Wednesday 27 November 2019

ಯೇರ್ಕಾಡ್

ಅಗಲವಾದ ಗುದ್ದುಗಳಿಲ್ಲದ ರಸ್ತೆ , ಅಕ್ಕಪಕ್ಕಗಳಲ್ಲಿ ದಟ್ಟವಾದ ಕಾಡು , ಸಣ್ಣಗೆ  ಆಗೊಮ್ಮೆ ಈಗೊಮ್ಮೆ ಎಂಬಂತೆ ಜಿನುಗುವ ಮಳೆ , ಈಗಷ್ಟೇ ಮಳೆಯಿಂದ ತಂಪಾದ ಇಳೆ , ಒಂಥರಾ  ಚುಮು ಚುಮು ಚಳಿ , ಸಣ್ಣಗೆ ನಮ್ಮ ಕಣ್ಣೆದುರೇ ಹೊಗೆಯಾಡುವ ಇಬ್ಬನಿ . ಅದಕ್ಕೆ ಸಾಥ್ ಕೊಡಲು ಕಾರಿನಲ್ಲಿ ಮನಸ್ಸಿಗೆ ಹಿತವೆನಿಸುವ ಸಂಗೀತ ಇಷ್ಟಿದ್ದರೆ ಸ್ವರ್ಗ ಎಂದೆನಿಸದೇ ಇರುತ್ತದೆಯೇ ?  
ಇಂತದ್ದೊಂದು ಸುಂದರ ಅನುಭವ ನಮಗೆ ದೊರೆತಿದ್ದು ಯೇರ್ಕಾಡ್ ಪ್ರವಾಸಕ್ಕೆ ಹೋದಾಗ .  ಬೆಂಗಳೂರಿನಿಂದ ಕೇವಲ 250 ಕಿ ಮೀ ಅಂತರದಲ್ಲಿರುವ ತಮಿಳುನಾಡಿನ ಯೇರ್ಕಾಡ್ ವೀಕೆಂಡ್ ಪ್ರವಾಸಕ್ಕೆ ಅದ್ಬುತ ಸ್ಥಳ .  ಬ್ಯುಸಿ ಬದುಕನ್ನು ಪಕ್ಕಕ್ಕಿಟ್ಟು ಜಂಜಾಟವನ್ನು ಮರೆತು ಎರೆಡು ದಿನ ಖುಷಿಯಿಂದ ಕಳೆಯಬಹುದಾದ ಜಾಗ ಈ ಯೇರ್ಕಾಡ್ . 
ತಮಿಳುನಾಡು ರಾಜ್ಯದ ಸೇಲಂ ಜಿಲ್ಲೆಯಲ್ಲಿರುವ ಯೇರ್ಕಾಡ್ ಪೂರ್ವ ಘಟ್ಟಗಳ ಸುಂದರ ಸೊಬಗಿನ ತುತ್ತತುದಿ . ಸೇವಾರಯನ್ ದೇವಸ್ಥಾನವನ್ನು ಅತಿ ತುತ್ತ ತುದಿಯಲ್ಲಿ ಹೊಂದಿರುವ ಯೇರ್ಕಾಡ್ 32 ಕಿ ಮೀ ನಷ್ಟು ಒಟ್ಟು  20 ಹೇರ್ಪಿನ್ ಘಾಟಿಯನ್ನು ಹೊಂದಿದೆ . ಸೇಲಂ ಪಟ್ಟಣದಿಂದ ೩೦ ಕಿ ಮೀ ಅಂತರದಲ್ಲಿರುವ ಯೇರ್ಕಾಡ್ ಒಂದು ಪರ್ವತ ಪ್ರದೇಶ . ಈ ಹೇರ್ಪಿನ್ ಘಾಟಿಯಲ್ಲಿ ನೀವು ಮೇಲೆ ಹೋಗುತ್ತಿದ್ದಂತೆ ತಂಪು ಹೆಚ್ಚುತ್ತಾ ಹೋಗುತ್ತದೆ . ಸಾಮಾನ್ಯವಾಗಿ ಕರ್ನಾಟಕದ ಗಡಿ ದಾಟಿ ತಮಿಳುನಾಡು ಪ್ರವೇಶಿಸುತ್ತಿದ್ದಂತೇ  ಬಿಸಿಲಿನ ದಗೆ , ಆದರೆ ಯೇರ್ಕಾಡ್ ಮಾತ್ರ ತಂಪು ತಂಪು . 

ನಮ್ಮ ಪಕ್ಕದ ರಾಜ್ಯ ತಮಿಳುನಾಡಿನ ಯೇರ್ಕಾಡ್ ಬೆಂಗಳೂರಿನಿಂದ ಕೇವಲ ೨೩೦ ಕಿ ಮೀ . ಬಸ್ ,ಟ್ರೈನ್ ಅಥವಾ ವಿಮಾನ ಪ್ರಯಾಣಕ್ಕಿಂತ ಕಾರಿನಲ್ಲಿ ಸ್ನೇಹಿತರು ಅಥವಾ ಕುಟುಂಬದವರೊಡನೆ ಹೋದರೆ ಕೇವಲ ನಾಲ್ಕೂವರೆ ಗಂಟೆ ಪ್ರಯಾಣ . ವೀಕೆಂಡ್ ಟ್ರಿಪ್ ಗೆ ಇದೊಂದು ಬೆಸ್ಟ್ ತಾಣ ಎಂದೇ ಹೇಳಬಹುದು .  ಒಂದು ದಿನ ಹತ್ತಿರದ ರೆಸಾರ್ಟ್ , ಹೋಂ ಸ್ಟೇ ಅಥವಾ ಫಾರ್ಮ್ ಹೌಸ್ ಗಳಲ್ಲಿ ಉಳಿದುಕೊಂಡು ಎರೆಡು ದಿನ ಆರಾಮವಾಗಿ ಬದುಕಿನ ಜಂಜಾಟವನ್ನು ಮರೆತು ಸುತ್ತಾಡಿಕೊಂಡು ಬರಬಹುದು.  ನೋಡಲು ಕೂಡ ಕಣ್ಣು ತಂಪಾಗುವಷ್ಟು ಆಕರ್ಷಣೀಯ ಸ್ಥಳಗಳು ಇಲ್ಲಿವೆ .  

ಈಗಾಗಲೇ ಸುಮಾರು ಎಂಟು ಹೊರ ದೇಶಗಳನ್ನು ಸುತ್ತಿರುವ ನಮಗೆ ನಮ್ಮ ದೇಶವನ್ನು ಸುತ್ತುವ ಆಸೆ . ಹಾಗೆ ಪ್ರತಿ ಭಾರಿ ಸುತ್ತುವಾಗಲು ನಮ್ಮ ದೇಶ ಎಷ್ಟು ಸಂಪದ್ಭರಿತವಾಗಿದೆ ಮತ್ತು ಎಷ್ಟು ನೈಸರ್ಗಿಕ ಪ್ರೇಕ್ಷಣೀಯ ಸ್ಥಳಗಳಿವೆ ಆದರೆ ಅವುಗಳ ಬಳಕೆ ಮತ್ತು ಪ್ರಚಾರ ಮಾತ್ರ ಸರಿಯಾದ ರೀತಿಯಲ್ಲಿ ಆಗುತ್ತಿಲ್ಲ ಎಂದೆನಿಸುತ್ತದೆ . 
ತಮಿಳುನಾಡಿನ ಯೇರ್ಕಾಡ್ ಯಾವುದೇ ವಿದೇಶಿ ಸ್ಥಳಗಳಿಗೆ ಕೂಡ ಕಡಿಮೆ ಇಲ್ಲ ಎಂದೆನಿಸಿದ್ದು ಅಲ್ಲಿ ಹೋಗಿ ಲೇಕ್ ಬೋಟಿಂಗ್ ನ ಅನುಭವನನ್ನು ಪಡೆದಾಗ ಅಲ್ಲಿ ಕಾಣುವ ಸುತ್ತಲಿನ ಪ್ರಕೃತಿ ಸೌಂದರ್ಯವನ್ನು ನೋಡಿದಾಗ. ಡೀರ್ ಪಾರ್ಕ್ ,ಅಣ್ಣ ಪಾರ್ಕ್ ಯೇರ್ಕಾಡ್ ನ ಪ್ರಮುಖ ಆಕರ್ಷಣೆ , ಕೇವಲ ಐದು ರೂಪಾಯಿ ಇಲ್ಲಿನ ಪ್ರವೇಶ ಶುಲ್ಕ ಮತ್ತು ಇವೆಲ್ಲ ಕೇವಲ ಅರ್ಧ ಕಿ ಮೀ ಅಂತರದಲ್ಲೇ ಇರುವುದರಿಂದ ಒಂದು ದಿನಪೂರ್ತಿ ಪ್ರವಾಸಕ್ಕೆ ಈ ಸ್ಥಳ ಸೂಕ್ತವಾಗಿದೆ. 

ಕಿಳಿಯೂರ್ ಜಲಪಾತ :
ಯೇರ್ಕಾಡ್ ಗೆ ಪ್ರವಾಸಕ್ಕೆ ಹೋದವರು ಕಿಳಿಯೂರ್ ಜಲಪಾತವನ್ನು ನೋಡಲೇಬೇಕು.  ಭೋರ್ಗರೆದು ದುಮ್ಮಿಕ್ಕುವ ನೀರು ಮೈ ಸೋಕಿದರೆ ಮಂಜಿನಂತೆ ಕರಗಿಹೋಗಬಹುದಾದಷ್ಟು  ತಣ್ಣೀರು. ಈ ಜಲಪಾತವನ್ನು ತಲುಪಲು ಕನಿಷ್ಠ 200 ಮೆಟ್ಟಿಲುಗಳನ್ನು  ಇಳಿದು ಸುಮಾರು ಒಂದು ಕಿ ಮೀ ನಷ್ಟು ಕಾಲ್ನಡಿಗೆಯಲ್ಲಿ ಹೋಗಬೇಕಾಗುತ್ತದೆ ಕೆಳಕ್ಕೆ . ಈ ಜಲಪಾತದ ನೀರು ಬಂಡೆಯ ಮೇಲೆ ಬೀಳುವುದರಿಂದ ಮತ್ತು ಅಲ್ಲಿ ಸಾಕಷ್ಟು ದೊಡ್ಡ ಬಂಡೆಗಳಿರುವುದರಿಂದ ಅಲ್ಲಿ ನೀರಾಡಲು ಮತ್ತು ಸ್ನಾನ ಮಾಡಲು ಅವಕಾಶವಿದೆ. ವಾರಾಂತ್ಯದಲ್ಲಿ ಮಾತ್ರ ಸ್ವಲ್ಪ ಜನರಿರುವುದರಿಂದ ವಾರದ ಮಧ್ಯದಲ್ಲಿ ಹೋದರೆ ನೀರಿನ ಭೋರ್ಗರೆತ ಬಿಟ್ಟರೆ  ನೀರವ ಮೌನ. ಇಲ್ಲಿ ಹೋಗುವಾಗ ಜೊತೆಯಲ್ಲಿ ಕುಟುಂಬದವರೋ ಅಥವಾ ಸ್ನೇಹಿತರೋ ಇದ್ದರೆ  ಹೆಚ್ಚು ಸೂಕ್ತ , ಒಂಟಿಯಾಗಿ ಹೋಗುವುದು ಸೂಕ್ತವಲ್ಲ. ಹೋಗುವಾಗ  ಇಳಿಜಾರಾದ್ದರಿಂದ ಸುಲಭ. ಅಲ್ಲಿ ನೀರಾಡಿ ಪುನಃ ಬರುವಾಗ ಹತ್ತಿ ಮೆಟ್ಟಿಲುಗಳನ್ನು ಹತ್ತಿ ಮೇಲೇರುವುದೇ ಒಂದು ವಿಸ್ಮಯ ಮತ್ತು ಸಾಹಸ. ಒಟ್ಟಾರೆಯಾಗಿ ಈ ಜಲಪಾತವನ್ನು ನೋಡಿ ಆನಂದಿಸದಿದ್ದರೆ ಯೇರ್ಕಾಡ್ ಪ್ರವಾಸ ಸಂಪೂರ್ಣವಾಗುವುದೇ ಇಲ್ಲ. 

ಎಲ್ಲಕ್ಕಿಂತ ಮುಖ್ಯವಾಗಿ ಯೇರ್ಕಾಡ್  ಹೇರ್ಪಿನ್ ಘಾಟ್ ಭಾಗದಲ್ಲಿ ಕಾರಿನಲ್ಲಿ ಡ್ರೈವ್ ಮಾಡುವುದೇ ಒಂದು ಅದ್ಬುತ ಅನುಭವವನ್ನು ನೀಡುತ್ತದೆ. ಬೇಕಾದಲ್ಲಿ ಅಲ್ಲಲ್ಲಿ ನಿಲ್ಲಿಸಿ ಸಣ್ಣಗೆ ಅಲ್ಲಲ್ಲಿ ಬೆಟ್ಟದಿಂದ  ಹರಿಯುವ ಜಲಪಾತವನ್ನು ನೋಡಿ ಆನಂದಿಸಬಹುದು. ಎರೆಡು ದಿನವನ್ನು ಇಲ್ಲಿಯ ಪ್ರಕೃತಿಯ ಮಡಿಲಲ್ಲಿ ಕಳೆದರೆ ಮನಸ್ಸು ಉಲ್ಲಸಿತಗೊಳ್ಳುವುದು ಖಂಡಿತ. 





ಅರ್ಪಿತಾ ಹರ್ಷ 

No comments:

Post a Comment