Saturday 7 November 2015

ಗೌರಜ್ಜಿ ಎಂಬ ನೆನಪು

ಬೇಸಿಗೆ ರಜೆ ಬಂತೆಂದರೆ ನನಗೆ ಅಪ್ಪನಿಗೆ ಒಂದೇ ಕೆಲಸ . ಸಂಜೆ ಆದ ತಕ್ಷಣ ಹೊರಗೆ ಚಿಟ್ಟೆ (ಕಟ್ಟೆ) ಮೇಲೆ ಕುಳಿತು ಕಾಡುಹರಟೆ ಹೊಡಿಯೋದು. ಅವತ್ತು ಹಾಗೆ  ಎಂದಿನಂತೆ  ಹೊರಗೆ ಕುಳಿತಿದ್ದಾಗ ಆಟೋ ಒಂದು ಬಂದ ಶಬ್ದ. 'ಹ್ನಾ ಯಾರೋ ಬಂದ ಅಪ್ಪ , ಆಟೋ ಬಂತು' ಹಾಗಂತ ಕುಣಿಯುತ್ತ ರಸ್ತೆಗೆ ಹೋಗಿ ನಿಂತೆ.ಅಪ್ಪನು ನನ್ನ ಹಿಂದೆಯೇ ಬಂದು 'ಓಹ್ ಯಾರು ಹೇಳು ನೋಡನ' ಅಂತ ಹಲ್ಲು ಕಿರಿದ.  ಅಷ್ಟರಲ್ಲಿ ತನ್ನ ದಡೂತಿ ದೇಹ ಹೊತ್ತು ಕೈಯಲ್ಲೊಂದು ಬಟ್ಟೆ ತುಂಬಿದ  ಚೀಲ ಹಿಡಿದು ಕೆಳಗಿಳಿದರು ಗೌರಜ್ಜಿ.ಅಪ್ಪ ಸಣ್ಣಗೆ ನನಗೆ ಮಾತ್ರ ಕೇಳಿಸುವಂತೆ 'ಜಯಲಲಿತಮ್ಮಮ್ಮ ಜಯಲಲಿತಮ್ಮಮ್ಮ' ಅಂದ. ಹಾಗೆ ನಕ್ಕು ಇಬ್ಬರೂ ಕುಶಿಯಿಂದ ಗೌರಜ್ಜಿಯನ್ನು ಸ್ವಾಗತಿಸಿದೆವು.  ನಾನು ಒಳಗೆ ಓಡಿದವಳೇ 'ಅಮ್ಮಾ ಜಯಲಲಿತಮ್ಮಮ್ಮ  ಬಂದಿದ್ದಾ'  ಹಾಗಂತ ಕೂಗಿ ಹೇಳಿದೆ. ನನ್ನ ಹಿಂದೆಯೇ ಬಂದ ಅಪ್ಪ 'ಜೋರಾಗಿ ಕೂಗಡ ಕೇಳಿಸಿದರೆ ಕಷ್ಟ' ಅಂದ. 'ಹಹಹ' ನಾನು ನಕ್ಕೆ. ಆಕೆಯ ದಪ್ಪ ದೇಹ ,ಗುಂಡು ಮುಖ ನೋಡಿದಾಗಲೆಲ್ಲ ಜಯಲಲಿತಾಳನ್ನೇ ನೆನಪಾಗುವುದರಿಂದಲೋ ಏನೋ ನಾನು ಚಿಕ್ಕವಳಿರುವಾಗಿನಿಂದ  ಜಯಲಲಿತಮ್ಮಮ್ಮ ಎಂದೇ ಆಕೆಯನ್ನು ಪರಿಚಯಿಸುತ್ತಿದ್ದ ಅಪ್ಪ. ಅದೊಂದು ರೀತಿ ನಾವು ಆಕೆಗೆ ಗುಟ್ಟಾಗಿ,ಜೊತೆಗೆ ಪ್ರೀತಿಯಿಂದ ಇಟ್ಟ ಹೆಸರು!

ಅಮ್ಮನಿಗೂ ಗೌರಜ್ಜಿ ಅಂದ್ರೆ ಕುಶಿ . ಬಂದವಳೇ ಕುಶಲೋಪರಿ ವಿಚಾರಿಸಿ ಗೌರಜ್ಜಿಗೆ ಇಷ್ಟದ ಬೆಲ್ಲದ ಚಹಾಕ್ಕೆ  ನೀರು ಕಾಯಿಸಲು ಇಟ್ಟಳು. ಅಲ್ಲೇ ಪಕ್ಕಕ್ಕೆ ಹಾಕಿದ ಮಣೆಯ ಮೇಲೆ ಕುಳಿತ ಗೌರಜ್ಜಿ ಅಡುಗೆ ಮನೆಯನ್ನೊಮ್ಮೆ ಕೂಲಂಕುಶವಾಗಿ ನೋಡಿದಳು. 'ಇಲ್ಲಿರ ಬೀಸಕಲ್ಲು ಎಲ್ಲೋತೆ ?' ಗೌರಜ್ಜಿಯಿಂದ ಪ್ರಶ್ನೆ ಬಂತು. 'ಅಯ್ಯೋ ಈಗೆಲ್ಲ ಮಿಕ್ಸರ್ ,ಬೀಸಕಲ್ಲೆಂತಕೆ' ಅಜ್ಜಿ  ಮತ್ತೆ ತನಗೆ ತಾನೇ ಸಮಾಧಾನ ಮಾಡಿಕೊಂಡನ್ತಿತ್ತು. 
ಗೌರಜ್ಜಿ ನಮ್ಮ ಮನೆಯಲ್ಲೇ ಹುಟ್ಟಿ ಬೆಳೆದವಳು. ಅದ್ಯಾವುದೋ ದೂರದ ಸಂಬಂಧ. ಅಜ್ಜನ ಕಾಲದಲ್ಲಿ ಮನೆಗೆ ಬಂದು ಅಡುಗೆ ಮಾಡಿಕೊಂಡು ಎಲ್ಲರನ್ನೂ ವಿಚಾರಿಸಿಕೊಂಡು ಇದೇ ಮನೆಯಲ್ಲಿಯೇ ಮನೆಯವಳಾಗಿ ಬೆಳೆದಾಕೆ. ನಂತರದ ದಿನಗಳಲ್ಲಿ ಮದುವೆ ಮಕ್ಕಳನ್ನು ಕಾಣದ ಆಕೆಗೆ ಆಧ್ಯಾತ್ಮಿಕತೆ, ಮಡಿ ಇಂತದ್ದರ ಬಗ್ಗೆಯೇ ಹೆಚ್ಚು ಒಲವು ಇದ್ದುದರಿಂದ ಸನ್ಯಾಸತ್ವದ ಬಗ್ಗೆ  ಆಸಕ್ತಿ ಬೆಳೆಯಿತಂತೆ. ಹಾಗೆಯೇ ಆಕೆ ಹತ್ತಿರದ ಮಠಕ್ಕೆ ಹೋಗಿ ಸೇರಿಕೊಂಡಳು ಎಂಬುದು  ನಾನು ಆಕೆಯ ಬಗ್ಗೆ ಕೇಳಿದಾಗಲೆಲ್ಲ ಅಪ್ಪ ಕೊಡುತ್ತಿದ್ದ ವಿವರಣೆ .ಆದರೂ ಆಗಾಗ ತವರುಮನೆಯಂತಿದ್ದ ನಮ್ಮ ಮನೆಗೆ ಆಕೆ ಬಂದಾಗ ನಮಗೆಲ್ಲ ಏನೋ ಒಂದು ರೀತಿ ಸಂಭ್ರಮ. ಮಿತ ಭಾಷೆ ,ಹಸನ್ಮುಖಿ ಜೊತೆಗೆ ಚಟುವಟಿಕೆಯಿಂದ ಕೂಡಿದ ಗೌರಜ್ಜಿ ಎಂದರೆ ಅಪ್ಪ ಅಮ್ಮನಿಗೂ ಪ್ರೀತಿ . 

ಪ್ರತಿ ಭಾರಿ ಮನೆಗೆ ಬರುವ ಮೊದಲು ಮಠಕ್ಕೆ ಹೋದವರೊಂದಿಗೆ ಅಥವಾ ಹೇಗಾದರೂ ಇಂತಹ ದಿನ ತಾನು ಮನೆಗೆ ಬರುವುದಾಗಿ  ಹೇಳಿಟ್ಟಿರುತ್ತಿದ್ದ ಗೌರಜ್ಜಿ ಈ ಭಾರಿ ಹೇಳದೇ ಯಾವ ಮುನ್ಸೂಚನೆಯೂ ಇಲ್ಲದೇ ಬಂದಿರುವುದು ನಮ್ಮೆಲ್ಲರಿಗೆ ಒಂದು ರೀತಿ ಆಶ್ಚರ್ಯವಾಗಿತ್ತು. ಎಂದಿನ ಲವಲವಿಕೆ ಇಲ್ಲದ ಆಕೆಯನ್ನು ನೋಡಿದಾಗ ಎಷ್ಟುಬೇಗ ಆಕೆಗೆ ವಯಸ್ಸಾಗಿ ಹೋಯಿತಲ್ಲ ಎಂದೆನಿಸಿದ್ದು ನಿಜ. 

ಅಂದು ಸಂಜೆ ಅಮ್ಮ ಗೌರಜ್ಜಿಗೆಂದೇ ಮಾಡಿದ್ದ ಉಪ್ಪಿಟ್ಟು ಮತ್ತು ಶಾವಿಗೆ ಪಾಯಸದ ಪಳಹಾರ ತಿನ್ನುತ್ತಿದ್ದ ಗೌರಜ್ಜಿ 'ಪುಟ್ಟಿ ಇಲ್ಲಿ ಬಾ ನನ್ನ ಪಕ್ಕ ಕೂತು ಊಟ ಮಾಡು , ಇನ್ನೇನು ನಿಂಗೆ ನ ಸಿಗ್ತ್ನೋ ಇಲ್ಯೋ' ಎಂದು ಪ್ರೀತಿಯಿಂದ ಮೈದಡವಿದಾಗ ಒಂದು ರೀತಿ ಸಂಕಟವಾದಂತಾಯ್ತು. 'ಅದೆಂತಕೆ ಹಂಗೆ ಹೇಳ್ತೆ ಚಿಕ್ಕಮ್ಮ , ಬರ್ತಿರು ಆಗಾಗ' ಎಂದ ಅಪ್ಪ , ಆತನಿಗೂ ಬೇಸರವಾಗಿರಬೇಕು. 
ಊಟವಾದ ಮೇಲೆ ಎಲ್ಲರೂ ಜಗುಲಿಯಲ್ಲಿ ಕುಳಿತಾಗ ' ಈ ಮನೆಗೆ ಬಂದಾಗ ನಂಗೆ ಬರೀ ಇಪ್ಪತ್ತು ವರ್ಷ , ಈಗ ಎಪ್ಪತ್ತೆಂಟು . ಆಗ ಮನೆ ತುಂಬಾ ರಾಶಿ ಜನ, ಒಳ್ಳೆ ಮದುವೆ ಮನೆತರ ಜನ ತುಂಬಿಕೊಂಡೇ ಇರ್ತಿತ್ತು . ಮನೆ ಹೆಂಗಸರಿಗೆಲ್ಲ ಅಡುಗೆ ಮಾಡಿ ಹಾಕೋದೆ ಒಂದು ಕೆಲಸ ಆಗ್ತಿತ್ತು. ಹಬ್ಬ ಹರಿದಿನ ಅಂದ್ರೆ ವಾರಗಟ್ಟಲೆ ತಯಾರಿ.ಎಷ್ಟು ಬೇಗ ದಿನ ಕಳೆದು ಹೋಯ್ತು ,  ಶಂಕರೂ ನಾನು ಮುಂದಿನ ವಾರದಿಂದ ಕಾಶಿ ರಾಮೇಶ್ವರ ಅಂತ ತೀರ್ಥ ಯಾತ್ರೆಗೆ ಹೋಗ್ತಿದ್ದಿ , ಹೋಗೋ ಮೊದಲು ಒಮ್ಮೆ ಈ ಮನೆಗೆ ಬಂದು ನಿಮ್ಮನ್ನೆಲ್ಲ ನೋಡಿ ಹೋಗೋಣ ಅಂತಲೇ ಬಂದಿದ್ದು' ಹಾಗೆ ಹೇಳುವಾಗ ಆಕೆಗೆ ಈ ಮನೆಯನ್ನು ಕೊನೆ ಬಾರಿ ನೋಡುತ್ತಿದ್ದೆನೇನೋ ಅನ್ನೋ ಸಂಕಟ ಇದ್ದಂತಿತ್ತು. 
ಸನ್ಯಾಸತ್ವದ ಬಗ್ಗೆ ಅತಿಯಾದ ಪ್ರೀತಿ ಹೊಂದಿದ್ದರೂ ತವರು ಮನೆ ಎಂಬ ವ್ಯಾಮೋಹ ತಮ್ಮವರೆಂಬ ಪ್ರೀತಿ ಬಿಡಲಾರದು ಎಂಬುದು ಗೌರಜ್ಜಿಯನ್ನು ನೋಡಿದಾಗ ನನಗೆ ಅನಿಸಿದ್ದು.

ಬೆಳಿಗ್ಗೆ ಹೊರಡುವ ಮುನ್ನ ಅಪ್ಪ ಅಮ್ಮನೂ ಆಕೆಯ ಆಶೀರ್ವಾದ ಪಡೆದು ವಾಪಾಸು ಬರುತ್ತಿದ್ದಂತೆ ಮತ್ತೆ ಆಗಾಗ ಇಲ್ಲಿಗೆ ಬನ್ನಿ ಎಂದರು. ಹೊರಗೆ ಬಂದು ನಿಂತಿದ್ದ ಆಟೋವನ್ನು ಹತ್ತಿ ನಮ್ಮೆಲ್ಲರ ಕಡೆಗೆ ಜೊತೆಗೆ ಮನೆಯ ಕಡೆಗೆ ಇದೇ ಕೊನೆಯ ಭೇಟಿ ಎಂಬಂತೆ ನೋಡಿದ ಆಕೆಯ ನೋಟ ಮನೆಯವರಿಗೆಲ್ಲ ಅಂದು ನಿದ್ರೆ ಬರದಂತೆ ತಡೆದಿತ್ತು. ಅಂದು ಆಟೋ ಹತ್ತಿ ಕಣ್ಣಂಚು ಒದ್ದೆ ಮಾಡಿಕೊಂಡು ಟಾಟಾ ಮಾಡಿದ ಗೌರಜ್ಜಿ ಕೊನೆಗೆ ತೀರ್ಥಯಾತ್ರೆ ಮುಗಿಸಿ ಹಿಂತಿರುಗಿ ಬರದಿದ್ದಾಗ ಆಕೆಗೆ ತಾನು ಬರಲಾಗುವುದಿಲ್ಲ ಎಂಬ ಅರಿವು ಮೊದಲೇ ಇತ್ತೇ ಎಂಬ ಚಿಂತೆ ಇಂದಿಗೂ ಕಾಡುತ್ತದೆ. 


ಅರ್ಪಿತಾ ಹರ್ಷ 
ಲಂಡನ್ 

No comments:

Post a Comment