Showing posts with label ಈ ಕನಸು ಮ್ಯಾಗಜಿನ್ ನಲ್ಲಿ ಪ್ರಕಟಗೊಂಡ ಲೇಖನಗಳು. Show all posts
Showing posts with label ಈ ಕನಸು ಮ್ಯಾಗಜಿನ್ ನಲ್ಲಿ ಪ್ರಕಟಗೊಂಡ ಲೇಖನಗಳು. Show all posts

Tuesday, 11 December 2012

ಬದುಕು

ಈ ನನ್ನ ಕವನವು ಈ ಕನಸು ವಿನಲ್ಲಿ ಪ್ರಕಟಗೊಂಡಿದೆ <a>"http://www.ekanasu.com/2012/12/blog-post_27.html" <a/>

ಸೂರ್ಯ ಮುಳುಗುವ ಹೊತ್ತು 
ಹಕ್ಕಿಗಳು ಹೊರಟಿವೆ ಮನೆಯ ಕಡೆಗೆ 
ಸಂಜೆ ಬಾನಲಿ ಸೂರ್ಯ 
ಅಣಕಿಸುತಿರುವ  ನನ್ನ ನೋಡಿ 
ನಿನ್ನದೇನಿದು  ಬದುಕು ಬರೀ ರಾಡಿ !

ಹಾರಾಡುವ ಹಕ್ಕಿಗಳಿಗೋ 
ಸ್ವಚ್ಚಂದದ  ಬದುಕು 
ಮಾನವ ನ ಬದುಕೋ 
ಬರೀ ಒಡಕು ಒಡಕು !

ಹಾರಾಡ ಬೇಕಿದೆ ಹಕ್ಕಿಯಂತೆ 
ಇಲ್ಲದಿರೆ ಮನದ  ತುಂಬಾ ಬರೀ ಬೇಡದಾ  ಚಿಂತೆ 
ಕಲಿಯಬೇಕಿದೆ ಹಕ್ಕಿಗಳ ನೋಡಿ 
ಬದುಕೆಂಬುದು ಒಂದು ಮೋಡಿ !

ಮುಳುಗುತಿರುವನೇ  ಸೂರ್ಯ 
ಮುಪ್ಪಿನ ಸುಳಿವು ನೀಡಿ ?
ಮುಗಿದುಹೋಯಿತೇ ಬದುಕು 
ನಾಲ್ಕು ದಿನಗಳು  ಕೂಡಿ ?






ಅರ್ಪಿತಾ ರಾವ್ 



Monday, 10 December 2012

ಬದಲಾಗದಿರು

ಈ ನನ್ನ ಕವನವು ಈ ಕನಸುವಿನಲ್ಲಿ ಪ್ರಕಟಗೊಂಡಿದೆ  http://www.ekanasu.com/2012/12/blog-post_26.html

ಕಳೆಯಬೇಕಿದೆ ಬದುಕಿನ ಬಹಳಷ್ಟು ದಿನಗಳನ್ನು 
ಕಲಿಯಬೇಕಿದೆ ಬದುಕು ಹಸನಾಗಿಸುವುದನ್ನು 

ನೆನ್ನೆಯ ನಿನ್ನೆಗಳು ಇಂದು 
ದಿನಗಳಾಗಿ ಉಳಿದಿಲ್ಲ 
ಅದು ಬರಿ ನೆನಪಾಗಿಹೊಯಿತಲ್ಲ !

ಬದುಕಿನ ಪ್ರತಿ ಕ್ಷಣಗಳಲ್ಲಿ 
ಜೊತೆಯಾಗಿರುವೆ ಎಂದು ಬಂದೆ 
ದಿನಕಳೆದಂತೆ ನಿನ್ನಲ್ಲೇ ನೀ ಕಳೆದುಹೋದೆ 

ನಗು ತುಂಬಿ ಹರಟುತ್ತಿರುವ 
ಆ ದಿನಗಳು ಇಂದು ಬರೀ ನೆನಪು 
ಉಸಿರಾಟದ ಶಬ್ದ ಕಿವಿಗೆ ರಾಚುತ್ತಿರುವ 
ಈ ಕರಾಳ ದಿನಗಳೇ ಇಂದಿನ ಬದುಕು !!

ಕಳೆಯಬೇಕಿದೆ ಇನ್ನೂ  ಸಾಕಷ್ಟು 
ದಿನಗಳು ಜೊತೆಯಲ್ಲಿ 
ಸುಂದರ ದಿನಗಳು ಮರೆಯಾಗಲು 
ನಾ ತಪ್ಪು ಮಾಡಿದ್ದೆಲ್ಲಿ ?

ಬರಬಹುದು ಬದುಕಿನಲ್ಲಿ ಸಾಕಷ್ಟು ಗೊಂದಲಗಳು 
ನೀ ಕೊಟ್ಟಿದ್ದೆ ಮಾತು ಆಗೆಲ್ಲ 
ನಾ ನಿನ್ನೊಂದಿಗಿರುವೆ ಹಗಲು ಇರುಳು 

ಬೆಳಗು ಕತ್ತಲು  ಎಂಬುದು ಪ್ರಕೃತಿ ನಿಯಮ 
ಹಾಗೆಯೇ ಬದುಕೆಂಬುದು 
ನೋವು ನಲಿವುಗಳ ಸಂಗಮ 

ನಾ ಬಲ್ಲೆ ಪರಿವರ್ತನೆ ಜಗದ ನಿಯಮ 
ಆದರೂ  ನಾ ಕೆಳುವುದೊಂದೇ 
ಬದಲಾಗದಿರು ನೀ ಕಳೆದುಕೊಂಡು ಸಂಯಮ !!



ಅರ್ಪಿತಾ ರಾವ್ 
ಲಂಡನ್




Wednesday, 28 November 2012

ಮನಸ್ಸೆಂಬ ಚಿಟ್ಟೆ

ಈ ನನ್ನ ಕವನವು ೦೪.೦೨.೧೩ ರ ಪಂಜುವಿನಲ್ಲಿ ಪ್ರಕಟಗೊಂಡಿದೆ http://www.panjumagazine.com/?p=462


ಚಿಟ್ಟೆ ಚಿಟ್ಟೆ ಬಣ್ಣದ ಚಿಟ್ಟೆ 
ನೋಡಲು ಕಣ್ಣುಗಳು ಸಾಲದು
ಮೈಯ ಮೇಲೆಲ್ಲಾ ಕಪ್ಪು ಕಂಗಳು
ನೋಡುಗರ ಕಣ್ಮನ ಸೆಳೆಯುವುದು 

ಅಲ್ಲಿಂದಿಲ್ಲಿಗೆ ಹಾರುವೆ 
ಹಿಡಿಯಲು ಹೋದರೆ ಓಡುವೆ 
ಜಗದ ಸೃಷ್ಟಿಯ ಮೆಚ್ಚಲೇ ಬೇಕು 
ನಿನಗೆ ನೀನೆ ಸಾಟಿಯಿರಬೇಕು 

ಒಮ್ಮೆ ಇಲ್ಲಿ ಒಮ್ಮೆ ಇನ್ನೆಲ್ಲೋ 
ಹಾರುವ ನಿನ್ನನು ನೋಡಿದರೆ 
ಮನಸು ಕೂಡ ನಿನ್ನೊಡನೆಯೇ 
ಕುಣಿಯುತ ಹೊರಡುವುದು ಬೇರೆಡೆಗೆ !!



Thursday, 7 June 2012

ಗೆಣಸಿನ ಹಲ್ವಾ


ಈ ನನ್ನ ಲೇಖನವು ಈ ಕನಸು ವಿನಲ್ಲಿ ಪ್ರಕಟಗೊಂಡಿದೆ http://www.ekanasu.com/2012/06/blog-post_4372.html



ಸಿಹಿಯಾದ ಗೆಣಸಿನ ಹಲ್ವಾ ಬೇರೆ ಹಲ್ವಗಳಿಗಿಂತ ಹೆಚ್ಚು ರುಚಿ ನೀಡುತ್ತದೆ . ಮಾಡುವ ವಿಧಾನವು ಕೂಡ ಬಲು ಸುಲಭ . ಮನೆಯಲ್ಲಿಯೇ ಮಾಡಿ ಸವಿಯಿರಿ 

ಬೇಕಾಗುವ ಸಾಮಗ್ರಿಗಳು 

ಗೆಣಸು -೪-೫
ಸಕ್ಕರೆ - ೧ ಕಪ್
ತುಪ್ಪ - ಅರ್ಧ ಕಪ್
ಏಲಕ್ಕಿ ಪುಡಿ - ಸ್ವಲ್ಪ 
ಗೋಡಂಬಿ ಮತ್ತು ದ್ರಾಕ್ಷಿ ಅಲಂಕರಿಸಲು 

ಗೆಣಸನ್ನು ಕುಕ್ಕರ್ ನಲ್ಲಿ ಬೇಯಿಸಿಕೊಳ್ಳಬೇಕು . ಬೇಡ ನಂತರ ಸಿಪ್ಪೆ ತೆಗೆದು ನುರಿಯ ಬೇಕು . ಆ ನಂತರ ಬಾಣಲೆಗೆ ತುಪ್ಪವನ್ನು ಹಾಕಿ ನುರಿದಿಟ್ಟ ಗೆಣಸನ್ನು ಹಾಕಿ ಹುಟ್ಟಿನಿಂದ ಚೆನ್ನಾಗಿ ಕಲಸುತ್ತಿರಬೇಕು . ಈಗ ಸಕ್ಕರೆಯನ್ನು ಹಾಕಿ ಮಿಶ್ರ ಮಾಡಬೇಕು , ಸಕ್ಕರೆ ಕರಗಿ ಚೆನ್ನಾಗಿ ಮಿಶ್ರಗೊಂಡು ನಂತರ ಏಲಕ್ಕಿ ಪುಡಿಯನ್ನು ಹಾಕಿ ಹಲ್ವದ ಹದ ಬರುವವರೆಗೆ ಸೌಟಿನಿಂದ ಚೆನ್ನಾಗಿ ತಿರಿಸಬೇಕು. ನಂತರ ಗೋಡಂಬಿ ಮತ್ತು ದ್ರಾಕ್ಷಿಯನ್ನು ಹುರಿದು ಹಾಕಬೇಕು . 
ಪ್ಲೇಟ್ ನಲ್ಲಿ ಹಾಕಿ ಚೌಕಾಕಾರವಾಗಿ ಕತ್ತರಿಸಲು ಬಹುದು ಅಥವಾ ಬೌಲ್ ನಲ್ಲಿ ಹಾಕಿಯೂ ತಿನ್ನಬಹುದು .



ಅರ್ಪಿತಾ ಹರ್ಷ 
ಲಂಡನ್ 

Wednesday, 18 April 2012

ಸೂರ್ಯಾಸ್ತ

ಒಂದು ಸಂಜೆ ಸೂರ್ಯ ಮುಳುಗುತ್ತಿರುವಾಗ ತೆಗೆದ ಛಾಯಚಿತ್ರ






ಅರ್ಪಿತಾ ಹರ್ಷ

ಈ ಕನಸುವಿನಲ್ಲಿ ಪ್ರಕಟಗೊಂಡಿದೆ http://www.ekanasu.com/2012/04/blog-post_2397.html

Monday, 16 April 2012

ಪ್ರವಾಸಿ ಕಥನ -ಲಂಡನ್ ನ ಮೇಡಂ ಟುಸ್ಸಾಡ್ಸ್


ಈ ನನ್ನ ಲೇಖನವು ಈ ಕನಸುವಿನಲ್ಲಿ ಪ್ರಕಟಗೊಂಡಿದೆ http://www.ekanasu.com/2012/04/blog-post_17.html



ಲಂಡನ್ ನ ಆಕರ್ಷಕ ಸ್ಥಳಗಳಲ್ಲಿ ಮೇಡಂ ಟುಸ್ಸಾಡ್ಸ್ ಕೂಡ ಒಂದು . ಲಂಡನ್ ಗೆ ಭೇಟಿ ನೀಡಿದವರು ಈ ಸ್ಥಳವನ್ನು ಖಂಡಿತ ಭೇಟಿ ಮಾಡದೆ ಇರಲಾರರು . ನಾವು ಕೂಡ ಒಂದು ವಾರಾಂತ್ಯದಲ್ಲಿ ಮೇಡಂ ಟುಸ್ಸಾಡ್ಸ್ ನೋಡಬೇಕೆಂದು ನಿರ್ಧರಿಸಿದೆವು . ಅದಕ್ಕೆಂದೇ ಆನ್ಲೈನ್ ಟಿಕೆಟ್ ಕೂಡ ಮೊದಲೇ ಕರೀದಿಸಿ ಹೊರಡಲು ತಯಾರಾಗಿದ್ದೆವು . ಇದು ಸೆಂಟ್ರಲ್ ಲಂಡನ್ ನಲ್ಲೆ ಇರುವುದರಿಂದ ಹುಡುಕುವ ಅನಿವಾರ್ಯತೆ ಇರಲಿಲ್ಲ.ಬೆಳಗ್ಗೆ ೯ ಗಂಟೆಗೆಲ್ಲ ಮನೆಯಿಂದ ಹೊರಟು ಅಲ್ಲಿ ಸೇರುವಷ್ಟರಲ್ಲಿ ೧೧ ಗಂಟೆ ಯಾಗಿತ್ತು .ಮೊದಲೇ ಟಿಕೆಟ್ ಕರೀದಿಸಿದ್ದರಿಂದ ಸಾಲಿನಲ್ಲಿ ಕಾಯುವ ಕೆಲಸವಿರಲಿಲ್ಲ . ಇಲ್ಲದಿದ್ದರೆ ಸುಮಾರು 5೦೦ ಜನರ ಸಾಲುಗಳು ಟಿಕೆಟ್ ಗಾಗಿ ಕಾಯುತ್ತಾ ನಿಂತಿದ್ದವು . ಒಳಹೋಗಲು ಕನಿಷ್ಠ ೨ ಗಂಟೆ ಬೇಕಾಗಿತ್ತು .ನಾವು ಡೈರೆಕ್ಟ್ ಆಗಿ ಒಳಗೆ ಹೋದೆವು .

ಮೇಡಂ ಟುಸ್ಸಾಡ್ಸ್ ದೊಡ್ಡ ವ್ಯಕ್ತಿಗಳ ಅಥವಾ ಹೆಸರುವಾಸಿ ವ್ಯಕ್ತಿಗಳ (ಸೆಲೆಬ್ರಿಟಿಗಳ)ಆಕೃತಿಗಳನ್ನು ಮೇಣದಿಂದ ಕೆತ್ತಿರುವ ಮತ್ತು ಅದಕ್ಕಾಗಿಯೇ ಮೀಸಲಿಟ್ಟಿರುವ ಒಂದು ಮ್ಯೂಸಿಯಂ . ಇದು ಮರ್ಲೆಬೋನ ರಸ್ತೆಯಲ್ಲಿದೆ .ಇದನ್ನು ಮೊದಲ ಭಾರಿಗೆ ಮರ್ಲಿನ್ ತುಸಾದ್ಸ್ ಎಂಬುವವರು ಪ್ರಾರಂಭಿಸಿದರು ಇದು ಮೆರ್ಲಿನ್ ಎಂಟರ್ ಟೈನ್ ಮೆಂಟ್ ಎಂಬುವವರು ನೋಡಿಕೊಳ್ಳುತ್ತಿದ್ದಾರೆ .ಪ್ರತಿದಿನ ಬೆಳಿಗ್ಗೆ ೯ ಗಂಟೆಯಿಂದ ಸಂಜೆ ೭ ಗಂಟೆಯವರೆಗೆ ವೀಕ್ಷಿಸುವ ಅವಕಾಶವಿರುತ್ತದೆ .ಇಲ್ಲಿ ಜಗತ್ಹ್ಪ್ರಸಿದ್ದಿ ಪಡೆದ ಎಲ್ಲ ವ್ಯಕ್ತಿಗಳ ಚಿತ್ರಣವನ್ನು (ಆಕೃತಿಯನ್ನು) ಮೆನದಲ್ಲಿ ಕೆತ್ತುವುದರ ಮೂಲಕ ಒಂದು ದೊಡ್ಡ ಮ್ಯೂಸಿಯಂ ಅನ್ನು ನಿರ್ಮಿಸಿದ್ದಾರೆ . ಮೇರಿ ತುಸ್ಸಾದ್ ಎಂಬ ಮಹಿಳೆಯು ಇದನ್ನು ಪ್ರಾರಂಬಿಸಿದಳು. ೧೮೩೫ರಲ್ಲಿ ಮೇರಿ ಯವರು ಲಂಡನ್ ನ ಬೇಕರ್ ಬೀದಿಯಲ್ಲಿ ಮೊದಲ ಬಾರಿಗೆ ಸುಮಾರು ೪೦೦ ಆಕೃತಿಗಳನ್ನು ಮಾಡುವುದರ ಮೂಲಕ ಪ್ರಸಿದ್ಧಿ ಪಡೆದಿದ್ದಳು .ಆದರೆ ೧೯೨೫ ರಲ್ಲಿ ಬೆಂಕಿ ಬಿಳುವುದರ ಮೂಲಕ ಹಲವಾರು ಹಳೆಯ ಆಕೃತಿಗಳು ಸುತ್ತು ಹೋಗಿದ್ದವು .ನಂತರ ಹೊಸ ಆಕೃತಿಗಳನ್ನು ಮಾಡಲಾಯಿತು ಎಂಬುದ ಮೇಡಂ ಟುಸ್ಸಾಡ್ಸ್ ಬಗ್ಗೆ ಇರುವ ಇತಿಹಾಸ .ಇಂದು ಇದು ಪ್ರಪಂಚದ ಅತಿ ಮುಖ್ಯ ಪ್ರವಾಸಿ ಸ್ಥಳವಾಗಿ ಮಾರ್ಪಟ್ಟಿದೆ .
ಹೆಮ್ಮೆಯ ವಿಷಯವೆಂದರೆ ನಮ್ಮ ದೇಶದ ಪ್ರಖ್ಯಾತ ವ್ಯಕ್ತಿಗಳ ಚಿತ್ರಣವನ್ನು ಕೂಡ ಕೆತ್ತಿದ್ದಾರೆ . ರಾಜಕೀಯ ವಿಭಾಗದಲ್ಲಿ ಮಹಾತ್ಮ ಗಾಂಧಿಜಿ , ಇಂದಿರಾ ಗಾಂಧಿ ಆಕೃತಿ ನಿಜವೇನೋ ಎಂಬಷ್ಟು ಅದ್ಬುತವಾಗಿ ಕೆತ್ತಲಾಗಿದೆ .ಮತ್ತು ಸೆಲೆಬ್ರಿಟಿ ಗಳಾಗಿ ಬಾಲಿವುಡ್ ನ ಹೃತಿಕ್ ರೋಶನ್ ,ಸಲ್ಮಾನ್ ಖಾನ್, ಶಾರುಖ್ ಖಾನ್, ಅಮಿತಾಬ್ ಬಚ್ಚನ್ , ಐಶ್ವರ್ಯ ರೈ, ಚಿತ್ರಣ ವನ್ನು ಮೇಣದಿಂದ ಕೆತ್ತಿ ಇಡಲಾಗಿದೆ .ಸ್ಪೋರ್ಟ್ಸ್ ಗೆ ಸಂಭಂದಿಸಿದಂತೆ ನಮ್ಮ ದೇಶದ ಕ್ರಿಕೆಟ್ ಗಾಡ್ ಸಚಿನ್ ತೆಂಡೂಲ್ಕರ್ ಅನ್ನು ಆಕೃತಿ ಕೂಡ ಕಾಣಬಹುದು .
ಇಲ್ಲಿ ಸುಮಾರು ೫೦೦ ಆಕೃತಿಗಳನ್ನು ಮೇಣದಿಂದ ಕೆತ್ತಿ ಪ್ರದರ್ಶನಕ್ಕೆ ಇಡಲಾಗಿದೆ ಎಲ್ಲ ದೇಶಗಳ ಪ್ರಸಿದ್ಧಿ ಪಡೆದ ವ್ಯಕ್ತಿಗಳ ಚಿತ್ರಣ ನೋಡಬಹುದು . ಮೇಡಂ ಟುಸ್ಸಾಡ್ಸ್ ಎಂಬುದು ಕೇವಲ ಲಂಡನ್ ನಲ್ಲಿ ಮಾತ್ರವಲ್ಲ ೯ ಮುಖ್ಯ ಪಟ್ಟಣಗಳಲ್ಲಿ ಇದನ್ನು ತೆರೆಯಲಾಗಿದೆ .ಯಾಮ್ಸ್ತರ್ದ್ಯಂ ,ಬಂಗ್ಕಾಕ್ ,ಬರ್ಲಿನ್ ,ಹಾಂಗ್ಕಾಂಗ್ ,ಶಾಂಗೈ , ನ್ಯುಯಾರ್ಕ್ ,ಲಾಸ್ ವೇಗಾಸ್,ಹಾಲಿವುಡ್ ,ವಾಶಿಂಗ್ ಟನ್ ,ವಿಯೆನ್ನಾ ಮತ್ತು ೨೦೧೧ ರಲ್ಲಿ ಇಂಗ್ಲೆಂಡ್ ನ ಬ್ಲಾಕ್ ಪೂಲ್ ಎಂಬಲ್ಲಿ ಕೂಡ ಬ್ರಾಂಚ್ ಗಳನ್ನೂ ತೆರೆಯಲಾಗಿದೆ .
ಸುಮಾರು ೫೦೦ ಮೇಣದ ಅಕ್ರುತಿಗಳಿಂದ ಕುಡಿದ ಈ ಮ್ಯೂಸಿಯಂ ಅನ್ನು ನೋಡಲು ೨ ಗಂಟೆಗಳೇ ಬೇಕು. ಸದಾ ಜನರಿಂದ ತುಂಬಿ ತುಳುಕುತ್ತಿರುವ ಈ ಸ್ಥಳದಲ್ಲಿ ನಿಜವಾದ ಮನುಷ್ಯರು ಯಾರು ಆಕೃತಿಗಳು ಯಾವುವು ಎಂದು ತಿಳಿಯಲು ಕ್ಷಣಗಳೇ ಬೇಕಾಗಬಹುದು . ೨ ಗಂಟೆಗಳ ಕಾಲ ಎಲ್ಲ ಆಕೃತಿಗಳನ್ನು ನೋಡಿ ಜೊತೆಗೆ ಛಾಯಾಚಿತ್ರಗಳನ್ನು ಸೆರೆಹಿಡಿದು ಹೊರಬಂದೆವು .



ಅರ್ಪಿತಾ ಹರ್ಷ
ಲಂಡನ್

Friday, 16 March 2012

ಇಂಗ್ಲೆಂಡ್ ನ ಐಲ್ ಆಫ್ ವೈಟ್ ದ್ವೀಪ

ಲಂಡನ್ ಗೆ ಬಂದ ಪ್ರಾರಂಭದಲ್ಲಿ ಹತ್ತಿರದಲ್ಲಿರುವ ಎಲ್ಲ ಸ್ಥಳಗಳಿಗೆ ಹೋಗಿ ನೋಡಿ ಬಂದೆವು ಆಗಸ್ಟ್ ತಿಂಗಳಿನಲ್ಲಿ ಇಲ್ಲಿ ಬೇಸಿಗೆ ಬೇಸಿಗೆ ಎಂದರೆ ಸುಡುವ ಬಿಸಿಲೇನು ಇರುವುದಿಲ್ಲ ಸುಮಾರು ೨೦ ಡಿಗ್ರಿ ಅಷ್ಟು ತಾಪಮಾನ ಇತ್ತು.ಆ ಸಮಯದಲ್ಲಿ ಗೆಳೆಯರ ಸಹಾಯದಿಂದ ಹೊಸ ಸ್ಥಳಗಳಿಗೆ ಹೋಗುವ ನಿರ್ಧಾರ ಮಾಡಿದೆವು ಆಗ ಎಲ್ಲರ ಸಲಹೆಯ ಮೇರೆಗೆ ಸಿಕ್ಕ ಸ್ಥಳವೆ ಐಲ್ ಆಫ್ ವೈಟ್ . ಲಂಡನ್ ನಿಂದ ಸುಮಾರು ೧೨೬ ಕಿಲೋಮೀಟರು ದಲ್ಲಿರುವ ಐಲ್ ಆಫ್ ವೈಟ್ ಒಂದು ಸುಂದರ ದ್ವೀಪ .
ನಾವು ಹೋಗಿರುವುದು ೨ ದಿನಗಳ ಪ್ರವಾಸ ೨ ದಿನಗಳಲ್ಲಿ ಈ ಪುಟ್ಟ ದ್ವೀಪದ ಸುಮಾರು ೬ ಸ್ಥಳಗಳನ್ನು ನೋಡಿ ಬಂದೆವು ಇಲ್ಲಿಯ ಒಂದೊಂದು ಸ್ಥಳಗಳು ಕೂಡ ಅದ್ಭುತ . ಶನಿವಾರ ಬೆಳಗಿನ ಜಾವ ೫ ಗಂಟೆಗೆ ಮನೆಯಿಂದ ನಾವು ಹೊರಟೆವು ಮೊದಲು ತಲುಪಿದ ಸ್ಥಳ 'ಪೋರ್ಟ್ಸ್ ಮೌತ್ ಬಂದರು ', ಸುತ್ತಲು ಸಮುದ್ರ ತುಂಬಿರುವ ಇಲ್ಲಿ ಬೆಳಗ್ಗಿನ ಮುಂಜಾನೆ ಆಕರ್ಷಣೀಯವಾಗಿತ್ತು .ಯಥೆಚ್ಚವಾದ ಹಡಗು ಸಂಚಾರ ಸದಾ ಕಾಲ ನಡೆಯುವ ಪ್ರದೇಶವಿದು .ಅದು ನಮ್ಮ ಪ್ರವಾಸ ಪ್ರಾರಂಭದ ಸ್ಥಳ . ಮುಂಜಾನೆಯ ಸೂರ್ಯಾಸ್ತದ ಜೊತೆ ಕಾಫೀ ತಿಂಡಿ ಸವಿದು ಅಲ್ಲಿಂದ ನಮ್ಮ ಪ್ರಯಾಣ ಮೊದಲು ಹೊರಟಿದ್ದು 'ನೀಡಲ್ಸ್ ' ಎಂಬ ಸ್ಥಳಕ್ಕೆ .
ನೀಡಲ್ಸ್ ಹೆಸರೇ ಹೇಳುವಂತೆ ಸೂಜಿಯಾಕಾರದಲ್ಲಿದೆ . ಸುಮಾರು ೫ ಕಿಲೋಮೀಟರ್ ನಷ್ಟು ಹತ್ತಿ ತುದಿ ತಲುಪಬೇಕು ಇಲ್ಲಿ ಮೊದಲು ಶತ್ರುದೇಶಗಳ ಹಡಗುಗಳ ದಾಳಿ ಆಗದಂತೆ ತಡೆಯಲು ಈ ನೀಡಲ್ಸ್ಗ ನ ತುದಿಯಲ್ಲಿ ದೊರದರ್ಷಕಗಳಿಂದ ಕನ್ಗಾವಲಿದುತ್ತಿದ್ದರು.

ಇದು ಈಗ ಪ್ರವಾಸಿ ಸ್ಥಳವಾಗಿ ನಿರ್ಮಾಣಗೊಂಡಿದೆ. ೩ ದಿಕ್ಕಿನಲ್ಲೂ ಸಮುದ್ರವಿದೆ ಮಧ್ಯ ಚಾರಣಕ್ಕೆ ಸ್ಥಳ ೫ ಕಿಲೋಮೀಟರ್ ನಡೆದರೂ ಒಂದು ಸ್ವಲ್ಪ ಕೂಡ ದಣಿವಾಗದು ಅಂತಹ ಸುಂದರ ವಾತಾವರಣ ನೋಡಲು ಕಣ್ಣು ಕುಕ್ಕುವ ಹಾಗಿದೆ .ಸುಮಾರು ೩ ಗಂಟೆಗಳ ಕಾಲ ಅಲ್ಲಿಕಳೆದ ನಾವು ನಂತರ ಹೋಗಿದ್ದು 'ಸ್ಯಾನ್ ಡೌನ್ ' ಎಂಬ ಸ್ಥಳಕ್ಕೆ .
ಸ್ಯಾನ್ ಡೌನ್ ನಲ್ಲಿ ಬೀಚ್ ಇದೆ ಸಂಜೆಯ ಸಮಯದಲ್ಲಿ ಬೀಚ್ ನ ವಿಹಾರ ಸುಂದರ ಸುರ್ಯಾಸ್ತವಾಗುವ ಸಮಯದಲ್ಲಿ ಬೀಚ್ ನಲ್ಲಿ ಕಳೆಯುವ ಆನಂದ ವರ್ನಿಸಲಸಾದ್ಯ. ಅಲ್ಲೇ ಒಂದು ಪ್ರಾಣಿ ಸಂಗ್ರಹಾಲಯವು ಇದೆ ಹುಲಿ ಸಿಂಹ ಹಾವು ಚಿರತೆ ಹೀಗೆ ಹಲವು ಪ್ರಾಣಿಗಳನ್ನು ನೋಡಬಹುದು ಇದರ ಪಕ್ಕದಲ್ಲೇ ಡಿನೋಸಾರಸ್ ಸಂಗ್ರಹಾಲಯವಿದೆ ಹಿಂದಿನಕಾಲದಲ್ಲಿ ಹೇಗೆ ಡೈನೋಸಾರಸ್ ಗಳು ಬದುಕಿದ್ದವು ಅವುಗಳ ಮೊಟ್ಟೆ ಹೇಗಿರುತ್ತದೆ ಎಂಬುದರ ಬಗ್ಗೆ ಮಾಹಿತಿ ಪಡೆದುಕೊಂಡೆವು .ನಾವು ಉಳಿದುಕೊಳ್ಳುವ ಹೋಟೆಲ್ ಸ್ಯಾನ್ ಡೌನ್ ನಲ್ಲೆ ಇದ್ದುದರಿಂದ ಸುಮಾರು ೭ ಗಂಟೆಯವರೆಗೆ ನಾವು ಬೀಚ್ ನಲ್ಲಿ ಆಟವಾಡಿ ನಂತರ ಹೋಟೆಲ್ ಸೇರಿದೆವು .
ಮರುದಿನ ಮೊದಲೇ ನಿರ್ಧರಿಸಿದಂತೆ ಬೆಳಗ್ಗೆ ೮ ಗಂಟೆಗೆಲ್ಲ ಹೋಟೆಲ್ ನಲ್ಲೆ ಉಪಹಾರ ಮುಗಿಸಿ 'ಗಾಡ್ ಶಿಲ್ ' ಎಂಬ ಸ್ಥಳಕ್ಕೆ ಹೊರಟೆವು .
ಗಾಡ್ ಶಿಲ್ ಬಹಳ ಹಳೆಯ ಕಾಲದ ಸ್ಥಳ ಅಲ್ಲಿ ಹಿಂದಿನ ಕಾಲದವರು ಹೇಗಿದ್ದರು ಆಗಿನ ಮನೆಗಳೆಲ್ಲ ಹೇಗಿರುತ್ತದೆ ಎಂಬ ಮಾಹಿತಿ ಸಿಗುತ್ತದೆ .

ಅಲ್ಲಿ ಒಂದು ಮಾದರಿ ಗ್ರಾಮ (ಮಾಡೆಲ್ ವಿಲ್ಲೇಜ್ ) ಎಂಬ ಸಂಗರಹಾಲಾಯವಿದೆ .ಸುಮಾರು ಒಂದು ತಾಸಿನ ಹಸಿರು ತುಂಬಿದ ಮಾಡೆಲ್ ವಿಲ್ಲೇಜ್ ನ ವೀಕ್ಷಣೆಯ ನಂತರ ನಾವು ಹೋಗಿದ್ದು ಅಲ್ಲಿಯೇ ಹತ್ತಿರದಲ್ಲಿರುವ ಚರ್ಚ್ ಇದು ಕೂಡ ಹಳೆಯದು ಪುರಾತನ ಕಾಲದ ಚರ್ಚ ಅನ್ನು ಇನ್ನು ನಡೆಸಿಕೊಂಡು ಬರುತ್ತಿದ್ದಾರೆ . ಅಲ್ಲಿಂದ ನಮ್ಮ ಪ್ರಯಾಣ ಹೊರಟಿದ್ದು ಶಾಂಕ್ ಲೀನ್ ಎಂಬ ಕಾಡಿಗೆ .

ಶಾಂಕ್ ಲೀನ್ ಒಂದು ಪಟ್ಟಣ ಪ್ರದೇಶವೇ ಆದರೆ ಅದರ ಮಧ್ಯದಲ್ಲೇ 'ಶಾಂಕ್ ಲೀನ್ ಶೈನ್ ' ಎಂಬ ದಟ್ಟ ಕಾಡೊಂಡಿದೆ ಇಲ್ಲಿ ಒಂದು ಜಲಪಾತವು ಕೂಡ ಇದೆ ಜೊತೆಗೆ ಪ್ರಾಣಿ ಪಕ್ಷಿಗಳ ಸಂಗ್ರಹಾಲಯವಿದೆ . ಇದೆಲ್ಲ ನೋಡಿ ಮುಗಿಸಿ ಹೊರ ಹೊರಟರೆ ಸಿಗುವುದೇ ಶಾಂಕ್ ಲೀನ್ ಬೀಚ್ . ಇದರ ಜೊತೆಗೆ ನಮಗೆ ಕುಶಿ ನೀಡಿದ ವಿಷಯವೆಂದರೆ ಇಲ್ಲಿ ನಮಗೆ ನಮ್ಮ ಭಾರತದ ಹೋಟೆಲ್ ಒಂದು ಸಿಕ್ಕಿದ್ದು. ಮಹಾರಾಜ ಎಂಬ ಭಾರತದ ಹೋಟೆಲ್ ನಲ್ಲಿ ದೇಸಿ ಊಟ ಮುಗಿಸಿ ಸಂತೋಷ ಪಟ್ಟು ಅಲ್ಲಿಂದ ನಮ್ಮ ಪ್ರಯಾಣ ಹೊರಟಿದ್ದು ರೈಡ್ ಎಂಬ ಸ್ಥಳಕ್ಕೆ.
ರೈಡ್ ಒಂದು ಸುಂದರ ಸ್ಥಳ ಇದು ಬಂದರುವಿನ ಪಕ್ಕದಲ್ಲೇ ಬರುವುದರಿಂದ ಅಲ್ಲಿ ಸಾಕಷ್ಟು ಹಡಗುಗಳು, ೩ ದಿಕ್ಕುಗಳಲ್ಲೂ ಸಮುದ್ರ . ಇದು ನಮ್ಮ ಕೊನೆಯ ಸ್ಥಳವಾಗಿತ್ತು ನಾವು ಅಲ್ಲಿಂದ ಹೊರಡುವಾಗ ಸುಮಾರು ಸಂಜೆ ೬ ಗಂಟೆ ಯಾಗಿತ್ತು . ೪ ತಾಸಿನ ಪ್ರಯಾಣ ಮತ್ತೆ ಬಂದು ಲಂಡನ್ ತಲುಪುವಾಗ ೧೦ ಗಂಟೆ .ಒಟ್ಟಾರೆಯಾಗಿ ೨ ದಿನ ಸುಂದರ ಹಸಿರು ತುಂಬಿದ ಎಲ್ಲಿ ನೋಡಿದರು ಮತ್ತೆ ಮತ್ತೆ ನೋಡಬೇಕೆಂಬ ಬಿಟ್ಟ ಕಣ್ಣು ಮುಚ್ಚದಂತೆ ಎವೆಯಿಕ್ಕದೆ ನೋಡಿ ಸಂತೋಷ ನೀಡಿದ ಪ್ರವಾಸವದು .ನಿಮ್ಮೊಂದಿಗೆ ಹಂಚಿಕೊಂಡಿದ್ದೇನೆ .



ಅರ್ಪಿತಾ ಹರ್ಷ
ಲಂಡನ್


ಈ ನನ್ನ ಲೇಖನವು ಈ ಕನಸುವಿನಲ್ಲಿ ಪ್ರಕಟಗೊಂಡಿದೆ http://www.ekanasu.com/2012/04/blog-post_4555.html

Thursday, 15 March 2012

ಮನೆಯಲ್ಲಿಯೇ ಮಾಡಿ ಮಾವಿನ ಮಿಲ್ಕ್ ಶೇಕ್ .

ಇದು ಮಾವಿನ ಹಣ್ಣಿನ ಸೀಸನ್ . ಮಾವು ಎಂದರೆ ಎಲ್ಲರ ಬಾಯಲ್ಲೂ ನೀರು ಬರುವುದು ಖಂಡಿತ . ಮಾವಿನ ಹಣ್ಣಿನ ಮಿಲ್ಕ್ ಶೇಕ್ ಅನ್ನು ಮನೆಯಲ್ಲಿಯೇ ಮಾಡಿ ಸವಿಯಬಹುದು .


ಮಿಲ್ಕ್ ಶೇಕ್ ಗೆ ಬೇಕಾಗುವ ಸಾಮಗ್ರಿಗಳು :
ಸಿಹಿ ಮಾವಿನ ಹಣ್ಣು ೧
ಸಕ್ಕರೆ ಸ್ವಲ್ಪ
ಏಲಕ್ಕಿ ಪುಡಿ ೧ ಚಮಚ
ಐಸ್ ಕ್ಯೂಬ್ ೧ (ಬೇಕಿದ್ದಲ್ಲಿ)
ಹಾಲು ೧ ಕಪ್

ಮಾವಿನ ಹಣ್ಣನ್ನು ಹೋಳುಗಳನ್ನಾಗಿ ಹೆಚ್ಚಿಕೊಳ್ಳಿ . ಮಿಕ್ಸೆರ್ ನಲ್ಲಿ ಹೆಚ್ಚಿಟ್ಟ ಹೋಳುಗಳನ್ನು ಹಾಕಿ ಸಕ್ಕರೆ, ಏಲಕ್ಕಿ ಪುಡಿ ಹಾಕಿ ರುಬ್ಬಿ . ಬೇಕಿದ್ದಲ್ಲಿ ಐಸ್ ಕ್ಯೂಬ್ ಅನ್ನು ಸೇರಿಸಿಕೊಳ್ಳಬಹುದು . ಈಗ ಕಾದ ಹಾಲನ್ನು ತಣಿಸಿ ತಣ್ಣಗಿರುವ ಹಾಲನ್ನು ಸೇರಿಸಿ . ಈಗ ರುಚಿಯಾದ ಮಿಲ್ಕ್ ಶೇಕ್ ರೆಡಿ .



ಅರ್ಪಿತಾ ಹರ್ಷ

ಈ ನನ್ನ ಲೇಖನವು ಈ ಕನಸುವಿನಲ್ಲಿ ಪ್ರಕಟಗೊಂಡಿದೆ http://www.ekanasu.com/2012/03/blog-post_7558.html

Monday, 9 January 2012

ಮಂಜಿನ ಹನಿ (ಲಲಿತ ಪ್ರಬಂಧ )

ನನ್ನ ಈ ಲೇಖನವು ಈಕನಸು ವಿನಲ್ಲಿ ಪ್ರಕಟಗೊಂಡಿದೆ http://www.ekanasu.com/2012/01/blog-post_09.html

ಮಂಜಿನ ಹನಿಗಳೆಂದರೆ ಯಾರಿಗೆ ಇಷ್ಟವಿಲ್ಲ ಹೇಳಿ ಹಾಗೆ ನನಗೆ ಬಹಳ ವರ್ಷಗಳಿಂದ ಮಂಜಿನ ಮಳೆ ಬೀಳುವುದನ್ನು ನೋಡಬೇಕು ಅದರಲ್ಲಿ ಆಟ ಆಡಬೇಕು ಎಂಬ ಆಸೆ ಇತ್ತು . ಅಂತು ಇಂತೂ ನನ್ನ ಆಸೆ ಈಡೇರಿಸುವ ಆಸೆ ಭಗವಂತನಿಗೂ ಆಯಿತೋ ಎಂಬಂತೆ ಲಂಡನ್ ಗೆ ಬಂದಾಗ ಈ ವರ್ಷ ಭಾರಿ ಮಂಜಿನ ಮಳೆ ಆಗುವ ವಾತಾವರಣ ವಿದೆ ಎಂದು ಓದಿ ಆ ದಿನ ಬರಲು ಹೆಚ್ಚು ದಿನವಿಲ್ಲ ಎಂದು ಸಂತೋಷಗೊಂಡು ಹರ್ಷವನ್ನು ಎಲ್ಲರಲ್ಲಿ ಹಂಚಿಕೊಂಡಿದ್ದು ಆಯಿತು. ಇನ್ನೇನು ನವೆಂಬರ್ ಪ್ರಾರಂಭ ಆದಂತೆ ಎಲ್ಲಿಲ್ಲದ ಚಳಿ . ಡಿಸೆಂಬರ್ ತಿಂಗಳಿನಲ್ಲಿ ಆಗುವ ಮಂಜಿನ ಉದುರುವಿಕೆಯನ್ನು ಸವಿಯುವ ದಿನಕ್ಕಾಗಿ ಎಡಬಿಡದೆ ಕಾಯುತ್ತಿರುವುದು ನೋಡಿ ಆ ಡಿಸೆಂಬರ್ ಬಂದೆ ಬಿಟ್ಟಿತು. ಪ್ರತಿದಿನ ಚಳಿ ಯ ಪ್ರಮಾಣ ಎಷ್ಟಿದೆ ಎಂದು ನೋಡಿ ಸಂತೋಷ ಪಡುತ್ತಾ ಇಂದು ಸಂಜೆ ಸ್ನೋ ಫಾಲ್ ಆಗಬಹುದು ಎಂಬ ನಿರೀಕ್ಷೆಯಲ್ಲಿ ದಿನ ಕಳೆಯ ತೊಡಗಿದೆ. ಪ್ರತಿ ದಿನವು ಹೀಗೆ ನಿರೀಕ್ಷೆಯಲ್ಲಿದ್ದಂತೆ ಒಂದು ದಿನ ಬೆಳಗಿನ ಮುಂಜಾನೆಯಲ್ಲಿ ಕಿಟಕಿಯ ಬಳಿ ನಿಂತು ನೋಡಿದರೆ ಹತ್ತಿಯ ಹೂವು ಗಳು ಆಕಾಶದಿಂದ ಹಾರಿ ಭೂಮಿ ತಲುಪುತ್ತಿದೆಯೇನೋ ಎಂಬಂತೆ ಕಾಣುತ್ತಿತ್ತು. ಆ ಮಂಜಿನ ಉಂಡೆಗಳು ಕೆಳ ಬೀಳುವುದನ್ನು ನೋಡುವ ಸಂತೋಷವೇ ವರ್ಣಿಸಲಸಾಧ್ಯ . ಇದು ಇನ್ನು ಪ್ರಾರಂಭ ರಸ್ತೆಯೆಲ್ಲ ಮಂಜಿನಿಂದ ಮುಚ್ಚಿ ಕೊಂಡಿರುವುದನ್ನು ನೋಡಲು ಇನ್ನು ಸೊಗಸು ಆ ಸಂತೋಷವನ್ನು ಅನುಭವಿಸಬೇಕು ಎಂದು ಎಂದಿಗಿಂತ ತುಸು ಹುಮ್ಮಸ್ಸಿನಿಂದ ಕೆಲಸಗಳನ್ನು ಬೇಗ ಮುಗಿಸಿ ಕ್ಯಾಮೆರಾ ದಲ್ಲಿ ಸೆರೆಹಿಡಿಯುವ ಬಯಕೆಯೊಂದಿಗೆ ಕಿಟಕಿಯ ಬಳಿ ಬಂದು ನಿಂತೆ.ಅಷ್ಟರಲ್ಲಾಗಲೇ ನನ್ನಸೆಗೆ ನೀರೆರಚುವಂತೆ ಹತ್ತಿಯ ಹೂವಿನಂತೆ ಬೀಳುತ್ತಿದ್ದ ಮಂಜು ಮಾಯವಾಗಿತ್ತು .ನನ್ನಾಸೆಗೆ ಪ್ರೋತ್ಸಾಹ ಕೊಡಲೆಂಬಂತೆ ನನ್ನವರು ಡಿಸೆಂಬರ್ ಮುಗಿಯುವುದರೊಳಗೆ ಮತ್ತೆ ಮಂಜು ಬೀಳುತ್ತದೆ ಎಂಬ ಸಣ್ಣ ಭರವಸೆ ನೀಡಿದರು . ಅಷ್ಟೇ ಸಾಕು ಎಂಬಂತೆ ಪ್ರತಿದಿನ ಬೀಳಬಹುದಾದ ಮಂಜಿಗೆ ಬೆಳಗಿನ ಜಾವ ಕಿಟಕಿಯಿಂದ ಇಣುಕಿ ನೋಡುತ್ತಾ ಡಿಸೆಂಬರ್ ಕಳೆದು ಹೋದಾಗ ಮನದಲ್ಲೊಂದು ನಿರಾಶೆ . ಅಂದಿನಿಂದ ಕಾಯುತ್ತಿದ್ದ ಡಿಸೆಂಬರ್ ನ ಮಂಜಿನ ಮಳೆ ಬೀಳದುದ್ದರ ಬಗ್ಗೆ ಯಾರಲ್ಲಿ ಕೋಪ ತೋರಬೇಕೆಂಬುದು ತಿಳಿಯದೆ ಮತ್ತೆ ಸಣ್ಣದೊಂದು ಆಸೆಯೊಂದಿಗೆ ಹೊಸವರ್ಷದಲ್ಲಿ ಮಂಜು ಬಿಳಬಹುದೋ ಎಂಬ ಆಸೆಯೊಂದಿಗೆ ಕಾಯುತ್ತಿರುವುದಾಗಿದೆ. ಈಗ ಬೆಳಗ್ಗೆ ಎಂದಿನಂತೆ ಕಿಟಕಿಯ ಹೊರ ನೋಡದೆ ವಾತಾವರಣದ ಬಗ್ಗೆ ಮಾಹಿತಿ ಇರುವ ವೆಬ್ ಸೈಟ್ ನೋಡುತ್ತಿದ್ದೇನೆ



Friday, 6 January 2012

ಭ್ರಮೆ

'ಅವಳು ಮೊದಲಿನಿಂದ ಹಾಗೆ ಸ್ವಲ್ಪ ಮಾತು ಕಡಿಮೇನೆ ' ಅಮ್ಮ ಮನೆಗೆ ನೋಡಲು ಬಂದ ಹುಡುಗನ ಕಡೆಯವರಿಗೆ ವರದಿ ನೀಡಿದ್ದಳು. ಹುಡುಗನ ಕಡೆಯವರು ಬೇರೆನಾದರು ಅಂದರೆ ಇವಳು ಎಲ್ಲಿ ತಪ್ಪಿ ಹೋಗುತ್ತಾಳೋ ಎಂಬ ಆತಂಕದಿಂದ ನಮಗೂ ಅಂತವರೇ ಬೇಕು ನೋಡಿ ಈಗಿನ ಕಾಲದ ಹುಡುಗೀರು ಎಲ್ಲಿ ಈ ತರದವರು ಸಿಗುತ್ತಾರೆ ಭಯಂಕರ ಜೋರಿರುತ್ತಾರೆ ಮಾತೆತ್ತಿದರೆ ಉತ್ತರ ರೆಡಿ ಇಂತವರನ್ನೇ ನಾವು ಹುಡುಕುತ್ತಿದ್ವಿ ನಮ್ಮ ಕಡೆಯಿಂದೆನು ತೊಂದರೆ ಇಲ್ಲ ನಿಮ್ಮ ಉತ್ತರ ಆದಷ್ಟು ಬೇಗ ತಿಳಿಸಿಬಿಡಿ ಎಂದು ತಟ್ಟೆ ತುಂಬಾ ಕೊಟ್ಟ ಸಿಹಿ ತಿಂದು ಜಾಗ ಕಾಲಿಮಾಡಿದ್ದರು. ಅವರು ಅತ್ತ ಹೋಗುತ್ತಿದಂತೆ ಇತ್ತ ಸುಮಾ ಅಪ್ಪ ಅಮ್ಮ ಇಬ್ಬರನ್ನು ತರಾಟೆಗೆ ತೆಗೆದುಕೊಂಡಳು ' ಹಳ್ಳಿ ಮನೆಯಲ್ಲಿ ಹೋಗಿ ಕುಳಿತು ಮಾಡುವುದೆಂತ ' ನನಗೆ ಈ ಹುಡುಗ ಬೇಡ ಅಂದ್ರೆ ಬೇಡ ಅಷ್ಟೇ , ಇದರ ಮೇಲೆ ನೀವು ಒತ್ತಾಯ ಮಾಡಿದರೆ ನಾನು ಕೆರೇನೋ ಬಾವಿನೋ ನೋಡಿಕೊಳ್ತೀನಿ . ಅಪ್ಪ ಅಮ್ಮ ನಿಗೂ ಮಗಳು ಒಳ್ಳೆ ಮನೆ ಸೇರಲಿ ಎಂಬ ಆಸೆ ಪೇಟೆ ಹುಡುಗರಿಗೆ ಕೊಟ್ಟರೆ ಹೇಗೆ ನೋಡಿಕೊಳ್ಳುತ್ತಾರೋ ಎಂಬ ಆತಂಕ ಕಮಲಮ್ಮನಿಗೆ ಒಳಗೊಳಗೇ ಮಗಳು ಕೈತಪ್ಪಿ ಹೋದರೆ ಎಂಬ ಆತಂಕ ಸುಮಾ ಇಲ್ಲದ ಸಮಯ ನೋಡಿ 'ಅವಳ ಇಷ್ಟದಂತೆ ಮಾಡಿಬಿಡೋಣ ಬಿಡಿ ಇನ್ನು ಹಳ್ಳಿ ಇರೋ ಹುಡುಗರ ಜಾತಕ ತಗೋಬೇಡಿ ನಗರದ ಕಡೆ ಒಳ್ಳೆ ಕೆಲಸದಲ್ಲಿರೋ ಸಾಫ್ಟ್ವೇರ್ ಇಂಜಿನಿಯರ್ ಆದ್ರೆ ಅವ್ಳು ಒಪ್ತಾಳೆ ಅಂತವರಿಗೆ ಜಾತಕ ಕೊಟ್ಟು ನೋಡಿ ' ಎಂದು ಶ್ರೀನಿವಾಸ ರಾಯರಲ್ಲಿ ಹೇಳಿದಳು . ನೀ ಹೇಳೋದು ಸರಿನೆ ಇದೆ ನೋಡು ನಾನು ನಾಲ್ಕು ಕಡೆ ವಿಚಾರಿಸಿ ನೋಡ್ತೀನಿ ಅಂದು ಹೊರಹೊರಟರು .
ಸುಮಾರು ಒಂದು ತಿಂಗಳ ಹುಡುಕಾಟದಲ್ಲಿ ಐದಾರು ಕಡೆಯಿಂದ ಜಾತಕ ಹೊಂದಾಣಿಕೆ ಆಗುವ ಉತ್ತರ ಬಂದಿತ್ತು .ಎಲ್ಲರಿಗಿಂತ ಉತ್ತಮ ಎನಿಸುನ ಒಂದು ಹುಡುಗನನ್ನು ಆರಿಸಿ ಮನೆಗೆ ಬಂದು ಹುಡುಗಿ ನೋಡಿ ಹೋಗುವಂತೆ ತಿಳಿಸಿದ್ದು ಆಯಿತು . ಸುಮಳಿಗೂ ಒಳಗೊಳಗೇ ಸಂತೋಷ ಅಂತು ತಾನಂದುಕೊಂಡಂತೆ ತಾನು ಪೇಟೆ ಸೇರುವ ದಿನ ದೂರವಿರಲಿಕ್ಕಿಲ್ಲ್ಲ ಎಂದು .ಸುಮಾ ನೋಡಲು ಸುಂದರ ವಾಗ್ಗಿಯೇ ಇದ್ದದ್ದರಿಂದ ಹುಡುಗ ಶ್ರೀಧರ ಒಪ್ಪಿಗೆ ನೀಡಿಯೂ ಆಯಿತು . ಇನ್ನೊಂದು ತಿಂಗಳಲ್ಲಿ ಮದುವೆ ಅದ್ಧೂರಿಯಿಂದ ಮುಗಿದು ಕಮಲಮ್ಮ ಮತ್ತು ಶ್ರೀನಿವಾಸರಾಯ ರಿಗೆ ಮನಸ್ಸಿಗೆ ನೆಮ್ಮದಿ ಅಂತು ಸುಮಳನ್ನು ಅವಳಿಚ್ಚೆಯಂತೆ ಪೇಟೆ ಹುಡುಗನಿಗೆ ಕೊಟ್ಟು ಮದುವೆ ಮಾಡಿದ್ದಾಯಿತು ಎಂದು .
ಹೊಸ ಮನೆ ಹೊಸ ಜಾಗ ನಗರದ ಜೀವನ ಕನಸಿನಂತೆ ಸುಂದರ ಸುಮಾ ಮನಸ್ಸಿನಲ್ಲೇ ಸಂಭ್ರಮಿಸಿದ್ದಳು . ಶ್ರೀಧರ ಮನೆ ಸೇರುತ್ತಿದ್ದಂತೆ ಫ್ರೆಂಡ್ಸ್ ಆಫೀಸ್ ಎಂದು ಹೊರಹೊರಟ. ಸುಮಾಳಿಗೆ ಏನು ಅನಿಸಲಿಲ್ಲ . ದಿನಕಳೆದಂತೆ ಶ್ರೀಧರನ ದಿನಚರಿ ಇದೆ ಎಂಬುದು ಆಕೆಗೂ ತಿಳಿಯಿತು ಕೇಳಿದರೆ 'ಸಿಗರೆಟ್ ಕುಡಿತ ಇವೆಲ್ಲ ಇಲ್ಲಿ ಎಲ್ಲರೂ ಮಾಡುತ್ತಾರೆ ನೀನು ಹಳ್ಳಿ ಹುಡುಗಿ ನಿನಗಿದೆಲ್ಲ ತಿಳಿಯಲ್ಲ ಇದು ಈಗಿನ ಟ್ರೆಂಡ್'ಎಂದ . ದಿನಕಳೆದಂತೆ ಶ್ರೀಧರ ೨-೩ ದಿನಗಳವರೆಗೆ ಮನೆಗೆ ಬರುವುದೇ ಖಾಯಂ ಆಯಿತು.ನಗರದ ಜೀವನ ಸುಂದರ ಪೇಟೆ ಹುಡುಗನೇ ಬೇಕು ಎಂದು ತಾನೇ ಆರಿಸಿಕೊಂಡು ತನ್ನ ಜೀವನ ತಾನೇ ಹಾಳು ಮಾಡಿಕೊಂಡ ಸುಮಾಳಿಗೆ ತನ್ನ ನೋವನ್ನು ಯಾರೊಂದಿಗೂ ಹಂಚಿಕೊಳ್ಳುವ ಅವಕಾಶವು ಇಲ್ಲದಂತಾಗಿತ್ತು .ಪೇಟೆ ಜೀವನ ಅದ್ಭುತ ಎಂಬ ಭ್ರಮೆ ಸುಳ್ಳಾಗಿತ್ತು

ಈ ಕಥೆ ಈಕನಸುವಿನಲ್ಲಿ ಪ್ರಕಟ ಗೊಂಡಿದೆ http://www.ekanasu.com/2012/01/blog-post_07.html

Thursday, 27 October 2011

ಅಂಟಿಗೆ-ಪಿಂಟಿಗೆ


ಅಂಟಿಗೆ ಪಿಂಟಿಗೆ ಎಂಬುದು ಮಲೆನಾಡಿನ ಕೆಡೆಗಳಲ್ಲಿ ಪ್ರಸಿದ್ಧಿ .ಮಲೆನಾಡಿನಲ್ಲಿ ಒಂದು ಸಂಪ್ರದಾಯವಿದೆ . ದೀಪಾವಳಿಯ ಪಾಡ್ಯದ ದಿನದಂದು ರಾತ್ರಿ ಊರಿನ ಕೆಲವು ಮಂದಿ ಒಟ್ಟು ಗೂಡಿ ಮನೆಮನೆಗೂ ಹಾಡುಹೇಳುತ್ತಾ ಹೋಗುವುದು ಇದನ್ನೇ ಅಂಟಿಗೆ ಪಿಂಟಿಗೆ ಎಂದು ಕರೆಯುತ್ತಾರೆ. ರಾತ್ರಿ ಸುಮಾರು ಹತ್ತು ಗಂಟೆಯಿಂದ ಪ್ರಾರಂಭಿಸಿದರೆ ಬೆಳಗಿನ ಜಾವ ಐದು ಗಂಟೆಯವರೆಗೆ ಹಾಡುಹೇಳುತ್ತಾ ಶುಭ ಕೋರುತ್ತಾರೆ .
ಮಲೆನಾಡಿನ ಹಳ್ಳಿಗಳು ಸಾಲುಕೇರಿ. ಒಂದು ಊರಿನಲ್ಲಿ ಕನಿಷ್ಠ ಐವತ್ತು ಮನೆಗಳಿರುತ್ತದೆ.ಊರಿನ ಕೆಲವು ಜನರು ಸೇರಿ ಈ ಅಂಟಿಗೆ ಪಿಂಟಿಗೆ ಗೊಸ್ಕರವೇ ಒಂದು ತಿಂಗಳಿನಿಂದ ಹಾಡು ಹೇಳುವ ಅಭ್ಯಾಸ ಪ್ರಾರಂಭಿಸುತ್ತಾರೆ.ಇದಕ್ಕೆ ದೊಡ್ಡವರು ಚಿಕ್ಕವರು ಎಂಬ ಭೇದವಿಲ್ಲ .ಹಿರಿಯರಿಂದ ಈಗಿನ ಯುವಪೀಳಿಗೆಯವರು ಆಸಕ್ತಿ ಇರುವವರು ಸೇರಿಕೊಂಡು ಹಾಡುಕಲಿಯುತ್ತಾರೆ.
ಪಾಡ್ಯದ ದಿನ ರಾತ್ರಿ ಕೋಲಿಗೆ ಬೆಂಕಿ ಹಚ್ಚಿಕೊಂಡು ಹಣತೆ ಹಿಡಿದು ಪ್ರಾರಂಭಿಸುವ ಈ ಹಾಡಿನ ತಂಡ ಮೊದಲು ಊರಿನ ದೇವರಗುಡಿ ಗೆ ಪೂಜೆ ಸಲ್ಲಿಸಿ ಪ್ರಾರಂಭಿಸುತ್ತಾರೆ.ಪ್ರತಿಯೊಬ್ಬರ ಮನೆಯಲ್ಲೂ ಅಂಟಿಗೆ ಪಿಂಟಿಗೆ ಯವರು ತಂಡ ಹಣತೆಗೆ ಎಣ್ಣೆ ಹಾಕಲಾಗುತ್ತದೆ.ಆ ದೀಪ ಬೆಳಗಿನವರೆಗೆ ಆರದಂತೆ ನೋಡಿಕೊಳ್ಳಲಾಗುತ್ತದೆ.ಹಾಡುತ್ತಾ ಬಂದವರಿಗೆ ಅಕ್ಕಿ ,ಅಡಿಕೆ , ಕಾಣಿಕೆ, ಹೋಳಿಗೆ ಇವನ್ನೆಲ್ಲ ಕೊಡುವುದು ಇಲ್ಲಿಯ ಪದ್ಧತಿ.
ಹೀಗೆ ಒಂದು ಮನೆ ನಂತರ ಇನ್ನೊಂದು ಮನೆಗಳಿಗೆ ಹೋಗಿ ದೇವರ ನಾಮಗಳನ್ನು ಹಾಡುತ್ತ ಹೋಗುವುದು ಅಲ್ಲಿಯ ಜನರಿಗೆ ಸಂಭ್ರಮ .ಇದು ಮಲೆನಾಡಿನ ಹಳ್ಳಿಗಳಲ್ಲಿ ಹಿಂದಿನಿಂದಲೂ ನಡೆಸಿಕೊಂಡು ಬಂದ ಸಂಪ್ರದಾಯ . ಅದನ್ನು ಈಗಲೂ ಜನ ಮುಂದುವರೆಸಿಕೊಂಡು ಹೊಗುತ್ತಿದ್ದಾರೆ.ಮನೆಮನೆಗೆ ಹೋಗಿ ಕತ್ತಲೆ ದೊರವಾಗಿ ಬೆಳಕು ಮೂಡಲಿ ಎಂದು ಶುಭ ಹಾರೈಸುವುದು ಇದರ ಸಂಕೇತ .

ನನ್ನ ಈ ಲೇಖನ ಈಕನಸುವಿನಲ್ಲಿ ಪ್ರಕಟವಾಗಿದೆ http://www.ekanasu.com/2011/11/blog-post_02.html

Friday, 21 October 2011

ಶುಭಾಶಯ


ದೀಪಾವಳಿ ದೀಪಗಳ ಹಬ್ಬ . ನಮ್ಮ ಮಲೆನಾಡಿನಲ್ಲಿ ಅಳಿಯನ ಹಬ್ಬ ಎಂದೇ ಕರೆಯುತ್ತಾರೆ . ನಮ್ಮಲ್ಲಿ ಒಂದು ಸಂಪ್ರದಾಯವಿದೆ.ಹೊಸದಾಗಿ ಮದುವೆಯಾದ ಮಗಳು ಅಳಿಯ ಅಂದು ತವರುಮನೆಗೆ ಹೋಗಿ ಹಬ್ಬ ಆಚರಿಸಬೇಕು.ಅದು ಮದುಮಕ್ಕಳಿಗೆ ಹೊಸಹಬ್ಬ .ಮಗಳು ಅಳಿಯ ಬರುತ್ತಾರೆ ಎಂದು ತಂದೆತಾಯಿಗೆ ಎಲ್ಲಿಲ್ಲದ ಹರ್ಷ.ಮನೆಯಬಾಗಿಲು ಗಳಿಗೆ ಹಸಿರು ತೋರಣ ಕಟ್ಟಿ ಸಂತೋಷದಿಂದ ಪ್ರಾರಂಭಿಸುತ್ತಾರೆ.ಮನೆಯ ಮುಂದೆ ರಂಗೋಲಿ ಇಟ್ಟು ಶುಭಾಶಯ ಕೋರುತ್ತಾರೆ ಆ ದಿನ ಬೆಳಿಗ್ಗೆ ಮಗಳು ಅಳಿಯನಿಗೆ ಎಣ್ಣೆ ಅರಿಶಿನ ಹಾಕಿ ಅಭ್ಯಂಜನ ಮಾಡಿಸುತ್ತಾರೆ.ಹಬ್ಬಕ್ಕೆ ಉಡುಗೊರೆಯಾಗಿ ಹೊಸ ವಸ್ತ್ರವನ್ನು ನೀಡಿ ಸಂಭ್ರಮಿಸುತ್ತಾರೆ.

ದೇವರ ಕೋಣೆಯಲ್ಲಿ ದೀಪಗಳನ್ನು ಹಚ್ಚುವುದರಿಂದ ಪ್ರಾರಂಭಿಸಿ ಮನೆಯ ಹೊರಗಿನ ಮೆಟ್ಟಿಲು ಗಳವರೆಗೆ ದೀಪಗಳ ಸಾಲು ಅಲಂಕಾರಮಾಡಲಾಗುತ್ತದೆ.ಅಳಿಯ ಬಂದಿರುವ ಸಂತಸದಲ್ಲಿ ಹೋಳಿಗೆ ,ಕಡುಬು,ಕೋಸಂಬರಿ,ಚಿತ್ರಾನ್ನ,ಪಾಯಸ,ಚಕ್ಕುಲಿ ಹೀಗೆ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ.ಗೋವುಗಳಿಗೆ ನವ ಮದುಮಕ್ಕಳಿಂದ ಆರತಿ ಎತ್ತಿಸುತ್ತಾರೆ.ಸಂಜೆಯಾಯಿತೆಂದರೆ ಸಾಕು ಬಾಸಿಂಗ ಕಟ್ಟಿಕೊಂಡ ಜೋಡಿ ಎತ್ತುಗಳನ್ನು ಓಡಿಸಿಕೊಂಡು ಎಲ್ಲರ ಮನೆಗೆ ಹೋಗುವುದು ಅಲ್ಲಿ ಅವುಗಳಿಗೆ ನೀಡಲಾದ ತಿಂಡಿ ತೆಗೆದುಕೊಳ್ಳುವುದು , ಅದಾದ ನಂತರ ದೀಪ ಹಚ್ಚಿಕೊಂಡು ಎಲ್ಲರ ಊರಿನವರೆಲ್ಲ ಒಟ್ಟು ಸೇರಿ ಊರಲ್ಲಿರುವ ಬೂತಪ್ಪ ಚೌಡಪ್ಪ ಗಳಿಗೆ ದೀಪ ಇಟ್ಟು ಬರುವುದು ಇದೆಲ್ಲ ಸುಂದರವಾಗಿರುತ್ತದೆ.ಇನ್ನು ಚಿಕ್ಕಮಕ್ಕಳಿದ್ದರಂತು ಹೊಸಬಟ್ಟೆ ಧರಿಸಿ ಎಲ್ಲರಿಗೂ ತೋರಿಸುವುದೆಂದರೆ ಎಲ್ಲಿಲ್ಲದ ಹಿಗ್ಗು . ಜೊತೆಗೆ ಪಟಾಕಿಗಳ ಭರಾಟೆ.

ರಾತ್ರಿ ಪಟಾಕಿಗಳ ಸುರಿಮಳೆ ಆ ಸಮಯಕ್ಕೆ ಸರಿಯಾಗಿ ಎಲ್ಲರ ಮನೆಯವರೂ ಹೊರಬಂದು ನೋಡುವ ಸಂಭ್ರಮವೇ ಚಂದ .ಆ ದಿನ ನೆಂಟರಿಷ್ಟರಿಂದ ಚಿಕ್ಕ ಮಕ್ಕಳ ಗದ್ದಲ ಗಳಿಂದ ತುಂಬಿರುವ ಎಲ್ಲರ ಮನೆಗಳಲ್ಲಿ ಸಂಭ್ರಮವೋ ಸಂಭ್ರಮ.ಹೀಗೆ ದೀಪಾವಳಿ ಹಬ್ಬವೆಂದರೆ ಹೊಸಹರುಷ , ಸಂತಸ, ಸಂಭ್ರಮದಿಂದ ಕೂಡಿರುತ್ತದೆ.
ಇನ್ನೇನು ದೀಪಾವಳಿ ಹತ್ತಿರ ಬರುತ್ತಿದೆ.ದೂರದಲ್ಲಿರುವುದರಿಂದ ಮೊದಲ ಹೊಸಹಬ್ಬಕ್ಕೆ ತವರೂರಿಗೆ ಹೋಗಲಾಗುತ್ತಿಲ್ಲ.ನನ್ನ ತವರೂರಿಗೆ ಬಂಧುಗಳಿಗೆ,ಸ್ನೇಹಿತರಿಗೆ ಶುಭಾಶಯಗಳು .ದೀಪಾವಳಿ ಎಲ್ಲರ ಬಾಳಲ್ಲಿ ಬೆಳಕನ್ನು ತರಲಿ.
ನನ್ನ ಈ ಲೇಖನ ಈ ಕನಸು ವಿನಲ್ಲಿ ಪ್ರಕಟವಾಗಿದೆ http://www.ekanasu.com/2011/10/blog-post_25.html