Wednesday 30 May 2012

ಏಕಾಂಗಿ



ಭಾರತದಲ್ಲಿದ್ದಾಗ ಕೇಳಿದ್ದೆ ಪಾಶ್ಚಾತ್ಯ ದೇಶಗಳಲ್ಲಿ ಮಕ್ಕಳು ಹದಿನೆಂಟು ದಾಟಿದ ನಂತರ ಜೊತೆಗೆ ಇರುವಂತಿಲ್ಲ ಎಂದು. ಲಂಡನ್ ಗೆ  ಬಂದ ಮೇಲೆ ತಿಳಿಯಿತು ಕೆಲವರು ಜೊತೆಗಿಲ್ಲದಿದ್ದರು ಮಕ್ಕಳು ಕೂಡ ತಪ್ಪದೆ ಸಂಭಂದವನ್ನು ಉಳಿಸಿಕೊಂಡಿರುತ್ತಾರೆ. ಅವರಲ್ಲೂ ಅತಿ ಹೆಚ್ಚು ಪ್ರೀತಿ ಕಾಳಜಿಗಳು ಇರುತ್ತವೆ ಎಂಬುದು. ಆದರೆ ಕೆಲವೊಂದು ಕುಟುಂಬದಲ್ಲಿ ಮಾತ್ರ .
 ಪ್ರತಿ ದಿನ ಸಂಜೆ ೫ ಗಂಟೆಯಾಗುತ್ತಿದ್ದಂತೆ ಎಲ್ಲಿದ್ದರು ಮನೆಯ ಆ ಕಿಟಕಿಯ ಬಳಿ ನಿಂತು ನೋಡುತ್ತಿರುತ್ತಿದ್ದೆ. ಸುಮಾರು ೧ ವರ್ಷದಿಂದ ಹೆಚ್ಚು ಕಡಿಮೆ ಒಂದು ದಿನವು ಮಿಸ್ ಮಾಡಿಕೊಂಡಿಲ್ಲವೆನ್ನಬಹುದು.ಕಣ್ಣಲ್ಲೊಂದು ನಿರೀಕ್ಷೆ . ಇವತ್ತು ಇನ್ನು ಬಂದೆ ಇಲ್ಲವಲ್ಲ ಮೊದಲೇ ಹೋಗಿಬಿಟ್ಟರ ಎಂಬ ಆತಂಕ. ನಾನು ಹೇಳಹೊರಟಿರುವುದು ನಮ್ಮ ಮನೆಯಿಂದ  ೧ ಮಾರು ದೂರದ ಮನೆಯಲ್ಲಿರುವ  ವೃದ್ಧ ದಂಪತಿಗಳ ಬಗ್ಗೆ. ಪ್ರತಿ ದಿನ ನಮ್ಮ ಮನೆಯ ಹತ್ತಿರದಿಂದ ಸರಿಯಾಗಿ ೫ ಗಂಟೆಗೆ ಒಂದು ವೃದ್ಧ ದಂಪತಿಗಳು ಜೊತೆಗೂಡಿ ನಡೆದುಕೊಂಡು ಹೋಗುತ್ತಿದ್ದರು . ಅಜ್ಜನಿಗೆ ಸುಮಾರು ೮೦ ವರ್ಷವಂತೂ ಆಗಿರಬಹುದು ಆತ ನಡೆಯಲಾರದ ಸ್ಥಿತಿ . ಇಲ್ಲಿ ವೃದ್ಧರಿಗಾಗಿ ಸಿಗುವ ತಳ್ಳು ಗಾಡಿಯಲ್ಲಿ ಅಜ್ಜಿ ತಳ್ಳಿಕೊಂಡು ಹೋಗುತ್ತಿದ್ದರು .ವಯಸ್ಸಾದ ಬಳಿಕ ನೋಡಿಕೊಳ್ಳಲು ಜೊತೆಯಲ್ಲಿ ಯಾರು ಇಲ್ಲದೆ ಅಜ್ಜ ಅಜ್ಜಿ ಇಬ್ಬರೇ ಇದ್ದರೆನ್ನುವುದು ನನ್ನ ಊಹೆ . ಪ್ರತಿದಿನ ೫ ಗಂಟೆ ಅವರ ವಾಕಿಂಗ್ ನ ಸಮಯ . ೫ ಗಂಟೆಗೆ ಹೊರಟರೆ ಮತ್ತೆ ಬರುವುದು ೭.೩೦ ರ ಸಮಯಕ್ಕೆ . ಹೋಗುವಾಗ ತಳ್ಳು ಗಾಡಿಯಲ್ಲಿ ಅಜ್ಜನನ್ನು ಕುಳ್ಳಿರಿಸಿಕೊಂಡು ತಳ್ಳುತ್ತ ಹೋಗುವ ಅಜ್ಜಿ ಬರುವಾಗ ಆತನ ಕೈ ಹಿಡಿದು ಒಂದೊಂದೇ ಹೆಜ್ಜೆ ನಡೆಸಿಕೊಂಡು ಬರುತ್ತಿದ್ದರು ಜೊತೆಗೆ ಇನ್ನೊಂದು ಕೈಯಲ್ಲಿ ಗಾಡಿಯನ್ನು ತಳ್ಳುತ್ತಿರುತ್ತಾರೆ ಗಾಡಿಯ ಒಳಗೆ ತರಕಾರಿಗಳ ಚೀಲ . ಅವರ ಆ ಸ್ಥಿತಿಯಲ್ಲಿ ನೋಡಿದರೆ ಎಂತವರಿಗೂ ಹೃದಯ ನೋವಾಗದಿರದು . 
ಒಂದು ದಿನ ಆ ದಂಪತಿಗಳನ್ನು ನೋಡದಿದ್ದರೆ ಏನೋ ಒಂದು ರೀತಿ ಕಳೆದುಕೊಂಡಂತೆ ಮರುದಿನ ನೋಡುವ ವರೆಗೂ ಅವರಿಬ್ಬರೂ ಬಂದಿದ್ದರೋ ಇಲ್ಲವೋ ಎಂಬ ಆತಂಕ . ವಾಕಿಂಗ್ ಬಂದಿದ್ದಾರೆಂದರೆ ಅವರು ಕ್ಷೇಮವಾಗಿ   ಇದ್ದಾರೆ ಎಂದು ಮನಸ್ಸಿಗೆ ನಿಶ್ಚಿಂತೆ. ತಂದೆ  ತಾಯಿ ಮಕ್ಕಳಿಗೋಸ್ಕರ ಎಷ್ಟೊಂದು ಹೆಣಗಾಡುತ್ತಾರೆ ಮಾಡುವುದೆಲ್ಲ ಮಕ್ಕಳಿಗೋಸ್ಕರವೇ ಆದರೆ ಅವರ ಅತಿ ಮುಪ್ಪಿನ ಕಾಲದಲ್ಲಿ ಜೊತೆಗಿರಬೇಕಾದ ಮಕ್ಕಳಿಗೆ ತಂದೆ ತಾಯಿ  ಹೊರೆಯಾದಂತೆ ವರ್ತಿಸುತ್ತಾರೆ. ಇಲ್ಲಿ ಅಂತವರಿಗೊಸ್ಕರವೇ ವೃದ್ಧಾಶ್ರಮಗಳ ಸಂಖ್ಯೆ ದೊಡ್ಡದಿದೆ .ಆದರೆ ಗಂಡ ಹೆಂಡತಿ ಇಬ್ಬರು ಜೊತೆಗಿರುವ ಅವಕಾಶ ಇಲ್ಲದಿದರಿಂದಲೋ ಏನೋ ಇವರಿಬ್ಬರು ತಮ್ಮದೇ ಮನೆಯಲ್ಲಿದ್ದಾರೆ . ಪ್ರತಿದಿನ ಅವರು ಮಾತನಾಡುತ್ತಾ ನಗುತ್ತ ಜೊತೆ ಹೋಗುವಾಗ ಮನದೊಳಗೆ ಎಷ್ಟೊಂದು ನೋವಿರಬಹುದು ಎಂದೆನಿಸುತ್ತದೆ .
 ನನ್ನ ಆತ್ಮೀಯ ಗೆಳತಿಯ ಜೊತೆ ಅವರ ಬಗ್ಗೆ ಹೇಳಿಕೊಂಡಿದ್ದೆ  ಎಷ್ಟೋ ಭಾರಿ ಇಬ್ಬರು ಜೊತೆ ಕುಳಿತು ಅವರನ್ನು ನೋಡುವುದಕ್ಕೊಸ್ಕರವೇ ಕಾಯುತ್ತ ಕುಳಿತ್ತದ್ದು ಇದೆ . ಅವರ ಬಗ್ಗೆಯೇ ಮಾತನಾಡುತ್ತ ಸಮಯ ಕಳೆದದ್ದು ಇದೆ . ಆದರೆ ಈಗೊಂದು ತಿಂಗಳಿನಿಂದ  ಆ  ದಂಪತಿಗಳು ಇತ್ತ ಸುಳಿಯುತ್ತಲೇ ಇರಲಿಲ್ಲ  ಸಂಜೆ ಅದೇ ಸಮಯಗಳಲ್ಲಿ ಕಾದರು ಒಂದು ದಿನವು ಕಾಣಿಸಿಕೊಂಡಿಲ್ಲ . ಅವರ ಮನೆಯೆದುರು ಹಾದು ಹೋಗುವಾಗಲೆಲ್ಲ ಎಲ್ಲಾದರು ಕಾಣಬಹುದು ಎಂದೆನಿಸಿ ನೋಡುತ್ತಿದ್ದೆ.  ವಯಸ್ಸಾದ ನಂತರ ಜೊತೆಗೆ ನೋಡಿಕೊಳ್ಳಲು ಯಾರು ಇಲ್ಲದಿದ್ದರೆ ಎಷ್ಟೊಂದು ಕಷ್ಟ .ಏನಾಯಿತೆಂದು ಯಾರು ವಿಚಾರಿಸುವವರಿರುವುದಿಲ್ಲ. ಪ್ರತಿದಿನ ದೂರದಿಂದ ನೋಡುತ್ತಿದ್ದೆನಾದರು ಏನೋ ಒಂದು ರೀತಿಯ ಭಾವನಾತ್ಮಕ ಸಂಭಂದ ಜೊತೆಗಿದ್ದಂತಿತ್ತು. 
ಈಗ ಒಂದು ವಾರದಿಂದ ಪ್ರತಿದಿನ ಅಜ್ಜಿ ಮಾತ್ರ ನಡೆದುಕೊಂಡು ಹೋಗಿ ತರಕಾರಿ ತರುತ್ತಾರೆ. ಜೊತೆಗೆ ಸಾಥ್ ನೀಡುತ್ತಿದ್ದ ಅಜ್ಜ ಬರುತ್ತಿಲ್ಲ .ಅಜ್ಜಿ ಈಗ ಏಕಾಂಗಿ .ಏಕೋ ಏನೋ ಗೊತ್ತಿಲ್ಲ ಅಜ್ಜಿಯೊಬ್ಬಳನ್ನೇ ನೋಡಿ  ನೋಡಿದರೆ ಕಣ್ಣಲ್ಲಿ ನೀರು ತುಂಬುತ್ತದೆ.


ಅರ್ಪಿತಾ ಹರ್ಷ 

ಈ ನನ್ನ ಲೇಖನವು ಅವಧಿ ಮ್ಯಾಗಜಿನ್ ನಲ್ಲಿ ಪ್ರಕಟಗೊಂಡಿದೆ . http://avadhimag.com/?p=54443

No comments:

Post a Comment