Showing posts with label ವಿಜಯ ನೆಕ್ಸ್ಟ್ ನಲ್ಲಿ ಪ್ರಕಟಗೊಂಡ ಲೇಖನಗಳು. Show all posts
Showing posts with label ವಿಜಯ ನೆಕ್ಸ್ಟ್ ನಲ್ಲಿ ಪ್ರಕಟಗೊಂಡ ಲೇಖನಗಳು. Show all posts

Monday, 25 April 2016

ನೆನಪುಗಳು ಮಧುರ

My this article published on 22 April 2016 vijayanext newspaper .
ಅದೊಂದು ಗುರುವಾರ , ಮಧ್ಯಾನ್ಹ ೨ ಗಂಟೆಯ ಸಮಯ . ಊಟ ಮಾಡಿ ಆಗಷ್ಟೇ ಮುಗಿಸಿದ್ದೆ . ಏಪ್ರಿಲ್ ತಿಂಗಳಾದ್ದರಿಂದ ಲಂಡನ್ ನಲ್ಲಿ ಅತ್ತ ಕೊರೆಯುವ ಚಳಿಯೂ ಅಲ್ಲ ಇತ್ತ ತಡೆಯಲಾರದ ಬಿಸಿಲೂ ಇಲ್ಲ ಎಂಬಂತ ಸ್ಥಿತಿ. ಮನೆಯೊಳಗೆ ಒಳ್ಳೆಯ ಹವಾಮಾನ ,ಹಾಗಂತ ಹೊರಗೆ ಹೋಗುವಂತೆಯೂ ಇಲ್ಲ , ಮೋಡ ಕವಿದಿದೆ. ಇಲ್ಲಿ ಹಾಗೆಯೇ ಅದೇನೋ ಇದ್ದಕ್ಕಿದ್ದಂತೆ ಜಿನುಗು ಮಳೆ ಬಂದು ಬಿಡುತ್ತದೆ. ನಮ್ಮ ಮಲೆನಾಡಿನಂತೆ ಮೋಡ ಕಪ್ಪುಗಟ್ಟುವುದಿಲ್ಲ , ಗುಡುಗು ಮಿಂಚಿನ ಆರ್ಭಟವಿಲ್ಲ. ಬೋರ್ಗರೆಯುವ ಧಾರಾಕಾರ ಮಳೆಯಂತೂ ಇಲ್ಲಿ ಬರುವುದೇ ಇಲ್ಲ. ಬಂದರೆ ಆಗೊಂದು ಈಗೊಂದು ಅನ್ನುವಂತೆ ಸಣ್ಣ ಗಿಟಿಗಿಟಿ ಹನಿ. ಸಪ್ಪೆ ವಾತಾವರಣ. 

ಕಿಟಕಿಯಿಂದ ಹೊರಗೆ ನೋಡುತ್ತಿದ್ದೆ ,ಬಿಕೋ ಎನ್ನುವ ರಸ್ತೆ ,ಒಂದು ನರಪಿಳ್ಳೆಯೂ ಕಾಣುತ್ತಿಲ್ಲ. ಅದೇನೋ ಇದ್ದಕ್ಕಿದ್ದಂತೆ ಹೊಟ್ಟೆಯಲ್ಲಿ ಚುಳ್ ಎಂಬ ಸೆಳೆತ. ಸ್ವಲ್ಪ ನೀರು ಕುಡಿದೆ. ಇನ್ನೂ ಜಾಸ್ತಿ ಜುಂ ,ಜುಂ  ನೋವು ,ತಡೆಯಲಾರೆ ಅನ್ನಿಸಿಬಿಟ್ಟಿತ್ತು ಹೇಗೋ ಸುಧಾರಿಸಿಕೊಂಡೆ. ಹಾಸಿಗೆಯ ಮೇಲೆ ಹಾಗೆಯೇ ಮಲಗಿದೆ ,ನಿದ್ದೆ ಸುಳಿಯಲಿಲ್ಲ ಈಗ  ಪ್ರತೀ ೫ ನಿಮಿಷಕ್ಕೊಮ್ಮೆ ಜುಂ ಜುಂ ವೈಬ್ರೇಟ್ ಆಗುವಂತಹ ಅನುಭವ. ಒಂದು ವಾರದ ಹಿಂದೆಯಷ್ಟೇ ಭಾರತದಿಂದ ಬಂದಿದ್ದ ಅಮ್ಮನಿಗೆ ಲಂಡನ್ ನ ಸಮಯದ ವ್ಯತ್ಯಾಸದಿಂದಾಗಿ ಮಂಪರು . ರಾತ್ರಿ ನಿದ್ದೆ ಬಾರದು ,ಮದ್ಯಾನ್ಹ ಮಲಗದಿದ್ದರೆ ಪಾಪ ಆಯಾಸ . ಸಂಜೆ ಹೊರಗೆ ಕರೆದುಕೊಂಡು ಹೋಗುವುದಾಗಿ ಹೇಳಿದ್ದೆ ಅವಳಿಗೆ ಇಲ್ಲಿನ ಸ್ಪ್ರಿಂಗ್ ನಲ್ಲೆ ಕೆಟ್ಟ ಚಳಿ 'ಇನ್ನು ಚಳಿಗಾಲದಲ್ಲಿ ಬಂದಿದ್ದರೆ ಬಹಳ ಕಷ್ಟವಾಗಿಬಿಡುತ್ತಿತ್ತು' ಹಾಗಂತ ಆಕೆಯೇ ನನಗೆ ಆಗಾಗ ಹೇಳುತ್ತಿದ್ದಳು.  

ಸ್ವಲ್ಪ ಹೊತ್ತಿನಲ್ಲಿ ೫ ನಿಮಿಷಕ್ಕೆ ಬರುತ್ತಿದ್ದ ನೋವು ೨ ನಿಮಿಷಕ್ಕೊಮ್ಮೆ ಈ ಬಾರಿ ಇನ್ನೂ ಸ್ವಲ್ಪ ಜಾಸ್ತಿ ಜೂಮ್ ಜೂಮ್  , ತಡೆಯಲಾಗಲಿಲ್ಲ . ಭಯ ಒಂದು ಕಡೆ ಎದ್ದು ಹೋಗಿ ಅಮ್ಮಾ ಹೊಟ್ಟೆ ನೋವು ಅಂದದ್ದಷ್ಟೇ , ದಡಾರ್ ಎಂದು ಎದ್ದು ಹೌದಾ ನೋವು ಶುರುವಾಗೇ ಬಿಡ್ತಾ ? ನಾ ಅಂದುಕೊಂಡಿದ್ದೆ ಬೆಳಿಗ್ಗೆಯಿಂದ ನಿನ್ನ ನೋಡಿದಾಗಲೇ ನನಗೆ ಗೊತ್ತಿತ್ತು !! ಫೋನ್ ಮಾಡು ಬೇಗ ಬೇಗ . 

ಸರಿ ಆಫೀಸಿನಿಂದ ಪತಿ ಬಂದಿದ್ದೂ ಆಯಿತು , ಆಸ್ಪತ್ರೆಗೆ ಫೋನ್ ಮಾಡಿದೆ ,ಆ ಕಡೆಯಿಂದ ನರ್ಸ್ ಇದು ಮೊದಲನೆಯದಾ ? ನೋವಿನಲ್ಲೇ ಉತ್ಸಾಹದಿಂದ ಹೇಳಿದೆ 'ಹೌದು' . ಅದಕ್ಕೆ ಇಷ್ಟು ಭಯ ನಿಮಗೆ . ನೋವು ಕೊನೇ  ಸ್ಟೇಜ್ ಗೆ ಹೋದಮೇಲೆ ಬನ್ನಿ . ಈಗಿನ್ನೂ ಪ್ರಾರಂಭವಷ್ಟೇ !!

ಈಗಿನ್ನೂ ಪ್ರಾರಂಭ ? ಅವಾಕ್ಕಾದೆ . ಇನ್ನು ಹೇಗೆ ನೋವು ಸಹಿಸಿಕೊಳ್ಳುವುದು ? ಗಂಟೆ ಸರಿಯುತ್ತಿತ್ತು,ಆದರೆ ಅವತ್ತೇಕೋ ಬಹಳ ನಿಧಾನಗತಿಯಲ್ಲಿ. ಆಗಾಗ ಸಮಯ ನೋಡಿದೆ ೭, ೯ ಹೀಗೆ ಸಮಯ ನಿಧಾನವಾಗಿ ಹೋಗುತ್ತಿತ್ತು. ಅಮ್ಮ ಒತ್ತಾಯ ಮಾಡಿ ಊಟ ಕೊಟ್ಟಳು . ಗಂಟಲಲ್ಲಿ ಇಳಿಯಲಿಲ್ಲ . ಈ ನೋವೊಂದು ಮುಗಿದರೆ ಸಾಕು. ರಾತ್ರಿ ಮಲಗುವ ಮೊದಲು ಮತ್ತೆ ಆಸ್ಪತ್ರೆಗೆ ಫೋನ್ ಮಾಡು ಅಮ್ಮನ ಒತ್ತಾಯ. 

'ಎಷ್ಟು ನಿಮಿಷಕ್ಕೊಮ್ಮೆ ನೋವಿದೆ ?'  ೧ ನಿಮಿಷ ಎಂದೆ , 'ಇನ್ನೂ ಸಮಯವಿದೆ ,ಈಗ ಬರುವುದು ಬೇಡ'.  ಮರು ಮಾತನಾಡುವ ಅವಕಾಶವನ್ನೂ ಕೊಡದೆ ಅತ್ತಕಡೆ ಫೋನ್ ಕುಕ್ಕಿಯಾಗಿತ್ತು. ಮಲಗಿದೆ . ನಿದ್ದೆ ಬರುವುದಾದರೂ ಹೇಗೆ ? ಅದೇನೋ ಒಂದು ಮಂಪರು ಅಷ್ಟರಲ್ಲಿ ಯಮಯಾತನೆ ನೋವು ತಡೆಯಲಾಗುತ್ತಿಲ್ಲ. ಎದ್ದು ಕುಳಿತೆ,ಅಳಬೇಕೆನಿಸಿತು ಆಗಲಿಲ್ಲ !! ರೂಂ ನಿಂದ ಹೊರಬಂದೆ . ಅಮ್ಮ ದಡಾರ್ ಎಂದು ಎದ್ದು ಕುಳಿತಳು ,ಏನಾಯ್ತು ? ಆಕೆಗೆ ಗಲಿಬಿಲಿ ಏನಿಲ್ಲ ನೋವು ,ನನ್ನದು ಅದೇ ಸಪ್ಪೆ ಮುಖ. ಸ್ವಲ್ಪ ಹೊತ್ತು ಕುಳಿತೆ ,ಓಡಾಡಿದೆ , ಇಲ್ಲ ಕಡಿಮೆ ಇಲ್ಲ ಹೆಚ್ಚಾಗುತ್ತಲೇ ಇದೆ. ಸಮಯ ಬೆಳಗಿನ ಜಾವ ೫ . ಈ ಭಾರಿ ಆಸ್ಪತ್ರೆಗೆ ಪತಿ ಫೋನ್ ಮಾಡಿದರು . ಆ ಕಡೆಯಿಂದ ಬಹಳ ಸೌಮ್ಯವಾಗಿ ಎಲ್ಲಾ ಮಾಹಿತಿಯನ್ನೂ ಪಡೆದಾಕೆ 'ಕರೆದುಕೊಂಡು ಬನ್ನಿ' ಎಂದಳು. ಅಬ್ಬಾ ಕೊನೆಗೂ ನೋವು ಇನ್ನೇನು ಮಾಯವಾಗಿಬಿಡುತ್ತದೆ ! ಒಂದು ನಿಟ್ಟುಸಿರು . 

ಗುರುವಾರ ಪ್ರಾರಂಭವಾದ ನೋವು ಶನಿವಾರವಾದರೂ ಅದೇ ಪ್ರಮಾಣದಲ್ಲಿತ್ತು , ಇಡೀ  ಅಸ್ಪತ್ರೆಯಲ್ಲೆಲ್ಲಾ ನನ್ನದೇ ಓಡಾಟ.  ಎಷ್ಟು ನಡೆದಾಡಿದರೂ ಏನೂ ಪ್ರಯೋಜನವಾಗಲಿಲ್ಲ. ಅಮ್ಮ ಒಂದು ಕಡೆ ದೇವರ ಧ್ಯಾನ ಮಾಡುತ್ತಿದ್ದಳು. ಪತಿ ನಿದ್ದೆಯಿರದೆ ಕಣ್ಣು ತೇಲುತ್ತಿತ್ತು. ಈ ಕಾಯುವುದರ ಕಷ್ಟ ಅಷ್ಟಿಷ್ಟಲ್ಲ ಎಂಬುದು ಅವರ ನೋವು. ಈ ನೋವು ಇನ್ನೂ ಎಷ್ಟು ಸಹಿಸಿಕೊಂಡಿರಬೇಕು ಎಂಬುದು ನನ್ನ ವ್ಯಥೆ. 

ಅಂತೂ ಭಾನುವಾರ ಮಧ್ಯಾನ್ಹ ೩ ಗಂಟೆಯ ಸಮಯ , ಡಾಕ್ಟರ್ ಬಂದರು . ಭಾರತದ ಬಹುಶಃ ಗುಜರಾತಿನ ಕಡೆಯವರಿರಬಹುದಾದ ಲೇಡಿ ಡಾಕ್ಟರ್ . ಇನ್ನು ಕಾಯಲಾಗುವುದಿಲ್ಲ ಆಪರೇಷನ್ ಮಾಡುತ್ತೇವೆ ಇಲ್ಲಿ ಸಹಿ ಹಾಕಿ . ಪಾಪರ್ ಸಮೇತ ಬಂದಿದ್ದರು. ನನಗೆ ಒಳಗೊಳಗೇ ಕುಶಿ ಆದರೂ ಇದನ್ನು ೩ ದಿನದ ಮೊದಲೇ ಮಾಡಬಹುದಿತ್ತಲ್ಲ ಎಂಬ ಸಿಟ್ಟು ಬೇರೆ. ಅಮ್ಮ ಅಲ್ಲೇ ಗೊಣಗಿದಳು ' ನೋವು ತಿಂದಿದ್ದೂ ತಪ್ಪಿಲ್ಲ ಆಪರೇಶನ್ ಮಾಡಿಸಿಕೊಳ್ಳುವುದೂ ತಪ್ಪಿಲ್ಲ,ನಮ್ಮ ಭಾರತದಲ್ಲಗಿದ್ದರೆ ಇಷ್ಟು ಕಷ್ಟ ಪಡಬೆಕಾಗಿರಲಿಲ್ಲ'. ನನಗೆ ಮಾತು ಹೊರಡಲಿಲ್ಲ. ಹೌದು ಎನಿಸಿತ್ತು ಅಮ್ಮನ ಮಾತು. 

ಅದಾಗಿ ಸ್ವಲ್ಪ ಹೊತ್ತಿಗೆ ಅಂದರೆ ೩-೪ ಗಂಟೆಯ ನಂತರ ಆಪರೇಶನ್ ತಿಯೇಟರ್ ಒಳಗೆ ಕರೆದುಕೊಂಡು ಹೋದರು. ಅನಸ್ತೇಶಿಯ ಕೊತ್ತಿದ್ದಷ್ಟೇ ಗೊತ್ತು. ಮತ್ತೆ ಮಗುವಿನ ಅಳು. ನನ್ನ ಕಂದ ಹುಟ್ಟಿದ್ದ . ಅದಾಗಿ ಈಗ ಒಂದು ವರ್ಷವಾಗಿಬಿಟ್ಟಿದೆ. ಆಗ ಬರೀ ಅಳುತ್ತಿದ್ದ ಮಗ ಈಗ ಮನೆಯೆಲ್ಲಾ ಓಡಾಡುತ್ತಾ ನಗುತ್ತಾ ತುಂಟಾಟ ಮಾಡುತ್ತಾನೆ. ಮೊದಲ ಹುಟ್ಟು ಹಬ್ಬದ ಶುಭಾಶಯಗಳು ಮಗನಿಗೆ  :)

Arpitha Harsha

Saturday, 27 February 2016

ಕುಂದಾದ್ರಿ

Published in 26th feb 2016 vijayanext

ಅದೊಂದು ವೀಕೆಂಡ್ . ಊರಿಗೆ ಹೋದ ನಾವು ಎಲ್ಲಾದರೂ ಹತ್ತಿರದಲ್ಲಿ ಸುತ್ತಲು ಹೋಗಬೇಕು ಎಂದು ನಿರ್ಧರಿಸಿದ್ದೆವು. ನಗರಗಳ ಓಡಾಟ ಬೇಸರ ತರಿಸಿದ್ದರಿಂದ ಯಾವುದಾದರೂ ಒಂದು ಒಳ್ಳೆಯ ತಾಣಕ್ಕೆ ಹೋಗಬೇಕು ಎಂಬುದು ನಮ್ಮ ಮನೆಯವರೆಲ್ಲರ ಅಪೇಕ್ಷೆಯಾಗಿತ್ತು. ಹಾಗೆಂದೇ ನಿರ್ಧರಿಸಿ ಪರಿಚಯದವರನ್ನು ವಿಚಾರಿಸಿದಾಗ ಸಿಕ್ಕಿದ್ದು ಈ ಬೆಟ್ಟ. ಸುಮಾರು ನಾಲ್ಕರಿಂದ ಐದು ಕಿ ಮೀ  ನಷ್ಟು ದೂರ ಎತ್ತರದ ಬೆಟ್ಟದೆಡೆಗೆ ನಾವು ಹೊರಟ ಕಾರು ನಮ್ಮನ್ನು ಎಳೆಯಲಾರದೆ ಎಳೆದುಕೊಂಡು ಹೋಗುತ್ತಿದ್ದರೆ ಸುತ್ತಲೂ ದಟ್ಟ  ಕಾಡು. ಅದು ಸಂಜೆಯ ಸಮಯವಾಗಿದ್ದರಿಂದಲೋ ಏನೋ ತಣ್ಣನೆಯ ಗಾಳಿ , ಒಂದು ಕಾರು ಹೋಗುತ್ತಿದ್ದರೆ ಇನ್ನೊಂದು ಎದುರಿನಿಂದ ಬರಲಾರದಂತ ಇಕ್ಕಟ್ಟು ರಸ್ತೆಯಾದದ್ದರಿಂದಲೋ ಏನೋ ರಸ್ತೆ ಬಿಕೋ ಎನ್ನುತ್ತಿತ್ತು. ಕಾರು ಮೇಲೇರುತ್ತಿದ್ದಂತೆ ಕಿಟಕಿಯಿಂದ ಸುಮ್ಮನೆ ಗಾಳಿಗೆ ಹೊರಗೆ ಮುಖ ಒಡ್ಡಿದರೆ ಅದ್ಬುತ ಲೋಕ. ಸುಂದರವಾದ ಹಸಿರು ತುಂಬಿದ ಅರಣ್ಯಗಳ ಬೀಡು. ಅದೊಂದು ಅದ್ಬುತ ಲೋಕವೇ ಸರಿ. ಕಾರಿನಲ್ಲಿ ಹಳೇ ಹಿಂದಿ ಚಿತ್ರಗೀತೆಗಳ ಸರಮಾಲೆ ಇಳಿಸಂಜೆಯ ಸೂರ್ಯ ಮುಳುಗುವ ಹೊತ್ತಿನ ಆ ಸುಂದರ ಕ್ಷಣ ಅಕ್ಷರಗಳಲ್ಲಿ ವರ್ಣಿಸುವುದು ಕಷ್ಟ ಅದನ್ನು ನೋಡಿಯೇ ಅನುಭವಿಸಬೇಕು. 

ಕಾರು ಇಳಿದು ಮೆಟ್ಟಿಲುಗಳನ್ನು ಏರಿದರೆ ಬೆಟ್ಟದ ತುದಿ ತಲುಪಿದರೆ ಅಲ್ಲಿ ಕಾಣುವುದು ಪ್ರಕೃತಿಯ ಸುಂದರ ತಪ್ಪಲು. ಸುತ್ತಲೂ ಕಲ್ಲು ಬಂಡೆಗಳನ್ನು ಹೊಂದಿ ಮಧ್ಯದಲ್ಲಿ ದೇವಸ್ಥಾನವನ್ನು ಹೊಂದಿರುವ ಈ ಸ್ಥಳದಲ್ಲಿ ನಿಂತು ಒಮ್ಮೆ ಕೆಳ ನೋಡಿದರೆ ಅಲ್ಲಿ ಕಾಣುವುದು ಹಸಿರು , ಬರೀ ಹಸಿರು. ಬೀಸುವ ತಂಗಾಳಿಗೆ ಮೈಯೊಡ್ಡಿ ಈ ಹಸಿರನ್ನು ಕಣ್ಣು ತುಂಬಿಸಿಕೊಳ್ಳುವುದು ಯಾರಿಗೆ ತಾನೇ ಇಷ್ಟವಾಗುವುದಿಲ್ಲ ?

ಹೌದು ನಾನು ಈಗ ಹೇಳ ಹೊರಟಿರುವ  ,ಇಷ್ಟೊಂದು ಸುಂದರವಾದ ಪ್ರಕೃತಿಯ ಸೊಬಗನ್ನು ನೋಡಲು ನೀವೂ ಕೂಡ  ನೋಡ ಬಯಸುತ್ತೀರಾದರೆ  ಕುಂದಾದ್ರಿ ಸರಿಯಾದ ಸ್ಥಳ. ತೀರ್ಥಹಳ್ಳಿಯಿಂದ ಸುಮಾರು ೨೩ ಕಿ ಮೀ ಅಂತರದಲ್ಲಿರುವ ಶಿವಮೊಗ್ಗ ಜಿಲ್ಲೆಯಲ್ಲಿ ಬರುವ ಈ ಕುಂದಾದ್ರಿ ಜೈನರ ಪವಿತ್ರ ಸ್ಥಳವೂ ಹೌದು. ಹದಿನೇಳನೆ ಶತಮಾನದ ಜೈನ ಮುನಿಗಳ ಕಾಲದಿಂದಲೂ ಇರುವ ಈ ಕುಂದಾದ್ರಿಯು ಸುಮಾರು ೮೦೦ ಮೀಟರ್ ಎತ್ತರದಲ್ಲಿರುವ ಬೆಟ್ಟದ ಮೇಲಿದೆ. ಜೈನ ಮೂರ್ತಿಗಳನ್ನು ಒಳಗೊಂಡಿರುವ ಈ ಜೈನ ಬಸದಿಯಲ್ಲಿ ನಿತ್ಯವೂ ಪೂಜೆಯೂ ನಡೆಯುತ್ತದೆ ಮತ್ತು ಸಾವಿರಾರು ಜೈನ ಭಕ್ತರು ಕೂಡ ಇಲ್ಲಿ ಪ್ರತಿ ವರ್ಷ ಭೇಟಿ ನೀಡುತ್ತಾರೆ.  ತೀರ್ಥಹಳ್ಳಿ ಮತ್ತು ಉಡುಪಿ ಮಾರ್ಗವಾಗಿ ಸಂಚರಿಸುವಾಗ ಸಿರುವ ಈ ಕುಂದಾದ್ರಿ ಪ್ರವಾಸಿಗರು ಭೇಟಿ ನೀಡಬಹುದಾದ ಸುಂದರ ಸ್ಥಳ . ಹಸುರಿನಿಂದ ಕೂಡಿರುವ ಈ ಸ್ಥಳ ಗಾಳಿ ಬೆಳಕಿನ ಜೊತೆಗೆ ಮನಸ್ಸನ್ನು ತಂಪು ಮಾಡುತ್ತದೆ. ಈ ಬೆಟ್ಟವು ಬಹಳ ಎತ್ತರದಲ್ಲಿ ಇರುವುದರಿಂದ ಇಲ್ಲಿ ನಿಂತು ಸುತ್ತಲಿನ ಹಸಿರ ಸಿರಿಯನ್ನು ಕಣ್ಣು ತುಂಬಿಕೊಳ್ಳಬಹುದು.ಮೇಲಿನವರೆಗೂ ಟೆಂಪೋ ಅಥವಾ ಜೀಪು ಹೋಗುವ ರಸ್ತೆಯನ್ನು ಇತ್ತೀಚಿಗೆ ಮಾಡಿರುವುದರಿಂದ ಸಾಕಷ್ಟು ಪ್ರವಾಸಿಗರ ಗಮನವನ್ನು ಸಹ ಇದು ಸೆಳೆಯುತ್ತಿದೆ. ರಸ್ತೆ ಕೂಡ ಯಾವುದೇ ತೊಡಕುಗಳಿಲ್ಲದೆ , ಗುದ್ದು ಗುಂಡಿಗಳಿಲ್ಲದೆ ಸುಲಭವಾಗಿ ಸಾಗಬಹುದಾದ ರಸ್ತೆಯಾಗಿದೆ .ಈ ಬೆಟ್ಟ  ಇತ್ತೀಚಿಗೆ ಹೆಚ್ಚು ಜನಪ್ರಿಯಗೊಳ್ಳುತ್ತಿದ್ದು ಕರ್ನಾಟಕದಿಂದಷ್ಟೇ ಅಲ್ಲ ,ಗುಜರಾತ್ , ಮಹಾರಾಷ್ಟ್ರ ಹೀಗೆ ಉತ್ತರ ಭಾರತದ ಇನ್ನಿತರ ಸ್ಥಳಗಳಿಂದ ಜೈನ ಭಕ್ತರು ಇಲ್ಲಿ ಬಂದು ಒಂದು ದಿನ ನೆಲೆಸಿ ಪೂಜೆಯ ಜೊತೆಗೆ ಇಲ್ಲಿನ ಅದ್ಬುತ ಪ್ರಕೃತಿಯ ಮಡಿಲಲ್ಲಿ ಮಿಂದು ಹೋಗುತ್ತಾರೆ ಎಂಬುದು ಇಲ್ಲಿನ ಅರ್ಚಕರ ಅಂಬೋಣ. ಅಷ್ಟೇ ಅಲ್ಲ ಸಾವಿರಾರು ವರ್ಷಗಳ ಹಿಂದೆ ಕಲ್ಲಿನಿಂದ ಕಟ್ಟಲಾದ ಜೈನ ಬಸದಿಯು ಇಂದಿಗೂ ಕೂಡ ವಾಸ್ತು ಶಿಲ್ಪಗಳನ್ನು ಉಳಿಸಿ ಕೊಂಡು ಬಂದಿರುವುದು ಇದರ ವಿಶೇಷತೆಯೇ ಸರಿ. ಇತ್ತೀಚಿಗೆ  ಜೀರ್ಣೋದ್ಧಾರ ಮಾಡಿ ಕೆಲವೊಂದು ಬದಲಾವಣೆಯನ್ನು ಕೂಡ ಮಾಡಲಾಗಿದೆ ಎನ್ನುತಾರೆ ಇಲ್ಲಿನ ಅರ್ಚಕರು. 

ಈ ಕುಂದಾದ್ರಿಯ ಜೈನ ದೇಗುಲದ  ಪಕ್ಕದಲ್ಲಿರುವ ಕೊಳವು ಅಂತರ ಗಂಗೆಯಾಗಿದ್ದು ಸುಮಾರು 118 ಅಡಿ ಆಳವಿದೆ . ಎಂದೂ ಬತ್ತದೇ ಸದಾ ನೀರನ್ನು ಹೊಂದಿರುವ ಈ ಕೊಳವನ್ನು ಒಮ್ಮೆ ಸ್ವಚ್ಛಗೊಳಿಸಲು ಒಂದು ವಾರ ಬೇಕಾಗುವುದು ಎಂದು ಅಲ್ಲಿನ ಅರ್ಚಕರು ತಿಳಿಸುತ್ತಾರೆ.ಆಗಾಗ ಇದನ್ನು ಸ್ವಚ್ಚಗೊಳಿಸುವುದು ಕೂಡ ನಡೆದು ಕೊಂಡು ಬರುತ್ತಿದೆ ಎನ್ನಲಾಗುತ್ತದೆ. ಸ್ವಚ್ಚವಾದ ನೀರನ್ನು ಹೊಂದಿರುವ ಈ ರೀತಿಯ ಸಾಕಷ್ಟು ಅಂತರಗಂಗೆಗಳನ್ನು ಇಲ್ಲಿ ಕಾಣಬಹುದು. ಈ ಸ್ಥಳ ಕಲ್ಲಿನ ಬಂಡೆಗಳಿಂದ ಸುತ್ತುವರೆದಿದ್ದು ಕೆಳಗೆ ಇಳಿದು ಕೂಡ ಸಾಕಷ್ಟು ಪ್ರಕೃತಿ ವೀಕ್ಷಣೆ ಮಾಡಬಹುದು. ಕಲ್ಲು ಬಂಡೆಗಳ  ಮಧ್ಯದಲ್ಲಿ ಅಲ್ಲಲ್ಲಿ ಅಂತರಗಂಗೆ ಎದ್ದಿರುವುದು ಕೂಡ ವಿಶೇಷವೆನ್ನಬಹುದು.  ಅತಿ ಎತ್ತರದ ಬೆಟ್ಟವಿರುವುದರಿಂದ  ಸೂರ್ಯಾಸ್ತಮಾನವೂ  ಇಲ್ಲಿ ಸುಂದರವಾಗಿ ಕಾಣಿಸುತ್ತದೆ . ಆಗುಂಬೆಗಿಂತ ಎತ್ತರದಲ್ಲಿ ಈ ಕುಂದಾದ್ರಿ ಬೆಟ್ಟ ಇರುವುದರಿಂದ ಮೋಡ ಕವಿದು ಮುಸುಕು ಇರದಿದ್ದಲ್ಲಿ ಇಲ್ಲಿಂದ ಸೂರ್ಯಾಸ್ತ ಸುಂದರವಾಗಿ ಕಾಣಿಸುತ್ತದೆ ಎನ್ನಲಾಗುತ್ತದೆ. 

ಪ್ರಕೃತಿಯ ಹಚ್ಚ ಹಸುರನ್ನು ಹೊಂದಿರುವ ಈ ಸುಂದರ ಸ್ಥಳದಲ್ಲಿ ಚಲನಚಿತ್ರದ ಶೂಟಿಂಗ್ ಕೂಡ ನಡೆದಿದೆ. ಕುಂದಾದ್ರಿ ತಲುಪಲು ಸುಮಾರು ನಾಲ್ಕು ಕಿ ಮೀ ನಷ್ಟು ಎತ್ತರಕ್ಕೆ ಏರಬೇಕಾಗಿದ್ದು ಈಗ ಇಲ್ಲಿ ರಸ್ತೆ ಮಾಡಿರುವುದರಿಂದ ಜೀಪ್ , ಕಾರು ಗಳು ತುದಿಯವರೆಗೆ ಹೋಗುತ್ತವೆ. ಮೇಲೆ ಜೈನ ಬಸದಿಯನ್ನು ನೋಡಿಕೊಂಡು ಸುತ್ತಲೂ ಇರುವ ಕೊಳ ಮತ್ತು ಪ್ರಕೃತಿಯ ಸೊಬಗನ್ನು ಸವಿದು ಅಲ್ಲೇ ಕುಳಿತು ಮನಸ್ಸನ್ನು ಮುದಗೊಳಿಸಿಕೊಂಡು ಒಂದು ದಿನವನ್ನು ಸುಂದರವಾಗಿ ಕಳೆಯಲು  ಇದು ಸರಿಯಾದ ಸ್ಥಳ. ಜೊತೆಗೆ ನಮಗೆ ಬೇಕಾದ ಚುರುಮುರಿ ಇನ್ನಷ್ಟು ಕುರುಕಲು ತಿಂಡಿಗಳಿದ್ದರೆ ಅದನ್ನು ತಿನ್ನುತ್ತಾ ಕುಳಿತುಬಿಟ್ಟರೆ ಎದ್ದು ಬರಲು ಕೂಡ ಮನಸ್ಸಾಗದು.ಅದಲ್ಲದೆ  ಇತ್ತೀಚಿಗೆ ಸಾಕಷ್ಟು ಧಾರವಾಹಿಗಳಲ್ಲೂ ಕೂಡ ಈ ಸ್ಥಳವನ್ನು ಚಿತ್ರೀಕರಣಕ್ಕೆ ಬಳಸಿರುವುದನ್ನು ಕಾಣಬಹುದು. 

ಇಲ್ಲಿಂದ ೨೩ ಕಿ ಮೀ ಅಂತರದಲ್ಲಿ ತೀರ್ಥಹಳ್ಳಿ ಇದ್ದು ಇಲ್ಲಿ ರಾಮೇಶ್ವರ ದೇವಸ್ಥಾನ ಮತ್ತು ಅಲ್ಲಿಯ ಪಕ್ಕದ ತುಂಗಾ ನದಿಯ ತಟ ಕೂಡ ಸಂಜೆಯ ಸಮಯದಲ್ಲಿ ಸುಂದರವಾಗಿರುತ್ತದೆ.  ಪ್ರಕೃತಿಯ ಸೊಬಗನ್ನು ಸವಿಯಬಯಸುವವರು ಕುಂದಾದ್ರಿ ಯನ್ನು ವರ್ಷದ ಯಾವುದೇ ಸಮಯದಲ್ಲಿ ಕೂಡ ಭೇಟಿ ನೀಡಬಹುದಾದರೂ ಇದು ಆಗುಂಬೆಗೆ ಸಮೀಪವಿರುವುದರಿಂದ ಅಲ್ಲಿನ ಸೂರ್ಯಾಸ್ತ ನೋಡಲು ಸರಿಯಾದ ಸಮಯ ಡಿಸೆಂಬರ್ ತಿಂಗಳು.

Sunday, 7 February 2016

ಗುಡವಿ ಪಕ್ಷಿಧಾಮ



My this article got published in vijayanext 06/02/16

ಪ್ರಕೃತಿಯ ಸೌಂದರ್ಯವನ್ನು ಹೆಚ್ಚಿಸುವಲ್ಲಿ ಪಕ್ಷಿಗಳ ಪಾಲು ಕೂಡ ಮಹತ್ವದ್ದು. ವಿವಿದ ರೀತಿಯ ಪಕ್ಷಿಗಳು ಒಂದೆಡೆ ಸೇರಿದರೆ ಅದನ್ನು ನೋಡಿ ಕಣ್ಣು ತಂಪು ಮಾಡಿಕೊಳ್ಳುವುದೆಂದರೆ ಸುಂದರ.ಕರ್ನಾಟಕದಲ್ಲಿ ರಂಗನತಿಟ್ಟು, ಮಂಡಗದ್ದೆ  ಇಂತಹ ಹೆಸರಾಂತ ಪಕ್ಷಿಧಾಮಗಳ ಪಟ್ಟಿಯಲ್ಲಿ ಗುಡವಿ ಕೂಡ ಸೇರುತ್ತದೆ.ಗುಡವಿ ಪಕ್ಷಿಧಾಮ ಕರ್ನಾಟಕದ ಪ್ರಸಿದ್ಧ ಪಕ್ಷಿಧಾಮಗಳಲ್ಲಿ ಒಂದು. ಇದು ಸೊರಬ ತಾಲೂಕಿನಲ್ಲಿದೆ . ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನಿಂದ 15 ಕಿ ಮೀ ಅಂತರದಲ್ಲಿ ಸೊರಬ ಬನವಾಸಿ ಮಾರ್ಗವಾಗಿ ಇರುವ ಈ ಗುಡವಿ ಒಂದು ಪುಟ್ಟ ಹಳ್ಳಿ. ಈ ಹಳ್ಳಿಯ ಒಂದು ಭಾಗದಲ್ಲಿ ಸುಮಾರು  74 ಚದರ ಕಿ ಮೀ ನಷ್ಟು ಜಾಗದಲ್ಲಿ ಈ ಪಕ್ಷಿಧಾಮವನ್ನು ನಿರ್ಮಿಸಿದ್ದಾರೆ. ವಿವಿಧ ರೀತಿಯ ಪಕ್ಷಿಗಳು ವರ್ಷದ ಕೆಲವು ಸಮಯದಲ್ಲಿ ಬಂದು ಇಲ್ಲಿ ಒಟ್ಟುಗೂಡುವುದರಿಂದ ಇದೊಂದು ಸುಂದರ ಪಕ್ಷಿಧಾಮವಾಗಿ ನಿರ್ಮಿತವಾಗಿದೆ. ಇದನ್ನು ಪ್ರವಾಸೋದ್ಯಮ ಇಲಾಖೆಯವರು ಕಾಳಜಿಯಿಂದ ಸ್ವಚ್ಚವಾಗಿ ಕಾಪಾಡಿಕೊಂಡು ಬಂದಿರುವುದು ಕೂಡ ಮೆಚ್ಚಬೇಕಾದ ಸಂಗತಿ.  

ಗುಡವಿ ಪಕ್ಷಿಧಾಮದ ಒಳಗೆ ಹೊಕ್ಕುತ್ತಿದ್ದಂತೆ ನಮಗೆ ಕಂಡು ಬರುವುದು ಮಕ್ಕಳು ಆಡಲಿಕ್ಕೆ ನಿರ್ಮಿಸಿರುವ ಪಾರ್ಕ್ , ಅಲ್ಲಿ ಬಂದ  ಮಕ್ಕಳು ಜೋಕಾಲಿ ಜಾರುಬಂಡಿ ಹೀಗೆ ಇನ್ನಿತರ ಆಟಗಳನ್ನು ಆಡಿ ಸಮಯ ಕಳೆಯುತ್ತಿದ್ದರೆ ದೊಡ್ಡವರು ಪಕ್ಷಿ ವೀಕ್ಷಣೆಗೆ ತಮ್ಮ ಪ್ರಯಾಣ ಬೆಳೆಸುತ್ತಿದ್ದುದು ಕಾಣಿಸುತ್ತಿತ್ತು.  ಹಕ್ಕಿಗಳು ಅಲ್ಲಲ್ಲಿ ಗುಂಪು ಕಟ್ಟಿಕೊಂಡು ಮರಗಳ ಸಂದಿಗಳಲ್ಲಿ ಅಡಗಿ ಕುಳಿತಿದ್ದರೆ ಅದನ್ನು ನೋಡಲು ಎತ್ತರದ ವೀಕ್ಷಣಾ ಸ್ಥಳವನ್ನು ಕೂಡ ಇಲ್ಲಿ ಮಾಡಲಾಗಿದೆ. ನಡೆದುಕೊಂಡು ಹೋಗುವ ದಾರಿಯಲ್ಲಿ ಸುತ್ತಲೂ ಹಸಿರಾದ ಗದ್ದೆ ಇರುವುದರಿಂದ ತಂಪು ಗಾಳಿ ಮತ್ತು ಸುಂದರ ಪ್ರಕೃತಿಯ ನೋಟ ನಮ್ಮನ್ನು ಸೆಳೆಯುತ್ತಿತ್ತು.ಪ್ರವಾಸೋಧ್ಯಮ ಇಲಾಖೆ ಮಾಡಿರುವ ಎತ್ತರದ ನಿಂತು ನೋಡಬಹುದಾದ ಕಟ್ಟಡವನ್ನು ಮೆಟ್ಟಿಲ ಮೂಲಕ ಹತ್ತಿ ಮೇಲೆ ಹೋಗಿ ನಿಂತು ನೋಡಿದರೆ ಅಲ್ಲಲ್ಲಿ ಕಪ್ಪು ಮತ್ತು ಬಿಳಿ ಹಕ್ಕಿಗಳ ಗುಂಪು ಕಾಣಿಸುತ್ತಿತ್ತು. ಜೊತೆಗೆ ಕ್ಯಾಮೆರಾ ಇದ್ದುದ್ದರಿಂದ ಅದರಲ್ಲಿ ಜೂಮ್ ಮಾಡಿ ನೋಡಿದ್ದರಿಂದ ಅದು ಹಕ್ಕಿಗಳ ದೊಡ್ಡ ಗುಂಪು ಎಂಬುದು ಸ್ಪಷ್ಟವಾಗುವಂತಿತ್ತು. ಇನ್ನೂ ಮುಂದೆ ಹೋಗುತ್ತಿದ್ದಂತೆ ಹಕ್ಕಿಗಳ ಗೂಡಿಗೆ ಹತ್ತಿರವಾದ ಕಟ್ಟಡ ಕಟ್ಟಿರುವುದರಿಂದ ಹತ್ತಿರದಿಂದಲೇ ನೋಡಬಹುದು.  ಇಲ್ಲಿ ಪ್ರಕೃತಿ  ಸವಿಯನ್ನು ಸವಿಯುವುದರ ಜೊತೆಗೆ ಸಾವಿರಾರು ಪಕ್ಷಿಗಳನ್ನು ನೋಡಿ ಮನ ತಣಿಸಿಕೊಳ್ಳಬಹುದು. ನೀವು ಪಕ್ಷಿ ಪ್ರಿಯರಾಗಿದ್ದು ವಿವಿಧ ರೀತಿಯ ಹಕ್ಕಿಗಳ ಪರಿಚಯ ನಿಮಗಿದ್ದಲ್ಲಿ ಇದು ಇನ್ನೂ ವಿಶೇಷವಾಗಿ ಕಾಣಿಸುವುದರಲ್ಲಿ ಅನುಮಾನವಿಲ್ಲ.ಸುಮಾರು 200 ಕ್ಕೂ ಹೆಚ್ಚು ರೀತಿಯ ಬೇರೆಬೇರೆ ಪ್ರಭೇದದ ಹಕ್ಕಿಗಳು ಇಲ್ಲಿ ಬಂದು ಸೇರುತ್ತವೆ ಎನ್ನಲಾಗುತ್ತದೆ. 

ಇಲ್ಲಿನ ಗದ್ದೆ ಮತ್ತು ಮರಗಳ ಕೆಳಗೆ ನೀರು ತುಂಬುವುದರಿಂದ ಅಕ್ಟೋಬರ್ ನಲ್ಲಿ ಬೇರೆಬೇರೆ ದೇಶದಿಂದ ಹಲವಾರು ಹಕ್ಕಿಗಳು ಇಲ್ಲಿ ಬರಲು ಪ್ರಾರಂಭವಾಗುತ್ತದೆ. ಮಳೆಗಾಲ ಮುಗಿದಾದ ಮೇಲೆ ಇಲ್ಲಿ ನೀರು ಸರಿಯಾಗಿ ತುಂಬುವುದರಿಂದ ಹಕ್ಕಿಗಳ ವಾಸಕ್ಕೆ ಇದು ಸರಿಯಾದ ಸ್ಥಳವಾಗುತ್ತದೆ ,ವಿವಿಧ ಹಕ್ಕಿಗಳು ಇಲ್ಲಿ ಒಟ್ಟಿಗೆ ಬಂದು ಸೇರುವುದನ್ನು ಆ ಹಕ್ಕಿಗಳ ಹಾರಾಟವನ್ನು ನೋಡುವುದೇ ಒಂದು ಸಂಭ್ರಮ. ಆದರೆ ಇತ್ತೀಚಿಗೆ ಪ್ರಕೃತಿಯಲ್ಲಿ ಆಗುತ್ತಿರುವ ಬದಲಾವಣೆ ಮತ್ತು ಮಳೆ ಕೂಡ ಕಡಿಮೆಯಾದ  ಕಾರಣ ಹಕ್ಕಿಗಳ ಸಂಖ್ಯೆ ಕಡಿಮೆಯಾಗಿದೆ ಎಂದು ಅಲ್ಲಿನ ಉಸ್ತುವಾರಕರು ಹೇಳುತ್ತಾರೆ. ಈ ಬಾರಿ ಮಳೆ ಕಡಿಮೆಯಾದ್ದರಿಂದ ಹಕ್ಕಿಗಳು ಕೂಡ ಕಡಿಮೆ ಸಂಖ್ಯೆಯಲ್ಲಿ ಬಂದು ಸೇರಿದ್ದವು. 

ವೈಟ್ ಐಬಿಸ್ ,ಸ್ನೇಕ್ ಬರ್ಡ್ , ಲಿಟಲ್ ಎಗ್ರೆಟ್ , ಸ್ಪೂನ್ ಬಿಲ್ , ನೈಟ್ ಹೆರೋನ್ ,ಪಿನ್ ಟೈಲ್ ,ಕೂಟ್ ,ಪರ್ಪಲ್ ಮೆರಾನ್ , ಇಂಡಿಯನ್ ಮೆರಾನ್ ಇನ್ನೂ ಮುಂತಾದ ೨೫ ಕ್ಕೂ ಹೆಚ್ಚು ವಿವಿಧ ತಳಿಯ ಪಕ್ಷಿಗಳು ದೇಶ ವಿದೇಶದಿಂದ  ಬಂದು ಇಲ್ಲಿ ಸೇರುತ್ತವೆ. ನವೆಂಬರ್ ನಿಂದ ಫೆಬ್ರವರಿಯವರೆಗೆ ಇಲ್ಲಿ ಬಂದು ಸೇರುವ ಹಕ್ಕಿಗಳು ಫೆಬ್ರವರಿಯ ನಂತರ ಮತ್ತೆ ಹಾರಿ ವಲಸೆ ಹೋಗುತ್ತವೆ.  ಈ ಸಮಯದಲ್ಲಿ ಸುಮಾರು 40 ಸಾವಿರಕ್ಕೂ ಅಧಿಕ ಹಕ್ಕಿಗಳು ಇಲ್ಲಿ ಬಂದು ಸೇರುತ್ತವೆ. 

ಚಳಿಗಾಲದಲ್ಲಿ ಹಕ್ಕಿಗಳು ಎಲ್ಲೆಲ್ಲಿಂದಲೋ  ವಲಸೆ ಬಂದು ಗೂಡು ಕಟ್ಟಿಕೊಂಡು ಮರಿ ಮಾಡುವ ಹಕ್ಕಿಗಳನ್ನು ನೋಡಿದರೆ ಅದ್ಬುತ ಎನಿಸುತ್ತದೆ. ಇಷ್ಟೇ ಅಲ್ಲದೆ ಸುಂದರವಾಗಿ ಸ್ವಚ್ಚತೆಯನ್ನು ಕಾಪಾಡಿಕೊಂಡು ಪಕ್ಷಿಗಳನ್ನು ಎತ್ತರದಿಂದ ನಿಂತು ನೋಡಿದರೆ ಸುಂದರವೆನಿಸುತ್ತವೆ.  ಪಕ್ಷಿ ವೀಕ್ಷಣೆಗೆ ಅನುಕೂಲವಾಗುವಂತೆ ಪ್ರವಾಸೋದ್ಯಮ ಇಲಾಖೆ ಉತ್ತಮ ವ್ಯಯಸ್ಥೆ ಮಾಡಿ ಕೊಟ್ಟಿರುವುದನ್ನು ಕೂಡ ಇಲ್ಲಿ ಕಾಣಬಹುದು .ಸಾಕಷ್ಟು ಎತ್ತರದ ಮರಗಳು ಇಲ್ಲಿರುವುದರಿಂದ ಮಂಗಗಳು ಕೂಡ ಇಲ್ಲಿ ಬೀಡು ಬಿಟ್ಟಿದ್ದು ಹೋದವರನ್ನು ತನ್ನ ಚೇಷ್ಟೆಯ  ಮೂಲಕ ಆಕರ್ಷಿಸುತ್ತದೆ. 

ಹಕ್ಕಿಗಳ ಮೇಲೆ ವಿಶೇಷ ಆಸಕ್ತಿ ಇರುವವರು ಅದನ್ನು ನೋಡಲೆಂದೇ ದೊಡ್ದ ಲೆನ್ಸ್ ಇರುವ ಕ್ಯಾಮೆರಾ ಹಿಡಿದುಕೊಂಡು ದೂರದಿಂದಲೇ ಒಂದೊಂದೇ ಹಕ್ಕಿಗಳ ಸೆರೆ ಹಿಡಿಯುತ್ತಿರುವುದನ್ನು ಇಲ್ಲಿ ಕಾಣಬಹುದು. ದೇಶ ವಿದೇಶಗಳಿಂದ ಸಾಕಷ್ಟು ಪಕ್ಷಿ ಪ್ರೇಮಿಗಳು ಇಲ್ಲಿ ಪ್ರತಿ ವರ್ಷ ಬರುತ್ತಾರೆ ಎನ್ನಲಾಗುತ್ತದೆ. 
ಭೇಟಿ ನೀಡಲು ಸರಿಯಾದ ಸಮಯ :-
ವಿವಿಧ ತಳಿಯ ಪಕ್ಷಿಗಳು ಚಳಿಗಾಲದಲ್ಲಿ ಇಲ್ಲಿ ವಲಸೆ ಬಂದು ಸೇರುವುದರಿಂದ ಅಕ್ಟೋಬರ್ ನಿಂದ ಡಿಸೆಂಬರ್ ಇಲ್ಲಿಗೆ ಭೇಟಿ ನೀಡಲು ಸರಿಯಾದ ಸಮಯ.  

ಮಾರ್ಗ :- ಬೆಂಗಳೂರಿನಿಂದ ಸಾಗರಕ್ಕೆ ನೇರ ರೈಲಿನಲ್ಲಿ ಬಂದು ಅಲ್ಲಿಂದ ಬಸ್ಸಿನ ಮೂಲಕ ಅಥವಾ ಕಾರಿನಲ್ಲಿ (ಸಾಗರದಿಂದ 60 ಕಿ ಮೀ )ತೆರಳಬಹುದು. ಸೊರಬದಿಂದ ಸುಮಾರು 15 ಕಿ ಮೀ ಅಂತರದಲ್ಲಿದ್ದು ಸೊರಬದಿಂದ ಕೂಡ ಕಾರು ಅಥವಾ ಬಸ್ಸಿನಲ್ಲಿ ತೆರಳಬಹುದು. ಇಲ್ಲಿಂದ ಹತ್ತಿರದಲ್ಲಿ ಬನವಾಸಿ ಕೂಡ ಇರುವುದರಿಂದ ಎರಡನ್ನೂ ಒಂದೇ ದಿನದಲ್ಲಿ ನೋಡಬಹುದು. 

ಹತ್ತಿರದ ಪ್ರವಾಸಿ ಸ್ಥಳಗಳು :-
ಸೊರಬ ಬನವಾಸಿ ಮಾರ್ಗವಾಗಿರುವ ಈ ಸ್ಥಳ ಬನವಾಸಿ ಮಧುಕೇಶವ ದೇವಾಲಯಕ್ಕೆ ಹತ್ತಿರವಾಗುತ್ತದೆ.  ಇಕ್ಕೇರಿ , ಕೆಳದಿ , ಜೋಗ್ ಫಾಲ್ಸ್ ಕೂಡ ಇಲ್ಲಿಗೆ ಹತ್ತಿರದ ಪ್ರಸಿದ್ಧ ಪ್ರವಾಸಿ ಸ್ಥಳಗಳು. 

Arpitha Harsha 

Saturday, 7 November 2015

ಮಗುವೇ ನೀನು ನಕ್ಕರೆ

Published in vijayanext 

ಪ್ರೀತಿಯ ಪುಟ್ಟ 
ಅದಾಗಲೇ ನೀ ಬಂದು ಇಂದಿಗೆ ನಾಲ್ಕು ತಿಂಗಳು ಕಳೆದುಹೋದವು ಎಂದರೆ ನಂಬಲಸಾಧ್ಯ. ಎಲ್ಲರೂ ಇದ್ದರೂ ಇಲ್ಲದಂತಿರುವ ಈ ದೂರದ ಲಂಡನ್ ದೇಶದಲ್ಲಿ ಒಬ್ಬಳೇ ಕುಳಿತು ಕೈಯಗಲದಷ್ಟಿರುವ ನಿನ್ನನ್ನು ಎತ್ತಿಕೊಳ್ಳಲೂ ಬಾರದಿದ್ದ ನಾನು ಹೇಗೆ ನೋಡಿಕೊಳ್ಳಲಿ ಎಂಬ ಆತಂಕ ನೀ ಕೈಗೆ ಬಂದ ದಿನವೇ ಅದು ಹೇಗೋ ಮಾಯವಾಗಿ ಬಿಟ್ಟಿತ್ತು. ನನ್ನಲ್ಲಿಲ್ಲದ ಏನೋ ಒಂದು ಶಕ್ತಿಯನ್ನು ತಂದು ಕೊಟ್ಟಿದ್ದು ನೀನೇ . ನೀ ಹುಟ್ಟಿದ ಘಳಿಗೆಯಲ್ಲೇ ನನ್ನಲ್ಲಿ ಆವರಿಸಿಕೊಂಡಿದ್ದ ಅಷ್ಟೂ ಭಯ ದೂರವಾಗಿ ನಾ ಒಬ್ಬಳೇ ನಿನ್ನ ನೋಡಿಕೊಳ್ಳಬಲ್ಲೆ ಎಂಬ ಅದೇನೋ ಧೈರ್ಯ ಬಂದುಬಿಟ್ಟಿತ್ತು. ಅಂದು ಕೇವಲ ಕೈಯಗಳವಿದ್ದ ನೀನು ಇಂದು ಕೈತುಂಬಾ ಎತ್ತಿಕೊಂಡು ಮುದ್ದಾಡುವಷ್ಟು ದೊಡ್ಡವನಾಗಿಬಿಟ್ಟಿದ್ದೀಯ. 

ಹೌದು ನೀನು ಬಂದ ಕ್ಷಣದಿಂದ ದಿನಗಳು ಕ್ಷಣಗಳಂತೆ ಕಳೆಯುತ್ತಿದೆ. ಲೈಫು ತುಂಬಾ ಬ್ಯುಸಿ . ಮಲಗಿದರೂ ನಿನ್ನದೇ ಯೋಚನೆ. ಅಡುಗೆ ಮನೆಯಲ್ಲಿದ್ದರೂ ನೀನು ಅತ್ತಂತೆಯೇ ಕೇಳುತ್ತದೆ. ಒಟ್ಟಾರೆ ಹೇಳಬೇಕೆಂದರೆ ನಿನ್ನ ಬಿಟ್ಟು ಬೇರೇನೂ ಮನಸಲ್ಲಿಲ್ಲ.  ನಿನ್ನ ಬಿಟ್ಟು ಬೇರೇನನ್ನೂ ಮಾತನಾಡಲಾಗದು , ಮಾಡಲಾಗದು.ಬೆಳಗಿನ ಮುಂಜಾವದಲ್ಲಿ ಎದ್ದು  ನಿನ್ನ ಪುಟ್ಟ ಅಗಲದ ಕಣ್ಣುಗಳನ್ನು ಇನ್ನಷ್ಟು ಅಗಲಿಸಿ ನನ್ನೆಡೆ ನೋಡಿ ನೀ ನೀಡುವ ಆ ನಗು ಇಡೀ ದಿನ ನನ್ನನ್ನು ಕಾಡುತ್ತದೆ .  ಏನೋ ಹೇಳಬೇಕು ಎಂದೆನಿಸಿ ಹೇಳಲಾಗದೇ ನೀ ಅಳುತ್ತಿದ್ದರೆ ನಿನ್ನ ಕಣ್ಣೀರು ನನಗೂ ಕಣ್ಣು ಮಂಜಾಗಿಸುತ್ತದೆ. ಸುತ್ತಲೂ ನಿನಗಾಗಿಯೇ ಆಡಲು ತಂದಿರುವ ಆಟಿಕೆಗಳಿದ್ದರೂ ಅಮ್ಮನೇ ಬೇಕು ಎಂಬ ನಿನ್ನ ಮನಸ್ಸು ನನಗೆ ಮನಸ್ಸನ್ನು ಇನ್ನಷ್ಟು ಬೆಚ್ಚಗಾಗಿಸುತ್ತದೆ. ಮನೆಯ ತುಂಬಾ ನಿನ್ನ ಮುಗ್ಧ ನಗುವಿನ ಫೋಟೋ ಹಾಕಿ ಅದನ್ನು ನೀ ಮಲಗಿದಾಗಲೆಲ್ಲಾ ನೋಡುವುದೇ ಒಂದು ಖುಷಿ. ನಿದ್ದೆ ಮಂಪರಿನಲ್ಲಿ ನೀ ನೀಡುವ ನಗು ಇನ್ನೂ ಸೊಗಸು. ಮನೆಯಿಂದ ಹೊರಗೆ ಕರೆದುಕೊಂಡು ಹೋದರೆ  ಬೆರಗು ಕಣ್ಣುಗಳಿಂದ  ನೀನು ಸುತ್ತಲೂ  ನೋಡುತ್ತಿದ್ದರೆ ನಿನ್ನ ಬೆರಗನ್ನು ಕಣ್ಣು ತುಂಬಿಸಿಕೊಳ್ಳಲು ನಾನೂ ನಿನ್ನಷ್ಟೇ ಕಾತುರನಾಗಿರುತ್ತೇನೆ. 

ಅಪರಿಚಿತರನ್ನು ಕಂಡಾಗಲೂ ಕೂಡ ನೀನು ನೀಡುವ ಸುಂದರ ನಗು ಕೆಲವೊಮ್ಮೆ ಮಗುವಿನ ಮನಸ್ಸು  ಎಷ್ಟು ನಿಷ್ಕಲ್ಮಶ ಎಂಬುದನ್ನು ನೆನಪಿಸುತ್ತದೆ. ದಿನದಿಂದ ದಿನಕ್ಕೆ ನನಗೊಂದು ಅಚ್ಚರಿಯನ್ನು ಹುಟ್ಟಿಸುವ ನಿನ್ನ ಹೊಸ ಚಟುವಟಿಕೆಗಳು ಹೀಗೆಯೇ ಸದಾ ಮುಂದುವರೆಯಲಿ. ಅಮ್ಮನನ್ನು ಕಂಡಾಗ ನಾ ನಿನ್ನ ಬಲ್ಲೆ ಎಂಬ ನಿನ್ನ ಸುಂದರ ಎಂತವರನ್ನೂ ಕಲಕುವ ನಗು ಇನ್ನಷ್ಟು ಅಗಲವಾಗಲಿ.ನೀನು ನಿನ್ನ ಪುಟ್ಟ ಕೈಗಳಿಂದ ನನ್ನ ಮುಖವನ್ನು ಹಿಡಿಯಲು ಪ್ರಯತ್ನಿಸುವಾಗ ಆಗುವ ಆನಂದ ಪದಗಳಿಗೆ ಎಟುಕದು.ಪುಟ್ಟ ಪುಟ್ಟ ಕಾಲುಗಳನ್ನು ನಿನ್ನ ಶಕ್ತಿಯನ್ನೆಲ್ಲಾ ಬಳಸಿ ಮೇಲೆತ್ತುವುದನ್ನು ನೋಡಿದರೆ ಮನಸ್ಸಿಗೆ ಮುದವೆನಿಸುತ್ತದೆ.ಒಟ್ಟಾರೆಯಾಗಿ ನೀ ಬಂದಾಗಿನಿಂದ ಮನಸ್ಸು ಹಾರಾಡುತ್ತಿದೆ.ಜೀವನಕ್ಕೊಂದು ಹೊಸ ಕಳೆ ಬಂದಿದೆ. 

ನಿನ್ನ ತುಂಟತನಗಳನ್ನು ನೋಡಲು ಸದಾ ಕಾಯುತ್ತಿರುವ ನಿನ್ನ ಅಮ್ಮ . 


Arpitha Harsha

London

Wednesday, 25 March 2015

ಆಕ್ಸ್ಫರ್ಡ್

Published in vijayanext


ಆಕ್ಸ್ಫರ್ಡ್  ಹೆಸರು ಕೇಳದವರಿಲ್ಲ. ಇಡೀ ಜಗತ್ತಿನಾದ್ಯಂತ ಹೆಸರುವಾಸಿಯಾಗಿರುವ ಮತ್ತು ಸಾಕಷ್ಟು ವಿದ್ಯಾರ್ಥಿಗಳು ಓದಲು ಬಯಸುವ,ಕನಸು ಕಾಣುವ ಸ್ಥಳ ಆಕ್ಸ್ಫರ್ಡ್. ಇದು ದಕ್ಷಿಣ ಇಂಗ್ಲೆಂಡ್ ನಲ್ಲಿದೆ. ಲಂಡನ್ ನಿಂದ ಸುಮಾರು ೫೩ ಮೈಲಿ ಅಂತರವಿರುವ ಆಕ್ಸ್ಫರ್ಡ್ ಪ್ರವಾಸಿಗರನ್ನು ಕೈಬೀಸಿ ಕರೆಯುವ ಒಂದು ಮುಖ್ಯ ತಾಣ. ಲಂಡನ್ ಗೆ ಬಂದವರೆಲ್ಲ ಆಕ್ಸ್ಫರ್ಡ್ ನೋಡದೆ ಹಿಂತಿರುಗುವುದಿಲ್ಲ. ಹಚ್ಚ ಹಸುರಿನಿಂದ ಕಂಗೊಳಿಸುವ ಈ ಸಿಟಿ ಸಾಕಷ್ಟು ಪಾರ್ಕ್ ಮತ್ತು ನಿಸರ್ಗದತ್ತ ನೋಟವನ್ನು ಕೂಡ ಒಳಗೊಂಡಿದೆ. ಅಷ್ಟೇ ಅಲ್ಲ ಅಗಲವಾದ ರಸ್ತೆಗಳನ್ನು ಹೊಂದಿರುವ ಸುತ್ತಲೂ ವಿಶ್ವವಿದ್ಯಾಲಯಗಳನ್ನು ಹೊಂದಿ ಪ್ರವಾಸಿಗರನ್ನು ಆಕರ್ಷಿಸುತ್ತಿರುವ ತಾಣ ಆಕ್ಸ್ಫರ್ಡ್. ಸಾಕಷ್ಟು ಮ್ಯೂಸಿಯಂ ,ಲೈಬ್ರರಿಗಳನ್ನು ಹೊಂದಿರುವ ಈ ಆಕ್ಸ್ಫರ್ಡ್ ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳಿಗೆ ಹೆಚ್ಚು  ಹೆಸರುವಾಸಿ.

ಆಕ್ಸ್ಫರ್ಡ್ ವಿಶ್ವವಿದ್ಯಾಲಯ:

ಆಕ್ಸ್ಫರ್ಡ್ ವಿಶ್ವವಿದ್ಯಾಲಯ ಎಂದೇ ಜಗತ್ಪ್ರಸಿದ್ಧಿ ಪಡೆದ ಈ ಸ್ಥಳ ಪ್ರಪಂಚದಲ್ಲೇ ಇಂಗ್ಲಿಷ್ ಮಾತನಾಡಲು ಪ್ರಾರಂಭಿಸಿದ ಮೊದಲ ಮತ್ತು ಅತ್ಯಂತ ಹಳೆಯ ವಿಶ್ವವಿದ್ಯಾಲಯ ಎಂದು ಹೇಳಲಾಗುತ್ತದೆ. ಅತಿ ಹಳೆಯ ವಿಶ್ವವಿದ್ಯಾಲಯಗಳು ಇಂದಿಗೂ ಕೂಡ ಇರುವುದು ಆಶ್ಚರ್ಯವೇ ಸರಿ ಎನ್ನಬಹುದು. ಆಕ್ಸ್ಫರ್ಡ್ ಶೈರ್ ನ ತಪ್ಪಲಿನಲ್ಲಿರುವ ಈ ಆಕ್ಸ್ಫರ್ಡ್ ಎಂಬ ಸ್ಥಳವನ್ನು  ಎಂಟನೇ ಶತಮಾನದಲ್ಲಿ ಮೊದಲು ಕಟ್ಟಲಾಯಿತು. ಕನಸಿನ ಗೋಪುರಗಳ ನಗರಿ ಎಂದೇ ವರ್ಣಿಸಲಾಗುವ ಈ ನಗರದಲ್ಲಿ ಕ್ರಿಶ್ಚಿಯನ್ ಮಾದರಿಯ ಕೆಥೆಡ್ರಾಲ್ ಮತ್ತು ಗೋಪುರಗಳು ಇಂದಿಗೂ ಜನರನ್ನು ಆಕರ್ಷಿಸುತ್ತಿವೆ.

ಶಿಕ್ಷಣವೇ ಇಲ್ಲಿನ ಅರ್ಥಿಕ ಅಭಿವೃದ್ಧಿಗೆ ಕಾರಣವಾಗಿರುವುದರ ಜೊತೆಗೆ ಕೈಗಾರಿಕೆ,ಮುದ್ರಣ ಪ್ರಕಾಶನ ಕೂಡ ಪ್ರಮುಖ ಪಾತ್ರ ವಹಿಸಿದೆ ಎನ್ನಲಾಗುತ್ತದೆ.ವಿಶ್ವವಿದ್ಯಾಲಯ ಜಗತ್ಪ್ರಸಿದ್ಧಿ ಹೊಂದಿರುವುದರಿಂದ ಪ್ರಪಂಚದಾದ್ಯಂತ ಬೇರೆಬೇರೆ ಸ್ಥಳಗಳಿಂದ ವಿವಿಧ ಜನಾಂಗದ,ತಮ್ಮದೇ ಆದ ವಸ್ತ್ರ ವಿನ್ಯಾಸವನ್ನು ಬಳಸುವ ವೈವಿದ್ಯತೆ ಹೊಂದಿರುವ ಜನರನ್ನು,ವಿದ್ಯಾರ್ಥಿಗಳನ್ನು  ಇಲ್ಲಿ ಕಾಣಬಹುದು.

ಲಂಡನ್ ನಿಂದ ಆಕ್ಸ್ಫರ್ಡ್ ಗೆ ರೈಲ್ವೇ ಮಾರ್ಗವಾಗಿ ಹೋದರೆ ಸುಮಾರು ಒಂದರಿಂದ ಒಂದೂವರೆ ಗಂಟೆ ಪ್ರಯಾಣ.ಲಂಡನ್ ನ ರೆಡಿಂಗ್ ನಿಂದ ಸುಮಾರು ೨೫ ಕಿ ಮೀ ಅಂತರದಲ್ಲಿದ್ದು ಕಾರಿನಲ್ಲಿ ತೆರಳಿದರೆ ಅರ್ಧ ಗಂಟೆಯಲ್ಲಿ ತಲುಪಬಹುದು. ಟ್ರೈನ್,ಬಸ್ಸುಗಳ ಸಾಕಷ್ಟು ವ್ಯಯಸ್ಥೆಯ ಜೊತೆಗೆ ಇಲ್ಲಿನ ಜನ ಸೈಕ್ಲಿಂಗ್ ಗೆ ಕೂಡ ಅಷ್ಟೇ ಪ್ರಾಮುಖ್ಯತೆ ನೀಡುತ್ತಾರೆ. ಅಗಲವಾದ ರಸ್ತೆಯಲ್ಲಿ ಸೈಕ್ಲಿಂಗ್ ಮಾಡುತ್ತಾ ಹೊರಟರೆ ಪ್ರಕೃತಿಯ ಮತ್ತು ನಗರದ ಸೊಬಗನ್ನು ಇನ್ನಷ್ಟು ಸವಿಯಬಹುದು.

Friday, 29 August 2014

ಮಾಯಾಗಾರ ಸ್ಟೋನ್ ಹೆಂಜ್!

 ಡೆಸ್ಕ್ಟಾಪ್ ನಲ್ಲಿನ  ಸ್ಕ್ರೀನ್ ಅನ್ನು ನಿಜವಾಗಿ ನೋಡಿದರೆ ಎಷ್ಟು ಆನಂದವೆನಿಸಬಹುದು?  ಹೌದು ಆ ಆನಂದ ನಮಗೆ ಸಿಕ್ಕಿದ್ದು
ಸ್ಟೋನ್ ಹೆಂಜ್ ನೋಡಿದಾಗ. ಕಲ್ಲುಗಳಿಂದ ಸುತ್ತುವರೆದ ಸ್ಟೋನ್ ಹೆಂಜ್ ನ ಚಿತ್ರಣವನ್ನು ನೀವೂ ಸಾಮಾನ್ಯವಾಗಿ ಡೆಸ್ಕ್ಟಾಪ್ ನ ಸ್ಕ್ರೀನ್ ಆಗಿ ಸೇವ್ ಮಾಡಿಟ್ಟಿರುವುದನ್ನು ನೋಡಿರಬಹುದು. ಈ ಜಗತ್ಪ್ರಸಿದ್ದ ಸ್ಟೋನ್  ಹೆಂಜ್ ಇರುವುದು ಇಂಗ್ಲೆಂಡ್ ನಲ್ಲಿ. ಲಂಡನ್ ನಿಂದ ಸುಮಾರು ಎರಡೂವರೆ ತಾಸಿನ ಪ್ರಯಾಣದ ಸ್ಟೋನ್ ಹೆಂಜ್ ಇರುವುದು ಸ್ಯಾಲಿಸ್ಬರಿ ಸಮೀಪದ ವಿಲ್ಟ್ಶೈರ್ ನಲ್ಲಿ.

ಇದೊಂದು ಇತಿಹಾಸಪೂರ್ವ ಸ್ಮಾರಕವಾಗಿದ್ದು ಇಂಗ್ಲೆಂಡ್ ಗೆ ಬಂದವರು ಇದನ್ನು ನೋಡಲೇಬೇಕು. ನವಶಿಲಾಯುಗದ ಜನರು ಇದನ್ನು ತಮ್ಮದೇ ಆದ ತಾಂತ್ರಿಕವಿಧಾನದಿಂದ ಕಟ್ಟಿದರು ಎನ್ನಲಾಗುತ್ತದೆ. ಕ್ರಿ ಪೂ ೩೦೦೦ ವರ್ಷಗಳ ಹಿಂದೆ ವೃತ್ತಾಕಾರದ ಮಾದರಿಯಲ್ಲಿ ಈ ಸ್ಟೋನ್ ಹೆಂಜ್ ಅನ್ನು ಕಟ್ಟಲಾಯಿತು. ನೂರಾರು ವರ್ಷಗಳ ಹಿಂದೆ ಈ ಜಾಗವನ್ನು ಸ್ಮಶಾನವಾಗಿ ಬಳಸಲಾಗುತ್ತಿತ್ತು ಎಂದು ಕೂಡ ಹೇಳಲಾಗುತ್ತದೆ. ಕಲ್ಲಿನಿಂದ ಸುತ್ತುವರೆದ ಈ ಸ್ಥಳವನ್ನು ಕಟ್ಟಲು ಸಾಕಷ್ಟು ಸಮಯ ತೆಗೆದುಕೊಂಡಿತು ಎನ್ನಲಾಗುತ್ತದೆ.

ಎಡ್ವರ್ಡ್ ಸಾಯ್ಮೊರ್ ಈ ಸ್ಟೋನ್ ಹೆಂಜ್ ಎಂಬ ಪೂರ್ವ ಇತಿಹಾಸ ಸ್ಥಳದ ಒಡೆಯ. ಸ್ಟೋನ್ ಹೆಂಜ್ ಅನ್ನು ವೃತ್ತಾಕಾರವಾಗಿ ಕಟ್ಟಿದ್ದು ಇದು ಪ್ರತಿಯೊಂದು ಕಲ್ಲು ಕೂಡ ತನ್ನದೇ ಆದ ವಿಶೇಷತೆಯನ್ನು ಹೊಂದಿದೆ. ಸುತ್ತಲೂ ಹಸಿರನ್ನು ಹೊತ್ತು ಹಸಿರು ಹುಲ್ಲಿನ ಮಧ್ಯ ನಿಂತಂತಿರುವ ಈ ಸ್ಟೋನ್ ಹೆಂಜ್ ಅನ್ನು ನೋಡಲು ದೇಶ ವಿದೇಶಗಳಿಂದ ಪ್ರವಾಸ ಕೈಗೊಳ್ಳುತ್ತಾರೆ. ಒಂದು ಕಾಲದಲ್ಲಿ ಬ್ರಿಟೀಷರು ಸಮಯವನ್ನು ನಿರ್ಧರಿಸಲು ಈ ಕಲ್ಲಿನ ಮೇಲೆ ಬೀಳುತ್ತಿದ್ದ ಸೂರ್ಯನ ಕಿರಣಗಳನ್ನು ಆಧಾರವಾಗಿ ಬಳಸುತ್ತಿದ್ದರು ಎಂಬುದು ವಿಶೇಷವೇ ಸರಿ. ಈಗಲೂ ಕೂಡ ಸಂಜೆ ಸಮಯದಲ್ಲಿ ಸೂರ್ಯಾಸ್ತದಲ್ಲಿ ಈ ಕಲ್ಲಿನ ಮೇಲೆ ಬೀಳುವ ಕಿರಣಗಳು ಅದ್ಬುತವಾದ ಅನುಭವವನ್ನು ನೀಡುತ್ತದೆ. ಪ್ರವಾಸಕ್ಕೆ ಬರುವ ಸಾಕಷ್ಟು ಜನರು ಇಲ್ಲಿ ಸೂರ್ಯಾಸ್ತ ನೋಡವುದಕ್ಕಾಗಿಯೇ ಬರುತ್ತಾರೆ.

ಈ ಸ್ಟೋನ್ ಹೆಂಜ್ ಅನ್ನು ಮೂರು ಹಂತಗಳಲ್ಲಿ ಕತ್ತಲಾಯಿತು ಮತ್ತು ಇದನ್ನು ಕಟ್ಟಲು ಮೂವತ್ತು ಸಾವಿರ ಗಂಟೆಯಷ್ಟು ಕೂಲಿಯನ್ನು ತೆಗೆದುಕೊಂಡಿತು ಎಂಬುದು  ನಮಗೆ ಇಲ್ಲಿ ಸಿಕ್ಕ ಮಾಹಿತಿ . ಮೊದಲ ಹಂತವನ್ನು ಕ್ರಿ ಪೂ ೩೦೦೦ ವರ್ಷಗಳ ಹಿಂದೆ ಪ್ರಾರಭಿಸಿದ್ದು ಅದನ್ನು ಕಟ್ಟಲು ೨೮೪ ಅಡಿಯಷ್ಟು ವೃತ್ತಾಕಾರದಲ್ಲಿ ಕೊರೆಯಲಾಯಿತು ಎನ್ನಲಾಗುತ್ತದೆ. ಈ ಹಂತದಲ್ಲಿ ಮಾನವ ಮೂಳೆಗಳ ದಹನ ಕೂಡ ಇಲ್ಲಿ ಕಂಡು ಬಂದಿದ್ದು ಇದನ್ನು ಸಮಾಧಿಗಾಗಿ ಅಲ್ಲದೆ ಕೇವಲ ಧಾರ್ಮಿಕ ಸಮಾರಂಭದ ಭಾಗವಾಗಿ ಮಾಡಿರಬಹುದು ಎಂದು ಕೂಡ ಹೇಳಲಾಗುತ್ತದೆ.

 ನಂತರ ಸುಮಾರು ಸಾವಿರ ವರ್ಷಗಳು ಇದು ಹಾಗೆಯೇ ಇದ್ದು ಎರಡನೆಯ ಹಂತವನ್ನು ಕ್ರಿ ಪೂ ೨೧೫೦ ರಲ್ಲಿ ಪ್ರಾರಂಭಿಸಲಾಯಿತು ಎನ್ನಲಾಗುತ್ತದೆ. ಈ ಅವಧಿಯಲ್ಲಿ ವೃತ್ತಾಕಾರದ ಮೂಲವನ್ನು ಇನ್ನಷ್ಟು ವಿಸ್ತರಿಸಿ ಜೋಡಿ ಕಲ್ಲುಗಳನ್ನು ಕೂಡ ನಿರ್ಮಿಸಲಾಯಿತು. ಮೂರನೆ ಹಂತ ಪ್ರಾರಂಭವಾಗಿದ್ದು ಕ್ರಿ ಪೂ ೨೦೦೦ ದಲ್ಲಿ ಎಂದು ನಂಬಲಾಗಿದ್ದು ಈ ಸಮಯದಲ್ಲಿ ಈ ವೃತ್ತಾಕಾರದ ಕಲ್ಲುಗಳ ನಿರ್ಮಾಣದ ಮೇಲೆ ಎರಡು ಕಲ್ಲುಗಳ ಮೇಲೆ ಬೆಂಬಲವಾಗಿ ಇನ್ನೊಂದು ಕಲ್ಲನ್ನು ,ಅದೇ ರೀತಿ ಐದು ಕಲ್ಲನ್ನು  ಇಡಲಾಯಿತು. ಇದನ್ನು ಇಂದಿಗೂ ಕೂಡ ನೋಡಬಹುದು.

ಮೊದಲು ಇದನ್ನು ಕಟ್ಟುವಾಗ ಅರವತ್ತು ಕಲ್ಲುಗಳಿತ್ತು ಈಗ ಇವುಗಳು ಅವಶೇಷವಾಗಿವೆ ಮತ್ತು ಕೆಲವು ನೆಲಮಟ್ಟದಲ್ಲಿ ಕಾಣಬರುತ್ತವೆ ಎಂಬುದು ಇಲ್ಲಿನ ಮಾಹಿತಿ. ಒಟ್ಟಾರೆಯಾಗಿ ಇಂಗ್ಲೆಂಡ್ ಗೆ ಭೇಟಿ ನೀಡುವವರು ಸ್ಟೋನ್ ಹೆಂಜ್ ಅನ್ನು ಮಿಸ್ ಮಾಡುವಂತಿಲ್ಲ. ನೋಡಿದಷ್ಟು ನೋಡುವಂತಹ  ,ತಿಳಿದು ಕೊಂಡಷ್ಟು ಮುಗಿಯದ, ಕುತೂಹಲ ಕೆರಳಿಸುವ,ಮತ್ತೊಮ್ಮೆ ಬರಬೇಕು ಎಂಬ ಭಾವನೆಯನ್ನು ನಮ್ಮಲ್ಲಿ ಮೂಡಿಸುವ ಮಾಯಾಗಾರ ಸ್ಥಳ ಈ ಸ್ಟೋನ್ ಹೆಂಜ್.




Thursday, 17 July 2014

ಮಿಲೇನಿಯಮ್ ಫೂಟ್ ಬ್ರಿಜ್

Published in Vijayanext on 13th June 2014

ಲಂಡನ್ ಎಂದ ತಕ್ಷಣ ನೆನಪಿಗೆ ಬರುವುದು ಟವರ್ ಬ್ರಿಜ್.ಲಂಡನ್ ನಲ್ಲಿ  ಪ್ರಸಿದ್ಧಿ ಪಡೆದ ಸಾಕಷ್ಟು ಸುಂದರ ಸೇತುವೆಗಳಿವೆ.ಲಂಡನ್ ಗೆ ಬಂದವರು ಈ ಬ್ರಿಜ್ ಗಳನ್ನು ನೋಡದೇ ಹೋಗಲಾಗುವುದೇ ಇಲ್ಲ.ಅದರಲ್ಲೂ ಮುಖ್ಯವಾಗಿ ಲಂಡನ್ ನ ಇತರ ಆಕರ್ಷಕ ಪ್ರಕಾಸಿ ಸ್ಥಳಗಳು ಈ ಸೇತುವೆಗಳ ಆಸುಪಾಸಿನಲ್ಲೇ ಬರುತ್ತವೆ.ಸೇತುವೆಗಳ ಅಕ್ಕ ಪಕ್ಕದಲ್ಲಿರುವ ಲಂಡನ್ ಐ,ಸೀ ಲೈಫ್,ಥೇಮ್ಸ್ ನದಿ ದಂಡೆ , ಬಿಗ್ ಬೆನ್ ,ಬಕ್ಕಿಂಗ್ ಹ್ಯಾಮ್ ಅರಮನೆ ಇವುಗಳನ್ನೆಲ್ಲಾ ನೋಡಿಯಾದ ಮೇಲೆ ಲಂಡನ್ ಸೇತುವೆಗಳನ್ನು ರಾತ್ರಿ ಹೊತ್ತಿನಲ್ಲಿ ನೋಡಬೇಕು.ಬೆಳಗಿನ ಸೇತುವೆಗೂ ರಾತ್ರಿ ದೀಪಗಳಿಂದ ಅಲಂಕೃತವಾದ ಸೇತುವೆಗಳಿಗೂ ಸಾಕಷ್ಟು ವ್ಯತ್ಯಾಸಗಳಿವೆ.ಇಲ್ಲಿ ಟವರ್ ಬ್ರಿಜ್ , ಲಂಡನ್ ಬ್ರಿಜ್ , ವಾಟರ್ ಲೂ ಬ್ರಿಜ್ ,ಮಿಲೇನಿಯಂ ಬ್ರಿಜ್ ಹೀಗೆ ಸಾಲಾಗಿ ಆಕರ್ಷಕ ಮತ್ತು ವಿಶೇಷವಾಗಿ ಕಟ್ಟಲಾದ ಸೇತುವೆಗಳಿವೆ. 
ಲಂಡನ್ ಪ್ರವಾಸಕ್ಕೆಂದು ಭಾರತದಿಂದ ಬರುವವರು ಈ ಸೇತುವೆಗಳನ್ನು ರಾತ್ರಿ ಹೊತ್ತು ನೋಡಲು ಮರೆಯದಿರಿ.ಲಂಡನ್ ನ ಟವರ್ ಬ್ರಿಜ್ ಬಗ್ಗೆ ಪ್ರತಿಯೊಬ್ಬರಿಗೂ ಗೊತ್ತೇ ಇದೆ.ಬಹುಶಃ ಲಂಡನ್ ನ ಟವರ್ ಬ್ರಿಜ್ ನೋಡಬೇಕು ಎಂಬುದು ಲಂಡನ್ ಗೆ ಬರಬೇಕೆಂದುಕೊಂಡವರ ಮೊದಲ ಪಟ್ಟಿಯಲ್ಲಿ ಬರುವ ಹೆಸರು.ಆದರೆ ನಾನು ಈಗ ಹೇಳ ಹೊರಟಿರುವುದು ಇದರಿಂದ ಒಂದು ಮೂರು ಯಾರ್ಡ್ ಆಷ್ಟು ಅಂತರದಲ್ಲಿರುವ ಮಿಲೇನಿಯಮ್ ಬ್ರಿಜ್ ಬಗ್ಗೆ. 

ಮಿಲೇನಿಯಂ ಬ್ರಿಜ್ :- ಮಿಲೇನಿಯಮ್ ಫೂಟ್ ಬ್ರಿಜ್ ಎಂದು ಇದಕ್ಕಿರುವ ನಿಜವಾದ ಹೆಸರು.ಅಂದರೆ ನಡೆಯಲು ಇರುವ ಸೇತುವೆ (ಪಾದಸಂಚಾರ ಸೇತುವೆ).ಇದನ್ನು ಬಹುಶಃ ಪ್ರೇಮಿಗಳ ಸೇತುವೆ ಎಂದುಬಿಡಬಹುದೇನೋ. ಹೆಚ್ಚಾಗಿ ಪ್ರೇಮಿಗಳು ಕೈ ಕೈ ಹಿಡಿದು ನಡೆಯಲು ಇರುವ ಸುಂದರ ತೂಗು ಸೇತುವೆ ಈ ಮಿಲೇನಿಯಮ್ ಪಾದಚಾರಿ ಸೇತುವೆ. ಇದನ್ನು ಥೇಮ್ಸ್ ನದಿಯನ್ನು ಕಾಲ್ನಡಿಗೆಯಲ್ಲಿ ದಾಟಲು ೧೯೯೬ ರಲ್ಲಿ ಕಟ್ಟಲು ಪ್ರಾರಂಭಿಸಿದರು. ೨೦೦೦ ದಲ್ಲಿ ಇದು ಅಧಿಕೃತವಾಗಿ ಉದ್ಘಾಟನೆಯಾಯಿತು.ಆದರೆ ಆ ಸಮಯದಲ್ಲಿ ಇದು ಪಾದಾಚಾರಿಗಳು ನಡೆದಾಗ ನಡುಗಲು ಪ್ರಾರಂಭಿಸಿದ್ದರಿಂದ ನಡುಗುವ ಸೇತುವೆ ಎಂಬ ಹೆಸರನ್ನು ಪಡೆದುಕೊಂಡಿತ್ತು . ಇದನ್ನು ಸರಿಮಾಡಲು ಮತ್ತೆರಡು ವರ್ಷಗಳನ್ನು ತೆಗೆದುಕೊಂಡರು ಎಂದು ಹೇಳಲಾಗುತ್ತದೆ. ಉಕ್ಕಿನಿಂದ ಕಟ್ಟಿದ ಈ ತೂಗು ಸೇತುವೆ ನೋಡಲು ಅದ್ಬುತವಾಗಿದ್ದು , ರಾತ್ರಿ ಸಮಯದಲ್ಲಿ ದೀಪದಿಂದ ಕಂಗೊಳಿಸುತ್ತಿರುತ್ತದೆ.ಎದುರಿನಲ್ಲಿರುವ ಗುಮ್ಮಟಾಕಾರದ ಸೆಂಟ್ ಪೌಲ್ ಕೆಥೆದ್ರಾಲ್ ಇದರ ಆಕರ್ಷಣೆಯನ್ನು ಇನ್ನಷ್ಟು ಹೆಚ್ಚಿಸುತ್ತದೆ. 

ಥೇಮ್ಸ್ ನದಿಯ ಮೇಲೆ ಈ ಸೇತುವೆಯನ್ನು ಕಟ್ಟಿರುವುದರಿಂದ ಸುತ್ತಲೂ ದೀಪದಿಂದ ಕಂಗೊಳಿಸುವ ಅದ್ಬುತವಾದ ಲಂಡನ್ ಅನ್ನು ರಾತ್ರಿ ಸಮಯದಲ್ಲಿ ನೋಡಬಹುದು. ಹೊಸದಾಗಿ ಕಟ್ಟಿರುವ ಎತ್ತರದ ಶಾರ್ಡ್ ಕಟ್ಟಡ ,ಥೇಮ್ಸ್ ನದಿಯಲ್ಲಿ ಓಡಾಡುವ ಕ್ರೂಸ್ ನ ಬೆಳಕು ಇವುಗಳು ಮಿಲೇನಿಯಂ ತೂಗು ಸೇತುವೆಯಲ್ಲಿ ನಿಂತು ನೋಡಿದಾಗ ಇನ್ನಷ್ಟು ಆಕರ್ಷಕವಾಗಿ ಕಾಣುತ್ತವೆ. ಈ ತೂಗು ಸೇತುವೆ ನಾಲ್ಕು ಮೀಟರ್ ಅಗಲವಿದ್ದು , ೧೭೦ ಮೀಟರ್ ಉದ್ದವಾಗಿ ಉಕ್ಕಿನಿಂದ ಕಟ್ಟಿದ ಬ್ರಿಜ್ ಆಗಿದೆ. ಆಧುನಿಕ ವಿನ್ಯಾಸವನ್ನು ಹೊಂದಿರುವ ಈ ಸೇತುವೆ ಇಡೀ ಲಂಡನ್ ನ ಸೊಬಗನ್ನು ಹೆಚ್ಚುಸುತ್ತದೆ ಎಂದರೆ ಅತಿಶಯೋಕ್ತಿಯಾಗಲಿಕ್ಕಿಲ್ಲ. ಈ ಸೇತುವೆಯಲ್ಲಿ ನಿಂತು ಸುತ್ತಲಿನ ಜಗಮಗಿಸುವ ದೃಶ್ಯವನ್ನು ನೋಡುತ್ತಿದ್ದರೆ ಸಮಯ ಕಳೆಯುತ್ತಿರುವುದೇ ಅರಿವಾಗುವುದಿಲ್ಲ. ಲಂಡನ್ ಪ್ರವಾಸಕ್ಕೆ ಬಂದವರು ಕೇವಲ ಟವರ್ ಬ್ರಿಜ್ ಮಾತ್ರ ನೋಡಿ ಹೋಗಬೇಡಿ. ಈ ಮಿಲೇನಿಯಂ ಬ್ರಿಜ್ ನೋಡಿ ಕಣ್ ತುಂಬಿಕೊಳ್ಳಲು ಮರೆಯದಿರಿ. 

ಅರ್ಪಿತಾ ಹರ್ಷ 
ಲಂಡನ್ 

Friday, 9 May 2014

ಕಲ್ಲು ಬರ್ಫಿ !

Got Published in Vijayanext 09/05/2014



ಈ ಅಡುಗೆ ಮಾಡುವುದು ಒಂದು ಕಲೆ.ಇದರಲ್ಲಿ ಆಸಕ್ತಿ ಬೆಳೆದುಬಿಟ್ಟಿತು ಎಂದರೆ ಹೊರಬರುವುದು ಅಷ್ಟೇ ಕಷ್ಟ. ಹಾಗೆ ನನಗೂ ಕೂಡ ಅಡುಗೆ ಮಾಡುವುದು ಮತ್ತು ತಿನ್ನುವುದು ಎಂದರೆ ಏನೋ ಒಂದು ರೀತಿಯ ಸಂಭ್ರಮ.ಪ್ರತಿ ಭಾರಿ ಏನಾದರು ಹೊಸದಾಗಿ ಮಾಡಬೇಕು ಎನಿಸಿದಾಗ ಯೂ ಟ್ಯೂಬ್ ನಲ್ಲಿ ತರ್ಲಾ ದಲಾಲ್ ಅದಿಲ್ಲದಿದ್ದರೆ ಭಾವನಾ,ವಾಹ್ ಚೆಫ್ ಹೀಗೆ ಇವರುಗಳ ರೆಸಿಪಿಗಳನ್ನೆಲ್ಲ ನೋಡಿ ನಂತರ ಗಂಡನ ಮೇಲೆ ಪ್ರಯೋಗ ಮಾಡುವುದು ಅಭ್ಯಾಸವಾಗಿ ಹೋಗಿದೆ.ಆದರೆ ಇತ್ತೀಚಿಗೆ ಒಮ್ಮೆ ಒಗ್ಗರಣೆ ಡಬ್ಬಿ ಕಣ್ಣಿಗೆ ಬಿತ್ತು.ಇದು ಜೀ ಕನ್ನಡದಲ್ಲಿ ಬರುವ ಕಾರ್ಯಕ್ರಮ ಎಂಬುದು ಎಲ್ಲರಿಗೂ ತಿಳಿದ ವಿಷಯವೇ.ಯೂ ಟ್ಯೂಬ್ ನಲ್ಲಿ ನೋಡುವುದರಿಂದ ನಾನ್ ವೆಜ್ ರೆಸಿಪಿ ಬಂದಾಗ ಸುಲಭವಾಗಿ ಮುಂದೆ ಹಾಕಿಕೊಂಡು ಕೇವಲ ವೆಜ್ ರೆಸಿಪಿ ನೋಡುತ್ತೇನೆ.ಸಾಕಷ್ಟು ರೆಸಿಪಿ ಪ್ರಯತ್ನಿಸಿದ್ದೇನೆ. ತುಂಬಾ  ಸೊಗಸಾಗಿತ್ತು ಕೂಡ. ಹಾಗೆ ಯುಗಾದಿ ಸ್ಪೆಷಲ್ ಅಂತ ಗೋಡಂಬಿ ರೋಲ್ ಮಾಡಿದ್ದರು ನನಗೋ ಸ್ವೀಟ್ ಎಂದರೆ ತಕ್ಷಣ ಮಾಡಿ ತಿಂದುಬಿಡೋಣ ಅನ್ನುವಷ್ಟು ಅತಿ ಆಸೆ.ಬರಿ ಗೋಡಂಬಿ ಏಕೆ ಸ್ವಲ್ಪ ಒಣ ದ್ರಾಕ್ಷಿ ಸೇರಿಸಿದರೆ ಎನೂ ಆಗಲಿಕ್ಕಿಲ್ಲ ಎಂದು ಹಾಕಿ ಮಾಡಲು ಪ್ರಾರಂಭಿಸಿದೆ.
 ಒಣ ದ್ರಾಕ್ಷಿ ಹಾಕಿ ರುಬ್ಬಿದ್ದರಿಂದ ಬಣ್ಣ ಕಂದು ಬಂದಿತ್ತು.ಕಂದು ಬಣ್ಣವಾದರೇನು ರುಚಿ ಮಾತ್ರ ಸೂಪರ್ ಇರಬಹುದು ಎಂದು ತೊಳೆಸಲು ಪ್ರಾರಂಭಿಸಿದೆ.ಅವರು ಗೋಡಂಬಿ ರೋಲ್ ಮಾಡುವುದು ತೋರಿಸಿದ್ದರು ನಾನು ರೋಲ್ ಯಾಕೆ ಮಾಡುವುದು ಬರ್ಫಿ ತಾರಾ ಸ್ವಲ್ಪ ಚೌಕಾಕಾರ ಕತ್ತರಿಸಿದರೆ ಚನ್ನಾಗಿರುತ್ತದೆ ಎಂದು ಇನ್ನೂ ಸ್ವಲ್ಪ ಗಟ್ಟಿ ಆಗಲಿ ಎಂದು ಕೈ ನೋವು ಬರುವವರೆಗೆ ತೊಳೆಸುತ್ತಲೇ ಇದ್ದೆ.ಸ್ವಲ್ಪ ಹೊತ್ತಿನ ನಂತರ ಗಟ್ಟಿ ಸಾಕೆನಿಸಿ ಪ್ಲೇಟ್ ಗೆ ಹಾಕಿದೆ.ಬಿಸಿ ಇದ್ದಾಗಲೇ ಚೌಕಾಕಾರವಾಗಿ ಕತ್ತರಿಸಿಬಿಟ್ಟೆ.ತುಂಬಾ ಗಮಗಮ ಸುವಾಸನೆ ಬರುತ್ತಿತ್ತು.ಅವರು ಅದರಲ್ಲಿ ತುಪ್ಪ ಹಾಕಿರಲಿಲ್ಲ ಆದರೆ ನಾನು ಇರಲಿ ಅಂತ ತುಪ್ಪ ಕೂಡ ಸೇರಿಸಿದ್ದೆನಲ್ಲ ಅದು ಇನ್ನಷ್ಟು ಘಮ ಕೊಟ್ಟಿತ್ತು.ನನ್ನ ಪತಿ ಕೂಡ ಒಂತರಾ ಬೇಕರಿ ಸುವಾಸನೆ ಬರುತ್ತಿದೆ ಎಂದು ತಿನ್ನಲು ಕಾಯುತ್ತಾ ಕುಳಿತಿದ್ದರು. ಒಂದು ಹತ್ತು ನಿಮಿಷವಾಗಿರಬೇಕಷ್ಟೇ.ಈಗ ತಣಿದಿರುತ್ತದೆ ಎಂದು ತಿನ್ನಲು ಹೋದೆವು,ನೋಡಿದರೆ ಕಲ್ಲಿನಷ್ಟು ಗಟ್ಟಿ ಆಗಿ ಬಿಟ್ಟಿದೆ! ಸರಿ ಎಸೆಯಲು ಮನಸ್ಸುಬರುತ್ತದಾ? ಬಾಯಿಗೆ ಹಾಕಿಕೊಂಡು ನೋಡಿದರೆ ಗಟ್ಟಿ ಚಾಕೊಲೇಟ್ ತರಹ ಆಗಿತ್ತು.ತಿನ್ನಲು ರುಚಿಯಾಗಿಯೇ ಇತ್ತು.ಒಂದು ಪೀಸ್ ಬಾಯಿಗೆ ಹಾಕಿಕೊಂಡರೆ ಕಾಲುಗಂಟೆ ತಿನ್ನಲು ಬೇಕಾಗುತ್ತಿತ್ತು ! ಒಲೆಯ ಮೇಲೆ ಅಷ್ಟೊತ್ತು ಇಟ್ಟು ಕೇವಲ ಕೈ ಮಾತ್ರವಲ್ಲ , ತಿನ್ನುವಾಗ ಬಾಯಿ ಕೂಡ ನೋವಾಯಿತು !!

ಅರ್ಪಿತಾ ಹರ್ಷ 
ಲಂಡನ್ 

Tuesday, 8 April 2014

ಮಸಾಲಾ ಬೋಂಡ

Published on 18/04/2014 Vijayanext


ಚುಮುಚುಮು ಚಳಿಗೆ ಆಗಾಗ ಬಿಸಿಬಿಸಿ ಬೋಂಡ,ಬಜ್ಜಿ ಮಾಡಿ ತಿನ್ನುವುದು ಎಂದರೆ ತಿಂಡಿಪೋತರಿಗೆ ಸ್ವರ್ಗ ಕೈಗೆ ಸಿಕ್ಕಂತೆ.ಆದರೆ ಬ್ಯಾಚುಲರ್ ಜೀವನ ಮಾಡುತ್ತಿರುವವರಿಗೆ ಪ್ರತಿದಿನ ಹೊರಗೆ ತಿಂದರೆ ಕರಿದ ಎನ್ನೆಯಲ್ಲೇ ಮತ್ತೆ ಕರಿದಿರುತ್ತಾರೆ ದೇಹ ಹದಗೆಡುತ್ತದೆ.ಬಜ್ಜಿ ಮಾಡುವುದು ಸುಲಭದ ವಿಧಾನ.ನೀವೇ ಮನೆಯಲ್ಲಿ ಸ್ವಲ್ಪ ಸಮಯ ನೀಡಿದರೆ ವಾರಾಂತ್ಯದ ಸಂಜೆಗಳಲ್ಲಿ ಕಾಫಿ ಜೊತೆಗೆ ಬಿಸಿ ಬೋಂಡ ಸವಿಯಬಹುದು.ಬೋಂಡ ಮಾಡುವುದರಲ್ಲಿ ಬೇಕಾದಷ್ಟು ವಿಧಾನಗಳಿವೆ.ಅವುಗಳಲ್ಲಿ ಕೆಲವು ಸುಲಭ ಮತ್ತು ಅತಿ ಹೆಚ್ಚು ರುಚಿ ನೀಡುವ ಬೋಂಡ ಮಾಡಿನೋಡಿ.ತಿಂದು ಹೇಳಿ!

ಮಿರ್ಚಿ ಮಸಾಲಾ ಬೋಂಡ

ಬೇಕಾಗುವ ಸಾಮಗ್ರಿಗಳು:
ಮಿರ್ಚಿ (ಬೋಂಡ ಮೆಣಸು) - ೪ 
ಕಡಲೆಹಿಟ್ಟು - ಅರ್ಧ ಕಪ್ 
ಉಪ್ಪು - ರುಚಿಗೆ 
ಎಣ್ಣೆ - ಕರಿಯಲು 

ಮಸಾಲ ಮಾಡಲು :
ತುರಿದ ಕ್ಯಾರೆಟ್ - ಸ್ವಲ್ಪ 
ಟೊಮೇಟೊ -ಅರ್ಧ ಕಪ್ 
ನಿಂಬೆ ರಸ - ೨ ಹನಿ 
ಚಾಟ್ ಮಸಾಲಾ - ಚಿಟಕಿ 

ಕಡಲೆ ಹಿಟ್ಟಿಗೆ ಉಪ್ಪು ಹಾಕಿ ನೀರು ಬೆರೆಸಿ ಬೋಂಡ ಹದಕ್ಕೆ (ದಪ್ಪ ದೋಸೆ ಹಿಟ್ಟಿನ ಹದ) ಬರುವಂತೆ ಕಲಸಿಕೊಂಡು ಅದಕ್ಕೆ ಬೋಂಡ ಮೆಣಸನ್ನು ಸೀಳಿ ಅದರ ಬೀಜವನ್ನು ತೆಗೆದು ಹಿಟ್ಟಿಗೆ ಹಾಕಿ ಕದಡಿ .ಎಣ್ಣೆಯನ್ನು ಕಾಯಿಸಿ ಬೋಂಡ ಕರಿಯಿರಿ.ನಂತರ ಅದಕ್ಕೆ ಬಿಸಿಬಿಸಿ ಇರುವಾಗಲೇ ಮಸಾಲ ಪದಾರ್ಥಕ್ಕೆ ಮೇಲೆ ತಿಳಿಸಿದ ಎಲ್ಲವನ್ನು ಹಾಕಿ ತಿನ್ನಿ.ಹೆಚ್ಚು ಖಾರವೂ ಇರುವುದಿಲ್ಲ.ತರಕಾರಿಗಳ ಜೊತೆಗೆ ಬೋಂಡ ಬಾಯಲ್ಲಿ ಇನ್ನಷ್ಟು ನೀರು ತರಿಸುತ್ತದೆ. 

ಅಲೂ ಬೋಂಡ 

ಅಲೂ ಬೋಂಡವನ್ನು ವಿವಿಧ ರೀತಿಯಲ್ಲಿ ಮಾಡಬಹುದು.ಅದರಲ್ಲಿ ಸುಲಭ ವಿಧಾನ:

ಅಲೂ ವನ್ನು ಸ್ಲೈಸ್ ಮಾಡಿಕೊಳ್ಳಿ. ಕಡಲೆಹಿಟ್ಟು,ಉಪ್ಪು,ಜೊತೆಗೆ ಅರ್ಧ ಚಮಚ ಓಂ ಕಾಳು,ಅರ್ಧ ಚಮಚ ಮೆಣಸಿನ ಪುಡಿಯನ್ನು ಹಾಕಿ ಹಿಟ್ಟನ್ನು ಕಲೆಸಿಟ್ಟುಕೊಂಡು ಅದಕ್ಕೆ ಈ ಅಲೂ ಸ್ಲೈಸ್ ಹಾಕಿ ಕಾದ ಎಣ್ಣೆಯಲ್ಲಿ ಕೆಂಪು ಬಣ್ಣ ಬರುವವರೆಗೆ ಕರಿಯಿರಿ.ರುಚಿಯಾದ ಹದವಾದ ಆಲೂ ಬೋಂಡ ಟೀ ಅಥವಾ ಕಾಫಿಯೊಂದಿಗೆ ತಿನ್ನಲು ಚನ್ನಾಗಿರುತ್ತದೆ. 

ಇನ್ನೊಂದು ವಿಧಾನ 

ಅಲೂ ಪಲ್ಯ ಮಾಡಿಟ್ಟುಕೊಳ್ಳಿ 
ನಂತರ ಅದನ್ನು ಉಂಡೆಯಂತೆ ಕಟ್ಟಿ ಅದನ್ನು ಹಿಟ್ಟಿನಲ್ಲಿ ಅದ್ದಿ ಎಣ್ಣೆಯಲ್ಲಿ ಕರಿಯಿರಿ. 

ಅಲೂ ಪಲ್ಯ ಮಾಡುವ ವಿಧಾನ:
ಆಲೂಗಡ್ಡೆ ಬೇಯಿಸಿ ಸಿಪ್ಪೆ ಸುಲಿದಿಟ್ಟುಕೊಳ್ಳಿ.ಬಾಣಲೆಗೆ ಒಂದು ಚಮಚ ಎಣ್ಣೆ ಸ್ವಲ್ಪ ಸಾಸಿವೆ,ಜೀರಿಗೆ,ಉದ್ದು ಹಾಕಿ ಒಗ್ಗರಣೆ ಬೆಂದ ನಂತರ ಅದಕ್ಕೆ ಸಣ್ಣಗೆ ಹೆಚ್ಚಿದ ಈರುಳ್ಳಿ ಹಾಕಿ ನಂತರ ಬೇಯಿಸಿಟ್ಟ ಆಲೂಗಡ್ಡೆಯನ್ನು ನುರಿದು ಹಾಕಿ.ರುಚಿಗೆ ತಕ್ಕಷ್ಟು ಉಪ್ಪು,ನಿಂಬು ರಸ,ಸಣ್ಣಗೆ ಹೆಚ್ಚಿದ ಒಂದು ಹಸಿ ಮೆಣಸಿನ ಕಾಯಿ  ಹಾಕಿ ಮೇಲಿನಿಂದ ಸಣ್ಣಗೆ ಹೆಚ್ಚಿದ ಕೊತ್ತುಂಬರಿ ಸೊಪ್ಪನ್ನು ಹಾಕಿ.

ನಂತರ ಮಾಡಿಟ್ಟುಕೊಂಡ ಬೋಂಡ ಹಿಟ್ಟಿಗೆ ಉಂಡೆ ಮಾಡಿಟ್ಟ ಅಲೂ ಪಲ್ಯವನ್ನು ಅದ್ದಿ ಎಣ್ಣೆಯಲ್ಲಿ ಕರಿಯಿರಿ. ರುಚಿರುಚಿಯಾದ ಮೈಸೂರು ಬೋಂಡ ಸವಿಯಿರಿ. 

ಈರುಳ್ಳಿ ಮಸಾಲಾ ಬೋಂಡ :
ಬೇಕಾಗುವ ಸಾಮಗ್ರಿಗಳು :
ಈರುಳ್ಳಿ ಸ್ಲೈಸ್ - ಒಂದು ಬೌಲ್ 
ಕಡಲೆ ಹಿಟ್ಟು - ಅರ್ಧ ಕಪ್ 
ಉಪ್ಪು- ರುಚಿಗೆ ತಕ್ಕಷ್ಟು 
ಮೆಣಸಿನ ಪುಡಿ - ೧ ಚಮಚ 
ಓಮಿನ ಕಾಲು - ಅರ್ಧ ಚಮಚ 

ಮಸಾಲ ಮಾಡಲು :
ತುರಿದ ಕ್ಯಾರೆಟ್ - ಸ್ವಲ್ಪ 
ಟೊಮೇಟೊ -ಅರ್ಧ ಕಪ್ 
ನಿಂಬೆ ರಸ - ೨ ಹನಿ 
ಚಾಟ್ ಮಸಾಲಾ - ಚಿಟಕಿ 

ಮೊದಲು ಬೋಂಡ ಮಾಡಲು ಬೇಕಾಗುವ ಕಡಲೆಹಿಟ್ಟು,ಉಪ್ಪು,ಕೆಂಪುಮೆಣಸಿನ ಪುಡಿ,ಓಮಿನ ಕಾಳು ಇವುಗಳೆಲ್ಲವನ್ನು ಸೇರಿಸಿಕೊಳ್ಳಿ ನಂತರ ಅದಕ್ಕೆ ಸ್ಲೈಸ್ (ಗೋಲಾಕಾರದಲ್ಲಿ)ಮಾಡಿಟ್ಟುಕೊಂಡ ಈರುಳ್ಳಿಯನ್ನು ಒಂದೊಂದೇ ಅದ್ದಿ ಎಣ್ಣೆಯಲ್ಲಿ ಕರಿಯಿರಿ.ನಂತರ ಮೇಲಿನಿಂದ ಮಸಾಲ ಮಾಡಲು ತಿಳಿಸಿರುವ ಎಲ್ಲವನ್ನು ಮಿಶ್ರ ಮಾಡಿ ಅದರ ಮೇಲೆ ಉದುರಿಸಿದರೆ ರುಚಿ ಮತ್ತು ಬಿಸಿಯಾದ ಈರುಳ್ಳಿ ಬಜ್ಜಿ ರೆಡಿ. 

Friday, 24 January 2014

ಪಿಜ್ಜಾ ಪ್ರಕರಣ

Published in Vijayanext 24/01/2014



ಪಿಜ್ಜಾವನ್ನು ಆಗಾಗ ತಂದು ತಿನ್ನುವುದು ನನಗೆ ಬಹಳ ಇಷ್ಟದ ಸಂಗತಿ.ಅಡುಗೆ ಮಾಡಲು ಬೇಸರವಾದಾಗ ಲಂಡನ್ ನಲ್ಲಿ ನಮ್ಮ ಮನೆಯ ಹತ್ತಿರ ಒಳ್ಳೆಯ  ಇಂಡಿಯನ್ ಹೋಟೆಲ್ ಇರದಿರುವ ಕಾರಣ ಪಿಜ್ಜಾ ದ ಮೊರೆ ಹೋಗುವುದು ಅನಿವಾರ್ಯವಾಗಿದೆ.ಹೀಗೆ ಪಿಜ್ಜಾ ಪ್ರತಿ ಭಾರಿ ತರಿಸುವಾಗಲೆಲ್ಲ ಯೋಚಿಸುತ್ತಿದ್ದೆ ನಾವ್ಯಾಕೆ ಇಷ್ಟು ದುಡ್ಡು ಕೊಟ್ಟು ತರಿಸಬೇಕು ಮನೆಯಲ್ಲಿಯೇ ಮಾಡಿದರೆ ಹೇಗೆ ಎಂದು.ಯೋಚನೆ ತಲೆಗೆ ಬಂದ ತಕ್ಷಣ ಒಂದು ನಿಮಿಶವೂ ತಡ ಮಾಡದೆ ನೆಟ್ ನಲ್ಲಿ ಹುಡುಕಿ ಕೊನೆಗೆ ಒಂದು ಸುಲಭ ವಿಧಾನ ನೋಡಿ ಹಾಗೆಯೇ ಮಾಡುವುದು ಎಂದು ತೀರ್ಮಾನಿಸಿದೆ.ಆರ್ಡರ್ ಮಾಡಬೇಕಾದ ಪಿಜ್ಜಾವನ್ನು ತಕ್ಷಣ ಕ್ಯಾನ್ಸಲ್ ಮಾಡಿ ಅಡುಗೆ ಮನೆಗೆ ಹೊರಟೆ. 

ಅದಕ್ಕಾಗಿ ಬೇಕಾದ ಟೊಮೇಟೊ,ಈರುಳ್ಳಿ,ಕ್ಯಾಪ್ಸಿಕಂ ಎಲ್ಲವನ್ನು ಸ್ಲೈಸ್ ಮಾಡಿಟ್ಟುಕೊಂಡು,ಮೈದಾ ಹಿಟ್ಟನ್ನು ಚಪಾತಿ ಹದಕ್ಕೆ ಅಡುಗೆ ಸೋಡಾ ಬೆರೆಸಿ ಕಲೆಸಿದೆ.ನಂತರ ಅದನ್ನು ಪಿಜ್ಜಾ ಎಷ್ಟು ದೊಡ್ಡ ಬೇಕು ಆ ಆಕಾರ ಬರುವಂತೆ ತಟ್ಟಿ ಅದರ ಮೇಲೆ ಹೆಚ್ಚಿಟ್ಟುಕೊಂಡ ತರಕಾರಿಗಳನ್ನು ಉದುರಿಸಿದೆ.

ನಂತರ ಓವನ್ ನಲ್ಲಿ ಇದನ್ನು ಸರಿಯಾಗಿ ಇಟ್ಟು ಅವರು ತಿಳಿಸಿದಂತೆಯೇ ಸರಿಯಾಗಿ ಬೇಯಲು ಇಟ್ಟೆ.ಎಲ್ಲ ಸರಿಯಾಗಿಯೇ ಇತ್ತು ಚೀಸ್ ಒಂದು ಹಾಕಬೇಕಿತ್ತು.ಆದರೆ ಚೀಸ್ ಮನೆಯಲ್ಲಿ ಇರಲಿಲ್ಲ.ದಿಡೀರ್ ನಿರ್ಧಾರವಾದ್ದರಿಂದ ಹೋಗಿ ತರುವಷ್ಟು ತಾಳ್ಮೆ ಇರಲಿಲ್ಲ.ಸ್ವಲ್ಪ ಹೊತ್ತಿನ ನಂತರ ಬಿಸಿಬಿಸಿ ಹೊಗೆಯಾಡುವ ಪಿಜ್ಜಾ ತಯಾರಾಗಿತ್ತು.ಚೀಸ್ ಇಲ್ಲದ ಪಿಜ್ಜಾ! . 

ನೋಡಿದ ತಕ್ಷಣ ನನಗೆ ಏನೋ ಮಿಸ್ ಆಗಿದೆ ಎನಿಸಿದರೂ ಸಮಾಧಾನ ಮಾಡಿಕೊಂಡು ಪತಿಯ ಮುಂದೆ ತೆಗೆದುಕೊಂಡು ಹೋಗಿ ಇಟ್ಟೊಡನೆ ಒಮ್ಮೆ ಗಾಬರಿಯಾದರು.ಅದಾರೂ ನೋಡೇ ಬಿಡೋಣ ಎಂದೆನಿಸಿ ಇಬ್ಬರೂ ತಿನ್ನಲು ಪ್ರಾರಂಭಿಸಿದೆವು.ಎಲ್ಲವೂ ಸರಿ ಇತ್ತು ಆದರೆ ಚೀಸ್ ಮಾತ್ರ ಇರಲಿಲ್ಲ.ಅಷ್ಟು ರುಚಿಕರವಾದ ಪಿಜ್ಜಾ ಸಿಗುವಾಗ ಈ ರೀತಿ ಕಷ್ಟ ಪಟ್ಟು ತಿನ್ನಲು ಕಷ್ಟಪಡಬೇಕಾದ ಪಿಜ್ಜಾ ಮಾಡುವ ಅವಶ್ಯಕತೆ ಇತ್ತಾ ಎಂದು ನನಗೆ ಅನ್ನಿಸಿತು.ತಕ್ಷಣ ಆನ್ಲೈನ್ ನಲ್ಲಿ ೨ ಪಿಜ್ಜಾ ಆರ್ಡರ್ ಮಾಡಿಬಿಟ್ಟೆವು. ನನ್ನ ನಂಬಿ ಮತ್ತೆಂದೂ ನಾನು ಪಿಜ್ಜಾ ಮಾಡುವ ಪ್ರಯತ್ನ ಮಾಡಲಿಲ್ಲ.ಮಾಡುವುದೂ ಇಲ್ಲ!!


ಅರ್ಪಿತಾ ಹರ್ಷ 
ಲಂಡನ್ 

Saturday, 16 November 2013

ಉತ್ತರ ವೇಲ್ಸ್ - ಸ್ನೋಡೋನಿಯಾ

My this article has Published in Vijayanext on 15/11/2013


ನಿಸರ್ಗ ಎಂದರೆ ಎಲ್ಲರಿಗೂ ಪ್ರಿಯ.ನಿಸರ್ಗದ ಮಡಿಲಲ್ಲಿ ಕಳೆಯುವುದೆಂದರೆ ಅದರ ಸೊಬಗೇ ಬೇರೆ.ದಿನನಿತ್ಯದ  ಜಂಜಾಟ,ಗಿಜಿ ಗಿಜಿಗುಡುವ ಜನಸಂದಣಿಯಿಂದ ದೂರವಿರಲು,ಮನಸ್ಸಿನ ಉಲ್ಲಾಸ ಹೆಚ್ಚಿಸಲು ಪ್ರಕೃತಿಯ ಮೊರೆ ಹೋಗುವುದು ಉತ್ತಮ ಎನ್ನಬಹುದು.ಸುಂದರ ಪ್ರಕೃತಿಯ ನಡುವೆ ಒಂದೆರಡು ದಿನಗಳನ್ನು ಕಳೆದರೆ ಹೊಸ ಉತ್ಸಾಹ ಬರುವುದು ಖಂಡಿತ.ಅಂತಹ ಪ್ರವಾಸಿ ಪ್ರಿಯರನ್ನು ಕೈಬೀಸಿ ಕರೆಯುವ ತಾಣ ಇಂಗ್ಲೆಂಡ್ ನ ಗಡಿ ಭಾಗದಲ್ಲಿರುವ ವೇಲ್ಸ್.ಅದರಲ್ಲೂ ಉತ್ತರ ವೇಲ್ಸ್ ಹೆಚ್ಚು ಪ್ರವಾಸಿ ತಾಣಗಳನ್ನು ಹೊಂದಿದೆ.ಇಲ್ಲಿನ ಎಲ್ಲಾ ಸ್ಥಳಗಳು ಅದ್ಬುತವಾಗಿದ್ದು ಅದನ್ನು ಸವಿಯಲು ಕನಿಷ್ಠ 4 ದಿನವಾದರೂ ಇಲ್ಲಿ ಇರಲೇಬೇಕು.ಆಗಸ್ಟ್ ತಿಂಗಳೆಂದರೆ ಇಂಗ್ಲೆಂಡ್ ನಲ್ಲಿ ಬೇಸಿಗೆ ಮುಗಿಯುವ ಕಾಲ.ಮುಂದಿನ ಬೇಸಿಗೆಯವರೆಗೆ ಕೊರೆಯುವ ಚಳಿಯಲ್ಲಿ ಪ್ರವಾಸ ಕೈಗೊಳ್ಳಲಾಗದು ಎಂಬ ಕಾರಣಕ್ಕೆ ಆಗಸ್ಟ್ ಮತ್ತು ಸೆಪ್ಟೆಂಬರ್ ನಲ್ಲಿ ಇಲ್ಲಿನ ಜನರು ವಾರದವರೆಗೆ ಪ್ರವಾಸ ಹೋಗುತ್ತಾರೆ.ಹಾಗೆಯೇ ನಮ್ಮ ಪ್ರಯಾಣ  ನಾರ್ತ್ ವೇಲ್ಸ್ ಗೆ. 

ಸ್ನೋಡೋನಿಯಾ :
ವೇಲ್ಸ್ ಯುನೈಟೆಡ್ ಕಿಂಗ್ ಡಂ ನ ಒಂದು ಅದ್ಬುತ ಸ್ಥಳ.ಇದು ಪೂರ್ವದಲ್ಲಿ ಅಟ್ಲಾಂಟಿಕ್ ಸರೋವರ ಮತ್ತು ಪಶ್ಚಿಮದಲ್ಲಿ ಐರಿಶ್ ಸರೋವರವನ್ನು ಹೊಂದಿದ್ದು ಇಂಗ್ಲೆಂಡ್ ನ ಗಡಿ ಭಾಗದಲ್ಲಿದೆ.ಈ ವೇಲ್ಸ್ ನಲ್ಲಿರುವ  ಅತಿ ಪ್ರಸಿದ್ಧ ಸ್ಥಳವೇ ಸ್ನೋಡೋನಿಯ.ಸ್ನೋಡೋನಿಯ ಇರುವುದು ಉತ್ತರ ವೇಲ್ಸ್ ನಲ್ಲಿ. ಲಂಡನ್ ನಿಂದ ರೈಲಿನಲ್ಲಿ 5  ತಾಸಿನ ಪ್ರಯಾಣ.ಸ್ನೋಡೋನಿಯವನ್ನು ವೇಲ್ಸ್ ನ ರಾಷ್ಟ್ರೀಯ ಉದ್ಯಾನವನ ಎಂದೇ ಕರೆಯಲಾಗುತ್ತದೆ ಮತ್ತು ಇದು ಸುಮಾರು 823 ಎಕರೆ ಜಾಗವನ್ನು ಹೊಂದಿದೆ.ಈ ಸ್ಥಳದ ಹೆಸರು ಸ್ನೋಡೌನ್ ಎಂಬ ಇಂಗ್ಲಿಷ್ ಹೆಸರಿನಿಂದ ಬಂದಿದೆ ಎನ್ನಲಾಗಿದೆ.ಈ ರಾಷ್ಟ್ರೀಯ ಉದ್ಯಾನವನವು 1951 ರಲ್ಲಿ ಇಂಗ್ಲೆಂಡ್ ನ ಮೂರನೇ ಹೆಸರುವಾಸಿ ಉದ್ಯಾನವನವಾಗಿ ಪ್ರಾರಂಭವಾಯಿತು.ವೇಲ್ಸ್ ನ ಸ್ಥಳೀಯ ಭಾಷೆ ವೆಲ್ಶ್ .

ಸ್ನೋಡೋನಿಯವನ್ನು ನೆರಳು,ಬಿಸಿಲು ಮತ್ತು ಇಬ್ಬನಿಗಳ ಸಮಾಗಮ ಎಂದೇ ಹೇಳಬಹುದು.ಸುತ್ತಲೂ ಹಸುರಿನಿಂದ ಕೂಡಿದ್ದು,ದಟ್ಟ ಪರ್ವತಗಳ ನಡುವೆ ಜಲಪಾತ ಮತ್ತು ನದಿಗಳನ್ನು ಕೂಡ ಕಾಣಬಹುದು.ಬೇಸಿಗೆಯಲ್ಲಿ ಹಚ್ಚ ಹಸುರಿನಿಂದ ಕಂಗೊಳಿಸುವ ಈ ಸ್ಥಳ ಚಳಿಗಾಲದಲ್ಲಿ ಹಿಮದ ರಾಶಿಯಿಂದ ಕಣ್ಣು ಬಿಡಲಾರದಷ್ಟು ಬಿಳುಪಿನಿಂದ ಕೂಡಿರುತ್ತದೆ ಮತ್ತು ನದಿ,ಜಲಪಾತಗಳು ಕೂಡ ಹಿಮದಂತೆ ಗಟ್ಟಿಯಾಗಿಬಿಟ್ಟಿರುತ್ತದೆ.ಸ್ನೋಡೋನಿಯ ನ್ಯಾಷನಲ್ ಪಾರ್ಕ್ ನ ಪರ್ವತವು 3,560 ಅಡಿ ಎತ್ತರದಲ್ಲಿದ್ದು ಅಲ್ಲಿಯವರೆಗೆ ರೈಲ್ವೇ ಹಳಿಯನ್ನು ಮಾಡಿ ಪ್ರತಿದಿನ ಪ್ರವಾಸಿ ರೈಲನ್ನು ಅಲ್ಲಿ ಹತ್ತಿಸುತ್ತಾರೆ. ಸಾಹಸಪ್ರಿಯರು ಈ ಪರ್ವತವನ್ನು ಸುಮಾರು 5 ತಾಸು ನಡೆದು ಮೇಲೆ ತಲುಪುವವರೂ ಇದ್ದಾರೆ.ತುತ್ತತುದಿ ತಲುಪಿದಾಗ ಬಿರು ಬೇಸಿಗೆಯಲ್ಲೂ ಕೂಡ ಮಂಜು ಮುಸುಕಿರುವುದನ್ನು ಕಾಣಬಹುದು.ಅಲ್ಲಿಂದ ನಿಂತು ಕೆಳಗೆ ಕಾಣುವ ಹಸುರಿನ ಸೊಬಗನ್ನು ಎಷ್ಟು ಕಣ್ಣು ತುಂಬಿಸಿಕೊಂಡರು ಸಾಲದು ಎಂಬಂತಿದೆ.ಇದು ಇಂಗ್ಲೆಂಡ್ ನ ಪ್ರಸಿದ್ಧ ಪ್ರವಾಸಿ ಸ್ಥಳವಾಗಿದ್ದು ಈ ರೈಲಿನಲ್ಲಿ ತುತ್ತ ತುದಿಯನ್ನು ಏರಲು ಮತ್ತು ಸುತ್ತಮುತ್ತಲಿನ ಪ್ರಕೃತಿಯ ಸೊಬಗನ್ನು ಸವಿಯಲು ವರ್ಷದಲ್ಲಿ ಸುಮಾರು 6 ಮಿಲಿಯನ್ ಪ್ರವಾಸಿಗರು ಇಲ್ಲಿ ಭೇಟಿ ನೀಡುತ್ತಾರೆ ಎಂದು ಅಲ್ಲಿನ ಮಾಹಿತಿದಾರರು ಅಭಿಪ್ರಾಯ ತಿಳಿಸುತ್ತಾರೆ.

ವನ್ಯಜೀವಿಗಳು :
ಈ ಉದ್ಯಾನವನದಲ್ಲಿ ಅಪರೂಪದ ಸಸ್ತನಿಗಳಿದ್ದು ಮುಖ್ಯವಾಗಿ ಅತಿ ಹೆಚ್ಚು ತುಪ್ಪಟವನ್ನು ಹೊಂದಿದ ಕುರಿಗಳನ್ನು ಇಲ್ಲಿ ಕಾಣಬಹುದು.ಇದರ ಜೊತೆಗೆ  ಅಪರೂಪದ ರಾವೆನ್,ಮರ್ಲಿನ್ ಇನ್ನೂ ಮುಂತಾದ ಪಕ್ಷಿಗಳನ್ನು ಕೂಡ ಇಲ್ಲಿ ಕಾಣಬಹುದು.

ಒಮ್ಮೆ ಇಲ್ಲಿ ಭೇಟಿ ನೀಡಿದರೆ ಅಲ್ಲಿನ ಪ್ರಕೃತಿಯ ಸೊಬಗು ಮನಸ್ಸಿನಲ್ಲಿ ಅಚ್ಚಳಿಯದೇ ಉಳಿಯುವುದು ಖಂಡಿತ.ಮತ್ತೆ ಮತ್ತೆ ನೋಡಬೇಕು ಅಲ್ಲೇ ಇದ್ದು ಬಿಡಬೇಕು ಎಂಬಷ್ಟು ಸುಂದರ ಈ ನಾರ್ತ್ ವೇಲ್ಸ್.

ಕಾನ್ವೆ :
ಕಾನ್ವೆ ಎಂಬುದು ಉತ್ತರ ವೇಲ್ಸ್ ನಲ್ಲೇ ಬರುವ ಪುಟ್ಟ ಹಳ್ಳಿ.ಕಾನ್ವೆ ಮೌಂಟೈನ್ ಮತ್ತು ಕಾನ್ವೆ ಕೋಟೆ ಪ್ರವಾಸಿಗರನ್ನು ಆಕರ್ಷಿಸುವ ಸುಂದರ ಸ್ಥಳ.ಕಾನ್ವೆ ಕೋಟೆಯನ್ನು 1283 ರ ಸಮಯದಲ್ಲಿ ಕಟ್ಟಲಾಯಿತು ಎನ್ನಲಾಗುತ್ತದೆ.ಕಾನ್ವೆ ಕ್ಯಾಸೆಲ್ ನಲ್ಲಿ ನಿಂತರೆ ಸುತ್ತಲೂ ಕಾಣುವ ಕಾನ್ವೆ ತೂಗು ಸೇತುವೆ ಮತ್ತು ಸುತ್ತಲ ಹಳ್ಳಿಗಳು ಮನಸೂರೆಗೊಳ್ಳುವುದು ಖಂಡಿತ.ಹತ್ತಿರದಲ್ಲೆ ಬೀಚ್ ಗಳು ಕೂಡ ಇದ್ದು ಬೇಸಿಗೆಯಲ್ಲಿ ಜನರನ್ನು ಹೆಚ್ಚು ಆಕರ್ಷಿಸುತ್ತದೆ.

ಗ್ರೇಟ್ ಒರ್ಮ್ ಕಣಿವೆ ಮತ್ತು ಲ್ಯಾಂಡುಡ್ನೋ:

ಲ್ಯಾಂಡುಡ್ನೋ ಸಮುದ್ರ ಪಕ್ಕದ ಸುಂದರ ನಗರವಾಗಿದ್ದು ಸಮುದ್ರದ ಜೊತೆಗೆ ನಗರವೂ ಕೂಡ ಸಾಕಷ್ಟು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತದೆ.ಇಲ್ಲಿನ ಸಮುದ್ರದಲ್ಲಿ ಸಾಹಸ ಪ್ರಿಯರಿಗಾಗಿ ಸ್ಪೀಡ್ ಬೋಟ್ ಮುಂತಾದವುಗಳಿವೆ.ಗ್ರೇಟ್ ಒರ್ಮ್ ವ್ಯಾಲಿ ಒಂದು ದ್ವೀಪದಂತಿದ್ದು ಹಸಿರು ಬೆಟ್ಟಗಳು ಮತ್ತು ಕಲ್ಲು ಬಂಡೆಗಳ ನಡುವೆ ಸಣ್ಣ ಸಣ್ಣ ನದಿಗಳನ್ನು ಕೂಡ
ಕಾಣಬಹುದು.ಜೊತೆಗೆ ಇಲ್ಲಿ ಗ್ರೇಟ್ ಒರ್ಮ್ ಜಲಪಾತ ಕೂಡ ಇದೆ.

ಭೇಟಿ ನೀಡಲು ಉತ್ತಮ ಕಾಲ:
ವೇಲ್ಸ್ ಯುನೈಟೆಡ್ ಕಿಂಗ್ಡಮ್ ನಲ್ಲಿ ಅತಿ ಹೆಚ್ಚು ಮಳೆ ಬೀಳುವ ಪ್ರದೇಶ.ಚಳಿಗಾಲದಲ್ಲಿ ಅತಿ ಹೆಚ್ಚು ಚಳಿ ಇದ್ದರೂ ಕೂಡ ಹಿಮವನ್ನು ಹೆಚ್ಚು ಇಷ್ಟ ಪಡುವವರು ಈ ಸಮಯದಲ್ಲಿ ಭೇಟಿ ನೀಡಬಹುದು.ಆದರೆ ಬೇಸಿಗೆ ಅತಿ ಹೆಚ್ಚು ಸೂಕ್ತವಾಗಿದ್ದು ಹಸುರಿನ ಸೊಬಗನ್ನು ಕಣ್ಣು ತುಂಬಿಸಿಕೊಳ್ಳಬಹುದು.ಜೂನ್ ನಿಂದ ಸೆಪ್ಟೆಂಬರ್ ಸ್ನೋಡೋನಿಯಕ್ಕೆ ಭೇಟಿ ನೀಡಲು ಉತ್ತಮ ಕಾಲ.ಜೊತೆಗೆ ಪರ್ವತಗಳನ್ನು ಹತ್ತಲು ಸರಿಯಾದ ಶೂವನ್ನು ಬಳಸುವುದು ಉತ್ತಮ.ಚಳಿಗಾಲದಲ್ಲಾದರೆ ದಪ್ಪಉಣ್ಣೆ ಬಟ್ಟೆ ಬೇಕೇಬೇಕು.

ತಲುಪುವ ಮಾರ್ಗ;
ಲಂಡನ್ ನಿಂದ ರೈಲಿನ ಮೂಲಕ ಸುಮಾರು ೫ ತಾಸಿನ ಪ್ರಯಾಣ.ಆದರೆ ಇಲ್ಲಿನ ಸ್ಥಳಗಳನ್ನು ನೋಡಿ ಆನಂದಿಸಲು ಕಾರಿನಲ್ಲಿ ಹೋಗುವುದು ಸೂಕ್ತ.ಅಥವಾ ಲಂಡನ್ ನಿಂದ ಬ್ಯಾಂಗೊರ್ ಎಂಬಲ್ಲಿಗೆ ರೈಲಿನಲ್ಲಿ ಹೋಗಿ ಅಲ್ಲಿಂದ ಕಾರು ಬಾಡಿಗೆಗೆ ಪಡೆದುಕೊಂಡು ಹೋಗಬಹುದು.ಉತ್ತರ ವೇಲ್ಸ್ ನ ಎಲ್ಲಾ ಸ್ಥಳಗಳೂ ಪ್ರವಾಸಿ ಯೋಗ್ಯವಾಗಿದ್ದು ಕಾರಿನಲ್ಲಿ ಹೋದರೆ ಎಲ್ಲಾ ಸ್ಥಳಗಳಿಗೂ ಭೇಟಿ ನೀಡಬಹುದು.

Tuesday, 6 August 2013

ಡರ್ಡಲ್ ಡೋರ್ ಮತ್ತು ಲಲ್ವರ್ತ್ ಕೋವ್

Published on 13/09/2013 vijayanext



ಪ್ರಕೃತಿಯ ಸೌಂದರ್ಯದ ಎದುರು ಎಲ್ಲವೂ ಗೌಣ! .ಎಷ್ಟು ನಿಜವಾದ ಮಾತು.ಆ ತಾಣಕ್ಕೆ ಹೋದಾಗ ನನಗೆ ಮೊದಲು ಮನಸ್ಸಿಗೆ ಬಂದ ಸಾಲುಗಳಿವು.ಎಷ್ಟು ಅದ್ಭುತವಾದ ನಿಸರ್ಗ ದೃಶ್ಯವೆಂದರೆ ಅದನ್ನು ಮಾತಿನಲ್ಲಿ ವರ್ಣಿಸಲು ಸಾಧ್ಯವಾಗದು.ಕಣ್ಣಿನಲ್ಲೇ ತುಂಬಿಕೊಳ್ಳಬೇಕು.ಹೌದು ನಾನು ಈಗ ಹೇಳಹೊರಟಿರುವುದು ಇಂಗ್ಲೆಂಡ್ ನಲ್ಲಿರುವ ಡರ್ಡಲ್ ಡೋರ್ ಮತ್ತು ಲಲ್ವರ್ತ್ ಕೋವ್ ಬಗ್ಗೆ.

ಡರ್ಡಲ್ ಡೋರ್:
ಇದು ಜುರಾಸಿಕ್ ಕರಾವಳಿಯ ಡೋರ್ ಸೆಟ್ ಹಳ್ಳಿಯಲ್ಲಿರುವ ಸುಣ್ಣದ ಕಮಾನುಗಳನ್ನು ಹೊಂದಿರುವ ಅದ್ಬುತ ನಿಸರ್ಗ ಡರ್ಡಲ್ ಎಂದರೆ ಹಳೆಯ ಇಂಗ್ಲಿಷ್ ನ ಪ್ರಕಾರ ಥಿರ್ಲ್ ಅಂದರೆ ಅದರ ಅರ್ಥ ಡ್ರಿಲ್ ಅಥವಾ ಬೋರ್ ಎಂದಾಗಿದೆ.ಹೆಸರೇ ಹೇಳುವಂತೆ ಇಲ್ಲಿ ಸುಣ್ಣದ ಕಲ್ಲನ್ನು ಕೊರೆದು ಇಟ್ಟಂತಹ ಕಲ್ಲಿನ ಕ್ಲಿಫ್ಸ್ ಇರುವುದರಿಂದ ಇದಕ್ಕೆ ಡರ್ಡಲ್ ಡೋರ್ ಎಂದು ಹೆಸರಿಡಲಾಗಿದೆ.ಕರಾವಳಿ ಕಿನಾರೆಯಲ್ಲಿ ಸುಣ್ಣದ ಕಲ್ಲಿನ ಕಮಾನುಗಳನ್ನು ಹೊಂದಿ ಸುತ್ತಲೂ ಹಸಿರನ್ನು ಹೊಂದಿದ ಜೊತೆಗೆ ತಿಳಿ ನೀಲಿ ಬಣ್ಣದ ನೀರನ್ನು ಹೊಂದಿದ ಬೀಚ್ ಕೂಡ ಇಲ್ಲಿದೆ.
ತಾಣ.ಇಲ್ಲಿ ನೈಸರ್ಗಿಕ ಸುಣ್ಣದ ಬಂಡೆಗಳನ್ನು (ಕ್ಲಿಫ್ಸ್) ಕಾಣಬಹುದು.ಇದು ವೆಲ್ದ್ಸ್ ಎಂಬುವವರ ಖಾಸಗಿ ಒಡೆತನದಲ್ಲಿದೆ.ಅದ್ಬುತ ಸೌಂದರ್ಯವನ್ನು ಒಳಗೊಂದು ಪ್ರವಾಸಿಗರನ್ನು ಅತಿ ಹೆಚ್ಚು ಆಕರ್ಷಿಸುತ್ತಿರುವುದರಿಂದ ಈ ಕುಟುಂಬದವರು ಇದನ್ನು ಪ್ರವಾಸಿ ತಾಣವನ್ನಾಗಿ ಮಾಡಿದ್ದಾರೆ.ಡೋರ್ ಸೆಟ್ ಹಳ್ಳಿಯಲ್ಲಿ 12000 ಎಕರೆ ಭೂಮಿಯನ್ನು ವೆಲ್ದ್ಸ್ ಕುಟುಂಬ ಹೊಂದಿದೆ ಅದೇ ಡರ್ಡಲ್ ಡೋರ್.ಇಡೀ ತಾಣವನ್ನು ಲಲ್ವರ್ತ್ ಎಸ್ಟೇಟ್ ಎಂದು ಕರೆಯುತ್ತಾರೆ.

ಇಲ್ಲಿ ತಲುಪಲು ಸುಮಾರು ಹದಿನೈದು ನಿಮಿಷ ಬೆಟ್ಟವನ್ನು ಇಳಿದು ನಂತರ  150 ಮೆಟ್ಟಿಲುಗಳಿದ್ದು ಮೆಟ್ಟಿಲನ್ನು ಇಳಿದು ಕೆಳಗೆ ಹೋದರೆ ಕಮಾನಿನ ರೂಪವನ್ನು ಹೊಂದಿದ ಕಲ್ಲಿನ ಬಂಡೆ ಸುತ್ತಲೂ ನೀಲಿ ನೀರನ್ನು ಕಾಣಬಹುದು.ಸದಾ ಜನರಿಂದ ತುಂಬಿ ತುಳುಕುತ್ತಿರುವ ಈ ಸ್ಥಳ ನೀರಿನ ಅಲೆಗಳೊಂದಿಗೆ ಪ್ರವಾಸಿಗರನ್ನು ಇನ್ನಷ್ಟು ಹತ್ತಿರ ಕರೆಯುತ್ತದೆ.ಇಲ್ಲಿ ಸ್ವಂತ ಬೋಟ್ ಗಳಿದ್ದರೆ ಸ್ವಲ್ಪ ದೂರದ ವರೆಗೆ ಹೋಗಲೂ ಬಹುದು. 

ಮ್ಯಾನ್ ಆಫ್ ವಾರ್ ಬೀಚ್ :
ಡರ್ಡಲ್ ಡೋರ್ ನ ಇನ್ನೊಂದು ಪಕ್ಕದಲ್ಲಿ ಮ್ಯಾನ್ ಆಫ್ ವಾರ್ ಎಂಬ ಬೀಚ್ ಇದೆ.ಈ ಬೀಚ್ ಸನ್ ಬಾತ್ ಮಾಡುವವರಿಗೆ ಹೆಚ್ಚು ಸುಕ್ತವಾಗಿದ್ದು.ಇಲ್ಲಿ ಈಜಾಟವಾಡಬಹುದು.ಸಮುದ್ರದ ಮಧ್ಯದಲ್ಲಿ ಅಲ್ಲಲ್ಲಿ ದೊಡ್ಡ ಕಲ್ಲಿನ ಬಂಡೆಗಳಿದ್ದು ದಡದಲ್ಲಿ ಕುಳಿತು
ನೋಡುವವರಿಗೆ ಮತ್ತು ಛಾಯಾಚಿತ್ರದಲ್ಲಿ ಹೆಚ್ಚು ಆಸಕ್ತಿ ಇರುವವರಿಗೆ ಒಳ್ಳೆಯ ಚಿತ್ರ ತೆಗೆಯಲು ಸೂಕ್ತ ಸ್ಥಳ ಎನ್ನಬಹುದು.ಈ ಬೀಚ್ ಸದಾ ಜನರಿಂದ ತುಂಬಿರುತ್ತದೆ.

ಲಲ್ವರ್ತ್ ಕೋವ್ :
ಡರ್ಡಲ್ ಡೋರ್ ನ  ಇನ್ನೊಂದು ಬದಿಯಲ್ಲಿ ಲಲ್ವರ್ತ್ ಕೋವ್ ಇದೆ.ಸುಮಾರು 1 ವರೆ ಕಿ ಮೀ ಬೆಟ್ಟವನ್ನು ಹತ್ತಿ ಇಳಿದರೆ ಲಲ್ವರ್ತ್ ಕೋವ್ ಸಿಗುತ್ತದೆ .ಈ ಬೆಟ್ಟವನ್ನು ಹತ್ತಲು ಕಲ್ಲು ಹಾಸಿನ ದಾರಿಯನ್ನು ಕೂಡ ಮಾಡಲಾಗಿದೆ.ಇದೊಂದು ರೀತಿ ಟ್ರಕ್ಕಿಂಗ್ ನಂತೆ ಇರುತ್ತದೆ.ಸುತ್ತಲೂ ದಟ್ಟ ಹಸಿರಿನಿಂದ ಕೂಡಿರುವುದರಿಂದ ತಂಪು ಗಾಳಿ ಸೋಕುತ್ತಿರುತ್ತದೆ.ಎತ್ತರದ ಬೆಟ್ಟ ಹತ್ತಿದಾಗ ಇಡೀ ಲಲ್ವರ್ತ್ ಕೋವ್ ಮತ್ತು ಡರ್ಡಲ್ ಡೋರ್ ಅನ್ನು ಮೇಲಿನಿಂದ ನೋಡಬಹುದು.

ಲಲ್ವರ್ತ್ ಕೋವ್ ನಲ್ಲಿ ಬೋಟ್ ರೈಡಿಂಗ್ ನ ವ್ಯವಸ್ಥೆ ಇದೆ. ಸುಮಾರು ಅರ್ಧ ಗಂಟೆ ಸಮುದ್ರದ ಮಧ್ಯ ಭಾಗದ ವರೆಗೆ ಹೋಗಿ ನಂತರ ಡರ್ಡಲ್ ಡೋರ್ ನ ಹತ್ತಿರ ಹೋಗಿ ಅಲ್ಲಿನ ಕಮಾನನ್ನು ಹತ್ತಿರದಿಂದ ತೋರಿಸಿ ಪುನಃ ಹಿಂತಿರುಗಿ ಕರೆತರುತ್ತಾರೆ. ಅಲ್ಲಿಯೇ ಪಕ್ಕದಲ್ಲಿ ದ್ವೀಪದ ರೀತಿಯಿದ್ದು ಸುತ್ತಲೂ ನೀರಿನಿಂದ ಕೂಡಿ ಮಧ್ಯೆ ಎತ್ತರ ಕಲ್ಲು ಬಂಡೆಗಳಿವೆ.ರಾಕ್ ಕ್ಲೈಂಬಿಂಗ್ ಇಷ್ಟ ಪಡುವವರು ಇದನ್ನು ಹತ್ತಬಹುದು.ಹತ್ತಿ ಅಲ್ಲಿಂದ ಇಡೀ ಲಲ್ವರ್ತ್ ನ ನೋಟವನ್ನು ಆಸ್ವಾದಿಸಬಹುದು. ಇಷ್ಟೆಲ್ಲಾ ಮಾಡಲು ಒಂದು ವೀಕೆಂಡ್ ಇದಕ್ಕೆಂದೇ ಮೀಸಲಿಡಬೇಕು. 

ಭೇಟಿ ನೀಡಲು ಉತ್ತಮ ಕಾಲ :

ವರ್ಷದ 6 - 7 ತಿಂಗಳು ಇಂಗ್ಲೆಂಡಿನಲ್ಲಿ ಚಳಿಗಾಲ ಇರುವುದರಿಂದ ಮೇ ನಿಂದ ಅಗಸ್ಟ್ ನ ಬೇಸಿಗೆಯಲ್ಲಿ ಇಲ್ಲಿಗೆ ಹೋಗುವುದು ಸೂಕ್ತ.ಸುತ್ತಲೂ ಪ್ರಕೃತಿ ಯ ಹಸಿರು ಇರುವುದರಿಂದ ಗಾಳಿ ಅಧಿಕವಾಗಿರುತ್ತದೆ.

ಟ್ರಕ್ಕಿಂಗ್ ಮಾಡಲು ಬೇಕಾಗುವ ಶೂ ಹಾಕಿಕೊಂಡು ಹೋಗುವುದು ಒಳ್ಳೆಯದು.ಅದೊಂದು ಹಳ್ಳಿ ಆಗಿರುವುದರಿಂದ ತಿನ್ನಲು ಏನಾದರೂ ಕೊಂಡು ಹೋಗುವುದು ಸೂಕ್ತ. 

ತಲುಪುವ ಮಾರ್ಗ 

ಲಂಡನ್ ನಿಂದ ವೂಲ್ ಗೆ ರೈಲಿನ ಮೂಲಕ ತಲುಪಬಹುದು ಅಲ್ಲಿಂದ ಟ್ಯಾಕ್ಸಿ ಮಾಡಿಸಿಕೊಂಡು ಹೋಗಬೇಕು. ಲಂಡನ್ ನಿಂದ ಇಂಗ್ಲೆಂಡ್ ನ ವೂಲ್ ಗೆ 3 ತಾಸಿನ ಪ್ರಯಾಣ. 

ಡರ್ಡಲ್ ಡೋರ್ ನಿಂದ ಲಲ್ವರ್ತ್ ಕೋವ್ ಗೆ ಬೆಟ್ಟ ಹತ್ತಿ ಹೋಗಲಾಗದವರು ರಸ್ತೆ ಮೂಲಕ ಟ್ಯಾಕ್ಸಿ ಮಾಡಿಸಿಕೊಂಡು ಹೋಗಬಹುದು ಆದರೆ ಈ ಪ್ರಕೃತಿ ಸೌಂದರ್ಯ ಸಿಗುವುದಿಲ್ಲ. 

Friday, 19 July 2013

ಸ್ತ್ರಾಟ್ ಫೋರ್ಡ್ ಅಪಾನ್ ಅವನ್ (Stratford upon avon) Shakspear's birth place

Published in vijayanext on 19/07/12 


ಶೇಕ್ಸ್ ಪಿಯರ್  ಹೆಸರು ಯಾರು ತಾನೇ ಕೇಳಿಲ್ಲ ? 15 & 16 ನೆ ಶತಮಾನದಲ್ಲಿ ತನ್ನ ಕಾವ್ಯದ ಮೂಲಕ ನಾಟಕದ ಮೂಲಕ ಇಡೀ ಜಗತ್ತಿನ ಮೆಚ್ಚುಗೆ ಗಳಿಸಿದಾತ, ಈತ ಇಂಗ್ಲಿಷ್ ಕವಿ. ಈತನನ್ನು ಇಂಗ್ಲೆಂಡ್ ನ ರಾಷ್ಟ್ರ ಕವಿ ಎಂದು ಕರೆಯಲಾಗುತ್ತಿತ್ತು. ಈತ ಹುಟ್ಟಿದ್ದು,ಬೆಳೆದಿದ್ದು ಸ್ತ್ರಾಟ್ ಫೋರ್ಡ್ ಅಪಾನ್ ಅವನ್ ಎಂಬಲ್ಲಿ. ಈತ ತನ್ನ 18 ನೆ ವಯಸ್ಸಿನಲ್ಲಿ ತನಗಿಂತ ದೊಡ್ಡವಳಾದ 26 ವರ್ಷದ ಆನ್ನೆ ಹ್ಯಾಥವೆ ಎಂಬುವವಳನ್ನು ಮದುವೆಯಾದ. ನಂತರ 3 ಮಕ್ಕಳು. ಇದು ಶೇಕ್ಸ್ ಪಿಯರ್ ನ ವೈಯಕ್ತಿಕ ಜೀವನದ ಕಥೆ. ನಂತರ ಆತ ದೊಡ್ಡ ನಾಟಕಕಾರನಾದ ಇವನು ಬರೆದ ನಾಟಕಗಳು ಜಗತ್ತಿನಾದ್ಯಂತ ಹೆಸರು ಪಡೆಯಿತು ಇಂದಿಗೂ ಪಡೆಯುತ್ತಲೇ ಇದೆ. ಇಂಗ್ಲಿಷ್ ಸಾಹಿತ್ಯವನ್ನು ಓದಲು ಮುಂದಾದರೆ ಮೊದಲು ಬರುವುದು ಶೇಕ್ಸ್ ಪಿಯರ್ . ಆತನ ಕವನಗಳ ಬಗ್ಗೆ ನಾಟಕಗಳ ಬಗ್ಗೆ ಪಟ್ಟಿ ಮಾಡುತ್ತಾ ಹೋದರೆ ಮುಗಿಯದಷ್ಟು ಎನ್ನಬಹುದು. ಆತನ ಎಷ್ಟೋ ಕವನಗಳು ನಾಟಕಗಳು ಜಗತ್ತಿನ ಬೇರೆಬೇರೆ ಭಾಷೆಗಳಿಗೆ ಸಾಕಷ್ಟು ಅನುವಾದವಾಗಿದೆ ಎಂಬುದೆಲ್ಲ ಎಲ್ಲರಿಗೂ ತಿಳಿದಿರುವ ವಿಷಯ. ಶೇಕ್ಸ್ ಪಿಯರ್ ಹುಟ್ಟಿದ ಈ ಸ್ತ್ರಾಟ್ ಫೋರ್ಡ್ ಲಂಡನ್ ನಿಂದ ೩-೪ ಗಂಟೆಗಳ ಪ್ರಯಾಣವಷ್ಟೆ ಹಾಗಾಗಿ ನಾವು ಇದನ್ನು ನೋಡಲೇ ಬೇಕು ಎಂದು ಅಲ್ಲಿ ಹೋದೆವು. 
ಒಂದು ಅಂದಾಜಿನ ಪ್ರಕಾರ ಪ್ರತಿ ವರ್ಷ ಇಲ್ಲಿಗೆ 3 ಮಿಲಿಯನ್ ಪ್ರವಾಸಿಗರು ಭೇಟಿ ನೀಡುತ್ತಾರೆ. ಈ ಸ್ಥಳಕ್ಕೆ ಪ್ರವೇಶಿಸುತ್ತಿದ್ದಂತೆ ನಮಗೆ ಸ್ತ್ರಾಟ್ಫೋರ್ಡ್ ಆನ್ ಅವನ್ ನ ಕ್ಲಾಕ್ ಸಿಗುತ್ತದೆ ಮತ್ತು ಅಲ್ಲೇ ಪಕ್ಕದಲ್ಲಿ ದೊಡ್ಡ ಮಾರ್ಕೆಟ್ ಇದೆ ಇದು ಇಲ್ಲಿನ ಜನಪ್ರಿಯ ಮಾರ್ಕೆಟ್ ಆಗಿದೆ. ಪ್ರತಿ ವಾರ ಇಲ್ಲಿ ಸಂತೆ ನಡೆಯುತ್ತದೆ ರಸ್ತೆ ಬದಿಗಳಲ್ಲಿ ವಿವಿಧ ವಸ್ತುಗಳನ್ನು ಮಾರಟಕ್ಕೆ ಇಟ್ಟುಕೊಂಡಿರುತ್ತಾರೆ.ಇಲ್ಲಿ ರಸ್ತೆ ಬದಿಗಳಲ್ಲಿ ಸ್ಟ್ರೀಟ್ ಪ್ಲೇ ಮಾಡಿ ತೋರಿಸ್ತುತ್ತಾರೆ ಇದು ಹೆಚ್ಚಿನ ಜನರನ್ನು ಆಕರ್ಷಿಸುತ್ತದೆ. ಶೇಕ್ಸ್ಪಿಯರ್ ನ ನಾಟಕಗಳ ತುಣುಕನ್ನು ಇಲ್ಲಿ ನೋಡಬಹುದು. 
ವಿಲಿಯಂ ಶೇಕ್ಸ್ಪಿಯರ್ ಹುಟ್ಟಿದ ಮನೆಯನ್ನು ಪ್ರವಾಸಿ ಸ್ಥಳವಾಗಿಸಲಾಗಿದೆ. ಇಲ್ಲಿ ಪ್ರವೇಶಿಸುತ್ತಿದ್ದಂತೆ ಶೇಕ್ಸ್ ಪಿಯರ್ ನ ಹುಟ್ಟು ಮತ್ತು ಆತನ ವೈಯಕ್ತಿಕ ಜೀವನದ ಬಗ್ಗೆ ಮಾಹಿತಿ ನೀಡಲಾಗುತ್ತದೆ ನಂತರ ಆತನ ಮನೆಗೆ ಪ್ರವೇಶ ನೀಡಲಾಗುತ್ತದೆ. ಶೇಕ್ಸ್ ಪಿಯರ್ ಮಗುವಾಗಿದ್ದಾಗಿನಿಂದ ಆತನ ತಾಯಿ ಮೇರಿ ಕಾಲ್ಪನಿಕ ಕಥೆಗಳನ್ನು ಹೇಳುತ್ತಿದ್ದಳಂತೆ ಇದರಿಂದ ಪ್ರೇರಿತನಾದ ಈತ ಕವನ,ನಾಟಕಗಳನ್ನು ರಚಿಸಲು ಯಶಸ್ವಿಯಾದ ಎನ್ನಲಾಗುತ್ತದೆ .  ಈ ಮನೆ ಸುಮಾರು 600 ವರ್ಷಗಳ ಹಿಂದಿನದಾಗಿದ್ದು ಸುತ್ತಲು ಉದ್ಯಾನವನವನ್ನು ಕಟ್ಟಿ ಸುಂದರವಾಗಿ ನಿರ್ವಹಿಸಲಾಗುತ್ತಿದೆ.ಇದನ್ನು ಈಗ ವಸ್ತು ಸಂಗ್ರಹಾಲಯವನ್ನಾಗಿ ಮಾಡಲಾಗಿದೆ .  ಒಳಭಾಗದಲ್ಲಿ ಶೇಕ್ಸ್ಪಿಯರ್ ಬಳಸಿದ ತೊಟ್ಟಿಲು ಮನೆಯ ಅಡುಗೆ ಮನೆ ವಸ್ತುಗಳು,ಮನೆಯಲ್ಲಿ ಬಳಸುತ್ತಿದ್ದ ಇತರ ವಸ್ತುಗಳನ್ನು ಇಡೀ ಮನೆಯನ್ನು ಆಟ ನಾಟಕಗಳಿಗೆ ಬಳಸುತ್ತಿದ್ದ ವಸ್ತ್ರಗಳನ್ನು ಕಾಣಬಹುದು. ಅಲ್ಲಿಯೇ ಒಂದು ಪುಸ್ತಕ ಮಳಿಗೆ ಕೂಡ ಇದೆ ಇಲ್ಲಿ ಶೇಕ್ಸ್ಪಿಯರ್ ಬರೆದ ಎಲ್ಲಾ ಪುಸ್ತಕಗಳು ಲಭ್ಯವಿದೆ. 

ಆನ್ ಹ್ಯಾಥವೇ  ಕಾಟೇಜ್ :
ಶೇಕ್ಸ್ಪಿಯರ್ ಮನೆಯಿಂದ ಒಂದು ಕಿ ಮೀ ಅಂತರದಲ್ಲಿ ಶೇಕ್ಸ್ ಪಿಯರ್ ಹೆಂಡತಿ ಹ್ಯಾಥವೆ ಮನೆಯಿದೆ. ಆಕೆ ತನ್ನ ಬಾಲ್ಯದ ದಿನಗಳನ್ನು ಇಲ್ಲಿ ಕಳೆದಳು ಎನ್ನಲಾಗಿದೆ. ಇಲ್ಲಿ 12 ರೂಮುಗಳಿದ್ದು ಆಗಿನ ಕಾಲದಲ್ಲಿ ಬಳಸಲಾದ ಎಲ್ಲಾ ವಸ್ತುಗಳನ್ನು ಇಡಲಾಗಿದೆ. ಹೊರಗೆ ದೊಡ್ಡ ಉದ್ಯಾನವನ ಜೊತೆಗೆ ಇಲ್ಲಿ ಫಾರ್ಮ್ ಇದೆ ಇದರಲ್ಲಿ ವಿವಿಧ ರೀತಿಯ ತರಕಾರಿಗಳನ್ನು ಬೆಳೆಯಲಾಗುತ್ತದೆ. 90 ಎಕರೆ ಭೂಮಿಯಲ್ಲಿ ಇರುವ ಈ ಕಾಟೇಜ್ ನಲ್ಲಿ ಕಾಡು ಕೂಡ ಇದೆ .  ಜೊತೆಗೆ ಸುಂದರವಾದ ಉದ್ಯಾನವನವಿದೆ ಇಡೀ ಸ್ಥಳವನ್ನು ನೋಡಲು ಸುಮಾರು ೩ ತಾಸು ಬೇಕು. 1969 ರಲ್ಲಿ ಇದು ಬೆಂಕಿಬಿದ್ದು ಸಂಪೂರ್ಣ ನಾಶ ಹೊಂದುವ ಹಂತದಲ್ಲಿತ್ತು ನಂತರ ಇದನ್ನು ಮತ್ತೆ ನವೀಕರಿಸಲಾಯಿತು. 

ನಷ್ಸ್ ಹೌಸ್ ಮತ್ತು ನ್ಯೂ ಪ್ಲೇಸ್ 

ಇದು ಶೇಕ್ಸ್ಪಿಯರ್ ನ ಮೊಮ್ಮಗಳ ಗಂಡನ ಮನೆ ಎನ್ನಲಾಗಿದೆ ಇದನ್ನು ಈಗ ಮ್ಯೂಸಿಯಂ ಆಗಿ ಪರಿವರ್ತಿಸಲಾಗಿದ್ದು . ಇದು
17 ನೆ ಶತಮಾನದ ಮನೆ. ಇದರ ಸುತ್ತಲು ಸುಂದರವಾದ ಉದ್ಯಾನವನ ನಿರ್ಮಿಸಲಾಗಿದೆ . ಪ್ರತಿದಿನ ಬೆಳಿಗ್ಗೆ 10 ರಿಂದ ಸಂಜೆ 5 ರ ವರೆಗೆ ಪ್ರವಾಸಿಗರಿಗೆ ನೋಡಲು ಅವಕಾಶ ಕಲ್ಪಿಸಿಕೊದಲಾಗುತ್ತದೆ. ಮನೆಯ ಮೇಲ್ಬಾಗದಲ್ಲಿ ಶೇಕ್ಸ್ ಪಿಯರ್ ಬರೆದ ಪುಸ್ತಕಗಳಲ್ಲಿ ಬರುವ ವ್ಯಕ್ತಿಗಳ ಸಣ್ಣ ಮಾಹಿತಿ ನೀಡುವ ಫಲಕ ನೇತು ಹಾಕಲಾಗಿದೆ. ಇದನ್ನು ನೋಡಿದವರಿಗೆ ಶೇಕ್ಸ್ಪಿಯರ್ ನ ಒಥೆಲೊ ,ಹ್ಯಾಮ್ಲೆಟ್,ರೋಮಿಯೋ ಜೂಲಿಯಟ್ ಇವುಗಳನ್ನೆಲ್ಲ ಓದಲೇ ಬೇಕು ಎಂದೆನಿಸದೆ ಇರಲಾರದು. 

ಇಷ್ಟೇ ಅಲ್ಲದೆ ಇಲ್ಲಿ 3 ಥಿಯೇಟರ್ ಗಳಿದ್ದು ಅವುಗಳಲ್ಲಿ ಶೇಕ್ಸ್ ಪಿಯರ್ ನ ಡ್ರಾಮ ನಡೆಯುತ್ತಿರುತ್ತದೆ. ಒಂದು ದಿನಪೂರ್ತಿ ನೋಡಿದರೂ ಮುಗಿಯದ ಮನ ತಣಿಯದ ಹಳ್ಳಿ ಈ ಸ್ತ್ರಾಟ್ಫೋರ್ಡ್ ಅವನ್ . ಒಟ್ಟಾರೆಯಾಗಿ ಇಂಗ್ಲೆಂಡ್ ನ ಚಿಕ್ಕ ಹಳ್ಳಿಯ ಸಣ್ಣ ಮನೆಯಲ್ಲಿ ಬೆಳೆದ ಈತ ಜಗತ್ಪ್ರಸಿದ್ದವಾದದ್ದು ನಿಜವಾಗಲು ಮಹತ್ ಸಾಧನೆ. 

ಇದು ಉತ್ತರ ಇಂಗ್ಲೆಂಡ್ ನಲ್ಲಿ ಬರುತ್ತದೆ. ಬರ್ಮಿಂಗ್ ಹ್ಯಾಮ್ ನಿಂದ 1 ಗಂಟೆ ಪ್ರಯಾಣ.ಭಾತರದಿಂದ ಲಂಡನ್ ಪ್ರವಾಸಕ್ಕೆ ಬಂದವರು  ಲಂಡನ್ ನಿಂದ ರೈಲಿನಲ್ಲಿ 3 ತಾಸಿನಲ್ಲಿ ತಲುಪಬಹುದು. ನಗರದ ಮದ್ಯದಲ್ಲಿಯೆ ಎಲ್ಲ ಸ್ಥಳಗಳಿರುವುದರಿಂದ ಬಸ್ ನಲ್ಲಿ ಎಲ್ಲಿ ಬೇಕಾದರೂ ಸುಲಭವಾಗಿ ತಲುಪಬಹುದು. ನಡೆದುಕೊಂಡು ಹೋದರು ಕೂಡ ಇದೊಂದು ಸುಂದರ ಸ್ಥಳ. 

ವರ್ಷದ 6 ತಿಂಗಳು ಚಳಿಯಿಂದ ಕೂಡಿರುವುದರಿಂದ ಇಲ್ಲಿ ಹೋಗಲು ಸೂಕ್ತ ಸಮಯ ಜೂನ್ ನಿಂದ ಸೆಪ್ಟೆಂಬರ್ . 

ಅರ್ಪಿತಾ ಹರ್ಷ 
ಲಂಡನ್ 

Friday, 8 March 2013

ದೇಶದ ಅಭಿವೃದ್ದಿಯ ಸಂಕೇತ




ವಿಜಯ ನೆಕ್ಸ್ಟ್ನಲ್ಲಿ ಮಹಿಳಾ ದಿನಾಚರಣೆಯ ಲೇಖನಕ್ಕೆ ನನ್ನದೂ ಒಂದು ಸಣ್ಣ ಅಭಿಪ್ರಾಯ . ೦೮/೦೩/೧೩ ರಂದು ಪ್ರಕಟಗೊಂಡಿದೆ .


ಹಳ್ಳಿ ಮತ್ತು ಪಟ್ಟಣ ಎರಡೂ ಕಡೆಗಳಲ್ಲಿ ಕಾಲಕ್ಕೆ ತಕ್ಕಂತೆ ಹೆಣ್ಣು ಮಕ್ಕಳ ಆಕಾಂಕ್ಷೆಗಳು ಕೂಡ ಬದಲಾಗುತ್ತಿದೆ .  ಇಂದಿನ ಹೆಂಗಳೆಯರು ಹೊರಹೋಗಿ ದುಡಿದು ಯಾವುದೇ ಗಂಡಸರಿಗೂ ಕಡಿಮೆ ಇಲ್ಲ ಎಂದು ತೋರಿಸುತ್ತಿದ್ದಾರೆ.  ಬೇರೆಬೇರೆ ಫೀಲ್ಡ್ ಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ . ಮನೆಯ ಹೊರಗೆ ಮತ್ತು ಒಳಗೆ ದುಡಿಯುವಲ್ಲಿ ಸಫಲಳಾಗಿದ್ದಾಳೆ .
ಐ ಟಿ , ಸಿನೆಮಾ , ಪತ್ರಿಕೋದ್ಯಮ,ಮಾದ್ಯಮ , ಖಾಸಗಿ ಕಂಪನಿ, ರಾಜಕೀಯಗಳಲ್ಲಿ ಸೈ  ಎನಿಸಿಕೊಳ್ಳುತ್ತಿದ್ದಾರೆ . ಹಳ್ಳಿಗಳಲ್ಲಿರುವ ಹೆಣ್ಣುಮಕ್ಕಳು ಕೂಡ ಸ್ವಂತ ಉದ್ಯೋಗ , ಶಿಕ್ಷಣಗಳ ಬಗ್ಗೆ ಹೆಚ್ಚು ಗಮನ ಹರಿಸುತ್ತಿದ್ದಾರೆ. ಇದು ದೇಶದ ಅಭಿವೃದ್ಧಿಗೆ ಇನ್ನಷ್ಟು ಸಹಾಯಕವಾಗುವುದು ಎನ್ನುವುದು ನನ್ನ ಅಭಿಪ್ರಾಯ.
ಓದಿನಲ್ಲೂ ಕೂಡ ಹೆಣ್ಣು ಮಕ್ಕಳೇ ಮುಂದಿದ್ದಾರೆ .   ಇದು ದೇಶದ ಅಭಿವೃದ್ದಿಯ ಸಂಕೇತ. ಇದರಿಂದ ಬೇರೆ ದೇಶಗಳಲ್ಲಿರುವಂತೆ ನಮ್ಮ ದೇಶದಲ್ಲೂ ಯಾವುದೇ ರೀತಿಯ ತಾರತಮ್ಯತೆ ಇಲ್ಲದೆ ,ಸಮಾನತೆ ದೊರೆಯುತ್ತಿದೆ ಮತ್ತು ಸಂಪೂರ್ಣವಾಗಿ ದೊರೆಯುತ್ತದೆ ಎಂಬುದರಲ್ಲಿ ಸಂಶಯವಿಲ್ಲ ಎಂದೆನಿಸುತ್ತದೆ.

Arpitha Harsha 
London 

Thursday, 28 February 2013

ಒಗ್ಗರಣೆ ಅವಾಂತರ


ಮಾರ್ಚ್ ೧,2013   ವಿಜಯನೆಕ್ಸ್ಟ್ ನಲ್ಲಿ ಪ್ರಕಟಗೊಂಡಿದೆ .



ನನಗೆ ಅಡುಗೆ ಮಾಡುವುದು ಎಂದರೆ ಇಷ್ಟ . ಅದೊಂದು ಹವ್ಯಾಸ ಎನ್ನುವ ರೀತಿ ಮಾಡುತ್ತೇನೆ . ಈಗಂತೂ ಇಂಟರ್ನೆಟ್  ನೋಡಿದರೆ ಯಾವುದು ಬೇಕು ಅದು ಮಾಡಬಹುದು ಹಾಗೆ ಮದುವೆಯಾದ ಹೊಸದರಲ್ಲೂ ನನಗೆ ಅಡುಗೆ ಮಾಡುವುದು ಕಷ್ಟ ಎನಿಸಲೇ ಇಲ್ಲ ಇಷ್ಟಪಟ್ಟು ಅಡುಗೆ ಮಾಡುತ್ತಿದ್ದೆ ತಿನ್ನುತ್ತಿದ್ದೆ . 
ಆದರೆ ಒಬ್ಬಬ್ಬರು ಮಾಡುವ ಅಡುಗೆ ಒಂದೊಂದು ರೀತಿಯಲ್ಲಿರುತ್ತದೆ . ಕೆಲವರ ಕೈ ರುಚಿಯೇ ಬೇರೆ . ನನ್ನ ಪತಿಯ ಚಿಕ್ಕಮ್ಮ ಪಲಾವ್ ಚೆನ್ನಾಗಿ ಮಾಡುತ್ತಾರೆ . ಈ ಭಾರಿ ಊರಿಗೆ ಹೋದಾಗ ನಮ್ಮ ಚಿಕ್ಕ ಅತ್ತೆ ಕೈಯಲ್ಲಿ ಪಲಾವ್ ಮಾಡುವುದು ಹೇಳಿಸಿ ಕೊಳ್ಳಬೇಕು  ಎಂಬ ಆಸೆ ಇತ್ತು .
ನಾನು ಅವರ ಮನೆಗೆ ಹೋಗಿದ್ದೆ . ಒಂದು ದಿನ ಹೇಗೆ ಪಲಾವ್ ಮಾಡುವುದು ಎಂದು ಹೇಳಿಕೊಟ್ಟರು ಹಸಿರು ಪಲಾವ್ . ರುಬ್ಬಿ ಮಾಡುವ ಪಲಾವ್ ಆದ್ದರಿಂದ ಅದು ತುಂಬಾ ಟೇಸ್ಟ್ ಕೊಡುತ್ತದೆ ಮತ್ತು ಅದು ತುಂಬಾ ಚನ್ನಾಗಿತ್ತು .
ಮತ್ತೊಂದು ದಿನ ಮನೆಗೆ ತುಂಬಾ ಜನ ನೆಂಟರು ಬರುವವರಿದ್ದರು . ಒಬ್ಬೊಬ್ಬರು ಒಂದೊಂದು ಅಡುಗೆ ಮಾಡಿದರೆ ಬೇಗ ಆಗುತ್ತದೆ ಎಂದು ತೀರ್ಮಾನಿಸಿದೆವು. ನನಗೆ ನಾನು ಕಲಿತ ಪಲಾವ್ ಅನ್ನು ಮತ್ತೊಮ್ಮೆ ಮಾಡಬೇಕು ಎಂಬ ಆಸೆ ಇತ್ತು . ನಾನು ಪಲಾವ್ ಮಾಡುವುದಾಗಿ ಹೇಳಿದೆ . ಅವರು ಕುಶಿಯಿಂದ ಒಪ್ಪಿದರು ನಾನು ಅವ್ರು ಹೇಳಿಕೊಟ್ಟಂತ ರೀತಿಯಲ್ಲೇ ಪಲಾವ್ ಮಾಡಿದೆ .
 ನಾನು ಮಾಡಿದ ಪಲಾವ್ ಎಲ್ಲ ರೆಡಿ ಆಗಿತ್ತು ಅನ್ನ  ಹಾಕಿ ಕಲೆಸಿಯೂ ಆಗಿತ್ತು . ಅವರು ಒಲೆಯಮೇಲೆ ಒಗ್ಗರಣೆಗೆ ಇಟ್ಟಿದ್ದರು ನಾನು ಯೋಚಿಸಿದೆ ಮೊನ್ನೆ ಹೇಳಿಕೊಟ್ಟ ಪಲಾವ್ ನಲ್ಲಿ ಒಗ್ಗರಣೆ ಇರಲಿಲ್ಲವಲ್ಲ ಎಂದು .ಅದು ಬೆಂದ ಕಾರಣ ನಾನು ಕೇಳಿದೆ ಹಾಕಲಾ ಎಂದು ಅವರು ಹಾಕು ಹಾಕಿದರೆ ಇನ್ನೂ  ಟೇಸ್ಟ್ ಬರುತ್ತದೆ ಎಂದರು ನಾನು ಒಗ್ಗರಣೆ ತೆಗೆದು ಪಲಾವ್ ಗೆ ಸುರಿದುಬಿಟ್ಟೆ  . ಆದರೆ ಅವರು  ಒಗ್ಗರಣೆ ಮಾಡಲು ಹೇಳಿದ್ದು ರಾಯತಕ್ಕಾಗಿತ್ತು .ನಾನು ಕೇಳದೆಯೇ ಪಲಾವ್ ಗೆ ಹಾಕಿಬಿಟ್ಟಿದ್ದೆ .
 ಪಲಾವ್ ಏನು ಹಾಳಾಗಲಿಲ್ಲ ಆದರೆ ನಾನು ಮಾಡಿದ ಎಡವಟ್ಟು ಕೆಲಸದಿಂದ ಎಲ್ಲರೂ  ಜೋರಾಗಿ ನಕ್ಕೆವು .

ಅರ್ಪಿತಾ ಹರ್ಷ 
ಲಂಡನ್ 

ಮಿಸ್ಸಲ್ ಪಾವ್

ಈ ನನ್ನ ಲೇಖನವು ೧೫/೦೩/೨೦೧೩ ವಿಜಯನೆಕ್ಸ್ಟ್ ನಲ್ಲಿ ಪ್ರಕಟಗೊಂಡಿದೆ 



ಮಿಸ್ಸಲ್ ಪಾವ್  ಎಂಬುದೊಂದು ಮಹಾರಾಷ್ಟ್ರದ ಚಾಟ್ . ಇದು ಬಹಳ ಪ್ರಖ್ಯಾತಿ ಹೊಂದಿದ ಚಾಟ್ . ಇದನ್ನು ಮುಂಬೈ ಮತ್ತು ಪುಣೆಯಲ್ಲಿ ಚಾಟ್ ರೀತಿಯಲ್ಲೂ ಸೇವಿಸುತ್ತಾರೆ ಮತ್ತು ಕೆಲವೊಮ್ಮೆ ಊಟದ ಜೊತೆಯೂ ಇದು ಹೊಂದುತ್ತದೆ . 

ಮಿಸ್ಸಲ್ ಪಾವ್ ಮಾಡಲು ಬೇಕಾದ ಸಾಮಗ್ರಿಗಳು :

೧ . ಮೊಳಕೆ ಬರಿಸಿದ ಹೆಸರು ಕಾಳು ಅರ್ಧ ಕಪ್ 
೨. ಶೇವಿಗೆ / ಕಾರದ ಕಾಳು  ಅರ್ಧ ಕಪ್ 
೩. ಪಾವ್ ಅಥವಾ ಬ್ರೆಡ್ ೫ 
೪. ಹಸಿ ಮೆಣಸಿನ ಕಾಯಿ ೨ 
೫. ಈರುಳ್ಳಿ ಅರ್ಧ  ಕಪ್ ಹೆಚ್ಚಿದ್ದು 
೬. ಟೊಮೇಟೊ ಅರ್ಧ  ಕಪ್ ಹೆಚ್ಚಿದ್ದು 
೭. ತುರಿದ ಕಾಯಿ ಅರ್ಧ ಕಪ್ 
೮.ಚಕ್ಕೆ -೧
೯.ಲವಂಗ ೨
 ೧೦.  ಮೆಣಸಿನ ಪುಡಿ ಅರ್ಧ ಚಮಚ 
೧೧.  ಕೊತ್ತುಂಬರಿ ಪುಡಿ ಅರ್ಧ ಚಮಚ 
೧೨. ಜೀರಿಗೆ ಅರ್ಧ ಚಮಚ 
೧೩ ಬೆಳ್ಳುಳ್ಳಿ  ೧ 
೧೪.  ರುಚಿಗೆ ತಕ್ಕಷ್ಟು ಉಪ್ಪು 
೧೫. ಹುಣಸೆ ಹಣ್ಣಿನ ರಸ ಸ್ವಲ್ಪ 


ಮಾಡುವ ವಿಧಾನ :

೧.ಮೊದಲು ಮೊಳಕೆಬರಿಸಿದ ಹೆಸರು ಕಾಳನ್ನು ಕುಕ್ಕರ್ ನಲ್ಲಿಟ್ಟು  ಬೇಯಿಸಿಕೊಳ್ಳಬೇಕು . ನಂತರ ಅದಕ್ಕೆ ಕಾರದ ಪುಡಿ ,ಉಪ್ಪು , ನಿಂಬೆ ಹುಳಿ  ಹಾಕಿ ಕೊಸಂಬರಿಯ ರೀತಿ ತಯಾರಿಸಿಟ್ಟುಕೊಳ್ಳಬೇಕು . 
೨.ಪಾವ್ ಅಥವಾ ಬ್ರೆಡ್ ಅನ್ನು ಕಾವಲಿಯ ಮೇಲಿತ್ತು ಸ್ವಲ್ಪ ಬಿಸಿ ಮಾಡಿಡಬೇಕು .
೩. ತುರಿದಿಟ್ಟ ಕಾಯಿಗೆ  ಮೆಣಸಿನ ಪುಡಿ , ಕೊತ್ತುಂಬರಿ ಪುಡಿ, ಜೀರಿಗೆ, ಬೆಳ್ಳುಳ್ಳಿ , ಹುಣಸೆಹಣ್ಣಿನ  ರಸ ಹಾಕಿ ರುಬ್ಬಿಕೊಳ್ಳಬೇಕು .
೪. ಬಾಣಲೆಯಲ್ಲಿ ಎಣ್ಣೆ ಹಾಕಿ ಅದಕ್ಕೆ ಸಾಸಿವೆ ಉದ್ದಿನಬೇಳೆ ಹಾಕಿ ಬೆಂದ ನಂತರ ರುಬ್ಬಿದ ಮಸಾಲವನ್ನು ಅದಕ್ಕೆ ಹಾಕಿ ೫ ನಿಮಿಷ ಚೆನ್ನಾಗಿ ತಿರುಗಿಸಬೇಕು .
೫. ಈಗ ಪ್ಲೇಟ್ ಗೆ ಮಾಡಿಟ್ಟ ಹೆಸರುಕಾಳು ಮಸಾಲ ಮೊದಲು ಹಾಕಿ ನಂತರ ರುಪ್ಪಿದ ಬಿಸಿ ಮಸಾಲವನ್ನು ಅದರ ಮೇಲೆ ಹಾಕಿ ನಂತರ ಹೆಚ್ಚಿತ್ತ ಈರುಳ್ಳಿ ಮತ್ತು ಟೊಮೇಟೊ ಹಾಕಿ ಅದರ ಮೇಲೆ ಶಾವಿಗೆ ಕಾಳು ಹಾಕಿ ಮೇಲೆ ಕೊತ್ತುಂಬರಿ ಸೊಪ್ಪು ಉದುರಿಸಿ ಪಕ್ಕದಲ್ಲಿ ಪಾವ್ ಅಥವಾ ಬ್ರೆಡ್ ಇಟ್ಟು  ತಿನ್ನಲು ಕೊಡಿ . ೨ ಬ್ರೆಡ್ ನೊಂದಿಗೆ ತಿಂದರೆ ಹೊಟ್ಟೆ ತುಂಬುತ್ತದೆ   . ಮಕ್ಕಳು ಕೂಡ ಇಷ್ಟಪಡುವ ಚಾಟ್ ಇದು .

Arpitha Harsha 

Sunday, 3 February 2013

ಚಾಕಲೇಟ್ ಕವರ್ ನ ತೋರಣ

ಈ ನನ್ನ ಲೇಖನವು ವಿಜಯ ನೆಕ್ಸ್ಟ್ ನಲ್ಲಿ ಪ್ರಕಟಗೊಂಡಿದೆ ೦೫/೦೪/೧೩ 





ಮನೆಯಲ್ಲಿ ಮಕ್ಕಳಿರಲಿ ಇಲ್ಲದಿರಲಿ ಈಗಂತೂ ಚಾಕಲೇಟ್ ಕವರ್ ಗಳು ಎಲ್ಲರ ಮನೆಯಲ್ಲೂ ಇದ್ದೇ  ಇರುತ್ತದೆ .ಚಾಕೊಲೆಟ್ ತಿನ್ನುವುದು ಎಲ್ಲರಿಗು ಇಷ್ಟ . ಹಾಗೆಯೇ ಚಾಕೊಲೆಟ್ ತಂದರೂ  ಬಾಕ್ಸ್ ನಲ್ಲೆ ಸಿಗುತ್ತದೆ ಈಗ .  ಹಾಗೆ 

ತಿಂದ ಚಾಕ್ಲೆಟ್ ನಿಂದ ಬೇಕಾದಷ್ಟು ಕವರ್ ಗಳು ಸಿಗುತ್ತವೆ . ಅದನ್ನು ಸುಮ್ಮನೆ ಎಸೆಯುವ ಬದಲು ಅದರಿಂದ ಚೆಂದದ ಒಂದು ತೋರಣ ಸಿದ್ಧ ಪಡಿಸಬಹುದು . 

ಬೇಕಾಗುವ ಸಾಮಗ್ರಿಗಳು : ಚಾಕಲೇಟ್ ಕವರ್ ಗಳು , ಯಾವುದೇ ಬಣ್ಣದ ದಾರ .

ವಿಧಾನ : 1. ಚಾಕಲೇಟ್ ಕವರ್ ಗಳನ್ನು ಎಸೆಯದೆ ಒಟ್ಟು ಹಾಕಿ ಇಟ್ಟುಕೊಳ್ಳಿ , ಕವರ್ ಗಳು ಜಾಸ್ತಿ ಇದ್ದಷ್ಟು ಜಾಸ್ತಿ ಉದ್ದ ತೋರಣ ತಯಾರಿಸಬಹುದು . ಕಡಿಮೆ ಕವರ್ ಗಳು ಇದ್ದಾರೆ ಅದನ್ನು ಹೆಣೆದು ನೇತು ಹಾಕಿದರೆ ನೋಡಲು ಸುಂದರವಾಗಿರುತ್ತದೆ.

2. ಎಲ್ಲಕವರ್ ಗಳನ್ನೂ ವೃತ್ತಾಕಾರದಲ್ಲಿ ಸುತ್ತಿ .

3.  ಸುತ್ತಿದ ಚಾಕಲೇಟ್ ಕವರ್ ನ ಮಧ್ಯ ಭಾಗದಲ್ಲಿ  ದಾರದಿಂದ ಹೂವನ್ನು ಕಟ್ಟಿದಂತೆ ಕಟ್ಟುತ್ತ ಹೋದರೆ ಉದ್ದನೆಯ ಚಾಕಲೇಟ್ ತೋರಣ ಅಥವಾ ಗೋಡೆಗೆ ನೇತು ಹಾಕಬಹುದಾದ ಅಲಂಕಾರಿಕ ವಸ್ತು ಖರ್ಚಿಲ್ಲದೆ ರೆಡಿ .


ಅರ್ಪಿತಾ ಹರ್ಷ 
ಲಂಡನ್ 

Friday, 4 January 2013

ಪ್ರಾಮಾಣಿಕತೆಗೆ ಒಂದು ಸಲಾಂ


ಈ ನನ್ನ ಲೇಖನವು 11/1/13 ವಿಜಯ ನೆಕ್ಸ್ಟ್ ನಲ್ಲಿ ಪ್ರಕಟಗೊಂಡಿದೆ <a> http://www.vijayanextepaper.com/Details.aspx?id=643&boxid=1961916<a/>




ಈಗ 3 ತಿಂಗಳ ಹಿಂದೊಮ್ಮೆ  ಲಂಡನ್ ನಿಂದ ಭಾರತಕ್ಕೆ ಹೋಗಿದ್ದೆವು . ನಾನು ಸ್ವಲ್ಪ ಮುಂಚಿತವಾಗಿ ಭಾರತ ಸೇರಿದ್ದೆ . ನನ್ನ ಪತಿ ಗೆ ಕೇವಲ 15 ದಿನ ರಜಾ ಸಿಕ್ಕಿದ್ದರಿಂದ ಸ್ವಲ್ಪ ತಡವಾಗಿ ಬಂದರು . ಬೆಂಗಳೂರಿಗೆ ಬಂದು ಇಳಿಯುವಾಗ ಸುಮಾರು 4 ಗಂಟೆ ಆಗಿತ್ತು .ಏರ್ಪೋರ್ಟ್ ನಲ್ಲಿ ಸಿಗುವ ಕ್ಯಾಬ್ ನಲ್ಲಿ ಮನೆಗೆ ಬರಲು ನಿರ್ಧರಿಸಿದ್ದರಿಂದ ಕ್ಯಾಬ್ ಡ್ರೈವರ್ ಹತ್ತಿರ ಇರುವ ಫೋನ್ ನಿಂದ ನನಗೆ ಕಾಲ್ ಮಾಡಿ ಕ್ಯಾಬ್ ಸಿಕ್ಕಿರುವ ಬಗ್ಗೆ ತಿಳಿಸಿದ್ದರು . ಇದಾದ ಸುಮಾರು 2 ತಾಸಿನ ನಂತರ ಮನೆ ತಲುಪಿದರು . ತಲುಪುದ್ದಿದ್ದಂತೆ ಅಲ್ಲಿ ಕಾಯುತ್ತಿದ್ದ ಎಲ್ಲರನ್ನು ನೋಡಿದ ಕುಶಿಯಲ್ಲಿ ( 1 ವರೆ ವರ್ಷದ ನಂತರ ಭಾರತಕ್ಕೆ ಬಂದಿದ್ದ ಕುಶಿಯಲ್ಲಿ ) ಒಳ ಬಂದರು . ಕಾರಿನ ಹಿಂದೆ ಡಿಕ್ಕಿಯಲ್ಲಿ ಇದ್ದ 2 ಬ್ಯಾಗ್ ಅನ್ನು ಡ್ರೈವರ್ ಇಳಿಸಿ ಕೊಟ್ಟು ಹೋದ. ನಂತರ ಸುಮಾರು 2 ತಾಸು ಮಾತನಾಡುತ್ತ ಕುಳಿತಿದ್ದೆವು. 
ಆಗ ನನ್ನ ಮೊಬೈಲ್ ಗೆ ಒಂದು ಫೋನ್ ಬಂತು ಮೊದಲು ಈ ನಂಬರ್ ನಿಂದಲೇ ನನ್ನ ಪತಿ ನನಗೆ ಫೋನ್ ಮಾಡಿದ್ದರಿಂದ ಇದು ಡ್ರೈವರ್ ನಂಬರ್ ಎಂದು ತಿಳಿಯಿತು .ಫೋನ್ ರಿಸೀವ್ ಮಾಡುತ್ತಿದ್ದಂತೆ ಆತ  ಮೇಡಂ ಈಗ ಲಂಡನ್ ನಿಂದ ನನ್ನ ಕ್ಯಾಬ್ ನಲ್ಲಿ ಬಂದರಲ್ಲ ಅವರದ್ದೊಂದು ಬ್ಯಾಗ್ ನನ್ನ ಕಾರ್ ನಲ್ಲಿಯೇ ಇದೆ ಎಂದರು. ಆಗ ನೆನಪಿಗೆ ಬಂದದ್ದು ಲ್ಯಾಪ್ ಟಾಪ್, ಕ್ಯಾಮರ ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ವೀಸಾ ಪಾಸ್ಪೋರ್ಟ್. 
ಎಲ್ಲ ಆ ಬ್ಯಾಗ್ ನಲ್ಲಿಯೇ ಇತ್ತು ಅದು ಈಗ ಕಾರ್ ನಲ್ಲೆ ಉಳಿದುಹೋಗಿದೆ . ಆಗಲೇ ಸಮಯ 7 ಗಂಟೆ ಆಗಿದ್ದರಿಂದ ಮತ್ತೆ ಏರ್ಪೋರ್ಟ್ ಗೆ ಹೋಗಿ ತರುವುದು ಕಷ್ಟದ ಕೆಲಸ ಬೇರೆ. ಕ್ಯಾಬ್ ಡ್ರೈವರ್ ಹತ್ತಿರ ದಯವಿಟ್ಟು ನೀವೇ ತಂದುಕೊಡಿ ಎಂದು ಕೇಳಿಕೊಂಡೆವು ಆತ  ತಂದುಕೊಡಲು ಒಪ್ಪಿಕೊಂಡ ಸುಮಾರು 2 ತಾಸಿನ ನಂತರ ನಮಗೆ ಆ ಬ್ಯಾಗ್ ಸಿಕ್ಕಿತು . 
ಆ ಡ್ರೈವರ್ ಬ್ಯಾಗ್ ನಲ್ಲಿ ಏನಿದೆ ಎಂದು ಕೂಡ ತೆಗೆದು ನೋಡಿರಲಿಲ್ಲ . ಇಂದಿನ ಕಾಲದಲ್ಲೂ ಪ್ರಾಮಾಣಿಕರು ಇರುವುದನ್ನು ನೋಡಿ ಕುಶಿಯಾಯಿತು. ಅದಲ್ಲದೆ ಇನ್ನು 15 ದಿನದಲ್ಲಿ ವಾಪಾಸ್ ಹೋಗಲು ರಿಟರ್ನ್ ಟಿಕೆಟ್ ಬುಕ್ ಆಗಿತ್ತು ಜೊತೆಗೆ ವೀಸಾ ಮಾಡಿಸುವುದು ಬಹಳ ಕಷ್ಟದ ಕೆಲಸ 15 ದಿನದಲ್ಲಿ ಹೊಸದಾಗಿ ಪಾಸ್ಪೋರ್ಟ್ ಮತ್ತು ವೀಸಾ ಮಾಡಿಸುವುದು ಸಾಧ್ಯವೇ ಆಗುತ್ತಿರಲ್ಲಿಲ್ಲ . ಜೊತೆಗೆ ಆತ ಫೋನ್ ಮಾಡದೆ ಇರುತ್ತಿದ್ದರೆ ಅಥವಾ ನಮ್ಮ ಫೋನ್ ರಿಸೀವ್ ಮಾಡದೆ ಇರುತ್ತಿದ್ದರೆ ನಮಗೆ ನಮ್ಮ ಲ್ಯಾಪ್ ಟಾಪ್ , ಕ್ಯಾಮರ, ಮತ್ತು ವೀಸಾ ಪಾಸ್ಪೋರ್ಟ್ ಯಾವುದೂ  ಸಿಗುತ್ತಲೇ ಇರುತ್ತಿರಲಿಲ್ಲ.  
ಆತನ ಪ್ರಾಮಾಣಿಕತೆಗೆ ನನ್ನ ಕಡೆಯಿಂದೊಂದು ಸಲಾಂ .


ಅರ್ಪಿತಾ ಹರ್ಷ 
ಲಂಡನ್