Wednesday 27 November 2019

ನಂದಿ ಬೆಟ್ಟ ಮತ್ತು ಭೋಗ ನಂದೀಶ್ವರ ದೇವಸ್ಥಾನ.


Published in Vijayakarnataka
ಮಳೆಗಾಲ ಎಂದರೆ ಕರ್ನಾಟಕದ ಎಲ್ಲೆಡೆ ಹಸಿರು  ತುಂಬಿದ ವಾತಾವರಣ . ಪುಟ್ಟ ಮಕ್ಕಳು ಮನೆಯಲ್ಲಿದ್ದರಂತೂ  ಅವಕ್ಕೆ  ಸ್ವಲ್ಪ  ಹೊತ್ತು ಮಳೆಯಲ್ಲಿ ಆಡುವ ತವಕ . ಹಾಗೆಯೇ  ವೀಕೆಂಡ್ ಬಂತೆಂದರೆ ಎಲ್ಲಾದರೂ ಸುತ್ತಾಡುವ ಮಳೆಯಲ್ಲಿ ಹೊರಹೋಗಿ  ಟ್ರಿಪ್ ಜೊತೆಗೆ ಬಿಸಿಬಿಸಿ ಮಸಾಲಾ ದೋಸೆ ಟೀ ಸವಿಯುವ ಮನಸ್ಸು ಎಲ್ಲರಲ್ಲೂ ಇರುತ್ತದೆ . ಬೇಸಿಗೆಯ ಬಿಸಿಲಿಗೆ ಸೋತು ಮನೆಯಲ್ಲಿರುವವರು ಮಳೆಗಾಲ ಬಂತೆಂದರೆ ಎಲ್ಲಾದರೂ ಸಣ್ಣ ಟ್ರಿಪ್ ಗೆ ಹೋಗುವ ಪ್ಲಾನ್ ಮಾಡಬಹುದು .  ಹಾಗೆಯೇ ಬೆಂಗಳೂರಿಗೆ ಹತ್ತಿರ ಸಾಕಷ್ಟು ಡ್ಯಾಮ್ , ಟ್ರೆಕಿಂಗ್ , ಜಲಪಾತ ತಾಣಗಳಿವೆ .  ಈ ಭಾರಿ ನಾವು ನಮ್ಮ ಪುಟಾಣಿ ಮಗನನ್ನು ಸುತ್ತಿಸಿದ್ದು ನಂದಿ ಬೆಟ್ಟ ಮತ್ತು  ಭೋಗ ನಂದೀಶ್ವರ ದೇವಸ್ಥಾನ. 


ನಂದಿ ಹಿಲ್ಸ್ ಎಂದಾಕ್ಷಣ ನೆನಪಿಗೆ ಬರುವುದು ಇಲ್ಲಿನ ಮುಂಜಾನೆಯ ಸೂರ್ಯೋದಯ .  ಈ ಸೂರ್ಯೋದಯವನ್ನು ನೋಡಲೆಂದೇ ಸಾಕಷ್ಟು ಬೈಕ್ ರೈಡರ್ಸ್ ಮತ್ತು ಟ್ರೆಕಿಂಗ್ ಆಸಕ್ತರು ಬೆಳಗಿನ ಮುಂಜಾನೆ ೫ ಗಂಟೆಗೆಲ್ಲ  ನಂದಿ ಬೆಟ್ಟದ ವ್ಯೂ ಪಾಯಿಂಟ್ ನಲ್ಲಿ ಹೋಗಿ ಕಾಯುತ್ತಾರೆ . ನಂದಿ ದುರ್ಗಾ , ನಂದಿ ಬೆಟ್ಟ ಎಂದೆಲ್ಲ ಕರೆಯಲ್ಪಡುವ ಈ ಹಿಲ್ಸ್ ಬೆಂಗಳೂರು ನಗರದಿಂದ ಸುಮಾರು ೬೫ ಕಿ ಮೀ ಅಂತರದಲ್ಲಿದೆ .  ಚಿಕ್ಕಬಳ್ಳಾಪುರ ಜಿಲ್ಲೆಗೆ ಸೇರುವ ನಂದಿ ದುರ್ಗಾ ಸಮುದ್ರ ಮಟ್ಟದಿಂದ ೪೮೫೦  ಅಡಿ ಎತ್ತರದಲ್ಲಿದೆ .  ಹಿಂದಿನ ಕಾಲದಲ್ಲಿ ಇದನ್ನು ಆನಂದ ಬೆಟ್ಟ ಎಂದು ಕೂಡ ಕರೆಯುತ್ತಿದ್ದರಂತೆ , ಹೆಸರಿಗೆ ತಕ್ಕಂತೆ ಮುಂಜಾನೆ ಸೂರ್ಯೋದಯದ ವಿಹಂಗಮ ನೋಟ ಸವಿಯಲು ಹೋದವರಿಗೆ ಆನಂದವಾಗುವುದು ಖಂಡಿತ . 
ನಂದಿ ಗ್ರಾಮದಲ್ಲಿರುವ ಈ ನಂದಿ ಬೆಟ್ಟಕ್ಕೆ ಈ ಹೆಸರು ಬರಲು ಬೇರೆಬೇರೆ ಕಾರಣಗಳನ್ನು ಹೇಳಲಾಗುತ್ತದೆ . ದೂರದಿಂದ ನೋಡಿದರೆ ಇದು ನಂದಿಯಂತೆ ಕಾಣುವುದರಿಂದ ಈ ಹೆಸರು ಬಂತು ಎಂದು ಕೂಡ ಹೇಳುತ್ತಾರೆ .  ಅರ್ಕಾವತಿ ನದಿ ಕೂಡ ಇಲ್ಲೇ ಹುಟ್ಟುವುದರಿಂದ ಈ ಬೆಟ್ಟದಲ್ಲಿರುವವ ಅಮೃತ ಸರೋವರ ಎಂಬ ಜಾಗವನ್ನು ನೋಡಲೇಬೇಕು . ಇನ್ನು ರಾಮಕೃಷ್ಣ ಗುರೂಜಿ ಕೂಡ ಇಲ್ಲೇ ಧ್ಯಾನವನ್ನು ಮಾಡುತ್ತಿದ್ದರು ಎನ್ನಲು ಬ್ರಹ್ಮಾಶ್ರಮ ಎಂಬ ಗುಡಿ ಕೂಡ ಇಲ್ಲಿದೆ . ಪಲಾರ್ ನದಿಯ ಮೂಲ ಇಲ್ಲೇ ಆಗಿರುವುದರಿಂದ ಸಣ್ಣದೊಂದು ಕೊಳವನ್ನು ಕೂಡ ನೋಡಬಹುದು . ಇದೆಲ್ಲದಕ್ಕಿಂತ ಮುಖ್ಯವಾಗಿ ಟಿಪ್ಪು ಡ್ರಾಪ್ ಪ್ರವಾಸಿಗರ ಆಕರ್ಷಕ ಜಾಗವಾಗಿದೆ.  ಟಿಪ್ಪು ತನ್ನ ಆಳ್ವಿಕೆಯ ಕಾಲದಲ್ಲಿ ತಪ್ಪು ಮಾಡಿದವರಿಗೆ ಶಿಕ್ಷಿಸಲು ಈ ಸ್ಥಳದಿಂದಲೇ ಕೆಳಗೆ ನೂಕುತಿದ್ದ ಎನ್ನಲಾಗುತ್ತದೆ .  ಹಾಗೆಯೇ ಟಿಪ್ಪು ಯುದ್ಧಕಾಲದಲ್ಲಿ ವಿಶ್ರಾಂತಿಗೋಸ್ಕರ ತಂಗುತ್ತಿದ್ದ ತಾಣ ಬೇಸಿಗೆ  ಮನೆಯನ್ನು  ಕೂಡ ಇಲ್ಲಿ ಹೊರಗಿನಿಂದ ನೋಡಬಹುದು. 



ವಿನಾಯಕ , ಯೋಗಾನಂದೀಶ್ವರ ಹೀಗೆ ಬೇರೆಬೇರೆ ದೇವರ ಗುಡಿಗಳನ್ನು ಹೊಂದಿರುವ ನಂದಿ ಬೆಟ್ಟದ ಕಲ್ಲು ಬಂಡೆಗಳನ್ನು ಹತ್ತಿ ಹೋಗುವುದು ಚಿಕ್ಕ ಮಕ್ಕಳಿಗಂತೂ  ಖುಷಿಯ ವಿಚಾರ . ಜೊತೆಗೆ ಮಕ್ಕಳ ಆಟಕ್ಕೋಸ್ಕರ ಜಾರುಬಂಡಿ , ಉಯ್ಯಾಲೆಗಳನ್ನೂ ಪ್ರವಾಸೋದ್ಯಮ ಒದಗಿಸಿದೆ .  ಮಳೆಗಾಲವಾದ್ದರಿಂದ ಶೂ ಹಾಕಿಕೊಂಡು ಹೋಗುವುದು   ಉತ್ತಮ .  

 ಬೆಂಗಳೂರಿನಿಂದ ಒಂದು ದಿನದ ವೀಕೆಂಡ್ ಪ್ರವಾಸಕ್ಕೆ ಸೂಕ್ತವಾಗಿರುವ ಈ ಸ್ಥಳ ದಿಂದ ೨೦ ನಿಮಿಷ ಡ್ರೈವ್ ಮಾಡಿದರೆ ಇನ್ನೊಂದು ಸುಂದರ ಸ್ಥಳವಿದೆ . ಅದೇ ಭೋಗ ನಂದೀಶ್ವರ ದೇವಸ್ಥಾನ.  ನಂದಿ ಗ್ರಾಮದಲ್ಲಿರುವ ಈ ಹಿಂದೂ ದೇವಾಲಯ ಶಿವನ ದೇವಾಲಯವಾಗಿದ್ದು ಒಂಬತ್ತನೇ ಶತಮಾನದಲ್ಲಿ ಬಾಣ ರಾಣಿ ರತ್ನಾವಳಿ ಕಟ್ಟಲು ಪ್ರಾರಂಭವಾದ ಈ ದೇವಾಲಯ ವಿಜಯನಗರ ರಾಜರ ಕಾಲದವರೆಗೂ ಕಟ್ಟಲಾಯಿತು  ಎನ್ನಲಾಗುತ್ತದೆ . ದ್ರಾವಿಡ ಶೈಲಿಯಲ್ಲಿರುವ ಈ ದೇವಾಲಯ ನಂತರದ ಕಾಲದಲ್ಲಿ  ಟಿಪ್ಪುವಿನ ಹಿಡಿತದಲ್ಲಿತ್ತು ಎನ್ನಲಾಯಾಗುತ್ತದೆ . ಪಾರ್ವತಿ ಗುಡಿ , ವಸಂತ ಮಂಟಪ , ಮದುವೆಯ ಮಂಟಪ ಹೀಗೆ ವಿವಿಧ ಕೆತ್ತನೆಗಳು ಹೊಯ್ಸಳರ ಕಾಲದಲ್ಲಿ ಮಾಡಲಾಗಿದೆ ಎನ್ನಲಾಗುತ್ತದೆ. ಕಂಬಗಳ ಮೇಲೆ ವಿವಿದ ರೀತಿಯ ಸಣ್ಣ ಕೆತ್ತನೆಗಳನ್ನು ಕಾಣಬಹುದು .  ದೇವಾಲಯದ ಬಲಭಾಗದಲ್ಲಿರುವ ಪುಷ್ಕರಣಿ ಪ್ರವಾಸಿಗರ ಅತ್ಯಂತ ಆಕರ್ಷಣೀಯ ಜಾಗವಾಗಿದ್ದು , ಈ ಕಲ್ಯಾಣಿ ಸಾವಿರ ವರ್ಷಗಳ ಹಿಂದಿನದ್ದು ಎಂಬುದು ವಿಶೇಷ .ಶಿವರಾತ್ರಿ ಸಮಯದಲ್ಲಿ ವಿಶೇಷ ಪೂಜೆ ಇರುವುದರಿಂದ ಸಾಕಷ್ಟು ಭಕ್ತಾದಿಗಳು ಸೇರುತ್ತಾರೆ ಎನ್ನಲಾಗುತ್ತದೆ .  ದಟ್ಟ ಕಾನನದ ನಡುವೆ ಇರುವ ದೊಡ್ಡ ದೇಗುಲದಂತೆ ಕಾಣುವ ಈ ದೇವಾಲಯ ,  ಬೆಂಗಳೂರಿನ ಕಾಂಕ್ರೀಟ್ ನಗರದಿಂದ ಹೆಚ್ಚು ದೂರವಿಲ್ಲದ ಈ ಸುತ್ತಮುತ್ತಲ ಪ್ರದೇಶ  ಇನ್ನೂ  ಹಸಿರಿನಿಂದ  ತುಂಬಿರುವುದು ಇನ್ನಷ್ಟು ತೃಪ್ತಿ ನೀಡುತ್ತದೆ .  

 ಮಳೆಗಾಲವಾದ್ದರಿಂದ ಸ್ವಲ್ಪ  ಬೆಚ್ಚಗಿನ ಸ್ವೇಟರ್  ಕಾಲಿಗೆ ಶೂ , ಜೊತೆಗೆ ಛತ್ರಿ ತೆಗೆದುಕೊಂಡು ಹೋಗುವುದು ಮರೆಯಬೇಡಿ .  ನಂದಿ ಬೆಟ್ಟದಲ್ಲಿ ಮಂಗಗಳ ಹಾವಳಿ ಇರುವುದರಿಂದ ತಿನ್ನುವ ವಸ್ತುವನ್ನು ಕೈಯಲ್ಲಿ ಹಿಡಿದು ಹೋಗಬೇಡಿ.  

ನಂದಿ ಬೆಟ್ಟದ ಪ್ರಕೃತಿಯ ಹಸಿರನ್ನು ಸವಿಯಲು ತೆರಳುವ ಪ್ರವಾಸಿಗರು ಭೋಗ ನಂದೀಶ್ವರ ದೇವಾಲಯವನ್ನು ಮರೆಯದೆ ನೋಡಿ ಬನ್ನಿ . ಇಂತಹ ಅದ್ಭುತವಾದ ದೇವಾಲಯ ಬೆಂಗಳೂರಿನ   ತಪ್ಪಲಲ್ಲೇ ಇರುವುದು ನೋಡಿ  ಬೆರಗಾಗಿ  .

1 comment:

  1. This comment has been removed by a blog administrator.

    ReplyDelete