Friday 29 April 2016

ಲಹರಿ

ಅಪ್ಪನಿಗೆ ಫೋನ್ ಮಾಡಿದ್ದೆ. ಅದೇಕೋ  ಮಗ ಹುಟ್ಟಿದ ಮೇಲೆ ಅಪ್ಪನನ್ನು ಸ್ವಲ್ಪ ಹೆಚ್ಚೇ ಮಿಸ್ ಮಾಡಿಕೊಳ್ಳುತ್ತಿದ್ದೀನಿ. ದಿನಕ್ಕೆ ಒಮ್ಮೆಯಾದರೂ ಫೋನ್ ಮಾಡಿ  ಮಾತನಾಡದಿದ್ದರೆ  ಮನಸ್ಸಿಗೆ ಸಮಾಧಾನವೇ ಇರುವುದಿಲ್ಲ. ನನ್ನ ಎಂಟು ತಿಂಗಳ ಮಗ ಅಂಬೆ ಹರಿದು , ತಾನಾಗೆ ನಿಂತುಕೊಳ್ಳಲು ಪ್ರಾರಂಭಿಸಿದಂತೆ ಎಷ್ಟು ಬೇಗ ಸಮಯ ಕಳೆದು ಹೋಗುತ್ತಿದೆ ಎನಿಸುತ್ತಿದೆ. ನೋಡ ನೋಡುತ್ತಿದ್ದಂತೆ ಮಗನೂ ಬೆಳೆದು ದೊಡ್ಡವನಾಗಿ ಬಿಡುತ್ತಾನೆ ಎಂಬ ಸತ್ಯ ಅರಿವಾಗುತ್ತಿದೆ. ಆಗೆಲ್ಲ ನನಗೆ ನೆನಪಾಗುವುದು ಅಪ್ಪ. ಬಾಲ್ಯದ ಸುಂದರ ದಿನಗಳ ಮೆಲುಕು ಹಾಕ ಹೊರಟರೆ ದುತ್ತನೆ ಕಣ್ಣೆದುರು ಬರುವುದು ಅಪ್ಪನ ಆರೈಕೆ. ಎಷ್ಟು ಸುಂದರ ದಿನಗಳವು. ಅಪ್ಪ ಅದೆಷ್ಟು ಪ್ರೀತಿಯಿಂದ ನನ್ನ ಸಾಕಿದ್ದ ಮತ್ತು ಆ ಪ್ರೀತಿ ದಿನೇ ದಿನೇ ಹೆಚ್ಚುತ್ತಲೇ ಇದೆ. ಲಂಡನ್ ನಿಂದ  ವರ್ಷಕ್ಕೆ ಒಮ್ಮೆ ಅಪ್ಪನ ಮನೆಗೆ ಹೋಗಿ ಹಿಂತಿರುಗಿ ಬರುವಾಗ ಅಪ್ಪನ ಕಣ್ಣೀರು ಮರೆಯಬೇಕೆಂದರೂ ಮರೆಯಲಾರದು. ಅಪ್ಪ ಅದೇಕೆ ಅಷ್ಟು ಭಾವನಾತ್ಮಕ ಎಂದು ಕೆಲವೊಮ್ಮೆ ಗೊಂದಲವಾಗುತ್ತದೆ. ಮತ್ತು ಎಲ್ಲರೂ ಏಕೆ ಅಪ್ಪನಂತೆ ಇರಬಾರದು. ನಿಷ್ಕಲ್ಮಶ ಪ್ರೀತಿ,ನಿಸ್ವಾರ್ಥ ಕಾಳಜಿ , ಆತ ನನ್ನ ಅಮ್ಮನನ್ನು ಮತ್ತು ಮಕ್ಕಳನ್ನು ನೋಡಿಕೊಳ್ಳುವ ರೀತಿ ,ಇವೆಲ್ಲ ಅಪ್ಪನಿಗೊಬ್ಬನಿಗೆ ಸಾಧ್ಯ ಎಂದು ಯಾವಾಗಲೂ ನನಗನಿಸುತ್ತದೆ. 

ಹ್ನಾ  ಈ ಭಾರಿ ಊರಿಗೆ ಹೋದಾಗ ಅಪ್ಪ ಒಂದು ದಿನ ಬಾಳೆಕಾಯಿ ಅತಿರಸ ಮಾಡಿದ್ದ ನನಗೋಸ್ಕರ. ಚನ್ನಾಗಾಗಿತ್ತು ಆದರೆ ನನಗೆ ಅಕ್ಕಿಬೆಲ್ಲದ ಅತಿರಸ ಬಹಳ ಇಷ್ಟ . ಆದ್ದರಿಂದ  ಬಾಳೆಕಾಯಿ ಅತಿರಸ ಅದೇನೋ ನನಗೆ ಅಷ್ಟು ಇಷ್ಟವಾಗಲಿಲ್ಲವಾದರೂ ಅಪ್ಪ ಮಾಡುವ ಕುಟ್ಟವಲಕ್ಕಿ ಬೇರಾರು ಮಾಡಿದರು ಅಷ್ಟು ರುಚಿಯಾಗಿ ಇರುವುದಿಲ್ಲ ಎಂಬುದು ಮಾತ್ರ ಕಟು ಸತ್ಯ. ಹಾಗೇ ಅಡುಗೆ ಮಾಡುವಾಗಲೆಲ್ಲ ಅಪ್ಪ ಮಾಡುವ ಕುಟ್ಟವಲಕ್ಕಿ ಅಪ್ಪನಷ್ಟೇ ಕಾಡುತ್ತದೆ. ಹಾಗೆ ಫೋನ್ ಮಾಡಿದಾಗ ಅಪ್ಪನಲ್ಲಿ ಕೇಳಿಯೇ ಬಿಟ್ಟೆ. ಅಪ್ಪ ನೀ ಮಾಡುವ ಕುಟ್ಟವಲಕ್ಕಿ ರೆಸಿಪಿ ಕೊಡು ನಾನೂ ಹಾಗೇ  ಮಾಡಿ ನೋಡುತ್ತೇನೆ. ಯಾಕೋ ಕುಟ್ಟವಲಕ್ಕಿ ತಿನ್ನುವ ಮನಸ್ಸಾಗುತ್ತಿದೆ ಎಂದು ಅಪ್ಪನಿಗಾದ ಸಂತೋಷ ನೋಡದಿದ್ದರೂ ನಾ ಅರಿತಿದ್ದೆ. ಅವನಿಗೆ ಅದೇನೋ ಸಂತೋಷ ಮಗಳು ನನ್ನ ಕುಟ್ಟವಲಕ್ಕಿ ಅಷ್ಟು ಇಷ್ಟ ಪಡುತ್ತಾಳೆ  ಎಂದು.  ಅದು ಸುಲಭದ ರೆಸಿಪಿ ಹಾಗೆ ತಿನ್ನಲು ಬಹಳ ರುಚಿ.  

ಇಲ್ಲಿದೆ ನೋಡಿ ರೆಸಿಪಿ  - ದಪ್ಪ ಅವಲಕ್ಕಿ , ಬೇಕಾದಷ್ಟು ಹಸಿಮೆಣಸು , ಕೊತ್ತುಂಬರಿ ಸೊಪ್ಪು ಅಥವಾ ಕೊತ್ತುಂಬರಿ ಕಾಳು (ಸ್ವಲ್ಪ ಜಾಸ್ತಿಯೇ ಹಾಕಿದರೆ ಸುವಾಸನೆ ಭರಿತವಾಗಿರುತ್ತದೆ),ಒಂದು ನಾಲ್ಕು ಎಸಳು ಬೆಳ್ಳುಳ್ಳಿ ,ಸ್ವಲ್ಪ ಬೆಲ್ಲ ,ಹುಳಿಗೆ ವಾಟೆ ಪುಡಿ (ಅಥವಾ ನಿಂಬೆ ರಸ ) ಇವನ್ನು ಹಾಕಿ ತರಿತರಿಯಾಗುವಂತೆ ರುಬ್ಬಿ . ಇದಕ್ಕೆ ಬೇಕಾದಷ್ಟು ಉಪ್ಪು ಬೆರೆಸಿ, ಸಾಸಿವೆಕಾಳು ,ಜೀರಿಗೆ ,ಉದ್ದು ಮತ್ತು ಅರಿಶಿನ ಪುಡಿ ,ಶೇಂಗಾ ಹಾಕಿ  , ಕೊಬ್ಬರಿ ಎಣ್ಣೆಯಲ್ಲಿ ಒಗ್ಗರಣೆ ಮಾಡಿದರೆ ರುಚಿ ರುಚಿಯಾದ ಕುಟ್ಟವಲಕ್ಕಿ ಸವಿಯಲು ಸಿದ್ಧ. 

ಅಪ್ಪ ಹೇಳಿದ ರೀತಿಯಲ್ಲೇ ಕುಟ್ಟವಲಕ್ಕಿ ಮಾಡಿ ರುಚಿಯಾದ ಕುಟ್ಟವಲಕ್ಕಿ ಸವಿಯುವಾಗ ಬಾಲ್ಯದಲ್ಲಿ ಇದರ ಜೊತೆಗೆ ಕಬ್ಬಿನ ಹಾಲು ಸವಿಯುತ್ತಿದ್ದುದು ಬಹಳ ನೆನಪಾಗಿ ಅದೊಂದಿದ್ದಿದ್ದರೆ ಎನಿಸಿದ್ದು ಸುಳ್ಳಲ್ಲ. 

No comments:

Post a Comment