Monday 15 February 2021

ಬಾಲ್ಯ

ಸುಮಾರು ಇಪ್ಪತ್ತು ವರ್ಷಗಳ ಹಿಂದಿನ ಕಾಲವದು.  ಹಳ್ಳಿಗಳಲ್ಲಿ ಫ್ರಿಡ್ಜ್ , ವಾಷಿಂಗ್ ಮಷಿನ್ ಗಳ ಹಾವಳಿಯಿಲ್ಲದ ದಿನಗಳು. ನಮ್ಮ ಬಾಲ್ಯದ ದಿನಗಳವು. ಅಷ್ಟೇ ಏಕೆ ಕೆಲವೊಮ್ಮೆ ಸರಿಯಾಗಿ ಎಲೆಟ್ರಿಸಿಟಿ ಕೂಡ ಇಲ್ಲದೆ ಸಣ್ಣ ದೀಪದಲ್ಲಿ ರಾತ್ರಿ ಕಳೆಯುವುದೋ ಅಥವಾ ಹೋಂ ವರ್ಕ್ ಮುಗಿಸುವುದೋ ಮಾಡಿದಂತ ಕಾಲ ಅದಾಗಿತ್ತು. ರಾತ್ರಿ ಸರಿಯಾಗಿ ಊಟದ ಸಮಯಕ್ಕೆ ಮಾಡುತ್ತಿದ್ದ ಪವರ್ ಕಟ್. ಅದಕ್ಕಾಗಿ ಅಮ್ಮ ಬೈಯುತ್ತಾ ಹೊರ ತೆಗೆಯುತ್ತಿದ್ದ ಲಾಟೀನು. ಆಗ ಅದೇ ನಮಗೆ ಕ್ಯಾಂಡಲ್ ಲೈಟ್ ಡಿನ್ನರ್. ನಗು ಹರಟೆ ಅದೆಲ್ಲ ಈಗ ಒಂದು ನೆನಪು ಮಾತ್ರ. ಈಗ ಪ್ರತಿ ಮನೆಯಲ್ಲೂ ಇಂವೋರ್ಟರ್ ಬಂದು ಸದಾ ಕಾಲ ಟಿವಿ . ಹಾಗೆಯೇ ಬೆಳಕಿನ ಜಗಮಗ.

ಅದು ತೊಂಬತ್ತರ ದಶಕ . ಆಗೆಲ್ಲ ಹಳ್ಳಿ ಮನೆಗಳಲ್ಲಿ ಒಟ್ಟು ಕುಟುಂಬ . ಮನೆಯಲ್ಲಿ ಕನಿಷ್ಠ ಹದಿನೈದು ಇಪ್ಪತ್ತು ಜನರಿರುತ್ತಿದ್ದರು. ನಾವು ಚಿಕ್ಕವರಿರುವಾಗ ಹಳ್ಳಿಗಳಲ್ಲಿನ್ನೂ ಫ್ರಿಡ್ಜ್ ಬಂದಿರಲಿಲ್ಲ. ಮನೆಯಿಂದ ಪ್ರತಿದಿನ ತರಕಾರಿ ತರಲು ದೂರದ ಪೇಟೆಗೆ ಹೋಗುವುದೂ ಬಹಳ ಅಪರೂಪವಾಗಿತ್ತು. ಹಾಗೊಮ್ಮೆ ಪೇಟೆಗೆ ಹೋದಾಗ ತರುವ ತರಕಾರಿ ಹದಿನೈದು ಇಪ್ಪತ್ತು ಮಂದಿ ಇರುವ ಮನೆಯಲ್ಲಿ ಒಮ್ಮೆ ಸಾಂಬಾರು ಮಾಡಿದರೆ ಖಾಲಿ ಆಗಿಬಿಡುತ್ತಿತ್ತು. ಅದಕ್ಕಾಗಿಯೇ ಮನೆಯ ಹಿತ್ತಲಲ್ಲೇ ಸಾಕಷ್ಟು ತರಕಾರಿಗಳು ಆ ಕಾಲಮಾನಕ್ಕೆ ಸರಿಯಾಗಿ ಬೆಳೆಯಲಾಗುತ್ತಿತ್ತು.ಮಳೆಗಾಲ ಮುಗಿಯುತ್ತಿದ್ದಂತೇ ಚಪ್ಪರದವರೆ, ಸೌತೆಕಾಯಿ , ಹಾಗಲಕಾಯಿ , ಬೆಂಡೆ ಕಾಯಿ , ಚೀನೀ ಕಾಯಿ ಹೀಗೆ ಚಪ್ಪರ ಹಾಕಿ ಎಲ್ಲ ಬಳ್ಳಿ ಹಬ್ಬಿಸಿ ಕಾಯಿ ಬೆಳೆಸಿ ಅದನ್ನೇ ಬಳಸಿ ಪ್ರತಿದಿನ ರುಚಿರುಚಿಯಾದ ಖಾದ್ಯ ತಯಾರಾಗುತ್ತಿತ್ತು. ಇನ್ನು ಏನೂ ಇಲ್ಲದಿದ್ದರೂ ಸದಾಕಾಲ ತೋಟದ ತೆಂಗಿನ ಮರದಲ್ಲಿ ಮನೆಗೆ ಸಾಕಾಗುವಷ್ಟು ತೆಂಗಿನ ಕಾಯಿ ಹಾಗೆಯೇ  ಮನೆಯ ಎದುರು ಹರಿವೆ ಸೊಪ್ಪು , ಎಲವರಿಗೆ ಸೊಪ್ಪು , ಕಾಕಿ ಸೊಪ್ಪು , ಚಕ್ರಮುನಿ ಸೊಪ್ಪು , ದಂಟಿನಸೊಪ್ಪು ,ಒಂದೆಲಗ (ಬ್ರಾಹ್ಮೀ ) ಉತ್ತರಣೆ ಹೀಗೆ ಸಾಕು ಬೇಕೆನ್ನುವಷ್ಟು ಸೊಪ್ಪುಗಳಂತೂ ದಿನಕ್ಕೊಂದು ಇರುತ್ತಿತ್ತು. ಯಾವುದೇ ರೀತಿಯ ಔಷಧಿ ಸಿಂಪಡಿಸದ ಸಾವಯುವ ಸೊಪ್ಪು ತರಕಾರಿಗಳನ್ನು ತಿನ್ನುತ್ತಿದ್ದ ನಾವೇ ಅದೃಷ್ಟವಂತರು ಎಂಬುದು ಈಗ ತಿಳಿಯುತ್ತಿದೆ. 
ಹಾಗೆ ಕೆಲವೊಮ್ಮೆ ಎಲ್ಲಾ ತರಕಾರಿಗಳು ಒಂದೇ ಬಾರಿ ಬೆಳೆದಾಗ ಬೇಗ ಹಾಳಾಗುವ ಅಂದರೆ ಹೆಚ್ಚು ದಿನ ಇಡಲಾಗದ ತರಕಾರಿಗಳನ್ನು ಮೊದಲು ಅಡುಗೆಗೆ ಉಪಯೋಗಿಸಿ ಇಳಿದವನ್ನೆಲ್ಲ ಶೇಖರಿಸಿಡುತ್ತಿದ್ದರು.ಬೀಟ್ರೂಟ್ ಮತ್ತು ಆಲೂಗಡ್ಡೆಯನ್ನು ಮರಳಿನಲ್ಲಿ ಹುದುಗಿಸಿ ಇಡಲಾಗುತ್ತಿತ್ತು ಹಾಗೆ ಮರಳಿನ ಅಡಿಯಲ್ಲಿಟ್ಟ ಗಡ್ಡೆಗಳು ತಿಂಗಳು ಕಳೆದರೂ ಹಾಳಾಗದೇ ಇರುತ್ತಿದ್ದವು ಮತ್ತು ಬೇಕಾದಾಗ ಬೇಕಾದಷ್ಟನ್ನೇ ಹುಡುಕಿ ತಂದು ಅಡುಗೆ ಮಾಡಬಹುದಿತ್ತು . ಗಡ್ಡೆಗಳನ್ನು ಕೊಳೆಯದಂತೆ ಫ್ರಿಡ್ಜ್ ನಂತೆಯೇ ಅದು ಕಾಪಾಡುತ್ತಿತ್ತು. ಜೊತೆಗೆ ಮನೆಯಲ್ಲಿಯೇ ಬೆಳೆದ ಎಲೆ ಅಡಿಕೆಗೆ ಬಳಸುವ ಎಲೆ ಮತ್ತು ನಿಂಬೆಹಣ್ಣುಗಳನ್ನು ಬಟ್ಟೆಯಲ್ಲಿ ಕಟ್ಟಿ ಬಾವಿಯಲ್ಲಿ ನೇತು ಹಾಕುತ್ತಿದ್ದರು. ಅದು ಕೂಡ ತಣ್ಣಗೆ ಫ್ರಿಡ್ಜ್ ನಂತೆಯೇ ಇರುತ್ತಿದ್ದ ನೀರಿರುವ ಬಾವಿಯಲ್ಲಿ ತಿಂಗಳುಗಳವರೆಗೆ ಕೆಡದೇ ಉಳಿಯುತ್ತಿತ್ತು ಮತ್ತು ತಾಜಾವಾಗಿಯೂ ಇರುತ್ತಿತ್ತು.
ಈಗ ಹಳ್ಳಿ ಮನೆಗಳಲ್ಲಿಯೂ ಫ್ರಿಡ್ಜ್ , ಟಿವಿ , ಇಂವೊರ್ಟರ್ , ಫ್ಯಾನ್ , ಕಾರು  ಅದಿಲ್ಲದಿದ್ದರೆ ಬೈಕ್ ಪ್ರತಿಯೊಬ್ಬರ ಮನೆಯಲ್ಲಿಯೂ ಇದೆ ಮತ್ತು ತರಕಾರಿಗಳನ್ನು ಪೇಟೆಗೆ ಹೋಗಿ ತಂದು ವಾರಗಟ್ಟಲೆ ಫ್ರಿಡ್ಜ್ ನಲ್ಲಿರಿಸಿ ಬಳಸುತ್ತಿದ್ದಾರೆ.  ಕಾಲ ಬದಲಾದಂತೆ ಅವಕಾಶಗಳು ಹೆಚ್ಚಿದಂತೆ ಅನುಕೂಲಗಳೂ ಬದಲಾಗುತ್ತಾ ಬರುತ್ತಿದೆ .
Arpitha RaoBanbury

No comments:

Post a Comment