Monday 13 May 2013

ಇಂಗ್ಲೆಂಡ್ ನಲ್ಲೀಗ ಸ್ಪ್ರಿಂಗ್(ಹೂವುಗಳ ) ಕಾಲ

Published in Udayavani (AVALU suppliment ) 15/05/2013

ಹೇಳಿ ಕೇಳಿ ಇದು ಮೇ ತಿಂಗಳು . ಇಂಗ್ಲೆಂಡ್ ನಂತ ದೇಶಕ್ಕೆ ಲವಲವಿಕೆಯ ಕಾಲವಿದು . ಅಂತು ಎಲ್ಲರು ಕಾಯುತ್ತಿರುವ ಸ್ಪ್ರಿಂಗ್ ಕಾಲ ಬಂದುಬಿಟ್ಟಿತು ಎಂಬುದು ಸಂತಸದ ವಿಷಯ . ಇಷ್ಟು ಸಂತೋಷಕ್ಕೆ ಕಾರಣ ಏನೆಂದರೆ ಅಕ್ಟೋಬರ್ ತಿಂಗಳಿಗೆ ನಿಧಾನವಾಗಿ ಪ್ರಾರಂಭವಾದ ಚಳಿ, ದಿನಗಳು ಕಳೆದಂತೆ ಕೆಟ್ಟ ಚಳಿ ಯಾಗಿ ಪರಿಣಮಿಸಿ ಜನವರಿ ತಿಂಗಳು ಬರುವಷ್ಟರಲ್ಲಿ ಕೊರೆಯಲು ಪ್ರಾರಂಭಿಸಿ ಮಧ್ಯದಲ್ಲಿ ಹಿಮ ಕೂಡ ಬಿದ್ದು ಎಲ್ಲರನ್ನು ತಬ್ಬಿಬ್ಬು ಗೊಳಿಸಿಬಿದುತ್ತದೆ ಇಲ್ಲಿನ ಚಳಿ . 
ಸುಮಾರು -೮ ರವರೆಗೆ ಹೋಗುವ ಈ ಚಳಿಗೆ ಹೊರಗೆ ಕಾಲಿಡುವಾಗ ಫುಲ್ ಪ್ಯಾಕ್ ಆಗಿರಲೇಬೇಕು . ಇನ್ನು ಪ್ರತಿದಿನ ಆಫೀಸ್ ಗೆ ಹೋಗುವವರ ಗೋಳು ಕೇಳ ಕೂಡದು ಅಷ್ಟು ಭಯಾನಕವಾಗಿರುತ್ತದೆ. ಬೆಳಿಗ್ಗೆ ೬ ಗಂಟೆಗೆ ಎದ್ದು ತಿಂಡಿ ಮತ್ತು ಮಧ್ಯಾನ್ಹ ಬಾಕ್ಸ್ ಗೆ ಲಂಚ್ ತಯಾರು ಮಾಡುವಷ್ಟರಲ್ಲಿ ಸಾಕುಸಾಕು ಈ ದೇಶ ಹೊರಟುಬಿಡುವ ನಮ್ಮ ತಾಯ್ನಾಡಿಗೆ ಎನಿಸುವುದು ಖಂಡಿತ . ಇಷ್ಟೆಲ್ಲದರ ಜೊತೆಗೆ ಈ ವರ್ಷ ಏಪ್ರಿಲ್ ನಲ್ಲೂ ಕೂಡ ಸ್ನೋ ಫಾಲ್ ಆಗುವುದರ ಜೊತೆಗೆ ನಮ್ಮ ಆತಂಕವನ್ನು ಇನ್ನಷ್ಟು ಹೆಚ್ಚು ಮಾಡಿಬಿಟ್ಟಿತ್ತು . 
ಬಹುಷಃ ಈ ವರ್ಷ ಬಿಸಿಲೇ ಬರುವುದಿಲ್ಲ ಎಂಬ ಭಾವ ಮೂಡಿಬಿಟ್ಟಿತ್ತು . ಸುಮಾರು ೭ ತಿಂಗಳಿನಿಂದ ಕಾಯುತ್ತಿದ್ದ ಸೂರ್ಯನ ಕಿರಣಗಳು ಈಗ ನಿಧಾನವಾಗಿ ಬೀಳುತ್ತಿದೆ . ನಮ್ಮ ಭಾರತದ ಜನರು ೬ ತಿಂಗಳು ಒಳ ಕುಳಿತವರು ಈಗ ಮತ್ತೆ ಹೊರಸುತ್ತಲು ಪ್ರಾರಂಭಿಸಿಯಾಗಿದೆ . ಇನ್ನು ಇಂಗ್ಲೆಂಡ್ ನ ಜನರಿಗೆ ಇಲ್ಲಿನ ಚಳಿಗೆ ಹೊಂದಿಕೊಂಡು ಈಗ ತಾನೇ ಬೀಳುತ್ತಿರುವ ಸೂರ್ಯನ ಹೊOಗಿರನದಿಂದ ವಾತಾವರಣ ೧೫  ಡಿಗ್ರಿ ಗೆ ಬಂದಿರುವುದನ್ನು ಸಹಿಸಲಾಗದೆ ಬೀಚ್ ಗಳನ್ನು ಹುಡುಕಿ ಹೊರಟಿದ್ದಾರೆ . 
ಈ ಮೇ ತಿಂಗಳು ಇಷ್ಟವಾಗುವುದು ಇಲ್ಲಿನ ಗಿಡಮರಗಳ ಚಿಗುರುವಿಕೆಗೆ ಎಲ್ಲಿ ನೋಡಿದರೂ  ಹಚ್ಚ ಹಸಿರು . ಹೊರ ಹೊರಟರೆ ಮರದ ತುಂಬೆಲ್ಲ ತುಬಿರುವ ಹೂವುಗಳು , ಎಲ್ಲರ ಮನೆಯ ಮುಂಬಾಗದ ಗಾರ್ಡನ್ ಗಳಲ್ಲಿ ಕೆಂಪು ,ಹಳದಿ ,ನೇರಳೆ , ಬಿಳಿ ಹೀಗೆ ವಿವಿಧ ಬಣ್ಣದಿಂದ ಕಣ್ಸೆಳೆಯುವ ಹೂವುಗಳು . ಇಲ್ಲಿನ ಹೂವುಗಳು ವಿವಿದ ರೀತಿಯವು . ಇವುಗಳಲ್ಲಿ ಕೆಲವು ರಸ್ತೆಬದಿಗಳಲ್ಲಿ ತನ್ನಿಂದ ತಾನೇ ಹುಟ್ಟಿಕೊಳ್ಳುವುದು . ನೋಡಲು ಆಕರ್ಷಕವಾಗಿರುವ ಹೂವುಗಳು . ಇಲ್ಲಿ ಹೂವುಗಳನ್ನು ಮುಡಿಯಲು ಬಳಸುವುದಿಲ್ಲವಾದ್ದರಿಂದ ಕೇವಲ ಡೆಕೊರೆಶನ್ ಮತ್ತು ಬೊಕೆ ಗಳನ್ನೂ ತಯಾರಿಸಲು ಬಳಸಲಾಗುತ್ತದೆ. 

ಟುಲಿಪ್ : ವಿವಿಧ ಬಣ್ಣದ ಟುಲಿಪ್ ಹೂವುಗಳು ಇಂಗ್ಲೆಂಡ್ ಮತ್ತಿತರ ಪಾಶ್ಚಾತ್ಯ ದೇಶಗಳ ಆಕರ್ಷಣೆಗೆ ಪ್ರಮುಖವಾದ ಹೂವುಗಳು . ಇವುಗಳಲ್ಲಿ ಕೆಂಪು, ಬಿಳಿ , ಹಳದಿ ಇನ್ನಿತರ ಬಣ್ಣಗಳನ್ನು ಕಾಣಬಹುದು . 

ಬ್ಲೂ ಬೆಲ್ : ಇದು ನೇರಳೆ ಬಣ್ಣದ ಹೂವಾಗಿದೆ ಇದನ್ನು ಮುಗಿಯದ ಪ್ರೀತಿಯ ಸಂಕೇತವಾಗಿ ಬಳಸಲಾಗುತ್ತದೆ . ಇದು ಸಣ್ಣ ಗಂಟೆಯ (ಬೆಲ್) ರೂಪದಲ್ಲಿರುವುದರಿನ್ದ ಇದನ್ನು ಬ್ಲೂ ಬೆಲ್ ಎಂದು ಕರೆಯಲಾಗುತ್ತದೆ. ಇದು ಗೊಂಚಲುಗಳ ರೂಪದಲ್ಲಿ ಕಾಣಸಿಗುತ್ತವೆ. 

ಅಡೋನಿಸ್ : ಇದು ಹಳದಿ ಬಣ್ಣದ ಹೂವು ಗಳಾಗಿದ್ದು ಸಾಮಾನ್ಯವಾಗಿ ಏಪ್ರಿಲ್ ಮೇ ತಿಂಗಳಿನಲ್ಲಿ ರಸ್ತೆಯ ಬದಿಗಳಲ್ಲಿ ರಾಶಿ ಗಟ್ಟಲೆ ಹೂವು ಬಿಟ್ಟಿರುವುದನ್ನು ಕಾಣಬಹುದು . 

ಆಲ್ಮಂಡ್ ಬ್ಲಾಸಂಸ್ : ಈ ಹೂವು ಮರದಲ್ಲಿ ಬಿಡುವ ಹೂವಾಗಿದೆ ಇದು ಗುಲಾಬಿ ಮಿಶ್ರಿತ ಬಿಳಿ ಬಣ್ಣದಲ್ಲಿ ಇರುತ್ತದೆ . ಇದು ಕೂಡ ಮೇ ತಿಂಗಳಿನಲ್ಲಿ ಹೂವು ಬಿಟ್ಟು ಇಡೀ  ಮರವನ್ನೇ ಅಲಂಕರಿಸಿರುತ್ತದೆ.ಸಾಮಾನ್ಯವಾಗಿ ಇಲ್ಲಿನ ಎಲ್ಲ  ರಸ್ತೆ ಬದಿಗಳಲ್ಲಿ ಈ ಮರ ಇರುವುದರಿಂದ ಇದು ನೋಡುಗರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗಿದೆ . 

ಬ್ಯಾಚುಲರ್ ಬಟನ್ : ಇದನ್ನು ಕಾರ್ನ್ ಫ್ಲವರ್ ಎಂದು ಕೂಡ ಕರೆಯುತ್ತಾರೆ . ಇದು ನೋಡಲು ನಮ್ಮ ಭಾರತದಲ್ಲಿ ದೊರೆಯುವ ಸೇವಂತಿಗೆ ಹೂವಿನಂತೆ ಇರುತ್ತದೆ. ಇದನ್ನು  ನೀಲಿ , ನೇರಳೆ , ಬಿಳಿ , ಕೆಂಪು ಹೀಗೆ ಬೇರೆಬೇರೆ ಬಣ್ಣಗಳಲ್ಲಿ ಕಾಣಬಹುದು .  

ಧಾಲಿಯ : ನಮ್ಮ ಭಾರತದಲ್ಲಿ ಬೆಳೆಯುವ ಡೇರೆ ಹೂವುಗಳನ್ನು ಇಲ್ಲಿ ಧಾಲಿಯ ಎಂದು ಕರೆಯಲಾಗುತ್ತದೆ. ಇದು ಕೂಡ ಇಂಗ್ಲೆಂಡ್ ನ ಆಕರ್ಷಕ ಹೂವುಗಳಲ್ಲಿ ಒಂದಾಗಿದೆ . 

ಎವರ್ ಲಾಸ್ಟಿಂಗ್ ಫ್ಲವರ್ : ಇದು ಪುಟ್ಟ ಪುಟ್ಟ ಕೆಂಪು ಹೂವುಗಳಾಗಿದ್ದು ನೋಡಲು ಆಕರ್ಷಕವಾಗಿದೆ . ಸಣ್ಣ ಗಿಡದಲ್ಲಿ ಬೆಳೆಯುವ ಈ ಹೂವು ಏಪ್ರಿಲ್ ತಿಂಗಳಿನಲ್ಲಿ ಸರ್ವೇ ಸಾಮಾನ್ಯ . 

ಜೆರ್ಬೇರ : ಇದು ಬೊಕೆ ಗಳನ್ನೂ ಮಾಡಲು ಬಳಸುವ ಮುಖ್ಯ ಹುವುಗಳಲ್ಲಿ ಒಂದಾಗಿದ್ದು ನೋಡಲು ಬಹಳ ಆಕರ್ಶಕವಾಗಿರುತ್ತವೆ. ಸ್ವಲ್ಪ ಮಟ್ಟಿಗೆ ನಮ್ಮ ಸೂರ್ಯಕಾಂತಿ ಹೂವುಗಳನ್ನು ಹೊಲುತ್ತವೆ.  ಇದು ಕೂಡ ಬೇರೆಬೇರೆ ಬಣ್ಣಗಳಲ್ಲಿ ದೊರೆಯುವುದು ಆದರೂ ಕೇಸರಿ, ಹಳದಿ, ಬಿಳಿ, ಮತ್ತು ನೀಲಿ ಬಣ್ಣಗಳು ಹೆಚ್ಚು ಪ್ರಖ್ಯಾತಿ ಹೊಂದಿವೆ . 

ಇದಲ್ಲದೆ ಯಾಪಾಲ್ ಬ್ಲಾಸಂ , ಆಪ್ರಿಕಾಟ್  ಬ್ಲಾಸಂ , ಬಟರ್ ಕಪ್ ,  ಕ್ಯಾಕ್ಟಸ್ , ಕಾರ್ನೆಶನ್  ಹೀಗೆ ಪಟ್ಟಿ ಮಾಡುತ್ತಾ ಹೋದರೆ ಸಾಕಷ್ಟು ಹೊಸ ಹೂವುಗಳಿವೆ .  ಇವುಗಳೆಲ್ಲ ಇಂಗ್ಲೆಂಡ್ ನಲ್ಲಿ ಪ್ರಾರಂಭವಾದ ಈ ಸ್ಪ್ರಿಂಗ್ ನ ಆಕರ್ಷಕ ಅಥಿತಿ ಗಳು . ಇದು ನೋಡುಗರಿಗೆ ಲವಲವಿಕೆ ತರುವುದರಲ್ಲಿ ಯಾವುದೇ ಅನುಮಾನವಿಲ್ಲ . 


ಅರ್ಪಿತಾ ಹರ್ಷ 
ಲಂಡನ್

No comments:

Post a Comment