Showing posts with label ಕಥೆಗಳು. Show all posts
Showing posts with label ಕಥೆಗಳು. Show all posts

Saturday, 7 November 2015

ಗೌರಜ್ಜಿ ಎಂಬ ನೆನಪು

ಬೇಸಿಗೆ ರಜೆ ಬಂತೆಂದರೆ ನನಗೆ ಅಪ್ಪನಿಗೆ ಒಂದೇ ಕೆಲಸ . ಸಂಜೆ ಆದ ತಕ್ಷಣ ಹೊರಗೆ ಚಿಟ್ಟೆ (ಕಟ್ಟೆ) ಮೇಲೆ ಕುಳಿತು ಕಾಡುಹರಟೆ ಹೊಡಿಯೋದು. ಅವತ್ತು ಹಾಗೆ  ಎಂದಿನಂತೆ  ಹೊರಗೆ ಕುಳಿತಿದ್ದಾಗ ಆಟೋ ಒಂದು ಬಂದ ಶಬ್ದ. 'ಹ್ನಾ ಯಾರೋ ಬಂದ ಅಪ್ಪ , ಆಟೋ ಬಂತು' ಹಾಗಂತ ಕುಣಿಯುತ್ತ ರಸ್ತೆಗೆ ಹೋಗಿ ನಿಂತೆ.ಅಪ್ಪನು ನನ್ನ ಹಿಂದೆಯೇ ಬಂದು 'ಓಹ್ ಯಾರು ಹೇಳು ನೋಡನ' ಅಂತ ಹಲ್ಲು ಕಿರಿದ.  ಅಷ್ಟರಲ್ಲಿ ತನ್ನ ದಡೂತಿ ದೇಹ ಹೊತ್ತು ಕೈಯಲ್ಲೊಂದು ಬಟ್ಟೆ ತುಂಬಿದ  ಚೀಲ ಹಿಡಿದು ಕೆಳಗಿಳಿದರು ಗೌರಜ್ಜಿ.ಅಪ್ಪ ಸಣ್ಣಗೆ ನನಗೆ ಮಾತ್ರ ಕೇಳಿಸುವಂತೆ 'ಜಯಲಲಿತಮ್ಮಮ್ಮ ಜಯಲಲಿತಮ್ಮಮ್ಮ' ಅಂದ. ಹಾಗೆ ನಕ್ಕು ಇಬ್ಬರೂ ಕುಶಿಯಿಂದ ಗೌರಜ್ಜಿಯನ್ನು ಸ್ವಾಗತಿಸಿದೆವು.  ನಾನು ಒಳಗೆ ಓಡಿದವಳೇ 'ಅಮ್ಮಾ ಜಯಲಲಿತಮ್ಮಮ್ಮ  ಬಂದಿದ್ದಾ'  ಹಾಗಂತ ಕೂಗಿ ಹೇಳಿದೆ. ನನ್ನ ಹಿಂದೆಯೇ ಬಂದ ಅಪ್ಪ 'ಜೋರಾಗಿ ಕೂಗಡ ಕೇಳಿಸಿದರೆ ಕಷ್ಟ' ಅಂದ. 'ಹಹಹ' ನಾನು ನಕ್ಕೆ. ಆಕೆಯ ದಪ್ಪ ದೇಹ ,ಗುಂಡು ಮುಖ ನೋಡಿದಾಗಲೆಲ್ಲ ಜಯಲಲಿತಾಳನ್ನೇ ನೆನಪಾಗುವುದರಿಂದಲೋ ಏನೋ ನಾನು ಚಿಕ್ಕವಳಿರುವಾಗಿನಿಂದ  ಜಯಲಲಿತಮ್ಮಮ್ಮ ಎಂದೇ ಆಕೆಯನ್ನು ಪರಿಚಯಿಸುತ್ತಿದ್ದ ಅಪ್ಪ. ಅದೊಂದು ರೀತಿ ನಾವು ಆಕೆಗೆ ಗುಟ್ಟಾಗಿ,ಜೊತೆಗೆ ಪ್ರೀತಿಯಿಂದ ಇಟ್ಟ ಹೆಸರು!

ಅಮ್ಮನಿಗೂ ಗೌರಜ್ಜಿ ಅಂದ್ರೆ ಕುಶಿ . ಬಂದವಳೇ ಕುಶಲೋಪರಿ ವಿಚಾರಿಸಿ ಗೌರಜ್ಜಿಗೆ ಇಷ್ಟದ ಬೆಲ್ಲದ ಚಹಾಕ್ಕೆ  ನೀರು ಕಾಯಿಸಲು ಇಟ್ಟಳು. ಅಲ್ಲೇ ಪಕ್ಕಕ್ಕೆ ಹಾಕಿದ ಮಣೆಯ ಮೇಲೆ ಕುಳಿತ ಗೌರಜ್ಜಿ ಅಡುಗೆ ಮನೆಯನ್ನೊಮ್ಮೆ ಕೂಲಂಕುಶವಾಗಿ ನೋಡಿದಳು. 'ಇಲ್ಲಿರ ಬೀಸಕಲ್ಲು ಎಲ್ಲೋತೆ ?' ಗೌರಜ್ಜಿಯಿಂದ ಪ್ರಶ್ನೆ ಬಂತು. 'ಅಯ್ಯೋ ಈಗೆಲ್ಲ ಮಿಕ್ಸರ್ ,ಬೀಸಕಲ್ಲೆಂತಕೆ' ಅಜ್ಜಿ  ಮತ್ತೆ ತನಗೆ ತಾನೇ ಸಮಾಧಾನ ಮಾಡಿಕೊಂಡನ್ತಿತ್ತು. 
ಗೌರಜ್ಜಿ ನಮ್ಮ ಮನೆಯಲ್ಲೇ ಹುಟ್ಟಿ ಬೆಳೆದವಳು. ಅದ್ಯಾವುದೋ ದೂರದ ಸಂಬಂಧ. ಅಜ್ಜನ ಕಾಲದಲ್ಲಿ ಮನೆಗೆ ಬಂದು ಅಡುಗೆ ಮಾಡಿಕೊಂಡು ಎಲ್ಲರನ್ನೂ ವಿಚಾರಿಸಿಕೊಂಡು ಇದೇ ಮನೆಯಲ್ಲಿಯೇ ಮನೆಯವಳಾಗಿ ಬೆಳೆದಾಕೆ. ನಂತರದ ದಿನಗಳಲ್ಲಿ ಮದುವೆ ಮಕ್ಕಳನ್ನು ಕಾಣದ ಆಕೆಗೆ ಆಧ್ಯಾತ್ಮಿಕತೆ, ಮಡಿ ಇಂತದ್ದರ ಬಗ್ಗೆಯೇ ಹೆಚ್ಚು ಒಲವು ಇದ್ದುದರಿಂದ ಸನ್ಯಾಸತ್ವದ ಬಗ್ಗೆ  ಆಸಕ್ತಿ ಬೆಳೆಯಿತಂತೆ. ಹಾಗೆಯೇ ಆಕೆ ಹತ್ತಿರದ ಮಠಕ್ಕೆ ಹೋಗಿ ಸೇರಿಕೊಂಡಳು ಎಂಬುದು  ನಾನು ಆಕೆಯ ಬಗ್ಗೆ ಕೇಳಿದಾಗಲೆಲ್ಲ ಅಪ್ಪ ಕೊಡುತ್ತಿದ್ದ ವಿವರಣೆ .ಆದರೂ ಆಗಾಗ ತವರುಮನೆಯಂತಿದ್ದ ನಮ್ಮ ಮನೆಗೆ ಆಕೆ ಬಂದಾಗ ನಮಗೆಲ್ಲ ಏನೋ ಒಂದು ರೀತಿ ಸಂಭ್ರಮ. ಮಿತ ಭಾಷೆ ,ಹಸನ್ಮುಖಿ ಜೊತೆಗೆ ಚಟುವಟಿಕೆಯಿಂದ ಕೂಡಿದ ಗೌರಜ್ಜಿ ಎಂದರೆ ಅಪ್ಪ ಅಮ್ಮನಿಗೂ ಪ್ರೀತಿ . 

ಪ್ರತಿ ಭಾರಿ ಮನೆಗೆ ಬರುವ ಮೊದಲು ಮಠಕ್ಕೆ ಹೋದವರೊಂದಿಗೆ ಅಥವಾ ಹೇಗಾದರೂ ಇಂತಹ ದಿನ ತಾನು ಮನೆಗೆ ಬರುವುದಾಗಿ  ಹೇಳಿಟ್ಟಿರುತ್ತಿದ್ದ ಗೌರಜ್ಜಿ ಈ ಭಾರಿ ಹೇಳದೇ ಯಾವ ಮುನ್ಸೂಚನೆಯೂ ಇಲ್ಲದೇ ಬಂದಿರುವುದು ನಮ್ಮೆಲ್ಲರಿಗೆ ಒಂದು ರೀತಿ ಆಶ್ಚರ್ಯವಾಗಿತ್ತು. ಎಂದಿನ ಲವಲವಿಕೆ ಇಲ್ಲದ ಆಕೆಯನ್ನು ನೋಡಿದಾಗ ಎಷ್ಟುಬೇಗ ಆಕೆಗೆ ವಯಸ್ಸಾಗಿ ಹೋಯಿತಲ್ಲ ಎಂದೆನಿಸಿದ್ದು ನಿಜ. 

ಅಂದು ಸಂಜೆ ಅಮ್ಮ ಗೌರಜ್ಜಿಗೆಂದೇ ಮಾಡಿದ್ದ ಉಪ್ಪಿಟ್ಟು ಮತ್ತು ಶಾವಿಗೆ ಪಾಯಸದ ಪಳಹಾರ ತಿನ್ನುತ್ತಿದ್ದ ಗೌರಜ್ಜಿ 'ಪುಟ್ಟಿ ಇಲ್ಲಿ ಬಾ ನನ್ನ ಪಕ್ಕ ಕೂತು ಊಟ ಮಾಡು , ಇನ್ನೇನು ನಿಂಗೆ ನ ಸಿಗ್ತ್ನೋ ಇಲ್ಯೋ' ಎಂದು ಪ್ರೀತಿಯಿಂದ ಮೈದಡವಿದಾಗ ಒಂದು ರೀತಿ ಸಂಕಟವಾದಂತಾಯ್ತು. 'ಅದೆಂತಕೆ ಹಂಗೆ ಹೇಳ್ತೆ ಚಿಕ್ಕಮ್ಮ , ಬರ್ತಿರು ಆಗಾಗ' ಎಂದ ಅಪ್ಪ , ಆತನಿಗೂ ಬೇಸರವಾಗಿರಬೇಕು. 
ಊಟವಾದ ಮೇಲೆ ಎಲ್ಲರೂ ಜಗುಲಿಯಲ್ಲಿ ಕುಳಿತಾಗ ' ಈ ಮನೆಗೆ ಬಂದಾಗ ನಂಗೆ ಬರೀ ಇಪ್ಪತ್ತು ವರ್ಷ , ಈಗ ಎಪ್ಪತ್ತೆಂಟು . ಆಗ ಮನೆ ತುಂಬಾ ರಾಶಿ ಜನ, ಒಳ್ಳೆ ಮದುವೆ ಮನೆತರ ಜನ ತುಂಬಿಕೊಂಡೇ ಇರ್ತಿತ್ತು . ಮನೆ ಹೆಂಗಸರಿಗೆಲ್ಲ ಅಡುಗೆ ಮಾಡಿ ಹಾಕೋದೆ ಒಂದು ಕೆಲಸ ಆಗ್ತಿತ್ತು. ಹಬ್ಬ ಹರಿದಿನ ಅಂದ್ರೆ ವಾರಗಟ್ಟಲೆ ತಯಾರಿ.ಎಷ್ಟು ಬೇಗ ದಿನ ಕಳೆದು ಹೋಯ್ತು ,  ಶಂಕರೂ ನಾನು ಮುಂದಿನ ವಾರದಿಂದ ಕಾಶಿ ರಾಮೇಶ್ವರ ಅಂತ ತೀರ್ಥ ಯಾತ್ರೆಗೆ ಹೋಗ್ತಿದ್ದಿ , ಹೋಗೋ ಮೊದಲು ಒಮ್ಮೆ ಈ ಮನೆಗೆ ಬಂದು ನಿಮ್ಮನ್ನೆಲ್ಲ ನೋಡಿ ಹೋಗೋಣ ಅಂತಲೇ ಬಂದಿದ್ದು' ಹಾಗೆ ಹೇಳುವಾಗ ಆಕೆಗೆ ಈ ಮನೆಯನ್ನು ಕೊನೆ ಬಾರಿ ನೋಡುತ್ತಿದ್ದೆನೇನೋ ಅನ್ನೋ ಸಂಕಟ ಇದ್ದಂತಿತ್ತು. 
ಸನ್ಯಾಸತ್ವದ ಬಗ್ಗೆ ಅತಿಯಾದ ಪ್ರೀತಿ ಹೊಂದಿದ್ದರೂ ತವರು ಮನೆ ಎಂಬ ವ್ಯಾಮೋಹ ತಮ್ಮವರೆಂಬ ಪ್ರೀತಿ ಬಿಡಲಾರದು ಎಂಬುದು ಗೌರಜ್ಜಿಯನ್ನು ನೋಡಿದಾಗ ನನಗೆ ಅನಿಸಿದ್ದು.

ಬೆಳಿಗ್ಗೆ ಹೊರಡುವ ಮುನ್ನ ಅಪ್ಪ ಅಮ್ಮನೂ ಆಕೆಯ ಆಶೀರ್ವಾದ ಪಡೆದು ವಾಪಾಸು ಬರುತ್ತಿದ್ದಂತೆ ಮತ್ತೆ ಆಗಾಗ ಇಲ್ಲಿಗೆ ಬನ್ನಿ ಎಂದರು. ಹೊರಗೆ ಬಂದು ನಿಂತಿದ್ದ ಆಟೋವನ್ನು ಹತ್ತಿ ನಮ್ಮೆಲ್ಲರ ಕಡೆಗೆ ಜೊತೆಗೆ ಮನೆಯ ಕಡೆಗೆ ಇದೇ ಕೊನೆಯ ಭೇಟಿ ಎಂಬಂತೆ ನೋಡಿದ ಆಕೆಯ ನೋಟ ಮನೆಯವರಿಗೆಲ್ಲ ಅಂದು ನಿದ್ರೆ ಬರದಂತೆ ತಡೆದಿತ್ತು. ಅಂದು ಆಟೋ ಹತ್ತಿ ಕಣ್ಣಂಚು ಒದ್ದೆ ಮಾಡಿಕೊಂಡು ಟಾಟಾ ಮಾಡಿದ ಗೌರಜ್ಜಿ ಕೊನೆಗೆ ತೀರ್ಥಯಾತ್ರೆ ಮುಗಿಸಿ ಹಿಂತಿರುಗಿ ಬರದಿದ್ದಾಗ ಆಕೆಗೆ ತಾನು ಬರಲಾಗುವುದಿಲ್ಲ ಎಂಬ ಅರಿವು ಮೊದಲೇ ಇತ್ತೇ ಎಂಬ ಚಿಂತೆ ಇಂದಿಗೂ ಕಾಡುತ್ತದೆ. 


ಅರ್ಪಿತಾ ಹರ್ಷ 
ಲಂಡನ್ 

Wednesday, 5 November 2014

ನಿದ್ರೆ ಭಂಗ

ಈ ಭಾರಿ ಭಾರತಕ್ಕೆ ಒಂದು ತಿಂಗಳ ರಜಾ ಮಜಕ್ಕೆಂದು ಹೋಗಿದ್ದೆ. ಹೋದಾಗ ಹೀಗೆ ಮಾತನಾಡುತ್ತಾ ನಮ್ಮೂರ ಅಡಿಕೆ ಸುಲಿಯುವ ಹೆಂಗಸರ ಹತ್ತಿರ ಮಾಡಲು ಬೇರೆ ಕೆಲಸವಿಲ್ಲದೆ ರಾಜಸ್ಥಾನದ ಉದಯಪುರದಲ್ಲಿ ಒಂದು ದೇವಸ್ಥಾನವಿದೆ ಅಲ್ಲಿ ಇಲ್ಲಿಗಳನ್ನು ಪೂಜಿಸಲಾಗುತ್ತದೆಯಂತೆ ಎಂದು ಹೇಳಿಕೊಂಡು ಗೇಲಿ ಮಾಡಿದ್ದೆ. ಆ ವಿಷಯ ಅಲ್ಲೇಕೆ ಹೇಳಿದೆ ಎಂಬುದಕ್ಕೆ ಉತ್ತರ ಇನ್ನೂ ಸಿಗಲಿಲ್ಲ. ಆದ್ದರಿಂದ ಇಲಿಯನ್ನು ದೇವರು ಎಂದು ಪೂಜಿಸಬೇಕು ಇಲಿ ಬಂದರೆ ಹೊಡೆದು ಕೊಲ್ಲಬಾರದು ಎಂದು ಹೇಳಿ ಅವರೊಂದಿಗೆ ' ನಿಂಗೆಂತ ಗೊತ್ತಿದ್ದೇ ನಂಗ್ಳ ಕಷ್ಟ, ಇಲಿ ಕಾಟ ತಡೆಯಲಾಗ್ತಾ ನನ್ಗಕ್ಕೆ ,ನೀನೇನೋ ಲಂಡನ್ ಅಲ್ಲಿದ್ಕಂಡು ಇಲಿ ಹೊಡಿಯಡಿ ಹೇಳ್ತೆ ,ಹೋಗ್ತ ಒಂದೆರಡು ತಗಂಡು ಹೋಗು' ಅಂತ ಬೈದಿದ್ದನ್ನು ಕೇಳಿ ಕುಶಿಯಿಂದ ನಕ್ಕಿದ್ದೂ ಆಗಿತ್ತು. ಅಂತು ಇಂತೂ ಒಂದು ತಿಂಗಳು ಊರೂರು ಅಲೆದು ಹಿಂತಿರುಗಿ ಬಂದಾಗ ಒಂದು ಅಚ್ಚರಿ ಕಾದಿತ್ತು.

ಬರುತ್ತಿದ್ದಂತೆ ಕಾಯುತ್ತಿದ್ದ ಪತಿದೇವರು ನಿನ್ನ ಸ್ನೇಹಿತರೊಬ್ಬರು ಮನೆಗೆ ಬಂದಿದಾರೆ ಅಂದಾಗ ಅರೆ ಇದ್ಯಾರಪ್ಪ ಎಂಬ ಪ್ರಶ್ನೆ ಮೂಡಿತ್ತು. ನಾನೆಲ್ಲೋ ಇರುವೆಯೋ,ನೊಣವೋ ಇರಬಹುದು ಎಂಬ ಅನುಮಾನದಲ್ಲಿದ್ದೆ,ಆದರೆ ಆ ದಿನ ರಾತ್ರೋ ರಾತ್ರಿ ಪಾತ್ರೆಗಳೆಲ್ಲ ಸದ್ದಾದಾಗ ಸ್ವಲ್ಪ ಅನುಮಾನವಾಯಿತು. ಮರುದಿನ ಬೆಳಕ್ಕೆ ಅಕ್ಕಿ ಚೀಲದಿಂದ ಅಕ್ಕಿ ಇದ್ದಕ್ಕಿದ್ದಂತೆ ಹೊರಬರುತ್ತಿರುವುದು ನೋಡಿದಾಗ ಅರೆ ಇದು ಯಾರ ಕೆಲಸ ಎಂಬ ಯಕ್ಷ ಪ್ರಶ್ನೆ.

ಒಂದು ದಿನ ರಾತ್ರಿ ಅಡುಗೆ ಮನೆಯ ಸಪ್ಪಳ ನಿಂತು ರೂಮಿನ ಸಪ್ಪಳ ಪ್ರಾರಂಭವಾದಾಗ ನಿದ್ದೆ ಎಲ್ಲಿಂದ ಬರಬೇಕು? ಒಂದು ಸಣ್ಣ ಜಿರಳೆ ಬಂದರೂ ಕೂಡ ರಾತ್ರಿ ಇಡೀ ತಲೆ ಕೆಡಿಸಿಕೊಳ್ಳುವ ನಾನು ಇದೇನಪ್ಪ ಎಂದು ಲೈಟ್ ಹಾಕಿ ನೋಡಿದರೆ ಎದ್ದೆನೋ ಬಿದ್ದೆನೋ ಎಂದು ಇಲಿಯೊಂದು ಹಿಂತಿರುಗಿ ನೋಡದೇ ನನ್ನ ಕಣ್ಣೆದುರೇ ಓಡಿ ಹೋಗಿ ಮಂಚದ ಕೆಳಗೆ ಸೇರಿಕೊಂಡಿತು. ರಾತ್ರಿ ಇಡೀ ನಾನು ನಿದ್ದೆ ಮಾಡದೇ ನನ್ನ ಪತಿಯನ್ನೂ ನಿದ್ದೆ ಮಾಡಗೊಡದ ನಾನು ಇಲಿಯನ್ನು ರೂಮಿನಿಂದ ಹೊರಹಾಕಿದ ನಂತರವಷ್ಟೇ ಸ್ವಲ್ಪ ಮಟ್ಟಿನ ಅನಿವಾರ್ಯದ ನಿದ್ರೆ ಮಾಡಿದೆ.

ಮರುದಿನ ನನಗೆ ದಿನವಿಡೀ ಮನೆ ಶೋಧಿಸುವುದೇ ಕೆಲಸವಾದರೂ ಎಲ್ಲೂ ಇಲಿ ಸಿಗಲಿಲ್ಲ. ಮನೆಗೆ ಬಂದ ಯಜಮಾನರು ಅದು ಬರುವುದು ರಾತ್ರಿ ಮಾತ್ರ ಎಂದಾಗ ಹೇಗಾದರೂ ಮಾಡಿ ಓಡಿಸಲೇ ಬೇಕು ಇಲ್ಲದಿದ್ದರೆ ನಾನು ನಿದ್ರೆ ಮಾಡುವುದಿಲ್ಲ ,ನಿಮ್ಮನ್ನೂ ನಿದ್ರೆ ಮಾಡಲು ಬಿಡುವುದಿಲ್ಲ ಎಂದಾಗ ಅವರಿಗೆ ದಿಗಿಲಾಗಿ ಅದಕ್ಕೊಂದು ಟ್ರ್ಯಾಪ್ ತಂದಿಡುವುದಾಗಿ ಮತ್ತು ಅದನ್ನು ಕೊಲ್ಲುವುದಾಗಿ ಭರವಸೆ ನೀಡಿದರು.

ಆ ದಿನ ರಾತ್ರಿ ಟ್ರ್ಯಾಪ್ ಇಟ್ಟಿದ್ದೂ ಆಯಿತು. ಆದರೆ ಮಾರನೆಯ ದಿನ ಇಲಿ ಸತ್ತು ಬಿದ್ದಿರಲಿಲ್ಲ. ಆ ನಂತರ ಎರಡು ದಿನ ಇಲಿಯ ಸದ್ದೇ ಇರಲಿಲ್ಲ. ಅರೆ ಬರಿ ಟ್ರ್ಯಾಪ್ ಇಟ್ಟ ಮಾತ್ರಕ್ಕೆ ಇಲ್ಲಿ ಮಾಯವಾಗಿ ಬಿಟ್ಟಿತೇ ಎಂಬ ಗೊಂದಲ ಇಬ್ಬರಿಗೂ ಹುಟ್ಟಿಕೊಂಡಿತ್ತು. ಆ ನಂತರ ಇಲಿಯನ್ನು ಮರೆತಾಯಿತು. ಎಲ್ಲೋ ಹೇಗೋ ಹೊರ ಹೋಗಿರಬೇಕು ಎಂಬ ಸಮಾಧಾನದಲ್ಲೇ ಇಲಿ ಮನಸ್ಸಿನಿಂದ ಹೊರ ಹೋಗಿಬಿಟ್ಟಿತ್ತು.

ಹಾಗೆ ಎರಡು ದಿನವಾಗಿರಬೇಕಷ್ಟೇ , ಆಫೀಸಿನಿಂದ ಬಂದ ಪತಿ ನಿನಗೊಂದು ಅಶ್ಚರ್ಯ ಕಾದಿದೆ ಎಂದಾಗ ಏನಾಗಿರಬಹುದು ಎಂದು ಕಣ್ಣು ಕಣ್ಣು ಬಿಟ್ಟು ನೂರು ತರದ ಗೆಸ್ ಮಾಡಲು ಪ್ರಾರಂಭಿಸಿಬಿಟ್ಟೆ. ಇಲ್ಲ ನಿನಗೆ ನಾನೇನೂ ತಂದಿಲ್ಲ ಮತ್ತು ಸಧ್ಯಕ್ಕೆ ಏನು ತರುವುದೂ ಇಲ್ಲ ಆದರೆ ನಿನಗೊಂದು ಸರ್ಪ್ರೈಸ್ ಇರುವುದು ಖಂಡಿತ ಎಂದಾಗ ಮತ್ತೆ ಆಶ್ಚರ್ಯ. ಅಡುಗೆ ಮನೆಗೆ ಕರೆದುಕೊಂಡು ಹೋಗಿ ಬಗ್ಗಿ ನೋಡು ಎಂದಾಗ ಅಲ್ಲಿ ಸಿಕ್ಕಿ ಹಾಕಿಕೊಂಡಿತ್ತು ಸತ್ತ ಇಲಿ. ಎರಡು ದಿನದಿಂದ ನೋಡಿದರೂ ಸಿಗದ ಇಲಿ ,ಸತ್ತಿರದ ಇಲಿ ಅಂದು ಸತ್ತು ಹೋಗಿದ್ದು ಒಂದು ರೀತಿ ಕುಶಿ ಸಿಕ್ಕಿತು. ಈಗ ನಮ್ಮ ಮನೆಯಲ್ಲಿ ಇಲಿ ಇಲ್ಲ.ನನ್ನ ನಿದ್ರೆಗೀಗ ಭಂಗವಿಲ್ಲ!

Wednesday, 9 April 2014

ಆಕಸ್ಮಿಕ (ಕಥೆ)

Got published in Sakhi magazine may 1st 2014 edition



ಆಕೆಯ ಹೆಸರೇ ಹಾಗೆ ಹೆಸರಿಗೆ ತಕ್ಕ ಹಾಗೆ ಆಕೆ ಹುಟ್ಟಿದ್ದು ಆಕಸ್ಮಿಕವಾಗಿ ಎಂದು ಅಪ್ಪ ಸದಾಶಿವ ಯಾವಾಗಲೂ ತಮಾಷೆ ಮಾಡುತ್ತಿರುತ್ತಾರೆ.ಕಾಲೇಜು ಮುಗಿಸಿ ಮುಂದಿನ  ಮೆಟ್ಟಿಲು ಹತ್ತಿತ್ತುರುವ ಮಗಳನ್ನು ದೂರದ ಊರಿನಲ್ಲಿ ಎಂ ಎಸ್ಸಿ ಮಾಡಲು,ಹಾಸ್ಟೆಲ್ ಸೇರಿಸಿ ಮನೆಗೆ ಹೋರಾಟ ಅಪ್ಪ ಮಗಳೇ ಬದುಕಿನಲ್ಲಿ ಕೆಲವೊಂದು ಘಟನೆಗಳು ನಮಗೇ ತಿಳಿಯದೇ ನಡೆದು ಹೋಗುತ್ತದೆ ಹಾಗೆ ತಿಳಿಯದೇ ನಡೆದು ಹೋಯಿತು ಎಂಬ ಕೆಲಸವನ್ನು ಮಾಡಿಕೊಳ್ಳಬೇಡ ಎಂದು ಎಚ್ಚರಿಕೆ ನೀಡಿ ಕಣ್ಣ ತುಂಬಾ ನೀರು ತುಂಬಿಕೊಂಡು ಮಗಳನ್ನು ಬಿಟ್ಟು ಮನೆಗೆ ತೆರಳಿದರು.

ಆಕಸ್ಮಿಕಳ ತಾಯಿ ಅಹಲ್ಯಾಳಿಗೆ ಮಗಳನ್ನು ದೂರದ ಊರಿನಲ್ಲಿ ಕಾಲೇಜಿಗೆ ಸೇರಿಸುವುದು ಸ್ವಲ್ಪವೂ ಇಷ್ಟವಿರಲಿಲ್ಲ ಎಷ್ಟಾದರೂ ಇನ್ನು ೨ ವರ್ಷದ ನಂತರ ಮದುವೆ ಮಾಡಲೇಬೇಕು.ಅಣ್ಣನ ಮಗ ಪ್ರತ್ಯೂಶನೇ ತನ್ನ ಅಳಿಯನಾಗುವುದು ಎಂಬುದು ಆಗಲೇ ಸಿದ್ಧವಾಗಿದೆ.ಅದಕ್ಕೆ ಎಲ್ಲರ ಒಪ್ಪಿಗೆಯೂ ಇದೆ.ಆಕಸ್ಮಿಕಳನ್ನು ಇದರ ಬಗ್ಗೆ ಕೇಳುವ ಅಗತ್ಯವೇ ಇಲ್ಲ ಏಕೆಂದರೆ ಅವರಿಬ್ಬರೂ ಒಟ್ಟಿಗೆ ಬೆಳೆದವರು ಒಪ್ಪಿಯೇ ಒಪ್ಪುತ್ತಾಳೆ ಎಂಬುದು ಅಹಲ್ಯಾಳ ಅಂಬೋಣ.
ಪತಿ ಮನೆಗೆ ಬರುವುದನ್ನೇ ಕಾಯುತ್ತಿದ್ದ ಅಹಲ್ಯ ಸಿಟ್ಟಿನಿಂದ ಆತನ ಮೇಲೆ ಹರಿಹಾಯ್ದಳು ' ಅಷ್ಟಕ್ಕೆಲ್ಲಾ ಯಾಕೆ ಚಿಂತೆ? ಒಳ್ಳೆ ಮಾರ್ಕ್ಸ್ ತೆಗೆದಿದ್ದಾಳೆ ಓದಲಿ ಬಿಡು.ನಾಳೆ ಮಕ್ಕಳಿಗೆ ನಾಲ್ಕು ಅಕ್ಷರ ಹೇಳಿ ಕೊಡಲು  ಬೇಡವಾ?' ಮಕ್ಕಳಿಗೆ ನಾಲ್ಕು ಅಕ್ಷರ ಹೇಳಿಕೊಡಲಿಕ್ಕೆ ಡಿಗ್ರೀ ಸಾಲದಾ?ಎಂಬುದು ಅಹಲ್ಯಾಳ ಪ್ರತಿಪ್ರಶ್ನೆ!
ಅವಳೇ ಒಳ್ಳೆ ಮಾರ್ಕ್ಸ್ ತೆಗೆದು ಸ್ಕಾಲರ್ ಶಿಪ್ ಸಿಕ್ಕಿರುವಾಗ ಕಲಿಸದೆ ಇರಲಿಕ್ಕಾಗುವುದೇ  ಎಂಬುದು ಸದಾಶಿವ ಹೇಳಿದ ಉತ್ತರ ರೀತಿಯ ಪ್ರಶ್ನೆ!

ಇತ್ತ ಆಕಸ್ಮಿಕಾಳಿಗೆ ಓದಿನ ಬಗ್ಗೆ ಆಸಕ್ತಿ ಮೊದಲಿಗಿಂತ ಹೆಚ್ಚಾಗಿತ್ತು, ಮೊದಲು ಕೇವಲ ಹೆಚ್ಚು ಮಾರ್ಕ್ಸ್ ತೆಗೆಯಬೇಕು ಎಂದಿದ್ದವಳಿಗೆ ಈಗ ಇಡೀ ರಾಜ್ಯಕ್ಕೆ ಹೆಸರು ಮಾಡಬೇಕೆಂಬ ಆಸೆ ಕನಸು.

ರೂಪವತಿಯಾದ ಆಕಸ್ಮಿಕಳಿಗೆ ಪ್ರೀತಿಯಲ್ಲಿ ಬೀಳಲು ಹೆಚ್ಚು ಸಮಯ ಹಿಡಿಯಲಿಲ್ಲ.ಅದೇ ಸಮಯದಲ್ಲಿ ಅಮ್ಮನಿಂದ ಒಂದು ಕಾಗದ ಬಂತು.
'ಪ್ರೀತಿಯ ಮಗಳೇ ಓದಿ ನೀನು ಸಾಧನೆ ಮಾಡಿದರೆ ನನಗಿಂತ ಕುಶಿ ಪಡುವವಳು ಬೇರೆ ಇಲ್ಲ. ಆದರೆ ಗಮನ ಓದಿನ ಕಡೆ ಹೆಚ್ಚಿರಲಿ.ಉಜ್ವಲ ಭವಿಷ್ಯ ನಿನ್ನದಾಗಲಿ'.ಓದಿದ ನಂತರ ಆಕೆಗೆ ಅನ್ನಿಸಿತು ತನ್ನ ಭವಿಷ್ಯ ಆಯುಶ್ ನಲ್ಲಿದೆ.ಆತ ತನ್ನ ಕೈಹಿಡಿದಾಗ ಭವಿಷ್ಯ ಉಜ್ವಲವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.

ಆಕಸ್ಮಿಕಳಿಗೆ ಎರಡು ವರ್ಷ ಹೇಗೆ ಕಳೆಯಿತೋ ತಿಳಿಯಲಿಲ್ಲ , ಆಗೀಗ ಮನೆಗೆ ಹೋದಾಗ ತಾಯಿ ಆಕಸ್ಮಿಕ ಸದಾ ಕನಸಿನ ಲೋಕದಲ್ಲಿ ವಿಹರಿಸುತ್ತಿರುವುದನ್ನು ಗಮನಿಸಿದ್ದಳು.ಇನ್ನು ಹೆಚ್ಚು ತಡ ಮಾಡಬಾರದು ಎಂದು ಪತಿಯಲ್ಲಿ ಹೇಳಿ ತನ್ನ ಅಣ್ಣನನ್ನು ಬರಹೇಳಿ ಮಾದುವೆ ಮಾತುಕತೆ ಮುಗಿಸಬೇಕು ಎಂದು ಹಠ ಹಿಡಿದರು.

ಸದಾಶಿವರಿಗೆ ಇದು ಸರಿಯಾದ ಸಮಯ ಎಂದೆನಿಸಿದ್ದರಿಂದ ಮಗಳು ಮನೆಗೆ ಬಂದ ನಂತರ ಒಂದು ಸರಿಯಾದ ದಿನವನ್ನು ನೋಡಿ ಅಹಲ್ಯಾಳ ಅಣ್ಣ ಮತ್ತು ಅವರ ಕುಟುಂಬಕ್ಕೆ ಕರೆ ಕೊಟ್ಟರು. ಇಷ್ಟೆಲ್ಲಾ ನಡೆಯುತ್ತಿದ್ದ ವಿಷಯ ಅರಿತ ಆಕಸ್ಮಿಕ ತಂದೆ ತಾಯಿಗೆ ಕಡಾ ಖಂಡಿತವಾಗಿ ತಾನು ಪ್ರದ್ಯುಮ್ನ್ನನ್ನು ಮದುವೆ ಆಗುವುದು ಸಾಧ್ಯವೇ ಇಲ್ಲ.ಇಷ್ಟು ಓದಿ ಹಳ್ಳಿ ಮನೆಯಲ್ಲಿ ಮುಸುರೆ ತಿಕ್ಕುವುದೆಂದರೆ ನನ್ನ ಓದಿಗೇ ಕುತ್ತು ಎಂದು ಒಂದೇ ಸಮನೆ ಹಾರಾಡಿದಳು.ಶಾಂತ ಸ್ವಭಾವದವರಾದ ಸದಾಶಿವ ತನ್ನ ಮಗಳಿಗೆ ಬುದ್ದಿ ಹೇಳಲು ಪ್ರಯತ್ನಿಸಿದರು. ' ಪ್ರದ್ಯುಮ್ನನೇನು ಓದದೇ ಇರುವ ದಡ್ಡನಲ್ಲ ಆತನದೂ ಕೃಷಿಯಲ್ಲಿ ಸ್ನಾತಕೋತ್ತರ ಪದವಿಯಾಗಿದೆ.ಅವನ ಅಭಿರುಚಿ ಕೃಷಿಯ ಮೇಲಿರುವುದರಿಂದ ಆತ ಇಲ್ಲಿ ಬಂದು ಮನೆಯ ಕೃಷಿಯನ್ನು ನಡೆಸಿಕೊಂಡು ಹೋಗುತ್ತಿದ್ದಾನೆ.ನೀನು ಆತನನ್ನು ಮದುವೆಯಾದರೆ ಸಂತೋಷವಾಗಿರಬಲ್ಲೆ ಎಂಬ ನಂಬಿಕೆ ನನಗಿದೆ ಎಂದು ಎಷ್ಟು ಬುದ್ದಿ ಹೇಳಿದರೂ ಆಕಸ್ಮಿಕ ತಡಮಾಡದೇ ತನ್ನ ಗೆಳೆಯ ಆಯುಶ್ ಜೊತೆ ತಾನು ಮದುವೆಯಾಗುವುದಾಗಿ ಹಠ ಹಿಡಿದು ಮನೆ ಬಿಟ್ಟು ಹೊರಟುಬಿಟ್ಟಳು.

ಇತ್ತ ವಿಷಯ ತಿಳಿದ ಪ್ರದ್ಯುಮ್ನ ನ ಮನೆಯವರು ಅವಳಿಗೇ ಇಷ್ಟವಿಲ್ಲದ ಮದುವೆ ಮಾಡಿ ಯಾವ ಪ್ರಯೋಜನ? ನೀವು ಪರಿಸ್ಥಿತಿಯನ್ನು ಹದಗೆದಿಸಬೇಡಿ ಎಂದು ತಂಗಿಗೆ ಬುದ್ದಿ ಹೇಳಿ ಪ್ರದ್ಯುಮ್ನನಿಗೆ ಆದಷ್ಟು ಬೇಗ ಬೇರೆ ಹುಡುಗಿ ಹುಡುಕಿ ಮದುವೆ ಮಾಡುವುದಾಗಿ ಹೇಳಿ ಹೋದರು.ಇತ್ತ ಪ್ರದ್ಯುಮ್ನನ ಮದುವೆ ಎಲ್ಲರ ಶುಭಾಹಾರೈಕೆಯೊಂದಿಗೆ ಆತನನ್ನು ಮೆಚ್ಚಿದ ಸೌಮ್ಯಳೊಂದಿಗೆ ಆದರೆ ಅತ್ತ ಆಕಸ್ಮಿಕ ಆಯುಶ್ ಜೊತೆ ಮದುವೆಯಾಗುವ ಕನಸು ಕಾಣತೊಡಗಿದ್ದಳು.

ಆಯುಶ್ ಗೆ ಫೋನ್ ಮಾಡಿ ನಡೆದ ಘಟನೆಯನ್ನು ತಿಳಿಸಿದಾಗ ಆತ ಯಾವುದೇ ಪ್ರತಿಕ್ರಿಯೆ ನೀಡದೇ ಸುಮ್ಮನಾದ.ಮೊದಲೇ ಸ್ವಲ್ಪ ಮಾತು ಕಡಿಮೆ ಹಾಗೆಂದು ಕೊಂಡು ಆಕಸ್ಮಿಕ ಆತನನ್ನು ಭೇಟಿಯಾಗುವ ಸಮಯಕ್ಕಾಗಿ ಕಾಯತೊಡಗಿದಳು.ಫೋನ್ ಮಾಡಿದಾಗಲೆಲ್ಲ ಕೆಲಸದಲ್ಲಿ ಬ್ಯುಸಿ ಎಂದು ಹೇಳುತ್ತಿದ್ದಾಗ ಈಕೆಗೆ ಅನುಮಾನದ ಹೊಗೆ ಪ್ರಾರಂಭವಾಯಿತು.ಕೊನೆಗೆ ಒಂದು ದಿನ ಆಯುಶ್ ನಿಂದ ಬಂದ ಮೇಲ್ ನೋಡಿ ಸಂತೋಷಗೊಂಡಳು.

ಪ್ರಿಯ ಆಕಸ್ಮಿಕ ,
ಇದೇ ತಿಂಗಳು ೨೮ ರಂದು ನನ್ನ ಮದುವೆ ನನ್ನ ಬಾಲ್ಯದ ಗೆಳತಿ ಮಾವನ ಮಗಳು ಅನುಷಾಳೊಂದಿಗೆ ನಡೆಯುತ್ತಿದೆ.ತಡವಾಗಿ ತಿಳಿಸುತ್ತಿರುವುದಕ್ಕೆ ಕ್ಷಮೆಯಿರಲಿ.ನೀನು ಸಿಗುವ ಮೊದಲಿನಿಂದಲೂ ನನಗೆ ಅನುಶಾಳಿಗೆ ಮನೆಯಲ್ಲಿ ಮದುವೆ ನಿಶ್ಚಯಿಸಿದ್ದರು.ಕೇವಲ ಎರಡು ವರ್ಷದ ಹಿಂದೆ ಸಿಕ್ಕ ನಿನಗೋಸ್ಕರ ಹುಟ್ಟಿದಾಗಿನಿಂದ ಜೊತೆಗಿರುವ ಅನುಶಾಳನ್ನು ದೂರ ಮಾಡಿದರೆ ದ್ರೋಹವಾಗುತ್ತದೆ ಎಂದೆನಿಸಿತು.ಯಾವುದೋ ಸಣ್ಣ ಆಮಿಷಗಳಿಗೆ ಪ್ರೀತಿ ಎಂಬ ಬಣ್ಣ ಕೊಟ್ಟ ನಮ್ಮಿಬ್ಬರ ಸ್ನೇಹವನ್ನು ಸ್ನೇಹಕ್ಕೇ ಸೀಮಿತಗೊಳಿಸುವುದು ಸೂಕ್ತ ಎಂದು ನನಗನಿಸಿತು.ನಮ್ಮಿಬ್ಬರ ಸ್ನೇಹ ಚಿರವಾಗಿರಲಿ.ಹ್ಞಾ ಇನ್ನೊಂದು ಮಾತು ಇದು ಆತುರದಿಂದ ತೆಗೆದುಕೊಂಡ ನಿರ್ಧಾರವಲ್ಲ,ಸಾಕಷ್ಟು ಯೋಚಿಸಿದ ನಂತರವಷ್ಟೇ ಈ ನಿರ್ಧಾರ ಸರಿ ಎಂದೆನಿಸಿತು.ನಿಮ್ಮ ಜೀವನ ಸಂತೋಷವಾಗಿರಲಿ.

ಇಂತಿ ,
ಆಯುಶ್

ಓದಿದವಳ ಕಣ್ಣಲ್ಲಿ ನೀರು ಹನಿಯುತ್ತಿತ್ತು.ತಾನು ಮಾಡಿದ ತಪ್ಪು ತನಗೇ ತಿರುಗಿ ಬಂದುದ್ದರ ಅರಿವಾಗಿ ಮನೆಗೆ ಹೋಗಿ ಪ್ರದ್ಯುಮ್ನನನ್ನು ಮದುವೆಯಾಗಲು ತನ್ನ ಒಪ್ಪಿಗೆ ಎನ್ನಬೇಕು ಎಂದುಕೊಂಡು ಮನೆಗೆ ಫೋನ್ ಮಾಡಿದಳು. ಅತ್ತ ಅಪ್ಪ

ಮಗಳೇ ನಿನ್ನ ತಪ್ಪನ್ನು ಕ್ಷಮಿಸಿದ್ದೇವೆ ಮನೆಗೆ ಬಾ, ಪ್ರದ್ಯುಮ್ನ ಈಗ ಮದೆವೆಯಾಗಿ ಆನಂದದಿಂದಿದ್ದಾನೆ ಆತನೀಗ ಅಪ್ಪನಾಗುವ ಹಂತದಲ್ಲಿದ್ದಾನೆ ಎಂದಾಗ ತನ್ನ ಜೀವನ ತಾನೇ ಹಾಳು  ಮಾಡಿಕೊಂಡಿದ್ದರ ಅರಿವು ಆಕಸ್ಮಿಕಳಿಗಾಯಿತು.

Friday, 5 April 2013

ಹುಚ್ಚಿ ! (ಕಥೆ)


ಮನೆ ಕ್ಲೀನ್ ಮಾಡುತ್ತಾ ಸುಸ್ತಾದ ಅಂಬಿಕ ಗಂಡನೊಡನೆ ಕೂಗುತ್ತಿದ್ದಳು 'ಇಷ್ಟೆಲ್ಲಾ ಮಾಡೋದು ಎಷ್ಟು ಕಷ್ಟ ಗೊತ್ತ ಒಬ್ಬಳೇ ಮಾಡ್ಬೇಕು ಯಾರು ಹೆಲ್ಪ್ ಗೆ ಬರಲ್ಲ ಹೋಗಿ ಹೋಗಿ ಈ ದೊಡ್ಡ ಮನೆಗೆ ಬಂದು ಕುಳಿತಿದ್ದೀರ ಆ ಮನೆಯಿಂದ ಈ ಮನೆಗೆ ಸೇರಿಸೋ ಅಷ್ಟರಲ್ಲಿ ನಾ ಹಾಸ್ಪಿಟಲ್ ಸೇರೋದು ಖಂಡಿತ ' .  ಅದಕ್ಕೆ ಗಣಪತಿ 'ಅಯ್ಯೋ ನೀ ಮೊದಲೇ ಹೇಳಿದ್ರೆ ಬರ್ತಾ ಆ ಪುಷ್ಪ ಳನ್ನಾದ್ರು ಕರ್ಕೊಂಡು ಬರ್ತಿದ್ದೆ'  . ಅಂಬಿಕ ಳ  ಸುಸ್ತೆಲ್ಲ ಒಮ್ಮೆಲೇ ಮಾಯಾವಾಗಿ ಮುಖದಲ್ಲಿ ಚಿಲ್ಲನೆ ಒಂದು ನಗು ಬಂತು . ಅಲ್ಲೇ ಕುಳಿತಿದ್ದ ಸರಳಳಿಗೆ   ಇವರ ಸರಳ ಭಾಷೆ ಒಗಟಂತೆ  ಕಾಣುತ್ತಿತ್ತು . 'ಅತ್ತೆ ಅದು ಯಾರು ಪುಷ್ಪ ಎಂದರೆ?' ಕೇಳಿಯೇ ಬಿಟ್ಟಳು  .' ಅಯ್ಯೋ ಸರಳಾ ನೀ ನೋಡ್ಲಿಲ್ವಾ ಅದೇ ಆ ಹುಚ್ಚಿ ,ಇರು ತೋರಿಸ್ತೀನಿ ಇವತ್ತು ಸಂಜೆ ಪೇಟೆ ಕಡೆ ಹೋದಾಗ' ಎಂದರು ಅತ್ತೆ  . ಸರಳ ಈಗ ಸಂಜೆ ಆಗುವುದನ್ನೇ ಕಾಯುತ್ತಿದ್ದಳು .


ಸಂಜೆ ಎಂದಿನಂತೆ ಪೇಟೆಯ ಕಡೆಗೆ ಹೊರಟಾಗ ಅದೇ ನೋಡು ಅಲ್ಲಿ ಮಾರಮ್ಮನ ಗುಡಿ ಮುಂದೆ ಕುಂತವಳೇ ಆ ಹುಚ್ಚಿ ಪುಷ್ಪ ಎಂದು ಬೇಗ ಬೇಗ ಮುಂದೆ ಹೋಗುತ್ತಿದ್ದರೆ ಸರಳ ಳ   ಕಣ್ಣು ಆ ಪುಷ್ಪಳನ್ನೇ ನೋಡುತ್ತಿತ್ತು . ಹಿಂದೆ ತಿರುಗಿ ತಿರುಗಿ ನೋಡುತ್ತಾ ಹೋದವಳಿಗೆ ಆ ದಿನವೆಲ್ಲ ಅವಳೇ ಕಣ್ಣೆದುರು.  

ಪುಷ್ಪ ಹೆಸರೆಷ್ಟು ಚಂದವಿದೆ .ಹೆತ್ತವರು ಮಗಳ ಬಗ್ಗೆ ಎಷ್ಟು ಕನಸು ಕಂಡಿರಬಹುದು ಆ ಹೆಸರಿಡುವಾಗ ! ಆಕೆ ನೋಡಲೇನು ಹುಚ್ಚಿ ಎನಿಸುವುದಿಲ್ಲ . ಬಣ್ಣ ಸ್ವಲ್ಪ ಕಂದು , ಒಂದು ಪ್ಯಾಂಟ್ ಮತ್ತು ಶರ್ಟ್ ಹಾಕಿಕೊಂಡಿರುತ್ತಾಳೆ ಜೊತೆಗೆ ಬಾಯ್ ಕಟ್ ಬಹುಷಃ ಯಾರೋ ಕನಿಕರದಿಂದ ಅವಳ ಕೂದಲನ್ನು ಕಟ್ ಮಾಡಿ ಸ್ವಲ್ಪ ಸ್ವಚ್ಚವಾಗಿರುವಂತೆ ನೋಡಿಕೊಂಡಿರಬೇಕು . ಆಕೆಯದು ಕರ್ಲಿ ಹೇರ್ ಅಂತಾರಲ್ಲ ಹಾಗೆ . 

ದೇವಸ್ಥಾನದ ಮುಂದೆ ಅವಳ ವಾಸ . ಹಾಗಂತ ರಾತ್ರಿ ೭ ಗಂಟೆಯ ಮೇಲೆ ಆಕೆ ಅಲ್ಲಿ ಕಾಣುವುದೇ ಇಲ್ಲ ಎಲ್ಲಿ ಹೋಗುತ್ತಾಳೆ ಎಂಬುದು ಯಾರಿಗೂ ತಿಳಿಯದ ವಿಷಯ . ಬೆಳಿಗ್ಗೆ ೯ ಗಂಟೆಗೆ ಸರಿಯಾಗಿ ಮಾರಮ್ಮನ ದೇವಸ್ಥಾನದ ಬಾಗಿಲು ತೆಗೆದ ತಕ್ಷಣ ಆಕೆ ಅಲ್ಲಿ ಹಾಜರ್ ಮತ್ತೆ ಸಂಜೆ ೭ ಗಂಟೆಗೆ ಗುಡಿ ಮುಚ್ಚಿದ ಮೇಲೆ ಅಲ್ಲಿಂದ ಆಕೆ ಕದಲುವುದು . ಬಿರುಬಿಸಿಲಿಗೂ ಅಂಜದೆ ಕುಳಿತ ಆಕೆಯನ್ನು ಆ ಮಾರಮ್ಮ ಒಂದು ದಾರಿ ತೋರಿಸಬಾರದೆ?ಎಂದೆನಿಸದೆ ಇರಲಿಲ್ಲ ಸರಳಳಿಗೆ .

ಮೂರು ನಾಲ್ಕು ದಿನಗಳು ಹೀಗೆ ಪೇಟೆ ಗೆ ಹೋಗುವಾಗಲೆಲ್ಲ ಆಕೆಯನ್ನು ನೋಡಿ ಬಂದಾದ ಮೇಲೆ ಮತ್ತೆ ಕೇಳಿದಳು ಅಂಬಿಕಳನ್ನು 'ಅತ್ತೆ  ಆ ಪುಷ್ಪ ಯಾಕೆ ಹಾಗಾಗಿದ್ದು? ಪಾಪ ಅಲ್ವಾ?'

ಹ್ಮ ನನಗೂ  ಸರಿಯಾಗಿ ಗೊತ್ತಿಲ್ಲ ಯಾಕೆ ಎಂದು ಅವರಿವರು ಹೇಳಿದ್ದು ಹೇಳಬಹುದು ಅವಳದೊಂದು ಪ್ರೀತಿಯಲ್ಲಿ ಬಿದ್ದ ಕಥೆ ಒಂದು ಹುಡುಗನನ್ನು ಬಹಳ ಇಷ್ಟ ಪಡುತ್ತಿದ್ದಳಂತೆ ಅವನೂ  ಹಾಗೂ  ಹೀಗೂ ಇವಳನ್ನು ಅವನಿಷ್ಟದಂತೆ ಕುಣಿಸಿ ಕೊನೆಗೆ ಅದ್ಯಾವುದೋ ಒಂದು ಪ್ಯಾಂಟು ಶರ್ಟು ಹಾಕಿರೋ ಹುಡುಗಿ ನಿನಗಿಂತ ಚನ್ನಾಗಿದ್ದಾಳೆ  ಅಂತ ಇವಳನ್ನು ಬಿಟ್ಟು ಅವಳೊಡನೆ ಓಡಿ ಹೋಗಿ ಬಿಟ್ಟನಂತೆ.

 ಅಂದಿನಿಂದ ಈಕೆ  ಮಾರಮ್ಮನ ಗುಡಿಯಲ್ಲಿ ಕೈಮುಗಿದು ಕುಳಿತುಕೊಂಡು ಆತನ ಬರುವಿಕೆ ಗೆ ಕಾಯುತ್ತಿದ್ದಳಂತೆ ದಿನ ಕಳೆದಂತೆ ಅನ್ನ  ನೀರು ಬಿಟ್ಟು ಕುಳಿತ  ಈಕೆಯನ್ನು ಜನ ಹುಚ್ಚಿ ಎನ್ನಲು  ಪ್ರಾರಂಭಿಸಿದರು . ಕೊನೆಗೆ ಅದ್ಯಾರೋ ಅವಳ ಹರಿದ ಬಟ್ಟೆ ನೋಡಲಾಗದೆ ಅವಳಿಗೆ ಹಳೆಯದೊಂದು ಪ್ಯಾಂಟು ಶರ್ಟು ಕೊಟ್ಟರು ಕಾಣುತ್ತೆ ಅವಳು ಅದನ್ನು ಹಾಕಿ ಮಾರಮ್ಮ ಕೊನೆಗೂ ದಯೆ ತೋರಿದಳು ಪ್ಯಾಂಟು ಶರ್ಟು ಹಾಕಿಕೊಂಡೆ ಇನ್ನು ಆ ಹುಡುಗ ಬಂದರೆ ತನ್ನ ಇಷ್ಟಪಡುತ್ತಾನೆ ಎಂದು ಅಲ್ಲೇ ಕಾಯುತ್ತಾ ಕುಳಿತು ಕೊಂಡಿರುತ್ತಾಳೆ  .ಪಾಪ ಆ ಹುಡುಗ ತಿರುಗಿ ಬಂದಿಲ್ಲ ಬಂದರೂ  ಈಕೆಯನ್ನ ಗುರುತಿಸಲಾರ. ಗುರುತಿಸಿದರೂ  ಹುಚ್ಚಿ ಯನ್ನು ಯಾರಾದರೂ  ಕಟ್ಟಿಕೊಳ್ಳಲು ಸಾಧ್ಯವೇ? 

ಸರಳ ಮನಸ್ಸಲ್ಲೇ ಅಂದುಕೊಂಡಳು ಆಕೆ ನೋಡಲು ಹುಚ್ಚಿಯಂತೆ ಕಾಣುವುದಿಲ್ಲ ,ಅವಳಿಗೆ ಹುಚ್ಚು ಹಿಡಿದಿರುವುದು ಪ್ಯಾಂಟು ಶರ್ಟಿ ನದು. ಜನ ಆಕೆಯನ್ನೇ ಹುಚ್ಚಿ ಮಾಡಿಬಿಟ್ಟಿದ್ದಾರೆ!!. ಪ್ರೀತಿ ಏನೆಲ್ಲಾ ಮಾಡಿಬಿಡುತ್ತದೆ. ಕಣ್ಣಲ್ಲಿ ನೀರು ತುಂಬಿಕೊಂಡ ಸರಳ ಯೋಚಿಸುತ್ತಿದ್ದಳು .

ಅರ್ಪಿತಾ ಹರ್ಷ 
ಲಂಡನ್ 

Thursday, 21 March 2013

ಮುಹೂರ್ತ !

ಬೆಳಿಗ್ಗೆ ಮುಂಚೆ ಹತ್ತು ಗಂಟೆಗೆಲ್ಲ ಮುಹೂರ್ತ ತಾವು ತಪ್ಪದೆ ಬರಬೇಕು . ಇರುವ ಒಬ್ಬಳೇ ಮಗಳನ್ನು ಶ್ರೀಮಂತರ ಮನೆಗೆ ಕೊಡ್ತಿದ್ದೇನೆ . ಜೊತೆಗೆ ಹುಡುಗ ಬಹಳ ಒಳ್ಳೆಯವ ನನ್ನ ಮಗಳಿಗೆ ಅಂತಾನೆ ಕಳಿಸಿದ್ದಾನೆ ದೇವರು. ಸಾಫ್ಟ್ವೇರ್ ಇಂಜಿನಿಯರ್ ಒಳ್ಳೆ ಸಂಬಳ . ನಂದು ಬಡ ಕುಟುಂಬ ಆದರು ನನ್  ಮಗಳು ಅದೃಷ್ಟ ಮಾಡಿಕೊಂಡಿದಾಳೆ ನೋಡಿ ಎಂದು ನಗುತ್ತ ಹೇಳುತ್ತಿದ್ದ ಶಾಮ ಭಟ್ಟರ ಮಗಳ ಮಾಡುವೆ ಪತ್ರಿಕೆ ತೆಗೆದುಕೊಂಡ ಕಮಲಮ್ಮ ಒಮ್ಮೆ ನೊಂದು ಕೊಂದರು . ಹುಡುಗ ಅದೇ ಪ್ರದೀಪ . ಒಳ್ಳೆ ಹುಡುಗ .ಹುಡುಗಿ ಅದೃಷ್ಟ ಮಾಡಿರಬೇಕು . ಅಷ್ಟು ಹೇಳಿ ಹೊರಟುಹೋದರು ಶಾಮ ಭಟ್ಟರು . ಊಟಕ್ಕೆ ಇರಿ ಎಂದು ಹೇಳುವಷ್ಟು ಆಸಕ್ತಿ ಇರಲಿಲ್ಲ ಕಮಲಮ್ಮನಿಗೆ. ಆ ಕರಾಳ ನೆನಪಿನ ದಿನಗಳಿಗೆ ಮೊರೆಹೊಕ್ಕರು.
                                        ---------------------------------
ಎಷ್ಟು ಚಂದವಿತ್ತು ಆ ದಿನಗಳು . ಮಗಳು ಪ್ರತಿಮಾ ಮನೆಲಿದ್ದ ದಿನಗಳವು .ಅಪ್ಪ ಅಮ್ಮನ ಮುದ್ದಿನ ಮಗಳು ಮನೆಯಲ್ಲಿ ಯಾವುದಕ್ಕೂ ಕೊರತೆ ಇರಲಿಲ್ಲ. ಪ್ರೀತಿಗೂ ಕೂಡ. ಅಪ್ಪ ನ ಪ್ರೀತಿ , ಅಣ್ಣ ನ ಕೀಟಲೆ ಚೇಷ್ಟೆ ಎಲ್ಲದಕ್ಕೂ ಕೇಳಿಕೊಂಡು ಬಂದಿರಬೇಕು ಎಂದು ನೋಡಿದವರು ಕಣ್ಣು ಹಾಕುವರೆನೋ ಎಂಬಷ್ಟು ನಗು ಆ ಮನೆಯಲ್ಲಿತ್ತು .

ಮೊದಮೊದಲು ಅಪ್ಪ ಕಾಲೇಜಿಗೆ ಹೋಗುತ್ತಿದ್ದ ಮಗಳಿಗೆ ವಿಪರೀತ ಸಲುಗೆ ಕೊಟ್ಟಿದ್ದ. ಅಂದಿನ ಕಾಲದಲ್ಲಿ ಯಾರ ಹತ್ತಿರವೂ ಮೊಬೈಲ್ ಇರಲಿಲ್ಲ .ಇಡೀ  ಕಾಲೇಜಿನಲ್ಲಿ ಇವಳದೊಂದೇ ಮೊಬೈಲ್ ಎಲ್ಲರ ಕಣ್ಣು ಈಕೆಯ ಮೇಲೆಯೇ. ನೋಡಲು ಬೆಳ್ಳಗೆ ತೆಳ್ಳಗೆ ತಿದ್ದಿ ತೀಡಿದಂತಿದ್ದ ಪ್ರತಿಮಾ ಪಡ್ಡೆ ಹುಡುಗರ ಕನಸಿನಲ್ಲಿ ಹೋಗಲು ಕಾಲೇಜು ಪ್ರಾರಂಭವಾಗಿ ಬಹಳದಿನ ತೆಗೆದುಕೊಳ್ಳಲಿಲ್ಲ. ಸ್ವಲ್ಪ ಚಲ್ಲು ಚಲ್ಲಾಗಿ ಆಡುತ್ತಿದ್ದ ಪ್ರತಿಮಾ ಳಿಗೂ ಇದೊಂದು ಹಬ್ಬದಂತೆ ಅನಿಸುತ್ತಿತ್ತು .  ಕಾಲೇಜಿನ ಹೆಸರಿನಲ್ಲಿ ಪ್ರತಿ ದಿನ ಹೀಗೇ ಕಳೆದುಹೋಗುತ್ತಿತ್ತು.ಓದುವುದರ ಬಗ್ಗೆ ಮೊದಲಿನಿಂದಲೂ ಸ್ವಲ್ಪ ಹಿಂದಿದ್ದ ಪ್ರತಿಮಾ ಳಿಗೆ ಈಗ ಓದಿನ ಕಡೆ ಸ್ವಲ್ಪವೂ  ಗಮನವಿರಲಿಲ್ಲ.

ದಿನನಿತ್ಯ ಕಾಲೇಜಿಗೆ ಬಂದು ಹೋಗುವುದು ತಡವಾಗುತ್ತಿತ್ತು. ಬೆಳಗ್ಗೆ ಮನೆಯಿಂದ ೭ ಗಂಟೆಗೆಲ್ಲ ಹೊರಟರೆ ಸಂಜೆ ಮನೆ ಸೇರುತ್ತಿದ್ದುದು ಸಂಜೆ ೮ ಗಂಟೆಗೆ . ಅಪ್ಪ ತೋಟದ ಕೆಲಸ , ಗೆಳೆಯರು , ನೆಂಟರ ಮನೆ ಹೀಗೆ ಬ್ಯುಸಿ ಆಗಿ ಹೋಗುತ್ತಿದ್ದುದರಿಂದ ಅಷ್ಟೊಂದು ತಲೆಗೆ ಹಚ್ಚಿಕೊಳ್ಳಲಿಲ್ಲ. ಆದರೆ ಅಮ್ಮನಿಗೆ ಹಾಗಾದೀತೇ? ಎಷ್ಟಾದರೂ ಮಗಳು , ಹೆಣ್ಣು ಮಕ್ಕಳು ಸಂಜೆ ೬ ರ ಒಳಗೆ ಮನೆ ಸೇರಬೇಕು ಎಂದು ಮೊದಲಿನಿಂದಲೂ ಕೇಳಿಕೊಂಡು ,ಪಾಲಿಸಿಕೊಂಡು , ಹೇಳಿಕೊಂಡು ಬಂದವರು .

ಒಂದು ದಿನ ಕಮಲಮ್ಮ ,ಗಂಡ ಸುಬ್ರಾಯರು ಮನೆಗೆ ಬರುವುದನ್ನೇ ಕಾಯುತ್ತ ಕುಳಿತಿದ್ದರು . ಮಗಳು ಮನೆಗೆ ಬರುವುದಕ್ಕೂ ಗಂಡ ಮನೆಗೆ ಬರುವುದಕ್ಕೂ ಸರಿ ಹೋಯಿತು . ಹೇಳಬೇಕೆಂದಿರುವ ಮಾತು ಮನಸಲ್ಲೇ ಬಚ್ಚಿಟ್ಟು ಕೊಳ್ಳಬೇಕಾಯಿತು . ಇಷ್ಟಕ್ಕೂ ತನ್ನ ಸ್ವಂತ ಮಗಳನ್ನು ಅನುಮಾನಿಸಲಾದೀತೇ? ಆದರೂ ಮುನ್ನೆಚ್ಚರಿಕೆ ಒಳ್ಳೆಯದು ಎಂಬುದು ಮನಸಿನ ಒಂದು ಮೂಲೆಯಲ್ಲಿ ಹಾಡು ಹೋಯಿತು .

ಇತ್ತ ಸುಬ್ರಾಯರು ಊಟಕ್ಕೆ ಕುಳಿತಾಗ ಮಗಳಿಗೆ ಕೇಳಿದರು ' ಏನು ಹೇಗೆ ನಡೀತಿದೆ ನಿನ್ನ ಕಾಲೇಜು ? ಪರೀಕ್ಷೆ ಹತ್ತಿರಬೇರೆ ಬಂತು ಇನ್ನೇನು ಸೆಕೆಂಡ್ ಪಿಯುಸಿ ಗೆ ಹೋಗಿಬಿಡುತ್ತಿ.ಕಾಲೇಜು ಸ್ವಲ್ಪ ದೂರ ನಿಂಗೆ ಹತ್ತಿರದ್ದು ಬೇಕಾದರೆ ಹೇಳು ಇಲ್ಲೇ ಸೀಟು  ಕೊಡಿಸುವ ವ್ಯವಸ್ಥೆ ಮಾಡಿಸುವ'ಎಂದರು.

' ಹೌದು ಅಪ್ಪ ಕಾಲೇಜು ತುಂಬಾ ಚೆಂದ , ನನಗೆ ಈ ಕಾಲೇಜು ಬಿಟ್ಟು ಬೇರೆಡೆಗೆ ಹೋಗೋಕೆ ಇಷ್ಟ ಇಲ್ಲ ದೂರವಾದರೂ  ನಾ ಅಲ್ಲೇ ಹೋಗೋದು 'ಎಂದಳು . ಸರಿ ಹಾಗಿದ್ದರೆ ಎಂದ ಸುಬ್ರಾಯರಿಗೆ ಎಲ್ಲಿಲ್ಲದ ಸಂತೋಷ ಮಗಳಿಗೆ ಓದಿನಲ್ಲಿ ಏನು ಆಸಕ್ತಿ ಎಂದು . ಆದರೆ ಕಮಲಮ್ಮ ಮಗಳ ಮುಖದಲ್ಲಿ ವ್ಯಕ್ತವಾದ ಅದ್ಯಾವುದೋ ಅವ್ಯಕ್ತ ಭಾವವೊಂದಿದೆ ಎಂದರಿತರು . ಬೆಳಿಗ್ಗೆ ಹೋದವಳು ಸಂಜೆ ಬರುತ್ತಾಳೆ . ಮೊನ್ನೆ ಪಕ್ಕದೂರಿನ ಪದ್ಮ ಹೇಳಿದಳು ತನ್ನ ಮಗಳು ಅದೇ ಕಾಲೇಜು ೫ ಗಂಟೆಗೆಲ್ಲ ಮನೆಯಲ್ಲಿರ್ತಾಳೆ ನಿನ್ ಮಗಳೇನು ಸಂಗೀತ ಕಲಿತಾಳ?  ಇಲ್ಲ ಅವಳಿಗೆ ಕ್ಲಾಸ್ ಮುಗಿಯೊದೆ ಅಷ್ಟೊತ್ತಿಗಂತೆ ಆಮೇಲೆ ಬಸ್ ಸಿಗಲ್ವಂತೆ ಎಂದ ಕಮಲಮ್ಮಳಿಗೆ  ಪದ್ಮ ಅದೆಂತ ಇವಳಿಗೊಂದು ಸ್ಪೆಷಲ್ ಕ್ಲಾಸ್ ತಗೊಬಿಡ್ತಾರಂತ? ಕೇಳಿದಾಗ ಕಮಲಮ್ಮಳಲ್ಲಿ ತಿರುಗಿ ಉತ್ತರವಿರಲಿಲ್ಲ. ಯೋಚನೆಗೆ ಬಿದ್ದಳು . ಹೌದಲ್ಲವಾ ಆದರೂ  ಎಂದು ಏನೂ  ಮುಚ್ಚಿಡದ ಮಗಳ ಬಗ್ಗೆ ಅನುಮಾನಿಸುವುದು ಸರಿಯಲ್ಲ .

 ಹೀಗೆ ದಿನ ಕಳೆಯುತ್ತಿತ್ತು . ಯಾವುದಕ್ಕೂ ಇನ್ನು ತಡ ಮಾಡುವುದಲ್ಲ ಮಗಳು ೨ ಪಿಯುಸಿ ಮುಗಿತಿದ್ದಂತೆ ಒಂದು ಒಳ್ಳೆ ಹುಡುಗನನ್ನ ನೋಡಿ ಮದುವೆ ಮಾಡಿಬಿಟ್ಟರೆ ಒಂದು ನಿಶ್ಚಿಂತೆ. ಹಾಗೆ ಗಂಡನಲ್ಲಿ ಹೇಳಿದ್ದಕ್ಕೆ ' ಏನಂತ ತಿಳಿದಿ ನೀನು ನನ್ನ ಮಗಳು ಇನ್ನು ಕೂಸು  ಆಕೆಗೆ ಮದುವೇನ ? ಇನ್ನು ನಾಲ್ಕು ವರ್ಷ ಅದರ ಬಗ್ಗೆ ಮಾತಾಡ ಕೂಡದು ' ಎಂದ ಗಂಡನನ್ನು ಕುಳ್ಳಿರಿಸಿ ಇವತ್ತಲ್ಲ ನಾಳೆ ಮದುವೆ ಮಾಡಲೇ ಬೇಕು ಈಗ ಕಾಲ ಬದಲಾಗಿದೆ . ದೊಡ್ಡವರ ಮನೆ ಹುಡುಗಿ ಅಂದ್ರೆ ಜನ ದುಂಬಾಲು ಬೀಳ್ತಾರೆ. ಕಾಲೇಜಿಂದ ಬೇರೆ ಬೇಗ ಬರ್ತಿಲ್ಲ ಅವಳು ನಾಳೆ ದಿನ ಏನಾದ್ರೂ ಆದ್ರೆ ನಮ್ಮ ಮಾನ ಮರ್ಯಾದೆ ಏನಾಗಬೇಡ? ನೀವೇ ಹೇಳಿ .
ಯೋಚನೆಗೆ ಬಿದ್ದರು ಸುಬ್ರಾಯರು . ಕಮಲಾ ಯಾವತ್ತು ಹೀಗಂದವಳಲ್ಲ ಅವಳ ಮಾತಲ್ಲಿ ಹುರುಳಿ ರುತ್ತೆ ಬೆಂಕಿ ಹೋಗೆ ಆದರೆ ಹೀಗೆ ಮಾತಾಡುವವಳಲ್ಲ .

 ಹೀಗೆ ಯೋಚಿಸಿದವರಿಗೆ ಮೊನ್ನೆ ತಾನೇ ಬಸ್ ನಲ್ಲಿ ಸಿಕ್ಕಿ ಹೇಳಿದ ಗೆಳೆಯನ ನೆನಪಾಯಿತು . ಒಂದು ಫೋನ್ ಮಾಡಿಬಿಟ್ಟರು .ಯಾವತ್ತಿದ್ರೂ ಮದುವೆ ಮಾಡಿ ಕೊಡೋದೇ ನಿನ್ನ ಮಗನಿಗೆ ಕೊಟ್ಟರೆ ನೀನೆ ಮುಂದೆ ಓದುಸ್ತಿ ಅಂತ ಬೇರೆ ಹೇಳಿದ್ದಿ ಹಾಗಾಗಿ ಈ ಯೋಚನೆ ಬಂತು ಯಾವುದಕ್ಕೂ ಮನೆಯಲ್ಲಿ ಒಮ್ಮೆ ವಿಚಾರಿಸಿ ಮುಂದುವರೆಯುವ. ಅಷ್ಟೇ ಉಳಿದಿದ್ದೆಲ್ಲ ನೋಡ ನೋಡುತ್ತಿದ್ದಂತೆ ಮುಂದುವರೆದು ಆಯಿತು . ಎಲ್ಲಿ ನೋಡಿದರು ಪ್ರತಿಮಾಳ  ಮದುವೆಯಂತೆ ಅನ್ನುವುದೊಂದು ದೊಡ್ಡ ಸುದ್ದಿ . ಮಗಳಿಗಾಗಿ ಬಂಗಾರದ ಹೊರೆಯನ್ನೇ ಮಾಡಿಸಿದರು ಸುಬ್ರಾಯರು. ಪ್ರತಿಮಾ ಎಲ್ಲವೂ  ಮಾಮುಲಿನಂತೆಯೇ ಇದೆ ಎಂಬಂತಿದ್ದಳು . ಮದುವೆಯ ದಿನವೂ ನಿಶ್ಚಯಿಸಿ ಆಯಿತು. ಇನ್ನು ೩ ತಿಂಗಳಿದೆ ಅಷ್ಟರಲ್ಲಿ  ಕಾಲೇಜು ಕೂಡ ಮುಗಿಯುತ್ತದೆ .ಮುಂದಿನದೆಲ್ಲವು ಅವಳಿಷ್ಟದಂತೆ . ಇಶತವಿದ್ದರೆ ಓದಬಹುದು ಇಲ್ಲದಿದ್ದರೆ ಸಂಸಾರವಿದೆ.

ಒಂದು ದಿನ ಮದ್ಯಾನ್ಹ ಮನೆಗೆ ಬಂದ  ಮಗ ಅಮ್ಮ ಏನಾಗೋಯ್ತು ಎಂದು ದುಃಖ ತಪ್ತ ನಾಗಿ ಕುಸಿದು ಬಿದ್ದ . ಅಯ್ಯೋ ಏನಾಯ್ತೋ ಎಂದು ನೀರು ಹಾಕಿ ಏಳಿಸಿದವರಿಗೆ ಆಘಾತ ಕಾದಿತ್ತು . ಮಗಳು ಮನೆ ಬಿಟ್ಟು ಓಡಿ  ಹೋಗಿದ್ದಾಳೆ .  ಕಾಲೆಜಿನದೆ ಹುಡುಗ . ತಂದೆ ತಾಯಿ ಕೂಲಿ ಕೆಲಸ ಮಾಡಿ ಮಗನನ್ನು ಓದಿಸುತ್ತಿದ್ದರೆ. ವಿಷಯ ತಿಳಿದ ಸುಬ್ರಾಯರು ಮನುಷ್ಯರಾಗಿರಲಿಲ್ಲ. ಅವಳು ಸಿಗಲಿ ಕೊಚ್ಚಿ ಹಾಕುತ್ತೇನೆ ಎಂದರು ಅಸಹಾಯಕರಾಗಿ ಅತ್ತರು.ಗೋಗರೆದರು.

ಊರಿನವರು ನೆಂಟರಿಷ್ಟರು ಎಲ್ಲರೂ ಬಂದರು ಒಬ್ಬೊಬ್ಬರು ಒಂದೊಂದು ಹೇಳಿದರು ನೀವು ಕೊಟ್ಟ ಸಲುಗೆ ಬಹಳವಾಗಿಯು ಎಂದು ಕೆಲವರೆಂದರೆ , ಆಕೆ ಮೊದಲಿನಿಂದಲೂ ಸ್ವಲ್ಪ ಚಲ್ಚಲ್ ಆಗಿ ಆಡುತ್ತಿದ್ದಳು ನಮಗೆ ಗೊತ್ತಿತ್ತು ಇದು ಹೀಗೆ ಆಗುವುದು ಎಂದು ಕೆಲವರಂದರು. ಹತ್ತಿರದ ನೆಂಟರು ಅವಳ ಜಾತಕವೇ ಸರಿ ಇರಲಿಲ್ಲ ಎಂದರು . ನೂರು ಜನ ನೂರು ರೀತಿಯಲ್ಲಿ ಮಾತನಾಡಿದರು . ಸಮಾಧಾನದ ನೆಪದಲ್ಲಿ ಬಂದು ಮನಸ್ಸಿಗೆ ಇನ್ನಷ್ಟು ಇರಿದರು . ಹೋದ ಮಗಳು ತಿರುಗಿ ಬರಲಿಲ್ಲ .ಅಂದಿನಿಂದ  ಕಮಲಮ್ಮ ಸುಬ್ರಾಯರು ಮನೆ ಹೊಸಿಲು ದಾಟಿ ಹೊರಹೊಗಲಿಲ್ಲ .ಇದೆಲ್ಲ ಆಗಿ ಆಗಲೇ ೨-೩ ವರ್ಷವಾಗಿತ್ತು . ಆಗೀಗ ಯಾರಿಂದನೋ ಬಂಡ ಸುದ್ದಿಯಿಂದ ತಿಳಿದಿದ್ದು ಪ್ರತಿಮ ಈಗ ಮುದ್ದಾದ ಗಂಡು ಮಗುವೊಂದರ ತಾಯಿ . ಗಂಡನ ಜೊತೆಗೆ ತಾನು ಕೂಲಿ ಕೆಲಸದಲ್ಲಿ ತೊಡಗಿಕೊಂಡಿದ್ದಾಳೆ. ಅಪ್ಪ ಅಮ್ಮ ತೋರಿದ ಆ ಪ್ರೀತಿಗಿಂತ ಕಷ್ಟಪಟ್ಟು ದುಡಿಯುವ ಈ ಪ್ರೀತಿಯೇ ಮೇಲೆನಿಸಿರಬೇಕು !!.ಕಮಲಮ್ಮ ನಿಟ್ಟುಸಿರುಬಿಟ್ಟರು ಎಲ್ಲ ಸರಿಯಿದ್ದರೆ ಪ್ರದೀಪ ಇಂದು ತಮ್ಮ ಅಳಿಯ ಆಗುತ್ತಿದ್ದ . ಮೊಮ್ಮಗು ರಾಜಕುಮಾರನಾಗುತ್ತಿದ್ದ.

                         -----------------------------------------------------------------------

ಮಗು ರಚ್ಚೆ ಹಿಡಿದು ಅಳುತ್ತಿತ್ತು . ಏನು ಮಾಡಿದರೂ  ಸುಮ್ಮನಿರಲಿಲ್ಲ. ಕೊನೆಗೆ ಇದ್ದ ಸಣ್ಣ ರೂಮಿನಲ್ಲಿ ಒಂದು ತೊಟ್ಟಿಲು ತಂದು ಕಟ್ಟಬೇಕು . ಹೇಗಾದರು ಮಾಡಿ ಈ ತಿಂಗಳು ಕೆಲಸ ಮಾಡಿದ ದುಡ್ಡು ಗಂಡನಿಗೆ ಸಿಗದಂತೆ ಉಳಿಸಿಕೊಳ್ಳಬೇಕು ಎಂದು ಯೋಚಿಸುತ್ತಿದ್ದ ಪ್ರತಿಮಳಿಗೆ  ಸುದೀರ ಹೇಳಿದ 'ಇವತ್ತು ಮೂರು ಜನ ಗೆಳೆಯರನ್ನ ಕರ್ಕೊಂಡು ಬರ್ತೀನಿ ಮದ್ಯಾನಕ್ಕೆ ಒಳ್ಳೆ ಅಡಿಗಿ ಮಾಡ್ ಹಾಕು . ಬಾಡುಟ ಅಂದ್ರ ನನ್ ಗೆಳೆಯರಿಗೆ ಬಾಳ್ ಚೊಲೊ ಹಿಡುಸ್ತದ'  , ಎನ್ನುತ್ತಾ ಹೊರಹೋದ ಗಂಡನನ್ನ ಮರೆಯಾಗುವವರೆಗೂ ಕಿಟಕಿಯ ಸಂದಿಯಿಂದ ನೋಡುತ್ತಿದ್ದ ಪ್ರತಿಮಳ ನೆನಪು ಅಮ್ಮ ಹೊಟ್ಟೆ ತುಂಬಾ ಮಾಡಿ ಹಾಕುತ್ತಿದ್ದ ಸೊಪ್ಪಿನ ಸಾರನ್ನು ನೆನೆಸಿ ಕಣ್ಣೀರು ಸುರಿಸಿದವು !!!.

ಅರ್ಪಿತಾ ಹರ್ಷ 
ಲಂಡನ್ 

Thursday, 29 March 2012

ಕಥೆ -ಕೂಸಿಗೆ ಒಂದು ಮದುವೆ ಮಾಡಕ್ಕು(ಹವ್ಯಕ ಭಾಷೆ)

ಒಪ್ಪನ ಒಪ್ಪಂಗೋ ವಿಷು ವಿಶೇಷ ಸ್ಪರ್ಧೆಗಾಗಿ ಬರೆದಿದ್ದು  


ಹವ್ಯಕರಲ್ಲಿ ಹೆಣ್ಣು ಮಕ್ಕಳ ಸಂಖ್ಯೆ ಕಡಿಮೆ ಆಗ್ತಾ ಇದ್ದು ಗಂಡು ಮಕ್ಕಳು ಪಾಪ ಹೆಣ್ಣಿಗಾಗಿ ಪರದಾಡಕ್ಕು ಆ ಸ್ಥಿತಿಗೆ ಬಂದು ಕೂತಿದ್ದು .ಊರ ಕಡೆ ಇಪ್ಪವಕ್ಕಂತು ಮದುವೆ ಕನಸೇ ಸೈ . ಹಂಗೆ ಇಲ್ನೋಡಿ ಶಾಂತಿ ಅಪ್ಪ ಶಾಂತಿಗೆ ಮದುವೆ ಮಾಡುಲೆ ಹೊರಟಿದ್ದ ಅವಂಗೆ ಬೇಕಾದ ಗಂಡು ಸಿಕ್ಕಿದ್ನ ನೋಡನ .
ರಾಮಣ್ಣ : ಕೂಸಿಗೆ 25 ವರ್ಷ ಆತು ಇನ್ನು ಮಾಡುವೆ ಮಾಡುಲೆ ಅಡ್ಡಿಲ್ಲೆ ಈಗಿನ ಕೂಸುಗ ಸಕತ್ ಚುರುಕಿರ್ತ ಯರುನ್ನ್ ತೋರ್ಸಿರು ಒಪ್ಪದು ಕಷ್ಟನೆಯ. ಹಂಗಾಗಿ ಈಗ್ಲಿಂದ ಹುಡುಕಿರೆ ಒಂದು ವರ್ಷಕ್ಕದ್ರು ಒಂದು ಸರಿ ಹೊಕ್ಕು ಹೇಳಿ ಯೆನಂಬೆ?.
ಕಮಲ: ಹಂಗೆ ಪಕ್ಕದ್ಮನೆ ಪದ್ದಕ್ಕಂಗೆ ಜನ ಬಳಕೆ ಜಾಸ್ತಿ ಸ್ವಲ್ಪ ಹೇಳಿತ್ತ್ರೆ ಚೊಲೋ ಗಂಡು ಹುಡುಕಿಕೊಡ್ತು ಅವಳಿಗೂ ಒಂದು ಮಾತು ಹೇಳಿ ಮತ್ತೆ ಜಾಸ್ತಿ ಪ್ರಚಾರ ಬ್ಯಾಡ ಗುಟ್ಟಾಗಿ ಇರ್ಲಿ ಯಲ್ಲವಕ್ಕು ಗೊತ್ತಾದ್ರೆ ತಪ್ಪಿಸಕ್ಕೆ ಕಾಯ್ತಾ ಇರ್ತ ಜನ ಮತ್ತೆ ಈಗಲೇ ಹೇಳಿದ್ದಿ ನಿನ್ಗಕ್ಕಂತು ಯಂತು ಗೊತ್ತಾಗ್ತಿಲ್ಲೆ ಎಲ್ಲಕಡೆ ಹೋಗಿ ಅದೇ ಹೇಳ್ತಾ ಕುಂತ್ಗಬುಡ್ತಿ.
ರಾಮಣ್ಣ: ಒಹ್ ನಿಂಗೊಂದೆ ಎಲ್ಲ ಗೊತಗದು ಅಲ್ದಾ ಯಂಗು ಗೊತ್ತಿದ್ದೂ ಹೆಂಗೆ ಮಾತದಕ್ಕು ಹೇಳಿ ನೋಡ್ತಿರು ಕೂಸಿಗೆ ಒಳ್ಳೆ ಗಂಡು ಹುಡುಕಿ ಧಾಮ್ಧೂಮ್ ಹೇಳಿ ಮದುವೆ ಮಾಡ್ತಿ .
ಹಂಗಂತ ಹೆಂಡತಿ ಹತ್ರ ಹೇಳಿ ಪಕ್ಕದ್ಮನೆ ಪದ್ದಕ್ಕನ ಮನೆಗೆ ಹೋಗಿ ಜಗಲಿಲಿ ಕುಂತ್ಕಂಡ.
ಪದ್ದಕ್ಕ : ಒಹ್ ರಾಮಣ್ಣ ಮತ್ತೆನ ಸಮಾಚಾರ ತಿಂಡಿ ಆತ? .ಬೆಳಿಗ್ಗೆ ಬೆಳಿಗ್ಗೆ ಹೊರಟಿದ್ದೆ ಅಂದ್ರೆ ಎಂತೋ ಸಮಾಚಾರ ?
ರಾಮಣ್ಣ: ಯೇನಿಲ್ಲೇ ಪದ್ದಕ್ಕ ನಮ್ಮನೆ ಕೂಸಿಗೆ ಈ ವರ್ಷ ಒಂದು ಮದುವೆ ಮಾಡಿ ಮುಗಿಸನ ಹೇಳಿ ನಾನು ಕಮಲ ತೀರ್ಮಾನ ಮಾಡಿದ್ಯ .
ಪದ್ದಕ್ಕ : ಒಹ್ ಹಂಗ ಸಮಾಚಾರ, ಒಳ್ಳೆ ಯೋಚನೆ ಮಾಡಿದ್ದಿ ನಿಂಗ ಈಗೆಲ್ಲ ಹೆಣ್ ಮಕ್ಕಳಿಗೆ ಡಿಮ್ಯಾಂಡ್ ಜಾಸ್ತಿ ನಿಂಗೆ ಎಂತ ಅಳಿಯ ಬೇಕು ಹೇಳು ಮಾರಾಯ ನಾ ಮಾಡಿಸ್ಕೊಡ್ತಿ ನಿಂಗೆ .
ರಾಮಣ್ಣ : ಅಷ್ಟಲ್ದೆ ನಿನ್ ಹತ್ರ ಬತ್ತಿದ್ನ ನಾ ಮತ್ತೆ ನನ್ಗೊತಿದು ನಿಂಗ್ ಒಳ್ಳೆ ಜನರ ಬಳಕೆ ಇದ್ದು ನಿನ್ ಹತ್ರ ಹೇಳಿದ್ಮೇಲೆ ಮುಗುತ್ತು ಕಥೆ !! ಆದ ಹಂಗೆಯ ಮದುವೆ . ಮತ್ತೆ ಯಾರಿಗೂ ಜಾಸ್ತಿ ಪ್ರಚಾರ ಮಾಡುದ್ ಬ್ಯಾಡ ಮತ್ತೆ ಗುಟ್ಟಾಗಿ ಇರ್ಲಿ .
ಪದ್ದಕ್ಕ : ಅಯ್ಯೋ ನಿ ಒಳ್ಳೆ ಮಾರಾಯ ಗುಟ್ಟಾಗಿ ಇಟ್ರೆ ಗೊತಗದು ಹೆಂಗೆ ಕುಸಿದ್ದು ಹೇಳಿ ನಿ ಏನ್ ಯೋಚನೆ ಮಾಡಡ ನಿಂಗೆ ಯಾವತರ ಗಂಡು ಬೇಕು ಹೇಳು ಮಾರಾಯ .
ರಾಮಣ್ಣ : ನನ್ಗಕ್ಕೆನ್ ಜಾಸ್ತಿ ಆಸೆ ಇಲ್ಲೆ ನೋಡು ಹುಡುಗ ಚೊಲೋ ಕೆಲ್ಸದಲ್ಲಿರವು, ಡಾಕ್ಟರ್ ಇಂಜಿನಿಯರ್ ಅಗಿರಕ್ಕು, ಜೊತೆಗೆ ಮನೆಲು ಸ್ವಲ್ಪ ಇರವು ,ಒಳ್ಳೆ ಹುಡುಗ ಅಗಕ್ಕು ಅತ್ತೆ ಮಾವ ಹೇಳಿ ಇಲ್ದಿದ್ರೆ ಚೊಲೋದು , ಜೊತೆಗೆ ಮನೆ ,ಕಾರು ಅಂತು ಬಿಡು ಮಾರಾಯ್ತಿ ಇದ್ದೆ ಇರ್ತು ಅದಿಲ್ದಿದ್ರೆ ಯೆಲ್ಲಾಗ್ತೆ ಮಾರಾಯ್ತಿ ಅದು ಅಲ್ದೆ ನಮ್ಮನೆ ಕೂಸು ಡಿಗ್ರಿ ಓದಿದ್ದು ,ಚೊಲೋ ಇದ್ದು ಬೇರೆ ನೋಡಕ್ಕೆ, ರಾಶಿ ಒಳ್ಳೆವ್ಳು ಯಾರ ಹತ್ರನು ಜಾಸ್ತಿ ಮತಡ್ತಿಲ್ಲೇ ಕತೆ ಹೊಡಿತಿಲ್ಲೆ ತಾನತು ತನ್ನ ಕೆಲಸ ಆತು , ಬೆಂಗಳೂರಲ್ಲಿ ಕೆಲಸ ಸಿಕ್ಕಿತ್ತು ಅದುಕ್ಕೆ ನನ್ಗನೆ ಬ್ಯಾಡ ಹೇಳಿದ್ಯ ನೋಡನ ಮದುವೆ ಅದಮೇಲೆ ಹೇಳಿ .
ಪದ್ದಕ್ಕ : ಒಹ್ ಹಂಗ ಅಲ್ಲ ನಂಗಲ ನೆಂಟರ ಮಾಣಿ ಒಂದು ಇದ್ದಿದ್ದ ಅವ್ನು ಡಿಗ್ರೀ ಮಾಡಿದ್ದ ಒಳ್ಳೆಯವ ಪಾಪ ಮನೆಲು ರಾಶಿ ಇದ್ದು ತೋಟ ಗದ್ದೆ ಹೇಳಿ ಅವಂಗೆ ಕೇಳನ ಮಾಡಿದಿದ್ದಿ...
ರಾಮಣ್ಣ : ಒಹ್ ನೀ ಒಳ್ಳೆ ಚನಗಿದ್ದೆ ಮಾರಾಯ್ತಿ ಒಳ್ಳೆ ಜನ , ನಂಗ ಹಂಗೆಲ್ಲ ಮನೆಲಿಪ್ಪವುಕ್ಕೆ ಕೊಡ್ತ್ವಿಲ್ಲೆ ಏನಿದ್ರೂ ಇಂಜಿನಿಯರ್ ಆಗಿರವು ನಮ್ಮನೆ ಕೂಸೇನು ಕಮ್ಮಿನ ? ಡಿಗ್ರೀ ಮದ್ಕೈಂದು . ನಮ್ಮನೆವ್ಳು ಅಂದ ನಾ ನಿಂಗೆ ಹೇಳಲೇ ಬಂದಿ ನೋಡು ನಾನೆ ನೋಡಿ ಮಾಡ್ತಿ ನೋಡ್ತಿರು ನಮ್ಮನೆ ಹುಡುಗಿ ಮಾಡುವೆನ ಹೆಂಗೆ ಹೇಳಿ ನೋಡ್ತಿರು .
ರಾಶಿ ಸಿಟ್ಟು ಬಂದು ರಾಮಣ್ಣ ಅಲ್ಲಿಂದ ಎದ್ದು ಮನೆಗೆ ಬಂದವನೇ ಜಾತಕ ತಗಂಡು ಹೊರಟ ಏನಾದ್ರು ಮಾಡಿ ೧ ತಿಂಗಳೊಳಗೆ ಮಾಡಿ ತೋರುಸ್ತಿ ಮದುವೆ ನ ಹೇಳಿ .
ಒಂದು ತಿಂಗಳಲ್ಲ ೬ ತಿಂಗಳಾತು ಎಳ್ಳು ಜಾತಕ ಹೊಂದಿದ್ದಿಲ್ಲೆ ಒಂದೆರಡು ಕಡೆ ಹಳ್ಳಿಲಿ ಇಪ್ಪವು ಕೇಳಿದ ಇವ ಕೊಡಲ್ಲೆ 'ಇಲ್ಲೆ ನಂಗ ಹಳ್ಳಿ ಮನೆಯವುಕ್ಕೆ ಕೊಡದಿಲ್ಲೆ ಹೇಳಿ ತೀರ್ಮಾನ ಮಾಡಿದ್ಯ ನನ್ಗಕ್ಕೆನಿದ್ರು ಇಂಜಿನಿಯರ್ ಅಳಿಯನೇ ಬೇಕು ' ಹೇಳಿದ ರಾಮಣ್ಣ .
ಮತ್ತೊಂದ್ ದಿನ ಪದ್ದಕ್ಕ ಅಲ್ದಾ ರಾಮಣ್ಣ ಎಲ್ಲಾರು ಆತನ ನಿಮ್ಮನೆ ಕೂಸಿಗೆ ? ಕೇಳ್ಚು .
ರಾಮಣ್ಣ : ಹ್ಮ್ಮ್ ಸುಮಾರು ಕಡೆ ಆಗಿತ್ತು ನನ್ಗನೆ ಬೇಡ ಅಂದ್ಯ ಇನ್ನು ಬೇರೆ ಒಳ್ಳೆ ಕಡೆ ಸಿಗ್ತು ಹೇಳಿ ..ಒಂದು ಸುಳ್ಳು ಹೇಳ್ದ
ಹಂಗೆ ಸ್ವಲ್ಪ ದಿನ ಆತು ಒಂದು ದಿನ ಶಾಂತಿ ಹೊರಗಡೆ ಹೋಗಿ ಬತ್ತಿ ಹೇಳಿ ಹೋದವಳು ವಾಪಸ್ ಬರಲೇ ಇಲ್ಲೆ . ಬೆಳಿಗ್ಗೆ ಹೋದವಳು ರಾತ್ರಿ ಆದರು ಬರ್ಲೆ ಅಂದ್ರೆ ಎಲ್ಲಿ ಹೋಗಿಕ್ಕು ಗಂಡ ಹೆಂಡತಿ ಇಬ್ರಿಗೂ ಸ್ವಲ್ಪ ಗಾಬರಿ ಆತು . ರಾಮಣ್ಣ ರಾತ್ರಿನೇ ಹೊರಟ ಹುಡುಕಲೆ. ೨ ದಿನ ಆದರು ಯಂತು ಸುದ್ದಿ ಸಿಗಲ್ಲೆ. ಕೊನೆಗೆ ಸುದ್ದಿ ಸಿಕ್ಚು ಕೊನೆ ಕೊಯ್ಯ ರಮೇಶ ನು ಕಾಣೆ ಅಯ್ದ್ನಡ ರಾಮಣ್ಣನ ಮಗಳು ಶಾಂತಿ ರಮೇಶ ಇಬ್ರು ಓಡೋಗಿ ಮದುವೆ ಮಾಡಿಕೈಂದವಡ ಹೇಳಿ .
ಪದ್ದಕ್ಕ : ಅಯ್ಯೋ ಅವತ್ತೇ ಹೇಳಿದಿ ನಮ್ಮ ಹವ್ಯಕರೇ ಮನೆಲಿಪ್ಪವು ರಾಶಿ ಜನ ಇದ್ದ ಎಲ್ಲಾದರು ಒಳ್ಳೆ ಕಡೆ ಕೊಡಿ ಹೇಳಿ ಇಲ್ಲೆ ಇನ್ಜಿನಿಯರೇ ಅಗಕ್ಕು ಹೇಳಿದ ಈಗ ನೋಡು ಯಂತ ಅಳಿಯ ಸಿಕ್ಕ ಹೇಳಿ .


ಅರ್ಪಿತಾ ಹರ್ಷ
ಲಂಡನ್

Not publishe

Monday, 27 February 2012

ಉತ್ತರ

ಅದೊಂದು ಸುಂದರ ಸಂಜೆ , ಕಡಲ ತೀರದಲ್ಲಿ ಮರಳ ನೆಲ ಕೆದಕುತ್ತ ಮುಳುಗುತ್ತಿರುವ ಸೂರ್ಯನನ್ನು ನೋಡಿ ಬದುಕಿನ ಮುಂಬರುವ ದಿನಗಳ ಬಗ್ಗೆ ಕನಸು ಕಾಣುತ್ತಾ ಹಿಂದೆ ನಡೆದುದರ ಬಗ್ಗೆ ಸಣ್ಣದೊಂದು ನಿತ್ತುಸಿರುಡುತ್ತ ಕುಳಿತಿದ್ದಳು ಮನಸ್ವಿ . ಏಕಾಂತದಲ್ಲಿ ಕುಳಿತು ಯೋಚಿಸುವ ಅವಕಾಶ ತುಂಬಾ ಸಮಯದ ಬಳಿಕ ಸಿಕ್ಕಿತ್ತು ಆಕೆಗೆ ಎಷ್ಟೊಂದು ಪ್ರಶ್ನೆ ಗಳು ಈ ಜೀವನದಲ್ಲಿ ಎಲ್ಲವೂ ಬರಿ ಪ್ರಶ್ನೆಗಳಾಗಿಯೇ ಉಳಿದಿವೆ ಎಂದು ಇವಕ್ಕೆಲ್ಲ ಉತ್ತರ ?
ಕಾಲೇಜಿನಲ್ಲಿ ಕಲೆಯ ಬಗ್ಗೆ ಆಸಕ್ತಿ ಇದ್ದುದರಿಂದ ಕಲೆಯನ್ನೇ ಮುಂದುವರೆಸಿ ಒಳ್ಳೆಯ ಕೆಲಸವನ್ನು ಹುಡುಕಿಕೊಂಡು ಬದುಕುವ ಆಸೆ ಹೊತ್ತ ಸಂದರ್ಭವದು ತಿಳಿದೋ ತಿಳಿಯದೆಯೋ ಪ್ರೀತಿ ಎಂಬ ಮಾಯೆ ಬಂದು ಆವರಿಸಿಕೊಂಡು ಬಿಟ್ಟಿತು. ಆಕಾಶ್ ಕೂಡ ಕಲೆಗೆ ಬೆಲೆ ಕೊಡುವ ಮನಸ್ಸಿಗೆ ಮೌಲ್ಯ ನೀಡುವ ಹುಡುಗ ಇಬ್ಬರ ಆಕರ್ಷಣೆ ಆಸೆ ಆಕಾಂಕ್ಷೆ ಗಳು ಒಂದೇ ಆಗಿರುವಾಗ ಬೇಡ ವೆನ್ನಲು ಕಾರಣಗಳೇ ಸಿಗದಾಯಿತು .ದಿನಕಳೆದಂತೆ ಕಲೆಯ ಬಗ್ಗೆ ಇದ್ದ ಆಸಕ್ತಿ ಕಡಿಮೆ ಆಗುತ್ತಾ ಬಂದಿತ್ತು ಪ್ರೀತಿಯ ಪರಾಕಾಷ್ಟೆಯಲ್ಲಿ ಮುಳುಗಿದ ಇಬ್ಬರಿಗೂ ಎಚ್ಚರಿಸಿದ್ದು ಬದುಕಿನ ಅತಿ ಮುಖ್ಯ ನಿರ್ಧಾರ ಕೈಗೊಳ್ಳಬೇಕಾದ ಹಂತ ತಲುಪಿದಾಗ ,ಅದೊಂದು ದಿನ ಬೆಳಗ್ಗೆ ಎಂದಿನಂತೆ ಆಫಿಸ್ ಹೊರಟ ಮಗಳನ್ನು ತಡೆದು ನಿಲ್ಲಿಸಿದ್ದು ಶಾಮ ರಾಯರು . ಮಗಳು ಇತ್ತೀಚಿಗೆ ಮನೆಗೆ ಬರುವುದು ತಡವಾಗಿದ್ದನ್ನು ಗಮನಿಸಿದ ಅವರು ಇನ್ನು ಮಗಳಿಗೊಂದು ಮಾಡುವೆ ಮಾಡಿ ಬಿಡಬೇಕು ಎಂಬ ನಿರ್ಧಾರಕ್ಕೆ ಬಂದಾಗಿತ್ತು .
ವಿಷಯವನ್ನು ತಿಳಿದ ಆಕಾಶ್ ಗೆ ಒಂದು ಕ್ಷಣ ದಿಕ್ಕೇ ತೋಚದಂತಾಯಿತು ಎಲ್ಲದಕ್ಕೂ ಒಂದು ಮಾರ್ಗ ಇದೆ 'ನೀನೆ ಮನೆಗೆ ಬಂದು ವಿಷಯ ತಿಳಿಸಿ ನೋಡು' ಎಂದು ಮನಸ್ವಿ ತಿಳಿಸಿದ್ದಳು . ಇದು ಸಾಧ್ಯವಾಗದ ಕೆಲಸ ಇಬ್ಬರಮನೆಯಲ್ಲೂ ಒಪ್ಪುವ ಯಾವುದೇ ಲಕ್ಷಣಗಳಿಲ್ಲ ಎಂದು ಯೋಚಿಸಿದ ಆಕಾಶ್ ಗಟ್ಟಿಮನಸ್ಸು ಮಾಡಿ ಮನೆ ಬಿಟ್ಟು ಬಂದು ಬಿಡುವಂತೆ ಮನಸ್ವಿಯಲ್ಲಿ ಕೇಳಿಕೊಂಡ . ಬದುಕಿನ ಅತಿ ಮುಖ್ಯ ಹಂತವಿದು ಇಲ್ಲಿ ತಪ್ಪಿ ನಡೆದರೆ ಬದುಕು ನರಕ ಯೋಚನೆ ಯಲ್ಲಿ ಮುಳುಗಿದವಳಿಗೆ ಉತ್ತರ ಶೂನ್ಯ .ಸಾಕಿ ಸಲಹಿದ ಅಪ್ಪ ಅಮ್ಮ ನ ಬಿಟ್ಟು ಮಾತನಾಡಲು ಹಿಂಜರಿಯುವ ಹುಡುಗನ ಹಿಂದೊಡಿದರೆ ಮುಂದೆ ಕಷ್ಟ ಕಾಲ ದಲ್ಲಿ ಜೊತೆ ನೀಡಲು ಯಾರು ಇಲ್ಲವೆಂಬ ಅರಿವು ಒಂದು ಮನಸ್ಸು ಸೂಚಿಸಿದರೆ ಇಷ್ಟು ದಿನ ಪ್ರೀತಿ ಮಾಡಿ ಒಟ್ಟಿಗೆ ಬಾಳುವ ಪಣ ತೊಟ್ಟ ಹುಡುಗನನ್ನು ಬಿಡುವ ಮನಸ್ಸು ಮಾಡುವದಾದರು ಹೇಗೆ ಎಂಬ ಪ್ರಶ್ನೆ ಇನ್ನೊಂದೆಡೆ.
ಉತ್ತರವೇ ಸಿಗದ ಆ ದಿನಗಳಲ್ಲಿ ಉತ್ತರ ಹುಡುಕುವುದರೊಳಗೆ ಮನಸ್ವಿಗೆ ಶಾಮರಾಯರು ಮದುವೆ ದಿನವನ್ನು ನಿಶ್ಚಯಿಸಿ ಆಗಿತ್ತು .ಆಕಾಶ್ ನನ್ನು ಒಮ್ಮೆ ಭೇಟಿಯಾಗುವ ಮನಸ್ಸಿತ್ತಾದರು ಹೇಗೆ ತಾನೇ ಮುಖ ತೋರಿಸಲಿ ಎಂದು ಅವನನ್ನು ನೋಡುವ ಸಾಹಸ ಮಾಡಲಿಲ್ಲ.ಒಂದು ತಿಂಗಳೊಳಗೆ ಮದುವೆಯ ಶಾಸ್ತ್ರಗಳೆಲ್ಲ ಮುಗಿದು ಹೋಗಿದ್ದವು . ವಸಂತ ಮನಸ್ವಿಯನ್ನು ಮಗುವಿನಂತೆ ನೋಡಿಕೊಲ್ಲತೊಡಗಿದ ಕಳೆದ ದಿನಗಳ ಮೆಲುಕು ಹಾಕಲು ಸಮಯ ಸಿಗದಾಯಿತು . ಆಗೊಮ್ಮೆ ಈಗೊಮ್ಮೆ ಮನಸ್ಸಿನಲ್ಲಿ ಬಂದು ಹೋಗುವ ಆಕಾಶ್ ದಿನಕಳೆದಂತೆ ಮರೆತು ಹೋದ.ಸುಮಾರು ಐದಾರು ವರುಷಗಳ ನಂತರ ಅದೇ ಕಡಲ ತೀರದಲ್ಲಿ ಕುಳಿತಾಗ ಮನಸ್ವಿಗೆ ಹಿಂದಿನ ನೆನಪು ಕಾಡಿತ್ತು ಈಗ ಆಕಾಶ್ ಹೇಗಿರಬಹುದು? ಮದುವೆ ಆಗಿರಬಹುದ ಎಂಬೆಲ್ಲ ಪ್ರಶ್ನೆ ಗಳು ಪ್ರಶ್ನೆ ಯಾಗಿಯೇ ಕಾಡುತಿತ್ತು ಉತ್ತರ ತಿಳಿಯುವ ಕುತೂಹಲ ಇದ್ದರು ಆ ಸಾಹಸಕ್ಕೆ ಕೈ ಹಾಕಲಿಲ್ಲ ಮನಸ್ವಿ .
ಮುಳುಗುತ್ತಿರುವ ಸೂರ್ಯನನ್ನೇ ನೋಡುತ್ತಾ ಯೋಚಿಸುತ್ತಿದ್ದವಳಿಗೆ 'ಅಮ್ಮಾ' ಎಂದು ಓಡಿ ಬರುತ್ತಿರುವ ಮಗನನ್ನು ನೋಡುತ್ತಾ ಯೋಚನಾ ಲಹರಿಯಿಂದ ಹೊರಬಂದಳು ಮಗನ ಹಿಂದೆಯೇ ಓಡಿ ಬಂದ ವಸಂತ ಆಕಾಶ್ ನಿದಾನ ಓಡಬೇಡ ಎನ್ನುತ್ತಿದ್ದ .



ಅರ್ಪಿತಾ


ಈ ನನ್ನ ಲೇಖನವು ಈ ಕನಸುವಿನಲ್ಲಿ ಪ್ರಕಟಗೊಂಡಿದೆ <"http://www.ekanasu.com/2012/02/blog-post_28.html">

Friday, 6 January 2012

ಭ್ರಮೆ

'ಅವಳು ಮೊದಲಿನಿಂದ ಹಾಗೆ ಸ್ವಲ್ಪ ಮಾತು ಕಡಿಮೇನೆ ' ಅಮ್ಮ ಮನೆಗೆ ನೋಡಲು ಬಂದ ಹುಡುಗನ ಕಡೆಯವರಿಗೆ ವರದಿ ನೀಡಿದ್ದಳು. ಹುಡುಗನ ಕಡೆಯವರು ಬೇರೆನಾದರು ಅಂದರೆ ಇವಳು ಎಲ್ಲಿ ತಪ್ಪಿ ಹೋಗುತ್ತಾಳೋ ಎಂಬ ಆತಂಕದಿಂದ ನಮಗೂ ಅಂತವರೇ ಬೇಕು ನೋಡಿ ಈಗಿನ ಕಾಲದ ಹುಡುಗೀರು ಎಲ್ಲಿ ಈ ತರದವರು ಸಿಗುತ್ತಾರೆ ಭಯಂಕರ ಜೋರಿರುತ್ತಾರೆ ಮಾತೆತ್ತಿದರೆ ಉತ್ತರ ರೆಡಿ ಇಂತವರನ್ನೇ ನಾವು ಹುಡುಕುತ್ತಿದ್ವಿ ನಮ್ಮ ಕಡೆಯಿಂದೆನು ತೊಂದರೆ ಇಲ್ಲ ನಿಮ್ಮ ಉತ್ತರ ಆದಷ್ಟು ಬೇಗ ತಿಳಿಸಿಬಿಡಿ ಎಂದು ತಟ್ಟೆ ತುಂಬಾ ಕೊಟ್ಟ ಸಿಹಿ ತಿಂದು ಜಾಗ ಕಾಲಿಮಾಡಿದ್ದರು. ಅವರು ಅತ್ತ ಹೋಗುತ್ತಿದಂತೆ ಇತ್ತ ಸುಮಾ ಅಪ್ಪ ಅಮ್ಮ ಇಬ್ಬರನ್ನು ತರಾಟೆಗೆ ತೆಗೆದುಕೊಂಡಳು ' ಹಳ್ಳಿ ಮನೆಯಲ್ಲಿ ಹೋಗಿ ಕುಳಿತು ಮಾಡುವುದೆಂತ ' ನನಗೆ ಈ ಹುಡುಗ ಬೇಡ ಅಂದ್ರೆ ಬೇಡ ಅಷ್ಟೇ , ಇದರ ಮೇಲೆ ನೀವು ಒತ್ತಾಯ ಮಾಡಿದರೆ ನಾನು ಕೆರೇನೋ ಬಾವಿನೋ ನೋಡಿಕೊಳ್ತೀನಿ . ಅಪ್ಪ ಅಮ್ಮ ನಿಗೂ ಮಗಳು ಒಳ್ಳೆ ಮನೆ ಸೇರಲಿ ಎಂಬ ಆಸೆ ಪೇಟೆ ಹುಡುಗರಿಗೆ ಕೊಟ್ಟರೆ ಹೇಗೆ ನೋಡಿಕೊಳ್ಳುತ್ತಾರೋ ಎಂಬ ಆತಂಕ ಕಮಲಮ್ಮನಿಗೆ ಒಳಗೊಳಗೇ ಮಗಳು ಕೈತಪ್ಪಿ ಹೋದರೆ ಎಂಬ ಆತಂಕ ಸುಮಾ ಇಲ್ಲದ ಸಮಯ ನೋಡಿ 'ಅವಳ ಇಷ್ಟದಂತೆ ಮಾಡಿಬಿಡೋಣ ಬಿಡಿ ಇನ್ನು ಹಳ್ಳಿ ಇರೋ ಹುಡುಗರ ಜಾತಕ ತಗೋಬೇಡಿ ನಗರದ ಕಡೆ ಒಳ್ಳೆ ಕೆಲಸದಲ್ಲಿರೋ ಸಾಫ್ಟ್ವೇರ್ ಇಂಜಿನಿಯರ್ ಆದ್ರೆ ಅವ್ಳು ಒಪ್ತಾಳೆ ಅಂತವರಿಗೆ ಜಾತಕ ಕೊಟ್ಟು ನೋಡಿ ' ಎಂದು ಶ್ರೀನಿವಾಸ ರಾಯರಲ್ಲಿ ಹೇಳಿದಳು . ನೀ ಹೇಳೋದು ಸರಿನೆ ಇದೆ ನೋಡು ನಾನು ನಾಲ್ಕು ಕಡೆ ವಿಚಾರಿಸಿ ನೋಡ್ತೀನಿ ಅಂದು ಹೊರಹೊರಟರು .
ಸುಮಾರು ಒಂದು ತಿಂಗಳ ಹುಡುಕಾಟದಲ್ಲಿ ಐದಾರು ಕಡೆಯಿಂದ ಜಾತಕ ಹೊಂದಾಣಿಕೆ ಆಗುವ ಉತ್ತರ ಬಂದಿತ್ತು .ಎಲ್ಲರಿಗಿಂತ ಉತ್ತಮ ಎನಿಸುನ ಒಂದು ಹುಡುಗನನ್ನು ಆರಿಸಿ ಮನೆಗೆ ಬಂದು ಹುಡುಗಿ ನೋಡಿ ಹೋಗುವಂತೆ ತಿಳಿಸಿದ್ದು ಆಯಿತು . ಸುಮಳಿಗೂ ಒಳಗೊಳಗೇ ಸಂತೋಷ ಅಂತು ತಾನಂದುಕೊಂಡಂತೆ ತಾನು ಪೇಟೆ ಸೇರುವ ದಿನ ದೂರವಿರಲಿಕ್ಕಿಲ್ಲ್ಲ ಎಂದು .ಸುಮಾ ನೋಡಲು ಸುಂದರ ವಾಗ್ಗಿಯೇ ಇದ್ದದ್ದರಿಂದ ಹುಡುಗ ಶ್ರೀಧರ ಒಪ್ಪಿಗೆ ನೀಡಿಯೂ ಆಯಿತು . ಇನ್ನೊಂದು ತಿಂಗಳಲ್ಲಿ ಮದುವೆ ಅದ್ಧೂರಿಯಿಂದ ಮುಗಿದು ಕಮಲಮ್ಮ ಮತ್ತು ಶ್ರೀನಿವಾಸರಾಯ ರಿಗೆ ಮನಸ್ಸಿಗೆ ನೆಮ್ಮದಿ ಅಂತು ಸುಮಳನ್ನು ಅವಳಿಚ್ಚೆಯಂತೆ ಪೇಟೆ ಹುಡುಗನಿಗೆ ಕೊಟ್ಟು ಮದುವೆ ಮಾಡಿದ್ದಾಯಿತು ಎಂದು .
ಹೊಸ ಮನೆ ಹೊಸ ಜಾಗ ನಗರದ ಜೀವನ ಕನಸಿನಂತೆ ಸುಂದರ ಸುಮಾ ಮನಸ್ಸಿನಲ್ಲೇ ಸಂಭ್ರಮಿಸಿದ್ದಳು . ಶ್ರೀಧರ ಮನೆ ಸೇರುತ್ತಿದ್ದಂತೆ ಫ್ರೆಂಡ್ಸ್ ಆಫೀಸ್ ಎಂದು ಹೊರಹೊರಟ. ಸುಮಾಳಿಗೆ ಏನು ಅನಿಸಲಿಲ್ಲ . ದಿನಕಳೆದಂತೆ ಶ್ರೀಧರನ ದಿನಚರಿ ಇದೆ ಎಂಬುದು ಆಕೆಗೂ ತಿಳಿಯಿತು ಕೇಳಿದರೆ 'ಸಿಗರೆಟ್ ಕುಡಿತ ಇವೆಲ್ಲ ಇಲ್ಲಿ ಎಲ್ಲರೂ ಮಾಡುತ್ತಾರೆ ನೀನು ಹಳ್ಳಿ ಹುಡುಗಿ ನಿನಗಿದೆಲ್ಲ ತಿಳಿಯಲ್ಲ ಇದು ಈಗಿನ ಟ್ರೆಂಡ್'ಎಂದ . ದಿನಕಳೆದಂತೆ ಶ್ರೀಧರ ೨-೩ ದಿನಗಳವರೆಗೆ ಮನೆಗೆ ಬರುವುದೇ ಖಾಯಂ ಆಯಿತು.ನಗರದ ಜೀವನ ಸುಂದರ ಪೇಟೆ ಹುಡುಗನೇ ಬೇಕು ಎಂದು ತಾನೇ ಆರಿಸಿಕೊಂಡು ತನ್ನ ಜೀವನ ತಾನೇ ಹಾಳು ಮಾಡಿಕೊಂಡ ಸುಮಾಳಿಗೆ ತನ್ನ ನೋವನ್ನು ಯಾರೊಂದಿಗೂ ಹಂಚಿಕೊಳ್ಳುವ ಅವಕಾಶವು ಇಲ್ಲದಂತಾಗಿತ್ತು .ಪೇಟೆ ಜೀವನ ಅದ್ಭುತ ಎಂಬ ಭ್ರಮೆ ಸುಳ್ಳಾಗಿತ್ತು

ಈ ಕಥೆ ಈಕನಸುವಿನಲ್ಲಿ ಪ್ರಕಟ ಗೊಂಡಿದೆ http://www.ekanasu.com/2012/01/blog-post_07.html