Tuesday, 18 December 2012

ಬೇಸ್ತು ಬಿದ್ದದ್ದು


ಈ ನನ್ನ ಲೇಖನವು ಹೊಸದಿಗಂತ ಮಂದಾರ ಸಿರಿ ಪುರವಣಿಯಲ್ಲಿ ಪ್ರಕಟಗೊಂಡಿದೆ http://www.hosadigantha.in/news_img/01-02-2013-14.pdf



ಹೌದು ನೆನಪುಗಳೇ ಹಾಗೆ ಗರಿಬಿಚ್ಚಿ ಕುಣಿಯುವ ನವಿಲ ಹಾಗೆ ಇದ್ದಕ್ಕಿದ್ದಂತೆ ದೋ ಎಂದು ಸುರಿಯುವ ಮಲೆನಾಡ ಮಳೆಯ ಹಾಗೆ ಒಮ್ಮೆ ಸುರಿಯಲು ಪ್ರಾರಂಭಿಸಿದರೆ 2 ತಾಸುಗಳು ಸುರಿಯುತ್ತಲೇ ಇರುತ್ತದೆ ಆ ಮಲೆನಾಡ ಪರಿಸರದಲ್ಲಿ ಬೆಳೆದ ನನಗೆ ಅಂತಹ  ಮಳೆಯ ನೆನಪೇ ಒಂದು ಸಂಭ್ರಮ .ಲಂಡನ್ ನಲ್ಲಿ ಗಿಟಿ ಗಿಟಿ  ಎಂದು ಹನಿ ಹಾಕಿ ಇಡೀ  ದಿನದ ಮೂಡನ್ನೆಲ್ಲ  ಹಾಳು  ಮಾಡುವ ಈ ಮಳೆಯನ್ನೂ ನೋಡಿದರೆ ಅಯ್ಯೋ ಎಂದೆನಿಸುತ್ತದೆ. ಹಾಗೆ ಮಳೆಗಾಲದ ಜೊತೆ ನನಗೆ ಮೊದಲಿನಿಂದಲೂ ಬಹಳ ನಂಟು ಈಗಲೂ ಹಾಗೊಂದು ಮಳೆ ಏನಾದರು ಇಲ್ಲಿ ಸುರಿದುಬಿಟ್ಟರೆ ಹೋಗಿ ನಿಂತು ನೆನೆದು ನೆನೆದು ಸಂತೋಷಪಡಬೇಕು ಎಂಬುದು ನನ್ನ ಬಹಳ ದಿನದ ಆಸೆ. 
 ನಮ್ಮದು ಮಕ್ಕಳ ಸೈನ್ಯವೆಲ್ಲ ಕೆಲವೊಮ್ಮೆ ಮಳೆಗಾಲದಲ್ಲಿ ಮಾವನ ಮನೆಯಲ್ಲಿ ಒಟ್ಟು ಸೇರುವ ಪರಿಪಾಟವಿತ್ತು . ಹೀಗೆ ಒಮ್ಮೆ ಎಲ್ಲರು ಒಟ್ಟು ಸೇರಿದ್ದಾಗ ಬೆಟ್ಟ ಸುತ್ತಲು ಹೊರಟೆವು ಹೋರಾಟ ಸ್ವಲ್ಪ ಹೊತ್ತಿನಲ್ಲೆಯೇ ಮಳೆ ಎಲ್ಲಿಲ್ಲದಂತೆ ಸುರಿಯಲು ಪ್ರಾರಂಭಿಸಿತು ನಮಗೆ ಮಳೆಯಲು ನೆನೆಯಲು ಸಿಕ್ಕಿದ್ದು ಇದೇ ಅವಕಾಶ ಎಂಬ ಕುಶಿ ಒಂದು ಕಡೆಯಾದರೆ ಮನೆಯಲ್ಲಿ ಬಾಯಿಗೆಬಂದಂತೆ ಬಯ್ಯುತ್ತಾರೆ ಎಂಬ ಹೆದರಿಕೆ ಇನ್ನೊಂದು ಕಡೆ . ಅಂತು 4-5 ಜನರಿಗೆ ಇರುವ 2 ಕೊಡೆಯಲ್ಲಿ ಹೇಗೋ ಹೊಂದಾಣಿಕೆ ಮಾಡಿಕೊಂಡು ನೆನೆದುಕೊಂಡು ಮನೆಗೆ ಬಂದೆವು . ಬಂದು ಚಪ್ಪಲಿ ಬಿಚ್ಚಿ ಮನೆಯೊಳಗೇ ಓಡಿ  ನಾವೆಲ್ಲು ಹೋಗಿಲ್ಲ ಎಂಬಂತೆ ಮತ್ತು ಹೋಗಿಲ್ಲ ಎಂದು ಎಲ್ಲರನ್ನು ಯಾಮಾರಿಸಿದ ಕುಶಿಯಲ್ಲಿ ಎಲ್ಲರು ಮುಸಿಮುಸಿ ನಕ್ಕು ಸಂತೋಷಪಡುತ್ತಿದ್ದೆವು . ಅಷ್ಟರಲ್ಲಿ ಹೊರಗಿನಿಂದ ಬಂಡ ಅಜ್ಜ ಇದೇನಿದು ಮನೆಯ ತುಂಬೆಲ್ಲ ರಕ್ತ ಎನ್ನುತ್ತಾ ಒಳಗೆ ಬಂದರು ನಾವೆಲ್ಲಾ ಏನಾಯಿತು ಎಂದು ಕುತೂಹಲದಿಂದ ಕಣ್ಣರಳಿಸಿ ನೋಡುತ್ತಿದ್ದೆವು ಅಜ್ಜ ಯಾರು ಹೊರಗೆ ಹೋಗಿದ್ದಿರಿ ಹೇಳಿ ಎಂದು ಕೇಳಿದರು ನಾವೆಲ್ಲಾ  ನಾವ್ಯಾರು ಹೋಗಿಲ್ಲ ಎಂದು ಉತ್ತರ ಕೊಟ್ಟೆವು . ಹಾಗಾದರೆ ಉಂಬಳ  ಕಚ್ಚಿದ್ದು ಯಾರಿಗೆ ? ಅದು ಕಚ್ಚಿದರೆ ಗೊತ್ತೇ ಆಗುವುದಿಲ್ಲ ಎಂದೆಲ್ಲ ಬಣ್ಣಿಸಲು ಪ್ರಾರಂಭಿಸಿದರು ಅದನ್ನು ಕೇಳಿ ನಮಗೆ ಎಲ್ಲಿಲ್ಲದ ಭಯ ಹುಟ್ಟಿ ಎಲ್ಲರು ನಾ ಮುಂದು ತಾ ಮುಂದು ಎನ್ನುತ್ತಾ ಅಜ್ಜ ನಾನು ಹೋಗಿದ್ದೆ ನೋಡು ಉಂಬಳ  ನನಗೆ ಕಚ್ಚಿದೆಯ ಎಂದು ಕೇಳುತ್ತ ಮುಂದೆ ಹೋದೆವು .ನಮ್ಮ ಮಲೆನಾಡಿನ ಕೆಲವು  ಭಾಗಗಳಲ್ಲಿ ಮಳೆಗಾಲದಲ್ಲಿ ಉಂಬಳ  ದ ಹಾವಳಿ ಬಹಳ .ಎಲ್ಲಿ ಕಾಲಿಟ್ಟರು ಕಾಲಿಗೊಂದು ಕಚ್ಚಿಹಿಡಿದುಕೊಂಡು ಬಿಡುತ್ತದೆ. ಆ ನಂತರ ಸುಣ್ಣ ಹಾಕಿ ಕಾಲಿನಿಂದ ಬರುತ್ತಿರುವ ರಕ್ತವನ್ನು ನಿಲ್ಲಿಸಬೇಕು . ಆದರೆ ಆ ದಿನ ಯಾರಿಗೂ ಉಂಬಳ  ಕಚ್ಚಿರಲಿಲ್ಲ ನಮ್ಮ ಗುಟ್ಟನ್ನು ರಟ್ಟು ಮಾಡುವ ಉದ್ದೇಶದಿಂದ ಅಜ್ಜ ಹಾಗೆ ಕೇಳಿದ್ದ ನಾವೆಲ್ಲಾ ಬೆಸ್ತುಬಿದ್ದಿದ್ದೆವು .




ಅರ್ಪಿತಾ ರಾವ್ 
ಲಂಡನ್ 

Tuesday, 11 December 2012

ಬದುಕು

ಈ ನನ್ನ ಕವನವು ಈ ಕನಸು ವಿನಲ್ಲಿ ಪ್ರಕಟಗೊಂಡಿದೆ <a>"http://www.ekanasu.com/2012/12/blog-post_27.html" <a/>

ಸೂರ್ಯ ಮುಳುಗುವ ಹೊತ್ತು 
ಹಕ್ಕಿಗಳು ಹೊರಟಿವೆ ಮನೆಯ ಕಡೆಗೆ 
ಸಂಜೆ ಬಾನಲಿ ಸೂರ್ಯ 
ಅಣಕಿಸುತಿರುವ  ನನ್ನ ನೋಡಿ 
ನಿನ್ನದೇನಿದು  ಬದುಕು ಬರೀ ರಾಡಿ !

ಹಾರಾಡುವ ಹಕ್ಕಿಗಳಿಗೋ 
ಸ್ವಚ್ಚಂದದ  ಬದುಕು 
ಮಾನವ ನ ಬದುಕೋ 
ಬರೀ ಒಡಕು ಒಡಕು !

ಹಾರಾಡ ಬೇಕಿದೆ ಹಕ್ಕಿಯಂತೆ 
ಇಲ್ಲದಿರೆ ಮನದ  ತುಂಬಾ ಬರೀ ಬೇಡದಾ  ಚಿಂತೆ 
ಕಲಿಯಬೇಕಿದೆ ಹಕ್ಕಿಗಳ ನೋಡಿ 
ಬದುಕೆಂಬುದು ಒಂದು ಮೋಡಿ !

ಮುಳುಗುತಿರುವನೇ  ಸೂರ್ಯ 
ಮುಪ್ಪಿನ ಸುಳಿವು ನೀಡಿ ?
ಮುಗಿದುಹೋಯಿತೇ ಬದುಕು 
ನಾಲ್ಕು ದಿನಗಳು  ಕೂಡಿ ?






ಅರ್ಪಿತಾ ರಾವ್ 



Monday, 10 December 2012

ಬದಲಾಗದಿರು

ಈ ನನ್ನ ಕವನವು ಈ ಕನಸುವಿನಲ್ಲಿ ಪ್ರಕಟಗೊಂಡಿದೆ  http://www.ekanasu.com/2012/12/blog-post_26.html

ಕಳೆಯಬೇಕಿದೆ ಬದುಕಿನ ಬಹಳಷ್ಟು ದಿನಗಳನ್ನು 
ಕಲಿಯಬೇಕಿದೆ ಬದುಕು ಹಸನಾಗಿಸುವುದನ್ನು 

ನೆನ್ನೆಯ ನಿನ್ನೆಗಳು ಇಂದು 
ದಿನಗಳಾಗಿ ಉಳಿದಿಲ್ಲ 
ಅದು ಬರಿ ನೆನಪಾಗಿಹೊಯಿತಲ್ಲ !

ಬದುಕಿನ ಪ್ರತಿ ಕ್ಷಣಗಳಲ್ಲಿ 
ಜೊತೆಯಾಗಿರುವೆ ಎಂದು ಬಂದೆ 
ದಿನಕಳೆದಂತೆ ನಿನ್ನಲ್ಲೇ ನೀ ಕಳೆದುಹೋದೆ 

ನಗು ತುಂಬಿ ಹರಟುತ್ತಿರುವ 
ಆ ದಿನಗಳು ಇಂದು ಬರೀ ನೆನಪು 
ಉಸಿರಾಟದ ಶಬ್ದ ಕಿವಿಗೆ ರಾಚುತ್ತಿರುವ 
ಈ ಕರಾಳ ದಿನಗಳೇ ಇಂದಿನ ಬದುಕು !!

ಕಳೆಯಬೇಕಿದೆ ಇನ್ನೂ  ಸಾಕಷ್ಟು 
ದಿನಗಳು ಜೊತೆಯಲ್ಲಿ 
ಸುಂದರ ದಿನಗಳು ಮರೆಯಾಗಲು 
ನಾ ತಪ್ಪು ಮಾಡಿದ್ದೆಲ್ಲಿ ?

ಬರಬಹುದು ಬದುಕಿನಲ್ಲಿ ಸಾಕಷ್ಟು ಗೊಂದಲಗಳು 
ನೀ ಕೊಟ್ಟಿದ್ದೆ ಮಾತು ಆಗೆಲ್ಲ 
ನಾ ನಿನ್ನೊಂದಿಗಿರುವೆ ಹಗಲು ಇರುಳು 

ಬೆಳಗು ಕತ್ತಲು  ಎಂಬುದು ಪ್ರಕೃತಿ ನಿಯಮ 
ಹಾಗೆಯೇ ಬದುಕೆಂಬುದು 
ನೋವು ನಲಿವುಗಳ ಸಂಗಮ 

ನಾ ಬಲ್ಲೆ ಪರಿವರ್ತನೆ ಜಗದ ನಿಯಮ 
ಆದರೂ  ನಾ ಕೆಳುವುದೊಂದೇ 
ಬದಲಾಗದಿರು ನೀ ಕಳೆದುಕೊಂಡು ಸಂಯಮ !!



ಅರ್ಪಿತಾ ರಾವ್ 
ಲಂಡನ್




Thursday, 29 November 2012

ಹೆಸರುಬೇಳೆ ವಡೆ


ಹೆಸರು ಬೇಳೆ ಎಲ್ಲರ ಮನೆಯಲ್ಲೂ ಇದ್ದೆ ಇರುತ್ತದೆ ಈ ಚಳಿಯಲ್ಲಿ ಬಿಸಿಬಿಸಿ ಯಾಗಿ ತಿನ್ನುವುದೆಂದರೆ ಯಾರಿಗೆ ತಾನೇ ಇಷ್ಟವಾಗೋಲ್ಲ ಹೇಳಿ . ಹಾಗಾಗಿ ಇಲ್ಲಿದೆ ನೋಡಿ ಹೆಸರುಬೇಳೆ ವಡೆ . ತಯಾರಿಸುವುದು ಕೂಡ ಅಷ್ಟೇ ಸುಲಭ .

ಬೇಕಾಗುವ ಸಾಮಗ್ರಿಗಳು :
ಹೆಸರುಬೇಳೆ - 1 ಕಪ್ 
ಬೆಳ್ಳುಳ್ಳಿ -1 ಎಸಳು 
ಶುಂಟಿ - 1 ಇಂಚು 
ಕಡಲೆಹಿಟ್ಟು -3 ಚಮಚ 
ಕೆಂಪು ಮೆಣಸಿನ ಪುಡಿ - 1 ಚಮಚ 
ಜೀರಿಗೆ ಪುಡಿ - ಅರ್ದ ಚಮಚ 

ಹೆಸರುಬೇಳೆಯನ್ನು 3-4 ಗಂಟೆಗಳ ಕಾಲ ನೆನೆಸಿಡಬೇಕು .
ಬೆಳ್ಳುಳ್ಳಿ ಶುಂಟಿ ನೆನೆಸಿಟ್ಟ ಹೆಸರುಬೇಳೆಯನ್ನು ನೀರುಬೆರೆಸದೆ ರುಬ್ಬಿಕೊಳ್ಳಬೇಕು . 
ನಂತರ ಇದಕ್ಕೆ ಕಡಲೆಹಿಟ್ಟು, ಕೆಂಪು ಮೆಣಸು, ಜೀರಿಗೆ ಪುಡಿ ಬೆರೆಸಬೇಕು 
ಬಾಣಲೆಯಲ್ಲಿ ಎಣ್ಣೆ ಕಾಯಿಸಿ ಈ ಹಿಟ್ಟನ್ನು ಸೌಟಿನಿಂದ ಹಾಕಿ ಕಾರಿದರೆ ಹೆಸರುಬೇಳೆ  ವಡ  ರೆಡಿ  .

Wednesday, 28 November 2012

ಮನಸ್ಸೆಂಬ ಚಿಟ್ಟೆ

ಈ ನನ್ನ ಕವನವು ೦೪.೦೨.೧೩ ರ ಪಂಜುವಿನಲ್ಲಿ ಪ್ರಕಟಗೊಂಡಿದೆ http://www.panjumagazine.com/?p=462


ಚಿಟ್ಟೆ ಚಿಟ್ಟೆ ಬಣ್ಣದ ಚಿಟ್ಟೆ 
ನೋಡಲು ಕಣ್ಣುಗಳು ಸಾಲದು
ಮೈಯ ಮೇಲೆಲ್ಲಾ ಕಪ್ಪು ಕಂಗಳು
ನೋಡುಗರ ಕಣ್ಮನ ಸೆಳೆಯುವುದು 

ಅಲ್ಲಿಂದಿಲ್ಲಿಗೆ ಹಾರುವೆ 
ಹಿಡಿಯಲು ಹೋದರೆ ಓಡುವೆ 
ಜಗದ ಸೃಷ್ಟಿಯ ಮೆಚ್ಚಲೇ ಬೇಕು 
ನಿನಗೆ ನೀನೆ ಸಾಟಿಯಿರಬೇಕು 

ಒಮ್ಮೆ ಇಲ್ಲಿ ಒಮ್ಮೆ ಇನ್ನೆಲ್ಲೋ 
ಹಾರುವ ನಿನ್ನನು ನೋಡಿದರೆ 
ಮನಸು ಕೂಡ ನಿನ್ನೊಡನೆಯೇ 
ಕುಣಿಯುತ ಹೊರಡುವುದು ಬೇರೆಡೆಗೆ !!



Thursday, 12 July 2012

ಬಂಧನವಾಗದಿರಲಿ ಹೆಣ್ಣು ನೋಡುವ ಸಂಪ್ರದಾಯ

ಕೆಲವು ಸಂಪ್ರದಾಯಗಳನ್ನು ಬಿಟ್ಟುಕೊಡಲು ಹಿರಿಯರು ತಯಾರಿರುವುದಿಲ್ಲ ಇದರಿಂದ ಮಗಳ ಮನಸ್ಸಿಗೆ ನೋವಾಗುವುದು ಎಂಬ ಬಗ್ಗೆ ಗಮನ ಹರಿಸುವುದೇ ಇಲ್ಲ .ಗೆಳತಿಯೊಬ್ಬಳಲ್ಲಿ ಮದುವೆಯ ಬಗ್ಗೆ ಕೇಳಿದಾಗ "ನನಗಂತೂ ಮದುವೆ ಆಗಬೇಕೆಂಬ ಆಸೆಯೇ ಹೊರಟುಹೋಗಿದೆ ಬಂದವರ ಮುಂದೆ ಅಲಂಕಾರ ಮಾಡಿ ಕುಳಿತುಕೊಂಡು ಬೇಸರ ಆಗಿಬಿಟ್ಟಿದೆ " ಹೀಗೆ ಉತ್ತರ ಬಂತು.ಇದು ಕೇವಲ ಒಬ್ಬರ ಉತ್ತರವಲ್ಲ ಈಗಿನ ಸಾಕಷ್ಟು ಹೆಣ್ಣು ಮಕ್ಕಳ ಅಭಿಪ್ರಾಯ ಅದರಲ್ಲೂ ಹಳ್ಳಿ ಕಡೆಗಳಲ್ಲಿ ಈ ಸಂಪ್ರದಾಯಗಳು ಇನ್ನು ಮುಂದುವರೆದುಕೊಂಡು ಹೋಗುತ್ತಿರುವುದು ನಿಜಕ್ಕೂ ಆಶ್ಚರ್ಯವೇ ಸರಿ. 
ಹೌದು ಈಗಲೂ ಕೂಡ ಎಷ್ಟೋ ಮನೆಗಳಲ್ಲಿ ಮಗಳನ್ನು ಅಲಂಕರಿಸಿ ಗಂಡಿನವರ ಎದುರು ಕೂರಿಸಿವ ಸಂಪ್ರದಾಯವಿದೆ .ಆದರೆ ಪ್ರತಿ ಭಾರಿಯೂ ಹೀಗೆ ಬಂದವರ ಮುಂದೆ ಕುರಿಸುವುದಕ್ಕಿಂತ ಮೊದಲೇ ವಿಚಾರಿಸಿ ಫೋಟೋ  ನೋಡಿ ಸಂಭಂದ ಗಳು ಎರಡು ಕಡೆಯಲ್ಲಿ  ಒಪ್ಪಿಗೆ ಇದ್ದಲ್ಲಿ ಮುಂದುವರೆದರೆ ಹೆಣ್ಣು ಮತ್ತು ಗಂಡು ಯಾರ ಮನಸ್ಸಿಗೂ ಕೂಡ ಘಾಸಿಯಾಗದು .
ಹೆಣ್ಣು ಮಗಳು ವಯಸ್ಸಿಗೆ ಬರುತ್ತಿದ್ದಂತೆ ಮದುವೆ ಮಾಡಿ ಬಿಡಬೇಕೆಂಬ  ಆತುರ ಎಲ್ಲ ತಂದೆ ತಾಯಿಯರಲ್ಲೂ ಇದ್ದೆ ಇರುತ್ತದೆ ಆದರೆ ಮಗಳ ಬಗ್ಗೆ ಒಮ್ಮೆ ಯೋಚಿಸಿ . ವರನನ್ನು ಹುಡುಕುವ ಮೊದಲು ಮಗಳಿಗೆ ಇಷ್ಟವಿದೆಯೋ ಇಲ್ಲವೋ ಎಂಬ ಬಗ್ಗೆ ಒಮ್ಮೆ ಗಮನಹರಿಸಿ. ಯಾವ ರೀತಿಯ ವರ ಬೇಕು ಎಂಬುದನ್ನು ಅವರಲ್ಲೇ ಕೇಳಿಬಿಟ್ಟರೆ ಹುಡುಕುವುದು ಸುಲಭವಾಗುತ್ತದೆ. ಜಾತಕ ಕೊಡುವಾಗ ೧೦-೧೫ ಕಡೆ ಒಟ್ಟಿಗೆ ಕೊಟ್ಟು ಎಲ್ಲರನ್ನು ಮನೆಗೆ ಕರೆಸಿ ಮಗಳನ್ನು ಎಲ್ಲರ ಮುಂದೆ ಅಲಂಕರಿಸಿ ಕೂರಿಸಿ ನಂತರ ಬೇಡ ವೆಂದಾಗ ಮಗಳ ಮನಸ್ಸಿಗೆ ಸಾಕಷ್ಟು ಘಾಸಿ ಆಗಬಹುದು ಎಂಬುದರ ಬಗ್ಗೆ ಗಮನವಿರಲಿ.
ಹಾಗೆಯೇ ಕೆಲವೊಮ್ಮೆ ಗಂಡು ಕೂಡ ಇಷ್ಟವಿಲ್ಲದೆ ತಂದೆ ತಾಯಿಯರ ಒತ್ತಾಯಕ್ಕಾಗಿ ಹೆಣ್ಣನ್ನು ನೋಡಲು ಬರುವ ಸಂಧರ್ಭಗಳು ಕೂಡ ಸಾಕಷ್ಟಿವೆ . ಇಷ್ಟವಿಲ್ಲದಿದ್ದರೆ ಮೊದಲೇ ಕಡಾಖಂಡಿತವಾಗಿ ತಿಳಿಸಿಬಿಡಿ ಹುಡುಗಿ ನೋಡಲು ಹೋಗಿ ಆಕೆಯ ಭಾವನೆಗೆ ಧಕ್ಕೆಯುಂಟು ಮಾಡುವುದು ಸರಿಯಲ್ಲ.
ಒಬ್ಬರನ್ನೊಬ್ಬರು ನೋಡದೆಯೇ ತೀರ್ಮಾನ ತೆಗೆದುಕೊಲ್ಲಲಾಗದು ನಿಜ ಆದರೆ ಹಾಗೆ ನೋಡಲೇಬೇಕಾದ ಸಂದರ್ಭದಲ್ಲಿ ೧-೨ ಜನ ಮಾತ್ರ ಸೇರಿ ನೋಡಿ ನಂತರ ಮುಂದಿನ ತೀರ್ಮಾನ ಕೈಗೊಳ್ಳುವುದು ಸೂಕ್ತ .ಇಲ್ಲದಿದ್ದರೆ ಮದುವೆ ಯಾ ಬಗ್ಗೆ ಮದುವೆಯಾಗುವ ಮೊದಲೇ ಬಂಧನವಾಗಿ ಕಾಣಬಹುದು .
ಹಳೆಯ ಸಂಪ್ರದಾಯವನ್ನು ಬಿಡಬಾರದು ಎಂಬ ಹಟದಲ್ಲಿ ಈ ರೀತಿ  ಮಾಡುವುದರಿಂದಾಗಿ ಎಷ್ಟೋ ಹೆಣ್ಣು ಮಕ್ಕಳು ಮದುವೆ ಆಗಬೇಕೆಂಬ ಭಾವನೆಯಿಂದ ಹೊರಬರುವಂತಾಗಿದೆ . ಇದರ ಬಗ್ಗೆ ಪೋಷಕರ ಗಮನ ಹರಿಸಿದಲ್ಲಿ ಸಾಕಷ್ಟು ಹೆಣ್ಣುಮಕ್ಕಳು ಸಂತೋಷಪಡಬಹುದು .

ಕನವರಿಕೆ

ಮನದ ಮೂಲೆಯಲ್ಲೆಲ್ಲೋ ನೆನಪುಗಳ
ಚಡಪಡಿಕೆ
ಬೇಸರ ಕಳೆಯಲು ನಿನ್ನದೇ ಹಾಡಿನ
ಸಾಲುಗಳ ಗುನುಗುನಿಸುವಿಕೆ
 ಹಗಲು ಇರುಳು ನಿನದೆ ಕನವರಿಕೆ
ಸಾಕು ನಿನ್ನ ಅಗಲುವಿಕೆ
ಬಾ ಬೇಗ ಸನಿಹಕೆ .

-ಅರ್ಪಿತಾ ಹರ್ಷ