Wednesday 4 January 2012

ಅಜ್ಜನ ನೆನಪು

ಈ ನೆನಪುಗಳು ಅನ್ನೋದು ಏನೆಲ್ಲ ನೆನಪಿಸಿಬಿಡುತ್ತೆ ಅಲ್ವಾ ಹೀಗೆ ಕುಳಿತು ಸುಮ್ಮನೆ ಬದುಕಿನ ಹಳೆಯ ಪುಟಗಳನ್ನು ತೆಗೆದು ನೋಡುತ್ತಿದ್ದೆ . ಚಿಕ್ಕವರಿದ್ದಾಗ ಎಷ್ಟು ಚನ್ನಾಗಿತ್ತು ಎಂದು ಮನಸ್ಸಿನಲ್ಲಿ ಮೂಡಿಬಂತು . ನನ್ನ ಚಿಕ್ಕಂದಿನ ನೆನಪುಗಳೆಂದರೆ ಅಲ್ಲಿ ಅಜ್ಜನದೊಂದು ದೊಡ್ಡ ಪಾತ್ರ ನಾನು ೨-೩ ನೆ ಕ್ಲಾಸಿನಲ್ಲಿರುವಾಗಲೇ ಅಜ್ಜ ಇಹಲೋಕ ತ್ಯಜಿಸಿದರೂ ಅಜ್ಜನೊಂದಿಗಿನ ನೆನಪುಗಳು ಇನ್ನು ಹಸಿರು. ಆ ದಿನಗಳಲ್ಲಿ ಮನೆ ತುಂಬಾ ಜನರಿರುತ್ತಿದ್ದರು . ನಮ್ಮದು ಒಟ್ಟು ಕುಟುಂಬ ಮನೆಮಂದಿಯೆಲ್ಲ ಒಟ್ಟಿಗೆ ಕುಳಿತು ಊಟ ಮಾಡುವ ಪದ್ಧತಿ ಮೊದಲಿನಿಂದಲೂ ನಡೆದುಕೊಂಡು ಬಂದಿತ್ತು . ನಾನು ಚಿಕ್ಕ ವಳಾದರು ಸಾಲಿನಲ್ಲಿ ಮೊದಲು ನಾನೇ ಕುಳಿತುಕೊಳ್ಳಬೇಕೆಂಬ ಆಸೆ ನನ್ನದಾಗಿತ್ತು ಅದು ನನ್ನ ಪೆರ್ಮನೆಂಟ್ ಜಾಗ ಕೂಡ ಆಗಿತ್ತು ಹಾಗೆ ಅಜ್ಜನದೊಂದು ಜಾಗವಿತ್ತು ಅವರಿಗೆ ಕಣ್ಣು ಕಾಣುತ್ತಿರಲಿಲ್ಲ ಒಂದು ಕೋಲು ಹಿಡಿದು ನಡೆದುಕೊಂಡು ಬರುತ್ತಿದ್ದರು ನನಗೆ ಆ ಕೋಲನ್ನು ನೋಡಿದರೆ ಭಯ ಆದಷ್ಟು ಆ ಕೋಲಿಗೆ ಸಿಗದಿರುವಷ್ಟು ದೂರ ಕೂರುವ ಪ್ರಯತ್ನ ಮಾಡುತ್ತಿದ್ದೆ .ಪ್ರತಿದಿನ ಅಜ್ಜ ಬಂದು ನಿಂತು ಎಡಕ್ಕ ಬಲಕ್ಕ (ಕುಳಿತುಕೊಳ್ಳುವುದು ) ಕೇಳಿಕೊಂಡು ಅದೇ ಜಾಗದಲ್ಲಿ ಕುಳಿತುಕೊಳ್ಳುತ್ತಿದ್ದ .ಎಷ್ಟೋ ಭಾರಿ ಅಜ್ಜ ನನ್ನ ಹತ್ತಿರ ಕರೆದದ್ದಿದೆ ಕುಳಿತುಕೊಳ್ಳಲು ನಾನು ಅಜ್ಜನ ಕೋಲಿಗೆ ಹೆದರಿ ಹೋಗುತ್ತಲೇ ಇರಲಿಲ್ಲ . ಅವರು ಕಣ್ಣು ಕಾಣದಿದ್ದರೂ ಸರಿಯಾಗಿ ಊಟ ಮಾಡುವುದನ್ನು ನೋಡಿ ನಾನು ಹಾಗೆ ಮಾಡುವ ಪ್ರಯತ್ನ ಮಾಡುತ್ತಿದ್ದೆ ತಟ್ಟೆಯಿಂದ ಸ್ವಲ್ಪವು ಹೊರ ಚೆಲ್ಲದೇ ಹಾಕಿರುವುದನ್ನು ವೇಸ್ಟ್ ಮಾಡದೆ ಮಾಡಿರುವ ಎಲ್ಲ ಪದಾರ್ಥ ಗಳನ್ನ ಹಾಕಿಸಿ ಕೊಂಡು ತಿನ್ನುವುದು ಕಲಿತೆ ಎಲ್ಲರೂ ನಾನು ಚೆನ್ನಾಗಿ ಊಟ ಮಾಡುವುದು ಕಲಿತಿದ್ದೇನೆ ಎಂದರು ಅದರ ಕ್ರೆಡಿಟ್ ಅಜ್ಜನಿಗೆ ಸಲ್ಲಬೇಕು ಎಂಬುದು ನನಗೆ ಮಾತ್ರ ಗೊತ್ತಿರುವ ವಿಷಯ . ಇನ್ನು ಅಜ್ಜನಿಗೆ ಊಟಮುಗಿದ ನಂತರ ಒಂದು ದೊಡ್ಡ ಲೋಟದಲ್ಲಿ ಹಾಲು ಕೊಡುತ್ತಿದ್ದರು ಅದನ್ನು ನೋಡಿ ನಾನು ದೊಡ್ಡ ಲೋಟದಲ್ಲಿ ಹಾಲು ಕುಡಿಯಲು ಪ್ರಾರಂಭಿಸಿದೆ ಈಗಲೂ ಮನೆಗೆ ಹೋದರೆ ದೊಡ್ದಲೋಟದಲ್ಲೇ ಹಾಲುಕುಡಿಯುವ ಪರಂಪರೆಯನ್ನು ಉಳಿಸಿಕೊಂಡು ಬಂದಿದ್ದೇನೆ .ಅಜ್ಜ ಪ್ರತಿದಿನ ಆರು ಗಂಟೆ ಆಗುತ್ತಿದ್ದಂತೆ ಮನೆಯ ಹೆಬ್ಬಾಗಿಲನ್ನು ಹಾಕಲು ಹೇಳುತ್ತಿದ್ದ ಅದನ್ನು ಮಾತ್ರ ಮುಂದುವರೆಸಿಕೊಂಡು ಹೋಗಲಾಗಲಿಲ್ಲ ಏಕೆಂದರೆ ಇಂದಿನ ದಿನಗಳಲ್ಲಿ ಯಾರಾದರು ಬಂದರೆ ಮಾತ್ರ ಮನೆಯ ಬಾಗಿಲು ತೆಗೆಯುವ ಅಭ್ಯಾಸವಾಗಿಬಿಟ್ಟಿದೆ .ಕಟ್ಟುಮಸ್ತಾಗಿ ಶಿಸ್ತುಬದ್ದ ಜೀವನ ನಡೆಸಿಕೊಂಡು ಹೋಗುತ್ತಿದ್ದ ಅಜ್ಜನನ್ನು ನೋಡಿ ಕಲಿತ ಅದೆಷ್ಟೋ ಸಂಗತಿಗಳು ನನಗಿನ್ನೂ ನೆನಪಿವೆ ಅದನ್ನು ಇಂದಿಗೂ ಮುಂದುವರೆಸಿಕೊಂಡು ಹೋಗುವ ಪ್ರಯತ್ನ ಮಾಡಿದ್ದಾಗಿದೆ . ಅಜ್ಜನಿಗೆ ಕಣ್ಣು ಕಾಣದಿರುವುದನ್ನೇ ನೆಪವಾಗಿಸಿಕೊಂಡು ಆತನಿಗೆ ಕಾಟ ಕೊಟ್ಟದ್ದಿದೆ ನಾವು ೫-೬ ಜನ ಮಕ್ಕಳೆಲ್ಲ ಸೇರಿ ಅಜ್ಜನಿಗೆ ಕತೆ ಹೇಳುವಂತೆ ಕೇಳಿಕೊಳ್ಳುತ್ತಿದ್ದೆವು ಅವರು ಕತೆ ಹೇಳುತ್ತಿದ್ದಂತೆ ನಾವು ಒಬ್ಬೊಬ್ಬರೇ ಎದ್ದು ಹೋಗಿ ಬಿಡುತ್ತಿದ್ದೆವು ಅಜ್ಜ ಒಬ್ಬರೇ ಕತೆ ಹೇಳುವುದನ್ನು ದೂರದಿಂದ ನೋಡಿ ನಗುತ್ತಿದ್ದೆವು ಆ ದಿನಗಳೆಲ್ಲ ಈಗ ಬರಿ ನೆನಪು .

No comments:

Post a Comment