Thursday, 21 March 2013

ಒಮ್ಮೊಮ್ಮೆ ಹೀಗೂ ಆಗುವುದು

ಈ ನನ್ನ ಲೇಖನವು ೨೬/೦೩/೧೩ ಉದಯವಾಣಿಯಲ್ಲಿ ಪ್ರಕಟಗೊಂಡಿದೆ 


ಈಗ ಸುಮಾರು ವರ್ಷಗಳ ಹಿಂದಿನ ಕಥೆ ಇದು . ಕಥೆ ಎಂದರೆ ಕಥೆಯಲ್ಲ ನಿಜವಾಗಿ ನಡೆದ ಘಟನೆ .ಆಗ ನಾನು ೭ ನೆ ಕ್ಲಾಸ್ ನಲ್ಲಿದ್ದೆ .ನಮ್ಮದು ಮಲೆನಾಡಿನ ಹಳ್ಳಿ . ಮಳೆಗಾಲದ ಒಂದು ದಿನ ವಾಗಿತ್ತು. ಮಳೆಗಾಲದ ದಿನಗಳಲ್ಲಿ ಅಲ್ಲಿ ಸುರಿಯುವ ಮಳೆ ನೋಡಿಯೇ ಆನಂದಿಸಬೇಕು. ಹೀಗಿರುವಾಗ ಒಂದು ದಿನ ಮಳೆ ಸುರಿಯುತ್ತಿತ್ತು ನಾವೆಲ್ಲಾ ಊಟ ಮಾಡಿ ಬೇಗ ಮಲಗಿದ್ದೆವು . ಅಣ್ಣ ಮಾತ್ರ ಪ್ರತಿ ಬುದವಾರ ಟಿವಿಯಲ್ಲಿ ಬರುವ ಒಂದು ಸಿ ಐ ಡಿ ಷೋ ಒಂದನ್ನು ನೋಡಿಯೇ ಮಲಗುವುದಾಗಿತ್ತು . ಹಾಗೆ ಒಂದು ಬುದವಾರ ಸಿ ಐ ಡಿ  ಷೋ ನೋಡುತ್ತಿದ್ದ ಅದರಲ್ಲಿ ತೋರಿಸುತ್ತಿದ್ದ ಕೊಲೆ ಆತನಿಗೆ ಬಹಳ ಭಯ ಹುಟ್ಟಿಸಿತ್ತು .ಆಗಿನ್ನೂ ಆತ  ೮ನೆ ತರಗತಿ . ಅದೇ ಸಮಯಕ್ಕೆ ಕರೆಂಟ್ ಹೋಗಿಬಿಟ್ಟಿತ್ತು . ಮಳೆಗಾಲದಲ್ಲಿ ಆಗಾಗ ಕರೆಂಟ್ ತೆಗೆಯುತ್ತಿರುತ್ತಾರೆ. 

ಆತ  ಹೆದರುತ್ತಲೇ ಮಲಗಲು ನಿಧಾನವಾಗಿ ನಡೆದು ಬರುತ್ತಿದ್ದ . ಆಗೆಲ್ಲ ನಮ್ಮ ಮನೆಯಲ್ಲಿ ಎಲ್ಲರು ಸಾಲಾಗಿ ಮಲಗಿರುತ್ತಿದ್ದೆವು .ಅಣ್ಣ  ಒಬ್ಬೊಬ್ಬರನ್ನೇ ದಾಟಿ ಮುಂದೆ ಹೋಗಿ ತನ್ನ ಜಾಗದಲ್ಲಿ ಮಲಗಿಕೊಳ್ಳಬೇಕು. ಹಾಗೆಯೇ ಬರುತ್ತಿದ್ದ ಅಷ್ಟರಲ್ಲಿ ಅಪ್ಪ - ಅಣ್ಣನ ಕೈ ಹಿಡಿದು ಜೋರಾಗಿ ಕೂಗಿಕೊಂಡರು  ಅಣ್ಣ ಅಪ್ಪನಿಗಿಂತ ಜೋರಾಗಿ ಕೂಗಿಕೊಂಡ. ಎಲ್ಲರೂ  ಏನಾಯಿತು ಎಂದು ಎದ್ದು ಗಾಬರಿಗೊಂಡೆವು .  ಅಷ್ಟರಲ್ಲಿ ಹೋದ ಕರೆಂಟ್ ಪುನಃ ಬಂದಿತ್ತು .
ಇತ್ತ ನಿದ್ದೆಗೆ ಜಾರುತ್ತಿದ್ದ ಅಪ್ಪನಿಗೆ ಕನಸೊಂದು ಬೀಳುತ್ತಿತ್ತು . ಕನಸಿನಲ್ಲಿ ಮನೆಯಲ್ಲಿರುವ ಅಡಕೆಯನ್ನು ಕದಿಯಲು ಕಳ್ಳರು ಮನೆಗೆ ನುಗ್ಗಿದ್ದರು . ಅಪ್ಪ ಅದನ್ನು ನೋಡುತ್ತಿದ್ದಾರೆ ದೂರದಲ್ಲೆಲ್ಲೋ ಅಡಿಕೆಯನ್ನು ಸುರಿಯುವ ಶಬ್ದ ಕೂಡ ಕೇಳುತ್ತಿದೆ . ಆದರೆ ಕಣ್ಣು ಬಿಟ್ಟು ಹಿಡಿಯಲು ಆಗುತ್ತಿಲ್ಲ. 
ಕಣ್ಣು ಬಿಡಲು ಆಗದಂತೆ ಏನೋ ಮಾಡಿದ್ದರೆ ಹೀಗೆ ಕನಸು ಮುಂದುವರೆಯುತ್ತಿರುವಾಗ ಅಣ್ಣ ಅಪ್ಪನನ್ನು ದಾಟಿಕೊಂಡು ಮುಂದೆ ಹೋಗುತ್ತಿದ್ದ ಅಪ್ಪ ಕಳ್ಳ ಎಂದುಕೊಂಡು ಹಿಡಿದುಕೊಂದುಬಿಟ್ಟರು . 
ಇನ್ನೇನು ಹೊಡೆಯಬೇಕು ಅನ್ನುವಷ್ಟರಲ್ಲಿ ಅಣ್ಣ ನು ಕೂಗಿಕೊಂಡ ಅಪ್ಪನು ಕೂಗಿಕೊಂಡರು. 

ಮಳೆಗಾಲ ವಾದದ್ದರಿಂದ ಮನೆಯ ಹಿಂದೆ ಕಟ್ಟಿದ್ದ ತಗಡಿನ ಮೇಲೆ ನೀರು ರಭಸವಾಗಿ ಬೀಳುತ್ತಿತ್ತು . ಆ ನೀರು ಬೀಳುವ ಶಬ್ದ ಅಡಿಕೆಯನ್ನು ಸುರಿದರೆ ಬೀಳುವ ಶಬ್ದದಂತೆಯೇ ಇತ್ತು ಅದು ಅಪ್ಪನಿಗೆ ದೂರದಲ್ಲಿ ಕೇಳುತ್ತಿದುದ್ದರಿಂದ ಅಡಿಕೆ ಕಡಿಯುತ್ತಿದ್ದಾರೆ ಎಂದು ಕೊಂಡಿದ್ದರು. ಆಗಷ್ಟೇ ದಾರವಾಹಿನೋಡಿ ಬರುತ್ತಿದ್ದ ಅಣ್ಣನಿಗೆ ಹಿಂದಿನಿಂದ ಯಾರೋ ಹಿಂಬಾಲಿಸುತ್ತಿದ್ದಾರೆ ಎನ್ನಿಸುತ್ತಿತ್ತು .  ಹಾಗಾಗಿ ಅವನಿಗೆ ಅಪ್ಪ ಕೈಹಿಡಿದ ತಕ್ಷಣ ಭಯವಾಗಿ ಕೂಗಿಕೊಂಡಿದ್ದ .
ಅದೇ ಸಮಯಕ್ಕೆ ಹೋಗಿದ್ದ ಕರೆಂಟ್ ಪುನಃ ಬಂದಿತ್ತು . ಇಲ್ಲದಿದ್ದರೆ ಅನಾಹುತವಾಗುತ್ತಿತ್ತು . 

ಅರ್ಪಿತಾ ಹರ್ಷ 
ಲಂಡನ್ 

Wednesday, 13 March 2013

ಸಸ್ಯ ಶಾಮಲ

ಅದೊಂದು ಸುಂದರ ಮನೆ . ದೂರದಿಂದ ನೋಡಿದರೆ ದೊಡ್ಡದೊಂದು ಮನೆಯ ಸುತ್ತಲು ಹಚ್ಚ ಹಸುರಿನಿಂದ ಕಂಗೊಳಿಸುವ ತೋಟ . ಬಿಸಿಲಿನಿಂದ ಸೂರ್ಯ ಕಣ್ಣು ಕುಕ್ಕಿ ಬೆವರಿಳಿಸುತ್ತಿದ್ದರೆ ಆ ಮನೆಗೆ ಹೊಕ್ಕು ಹಸುರಿನ ಜೊತೆಗೆ ಗಾಳಿಯಿಂದ ಮನಸ್ಸಿಗೆ ಸ್ವಲ್ಪ ಹಾಯೇನಿಸಿಕೊಳ್ಳೋಣ ಎಂದೆನಿಸದೆ ಇರದು . ಅಂತಹದೊಂದು ವಾತಾವರಣ  ಇರುವುದು ಕುಮಟ ದ ಶಾಮಲ ಜಗನಾಥ್ ಮನೆಯಲ್ಲಿ, ಮನೆಯ ಸುತ್ತಲಿರುವ ತೋಟದಲ್ಲಿ ,

ಕರಾವಳಿಯ ತೀರದ ಕುಮಟದ ಹತ್ತಿರದಲ್ಲಿ ದೊಡ್ಡದೊಂದು ಮನೆ ಕಟ್ಟಿಸಿ ಕೊಂಡಾಗ  ಸುತ್ತಲು ಬರೀ ಬಯಲು ಬೇಸಿಗೆಯ ಬಿಸಿ ಬೇಗೆಯನ್ನು ನೀಗಲು ಮಲೆನಾಡಿನಿಂದ ಬಂದ ಎಂತವರಿಗೂ  ಕೂಡ ಬಹಳ ಕಷ್ಟವೆನಿಸುತ್ತಿತ್ತು ಅಂತಹ ದಿನಗಳಲ್ಲಿ ಕೃಷಿಯ ಬಗ್ಗೆ ಮೊದಲಿನಿಂದಲೂ ಆಸಕ್ತಿ ಇದ್ದ ಶಾಮಲರವರು ಪುಟ್ಟದೊಂದು ಗಾರ್ಡನ್ ತಯಾರಿಸುವ ಯೋಜನೆ ಹಾಕಿಕೊಂಡರು . ದಾಸವಾಳ, ಗುಲಾಬಿ, ತುಂಬೆ, ಸೇವಂತಿಗೆ ಹೀಗೆ ಹೂವುಗಳಿಂದ ಪ್ರಾರಂಭಿಸಿದ ಗಾರ್ಡನ್ ಬರಬರುತ್ತ ದೊಡ್ಡದೊಂದು ತೋಟವಾಯಿತು ಎಂಬುದು ನಿಜಕ್ಕೂ ಆಶ್ಚರ್ಯವೇ ಸರಿ . ಶಾಮಲ ಅವರಿಗಿದ್ದ ಆಸಕ್ತಿ ಕೇವಲ ಹುವುಗಳೇ ಏಕೆ ತರಕಾರಿಗಳನ್ನು ಬೆಳೆಯಬಹುದು ಎಂದು ಪ್ರಾರಂಭಿಸುವಲ್ಲಿ ಉತ್ಸಾಹ ಹೆಚ್ಚಿಸಿತು . 
ಈಗ ಅವರ ತೋಟದಲ್ಲಿ ಬೆಳೆಯದ ತರಕಾರಿಗಲಿಲ್ಲ. ಇದರ ನಡುವೆ ಬೋನ್ಸಾಯ್ ಬಗ್ಗೆ ಹೆಚ್ಚು ಆಸಕ್ತಿ ಹುಟ್ಟಿಸಿಕೊಂಡ ಶಾಮಲ ರವರು ಪತಿಯ ಸಹಕಾರದೊಂದಿಗೆ ಅದನ್ನು ಪ್ರಾರಂಭಿಸಿದರು . ಶಾಮಲ ಅವರ ಮನೆಗೆ ಹೋದರೆ ಬಾಗಿಲಲ್ಲೇ ಪುಟ್ಟ ಪುಟ್ಟ ಗಿಡಗಳಲ್ಲಿ ನಿಂಬು , ಮಾವು, ಎಲ್ಲವು ನಮ್ಮನ್ನು ಸ್ವಾಗತಿಸುತ್ತವೆ. ೫೦ ಕ್ಕೂ ಹೆಚ್ಚು ಬೇರೆಬೇರೆ ರೀತಿಯ ಬೋನ್ಸಾಯ್ ಗಿಡಗಳಿವೆ .ಇವರ ವಿವಿದ ರೀತಿಯ ಬೋನ್ಸಾಯ್ ಗಿಡಗಳನ್ನು ಮದುವೆ  ಇನ್ನಿತರ ಕಾರ್ಯಕ್ರಮಗಳಿಗೆ ಅಲಂಕಾರಕ್ಕಾಗಿ ತೆಗೆದುಕೊಂಡು ಹೋಗುವವರು ಉಂಟು . ತೋಟದ ನಡುವೆಯೇ ಸಣ್ಣ ಪುಟ್ಟ ಕೊಳಗಳ ರೀತಿಯ ಟ್ಯಾಂಕ್ ನಿರ್ಮಿಸಿ ಗಾರ್ಡನ್ ಅಂದವನ್ನು ಇನ್ನಷ್ಟು ಹೆಚ್ಚಿಸಿದ್ದಾರೆ.

ತೋಟಕ್ಕೆ ಬೇಕಾದ ಗೊಬ್ಬರಗಳನ್ನು ನೀಡುತ್ತಿದ್ದುದ್ದು  ದನಕರುಗಳು ಅದರ  ಬಗ್ಗೆಯೂ ಯೋಚಿಸಿದ ಶಾಮಲ ರವರು ಮನೆಯ ಮುಂದೊಂದು ದೊಡ್ಡ ಟ್ಯಾಂಕ್ ಕಟ್ಟಿಸಿ  ಬಿಸಿಲಿನ ಬೇಗೆ ನೀಗಿಸಿಕೊಳ್ಳಲು ದನಕರುಗಳಿಗೆ ನೀರಿನ ವ್ಯವಸ್ಥೆ ಕೂಡ ಮಾಡಿದ್ದಾರೆ.  ಬಾಳೆ , ತೆಂಗು , ತರಕಾರಿಗಳಾದ ಬೀನ್ಸ್, ಬದನೇಕಾಯಿ, ಟೊಮೇಟೊ , ಮೆಣಸಿನ ಕಾಯಿ ಇವುಗಳಿಗೆ ಕೊರತೆಇಲ್ಲ. ಇವೆಲ್ಲಕ್ಕೂ ಸಾಕಷ್ಟು ಶ್ರಮ ಬೇಕು .  ಮನೆಯ ಅಡುಗೆ , ಇಬ್ಬರು ಮಕ್ಕಳ ವಿದ್ಯಾಭ್ಯಾಸ ದ ಜೊತೆಗೆ ದೊಡ್ಡ ಮಟ್ಟದಲ್ಲಿ ಗಾರ್ಡನಿಂಗ್ ಮಾಡಿ ಯಶಸ್ವಿಯಾಗುವುದರಲ್ಲಿ ಶಾಮಲರವರ ಶ್ರಮ ಅಪಾರ. ಅದಕ್ಕೆ ಸರಿಯಾಗಿ ಸಾಥ್ ನೀಡುವುದರಲ್ಲಿ ಪತಿ ಮತ್ತು ಮಕ್ಕಳು ಕೂಡ ಜೊತೆಯಾಗಿದ್ದಾರೆ ಎಂದು ಸಂತೋಷದಿಂದ ಹಂಚಿಕೊಳ್ಳುತ್ತಾರೆ ಶಾಮಲರವರು .
ಇದಿಷ್ಟೇ ಅಲ್ಲ ಶಾಮಲರವರ ಹವ್ಯಾಸಗಳು ಹಲವು ಸುಧಾ ತರಂಗಗಳಲ್ಲಿ ಬರುವ ಧಾರಾವಾಹಿಗಳನ್ನು ಒಟ್ಟುಗೂಡಿಸಿ ಕಾದಮ್ಬರಿಯಾಗಿ ಜೋಡಿಸಿಟ್ಟಿದ್ದಾರೆ.  ಹೌಸ್ ಡೆಕೊರೇಶನ್ ಕೂಡ ಇವರ ಇಷ್ಟದ ಹವ್ಯಾಸ . ಗ್ಲಾಸ್ ಪೇಂಟಿಂಗ್ , ಹೂವಿನ ಕುಂಡಗಳು , ವಿವಿದ ರೀತಿಯ ಹೂವುಗಳು, ಹೀಗೆ ಇವರ ಮನೆಯ ಗೋಡೆ ಮತ್ತು ಶೋಕೇಸ್ ಗಳು ತುಂಬಿಹೋಗಿವೆ . ಮನೆಗೆ ಬಂದವರ ಗಮನ ಸೆಳೆದಿವೆ. 

ಲಂಡನ್ ಲೈಫ್ ಸ್ಟೈಲ್

 Published in Sakhi Magazine ...May 1st 2013


ತಾಯ್ತನ ಎನ್ನುವುದು ಒಂದು ಸುಂದರ ಅನುಭವ . ಅದಕ್ಕಾಗಿ ಕಾಯುವವರು ಬಹಳ ಹಾಗೆ ಅದರ ಸಿದ್ದತೆ ಮತ್ತು ಮಗು ಹುಟ್ಟಿದ ನಂತರ ನಡೆಸುವ ಬಾಳಂತನ  ಇವು ಕೂಡ ಸಾಕಷ್ಟು . ನಮ್ಮ ದೇಶದಲ್ಲಿ ತಾಯಿಯಾಗುತ್ತಿದ್ದಂತೆ ಪ್ರಾರಂಭವಾಗುತ್ತದೆ ಮುನ್ನೆಚ್ಚರಿಕೆ ಅದರಲ್ಲೂ ದಿನ ತುಂಬಿದ ಬಸುರಿಗಂತೂ ಕುಳಿತಲ್ಲೇ ಸೇವೆ ಎನ್ನುವಷ್ಟು . ಹಾಗೆಯೇ ಮಗು ಹುಟ್ಟಿದ ೩ ತಿಂಗಳು ಮನೆಯಿಂದ ಎಲ್ಲೂ ಹೊರ ಹೊರಡುವುದಿಲ್ಲ ಅದರಲ್ಲೂ ಮೊದಲ ಮಗುವಾದರಂತೂ  ಸರಿಯಾಗಿ ೩ ತಿಂಗಳು ಬಾಳಂತನ  ಮಾಡಿ ಕೊಂಡರೆಯೇ  ಗಟ್ಟಿ ಎಂಬುದು ಮೊದಲಿನಿಂದಲೂ ಬೆಳೆದು ಬಂದ ಪದ್ಧತಿ  ಮತ್ತು ಅದು ಈಗಲೂ ಬೆಳೆದುಕೊಂಡು  ಎಲ್ಲರೂ  ನಡೆಸಿಕೊಂಡು ಕೂಡ ಬರುತ್ತಿದ್ದಾರೆ.  ಇಂಜಿನಿಯರ್ ಗೆಳತಿಯೊಬ್ಬಳು ಹೇಳಿದ್ದಳು ಅವಳು ಹೆರಿಗೆಯ ದಿನಗಳು ಹತ್ತಿರಬರುತ್ತಿದ್ದಂತೆ ರಜೆ ತೆಗೆದುಕೊಂಡರೆ ಆನ್ ಸೈಟ್ ನ ಕ್ಲೈಂಟ್ ಗಳು ಇನ್ನೊಂದು ವಾರದಲ್ಲಿ ಬರುತ್ತೀರಾ ಕೇಳಿದರು ಎಂದು . ಆಶ್ಚರ್ಯವಾಗಿತ್ತು ಆಗ. ಆದರೆ ಈ ಲಂಡನ್ ಗೆ ಬಂದ  ಮೇಲೆ ಅದರ ಬಗ್ಗೆ ಪೂರ್ಣ ಮಾಹಿತಿ ದೊರೆಯಿತು . 

ಇಲ್ಲಿ ಹೆಣ್ಣು ಮಕ್ಕಳು ೧೫ ವರ್ಷದಿಂದಲೇ ತಾಯಿಯಾಗಿರುವ ಸಾಕಷ್ಟು ಉದಾಹರಣೆಗಳಿವೆ . ಅದು ತಪ್ಪು ಎಂದು ಇಲ್ಲಿಯ ಜನ ಹೇಳುವುದಿಲ್ಲ. ಹಾಗೆಯೇ ೪೦ ವರ್ಷದವರು ಕೂಡ ತಾಯಿಯಾಗುತ್ತಾರೆ. ಆದರೆ ನಮ್ಮ ಭಾರತಕ್ಕೂ ಈ ಇಂಗ್ಲೆಂಡ್ ಗು ಬಹಳಷ್ಟು ವ್ಯತ್ಯಾಸವಿದೆ. ಇಲ್ಲಿ ತುಂಬು ಬಸುರಿ ಒಂಬತ್ತು ತಿಂಗಳು ನಾಳೆಗೆ ಡ್ಯು ಡೇಟ್ ಅಂದರೂ  ಕೂಡ ನಿರಾಳವಾಗಿ ಯಾವುದೇ ತೊಂದರೆ ಇಲ್ಲದಂತೆ ಆಫೀಸ್ ಗೆ ಹೋಗುತ್ತಾಳೆ . ಡಾಕ್ಟರ್ ಕೊಟ್ಟ ಡೇಟ್ ನಂತರ ಇನ್ನೇನು ಲೇಬರ್ ಪೈನ್ ತುಂಬಾ ಕಾಣುತ್ತಿದೆ ಎಂದಾಗ ಮಾತ್ರ ಆಫೀಸ್ ಗೆ ರಜೆ ಹಾಕಿ ಆಸ್ಪತ್ರೆ ಗೆ ಅಡ್ಮಿಟ್ ಆಗುತ್ತಾರೆ. ಜೊತೆಗೆ ಇಲ್ಲಿ ಯಾವುದೇ ಕಾರಣಕ್ಕೂ ಸಿಸೇರಿಯನ್ ಮಾಡುವುದಿಲ್ಲ ಈ ಕಾರಣದಿಂದ ಸಾಕಷ್ಟು ಹೆಂಗಳೆಯರು ಪ್ರಾಣ ಕಳೆದುಕೊಂಡಿರುವ  ಉದಾಹರಣೆಗಳು  ಕೂಡ ಇವೆ . ಆದರೆ ನಾರ್ಮಲ್ ಡೆಲಿವರಿ ಆಗಬೇಕು ಎಂಬುದು ಡಾಕ್ಟರ ಕೊಡುವ ಅಭಿಪ್ರಾಯ.  ಆದರೂ  ನಾರ್ಮಲ್ ಡೆಲಿವರಿ ಆಗುವುದರ ಮೂಲಕ ಮತ್ತಷ್ಟು ಬಲಿಷ್ಟರಾಗುತ್ತಾರೆ ಎಂಬುದು ಸತ್ಯ .

ಒಮ್ಮೆ ಪ್ರಸಿದ್ಧ ಮೇಡಂ ತುಸ್ಸಾದ್ ನನ್ನು ನೋಡಲು ಹೋಗಿದ್ದೆವು ಅಲ್ಲಿ ದೊಡ್ಡ ಕ್ಯು ಇದ್ದ ಕಾರಣ ಒಬ್ಬರ ಹಿಂದೆ ಒಬ್ಬರು ಟಿಕೆಟ್ ಪಡೆಯಲೋಸುಗ ನಿಂತಿದ್ದೆವು . ನನ್ನ ಮುಂದೇ ನಿಂತಿರುವ ಹೆಣ್ಣುಮಗಳಿಗೆ ಸುಮಾರು ೩೦ ರ ಅಸುಪಾಸಿರಬಹುದು ಕೈಯಲ್ಲೊಂದು ಪುಟ್ಟ ಮಗುವಿತ್ತು . ಅದೆಷ್ಟು ಪುಟ್ಟ ಮಗುವಾಗಿತ್ತೆಂದರೆ ಕಣ್ಣು ಕೂಡ ಆಗಷ್ಟೇ ಬಿಟ್ಟಂತೆ  ಇತ್ತು . ನನಗೆ  ಕುತೂಹಲ ತಡೆಯಲಾಗಲಿಲ್ಲ ಕೇಳಿದೆ ಎಷ್ಟು ತಿಂಗಳ ಮಗುವಿದು ಅಂತ ಅವರೆಂದರು ೪ ದಿನದ ಹಿಂದೆ ಹುಟ್ಟಿದ್ದು ಎಂದು , ಆಕೆ ಆ ಮಗುವನ್ನು ಎತ್ತಿಕೊಂಡು ಕ್ಯೂನಲ್ಲಿ ಸುಮಾರು ೨ ತಾಸುಗಟ್ಟಲೆ ನಿಂತಿದ್ದಳು ಮತ್ತು ನಂತರ ೨ ತಾಸು ಸಂಗ್ರಹಾಲಯ ಸುತ್ತಿ ಹೋದಳು . ನಿಜಕ್ಕೂ ಆಶ್ಚರ್ಯವೆನಿಸುತ್ತದೆ .  ಇಂಗ್ಲೆಂಡ್ ನಲ್ಲಿ ಬಾಳಂತನ  ಎಂದು ಯಾವುದೇ ರೀತಿಯಲ್ಲಿ ಆರೈಕೆ ಮಾಡಿಕೊಳ್ಳುವುದಿಲ್ಲ ಉಳಿದ ದಿನಗಳಂತೆಯೇ  ಇರುತ್ತಾರೆ ಎಂಬುದು ವಿಶೇಷವೆ ಸರಿ . 

ಹಾಗೆಯೇ ಇಲ್ಲಿಯ ಜನ ಮಗುವನ್ನು ಕಾರ್ ನಲ್ಲಿ ಕರೆದುಕೊಂಡು ಹೋಗುವಾಗ ಹಿಂಬದಿಯಲ್ಲಿ ಒಂಟಿಯಾಗಿ ಕೂರಿಸಿರುತ್ತಾರೆ. ಮಗುವಿನ ಸುತ್ತಲೊಂದು ಬೆಲ್ಟ್ ಹಾಕಿ ಹಿಂದಿನ ಸೀಟಿನಲ್ಲಿ ಒಂಟಿಯಾಗಿ ಮಗು ಕುಳಿತಿರುತ್ತದೆ. ಇದರಿಂದ ಮಗು ಸ್ವತಂತ್ರವಾಗಿ ಬೆಳೆಯಲಿ ಎಂಬ ಉದ್ದೇಶದಿಂದ ಈ ರೀತಿಯಾಗಿ ಬೆಳೆಸುತ್ತಾರೆ . ಮಗುವಿಗೆ ಒಂದು ಆರು ತಿನ್ಗಲಾಗುತ್ತಿದ್ದಂತೆ ಪ್ರತ್ಯೇಕವಾದ ರೂಂ ನಲ್ಲಿ ಮಲಗಿಸುತ್ತಾರೆ. ಇದರಿಂದ ಮಗು ಬೇರೆಯವರ ಮೇಲೇ ಅವಲಂಬಿತವಾಗಿರುವುದಿಲ್ಲ . ಮುಂದೆ ತನ್ನ ಕಾಲ ಮೇಲೆ ತಾನು ನಿಲ್ಲುವಷ್ಟು ಸಾಮರ್ಥ್ಯವನ್ನು ಹೊಂದುತ್ತದೆ ಎಂಬುದು ಅವರು ನೀಡುವ ಅಭಿಪ್ರಾಯ .

ಇಲ್ಲಿ ಚಳಿಗಾಲದಲ್ಲಿ -೪ ವರೆಗೂ ಚಳಿ ಇರುತ್ತದೆ . ಕೆಲವೊಮ್ಮೆ ಹಿಮ ಕೂಡ ಬೀಳುತ್ತಿರುತ್ತದೆ. ಆದರೆ ಇಲ್ಲಿ ಹುಟ್ಟಿದ ಪುಟ್ಟ ಮಗುವು ಕೂಡ ಈ ವಾತಾವರಣವಕ್ಕೆ ಬಹುಬೇಗ ಹೊಂದಿಕೊಂದುಬಿದುತ್ತವೆ. ಗೆಳತಿಯೊಬ್ಬಳಿಗೆ ಲಂಡನ್ ನಲ್ಲಿಯೇ ಮಗುವಾಗಿತ್ತು ಆ ಮಗು ಎಷ್ಟೊಂದು ಭಿನ್ನವಾಗಿತ್ತೆಂದರೆ ಮಗುವಿಗೆ ಅಮ್ಮ ಸದಾ ಜೊತೆಗಿರಬೇಕು ಎಂದೆನಿಸುತ್ತಲೇ ಇರಲಿಲ್ಲ . ಅದರಷ್ಟಕ್ಕೆ ಅದು ಆಡಿಕೊಂಡು ಇದ್ದುಬಿಡುತ್ತಿತ್ತು . ಹಾಗೆಯೇ ಇಂತಹ ಮಕ್ಕಳು ಬೆಳೆದು ದೊಡ್ದವರಾಗುತ್ತಿದ್ದಂತೆ ಸಂಬಂಧ ಗಳಿಗೆ ಬೆಲೆ ಕೊಡುವುದಿಲ್ಲ .ಯಾರು ಇಲ್ಲದೆಯೇ ಕೂಡ ಬದುಕಿಬಿಡಬಲ್ಲವು  ಎಂಬುದು ಕೂಡ ವಿಷಾದನೀಯ . ಆದರೆ ಇಲ್ಲಿಯ ಪೋಷಕರು ಮಕ್ಕಳಿಗೆ ಬಹಳ ಪ್ರಾಮುಖ್ಯತೆ ಕೊಡುತ್ತಾರೆ. ಮಕ್ಕಳಿಗೆ ಹೊಡೆಯುವುದಿಲ್ಲ ಬಹಳ ಪ್ರೀತಿಯಿಂದ ತಿದ್ದುತ್ತಾರೆ. ಇಲ್ಲಿಯ ಸರ್ಕಾರಿ ಕಟ್ಟುಪಾಡುಗಳು ಹಾಗೆ ಇವೆ ಇಲ್ಲಿ ಮಕ್ಕಳನ್ನು ಹೊಡೆಯುವಂತಿಲ್ಲ ಪ್ರೀತಿಯಿಂದ ಮನ ಗೆಲ್ಲಬೇಕು ಎನ್ನುತ್ತಾರೆ. ಶಾಲೆಗಳಿಗೆ ಸೇರಿದ ಮಗುವಿಗೆ ಸುಮಾರು ೫ ವರ್ಷಗಳವರೆಗೆ ಕೇವಲ ಆಟಕ್ಕೆ ಪ್ರಾಮುಖ್ಯತೆ ನೀಡಲಾಗುತ್ತದೆ. ನಂತರ ನಿಧಾನವಾಗಿ ಪಾಠ ಪ್ರಾರಂಭಿಸುತ್ತಾರೆ. ಇದು ಲಂಡನ್ ನ ಲೈಫ್ ಸ್ಟೈಲ್ . 

ಪುಟ್ಟ ದ್ವೀಪ ಈ ಹೊನ್ನೇಮರುಡು


ಈ ನನ್ನ ಲೇಖನವು ಮಾರ್ಚ್(15/2013)  ಸಖಿ ಪಾಕ್ಷಿಕದಲ್ಲಿ  ಪ್ರಕಟಗೊಂಡಿದೆ
http://www.kannadaprabha.com/travel-automobile/trip-to-honnemarudu/246313.html




ಹುಟ್ಟಿ ಬೆಳೆದದ್ದೆಲ್ಲ ಮಲೆನಾಡು ಆದ್ದರಿಂದ ನೀರೆಂದರೆ ಬಹಳ ಇಷ್ಟ ಜೊತೆಗೆ ಟ್ರಕ್ಕಿಂಗ್ ಕೂಡ. ನೀರು ಮತ್ತು ಟ್ರಕ್ಕಿಂಗ್ ಸಾಮಾನ್ಯವಾಗಿ ಎಲ್ಲಾರಿಗೂ  ಇಷ್ಟವಾಗುತ್ತದೆ. ವೀಕೆಂಡ್ ನ ೨ ದಿನಗಳಲ್ಲಿ ಒಮ್ಮೆ ಪ್ರಕೃತಿಯ ಮಡಿಲಲ್ಲಿ ಸುತ್ತಿಬಂದರೆ ಮನಸ್ಸಿಗೆ ಹೊಸ ಹುರುಪು ಬರುವುದು ಖಂಡಿತ . ಅಂತಹದೇ ಒಂದು ಉದ್ದೇಶವನ್ನು ಇಟ್ಟುಕೊಂಡು ನಾವು ಹಾಗೆ ನಮ್ಮ ಇಷ್ಟದಂತೆ ಒಮ್ಮೆ ನಮ್ಮ ಮಾವನ ಮನೆಯಿಂದ ಎಲ್ಲರೂ  ಸೇರಿ ಸುಮಾರು ೧೦ ಜನ ಸೇರಿ ಹೋದ ಸ್ಥಳವೇ  ಹೊನ್ನೇ ಮರುಡು . 


ಹೊನ್ನೇ ಮರುಡು ಎನ್ನುವುದು ಒಂದು ಪ್ರವಾಸಿ ತಾಣ ಇದು ಶಿವಮೊಗ್ಗ ಜಿಲ್ಲೆಯ ಸಾಗರದಿಂದ ಸುಮಾರು ೨೦ ಕಿ, ಮೀ ನಲ್ಲಿದೆ . ಸಾಮಾನ್ಯವಾಗಿ ಜಗತ್ಪ್ರಸಿದ್ದ ಜೋಗ್ ಫಾಲ್ಸ್ ಗೆ ಹೋಗುವವರೆಲ್ಲರೂ ಹೋಗಲೇಬೇಕಾದ ಸ್ಥಳವಿದು .  ಶರಾವತಿ ಬ್ಯಾಕ್ ವಾಟರ್ ನಿಂದ ತುಂಬಿದ ಸ್ಥಳ .ಫೈರ್ ಕ್ಯಾಂಪ್ ಮಾಡಲು ಯೋಗ್ಯ ಸ್ಥಳವೆನ್ನಬಹುದು ಜೊತೆಗೆ  ಇದೊಂದು ಟ್ರಕ್ಕಿಂಗ್ ಗೆ ಸೂಕ್ತ ಜಾಗ ಜೊತೆಗೆ ನೀರನ್ನು ಇಷ್ಟಪಡುವವರು ಬೋಟಿಂಗ್  ಎಂಜಾಯ್ ಮಾಡುವವರು ನೋಡಲೇಬೇಕಾದ ಸ್ಥಳ. ಇಲ್ಲಿ ಉಳಿಯಲು ಕೂಡ ವ್ಯವಸ್ಥೆಇದೆ ಆದರೆ ಯಾವುದೇ ಕಾರಣಕ್ಕೂ ಆಡಂಬರವಾದ ಹೋಟೆಲ್ ಅನ್ನು ನಿರೀಕ್ಷಿಸಿ ಹೋಗಬೇಡಿ. ಇಲ್ಲಿ ತಂಗಬೇಕಾದಲ್ಲಿ ಟೆಂಟ್ ಕಟ್ಟಿಕೊಂಡು ಅಲ್ಲಿ ಮಲಗುವ ವ್ಯವಸ್ಥೆ ಮಾಡಿಕೊಡಲಾಗುತ್ತದೆ. ಜೊತೆಗೆ ಬೆಳಗಿನಿಂದ ಸಂಜೆಯವರೆಗೆ ನೀರಿನಲ್ಲಿ ಆಟವಾಡಬಹುದು ಜೊತೆಗೆ ತೆಪ್ಪದಲ್ಲಿ ಬೋಟಿಂಗ್ ವ್ಯವಸ್ಥೆ ಇದೆ . ಮಳೆಗಾಲ ಇದಕ್ಕೆ ಸೂಕ್ತ ಕಾಲವಾದರೂ ಚಳಿ ಕಾಲದಲ್ಲೂ  ಹೋಗಬಹುದು . ಇಲ್ಲಿ ಹೋಗಲು ಈಗ ಬೆಂಗಳೂರಿನಿಂದ ತಾಳಗುಪ್ಪ ಅಥವಾ ಸಾಗರದ ವರೆಗೆ ರೈಲಿನಲ್ಲಿ ಹೋಗಬಹುದು . ತಾಳಗುಪ್ಪದಿಂದ ಆಟೋ ಅಥವಾ ಓಮಿನಿ ಕೂಡ ದೊರೆಯುತ್ತದೆ. ನಡೆಯಲು ಇಷ್ಟಪಡುವವರಾದರೆ ತಾಳಗುಪ್ಪದಿಂದ ಹಿರೇಮನೆ ಎಂಬಲ್ಲಿ ಇಳಿದು ಅಲ್ಲಿಂದ ಸುಮಾರು ೫ ಕಿ,ಮಿ ಅಷ್ಟು ನಡೆದು ಹೋಗಬೇಕಾಗುತ್ತದೆ. ಸ್ವಂತ ವಾಹನದಲ್ಲಾದರೆ ಸ್ವಲ್ಪ ಜಾಗ್ರತೆ ರಸ್ತೆ ಸ್ವಲ್ಪ ಒರಟಾಗಿದೆ.


ಮಳೆಗಾಲದಲ್ಲಿ ಇಲ್ಲಿ ಉಮ್ಬಳ ಗಳ ಹಾವಳಿ ಬಹಳ . ಟ್ರಕ್ಕಿಂಗ್ ಹೋಗಬೇಕಾದರೆ ಬಹಳ ಮುಂಜಾಗರುಕರಾಗಿ ಅದಕ್ಕೆ ಬೇಕಾದ ಶೂ ಗಳನ್ನೂ ಹಾಕಿಕೊಂಡು ಹೋಗುವುದು ಉತ್ತಮ. ಜೊತೆಗೆ ರೈನ್ ಕೋಟ್ ಮತ್ತು ರಾತ್ರಿ ಸಮಯದಲ್ಲಿ ಬೇಕಾಗುವ ಬ್ಯಾಟರಿಯನ್ನು ಕೊಂಡೊಯ್ಯಬೇಕು . ಮೊದಲೇ ಬುಕ್ ಮಾಡಿಟ್ಟರೆ ಊಟ ತಿಂಡಿಯ ವ್ಯವಸ್ಥೆ ಮಾಡಲಾಗುತ್ತದೆ . ಆದರೂ  ಬಿಸ್ಕೆಟ್ , ಚಿಪ್ಸ್ ಇಂತವುಗಳನ್ನೆಲ್ಲ ಮೊದಲೇ ಪ್ಯಾಕ್ ಮಾಡಿಟ್ಟುಕೊಳ್ಳಿ ಏಕೆಂದರೆ ಅಲ್ಲಿ ಹತ್ತಿರದಲ್ಲೆಲ್ಲೂ ಅಂಗಡಿಗಳಿಲ್ಲ . ತಾಳಗುಪ್ಪಕ್ಕೆ ಬರಬೇಕಾಗುತ್ತದೆ. ಎಂತವರೂ  ಹೋಗಿ ಬರಬಹುದಾದ ಸ್ಥಳವಿದು . ಟ್ರೈನ್ ನಲ್ಲಿ ಹೋಗಿ ಬಂದರೆ ಒಬ್ಬರಿಗೆ ೫೦೦ ರು ಬರಬಹುದು .ಒಂದು ದಿನ ನೀರು ಜೊತೆಗೆ ಟ್ರಕ್ಕಿಂಗ್ ಮುಗಿಸಿ ಮರುದಿನ ಅಲ್ಲಿಂದ ಮುಂದೆ ಜೋಗ ಫಾಲ್ಸ್ ಗೆ ಹೋಗಿ ಜಗತ್ಪ್ರಸಿದ್ಧ ಜೋಗ್ಫಾಲ್ಸ್ ನೋಡಿ ಹಿಂದಿರುಗಬಹುದು .

ಬೆಂಗಳೂರಿನ ಬ್ಯುಸಿ ಲೈಫ್ ನಲ್ಲಿ ಕಳೆದುಹೊಗಿರುವವರಿಗೆ ಈ ಪ್ರಕೃತಿಯ ಮಡಿಲು ಇಷ್ಟವಾಗುವುದರಲ್ಲಿ ಖಂಡಿತ ಅನುಮಾನವಿಲ್ಲ. ಪುಟ್ಟದೊಂದು ದ್ವೀಪದಂತೆ ಇರುವ ಈ ಹೊನ್ನೇ ಮರುಡಿನ ಸೊಬಗನ್ನು ಹೋಗಿಯೇ ಆನಂದಿಸಬೇಕು ಬಣ್ಣಿಸಲು ಬಹಳ ಕಷ್ಟ .ಒಂದು ದಿನ ಆ ಹಸಿರು ನಿಸರ್ಗದ ಮಡಿಲಲ್ಲಿ ಟೆಂಟ್ ನಲ್ಲಿ ಕಳೆದರೆ ಆ ನೆನಪು ಹಚ್ಚಹಸಿರಾಗಿರುವುದು ಖಂಡಿತ .

ಅರ್ಪಿತಾ ಹರ್ಷ .

Friday, 8 March 2013

ದೇಶದ ಅಭಿವೃದ್ದಿಯ ಸಂಕೇತ




ವಿಜಯ ನೆಕ್ಸ್ಟ್ನಲ್ಲಿ ಮಹಿಳಾ ದಿನಾಚರಣೆಯ ಲೇಖನಕ್ಕೆ ನನ್ನದೂ ಒಂದು ಸಣ್ಣ ಅಭಿಪ್ರಾಯ . ೦೮/೦೩/೧೩ ರಂದು ಪ್ರಕಟಗೊಂಡಿದೆ .


ಹಳ್ಳಿ ಮತ್ತು ಪಟ್ಟಣ ಎರಡೂ ಕಡೆಗಳಲ್ಲಿ ಕಾಲಕ್ಕೆ ತಕ್ಕಂತೆ ಹೆಣ್ಣು ಮಕ್ಕಳ ಆಕಾಂಕ್ಷೆಗಳು ಕೂಡ ಬದಲಾಗುತ್ತಿದೆ .  ಇಂದಿನ ಹೆಂಗಳೆಯರು ಹೊರಹೋಗಿ ದುಡಿದು ಯಾವುದೇ ಗಂಡಸರಿಗೂ ಕಡಿಮೆ ಇಲ್ಲ ಎಂದು ತೋರಿಸುತ್ತಿದ್ದಾರೆ.  ಬೇರೆಬೇರೆ ಫೀಲ್ಡ್ ಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ . ಮನೆಯ ಹೊರಗೆ ಮತ್ತು ಒಳಗೆ ದುಡಿಯುವಲ್ಲಿ ಸಫಲಳಾಗಿದ್ದಾಳೆ .
ಐ ಟಿ , ಸಿನೆಮಾ , ಪತ್ರಿಕೋದ್ಯಮ,ಮಾದ್ಯಮ , ಖಾಸಗಿ ಕಂಪನಿ, ರಾಜಕೀಯಗಳಲ್ಲಿ ಸೈ  ಎನಿಸಿಕೊಳ್ಳುತ್ತಿದ್ದಾರೆ . ಹಳ್ಳಿಗಳಲ್ಲಿರುವ ಹೆಣ್ಣುಮಕ್ಕಳು ಕೂಡ ಸ್ವಂತ ಉದ್ಯೋಗ , ಶಿಕ್ಷಣಗಳ ಬಗ್ಗೆ ಹೆಚ್ಚು ಗಮನ ಹರಿಸುತ್ತಿದ್ದಾರೆ. ಇದು ದೇಶದ ಅಭಿವೃದ್ಧಿಗೆ ಇನ್ನಷ್ಟು ಸಹಾಯಕವಾಗುವುದು ಎನ್ನುವುದು ನನ್ನ ಅಭಿಪ್ರಾಯ.
ಓದಿನಲ್ಲೂ ಕೂಡ ಹೆಣ್ಣು ಮಕ್ಕಳೇ ಮುಂದಿದ್ದಾರೆ .   ಇದು ದೇಶದ ಅಭಿವೃದ್ದಿಯ ಸಂಕೇತ. ಇದರಿಂದ ಬೇರೆ ದೇಶಗಳಲ್ಲಿರುವಂತೆ ನಮ್ಮ ದೇಶದಲ್ಲೂ ಯಾವುದೇ ರೀತಿಯ ತಾರತಮ್ಯತೆ ಇಲ್ಲದೆ ,ಸಮಾನತೆ ದೊರೆಯುತ್ತಿದೆ ಮತ್ತು ಸಂಪೂರ್ಣವಾಗಿ ದೊರೆಯುತ್ತದೆ ಎಂಬುದರಲ್ಲಿ ಸಂಶಯವಿಲ್ಲ ಎಂದೆನಿಸುತ್ತದೆ.

Arpitha Harsha 
London 

Thursday, 28 February 2013

ಮರೆಯಾಗದಿರು ನೆನಪೇ !

ಇಂದೇಕೋ ನಮ್ಮ ಮಲೆನಾಡು ಬಹಳ ನೆನಪಾಯಿತು ಹಾಗೆ ಆಗುತ್ತಲೇ ಇರುತ್ತದೆ . ಹಳೆಯ ನೆನಪುಗಳು ಹಸಿರಾಗಿ ಆಗಾಗ ಬಂದು ನಮ್ಮನ್ನು ಹಸಿ ಮಾಡಿ ಹೋಗುತ್ತದೆ ನಮ್ಮನ್ನು ಆ ದಿನಗಳಿಗೊಮ್ಮೆ ಕರೆದುಕೊಂಡು ಹೋಗಿಬಿಡುತ್ತದೆ. ನಮ್ಮೂರು ನೆನಪಾಗುವುದು ಮಳೆ ಹನಿ ಹಾಕಿದಾಗ ನಮ್ಮ ಮಲೆನಾಡಿನ ಆ ಬೋರ್ಗರೆವ ಮಳೆಯೆಲ್ಲಿ? ಈ ಸೂರ್ಯ ಮುಳುಗದ ನಾಡಿನ ತೊಟ್ಟಿಕ್ಕುವ ಮಳೆಯೆಲ್ಲಿ ? ಎತ್ತನಿಂದ ಎತ್ತಣ ಸಂಬಂದ . ಹೇಗೆ ನೋಡಿದರೂ  ಅಲ್ಲಿಗೂ ಇಲ್ಲಿಗೂ ಯಾವ ಹೋಲಿಕೆಯೂ  ಇರಲಾರದು .
 ಆದರೆ ಇಂದು ನೆನಪಾಗಲು ಬೇರೆಯದೇ ಕಾರಣವಿದೆ .  ಮೊದಲೆಲ್ಲ ದಿನಕ್ಕೊಮ್ಮೆ ಮನೆಗೆ ಫೋನ್ ಮಾಡಿ ಲಂಡನ್ ನ ವಾರ್ತೆ ತಿಳಿಸುತ್ತಿದ್ದೆ ಅಮ್ಮನಿಗೆ . ಈಗ ೧೫ ದಿನಗಳಿಂದ ಬೇರೆಯ ಕಾರ್ಯಗಳಲ್ಲಿ ಬ್ಯುಸಿ ಅಗಿಹೊಗಿದ್ದರಿಂದ ಫೋನ್ ಮಾಡುವ ಸಮಯವೇ ಸಿಕ್ಕಿರಲಿಲ್ಲ ಅದರಲ್ಲೂ ಭಾರತದ ಮತ್ತು ಈ ಲಂಡನ್ ನ ನಡುವೆ ೫.೩೦ ತಾಸಿನಷ್ಟು ವ್ಯತ್ಯಾಸವಿರುವುದರಿಂದ ನಾವಿಲ್ಲಿ ಬಿಡುವಾಗುವಷ್ಟರಲ್ಲಿ  ಅಲ್ಲಿ ಮದ್ಯ ರಾತ್ರಿ ಆಗಿಬಿತ್ತಿರುತ್ತದೆ . ಇಂದು ಅಮ್ಮ ಫೋನ್ ಮಾಡಿಲ್ಲದಕ್ಕೆ  ಬಹಳ ಬೇಸರಗೊಂಡಿದ್ದಳು . ಮಕ್ಕಳು ದೊಡ್ದವರಾಗುತ್ತಿದ್ದಂತೆ ತಮ್ಮ ಬದುಕಿನಲ್ಲಿ ನಮ್ಮ ನೆನಪೇ ಇರಲಾರದು ಎಂದಳು . ಎಷ್ಟು ಸತ್ಯವಾದ ಮಾತು . ಇಪ್ಪತ್ತು   ವರ್ಷ ಏನು ಕೆಲಸ ಮಾಡುವಾಗಲೂ  ಅಪ್ಪ ಅಮ್ಮ ನನ್ನು ಕೇಳುತ್ತಿದ್ದವಳು ಕೇವಲ ಮೂರು  ವರ್ಷದ ಹಿಂದೆ ಜೀವನಕ್ಕೆ ಕಾಲಿರಿಸಿದ ಗೆಳೆಯ ಹೆಚ್ಚಾಗಿ ಕಾಣಿಸುತ್ತಾನೆ . ಅಪ್ಪ ಅಮ್ಮ ನನ್ನು ಬಿಟ್ಟು ವರುಷ ೨ ವರ್ಷ ಇರಬಲ್ಲೆ ಆದರೆ ಗಂಡನನ್ನು ಬಿಟ್ಟು ೨ ತಿಂಗಳಿರುವುದು  ಬಹಳ ಕಷ್ಟದ ಕೆಲಸ . ಜೀವನದಲ್ಲಿ ಎಷ್ಟೊಂದು ಬದಲಾವಣೆ .  ಅಂದು ಹಾಸ್ಟೆಲ್ ಗೆ ಹೋಗುವಾಗ ಅಳುತ್ತಾ ಹೋಗುತ್ತಿದ್ದವಳು ಇಂದು ವರ್ಷಗಟ್ಟಲೆ ಸಾವಿರಾರು ಮೈಲಿ ದೂರ ಇರಬೇಕಾಗಿ ಬಂದಾಗ ಕುಣಿಯುತ್ತ ಹೊರೆಟು  ಬಿಡುತ್ತೇನೆ . 
ಬದುಕು ಬಹಳಷ್ಟು ಬದಲಾವಣೆ ತರಬಹುದು . ಆದರೆ ನೆನಪಿನಂಗಳದಲ್ಲಿ ನಮ್ಮೂರು, ನಮ್ಮವರು , ನಮ್ಮ ದೇಶ ನಮ್ಮ ಸಂಸ್ಕೃತಿ ಇವುಗಳೆಲ್ಲ ಇದ್ದೆ ಇರುತ್ತದೆ ಮರೆಯಲು ಸಾಧ್ಯವೇ ಇಲ್ಲ . ಸ್ವಲ್ಪ ದಿನಗಳು ಮರೆತಂತೆ ಇದ್ದರೂ  ಬಿಡುವಿನ ದಿನಗಳಲ್ಲಿ ಅವುಗಳ ನೆನಪುಗಳು ಬೆಂಬಿಡದೆ ಕಾಡುತ್ತವೆ. 
ಇದೆಲ್ಲವನ್ನು ಅಮ್ಮನಿಗೆ ಆಗಲೇ ಹೇಳಬೇಕೆಂದುಕೊಂಡೆ ಆದರೆ ಆಗಲಿಲ್ಲ . ಕೆಲವೊಂದು ಭಾವನೆಗಳು ಮನಸ್ಸಲ್ಲ್ಲಿ ಇದ್ದರೂ ಹೊರಹಾಕುವುದು ಬಹಳ ಕಷ್ಟದ ಕೆಲಸ ಅಲ್ಲವೇ ? ಅದಕ್ಕೆ ಈ ಬರಹ ಅಮ್ಮ ಓದಿ ಸಮಾದಾನಗೊಂಡಾಳು  ಎಂಬ ಆಶಯದೊಂದಿಗೆ  .

ಅರ್ಪಿತ ಹರ್ಷ 
ಲಂಡನ್ 

ಒಗ್ಗರಣೆ ಅವಾಂತರ


ಮಾರ್ಚ್ ೧,2013   ವಿಜಯನೆಕ್ಸ್ಟ್ ನಲ್ಲಿ ಪ್ರಕಟಗೊಂಡಿದೆ .



ನನಗೆ ಅಡುಗೆ ಮಾಡುವುದು ಎಂದರೆ ಇಷ್ಟ . ಅದೊಂದು ಹವ್ಯಾಸ ಎನ್ನುವ ರೀತಿ ಮಾಡುತ್ತೇನೆ . ಈಗಂತೂ ಇಂಟರ್ನೆಟ್  ನೋಡಿದರೆ ಯಾವುದು ಬೇಕು ಅದು ಮಾಡಬಹುದು ಹಾಗೆ ಮದುವೆಯಾದ ಹೊಸದರಲ್ಲೂ ನನಗೆ ಅಡುಗೆ ಮಾಡುವುದು ಕಷ್ಟ ಎನಿಸಲೇ ಇಲ್ಲ ಇಷ್ಟಪಟ್ಟು ಅಡುಗೆ ಮಾಡುತ್ತಿದ್ದೆ ತಿನ್ನುತ್ತಿದ್ದೆ . 
ಆದರೆ ಒಬ್ಬಬ್ಬರು ಮಾಡುವ ಅಡುಗೆ ಒಂದೊಂದು ರೀತಿಯಲ್ಲಿರುತ್ತದೆ . ಕೆಲವರ ಕೈ ರುಚಿಯೇ ಬೇರೆ . ನನ್ನ ಪತಿಯ ಚಿಕ್ಕಮ್ಮ ಪಲಾವ್ ಚೆನ್ನಾಗಿ ಮಾಡುತ್ತಾರೆ . ಈ ಭಾರಿ ಊರಿಗೆ ಹೋದಾಗ ನಮ್ಮ ಚಿಕ್ಕ ಅತ್ತೆ ಕೈಯಲ್ಲಿ ಪಲಾವ್ ಮಾಡುವುದು ಹೇಳಿಸಿ ಕೊಳ್ಳಬೇಕು  ಎಂಬ ಆಸೆ ಇತ್ತು .
ನಾನು ಅವರ ಮನೆಗೆ ಹೋಗಿದ್ದೆ . ಒಂದು ದಿನ ಹೇಗೆ ಪಲಾವ್ ಮಾಡುವುದು ಎಂದು ಹೇಳಿಕೊಟ್ಟರು ಹಸಿರು ಪಲಾವ್ . ರುಬ್ಬಿ ಮಾಡುವ ಪಲಾವ್ ಆದ್ದರಿಂದ ಅದು ತುಂಬಾ ಟೇಸ್ಟ್ ಕೊಡುತ್ತದೆ ಮತ್ತು ಅದು ತುಂಬಾ ಚನ್ನಾಗಿತ್ತು .
ಮತ್ತೊಂದು ದಿನ ಮನೆಗೆ ತುಂಬಾ ಜನ ನೆಂಟರು ಬರುವವರಿದ್ದರು . ಒಬ್ಬೊಬ್ಬರು ಒಂದೊಂದು ಅಡುಗೆ ಮಾಡಿದರೆ ಬೇಗ ಆಗುತ್ತದೆ ಎಂದು ತೀರ್ಮಾನಿಸಿದೆವು. ನನಗೆ ನಾನು ಕಲಿತ ಪಲಾವ್ ಅನ್ನು ಮತ್ತೊಮ್ಮೆ ಮಾಡಬೇಕು ಎಂಬ ಆಸೆ ಇತ್ತು . ನಾನು ಪಲಾವ್ ಮಾಡುವುದಾಗಿ ಹೇಳಿದೆ . ಅವರು ಕುಶಿಯಿಂದ ಒಪ್ಪಿದರು ನಾನು ಅವ್ರು ಹೇಳಿಕೊಟ್ಟಂತ ರೀತಿಯಲ್ಲೇ ಪಲಾವ್ ಮಾಡಿದೆ .
 ನಾನು ಮಾಡಿದ ಪಲಾವ್ ಎಲ್ಲ ರೆಡಿ ಆಗಿತ್ತು ಅನ್ನ  ಹಾಕಿ ಕಲೆಸಿಯೂ ಆಗಿತ್ತು . ಅವರು ಒಲೆಯಮೇಲೆ ಒಗ್ಗರಣೆಗೆ ಇಟ್ಟಿದ್ದರು ನಾನು ಯೋಚಿಸಿದೆ ಮೊನ್ನೆ ಹೇಳಿಕೊಟ್ಟ ಪಲಾವ್ ನಲ್ಲಿ ಒಗ್ಗರಣೆ ಇರಲಿಲ್ಲವಲ್ಲ ಎಂದು .ಅದು ಬೆಂದ ಕಾರಣ ನಾನು ಕೇಳಿದೆ ಹಾಕಲಾ ಎಂದು ಅವರು ಹಾಕು ಹಾಕಿದರೆ ಇನ್ನೂ  ಟೇಸ್ಟ್ ಬರುತ್ತದೆ ಎಂದರು ನಾನು ಒಗ್ಗರಣೆ ತೆಗೆದು ಪಲಾವ್ ಗೆ ಸುರಿದುಬಿಟ್ಟೆ  . ಆದರೆ ಅವರು  ಒಗ್ಗರಣೆ ಮಾಡಲು ಹೇಳಿದ್ದು ರಾಯತಕ್ಕಾಗಿತ್ತು .ನಾನು ಕೇಳದೆಯೇ ಪಲಾವ್ ಗೆ ಹಾಕಿಬಿಟ್ಟಿದ್ದೆ .
 ಪಲಾವ್ ಏನು ಹಾಳಾಗಲಿಲ್ಲ ಆದರೆ ನಾನು ಮಾಡಿದ ಎಡವಟ್ಟು ಕೆಲಸದಿಂದ ಎಲ್ಲರೂ  ಜೋರಾಗಿ ನಕ್ಕೆವು .

ಅರ್ಪಿತಾ ಹರ್ಷ 
ಲಂಡನ್