Thursday, 7 June 2012

ಲಂಡನ್ ನಲ್ಲಿ ನೆಲೆಸಿರುವ ಭಾರತೀಯರ ಮನೋಭಿಪ್ರಾಯ

ಈ ನನ್ನ ಲೇಖನವು ಜೂನ್ ೮ ರ ವಿಜಯ ನೆಕ್ಸ್ಟ್ ನಲ್ಲಿ ಪ್ರಕಟವಾಗಿದೆ -----   
                                                         
 "ನಮ್ಮ ಹೊಟ್ಟೆ ಪಾಡಿಗಾಗಿ ಏನಾದರು ಒಂದು ಮಾಡಿಕೊಳ್ಳಲೇ ಬೇಕು ಎಂಬ ಉದ್ದೇಶದಿಂದ ಇಲ್ಲಿ ಬಂದು ಬಿಸಿನೆಸ್ಸ್ ಪ್ರಾರಂಭಿಸಿದೆ  ! ೧೮ ವರ್ಷದ ವರೆಗೆ ಮಕ್ಕಳು ನಮ್ಮ ಜವಾಬ್ದಾರಿ ಆ ನಂತರ ಜೊತೆಗೆ ಇರಲಿ ಎಂದು ನಾವು ಕಟ್ಟು ಬೀಳುವಂತಿಲ್ಲ ಇಷ್ಟಕ್ಕೂ ಮಕ್ಕಳು ಸ್ವಂತ ಕಾಲ ಮೇಲೆ ತಾವು ನಿಂತರೆ ತಂದೆ ತಾಯಿಗೆ ಕುಶಿಯೇ ಅಲ್ವ ? ನನ್ನ ೩ ಮಕ್ಕಳು ಅವರದೇ ಆದ ಸ್ವಂತ ಮನೆ ಕಟ್ಟಿಕೊಂಡಿದ್ದಾರೆ . ನಾವು ಇಲ್ಲಿ ಬಂದಾಗ ಮಕ್ಕಳಿನ್ನು ಬಹಳ ಚಿಕ್ಕವರು ಈಗ ನನಗೆ ೩-೪ ವರ್ಷದ ಮೊಮ್ಮಕ್ಕಳಿದ್ದಾರೆ" ಎನ್ನುತ್ತಾರೆ ಕ್ಯಾಟರಿಂಗ್ ಬಿಸಿನೆಸ್ ಮಾಡಿಕೊಂಡಿರುವ ಮೂಲತಃ ಗುಜರಾತ್ ನವರಾದ ಅರವತ್ತು ವರ್ಷದ ವಿಷ್ಣು ಪ್ರಸಾದ್ ರವರು. ತಮ್ಮದೇ ಸ್ವಂತ ಮನೆಯಲ್ಲಿ ಹೆಂಡತಿಯೊಡನೆ ವಾಸಿಸುತ್ತಿದ್ದಾರೆ. ಭಾರತೀಯ ಶೈಲಿಯ ಅಡುಗೆಗಳನ್ನು ಆರ್ಡರ್ ತೆಗೆದುಕೊಂಡು  ಪ್ರತಿ ಮನೆಗೇ ಹೋಗಿ ತಲುಪಿಸುತ್ತಾರೆ. “ಕೆಲವೊಮ್ಮೆ ೫೦ ಜನರ ಆರ್ಡರ್ ಗಳು ಬರುತ್ತವೆ ಕೆಲವೊಮ್ಮೆ ೨ ಜನರ ಆರ್ಡರ್ ಕೂಡ ಇರುತ್ತದೆ ಆದರೆ ನಮ್ಮ ಭಾರತೀಯರಿಗೆ ಅಡುಗೆ ಮಾಡಿ ಕೊಡುವುದೇ ಒಂದು ಸಂಭ್ರಮ” ಎನ್ನುತ್ತಾರೆ ವಿಷ್ಣು ಪ್ರಸಾದ್.
ಅವರು ಇಲ್ಲಿ ಬಂದು ನೆಲೆಸಿ ೪೦ ವರ್ಷಗಳೇ ಕಳೆದಿದ್ದರೂ ಕೂಡ  ತಾಯ್ನಾಡಿನ ವ್ಯಾಮೋಹ ಇದ್ದೆ ಇದೆ ಅದಕ್ಕೋಸ್ಕರವೇ ಭಾರತೀಯ ಶೈಲಿಯ ಅಡುಗೆ ಮಾಡಿ ಇಲ್ಲಿ ನೆಲೆಸಿರುವ  ಭಾರತೀಯರ ಮನೆಗಳಿಗೆ ತಲುಪಿಸುವುದರ ಮೂಲಕ ಅವರೊಂದಿಗೆ ಭಾಂದವ್ಯ ಬೆಳೆಸಿಕೊಳ್ಳುತ್ತಾರೆ.
ಹಳೆಯ   ಕಾಲಮಾನದವರಿಗೂ ಈಗಿನವರಿಗೂ ಸರಿಬರುವುದಿಲ್ಲ ಹೊಂದಾಣಿಕೆ ಸ್ವಲ್ಪ ಕಷ್ಟ ಜೊತೆಗೆ ಇದ್ದು ಸಾಕಷ್ಟು ತೊಂದರೆ ಆಗುವುದಕ್ಕಿಂತ ದೂರ ದೂರ ಬದುಕಿ ಸಂಬಂಧವನ್ನು ಚೆನ್ನಾಗಿ ಇಟ್ಟುಕೊಳ್ಳುವುದು ಸರಿ. ಹಬ್ಬಗಳು , ಹುಟ್ಟುಹಬ್ಬಗಳಿಗೆಲ್ಲ ಒಟ್ಟು ಸೇರಿ ಸಂತೋಷದಿಂದ ಆಚರಿಸಿದರೆ ಮನಸ್ಸಿಗೂ ನೆಮ್ಮದಿ ಇರುತ್ತದೆ ಇಲ್ಲಿಯ ಪದ್ಧತಿಯೇ ಹಾಗೆ ಮಕ್ಕಳು ಬೆಳೆದು ದೊಡ್ದವರಾಗುತ್ತಿದ್ದಂತೆ ಅವರಿಗೆ ತಮ್ಮದೇ ಆದ ಸ್ವತಂತ್ರತೆ ಇರುತ್ತದೆ ಆಗಾಗ ಬಂದು ಹೋಗುತ್ತಿರುವುದೇ ಒಂದು ಖುಷಿ ಎಂಬುದು ಇಲ್ಲಿಯೇ ಸೆಟಲ್ ಆದ ಹಿರಿಯರ  ಅಭಿಪ್ರಾಯ.ಹಣದ ದಾಹ ತೀರಿಸಿಕೊಳ್ಳಲಿಕ್ಕಾಗಿ  ಬಂದ ಎಷ್ಟೋ ಭಾರತೀಯರು ಹಣ ಕೈ ಸೇರುವುದರ ಜೊತೆಗೆ ಯಾವುದೇ ಜಂಜಡ ಇಲ್ಲದ ಬದುಕು ಸಿಗುತ್ತಿದೆ ಬಿಟ್ಟು ಹೋಗುವುದೇಕೆ ಎಂಬ ನಿರ್ಧಾರದಿಂದ ಇಲ್ಲಿಯೇ ನೆಲೆಸಲು ನಿರ್ಧರಿಸಿದ್ದಾರೆ.
“ಭಾರತದಲ್ಲಿ ಕೆಲಸ ಮಾಡುತ್ತಿದ್ದೆ ಸಂಬಳ ಸಾಕಾಗುತ್ತಿರಲಿಲ್ಲ ಅಲ್ಲಿಂದ ಇಲ್ಲಿ ಬರುವಾಗ ೫-೬ ತಿಂಗಳು ಇದ್ದು ಹೋದರಾಯಿತು ಎಂದು ಸಂಸಾರ ಸಮೇತ  ಬಂದಿದ್ದೆ ಆದರೆ ಇಲ್ಲಿಯ ವಾತಾವರಣ ಯಾವುದೇ ಚಿಂತೆಯಿಲ್ಲದ, ಸ್ಟ್ರೆಸ್ ಇಲ್ಲದ ಜೀವನ ಇಷ್ಟವಾಯಿತು ಹಾಗಾಗಿ ಇಲ್ಲೇ ಸೆಟಲ್ ಆಗುವ ಯೋಜನೆ ಮಾಡಿದ್ದೇನೆ . ನನ್ನ ತಂದೆಗೆ ನಾನಿಲ್ಲಿರುವುದು ಇಷ್ಟವಿಲ್ಲ ಆದರೆ ಇಲ್ಲಿಯ ಜೀವನಕ್ಕೆ ಒಗ್ಗಿ ಹೋಗಿದ್ದೇವೆ ವರ್ಷದಲ್ಲಿ 3 ತಿಂಗಳು ಅವರೇ ಇಲ್ಲಿ ಬಂದಿರುತ್ತಾರೆ ೨ ವರ್ಷಕ್ಕೊಮ್ಮೆ ನಾವು ಭಾರತಕ್ಕೆ ಹೋಗಿ ಬರುತ್ತೇವೆ ನನ್ನ ಮಗ ಕೂಡ ಇಲ್ಲೇ ಹುಟ್ಟಿರುವುದು ಅವನಿಗೆ ಭಾರತಕ್ಕೆ ಹೋದರೆ ಅಲ್ಲಿಯ ವಾತಾವರಣ ಹಿಡಿಸುವುದಿಲ್ಲ ಅದಕ್ಕೆ ನಾವು ಇಲ್ಲೇ ಒಂದು ಸ್ವಂತ ಮನೆ ಕೊಂಡುಕೊಂಡಿದ್ದೇವೆ” ಎನ್ನುತ್ತಾರೆ  ೩೮ ವರ್ಷದ ಮೂಲತಃ ಮಹಾರಾಷ್ಟ್ರದವರಾದ ಮಂದಾರ ಎನ್ನುವವರು .
ಇನ್ನು ಕೆಲವರು ಇಲ್ಲಿ ಒಂಟಿ ಎನಿಸುತ್ತದೆ ಈಗಿನ ಮಕ್ಕಳಿಗೆ ಸಂಬಂಧಿಕರ ಜೊತೆ ಯಾವುದೇ ರೀತಿಯ ಸಂಪರ್ಕವೇ ಇರುವುದಿಲ್ಲ . ಅಜ್ಜ ಅಜ್ಜಿ ತುಂಬು ಸಂಸಾರದಲ್ಲಿ ಬೆಳೆಯುವ ಮಕ್ಕಳು ಹೆಚ್ಚು ಚಟುವಟಿಕೆ ಯಿಂದ ಕೂಡಿರುತ್ತದೆ ಆದರೆ ಇಲ್ಲಿ ಯಾರ ಸಂಪರ್ಕವು ಇರುವುದಿಲ್ಲ ಕೇವಲ ಅಪ್ಪ ಅಮ್ಮ ಇದರಿಂದ ಮಕ್ಕಳು ಬೇರೆಯವರೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಲು ಕಷ್ಟಪಡುತ್ತಾರೆ ಒಂದು ಎರಡು ವರ್ಷಗಳವರೆಗೆ ಇಲ್ಲಿದ್ದರೆ ಸರಿ ಆದರೆ ಮಕ್ಕಳು ಶಾಲೆಗೆ ಹೋಗುವಂತಾದ ಮೇಲೆ ಭಾರತವೇ ಚಂದ ನಮ್ಮ ಭಾರತದಲ್ಲಿ ಸಿಕ್ಕುವಷ್ಟು ವಿದ್ಯಾಭ್ಯಾಸ ಇಲ್ಲಿ ಸಿಗುವುದಿಲ್ಲ ಇಲ್ಲಿ ಮಕ್ಕಳಿಗೆ ಆಟಕ್ಕೆ ಹೆಚ್ಚು ಪ್ರಾಮುಖ್ಯತೆ ಕೊಡುತ್ತಾರೆ ಆದರೆ ಮಧ್ಯದಲ್ಲಿ ಬಿಟ್ಟು ಭಾರತಕ್ಕೆ ಹಿಂತಿರುಗಿ ಹೋದರೆ ಮಕ್ಕಳ ಓದಿಗೆ ಕಷ್ಟವಾಗುತ್ತದೆ ಭಾರತದಲ್ಲಿ  ವಿದ್ಯಾಭ್ಯಾಸಕ್ಕೆ ಹೆಚ್ಚು ಒತ್ತು ಕೊಡುತ್ತಾರೆ. ಮಕ್ಕಳ ಪ್ರಾರಂಭದ ವಿದ್ಯಾಭ್ಯಾಸ ಭಾರತದಲ್ಲೇ ಆಗಬೇಕು ಆಗ ಮಕ್ಕಳು  ಇನ್ನೂ ಬುದ್ಧಿವಂತರಾಗುತ್ತಾರೆ ಇಲ್ಲದಿದ್ದರೆ  ಕಷ್ಟವಾಗುತ್ತದೆ ಎನ್ನುತ್ತಾರೆ ೧-೨ ವರ್ಷದ ಮಕ್ಕಳಿರುವ  ತಾಯಂದಿರು.
ನಮ್ಮ ದೇಶದಲ್ಲೇ ಹುಟ್ಟಿ ಬೆಳೆದು ಓದಲು ಅಥವಾ ಮನೆಕಟ್ಟಲು ಮಾಡಿಕೊಂಡ  ಸಾಲ ತೀರಿಸಲು ಅಥವಾ ಹಣಕ್ಕೋಸ್ಕರ ಬಂದ ಎಷ್ಟೋ ಮಂದಿ ಹೆಂಡತಿ ಮಕ್ಕಳನ್ನು ಅಲ್ಲೇ ಬಿಟ್ಟು ಇಲ್ಲಿ ಒಂಟಿ ಜೀವನ ಸಾಗಿಸುತ್ತಿದ್ದಾರೆ. ಹಣಕ್ಕಾಗಿ ಏನಾದರು ಹೊಂದಾಣಿಕೆ ಮಾಡಿಕೊಳ್ಳಲೇ ಬೇಕು. ಭಾರತದಲ್ಲಿ ಗಗನಕ್ಕೆ ಏರುತ್ತಿರುವ ಎಲ್ಲ ವಸ್ತುಗಳ ಬೆಲೆ ಹಿಂತಿರುಗಿ ಹೋಗಲು ಭಯ ಹುಟ್ಟಿಸುತ್ತದೆ ಎಂದು ಹೇಳುವವರೂ ಇದ್ದಾರೆ. ಅಲ್ಪ ಸಮಯಕ್ಕೊಸ್ಕರ ಬಂದು ೩ ತಿಂಗಳು ಗಳಿದ್ದು ಕೂಡ ಹಣ ಮಾಡಿಕೊಂಡು ಹೋಗಬಹುದು ಆದರೆ ಅದರಿಂದ ಒಂದು ಹಂತದ ಸಾಲಗಳನ್ನು ತೀರಿಸಬಹುದಷ್ಟೇ ಆದ್ದರಿಂದ ,ಬಂದರೆ ಕೊನೆಪಕ್ಷ ಒಂದು ವರ್ಷಕ್ಕಾದರೂ ಬರಬೇಕು .ಕುಟುಂಬ ಸಮೇತ ಬಂದು ನೆಲೆಸಿ ದೇಶ ನೋಡಿಕೊಂಡು ಹೋಗಲು ಈ ದೇಶ ಸೂಕ್ತ ,ಇಲ್ಲೇ ಪೆರ್ಮನೆಂಟ್ ಆಗಿ ನೆಲೆಸಲು ಕಷ್ಟ ಎಂಬುದು ಇಲ್ಲಿ ಹೊಸದಾಗಿ ಬಂದ ಅಂದರೆ ೧-೨ ವರ್ಷಗಳಿಂದ ಇಲ್ಲಿರುವ ೩೦-೩೫ ಆಸುಪಾಸಿನವರ ಅಭಿಪ್ರಾಯ .
 ಆದರೆ ಬಹಳ ಹಿಂದೆಯೇ ಅಂದರೆ ಭಾರತಕ್ಕೆ ಸ್ವತಂತ್ರ ಸಿಗುವ ಸಂದರ್ಭದಲ್ಲಿ ಬಂದು ನೆಲೆಸಿದ ಹಿರಿಯರು ಇಲ್ಲಿಯ ಬದುಕಿನ ರೀತಿಗೆ ಹೊಂದಿಕೊಂಡು ಬಿಟ್ಟಿದ್ದಾರೆ ಇಲ್ಲಿಯೇ ಸಾಕಷ್ಟು ಭಾರತದವರಿದ್ದಾರೆ ದೇವಸ್ಥಾನಗಳಿವೆ ವಾಕಿಂಗ್ ಗಳಿಗೆ ಪಾರ್ಕ್ ಗಳಿವೆ . ಲಂಡನ್ ನಲ್ಲಿ ಒಂದು ಈಸ್ಟ್ಹ್ ಹ್ಯಾಮ್ ಎಂಬ ಸ್ಥಳದಲ್ಲಿ ಕೇವಲ ಏಷ್ಯ ದವರೆ  ಇರುವುದು ಅದರಲ್ಲೂ ಹೆಚ್ಚು ಭಾರತೀಯರು ,ಅಲ್ಲಿ ಹೋಟೆಲ್ ಗಳು ಕೂಡ ಭಾರತದ್ದೆ ೨ ದೇವಸ್ಥಾನಗಳು ಹತ್ತಿರದಲ್ಲೇ ಇದೆ. ಇಲ್ಲಿ ನಮಗೆ ಏನು ತೊಂದರೆ ಎನಿಸುವುದೇ ಇಲ್ಲ ಬೇಕಾದಷ್ಟು ಸ್ನೇಹಿತರು ಸಿಗುತ್ತಾರೆ ಭಾರತಕ್ಕೆ ನಾವು ಹೋಗುವುದೇ ಇಲ್ಲ ಎನ್ನುತ್ತಾರೆ ಹಿರಿಯರು .
ಲಂಡನ್ ನಲ್ಲಿ ಕರ್ನಾಟಕದ ಜನರ ಸಂಖ್ಯೆ ಕಡಿಮೆಯೇ ಎನ್ನಬಹುದು ಇಲ್ಲಿ ಹೆಚ್ಚು ತಮಿಳುನಾಡಿನವರನ್ನು ನೋಡಬಹುದು ಅದರಲ್ಲೂ ಬಹಳ ವರ್ಷಗಳಿಂದ ಇಲ್ಲಿಯೇ ನೆಲೆ ಹೊಂದಿರುವವರಲ್ಲಿ ತಮಿಳಿನವರು ಹೆಚ್ಚು .
"ನಮ್ಮ ಮಗ ಇಲ್ಲೇ ಮನೆ ತೆಗೆದುಕೊಂಡಿದ್ದಾನೆ ಭಾರತೀಯ ಹುಡುಗಿಯನ್ನೇ ನೋಡಿ ಮಾಡುವೆ ಮಾಡಿದೆವು ಈಗ ಒಂದು ಮಗು ಇದೆ ಅದನ್ನು ನೋಡಿಕೊಳ್ಳಲು ಇಲ್ಲಿ ಬಂದಿದ್ದೇವೆ ಇಲ್ಲಿಯ ವಾತಾವರಣ ನಮಗೆ ಸರಿ ಹೋಗುವುದಿಲ್ಲ ತುಂಬಾ ಚಳಿ ಹೊರಗೆ ಕಾಲಿಡಲಾಗದು, ಮನೆಯಲ್ಲಿಯೇ ಕುಳಿತು ಬೇಜಾರು ಎಷ್ಟಾದರೂ ನಮ್ಮ ನಾಡೆ ನಮಗೆ ಚಂದ ಮಕ್ಕಳು ಜೊತೆಗಿಲ್ಲ ಎಂದು ಬೇಸರವಾಗುತ್ತದೆ ಆದರು ಬೇರೆ ದಾರಿ ಇಲ್ಲ ಇರಲೇ ಬೇಕು "ಎಂಬುದು  ಭಾರತದಿಂದ ೨-೩ ತಿಂಗಳಿಗೆ ಬಂದಿರುವ  ದೆಹಲಿಯ  ವರುಣ್ ಶರ್ಮ ರವರ ಅಳಲು .
ಜನರೇಶನ್ ಗ್ಯಾಪ್ ಎಲ್ಲ ಕಡೆ ಇದೆ ಇಲ್ಲಿಯೇ ನೆಲೆಸಿರುವ ಹಿರಿಯರು ಮತ್ತು ಕಿರಿಯರ ನಡುವೆ ಇದರ ಬಗ್ಗೆ ವಿಚಾರಿಸಿದಾಗ ಹಿರಿಯರಿಂದ  ಕೇಳಿಬಂದ ಮಾತುಗಳೆಂದರೆ " ನಾವು ಭಾರತದಿಂದ ಹೊರಗಿದ್ದರೂ ನಮ್ಮ ಆಚಾರ ಸಂಸ್ಕೃತಿಗಳನ್ನು ಬಿಟ್ಟಿಲ್ಲ ಪ್ರತಿದಿನ ದೇವರ ಪೂಜೆ , ಭಾರತೀಯ ಅಡುಗೆ , ಹಬ್ಬ ಗಳನ್ನೂ ತಪ್ಪದೆ ಆಚರಿಸಿಕೊಂಡು ಬರುತ್ತಿದ್ದೇವೆ ನಾವು ಇಲ್ಲೇ ನೆಲಸಿದರು ನಮ್ಮ ಭಾರತದ ಆಚರಣೆ ಎಂದಿಗೂ ಬಿಡಲಾರೆವು ಆದರೆ ಮಕ್ಕಳು ಕುಡಿತ ಸಿಗರೇಟ್ ಇವುಗಳೆಲ್ಲ ಇಲ್ಲಿ ಸಾಮಾನ್ಯ ಎನ್ನುತ್ತಾರೆ ನಮ್ಮ ಮನಸ್ಥಿತಿ ಅವರೊಂದಿಗೆ ಸ್ವಲ್ಪವು ಹೊಂದಾಣಿಕೆ ಬರುವುದಿಲ್ಲ " ಎಂದು ಬೇಸರ ವ್ಯಕ್ತಪಡಿಸುತ್ತಾರೆ.
ಅದೇ ರೀತಿ ಯುವಕರನ್ನು ಕೇಳಿದರೆ ನಾವು ಬೆಳೆದಿದ್ದು ಇಲ್ಲಿಯೇ ಸ್ನೇಹಿತರೆಲ್ಲ ಇಲ್ಲಿನವರೇ ಅವರೊಂದಿಗೆ ಬೆರೆಯಲೇ ಬೇಕು ಸಿಗರೆಟ್, ಕುಡಿತ ಇವೆಲ್ಲ ಇಲ್ಲಿ ಸಾಮಾನ್ಯವಾದುದು ಇಲ್ಲಿಯ ರೂಲ್ಸ್ ಗಳೇ ಹಾಗೆ ಮಕ್ಕಳು ಬೆಳೆದು ದೊಡ್ದವರಾಗುತ್ತಿದ್ದಂತೆ ಅವರಿಗೆ ಸ್ವತಂತ್ರರಾಗಲು ಹಕ್ಕಿದೆ ಅದಕ್ಕೆ ನಮ್ಮ ದಾರಿ ನಮಗೆ .ತಂದೆ ತಾಯಿ ಬಗ್ಗೆ ಗೌರವ ಇದೆ ಸಮಯವಿದ್ದಾಗ ಹೋಗಿ ನೋಡಿಕೊಂಡು ಬರುತ್ತೇವೆ . ಈಗಿನ ವಾತಾವರಣಕ್ಕೆ ತಕ್ಕ ಹಾಗೆ ಇರಬೇಕು ಎಂಬ ಉಡಾಫೆಯ ಮಾತು ಕೂಡ ಕೇಳಿಬಂತು .
ಒಟ್ಟಾರೆಯಾಗಿ ಇಲ್ಲಿಯೇ ಬಂದು ಪೆರ್ಮನೆಂಟ್ ಆಗಿ ಸೆಟಲ್ ಆದ ಹಿರಿಯರು ಮತ್ತು ಯುವಕರಿಗೆ ಭಾರತಕ್ಕೆ ಹೋಗುವ ಬಗ್ಗೆ ಯಾವುದೇ ಯೋಜನೆಯಿಲ್ಲ ಅವರು ಇಲ್ಲಿಯ ವಾತಾವರಣ ಮತ್ತು ಪರಿಸ್ಥಿತಿಗಳಿಗೆ ಸಂಪೂರ್ಣವಾಗಿ ಹೊಂದಿಕೊಂಡಿದ್ದಾರೆ ಇಲ್ಲಿಯ ಜೀವನ ಚೆನ್ನಾಗಿದೆ ಯಾವುದೇ ಟೆನ್ಶನ್ ಗಳಿಲ್ಲ  ಎನ್ನುತ್ತಾರೆ  . ಆದರೆ ಭಾರತದಲ್ಲೇ ಹುಟ್ಟಿ ಬೆಳೆದು ಅಲ್ಲೇ ವಿಧ್ಯಾಭ್ಯಾಸ ಮಾಡಿ ಹಣಕ್ಕೋಸ್ಕರ ಇಲ್ಲಿ ಬಂದಿರುವ ಇತ್ತೀಚಿನ ಹೆಚ್ಚಿನ  ಯುವಕರಲ್ಲಿ ನಮ್ಮ ನಾಡೇ ಚಂದ ಇಲ್ಲಿ ಇದ್ದರೆ ಸಂಬಂಧಗಳು ಚೆನ್ನಾಗಿರುವುದಿಲ್ಲ  ಸಂಬಂಧಿಕರೊಂದಿಗೆ ಯಾವುದೇ ರೀತಿಯ ಒಡನಾಟವಿರುವುದಿಲ್ಲ ಸ್ವಲ್ಪ ದಿನಗಳ ವರೆಗೆ ಇರಲು ಇದು ಸೂಕ್ತ  ಎಂಬ ಅಭಿಪ್ರಾಯವಿದೆ .



 - ಅರ್ಪಿತಾ ಹರ್ಷ 

Friday, 1 June 2012

ದಾರಿ

ಹಣತೆಯ ಬೆಂಕಿಯಲಿ 
ಆಟವಾಡುವ ಚಿಟ್ಟೆ ನೀನಾದರೆ
ದೀಪ ಹಚ್ಚಲು ಬಳಸುವ 
ಬತ್ತಿ ನಾನು
ನಾ ಹೊತ್ತಿ ಉರಿಯುತ್ತಿದ್ದರೆ 
 ನೀ ಬಂದು ಹಾರಾಡುವೆ 
ನಿನಗೆ ತಪ್ಪಿಸಿಕೊಳ್ಳುವ 
ಅವಕಾಶವಾದರೂ ಇದೆ 
ನನಗೆ ದಗದಗಿಸಿ ಉರಿಯುವುದೊಂದೇ ದಾರಿ


ಅರ್ಪಿತಾ ಹರ್ಷ 



Wednesday, 30 May 2012

ಏಕಾಂಗಿ



ಭಾರತದಲ್ಲಿದ್ದಾಗ ಕೇಳಿದ್ದೆ ಪಾಶ್ಚಾತ್ಯ ದೇಶಗಳಲ್ಲಿ ಮಕ್ಕಳು ಹದಿನೆಂಟು ದಾಟಿದ ನಂತರ ಜೊತೆಗೆ ಇರುವಂತಿಲ್ಲ ಎಂದು. ಲಂಡನ್ ಗೆ  ಬಂದ ಮೇಲೆ ತಿಳಿಯಿತು ಕೆಲವರು ಜೊತೆಗಿಲ್ಲದಿದ್ದರು ಮಕ್ಕಳು ಕೂಡ ತಪ್ಪದೆ ಸಂಭಂದವನ್ನು ಉಳಿಸಿಕೊಂಡಿರುತ್ತಾರೆ. ಅವರಲ್ಲೂ ಅತಿ ಹೆಚ್ಚು ಪ್ರೀತಿ ಕಾಳಜಿಗಳು ಇರುತ್ತವೆ ಎಂಬುದು. ಆದರೆ ಕೆಲವೊಂದು ಕುಟುಂಬದಲ್ಲಿ ಮಾತ್ರ .
 ಪ್ರತಿ ದಿನ ಸಂಜೆ ೫ ಗಂಟೆಯಾಗುತ್ತಿದ್ದಂತೆ ಎಲ್ಲಿದ್ದರು ಮನೆಯ ಆ ಕಿಟಕಿಯ ಬಳಿ ನಿಂತು ನೋಡುತ್ತಿರುತ್ತಿದ್ದೆ. ಸುಮಾರು ೧ ವರ್ಷದಿಂದ ಹೆಚ್ಚು ಕಡಿಮೆ ಒಂದು ದಿನವು ಮಿಸ್ ಮಾಡಿಕೊಂಡಿಲ್ಲವೆನ್ನಬಹುದು.ಕಣ್ಣಲ್ಲೊಂದು ನಿರೀಕ್ಷೆ . ಇವತ್ತು ಇನ್ನು ಬಂದೆ ಇಲ್ಲವಲ್ಲ ಮೊದಲೇ ಹೋಗಿಬಿಟ್ಟರ ಎಂಬ ಆತಂಕ. ನಾನು ಹೇಳಹೊರಟಿರುವುದು ನಮ್ಮ ಮನೆಯಿಂದ  ೧ ಮಾರು ದೂರದ ಮನೆಯಲ್ಲಿರುವ  ವೃದ್ಧ ದಂಪತಿಗಳ ಬಗ್ಗೆ. ಪ್ರತಿ ದಿನ ನಮ್ಮ ಮನೆಯ ಹತ್ತಿರದಿಂದ ಸರಿಯಾಗಿ ೫ ಗಂಟೆಗೆ ಒಂದು ವೃದ್ಧ ದಂಪತಿಗಳು ಜೊತೆಗೂಡಿ ನಡೆದುಕೊಂಡು ಹೋಗುತ್ತಿದ್ದರು . ಅಜ್ಜನಿಗೆ ಸುಮಾರು ೮೦ ವರ್ಷವಂತೂ ಆಗಿರಬಹುದು ಆತ ನಡೆಯಲಾರದ ಸ್ಥಿತಿ . ಇಲ್ಲಿ ವೃದ್ಧರಿಗಾಗಿ ಸಿಗುವ ತಳ್ಳು ಗಾಡಿಯಲ್ಲಿ ಅಜ್ಜಿ ತಳ್ಳಿಕೊಂಡು ಹೋಗುತ್ತಿದ್ದರು .ವಯಸ್ಸಾದ ಬಳಿಕ ನೋಡಿಕೊಳ್ಳಲು ಜೊತೆಯಲ್ಲಿ ಯಾರು ಇಲ್ಲದೆ ಅಜ್ಜ ಅಜ್ಜಿ ಇಬ್ಬರೇ ಇದ್ದರೆನ್ನುವುದು ನನ್ನ ಊಹೆ . ಪ್ರತಿದಿನ ೫ ಗಂಟೆ ಅವರ ವಾಕಿಂಗ್ ನ ಸಮಯ . ೫ ಗಂಟೆಗೆ ಹೊರಟರೆ ಮತ್ತೆ ಬರುವುದು ೭.೩೦ ರ ಸಮಯಕ್ಕೆ . ಹೋಗುವಾಗ ತಳ್ಳು ಗಾಡಿಯಲ್ಲಿ ಅಜ್ಜನನ್ನು ಕುಳ್ಳಿರಿಸಿಕೊಂಡು ತಳ್ಳುತ್ತ ಹೋಗುವ ಅಜ್ಜಿ ಬರುವಾಗ ಆತನ ಕೈ ಹಿಡಿದು ಒಂದೊಂದೇ ಹೆಜ್ಜೆ ನಡೆಸಿಕೊಂಡು ಬರುತ್ತಿದ್ದರು ಜೊತೆಗೆ ಇನ್ನೊಂದು ಕೈಯಲ್ಲಿ ಗಾಡಿಯನ್ನು ತಳ್ಳುತ್ತಿರುತ್ತಾರೆ ಗಾಡಿಯ ಒಳಗೆ ತರಕಾರಿಗಳ ಚೀಲ . ಅವರ ಆ ಸ್ಥಿತಿಯಲ್ಲಿ ನೋಡಿದರೆ ಎಂತವರಿಗೂ ಹೃದಯ ನೋವಾಗದಿರದು . 
ಒಂದು ದಿನ ಆ ದಂಪತಿಗಳನ್ನು ನೋಡದಿದ್ದರೆ ಏನೋ ಒಂದು ರೀತಿ ಕಳೆದುಕೊಂಡಂತೆ ಮರುದಿನ ನೋಡುವ ವರೆಗೂ ಅವರಿಬ್ಬರೂ ಬಂದಿದ್ದರೋ ಇಲ್ಲವೋ ಎಂಬ ಆತಂಕ . ವಾಕಿಂಗ್ ಬಂದಿದ್ದಾರೆಂದರೆ ಅವರು ಕ್ಷೇಮವಾಗಿ   ಇದ್ದಾರೆ ಎಂದು ಮನಸ್ಸಿಗೆ ನಿಶ್ಚಿಂತೆ. ತಂದೆ  ತಾಯಿ ಮಕ್ಕಳಿಗೋಸ್ಕರ ಎಷ್ಟೊಂದು ಹೆಣಗಾಡುತ್ತಾರೆ ಮಾಡುವುದೆಲ್ಲ ಮಕ್ಕಳಿಗೋಸ್ಕರವೇ ಆದರೆ ಅವರ ಅತಿ ಮುಪ್ಪಿನ ಕಾಲದಲ್ಲಿ ಜೊತೆಗಿರಬೇಕಾದ ಮಕ್ಕಳಿಗೆ ತಂದೆ ತಾಯಿ  ಹೊರೆಯಾದಂತೆ ವರ್ತಿಸುತ್ತಾರೆ. ಇಲ್ಲಿ ಅಂತವರಿಗೊಸ್ಕರವೇ ವೃದ್ಧಾಶ್ರಮಗಳ ಸಂಖ್ಯೆ ದೊಡ್ಡದಿದೆ .ಆದರೆ ಗಂಡ ಹೆಂಡತಿ ಇಬ್ಬರು ಜೊತೆಗಿರುವ ಅವಕಾಶ ಇಲ್ಲದಿದರಿಂದಲೋ ಏನೋ ಇವರಿಬ್ಬರು ತಮ್ಮದೇ ಮನೆಯಲ್ಲಿದ್ದಾರೆ . ಪ್ರತಿದಿನ ಅವರು ಮಾತನಾಡುತ್ತಾ ನಗುತ್ತ ಜೊತೆ ಹೋಗುವಾಗ ಮನದೊಳಗೆ ಎಷ್ಟೊಂದು ನೋವಿರಬಹುದು ಎಂದೆನಿಸುತ್ತದೆ .
 ನನ್ನ ಆತ್ಮೀಯ ಗೆಳತಿಯ ಜೊತೆ ಅವರ ಬಗ್ಗೆ ಹೇಳಿಕೊಂಡಿದ್ದೆ  ಎಷ್ಟೋ ಭಾರಿ ಇಬ್ಬರು ಜೊತೆ ಕುಳಿತು ಅವರನ್ನು ನೋಡುವುದಕ್ಕೊಸ್ಕರವೇ ಕಾಯುತ್ತ ಕುಳಿತ್ತದ್ದು ಇದೆ . ಅವರ ಬಗ್ಗೆಯೇ ಮಾತನಾಡುತ್ತ ಸಮಯ ಕಳೆದದ್ದು ಇದೆ . ಆದರೆ ಈಗೊಂದು ತಿಂಗಳಿನಿಂದ  ಆ  ದಂಪತಿಗಳು ಇತ್ತ ಸುಳಿಯುತ್ತಲೇ ಇರಲಿಲ್ಲ  ಸಂಜೆ ಅದೇ ಸಮಯಗಳಲ್ಲಿ ಕಾದರು ಒಂದು ದಿನವು ಕಾಣಿಸಿಕೊಂಡಿಲ್ಲ . ಅವರ ಮನೆಯೆದುರು ಹಾದು ಹೋಗುವಾಗಲೆಲ್ಲ ಎಲ್ಲಾದರು ಕಾಣಬಹುದು ಎಂದೆನಿಸಿ ನೋಡುತ್ತಿದ್ದೆ.  ವಯಸ್ಸಾದ ನಂತರ ಜೊತೆಗೆ ನೋಡಿಕೊಳ್ಳಲು ಯಾರು ಇಲ್ಲದಿದ್ದರೆ ಎಷ್ಟೊಂದು ಕಷ್ಟ .ಏನಾಯಿತೆಂದು ಯಾರು ವಿಚಾರಿಸುವವರಿರುವುದಿಲ್ಲ. ಪ್ರತಿದಿನ ದೂರದಿಂದ ನೋಡುತ್ತಿದ್ದೆನಾದರು ಏನೋ ಒಂದು ರೀತಿಯ ಭಾವನಾತ್ಮಕ ಸಂಭಂದ ಜೊತೆಗಿದ್ದಂತಿತ್ತು. 
ಈಗ ಒಂದು ವಾರದಿಂದ ಪ್ರತಿದಿನ ಅಜ್ಜಿ ಮಾತ್ರ ನಡೆದುಕೊಂಡು ಹೋಗಿ ತರಕಾರಿ ತರುತ್ತಾರೆ. ಜೊತೆಗೆ ಸಾಥ್ ನೀಡುತ್ತಿದ್ದ ಅಜ್ಜ ಬರುತ್ತಿಲ್ಲ .ಅಜ್ಜಿ ಈಗ ಏಕಾಂಗಿ .ಏಕೋ ಏನೋ ಗೊತ್ತಿಲ್ಲ ಅಜ್ಜಿಯೊಬ್ಬಳನ್ನೇ ನೋಡಿ  ನೋಡಿದರೆ ಕಣ್ಣಲ್ಲಿ ನೀರು ತುಂಬುತ್ತದೆ.


ಅರ್ಪಿತಾ ಹರ್ಷ 

ಈ ನನ್ನ ಲೇಖನವು ಅವಧಿ ಮ್ಯಾಗಜಿನ್ ನಲ್ಲಿ ಪ್ರಕಟಗೊಂಡಿದೆ . http://avadhimag.com/?p=54443

Friday, 25 May 2012

ಸಧ್ಯ ಇನ್ನು ಪ್ರಳಯವಾಗಲಿಲ್ಲ !!

ಈ ನನ್ನ ಲೇಖನವು ಅವಧಿ ಮ್ಯಾಗ್ಜಿನ್ ನಲ್ಲಿ ಪ್ರಕಟ ಗೊಂಡಿದೆ . http://avadhimag.com/?p=53997


ಒಬ್ಬ ವ್ಯಕ್ತಿಯಿಂದ ದೂರವಾದಾಗಲೇ ಆ ವ್ಯಕ್ತಿಯ ಮಹತ್ವ ತಿಳಿಯುವುದು ಅಂತ ಹಿರಿಯರು ಹೇಳಿದ್ದ ಮಾತು ಕೇಳಿದ್ದೆ . ಆದರೆ ಪ್ರಾಕ್ಟಿಕಲ್ ಆಗಿ ಪ್ರಯೋಗಿಸಲು ಹೋಗಿರಲಿಲ್ಲ . ಆದರು ಬೇಡವೆಂದರೂ ಹೆಣ್ಣುಮಕ್ಕಳಿಗೆ ಮದುವೆ ಅನ್ನುವುದೊಂದು ಆಗಿಬಿಟ್ಟರೆ ಇದರ ಅನುಭವ ತನ್ನಿಂದ ತಾನೇ ಆಗಿಬಿಡುತ್ತದೆ, ಹಾಗೆ ನನಗೂ ಕೂಡ . ಕಾಲೇಜಿನ ಮೆಟ್ಟಿಲು ಹತ್ತುತ್ತಿದ್ದಂತೆ ಅಪ್ಪ ಅಮ್ಮ ನಿಗೆ ಮಗಳು ಮದುವೆಗೆ ಬಂದುಬಿಟ್ಟಳು ಅನ್ನಿಸುವುದು ಅದೇಕೋ ನಾ ಕಾಣೆ .ಕಾಲೇಜು ಮುಗಿಸಿ ಡಿಗ್ರೀ ಎಂಬುದೊಂದನ್ನು ತೆಗೆದುಕೊಂಡು ಮನೆಗೆ ಬಂದ ದಿನದಿಂದಲೇ ಮುಂದೇನು ಎಂಬ ಯೋಚನೆ ಕಾಡಬಾರದು ಎಂದು ವರಾನ್ವೇಷಣೆ ಪ್ರಾರಂಭಿಸಿಬಿಟ್ಟರು.ಅಂತು ಒಂದು ಒಳ್ಳೆಯ ವರ (ಅಪ್ಪ ಅಮ್ಮ ಪಾಲಿಗೆ ) ಸಿಕ್ಕಿಬಿಟ್ಟ ಕುಶಿಯಲ್ಲಿ ಮದುವೆಯನ್ನು ಆದಷ್ಟು ಬೇಗ ಮಾಡಿಮುಗಿಸಬೇಕು ಎಂಬ ತರಾತುರಿಯಲ್ಲಿದ್ದರು. ನನ್ನ ಅದೃಷ್ಟ ಸ್ವಲ್ಪ ಚೆನ್ನಾಗಿತ್ತೋ ಏನೋ ಇನ್ನೊಂದು ಸ್ವಲ್ಪದಿನ ಸ್ವತಂತ್ರವಾಗಿರಲಿ ಎನಿಸಿರಬೇಕು ದೇವರಿಗೆ ಅದೇಸಮಯದಲ್ಲಿ ಹತ್ತಿರದವರೊಬ್ಬರ ತಿಥಿ ಅಡ್ಡಬಂದಿತ್ತು. ನಂತರ ಆಷಾಡ,ಅಸ್ತ,ಮಳೆಗಾಲ  ಏನೇನೊ ಅಡ್ಡ ಬಂದಿತ್ತು .  ನಾನು ಕೂಡ ಕಾದು ಕಾದು ಬಹುಷಃ ೨೦೧೨ ರಲ್ಲಿ ಪ್ರಳಯ ಎನ್ನುತ್ತಿದ್ದರಲ್ಲ ಇದೆ ಇರಬಹುದೇ ಎಂಬ ಸಂಶಯಕ್ಕೆ ಬಿದ್ದು ಕಂಗಾಲಾಗಿ ಬಿಟ್ಟಿದ್ದೆ . ಹೆಚ್ಚು ಕಡಿಮೆ ಒಂದು ವರ್ಷದ ನಂತರ ಮತ್ತೆ ಒಂದು ಮುಹೂರ್ತ ನೋಡಿ ಮದುವೆಯೂ ನಡೆಯಿತು . 
ಅಂತು ಬಂತು ಎಲ್ಲರೂ ಕಾಯುತ್ತಿದ್ದ ಸಮಯ ಅಪ್ಪ ಅಮ್ಮನಿಗೆ ಎಲ್ಲಿಲ್ಲದ ಸಂತೋಷ ಮಗಳನ್ನು ಅಳಿಯನೊಂದಿಗೆ ಲಂಡನ್ ಗೆ ಕಳಿಸುವ ಸಂಭ್ರಮ ಕಣ್ಣಲ್ಲಿ ಕುಣಿಯುತ್ತಿದ್ದರೆ  ನನಗೋ ಕಣ್ಣಲ್ಲಿ ನೀರು . ಲಂಡನ್ ಗೆ ಬಂದಾಗ ಇಲ್ಲಿ ಎಲ್ಲ ಹೊಸತು. ಗುರುತು ಪರಿಚಯದವರು ಯಾರು ಇರದ ದೇಶ. ಗಂಡ, ಫೇಸ್ಬುಕ್ ,ಜೊತೆಗೊಂದಿಷ್ಟು ಹೊಸ ಸ್ಥಳಗಳ ಭೇಟಿ .ಎಲ್ಲದಕ್ಕೂ ಹೊಸಹುರುಪು . ಆದರು ಯಾವುದೇ ಸ್ಥಳಗಳಿಗೆ ಭೇಟಿ  ಇತ್ತರು ಮೊದಲು ನೆನಪಾಗುವುದು ನಮ್ಮ ನಾಡು ಅಲ್ಲಿಯ ಹಸಿರು , ಮಲೆನಾಡಿನ ಆ ಭೋರ್ಗರೆತದ ಮಳೆ , ಅಲ್ಲಿಯ ಹಸನ್ಮುಖಿ ಜನರು, ಪರಿಚಯವಿಲ್ಲದಿದ್ದರು ಮಾತನಾಡಿಸುವ ಆ ಪರಿ ಬಹಳ ಸೊಗಸು ಇದನ್ನೆಲ್ಲಾ ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದ ಹಾಗೆ ಪ್ರಳಯವೆಂದರೆ ಭಾರತ ಬಿಟ್ಟು ಹೊರಹೊಗುವುದೇ ಇರಬೇಕು ಎಂದುಕೊಂಡಿದ್ದು ಇದೆ .ದೂರ ಬಂದಾಗ ನಮ್ಮವರ ಮೇಲೆ ಹೆಚ್ಚು ಪ್ರೀತಿ ಎಂಬಂತೆ ಮನೆಗೆ ಫೋನ್ ಮಾಡಿದಾಗಲೆಲ್ಲ ಅಪ್ಪ ಅಮ್ಮ ತೋರಿಸುವ ಅತಿ ಪ್ರೀತಿ, ನೀನೆ ಕಣ್ಣಮುಂದೆ ಬಂದೆ ಎಂಬುದನ್ನೆಲ್ಲ  ನೋಡಿ ಇದು ಪ್ರಳಯದ ಮುನ್ಸೂಚನೆ ಇರಬಹುದೇ ಎಂದು ಕೂಡ ಅನ್ನಿಸಿದ್ದುಂಟು .
ಮದುವೆಯ ಮೊದಲು ನನಗೆ ನಾನೇ ಕೇಳಿಕೊಳ್ಳುತ್ತಿದ್ದ ಪ್ರಳಯವೆಂದರೆ ಇದಾ ? ಎಂಬ ಪ್ರಶ್ನೆ ಮದುವೆಯ ನಂತರ ನನಗೆ ಸಾಥ್ ನೀಡಿದ ನನ್ನವನಲ್ಲಿ  ಕೇಳಲು ಪ್ರಾರಂಭಿಸಿದ್ದೆ. ಪ್ರತಿ ಭಾರಿ ಬೇಸರಿಸಿಕೊಳ್ಳದೆ ಅವರು ನಗುತ್ತ  ಉತ್ತರಿಸುತ್ತಿದ್ದರು ಪ್ರಳಯವಾದ ದಿನ ಹೇಳುತ್ತೇನೆ ಎಂದು .೨೦೧೧ ಡಿಸೆಂಬರ್ ೩೧ ರ ರಾತ್ರಿ ಇಡೀ ಲಂಡನ್ ಫೈರ್ ವರ್ಕ್ ನಿಂದ ಕಂಗೊಳಿಸುವ ಸಂಭ್ರಮವನ್ನು ಮೊದಲ ಭಾರಿ ನೋಡಿ ಆನಂದ ಗೋಳ್ಳುವುದರ ಜೊತೆಗೆ ಅಲ್ಲೇ ಜೊತೆಗಿದ್ದ ನನ್ನ ಪತಿದೇವರಿಗೆ ನಾಳೆ ಪ್ರಳಯ ಎಂಬುದನ್ನು ನೆನಪಿಸಿ ಬೈಯಿಸಿಕೊಂದದ್ದು ಆಯಿತು.ನನ್ನ ಈ ಎಲ್ಲ ಗೊಂದಲಗಳಿಗೆ ನನ್ನವರು ಬಹಳ ತಾಳ್ಮೆಯಿಂದ  ಹಾಗೇನು ಆಗುವುದಿಲ್ಲ ಎಂಬ ಧೈರ್ಯ ತುಂಬಿದ್ದರಿಂದ  ಬಹುಬೇಗ  ಮದುವೆಯ ವಾರ್ಷಿಕೋತ್ಸವವು  ಕುಶಿಯಲ್ಲೇ ಮುಗಿದು ನನ್ನವರು ಮುಂದಿನ ವಾರ್ಷಿಕೋತ್ಸವದ ಪ್ಲಾನ್ ಏನು ಎಂದು ಯೋಚಿಸುತ್ತಿದ್ದರೆ  ನಾನು   ಸಧ್ಯ ಇನ್ನು ಪ್ರಳಯವಾಗಲಿಲ್ಲ ಎಂಬ ಸಂತೋಷದ  ಜೊತೆಗೆ ೨೦೧೨ ಮುಗಿಯಲು ಇನ್ನು ಸಾಕಷ್ಟು ತಿಂಗಳುಗಳು ಇವೆಯಲ್ಲವೇ ಎಂಬ ಗೊಂದಲದಲ್ಲಿದ್ದೇನೆ!!!



ಅರ್ಪಿತಾ ಹರ್ಷ 
ಲಂಡನ್