Tuesday 16 April 2013

ಬಸ್ ಪ್ರಯಾಣದ ಮೋಜು

Pulished in Sakhi agust 1st Sakhi magazine 


ಮೊದಲೆಲ್ಲ ನನಗೆ ದೂರದ ಪ್ರಯಾಣ ಎಂದರೆ ಇಷ್ಟ,  ಒಬ್ಬಳೇ ಹೋಗಬೇಕು ಎಂದರೆ ಸ್ವಲ್ಪ ಹೆಚ್ಚೇ ಇಷ್ಟ . ಕಿಟಕಿಯ ಪಕ್ಕದಲ್ಲಿ ಕುಳಿತು ಇಷ್ಟವಾದ ಹಾಡುಗಳನ್ನು ಒಂದಾದ ಮೇಲೊಂದರಂತೆ ಗುನುಗಿಕೊಳ್ಳುತ್ತಾ ಹೋಗುವುದೆಂದರೆ ಬಹಳ ಕುಶಿ.  ಹಾಗೆ ಹೋಗುವಾಗಲೆಲ್ಲ ನನ್ನ ಕನಸಿಗೆ ಯೋಚನಾ ಲಹರಿಗೆ ಯಾರೂ  ಅಡ್ಡಿ ಬರುವುದಿಲ್ಲವಾದ್ದರಿಂದ (ಬಂದರೂ ನನಗೆ ಅದರ ಬಗ್ಗೆ ಗಮನವಿಲ್ಲದಿರುವುದರಿಂದ) ನನಗೆ ಒಬ್ಬಳೇ ಕುಳಿತು ದೂರ ಹೋಗುವುದೆಂದರೆ ಇಷ್ಟವಾಗುತ್ತಿತ್ತು ಜೊತೆಗೆ ಕಾಲೇಜು ದಿನಗಳಲ್ಲಿ ಒಬ್ಬಳೇ ಹೋಗುವ ಅನಿವಾರ್ಯತೆ ಕೂಡ ಬರುತ್ತಿತ್ತು .  ಈಗ ಹೋಗಬೇಕೆಂದರು ಅವಕಾಶ ಸಿಗದಿದುದಕ್ಕೆ ಸ್ವಲ್ಪ ಬೇಸರವೂ  ಇದೆ .  ಹಾಗೆ ಹೋಗುವಾಗಲೆಲ್ಲ ಏನಾದರೊಂದು ನೆನಪಿನಲ್ಲಿ ಉಳಿಯುವಂತಹದ್ದು ಆಗುತ್ತಿತ್ತು . ಇಲ್ಲದಿದ್ದರೆ ಹೊಸ ಫ್ರೆಂಡ್ಸ್ ಸಿಗುತ್ತಿದ್ದರು . 

ಈಗ ನಾಲ್ಕು ವರ್ಷದ ಹಿಂದೆ ನಡೆದ ಘಟನೆ . ಹಾಗೆ ಒಮ್ಮೆ ಬೇಸಿಗೆ ರಜೆ ಬಂದಾಗ ಮನೆಗೆ ಹೋಗಲು ಉಜಿರೆಯಿಂದ ಸಾಗರದ ಬಸ್ ಹತ್ತ ಬೇಕಾಗಿತ್ತು . ಶಾಂತಿಸಾಗರ ಎಂಬ ಒಂದೇ ಬಸ್ ಬೆಳ್ತಂಗಡಿ ಇಂದ ಡೈರೆಕ್ಟ್ ಸಾಗರಕ್ಕೆ ಹೋಗುತ್ತಿತ್ತು . ಹಾಗಾಗಿ ಬೆಳಗ್ಗೆ ಮುಂಜಾನೆ ಉಜಿರೆಯಿಂದ ಬೆಳತಂಗಡಿಗೆ ಒಂದು ಬಸ್ ಹಿಡಿದು ಹೊರಟೆ . ರಜೆಗೆಂದು ಹೊರಟಿದ್ದರಿಂದ ಕೈಯಲ್ಲಿ ಎರಡು ಬ್ಯಾಗ್ ನಷ್ಟು ಲಗೇಜ್ ಇತ್ತು . ಬಸ್ ಹತ್ತಿದ್ದೆ ಪಕ್ಕದಲ್ಲಿ ಒಬ್ಬರು ಬಂದು ಕುಳಿತರು . ಜೊತೆಗೆ ಆ ಗಂಡಸು ನನ್ನೇ ನೋಡುತ್ತಿದ್ದ ನನಗೆ ಕೆಟ್ಟ ಕೋಪ ಬಂದಿತ್ತು . ಆತ ನನ್ನನ್ನು ನೋಡುತ್ತಿದ್ದನೋ ಅಥವಾ ಅದು ನನ್ನ ಭ್ರಮೆಯೋ ಎಂಬುದು ಬಗೆಹರಿಯದ ವಿಷಯ .      ಹದಿನೈದು ನಿಮಿಷದಲ್ಲಿ ನನ್ನ ಸ್ಟಾಪ್ ಬಂದಿದ್ದು ನನಗೆ ಬಹಳ ಸಂತೋಷವಾಯಿತು . ಅವನನ್ನು ಕೆಕ್ಕರಿಸಿ ನೋಡಿ ಇಳಿದುಬಂದೆ . 
ಇಳಿಯುವಷ್ಟರಲ್ಲಿ ಶಾಂತಿಸಾಗರ ಹೊರಡುತ್ತಿತ್ತು ಓಡಿ  ಹೋಗಿ ಹತ್ತಿಕೊಂಡೆ . ಆತನೂ ಬಸ್ ಹತ್ತಿದ ಮತ್ತೆ ನನ್ನ ನೋಡಿದ ನನಗೆ ಇನ್ನೂ ಕೋಪ ಬಂತು ಸ್ವಲ್ಪ ಹೊತ್ತಿನಲ್ಲಿ  ಟಿಕೆಟ್ ಕೇಳಲು ಕಂಡಕ್ಟರ್ ಬಂದು ಕೇಳಿದ್ದಕ್ಕೆ ಇಲ್ಲ ನಾ ಈ ಬ್ಯಾಗ್ ಅನ್ನು ತಲುಪಿಸಲು ಬಂದೆ ಎಂದರು ... 
ನೋಡುತ್ತೇನೆ ನನ್ನದೇ ಬ್ಯಾಗ್ ಇಳಿಯುವ ಭರದಲ್ಲಿ ಒಂದು ಬ್ಯಾಗ್ ಬಿಟ್ಟು ಬಂದುಬಿಟ್ಟಿದ್ದೆ ಪಾಪ ಆತ  ಅದನ್ನು ಗಮನಿಸಿ ನನಗೆ ಹಿಂತಿರುಗಿಸಲು ಬಂದರೆ ನಾನು ಕೆಕ್ಕರಿಸಿ ನೋಡಿಬಿಟ್ಟಿದ್ದೆ .  ಅವರು ನನಗೆ ಬ್ಯಾಗ್ ಹಿಂತಿರುಗಿಸಿದರು ನಾನು ಥ್ಯಾಂಕ್ಸ್ ಹೇಳಿದೆ ಆತ ಏನೂ  ಹೇಳದೆ ಹಿಂತಿರುಗಿ ಹೋದ  ಬಸ್ ಜೋರಾಗಿ ಹೊರಟಿತು . 
ಒಮ್ಮೊಮ್ಮೆ ಅಪಾರ್ಥ ದಿಂದಾಗಿ ಒಳ್ಳೆಯವರನ್ನು ಕೆಟ್ಟವರು ಎಂದುಕೊಳ್ಳುವ ಪರಿಸ್ಥಿತಿ ಬಂದುಬಿಡುತ್ತದೆ . ಅವರು ಸಹಾಯಕ್ಕೆ ಬಂದರೆ ನಾನು ತಪ್ಪು ತಿಳಿದುಕೊಂಡು ಬಿಟ್ಟಿದ್ದೆ . ಮನೆಗೆ ಬಂದು ಹೀಗಾಯಿತು ಎಂದು ಕತೆ ಹೇಳಿದರೆ ಎಲ್ಲರೂ  ಗೊಳ್ ಎಂದು ನಕ್ಕು ಆ ನಂತರ ಆತನನ್ನು ಹೊಗಳಿದರು ನನ್ನನ್ನು ತೆಗಳಿದರು . 

ಅರ್ಪಿತಾ ಹರ್ಷ 
ಲಂಡನ್ .

No comments:

Post a Comment