Friday 5 April 2013

ಹುಚ್ಚಿ ! (ಕಥೆ)


ಮನೆ ಕ್ಲೀನ್ ಮಾಡುತ್ತಾ ಸುಸ್ತಾದ ಅಂಬಿಕ ಗಂಡನೊಡನೆ ಕೂಗುತ್ತಿದ್ದಳು 'ಇಷ್ಟೆಲ್ಲಾ ಮಾಡೋದು ಎಷ್ಟು ಕಷ್ಟ ಗೊತ್ತ ಒಬ್ಬಳೇ ಮಾಡ್ಬೇಕು ಯಾರು ಹೆಲ್ಪ್ ಗೆ ಬರಲ್ಲ ಹೋಗಿ ಹೋಗಿ ಈ ದೊಡ್ಡ ಮನೆಗೆ ಬಂದು ಕುಳಿತಿದ್ದೀರ ಆ ಮನೆಯಿಂದ ಈ ಮನೆಗೆ ಸೇರಿಸೋ ಅಷ್ಟರಲ್ಲಿ ನಾ ಹಾಸ್ಪಿಟಲ್ ಸೇರೋದು ಖಂಡಿತ ' .  ಅದಕ್ಕೆ ಗಣಪತಿ 'ಅಯ್ಯೋ ನೀ ಮೊದಲೇ ಹೇಳಿದ್ರೆ ಬರ್ತಾ ಆ ಪುಷ್ಪ ಳನ್ನಾದ್ರು ಕರ್ಕೊಂಡು ಬರ್ತಿದ್ದೆ'  . ಅಂಬಿಕ ಳ  ಸುಸ್ತೆಲ್ಲ ಒಮ್ಮೆಲೇ ಮಾಯಾವಾಗಿ ಮುಖದಲ್ಲಿ ಚಿಲ್ಲನೆ ಒಂದು ನಗು ಬಂತು . ಅಲ್ಲೇ ಕುಳಿತಿದ್ದ ಸರಳಳಿಗೆ   ಇವರ ಸರಳ ಭಾಷೆ ಒಗಟಂತೆ  ಕಾಣುತ್ತಿತ್ತು . 'ಅತ್ತೆ ಅದು ಯಾರು ಪುಷ್ಪ ಎಂದರೆ?' ಕೇಳಿಯೇ ಬಿಟ್ಟಳು  .' ಅಯ್ಯೋ ಸರಳಾ ನೀ ನೋಡ್ಲಿಲ್ವಾ ಅದೇ ಆ ಹುಚ್ಚಿ ,ಇರು ತೋರಿಸ್ತೀನಿ ಇವತ್ತು ಸಂಜೆ ಪೇಟೆ ಕಡೆ ಹೋದಾಗ' ಎಂದರು ಅತ್ತೆ  . ಸರಳ ಈಗ ಸಂಜೆ ಆಗುವುದನ್ನೇ ಕಾಯುತ್ತಿದ್ದಳು .


ಸಂಜೆ ಎಂದಿನಂತೆ ಪೇಟೆಯ ಕಡೆಗೆ ಹೊರಟಾಗ ಅದೇ ನೋಡು ಅಲ್ಲಿ ಮಾರಮ್ಮನ ಗುಡಿ ಮುಂದೆ ಕುಂತವಳೇ ಆ ಹುಚ್ಚಿ ಪುಷ್ಪ ಎಂದು ಬೇಗ ಬೇಗ ಮುಂದೆ ಹೋಗುತ್ತಿದ್ದರೆ ಸರಳ ಳ   ಕಣ್ಣು ಆ ಪುಷ್ಪಳನ್ನೇ ನೋಡುತ್ತಿತ್ತು . ಹಿಂದೆ ತಿರುಗಿ ತಿರುಗಿ ನೋಡುತ್ತಾ ಹೋದವಳಿಗೆ ಆ ದಿನವೆಲ್ಲ ಅವಳೇ ಕಣ್ಣೆದುರು.  

ಪುಷ್ಪ ಹೆಸರೆಷ್ಟು ಚಂದವಿದೆ .ಹೆತ್ತವರು ಮಗಳ ಬಗ್ಗೆ ಎಷ್ಟು ಕನಸು ಕಂಡಿರಬಹುದು ಆ ಹೆಸರಿಡುವಾಗ ! ಆಕೆ ನೋಡಲೇನು ಹುಚ್ಚಿ ಎನಿಸುವುದಿಲ್ಲ . ಬಣ್ಣ ಸ್ವಲ್ಪ ಕಂದು , ಒಂದು ಪ್ಯಾಂಟ್ ಮತ್ತು ಶರ್ಟ್ ಹಾಕಿಕೊಂಡಿರುತ್ತಾಳೆ ಜೊತೆಗೆ ಬಾಯ್ ಕಟ್ ಬಹುಷಃ ಯಾರೋ ಕನಿಕರದಿಂದ ಅವಳ ಕೂದಲನ್ನು ಕಟ್ ಮಾಡಿ ಸ್ವಲ್ಪ ಸ್ವಚ್ಚವಾಗಿರುವಂತೆ ನೋಡಿಕೊಂಡಿರಬೇಕು . ಆಕೆಯದು ಕರ್ಲಿ ಹೇರ್ ಅಂತಾರಲ್ಲ ಹಾಗೆ . 

ದೇವಸ್ಥಾನದ ಮುಂದೆ ಅವಳ ವಾಸ . ಹಾಗಂತ ರಾತ್ರಿ ೭ ಗಂಟೆಯ ಮೇಲೆ ಆಕೆ ಅಲ್ಲಿ ಕಾಣುವುದೇ ಇಲ್ಲ ಎಲ್ಲಿ ಹೋಗುತ್ತಾಳೆ ಎಂಬುದು ಯಾರಿಗೂ ತಿಳಿಯದ ವಿಷಯ . ಬೆಳಿಗ್ಗೆ ೯ ಗಂಟೆಗೆ ಸರಿಯಾಗಿ ಮಾರಮ್ಮನ ದೇವಸ್ಥಾನದ ಬಾಗಿಲು ತೆಗೆದ ತಕ್ಷಣ ಆಕೆ ಅಲ್ಲಿ ಹಾಜರ್ ಮತ್ತೆ ಸಂಜೆ ೭ ಗಂಟೆಗೆ ಗುಡಿ ಮುಚ್ಚಿದ ಮೇಲೆ ಅಲ್ಲಿಂದ ಆಕೆ ಕದಲುವುದು . ಬಿರುಬಿಸಿಲಿಗೂ ಅಂಜದೆ ಕುಳಿತ ಆಕೆಯನ್ನು ಆ ಮಾರಮ್ಮ ಒಂದು ದಾರಿ ತೋರಿಸಬಾರದೆ?ಎಂದೆನಿಸದೆ ಇರಲಿಲ್ಲ ಸರಳಳಿಗೆ .

ಮೂರು ನಾಲ್ಕು ದಿನಗಳು ಹೀಗೆ ಪೇಟೆ ಗೆ ಹೋಗುವಾಗಲೆಲ್ಲ ಆಕೆಯನ್ನು ನೋಡಿ ಬಂದಾದ ಮೇಲೆ ಮತ್ತೆ ಕೇಳಿದಳು ಅಂಬಿಕಳನ್ನು 'ಅತ್ತೆ  ಆ ಪುಷ್ಪ ಯಾಕೆ ಹಾಗಾಗಿದ್ದು? ಪಾಪ ಅಲ್ವಾ?'

ಹ್ಮ ನನಗೂ  ಸರಿಯಾಗಿ ಗೊತ್ತಿಲ್ಲ ಯಾಕೆ ಎಂದು ಅವರಿವರು ಹೇಳಿದ್ದು ಹೇಳಬಹುದು ಅವಳದೊಂದು ಪ್ರೀತಿಯಲ್ಲಿ ಬಿದ್ದ ಕಥೆ ಒಂದು ಹುಡುಗನನ್ನು ಬಹಳ ಇಷ್ಟ ಪಡುತ್ತಿದ್ದಳಂತೆ ಅವನೂ  ಹಾಗೂ  ಹೀಗೂ ಇವಳನ್ನು ಅವನಿಷ್ಟದಂತೆ ಕುಣಿಸಿ ಕೊನೆಗೆ ಅದ್ಯಾವುದೋ ಒಂದು ಪ್ಯಾಂಟು ಶರ್ಟು ಹಾಕಿರೋ ಹುಡುಗಿ ನಿನಗಿಂತ ಚನ್ನಾಗಿದ್ದಾಳೆ  ಅಂತ ಇವಳನ್ನು ಬಿಟ್ಟು ಅವಳೊಡನೆ ಓಡಿ ಹೋಗಿ ಬಿಟ್ಟನಂತೆ.

 ಅಂದಿನಿಂದ ಈಕೆ  ಮಾರಮ್ಮನ ಗುಡಿಯಲ್ಲಿ ಕೈಮುಗಿದು ಕುಳಿತುಕೊಂಡು ಆತನ ಬರುವಿಕೆ ಗೆ ಕಾಯುತ್ತಿದ್ದಳಂತೆ ದಿನ ಕಳೆದಂತೆ ಅನ್ನ  ನೀರು ಬಿಟ್ಟು ಕುಳಿತ  ಈಕೆಯನ್ನು ಜನ ಹುಚ್ಚಿ ಎನ್ನಲು  ಪ್ರಾರಂಭಿಸಿದರು . ಕೊನೆಗೆ ಅದ್ಯಾರೋ ಅವಳ ಹರಿದ ಬಟ್ಟೆ ನೋಡಲಾಗದೆ ಅವಳಿಗೆ ಹಳೆಯದೊಂದು ಪ್ಯಾಂಟು ಶರ್ಟು ಕೊಟ್ಟರು ಕಾಣುತ್ತೆ ಅವಳು ಅದನ್ನು ಹಾಕಿ ಮಾರಮ್ಮ ಕೊನೆಗೂ ದಯೆ ತೋರಿದಳು ಪ್ಯಾಂಟು ಶರ್ಟು ಹಾಕಿಕೊಂಡೆ ಇನ್ನು ಆ ಹುಡುಗ ಬಂದರೆ ತನ್ನ ಇಷ್ಟಪಡುತ್ತಾನೆ ಎಂದು ಅಲ್ಲೇ ಕಾಯುತ್ತಾ ಕುಳಿತು ಕೊಂಡಿರುತ್ತಾಳೆ  .ಪಾಪ ಆ ಹುಡುಗ ತಿರುಗಿ ಬಂದಿಲ್ಲ ಬಂದರೂ  ಈಕೆಯನ್ನ ಗುರುತಿಸಲಾರ. ಗುರುತಿಸಿದರೂ  ಹುಚ್ಚಿ ಯನ್ನು ಯಾರಾದರೂ  ಕಟ್ಟಿಕೊಳ್ಳಲು ಸಾಧ್ಯವೇ? 

ಸರಳ ಮನಸ್ಸಲ್ಲೇ ಅಂದುಕೊಂಡಳು ಆಕೆ ನೋಡಲು ಹುಚ್ಚಿಯಂತೆ ಕಾಣುವುದಿಲ್ಲ ,ಅವಳಿಗೆ ಹುಚ್ಚು ಹಿಡಿದಿರುವುದು ಪ್ಯಾಂಟು ಶರ್ಟಿ ನದು. ಜನ ಆಕೆಯನ್ನೇ ಹುಚ್ಚಿ ಮಾಡಿಬಿಟ್ಟಿದ್ದಾರೆ!!. ಪ್ರೀತಿ ಏನೆಲ್ಲಾ ಮಾಡಿಬಿಡುತ್ತದೆ. ಕಣ್ಣಲ್ಲಿ ನೀರು ತುಂಬಿಕೊಂಡ ಸರಳ ಯೋಚಿಸುತ್ತಿದ್ದಳು .

ಅರ್ಪಿತಾ ಹರ್ಷ 
ಲಂಡನ್ 

No comments:

Post a Comment