥ್ ಕೊಡ್ತಿದ್ಲು .

ಹಾಗೂ ಹೀಗೂ ಒಂದ್ ವರ್ಷ ಆಗ್ತಾ ಬಂತು ಅಪ್ಪನ ಕೈಲಿ ಸ್ಮಾರ್ಟ್ ಫೋನ್ ಬಂದು ಆಗಾಗ ಮೊಮ್ಮಗನೊಟ್ಟಿಗೆ ಮಾತಾಡ್ಲಿಕ್ಕೆ ವಿಡಿಯೋ ಕಾಲ್ ಕೂಡ ಮಾಡೋ ಅಷ್ಟು ಅಪ್ಪ ಮೊಬೈಲ್ ಗೆ ಅಂಟಿಕೊಂಡಿದ್ದಾಗಿತ್ತು. ಹಾಗೆ ಮೊನ್ನೆ ನಮ್ಮನೆವ್ರಿಗೆ ಇನ್ಸೂರೆನ್ಸ್ ಒಬ್ಬರ ಫೋನ್ ನಲ್ಲಿ ಮಾತಾಡಬೇಕಿತ್ತು ಬಹಳ ಅರ್ಜೆಂಟ್ ಇತ್ತು . ಈ ದಿನ ಸಂಜೆ ಭಾರತದ ಸಮಯ  ಐದುಗಂಟೆ ಒಳಗೆ ಈ ನಂಬರ್ ಗೆ ಫೋನ್ ಮಾಡ್ಬೇಕಂತ ಅಪ್ಪ ಆಕಡೆಯಿಂದ ಮೆಸೇಜ್ ಟೈಪ್ ಮಾಡಿ ನೆಟವರ್ಕ್ ಹುಡುಕಿ ಅದು ಬಂದು ನಮ್ಮನೆವರ ಮೊಬೈಲ್ ತಲುಪುದ್ರೊಳಗೆ ಇಂಡಿಯಾದಲ್ಲಿ ಗಂಟೆ ಸಂಜೆ ಏಳಾಗಿತ್ತು . ಆದ್ರೂ ಏನು ಸ್ವಂತ ಮೊಬೈಲ್ ಅಂತಂದ್ರೆ ಎಷ್ಟ್ ಹೊತ್ತಿನಾಗ ಮಾಡಿದ್ರೂ ರಿಸೀವ್ ಮಾಡೇ ಮಾಡ್ತಾರಲ್ಲೇನು ಅಂತ ನಾನು ನಮ್ಮನೆವ್ರಿಗೆ ಹೇಳಿ ಫೋನ್ ಮಾಡ್ಸಿದೆ .ನಮ್ಮನೆವರು ಫೋನ್ ಮಾಡ್ತಿದ್ದಂತೆ ಆಕಡೆವರು ರಾಂಗ್ ನಂಬರ್ ಅಂತಂದು ಫೋನ್ ಕಟ್ ಮಾಡ್ಬಿಟ್ರು .ಇದೇನು ಫೋನ್ ಕಟ್ಟೇ ಮಾಡ್ಬಿಟ್ರಲ್ಲ ಅಂತಂದು ಮತ್ತೆ ಅದೇ ನಂಬರಿಗೆ ಫೋನ್ ಮಾಡಿ ನಾನು ಕಾರಿನ  ಇನ್ಸೂರೆನ್ಸ್ ಸಲುವಾಗಿ ಮಾತಾಡ್ಬೇಕಿತ್ತು ಅಂತಿದ್ದಂಗೆ ಅತ್ಲಾಗಿನ ಹೆಂಗಸು ರಾತ್ರಿ ಎಷ್ಟೊತ್ತಾಗೆ ನಿಮ್ಮದೇನ್ರಿ ಇನ್ಸೂರೆನ್ಸ್ ಇಡ್ರಿ ಫೋನ್ ಅಂತ ಬೈದು ಫೋನ್ ಇಟ್ಟಳು .ಅಷ್ಟ್ರಲ್ಲಿ ಟಡಾಣ್ ಅಂತ ಇನ್ನೊಂದು ಮೆಸೇಜ್ ಬಂತು ಏನಪ್ಪಾ ಅಂತ ನೋಡಿದ್ರೆ ನಮ್ಮಪ್ಪ ಆಕಡಿಯಿಂದ ಸಾರಿ ನನ್ನ ಕಡೆಯಿಂದ ಒಂದು ಸಣ್ಣ ತಪ್ಪಾಗಿದೆ ನಂಬರ್ 42 ಅಲ್ಲ 43 ಆಗಬೇಕಿತ್ತ ಈ ನಂಬರಿಗೆ ಕಾಲ್ ಮಾಡ್ರಿ ಅಂತ ಕಳ್ಸಿದ್ದ .ಸರಿ ಅಂತ ಸರಿಯಾಗಿ ಕಳಿಸಿದ ಹೊಸ ನಂಬರ್ ಗೆ ಫೋನ್ ಮಾಡು ಮೊದಲು ಅವರ ಹೆಸರು ಏನು ಹೇಳ್ರಿ ಅಂತ ನಾವೂ ಒಂದು ಮೆಸೇಜ್ ಕಳ್ಸಿದ್ವಿ .
ಅತ್ತ ಕಡೆಯಿಂದ ಅಪ್ಪ ಅವರ ಹೆಸರು ಪರಿವಿಧಿ ಅಂತಂದು ಟೈಪ್ ಮಾಡಿ ಬರೋಬ್ಬರಿ ಹತ್ತು ನಿಮಿಷದ ನಂತರ ಕಳ್ಸಿದ. ಇದೇನಪ್ಪ ಚಂದ ಹೆಸರು ಅಂತಂದು ಫೋನ್ ಹಚ್ಚಿ ನಾನು ಇಂತವರ ಅಳಿಯ ನೀವು ಪರಿವಿಧಿ ಅವರಾ ಅಂತಂದ್ರೆ ಆಕಡೆಯವ್ರು ಓ ನಿಮ್ಮ ಮಾವ ಹೇಳಿದ್ರು ನೀವು ಫೋನ್ ಮಾಡ್ತೀರಂತ  ನನ್ನ ಹೆಸರು ಪರಿವಿಧಿ ಅಲ್ಲ ಪೃಥ್ವಿ ಅಂದ್ರು . ನಾನು ಅಲ್ಲೇ ಮೂರ್ಛೆ ಹೋಗೋದೊಂದು ಬಾಕಿ ಇತ್ತು . ಅಂತೂ ಈ ಮೆಸೇಜ್ ಟೈಪ್ ಮಾಡೋದು ಕಲೀಲಿಕ್ಕೆ ಹೋಗಿ ಪೃಥ್ವಿ ಅಂತ ಟೈಪ್ ಮಾಡೋದು ಕಷ್ಟ ಆಗಿ ಅದು ಪರಿವಿಧಿ ಅಂತಾಗಿ ನಮ್ಮನ್ನ ತಲುಪಿತ್ತು. ಹೀಂಗಿತ್ತು ನೋಡ್ರಿ ಅಪ್ಪನ ಸ್ಮಾರ್ಟ್ ಮೊಬೈಲ್ ಮೋಜು .

Arpitha Rao

ಪೀಕ್ ಡಿಸ್ಟ್ರಿಕ್ಟ್

ಇಂಗ್ಲೆಂಡಿನ ಬಹುತೇಕ ಭಾಗಗಳು ವರ್ಷದ ಬೇರೆಬೇರೆ ಕಾಲಮಾನಗಳಲ್ಲಿ ವಿಭಿನ್ನ ರೀತಿಯಲ್ಲಿ ಕಾಣುತ್ತವೆ ಮತ್ತು ಅದಕ್ಕೆ ತನ್ನದೇ ಆದ ವೈಶಿಷ್ಟತೆಯನ್ನು ಕೂಡ ಹೊಂದಿರುವುದು ಕಂಡುಬರುತ್ತದೆ. ಉದಾಹರಣೆಗೆ ಬೇಸಿಗೆಯಲ್ಲಿ ಒಂದುರೀತಿಯ ಹಸಿರಾದರೆ ಚಳಿಗಾಲದಲ್ಲಿ ಬೋಳು ಮರಗಳು ಕೆಲವೊಮ್ಮೆ ಹಿಮ ತುಂಬಿದ ಶ್ವೇತವರ್ಣವನ್ನು ಮೈತುಂಬಿಸಿಕೊಂಡಿರುವ ಪ್ರಕೃತಿಯ ಅಂದವನ್ನು ನೋಡುವುದೇ ಇನ್ನೊಂದು ಸೊಬಗು. ಹಾಗೆಯೇ ಶಿಶಿರ ಋತುವಿನಲ್ಲಿ ಹೂವಿನಿಂದ ಹಾಸಿ ಹೊದ್ದಿರುವ ಪ್ರಕೃತಿಯನ್ನು ಕಣ್ಣು ತುಂಬಿಸಿಕೊಳ್ಳುವುದು ಎಲ್ಲಕ್ಕಿಂತ ಚೆಂದ.

ಹಾಗೆಯೇ ಇನ್ನೇನು ಇಲ್ಲಿನ ವಸಂತ ಕಾಲ ಮುಗಿದು ಚಳಿಗಾಲ ಪ್ರಾರಂಭವಾಗಬೇಕು ಎನ್ನುವಾಗ  ನಾವು ಈ ಭಾರಿ ಹೋಗಿದ್ದು ಪೀಕ್ ಡಿಸ್ಟ್ರಿಕ್ಟ್ . ಹೆಸರಿಗೆ ತಕ್ಕ ಹಾಗೆ ಇಲ್ಲಿ ಎಲ್ಲಿ ನೋಡಿದರೂ ಹಸಿರು ಬೆಟ್ಟಗಳು. ಮಲೆನಾಡಿನಲ್ಲಿ ಬೆಳೆದ ನನಗೆ ಹಸಿರು ಬೆಟ್ಟಗುಡ್ಡಗಳು ಹೊಸದಲ್ಲ ಅವುಗಳ ತಪ್ಪಲಿನಲ್ಲೇ ಬೆಳೆದು ಬಂದಿದ್ದರಿಂದ ಅದೊಂದು ರೀತಿಯಲ್ಲಿ ಎಷ್ಟು ಸೋಜಿಗವೋ ಅಷ್ಟೇ ರೂಢಿ ಕೂಡ ಎನ್ನಬಹುದು. ಆದರೆ ಇಂಗ್ಲೆಂಡ್ ನ ಬೆಟ್ಟಗಳ ಸೊಗಸೇ ಬೇರೆ. ಎತ್ತರದ ದಟ್ಟ ಅರಣ್ಯಗಳ ನಡುವಿನ ಬೆಟ್ಟಗಾಡುಗಳು ಇದಲ್ಲ. ಮನುಷ್ಯ ತನ್ನ ಅನುಕೂಲಕ್ಕೆ ತಕ್ಕಂತೆ ತಾನೇ ಮಾಡಿಕೊಂಡಿದ್ದಾನೇನೋ ಎಂಬಂತಿರುತ್ತದೆ ಇಲ್ಲಿನ ಬೆಟ್ಟಗಳು.ಪೀಕ್ ಡಿಸ್ಟ್ರಿಕ್ಟ್ ನ ಯಾವುದೇ ಭಾಗಗಳಿಗೆ ಹೋದರೂ ಕೂಡ ಸಾಕಷ್ಟು ನಡೆಯುವುದು ಅಥವಾ ಬೆಟ್ಟ ಹತ್ತುವುದು ಇದ್ದೇ ಇರುತ್ತದೆ ಆದ್ದರಿಂದ ರಣ ಬಿಸಿಲಿನಲ್ಲಿ ಹೋದರೆ ಬೆಟ್ಟ ಹತ್ತುವುದು ಕಷ್ಟವಾಗಬಹುದು ಆದ್ದರಿಂದ ಇಂಗ್ಲೆಂಡ್ ನ ಸ್ಪ್ರಿಂಗ್ ಕಾಲದಲ್ಲಿ ಹೋದರೆ ಇಲ್ಲಿನ ಪ್ರವಾಸಿ ಸ್ಥಳಗಳನ್ನು ಸಾಕಷ್ಟು ಮಜಾ  ಮಾಡಬಹುದು .

ಹಾಗೆ ಈ ಬಾರಿ ನಾವು ನೋಡಹೋಗಿದ್ದು ಪೀಕ್ ಡಿಸ್ಟ್ರಿಕ್ಟ್ ನ ಡೋವ್ ಡೇಲ್ 

ಡೋವ್ ಡೇಲ್ :

ಡರ್ಬಿಶೇರ್ ನಲ್ಲಿರುವ ಡೋವ್ ಡೇಲ್ ಗೆ ವರ್ಷಪೂರ್ತಿ ಸಾವಿರಾರು ಪ್ರವಾಸಿಗರು ಬರುತ್ತಾರೆ. ನಾವು ಹೋಗಿದ್ದು ಸೆಪ್ಟೆಂಬರ್ ನ ಮಧ್ಯ ಭಾಗವಾದ್ದರಿಂದ ಹದವಾದ ಚಳಿ ಜೊತೆಗೆ ಸೂರ್ಯನ ಎಳೆ ಬಿಸಿಲು ಎರಡೂ ಬೆರೆತು ಮನಸ್ಸಿಗೆ ಮುದ ನೀಡುವ ವಾತಾವರಣವಾಗಿತ್ತು . ಡೋವ್ ಡೇಲ್ ಸ್ಟೆಪ್ಪಿಂಗ್ ಸ್ಟೋನ್ ಎಂದೇ ಕರೆಯಲಾಗುವ ಈ ಪ್ರವಾಸಿ ಸ್ಥಳವನ್ನು ಡೋವ್ ಡೇಲ್ ವಾಕ್ ಎಂದು ಕೂಡ ಹೇಳುತ್ತಾರೆ.  ಇದಕ್ಕೆ ಕಾರಣ ಇಲ್ಲಿ ಹರಿಯುತ್ತಿರುವ ನದಿಯ ಮದ್ಯೆ ಕಲ್ಲನ್ನು ಇಡಲಾಗಿದ್ದು ಇಲ್ಲಿನ ಬೆಟ್ಟವನ್ನು ಹತ್ತಲು ಒಂದೊಂದೇ ಕಲ್ಲುಗಳನ್ನು ದಾಟಿ ಹೋಗಬೇಕು.
ಇಲ್ಲಿ ಹದಿನೆಂಟನೇ ಶತಮಾನದಲ್ಲಿ  ಪ್ರಾರಂಭವಾದ  ಪ್ರವಾಸೋದ್ಯಮ ಇಂದು ಯುನೈಟೆಡ್ ಕಿಂಗ್ಡಮ್  ನ ಅತ್ಯಂತ  ಜನಪ್ರಿಯ ಪ್ರವಾಸಿ ತಾಣವಾಗಿ ಮಾರ್ಪಟ್ಟಿದೆ. ಇಲಾಮ್ ಎಂಬ ಹಳ್ಳಿಯಲ್ಲಿ ಸುಮಾರು ೪೫ ಮೈಲಿಯವರೆಗೆ ಹರಿಯುವ ಡೋವ್ ಎಂಬ ನದಿಯ ತಟದಲ್ಲಿ ಸುಣ್ಣದ ಕಲ್ಲಿನ ಕೊರೆತಗಳಿಂದ ನಿರ್ಮಾಣವಾದ ಬೆಟ್ಟವನ್ನು ಡೋವ್ ಡೆಲ್ ವ್ಯಾಲಿ ಎಂದೇ ಕರೆಯುತ್ತಾರೆ. 

ಅದೆಲ್ಲಕ್ಕಿಂತ ಇಲ್ಲಿ ಮನಸೂರೆಗೊಳ್ಳುವುದು ಡೋವ್ ನದಿಯ ಜುಳುಜುಳು ನಾದದ ಮಧ್ಯೆ  ಸ್ಟೆಪ್ಪಿಂಗ್ ಸ್ಟೋನ್ ಗಳಲ್ಲಿ ಅತ್ತ  ದಾಟಿ ಹೋದರೆ ಸುತ್ತಲೂ ಹಸಿರು ಹಾಸಿದ ಬೆಟ್ಟಗಳು ಮತ್ತು ಅದನ್ನು ನೋಡಲೆಂದೇ ಪ್ರವಾಸಿಗರೊಂದಿಗೆ ಬಂದಂತಿರುವ ಚಿನ್ನದ ಗೆರೆ ಎಳೆದಂತೆ ಕಾಣುವ ಸೂರ್ಯನ ಹದವಾದ ಕಿರಣಗಳು . ಬೆಟ್ಟದ ತುದಿಯನ್ನು ಹತ್ತಿ ನೋಡಿದರೆ ಅಲ್ಲಿನ ಚಿತ್ರಣ ಮನಸ್ಸನ್ನು ಮುದಗೊಳಿಸುವುದು ಖಂಡಿತ.

ಡರ್ವೆಂಟ್ :

ಡೋವ್ ಡೇಲ್ ನಿಂದ ಸುಮಾರು ಒಂದು ತಾಸು ಕಾರಿನ ಪ್ರಾಯಾಣ ಡರ್ವೆಂಟ್ ಗೆ.  ಡರ್ವೆಂಟ್ ಕೂಡ ಪೀಕ್ ಡಿಸ್ಟ್ರಿಕ್ಟ್ ನ ಒಂದು ಮುಖ್ಯ ಪ್ರವಾಸಿ ತಾಣಗಲ್ಲಿ ಒಂದು . ಡೋವ್ ಡೇಲ್ ನಿಂದ ಡರ್ವೆಂಟ್ ಪ್ರಯಾಣವೇ ಸುಂದರ. ಇಕ್ಕೆಲಗಳಲ್ಲಿ ಇರುವ ಬೆಟ್ಟಗಳ ನಡುವೆ ಕಾರಿನಲ್ಲಿ ಹೋಗುವ ಅನುಭವ ಒಂದುರೀತಿಯ ಮುದ ನೀಡುತ್ತದೆ. ಹಸಿರು ಮತ್ತು ಹಳದಿ ಬಣ್ಣಗಳಿಂದ ಕುಡಿದ ಬೆಟ್ಟಗಳು ಮತ್ತು ಅಲ್ಲಲ್ಲಿ ಕುದುರೆ , ಮೇಕೆ , ಕುರಿಗಳು  ಮೇಯುತ್ತಿರುವುದನ್ನು  ಕಾಣಬಹುದು.  ಕೆಲವು ಭಾಗಗಳಲ್ಲಿ ಇಲ್ಲಿನ ಟ್ರೆಕಿಂಗ್ ಎಂದೇ ಬರುವ ಜನರು ನಡೆದು ಹೋಗುವುದು ಅಥವಾ ಸೈಕ್ಲಿಂಗ್ ಮಾಡಿಕೊಂಡು ಪ್ರವಾಸಿ ಸ್ಥಳಕ್ಕೆ ಹೋಗುತ್ತಿರುವುದು ಕಂಡುಬರುತ್ತದೆ. 
ಡೋವ್ ಡೇಲ್ ಗೆ ಹೋಲಿಸಿದರೆ ಡರ್ವೆಂಟ್ ಸಂಪೂರ್ಣ ವಿಭಿನ್ನ ಎನಿಸುತ್ತದೆ. ಇದೊಂದು ನಿಸರ್ಗಧಾಮ . ಡಾರ್ವೆಂಟ್ ನಲ್ಲಿ ಹಸಿರು ಹಾಸಿ ಹೊದ್ದಂತಿರುವ ಸ್ಥಳದಲ್ಲಿ ಪ್ರವಾಸಿಗರಿಗೋಸ್ಕರವೇ ಕುಳಿತುಕೊಳ್ಳಲು ಅಲ್ಲಲ್ಲಿ ಕಲ್ಲಿನ ಬೆಂಚು. ಅಲ್ಲಿ ಕುಳಿತು ಎದುರುಗಿರುವ ಪ್ರಕೃತಿಯನ್ನು ನೋಡುತ್ತಿದ್ದರೆ ಸುತ್ತಲಿನ ಪ್ರಪಂಚವೇ ಮರೆತಂತ ಅನುಭವ.  ಇಲ್ಲಿ ಡರ್ವೆಂಟ್ ನದಿಗೆ  ಬ್ರಿಜ್ ಕಟ್ಟಲಾಗಿದೆ . ಜೊತೆಗೆ ಇದನ್ನು ಡರ್ಬಿಶೈರ್ ನ ಲೇಕ್ ಡಿಸ್ಟ್ರಿಕ್ಟ್ ಎಂದು ಕರೆಯಲಾಗುತ್ತದೆ. ಜೊತೆಗೆ ಇಲ್ಲಿ ಕಾಡುಗಳ ಮಧ್ಯೆ ನಡೆದುಕೊಂಡು ಹೋಗಿ ಪ್ರವಾಸಿ ಸ್ಥಳವನ್ನು ತಲುಪಬೇಕಾಗಿದ್ದು ಇದು ದಿನನಿತ್ಯದ ಜೀವನ ಜಂಜಾಟದಲ್ಲಿರುವವರಿಗೆ ಒಂದು ರೀತಿಯ ಪ್ರಶಾಂತ ವಾತಾವರಣವನ್ನು ನೀಡುತ್ತದೆ.

ಇಷ್ಟೇ ಅಲ್ಲದೆ ಪೀಕ್ ಡಿಸ್ಟ್ರಿಕ್ಟ್ ಗೆ ಹೋಗುವಾಗ ಆಗಾಗ ಬರುವ ಮಳೆ ಎದುರಿಸಲು ರೈನ್ ಕೋಟ್ ಅಥವಾ ಕೊಡೆ ಮತ್ತು ಬೆಟ್ಟವನ್ನು ಹತ್ತಲು ಟ್ರೆಕಿಂಗ್ ಗೆ ಸೂಕ್ತವಾದ ಶೂ  ಅನಿವಾರ್ಯ.


Arpitha Rao
Banbury
Oxford

ಗಂಟು ಮೂಟೆ



ಆ ಚಿತ್ರ ಪ್ರಾರಂಭವಾಗುವುದೇ ಹಾಗೆ ಚಲನಚಿತ್ರದ ಮೇಲೆ ಅತೀವ ಹುಚ್ಚನ್ನು ಹಚ್ಚಿಕೊಂಡಿರುವ ಹೆಣ್ಣು ಮಗಳು ಒಂಟಿಯಾಗಿ ಮೂವಿ ನೋಡಲು ಹೋದಾಗ ಅನಿವಾರ್ಯವಾಗಿ ಶೋಷಣೆಗೆ  ಒಳಗಾಗಿ ತತ್ತರಿಸಬೇಕಾಗುತ್ತದೆ . ಹಾಗಂತ ಇದು ಹೆಣ್ಣಿನ ಶೋಷಣೆಗೆ ಸಂಬಂಧ ಪಟ್ಟ  ಕಥೆಯಲ್ಲ. ಜೀವನದ ಪಯಣದಲ್ಲಿ ಪ್ರತಿಯೊಬ್ಬರೂ ಒಂದಲ್ಲ ಒಂದು ರೀತಿಯ ಗಂಟು ಮೂಟೆ ಕಟ್ಟಿಕೊಂಡು ಓಡಾಡುತ್ತಿರುವವರೇ . ನಾವು ಇರುವಷ್ಟು ದಿನ ನಮ್ಮ ಜೊತೆ ಕೆಲವು ಮರೆಯಲಾರದ ನೆನಪುಗಳನ್ನು ಹೊತ್ತು ಸಾಗುವುದು ಅನಿವಾರ್ಯ ಕೂಡ.  ಅಂತಹ ಒಂದು ಪ್ರಯಾಣವನ್ನು ತಿಳಿಸುವ ಚಿತ್ರವೇ ರೂಪ ರಾವ್ ನಿರ್ದೇಶನದ ಗಂಟು ಮೂಟೆ . ಒಂದು ಮುಗ್ದ ವಯಸ್ಸಿನ ಹೆಣ್ಣು ಮಗಳು  ವಯಸ್ಸಿಗೆ ಮೀರಿ ಪ್ರೀತಿಯಲ್ಲಿ ಮುಳುಗಿ ತನ್ನ ಬದುಕನ್ನೇ ಹೇಗೆ ತಿರುಗಿಸಿಕೊಳ್ಳಬಲ್ಲಳು ಎಂಬುದನ್ನು ಈ ಚಿತ್ರ ಮನದಟ್ಟು ಮಾಡುತ್ತದೆ. ಹದಿಹರೆಯದಲ್ಲಿ ಕಾಡುವ ಪ್ರೀತಿ ಹೇಗೆ ಜೀವನ ಪರ್ಯಂತ ಮರೆಯಲಾರದೆ ಬೆನ್ನತ್ತ್ತಿ ಬಂದುಬಿಡಬಹುದು ಎಂಬುದನ್ನು ತೋರಿಸುವ ಪ್ರಯತ್ನ ಈ ಚಿತ್ರದಲ್ಲಿದೆ .ಚಿತ್ರದಲ್ಲಿ ಕಂಡು ಬರುವ ಕೆಲವು ಘಟನೆಗಳು ಬಹುತೇಕ ಜನರು ಶಾಲಾ ಕಾಲೇಜುಗಳಲ್ಲಿ ಒಂದಿಲ್ಲೊಂದು ರೀತಿಯಲ್ಲಿ ಅನುಭವಿಸಿರುವುದು ನಿಜವಾದ್ದರಿಂದ ನೋಡುಗರನ್ನು ನೆನಪಿನ ಲೋಕಕ್ಕೆ ಕರೆದುಕೊಂಡು ಹೋಗಬಹುದಾದ ಚಿತ್ರವಿದು.

ಚಲನಚಿತ್ರ ನೋಡಿ , ಪ್ರೀತಿಯ ಬರಹಗಳನ್ನು ಬರೆದು , ಚಲನಚಿತ್ರದ ಹೀರೋ ಗಳ ಮೇಲೆ ಬೆಳೆಯುವ ಪ್ರೀತಿ ಕೊನೆಗೆ ತನಗೂ ಅಂತಹದೇ ಒಂದು  ಹುಡುಗನನ್ನು ಹುಡುಕುವಲ್ಲಿ ತಲ್ಲಣಿಸುತ್ತದೆ ಎಂದು ಕೂಡ ಈ ಚಿತ್ರದಲ್ಲಿ ತೋರಿಸಲಾಗಿದೆ. ಪ್ರಬುದ್ಧವಾಗಿ ಬೆಳೆಯುವ ಮೊದಲೇ ಇಂತಹ ಆಸೆಗಳಿಗೆ ಒಳಗಾಗುವ ಹೆಣ್ಣು ಮುಂದೇನಿಲ್ಲ ಅನುಭವಿಸಬೇಕಾಗಬಹುದು ಎಂಬುದನ್ನು ತೋರಿಸುವ ಪ್ರಯತ್ನ ರೂಪ ರಾವ್ ಮಾಡಿದ್ದಾರೆ .   ಚಲನ ಚಿತ್ರ ಸಂಪೂರ್ಣವಾಗಿ ೯೦ ರ ದಶಕದಲ್ಲಿ ನಡೆದಿರಬಹುದಾದ ಘಟನೆಗಳಂತೆ ಪತ್ರ ಮತ್ತು ಲ್ಯಾಂಡ್ಲೈನ್ ಫೋನ್ ಇಂತವನ್ನೆಲ್ಲ ತೋರಿಸಿದರೂ ಕೂಡ ಹೆಚ್ಚಿನ ಕಡೆ ಇದು ಇಂದಿಗೂ ಕೂಡ ಅನ್ವಯಿಸುತ್ತದೆ ಎಂದು ನನ್ನ ಅಭಿಪ್ರಾಯ. ಇಂದು ಕೂಡ ಶಾಲಾ ಕಾಲೇಜುಗಳಿಗೆ ಹೋಗುವ ಮಕ್ಕಳಲ್ಲಿ ಇಂತಹ ಆಸೆ ಆಕಾಂಕ್ಷೆಗಳು ಸಹಜ ಮತ್ತು ಅದು ಕೂಡ ಇಂತಹದೇ ಪರಿಣಾಮವನ್ನು ಬೀರಿದ ಉದಾಹರಣೆಗಳನ್ನು ನಮ್ಮ ಸುತ್ತಮುತ್ತಲೇ ಕಾಣಬಹುದು. ಈಗಿನ ಹೈಸ್ಕೂಲ್ ಮತ್ತು ಕಾಲೇಜಿನ ಮಕ್ಕಳು ಈ ಚಿತ್ರವನ್ನು ನೋಡಿ ತಾವೂ ಹೀಗಾಗಬಾರದು ಎಂಬುದನ್ನು ಮನಗೊಳ್ಳಬೇಕು ಎಂಬ ಸಂದೇಶವನ್ನು ಸಾರ ಹೊರಟಿರುವ ಚಿತ್ರವಿದು . ಆದರೆ ಅಲ್ಲಲ್ಲಿ ಕಂಡು ಬರುವ ಅಗತ್ಯಕ್ಕಿಂತ ಹೆಚ್ಚೆನಿಸುವ ಪ್ರೇಮಕ್ಕಿಂತ ಆ ಸಮಯದಲ್ಲಿ ಕಂಡುಬರುವ ಬಯಕೆಯನ್ನು ತೋರಿಸುವ ಕಿಸ್ಸಿಂಗ್ ಸೀನ್ ಗಳು ಮುಜುಗರ ಉಂಟು ಮಾಡುವಂತೆಯೂ ಅದರ ಅವಶ್ಯಕತೆ ಇರಲಿಲ್ಲ ಎಂದು ಕೂಡ ಅನ್ನಿಸುತ್ತದೆ.  ಹದಿಹರೆಯದ ಪ್ರೀತಿ ಹೇಗೆ ಮಕ್ಕಳ ಜೀವನವನ್ನೇ ಹಾಳುಮಾಡಿಬಿಡಬಲ್ಲದು ಎಂಬುದನ್ನು ಇಲ್ಲಿ ತೋರಿಸಲಾಗಿದೆ.  ಹದಿಹರೆಯದ ಸಮಯದಲ್ಲಿ ಹುಟ್ಟುವ ಮೊದಲ ಪ್ರೀತಿ ಕೊನೆಯವರೆಗೂ ಇರುತ್ತದೆಯೋ ಇಲ್ಲವೋ ಆದರೆ ಅದರ ನೆನಪು ಮಾತ್ರ ಕಾಡುವುದು ಖಂಡಿತ ಎಂಬುದು ಈ ಚಲನಚಿತ್ರದ ಪೂರ್ಣ ಸಂದೇಶ. ಅಂತಹ ವಯಸ್ಸಿನಲ್ಲಿ ತೆಗೆದುಕೊಳ್ಳುವ ನಿರ್ಧಾರ ಇಡೀ ಇಬ್ಬರ ಜೀವನವನ್ನೇ ಹಾಳುಮಾಡಿಬಿಡಬಹುದು ಅಥವಾ ಒಂದು ವ್ಯಕ್ತಿತ್ವವನ್ನು ರೂಪಿಸಲು ಬುನಾದಿ ಆಗಿಬಿಡಬಹುದು ಎಂಬುದನ್ನು ತೋರಿಸಿರುವ ಚಿತ್ರವಿದು. ಕಥಾನಾಯಕಿಯನ್ನೇ ಮುಖ್ಯವಾಗಿ ಇಟ್ಟುಕೊಂಡು ಮಾಡಿರುವ ಈ ಚಿತ್ರದಲ್ಲಿ ತೇಜು ಬೆಳವಾಡಿಯವರ ಪಾತ್ರ ಸಹಜ ಸುಂದರವಾಗಿ ಮೂಡಿ ಬಂದಿದೆ.
ಚಿತ್ರದಲ್ಲಿ ಬರುವ ಹಾಡುಗಳು ಒಳ್ಳೆಯ ಸಾಹಿತ್ಯವನ್ನು ಹೊಂದಿದ್ದು , ಕಾಲೇಜಿನ ಮಕ್ಕಳ ಮನಸ್ಥಿತಿ ಸಾರುತ್ತದೆ. ಕಥೆಗೆ ತಕ್ಕ ಪಾತ್ರವನ್ನು ಮಾಡುವಲ್ಲಿ ನಿಶ್ಚಿತ್ ಮತ್ತು ತೇಜು ಬೆಳವಾಡಿ ಇಬ್ಬರೂ ಯಶಸ್ವಿಯಾಗಿದ್ದಾರೆ. ಕಥಾ ನಾಯಕನಾದ ನಿಶ್ಚಿತ್ ಕೂಡ ಚಲನಚಿತ್ರ ಮುಗಿದ ನಂತರವೂ ಮನಸ್ಸಿನಲ್ಲಿ ಉಳಿಯುತ್ತಾರೆ . ನೀವೂ ಒಮ್ಮೆ ಈ ಚಲನಚಿತ್ರ ವೀಕ್ಷಿಸಿ ಮತ್ತು ಹಳೆಯ ದಿನಗಳ ಮೆಲುಕುಹಾಕಿ.

Arpitha Rao
Banbury