Sunday 22 April 2012

ಒಂದು ಸುಂದರ ಸಂಜೆ

ಹೊರಗೆ ಸಣ್ಣಗೆ ಮಳೆ . ಸುಮಾರು ೩ ತಾಸು ಮಳೆ ಸುರಿತುತ್ತಲೇ ಇತ್ತು ಮಳೆ ಎಂದರೆ ನಮ್ಮ ಮಲೆನಾಡಿನಲ್ಲಿ ಸುರಿಯುವ ಮಳೆಯಲ್ಲ .ಲಂಡನ್ ನಲ್ಲಿ ಹಾಗೇನಾದರು ಮಳೆ ಬಂದರೆ ಬಹುಷಃ ನೆರೆ ಬಂದಿತೆಂದು ಘೋಷಿಸಿಬಿಡಬಹುದು , ಇಲ್ಲಿ ಬರುವ ಮಳೆ ಕೇವಲ ಹನಿಗಳ ರೂಪದಲ್ಲಿ .ಆದರೂ ಸುಂದರವಾಗಿತ್ತು ಆ ಸಂಜೆ ಮಲೆನಾಡ ಸಂಜೆಯನ್ನು ನೆನಪಿಸುವಂತದ್ದು. ಮಲೆನಾಡುಗಳಲ್ಲಿ ಬೋರ್ಗರೆಯುತ್ತ ಬಂದ ಮಳೆ ಒಮ್ಮೆ ನಿಂತಾದೊಡನೆ ಹೊರ ಹೊರಟರೆ ಅದರ ಆನಂದವೇ ಬೇರೆ . ಮಣ್ಣಿನ ಘಮ ಒಂದು ಕಡೆಯಾದರೆ ಕೆಸರಿನ ಗಿಜಿಗಿಜಿ ಜೊತೆ ಸೇರಿಸುತ್ತದೆ . 
ಲಂಡನ್ ಅಲ್ಲಿ ಮಣ್ಣಿನ ಸುವಾಸನೆ ಬರಲು ಸಾಧ್ಯವಿಲ್ಲ ಏಕೆಂದರೆ ಇಲ್ಲಿ ಎಲ್ಲ ಟಾರ್ ರಸ್ತೆಗಳು ಹಾಗೆ ಮಲೆನಾಡಿನಂತೆ ಎಡೆಬಿಡದೆ ಸುರಿಯುವ ಮಳೆಯೂ ಇಲ್ಲಿ ಸುರಿಯುವುದಿಲ್ಲ ಆದರೆ ಈ ಸಂಜೆ ಒಂದು ರೀತಿಯಲ್ಲಿ ಮಲೆನಾಡನ್ನು ನೆನಪಿಸಿತು. ಬಹಳ ದಿನಗಳ ನಂತರ ನಾನು ನನ್ನವರ ಕೈ ಹಿಡಿದು ಹೊರ ಹೊರಟಿದ್ದು, ಅದರಲ್ಲೂ  ಇಂತಹ ಸಂಜೆ, ಮಳೆ ಬಂದು ನಿಂತ ಸಂಜೆಗಳಲ್ಲಿ ಹೊರಹೊರಡುವುದು ಬಹಳ ಅಪರೂಪ . ಇಂದು ಸಣ್ಣ ಜುಮುರು ಮಳೆ ಬೀಳುತ್ತಿರುವುದು ಗೊತ್ತಿದ್ದೂ ಹೊರಹೊರಟೆವು ಹಾಗೆ ಒಂದು ಸುತ್ತು .ತಂಪಾಗಿ ಬೀಸುವ ಗಾಳಿ ಕೊರೆಯುವ ಚಳಿ ಇಲ್ಲದಿದ್ದರೂ ತಣ್ಣನೆಯ ಗಾಳಿ ಇನ್ನಷ್ಟು ಸ್ವಲ್ಪ ಹೆಚ್ಚೇ ಚಳಿ ನೀಡಿತ್ತು .

 ಏಪ್ರಿಲ್ ತಿಂಗಳಿನಲ್ಲಿ ಇಲ್ಲಿ ಎಲ್ಲಿ ನೋಡಿದರು ಹಸಿರು ಗಿಡಗಳೆಲ್ಲ ಸೊಂಪಾಗಿ ಚಿಗುರಿ ಹೂವು ಬಿಡುವ ಕಾಲವಿದು ಎಲ್ಲಿ ನೋಡಿದರು ಕೆಂಪು ಹಸಿರು ಚಿಗುರು ಮೊಳೆತಿರುವ ಮರಗಳು . ಜೊತೆಗೆ ಟುಲಿಪ್ ಹೂವು . ಕೆಂಪು, ಬಿಳಿ, ಹಳದಿ, ಕೇಸರಿ ಹೀಗೆ ಹಲವು ಬಣ್ಣಗಳ ಟುಲಿಪ್ ಹೂವುಗಳು ನಗುನಗುತ್ತ ರಸ್ತೆಯ ಬದಿಗಳಲ್ಲಿ ನಿಂತಿರುತ್ತವೆ. ಇಲ್ಲಿ ಪಾರ್ಕ್ ಗಳಿಗೇನು ಬರವಿಲ್ಲ ಎಲ್ಲಿ ನೋಡಿದರು ಹೂವಿನ ಪಾರ್ಕ್ ಇಲ್ಲದಿದ್ದರೆ ಚಿಕ್ಕ ಮಕ್ಕಳಿಗೆ ಆಟವಾಡಲು ಮಕ್ಕಳ ಪಾರ್ಕ್ ಗಳು ಕಾಣಸಿಗುತ್ತವೆ. ನಾವು ಹೀಗೆ ಒಂದು ಸುತ್ತು ಪಾರ್ಕ್ ಗೆ ಹೋಗಿ ಅಲ್ಲಿ ಸುತ್ತಲಿನ ಹಸಿರು ಜೊತೆಗೆ ಟುಲಿಪ್ ಹೂವುಗಳ ಫೋಟೋಗಳನ್ನು ತೆಗೆದುಕೊಂಡು ಅಷ್ಟರಲ್ಲೇ ಸ್ವಲ್ಪ ಮಳೆ ಕಡಿಮೆ ಆದದ್ದರಿಂದ ಅಲ್ಲೇ ಕುಳಿತು ಭಾರತದಲ್ಲಿ ಕಳೆದ ದಿನಗಳ ಮೆಲಕು ಹಾಕಿ ಅಲ್ಲಿಂದ ಹೊರಟು ಬಂದೆವು . ಹೋಗುವಾಗ ಸಣ್ಣಗೆ ಜುಮುರುತ್ತಿದ್ದ ಮಳೆ ಈಗ ಮಾಯವಾಗಿತ್ತು ಜೊತೆಗೆ ಕತ್ತಲಾಗುತ್ತಾ ಬಂದಿತ್ತಾದ್ದರಿಂದ ಸೂರ್ಯ ಮುಳುಗುತ್ತಿದ್ದ ಆಗಸವೆಲ್ಲ್ಲ ಕೆಂಪು ಕೆಂಪು . ಹೀಗೆ ಒಂದು ಸುಂದರ ಸಂಜೆ ಆಗಾಗ ಬರುತ್ತಿರಲಿ ಎಂದು ಕೊಳ್ಳುತ್ತಾ ಮನೆ ತಲುಪಿದೆವು .

No comments:

Post a Comment