Tuesday 2 February 2021

ಆಪದ್ಭಾಂದವ

 Published in kannada press

 https://www.kannadapress.com/2021/02/02/travel-memories-by-arpita-rao/

ಕೆಲವೊಮ್ಮೆ ದೇವರು ಬಂದಂತೆ ಬಂದು ಕಾಪಾಡಿದ ಎಂಬ ಮಾತಿದೆಯಲ್ಲ . ಅಂತಹ ಅನುಭವ ನಿಮಗಾಗಿದೆಯೇ ? ಅದೂ ಹೆಸರು ಹೇಳಲೂ ಬರದಂತ ದೇಶದಲ್ಲಿ ಹೋಗಿ ಸಿಕ್ಕಿಕೊಂಡಾಗ ಇಂತಹದೊಂದು ಅನುಭವ ಎಂದರೆ ನಿಜಕ್ಕೂ ಅದ್ಬುತ ಅನುಭವವೇ ಸರಿ .

 

ಈಗ ಮೂರು  ವರ್ಷದ ಹಿಂದಿನ ಕಾಲ . ಆಗ ಹೀಗೆಲ್ಲ ಕರೋನ ಎಂಬ ಭಯವಿರಲಿಲ್ಲ . ಸಿಕ್ಕ ಸಿಕ್ಕವರನ್ನೆಲ್ಲ ಮಾತನಾಡಿಸಬಹುದಿತ್ತು . ಅದಲ್ಲದಿದ್ದರೆ ಕೊನೆಪಕ್ಷ ಒಂದು ನಗು ಆದರೂ ಕಾಣಿಸುತಿತ್ತು . ಈಗ ಹಾಗಿಲ್ಲ ಹೊರಗೆ ಹೋಗುವಂತಿಲ್ಲ . ಹೋದರೂ ಯಾರನೂ ಮಾತನಾಡಿಸುವಂತಿಲ್ಲ . ಟ್ರಿಪ್ ಹೋಗಬೇಕೆಂದರೆ ಮಾಸ್ಕ ನಿಂದ ಹಿಡಿದು ಎಲ್ಲವನ್ನೂ ಹಾಕಿಕೊಂಡು ಹೋಗಬೇಕು .

 

ಹೀಗೆ ಮೂರು  ವರ್ಷದ ಹಿಂದೆ ಕೆನರಿ ಐಲ್ಯಾನ್ಡ್ ಎಂಬಲ್ಲಿಗೆ ಪ್ರವಾಸ ಹೋಗಿದ್ದೆವು . ಹೊಸ ಪ್ರದೇಶಕ್ಕೆ ಪ್ರವಾಸಕ್ಕೆ ಹೋದಾಗ ಪ್ರವಾಸದ ಮಜಾದ ಜೊತೆಗೆ ಕೆಲವೊಮ್ಮೆ ಪಜೀತಿ ಆಗುವುದೂ ಕೂಡ ಉಂಟು . ಹಾಗೆ ಸುತ್ತಲು ಹೋದಾಗ ಕೈಯಲ್ಲಿದ್ದ ಮಗನಿಗಿನ್ನೂ ಎರಡು ವರ್ಷವಾಗಿತ್ತು . ಬೆಳಗ್ಗೆ ಸುಮಾರು ಹತ್ತುಗಂಟೆಗೆಲ್ಲ ನಾವಿದ್ದ ಕಾಟೇಜ್ ನಿಂದ ಹೊರಟು ಸುತ್ತಲಿನ ಪ್ರವಾಸಿ ತಾಣಗಳನ್ನು ನೋಡಲು ಹೊರಟೆವು . ನಾವಿದ್ದ ಕಾಟೇಜಿನಿಂದ ಸುಮಾರು ನಾಲ್ಕು ತಾಸು ಪ್ರಯಾಣ ಮಾಡಿ ಅಲ್ಲಿನ ಬೀಚ್ ಮತ್ತಿತರ ತಾಣಗಳನ್ನು ನೋಡಿ ಬಸ್ ನಲ್ಲಿ ಹಿಂತಿರುಗುತ್ತಿದ್ದೆವು. ಇನ್ನೂ ಸಂಜೆಯ ನಾಲ್ಕು ಗಂಟೆಯಾಗಿದ್ದರಿಂದ ಅಲ್ಲೇ ಇರುವ ಪಾಪಾಸು ಕಳ್ಳಿಯ ಗಾರ್ಡನ್ ನೋಡಿಕೊಂಡು ಹೋಗಬಹುದು ಎಂದು ಒಂದು ಹೆಸರು ಗೊತ್ತಿಲ್ಲದ ಕಡೆ ಇಳಿದುಕೊಂಡು ಹೋಗಿ ನೋಡಿದರೆ ಗಾರ್ಡನ್ ಕ್ಲೋಸ್ ಆಗಿತ್ತು . ಅಲ್ಲೇ ಸುತ್ತಲೂ ತಿರುಗಿ ಹೇಗೆ ಒಂದು ಗಂಟೆ ಕಳೆದವು . ನಂತರ ಬಸ್ಸನ್ನು ಹತ್ತಿ ಮತ್ತೆ ನಾವಿರುವಲ್ಲಿಗೆ ಹೋಗೋಣ ಎಂದು ಬಸ್ ಗಾಗಿ ಕಾಯುತ್ತಾ ನಿಂತೆವು . ಹಾಗೆ ನಾವು ನಿಂತು ಸುಮಾರು ಒಂದು ತಾಸಾಯಿತು ಕತ್ತಲೂ ಆವರಿಸುತ್ತಲೇ ಇತ್ತು . ಕತ್ತಲಾಗುತ್ತಿದ್ದಂತೆ ತಣ್ಣಗೆ ಕೊರೆಯುವ ಚಳಿ . ತಡೆಯಲಾಗದಂತೆ ನಡುಗುತ್ತ ಬಸ್ಸಿಗಾಗಿ ಕಾಯುತ್ತಾ ಬೇಸತ್ತಿದ್ದೆವು . ಹತ್ತಿರದಲ್ಲೆಲ್ಲಾದರೂ ಕ್ಯಾಬ್ ಸಿಗಬಹುದೇನೋ ಎಂದು ಕೇಳೋಣವೆಂದರೆ ಯಾರಿಗೂ ಇಂಗ್ಲಿಷ್ ಬರುತ್ತಿರಲಿಲ್ಲ . ಸ್ಪ್ಯಾನಿಷ್ ಭಾಷೆಯ ಒಂದೆರಡು ಶಬ್ದ ಬಿಟ್ಟರೆ ನಮಗೆ ಬೇರೆ ಸಂವಹನೆ ಗೊತ್ತಿರಲಿಲ್ಲ .  ಹಾಗೆ ಬೀಸುತ್ತಿದ್ದ ತಣ್ಣನೆಯ ಕೊರೆಯುವ ಚಳಿಗೆ ಮಗನಿಗೆ ಮೈ ಸುಡಲು ಪ್ರಾರಂಭವಾಗಿತ್ತು . ಒಂದೇ ಸಮನೆ ಅಳಲು ಪ್ರಾರಂಭಿಸಿದ್ದ . ನಮ್ಮ ಹತ್ತಿರ ಕೈಯಲ್ಲಿ ಹೊಚ್ಚಲು ಒಂದು ಹೊದಿಕೆ ಅಥವಾ ಸ್ವೇಟರ್ ಏನೂ ಇಲ್ಲದ ಪರಿಸ್ಥಿತಿ .

 

ಹಾಗೆ ಕ್ಯಾಬ್ ಕೂಡ ಇಲ್ಲದೆ ಕಾಯುತ್ತಾ ಕುಳಿತುಕೊಳ್ಳಲು ಸ್ಥಳವೂ ಇಲ್ಲದ ಪರಿಸ್ಥಿತಿಯಲ್ಲಿದ್ದಾಗ ಇದ್ದಕ್ಕಿದ್ದಂತೆ ಅಲ್ಲಿಗೊಂದು ಅಜ್ಜಿ ಬಂದರು . ಆಕೆಗೆ ಏನಿಲ್ಲವೆಂದರೂ ಎಪ್ಪತ್ತರ ಮೇಲೆ ವಯಸಾಗಿತ್ತು. ನಮ್ಮಂತೆ ಇನ್ನೂ ಎರೆಡು ಮೂರೂ  ಜನ ಅಲ್ಲಿ ಬಸ್ಸಿಗಾಗಿ ಕಾಯುತ್ತಿದ್ದರು . ಆ ಅಜ್ಜಿ ಅಲ್ಲಿ ಬಂದವರೇ ನಮ್ಮ ಪರದಾಟ ನೋಡಿ ತಮ್ಮ ಕೈಯಲ್ಲಿದ್ದ ಶಾಲ್ ಒಂದನ್ನು ತೆಗೆದು ಬೇಡವೆಂದರೂ ಕೇಳದೆ ಮಗನಿಗೆ ಹೊಚ್ಚಿಸಿಕೊಳ್ಳಲು ಕೊಟ್ಟರು . ಹಾಗೆಯೇ ಬಸ್ ನಿಲ್ದಾಣದ ಹಿಂದೆಯೇ ಇದ್ದ ಪಾಪಾಸು ಕಳ್ಳಿಗಳ ಗಿಡಗಳ ನಡುವೆ ನಿಲ್ಲುವಂತೆಯೂ ಹಾಗೆ ನಿಂತಲ್ಲಿ ಸ್ವಲ್ಪ ಬೆಚ್ಚಗಾಗುತ್ತದೆ ಎಂದು ತಮ್ಮ ಸ್ಪ್ಯಾನಿಷ್ ಭಾಷೆಯಲ್ಲಿ ಹೇಳಿ, ನಿಂತು ಹೀಗೆ ಇಲ್ಲಿ ಬನ್ನಿ ಎಂದು ತೋರಿಸಿದರು . ಅವರು ಹೇಳಿದಂತೆ ಹೋಗಿ ನಿಂತಾಗ ಕೊರೆಯುವ ಚಳಿ ಮೈಗೆ ಅಟ್ಟುವುದು ತಪ್ಪಿತು . ಹೀಗೆ ಆಪದ್ಭಾಂದವರಂತೆ ಆ ದಿನ ಬಂದು ನಮಗೆ ಸಹಾಯ ಮಾಡಿದ ಆ ಅಜ್ಜಿ ಭಾಷೆಯ ಕೊರತೆಯ ನಡುವೆಯೂ ನಮಗೆ ದೇವರಂತೆ ಕಂಡಿದ್ದು ನಿಜ . ಹಾಗೆ ಕಾಯುತ್ತಾ ಸುಮಾರು ನಾಲ್ಕು ತಾಸಿನ ನಂತರ ಬಸ್ ಬಂತು . ನಾವು ಕಾಟೇಜ್ ಸೇರಿದೆವು ಎಂಬುದನ್ನು ಮರೆಯಲೂ ಸಾಧ್ಯವಿಲ್ಲ . ನಾವು ಬಂದ ಬಸ್ಸಿಗೆ ನಮ್ಮೊಡನೆ ಬಂದ ಅಜ್ಜಿ ಹಸನ್ಮುಖಿಯಾಗಿ ನಮ್ಮ ಮುಂದಿನ ಪ್ರಯಾಣ ಶುಭಕರವಾಗಿರಲೆಂದು ಕೈ ಮಾಡಿ ಹೇಳಿದರು . ಭಾಷೆ ಗೊತ್ತಿಲ್ಲದಿದ್ದರೂ ಅವರು ಹೇಳಿದ ರೀತಿಯಿಂದ ಅವರ ಹಾರೈಕೆಯ ಅರಿವಾಗಿತ್ತು . ಗುರುತು ಪರಿಚಯವೇ ಇಲ್ಲದ ಇಂತಹ ಸಂದರ್ಭದಲ್ಲಿ ನಮ್ಮ ನೆರೆವಿಗೆ ಬಂದ  ಅಜ್ಜಿ ಪ್ರತಿದಿನ ನೆನಪಿನಲ್ಲಿರುತ್ತಾರೆ.


Arpitha Rao

Banbury

England 

No comments:

Post a Comment