ಈ ನನ್ನ ಲೇಖನವು ಅವಧಿ ಮ್ಯಾಗ್ಜಿನ್ ನಲ್ಲಿ ಪ್ರಕಟ ಗೊಂಡಿದೆ . http://avadhimag.com/?p=53997
ಒಬ್ಬ ವ್ಯಕ್ತಿಯಿಂದ ದೂರವಾದಾಗಲೇ ಆ ವ್ಯಕ್ತಿಯ ಮಹತ್ವ ತಿಳಿಯುವುದು ಅಂತ ಹಿರಿಯರು ಹೇಳಿದ್ದ ಮಾತು ಕೇಳಿದ್ದೆ . ಆದರೆ ಪ್ರಾಕ್ಟಿಕಲ್ ಆಗಿ ಪ್ರಯೋಗಿಸಲು ಹೋಗಿರಲಿಲ್ಲ . ಆದರು ಬೇಡವೆಂದರೂ ಹೆಣ್ಣುಮಕ್ಕಳಿಗೆ ಮದುವೆ ಅನ್ನುವುದೊಂದು ಆಗಿಬಿಟ್ಟರೆ ಇದರ ಅನುಭವ ತನ್ನಿಂದ ತಾನೇ ಆಗಿಬಿಡುತ್ತದೆ, ಹಾಗೆ ನನಗೂ ಕೂಡ . ಕಾಲೇಜಿನ ಮೆಟ್ಟಿಲು ಹತ್ತುತ್ತಿದ್ದಂತೆ ಅಪ್ಪ ಅಮ್ಮ ನಿಗೆ ಮಗಳು ಮದುವೆಗೆ ಬಂದುಬಿಟ್ಟಳು ಅನ್ನಿಸುವುದು ಅದೇಕೋ ನಾ ಕಾಣೆ .ಕಾಲೇಜು ಮುಗಿಸಿ ಡಿಗ್ರೀ ಎಂಬುದೊಂದನ್ನು ತೆಗೆದುಕೊಂಡು ಮನೆಗೆ ಬಂದ ದಿನದಿಂದಲೇ ಮುಂದೇನು ಎಂಬ ಯೋಚನೆ ಕಾಡಬಾರದು ಎಂದು ವರಾನ್ವೇಷಣೆ ಪ್ರಾರಂಭಿಸಿಬಿಟ್ಟರು.ಅಂತು ಒಂದು ಒಳ್ಳೆಯ ವರ (ಅಪ್ಪ ಅಮ್ಮ ಪಾಲಿಗೆ ) ಸಿಕ್ಕಿಬಿಟ್ಟ ಕುಶಿಯಲ್ಲಿ ಮದುವೆಯನ್ನು ಆದಷ್ಟು ಬೇಗ ಮಾಡಿಮುಗಿಸಬೇಕು ಎಂಬ ತರಾತುರಿಯಲ್ಲಿದ್ದರು. ನನ್ನ ಅದೃಷ್ಟ ಸ್ವಲ್ಪ ಚೆನ್ನಾಗಿತ್ತೋ ಏನೋ ಇನ್ನೊಂದು ಸ್ವಲ್ಪದಿನ ಸ್ವತಂತ್ರವಾಗಿರಲಿ ಎನಿಸಿರಬೇಕು ದೇವರಿಗೆ ಅದೇಸಮಯದಲ್ಲಿ ಹತ್ತಿರದವರೊಬ್ಬರ ತಿಥಿ ಅಡ್ಡಬಂದಿತ್ತು. ನಂತರ ಆಷಾಡ,ಅಸ್ತ,ಮಳೆಗಾಲ ಏನೇನೊ ಅಡ್ಡ ಬಂದಿತ್ತು . ನಾನು ಕೂಡ ಕಾದು ಕಾದು ಬಹುಷಃ ೨೦೧೨ ರಲ್ಲಿ ಪ್ರಳಯ ಎನ್ನುತ್ತಿದ್ದರಲ್ಲ ಇದೆ ಇರಬಹುದೇ ಎಂಬ ಸಂಶಯಕ್ಕೆ ಬಿದ್ದು ಕಂಗಾಲಾಗಿ ಬಿಟ್ಟಿದ್ದೆ . ಹೆಚ್ಚು ಕಡಿಮೆ ಒಂದು ವರ್ಷದ ನಂತರ ಮತ್ತೆ ಒಂದು ಮುಹೂರ್ತ ನೋಡಿ ಮದುವೆಯೂ ನಡೆಯಿತು .
ಅಂತು ಬಂತು ಎಲ್ಲರೂ ಕಾಯುತ್ತಿದ್ದ ಸಮಯ ಅಪ್ಪ ಅಮ್ಮನಿಗೆ ಎಲ್ಲಿಲ್ಲದ ಸಂತೋಷ ಮಗಳನ್ನು ಅಳಿಯನೊಂದಿಗೆ ಲಂಡನ್ ಗೆ ಕಳಿಸುವ ಸಂಭ್ರಮ ಕಣ್ಣಲ್ಲಿ ಕುಣಿಯುತ್ತಿದ್ದರೆ ನನಗೋ ಕಣ್ಣಲ್ಲಿ ನೀರು . ಲಂಡನ್ ಗೆ ಬಂದಾಗ ಇಲ್ಲಿ ಎಲ್ಲ ಹೊಸತು. ಗುರುತು ಪರಿಚಯದವರು ಯಾರು ಇರದ ದೇಶ. ಗಂಡ, ಫೇಸ್ಬುಕ್ ,ಜೊತೆಗೊಂದಿಷ್ಟು ಹೊಸ ಸ್ಥಳಗಳ ಭೇಟಿ .ಎಲ್ಲದಕ್ಕೂ ಹೊಸಹುರುಪು . ಆದರು ಯಾವುದೇ ಸ್ಥಳಗಳಿಗೆ ಭೇಟಿ ಇತ್ತರು ಮೊದಲು ನೆನಪಾಗುವುದು ನಮ್ಮ ನಾಡು ಅಲ್ಲಿಯ ಹಸಿರು , ಮಲೆನಾಡಿನ ಆ ಭೋರ್ಗರೆತದ ಮಳೆ , ಅಲ್ಲಿಯ ಹಸನ್ಮುಖಿ ಜನರು, ಪರಿಚಯವಿಲ್ಲದಿದ್ದರು ಮಾತನಾಡಿಸುವ ಆ ಪರಿ ಬಹಳ ಸೊಗಸು ಇದನ್ನೆಲ್ಲಾ ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದ ಹಾಗೆ ಪ್ರಳಯವೆಂದರೆ ಭಾರತ ಬಿಟ್ಟು ಹೊರಹೊಗುವುದೇ ಇರಬೇಕು ಎಂದುಕೊಂಡಿದ್ದು ಇದೆ .ದೂರ ಬಂದಾಗ ನಮ್ಮವರ ಮೇಲೆ ಹೆಚ್ಚು ಪ್ರೀತಿ ಎಂಬಂತೆ ಮನೆಗೆ ಫೋನ್ ಮಾಡಿದಾಗಲೆಲ್ಲ ಅಪ್ಪ ಅಮ್ಮ ತೋರಿಸುವ ಅತಿ ಪ್ರೀತಿ, ನೀನೆ ಕಣ್ಣಮುಂದೆ ಬಂದೆ ಎಂಬುದನ್ನೆಲ್ಲ ನೋಡಿ ಇದು ಪ್ರಳಯದ ಮುನ್ಸೂಚನೆ ಇರಬಹುದೇ ಎಂದು ಕೂಡ ಅನ್ನಿಸಿದ್ದುಂಟು .
ಮದುವೆಯ ಮೊದಲು ನನಗೆ ನಾನೇ ಕೇಳಿಕೊಳ್ಳುತ್ತಿದ್ದ ಪ್ರಳಯವೆಂದರೆ ಇದಾ ? ಎಂಬ ಪ್ರಶ್ನೆ ಮದುವೆಯ ನಂತರ ನನಗೆ ಸಾಥ್ ನೀಡಿದ ನನ್ನವನಲ್ಲಿ ಕೇಳಲು ಪ್ರಾರಂಭಿಸಿದ್ದೆ. ಪ್ರತಿ ಭಾರಿ ಬೇಸರಿಸಿಕೊಳ್ಳದೆ ಅವರು ನಗುತ್ತ ಉತ್ತರಿಸುತ್ತಿದ್ದರು ಪ್ರಳಯವಾದ ದಿನ ಹೇಳುತ್ತೇನೆ ಎಂದು .೨೦೧೧ ಡಿಸೆಂಬರ್ ೩೧ ರ ರಾತ್ರಿ ಇಡೀ ಲಂಡನ್ ಫೈರ್ ವರ್ಕ್ ನಿಂದ ಕಂಗೊಳಿಸುವ ಸಂಭ್ರಮವನ್ನು ಮೊದಲ ಭಾರಿ ನೋಡಿ ಆನಂದ ಗೋಳ್ಳುವುದರ ಜೊತೆಗೆ ಅಲ್ಲೇ ಜೊತೆಗಿದ್ದ ನನ್ನ ಪತಿದೇವರಿಗೆ ನಾಳೆ ಪ್ರಳಯ ಎಂಬುದನ್ನು ನೆನಪಿಸಿ ಬೈಯಿಸಿಕೊಂದದ್ದು ಆಯಿತು.ನನ್ನ ಈ ಎಲ್ಲ ಗೊಂದಲಗಳಿಗೆ ನನ್ನವರು ಬಹಳ ತಾಳ್ಮೆಯಿಂದ ಹಾಗೇನು ಆಗುವುದಿಲ್ಲ ಎಂಬ ಧೈರ್ಯ ತುಂಬಿದ್ದರಿಂದ ಬಹುಬೇಗ ಮದುವೆಯ ವಾರ್ಷಿಕೋತ್ಸವವು ಕುಶಿಯಲ್ಲೇ ಮುಗಿದು ನನ್ನವರು ಮುಂದಿನ ವಾರ್ಷಿಕೋತ್ಸವದ ಪ್ಲಾನ್ ಏನು ಎಂದು ಯೋಚಿಸುತ್ತಿದ್ದರೆ ನಾನು ಸಧ್ಯ ಇನ್ನು ಪ್ರಳಯವಾಗಲಿಲ್ಲ ಎಂಬ ಸಂತೋಷದ ಜೊತೆಗೆ ೨೦೧೨ ಮುಗಿಯಲು ಇನ್ನು ಸಾಕಷ್ಟು ತಿಂಗಳುಗಳು ಇವೆಯಲ್ಲವೇ ಎಂಬ ಗೊಂದಲದಲ್ಲಿದ್ದೇನೆ!!!
ಅರ್ಪಿತಾ ಹರ್ಷ
ಲಂಡನ್
No comments:
Post a Comment