ಈ ನನ್ನ ಲೇಖನವು 29/01/13 ರ ಅವಧಿಯಲ್ಲಿ ಪ್ರಕಟಗೊಂಡಿದೆ http://avadhimag.com/?p=76066
ಅಮ್ಮನಿಗೊಂದು ಫೋನ್ ಮಾಡಿದ್ದೆ. ಫೋನ್ ಮಾಡುವುದು ಮಾಮೂಲಿ ದೂರದಲ್ಲಿದ್ದರೆ ಇರುವುದು ಅದೊಂದೇ ದಾರಿ ,ಫೋನ್ ನಲ್ಲೆ ನಗು, ಅಳು, ಸಿಟ್ಟು ಎಲ್ಲವನ್ನು ತೋರಿಸಿ ನಾನಿನ್ನು ನಿನ್ನ ಮಗಳಮ್ಮ ಎಂದು ತೋರಿಸಿಕೊಡುವುದು .ಈ ಭಾರಿ ಫೋನ್ ಮಾಡಿ ದಾಗ ಅಮ್ಮ ಅಂದರು ನೀನಿಲ್ಲಿರಬೇಕಿತ್ತು ಕಣೆ ಅದಾಗದಿದ್ದರೂ ಈ ಟೈಮ್ ನಲ್ಲೆ ನೀನು ಒಮ್ಮೆ ಭಾರತಕ್ಕೆ ಬರುವ ಪ್ಲಾನ್ ಹಾಕಬೇಕಿತ್ತು ಎಂದು . ನಾನು ಮನಸ್ಸಿನಲ್ಲೇ ಅಂದುಕೊಂಡೆ ಬೇಕು ಅಂದಾಗ ಬರುವಹಾಗಿದ್ದಿದ್ದರೆ ಚೆನ್ನಾಗಿರುತ್ತಿತ್ತು ಈ ಹಾಳಾದ್ದು ವಿದೇಶ ಅನ್ನೋದು ಒಮ್ಮೆ ಅಂಟಿಕೊಂಡು ಬಿಟ್ಟರೆ ಮತ್ತೆ ತಿರುಗಿ ಹೋಗುವುದು ಬಹಳ ಕಷ್ಟ . ಆದರೂ ಹತ್ತಿರದವರ ಮದುವೆ , ಮುಂಜಿ ಹೀಗೆ ಎಲ್ಲ ಬಿಟ್ಟು ಇಲ್ಲಿದ್ದಾಗ ಅನಿಸುತ್ತದೆ ಛೆ ಮಿಸ್ ಮಾಡಿಕೊಂಡೆ ಎಂದು . ಅದರಲ್ಲೂ ಈ ಲಂಡನ್ ನಲ್ಲಿ ಬರುವ ಕಿಟಿಕಿಟಿ ಮಳೆ ನೋಡಿದಾಗಂತೂ ನಮ್ಮ ಮಲೆನಾಡ ಆ ಬೋರ್ಗರೆಯುವ ಮಳೆ ನೆನಪಾಗಿ ಮೈಯೆಲ್ಲಾ ಪರಚಿಕೊಳ್ಳುವಷ್ಟು ಸಿಟ್ಟು ಬರುತ್ತದೆ . ನನ್ನನ್ನು ಲಹರಿಯಿಂದ ಎಚ್ಚರಿಸಿದ ಅಮ್ಮ ಫೆಬ್ರವರಿ ಬಂತು ಅಂದ್ರೆ ಸಾಕು ನಮ್ಮೂರಲ್ಲಿ ಆಲೆಮನೆ ಪ್ರಾರಂಭ ಆಗೋಗುತ್ತೆ ನೀ ಇದ್ದಿದ್ದರೆ ದಿನ ಒಂದೊಂದು ಆಲೆ ಮನೆಗೆ ಹೋಗಿ ಬಿಸಿಬೆಲ್ಲ , ಮತ್ತು ಬೇಕಾದಷ್ಟು ಕಬ್ಬಿನಹಾಲು ಕುಡಿದು ಬರಬಹುದಿತ್ತು ಅಂದಳು . ಅಷ್ಟೇ ನಾನು ಕಳೆದುಹೋದೆ .
ನಮ್ಮೂರು ಮಲೆನಾಡಿನ ಒಂದು ಹಳ್ಳಿ . ಪುಟ್ಟ ಹಳ್ಳಿಯೇನಲ್ಲ ಊರಿನಲ್ಲಿ ಸುಮಾರು 100 ಮನೆಗಳಿವೆ ಅದರಲ್ಲಿ 80 ಮನೆಗಳು ಬೇಸಾಯ ಮಾಡುವವರು ಅಂದರೆ ಭತ್ತ ಮುಖ್ಯ ಬೆಳೆ ಜೊತೆಗೆ ಶುಂಟಿ , ಹತ್ತಿ, ಶೇಂಗ, ಜೋಳ ,ಕಬ್ಬು ಇವುದಗೆಲ್ಲ ಉಪಬೆಳೆಗಳು . ಹಾಗೆ ಇವುಗಳನ್ನೆಲ್ಲ ಬೆಳೆದಾಗ ಕೆಲವರು ಮನೆಗೆ ತಂದು ಕೊಡುವುದೂ ಉಂಟು . ಈ ಫೆಬ್ರವರಿ ತಿಂಗಳಿನಲ್ಲಿ ಆಲೆಮನೆಯ ಭರಾಟೆ ಬಹಳ ಜೋರು . ಎಲ್ಲೆಲ್ಲಿಂದಲೋ ಬಂದು ಕಬ್ಬಿನ ಹಾಲು ಕುಡಿದು ಹೋಗುವವರು ಬಹಳ . ನನಗೆ ತುಂಬಾ ಚಿಕ್ಕವಳು ಇದ್ದಾಗಿ ನಿಂದಲೂ ಅಪ್ಪ ಆಲೆ ಮನೆಗೆ ಕರೆದುಕೊಂಡು ಹೋಗುತ್ತಿದ್ದ ಅಲ್ಲಿ ಬೇಕಾದಷ್ಟು ಹಾಲು ಕುಡಿದು ಬಿಸಿ ಬೆಲ್ಲ ತಿಂದು ಮನೆಗೆ ಬರುವಾಗ ಒಂದು ಕ್ಯಾನ್ ನಲ್ಲಿ ಫ್ರೆಶ್ ಕಬ್ಬಿನ ಹಾಲು ತುಂಬಿಸಿಕೊಂಡು ಬರುತ್ತಿದ್ದೆವು .
ಸಂಜೆ ನಮ್ಮದು ಕಂಬಳ ಪ್ರಾರಂಭ . ಊರಿನ ಅಕ್ಕಪಕ್ಕದ ಮನೆಯ ಅಣ್ಣಂದಿರು , ಚಿಕ್ಕಪ್ಪ ದೊಡ್ದಪ್ಪಂದಿರು ಜೊತೆಗೆ ನನ್ನ ವಾರಿಗೆಯವರು 4-5 ಮಕ್ಕಳು ಹೀಗೆ ಸೇರಿ ಕುಳಿತು ಹರಟೆ ಹೊಡೆದು ಕಬ್ಬಿನ ಹಾಲು ಕುಡಿಯುವುದು . ಅಲ್ಲಿ ಹೆಂಗಸರಿಗೆ ಪ್ರವೆಶವಿರುತ್ತಿರಲಿಲ್ಲ ಕೇವಲ ಮಕ್ಕಳು ಮತ್ತು ಉಳಿದ ಗಂಡಸರು . ಹಾಗಾಗಿ ಕಬ್ಬಿನ ಹಾಲಿನ ಜೊತೆ ತಿನ್ನಲು ಏನಾದರೂ ಬೇಕಾದರೆ ಗಂಡಸರೇ ಮಾಡಿಕೊಳ್ಳಬೇಕಿತ್ತು . ನನ್ನ ಅಪ್ಪನಿಗೆ ನಮ್ಮಕಡೆ ಕುಟ್ಟವಲಕ್ಕಿ ಎಂದು ಮಾಡುತ್ತಾರೆ ಅದೆಂದರೆ ಬಹಳ ಇಷ್ಟ ಅದು ಕಬ್ಬಿನಹಾಲಿನ ಜೊತೆ ಒಳ್ಳೆ ಕಾಮ್ಬಿನೆಶನ್ ಕೂಡ ಹೌದು ಜೊತೆಗೆ ಉಪ್ಪುಕಾರ ಚೆನ್ನಾಗಿ ಇರುವ ಮಾವಿನಮಿಡಿ ಉಪ್ಪಿನಕಾಯಿ . ಹಾಗಾಗಿ ಕುಟ್ಟವಲಕ್ಕಿಯನ್ನು ಅಪ್ಪ ಬಹಳ ಇಷ್ಟಪಟ್ಟು ಬಹಳ ಸೊಗಸಾಗಿ ಮಾಡುತ್ತಿದ್ದರು . ಅಬ್ಬ ಅದರ ಖಾರವೆಂದರೆ ಖಾರ . ಅದು ಕಬ್ಬಿನ ಹಾಲಿನೊಂದಿಗೆ ಬಹಳ ಚಂದ ಮ್ಯಾಚ್ ಆಗುತ್ತಿತ್ತು . ಅದರ ಜೊತೆಗೆ ಒಂದಿಷ್ಟು ಜೋಕ್ಸ್ , ಹರಟೆ ಹೀಗೆ ಗಂಟೆಗಳು ಸರಿದಿದ್ದೇ ಗೊತ್ತಾಗುತ್ತಿರಲಿಲ್ಲ . ನಮ್ಮ ಕಂಬಳ ಪ್ರಾರಂಭ ಆಗುತ್ತಿದುದೆ ರಾತ್ರಿ ಹತ್ತರ ನಂತರ ಮುಗಿಯುತ್ತಿದುದು 1 ಗಂಟೆಯ ನಂತರ . ಅವರ ಜೋಕ್ಸ್ ಗಳು ಆ ಮಾತುಗಳು ಅರ್ಥವಾಗದಿದ್ದರೂ ಏನೋ ಒಂದು ಖುಷಿ ಇರುತ್ತಿತ್ತು ಆ ಕಂಬಳದಲ್ಲಿ.ಮತ್ತು ಆಲೆಮನೆ ಎಷ್ಟೇ ದೂರವಾದರೂ ಪಾಪ ಅಪ್ಪ ನನಗೋಸ್ಕರ ಹೋಗಿ ತಂದುಕೊಡುತ್ತಿದ್ದರು . ಒಮ್ಮೊಮ್ಮೆ ನನ್ನ ಎತ್ತಿಕೊಂಡು ಹೋಗುತ್ತಿದ್ದುದು ನನಗೆ ನೆನಪಿದೆ ..!!
ಒಮ್ಮೆ ನಾನು ಕಬ್ಬಿನ ಹಾಲು ಬೇಕು ಎಂದು ಅಪ್ಪನ ಹತ್ತಿರ ಕೇಳಿದ್ದೆ ಸಂಜೆ ಕರೆದುಕೊಂಡು ಹೋಗುವುದಾಗಿ ಮಾತು ಕೊಟ್ಟಿದ್ದರು . ಅಷ್ಟರಲ್ಲಿ ನಮ್ಮ ಮನೆ ಹಸು ಕರು ಹಾಕಲು ಒದ್ದಾಡುತ್ತಿತ್ತು ಡಾಕ್ಟರ ಬಂದು ಕರು ಹೊರಬರುವಷ್ಟರಲ್ಲಿ ರಾತ್ರಿ 10 ಗಂಟೆಯಾಗಿತ್ತು ಆದರೂ ಅಪ್ಪ ನನಗೋಸ್ಕರ 2 ಕಿಲೋಮೀಟರ್ ನಡೆದುಕೊಂಡು ಹೋಗಿ ಕ್ಯಾನ್ ತುಂಬಾ ಕಬ್ಬಿನ ಹಾಲು ತುಂಬಿಸಿಕೊಂಡು ಕೊಟ್ಟಿದ್ದರು . ಆ ದಿನ ನನಗಾದ ಖುಷಿ ಅಪ್ಪನ ಮುಖದಲ್ಲಿ ರಿಫ್ಲೆಕ್ಟ್ ಆಗಿತ್ತು . ಹೀಗೆ ಆಲೆಮನೆ ಎಂದರೆ ಇದೆಲ್ಲ ನೆನಪಿನಂಗಳದಿಂದ ಜಾರುತ್ತದೆ .
ಕ್ರಮೇಣ ಕಾಲ ಬದಲಾಯಿತು ಜನ ಕೂಡ ಚೇಂಜ್ ಕೇಳ್ತಾರಲ್ವಾ ನಡೆದುಕೊಂಡು ಆ ಗದ್ದೆಯಲ್ಲಿ ಯಾರು ಹೋಗ್ತಾರೆ ಬೈಕ್ ನಲ್ಲಿ ಹೋಗಿ ತಂದು ಬಿಡ್ತೀವಿ ನೀವೆಲ್ಲ ಮನೇಲೆ ಇರಿ ಎನ್ನುವ ಕಾಲ ಬಂತು . ಆದರು ಆ ಕಂಬಳ ಮಾತ್ರ ನಡೆಯುತ್ತಲೇ ಇತ್ತು . ಸ್ವಲ್ಪ ವರ್ಷ ಕಳೆದ ನಂತರ ಮನೆಗೆ ಬಂದು "ಭಟ್ರೇ ಇವತ್ತು ನಮ್ಮನೆ ಆಲೇಮನೆ ಬರ್ರಿ "ಅನ್ನುತ್ತಿದ್ದವರು ಕಡಿಮೆಯಾದರು . ಆದರು ನಾನು ನಮ್ಮನೆಗೆ ಯಾವಾಗಲು ಬರುವವರ ಮನೆಯ ಆಲೆಮನೆ ಯಾವಾಗ ಎಂದು ಮೊದಲೇ ಕೆಳುತ್ತಿದ್ದುದರಿಂದ ಕರೆಯುತ್ತಿದ್ದರು . ಈಗಲೂ ಮನೆಗೆ ಬಂದು ಕರೆಯುವವರಿದ್ದಾರೆ. ಜೊತೆಗೆ ಫೋನ್ ಮಾಡಿ ಬನ್ನಿ ಎಂದು ಕರೆಯುವವರು ಇದ್ದಾರೆ . ಅಪ್ಪ ಹೋಗಿ ಕ್ಯಾನ್ ತುಂಬಿಸಿಕೊಂಡು ಬರುವುದು ನಡೆಯುತ್ತಿದೆ . ಆದರೆ ನಾನು ಮಾತ್ರ ಮಿಸ್ಸಿಂಗ್ .
ಈ ಲಂಡನ್ ನಲ್ಲಿ ಎಲ್ಲಿ ಹುಡುಕಿದರೂ ಕಬ್ಬಿನ ಹಾಲು ಸಿಗುವುದಿಲ್ಲ ಬೇರೆಲ್ಲ ಬಾಟಲ್ ಗಳು ಬೇಕಾದಷ್ಟು ಸಿಗುತ್ತದೆ . ಇಂತ ಸಮಯದಲ್ಲೇ ನಮ್ಮ ದೇಶ ನಮ್ಮ ಹಳ್ಳಿ ನಮ್ಮ ಮನೆ ಎಲ್ಲ ಬಹಳ ಕಾಡೋದು. ಬಹಳ ಮಿಸ್ ಮಾಡಿಕೊಳ್ಳೋದು :(...:) ಅದಕ್ಕಾಗಿ ನಾನು ಈಗಲೇ ತೀರ್ಮಾನಿಸಿ ಬಿಟ್ಟಿದ್ದೇನೆ ಮುಂದಿನ ವರ್ಷದ ಆಲೆಮನೆಗೆ ಎಷ್ಟೇ ಕಷ್ಟ ಆದರೂ ನಮ್ಮುರಿನಲ್ಲಿರಬೇಕು ಎಂದು ..
Arpihta Harsha
London