Saturday 7 November 2015

ಮಗುವೇ ನೀನು ನಕ್ಕರೆ

Published in vijayanext 

ಪ್ರೀತಿಯ ಪುಟ್ಟ 
ಅದಾಗಲೇ ನೀ ಬಂದು ಇಂದಿಗೆ ನಾಲ್ಕು ತಿಂಗಳು ಕಳೆದುಹೋದವು ಎಂದರೆ ನಂಬಲಸಾಧ್ಯ. ಎಲ್ಲರೂ ಇದ್ದರೂ ಇಲ್ಲದಂತಿರುವ ಈ ದೂರದ ಲಂಡನ್ ದೇಶದಲ್ಲಿ ಒಬ್ಬಳೇ ಕುಳಿತು ಕೈಯಗಲದಷ್ಟಿರುವ ನಿನ್ನನ್ನು ಎತ್ತಿಕೊಳ್ಳಲೂ ಬಾರದಿದ್ದ ನಾನು ಹೇಗೆ ನೋಡಿಕೊಳ್ಳಲಿ ಎಂಬ ಆತಂಕ ನೀ ಕೈಗೆ ಬಂದ ದಿನವೇ ಅದು ಹೇಗೋ ಮಾಯವಾಗಿ ಬಿಟ್ಟಿತ್ತು. ನನ್ನಲ್ಲಿಲ್ಲದ ಏನೋ ಒಂದು ಶಕ್ತಿಯನ್ನು ತಂದು ಕೊಟ್ಟಿದ್ದು ನೀನೇ . ನೀ ಹುಟ್ಟಿದ ಘಳಿಗೆಯಲ್ಲೇ ನನ್ನಲ್ಲಿ ಆವರಿಸಿಕೊಂಡಿದ್ದ ಅಷ್ಟೂ ಭಯ ದೂರವಾಗಿ ನಾ ಒಬ್ಬಳೇ ನಿನ್ನ ನೋಡಿಕೊಳ್ಳಬಲ್ಲೆ ಎಂಬ ಅದೇನೋ ಧೈರ್ಯ ಬಂದುಬಿಟ್ಟಿತ್ತು. ಅಂದು ಕೇವಲ ಕೈಯಗಳವಿದ್ದ ನೀನು ಇಂದು ಕೈತುಂಬಾ ಎತ್ತಿಕೊಂಡು ಮುದ್ದಾಡುವಷ್ಟು ದೊಡ್ಡವನಾಗಿಬಿಟ್ಟಿದ್ದೀಯ. 

ಹೌದು ನೀನು ಬಂದ ಕ್ಷಣದಿಂದ ದಿನಗಳು ಕ್ಷಣಗಳಂತೆ ಕಳೆಯುತ್ತಿದೆ. ಲೈಫು ತುಂಬಾ ಬ್ಯುಸಿ . ಮಲಗಿದರೂ ನಿನ್ನದೇ ಯೋಚನೆ. ಅಡುಗೆ ಮನೆಯಲ್ಲಿದ್ದರೂ ನೀನು ಅತ್ತಂತೆಯೇ ಕೇಳುತ್ತದೆ. ಒಟ್ಟಾರೆ ಹೇಳಬೇಕೆಂದರೆ ನಿನ್ನ ಬಿಟ್ಟು ಬೇರೇನೂ ಮನಸಲ್ಲಿಲ್ಲ.  ನಿನ್ನ ಬಿಟ್ಟು ಬೇರೇನನ್ನೂ ಮಾತನಾಡಲಾಗದು , ಮಾಡಲಾಗದು.ಬೆಳಗಿನ ಮುಂಜಾವದಲ್ಲಿ ಎದ್ದು  ನಿನ್ನ ಪುಟ್ಟ ಅಗಲದ ಕಣ್ಣುಗಳನ್ನು ಇನ್ನಷ್ಟು ಅಗಲಿಸಿ ನನ್ನೆಡೆ ನೋಡಿ ನೀ ನೀಡುವ ಆ ನಗು ಇಡೀ ದಿನ ನನ್ನನ್ನು ಕಾಡುತ್ತದೆ .  ಏನೋ ಹೇಳಬೇಕು ಎಂದೆನಿಸಿ ಹೇಳಲಾಗದೇ ನೀ ಅಳುತ್ತಿದ್ದರೆ ನಿನ್ನ ಕಣ್ಣೀರು ನನಗೂ ಕಣ್ಣು ಮಂಜಾಗಿಸುತ್ತದೆ. ಸುತ್ತಲೂ ನಿನಗಾಗಿಯೇ ಆಡಲು ತಂದಿರುವ ಆಟಿಕೆಗಳಿದ್ದರೂ ಅಮ್ಮನೇ ಬೇಕು ಎಂಬ ನಿನ್ನ ಮನಸ್ಸು ನನಗೆ ಮನಸ್ಸನ್ನು ಇನ್ನಷ್ಟು ಬೆಚ್ಚಗಾಗಿಸುತ್ತದೆ. ಮನೆಯ ತುಂಬಾ ನಿನ್ನ ಮುಗ್ಧ ನಗುವಿನ ಫೋಟೋ ಹಾಕಿ ಅದನ್ನು ನೀ ಮಲಗಿದಾಗಲೆಲ್ಲಾ ನೋಡುವುದೇ ಒಂದು ಖುಷಿ. ನಿದ್ದೆ ಮಂಪರಿನಲ್ಲಿ ನೀ ನೀಡುವ ನಗು ಇನ್ನೂ ಸೊಗಸು. ಮನೆಯಿಂದ ಹೊರಗೆ ಕರೆದುಕೊಂಡು ಹೋದರೆ  ಬೆರಗು ಕಣ್ಣುಗಳಿಂದ  ನೀನು ಸುತ್ತಲೂ  ನೋಡುತ್ತಿದ್ದರೆ ನಿನ್ನ ಬೆರಗನ್ನು ಕಣ್ಣು ತುಂಬಿಸಿಕೊಳ್ಳಲು ನಾನೂ ನಿನ್ನಷ್ಟೇ ಕಾತುರನಾಗಿರುತ್ತೇನೆ. 

ಅಪರಿಚಿತರನ್ನು ಕಂಡಾಗಲೂ ಕೂಡ ನೀನು ನೀಡುವ ಸುಂದರ ನಗು ಕೆಲವೊಮ್ಮೆ ಮಗುವಿನ ಮನಸ್ಸು  ಎಷ್ಟು ನಿಷ್ಕಲ್ಮಶ ಎಂಬುದನ್ನು ನೆನಪಿಸುತ್ತದೆ. ದಿನದಿಂದ ದಿನಕ್ಕೆ ನನಗೊಂದು ಅಚ್ಚರಿಯನ್ನು ಹುಟ್ಟಿಸುವ ನಿನ್ನ ಹೊಸ ಚಟುವಟಿಕೆಗಳು ಹೀಗೆಯೇ ಸದಾ ಮುಂದುವರೆಯಲಿ. ಅಮ್ಮನನ್ನು ಕಂಡಾಗ ನಾ ನಿನ್ನ ಬಲ್ಲೆ ಎಂಬ ನಿನ್ನ ಸುಂದರ ಎಂತವರನ್ನೂ ಕಲಕುವ ನಗು ಇನ್ನಷ್ಟು ಅಗಲವಾಗಲಿ.ನೀನು ನಿನ್ನ ಪುಟ್ಟ ಕೈಗಳಿಂದ ನನ್ನ ಮುಖವನ್ನು ಹಿಡಿಯಲು ಪ್ರಯತ್ನಿಸುವಾಗ ಆಗುವ ಆನಂದ ಪದಗಳಿಗೆ ಎಟುಕದು.ಪುಟ್ಟ ಪುಟ್ಟ ಕಾಲುಗಳನ್ನು ನಿನ್ನ ಶಕ್ತಿಯನ್ನೆಲ್ಲಾ ಬಳಸಿ ಮೇಲೆತ್ತುವುದನ್ನು ನೋಡಿದರೆ ಮನಸ್ಸಿಗೆ ಮುದವೆನಿಸುತ್ತದೆ.ಒಟ್ಟಾರೆಯಾಗಿ ನೀ ಬಂದಾಗಿನಿಂದ ಮನಸ್ಸು ಹಾರಾಡುತ್ತಿದೆ.ಜೀವನಕ್ಕೊಂದು ಹೊಸ ಕಳೆ ಬಂದಿದೆ. 

ನಿನ್ನ ತುಂಟತನಗಳನ್ನು ನೋಡಲು ಸದಾ ಕಾಯುತ್ತಿರುವ ನಿನ್ನ ಅಮ್ಮ . 


Arpitha Harsha

London

No comments:

Post a Comment